ಅಧ್ಯಯನವು ಪ್ರತಿಫಲದಾಯಕವಾಗಿದೆ
ಜನರು ಹಣ್ಣನ್ನು ಆರಿಸಿ ತೆಗೆಯುವುದನ್ನು ನೀವು ಎಂದಾದರೂ ಗಮನಿಸಿದ್ದುಂಟೊ? ಹೆಚ್ಚಿನವರು ಅದು ಮಾಗಿದೆಯೊ ಇಲ್ಲವೊ ಎಂದು ನಿರ್ಧರಿಸಲಿಕ್ಕಾಗಿ ಅದರ ಬಣ್ಣ ಮತ್ತು ಗಾತ್ರವನ್ನು ನೋಡುತ್ತಾರೆ. ಕೆಲವರು ಅದರ ಪರಿಮಳವನ್ನು ಮೂಸಿ ನೋಡುತ್ತಾರೆ. ಇನ್ನು ಕೆಲವರು ಅದನ್ನು ಮುಟ್ಟಿ ಇಲ್ಲವೆ ಹಿಸುಕಿ ನೋಡುತ್ತಾರೆ. ಇತರರು ಎರಡೂ ಕೈಯಲ್ಲಿ ಒಂದೊಂದು ಹಣ್ಣನ್ನು ಹಿಡಿದು ಯಾವುದು ರಸಭರಿತವಾಗಿದೆ ಎಂದು ತೂಗಿ ನೋಡುತ್ತಾರೆ. ಈ ಜನರು ಏನು ಯೋಚಿಸುತ್ತಿದ್ದಾರೆ? ಅವರು ವಿವರಗಳನ್ನು ವಿಶ್ಲೇಷಿಸಿ, ವ್ಯತ್ಯಾಸಗಳಿಗೆ ಬೆಲೆಕಟ್ಟಿ, ಹಿಂದಿನ ಆಯ್ಕೆಗಳನ್ನು ಜ್ಞಾಪಿಸಿಕೊಂಡು, ಈಗ ತಾವು ಏನು ನೋಡುತ್ತಿದ್ದಾರೋ ಅದನ್ನು, ತಮಗೆ ಈಗಾಗಲೇ ಏನು ತಿಳಿದಿರುತ್ತದೊ ಅದರೊಂದಿಗೆ ಹೋಲಿಸುತ್ತಿದ್ದಾರೆ. ಸವಿಯಾದ ಪ್ರತಿಫಲ ಅವರಿಗಾಗಿ ಕಾದಿದೆ, ಏಕೆಂದರೆ ಅವರು ಆ ವಿಷಯಕ್ಕೆ ಜಾಗರೂಕತೆಯ ಗಮನವನ್ನು ಕೊಡುತ್ತಾರೆ.
ದೇವರ ವಾಕ್ಯದ ಅಧ್ಯಯನ ಮಾಡುವುದರಿಂದ ಸಿಗುವ ಪ್ರತಿಫಲವು ಇದಕ್ಕಿಂತ ಎಷ್ಟೋ ಉತ್ತಮವಾಗಿದೆ ಎಂಬುದು ನಿಶ್ಚಯ. ಅಂತಹ ಅಧ್ಯಯನವು ನಮ್ಮ ಜೀವಿತಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆಯುವಾಗ, ನಮ್ಮ ನಂಬಿಕೆಯು ಹೆಚ್ಚು ಬಲಗೊಳ್ಳುತ್ತದೆ, ನಮ್ಮ ಪ್ರೀತಿ ಹೆಚ್ಚು ಆಳವಾಗುತ್ತದೆ, ನಮ್ಮ ಶುಶ್ರೂಷೆಯು ಹೆಚ್ಚು ಫಲವತ್ತಾಗಿ ಪರಿಣಮಿಸುತ್ತದೆ, ಮತ್ತು ನಾವು ಮಾಡುವ ತೀರ್ಮಾನಗಳು ವಿವೇಚನೆ ಮತ್ತು ದೈವಿಕ ವಿವೇಕದವುಗಳೆಂಬುದಕ್ಕೆ ಹೆಚ್ಚು ಪುರಾವೆಯನ್ನೊದಗಿಸುತ್ತದೆ. ಅಂತಹ ಪ್ರತಿಫಲಗಳ ಸಂಬಂಧದಲ್ಲಿ ಜ್ಞಾನೋಕ್ತಿ 3:15 ಹೇಳುವುದು: “ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.” ಇಂತಹ ಪ್ರತಿಫಲಗಳನ್ನು ನೀವು ಅನುಭವಿಸುತ್ತಿದ್ದೀರೊ? ನೀವು ಅಧ್ಯಯನ ಮಾಡುವ ರೀತಿಯು ಇದಕ್ಕೆ ಒಂದು ಕಾರಣಾಂಶವಾಗಿರಬಹುದು.—ಕೊಲೊ. 1:9, 10.
ಅಧ್ಯಯನವೆಂದರೇನು? ಮೇಲಿಂದ ಮೇಲೆ ಓದುವುದಕ್ಕಿಂತ ಹೆಚ್ಚಿನದ್ದು ಅದರಲ್ಲಿ ಸೇರಿದೆ. ನಿಮ್ಮ ಮನಶ್ಶಕ್ತಿಯನ್ನು ಒಂದು ವಿಷಯವಸ್ತುವಿನ ಮೇಲೆ ಜಾಗರೂಕತೆಯ ಅಥವಾ ವಿಸ್ತೃತ ಪರ್ಯಾಲೋಚನೆಯಲ್ಲಿ ಉಪಯೋಗಿಸುವುದು ಇದರಲ್ಲಿ ಸೇರಿದೆ. ನೀವು ಓದುವ ವಿಷಯವನ್ನು ವಿಶ್ಲೇಷಿಸಿ, ಅದನ್ನು ನಿಮಗೆ ಈಗಾಗಲೇ ತಿಳಿದಿರುವ ವಿಷಯಕ್ಕೆ ಹೋಲಿಸಿ, ಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಕೊಡಲ್ಪಟ್ಟಿರುವ ಕಾರಣಗಳನ್ನು ಗಮನಿಸುವುದು ಇದರಲ್ಲಿ ಒಳಗೂಡಿದೆ. ಅಧ್ಯಯನ ಮಾಡುತ್ತಿರುವಾಗ, ನಿಮಗೆ ಹೊಸದಾಗಿ ಕಂಡುಬರುವ ಯಾವುದೇ ವಿಚಾರಗಳ ಬಗ್ಗೆ ಆಳವಾಗಿ ಯೋಚಿಸಿರಿ. ನೀವು ಶಾಸ್ತ್ರೀಯ ಸಲಹೆಯನ್ನು ವೈಯಕ್ತಿಕವಾಗಿ ಹೆಚ್ಚು ಪೂರ್ಣವಾಗಿ ಹೇಗೆ ಅನ್ವಯಿಸಿಕೊಳ್ಳಬಹುದೆಂಬುದನ್ನೂ ಪರ್ಯಾಲೋಚಿಸಿರಿ. ಒಬ್ಬ ಯೆಹೋವನ ಸಾಕ್ಷಿಯಾಗಿರುವುದರಿಂದ, ನೀವು ಆ ವಿಷಯಭಾಗವನ್ನು ಇತರರ ಸಹಾಯಕ್ಕಾಗಿ ಉಪಯೋಗಿಸುವ ಸಂದರ್ಭಗಳ ಕುರಿತಾಗಿಯೂ ಯೋಚಿಸಲು ಬಯಸುವಿರಿ. ಆದುದರಿಂದ, ಅಧ್ಯಯನದಲ್ಲಿ ಮನನಮಾಡುವುದೂ ಒಳಗೂಡಿದೆ ಎಂಬುದು ಸುವ್ಯಕ್ತ.
