‘ಮನುಷ್ಯನ ಕರ್ತವ್ಯ’
“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
1, 2. ದೇವರ ಕಡೆಗೆ ನಮಗಿರುವ ಹಂಗನ್ನು ನಾವು ಪರಿಗಣಿಸುವುದು ಉಚಿತವೇಕೆ?
“ಯೆಹೋವನು ನಿಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ?” (NW) ಒಬ್ಬ ಪುರಾತನ ಪ್ರವಾದಿಯು ಆ ಪ್ರಶ್ನೆಯನ್ನು ಒಡ್ಡಿದನು. ಅನಂತರ ಯೆಹೋವನು ಅಪೇಕ್ಷಿಸಿದಂತಹದ್ದನ್ನು ಅವನು ಸ್ಪಷ್ಟಪಡಿಸಿದನು—ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ದೇವರಿಗೆ ನಮ್ರನಾಗಿ ನಡೆದುಕೊಳ್ಳುವದು.—ಮೀಕ 6:8.
2 ಪ್ರತ್ಯೇಕ ಅಸ್ತಿತ್ವ ಮತ್ತು ಸ್ವಾತಂತ್ರ್ಯದ ಈ ದಿನದಲ್ಲಿ, ದೇವರು ತಮ್ಮಿಂದ ಏನನ್ನೋ ಅಪೇಕ್ಷಿಸುತ್ತಾನೆಂಬ ವಿಚಾರದಿಂದ ಅನೇಕರು ಕಳವಳಗೊಂಡಿರುತ್ತಾರೆ. ಅವರು ಹಂಗಿಗೊಳಗಾಗಲು ಬಯಸುವುದಿಲ್ಲ. ಆದರೆ ಪ್ರಸಂಗಿ ಪುಸ್ತಕದಲ್ಲಿ ಸೊಲೊಮೋನನು ಯಾವ ತೀರ್ಮಾನಕ್ಕೆ ಬಂದಿದ್ದನೋ ಅದರ ಕುರಿತಾಗಿ ಏನು? “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
3. ಪ್ರಸಂಗಿ ಪುಸ್ತಕದ ಕುರಿತಾಗಿ ನಾವು ಗಂಭೀರವಾಗಿ ಯೋಚಿಸಬೇಕು ಏಕೆ?
3 ಜೀವನದಲ್ಲಿ ನಮ್ಮ ಪರಿಸ್ಥಿತಿಗಳು ಮತ್ತು ಹೊರನೋಟವು ಏನೇ ಆಗಿರಲಿ, ಆ ತೀರ್ಮಾನದ ಹಿನ್ನೆಲೆಯನ್ನು ನಾವು ಪರಿಗಣಿಸುವಲ್ಲಿ, ನಾವು ತುಂಬ ಪ್ರಯೋಜನ ಹೊಂದಬಲ್ಲೆವು. ಈ ಪ್ರೇರಿತ ಪುಸ್ತಕದ ಬರಹಗಾರನಾದ ರಾಜ ಸೊಲೊಮೋನನು, ನಮ್ಮ ದೈನಂದಿನ ಜೀವಿತದ ಭಾಗವಾಗಿರುವ ಕೆಲವು ವಿಷಯಗಳನ್ನೇ ಪರಿಗಣಿಸಿದನು. ಅವನ ವಿಶ್ಲೇಷಣೆಯು ಮೂಲತಃ ನಕಾರಾತ್ಮಕವಾಗಿದೆಯೆಂದು ಕೆಲವರು ಅವಸರದಿಂದ ತೀರ್ಮಾನಿಸಬಹುದು. ಆದರೆ ಅದು ದೈವಿಕವಾಗಿ ಪ್ರೇರಿತವಾಗಿತ್ತು ಮತ್ತು ನಮ್ಮ ಚಟುವಟಿಕೆಗಳು ಮತ್ತು ಆದ್ಯತೆಗಳನ್ನು ಪರಿಶೀಲಿಸುವಂತೆ ನಮಗೆ ಸಹಾಯ ಮಾಡಸಾಧ್ಯವಿದೆ. ಇದರಿಂದಾಗಿ ಅಧಿಕ ಆನಂದವು ಫಲಿಸುವುದು.
ಜೀವನದ ಪ್ರಮುಖ ಚಿಂತೆಗಳನ್ನು ನಿಭಾಯಿಸುವುದು
4. ಪ್ರಸಂಗಿ ಪುಸ್ತಕದಲ್ಲಿ ಸೊಲೊಮೋನನು ಏನನ್ನು ಪರೀಕ್ಷಿಸಿ, ಚರ್ಚಿಸಿದನು?
4 ಸೊಲೊಮೋನನು ‘ನರಜನ್ಮದವರ ಕೆಲಸ’ವನ್ನು ಘನವಾಗಿ ಪರೀಕ್ಷಿಸಿದನು. “ಆಕಾಶದ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸಲು ಮನಸ್ಸಿಟ್ಟೆನು.” “ಕೆಲಸ” ಎಂದು ಹೇಳುವಾಗ, ಸೊಲೊಮೋನನು ಒಂದು ನೌಕರಿ, ಅಥವಾ ಉದ್ಯೋಗವನ್ನು ಅರ್ಥೈಸಲಿಲ್ಲ, ಬದಲಾಗಿ ತಮ್ಮ ಜೀವಿತಗಳಾದ್ಯಂತ ಸ್ತ್ರೀಪುರುಷರು ಯಾವುದರಲ್ಲಿ ಮಗ್ನರಾಗಿರುತ್ತಾರೊ ಆ ಇಡೀ ಕ್ಷೇತ್ರವನ್ನೇ ಅರ್ಥೈಸಿದನು. (ಪ್ರಸಂಗಿ 1:13) ನಾವು ಕೆಲವು ಪ್ರಮುಖ ಚಿಂತೆಗಳು ಅಥವಾ ಕೆಲಸಗಳನ್ನು ಪರಿಗಣಿಸೋಣ ಮತ್ತು ಅನಂತರ ನಮ್ಮ ಸ್ವಂತ ಚಟುವಟಿಕೆಗಳು ಮತ್ತು ಆದ್ಯತೆಗಳನ್ನು ಹೋಲಿಸಿ ನೋಡೋಣ.
5. ಮನುಷ್ಯರ ಪ್ರಮುಖ ಕೆಲಸಗಳಲ್ಲಿ ಒಂದು ಯಾವುದು?
5 ನಿಶ್ಚಯವಾಗಿಯೂ ಹಣವು ಅನೇಕ ಮಾನವ ಚಿಂತೆಗಳು ಮತ್ತು ಚಟುವಟಿಕೆಗಳ ತಿರುಳಾಗಿದೆ. ಧನವಂತರಾದ ಕೆಲವರಿಗೆ ಹಣದ ಕುರಿತಾಗಿ ಇರುವ ಉದಾಸೀನ ನೋಟ ಸೊಲೊಮೋನನಿಗಿತ್ತೆಂದು ಯಾರೂ ನ್ಯಾಯವಾಗಿ ಹೇಳಲಾರರು. ಸ್ವಲ್ಪ ಹಣವಿರುವ ಅಗತ್ಯವನ್ನು ಅವನು ಮನಃಪೂರ್ವಕವಾಗಿ ಅಂಗೀಕರಿಸಿದನು. ವಿರಕ್ತರಾಗಿ ಅಥವಾ ಬಡತನದಲ್ಲಿ ಜೀವಿಸುವುದಕ್ಕಿಂತ, ಸಾಕಾಗುವಷ್ಟು ಹಣವಿರುವುದು ಉತ್ತಮ. (ಪ್ರಸಂಗಿ 7:11, 12) ಆದರೆ ಹಣವು, ಅದು ಖರೀದಿಸುವ ಸ್ವತ್ತುಗಳೊಂದಿಗೆ, ಬಡವರಿಗೂ ಐಶ್ವರ್ಯವಂತರಿಗೂ ಜೀವನದಲ್ಲಿನ ಆದ್ಯ ಗುರಿಯಾಗಿ ಪರಿಣಮಿಸಬಲ್ಲದೆಂಬುದನ್ನು ನೀವು ನೋಡಿರಬಹುದು.
