ದೇವರು “ವಕ್ರವಾದ” ರೀತಿಯಲ್ಲಿ ಕ್ರಿಯೆಗೈಯುತ್ತಾನೊ?
“ಡಯೂಸ್ ಎಸ್ಕ್ರೆವೀ ಸರ್ಟೂ ಪಾರ್ ಲೀನ್ಯಾಸ್ ಟಾರ್ಟಾಸ್” (“ದೇವರು ವಕ್ರವಾಗಿ ಬರೆದರೂ ಸರಿಯಾದದ್ದನ್ನೇ ಬರೆಯುತ್ತಾನೆ”) ಎಂಬುದು ಬ್ರೆಸಿಲಿನ ಒಂದು ನಾಣ್ಣುಡಿಯಾಗಿದೆ. ದೇವರು ಯಾವಾಗಲೂ ಸರಿಯಾದುದನ್ನೇ ಮಾಡಿದರೂ, ಮನುಷ್ಯನ ದೃಷ್ಟಿಯಲ್ಲಿ ಅದು ಕೆಲವೊಮ್ಮೆ ಸರಿಯಾಗಿರುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. ಉದಾಹರಣೆಗೆ, ಒಬ್ಬನು ತನ್ನ ಯೌವನ ಪ್ರಾಯದಲ್ಲಿ ಮೃತಪಡುವುದಾದರೆ, ‘ದೇವರು ಅವನನ್ನು ಸ್ವರ್ಗಕ್ಕೆ ಕರೆಸಿಕೊಂಡನು’ ಎಂದು ಅನೇಕರು ಹೇಳುತ್ತಾರೆ. ಯಾರಾದರೊಬ್ಬರು ಶಾರೀರಿಕ ನ್ಯೂನತೆಯಿಂದ ಕಷ್ಟಾನುಭವಿಸುವಾಗ ಇಲ್ಲವೆ ದುರಂತವೊಂದನ್ನು ಎದುರಿಸುವಾಗ, ‘ಇದು ದೇವರ ಚಿತ್ತ’ವೆಂದು ಕೆಲವರು ಹೇಳುತ್ತಾರೆ. ಮರಣ, ಶಾರೀರಿಕ ಸಮಸ್ಯೆಗಳು, ಮತ್ತು ದುಃಖದ ಇತರ ಕಾರಣಗಳಿಗೆ ದೇವರನ್ನು ದೂಷಿಸಲಾಗುವುದರಿಂದ, ದೇವರು ‘ವಕ್ರವಾಗಿ ಬರೆಯುತ್ತಾನೆ’ ಅಂದರೆ, ಮನುಷ್ಯನಿಗೆ ಅರ್ಥವಾಗದ ರೀತಿಯಲ್ಲಿ ಕಾರ್ಯಮಾಡುತ್ತಾನೆ ಎಂಬುದನ್ನು ಇಂತಹ ಅಭಿವ್ಯಕ್ತಿಗಳು ಸೂಚಿಸುತ್ತವೆ.
ಮರಣ ಹಾಗೂ ಕಷ್ಟತೊಂದರೆಗಳಿಗೆ ದೇವರೇ ಹೊಣೆಗಾರನೆಂದು ಅನೇಕ ಧಾರ್ಮಿಕ ಜನರು ನಂಬುವುದೇಕೆ? ಈ ನಂಬಿಕೆಗಳು ಅನೇಕ ವೇಳೆ ಕೆಲವೊಂದು ಬೈಬಲ್ ವಚನಗಳ ತಪ್ಪು ತಿಳುವಳಿಕೆಯ ಮೇಲೆ ಆಧರಿಸಿವೆ. ಅವುಗಳಲ್ಲಿ ಕೆಲವನ್ನು ನಾವು ಸಂಕ್ಷಿಪ್ತವಾಗಿ ಪರಿಶೀಲಿಸೋಣ.
