ದೇವರೊಂದಿಗೆ ಸ್ನೇಹ
ನಾವು ಮೊದಲ ಪುಟಗಳಲ್ಲಿ ನೋಡಿದಂತೆ, ಅನೇಕ ಜನರು ಬೈಬಲನ್ನು ಒಂದು ಪವಿತ್ರ ಪುಸ್ತಕವಾಗಿ ನೋಡುತ್ತಾರೆ. ಯಾಕೆಂದರೆ ಬೈಬಲ್ ಓದಿದಾಗೆಲ್ಲಾ ಅವರಿಗೆ ಒಳ್ಳೊಳ್ಳೆ ಸಲಹೆಗಳು ಸಿಕ್ಕಿವೆ, ದೇವರೇ ಅವರನ್ನು ಒಳ್ಳೇ ದಾರಿಯಲ್ಲಿ ನಡೆಸುತ್ತಾ ಇದ್ದಾನೆ ಅನ್ನೋ ಅನುಭವ ಅವರಿಗೆ ಈಗಾಗ್ಲೇ ಆಗಿದೆ. ಅಷ್ಟೇ ಅಲ್ಲ, ಬೈಬಲ್ ಓದೋದ್ರಿಂದ ಅವರ ಜೀವನಕ್ಕೆ ಒಂದು ಅರ್ಥ ಸಿಕ್ಕಿದೆ.
ದೇವರೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಬಯಸುವ ವ್ಯಕ್ತಿ ತನ್ನ ಇಷ್ಟದ ಪ್ರಕಾರ ಅಲ್ಲ ಬದಲಾಗಿ ದೇವರ ಇಷ್ಟದ ಪ್ರಕಾರ ತನ್ನ ಜೀವನವನ್ನು ನಡೆಸುತ್ತಾನೆ. (ಯೂದ 18, 19) ಅವನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಯೋಚನೆ ಮಾಡಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಅವನಿಗೆ ಏನು ಇಷ್ಟಾನೋ ಅದನ್ನೇ ಮಾಡುತ್ತಾನೆ. ಆದರೆ ದೇವರ ಸ್ನೇಹ ಬಯಸುವ ವ್ಯಕ್ತಿ, ದೇವರು ತೋರಿಸಿದ ದಾರಿಯಲ್ಲೇ ನಡೆಯುತ್ತಾನೆ, ತನ್ನ ಸ್ವಂತ ದಾರಿಯಲ್ಲಿ ನಡೆಯುವುದಿಲ್ಲ.—ಎಫೆಸ 5:1.
ನಿರೀಕ್ಷೆ
ಬೈಬಲ್ ಸಲಹೆ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.”—ಜ್ಞಾನೋಕ್ತಿ 24:10.
ಇದರ ಅರ್ಥ: ಜೀವನದಲ್ಲಿ ಭರವಸೆ ಕಳಕೊಂಡಾಗ ನಾವು ಕುಗ್ಗಿ ಹೋಗಬಹುದು. ಹೀಗೆ ಆಗದೇ ಇರಲು ನಿರೀಕ್ಷೆ ನಮಗೆ ಸಹಾಯ ಮಾಡುತ್ತೆ. ನಿರೀಕ್ಷೆ ಇರುವ ವ್ಯಕ್ತಿ ತನ್ನ ಕಷ್ಟಗಳಿಗೆ ಕೊನೆ ಇದ್ದೇ ಇರುತ್ತೆ ಅಂದುಕೊಂಡು ಮುಂದೆ ಸಾಗುತ್ತಾನೆ. ಕಷ್ಟದ ಕರಿಮೋಡಗಳ ಹಿಂದಿರುವ ಬೆಳಕು, ನಿರೀಕ್ಷೆ ಇರುವ ವ್ಯಕ್ತಿಗೆ ಯಾವಾಗಲೂ ಕಾಣುತ್ತೆ.