6. ಹಣದ ಕುರಿತಾಗಿ ನಾವು, ಯೇಸುವಿನ ದೃಷ್ಟಾಂತಗಳಲ್ಲಿ ಒಂದರಿಂದ ಮತ್ತು ಸೊಲೊಮೋನನ ಸ್ವಂತ ಅನುಭವದಿಂದ ಏನನ್ನು ಕಲಿಯಬಲ್ಲೆವು?
6 ಹೆಚ್ಚನ್ನು ಗಳಿಸಲು ಕೆಲಸಮಾಡಿದ, ಎಂದೂ ತೃಪ್ತನಾಗದ ಆ ಐಶ್ವರ್ಯವಂತ ಮನುಷ್ಯನ ಕುರಿತಾದ ಯೇಸುವಿನ ದೃಷ್ಟಾಂತವನ್ನು ಜ್ಞಾಪಿಸಿಕೊಳ್ಳಿರಿ. ದೇವರು ಅವನನ್ನು ವಿವೇಚನೆಯಿಲ್ಲದವನಾಗಿ ತೀರ್ಮಾನಿಸಿದನು. ಯಾಕೆ? ಯಾಕೆಂದರೆ “ಎಷ್ಟು ಆಸ್ತಿಯಿದ್ದರೂ ಅದು” ನಮ್ಮ “ಜೀವಾಧಾರವಾಗುವುದಿಲ್ಲ.” (ಲೂಕ 12:15-21) ಸೊಲೊಮೋನನ ಅನುಭವವು—ಬಹುಶಃ ನಮ್ಮ ಅನುಭವಕ್ಕಿಂತ ಹೆಚ್ಚು ವಿಸ್ತೃತವಾದಂತಹದ್ದು—ಯೇಸುವಿನ ಮಾತುಗಳನ್ನು ದೃಢೀಕರಿಸುತ್ತದೆ. ಪ್ರಸಂಗಿ 2:4-9ರಲ್ಲಿರುವ ವರ್ಣನೆಯನ್ನು ಓದಿರಿ. ಸೊಲೊಮೋನನು ಸ್ವಲ್ಪ ಸಮಯದ ವರೆಗೆ ಧನವನ್ನು ಗಳಿಸುವುದರಲ್ಲಿ ತಲ್ಲೀನನಾಗಿದ್ದನು. ಅವನು ಉತ್ಕೃಷ್ಟವಾದ ಮನೆಗಳನ್ನು ಮತ್ತು ತೋಟಗಳನ್ನು ಕಟ್ಟಿದನು. ಅವನು ಸುಂದರಿಯರಾದ ಹೆಣ್ಣು ಸಂಗಾತಿಗಳನ್ನು ಪಡೆದುಕೊಳ್ಳಲು ಸಮರ್ಥನಾಗಿದ್ದನು ಮತ್ತು ಅವರನ್ನು ಪಡೆದುಕೊಂಡನು. ಸಂಪತ್ತು ಮತ್ತು ಅದು ಅವನಿಗೆ ಏನನ್ನು ಮಾಡುವಂತೆ ಶಕ್ತಗೊಳಿಸಿತೊ ಅದು, ಗಾಢವಾದ ತೃಪ್ತಿ, ನಿಜ ಸಾಧನೆಯ ಒಂದು ಭಾವ ಮತ್ತು ಅವನ ಜೀವನಕ್ಕೆ ಅರ್ಥವನ್ನು ತಂದಿತೊ? ಅವನು ಮುಚ್ಚುಮರೆಯಿಲ್ಲದೆ ಉತ್ತರಿಸಿದ್ದು: “ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಷ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು, ಲೋಕದಲ್ಲಿ ಯಾವ ಲಾಭವೂ ಕಾಣಲಿಲ್ಲ.”—ಪ್ರಸಂಗಿ 2:11; 4:8.
7. (ಎ) ಹಣದ ಮೌಲ್ಯದ ಕುರಿತಾಗಿ ಅನುಭವವು ಏನನ್ನು ರುಜುಪಡಿಸುತ್ತದೆ? (ಬಿ) ಸೊಲೊಮೋನನ ತೀರ್ಮಾನವನ್ನು ರುಜುಪಡಿಸುವ ಯಾವ ಸಂಗತಿಯನ್ನು ನೀವು ವೈಯಕ್ತಿಕವಾಗಿ ನೋಡಿದ್ದೀರಿ?
7 ಅದು ವಾಸ್ತವಿಕವಾಗಿದೆ, ಅನೇಕರ ಜೀವನಗಳಲ್ಲಿ ರುಜುವಾಗಿರುವ ಒಂದು ಸತ್ಯ. ಹೆಚ್ಚು ಹಣವನ್ನು ಹೊಂದಿರುವುದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲವೆಂಬುದನ್ನು ನಾವು ಒಪ್ಪಬೇಕು. ಆಹಾರ ಮತ್ತು ಬಟ್ಟೆಗಳನ್ನು ಪಡೆಯುವುದನ್ನು ಹೆಚ್ಚು ಸುಲಭವನ್ನಾಗಿ ಮಾಡುವಂತಹ ರೀತಿಯಲ್ಲಿ, ಅದು ಕೆಲವು ಸಮಸ್ಯೆಗಳನ್ನು ಬಗೆಹರಿಸಬಲ್ಲದು. ಆದರೆ ಒಬ್ಬ ವ್ಯಕ್ತಿಯು ಒಂದು ಸಮಯದಲ್ಲಿ ಕೇವಲ ಒಂದು ಉಡುಪನ್ನು ಧರಿಸಬಲ್ಲನು ಮತ್ತು ಕೇವಲ ಇಂತಿಷ್ಟು ಮೊತ್ತದ ಆಹಾರ ಮತ್ತು ಪಾನೀಯದಲ್ಲಿ ಆನಂದಿಸಬಲ್ಲನು. ಮತ್ತು ವಿವಾಹ ವಿಚ್ಛೇದ, ಮದ್ಯಸಾರ ಅಥವಾ ಅಮಲೌಷಧದ ದುರುಪಯೋಗ, ಮತ್ತು ಸಂಬಂಧಿಕರೊಂದಿಗಿನ ಕಲಹಗಳಿಂದ ಯಾರ ಜೀವನಗಳು ಬಾಧಿಸಲ್ಪಟ್ಟಿವೆಯೋ ಆ ಶ್ರೀಮಂತರ ಕುರಿತಾಗಿ ನೀವು ಓದಿದ್ದೀರಿ. ಕೋಟ್ಯಧೀಶ ಜೆ. ಪಿ. ಗೆಟಿ ಹೇಳಿದ್ದು: “ಹಣವು ಸಂತೋಷದೊಂದಿಗೆ ಅನಿವಾರ್ಯವಾಗಿ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಪ್ರಾಯಶಃ ಅಸಂತೋಷದೊಂದಿಗೆ ಅದಕ್ಕೆ ಸಂಬಂಧವಿರಬಹುದು.” ಸಕಾರಣದಿಂದಲೇ, ಸೊಲೊಮೋನನು ಬೆಳ್ಳಿಯನ್ನು ಪ್ರೀತಿಸುವುದನ್ನು ವ್ಯರ್ಥತೆಯೊಂದಿಗೆ ವರ್ಗೀಕರಿಸಿದನು. ಆ ವಾಸ್ತವಾಂಶವನ್ನು ಸೊಲೊಮೋನನ ಅವಲೋಕನದೊಂದಿಗೆ ಹೋಲಿಸಿನೋಡಿರಿ: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.”—ಪ್ರಸಂಗಿ 5:10-12.
8. ಹಣದ ಮಹತ್ತ್ವವನ್ನು ಅತಿರೇಕವಾಗಿ ಅಂದಾಜಿಸದಿರಲು ಯಾವ ಕಾರಣವಿದೆ?
