‘ಕಷ್ಟದ ದಿನಗಳಲ್ಲಿ’ ಯೆಹೋವನ ಸೇವೆ ಮಾಡುವವರು
“ಆರೋಗ್ಯ ಸಮಸ್ಯೆಗಳಿಂದಾಗಿ ದಿನದಿಂದ ದಿನಕ್ಕೆ ನನ್ನ ಕಷ್ಟ ಹೆಚ್ಚಾಗುತ್ತಿದೆ.” 70 ವರ್ಷ ದಾಟಿರುವ ಅರ್ನ್ಸ್ಟ್ ಎಂಬ ಸಹೋದರ ಹೀಗೆ ದುಃಖಿಸುತ್ತಾರೆ.a ನಿಮಗೂ ಹಾಗನಿಸುತ್ತದಾ? ನೀವು ಸಹ ಹೆಚ್ಚು ವೃದ್ಧರಾಗುತ್ತಿರುವಲ್ಲಿ, ಆರೋಗ್ಯ ಹಾಗೂ ಬಲ ಕಳೆದುಕೊಳ್ಳುತ್ತಿರುವಲ್ಲಿ ಪ್ರಸಂಗಿ 12ನೇ ಅಧ್ಯಾಯದಲ್ಲಿರುವ ವರ್ಣನೆ ನಿಮಗೆ ಚೆನ್ನಾಗಿ ಅರ್ಥವಾಗಬಹುದು. ಆ ಅಧ್ಯಾಯದ 1ನೇ ವಚನದಲ್ಲಿ ವೃದ್ಧಾಪ್ಯವನ್ನು ‘ಕಷ್ಟದ ದಿನಗಳು’ ಎಂದು ಕರೆಯಲಾಗಿದೆ. ಹಾಗಂತ ನಿಮ್ಮ ಜೀವನ ದುಃಖದಲ್ಲೇ ಮುಳುಗಿರಬೇಕೆಂದಿಲ್ಲ. ಯೆಹೋವನನ್ನು ಆನಂದದಿಂದ ಸೇವಿಸುತ್ತಾ ತೃಪ್ತಿಕರ ಬದುಕನ್ನು ಈಗಲೂ ನಡೆಸಬಲ್ಲಿರಿ.
ನಂಬಿಕೆಯನ್ನು ಬಲವಾಗಿರಿಸಿ
ಪ್ರಿಯ ವೃದ್ಧ ಸಹೋದರ ಸಹೋದರಿಯರೇ ನಿಮಗಿರುವಂಥ ಕಷ್ಟಗಳೇ ಬೇರೆಯವರಿಗೂ ಇವೆ. ಬೈಬಲ್ ಕಾಲಗಳಲ್ಲೂ ಯೆಹೋವನ ವೃದ್ಧ ಸೇವಕರಿಗೆ ಸವಾಲುಗಳಿದ್ದವು. ಉದಾಹರಣೆಗೆ, ಇಸಾಕ, ಯಾಕೋಬ ಮತ್ತು ಅಹೀಯರಿಗೆ ಕಣ್ಣು ಕಾಣುತ್ತಿರಲಿಲ್ಲ. (ಆದಿ. 27:1; 48:10; 1 ಅರ. 14:4) ರಾಜ ದಾವೀದನಿಗೆ ‘ಕಂಬಳಿಗಳನ್ನು ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.’ (1 ಅರ. 1:1) ಧನಿಕನಾದ ಬರ್ಜಿಲ್ಲೈಗೆ ಅನ್ನಪಾನಗಳ ರುಚಿ ಗೊತ್ತಾಗುತ್ತಿರಲಿಲ್ಲ ಮತ್ತು ಗಾಯನದ ಸ್ವರಗಳು ಕೇಳಿಸುತ್ತಿರಲಿಲ್ಲ. (2 ಸಮು. 19:32-35) ಅಬ್ರಹಾಮ ಮತ್ತು ನವೊಮಿ ತಮ್ಮತಮ್ಮ ಬಾಳಸಂಗಾತಿಯ ಮರಣದ ನೋವನ್ನು ಅನುಭವಿಸಿದರು.—ಆದಿ. 23:1, 2; ರೂತ. 1:3, 12.