ಸರಿಯಾದ ಮನಃಸ್ಥಿತಿಯನ್ನು ಪಡೆದುಕೊಳ್ಳುವುದು
ನೀವು ಅಧ್ಯಯನಕ್ಕೆ ಸಿದ್ಧರಾಗುವಾಗ, ಬೈಬಲ್, ನೀವು ಅಧ್ಯಯನಕ್ಕಾಗಿ ಉಪಯೋಗಿಸಲು ಬಯಸುವ ಪುಸ್ತಕಗಳು, ಪೆನ್ಸಿಲ್ ಅಥವಾ ಪೆನ್ ಮತ್ತು ಪ್ರಾಯಶಃ ಒಂದು ನೋಟ್ ಪುಸ್ತಕವನ್ನು ತೆಗೆದಿಡುತ್ತೀರಿ. ಆದರೆ ನಿಮ್ಮ ಹೃದಯವನ್ನೂ ಸಿದ್ಧಪಡಿಸಿಕೊಳ್ಳುತ್ತೀರೊ? ಎಜ್ರನು, “ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಿ, ಅದರಂತೆ ನಡೆದು, ಇಸ್ರಾಯೇಲಿನಲ್ಲಿ ವಿಧಿ ಮತ್ತು ನ್ಯಾಯವನ್ನು ಬೋಧಿಸಲಿಕ್ಕಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನು” ಎಂದು ಬೈಬಲು ನಮಗೆ ಹೇಳುತ್ತದೆ. (ಎಜ್ರ 7:10, NW) ಹೃದಯದ ಅಂತಹ ಸಿದ್ಧಪಡಿಸುವಿಕೆಯಲ್ಲಿ ಏನು ಸೇರಿದೆ?
ದೇವರ ವಾಕ್ಯದ ಅಧ್ಯಯನವನ್ನು ಸರಿಯಾದ ಮನೋಭಾವದಿಂದ ಆರಂಭಿಸಲು ಪ್ರಾರ್ಥನೆಯು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಯೆಹೋವನು ಕೊಡುವ ಶಿಕ್ಷಣಕ್ಕೆ ನಮ್ಮ ಹೃದಯವು, ಅಂದರೆ ನಮ್ಮ ಆಂತರ್ಯವು ಕ್ಷಿಪ್ರಗ್ರಾಹಿಯಾಗಿರುವಂತೆ ನಾವು ಬಯಸುತ್ತೇವೆ. ಪ್ರತಿಯೊಂದು ಅಧ್ಯಯನದ ಆರಂಭದಲ್ಲಿ, ಯೆಹೋವನ ಆತ್ಮದ ಸಹಾಯಕ್ಕಾಗಿ ಆತನಿಗೆ ವಿಜ್ಞಾಪನೆ ಮಾಡಿರಿ. (ಲೂಕ 11:13) ನೀವು ಅಧ್ಯಯನ ಮಾಡುವ ವಿಷಯದ ಅರ್ಥ, ಆತನ ಉದ್ದೇಶಕ್ಕೂ ಅದಕ್ಕೂ ಇರುವ ಸಂಬಂಧ, ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ವಿವೇಚಿಸಿ ತಿಳಿಯಲು ಅದು ನಿಮಗೆ ಸಹಾಯಮಾಡುವ ವಿಧ, ನಿಮ್ಮ ಜೀವಿತದಲ್ಲಿ ಆತನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ವಿಧ, ಮತ್ತು ಆ ವಿಷಯಭಾಗವು ನಿಮಗೆ ಆತನೊಂದಿಗಿರುವ ಸಂಬಂಧದ ಮೇಲೆ ಪರಿಣಾಮವನ್ನುಂಟುಮಾಡುವ ರೀತಿಯನ್ನು ತಿಳಿದುಕೊಳ್ಳಲು ಸಹಾಯಮಾಡುವಂತೆ ಆತನನ್ನು ಕೇಳಿಕೊಳ್ಳಿರಿ. (ಜ್ಞಾನೋ. 9:10) ನೀವು ಅಧ್ಯಯನ ಮಾಡುತ್ತಿರುವಾಗ, ವಿವೇಕಕ್ಕಾಗಿ ‘ದೇವರನ್ನು ಕೇಳಿಕೊಳ್ಳುತ್ತಾ ಇರಿ.’ (ಯಾಕೋ. 1:5) ತಪ್ಪು ಯೋಚನೆಗಳನ್ನು ಮತ್ತು ಹಾನಿಕರವಾದ ಆಶೆಗಳನ್ನು ಹೋಗಲಾಡಿಸುವಂತೆ ಯೆಹೋವನ ಸಹಾಯವನ್ನು ಕೇಳಿಕೊಳ್ಳುವಾಗ, ನೀವು ಏನನ್ನು ಕಲಿಯುತ್ತೀರೊ ಅದರ ಬೆಳಕಿನಲ್ಲಿ ನಿಮ್ಮನ್ನು ಪ್ರಾಮಾಣಿಕವಾಗಿ ತೂಗಿನೋಡಿರಿ. ಆತನು ತಿಳಿಯಪಡಿಸುವ ವಿಷಯಗಳಿಗಾಗಿ ಸದಾ “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ.” (ಕೀರ್ತ. 147:7) ಅಧ್ಯಯನದ ಸಂಬಂಧದಲ್ಲಿ ಇಂತಹ ಪ್ರಾರ್ಥನಾಪೂರ್ವಕವಾದ ಸಮೀಪಿಸುವಿಕೆಯು, ಯೆಹೋವನು ತನ್ನ ವಾಕ್ಯದ ಮೂಲಕ ನಮ್ಮೊಂದಿಗೆ ಮಾತಾಡುವಾಗ ಆತನಿಗೆ ಪ್ರತಿವರ್ತನೆ ತೋರಿಸಲು ನಮ್ಮನ್ನು ಶಕ್ತರನ್ನಾಗಿಸುವುದರಿಂದ, ಇದು ಆತನೊಂದಿಗೆ ಆಪ್ತತೆಗೆ ನಡಿಸುತ್ತದೆ.—ಕೀರ್ತ. 145:18.