8 ಹಣ ಮತ್ತು ಸ್ವತ್ತುಗಳು, ಭವಿಷ್ಯತ್ತಿನ ವಿಷಯದಲ್ಲಿಯೂ ಸಂತೃಪ್ತಿಯ ಒಂದು ಭಾವವನ್ನು ತರುವುದಿಲ್ಲ. ನಿಮಗೆ ಹೆಚ್ಚು ಹಣ ಮತ್ತು ಸ್ವತ್ತುಗಳಿದ್ದಲ್ಲಿ, ಅವುಗಳನ್ನು ಸಂರಕ್ಷಿಸುವುದರ ಕುರಿತಾಗಿ ನಿಮಗೆ ಪ್ರಾಯಶಃ ಹೆಚ್ಚು ವ್ಯಾಕುಲತೆಯಿರುತ್ತಿತ್ತು ಮತ್ತು ನಾಳೆ ಏನಾಗುವುದೆಂದು ನಿಮಗೆ ಇನ್ನೂ ತಿಳಿಯದೆ ಇರುತ್ತಿತ್ತು. ನಿಮ್ಮ ಜೀವದೊಂದಿಗೆ ನೀವು ಅವೆಲ್ಲವನ್ನೂ ಕಳೆದುಕೊಳ್ಳಬಹುದೊ? (ಪ್ರಸಂಗಿ 5:13-17; 9:11, 12) ಹೀಗಿರುವುದರಿಂದ, ನಮ್ಮ ಜೀವನ ಅಥವಾ ಕೆಲಸಕ್ಕೆ, ಹಣ ಮತ್ತು ಸ್ವತ್ತುಗಳಿಗಿಂತ ಹೆಚ್ಚು ಉನ್ನತವಾದ, ಹೆಚ್ಚು ದೀರ್ಘಕಾಲ ಬಾಳುವ ಅರ್ಥ ಏಕೆ ಇರಬೇಕೆಂಬುದನ್ನು ಕಾಣುವುದು ಕಷ್ಟಕರವಾಗಿರಬಾರದು.
ಕುಟುಂಬ, ಪ್ರಸಿದ್ಧಿ, ಮತ್ತು ಅಧಿಕಾರ
9. ಸೊಲೊಮೋನನ ಪರೀಕ್ಷಣೆಯಲ್ಲಿ ಕುಟುಂಬ ಜೀವನದ ವಿಷಯವು ಯುಕ್ತವಾಗಿ ಏಕೆ ಬಂತು?
9 ಜೀವನದ ಕುರಿತಾದ ಸೊಲೊಮೋನನ ವಿಶ್ಲೇಷಣೆಯು, ಕುಟುಂಬದೊಂದಿಗಿನ ಮುನ್ನೊಲವಿನ ವಿಷಯವನ್ನು ಒಳಗೊಂಡಿತು. ಮಕ್ಕಳನ್ನು ಪಡೆಯುವ ಮತ್ತು ಪಾಲನೆಮಾಡುವ ಆನಂದವನ್ನು ಸೇರಿಸಿ, ಕುಟುಂಬ ಜೀವನವನ್ನು ಬೈಬಲ್ ಎತ್ತಿತೋರಿಸುತ್ತದೆ. (ಆದಿಕಾಂಡ 2:22-24; ಕೀರ್ತನೆ 127:3-5; ಜ್ಞಾನೋಕ್ತಿ 5:15, 18-20; 6:20; ಮಾರ್ಕ 10:6-9; ಎಫೆಸ 5:22-33) ಆದರೂ ಅದು ಜೀವನದ ಅಂತಿಮ ಅಂಶವಾಗಿದೆಯೊ? ಕೆಲವು ಸಂಸ್ಕೃತಿಗಳು, ವಿವಾಹ, ಮಕ್ಕಳು, ಮತ್ತು ಕುಟುಂಬ ಸಂಬಂಧಗಳ ಮೇಲೆ ಹಾಕುವ ಒತ್ತನ್ನು ಪರಿಗಣಿಸುವಾಗ, ಅನೇಕರು ಹಾಗೆ ಯೋಚಿಸುತ್ತಾರೆಂದು ತೋರುತ್ತದೆ. ಆದರೂ, ಒಂದು ನೂರು ಮಕ್ಕಳನ್ನು ಪಡೆದಿರುವುದೂ, ಜೀವನದಲ್ಲಿನ ತೃಪ್ತಿಗೆ ಕೀಲಿ ಕೈಯಲ್ಲವೆಂದು ಪ್ರಸಂಗಿ 6:3 ತೋರಿಸುತ್ತದೆ. ಒಂದು ಒಳ್ಳೆಯ ಆರಂಭವನ್ನು ಕೊಡಲು ಮತ್ತು ಅವರ ಜೀವನವನ್ನು ಸುಗಮಗೊಳಿಸಲು, ಅನೇಕ ಹೆತ್ತವರು ತಮ್ಮ ಮಕ್ಕಳಿಗೋಸ್ಕರ ತ್ಯಾಗಗಳನ್ನು ಮಾಡಿರುವ ವಿಧವನ್ನು ಊಹಿಸಿಕೊಳ್ಳಿರಿ. ಹೆತ್ತವರ ತ್ಯಾಗವು ಎಷ್ಟೇ ಘನವಾಗಿದ್ದರೂ, ನಮ್ಮ ಅಸ್ತಿತ್ವದ ಮುಖ್ಯ ಹೇತು, ಪ್ರಾಣಿಗಳು ಸಹಜಪ್ರವೃತ್ತಿಯಿಂದ ಪ್ರಾಣಿಜಾತಿಗಳನ್ನು ಮುಂದುವರಿಸಲು ಮಾಡುವಂತೆ, ಕೇವಲ ಮುಂದಿನ ಸಂತಾನಕ್ಕೆ ಜೀವವನ್ನು ದಾಟಿಸುವುದಾಗಿರಬೇಕೆಂದು ನಮ್ಮ ಸೃಷ್ಟಿಕರ್ತನು ನಿಶ್ಚಯವಾಗಿಯೂ ಅರ್ಥೈಸಲಿಲ್ಲ.
10. ಕುಟುಂಬದ ಮೇಲೆ ಅನುಚಿತವಾದ ಕೇಂದ್ರೀಕರಿಸುವಿಕೆಯು ವ್ಯರ್ಥವಾಗಿ ರುಜುವಾಗಬಹುದು ಏಕೆ?
10 ಸೊಲೊಮೋನನು ಗ್ರಹಣಶಕ್ತಿಯಿಂದ ಕುಟುಂಬ ಜೀವನದ ಕೆಲವು ವಾಸ್ತವಿಕತೆಗಳನ್ನು ಮುಂತಂದನು. ಉದಾಹರಣೆಗಾಗಿ, ಒಬ್ಬ ಮನುಷ್ಯನು ತನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ ಒದಗಿಸುವಿಕೆಯನ್ನು ಮಾಡುವುದರ ಮೇಲೆ ಕೇಂದ್ರೀಕರಿಸಬಹುದು. ಆದರೆ ಅವರು ವಿವೇಕಿಗಳಾಗಿ ರುಜುವಾಗುವರೊ? ಅಥವಾ ಅವನು ಅವರಿಗಾಗಿ ಶೇಖರಿಸಿಡಲು ಶ್ರಮವಹಿಸಿದ ಸಂಗತಿಗಳನ್ನು ಅವರು ಅವಿವೇಕದಿಂದ ಉಪಯೋಗಿಸುವರೊ? ಈ ಎರಡನೆಯ ವಿಷಯವು ಸಂಭವಿಸುವಲ್ಲಿ, ಅದು ಎಷ್ಟು ‘ವ್ಯರ್ಥವೂ ಅನ್ಯಾಯವೂ’ ಆಗಿರುವುದು!—ಪ್ರಸಂಗಿ 2:18-21; 1 ಅರಸುಗಳು 12:8; 2 ಪೂರ್ವಕಾಲವೃತ್ತಾಂತ 12:1-4, 9.
