ಐಶ್ವರ್ಯವು ನಿಮ್ಮನ್ನು ಸಂತೋಷಗೊಳಿಸಬಲ್ಲದೊ?
ಅರಸನಾದ ಸೊಲೊಮೋನನಿಗೆ ಹಣದ ಮೌಲ್ಯವು ಗೊತ್ತಿತ್ತು. ಅವನು ಬರೆದುದು: “ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು; ಧನವು ಎಲ್ಲವನ್ನೂ ಒದಗಿಸಿಕೊಡುವದು.” (ಪ್ರಸಂಗಿ 10:19) ಮಿತ್ರರೊಂದಿಗೆ ಭೋಜನಮಾಡುವುದು ಬಹಳ ಆನಂದದಾಯಕವಾಗಿರಸಾಧ್ಯವಿದೆ, ಆದರೆ ರೊಟ್ಟಿ ಇಲ್ಲವೆ ದ್ರಾಕ್ಷಾರಸವನ್ನು ಪಡೆದುಕೊಳ್ಳಲು ಹಣವು ಬೇಕಾಗಿದೆ. ಹಣದ ಮೂಲಕವೇ ಭೌತಿಕ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಿರುವುದರಿಂದ, ಅದು “ಎಲ್ಲವನ್ನೂ ಒದಗಿಸಿಕೊಡುವದು.”
ಸೊಲೊಮೋನನು ಅಪಾರ ಧನವಂತನಾಗಿದ್ದರೂ, ಐಶ್ವರ್ಯಕ್ಕೆ ತನ್ನದೇ ಆದ ಇತಿಮಿತಿಗಳಿವೆ ಎಂಬುದು ಅವನಿಗೆ ಗೊತ್ತಿತ್ತು. ಒಂದು ಪ್ರಾಪಂಚಿಕ ಜೀವನ ರೀತಿಯು, ಸಂತೋಷಕ್ಕೆ ನಡೆಸುವುದಿಲ್ಲವೆಂಬುದನ್ನು ಅವನು ಗ್ರಹಿಸಿದನು. ಅವನು ಬರೆದುದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು.”—ಪ್ರಸಂಗಿ 5:10.
ಧನವಂತನೊಬ್ಬನು ಇನ್ನೂ ಹೆಚ್ಚಿನ ಸಂಪತ್ತನ್ನು ಸಂಪಾದಿಸುತ್ತಾನೆಂದು ಭಾವಿಸಿಕೊಳ್ಳಿ. ಸೊಲೊಮೋನನು ಹೇಳುವುದು: “ಸೊತ್ತು ಹೆಚ್ಚಿದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚುವದು.” (ಪ್ರಸಂಗಿ 5:11) ವ್ಯಕ್ತಿಯೊಬ್ಬನ “ಸೊತ್ತು” ಇಲ್ಲವೆ ಒಳ್ಳೆಯ ವಿಷಯಗಳು ಹೆಚ್ಚಾದಂತೆ, ಅವುಗಳನ್ನು ನೋಡಿಕೊಳ್ಳಲು ಹೆಚ್ಚಿನ ಜನರ ಅಗತ್ಯವಿರುತ್ತದೆ. ದುರಸ್ತಿಗಾರರು, ಗೃಹಪಾಲಕರು, ಸೇವಕರು, ಕಾವಲುಗಾರರು, ಮತ್ತು ಇತರರೆಲ್ಲರಿಗೆ ಅವರ ಸೇವೆಗಳಿಗಾಗಿ ಹಣ ತೆರಬೇಕಾಗಿದೆ. ಪ್ರತಿಯಾಗಿ, ಇದು ಇನ್ನೂ ಹೆಚ್ಚಿನ ಹಣವನ್ನು ಅಗತ್ಯಪಡಿಸುತ್ತದೆ.