ಇಂತಹ ಗ್ರಹಣಾಕಾಂಕ್ಷೆಯು ಯೆಹೋವನ ಜನರನ್ನು ಬೇರೆ ವಿದ್ಯಾರ್ಥಿಗಳಿಂದ ಭಿನ್ನವಾಗಿಸುತ್ತದೆ. ದೈವಿಕ ಭಕ್ತಿಯ ಕೊರತೆಯಿರುವ ವ್ಯಕ್ತಿಗಳಿಗೆ, ಬರೆದಿರುವುದನ್ನು ಸಂಶಯಿಸಿ ಸವಾಲೊಡ್ಡುವುದು ಒಂದು ಜನಪ್ರಿಯ ಪ್ರವೃತ್ತಿಯಾಗಿದೆ. ಆದರೆ ಇದು ನಮ್ಮ ಮನೋಭಾವವಲ್ಲ. ನಮಗೆ ಯೆಹೋವನಲ್ಲಿ ಭರವಸೆಯಿದೆ. (ಜ್ಞಾನೋ. 3:5-7) ಒಂದು ವಿಷಯ ನಮಗೆ ಅರ್ಥವಾಗದಿರುವಲ್ಲಿ, ಅದು ತಪ್ಪಾಗಿರಲೇಬೇಕೆಂದು ನಾವು ಅಹಂಕಾರದಿಂದ ತೀರ್ಮಾನಿಸುವುದಿಲ್ಲ. ನಾವು ಉತ್ತರಗಳಿಗಾಗಿ ಹುಡುಕುತ್ತೇವೆ ಮತ್ತು ಅಗೆಯುತ್ತೇವೆ, ಆದರೆ ಅದೇ ಸಮಯದಲ್ಲಿ ಯೆಹೋವನಿಗಾಗಿ ಕಾಯುತ್ತೇವೆ. (ಮೀಕ 7:7) ಎಜ್ರನಂತೆ, ನಮ್ಮ ಗುರಿಯು ನಾವು ಏನನ್ನು ಕಲಿತಿದ್ದೇವೊ ಅದಕ್ಕನುಸಾರ ವರ್ತಿಸಿ ಅದನ್ನು ಇತರರಿಗೆ ಬೋಧಿಸುವುದೇ ಆಗಿದೆ. ಈ ರೀತಿಯ ಹೃದಯಪ್ರವೃತ್ತಿ ಉಳ್ಳವರಾಗಿರುವುದರಿಂದ, ನಮ್ಮ ಅಧ್ಯಯನದಿಂದ ಪುಷ್ಕಳವಾದ ಪ್ರತಿಫಲವನ್ನು ಕೊಯ್ಯುವವರ ಸಾಲಿನಲ್ಲಿ ನಾವಿರುತ್ತೇವೆ.
ಅಧ್ಯಯನ ಮಾಡುವ ವಿಧ
ಒಂದನೆಯ ಪ್ಯಾರಗ್ರಾಫ್ನಿಂದ ಹಿಡಿದು ಅಂತ್ಯದ ವರೆಗೆ ಸುಮ್ಮನೆ ಓದುವ ಬದಲು, ಇಡೀ ಲೇಖನದ ಇಲ್ಲವೆ ಅಧ್ಯಾಯದ ಪೂರ್ವಪರಿಶೀಲನೆಯನ್ನು ಮಾಡಲು ಸಮಯವನ್ನು ತೆಗೆದುಕೊಳ್ಳಿರಿ. ಶೀರ್ಷಿಕೆಯಲ್ಲಿ ಉಪಯೋಗಿಸಲ್ಪಟ್ಟಿರುವ ಪದಗಳನ್ನು ವಿಶ್ಲೇಷಿಸುವ ಮೂಲಕ ಪೂರ್ವಪರಿಶೀಲನೆಯನ್ನು ಆರಂಭಿಸಿರಿ. ಇದು ನೀವು ಯಾವುದನ್ನು ಅಧ್ಯಯನ ಮಾಡಲಿದ್ದೀರೋ ಅದರ ಮುಖ್ಯ ವಿಷಯವಾಗಿದೆ. ಉಪಶೀರ್ಷಿಕೆಗಳು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸುತ್ತವೆಂಬ ವಿಷಯವನ್ನು ಜಾಗರೂಕತೆಯಿಂದ ಗಮನಿಸಿರಿ. ಲೇಖನದೊಂದಿಗಿರುವ ಚಿತ್ರಗಳು, ಚಾರ್ಟ್ಗಳು ಅಥವಾ ಬೋಧನಾ ಚೌಕಗಳನ್ನು ಪರೀಕ್ಷಿಸಿರಿ. ಮತ್ತು ಹೀಗೆ ಕೇಳಿಕೊಳ್ಳಿರಿ: ‘ಈ ಪೂರ್ವಪರಿಶೀಲನೆಯ ಆಧಾರದ ಮೇರೆಗೆ ನಾನೇನನ್ನು ಕಲಿತುಕೊಳ್ಳಲು ನಿರೀಕ್ಷಿಸುತ್ತೇನೆ? ಇದು ನನಗೆ ಯಾವ ವಿಧದಲ್ಲಿ ಬೆಲೆಯುಳ್ಳದ್ದಾಗಿದ್ದೀತು?’ ಈ ರೀತಿ ಮಾಡುವುದು ನಿಮ್ಮ ಅಧ್ಯಯನಕ್ಕೆ ಮಾರ್ಗದರ್ಶನವನ್ನು ಕೊಡುತ್ತದೆ.