● “ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ.”—ವಿಮೋಚನಕಾಂಡ 4:11.
ಜನರು ಕಷ್ಟಪಡುತ್ತಿರುವ ವಿವಿಧ ನ್ಯೂನತೆಗಳಿಗೆ ದೇವರೇ ಕಾರಣನೆಂದು ಇದರ ಅರ್ಥವೊ? ಇಲ್ಲ. ಇದು ದೇವರ ವ್ಯಕ್ತಿತ್ವಕ್ಕೆ ಸುಸಂಗತವಾಗಿಲ್ಲ. ಬೈಬಲು ನಮಗೆ ಹೇಳುವುದು: “[ದೇವರು] ಉಂಟುಮಾಡಿದ್ದೆಲ್ಲವೂ ಒಳ್ಳೇದೇ.” (1 ತಿಮೊಥೆಯ 4:4) ಯಾರಾದರೊಬ್ಬರು ಕುರುಡರಾಗಿ, ಮೂಕರಾಗಿ, ಇಲ್ಲವೆ ಕಿವುಡರಾಗಿ ಹುಟ್ಟಿದರೆ, ಅದಕ್ಕೆ ಆತನು ಕಾರಣನಲ್ಲ. ತನ್ನ ಸೃಷ್ಟಿಯ ಒಳಿತನ್ನೇ ಆತನು ಬಯಸುತ್ತಾನೆ, ಏಕೆಂದರೆ ಆತನು ‘ಎಲ್ಲಾ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಎಲ್ಲಾ ವರಗಳ’ ಮೂಲನಾಗಿದ್ದಾನೆ.—ಯಾಕೋಬ 1:17.
ನಮ್ಮ ಮೊದಲ ಹೆತ್ತವರಾಗಿದ್ದ ಆದಾಮಹವ್ವರು ದೇವರ ವಿರುದ್ಧ ಸ್ವಇಚ್ಛೆಯಿಂದ ದಂಗೆಯೆದ್ದು, ಪರಿಪೂರ್ಣತೆಯನ್ನು ಕಳೆದುಕೊಂಡು, ಹೀಗೆ ಪರಿಪೂರ್ಣ ಮಕ್ಕಳಿಗೆ ಜನ್ಮನೀಡುವ ತಮ್ಮ ಸಾಮರ್ಥ್ಯವನ್ನೂ ಕಳೆದುಕೊಂಡರು. (ಆದಿಕಾಂಡ 3:1-6, 16, 19; ಯೋಬ 14:4) ಅವರ ಸಂತತಿಯವರು ವಿವಾಹವಾಗಿ ಮಕ್ಕಳನ್ನು ಪಡೆದಂತೆ, ಶಾರೀರಿಕ ದೋಷಗಳೊಂದಿಗೆ ಹೆಚ್ಚೆಚ್ಚು ಅಪರಿಪೂರ್ಣತೆಗಳು ಮನುಷ್ಯರಲ್ಲಿ ವ್ಯಕ್ತವಾಗತೊಡಗಿದವು. ಇದಕ್ಕೆ ಯೆಹೋವ ದೇವರು ಕಾರಣನಾಗಿರದಿದ್ದರೂ, ಅದು ಸಂಭವಿಸುವಂತೆ ಆತನು ಅನುಮತಿಸಿದ್ದಾನೆ. ಆದಕಾರಣ, ಆತನು ಮೂಕರನ್ನು, ಕಿವುಡರನ್ನು, ಮತ್ತು ಕುರುಡರನ್ನು ‘ನೇಮಿಸಿರುವುದಾಗಿ’ ತನ್ನ ಕುರಿತೇ ಹೇಳಿಕೊಳ್ಳಬಹುದಿತ್ತು.
● “ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ.”—ಪ್ರಸಂಗಿ 1:15.
