“ಪ್ರತಿಯೊಂದಕ್ಕೂ ನಿಯುಕ್ತವಾದ ಸಮಯವೊಂದಿದೆ”
“ಪ್ರತಿಯೊಂದಕ್ಕೂ ನಿಯುಕ್ತವಾದ ಸಮಯವೊಂದಿದೆ, ಅಂದರೆ, ಆಕಾಶದ ಕೆಳಗಿನ ಪ್ರತಿಯೊಂದು ಕಾರ್ಯಕ್ಕೆ ಸಮಯವೊಂದಿದೆ.”—ಪ್ರಸಂಗಿ 3:1, NW.
1. ಅಪೂರ್ಣ ಮಾನವರು ಯಾವ ಕಷ್ಟವನ್ನು ಎದುರಿಸುತ್ತಾರೆ, ಮತ್ತು ಕೆಲವು ಸಂದರ್ಭಗಳಲ್ಲಿ ಇದು ಯಾವುದಕ್ಕೆ ಮುನ್ನಡಿಸಿದೆ?
“ನಾನು ಈ ಕೆಲಸವನ್ನು ಸ್ವಲ್ಪ ಮುಂಚೆಯೇ ಮಾಡಬೇಕಿತ್ತು” ಎಂದು ಜನರು ಅನೇಕಬಾರಿ ಹೇಳುತ್ತಾರೆ. ಅಥವಾ ಒಂದು ಘಟನೆಯು ಸಂಭವಿಸಿದ ತರುವಾಯ, “ನಾನು ಅದಕ್ಕೋಸ್ಕರ ಕಾಯಬೇಕಿತ್ತು” ಎಂದು ಹೇಳುತ್ತಾರೆ. ಇಂತಹ ಪ್ರತಿಕ್ರಿಯೆಗಳು, ಕೆಲವೊಂದು ಕೆಲಸಗಳನ್ನು ಮಾಡಲು ಯೋಗ್ಯವಾದ ಸಮಯವನ್ನು ಗೊತ್ತುಪಡಿಸುವುದರಲ್ಲಿ ಅಪೂರ್ಣ ಮಾನವರು ಎದುರಿಸುವ ಕಷ್ಟವನ್ನು ವ್ಯಕ್ತಪಡಿಸುತ್ತವೆ. ಈ ಇತಿಮಿತಿಯು, ಮಾನವ ಸಂಬಂಧಗಳನ್ನು ಹಾಳುಮಾಡಿದೆ. ಇದು ನಿರಾಶೆ ಮತ್ತು ಆಶಾಭಂಗಕ್ಕೆ ನಡಿಸಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಇದು ಯೆಹೋವನಲ್ಲಿ ಹಾಗೂ ಆತನ ಸಂಸ್ಥೆಯಲ್ಲಿ ಕೆಲವು ಜನರಿಗಿದ್ದ ನಂಬಿಕೆಯನ್ನು ದುರ್ಬಲಗೊಳಿಸಿದೆ.
2, 3. (ಎ) ನಿಯುಕ್ತ ಸಮಯಗಳ ಕುರಿತಾದ ಯೆಹೋವನ ನಿರ್ಧಾರವನ್ನು ನಾವು ಅಂಗೀಕರಿಸುವುದು ಏಕೆ ವಿವೇಕಪ್ರದವಾಗಿದೆ? (ಬಿ) ಬೈಬಲ್ ಪ್ರವಾದನೆಯ ನೆರವೇರಿಕೆಯ ಕುರಿತು ನಮಗೆ ಯಾವ ಸಮತೂಕ ನೋಟವು ಇರತಕ್ಕದ್ದು?