ಈಗ ವಾಸ್ತವಾಂಶಗಳನ್ನು ಸಂಗ್ರಹಿಸಿರಿ. ಕಾವಲಿನಬುರುಜು ಅಧ್ಯಯನ ಲೇಖನಗಳಲ್ಲಿ ಮತ್ತು ಕೆಲವು ಪುಸ್ತಕಗಳಲ್ಲಿ ಮುದ್ರಿತ ಪ್ರಶ್ನೆಗಳಿರುತ್ತವೆ. ನೀವು ಪ್ರತಿಯೊಂದು ಪ್ಯಾರಗ್ರಾಫನ್ನು ಓದಿದಂತೆ, ಉತ್ತರಗಳಿಗೆ ಅಡಿಗೆರೆ ಹಾಕುವುದು ಪ್ರಯೋಜನಕರವಾಗಿದೆ. ಅಧ್ಯಯನ ಪ್ರಶ್ನೆಗಳು ಇಲ್ಲದಿರುವಾಗಲೂ, ನೀವು ಜ್ಞಾಪಿಸಿಕೊಳ್ಳಬಯಸುವ ಮುಖ್ಯ ಅಂಶಗಳನ್ನು ನೀವು ಗುರುತುಮಾಡಬಹುದು. ಒಂದು ಸಂಗತಿಯು ನಿಮಗೆ ಹೊಸದಾಗಿರುವಲ್ಲಿ, ನೀವು ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ತುಸು ಹೆಚ್ಚು ಸಮಯವನ್ನು ವ್ಯಯಿಸಿರಿ. ನಿಮಗೆ ಕ್ಷೇತ್ರ ಶುಶ್ರೂಷೆಯಲ್ಲಿ ಉಪಯುಕ್ತವಾಗಿರಬಲ್ಲ ಇಲ್ಲವೆ ಬರಲಿರುವ ಭಾಷಣದಲ್ಲಿ ನೀವು ಸೇರಿಸಬಹುದಾದ ದೃಷ್ಟಾಂತಗಳಿಗಾಗಿ ಅಥವಾ ತರ್ಕಸರಣಿಗಳಿಗಾಗಿ ಎಚ್ಚರಿಕೆಯಿಂದ ನೋಡಿರಿ. ನೀವು ಅಧ್ಯಯನ ಮಾಡುತ್ತಿರುವ ವಿಷಯವನ್ನು ಹಂಚಿಕೊಳ್ಳುವುದಾದರೆ ಯಾರ ನಂಬಿಕೆಯು ಬಲಪಡಿಸಲ್ಪಡಬಹುದೋ ಅಂತಹ ನಿರ್ದಿಷ್ಟ ವ್ಯಕ್ತಿಗಳ ಕುರಿತು ಯೋಚಿಸಿರಿ. ನೀವು ಬಳಸಲು ಬಯಸುವಂಥ ಮುಖ್ಯಾಂಶಗಳನ್ನು ಗುರುತಿಸಿಟ್ಟು, ನಿಮ್ಮ ಅಧ್ಯಯನವು ಮುಗಿದ ಬಳಿಕ ಅವುಗಳನ್ನು ಪುನರ್ವಿಮರ್ಶಿಸಿರಿ.
ಆ ಲೇಖನವನ್ನು ಪರಿಗಣಿಸುತ್ತಾ ಹೋದಂತೆ, ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ತೆರೆದು ನೋಡಿ. ಪ್ರತಿಯೊಂದು ವಚನವು ಆ ಪ್ಯಾರಗ್ರಾಫ್ನ ಪ್ರಮುಖ ವಿಷಯಕ್ಕೆ ಹೇಗೆ ಸಂಬಂಧಿಸುತ್ತದೆಂಬುದನ್ನು ವಿಶ್ಲೇಷಿಸಿರಿ.
ನಿಮಗೆ ಕೂಡಲೇ ಅರ್ಥವಾಗದಿರುವಂಥ ಅಥವಾ ನೀವು ಹೆಚ್ಚು ಪೂರ್ಣವಾಗಿ ಪರೀಕ್ಷಿಸಬಯಸುವಂಥ ವಿಷಯಗಳನ್ನು ನೀವು ಕಂಡುಕೊಳ್ಳಬಹುದು. ಅವುಗಳಿಂದ ಆಗಲೇ ಅಪಕರ್ಷಿತರಾಗುವ ಬದಲಿಗೆ, ಅವುಗಳನ್ನು ಅನಂತರ ಪರಿಗಣಿಸಲಿಕ್ಕಾಗಿ ಗುರುತು ಮಾಡಿ ಇಡಿರಿ. ಅನೇಕವೇಳೆ, ಲೇಖನದಲ್ಲಿ ನೀವು ಅಧ್ಯಯನವನ್ನು ಮುಂದುವರಿಸಿದಂತೆ ಅಂಥ ಅಂಶಗಳು ನಿಮಗೆ ಹೆಚ್ಚು ಸ್ಪಷ್ಟವಾಗುತ್ತವೆ. ಹಾಗೆ ಆಗದಿರುವಲ್ಲಿ, ಹೆಚ್ಚಿನ ಸಂಶೋಧನೆ ಮಾಡಿರಿ. ಈ ರೀತಿಯ ಹೆಚ್ಚಿನ ಗಮನವನ್ನು ಕೊಡಲಿಕ್ಕಾಗಿ ಯಾವ ವಿಷಯಗಳನ್ನು ಬರೆದಿಡಬಹುದು? ಒಂದುವೇಳೆ, ನಿಮಗೆ ಸ್ಪಷ್ಟವಾಗಿ ತಿಳಿಯದಿರುವಂಥ ಒಂದು ವಚನವಿರಬಹುದು. ಅಥವಾ, ಚರ್ಚಿಸಲ್ಪಡುತ್ತಿರುವ ವಿಷಯವಸ್ತುವಿಗೆ ಅದು ಹೇಗೆ ಸಂಬಂಧಿಸುತ್ತದೆಂಬುದು ನಿಮಗೆ ಆ ಕೂಡಲೆ ತಿಳಿಯದಿರಬಹುದು. ಇಲ್ಲವೆ, ಲೇಖನದಲ್ಲಿರುವ ಒಂದು ನಿರ್ದಿಷ್ಟ ವಿಚಾರವು ನಿಮಗೆ ಅರ್ಥವಾಗುತ್ತದಾದರೂ ಇತರರಿಗೆ ಅದನ್ನು ವಿವರಿಸುವಷ್ಟು ಉತ್ತಮವಾಗಿ ನಿಮಗೆ ಅದು ಅರ್ಥವಾಗಿಲ್ಲವೆಂದು ನಿಮಗನಿಸಬಹುದು. ಹಾಗಿರುವಾಗ, ಅವುಗಳನ್ನು ಹಾಗೆಯೇ ಬಿಟ್ಟುಬಿಡುವ ಬದಲು, ನೀವು ಯಾವುದನ್ನು ಅಧ್ಯಯನ ಮಾಡಲು ಶುರುಮಾಡಿದ್ದೀರೊ ಅದು ಮುಗಿದ ಬಳಿಕ ಅವುಗಳ ಕುರಿತು ಸಂಶೋಧನೆ ನಡೆಸುವುದು ವಿವೇಕಪ್ರದವಾಗಿರಬಹುದು.
