ನಿಮ್ಮ ಸಮಗ್ರತೆ ಯೆಹೋವನನ್ನು ಸಂತೋಷಪಡಿಸುತ್ತದೆ!
“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”—ಜ್ಞಾನೋ. 27:11.
ಯೆಹೋವನು ಸೈತಾನನಿಗೆ ತನ್ನ ನಿಷ್ಠ ಸೇವಕನಾದ ಯೋಬನನ್ನು ಪರೀಕ್ಷಿಸಲು ಅನುಮತಿ ಕೊಟ್ಟನು. ಫಲಿತಾಂಶವಾಗಿ ಯೋಬನು ತನ್ನ ಜಾನುವಾರುಗಳನ್ನು, ಮಕ್ಕಳನ್ನು ಮತ್ತು ಆರೋಗ್ಯವನ್ನು ಕಳೆದುಕೊಂಡನು. ಸೈತಾನನು ಯೋಬನ ಸಮಗ್ರತೆಯನ್ನು ಪ್ರಶ್ನಿಸಿದನಾದರೂ ಅವನು ಎಬ್ಬಿಸಿದ ಸವಾಲಿನಲ್ಲಿ ಯೋಬನೊಬ್ಬನೇ ಒಳಗೂಡಿರಲಿಲ್ಲ. ಸೈತಾನನು ಹೇಳಿದ್ದು: “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” ಈ ಸವಾಲು ಎಬ್ಬಿಸಿದ ವಿವಾದಾಂಶವು ಯೋಬನನ್ನಷ್ಟೇ ಅಲ್ಲ ಇತರರನ್ನೂ ಒಳಗೊಂಡಿದೆ ಮತ್ತು ಯೋಬನ ಮರಣಾನಂತರವೂ ಮುಂದುವರಿದಿದೆ.—ಯೋಬ 2:4.
2 ಯೋಬನು ಪರೀಕ್ಷೆಗಳನ್ನನುಭವಿಸಿ 600 ವರ್ಷಗಳು ಕಳೆದ ನಂತರ ಸೊಲೊಮೋನನು ದೇವಪ್ರೇರಣೆಯಿಂದ ಈ ಮಾತುಗಳನ್ನು ಬರೆದನು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋ. 27:11) ಆಗಲೂ ಸೈತಾನನು ಯೆಹೋವನಿಗೆ ಸವಾಲೊಡ್ಡುತ್ತಿದ್ದನೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಲ್ಲದೇ, ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ, ಸ್ವರ್ಗದಿಂದ ಉಚ್ಛಾಟಿಸಲ್ಪಟ್ಟ ಸೈತಾನನು ದೇವರ ಸೇವಕರನ್ನು ದೂಷಿಸುತ್ತಿರುವುದನ್ನು ನೋಡಿದನು. ಈ ಸಂಗತಿಯು 1914ರಲ್ಲಿ ದೇವರ ರಾಜ್ಯವು ಸ್ಥಾಪಿತವಾದ ಸ್ವಲ್ಪ ಸಮಯದ ಬಳಿಕ ನೆರವೇರಿತು. ಹೌದು, ಇಂದು ಕೂಡ ಅಂದರೆ ಈ ದುಷ್ಟ ವ್ಯವಸ್ಥೆಯ ಕಡೇ ದಿವಸಗಳ ಕೊನೆಯಲ್ಲೂ ಸೈತಾನನು ದೇವರ ಸೇವಕರ ಸಮಗ್ರತೆಗೆ ಸವಾಲೆಸೆಯುತ್ತಿದ್ದಾನೆ!—ಪ್ರಕ. 12:10.
3 ಯೋಬ ಪುಸ್ತಕದಿಂದ ಕಲಿಯಬಹುದಾದ ಮೂರು ಪ್ರಾಮುಖ್ಯ ಪಾಠಗಳನ್ನು ಪರಿಗಣಿಸಿರಿ. ಮೊದಲನೆಯ ಪಾಠ: ಯೋಬನಿಗೆ ಬಂದ ಪರೀಕ್ಷೆಗಳು, ಮಾನವಕುಲದ ನಿಜವಾದ ಶತ್ರು ಮತ್ತು ದೇವಜನರ ವಿರೋಧದ ಮೂಲ ಯಾರು ಎಂಬುದನ್ನು ಬಯಲುಪಡಿಸುತ್ತವೆ. ಆ ಶತ್ರು ಪಿಶಾಚನಾದ ಸೈತಾನನೇ. ಎರಡನೆಯ ಪಾಠ: ಯೆಹೋವನೊಂದಿಗೆ ನಮಗೆ ಆಪ್ತ ಸಂಬಂಧವಿರುವಲ್ಲಿ ಯಾವುದೇ ಪರೀಕ್ಷೆಗಳು ಬಂದರೂ ಸಮಗ್ರತೆ ಕಾಪಾಡಿಕೊಳ್ಳಬಹುದು. ಮೂರನೆಯ ಪಾಠ: ನಾವು ಪರೀಕ್ಷೆಗಳಿಗೆ ಒಳಗಾಗುವಾಗ, ದೇವರು ಯೋಬನಿಗೆ ಮಾಡಿದಂತೆ ನಮ್ಮನ್ನೂ ಬೆಂಬಲಿಸುತ್ತಾನೆ. ಇದನ್ನು ಯೆಹೋವನು ಇಂದು ತನ್ನ ವಾಕ್ಯ, ಸಂಘಟನೆ ಮತ್ತು ಪವಿತ್ರಾತ್ಮದ ಮೂಲಕ ಮಾಡುತ್ತಾನೆ.