ಇಂತಹ ಒಂದು ಸನ್ನಿವೇಶವು, ಒಬ್ಬ ವ್ಯಕ್ತಿಯ ಸಂತೋಷದ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ ಜೀವಿಸಿದ ಗ್ರೀಕ್ ಇತಿಹಾಸಕಾರ ಸೆನಫನ್, ಶ್ರೀಮಂತನಾಗಿ ಪರಿಣಮಿಸಿದ್ದ ಒಬ್ಬ ಬಡ ವ್ಯಕ್ತಿಯ ಹೇಳಿಕೆಗಳನ್ನು ಬರೆದುಕೊಂಡನು:
“ನಾನು ಹೆಚ್ಚನ್ನು ಪಡೆದಿರುವಷ್ಟು ಹೆಚ್ಚು ಸಂತೋಷವಾಗಿ ಜೀವಿಸುತ್ತೇನೆಂದು . . . ನೀವು ನಿಜವಾಗಿಯೂ ಭಾವಿಸುತ್ತೀರೊ? ನಾನು ಬಡವನಾಗಿದ್ದಾಗ, ತಿಂದು, ಕುಡಿದು, ನಿದ್ರಿಸುವುದರಲ್ಲಿ ಅನುಭವಿಸುತ್ತಿದ್ದ ಸುಖಕ್ಕಿಂತಲೂ ಒಂದು ಚೂರು ಹೆಚ್ಚು ಸುಖವನ್ನು ಅದು ಇಂದು ನನಗೆ ಕೊಡುವುದಿಲ್ಲವೆಂಬ ಅರಿವು ನಿಮಗಿಲ್ಲ. ಇಷ್ಟೊಂದನ್ನು ಪಡೆದುಕೊಂಡಿರುವುದರ ನನ್ನ ಏಕಮಾತ್ರ ಲಾಭವು, ಹೆಚ್ಚಿನ ವಿಷಯಗಳನ್ನು ನೋಡಿಕೊಳ್ಳುವ, ಇತರರಿಗೆ ಹೆಚ್ಚನ್ನು ವಿತರಿಸುವ, ಮತ್ತು ಮೊದಲಿಗಿಂತಲೂ ಹೆಚ್ಚಿನ ವಿಷಯಗಳ ಕಡೆಗೆ ಗಮನಹರಿಸುವ ಕಷ್ಟದ ನಿರ್ಬಂಧವೇ ಆಗಿದೆ. ಹೆಚ್ಚಿನ ಜನರು ಈಗ ಆಹಾರಕ್ಕಾಗಿ, ಅನೇಕರು ಪಾನೀಯಕ್ಕಾಗಿ, ಇನ್ನೂ ಅನೇಕರು ಬಟ್ಟೆಬರೆಗಳಿಗಾಗಿ, ಕೆಲವರು ವೈದ್ಯರ ಅಗತ್ಯವಿರುವಾಗ ನನ್ನ ಮೇಲೆ ಅವಲಂಬಿಸುತ್ತಾರೆ; ಒಬ್ಬನು ತೋಳಗಳಿಂದ ಆಕ್ರಮಿಸಲ್ಪಟ್ಟ ಕುರಿಗಳ ಕಥೆಯೊಂದಿಗೆ, ಇಲ್ಲವೆ ಪ್ರಪಾತದಿಂದ ಬಿದ್ದು ಸತ್ತುಹೋದ ದನಗಳ ಬಗ್ಗೆ, ಇಲ್ಲವೆ ದನಕರುಗಳ ನಡುವೆ ಯಾವುದೊ ರೋಗವು ಹರಡಿದೆ ಎಂದು ಹೇಳಲು ನನ್ನ ಬಳಿಗೆ ಬರುತ್ತಾನೆ. ಹೀಗೆ, ನಾನು ಕಡಿಮೆ ವಸ್ತುಗಳನ್ನು ಪಡೆದಿದ್ದ ಸಮಯಕ್ಕಿಂತಲೂ ಹೆಚ್ಚನ್ನು ಪಡೆದುಕೊಂಡಿರುವ ಈ ಸಮಯದಲ್ಲಿ ಅಧಿಕ ತೊಂದರೆಯಲ್ಲಿರುವಂತೆ . . . ನನಗೆ ತೋರುತ್ತದೆ” ಎಂದು ಅವನು ಕೂಡಿಸಿ ಹೇಳಿದನು.