11, 12. (ಎ) ಜೀವನದಲ್ಲಿನ ಯಾವ ಬೆನ್ನಟ್ಟುವಿಕೆಗಳ ಮೇಲೆ ಕೆಲವರು ಗಮನವನ್ನು ಕೇಂದ್ರೀಕರಿಸಿದ್ದಾರೆ? (ಬಿ) ಪ್ರಖ್ಯಾತಿಯನ್ನು ಹುಡುಕುವುದು ‘ಗಾಳಿಯ ಹಿಂದಟ್ಟುವಿಕೆ’ಯಾಗಿದೆಯೆಂದು ಏಕೆ ಹೇಳಸಾಧ್ಯವಿದೆ?
11 ಇನ್ನೊಂದು ಬದಿಯಲ್ಲಿ, ಅನೇಕರು ಸಾಧಾರಣವಾದ ಕುಟುಂಬ ಜೀವನಕ್ಕೆ, ಇತರರಿಗಿಂತಲೂ ಹೆಚ್ಚಿನ ಪ್ರಸಿದ್ಧಿ ಅಥವಾ ಅಧಿಕಾರವನ್ನು ಗಳಿಸುವ ಅವರ ದೃಢನಿಶ್ಚಯಕ್ಕಿಂತಲೂ ಕಡಿಮೆ ಮಹತ್ತ್ವವನ್ನು ಕೊಟ್ಟಿದ್ದಾರೆ. ಇದು ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿರುವ ಒಂದು ದೋಷವಾಗಿರಬಹುದು. ನೀವು ಇದನ್ನು ನಿಮ್ಮ ಸಹಪಾಠಿಗಳು, ಸಹಕರ್ಮಿಗಳು ಅಥವಾ ನೆರೆಯವರಲ್ಲಿ ನೋಡಿದ್ದೀರೊ? ಅನೇಕರು, ಇತರರಿಂದ ಗಮನಿಸಲ್ಪಡಲು, ಒಬ್ಬ ದೊಡ್ಡ ವ್ಯಕ್ತಿಯಾಗಲು, ಅಥವಾ ಇತರರ ಮೇಲೆ ಅಧಿಕಾರವನ್ನು ಚಲಾಯಿಸಲು ಉಗ್ರವಾಗಿ ಹೋರಾಡುತ್ತಾರೆ. ಆದರೆ ಇದು ನಿಜವಾಗಿ ಎಷ್ಟು ಅರ್ಥಭರಿತವಾದದ್ದಾಗಿದೆ?
12 ಕೆಲವರು ಒಂದು ಚಿಕ್ಕ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧರಾಗಲು ಹೋರಾಡುವ ವಿಧದ ಕುರಿತಾಗಿ ಯೋಚಿಸಿರಿ. ನಾವು ಈ ಪ್ರವೃತ್ತಿಯನ್ನು ಶಾಲೆಯಲ್ಲಿ, ನಮ್ಮ ನೆರೆಹೊರೆಯಲ್ಲಿ ಮತ್ತು ವಿವಿಧ ಸಾಮಾಜಿಕ ಗುಂಪುಗಳಲ್ಲಿ ಕಾಣುತ್ತೇವೆ. ಕಲಾಜಗತ್ತಿನಲ್ಲಿ, ಮನೋರಂಜನೆಯಲ್ಲಿ ಮತ್ತು ರಾಜಕೀಯದಲ್ಲಿ ಖ್ಯಾತರಾಗಲು ಬಯಸುವವರಲ್ಲಿಯೂ ಇದು ಒಂದು ಪ್ರಚೋದಕ ಶಕ್ತಿಯಾಗಿದೆ. ಆದಾಗಲೂ ಇದು ಮುಖ್ಯವಾಗಿ ಒಂದು ವ್ಯರ್ಥ ಪ್ರಯತ್ನವಲ್ಲವೊ? ಸೊಲೊಮೋನನು ಅದನ್ನು ಸರಿಯಾಗಿಯೇ ‘ಗಾಳಿಯನ್ನು ಹಿಂದಟ್ಟುವುದು’ ಎಂದು ಕರೆದನು. (ಪ್ರಸಂಗಿ 4:4) ಒಬ್ಬ ಯುವ ವ್ಯಕ್ತಿಯು, ಒಂದು ಕ್ಲಬ್ನಲ್ಲಿ, ಒಂದು ಕ್ರೀಡಾ ತಂಡದಲ್ಲಿ, ಅಥವಾ ಒಂದು ಸಂಗೀತ ತಂಡದಲ್ಲಿ—ಇಲ್ಲವೇ ಒಬ್ಬ ಪುರುಷ ಅಥವಾ ಸ್ತ್ರೀಯು ಒಂದು ಕಂಪೆನಿ ಅಥವಾ ಸಮುದಾಯದಲ್ಲಿ ಹೆಸರನ್ನು ಗಳಿಸಿದರೆ—ನಿಜವಾಗಿ ಎಷ್ಟು ಜನರಿಗೆ ಅದರ ಕುರಿತಾಗಿ ತಿಳಿದಿರುವುದು? ಭೂಗೋಲದ ಇನ್ನೊಂದು ಬದಿಯಲ್ಲಿರುವ (ಅಥವಾ ಅದೇ ದೇಶದ) ಹೆಚ್ಚಿನ ಜನರಿಗೆ ಆ ವ್ಯಕ್ತಿ ಅಸ್ತಿತ್ವದಲ್ಲಿದ್ದಾನೆಂದಾದರೂ ತಿಳಿದಿದೆಯೊ? ಅಥವಾ ಅವನಿಗೆ ಅಥವಾ ಅವಳಿಗೆ ಎಷ್ಟು ಕಡಿಮೆ ಪ್ರಸಿದ್ಧಿಯಿರುವುದಾದರೂ, ಅದರ ಕುರಿತಾಗಿ ಪೂರ್ತಿಯಾಗಿ ಅರಿವಿಲ್ಲದೆ ಅವರು ತಮ್ಮ ಜೀವನವನ್ನು ಮುಂದುವರಿಸುತ್ತಾರೊ? ಮತ್ತು ಇದೇ ವಿಷಯವನ್ನು, ನೌಕರಿಯಲ್ಲಿ, ಒಂದು ಪಟ್ಟಣದಲ್ಲಿ ಅಥವಾ ಒಂದು ಗುಂಪಿನ ನಡುವೆ ಒಬ್ಬ ವ್ಯಕ್ತಿಯು ಗಳಿಸುವ ಶಕ್ತಿ ಅಥವಾ ಅಧಿಕಾರದ ಕುರಿತಾಗಿ ಹೇಳಸಾಧ್ಯವಿದೆ.
13. (ಎ) ಪ್ರಖ್ಯಾತಿ ಅಥವಾ ಅಧಿಕಾರಕ್ಕಾಗಿ ಶ್ರಮಿಸುವುದರ ಕುರಿತಾಗಿ ಒಂದು ಯೋಗ್ಯವಾದ ನೋಟವನ್ನು ಹೊಂದುವಂತೆ, ಪ್ರಸಂಗಿ 9:4, 5 ನಮಗೆ ಹೇಗೆ ಸಹಾಯ ಮಾಡುತ್ತದೆ? (ಬಿ) ಇರುವುದು ಈ ಜೀವಿತ ಮಾತ್ರ ಆಗಿರುವಲ್ಲಿ ನಾವು ಯಾವ ವಾಸ್ತವಾಂಶಗಳನ್ನು ಎದುರಿಸಬೇಕು? (ಪಾದಟಿಪ್ಪಣಿಯನ್ನು ನೋಡಿರಿ.)