ಅಪೊಸ್ತಲ ಪೌಲನು ಹೀಬ್ರು ಕ್ರೈಸ್ತರಿಗೆ ತನ್ನ ಸವಿವರವಾದ ಪತ್ರವನ್ನು ಬರೆದಾಗ, ಅವನು ಅದರ ಮಧ್ಯದಲ್ಲಿ “ಮುಖ್ಯವಾದ ಮಾತೇನೆಂದರೆ” ಎಂದು ಹೇಳಲು ಸ್ವಲ್ಪ ವಿರಾಮವನ್ನು ನೀಡಿದನು. (ಇಬ್ರಿ. 8:1) ನೀವು ನಿಮಗೆ ಆಗಾಗ ಅಂತಹ ಮರುಜ್ಞಾಪನವನ್ನು ಕೊಟ್ಟುಕೊಳ್ಳುತ್ತೀರೊ? ಪೌಲನು ಹಾಗೇಕೆ ಮಾಡಿದನೆಂಬುದನ್ನು ಪರಿಗಣಿಸಿರಿ. ಅವನು ತನ್ನ ಪ್ರೇರಿತ ಪತ್ರದ ಹಿಂದಿನ ಅಧ್ಯಾಯಗಳಲ್ಲಿ, ಕ್ರಿಸ್ತನು ದೇವರ ಮಹಾಯಾಜಕನಾಗಿ ಸ್ವರ್ಗವನ್ನು ಪ್ರವೇಶಿಸಿದ್ದನೆಂದು ಆಗಲೇ ತೋರಿಸಿದ್ದನು. (ಇಬ್ರಿ. 4:14–5:10; 6:20) ಆದರೆ, 8ನೆಯ ಅಧ್ಯಾಯದ ಆರಂಭದಲ್ಲಿ ಆ ಮುಖ್ಯ ಅಂಶವನ್ನು ಪ್ರತ್ಯೇಕಿಸುತ್ತ ಮತ್ತು ಅದನ್ನು ಒತ್ತಿಹೇಳುತ್ತ ಪೌಲನು, ಅದು ಅವರ ಜೀವಿತಗಳಿಗೆ ಹೇಗೆ ಸಂಬಂಧಿಸುತ್ತದೆಂಬ ವಿಷಯದ ಕುರಿತು ಆಳವಾಗಿ ಯೋಚಿಸುವುದಕ್ಕಾಗಿ ತನ್ನ ವಾಚಕರ ಮನಸ್ಸುಗಳನ್ನು ಸಿದ್ಧಪಡಿಸಿದನು. ಕ್ರಿಸ್ತನು ಅವರ ಪರವಾಗಿ ದೇವರ ಸಮ್ಮುಖದಲ್ಲಿ ತೋರಿಬಂದಿದ್ದನೆಂದೂ ಸ್ವರ್ಗದ “ಪವಿತ್ರಾಲಯ”ದಲ್ಲಿ ಅವರ ಸ್ವಂತ ಪ್ರವೇಶಕ್ಕಾಗಿ ದಾರಿಯನ್ನು ತೆರೆದಿದ್ದನೆಂದೂ ಅವನು ಎತ್ತಿ ತೋರಿಸಿದನು. (ಇಬ್ರಿ. 9:24; 10:19-22, NW) ಅವರ ನಿರೀಕ್ಷೆಯ ನಿಶ್ಚಿತತೆಯು, ಈ ಪತ್ರದಲ್ಲಿ ಅಡಗಿರುವ ನಂಬಿಕೆ, ಸಹನೆ, ಮತ್ತು ಕ್ರೈಸ್ತ ನಡತೆಯ ಕುರಿತಾದ ಹೆಚ್ಚಿನ ಸಲಹೆಯನ್ನು ಅವರು ಅನ್ವಯಿಸಿಕೊಳ್ಳುವಂತೆ ಪ್ರಚೋದಿಸಲು ಸಹಾಯಮಾಡಲಿತ್ತು. ಹಾಗೆಯೇ, ನಾವು ಅಧ್ಯಯನ ಮಾಡುವಾಗ, ಮುಖ್ಯಾಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು, ಮುಖ್ಯ ವಿಷಯದ ಬೆಳವಣಿಗೆಯನ್ನು ನಾವು ವಿವೇಚಿಸಿ ತಿಳಿಯುವಂತೆ ಸಹಾಯಮಾಡಿ, ಅದಕ್ಕನುಸಾರವಾಗಿ ನಡೆಯಲು ನಮಗಿರುವ ಸ್ವಸ್ಥ ಕಾರಣಗಳನ್ನು ಮನಸ್ಸಿಗೆ ನಾಟಿಸುವುದು.
ನಿಮ್ಮ ವೈಯಕ್ತಿಕ ಅಧ್ಯಯನವು ನಿಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೋ? ಇದು ಮಹತ್ವದ ಪ್ರಶ್ನೆಯಾಗಿದೆ. ಒಂದು ಸಂಗತಿಯನ್ನು ಕಲಿತಾಗ ನೀವು ಹೀಗೆ ಕೇಳಿಕೊಳ್ಳಿ: ‘ನನ್ನ ಮನೋಭಾವ ಮತ್ತು ಜೀವನದಲ್ಲಿನ ನನ್ನ ಗುರಿಗಳ ಮೇಲೆ ಇದು ಹೇಗೆ ಪರಿಣಾಮ ಬೀರಬೇಕು? ಒಂದು ಸಮಸ್ಯೆಯನ್ನು ಬಗೆಹರಿಸುವುದರಲ್ಲಿ, ಒಂದು ನಿರ್ಣಯವನ್ನು ಮಾಡುವುದರಲ್ಲಿ ಇಲ್ಲವೆ ಒಂದು ಗುರಿಯನ್ನು ಮುಟ್ಟುವುದರಲ್ಲಿ ನಾನು ಈ ಮಾಹಿತಿಯನ್ನು ಹೇಗೆ ಅನ್ವಯಿಸಿಕೊಳ್ಳಬಲ್ಲೆ? ನಾನು ನನ್ನ ಕುಟುಂಬದಲ್ಲಿ, ಕ್ಷೇತ್ರ ಸೇವೆಯಲ್ಲಿ, ಸಭೆಯಲ್ಲಿ ಇದನ್ನು ಹೇಗೆ ಬಳಸಬಲ್ಲೆ?’ ನಿಮ್ಮ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕಸಾಧ್ಯವಾಗುವಂಥ ನೈಜ ಸನ್ನಿವೇಶಗಳಿಗಾಗಿ ಮುನ್ನೋಡುತ್ತಾ, ಈ ಪ್ರಶ್ನೆಗಳನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿರಿ.