ಜನರು ಮತ್ತಷ್ಟು ಹೆಚ್ಚಿನ ಸಂಪತ್ತನ್ನು ಬೆನ್ನಟ್ಟುವ ಇನ್ನೊಂದು ಕಾರಣವು, ಯೇಸು ಕ್ರಿಸ್ತನು ಯಾವುದನ್ನು “ಐಶ್ವರ್ಯದಿಂದುಂಟಾಗುವ ಮೋಸ”ವೆಂದು ಕರೆದನೊ ಅದರಿಂದ ದಾರಿತಪ್ಪಿಸಲ್ಪಡುವುದರಿಂದಲೇ. (ಮತ್ತಾಯ 13:22) ಅವರು ಮೋಸಹೋಗುತ್ತಾರೆ, ಏಕೆಂದರೆ ಅವರು ಅಷ್ಟೊಂದು ಕಟ್ಟಕ್ಕರೆಯಿಂದ ಹುಡುಕುವ ಈ ಐಶ್ವರ್ಯದಲ್ಲಿ, ಅವರು ಕಂಡುಕೊಳ್ಳಲು ನಿರೀಕ್ಷಿಸಿದ್ದ ತೃಪ್ತಿ ಇಲ್ಲವೆ ಸಂತೋಷವನ್ನು ಎಂದೂ ಕಂಡುಕೊಳ್ಳುವುದಿಲ್ಲ. ಸೀಮಿತ ಸಂಪತ್ತು ಏನನ್ನು ಮಾಡಲು ಅಸಫಲವಾಗುತ್ತದೊ, ಅದನ್ನು ಹೆಚ್ಚಿನ ಸಂಪತ್ತು ಮಾಡುವುದೆಂದು ಅವರು ತರ್ಕಿಸುತ್ತಾರೆ. ಆದುದರಿಂದಲೇ ಹೆಚ್ಚನ್ನು ಗಳಿಸುವುದಕ್ಕಾಗಿ ಅವರು ಸತತವಾಗಿ ಪ್ರಯಾಸಪಡುತ್ತಾರೆ.
ಹಣದಾಸೆಯು ಸಂತೋಷಕ್ಕೆ ನಡೆಸುವುದಿಲ್ಲ
ತನ್ನ ಸ್ವತ್ತುಗಳ ಕುರಿತಾದ ಚಿಂತೆಯು, ಶ್ರೀಮಂತನೊಬ್ಬನನ್ನು ಸುಖಕರವಾದ ರಾತ್ರಿಯ ನಿದ್ರೆಯನ್ನು ಅನುಭವಿಸುವುದರಿಂದ ತಡೆಯಬಹುದು. ಸೊಲೊಮೋನನು ಬರೆಯುವುದು: “ದುಡಿಯುವವನು ಸ್ಪಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.”—ಪ್ರಸಂಗಿ 5:12.
ಒಬ್ಬನ ಸಂಪತ್ತಿನ ಸಂಭವನೀಯ ನಷ್ಟದ ಕುರಿತಾದ ಚಿಂತೆಯು ವಿಪರೀತವಾದಾಗ, ನಿದ್ರೆಯ ಕೊರತೆಗಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ. ಜಿಪುಣನನ್ನು ವರ್ಣಿಸುತ್ತಾ, ಸೊಲೊಮೋನನು ಬರೆಯುವುದು: “ಅವನ ಜೀವಮಾನವೆಲ್ಲಾ ಅವನ ಊಟದಲ್ಲಿ ಕತ್ತಲು ಕವಿದಿರುವದು; ಅವನಿಗೆ ಕರಕರೆಯು ಶಾನೆ; ರೋಗರೋಷಗಳು ಇದ್ದೇ ಇರುವವು.” (ಪ್ರಸಂಗಿ 5:17) ಅವನು ತನ್ನ ಸಂಪತ್ತಿನಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬದಲಿಗೆ, ಆಹಾರಕ್ಕಾಗಿ ತಾನು ಖರ್ಚುಮಾಡಬೇಕಾದ ಹಣಕ್ಕೂ ಅಸಮಾಧಾನಪಟ್ಟುಕೊಳ್ಳುತ್ತಾನೋ ಎಂಬಂತೆ, ‘ಕರಕರೆಯಿಂದ’ ಊಟಮಾಡುತ್ತಾನೆ. ಅಂತಹ ಮನೋವಿಕಾರ ಭಾವನೆಯು, ನ್ಯೂನ ಆರೋಗ್ಯಕ್ಕೆ ನಡೆಸಬಹುದು. ಪ್ರತಿಯಾಗಿ, ನ್ಯೂನ ಆರೋಗ್ಯವು ಜಿಪುಣನ ಕಳವಳಕ್ಕೆ ಹೆಚ್ಚನ್ನು ಕೂಡಿಸುತ್ತದೆ, ಏಕೆಂದರೆ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುವುದರಿಂದ ಅದು ಅವನನ್ನು ತಡೆಯುತ್ತದೆ.
