ನಿಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳಿರಿ!
“ಕಷ್ಟದ ದಿನಗಳೂ . . . ಸಮೀಪಿಸುವದರೊಳಗಾಗಿ . . . ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 12:1.
1. ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಯುವ ಜನರು ತಮ್ಮ ಯೌವನವನ್ನು ಮತ್ತು ಬಲವನ್ನು ಯಾವ ರೀತಿಯಲ್ಲಿ ಉಪಯೋಗಿಸಲು ಬಯಸಬೇಕು?
ಯೆಹೋವನು ತನ್ನ ಚಿತ್ತವನ್ನು ಮಾಡಲು ಆತನ ಸೇವಕರಿಗೆ ಬಲವನ್ನು ನೀಡುತ್ತಾನೆ. (ಯೆಶಾಯ 40:28-31) ಈ ಬಲವನ್ನು ಆತನು ಪ್ರಾಯ ಲೆಕ್ಕಿಸದೆ ಎಲ್ಲರಿಗೂ ಏಕರೂಪವಾಗಿ ಕೊಡುತ್ತಾನೆ. ಆದರೆ, ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿರುವ ಯುವ ಜನರು, ವಿಶೇಷವಾಗಿ ತಮ್ಮ ಯೌವನವನ್ನು ಮತ್ತು ಬಲವನ್ನು ವಿವೇಕಯುತವಾಗಿ ಉಪಯೋಗಿಸಲು ಬಯಸಬೇಕು. ಆದುದರಿಂದಲೇ, ಅವರು “ಪ್ರಸಂಗಿಯ” ಅಂದರೆ, ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನ ಸಲಹೆಗೆ ಕಿವಿಗೊಡುತ್ತಾರೆ. ಅವನು ಪ್ರೋತ್ಸಾಹಿಸಿದ್ದು: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 1:1; 12:1.
2. ಸಮರ್ಪಿತ ಕ್ರೈಸ್ತರ ಮಕ್ಕಳು ಏನು ಮಾಡತಕ್ಕದ್ದು?
2 ಯೌವನದಲ್ಲೇ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸುವುದರ ಕುರಿತು ಸೊಲೊಮೋನನು ನೀಡಿದ ಬುದ್ಧಿವಾದವು, ಪ್ರಥಮವಾಗಿ ಇಸ್ರಾಯೇಲ್ನ ಯುವ ಸ್ತ್ರೀಪುರುಷರಿಗೆ ನಿರ್ದೇಶಿಸಲ್ಪಟ್ಟಿತ್ತು. ಇವರು ಯೆಹೋವನಿಗೆ ಸಮರ್ಪಿತವಾದ ಜನಾಂಗದಲ್ಲಿ ಜನಿಸಿದ್ದರು. ಆದರೆ, ಇಂದಿನ ಸಮರ್ಪಿತ ಕ್ರೈಸ್ತರ ಮಕ್ಕಳ ಕುರಿತೇನು? ನಿಶ್ಚಯವಾಗಿಯೂ ಅವರು ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಬೇಕು. ಅವರು ಹಾಗೆ ಮಾಡುವುದಾದರೆ, ಆತನನ್ನು ಗೌರವಿಸುವರು ಮಾತ್ರವಲ್ಲ, ಸ್ವತಃ ಪ್ರಯೋಜನವನ್ನೂ ಪಡೆದುಕೊಳ್ಳುವರು.—ಯೆಶಾಯ 48:17, 18.
ಗತಕಾಲದ ಉತ್ತಮ ಮಾದರಿಗಳು
3. ಯೋಸೇಫ, ಸಮುವೇಲ, ಮತ್ತು ದಾವೀದರು ಯಾವ ಮಾದರಿಗಳನ್ನಿಟ್ಟರು?
3 ಬೈಬಲ್ ದಾಖಲೆಯಲ್ಲಿ ಉಲ್ಲೇಖಿಸಲ್ಪಟ್ಟ ಅನೇಕ ಯುವ ಜನರು, ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸುವ ವಿಷಯದಲ್ಲಿ ಉತ್ತಮ ಮಾದರಿಯನ್ನಿಟ್ಟಿದ್ದಾರೆ. ಯುವ ಪ್ರಾಯದಿಂದಲೇ, ಯಾಕೋಬನ ಮಗನಾದ ಯೋಸೇಫನು ತನ್ನ ಸೃಷ್ಟಿಕರ್ತನನ್ನು ಸ್ಮರಿಸಿದನು. ಪೋಟೀಫರನ ಹೆಂಡತಿಯು ಯೋಸೇಫನನ್ನು ಶೋಧನೆಗೊಳಪಡಿಸಿ, ತನ್ನೊಂದಿಗೆ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವಂತೆ ಒತ್ತಾಯಿಸಿದಾಗ, ಅವನು ಖಡಾಖಂಡಿತವಾಗಿ ನಿರಾಕರಿಸುತ್ತಾ ಹೇಳಿದ್ದು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ”? (ಆದಿಕಾಂಡ 39:9) ಲೇವಿಯ ಕುಲದವನಾದ ಸಮುವೇಲನು, ತನ್ನ ಸೃಷ್ಟಿಕರ್ತನನ್ನು ಬಾಲ್ಯಾವಸ್ಥೆಯಲ್ಲಿ ಮಾತ್ರವಲ್ಲ ಜೀವನದುದ್ದಕ್ಕೂ ಸ್ಮರಿಸಿದನು. (1 ಸಮುವೇಲ 1:22-28; 2:18; 3:1-5) ಬೆತ್ಲೆಹೇಮಿನ ಯುವ ದಾವೀದನು ಸಹ ತನ್ನ ಸೃಷ್ಟಿಕರ್ತನನ್ನು ಸ್ಮರಿಸಿದನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅವನು ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನನ್ನು ಎದುರಿಸಿದಾಗ, ಅವನಿಗೆ ದೇವರಲ್ಲಿದ್ದ ಪೂರ್ಣ ಭರವಸೆಯು ವ್ಯಕ್ತವಾಯಿತು. ಅವನು ಪ್ರಕಟಿಸಿದ್ದು: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದುಹಾಕಿ . . . ಇದರಿಂದ ಇಸ್ರಾಯೇಲ್ಯರೊಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದುಬರುವದು; ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ; ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು.” ಇದಾದ ಸ್ವಲ್ಪದರಲ್ಲೇ ಗೊಲ್ಯಾತನು ಕೊಲ್ಲಲ್ಪಟ್ಟನು, ಮತ್ತು ಫಿಲಿಷ್ಟಿಯರು ಅಲ್ಲಿಂದ ಓಡಿಹೋದರು.—1 ಸಮುವೇಲ 17:45-51.
4. (ಎ) ಅರಾಮ್ಯರ ಬಳಿ ಬಂದಿಯಾಗಿದ್ದ ಇಸ್ರಾಯೇಲ್ಯ ಹುಡುಗಿ ಮತ್ತು ಯುವ ಪ್ರಾಯದ ರಾಜ ಯೋಷೀಯನು, ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿದರೆಂಬುದನ್ನು ಯಾವುದು ತೋರಿಸುತ್ತದೆ? (ಬಿ) ಹನ್ನೆರಡು ವರ್ಷ ಪ್ರಾಯದ ಯೇಸು, ತನ್ನ ಸೃಷ್ಟಿಕರ್ತನನ್ನು ಸ್ಮರಿಸಿದನೆಂಬುದನ್ನು ಹೇಗೆ ತೋರಿಸಿದನು?