13 ಅಂತಹ ಪ್ರಖ್ಯಾತಿ ಅಥವಾ ಅಧಿಕಾರವು ಕಟ್ಟಕಡೆಗೆ ಯಾವುದರಲ್ಲಿ ಫಲಿಸುವುದು? ಒಂದು ತಲಾಂತರವು ಗತಿಸಿ, ಇನ್ನೊಂದು ತಲಾಂತರವು ಬಂದಂತೆ, ಪ್ರಖ್ಯಾತ ಅಥವಾ ಶಕ್ತಿಶಾಲಿ ಜನರು ದೃಶ್ಯದಿಂದ ಮರೆಯಾಗುತ್ತಾರೆ ಮತ್ತು ಮರೆಯಲ್ಪಡುತ್ತಾರೆ. ಗೃಹನಿರ್ಮಾಪಕರು, ಸಂಗೀತಗಾರರು ಮತ್ತು ಇತರ ಕಲಾಕಾರರು, ಸಮಾಜ ಸುಧಾರಕರು ಮತ್ತು ಇನ್ನಿತರರ ಕುರಿತು ಅದು ನಿಜವಾಗಿದೆ. ಮತ್ತು ಹೆಚ್ಚಿನ ರಾಜಕಾರಣಿಗಳು ಹಾಗೂ ಮಿಲಿಟರಿ ನಾಯಕರ ವಿಷಯದಲ್ಲಿಯೂ ಅದು ಸತ್ಯವಾಗಿದೆ. ಆ ಉದ್ಯೋಗಗಳಲ್ಲಿದ್ದು, 1700 ಮತ್ತು 1800 ವರ್ಷಗಳ ನಡುವೆ ಜೀವಿಸಿದ್ದ ಎಷ್ಟು ನಿರ್ದಿಷ್ಟ ವ್ಯಕ್ತಿಗಳ ಕುರಿತಾಗಿ ನಿಮಗೆ ತಿಳಿದಿದೆ? ಹೀಗೆ ಹೇಳುವ ಮೂಲಕ ಸೊಲೊಮೋನನು ವಿಷಯಗಳನ್ನು ಸರಿಯಾಗಿ ಅಳೆದನು: “ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು. ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರ ಜ್ಞಾಪಕವೇ ಹೋಯಿತಲ್ಲವೆ.” (ಪ್ರಸಂಗಿ 9:4, 5) ಮತ್ತು ಇರುವುದು ಈ ಜೀವಿತ ಮಾತ್ರ ಆಗಿರುವಲ್ಲಿ, ಪ್ರಖ್ಯಾತಿ ಅಥವಾ ಅಧಿಕಾರಕ್ಕಾಗಿ ಶ್ರಮಿಸುವುದು ನಿಜವಾಗಿಯೂ ವ್ಯರ್ಥವೇ ಸರಿ.a
ನಮ್ಮ ಕೇಂದ್ರಬಿಂದು ಮತ್ತು ಹಂಗು
14. ಪ್ರಸಂಗಿ ಪುಸ್ತಕವು ನಮಗೆ ವೈಯಕ್ತಿಕವಾಗಿ ಸಹಾಯ ಮಾಡಬೇಕು ಏಕೆ?
14 ಮನುಷ್ಯರು ತಮ್ಮ ಜೀವಿತಗಳನ್ನು ಯಾವುದರ ಮೇಲೆ ಕೇಂದ್ರೀಕರಿಸುತ್ತಾರೊ, ಆ ಅನೇಕ ಚಟುವಟಿಕೆಗಳು, ಗುರಿಗಳು ಮತ್ತು ಸುಖಾನುಭವಗಳ ಕುರಿತಾಗಿ ಸೊಲೊಮೋನನು ಹೇಳಿಕೆಯನ್ನೀಯಲಿಲ್ಲ. ಆದರೂ ಅವನು ಏನನ್ನು ಬರೆದನೊ ಅದು ಸಾಕು. ಆ ಪುಸ್ತಕದ ಕುರಿತಾದ ನಮ್ಮ ಪರಿಗಣನೆಯು, ವಿಷಣ್ಣಕರ ಅಥವಾ ನಕಾರಾತ್ಮಕವಾಗಿರುವ ಅಗತ್ಯವಿಲ್ಲ. ಯಾಕಂದರೆ ನಮ್ಮ ಪ್ರಯೋಜನಕ್ಕಾಗಿ ಯೆಹೋವ ದೇವರು ಉದ್ದೇಶಪೂರ್ವಕವಾಗಿ ಪ್ರೇರಿಸಿದಂತಹ ಬೈಬಲಿನ ಪುಸ್ತಕವೊಂದನ್ನು ನಾವು ವಾಸ್ತವಿಕವಾಗಿ ಪುನರ್ವಿಮರ್ಶಿಸಿದ್ದೇವೆ. ಜೀವನದ ಕುರಿತಾದ ನಮ್ಮ ಹೊರನೋಟವನ್ನು ಮತ್ತು ನಾವು ಯಾವುದರ ಮೇಲೆ ಕೇಂದ್ರೀಕರಿಸುತ್ತೇವೊ ಅದನ್ನು ಸರಿಪಡಿಸಲು, ಅದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಸಹಾಯ ಮಾಡಬಲ್ಲದು. (ಪ್ರಸಂಗಿ 7:2; 2 ತಿಮೊಥೆಯ 3:16, 17) ಸೊಲೊಮೋನನು ಯಾವ ತೀರ್ಮಾನಗಳಿಗೆ ಬರುವಂತೆ ಯೆಹೋವನು ಸಹಾಯಮಾಡಿದನೊ, ಅವುಗಳ ನೋಟದಲ್ಲಿ ಇದು ವಿಶೇಷವಾಗಿ ಸತ್ಯ.
15, 16. (ಎ) ಜೀವನವನ್ನು ಆನಂದಿಸುವುದರ ಕುರಿತಾಗಿ ಸೊಲೊಮೋನನ ದೃಷ್ಟಿಕೋನವೇನಾಗಿತ್ತು? (ಬಿ) ಜೀವನವನ್ನು ಆನಂದಿಸಲು ಏನು ಆವಶ್ಯಕವೆಂಬುದರ ಕುರಿತಾಗಿ ಸೊಲೊಮೋನನು ಏನನ್ನು ಉಚಿತವಾಗಿ ತಿಳಿಸಿದನು?
15 ಸತ್ಯ ದೇವರ ಸೇವಕರು ಆತನ ಸಮಕ್ಷಮದಲ್ಲಿ ತಾವು ನಡೆಸುವ ಚಟುವಟಿಕೆಗಳಲ್ಲಿ ಆನಂದವನ್ನು ಕಂಡುಕೊಳ್ಳಬೇಕೆಂಬುದು, ಸೊಲೊಮೋನನು ಪದೇ ಪದೇ ಎಬ್ಬಿಸಿದ ಒಂದು ವಿಷಯವಾಗಿತ್ತು. “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ [“ಒಳ್ಳೇದನ್ನು ಮಾಡುವುದಕ್ಕಿಂತ,” NW] ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.” (ಪ್ರಸಂಗಿ 2:24; 3:12, 13; 5:18; 8:15) ಸೊಲೊಮೋನನು ಸುಖವಿಲಾಸವನ್ನು ಉತ್ತೇಜಿಸುತ್ತಿರಲಿಲ್ಲವೆಂಬುದನ್ನು ಗಮನಿಸಿರಿ; ಅಥವಾ ‘ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ’ ಎಂಬ ಮನೋಭಾವಕ್ಕೆ ಸಮ್ಮತಿ ನೀಡುತ್ತಿರಲಿಲ್ಲ. (1 ಕೊರಿಂಥ 15:14, 32-34) ನಾವು ‘ನಮ್ಮ ಜೀವನದಲ್ಲಿ ಒಳ್ಳೇದನ್ನು ಮಾಡಿ’ದಂತೆ, ಉಣ್ಣುವ ಮತ್ತು ಕುಡಿಯುವಂತಹ ಸಾಮಾನ್ಯವಾದ ಸುಖಾನುಭವಗಳಲ್ಲಿ ಆನಂದವನ್ನು ಕಂಡುಕೊಳ್ಳಬೇಕೆಂಬುದನ್ನು ಅವನು ಅರ್ಥೈಸಿದನು. ಅದು, ನಿಜವಾಗಿ ಒಳ್ಳೇದಾಗಿರುವಂತಹದ್ದನ್ನು ನಿರ್ಧರಿಸುವಾತನಾದ ಸೃಷ್ಟಿಕರ್ತನ ಚಿತ್ತವನ್ನು ಮಾಡುವುದರ ಮೇಲೆ ನಮ್ಮ ಜೀವನವನ್ನು ನಿಸ್ಸಂದೇಹವಾಗಿ ಕೇಂದ್ರೀಕರಿಸುತ್ತದೆ.—ಕೀರ್ತನೆ 25:8; ಪ್ರಸಂಗಿ 9:1; ಮಾರ್ಕ 10:17, 18; ರೋಮಾಪುರ 12:2.