ವಿಷಯಗಳನ್ನು ವಕ್ರವಾಗಿ ಮಾಡಿದ್ದು ದೇವರೊ? ಖಂಡಿತವಾಗಿಯೂ ಅಲ್ಲ. ಪ್ರಸಂಗಿ 7:29 ಗಮನಿಸುವುದು: “ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.” ಕಂಟೆಂಪರರಿ ಇಂಗ್ಲಿಷ್ ವರ್ಷನ್ ಈ ವಚನಕ್ಕೆ ಹೀಗೆ ಅರ್ಥವಿವರಣೆ ನೀಡುತ್ತದೆ: “ದೇವರು ನಮ್ಮನ್ನು ಸೃಷ್ಟಿಸಿದಾಗ ನಾವು ಸಂಪೂರ್ಣವಾಗಿ ಪ್ರಾಮಾಣಿಕರಾಗಿದ್ದೆವು, ಆದರೆ ಈಗ ನಮ್ಮಲ್ಲಿ ವಿಕೃತ ಮನಸ್ಸುಗಳಿವೆ.” ದೇವರ ನೀತಿಯ ಮಟ್ಟಗಳಿಗನುಸಾರ ನಡೆದುಕೊಳ್ಳುವ ಬದಲು, ಹೆಚ್ಚಿನ ಸ್ತ್ರೀಪುರುಷರು ತಮ್ಮ ಸ್ವಂತ ಯೋಜನೆಗಳನ್ನು, ಏರ್ಪಾಡುಗಳನ್ನು, ಉಪಾಯಗಳನ್ನು, ಇಲ್ಲವೆ ವಿಧಾನಗಳನ್ನು ಅನುಸರಿಸಲು ಸ್ವಇಚ್ಛೆಯಿಂದ ಆರಿಸಿಕೊಂಡು, ಕೇಡನ್ನು ಅನುಭವಿಸಿದ್ದಾರೆ.—1 ತಿಮೊಥೆಯ 2:14.
ಮತ್ತು, ಅಪೊಸ್ತಲ ಪೌಲನು ಗಮನಿಸಿರುವಂತೆ, ಮಾನವಜಾತಿಯ ಪಾಪದ ಕಾರಣ “ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು.” (ರೋಮಾಪುರ 8:20) ಮತ್ತು ಮಾನವ ಪ್ರಯತ್ನಗಳಿಂದ ಈ ಸನ್ನಿವೇಶವನ್ನು “ಸರಿಮಾಡುವದು ಅಸಾಧ್ಯ”ವಾಗಿದೆ. ದೈವಿಕ ಹಸ್ತಕ್ಷೇಪದ ಮೂಲಕವೇ, ಭೂಸಂಬಂಧವಾದ ಎಲ್ಲ ವಕ್ರತೆ ಹಾಗೂ ವ್ಯರ್ಥತೆಯು ತೆಗೆದುಹಾಕಲ್ಪಡುವುದು.
● “ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವದಕ್ಕೆ ಯಾರಿಂದಾದೀತು?”—ಪ್ರಸಂಗಿ 7:13.
ಬೇರೆ ಮಾತುಗಳಲ್ಲಿ, ರಾಜ ಸೊಲೊಮೋನನು ಕೇಳುವುದು: ‘ದೇವರು ಅನುಮತಿಸುವ ದೋಷಗಳನ್ನು ಹಾಗೂ ಅಸಂಪೂರ್ಣತೆಗಳನ್ನು ಮಾನವರಲ್ಲಿ ಯಾವನು ಸರಿಮಾಡಬಲ್ಲನು?’ ಯಾರೂ ಇಲ್ಲ, ಏಕೆಂದರೆ ಈ ವಿಷಯಗಳು ಸಂಭವಿಸುವಂತೆ ಬಿಡುವುದಕ್ಕೆ ಯೆಹೋವ ದೇವರಿಗೆ ಒಂದು ಕಾರಣವಿದೆ.