ಯೆಹೋವನಿಗೆ ನಿಷ್ಠರಾಗಿರಲು ಮತ್ತು ಆನಂದ ಕಾಪಾಡಿಕೊಳ್ಳಲು ಇವರಲ್ಲಿ ಒಬ್ಬೊಬ್ಬರಿಗೂ ಯಾವುದು ನೆರವಾಯಿತು? ಅಬ್ರಹಾಮನು ತನ್ನ ವೃದ್ಧಾಪ್ಯದಲ್ಲಿ ದೇವರ ವಾಗ್ದಾನದ ಮೇಲೆ ಭರವಸೆಯಿಟ್ಟು “ನಂಬಿಕೆಯಿಂದ ದೃಢ”ನಾದನು. (ರೋಮ. 4:19, 20) ನಮಗೂ ದೃಢವಾದ ನಂಬಿಕೆಯ ಅಗತ್ಯವಿದೆ. ಅಂಥ ನಂಬಿಕೆ ನಮ್ಮ ವಯಸ್ಸು, ಸಾಮರ್ಥ್ಯ ಇಲ್ಲವೇ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿರುವುದಿಲ್ಲ. ಇದಕ್ಕೊಂದು ಉದಾಹರಣೆ ಯಾಕೋಬನದ್ದು. ಅವನು ಬಲಹೀನನಾಗಿದ್ದರೂ, ದೃಷ್ಟಿ ಮಂದವಾಗಿದ್ದರೂ, ಹಾಸಿಗೆ ಹಿಡಿದಿದ್ದರೂ ದೇವರ ವಾಗ್ದಾನಗಳಲ್ಲಿ ಬಲವಾದ ನಂಬಿಕೆ ತೋರಿಸಿದನು. (ಆದಿ. 48:1-4, 10; ಇಬ್ರಿ. 11:21) ನಮ್ಮೀ ಕಾಲದಲ್ಲೂ ಇಂಥದ್ದೇ ಉದಾಹರಣೆ ಇದೆ. 93 ವರ್ಷದ ಇನೀಸ್ ಎಂಬ ಸಹೋದರಿ ಸ್ನಾಯು ದೌರ್ಬಲ್ಯದಿಂದ ನರಳುತ್ತಿದ್ದಾರೆ. ಆದರೂ ಅವರನ್ನುವುದು: “ಪ್ರತಿದಿನವೂ ಯೆಹೋವನು ನನಗೆ ಹೇರಳ ಪ್ರತಿಫಲ ಕೊಡುತ್ತಿದ್ದಾನೆಂದು ನನಗನಿಸುತ್ತದೆ. ಪ್ರತಿದಿನ ಪರದೈಸಿನ ಬಗ್ಗೆ ಯೋಚಿಸುತ್ತೇನೆ. ಇದೇ ನನಗೆ ನಿರೀಕ್ಷೆ ಕೊಡುತ್ತದೆ.” ಎಂಥ ಉತ್ತಮ, ಸಕಾರಾತ್ಮಕ ಮನೋಭಾವ!
ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ ಮತ್ತು ಕ್ರೈಸ್ತ ಕೂಟಗಳ ಮೂಲಕ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತೇವೆ. ವಯಸ್ಸಾದ ಪ್ರವಾದಿ ದಾನಿಯೇಲನು ತಪ್ಪದೆ ಪ್ರತಿ ದಿನ ಮೂರು ಸಲ ಪ್ರಾರ್ಥಿಸುತ್ತಿದ್ದನು. ದೇವರ ವಾಕ್ಯವನ್ನೂ ತಪ್ಪದೆ ಅಧ್ಯಯನ ಮಾಡುತ್ತಿದ್ದನು. (ದಾನಿ. 6:10; 9:2) ಅನ್ನಳೆಂಬ ಹೆಸರಿನ ವೃದ್ಧ ವಿಧವೆಯು ದೇವಾಲಯಕ್ಕೆ ಪ್ರತಿ ದಿನ ಹೋಗುತ್ತಿದ್ದಳು. (ಲೂಕ 2:36, 37) ಸಾಧ್ಯವಿರುವಾಗೆಲ್ಲ ಕೂಟಗಳಿಗೆ ಹೋಗಿ ನಿಮ್ಮಿಂದಾಗುವಷ್ಟರ ಮಟ್ಟಿಗೆ ಭಾಗವಹಿಸುವಾಗ, ಸ್ವತಃ ನಿಮಗೆ ಮಾತ್ರವಲ್ಲ ಅಲ್ಲಿ ಹಾಜರಿರುವವರೆಲ್ಲರಿಗೂ ಚೈತನ್ಯ ಸಿಗುತ್ತದೆ. ನೀವು ಮಾಡುವ ಸೇವೆಯಲ್ಲಿ ನಿಮಗೆ ಇತಿಮಿತಿಗಳಿದ್ದರೂ ನೀವು ಮಾಡುವ ಪ್ರಾರ್ಥನೆಗಳ ಬಗ್ಗೆ ಯೆಹೋವನು ಯಾವಾಗಲೂ ಸಂತೋಷಪಡುತ್ತಾನೆ.—ಜ್ಞಾನೋ. 15:8.