4 ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿದ ಯುವ ಜನರಲ್ಲಿ ಮತ್ತೊಬ್ಬಳು, ಬಂದಿಯಾಗಿದ್ದ ಇಸ್ರಾಯೇಲ್ಯ ಹುಡುಗಿಯಾಗಿದ್ದಳು. ಅವಳು ಅರಾಮ್ಯರ ಸೇನಾಪತಿಯಾಗಿದ್ದ ನಾಮಾನನಿಗೆ ಎಂತಹ ಉತ್ತಮ ಸಾಕ್ಷಿಯನ್ನು ಕೊಟ್ಟಳೆಂದರೆ, ಅವನು ದೇವರ ಪ್ರವಾದಿಯ ಬಳಿಗೆ ಹೋಗಿ, ಕುಷ್ಠರೋಗದಿಂದ ಗುಣಮುಖನಾಗಿ, ಕೊನೆಗೆ ಯೆಹೋವನ ಆರಾಧಕನಾಗಿ ಪರಿಣಮಿಸಿದನು. (2 ಅರಸು 5:1-19) ಯುವ ಪ್ರಾಯದ ರಾಜ ಯೋಷೀಯನು ಸಹ, ಧೈರ್ಯದಿಂದ ಯೆಹೋವನ ಶುದ್ಧಾರಾಧನೆಯನ್ನು ಪ್ರವರ್ಧಿಸಿದನು. (2 ಅರಸು 22:1–23:25) ಆದರೆ, ಚಿಕ್ಕ ಪ್ರಾಯದಲ್ಲೇ ತನ್ನ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿದ ಅತ್ಯುತ್ತಮ ಮಾದರಿಯು, ನಜರೇತಿನ ಯೇಸುವಿನದ್ದಾಗಿತ್ತು. ಅವನು 12 ವರ್ಷ ಪ್ರಾಯದವನಾಗಿದ್ದಾಗ ಸಂಭವಿಸಿದ ಘಟನೆಯನ್ನು ಪರಿಗಣಿಸಿರಿ. ಪಸ್ಕ ಹಬ್ಬದ ಆಚರಣೆಗಾಗಿ ಅವನ ಹೆತ್ತವರು ಅವನನ್ನು ಯೆರೂಸಲೇಮಿಗೆ ಕೊಂಡೊಯ್ದಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದಾಗ, ಯೇಸು ಅವರ ಮಧ್ಯೆ ಇರದಿದ್ದನ್ನು ಅವರು ಗಮನಿಸಿ, ಅವನನ್ನು ಹುಡುಕಲು ಪುನಃ ಯೆರೂಸಲೇಮಿಗೆ ಪ್ರಯಾಣಿಸಿದರು. ಮೂರನೆಯ ದಿನದಂದು, ಅವನು ದೇವಾಲಯದಲ್ಲಿದ್ದ ಬೋಧಕರೊಂದಿಗೆ ಶಾಸ್ತ್ರೀಯ ಪ್ರಶ್ನೆಗಳ ಚರ್ಚೆ ನಡೆಸುತ್ತಿರುವುದನ್ನು ಅವರು ನೋಡಿದರು. ಚಿಂತೆಯನ್ನು ವ್ಯಕ್ತಪಡಿಸುವ ತನ್ನ ತಾಯಿಯ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಯೇಸು ಕೇಳಿದ್ದು: “ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” (ಲೂಕ 2:49) ‘ತನ್ನ ತಂದೆಯ ಮನೆ’ ಅಂದರೆ ದೇವಾಲಯದಿಂದ ಅಮೂಲ್ಯವಾದ ಆತ್ಮಿಕ ವಿಷಯಗಳನ್ನು ತಿಳಿದುಕೊಳ್ಳುವುದು ಯೇಸುವಿಗೆ ಪ್ರಯೋಜನಕರವಾಗಿತ್ತು. ಇಂದು, ಯೆಹೋವನ ಸಾಕ್ಷಿಗಳ ಸಭಾಗೃಹವು, ನಮ್ಮ ಮಹಾನ್ ಸೃಷ್ಟಿಕರ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ಒಂದು ಅತ್ಯುತ್ತಮ ಸ್ಥಳವಾಗಿದೆ.
ಯೆಹೋವನನ್ನು ಈಗಲೇ ಸ್ಮರಿಸಿಕೊಳ್ಳಿರಿ!
5. ಪ್ರಸಂಗಿ 12:1ರಲ್ಲಿ ದಾಖಲಿಸಲ್ಪಟ್ಟಂತೆ, ಪ್ರಸಂಗಿಯು ಹೇಳಿದ ವಿಷಯವನ್ನು ನಿಮ್ಮ ಸ್ವಂತ ಮಾತುಗಳಲ್ಲಿ ನೀವು ಹೇಗೆ ವ್ಯಕ್ತಪಡಿಸುವಿರಿ?
5 ಯೆಹೋವನನ್ನು ಪೂರ್ಣಹೃದಯದಿಂದ ಆರಾಧಿಸುವ ವ್ಯಕ್ತಿಯೊಬ್ಬನು, ದೇವರ ಸೇವೆಯನ್ನು ಆದಷ್ಟು ಬೇಗನೆ ಆರಂಭಿಸಿ, ತಾನು ಬದುಕಿರುವಷ್ಟು ಕಾಲ ಅದನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತಾನೆ. ಆದರೆ, ಸೃಷ್ಟಿಕರ್ತನನ್ನು ಸ್ಮರಿಸದೇ ಇದ್ದು, ತನ್ನ ಯೌವನವನ್ನು ವ್ಯರ್ಥವಾಗಿ ಕಳೆದಿರುವ ಒಬ್ಬ ವ್ಯಕ್ತಿಯ ಪ್ರತೀಕ್ಷೆಗಳ ಕುರಿತು ನಾವು ಏನು ಹೇಳಸಾಧ್ಯವಿದೆ? ದೈವಿಕ ಪ್ರೇರಣೆಯಿಂದ, ಪ್ರಸಂಗಿಯು ಹೇಳುವುದು: “ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 12:1.
6. ವಯಸ್ಸಾದ ಸಿಮೆಯೋನ ಮತ್ತು ಅನ್ನರು ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿದರೆಂಬುದಕ್ಕೆ ಯಾವ ಪ್ರಮಾಣವಿದೆ?