16 ಸೊಲೊಮೋನನು ಬರೆದುದು: “ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ; ದೇವರು ನಿನ್ನ ನಡತೆಗೆ ಈಗ ಮೆಚ್ಚಿದನಷ್ಟೆ.” (ಪ್ರಸಂಗಿ 9:7-9) ಹೌದು, ನಿಜವಾಗಿಯೂ ಫಲವತ್ತಾದ ಮತ್ತು ಸಂತೃಪ್ತವಾದ ಜೀವನವನ್ನು ಪಡೆದಿರುವ ಪುರುಷನು ಅಥವಾ ಸ್ತ್ರೀಯು, ಯೆಹೋವನು ಆಹ್ಲಾದವನ್ನು ಕಂಡುಕೊಳ್ಳುವ ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ. ಇದು ನಾವು ಆತನನ್ನು ಸತತವಾಗಿ ಪರಿಗಣಿಸುವುದನ್ನು ಅವಶ್ಯಪಡಿಸುತ್ತದೆ. ಈ ಹೊರನೋಟವು, ಮಾನವ ವಿವೇಚನೆಗಳನ್ನು ಆಧಾರವಾಗಿ ಮಾಡಿಕೊಂಡು, ಜೀವನವನ್ನು ಸಮೀಪಿಸುವ ಹೆಚ್ಚಿನ ಜನರ ಹೊರನೋಟಕ್ಕಿಂತ ಎಷ್ಟು ಭಿನ್ನವಾಗಿದೆ!
17, 18. (ಎ) ಅನೇಕ ಜನರು ಜೀವನದ ನೈಜತೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? (ಬಿ) ಯಾವ ಫಲಿತಾಂಶವನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡತಕ್ಕದ್ದು?
17 ಮರಣಾನಂತರದ ಜೀವನದ ಕುರಿತಾಗಿ ಕೆಲವು ಧರ್ಮಗಳು ಕಲಿಸುವುದಾದರೂ, ಅನೇಕ ಜನರು ಈ ಜೀವಿತದ ಅಸ್ತಿತ್ವದಲ್ಲಿ ಮಾತ್ರ ನಂಬಿಕೆಯಿಡುತ್ತಾರೆ. ಸೊಲೊಮೋನನು ವರ್ಣಿಸಿದಂತೆ ಅವರು ಪ್ರತಿಕ್ರಿಯಿಸುವುದನ್ನು ನೀವು ನೋಡಿರಬಹುದು: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.” (ಪ್ರಸಂಗಿ 8:11) ನೀಚ ಕೃತ್ಯಗಳಲ್ಲಿ ಮಗ್ನರಾಗದವರು ಸಹ, ತಾವು ಸದ್ಯದ ಕುರಿತಾಗಿ ಪ್ರಮುಖವಾಗಿ ಚಿಂತಿತರಾಗಿದ್ದೇವೆಂಬುದನ್ನು ತೋರಿಸುತ್ತಾರೆ. ಹಣ, ಸ್ವತ್ತುಗಳು, ಪ್ರತಿಷ್ಠೆ, ಇತರರ ಮೇಲೆ ಅಧಿಕಾರ, ಕುಟುಂಬ, ಅಥವಾ ಅಂತಹ ಇತರ ಅಭಿರುಚಿಗಳು ಅವರಿಗೆ ಅತಿರೇಕವಾಗಿ ಪ್ರಾಮುಖ್ಯವಾಗಿರುವುದಕ್ಕೆ ಅದೇ ಒಂದು ಕಾರಣವಾಗಿದೆ. ಆದಾಗಲೂ ಸೊಲೊಮೋನನು ಆ ವಿಚಾರವನ್ನು ಅಲ್ಲಿಗೇ ಬಿಡಲಿಲ್ಲ. ಅವನು ಕೂಡಿಸಿದ್ದು: “ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು. ಆದರೆ ದುಷ್ಟನಿಗೆ ಮೇಲಾಗದು, ನೆರಳಿನಂತಿರುವ ಅವನ ದಿನಗಳು ಹೆಚ್ಚುವದಿಲ್ಲ; ಅವನು ದೇವರಿಗೆ ಹೆದರುವವನಲ್ಲವಷ್ಟೆ.” (ಪ್ರಸಂಗಿ 8:12, 13) ‘ನಾವು ದೇವರಿಗೆ ಭಯಪಟ್ಟ’ರೆ, ನಮಗೆ ಒಳಿತಾಗುವುದೆಂದು ಸೊಲೊಮೋನನಿಗೆ ಮನವರಿಕೆಯಾಗಿತ್ತೆಂಬುದು ಸ್ಪಷ್ಟ. ಎಷ್ಟು ಒಳಿತಾಗುವುದು? ಅವನು ಮಾಡಿದಂತಹ ವೈದೃಶ್ಯದಲ್ಲಿ ನಾವು ಉತ್ತರವನ್ನು ಕಂಡುಕೊಳ್ಳಬಲ್ಲೆವು. ಯೆಹೋವನು ‘ನಮ್ಮ ದಿನಗಳನ್ನು ಹೆಚ್ಚಿಸ’ಬಲ್ಲನು.
18 ಇನ್ನೂ ವೃದ್ಧರಾಗಿರದವರು, ವಿಶೇಷವಾಗಿ ತಾವು ದೇವರಿಗೆ ಭಯಪಡುವಲ್ಲಿ ತಮಗೆ ಒಳಿತಾಗುವುದು ಎಂಬ, ಸಂಪೂರ್ಣವಾಗಿ ಭರವಸಯೋಗ್ಯವಾದ ವಾಸ್ತವಾಂಶದ ಕುರಿತಾಗಿ ವಿಚಾರಮಾಡಬೇಕು. ನೀವು ವೈಯಕ್ತಿಕವಾಗಿ ನೋಡಿರಬಹುದಾದಂತೆ, ಅತಿ ವೇಗದ ಓಟಗಾರನೂ ಎಡವಿ, ಓಟದಲ್ಲಿ ಸೋಲಬಲ್ಲನು. ಒಂದು ಪ್ರಬಲವಾದ ಸೈನ್ಯವೂ ಸೋಲಿಸಲ್ಪಡಬಹುದು. ಒಬ್ಬ ಚಾಣಾಕ್ಷ ವ್ಯಾಪಾರಸ್ಥನೂ ಬಡತನದಲ್ಲಿ ಬೀಳಬಹುದು. ಮತ್ತು ಅನಿವಾರ್ಯವಾದ ಇತರ ಅನೇಕ ಸಂಗತಿಗಳು, ಜೀವನವನ್ನು ತೀರ ಅನಿಶ್ಚಿತವಾಗಿ ಮಾಡುತ್ತವೆ. ಆದರೆ ನೀವು ಇದರ ಕುರಿತು ಪೂರ್ಣವಾಗಿ ನಿಶ್ಚಿತರಾಗಿರಸಾಧ್ಯವಿದೆ: ದೇವರ ನೈತಿಕ ನಿಯಮಗಳ ಮೇರೆಗಳೊಳಗೆ ಮತ್ತು ಆತನ ಚಿತ್ತಕ್ಕನುಸಾರ ನೀವು ಒಳ್ಳೆಯದನ್ನು ಮಾಡುತ್ತಾ, ಜೀವನದಲ್ಲಿ ಆನಂದಿಸುವುದೇ ಅತಿ ವಿವೇಕಯುತ ಮತ್ತು ಅತಿ ನಿಶ್ಚಿತವಾದ ಮಾರ್ಗಕ್ರಮವಾಗಿದೆ. (ಪ್ರಸಂಗಿ 9:11) ಇದು ದೇವರ ಚಿತ್ತವೇನೆಂಬುದನ್ನು ಬೈಬಲಿನಿಂದ ಕಲಿಯುವುದು, ಆತನಿಗೆ ಒಬ್ಬನ ಜೀವವನ್ನು ಸಮರ್ಪಿಸಿಕೊಳ್ಳುವುದು, ಮತ್ತು ಒಬ್ಬ ದೀಕ್ಷಾಸ್ನಾನಿತ ಕ್ರೈಸ್ತನಾಗುವುದನ್ನು ಒಳಗೂಡುತ್ತದೆ.—ಮತ್ತಾಯ 28:19, 20.