ಆದುದರಿಂದ ಸೊಲೊಮೋನನು ಶಿಫಾರಸ್ಸು ಮಾಡುವುದು: “ಸುಖದ ದಿನದಲ್ಲಿ ಸುಖದಿಂದಿರು; ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವದನ್ನೂ ಗ್ರಹಿಸಲಾರದಂತೆ ದೇವರು ಇವುಗಳನ್ನು ದ್ವಂದ್ವ ಮಾಡಿದ್ದಾನೆ.” (ಪ್ರಸಂಗಿ 7:14) ವಿಷಯಗಳು ಸರಾಗವಾಗಿ ಸಾಗುವಾಗ, ಅಂತಹ ದಿನವನ್ನು ವ್ಯಕ್ತಿಯು ಗಣ್ಯಮಾಡತಕ್ಕದ್ದು. ಮತ್ತು ಒಳ್ಳೆಯತನವನ್ನು ಪ್ರತಿಬಿಂಬಿಸುವ ಮೂಲಕ ತನ್ನ ಗಣ್ಯತೆಯನ್ನು ತೋರಿಸತಕ್ಕದ್ದು. ಒಳ್ಳೆಯ ದಿನವನ್ನು ದೇವರಿಂದ ಬಂದ ಕೊಡುಗೆಯೆಂದು ಅವನು ಭಾವಿಸಬೇಕು. ಆದರೆ ಆ ದಿನವು ಕೇಡನ್ನು ತರುವುದಾದರೆ ಆಗೇನು? ಆ ಕೇಡು ಸಂಭವಿಸುವಂತೆ ದೇವರು ಅನುಮತಿಸಿದ್ದಾನೆಂದು ಆ ವ್ಯಕ್ತಿಯು “ಯೋಚಿಸು”ವುದು, ಅಂದರೆ ಗ್ರಹಿಸುವುದು ಒಳ್ಳೆಯದು. ದೇವರು ಯಾತಕ್ಕಾಗಿ ಹೀಗೆ ಮಾಡಿದ್ದಾನೆ? ಸೊಲೊಮೋನನು ಹೇಳುವುದು: “ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವದನ್ನೂ ಗ್ರಹಿಸಲಾರದಂತೆ” ಹೀಗೆ ಮಾಡಿದ್ದಾನೆ. ಇದರ ಅರ್ಥವೇನು?
ನಾವು ಕಷ್ಟಸುಖ ಎರಡನ್ನೂ ಎದುರಿಸುವಂತೆ ದೇವರು ಅನುಮತಿಸುವ ನಿಜತ್ವವು, ಭವಿಷ್ಯತ್ತು ತರಲಿರುವುದನ್ನು ನಮಗೆ ಹೇಳಲಸಾಧ್ಯ ಎಂಬುದರ ಜ್ಞಾಪಕ ಹುಟ್ಟಿಸುತ್ತದೆ. ಕೇಡನ್ನು ನೀತಿವಂತರೂ ದುಷ್ಟರೂ ಅನುಭವಿಸಬೇಕಾಗಿದೆ. ಇದಕ್ಕೆ ಯಾರೂ ಹೊರತಾಗಿಲ್ಲ. “ದೇವರು ಪ್ರೀತಿಸ್ವರೂಪ”ನೆಂದು ಜ್ಞಾಪಿಸಿಕೊಳ್ಳುತ್ತಾ, ನಾವು ನಮ್ಮ ಮೇಲಲ್ಲ, ದೇವರ ಮೇಲೆ ಆತುಕೊಳ್ಳುವ ಮಹತ್ವವನ್ನು ನಾವು ಗ್ರಹಿಸುವಂತೆ ಇದು ಮಾಡಬೇಕು. (1 ಯೋಹಾನ 4:8) ಈಗ ನಾವು ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳದಿದ್ದರೂ, ಎಲ್ಲವೂ ಪೂರ್ಣಗೊಂಡ ಮೇಲೆ, ದೇವರು ಅನುಮತಿಸಿದ ವಿಷಯವು ಸಂಬಂಧಪಟ್ಟ ಎಲ್ಲರಿಗೂ ಪ್ರಯೋಜನಕರವಾಗಿ ಪರಿಣಮಿಸಿದೆ ಎಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬಲ್ಲೆವು.