ನಿಜವಾದ ಶತ್ರುವನ್ನು ಮನಸ್ಸಿನಲ್ಲಿಡಿ
4 ಸೈತಾನ ಎಂಬವನೊಬ್ಬನು ಇದ್ದಾನೆ ಎಂಬುದನ್ನೇ ಅನೇಕರು ನಂಬುವುದಿಲ್ಲ. ಹೀಗಿರಲಾಗಿ, ಅವರು ಲೋಕದ ಪರಿಸ್ಥಿತಿಗಳಿಂದಾಗಿ ಚಿಂತಾಕ್ರಾಂತರಾದರೂ ಅದಕ್ಕೆ ನಿಜವಾಗಿ ಪಿಶಾಚನಾದ ಸೈತಾನನೇ ಕಾರಣನೆಂದು ಅವರಿಗೆ ತಿಳಿದಿಲ್ಲ. ಆದರೆ, ಮಾನವಕುಲದ ಹೆಚ್ಚಿನ ಕಷ್ಟಗಳಿಗೆ ಮಾನವರೇ ಕಾರಣರು. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು ತಮ್ಮ ಸೃಷ್ಟಿಕರ್ತನಿಂದ ಸ್ವತಂತ್ರರಾಗಲು ಆಯ್ಕೆಮಾಡಿದಂದಿನಿಂದ ಪ್ರತಿಯೊಂದು ತಲೆಮಾರಿನವರೂ ಅವಿವೇಕಯುತವಾಗಿ ವರ್ತಿಸಿದ್ದಾರೆ. ಆದರೆ, ದೇವರ ವಿರುದ್ಧ ದಂಗೆಯೇಳುವಂತೆ ಹವ್ವಳನ್ನು ಪುಸಲಾಯಿಸಿದ್ದು ಪಿಶಾಚನೇ. ಅವನೇ ಅಪರಿಪೂರ್ಣ ಹಾಗೂ ಮರಣಾಧೀನ ಮಾನವರ ಮಧ್ಯೆ ಒಂದು ಜಾಗತಿಕ ವ್ಯವಸ್ಥೆಯನ್ನು ಕಟ್ಟಿಕೊಂಡು ಅದನ್ನು ತನ್ನ ಹತೋಟಿಯಲ್ಲಿಟ್ಟಿದ್ದಾನೆ. “ಈ ಪ್ರಪಂಚದ ದೇವರು” ಸೈತಾನನಾಗಿರುವ ಕಾರಣ ಅವನಲ್ಲಿರುವ ಅಹಂಕಾರ, ಪಕ್ಷಭೇದ, ಮತ್ಸರ, ದುರಾಶೆ, ಮೋಸ, ದಂಗೆಕೋರತನದಂಥ ಗುಣಲಕ್ಷಣಗಳನ್ನೇ ಮಾನವರು ತೋರಿಸುತ್ತಿದ್ದಾರೆ. (2 ಕೊರಿಂ. 4:4; 1 ತಿಮೊ. 2:14; 3:6; ಯಾಕೋಬ 3:14, 15 ಓದಿ.) ಅಂಥ ಗುಣಲಕ್ಷಣಗಳು ರಾಜಕೀಯ ಮತ್ತು ಧಾರ್ಮಿಕ ಕಲಹಗಳು, ಹಗೆ, ಭ್ರಷ್ಟಾಚಾರ ಮತ್ತು ಅವ್ಯವಸ್ಥೆಗೆ ನಡೆಸಿ ಮಾನವಕುಲದ ದುರವಸ್ಥೆಯನ್ನು ಹೆಚ್ಚಿಸಿವೆ.
5 ಲೋಕದ ಪರಿಸ್ಥಿತಿಗಳು ಹಾಳಾಗುತ್ತಿರಲು ಕಾರಣರಾರು ಎಂಬುದು ಯೆಹೋವನ ಸೇವಕರಾದ ನಮಗೆ ಗೊತ್ತಿದೆ. ಇದು ಎಷ್ಟೊಂದು ಅಮೂಲ್ಯ ಜ್ಞಾನ! ಮುಖ್ಯ ತೊಂದರೆಗಾರನು ಯಾರೆಂದು ಜನರಿಗೆ ತಿಳಿಸಲಿಕ್ಕಾಗಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಇದು ನಮ್ಮನ್ನು ಪ್ರಚೋದಿಸುತ್ತದಲ್ಲವೋ? ಸತ್ಯ ದೇವರಾದ ಯೆಹೋವನ ಪಕ್ಷದಲ್ಲಿ ನಿಲ್ಲಲು ಮತ್ತು ಆತನು ಸೈತಾನನನ್ನು ಹಾಗೂ ಮಾನವಕುಲದ ಕಷ್ಟಗಳನ್ನು ಅಂತ್ಯಗೊಳಿಸಲಿದ್ದಾನೆಂದು ಹೇಳಲು ನಮಗೆ ಸಂತೋಷವಾಗುವುದಿಲ್ಲವೇ?
6 ಸೈತಾನನು ಲೋಕದ ಹೆಚ್ಚಿನ ಸಂಕಷ್ಟಗಳಿಗೆ ಮಾತ್ರವಲ್ಲ ದೇವಜನರಿಗೆ ಬರುವ ವಿರೋಧಕ್ಕೂ ಕಾರಣನಾಗಿದ್ದಾನೆ. ನಮ್ಮನ್ನು ಪರೀಕ್ಷೆಗೊಳಪಡಿಸಬೇಕೆಂದು ಅವನು ಪಣತೊಟ್ಟಿದ್ದಾನೆ. ಯೇಸು ಕ್ರಿಸ್ತನು ಅಪೊಸ್ತಲ ಪೇತ್ರನಿಗಂದದ್ದು: “ಸೀಮೋನನೇ, ಸೀಮೋನನೇ, ಇಗೋ ಸೈತಾನನು ನಿಮ್ಮನ್ನು ಗೋದಿಯಂತೆ ತೂರಲು ಒತ್ತಾಯಿಸಿದ್ದಾನೆ.” (ಲೂಕ 22:31) ತದ್ರೀತಿಯಲ್ಲಿ, ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವ ಪ್ರತಿಯೊಬ್ಬನು ಒಂದಲ್ಲ ಒಂದು ವಿಧದಲ್ಲಿ ಕಷ್ಟವನ್ನನುಭವಿಸುವನು. ಪೇತ್ರನು ಪಿಶಾಚನನ್ನು, ‘ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುವ ಗರ್ಜಿಸುವ ಸಿಂಹಕ್ಕೆ’ ಹೋಲಿಸಿದನು. ಅಲ್ಲದೇ, ಪೌಲನಂದದ್ದು: “ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು.”—1 ಪೇತ್ರ 5:8; 2 ತಿಮೊ. 3:12.