6 ವೃದ್ಧಾಪ್ಯದ ‘ಕಷ್ಟದ ದಿನಗಳಲ್ಲಿ’ ಯಾರೂ ಆನಂದಿಸುವುದಿಲ್ಲ. ಆದರೆ ದೇವರನ್ನು ಸ್ಮರಿಸುವ ವೃದ್ಧರು ಆನಂದಭರಿತರಾಗಿದ್ದಾರೆ. ಉದಾಹರಣೆಗೆ, ದೇವಾಲಯದಲ್ಲಿದ್ದ ವೃದ್ಧ ಸಿಮೆಯೋನನು ಎಳೆಯ ಮಗುವಾಗಿದ್ದ ಯೇಸುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು, ಹರ್ಷೋಲ್ಲಾಸದಿಂದ ಘೋಷಿಸಿದ್ದು: “ಒಡೆಯನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು. ಎಲ್ಲಾ ಜನಗಳಿಗೆ ಪ್ರತ್ಯಕ್ಷನಾಗಲಿ ಎಂದು ಆತನನ್ನು ಒದಗಿಸಿಕೊಟ್ಟಿದ್ದೀ. ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಯಾದ ಇಸ್ರಾಯೇಲ್ಯರಿಗೆ ಕೀರ್ತಿ.” (ಲೂಕ 2:25-32) ಎಂಬತ್ತನಾಲ್ಕು ವರ್ಷ ಪ್ರಾಯದ ಅನ್ನಳು ಕೂಡ ತನ್ನ ಸೃಷ್ಟಿಕರ್ತನನ್ನು ಸ್ಮರಿಸಿದಳು. ಅವಳು ಯಾವಾಗಲೂ ದೇವಾಲಯದಲ್ಲಿರುತ್ತಿದ್ದ ಕಾರಣ, ಎಳೆಯ ಮಗುವಾಗಿದ್ದ ಯೇಸುವನ್ನು ಅಲ್ಲಿಗೆ ಕರೆತಂದಾಗ ಅವಳು ಅಲ್ಲಿದ್ದಳು. “ಆಕೆ ಅದೇ ಗಳಿಗೆಯಲ್ಲಿ ಹತ್ತರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತಾಡುವವಳಾದಳು.”—ಲೂಕ 2:36-38.
7. ದೇವರ ಸೇವೆಯನ್ನು ಮುಂದುವರಿಸುತ್ತಾ ವೃದ್ಧರಾಗಿರುವವರ ಸನ್ನಿವೇಶವು ಹೇಗಿರುತ್ತದೆ?
7 ದೇವರ ಸೇವೆಮಾಡುತ್ತಾ ವೃದ್ಧರಾಗಿರುವ ಪ್ರಚಲಿತ ದಿನದ ಯೆಹೋವನ ಸಾಕ್ಷಿಗಳು ಕೂಡ, ವೃದ್ಧಾಪ್ಯದ ಕಷ್ಟತೊಂದರೆಗಳನ್ನು ಮತ್ತು ಇತಿಮಿತಿಗಳನ್ನು ಅನುಭವಿಸುತ್ತಾರೆ. ಆದರೂ, ಅವರೆಷ್ಟು ಸಂತೋಷಿತರಾಗಿದ್ದಾರೆ, ಮತ್ತು ಅವರ ನಂಬಿಗಸ್ತ ಸೇವೆಯನ್ನು ನಾವೆಷ್ಟು ಗಣ್ಯಮಾಡುತ್ತೇವೆ! ಯೆಹೋವನು ಭೂಮಿಯ ಕಡೆಗೆ ಸರ್ವಾಧಿಕಾರವನ್ನು ವಹಿಸಿಕೊಂಡಿದ್ದಾನೆಂದು ಮತ್ತು ಯೇಸು ಕ್ರಿಸ್ತನನ್ನು ಒಬ್ಬ ಶಕ್ತಿಶಾಲಿ ಸ್ವರ್ಗೀಯ ಅರಸನೋಪಾದಿ ಆತನು ಪ್ರತಿಷ್ಠಾಪಿಸಿದ್ದಾನೆಂದು ಅವರಿಗೆ ಗೊತ್ತಿರುವುದರಿಂದ, ಅವರು “ಯೆಹೋವನ ಆನಂದ”ವನ್ನು ಅನುಭವಿಸಿದ್ದಾರೆ. (ನೆಹೆಮೀಯ 8:10) “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ” ಎಂಬ ಪ್ರೋತ್ಸಾಹನೆಗೆ ಆಬಾಲವೃದ್ಧರು ಕಿವಿಗೊಡುವ ಸಮಯವು ಇದೇ ಆಗಿದೆ.—ಕೀರ್ತನೆ 148:12, 13.
8, 9. (ಎ) ಯಾರಿಗೆ ‘ಕಷ್ಟದ ದಿನಗಳು’ ಪ್ರತಿಫಲದಾಯಕವಾಗಿರುವುದಿಲ್ಲ, ಮತ್ತು ಅದಕ್ಕಿರುವ ಕಾರಣವೇನು? (ಬಿ) ಪ್ರಸಂಗಿ 12:2ನ್ನು ನೀವು ಹೇಗೆ ವಿವರಿಸುವಿರಿ?
8 ತಮ್ಮ ಮಹಾನ್ ಸೃಷ್ಟಿಕರ್ತನ ಕುರಿತು ಧ್ಯಾನಿಸದೆ, ಆತನ ಮಹಿಮಾಭರಿತ ಉದ್ದೇಶಗಳ ಬಗ್ಗೆ ಯಾವ ಅರಿವನ್ನೂ ಪಡೆದುಕೊಳ್ಳದೆ ಇರುವ ವೃದ್ಧರ ‘ಕಷ್ಟದ ದಿನಗಳು’ ಪ್ರತಿಫಲದಾಯಕವಾಗಿರುವುದಿಲ್ಲ; ಬದಲಿಗೆ ಅವು ಬಹಳ ಸಂಕಟಕರವಾಗಿರಬಹುದು. ಸೈತಾನನು ಸ್ವರ್ಗದಿಂದ ದೊಬ್ಬಲ್ಪಟ್ಟ ಸಮಯದಂದಿನಿಂದಲೂ, ಮಾನವಕುಲವನ್ನು ಬಾಧಿಸಿರುವ ವಿಪತ್ತುಗಳನ್ನು ಮತ್ತು ವೃದ್ಧಾಪ್ಯದ ಸಂಕಷ್ಟಗಳನ್ನು ಸರಿದೂಗಿಸಬಲ್ಲ ಆತ್ಮಿಕ ಗ್ರಹಿಕೆಯು ಅವರಲ್ಲಿರುವುದಿಲ್ಲ. (ಪ್ರಕಟನೆ 12:7-12) ಆದುದರಿಂದ, “ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಮೊಬ್ಬಾಗುವ . . . ಮಳೆಯಾದ ಮೇಲೆಯೂ ಮೋಡಗಳು ಮತ್ತೆ ಬರುವ” ಮುಂಚೆ, ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವಂತೆ ನಮ್ಮನ್ನು ಪ್ರಸಂಗಿಯು ಪ್ರೇರೇಪಿಸುತ್ತಾನೆ. (ಪ್ರಸಂಗಿ 12:2) ಈ ಮೇಲಿನ ಮಾತುಗಳ ಅರ್ಥವೇನಾಗಿದೆ?