2 ಮಾನವರಿಗೆ ಇಲ್ಲದಿರುವಂತಹ ವಿವೇಕ ಹಾಗೂ ಒಳನೋಟಗಳನ್ನು ಹೊಂದಿರುವ ಯೆಹೋವನು, ಒಂದುವೇಳೆ ಇಷ್ಟಪಡುವುದಾದರೆ, ಪ್ರತಿಯೊಂದು ಕೃತ್ಯದ ಪರಿಣಾಮವನ್ನು ಮುಂದಾಗಿಯೇ ತಿಳಿದುಕೊಳ್ಳುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆತನು “ಆರಂಭದಲ್ಲಿಯೇ ಅಂತ್ಯವನ್ನು” ತಿಳಿದುಕೊಳ್ಳಬಲ್ಲನು. (ಯೆಶಾಯ 46:10) ಆದುದರಿಂದ, ತಾನು ಮಾಡಲು ಬಯಸುವ ಯಾವುದೇ ಕೆಲಸವನ್ನು ಮಾಡಲಿಕ್ಕಾಗಿ ಆತನು ಖಂಡಿತವಾಗಿಯೂ ಅತ್ಯಂತ ಉಪಯುಕ್ತಕರವಾದ ಸಮಯವನ್ನು ಆರಿಸಿಕೊಳ್ಳಬಲ್ಲನು. ಹೀಗಿರುವುದರಿಂದ, ಸಮಯದ ಕುರಿತಾದ ನಮ್ಮ ಸ್ವಂತ ತಪ್ಪು ಪರಿಜ್ಞಾನದ ಮೇಲೆ ಭರವಸೆಯಿಡುವುದಕ್ಕೆ ಬದಲಾಗಿ, ನಿಯುಕ್ತವಾದ ಸಮಯಗಳ ಕುರಿತಾದ ಯೆಹೋವನ ನಿರ್ಧಾರವನ್ನು ನಾವು ಅಂಗೀಕರಿಸುವುದು ವಿವೇಕಪ್ರದ.
3 ಉದಾಹರಣೆಗೆ, ಪ್ರೌಢ ಕ್ರೈಸ್ತರು, ಕೆಲವೊಂದು ಬೈಬಲ್ ಪ್ರವಾದನೆಗಳು ನೆರವೇರಿಸಲ್ಪಡುವಂತೆ ಯೆಹೋವನ ನೇಮಿತ ಸಮಯಕ್ಕಾಗಿ ನಿಷ್ಠೆಯಿಂದ ಕಾಯುತ್ತಾರೆ. ಪ್ರಲಾಪಗಳು 3:26ರಲ್ಲಿರುವ “ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವದು ಒಳ್ಳೇದು” ಎಂಬ ಮೂಲತತ್ವವನ್ನು ಯಾವಾಗಲೂ ಸ್ಪಷ್ಟವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದು, ಆತನ ಸೇವೆಯಲ್ಲಿ ಅವರು ಕಾರ್ಯಮಗ್ನರಾಗಿರುತ್ತಾರೆ. (ಹಬಕ್ಕೂಕ 3:16ನ್ನು ಹೋಲಿಸಿರಿ.) ಅದೇ ಸಮಯದಲ್ಲಿ, ಯೆಹೋವನು ಪ್ರಕಟಿಸಿರುವ ನ್ಯಾಯತೀರ್ಪಿನ ಸಮಯವು “ತಡವಾದರೂ . . . ಬಂದೇ ಬರುವದು, ತಾಮಸವಾಗದು” ಎಂಬುದನ್ನು ಅವರು ಮನಗಂಡಿದ್ದಾರೆ.—ಹಬಕ್ಕೂಕ 2:3.
4. ನಾವು ತಾಳ್ಮೆಯಿಂದ ಯೆಹೋವನ ಮೇಲೆ ಆತುಕೊಳ್ಳುವಂತೆ ಆಮೋಸ 3:7 ಮತ್ತು ಮತ್ತಾಯ 24:45ನೆಯ ವಚನಗಳು ನಮಗೆ ಹೇಗೆ ಸಹಾಯ ಮಾಡತಕ್ಕದ್ದು?