7 ಸಭೆಯಲ್ಲಿರುವ ಒಬ್ಬ ಸಹೋದರ ಇಲ್ಲವೇ ಸಹೋದರಿಗೆ ಏನಾದರೂ ಕಷ್ಟ ಬಂದಾಗ, ನಿಜವಾದ ಶತ್ರುವನ್ನು ನಾವು ಮನಸ್ಸಿನಲ್ಲಿಟ್ಟಿದ್ದೇವೆಂದು ಹೇಗೆ ತೋರಿಸಬಲ್ಲೆವು? ಅವರನ್ನು ದೂರವಿಡುವ ಬದಲು, ಯೋಬನೊಂದಿಗೆ ನಿಜ ಸ್ನೇಹಿತನಂತೆ ಮಾತಾಡಿದ ಎಲೀಹುವಿನಂತೆ ನಾವು ಕಾರ್ಯನಡಿಸಬೇಕು. ಆ ಜೊತೆವಿಶ್ವಾಸಿಯೊಂದಿಗೆ ಸೇರಿ ನಮ್ಮ ಶತ್ರುವಾದ ಸೈತಾನನೊಂದಿಗೆ ಹೋರಾಡಬೇಕು. (ಜ್ಞಾನೋ. 3:27; 1 ಥೆಸ. 5:25) ನಮ್ಮ ಗುರಿ, ಏನೇ ಆಗಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ನಮ್ಮ ಸಹೋದರನಿಗೆ ಸಹಾಯಹಸ್ತ ನೀಡಿ ಯೆಹೋವನನ್ನು ಸಂತೋಷಪಡಿಸುವುದಾಗಿದೆ.
8 ಸೈತಾನನು ಮೊದಲು ಯೋಬನಿಗೆ ಜಾನುವಾರುಗಳ ನಷ್ಟವನ್ನು ಬರಮಾಡಿದನು. ಆ ಪ್ರಾಣಿಗಳು ಅಮೂಲ್ಯವಾಗಿದ್ದವು, ಬಹುಶಃ ಅವನ ಜೀವನಾಧಾರವಾಗಿದ್ದವು. ಆದರೆ ಗಮನಿಸಬೇಕಾದ ಸಂಗತಿಯೇನಂದರೆ ಯೋಬನು ಅವುಗಳನ್ನು ಆರಾಧನೆಗೂ ಬಳಸುತ್ತಿದ್ದನು. “ಯೋಬನು ತನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು ಎಂದು ಅವರನ್ನು ಕರೆಸಿ ಶುದ್ಧಿಪಡಿಸಿ ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುತ್ತಿದ್ದನು.” (ಯೋಬ 1:4, 5) ಹಾಗಾದರೆ, ಯೆಹೋವನಿಗೆ ಪ್ರಾಣಿಯಜ್ಞಗಳನ್ನು ಅರ್ಪಿಸುವ ರೂಢಿ ಯೋಬನಿಗಿತ್ತು. ಆದರೆ ಇದು ಅವನ ಸಂಕಷ್ಟಗಳು ಆರಂಭವಾದ ನಂತರ ಅಸಾಧ್ಯವಾಯಿತು. ಏಕೆಂದರೆ ಯೆಹೋವನನ್ನು ಸನ್ಮಾನಿಸಲು ಯೋಬನ ಬಳಿ ಯಾವುದೇ “ಆಸ್ತಿ” ಉಳಿದಿರಲಿಲ್ಲ. (ಜ್ಞಾನೋ. 3:9, NIBV) ಆದರೆ ತನ್ನ ತುಟಿಗಳ ಮೂಲಕ ಅವನು ಯೆಹೋವನನ್ನು ಸನ್ಮಾನಿಸಸಾಧ್ಯವಿತ್ತು ಮತ್ತು ಅವನದನ್ನು ಮಾಡಿದನು.
ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಿ
9 ಬಡವ-ಶ್ರೀಮಂತ, ಯುವಕ-ವೃದ್ಧ, ಆರೋಗ್ಯವಂತ-ಅಸ್ವಸ್ಥ ಎನ್ನದೆ ನಾವೆಲ್ಲರೂ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿದೆ. ನಾವು ಯಾವುದೇ ಕಷ್ಟಗಳನ್ನು ಎದುರಿಸಲಿ, ನಮಗೆ ದೇವರೊಂದಿಗೆ ಆಪ್ತ ಬಂಧವಿರುವಲ್ಲಿ ವೈಯಕ್ತಿಕ ಸಮಗ್ರತೆ ಕಾಪಾಡಿಕೊಂಡು ಯೆಹೋವನನ್ನು ಸಂತೋಷಪಡಿಸಬಲ್ಲೆವು. ಸತ್ಯದ ಕುರಿತು ಕೊಂಚವೇ ಜ್ಞಾನವಿದ್ದವರು ಕೂಡ ಧೀರ ನಿಲುವನ್ನು ತೆಗೆದುಕೊಂಡು ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ.