9 ಸೊಲೊಮೋನನು ಯೌವನಕಾಲವನ್ನು ಪ್ಯಾಲೆಸ್ಟೀನ್ನ ಬೇಸಗೆಕಾಲಕ್ಕೆ ಹೋಲಿಸುತ್ತಾನೆ. ಆ ಸಮಯದಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು, ಒಂದು ಮೋಡರಹಿತ ಆಕಾಶದಿಂದ ತಮ್ಮ ಬೆಳಕನ್ನು ಚೆಲ್ಲುತ್ತವೆ. ಆಗ ಎಲ್ಲೆಡೆಯೂ ಇರುವ ವಸ್ತುಗಳು ಪ್ರಕಾಶಮಾನವಾಗಿ ಕಾಣುತ್ತವೆ. ಆದರೆ ವೃದ್ಧಾಪ್ಯದಲ್ಲಾದರೊ, ಒಬ್ಬ ವ್ಯಕ್ತಿಯ ದಿನಗಳು, ಮೇಲಿಂದ ಮೇಲೆ ಸಂಕಷ್ಟದ ಸುರಿಮಳೆಗಳನ್ನು ಅನುಭವಿಸುವ ತಣ್ಣನೆಯ ಮಳೆಗಾಲದಂತಿರುವವು. (ಯೋಬ 14:1) ಸೃಷ್ಟಿಕರ್ತನ ಕುರಿತಾದ ಅರಿವನ್ನು ಪಡೆದ ಮೇಲೂ, ಜೀವಿತದ ಬೇಸಗೆಕಾಲದಲ್ಲಿ ಆತನ ಸೇವೆಮಾಡಲು ತಪ್ಪಿಹೋಗುವುದು ಎಷ್ಟೊಂದು ವಿಷಾದಕರವಾಗಿರಬಲ್ಲದು! ಯಾರು ತಮ್ಮ ಯೌವನವನ್ನು ವ್ಯರ್ಥವಾದ ಬೆನ್ನಟ್ಟುವಿಕೆಗಳಲ್ಲಿ ವಿನಿಯೋಗಿಸಿ, ಯೆಹೋವನನ್ನು ಸೇವಿಸಲಿಕ್ಕಾಗಿರುವ ಅವಕಾಶಗಳನ್ನು ಕಡೆಗಣಿಸಿರುತ್ತಾರೊ ಅಂತಹವರಿಗೆ, ಜೀವಿತದ ಚಳಿಗಾಲವೆಂಬಂತಿರುವ ವೃದ್ಧಾಪ್ಯದಲ್ಲಿ ತಮ್ಮ ಸುತ್ತಲಿರುವ ಎಲ್ಲವೂ ಮೊಬ್ಬು ಮೊಬ್ಬಾಗಿ ಕಾಣುತ್ತದೆ. ನಮ್ಮ ವಯಸ್ಸು ಎಷ್ಟೇ ಆಗಿರಲಿ, ನಾವು ಪ್ರವಾದಿಯಾದ ಮೋಶೆಯ ನಿಷ್ಠಾವಂತ ಸಂಗಾತಿಯಾಗಿದ್ದ ನಂಬಿಗಸ್ತ ಕಾಲೇಬನಂತೆ ‘ಯೆಹೋವನನ್ನು ಸಂಪೂರ್ಣವಾಗಿ ಅನುಸರಿಸೋಣ.’—ಯೆಹೋಶುವ 14:6-9.
ವೃದ್ಧಾಪ್ಯದ ಪರಿಣಾಮಗಳು
10. (ಎ) “ಮನೆಗಾವಲಿನವರು” (ಬಿ) “ಬಲಿಷ್ಠರು” ಎಂಬ ಪದಗಳು ಏನನ್ನು ಪ್ರತಿನಿಧಿಸುತ್ತವೆ?
10 ತದನಂತರ ಸೊಲೊಮೋನನು ಕಷ್ಟತೊಂದರೆಗಳಿಗೆ ಸೂಚಿಸುತ್ತಾ ಹೇಳುವುದು: “ಅದೇ ಕಾಲದಲ್ಲಿ ಮನೆಗಾವಲಿನವರು ನಡುಗುವರು, ಬಲಿಷ್ಠರು ಬೊಗ್ಗುವರು, ಅರೆಯುವವರು ಕೊಂಚವಾದದರಿಂದ ಕೆಲಸವನ್ನು ನಿಲ್ಲಿಸಿಬಿಡುವರು, ಕಿಟಕಿಗಳಿಂದ ನೋಡುವವರು ಮಂಕಾಗುವರು.” (ಪ್ರಸಂಗಿ 12:3) ‘ಮನೆಯು’ ಮಾನವ ದೇಹವನ್ನು ಸೂಚಿಸುತ್ತದೆ. (ಮತ್ತಾಯ 12:43-45; 2 ಕೊರಿಂಥ 5:1-8) ‘ಕಾವಲುಗಾರ’ರಂತಿರುವ ಅದರ ಕೈಗಳು, ದೇಹವನ್ನು ರಕ್ಷಿಸಿ, ಅದಕ್ಕೆ ಬೇಕಾದುದನ್ನು ಒದಗಿಸುತ್ತವೆ. ವೃದ್ಧಾಪ್ಯದಲ್ಲಿ ಅವು ಅನೇಕ ವೇಳೆ ಬಲಹೀನತೆ, ದುರ್ಬಲ ನರಗಳು, ಮತ್ತು ಪಾರ್ಶ್ವವಾಯುವಿನ ಕಾರಣ ನಡುಗುತ್ತವೆ. “ಬಲಿಷ್ಠರು” ಅಂದರೆ ಕಾಲುಗಳು, ಇನ್ನು ಮುಂದೆ ಗಟ್ಟಿಮುಟ್ಟಾದ ಕಂಬಗಳಾಗಿರದೆ, ಬಲಹೀನಗೊಂಡು ಬಗ್ಗಿಹೋಗಿರುವುದರಿಂದ, ಅವು ಕಷ್ಟಪಟ್ಟು ಮುಂದಕ್ಕೆ ಚಲಿಸುತ್ತವೆ. ಆದರೂ, ವೃದ್ಧರಾಗಿರುವ ಜೊತೆ ವಿಶ್ವಾಸಿಗಳನ್ನು ಕ್ರೈಸ್ತ ಕೂಟಗಳಲ್ಲಿ ನೋಡಿ ನೀವು ಸಂತೋಷಿಸುವುದಿಲ್ಲವೊ?
11. ಸಾಂಕೇತಿಕವಾಗಿ ಹೇಳುವುದಾದರೆ, ಈ “ಅರೆಯುವವರು” ಮತ್ತು “ಕಿಟಕಿಗಳಿಂದ ನೋಡುವವರು” ಯಾರಾಗಿದ್ದಾರೆ?
11 “ಅರೆಯುವವರು ಕೊಂಚವಾದದರಿಂದ ಕೆಲಸವನ್ನು ನಿಲ್ಲಿಸಿಬಿಡುವರು.” ಅದು ಹೇಗೆ? ಹಲ್ಲುಗಳು ಸವೆದುಹೋಗಿರುವ ಕಾರಣ ಇಲ್ಲವೆ ಬಿದ್ದುಹೋಗಿರುವ ಕಾರಣ, ವೃದ್ಧಾಪ್ಯದಲ್ಲಿ ಅವುಗಳಲ್ಲಿ ಕೆಲವೇ ಉಳಿದಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಗಟ್ಟಿಯಾದ ಆಹಾರವನ್ನು ಅರೆಯುವುದು ಕಷ್ಟವಾಗಿರುವುದು ಇಲ್ಲವೆ ಅಸಾಧ್ಯವಾಗಿರುವುದು. “ಕಿಟಕಿಗಳಿಂದ ನೋಡುವವರು ಮಂಕಾಗುವರು” ಅಂದರೆ, ಕಣ್ಣುಗಳ ಜೊತೆಗೆ ಅವರ ಮನೋಸಾಮರ್ಥ್ಯವು ಸಂಪೂರ್ಣವಾಗಿ ನಶಿಸಿಹೋಗಿರದಿದ್ದರೂ, ಬಹಳಷ್ಟು ಮಂಜಾಗಿರುವುದು.