ಒಂದು ಅಧ್ಯಾಯವನ್ನೊ ಲೇಖನವನ್ನೊ ಮುಗಿಸಿದ ಬಳಿಕ, ಸಂಕ್ಷಿಪ್ತವಾದ ಪುನರ್ವಿಮರ್ಶೆಗಾಗಿ ಸಮಯವನ್ನು ತೆಗೆದುಕೊಳ್ಳಿ. ಮುಖ್ಯಾಂಶಗಳು ಮತ್ತು ಸಹಾಯಕ ವಾದಾಂಶಗಳು ನಿಮ್ಮ ನೆನಪಿಗೆ ಬರುತ್ತವೋ ಎಂದು ನೋಡಿ. ಈ ಹಂತವು ಭಾವೀ ಉಪಯೋಗಕ್ಕೆ ಮಾಹಿತಿಯನ್ನು ಉಳಿಸಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು.
ಯಾವುದನ್ನು ಅಧ್ಯಯನ ಮಾಡಬೇಕು?
ಯೆಹೋವನ ಜನರಾದ ನಮಗೆ ಅಧ್ಯಯನ ಮಾಡಲು ಬೇಕಾದಷ್ಟು ವಿಷಯಗಳಿವೆ. ಆದರೆ ಎಲ್ಲಿಂದ ಆರಂಭ ಮಾಡಬೇಕು? ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಿಕೆಯಿಂದ ಶಾಸ್ತ್ರವಚನವನ್ನೂ ಹೇಳಿಕೆಗಳನ್ನೂ ಅಧ್ಯಯನ ಮಾಡುವುದು ಒಳ್ಳೆಯದು. ಪ್ರತಿ ವಾರ ನಾವು ಸಭಾ ಕೂಟಗಳಿಗೆ ಹಾಜರಾಗುವುದರಿಂದ, ಇವುಗಳಿಗೆ ಸಿದ್ಧತೆಯಲ್ಲಿ ಮಾಡಲ್ಪಡುವ ತಯಾರಿಯು ನಮಗೆ ಇನ್ನೂ ಹೆಚ್ಚಿನ ಮಟ್ಟಿಗೆ ಪ್ರಯೋಜನಕರವಾಗಿರುವುದು. ಇದಕ್ಕೆ ಕೂಡಿಸಿ, ಕೆಲವರು ತಾವು ಸತ್ಯವನ್ನು ಕಲಿಯುವುದಕ್ಕೆ ಮೊದಲು ಮುದ್ರಿಸಲ್ಪಟ್ಟ ನಮ್ಮ ಕ್ರೈಸ್ತ ಪ್ರಕಾಶನಗಳನ್ನು ಅಧ್ಯಯನ ಮಾಡುವುದರಲ್ಲಿ ಸಮಯವನ್ನು ವಿವೇಕದಿಂದ ವಿನಿಯೋಗಿಸಿದ್ದಾರೆ. ಇತರರು ವಾರದ ಬೈಬಲ್ ವಾಚನದ ಒಂದು ಭಾಗವನ್ನು ಆರಿಸಿ, ಆ ವಚನಗಳನ್ನು ಗಾಢವಾಗಿ ಅಧ್ಯಯನ ಮಾಡುತ್ತಾರೆ.
ಸಾಪ್ತಾಹಿಕ ಸಭಾ ಕೂಟಗಳಲ್ಲಿ ಚರ್ಚಿಸಲಾಗುವ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ನಿಮ್ಮ ಸನ್ನಿವೇಶಗಳು ಬಿಡದಿರುವಾಗ ಏನು ಮಾಡಬೇಕು? ವಿಷಯಭಾಗವನ್ನು ಅಧ್ಯಯನ ಮಾಡಿ ಮುಗಿಸುವ ಉದ್ದೇಶದಿಂದ ಅವಸರವಸರವಾಗಿ ಅಧ್ಯಯನ ಮಾಡುವ, ಇಲ್ಲವೆ ಅದಕ್ಕಿಂತಲೂ ಗಂಭೀರವಾಗಿ, ಎಲ್ಲವನ್ನೂ ಮಾಡಲು ನಿಮಗೆ ಸಮಯವಿಲ್ಲ ಎಂಬ ಕಾರಣದಿಂದ ಯಾವುದನ್ನೂ ಅಧ್ಯಯನ ಮಾಡದಿರುವ ಅಪಾಯಗಳಿಗೆ ಒಳಗಾಗಬೇಡಿರಿ. ಇದಕ್ಕೆ ಬದಲಾಗಿ, ಎಷ್ಟನ್ನು ಅಧ್ಯಯನ ಮಾಡಸಾಧ್ಯವಿದೆ ಎಂಬುದನ್ನು ನಿರ್ಧರಿಸಿ ಅದನ್ನು ಒಳ್ಳೆಯದಾಗಿ ಮಾಡಿರಿ. ಪ್ರತಿ ವಾರ ಹಾಗೆ ಮಾಡಿರಿ. ಸಕಾಲದಲ್ಲಿ, ಇತರ ಕೂಟಗಳನ್ನೂ ಇದರಲ್ಲಿ ಸೇರಿಸಲಿಕ್ಕಾಗಿರುವ ನಿಮ್ಮ ಪ್ರಯತ್ನಗಳನ್ನು ಹೆಚ್ಚು ವಿಸ್ತಾರಗೊಳಿಸಿರಿ.