10 ವಾಲೆಂಟಿನಾ ಗಾರ್ನೊಫ್ಸ್ಕಾಯಾ ಎಂಬಾಕೆ ಸಹೋದರಿಯ ಮಾದರಿಯನ್ನು ಪರಿಗಣಿಸಿ. ಈಕೆ ಕಠಿನ ಕಷ್ಟಗಳೆದುರಿನಲ್ಲೂ ನಂಬಿಗಸ್ತ ಯೋಬನಂತೆ ಸಮಗ್ರತೆ ಕಾಪಾಡಿಕೊಂಡ ರಷ್ಯಾದ ಅನೇಕ ಸಾಕ್ಷಿಗಳಲ್ಲೊಬ್ಬಳು. 1945ರಲ್ಲಿ ಸುಮಾರು 20 ವರ್ಷದವಳಾಗಿದ್ದ ಆಕೆಗೆ ಒಬ್ಬ ಸಹೋದರನು ಸಾಕ್ಷಿಕೊಟ್ಟನು. ಅವನು ಆಕೆಯೊಂದಿಗೆ ಬೈಬಲ್ನ ಕುರಿತು ಮಾತಾಡಲು ಎರಡು ಬಾರಿ ಹಿಂದಿರುಗಿ ಬಂದನಾದರೂ ಮತ್ತೆಂದೂ ಕಾಣಿಸಿಕೊಳ್ಳಲಿಲ್ಲ. ಆದರೂ ವಾಲೆಂಟಿನಾ ತನ್ನ ನೆರೆಯವರಿಗೆ ಸಾರಲಾರಂಭಿಸಿದಳು. ಇದರಿಂದಾಗಿ ಆಕೆಯ ದಸ್ತಗಿರಿಯಾಯಿತು ಮತ್ತು 8 ವರ್ಷಗಳನ್ನು ಸೆರೆಶಿಬಿರದಲ್ಲಿ ಕಳೆಯಬೇಕಾಯಿತು. 1953ರಲ್ಲಿ ಆಕೆಗೆ ಬಿಡುಗಡೆಯಾಯಿತು. ಕೂಡಲೇ ಆಕೆ ಸಾರುವ ಕೆಲಸವನ್ನು ಪುನಃ ಆರಂಭಿಸಿದಳು. ಮತ್ತೊಮ್ಮೆ ಆಕೆಯ ದಸ್ತಗಿರಿಯಾಯಿತು. ಈ ಸಲವಂತೂ ಆಕೆ ಸೆರೆಶಿಬಿರದಲ್ಲಿ ಹತ್ತು ವರ್ಷಗಳನ್ನು ಕಳೆಯಬೇಕಾಯಿತು. ಒಂದು ಸೆರೆಶಿಬಿರದಲ್ಲಿ ಹಲವು ವರ್ಷಗಳನ್ನು ಕಳೆದ ನಂತರ ಆಕೆಯನ್ನು ಇನ್ನೊಂದು ಶಿಬಿರಕ್ಕೆ ಕಳುಹಿಸಲಾಯಿತು. ಆ ಸೆರೆಶಿಬಿರದಲ್ಲಿ ಕೆಲವು ಸಹೋದರಿಯರಿದ್ದರು ಮತ್ತು ಅವರ ಬಳಿ ಒಂದು ಬೈಬಲ್ ಇತ್ತು. ಒಂದು ದಿನ ಒಬ್ಬ ಸಹೋದರಿ ವಾಲೆಂಟಿನಾಗೆ ಬೈಬಲನ್ನು ತೋರಿಸಿದಳು. ಅದೆಷ್ಟು ರೋಮಾಂಚಕ ಕ್ಷಣ! ಸ್ವಲ್ಪ ಯೋಚಿಸಿ: ವಾಲೆಂಟಿನಾ ಈ ಮೊದಲು ಬೈಬಲನ್ನು ನೋಡಿದ್ದು ಆ ಸಹೋದರನ ಬಳಿ, ಅದು ಕೂಡ 1945ರಲ್ಲಿ!
11 ಇಸವಿ 1967ರಲ್ಲಿ ವಾಲೆಂಟಿನಾಗೆ ಬಿಡುಗಡೆಯಾಯಿತು ಮತ್ತು ಕೊನೆಗೂ ಆಕೆ ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗಪಡಿಸಲು ಸಾಧ್ಯವಾಯಿತು. ತನಗೆ ಸಿಕ್ಕಿದ ಈ ಸ್ವಾತಂತ್ರ್ಯವನ್ನು ಆಕೆ ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸಲು ಬಳಸಿದಳು. ಆದರೆ 1969ರಲ್ಲಿ ಆಕೆಯನ್ನು ಪುನಃ ಬಂಧಿಸಲಾಯಿತು ಮತ್ತು ಮೂರು ವರ್ಷಗಳ ಜೈಲುವಾಸವನ್ನು ವಿಧಿಸಲಾಯಿತು. ಆದರೂ ವಾಲೆಂಟಿನಾ ಸಾರುವುದನ್ನು ನಿಲ್ಲಿಸಲಿಲ್ಲ. 2001ರಲ್ಲಿ ಆಕೆ ಸಾಯುವಷ್ಟರಲ್ಲಿ 44 ಮಂದಿಗೆ ಸತ್ಯ ಕಲಿಯುವಂತೆ ಸಹಾಯ ಮಾಡಿದ್ದಳು. ಆಕೆ ಜೈಲು ಹಾಗೂ ಸೆರೆಶಿಬಿರದಲ್ಲಿ ಒಟ್ಟು 21 ವರ್ಷಗಳನ್ನು ಕಳೆದಿದ್ದಳು. ಸಮಗ್ರತೆ ಕಾಪಾಡಿಕೊಳ್ಳುವ ಸಲುವಾಗಿ ತನ್ನ ಸ್ವಾತಂತ್ರ್ಯವನ್ನೂ ಸೇರಿಸಿ ಎಲ್ಲವನ್ನೂ ತ್ಯಾಗಮಾಡಲು ಆಕೆ ಸಿದ್ಧಳಿದ್ದಳು. ತನ್ನ ಜೀವಿತಾವಧಿಯ ಕೊನೆಯಲ್ಲಿ ಆಕೆ ಹೇಳಿದ್ದು: “ನನಗೆ ವಾಸಿಸಲು ನನ್ನದೆಂಬ ಒಂದು ಮನೆ ಇರಲಿಲ್ಲ. ಒಂದೇ ಒಂದು ಸೂಟ್ಕೇಸ್ನಲ್ಲಿ ನನ್ನೆಲ್ಲಾ ಸಾಮಾನುಗಳಿದ್ದವು. ಆದರೂ ಯೆಹೋವನನ್ನು ಸೇವಿಸುವುದರಲ್ಲಿ ನನಗೆ ಸಂತೋಷ ಹಾಗೂ ಸಂತೃಪ್ತಿ ಇತ್ತು.” ಕಷ್ಟಗಳು ಬರುವಾಗ ಮಾನವರು ದೇವರಿಗೆ ನಿಷ್ಠರಾಗಿ ಉಳಿಯರು ಎಂದು ಹೇಳಿದ ಸೈತಾನನಿಗೆ ವಾಲೆಂಟಿನಾ ಕೊಟ್ಟ ಉತ್ತರ ಎಷ್ಟು ಬಲವಾಗಿತ್ತು! (ಯೋಬ 1:9-11) ಆಕೆ ಯೆಹೋವನನ್ನು ಸಂತೋಷಪಡಿಸಿದಳು ಮತ್ತು ಆತನು ವಾಲೆಂಟಿನಾ ಹಾಗೂ ನಂಬಿಗಸ್ತರಾಗಿ ಮರಣಪಟ್ಟ ಬೇರೆಲ್ಲರನ್ನು ಪುನರುತ್ಥಾನಗೊಳಿಸುವ ಸಮಯಕ್ಕಾಗಿ ಕಾತರದಿಂದ ಎದುರುನೋಡುತ್ತಿದ್ದಾನೆಂಬ ಖಾತ್ರಿ ನಮಗಿದೆ.—ಯೋಬ 14:15.