ಬಹುಶಃ ಇದು ಅಪೊಸ್ತಲ ಪೌಲನು ಬರೆದ ವಿಷಯವನ್ನು ನಿಮ್ಮ ಜ್ಞಾಪಕ್ಕಕ್ಕೆ ತರುತ್ತದೆ: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:9, 10) ಹಣದ ಬೆನ್ನಟ್ಟುವಿಕೆಯಲ್ಲಿ, ಜನರು ಮೋಸಮಾಡುತ್ತಾರೆ, ಸುಳ್ಳು ಹೇಳುತ್ತಾರೆ, ಕದಿಯುತ್ತಾರೆ, ವೇಶ್ಯಾವಾಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ, ಮತ್ತು ಕೊಲೆಯನ್ನೂ ಮಾಡುತ್ತಾರೆ. ಐಶ್ವರ್ಯವನ್ನು ಬಿಗಿಯಾಗಿ ಹಿಡಿದುಕೊಂಡು, ಅದಕ್ಕೆ ಅಂಟಿಕೊಂಡಿರಲು ಪ್ರಯತ್ನಿಸುವುದರ ಪರಿಣಾಮವೇನೆಂದರೆ, ವ್ಯಕ್ತಿಯೊಬ್ಬನು ಭಾವನಾತ್ಮಕ, ಶಾರೀರಿಕ, ಹಾಗೂ ಆತ್ಮಿಕ ವೇದನೆಗಳಿಂದ ತಿವಿಯಲ್ಪಟ್ಟಿರುತ್ತಾನೆ. ಇದು ಸಂತೋಷಕ್ಕಿರುವ ಮಾರ್ಗದಂತೆ ಧ್ವನಿಸುತ್ತದೊ? ಖಂಡಿತವಾಗಿಯೂ ಇಲ್ಲ!
ನಮ್ಮಲ್ಲಿ ಇರುವವುಗಳೊಂದಿಗೆ ಸಂತೃಪ್ತರಾಗಿರುವುದು
ಐಶ್ವರ್ಯದ ಸಮತೂಕ ದೃಷ್ಟಿಕೋನದ ಬಗ್ಗೆ ಸೊಲೊಮೋನನಿಗೆ ಇನ್ನೂ ಹೆಚ್ಚು ಹೇಳಲಿಕ್ಕಿತ್ತು. ಅವನು ಬರೆದುದು: “ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ ಏನೂ ಇಲ್ಲದವನಾಗಿ ಗತಿಸಿಹೋಗುವನು; ಅವನು ಪ್ರಯಾಸಪಟ್ಟದ್ದಕ್ಕೆಲ್ಲಾ ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗನು. ಇಗೋ ನಾನು ಕಂಡದ್ದು ಇದೇ; ದೇವರು ಒಬ್ಬನಿಗೆ ದಯಪಾಲಿಸಿರುವ ಜೀವಮಾನದ ದಿನಗಳಲ್ಲೆಲ್ಲಾ ಅವನು ಅನ್ನಪಾನಗಳನ್ನು ತೆಗೆದುಕೊಂಡು ತಾನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದು ಮೇಲಾಗಿಯೂ ಉಚಿತವಾಗಿಯೂ ಇದೆ; ಇದೇ ಅವನ ಪಾಲು.”—ಪ್ರಸಂಗಿ 5:15, 18.
ನಮ್ಮ ಉಪಯೋಗಕ್ಕೆ ಬಾರದೇ ಇರುವ ಒಂದು ಸಮಯಕ್ಕಾಗಿ ಸಂಪತ್ತನ್ನು ಒಟ್ಟುಗೂಡಿಸಲು ಪ್ರಯಾಸಪಡುವುದರ ಮೇಲೆ ಸಂತೋಷವು ಅವಲಂಬಿಸುವುದಿಲ್ಲವೆಂದು ಈ ಮಾತುಗಳು ತೋರಿಸುತ್ತವೆ. ಸಂತೃಪ್ತರಾಗಿರುವುದು ಮತ್ತು ನಮ್ಮ ಪರಿಶ್ರಮದ ಪ್ರತಿಫಲಗಳಲ್ಲಿ ಹರ್ಷಿಸುವುದು ಎಷ್ಟೋ ಮೇಲು. ಅಪೊಸ್ತಲ ಪೌಲನು ತದ್ರೀತಿಯ ವಿಚಾರವನ್ನು, ತಿಮೊಥೆಯನಿಗೆ ಬರೆದ ತನ್ನ ಪ್ರೇರಿತ ಪತ್ರದಲ್ಲಿ ವ್ಯಕ್ತಪಡಿಸಿದನು. ಅವನು ಹೇಳಿದ್ದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು.”—1 ತಿಮೊಥೆಯ 6:7, 8; ಹೋಲಿಸಿ ಲೂಕ 12:16-21.