“ನಿನ್ನ ಕುಟುಂಬವನ್ನು ಕಟ್ಟು”
ತಮ್ಮ ಪ್ರಿಯರಿಗೆ ಬೇಕಾಗಿರುವಂಥದ್ದನ್ನು ಒದಗಿಸಲಿಕ್ಕಾಗಿ ಕುಟುಂಬದ ತಲೆಗಳು ಶ್ರಮಪಟ್ಟು ಕೆಲಸಮಾಡಬೇಕೆಂಬುದನ್ನು ಯೆಹೋವನು ಒಪ್ಪಿಕೊಳ್ಳುತ್ತಾನೆ. “ಅಂಗಳದಲ್ಲಿ ನಿನ್ನ ಕೆಲಸವನ್ನು ಅಣಿಮಾಡು, ಮತ್ತು ಹೊಲಗದ್ದೆಗಳ ಕೆಲಸವನ್ನು ಮುಗಿಸು” ಎನ್ನುತ್ತದೆ ಜ್ಞಾನೋಕ್ತಿ 24:27 (NW). ಆದರೂ, ನಿಮ್ಮ ಕುಟುಂಬದ ಆತ್ಮಿಕ ಆವಶ್ಯಕತೆಗಳನ್ನು ನೀವು ಅಲಕ್ಷ್ಯಮಾಡಸಾಧ್ಯವಿಲ್ಲ. ಆದುದರಿಂದಲೇ, ಆ ವಚನವು ಮುಂದುವರಿಸುವುದು: “ಆಮೇಲೆ ನಿನ್ನ ಕುಟುಂಬವನ್ನು ಕಟ್ಟು.” ಕುಟುಂಬದ ತಲೆಗಳು ಇದನ್ನು ಹೇಗೆ ಮಾಡಬಲ್ಲರು? ಜ್ಞಾನೋಕ್ತಿ 24:3 (NW) ಹೇಳುವುದು: “ವಿವೇಚನಾಶಕ್ತಿಯಿಂದ [ಒಂದು ಕುಟುಂಬವು] ಸ್ಥಿರವಾಗಿ ಸ್ಥಾಪಿಸಲ್ಪಟ್ಟದ್ದಾಗಿರುವುದು.”
ವಿವೇಚನಾಶಕ್ತಿಯು ನಿಮ್ಮ ಕುಟುಂಬಕ್ಕೆ ಹೇಗೆ ಪ್ರಯೋಜನವನ್ನು ತರಬಲ್ಲದು? ಪ್ರತ್ಯಕ್ಷವಾಗಿರುವ ವಿಷಯದಾಚೆಗೆ ನೋಡುವ ಮಾನಸಿಕ ಸಾಮರ್ಥ್ಯವೇ ವಿವೇಚನಾಶಕ್ತಿಯಾಗಿದೆ. ಪರಿಣಾಮಕಾರಿಯಾದ ಒಂದು ಕುಟುಂಬ ಅಧ್ಯಯನವು ನಿಮ್ಮ ಕುಟುಂಬ ಸದಸ್ಯರ ಕುರಿತಾದ ಅಧ್ಯಯನದಿಂದಲೇ ಆರಂಭಗೊಳ್ಳುತ್ತದೆ ಎಂದು ಹೇಳಸಾಧ್ಯವಿದೆ. ನಿಮ್ಮ ಕುಟುಂಬದ ಸದಸ್ಯರು ಆತ್ಮಿಕವಾಗಿ ಹೇಗೆ ಪ್ರಗತಿ ಮಾಡುತ್ತಿದ್ದಾರೆ? ಅವರೊಂದಿಗೆ ನೀವು ಮಾಡುವ ಸಂಭಾಷಣೆಯ ಸಮಯದಲ್ಲಿ ಜಾಗರೂಕತೆಯಿಂದ ಕಿವಿಗೊಡಿರಿ. ಗೊಣಗುವ ಅಥವಾ ಅಸಮಾಧಾನದ ಮನೋಭಾವವು ಕಂಡುಬರುತ್ತದೋ? ಪ್ರಾಪಂಚಿಕ ಬೆನ್ನಟ್ಟುವಿಕೆಗಳು ದೊಡ್ಡ ವಿಷಯಗಳಾಗಿವೆಯೊ? ನೀವು ನಿಮ್ಮ ಮಕ್ಕಳೊಂದಿಗೆ ಕ್ಷೇತ್ರ ಸೇವೆಯಲ್ಲಿರುವಾಗ, ಅವರು ತಮ್ಮ ಸಮವಯಸ್ಕರ ಮುಂದೆ ತಮ್ಮನ್ನು ಯೆಹೋವನ ಸಾಕ್ಷಿಗಳಾಗಿ ತೋರಿಸಿಕೊಳ್ಳಲು ಸಂತೋಷಪಡುತ್ತಾರೊ? ಕುಟುಂಬ ಬೈಬಲ್ ವಾಚನ ಮತ್ತು ಅಧ್ಯಯನದ ನಿಮ್ಮ ಕಾರ್ಯಕ್ರಮದಲ್ಲಿ ಅವರು ಸಂತೋಷಿಸುತ್ತಾರೊ? ಅವರು ನಿಜವಾಗಿಯೂ ಯೆಹೋವನ ಮಾರ್ಗಗಳನ್ನು ತಮ್ಮ ಜೀವನಮಾರ್ಗವಾಗಿ ಮಾಡಿಕೊಳ್ಳುತ್ತಿದ್ದಾರೊ? ಈ ವಿಷಯದಲ್ಲಿ ಜಾಗರೂಕ ಅವಲೋಕನವು, ಕುಟುಂಬದ ಪ್ರತಿಯೊಬ್ಬ ಸದಸ್ಯನಲ್ಲಿ ಆತ್ಮಿಕ ಗುಣಗಳನ್ನು ಸ್ಥಾಪಿಸಲಿಕ್ಕಾಗಿ ಮತ್ತು ಬೆಳೆಸಲಿಕ್ಕಾಗಿ ಕುಟುಂಬದ ತಲೆಯಾಗಿರುವ ನೀವು ಏನು ಮಾಡಬೇಕೆಂಬುದನ್ನು ತೋರಿಸುವುದು.