12 ಯೆಹೋವನೊಂದಿಗಿನ ನಮ್ಮ ಸ್ನೇಹವು ಆತನ ಮೇಲೆ ನಮಗಿರುವ ಪ್ರೀತಿಯ ಮೇಲಾಧರಿತವಾಗಿದೆ. ನಾವಾತನ ಗುಣಗಳನ್ನು ಮೆಚ್ಚುತ್ತೇವೆ ಮತ್ತು ಆತನ ಉದ್ದೇಶಗಳಿಗನುಸಾರ ಜೀವಿಸಲು ನಮ್ಮ ಕೈಲಾದದ್ದೆಲ್ಲವನ್ನು ಮಾಡುತ್ತೇವೆ. ಸೈತಾನನ ವಾದಕ್ಕೆ ವಿರುದ್ಧವಾಗಿ ನಾವಾದರೋ ಯೆಹೋವನನ್ನು ಇಚ್ಛಾಪೂರ್ವಕವಾಗಿಯೂ ಯಾವುದೇ ಷರತ್ತಿಲ್ಲದೆಯೂ ಪ್ರೀತಿಸುತ್ತೇವೆ. ಈ ಹೃತ್ಪೂರ್ವಕ ಪ್ರೀತಿಯು ನಾವು ಪರೀಕ್ಷೆಗಳ ಕೆಳಗೂ ಸಮಗ್ರತೆ ಕಾಪಾಡಿಕೊಳ್ಳುವಂತೆ ಬಲ ಕೊಡುತ್ತದೆ. ಇದಕ್ಕೆ ಪ್ರತಿಯಾಗಿ ಯೆಹೋವನು ತನ್ನ ನಿಷ್ಠಾವಂತರ ಅಥವಾ “ಭಕ್ತರ ದಾರಿಯನ್ನು ನೋಡಿಕೊಳ್ಳುವನು.”—ಜ್ಞಾನೋ. 2:8; ಕೀರ್ತ. 97:10.
13 ನಮಗೆ ಹೆಚ್ಚನ್ನು ಮಾಡಲು ಸಾಧ್ಯವಿಲ್ಲವೆಂದು ಅನಿಸಿದರೂ ಯೆಹೋವನ ಹೆಸರನ್ನು ಗೌರವಿಸುವಂತೆ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ. ದೇವರು ನಮ್ಮ ಒಳ್ಳೇ ಇರಾದೆಗಳನ್ನು ಗಮನಿಸುತ್ತಾನೆ. ಆದ್ದರಿಂದ, ನಾವಾತನ ಸೇವೆಯಲ್ಲಿ ಏನೇನು ಮಾಡಲಿಚ್ಛಿಸುತ್ತೇವೋ ಅದೆಲ್ಲವನ್ನು ಮಾಡಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ ಆತನು ನಮ್ಮನ್ನು ಶಿಕ್ಷಿಸುವುದಿಲ್ಲ. ನಾವು ಏನು ಮಾಡುತ್ತೇವೆ ಎಂಬುದು ಮಾತ್ರವಲ್ಲ ಅದನ್ನು ಏಕೆ ಮಾಡುತ್ತೇವೆ ಎಂಬುದೂ ಪ್ರಾಮುಖ್ಯ. ಯೋಬನು ಬಹಳ ಕಷ್ಟಗಳನ್ನು ತಾಳಿಕೊಂಡು ದುಃಖತಪ್ತನಾಗಿದ್ದರೂ ತನ್ನನ್ನು ದೂಷಿಸುವವರಿಗೆ ಯೆಹೋವನ ಮಾರ್ಗಗಳ ಕಡೆಗೆ ತನಗಿರುವ ಪ್ರೀತಿಯ ಕುರಿತು ತಿಳಿಸಿದನು. (ಯೋಬ 10:12; 28:28 ಓದಿ.) ಯೋಬ ಪುಸ್ತಕದ ಕೊನೆಯ ಅಧ್ಯಾಯದಲ್ಲಿ, ಎಲೀಫಜ, ಬಿಲ್ದದ ಮತ್ತು ಚೋಫರನ ಮೇಲೆ ದೇವರು ಕೋಪ ವ್ಯಕ್ತಪಡಿಸುವುದನ್ನು ನಾವು ನೋಡಬಹುದು. ಏಕೆಂದರೆ ಅವರು ಸತ್ಯವನ್ನಾಡಲಿಲ್ಲ. ಅದೇ ಸಮಯದಲ್ಲಿ ದೇವರು ಯೋಬನನ್ನು “ನನ್ನ ದಾಸನಾದ ಯೋಬ” ಎಂದು ನಾಲ್ಕು ಬಾರಿ ಕರೆದನು ಮತ್ತು ಸುಳ್ಳು ಸಾಂತ್ವನಗಾರರಿಗಾಗಿ ಪ್ರಾರ್ಥಿಸುವಂತೆ ಹೇಳಿದನು. ಈ ಮೂಲಕ ಯೋಬನನ್ನು ಮೆಚ್ಚಿದ್ದೇನೆಂದು ಯೆಹೋವನು ತೋರಿಸಿದನು. (ಯೋಬ 42:7-9) ನಾವೂ ಯೆಹೋವನು ಪ್ರಸನ್ನನಾಗುವಂಥ ರೀತಿಯಲ್ಲಿ ನಡೆದುಕೊಳ್ಳೋಣ.
ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಬೆಂಬಲಿಸುತ್ತಾನೆ
14 ಯೋಬನು ಅಪರಿಪೂರ್ಣನಾಗಿದ್ದರೂ ಸಮಗ್ರತೆ ಕಾಪಾಡಿಕೊಂಡನು. ಕೆಲವೊಮ್ಮೆ ವಿಪರೀತ ಒತ್ತಡದಿಂದಾಗಿ ಅವನು ವಿಷಯಗಳನ್ನು ತಪ್ಪಾದ ರೀತಿಯಲ್ಲಿ ನೋಡಿದ್ದುಂಟು. ಉದಾಹರಣೆಗೆ, ಅವನು ಯೆಹೋವನಿಗಂದದ್ದು: “ನಾನು ಮೊರೆಯಿಟ್ಟರೂ ನೀನು ಉತ್ತರಕೊಡುವದಿಲ್ಲ, . . . ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತೀ.” ಅಲ್ಲದೇ, ಯೋಬನು ತನ್ನನ್ನೇ ಸಮರ್ಥಿಸಿಕೊಳ್ಳುವ ಕಡೆಗೆ ಅನುಚಿತ ಗಮನಕೊಡುತ್ತಾ ಅಂದದ್ದು: “ನಾನು ಅಪರಾಧಿಯಲ್ಲ” ಮತ್ತು “ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿರಲಿಲ್ಲವಲ್ಲಾ, ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.” (ಯೋಬ 10:7; 16:17; 30:20, 21) ಹಾಗಿದ್ದರೂ ಯೆಹೋವನು ದಯೆಯಿಂದ ಅವನಿಗೆ ಸಹಾಯ ಮಾಡಿದನು. ದೇವರು ಯೋಬನಿಗೆ ಒಂದರ ನಂತರ ಒಂದು ಪ್ರಶ್ನೆಗಳನ್ನು ಕೇಳಿ ಅವನ ಗಮನವನ್ನು ಸ್ವತಃ ಅವನಿಂದ ದೂರಸರಿಸಿದನು. ಆ ಪ್ರಶ್ನೆಗಳು ದೇವರೇ ಸರ್ವಶ್ರೇಷ್ಠನು, ಮಾನವನು ತೀರಾ ಅಲ್ಪನು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತಿಳಿಯುವಂತೆ ಯೋಬನಿಗೆ ಸಹಾಯ ಮಾಡಿದವು. ಯೋಬನು ಆ ಮಾರ್ಗದರ್ಶನವನ್ನು ಸ್ವೀಕರಿಸಿ ತನ್ನನ್ನೇ ತಿದ್ದಿಕೊಂಡನು.—ಯೋಬ 40:8; 42:2, 6 ಓದಿ.
15 ಯೆಹೋವನು ಇಂದು ಸಹ ತನ್ನ ಸೇವಕರಾದ ನಮಗೆ ಮಾರ್ಗದರ್ಶನ ಹಾಗೂ ಸಲಹೆಯನ್ನು ದಯೆಯಿಂದ ಕೊಡುತ್ತಿದ್ದಾನೆ. ಅಷ್ಟುಮಾತ್ರವಲ್ಲ ನಮಗೆ ಯೋಬನಿಗಿಂತಲೂ ಹೆಚ್ಚಿನ ಪ್ರಯೋಜನಗಳಿವೆ. ಉದಾಹರಣೆಗೆ, ಯೇಸು ಕ್ರಿಸ್ತನು ವಿಮೋಚನಾ ಮೌಲ್ಯದ ಯಜ್ಞವನ್ನು ಅರ್ಪಿಸಿ ನಮ್ಮ ಪಾಪಗಳ ಕ್ಷಮಾಪಣೆಗೆ ಆಧಾರಕೊಟ್ಟಿದ್ದಾನೆ. ನಾವು ಅಪರಿಪೂರ್ಣರಾಗಿದ್ದರೂ ಆ ಯಜ್ಞದ ಆಧಾರದ ಮೇಲೆ ದೇವರೊಂದಿಗೆ ಆಪ್ತ ಸಂಬಂಧವನ್ನು ಹೊಂದಸಾಧ್ಯವಿದೆ. (ಯಾಕೋ. 4:8; 1 ಯೋಹಾ. 2:1) ಕಷ್ಟಗಳನ್ನು ಎದುರಿಸುವಾಗ ಬೆಂಬಲ ಮತ್ತು ಬಲವರ್ಧಕ ಸಹಾಯ ಪಡೆಯಲು ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವ ಏರ್ಪಾಡಿದೆ. ಇದಕ್ಕೆ ಕೂಡಿಸುತ್ತಾ ನಮ್ಮ ಬಳಿ ಪೂರ್ಣ ಬೈಬಲ್ ಇದೆ. ನಾವದನ್ನು ಓದಿ ಧ್ಯಾನಿಸುವಲ್ಲಿ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಿರುವೆವು. ಅಧ್ಯಯನವು ವಿಶ್ವ ಪರಮಾಧಿಕಾರದ ಮತ್ತು ವೈಯಕ್ತಿಕ ಸಮಗ್ರತೆಯ ವಿವಾದಾಂಶಗಳನ್ನು ಅರ್ಥಮಾಡಿಕೊಳ್ಳಲೂ ಸಹಾಯ ಮಾಡುತ್ತದೆ.