ಸಂತೋಷಕ್ಕಿರುವ ಕೀಲಿ ಕೈ
ಸೊಲೊಮೋನನಲ್ಲಿ ಐಶ್ವರ್ಯ ಮತ್ತು ದೈವಿಕ ವಿವೇಕ—ಇವೆರಡೂ ಸಮೃದ್ಧವಾಗಿತ್ತು. ಆದರೆ ಅವನು ಸಂತೋಷವನ್ನು ಹಣದೊಂದಿಗಲ್ಲ, ವಿವೇಕದೊಂದಿಗೆ ಜೋಡಿಸಿದನು. ಅವನು ಹೇಳಿದ್ದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ, ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ ಘನತೆಯೂ ಉಂಟು. ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ. ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”—ಜ್ಞಾನೋಕ್ತಿ 3:13-18.
ವಿವೇಕವು ಭೌತಿಕ ಸ್ವತ್ತುಗಳಿಗಿಂತಲೂ ಶ್ರೇಷ್ಠವಾಗಿದೆ ಏಕೆ? ಸೊಲೊಮೋನನು ಬರೆದುದು: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಹಣವು, ತನ್ನ ಯಜಮಾನನು ಬೇಕಾದುದನ್ನು ಖರೀದಿಸುವಂತೆ ಮಾಡಿ, ಒಂದಿಷ್ಟು ಸಂರಕ್ಷಣೆಯನ್ನು ಒದಗಿಸುತ್ತದಾದರೂ, ತನ್ನ ಜೀವವನ್ನು ಗಂಡಾಂತರಕ್ಕೆ ಈಡುಮಾಡಬಹುದಾದ ಅಪಾಯಗಳಿಗೆ ತಲೆಯೊಡ್ಡುವುದರಿಂದ ವಿವೇಕವು ಒಬ್ಬ ವ್ಯಕ್ತಿಯನ್ನು ರಕ್ಷಿಸಬಲ್ಲದು. ನಿಜ ವಿವೇಕವು ಒಬ್ಬ ವ್ಯಕ್ತಿಯನ್ನು ಅಕಾಲಿಕ ಮೃತ್ಯುವಿನಿಂದ ರಕ್ಷಿಸಬಹುದು ಮಾತ್ರವಲ್ಲ, ಅದು ದೇವರ ಯೋಗ್ಯ ರೀತಿಯ ಭಯದ ಮೇಲೆ ಆಧಾರಿಸಿರುವುದರಿಂದ, ನಿತ್ಯಜೀವವನ್ನು ಪಡೆಯುವುದಕ್ಕೂ ನಡೆಸುವುದು.
ದೈವಿಕ ವಿವೇಕವು ಸಂತೋಷಕ್ಕೆ ನಡೆಸುವುದೇಕೆ? ಏಕೆಂದರೆ ನಿಜ ಸಂತೋಷವು ಯೆಹೋವ ದೇವರಿಂದ ಮಾತ್ರವೇ ಬರಸಾಧ್ಯವಿದೆ. ಮಹೋನ್ನತನಿಗೆ ವಿಧೇಯರಾಗುವ ಮೂಲಕವೇ ಯಥಾರ್ಥವಾದ ಸಂತೋಷವನ್ನು ಗಳಿಸಸಾಧ್ಯವಿದೆಯೆಂದು ಅನುಭವವು ರುಜುಪಡಿಸುತ್ತದೆ. ಸದಾಕಾಲ ಬಾಳುವ ಸಂತೋಷವು, ದೇವರೊಂದಿಗಿನ ಅಂಗೀಕೃತ ನಿಲುವಿನ ಮೇಲೆ ಅವಲಂಬಿಸುತ್ತದೆ. (ಮತ್ತಾಯ 5:3-10) ಬೈಬಲಿನ ಅಧ್ಯಯನದಿಂದ ನಾವು ಕಲಿತುಕೊಳ್ಳುವ ವಿಷಯವನ್ನು ಅನ್ವಯಿಸುವ ಮೂಲಕ, ನಾವು “ಮೇಲಣಿಂದ ಬರುವ ಜ್ಞಾನ”ವನ್ನು ಬೆಳೆಸಿಕೊಳ್ಳುವೆವು. (ಯಾಕೋಬ 3:17) ಐಶ್ವರ್ಯವು ಎಂದಿಗೂ ತರಸಾಧ್ಯವಿರದ ಸಂತೋಷವನ್ನು ಅದು ನಮಗೆ ನೀಡುವುದು.
[ಪುಟ 5 ರಲ್ಲಿರುವ ಚಿತ್ರ]
ವ್ಯಕ್ತಿಯೊಬ್ಬನನ್ನು ಯಾವುದು ಸಂತೋಷಪಡಿಸುತ್ತದೆಂದು ಅರಸ ಸೊಲೊಮೋನನಿಗೆ ಗೊತ್ತಿತ್ತು. ನಿಮಗೆ ಗೊತ್ತೊ?