ನಿರ್ದಿಷ್ಟ ಆವಶ್ಯಕತೆಗಳ ಕುರಿತಾದ ವಿಷಯದೊಂದಿಗೆ ವ್ಯವಹರಿಸುವ ಲೇಖನಗಳಿಗಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಪರೀಕ್ಷಿಸಿರಿ. ಬಳಿಕ ಅಧ್ಯಯನ ಮಾಡಲಿರುವ ವಿಷಯಗಳನ್ನು ಕುಟುಂಬಕ್ಕೆ ಮುಂದಾಗಿಯೇ ತಿಳಿಸಿರಿ. ಆಗ ಅವರು ಆ ಮಾಹಿತಿಯ ಕುರಿತು ಯೋಚಿಸಶಕ್ತರಾಗುವರು. ಅಧ್ಯಯನದ ಸಮಯದಲ್ಲಿ ಪ್ರೀತಿಪೂರ್ಣ ವಾತಾವರಣವನ್ನು ಕಾಪಾಡಿಕೊಳ್ಳಿರಿ. ಕುಟುಂಬದ ಯಾವ ಸದಸ್ಯನನ್ನೂ ಖಂಡಿಸದೆ ಇಲ್ಲವೆ ಪೇಚಿಗೊಳಪಡಿಸದೆ, ನಿಮ್ಮ ಕುಟುಂಬದ ಆವಶ್ಯಕತೆಗಳಿಗೆ ನಿರ್ದಿಷ್ಟ ಅನ್ವಯವನ್ನು ಮಾಡುತ್ತಾ, ಅಧ್ಯಯನ ಮಾಡುತ್ತಿರುವ ವಿಷಯಭಾಗದ ಮೌಲ್ಯವನ್ನು ಎತ್ತಿಹೇಳಿರಿ. ಪ್ರತಿಯೊಬ್ಬ ಸದಸ್ಯನನ್ನೂ ಅಧ್ಯಯನದಲ್ಲಿ ಒಳಗೂಡಿಸಿರಿ. ಒಬ್ಬನಿಗೆ ಅಥವಾ ಒಬ್ಬಳಿಗೆ ಏನು ಬೇಕೋ ಅದನ್ನೇ ಒದಗಿಸುವುದರಲ್ಲಿ ಯೆಹೋವನ ವಾಕ್ಯವು ಹೇಗೆ “ಲೋಪವಿಲ್ಲದ್ದು” ಎಂದು ನೋಡುವಂತೆ ಪ್ರತಿಯೊಬ್ಬನಿಗೆ ಅಥವಾ ಪ್ರತಿಯೊಬ್ಬಳಿಗೆ ಸಹಾಯಮಾಡಿರಿ.—ಕೀರ್ತ. 19:7.
ಪ್ರತಿಫಲಗಳನ್ನು ಕೊಯ್ಯುವುದು
ಆತ್ಮಿಕ ಗ್ರಹಣಶಕ್ತಿಯಿಲ್ಲದಿದ್ದರೂ, ಜಾಗರೂಕ ಗಮನಕೊಟ್ಟು ನೋಡುವ ವ್ಯಕ್ತಿಗಳು ವಿಶ್ವವನ್ನು, ಲೋಕ ಘಟನೆಗಳನ್ನು ಮತ್ತು ತಮ್ಮ ಬಗ್ಗೆಯೂ ಅಧ್ಯಯನ ಮಾಡಶಕ್ತರಾಗಿರುವುದಾದರೂ, ತಾವು ನೋಡುತ್ತಿರುವುದರ ನಿಜಾರ್ಥವನ್ನು ಗ್ರಹಿಸುವುದರಲ್ಲಿ ತಪ್ಪಿಬೀಳುತ್ತಾರೆ. ಇನ್ನೊಂದು ಕಡೆಯಲ್ಲಿ, ಕ್ರಮವಾಗಿ ದೇವರ ವಾಕ್ಯದ ಅಧ್ಯಯನ ಮಾಡುವವರು, ದೇವರಾತ್ಮದ ಸಹಾಯದಿಂದ ಈ ಸಂಗತಿಗಳಲ್ಲಿ ದೇವರ ಕೈಕೆಲಸವನ್ನು, ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ಮತ್ತು ವಿಧೇಯ ಮಾನವರ ಆಶೀರ್ವಾದಕ್ಕಾಗಿರುವ ದೇವರ ಉದ್ದೇಶವು ಅನಾವರಣಗೊಳ್ಳುತ್ತಿರುವುದನ್ನು ವಿವೇಚಿಸಿ ತಿಳಿದುಕೊಳ್ಳುತ್ತಾರೆ.—ಮಾರ್ಕ 13:4-29; ರೋಮಾ. 1:20; ಪ್ರಕ. 12:12.
ಇದು ಅದ್ಭುತಕರವಾಗಿದೆಯಾದರೂ, ಇದು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡಬಾರದು. ಬದಲಿಗೆ, ದೇವರ ವಾಕ್ಯದ ದೈನಂದಿನ ಪರೀಕ್ಷೆಯು ನಾವು ದೀನರಾಗಿರುವಂತೆ ಸಹಾಯಮಾಡುತ್ತದೆ. (ಧರ್ಮೋ. 17:18-20) ಇದು “ಪಾಪದಿಂದ ಮೋಸ” ಹೋಗದಂತೆಯೂ ನಮ್ಮನ್ನು ತಡೆಯುತ್ತದೆ. ಏಕೆಂದರೆ, ದೇವರ ವಾಕ್ಯವು ನಮ್ಮ ಹೃದಯಗಳಲ್ಲಿ ಜೀವಂತವಾಗಿರುವಾಗ, ಪಾಪವನ್ನು ಪ್ರತಿರೋಧಿಸುವ ವಿಷಯದಲ್ಲಿ ನಮ್ಮ ದೃಢನಿರ್ಧಾರವನ್ನು ಪಾಪದಾಶೆಯು ಜಯಿಸುವ ಸಂಭವನೀಯತೆಯು ಬಹಳ ಕಡಿಮೆ. (ಇಬ್ರಿ. 2:1; 3:13; ಕೊಲೊ. 3:5-10) ಹೀಗೆ, “[ನಾವು] ಪ್ರತಿಯೊಂದು ಸತ್ಕಾರ್ಯದಲ್ಲಿ ಫಲವನ್ನು ಫಲಿಸುತ್ತ ಮುಂದುವರಿಯುವಾಗ ಯೆಹೋವನನ್ನು ಪೂರ್ಣವಾಗಿ ಮೆಚ್ಚಿಸುವ ಗುರಿಯಿಂದ ಆತನಿಗೆ ಯೋಗ್ಯರಾಗಿ [ನಡೆಯುವೆವು].” (ಕೊಲೊ. 1:10, NW) ದೇವರ ವಾಕ್ಯವನ್ನು ಅಧ್ಯಯನ ಮಾಡುವುದರಲ್ಲಿ ನಮಗಿರುವ ಗುರಿಯು ಇದೇ ಆಗಿದೆ, ಮತ್ತು ಇದನ್ನು ಸಾಧಿಸುವುದು ಅತ್ಯಂತ ಮಹಾ ಪ್ರತಿಫಲವಾಗಿದೆ.