ನಂಬಿಗಸ್ತರಾಗಿರುವ ನಿಮ್ಮಲ್ಲಿ ಹೆಚ್ಚಿನವರು ‘ನನಗೆ ಓದುವಷ್ಟು ಚೆನ್ನಾಗಿ ಕಣ್ಣು ಕಾಣಿಸುತ್ತಿದ್ದಿದ್ದರೆ . . . ಕೂಟಗಳಿಗೆ ಹೋಗುವಷ್ಟು ಶಕ್ತಿ ಇರುತ್ತಿದ್ದರೆ . . . ’ ಎಂದು ಹಾರೈಸುತ್ತೀರಿ ನಿಜ. ಆದರೆ ಅವೆಲ್ಲ ಮಾಡುವುದು ಹೆಚ್ಚೆಚ್ಚು ಕಷ್ಟ, ಅಸಾಧ್ಯವೂ ಆಗುತ್ತಿರಬಹುದು. ಈಗೇನು ಮಾಡುವಿರಿ? ನಿಮಗೆ ಲಭ್ಯವಿರುವುದನ್ನು ಚೆನ್ನಾಗಿ ಬಳಸಿ. ಕೂಟಗಳಿಗೆ ಹೋಗಲು ಆಗದೆ ಇರುವವರಲ್ಲಿ ಹೆಚ್ಚಿನವರು ಫೋನ್ ಮೂಲಕ ಕೂಟಗಳನ್ನು ಕೇಳಿಸಿಕೊಳ್ಳುತ್ತಾರೆ. 79 ವರ್ಷದ ಇಂಗೆ ಎಂಬವರ ದೃಷ್ಟಿ ತುಂಬ ಮಬ್ಬಾಗಿದ್ದರೂ ಕೂಟಗಳಿಗೆ ತಯಾರಿ ಮಾಡುತ್ತಾರೆ. ಹೇಗೆ? ಸಭೆಯ ಸಹೋದರನೊಬ್ಬನು ಕಂಪ್ಯೂಟರಿನಿಂದ ಅವರಿಗಾಗಿ ದೊಡ್ಡ ದೊಡ್ಡ ಅಕ್ಷರಗಳ ಪ್ರಿಂಟ್ಔಟ್ಗಳನ್ನು ತೆಗೆದು ಕೊಡುತ್ತಾನೆ.
‘ನಮ್ಮ ಹತ್ತಿರ ಇಲ್ಲವಲ್ಲ’ ಎಂದು ಬೇರೆಯವರು ತುಂಬ ಆಶಿಸುವ ಒಂದು ವಿಷಯ ನಿಮ್ಮ ಬಳಿ ಇದೆ. ಏನದು? ಸಮಯ! ಹಾಗಾಗಿ ಬೈಬಲ್, ಬೈಬಲ್ ಸಾಹಿತ್ಯ, ಭಾಷಣಗಳು, ಡ್ರಾಮ ರೆಕಾರ್ಡಿಂಗ್ಗಳನ್ನು ಆಲಿಸಲು ನೀವದನ್ನು ಬಳಸಬಹುದು. ಅಲ್ಲದೆ, ಜೊತೆ ವಿಶ್ವಾಸಿಗಳಿಗೆ ನೀವೇ ಪೋನ್ ಮಾಡಿ ಮಾತಾಡಿಸಿ ಅವರ ಜೊತೆ ಆಧ್ಯಾತ್ಮಿಕ ವರ ಅಂದರೆ ಆಧ್ಯಾತ್ಮಿಕ ವಿಷಯಗಳನ್ನು ಹಂಚಿಕೊಳ್ಳಲು ಮೊದಲ ಹೆಜ್ಜೆ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ‘ಉತ್ತೇಜನದ ಪರಸ್ಪರ ವಿನಿಮಯ ಮಾಡಿಕೊಳ್ಳಲು’ ನಿಮಗೆ ಸಾಧ್ಯವಾಗುವುದು.—ರೋಮ. 1:11, 12.