12. (ಎ) ಯಾವ ವಿಧದಲ್ಲಿ “ಬೀದಿಯ ಬಾಗಿಲುಗಳು ಮುಚ್ಚಿ”ಕೊಂಡಿವೆ? (ಬಿ) ವೃದ್ಧರಾಗಿರುವ ರಾಜ್ಯ ಘೋಷಕರ ಕುರಿತು ನೀವು ಏನು ನೆನಸುತ್ತೀರಿ?
12 ಪ್ರಸಂಗಿಯು ಮುಂದುವರಿಸುತ್ತಾ ಹೇಳುವುದು: “ಬೀದಿಯ ಬಾಗಿಲುಗಳು ಮುಚ್ಚಿರುವವು; ಅರೆಯುವ ಸ್ಥಳದ ಶಬ್ದವು ತಗ್ಗಿ ಹಕ್ಕಿಯ ಧ್ವನಿಯಷ್ಟು ಕೀರ್ಲಾಗುವದು; ಗಾಯಕಿಯರೆಲ್ಲಾ ಕುಗ್ಗುವರು.” (ಪ್ರಸಂಗಿ 12:4) ದೇವರನ್ನು ಸೇವಿಸದೆ ಇರುವ ವೃದ್ಧರ “ಮನೆ” ಇಲ್ಲವೆ ದೇಹದಲ್ಲಿ ಏನು ಸಂಭವಿಸುತ್ತಿದೆ ಎಂಬುದನ್ನು ತಿಳಿಯಪಡಿಸಲು, ಅವರ ಬಾಯಿಯ ಎರಡು ಬಾಗಿಲುಗಳಂತಿರುವ ತುಟಿಗಳು, ಇನ್ನು ಮುಂದೆ ಮೊದಲಿನಷ್ಟು ತೆರೆದುಕೊಳ್ಳುವುದಿಲ್ಲ ಅಥವಾ ಸ್ವಲ್ಪವೂ ತೆರೆದುಕೊಳ್ಳುವುದಿಲ್ಲ. ಆದುದರಿಂದ ಯಾವ ಸಮಾಚಾರವೂ ಸಾರ್ವಜನಿಕ ಜೀವಿತದ ‘ಬೀದಿಗೆ’ ಬರುವುದಿಲ್ಲ. ಆದರೆ ವೃದ್ಧರಾಗಿದ್ದರೂ ಹುರುಪಿನ ರಾಜ್ಯ ಘೋಷಕರಾಗಿರುವವರ ಕುರಿತೇನು? (ಯೋಬ 41:14) ಅವರು ನಿಧಾನವಾಗಿ ಮನೆಯಿಂದ ಮನೆಗೆ ನಡೆದು, ಕಷ್ಟದಿಂದ ಮಾತಾಡಿದರೂ, ಖಂಡಿತವಾಗಿಯೂ ಯೆಹೋವನನ್ನು ಸ್ತುತಿಸುತ್ತಾರೆ!—ಕೀರ್ತನೆ 113:1.
13. ವೃದ್ಧರು ಅನುಭವಿಸುವ ಇತರ ಸಮಸ್ಯೆಗಳನ್ನು ಪ್ರಸಂಗಿಯು ಯಾವ ರೀತಿಯಲ್ಲಿ ವರ್ಣಿಸುತ್ತಾನೆ, ಆದರೆ ವೃದ್ಧ ಕ್ರೈಸ್ತರ ಕುರಿತು ಯಾವ ವಿಷಯವು ಸತ್ಯವಾಗಿದೆ?
13 ಹಲ್ಲುಗಳಿಲ್ಲದ ಒಸಡುಗಳಿಂದ ಆಹಾರವನ್ನು ಅಗಿಯುವುದರಿಂದ, ಅರೆಯುವ ಮಿಲ್ಲಿನ ಶಬ್ದವು ತಗ್ಗಿಹೋಗುತ್ತದೆ. ವೃದ್ಧನೊಬ್ಬನು ತನ್ನ ಮಂಚದ ಮೇಲೆ ಗಾಢವಾಗಿ ನಿದ್ರಿಸುವುದಿಲ್ಲ. ಹಕ್ಕಿಯ ಕೀಚುಧ್ವನಿಯು ಕೂಡ ಅವನ ನಿದ್ದೆಗೆಡಿಸುತ್ತದೆ. ಅವನು ಹಾಡುವ ಹಾಡುಗಳು ಕೊಂಚವೇ, ಮತ್ತು ಅವನು ಹಾಡಿದರೂ ಕ್ಷೀಣವಾದ ಧ್ವನಿಯಲ್ಲಿ ಹಾಡುತ್ತಾನೆ. “ಗಾಯಕಿಯರೆಲ್ಲಾ” ಅಂದರೆ ಹಾಡಿನ ರಾಗಗಳೆಲ್ಲ ‘ಕುಗ್ಗಿ’ಹೋಗಿವೆ. ಸಂಗೀತವನ್ನು ಮತ್ತು ಇತರರು ಹಾಡುವ ಗೀತೆಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯವು ವೃದ್ಧರಲ್ಲಿ ಕಡಿಮೆಯಾಗಿರುತ್ತದೆ. ಹಾಗಿದ್ದರೂ, ವೃದ್ಧರಾಗಿರುವ ಅಭಿಷಿಕ್ತರು ಮತ್ತು ಪ್ರಾಯಸ್ಥರಾಗಿರುವ ಅವರ ಸಂಗಾತಿಗಳಲ್ಲಿ ಕೆಲವರು, ಕ್ರೈಸ್ತ ಕೂಟಗಳಲ್ಲಿ ದೇವರಿಗೆ ಸ್ತುತಿಗೀತೆಗಳನ್ನು ಹಾಡುವುದರಲ್ಲಿ ತಮ್ಮ ಧ್ವನಿಗಳನ್ನೂ ಸೇರಿಸುತ್ತಾರೆ. ಸಭೆಯಲ್ಲಿ ಅವರು ನಮ್ಮೊಂದಿಗೆ ಯೆಹೋವನನ್ನು ಮೆಚ್ಚಿ ಕೊಂಡಾಡುವುದನ್ನು ನೋಡಿ ನಾವೆಷ್ಟು ಆನಂದಿಸುತ್ತೇವೆ!—ಕೀರ್ತನೆ 149:1.
14. ವೃದ್ಧರು ಯಾವ ರೀತಿಯ ಭಯಗಳಿಂದ ಬಾಧಿಸಲ್ಪಡುತ್ತಾರೆ?