4 ಇನ್ನೊಂದು ಕಡೆಯಲ್ಲಿ, ವಾಚ್ ಟವರ್ ಪ್ರಕಾಶನಗಳಲ್ಲಿ ಕೊಡಲ್ಪಟ್ಟಿರುವ ಕೆಲವೊಂದು ಬೈಬಲ್ ವಚನಗಳನ್ನು ಅಥವಾ ವಿವರಣೆಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುವಲ್ಲಿ, ಅಸಹನೆಯಿಂದ ವರ್ತಿಸಲು ನಮಗೆ ಯಾವುದಾದರೂ ಕಾರಣವಿದೆಯೊ? ಅಂತಹ ವಿಷಯಗಳನ್ನು ಸ್ಪಷ್ಟಗೊಳಿಸಲಿಕ್ಕಾಗಿರುವ ಯೆಹೋವನ ನೇಮಿತ ಸಮಯಕ್ಕಾಗಿ ಎದುರುನೋಡುವುದೇ ವಿವೇಕದ ಮಾರ್ಗವಾಗಿದೆ. “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಎಂತಹ ಅದ್ಭುತಕರ ವಾಗ್ದಾನ! ಆದರೆ ತನಗೆ ಸೂಕ್ತವಾಗಿ ತೋರುವ ಸಮಯದಲ್ಲೇ ಯೆಹೋವನು ತನ್ನ ಗುಪ್ತ ವಿಷಯಗಳನ್ನು ಬಹಿರಂಗಪಡಿಸುತ್ತಾನೆಂಬುದನ್ನು ನಾವು ಗ್ರಹಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ, ತನ್ನ ಜನರಿಗೆ “ಹೊತ್ತುಹೊತ್ತಿಗೆ [ಆತ್ಮಿಕ] ಆಹಾರ”ವನ್ನು ಕೊಡಲಿಕ್ಕಾಗಿ ದೇವರು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ಅಧಿಕಾರ ಕೊಟ್ಟಿದ್ದಾನೆ. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 24:45) ಆದುದರಿಂದ, ಕೆಲವೊಂದು ವಿಷಯಗಳು ಸಂಪೂರ್ಣವಾಗಿ ವಿವರಿಸಲ್ಪಟ್ಟಿಲ್ಲವೆಂದು ತೀರ ಚಿಂತಿತರಾಗಲು ಅಥವಾ ಕೋಪದಿಂದ ಉದ್ರೇಕಗೊಳ್ಳಲು ಸಹ ನಮಗೆ ಯಾವುದೇ ಕಾರಣವಿಲ್ಲ. ಅದಕ್ಕೆ ಬದಲಾಗಿ, ನಾವು ತಾಳ್ಮೆಯಿಂದ ಯೆಹೋವನ ಮೇಲೆ ಆತುಕೊಳ್ಳುವುದಾದರೆ, “ಹೊತ್ತುಹೊತ್ತಿಗೆ” ಅಗತ್ಯವಿರುವ ವಿಚಾರಗಳನ್ನು ಆತನು ನಂಬಿಗಸ್ತ ಆಳಿನ ಮೂಲಕ ನಮಗೆ ಒದಗಿಸುವನು ಎಂಬ ದೃಢವಿಶ್ವಾಸ ನಮಗಿರಸಾಧ್ಯವಿದೆ.
5. ಪ್ರಸಂಗಿ 3:1-8ನೆಯ ವಚನಗಳನ್ನು ಪರಿಗಣಿಸುವುದರಿಂದ ಯಾವ ಪ್ರಯೋಜನವಿದೆ?
5 ಜ್ಞಾನಿಯಾದ ಸೊಲೊಮೋನನು 28 ಬೇರೆ ಬೇರೆ ವಿಚಾರಗಳ ಬಗ್ಗೆ ಮಾತಾಡಿದನು, ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ “ನಿಯುಕ್ತವಾದ ಸಮಯವೊಂದಿದೆ.” (ಪ್ರಸಂಗಿ 3:1-8) ಸೊಲೊಮೋನನು ಏನು ಹೇಳಿದನೋ ಅದರ ಅರ್ಥವನ್ನು ಹಾಗೂ ಅದು ಸೂಚಿಸುವ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು, ದೇವರ ದೃಷ್ಟಿಕೋನಕ್ಕನುಸಾರ ಕೆಲವೊಂದು ಕೃತ್ಯಗಳನ್ನು ಮಾಡಲು ಯಾವುದು ಸರಿಯಾದ ಸಮಯವಾಗಿದೆ ಮತ್ತು ಯಾವುದು ಅನುಚಿತವಾದ ಸಮಯವಾಗಿದೆ ಎಂಬುದನ್ನು ನಿರ್ಧರಿಸಲು ನಮಗೆ ಸಹಾಯ ಮಾಡುವುದು. (ಇಬ್ರಿಯ 5:14) ಇದು, ನಾವು ನಮ್ಮ ಜೀವಿತಗಳನ್ನು ಅದಕ್ಕನುಸಾರ ಹೊಂದಿಸಿಕೊಳ್ಳುವಂತೆ ಅನುಮತಿಸುವುದು.