16 ಅಲ್ಲದೇ, ಅಂತಾರಾಷ್ಟ್ರೀಯ ಸಹೋದರವೃಂದದ ಭಾಗವಾಗಿರುವುದರಿಂದಲೂ ನಾವು ಬಹಳಷ್ಟು ಪ್ರಯೋಜನ ಪಡೆಯುತ್ತೇವೆ. ಈ ಸಹೋದರವೃಂದಕ್ಕೆ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ವರ್ಗದ ಮೂಲಕ ಯೆಹೋವನು ಆಧ್ಯಾತ್ಮಿಕ ಆಹಾರ ಒದಗಿಸುತ್ತಿದ್ದಾನೆ. (ಮತ್ತಾ. 24:45-47) ಯೆಹೋವನ ಸಾಕ್ಷಿಗಳ ಸುಮಾರು 1,00,000 ಸಭೆಗಳಲ್ಲಿ ನಡೆಸಲಾಗುವ ಕೂಟಗಳಲ್ಲಿ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಲು ಮಾರ್ಗದರ್ಶನ ಹಾಗೂ ಬಲ ಸಿಗುತ್ತದೆ. ನಾವಿದನ್ನು ಜರ್ಮನಿಯಲ್ಲಿ ವಾಸಿಸುತ್ತಿರುವ ಶೀಲಾ ಎಂಬ ಯುವ ಸಾಕ್ಷಿಯ ಅನುಭವದಿಂದ ನೋಡಬಹುದು.
17 ಶೀಲಾ ಹೋಗುತ್ತಿದ್ದ ಶಾಲೆಯಲ್ಲಿ ಒಂದು ದಿನ ತರಗತಿಯ ಮೇಲ್ವಿಚಾರಣೆ ಮಾಡಲು ಯಾರೂ ಇರಲಿಲ್ಲ. ಆಕೆಯ ಸಹಪಾಠಿಗಳು ವೀಜ ಬೋರ್ಡ್ (ಭವಿಷ್ಯವನ್ನು ತಿಳಿದುಕೊಳ್ಳಲು ಬಳಸಲಾಗುವ ಪ್ರೇತಾತ್ಮವಾದ-ಸಂಬಂಧಿ ವಸ್ತು) ಹೇಗಿದೆಯೆಂದು ಬಳಸಿ ನೋಡಲು ಮುಂದಾದರು. ಶೀಲಾ ತಕ್ಷಣ ತರಗತಿ ಕೋಣೆಯಿಂದ ಹೊರನಡೆದಳು. ಆಕೆಗೆ ತದನಂತರ ತಿಳಿದುಬಂದ ಸಂಗತಿಯೇನೆಂದರೆ, ವೀಜ ಬೋರ್ಡ್ ಅನ್ನು ಬಳಸುವಾಗ ಕೆಲವು ವಿದ್ಯಾರ್ಥಿಗಳಿಗೆ ದೆವ್ವಗಳು ಆಸುಪಾಸು ಇದ್ದಂತೆ ಭಾಸವಾಗಿ ಅವರು ಹೆದರಿ ಅಲ್ಲಿಂದ ಓಡಿದ್ದರು. ಆದುದರಿಂದ ತಾನು ತೆಗೆದುಕೊಂಡ ನಿರ್ಣಯದಿಂದ ಶೀಲಾಳಿಗೆ ಸಂತೋಷವಾಯಿತು. ಆದರೆ, ಅವಳು ಕೂಡಲೇ ಆ ನಿರ್ಣಯ ಮಾಡಲು ಸಾಧ್ಯವಾದದ್ದು ಹೇಗೆ? ಆಕೆ ವಿವರಿಸುವುದು: “ಈ ಘಟನೆ ನಡೆಯುವ ಸ್ವಲ್ಪವೇ ದಿನಗಳ ಮುಂಚೆ ರಾಜ್ಯ ಸಭಾಗೃಹದಲ್ಲಿ ವೀಜ ಬೋರ್ಡ್ನ ಅಪಾಯಗಳ ಕುರಿತ ಚರ್ಚೆ ಇತ್ತು. ಆದ್ದರಿಂದ ಏನು ಮಾಡಬೇಕೆಂದು ನನಗೆ ಗೊತ್ತಿತ್ತು. ಜ್ಞಾನೋಕ್ತಿ 27:11 ಹೇಳುವಂತೆ ನಾನು ಯೆಹೋವನನ್ನು ಸಂತೋಷಪಡಿಸಲು ಬಯಸಿದೆ.” ಶೀಲಾ ಕೂಟಗಳಿಗೆ ಹಾಜರಾದದ್ದು ಮತ್ತು ಅಲ್ಲಿನ ಕಾರ್ಯಕ್ರಮವನ್ನು ಕಿವಿಗೊಟ್ಟು ಕೇಳಿಸಿಕೊಂಡದ್ದು ಎಷ್ಟು ಒಳ್ಳೇದಾಯಿತಲ್ಲವೇ!
18 ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ಸಂಘಟನೆಯಿಂದ ಸಿಗುವ ಸಲಹೆಸೂಚನೆಗೆ ಒತ್ತಾಗಿ ಅಂಟಿಕೊಳ್ಳುವ ದೃಢಸಂಕಲ್ಪದಿಂದಿರೋಣ. ಕೂಟಗಳಿಗೆ ಕ್ರಮವಾದ ಹಾಜರಿ, ಬೈಬಲ್ ವಾಚನ, ಬೈಬಲಾಧರಿತ ಪ್ರಕಾಶನಗಳ ಅಧ್ಯಯನ, ಪ್ರಾರ್ಥನೆ ಮತ್ತು ಪ್ರೌಢ ಕ್ರೈಸ್ತರೊಂದಿಗಿನ ಸಹವಾಸದ ಮೂಲಕ ನಾವು ಅಗತ್ಯವಾದ ಮಾರ್ಗದರ್ಶನ ಹಾಗೂ ಬೆಂಬಲ ಪಡೆದುಕೊಳ್ಳುವೆವು. ನಾವು ಸಮಗ್ರತೆ ಕಾಪಾಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ ಮತ್ತು ನಾವದನ್ನು ಮಾಡುವೆವೆಂಬ ಭರವಸೆ ಆತನಿಗಿದೆ. ಯೆಹೋವನ ಹೆಸರನ್ನು ಎತ್ತಿಹಿಡಿಯುವ, ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮತ್ತು ಯೆಹೋವನನ್ನು ಸಂತೋಷಪಡಿಸುವ ಎಂಥ ಉತ್ತಮ ಸುಯೋಗ ನಮಗಿದೆ!