14 ಆದರೆ, ಸೃಷ್ಟಿಕರ್ತನನ್ನು ಕಡೆಗಣಿಸಿರುವ ವೃದ್ಧರ ಸ್ಥಿತಿಯು ಎಷ್ಟೊಂದು ವಿಷಾದನೀಯ! ಪ್ರಸಂಗಿಯು ಹೇಳುವುದು: “ಇದಲ್ಲದೆ ಆ ದಿನಗಳಲ್ಲಿ ದಿನ್ನೆಕಂಡರೆ ಭಯ, ದಾರಿಯಲ್ಲಿ ಅಪಾಯ; ಬಾದಾಮಿಯ ಮರವು ಹೂಬಿಡುವದು; ಮಿಡತೆಯು ಕೂಡ ಭಾರವಾಗುವದು; ಆಶೆಯು ಕುಂದುವದು [“ಕೇಪರ್ ಬೆರಿ ಹಣ್ಣು ಒಡೆದುಹೋಗುವದು,” NW], ಮನುಷ್ಯನು ತನ್ನ ನಿತ್ಯಗೃಹಕ್ಕೆ ಹೊರಡುವದಕ್ಕಿದ್ದಾನಲ್ಲಾ; ಗೋಳಾಟದವರು ಬೀದಿಯಲ್ಲಿ ತಿರುಗುವರು.” (ಪ್ರಸಂಗಿ 12:5) ಎತ್ತರವಾದ ಮೆಟ್ಟಿಲುಗಳಿಂದ ತಾವು ಬಿದ್ದುಬಿಡುವೆವೊ ಎಂಬ ಭಯ ಅನೇಕ ವೃದ್ಧರಿಗಿರುತ್ತದೆ. ಎತ್ತರವಾಗಿರುವ ಯಾವುದನ್ನು ನೋಡಿದರೂ ತಮ್ಮ ತಲೆ ಸುತ್ತುವಂತಹ ಅನಿಸಿಕೆ ಅವರಿಗಾಗುತ್ತದೆ. ಅವರು ಜನನಿಬಿಡ ರಸ್ತೆಗಳಲ್ಲಿ ನಡೆದಾಡಬೇಕಾದರೆ, ಹಾನಿಗೊಳಪಡುವ ಇಲ್ಲವೆ ಕಳ್ಳರಿಂದ ಆಕ್ರಮಿಸಲ್ಪಡುವ ಯೋಚನೆಯಿಂದಲೇ ಭಯಭೀತರಾಗುತ್ತಾರೆ.
15. ಯಾವ ರೀತಿಯಲ್ಲಿ “ಬಾದಾಮಿಯ ಮರವು ಹೂಬಿಡುವುದು,” ಮತ್ತು ಯಾವ ರೀತಿಯಲ್ಲಿ ಮಿಡತೆಯು ‘ತನ್ನನ್ನು ಎಳೆದುಕೊಂಡು ನಡೆಯುತ್ತದೆ’?
15 ಒಬ್ಬ ವೃದ್ಧನ ವಿಷಯದಲ್ಲಿ “ಬಾದಾಮಿಯ ಮರವು ಹೂಬಿಡುವದು” ಎಂಬುದು, ಮೊದಲು ಅವನ ಕೂದಲು ನರೆತು, ತದನಂತರ ಹಿಮಶ್ವೇತ ವರ್ಣಕ್ಕೆ ತಿರುಗುವುದನ್ನು ಸೂಚಿಸುತ್ತದೆ. ನರೆತ ಕೂದಲು, ಬಾದಾಮಿ ಮರದ ಬಿಳಿ ಹೂವುಗಳಂತೆ ಉದುರುತ್ತದೆ. ಬಗ್ಗಿರುವ ದೇಹವನ್ನು ಅವನು ಎಳೆದುಕೊಂಡು ಹೋಗುವಾಗ, ಅವನ ಕೈಗಳು ಕೆಳಗೆ ಜೋತುಬಿದ್ದಿರಬಹುದು ಇಲ್ಲವೆ ಸೊಂಟದ ಮೇಲೆ ಇರಬಹುದು. ಈ ಭಂಗಿಯಲ್ಲಿ ಅವನ ಮೊಣಕೈ ಮೇಲ್ಮುಖವಾಗಿ ಇರುವಾಗ, ಅವನೊಂದು ಮಿಡತೆಯನ್ನು ಹೋಲುತ್ತಾನೆ. ನಮ್ಮಲ್ಲಿ ಯಾರಾದರೂ ಆ ರೀತಿಯಲ್ಲಿ ಕಾಣಿಸಿಕೊಂಡರೆ, ನಾವು ಯೆಹೋವನ ಶಕ್ತಿಶಾಲಿ ಹಾಗೂ ವೇಗದಿಂದ ಚಲಿಸುವ ಮಿಡತೆ ಸೇನೆಯ ಭಾಗವಾಗಿದ್ದೇವೆಂಬುದನ್ನು ಇತರರು ತಿಳಿದುಕೊಳ್ಳಲಿ!—ಕಾವಲಿನಬುರುಜು, ಮೇ 1, 1998, ಪುಟಗಳು 8-13ನ್ನು ನೋಡಿರಿ.
16. (ಎ) ‘ಕೇಪರ್ ಬೆರಿಯ ಒಡೆಯುವಿಕೆ’ ಏನನ್ನು ಸೂಚಿಸುತ್ತದೆ? (ಬಿ) ಮನುಷ್ಯನ ‘ನಿತ್ಯಗೃಹವು’ ಯಾವುದಾಗಿದೆ, ಮತ್ತು ಸನ್ನಿಹಿತವಾಗಿರುವ ಮರಣದ ಯಾವ ಸೂಚನೆಗಳು ತೀರ ಸ್ಪಷ್ಟವಾಗಿರುತ್ತವೆ?
16 ಕೇಪರ್ ಬೆರಿಯಷ್ಟೇ ಸ್ವಾದಿಷ್ಟವಾದ ಆಹಾರವನ್ನು ಈ ವೃದ್ಧನ ಮುಂದಿಟ್ಟರೂ ಅವನಿಗೆ ಹಸಿವೆಯೇ ಇಲ್ಲ. ಬಹುಕಾಲದಿಂದಲೂ ಈ ಬೆರಿಗಳು ಹಸಿವನ್ನು ಕೆರಳಿಸುವ ಉದ್ದೇಶದಿಂದ ಬಳಸಲ್ಪಟ್ಟಿವೆ. ‘ಕೇಪರ್ ಬೆರಿ ಹಣ್ಣಿನ ಒಡೆದುಹೋಗುವಿಕೆ’ ಎಂಬುದು, ಒಬ್ಬ ವೃದ್ಧನ ಹಸಿವು ಇಂಗಿಹೋಗುವಾಗ, ಆಹಾರಕ್ಕಾಗಿರುವ ಬಯಕೆಯನ್ನು ಕೆರಳಿಸಲು ಈ ಹಣ್ಣಿನಿಂದಲೂ ಸಾಧ್ಯವಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಅವನು ತನ್ನ “ನಿತ್ಯಗೃಹ”ವನ್ನು, ಅಂದರೆ ಸಮಾಧಿಯನ್ನು ಸಮೀಪಿಸುತ್ತಿರುವುದಾಗಿ ಇವು ಸೂಚಿಸುತ್ತವೆ. ಅವನು ತನ್ನ ಸೃಷ್ಟಿಕರ್ತನನ್ನು ಸ್ಮರಿಸಲು ವಿಫಲನಾಗಿ, ದೇವರು ಅವನನ್ನು ಪುನರುತ್ಥಾನದಲ್ಲಿ ಜ್ಞಾಪಿಸಿಕೊಳ್ಳದಷ್ಟು ದುಷ್ಟ ಮಾರ್ಗಕ್ರಮವನ್ನು ಬೆನ್ನಟ್ಟಿದ್ದರೆ, ಅದೇ ಅವನ ನಿತ್ಯಗೃಹವಾಗಿ ಪರಿಣಮಿಸುವುದು. ಈ ಮುದುಕನ ಬಾಯಿಯ ಬಾಗಿಲುಗಳಿಂದ ಹೊರಬರುವ ಶೋಕಗ್ರಸ್ತ ಧ್ವನಿಗಳು ಮತ್ತು ದೂರುಗಳು, ಸನ್ನಿಹಿತವಾಗಿರುವ ಮರಣದ ಸೂಚನೆಗಳಾಗಿವೆ.