ದೇವರ ಸೇವೆಯಲ್ಲಿ ಸಕ್ರಿಯರಾಗಿರಿ
“ಒಂದು ಕಾಲದಲ್ಲಿ ನೀವಿದ್ದಷ್ಟು ಚುರುಕಾಗಿ ಇರಲು ಈಗ ಆಗದೆ ಇರುವುದು ಮನಸ್ಸಿಗೆ ತುಂಬ ಕಷ್ಟ ತರುತ್ತದೆ” ಎಂದು 85 ವರ್ಷ ದಾಟಿರುವ ಕ್ರಿಸ್ಟಾ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಹೀಗಿರುವಾಗ ವೃದ್ಧರು ತಮ್ಮ ಆನಂದವನ್ನು ಹೇಗೆ ಉಳಿಸಿಕೊಳ್ಳಬಲ್ಲರು? “ಸಕಾರಾತ್ಮಕ ನೋಟ ಇಟ್ಟುಕೊಳ್ಳಬೇಕು. ಇನ್ನು ಮುಂದೆ ಏನೇನು ಮಾಡಲಿಕ್ಕೆ ಆಗಲ್ಲ ಎನ್ನುವುದರ ಬಗ್ಗೆಯೇ ಯೋಚಿಸುತ್ತಾ ಇರುವ ಬದಲು, ಈಗ ಏನು ಮಾಡಲಿಕ್ಕಾಗುತ್ತದೊ ಅದನ್ನೇ ಖುಷಿಖುಷಿಯಾಗಿ ಮಾಡಬೇಕು” ಎನ್ನುತ್ತಾರೆ 75 ವರ್ಷದ ಪೀಟರ್.
ಸಾಕ್ಷಿಕೊಡಲು ನೀವೀಗಲೂ ಬಳಸಬಹುದಾದ ವಿಧಾನಗಳ ಕುರಿತು ಯೋಚಿಸಬಲ್ಲಿರಾ? ಹೈಡೀ ಎಂಬವರಿಗೆ ಮುಂಚಿನಂತೆ ಈಗ ಮನೆಮನೆ ಸೇವೆಗೆ ಹೋಗಲು ಆಗುವುದಿಲ್ಲ. 80 ವರ್ಷ ದಾಟಿರುವ ಇವರು, ಸಾಕ್ಷಿಕೊಡಲಿಕ್ಕಾಗಿ ಪತ್ರಗಳನ್ನು ಬರೆಯಲಿಕ್ಕೆಂದೇ ಕಂಪ್ಯೂಟರ್ ಬಳಸಲು ಕಲಿತರು. ಇನ್ನೂ ಕೆಲವು ವೃದ್ಧ ಪ್ರಚಾರಕರು ಉದ್ಯಾನದಲ್ಲೊ, ಬಸ್ ನಿಲ್ದಾಣದಲ್ಲೊ ಕೂತಿರುವಾಗ ಪಕ್ಕದಲ್ಲಿರುವವರ ಜೊತೆ ಬೈಬಲ್ ಚರ್ಚೆಗಳನ್ನು ಆರಂಭಿಸುತ್ತಾರೆ. ನೀವೀಗ ವೃದ್ಧರಿಗಾಗಿರುವ ಒಂದು ಕೇಂದ್ರದಲ್ಲಿ ವಾಸಿಸುತ್ತಿದ್ದೀರಾ? ಹಾಗಿರುವಲ್ಲಿ ಅದನ್ನೇ ನಿಮ್ಮ ‘ಸ್ವಂತ’ ಸೇವಾಕ್ಷೇತ್ರವಾಗಿ ಮಾಡಬಹುದು. ಅಲ್ಲಿ ನಿಮ್ಮ ಆರೈಕೆಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಮತ್ತು ನಿಮ್ಮ ಹಾಗೆ ಅಲ್ಲಿರುವ ಬೇರೆಯವರನ್ನು ನಿಮ್ಮ ಸೇವಾಕ್ಷೇತ್ರವಾಗಿ ಪರಿಗಣಿಸಬಹುದು.