ನಿಮಗೆ ಜ್ಞಾಪಕವಿದೆಯೋ?
• ಸೈತಾನನು ಯಾವ ಪರಿಸ್ಥಿತಿಗಳು ಮತ್ತು ಪರೀಕ್ಷೆಗಳಿಗೆ ಕಾರಣನು?
• ನಮ್ಮ ಬಳಿಯಿರುವ ಅತ್ಯಮೂಲ್ಯ ಸ್ವತ್ತು ಯಾವುದು?
• ಯೆಹೋವನೊಂದಿಗಿನ ನಮ್ಮ ಸ್ನೇಹಕ್ಕೆ ಆಧಾರ ಯಾವುದು?
• ಯೆಹೋವನು ಇಂದು ನಮ್ಮನ್ನು ಬೆಂಬಲಿಸುವ ಕೆಲವು ವಿಧಗಳಾವುವು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸೈತಾನನು ಮಾಡಿದ ಯಾವ ಸವಾಲನ್ನು ಯೋಬ ಪುಸ್ತಕವು ವಿವರಿಸುತ್ತದೆ? (ಬಿ) ಯೋಬನ ದಿನಗಳ ನಂತರವೂ ಸೈತಾನನು ಯೆಹೋವನನ್ನು ದೂಷಿಸುತ್ತಾ ಇದ್ದಾನೆಂಬುದು ಹೇಗೆ ತಿಳಿದುಬರುತ್ತದೆ?
3. ನಾವು ಯೋಬ ಪುಸ್ತಕದಿಂದ ಕಲಿಯಬಹುದಾದ ಅಮೂಲ್ಯ ಪಾಠಗಳಾವುವು?
4. ಲೋಕದ ಸದ್ಯದ ಪರಿಸ್ಥಿತಿಗಳಿಗೆ ಯಾರು ಕಾರಣರು?
5. ನಮಗಿರುವ ಅಮೂಲ್ಯ ಜ್ಞಾನವನ್ನು ಏನು ಮಾಡಲು ಬಯಸುತ್ತೇವೆ?
6, 7. (ಎ) ಸತ್ಯಾರಾಧಕರ ಹಿಂಸೆಗೆ ಯಾರು ಕಾರಣರು? (ಬಿ) ಎಲೀಹುವಿನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?
8. ಯೋಬನು ಯೆಹೋವನನ್ನು ಸನ್ಮಾನಿಸದಂತೆ ಮಾಡಲು ಸೈತಾನನಿಂದಾಗಲಿಲ್ಲ ಏಕೆ?
9. ನಮ್ಮ ಬಳಿಯಿರುವ ಅತ್ಯಮೂಲ್ಯ ಸ್ವತ್ತು ಯಾವುದು?
10, 11. (ಎ) ಸಮಗ್ರತೆಯ ಪರೀಕ್ಷೆಗಳಿಗೆ ನಮ್ಮ ಸಹೋದರಿಯೊಬ್ಬಳು ಹೇಗೆ ಪ್ರತಿಕ್ರಿಯಿಸಿದಳು? (ಬಿ) ಈ ಸಹೋದರಿ ಸೈತಾನನಿಗೆ ಬಲವಾದ ಯಾವ ಉತ್ತರ ಕೊಟ್ಟಳು?
12. ಯೆಹೋವನೊಂದಿಗಿನ ನಮ್ಮ ಸಂಬಂಧದಲ್ಲಿ ಪ್ರೀತಿಯ ಪಾತ್ರವೇನು?
13. ಯೆಹೋವನಿಗಾಗಿ ನಾವೇನು ಮಾಡುತ್ತೇವೋ ಅದರ ಬಗ್ಗೆ ಆತನ ನೋಟವೇನು?
14. ಯೋಬನು ತನ್ನ ಯೋಚನಾಧಾಟಿಯನ್ನು ತಿದ್ದುವಂತೆ ಯೆಹೋವನು ಹೇಗೆ ಸಹಾಯ ಮಾಡಿದನು?
15, 16. ಯೆಹೋವನು ಇಂದು ತನ್ನ ಸೇವಕರಿಗೆ ಯಾವ ವಿಧಗಳಲ್ಲಿ ಸಹಾಯ ನೀಡುತ್ತಿದ್ದಾನೆ?
17. ಇಂದು ಯೆಹೋವನ ಸಂಘಟನೆ ಕೊಡುವ ನಿರ್ದೇಶನಗಳಿಗೆ ಒತ್ತಾಗಿ ಅಂಟಿಕೊಳ್ಳುವುದು ವಿವೇಕಯುತವೆಂದು ತೋರಿಸುವ ಅನುಭವ ತಿಳಿಸಿ.
18. ನಿಮ್ಮ ವೈಯಕ್ತಿಕ ದೃಢಸಂಕಲ್ಪವೇನು?
[ಪುಟ 8ರಲ್ಲಿರುವ ಚಿತ್ರ]
ನಿಮ್ಮ ಬಳಿಯಿರುವ ಅತ್ಯಮೂಲ್ಯ ಜ್ಞಾನವನ್ನು ಇತರರಿಗೆ ತಿಳಿಸಲೇಬೇಕೆಂಬ ಅನಿಸಿಕೆ ನಿಮಗಾಗುತ್ತದೋ ?
[ಪುಟ 9ರಲ್ಲಿರುವ ಚಿತ್ರ]
ಜೊತೆ ಆರಾಧಕರು ಸಮಗ್ರತೆ ಕಾಪಾಡಿಕೊಳ್ಳುವಂತೆ ನಾವು ಸಹಾಯ ಮಾಡಬಲ್ಲೆವು
[ಪುಟ 10ರಲ್ಲಿರುವ ಚಿತ್ರ]
ವಾಲೆಂಟಿನಾ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಎಲ್ಲವನ್ನೂ ತ್ಯಾಗಮಾಡಲು ಸಿದ್ಧಳಿದ್ದಳು