17. ಯಾವ ವಿಧದಲ್ಲಿ “ಬೆಳ್ಳಿಯ ತಂತಿ” ತೆಗೆಯಲ್ಪಡುತ್ತದೆ, ಮತ್ತು “ಚಿನ್ನದ ಬಟ್ಟಲು” ಏನನ್ನು ಪ್ರತಿನಿಧಿಸಬಹುದು?
17 “ಇನ್ನು ಮುಂದೆ ಬೆಳ್ಳಿಯ ತಂತಿ ಕಿತ್ತು ಚಿನ್ನದ ಬಟ್ಟಲು ಜಜ್ಜಿಹೋಗುವದು; ಮಡಿಕೆ ಬುಗ್ಗೆಯ ಹತ್ತಿರ ಒಡೆಯುವದು; ಬಾವಿಯ ರಾಟೆ ಮುರಿಯುವದು.” (ಪ್ರಸಂಗಿ 12:6) ಹೀಗಾಗುವ ಮುಂಚೆ ನಮ್ಮ ಸೃಷ್ಟಿಕರ್ತನನ್ನು ಜ್ಞಾಪಿಸಿಕೊಳ್ಳುವಂತೆ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ. “ಬೆಳ್ಳಿಯ ತಂತಿ” ನಮ್ಮ ಬೆನ್ನೆಲುಬು ಆಗಿರಬಹುದು. ಮಿದುಳಿಗೆ ಪ್ರಚೋದನೆಗಳನ್ನು ಕೊಡುವ ಈ ಅದ್ಭುತವಾದ ಪಥವು ಸರಿಪಡಿಸಲಾಗದಂತಹ ರೀತಿಯಲ್ಲಿ ನಷ್ಟಗೊಂಡರೆ, ಮರಣವು ಖಂಡಿತ. “ಚಿನ್ನದ ಬಟ್ಟಲು” ಮಿದುಳನ್ನು ಸೂಚಿಸಬಹುದು. ಇದು ಬಟ್ಟಲಿನಂತಹ ತಲೆಬುರುಡೆಯಲ್ಲಿ ಇರುತ್ತದೆ, ಮತ್ತು ಇದಕ್ಕೆ ಬೆನ್ನೆಲುಬು ಜೋಡಿಸಲ್ಪಟ್ಟಿರುತ್ತದೆ. ಚಿನ್ನದಷ್ಟು ಅಮೂಲ್ಯವಾಗಿರುವ ಮಿದುಳು ಕೆಲಸಮಾಡುವುದನ್ನು ನಿಲ್ಲಿಸಿದಾಗ, ಅದು ಮರಣದಲ್ಲಿ ಫಲಿಸುತ್ತದೆ.
18. ‘ಬುಗ್ಗೆಯ ಹತ್ತಿರವಿರುವ’ ಸಾಂಕೇತಿಕ ‘ಮಡಿಕೆಯು’ ಏನಾಗಿದೆ, ಮತ್ತು ಅದು ಒಡೆದುಹೋಗುವಾಗ ಏನು ಸಂಭವಿಸುತ್ತದೆ?
18 ‘ಬುಗ್ಗೆಯ ಹತ್ತಿರವಿರುವ ಮಡಿಕೆಯು’ ಹೃದಯವಾಗಿದೆ. ಅದು ರಕ್ತದ ಪ್ರವಾಹಕ್ಕೆ ಪ್ರವೇಶ ನೀಡಿ, ಪುನಃ ದೇಹದಲ್ಲೆಲ್ಲ ಪರಿಚಲಿಸುವಂತೆ ಮಾಡುತ್ತದೆ. ಮರಣದಲ್ಲಿ ಹೃದಯವು ಒಡೆದ ಮಡಿಕೆಯಂತಾಗುತ್ತದೆ. ಅದು ಬುಗ್ಗೆಯ ಹತ್ತಿರ ನುಚ್ಚುನೂರಾಗುವುದು, ಏಕೆಂದರೆ ದೇಹದ ಪೋಷಣೆ ಹಾಗೂ ಚೈತನ್ಯಕ್ಕಾಗಿ ಆವಶ್ಯಕವಾಗಿರುವ ರಕ್ತವನ್ನು ಇನ್ನು ಮುಂದೆ ಪಡೆದುಕೊಳ್ಳಲು, ಸಂಗ್ರಹಿಸಿಡಲು, ಮತ್ತು ಪಂಪ್ ಮಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ‘ಮುರಿದಿರುವ ಬಾವಿಯ ರಾಟೆಯು’ ತಿರುಗುವುದನ್ನು ನಿಲ್ಲಿಸಿದಾಗ, ಜೀವವನ್ನು ಪೋಷಿಸುವ ರಕ್ತದ ಪರಿಚಲನೆಯು ಕೊನೆಗೊಳ್ಳುತ್ತದೆ. 17ನೆಯ ಶತಮಾನದ ವೈದ್ಯನಾದ ವಿಲಿಯಮ್ ಹಾರ್ವಿಯು ರಕ್ತದ ಪರಿಚಲನೆಯ ಬಗ್ಗೆ ನಿರೂಪಿಸಿ ತೋರಿಸುವ ಬಹಳ ಸಮಯಕ್ಕೆ ಮುಂಚೆಯೇ, ಯೆಹೋವನು ಅದನ್ನು ಸೊಲೊಮೋನನಿಗೆ ಪ್ರಕಟಿಸಿದ್ದನು.
19. ಮರಣದಲ್ಲಿ ಪ್ರಸಂಗಿ 12:7ರ ಮಾತುಗಳು ಹೇಗೆ ಅನ್ವಯಿಸುತ್ತವೆ?
19 ಪ್ರಸಂಗಿಯು ಕೂಡಿಸಿ ಹೇಳುವುದು: “ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು.” (ಪ್ರಸಂಗಿ 12:7) ‘ಬಾವಿಯ ರಾಟೆಯು’ ಮುರಿದುಹೋಗಿರುವುದರಿಂದ, ಮಣ್ಣಿನಿಂದ ಮಾಡಲ್ಪಟ್ಟ ಮಾನವ ದೇಹವು ಪುನಃ ಮಣ್ಣಿಗೇ ಸೇರುತ್ತದೆ. (ಆದಿಕಾಂಡ 2:7; 3:19) ಹೀಗೆ ಆ ಪ್ರಾಣವು ಸಾಯುತ್ತದೆ, ಏಕೆಂದರೆ ದೇವರಿಂದ ನೀಡಲ್ಪಟ್ಟ ಆತ್ಮ ಇಲ್ಲವೆ ಜೀವಶಕ್ತಿಯು ನಮ್ಮ ಸೃಷ್ಟಿಕರ್ತನಲ್ಲಿಗೆ ಹಿಂದಿರುಗಿ ಹೋಗಿ ಆತನ ಬಳಿಯಲ್ಲಿ ವಾಸಿಸುತ್ತದೆ.—ಯೆಹೆಜ್ಕೇಲ 18:4, 20; ಯಾಕೋಬ 2:26.