ರಾಜ ದಾವೀದನು ತನ್ನ ಇಳಿವಯಸ್ಸಿನಲ್ಲೂ ಶುದ್ಧ ಆರಾಧನೆಗೆ ಹುರುಪಿನಿಂದ ಬೆಂಬಲಕೊಟ್ಟನು. ಆಲಯದ ನಿರ್ಮಾಣ ಕೆಲಸಕ್ಕಾಗಿ ಧನವನ್ನು ದಾನಮಾಡಿದನು. ಬೇಕಾದ ಸಹಾಯ ಏರ್ಪಡಿಸಿದನು. (1 ಪೂರ್ವ. 28:11–29:5) ನೀವೂ ಅದೇ ರೀತಿಯಲ್ಲಿ ಲೋಕದಲ್ಲೆಲ್ಲಾ ನಡೆಯುತ್ತಿರುವ ರಾಜ್ಯ ಕೆಲಸದಲ್ಲಿ ಆಸಕ್ತಿ ತೋರಿಸಿ ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬಹುದು. ಆ ಕೆಲಸಕ್ಕೆ ನಿಮ್ಮಿಂದಾದ ಎಲ್ಲ ಬೆಂಬಲ ಕೊಡಬಹುದು. ನಿಮ್ಮ ಸಭೆಯಲ್ಲಿರುವ ಪಯನೀಯರರನ್ನು ಇಲ್ಲವೇ ಇತರ ಹುರುಪಿನ ಪ್ರಚಾರಕರನ್ನು ನೀವು ಬೆಂಬಲಿಸಬಹುದಲ್ಲವೇ? ಅವರನ್ನು ಪ್ರೋತ್ಸಾಹಿಸುವ ಮಾತುಗಳನ್ನಾಡುವ ಮೂಲಕ, ಒಂದು ಪುಟ್ಟ ಉಡುಗೊರೆ ಕೊಡುವ ಮೂಲಕ ಇಲ್ಲವೇ ಅವರಿಗೆ ಸರಳವಾದ ತಿಂಡಿತಿನಿಸು, ಪಾನೀಯವನ್ನು ಕೊಡುವ ಮೂಲಕ ಇದನ್ನು ಮಾಡಬಹುದು. ಮಕ್ಕಳು, ಯುವ ಜನರು ಮತ್ತು ಅವರ ಕುಟುಂಬಗಳು, ಪೂರ್ಣ ಸಮಯದ ಸೇವಕರು, ಅಸ್ವಸ್ಥರು, ಭಾರೀ ಜವಾಬ್ದಾರಿಗಳಿರುವವರಿಗಾಗಿ ಪ್ರಾರ್ಥಿಸಿ.
ನೀವು ಮತ್ತು ನೀವು ಮಾಡಿರುವ ಸೇವೆ ತುಂಬ ಅಮೂಲ್ಯ. ಪ್ರಿಯರಾದ ವೃದ್ಧರೇ ನಮ್ಮ ಸ್ವರ್ಗೀಯ ತಂದೆ ಯಾವತ್ತೂ ನಿಮ್ಮನ್ನು ಪ್ರಯೋಜನಕ್ಕೆ ಬಾರದವರು ಎಂದೆಣಿಸಿ ಕೈಬಿಡುವುದಿಲ್ಲ. (ಕೀರ್ತ. 71:9) ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮನ್ನು ಅಮೂಲ್ಯರೆಂದು ಎಣಿಸುತ್ತಾನೆ. ಬೇಗನೆ ಬರಲಿರುವ ಹೊಸ ಪರಿಸ್ಥಿತಿಗಳಲ್ಲಿ ನಮಗೆ ವಯಸ್ಸು ಹೆಚ್ಚಾಗುತ್ತಾ ಹೋದರೂ ನೋವನ್ನಾಗಲಿ, ಕಷ್ಟವನ್ನಾಗಲಿ ಅನುಭವಿಸಬೇಕಾಗಿರುವುದಿಲ್ಲ. ಪೂರ್ಣ ಚೈತನ್ಯ, ಪರಿಪೂರ್ಣ ಆರೋಗ್ಯದೊಂದಿಗೆ ನಮ್ಮ ಪ್ರೀತಿಯ ದೇವರಾದ ಯೆಹೋವನ ಸೇವೆಯನ್ನು ಅನಂತಕ್ಕೂ ಮಾಡುತ್ತಿರುವೆವು!
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.