ನೀವೇನು ಮಾಡಬಹುದು: ಯಾವಾಗಲೂ ಸಮಸ್ಯೆಗಳ ಬಗ್ಗೆನೇ ಯೋಚಿಸೋ ಬದಲು ಸಮಸ್ಯೆಗಳ ಮಧ್ಯದಲ್ಲೂ ಖುಷಿ ಖುಷಿಯಾಗಿ ಇರಲು ಪ್ರಯತ್ನಿಸಿ. ಯಾವಾಗಲೂ, ಒಂದು ವೇಳೆ ನಾಳೆ ಏನಾದರೂ ಆದರೆ ಏನು ಮಾಡೋದಪ್ಪಾ? ಅಂತ ಚಿಂತಿಸುವ ಬದಲು ನಿಮ್ಮ ಗುರಿ ಮುಟ್ಟಲಿಕ್ಕೆ ಏನು ಮಾಡಬೇಕೋ ಅದನ್ನು ಮಾಡಿ. ‘ಹೇಗೂ ಒಳ್ಳೇ ಸಮಯ ಬರುತ್ತೆ, ಆಗ ನೋಡ್ಕೊಳ್ಳೋಣ’ ಅಂತ ಸುಮ್ಮನೆ ಕೂರಬೇಡಿ. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಅಂದ್ರೆ ಕೆಲವೊಮ್ಮೆ ಅಂದುಕೊಂಡಿದ್ದೆಲ್ಲಾ ನಡಿಯಲ್ಲ. (ಪ್ರಸಂಗಿ 9:11) ಆದರೆ ನಾವು ಅಂದುಕೊಂಡಷ್ಟು ಕೆಟ್ಟದ್ದೂ ಆಗಲಿಕ್ಕಿಲ್ಲ. ಹಾಗಾಗಿ, ನಾವು ಪಟ್ಟು ಹಿಡಿದು ಪ್ರಯತ್ನಿಸುತ್ತಾ ಇರಬೇಕು. ನಾವು ಮಾಡುವ ಕೆಲಸವನ್ನು ಬೈಬಲ್, ಒಬ್ಬ ವ್ಯವಸಾಯಗಾರ ಬೀಜ ಬಿತ್ತುವುದಕ್ಕೆ ಹೋಲಿಸುತ್ತೆ. ಅದರಲ್ಲಿ, “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು” ಅಂತ ಹೇಳುತ್ತೆ.—ಪ್ರಸಂಗಿ 11:6.
ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
ಬೈಬಲಿನ ಸಲಹೆ: “ನನಗೆ ವಿವೇಕವನ್ನು ದಯಪಾಲಿಸು . . . ನಿನ್ನ ವಾಕ್ಯದ ಸಾರಾಂಶವು ಸತ್ಯವೇ.”—ಕೀರ್ತನೆ 119:144, 160.
ಇದರ ಅರ್ಥ: ಬೈಬಲಿನಲ್ಲಿ, ಸಾಮಾನ್ಯವಾಗಿ ಜನರು ಕೇಳೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೆ. ಉದಾಹರಣೆಗೆ,
ನಮಗೆ ಯಾಕೆ ಕಷ್ಟಗಳಿವೆ?
ಸತ್ತ ಮೇಲೆ ನಮಗೆ ಏನಾಗುತ್ತೆ?
ನಮ್ಮ ಜೀವನದ ಉದ್ದೇಶ ಏನು?
ನಮ್ಮ ಭವಿಷ್ಯ ಹೇಗಿರುತ್ತೆ?
ಇಂತಹ ಅನೇಕ ಪ್ರಶ್ನೆಗಳಿಗೆ ಕೋಟ್ಯಾಂತರ ಜನ ಬೈಬಲ್ ಓದಿ ಉತ್ತರ ತಿಳುಕೊಂಡಿದ್ದಾರೆ. ಅಷ್ಟೇ ಅಲ್ಲ, ಬೈಬಲ್ ಹೇಳೋ ತರ ಜೀವನ ನಡೆಸಿದರಿಂದ ಅವರು ಸಂತೋಷವಾಗಿದ್ದಾರೆ.
ನೀವೇನು ಮಾಡಬಹುದು: ಬೈಬಲನ್ನು ನೀವೇ ಒಂದ್ಸಲ ಓದಿ ನೋಡಿ. ಅದರಲ್ಲಿ ಒಳ್ಳೇ ಸಲಹೆಗಳು ಇದೆಯಾ ಅಂತ ಪರೀಕ್ಷಿಸಿ. ಬೈಬಲನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ. jw.org ಎಂಬ ನಮ್ಮ ವೆಬ್ಸೈಟ್ಗೆ ಲಾಗ್ಇನ್ ಮಾಡಿ ಅಥವಾ ನಮ್ಮ ಮೀಟಿಂಗ್ಗೆ ಸಹ ಬರಬಹುದು. ಇವುಗಳಿಗೆ ಯಾವುದೇ ಹಣ ಕೊಡಬೇಕಾಗಿಲ್ಲ.
ಬೈಬಲಿನ ಇನ್ನಿತರ ಸಲಹೆಗಳು
ನಿಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ತಿಳಿದುಕೊಳ್ಳಿ.
“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3.
ದೇವರ ಬಗ್ಗೆ ಹೆಚ್ಚು ಕಲಿಯಿರಿ.
“ದೇವರಿಗಾಗಿ ತಡಕಾಡಿ, . . . ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.”—ಅಪೊಸ್ತಲರ ಕಾರ್ಯಗಳು 17:27.
ಬೈಬಲ್ ಓದಿ, ಅದರಲ್ಲಿರುವ ವಿಷ್ಯಗಳ ಕುರಿತು ಆಳವಾಗಿ ಯೋಚಿಸಿ.
“ಯೆಹೋವನa ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. . . . ಅವನ ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತನೆ 1:2, 3.
a ಯೆಹೋವ ಎನ್ನುವುದು ದೇವರ ಹೆಸರು ಅಂತ ಬೈಬಲ್ ತಿಳಿಸುತ್ತೆ.