ದೇವರು ಅನುಮತಿಸುವ ಯಾವುದೇ ವಿಷಯವು, ಸಹೃದಯಿಗಳಿಗೆ ಶಾಶ್ವತ ಹಾನಿಯನ್ನು ಎಂದೂ ಉಂಟುಮಾಡಲಾರದು. ತನ್ನ ಸಮಯದ ಜೊತೆ ವಿಶ್ವಾಸಿಗಳ ಮೇಲೆ ಎಸಗಿದ ಕಷ್ಟಾನುಭವದ ಕುರಿತು ಹೇಳಿಕೆ ನೀಡುವಾಗ, ಅಪೊಸ್ತಲ ಪೇತ್ರನು ಇದನ್ನು ಸ್ಪಷ್ಟಗೊಳಿಸಿದನು: “ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.”—1 ಪೇತ್ರ 5:10.
ವಿಷಯಗಳನ್ನು ಸರಿಪಡಿಸುವ ಸಮಯ
ನಮ್ಮ ಸದ್ಯದ ಪರೀಕ್ಷೆಗಳನ್ನು ತಾಳಿಕೊಳ್ಳುವ ಬಲವನ್ನು ಯೆಹೋವನು ನಮಗೆ ಕೊಡುತ್ತಾನೆ. “ಎಲ್ಲವನ್ನು ಹೊಸದುಮಾಡುತ್ತೇನೆ” ಎಂಬ ವಾಗ್ದಾನವನ್ನೂ ಆತನು ಕೊಟ್ಟಿದ್ದಾನೆ. (ಪ್ರಕಟನೆ 21:5) ಬೇಗನೆ ತನ್ನ ಸ್ವರ್ಗೀಯ ರಾಜ್ಯವು, ನ್ಯೂನತೆಗಳಿಂದ ಕಷ್ಟಾನುಭವಿಸುತ್ತಿರುವವರಿಗೆ ಪೂರ್ಣಾರೋಗ್ಯವನ್ನು ನೀಡಿ, ಮೃತರ ಪುನರುತ್ಥಾನದ ಮೇಲ್ವಿಚಾರಣೆ ಮಾಡಬೇಕೆಂಬುದು ಆತನ ಉದ್ದೇಶವಾಗಿದೆ. ಯಾರ ವಿಧಾನಗಳು ನಿಜವಾಗಿಯೂ ವಕ್ರವಾಗಿವೆಯೊ, ಆ ಪಿಶಾಚನಾದ ಸೈತಾನನನ್ನು ಈ ಸರಕಾರವು ನಿರ್ಮೂಲಮಾಡುವುದು. (ಯೋಹಾನ 5:28, 29; ರೋಮಾಪುರ 16:20; 1 ಕೊರಿಂಥ 15:26; 2 ಪೇತ್ರ 3:13) ವಿಷಯಗಳನ್ನು ಸರಿಪಡಿಸುವ ದೇವರ ಸಮಯವು ಬಂದಾಗ, ಭೂಮಿಯ ಆದ್ಯಂತವಿರುವ ದೇವಭಯವುಳ್ಳ ಜನರಿಗೆ ಅದು ಎಂತಹ ಆಶೀರ್ವಾದವಾಗಿರುವುದು!
[ಪುಟ 28 ರಲ್ಲಿರುವ ಚಿತ್ರ ಕೃಪೆ]
ತನ್ನ ಸರ್ವನಾಶದ ಕುರಿತು ಕೇಳಿಸಿಕೊಳ್ಳುವ ಯೋಬನು/The Doré Bible Illustrations/Dover Publications