19. ಯುವ ಜನರು ತಮ್ಮ ಜೀವನಗಳನ್ನು ಹೇಗೆ ಉಪಯೋಗಿಸಿಕೊಳ್ಳಬಲ್ಲರು, ಆದರೆ ವಿವೇಕಯುತವಾದ ಮಾರ್ಗಕ್ರಮವು ಯಾವುದು?
19 ಸೃಷ್ಟಿಕರ್ತನು ಯುವ ಜನರನ್ನು ಅಥವಾ ಇತರರನ್ನು ತನ್ನ ಮಾರ್ಗದರ್ಶನವನ್ನು ಅನುಸರಿಸುವಂತೆ ಒತ್ತಾಯಿಸನು. ಅವರು ತಮ್ಮನ್ನು ಶಿಕ್ಷಣದಲ್ಲಿ ತಲ್ಲೀನಗೊಳಿಸಿಕೊಳ್ಳಬಹುದು. ಮಾನವ ವಿವೇಕದ ಕುರಿತಾದ ಅಸಂಖ್ಯಾತ ಪುಸ್ತಕಗಳ ಜೀವನುದ್ದದ ವಿದ್ಯಾರ್ಥಿಗಳೂ ಆಗಿ ಪರಿಣಮಿಸಬಹುದು. ಅದು ಕಟ್ಟಕಡೆಗೆ ಶರೀರಕ್ಕೆ ಆಯಾಸಕರವಾದದ್ದಾಗಿ ಪರಿಣಮಿಸುವದು. ಅಥವಾ ಅವರು ತಮ್ಮ ಅಪರಿಪೂರ್ಣ ಮಾನವ ಹೃದಯದಿಂದ ಮಾರ್ಗದರ್ಶಿಸಲ್ಪಡಬಲ್ಲರು, ಇಲ್ಲವೇ ತಮ್ಮ ಕಣ್ಣುಗಳಿಗೆ ಸರಿಕಂಡದ್ದನ್ನು ಅನುಸರಿಸಬಲ್ಲರು. ಅದು ಖಂಡಿತವಾಗಿಯೂ ಕ್ಲೇಶವನ್ನು ತರುವುದು, ಮತ್ತು ಹೀಗೆ ಕಳೆಯಲ್ಪಟ್ಟ ಒಂದು ಜೀವನವು ಸಮಯಾನಂತರ ಬರಿ ವ್ಯರ್ಥತೆಯಾಗಿ ರುಜುವಾಗುವುದು. (ಪ್ರಸಂಗಿ 11:9-12:12; 1 ಯೋಹಾನ 2:15-17) ಆದುದರಿಂದ ಸೊಲೊಮೋನನು ಯುವ ಜನರಿಗೆ ಒಂದು ಕೋರಿಕೆಯನ್ನು ಮಾಡುತ್ತಾನೆ. ಇದು, ನಮ್ಮ ವಯಸ್ಸು ಎಷ್ಟೇ ಆಗಿರಲಿ, ನಾವು ಗಂಭೀರವಾಗಿ ಪರಿಗಣಿಸಲೇಬೇಕಾದ ಒಂದು ಕೋರಿಕೆಯಾಗಿದೆ: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 12:1.
20. ಪ್ರಸಂಗಿ ಪುಸ್ತಕದಲ್ಲಿರುವ ಸಂದೇಶದ ಸಮತೂಕದ ದೃಷ್ಟಿಕೋನವೇನು?
20 ಹಾಗಾದರೆ ನಾವು ಯಾವ ತೀರ್ಮಾನಕ್ಕೆ ಬರೋಣ? ಒಳ್ಳೇದು, ಸೊಲೊಮೋನನು ಮಾಡಿದಂತಹ ತೀರ್ಮಾನದ ಕುರಿತಾಗಿ ಏನು? ಅವನು “ಲೋಕದಲ್ಲಿ ನಡೆಯುವ ಕೆಲಸಗಳನ್ನೆಲ್ಲಾ” ನೋಡಿದನು ಅಥವಾ ಪರೀಕ್ಷಿಸಿದನು, ಮತ್ತು “ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ”ವಾಗಿತ್ತು. (ಪ್ರಸಂಗಿ 1:14) ಪ್ರಸಂಗಿ ಪುಸ್ತಕದಲ್ಲಿ ನಾವು ಒಬ್ಬ ಸಿನಿಕಭಾವದ ಅಥವಾ ಒಬ್ಬ ಅತೃಪ್ತ ಮನುಷ್ಯನ ಮಾತುಗಳನ್ನು ಕಂಡುಕೊಳ್ಳುವುದಿಲ್ಲ. ಆ ಮಾತುಗಳು ದೇವರ ಪ್ರೇರಿತ ವಾಕ್ಯದ ಭಾಗವಾಗಿವೆ ಮತ್ತು ನಮ್ಮ ಪರಿಗಣನೆಗೆ ಅರ್ಹವಾಗಿವೆ.
21, 22. (ಎ) ಜೀವನದ ಯಾವ ಅಂಶಗಳನ್ನು ಸೊಲೊಮೋನನು ಪರಿಗಣಿಸಿದನು? (ಬಿ) ಅವನು ಯಾವ ವಿವೇಕಯುತವಾದ ತೀರ್ಮಾನಕ್ಕೆ ಬಂದನು? (ಸಿ) ಪ್ರಸಂಗಿ ಪುಸ್ತಕದ ಒಳವಿಷಯಗಳನ್ನು ಪರೀಕ್ಷಿಸುವುದು ನಿಮ್ಮನ್ನು ಹೇಗೆ ಪ್ರಭಾವಿಸಿದೆ?