ಸ್ಮರಿಸಿಕೊಳ್ಳುವವರಿಗೆ ಯಾವ ಭವಿಷ್ಯತ್ತಿದೆ?
20. ಕೀರ್ತನೆ 90:12ರಲ್ಲಿ ದಾಖಲಿಸಲ್ಪಟ್ಟಂತೆ, ಮೋಶೆಯು ತನ್ನ ಪ್ರಾರ್ಥನೆಯಲ್ಲಿ ಏನನ್ನು ವಿನಂತಿಸಿಕೊಳ್ಳುತ್ತಿದ್ದನು?
20 ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಸೊಲೊಮೋನನು ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾನೆ. ಯಾರು ಯೆಹೋವನನ್ನು ಸ್ಮರಿಸಿ ಆತನ ಚಿತ್ತವನ್ನು ಹೃತ್ಪೂರ್ವಕವಾಗಿ ಮಾಡುತ್ತಾರೊ, ಅವರು ಒಂದು ಅಲ್ಪಾಯುಷ್ಯದ ಹಾಗೂ ತೊಂದರೆಭರಿತ ಜೀವನವನ್ನು ಮಾತ್ರ ಅನುಭವಿಸುವುದಿಲ್ಲ. ಅವರು ಯೌವನಸ್ಥರೇ ಆಗಿರಲಿ ವೃದ್ಧರೇ ಆಗಿರಲಿ, ಅವರ ಮನೋಭಾವವು ಮೋಶೆಯ ಮನೋಭಾವದಂತಿದೆ. ಅವನು ಪ್ರಾರ್ಥಿಸಿದ್ದು: “ಜ್ಞಾನದ ಹೃದಯವನ್ನು ನಾವು ಪಡೆದುಕೊಳ್ಳುವಂತಹ ರೀತಿಯಲ್ಲಿ ನಮ್ಮ ದಿನಗಳನ್ನು ಹೇಗೆ ಎಣಿಸುವುದೆಂದು ನಮಗೆ ತೋರಿಸಿಕೊಡು.” (NW) ಯೆಹೋವನು ತನಗೆ ಮತ್ತು ಇಸ್ರಾಯೇಲ್ ಜನಾಂಗಕ್ಕೆ, ತಮ್ಮ ‘ಆಯುಷ್ಕಾಲವನ್ನು’ ಮಹತ್ವದ್ದೆಂದೆಣಿಸುವಂತೆ ಮತ್ತು ಅವುಗಳನ್ನು ದೇವರು ಮೆಚ್ಚುವಂತಹ ರೀತಿಯಲ್ಲಿ ಉಪಯೋಗಿಸುವಂತೆ ತೋರಿಸಿಕೊಡಲು ಇಲ್ಲವೆ ಕಲಿಸಿಕೊಡಲು, ಆ ದೀನ ಪ್ರವಾದಿಯು ಬಹಳವಾಗಿ ಬಯಸಿದನು.—ಕೀರ್ತನೆ 90:10, 12.
21. ಯೆಹೋವನಿಗೆ ಮಹಿಮೆಯನ್ನು ತರುವ ವಿಧದಲ್ಲಿ ನಾವು ನಮ್ಮ ದಿನಗಳನ್ನು ಎಣಿಸಬೇಕಾದರೆ ಏನು ಮಾಡತಕ್ಕದ್ದು?
21 ವಿಶೇಷವಾಗಿ ಕ್ರೈಸ್ತ ಯುವ ಜನರು, ಸೃಷ್ಟಿಕರ್ತನನ್ನು ಸ್ಮರಿಸಬೇಕೆಂಬ ಪ್ರಸಂಗಿಯ ಸಲಹೆಗೆ ಕಿವಿಗೊಡಲು ನಿಶ್ಚಯಿಸಿಕೊಳ್ಳಬೇಕು. ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಲು ಅವರಿಗೆ ಎಂತಹ ಅದ್ಭುತಕರ ಅವಕಾಶಗಳಿವೆ! ನಮ್ಮ ವಯಸ್ಸು ಎಷ್ಟೇ ಆಗಿರಲಿ, ಈ “ಅಂತ್ಯಕಾಲದಲ್ಲಿ” ಯೆಹೋವನಿಗೆ ಮಹಿಮೆ ತರುವಂತಹ ರೀತಿಯಲ್ಲಿ ನಾವು ನಮ್ಮ ದಿನಗಳನ್ನು ಎಣಿಸಲು ಕಲಿತುಕೊಳ್ಳುವುದಾದರೆ, ನಾವು ಸದಾಕಾಲ ಎಣಿಸುತ್ತಾ ಇರಲು ಶಕ್ತರಾಗಿರಬಹುದು. (ದಾನಿಯೇಲ 12:4; ಯೋಹಾನ 17:3) ಹಾಗೆ ಮಾಡಬೇಕಾದರೆ, ನಾವು ನಮ್ಮ ಮಹಾನ್ ಸೃಷ್ಟಿಕರ್ತನನ್ನು ಖಂಡಿತವಾಗಿಯೂ ಸ್ಮರಿಸಿಕೊಳ್ಳಬೇಕು. ಮತ್ತು ದೇವರ ಕಡೆಗೆ ನಮಗಿರುವ ಸಂಪೂರ್ಣ ಕರ್ತವ್ಯವನ್ನೂ ನಾವು ಪೂರೈಸಬೇಕು.
ನೀವು ಹೇಗೆ ಉತ್ತರಿಸುವಿರಿ?
◻ ಯುವ ಜನರು ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವಂತೆ ಏಕೆ ಪ್ರೇರೇಪಿಸಲ್ಪಡುತ್ತಾರೆ?
◻ ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡವರ ಕೆಲವು ಶಾಸ್ತ್ರೀಯ ಉದಾಹರಣೆಗಳಾವುವು?
◻ ಸೊಲೊಮೋನನಿಂದ ವರ್ಣಿಸಲ್ಪಟ್ಟಂತೆ, ವೃದ್ಧಾಪ್ಯದ ಕೆಲವು ಪರಿಣಾಮಗಳಾವುವು?
◻ ಯೆಹೋವನನ್ನು ಸ್ಮರಿಸಿಕೊಳ್ಳುವವರಿಗೆ ಯಾವ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ?
[ಪುಟ 15 ರಲ್ಲಿರುವ ಚಿತ್ರಗಳು]
ದಾವೀದ, ಬಂದಿಯಾಗಿದ್ದ ಇಸ್ರಾಯೇಲ್ಯ ಹುಡುಗಿ, ಅನ್ನ, ಮತ್ತು ಸಿಮೆಯೋನರು ಯೆಹೋವನನ್ನು ಸ್ಮರಿಸಿಕೊಂಡರು
[ಪುಟ 16 ರಲ್ಲಿರುವ ಚಿತ್ರಗಳು]
ಯೆಹೋವನ ವೃದ್ಧ ಸಾಕ್ಷಿಗಳು, ಆನಂದದಿಂದ ನಮ್ಮ ಮಹಾನ್ ಸೃಷ್ಟಿಕರ್ತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