21 ಸೊಲೊಮೋನನು ಮಾನವ ದುಡಿತ, ಹೋರಾಟಗಳು ಮತ್ತು ಹೆಬ್ಬಯಕೆಗಳ ಸಮೀಕ್ಷೆಮಾಡಿದನು. ಸಾಧಾರಣವಾಗಿ ವಿಷಯಗಳು ಏನಾಗಿ ಪರಿಣಮಿಸುತ್ತವೆ, ಅನೇಕ ಜನರು ಅನುಭವಿಸುವ ಆಶಾಭಂಗ ಹಾಗೂ ಶೂನ್ಯ ಫಲಿತಾಂಶವನ್ನು ಅವನು ಪರ್ಯಾಲೋಚಿಸಿದನು. ಮಾನವ ಅಪರಿಪೂರ್ಣತೆ ಮತ್ತು ಪರಿಣಮಿಸುವ ಮರಣದ ನೈಜತೆಯನ್ನು ಅವನು ಪರಿಗಣಿಸಿದನು. ಮತ್ತು ಅವನು ಸತ್ತವರ ಸ್ಥಿತಿ ಮತ್ತು ಭವಿಷ್ಯತ್ತಿನ ಯಾವುದೇ ಜೀವನಕ್ಕಾಗಿರುವ ಪ್ರತೀಕ್ಷೆಗಳ ಕುರಿತಾದ ದೇವದತ್ತ ಜ್ಞಾನವನ್ನು ಪರಿಗಣಿಸಿ, ಅದನ್ನು ಒಳಗೂಡಿಸಿದನು. ಇದೆಲ್ಲವೂ ದೈವಿಕವಾಗಿ ಪ್ರವರ್ಧಿಸಲ್ಪಟ್ಟ ವಿವೇಕವಿದ್ದ, ಹೌದು, ಜೀವಿಸಿರುವವರಲ್ಲೇ ಅತ್ಯಂತ ವಿವೇಕಿ ಮಾನವರಲ್ಲಿ ಒಬ್ಬನಾಗಿದ್ದ ಒಬ್ಬ ಪುರುಷನಿಂದ ಅಳೆಯಲ್ಪಟ್ಟಿತು. ಅನಂತರ ಅವನು ಯಾವ ತೀರ್ಮಾನಕ್ಕೆ ಬಂದನೊ ಅದು, ನಿಜವಾಗಿ ಒಂದು ಅರ್ಥಭರಿತ ಜೀವನವನ್ನು ಬಯಸುವವರೆಲ್ಲರ ಪ್ರಯೋಜನಕ್ಕಾಗಿ ಪವಿತ್ರ ಶಾಸ್ತ್ರಗಳಲ್ಲಿ ಸೇರಿಸಲ್ಪಟ್ಟಿತು. ನಾವು ಸಮ್ಮತಿಸಬಾರದೊ?
22 “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.”—ಪ್ರಸಂಗಿ 12:13, 14.
[ಅಧ್ಯಯನ ಪ್ರಶ್ನೆಗಳು]
a ದ ವಾಚ್ಟವರ್ ಪತ್ರಿಕೆಯು ಒಮ್ಮೆ ಈ ಒಳನೋಟವುಳ್ಳ ಹೇಳಿಕೆಯನ್ನು ಮಾಡಿತು: “ನಾವು ಈ ಜೀವನವನ್ನು ವ್ಯರ್ಥ ಕಾರ್ಯಗಳಿಗಾಗಿ ಹಾಳುಮಾಡಬಾರದು . . . ಇರುವುದು ಈ ಜೀವಿತ ಮಾತ್ರ ಆಗಿರುವಲ್ಲಿ, ಪ್ರಾಮುಖ್ಯವಾಗಿರುವ ಯಾವುದೇ ಸಂಗತಿಯಿರುವುದಿಲ್ಲ. ಈ ಜೀವನವು, ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು, ಪುನಃ ಬೇಗನೆ ನೆಲಕ್ಕೆ ಬೀಳುವ ಒಂದು ಚೆಂಡಿನಂತಿದೆ. ಅದು ದಾಟಿಹೋಗುವ ಒಂದು ನೆರಳು, ಬಾಡಿಹೋಗುವ ಒಂದು ಹೂವು, ಕತ್ತರಿಸಲ್ಪಡುವ ಮತ್ತು ಬೇಗನೆ ಒಣಗಿಹೋಗುವ ಹುಲ್ಲಿನ ಗರಿಯಾಗಿದೆ. . . . ನಿತ್ಯತೆಯ ತಕ್ಕಡಿಗಳಲ್ಲಿ ನಮ್ಮ ಆಯುಷ್ಯವು ನಿರ್ಲಕ್ಷಿಸಲು ಯೋಗ್ಯವಾದ ಧೂಳಿನ ಕಣವಾಗಿದೆ. ಸಮಯದ ಪ್ರವಾಹದಲ್ಲಿ ಅದು ನೀರಿನ ಒಂದು ತುಂಬು ಹನಿಯೂ ಅಲ್ಲ. ನಿಶ್ಚಯವಾಗಿ [ಸೊಲೊಮೋನನು] ಜೀವನದ ಅನೇಕ ಮಾನವೀಯ ಚಿಂತೆಗಳು ಮತ್ತು ಚಟುವಟಿಕೆಗಳನ್ನು ಪುನರ್ವಿಮರ್ಶಿಸಿ, ಅವುಗಳನ್ನು ವ್ಯರ್ಥವೆಂದು ಸರಿಯಾಗಿ ಘೋಷಿಸಿದ್ದಾನೆ. ನಾವು ಎಷ್ಟು ಬೇಗನೆ ಸಾಯುತ್ತೇವೆಂದರೆ, ನಾವು ಎಂದೂ ಹುಟ್ಟದಿದ್ದರೆ ಒಳ್ಳೇದಿತ್ತು. ಬಂದು ಹೋಗುವ ನೂರಾರು ಕೋಟಿ ಮಂದಿಯಲ್ಲಿ ಒಬ್ಬರಾಗಿದ್ದು, ನಾವು ಎಂದಾದರೂ ಇಲ್ಲಿದ್ದೆವು ಎಂಬುದನ್ನು ತಿಳಿಯುವವರು ಕೆಲವೇ ಮಂದಿ. ಈ ನೋಟವು ಸಿನಿಕವಲ್ಲ ಅಥವಾ ಖಿನ್ನಕರವಲ್ಲ ಅಥವಾ ಉತ್ಸಾಹರಹಿತವಲ್ಲ ಅಥವಾ ಅಸ್ವಸ್ಥ ಭಾವನೆಯಿಂದ ಕೂಡಿದಂಥದ್ದಲ್ಲ. ಇರುವುದು ಈ ಜೀವಿತ ಮಾತ್ರವಾಗಿರುವಲ್ಲಿ, ಅದು ಸತ್ಯವಾಗಿದೆ, ಒಂದು ವಾಸ್ತವಿಕತೆ, ಒಂದು ವ್ಯಾವಹಾರಿಕ ನೋಟವಾಗಿದೆ.”—ಆಗಸ್ಟ್ 1, 1957, ಪುಟ 472.
ನಿಮಗೆ ಜ್ಞಾಪಕವಿದೆಯೆ?
◻ ನಿಮ್ಮ ಜೀವನದಲ್ಲಿ ಸ್ವತ್ತುಗಳ ಪಾತ್ರದ ಕುರಿತಾದ ವಿವೇಕಯುತವಾದ ಮೌಲ್ಯಮಾಪನ ಏನಾಗಿದೆ?
◻ ಕುಟುಂಬ, ಪ್ರಸಿದ್ಧಿ, ಅಥವಾ ಇತರರ ಮೇಲೆ ಅಧಿಕಾರಕ್ಕೆ ನಾವು ಅನುಚಿತವಾದ ಒತ್ತನ್ನು ಕೊಡಬಾರದೇಕೆ?
◻ ಆನಂದಿಸುವಿಕೆಯ ಕಡೆಗೆ ಸೊಲೊಮೋನನು ಯಾವ ದೈವಿಕ ಮನೋಭಾವವನ್ನು ಉತ್ತೇಜಿಸಿದನು?
◻ ಪ್ರಸಂಗಿ ಪುಸ್ತಕವನ್ನು ಪರಿಗಣಿಸುವುದರಿಂದ ನೀವು ಹೇಗೆ ಪ್ರಯೋಜನ ಹೊಂದಿದ್ದೀರಿ?
[ಪುಟ 15 ರಲ್ಲಿರುವ ಚಿತ್ರ]
ಹಣ ಮತ್ತು ಸ್ವತ್ತುಗಳು ಸಂತೃಪ್ತಿಯ ಆಶ್ವಾಸನೆಯನ್ನು ನೀಡುವುದಿಲ್ಲ
[ಪುಟ 17 ರಲ್ಲಿರುವ ಚಿತ್ರ]
ಯುವ ಜನರು ದೇವರಿಗೆ ಭಯಪಟ್ಟರೆ, ತಮಗೆ ಒಳಿತಾಗುವುದೆಂಬ ಆಶ್ವಾಸನೆ ಅವರಿಗಿರಬಲ್ಲದು