“ಅಳಲು ಒಂದು ಸಮಯ, ನಗಲು ಒಂದು ಸಮಯ”
6, 7. (ಎ) ಇಂದು ಚಿಂತಿತ ಜನರನ್ನು ಯಾವುದು “ಅಳು”ವಂತೆ ಮಾಡುತ್ತದೆ? (ಬಿ) ಇಂದು ಲೋಕವು ತನ್ನನ್ನು ಗಂಭೀರ ಪರಿಸ್ಥಿತಿಯಲ್ಲಿ ಕಂಡುಕೊಳ್ಳುತ್ತಿರುವಾಗ, ಇದನ್ನು ಪ್ರತಿರೋಧಿಸಲಿಕ್ಕಾಗಿ ಅದು ಯಾವ ಪ್ರಯತ್ನಗಳನ್ನು ಮಾಡುತ್ತಿದೆ?
6 “ಅಳಲು ಒಂದು ಸಮಯ, ನಗಲು ಒಂದು ಸಮಯ” ಇರುವುದಾದರೂ, ಅಳುವುದಕ್ಕಿಂತಲೂ ಹೆಚ್ಚು ನಗುವುದನ್ನು ಯಾರು ತಾನೇ ಇಷ್ಟಪಡುವುದಿಲ್ಲ? (ಪ್ರಸಂಗಿ 3:4, NW) ಆದರೆ, ಬಹುತೇಕ ಅಳುವ ಕಾರಣಗಳನ್ನೇ ಕೊಡುವಂತಹ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಹೇಳಲು ನಾವು ವಿಷಾದಿಸುತ್ತೇವೆ. ವಾರ್ತಾಮಾಧ್ಯಮಗಳಲ್ಲಿ ಹೆಚ್ಚಾಗಿ ನಿರಾಶಾದಾಯಕ ಸುದ್ದಿಯೇ ಕೇಳಿಬರುತ್ತದೆ. ಶಾಲೆಯಲ್ಲಿ ಯುವ ಜನರು ತಮ್ಮ ಜೊತೆ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲುವುದು, ಹೆತ್ತವರು ಮಕ್ಕಳ ಮೇಲೆ ದೌರ್ಜನ್ಯವೆಸಗುವುದು, ಭಯೋತ್ಪಾದಕರು ಅಮಾಯಕರನ್ನು ಕೊಲ್ಲುವುದು ಅಥವಾ ಅಂಗಹೀನಮಾಡುವುದು, ಹಾಗೂ ನೈಸರ್ಗಿಕ ವಿಪತ್ತುಗಳು ಮಾನವರನ್ನು ಹಾಗೂ ಸೊತ್ತುಗಳನ್ನು ಸಂಪೂರ್ಣವಾಗಿ ಧ್ವಂಸಮಾಡುವುದರ ಬಗ್ಗೆ ಕೇಳಿಸಿಕೊಳ್ಳುವಾಗ ನಾವು ಭಯದಿಂದ ತತ್ತರಿಸುತ್ತೇವೆ. ಟೆಲಿವಿಷನ್ ಪರದೆಯ ಮೇಲೆ, ಹೊಟ್ಟೆಗಿಲ್ಲದೆ ಸಾಯುತ್ತಿರುವ, ಕಣ್ಣುಗಳು ಗುಳಿಬಿದ್ದಿರುವ ಮಕ್ಕಳು ಹಾಗೂ ಪಲಾಯನಗೈಯುತ್ತಿರುವ ನಿರಾಶ್ರಿತರ ಚಿತ್ರಣಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಈ ಮುಂಚೆ ಅಪರಿಚಿತವಾಗಿದ್ದ ಕುಲಸಂಬಂಧಿತ ಹತ್ಯೆ, ಏಡ್ಸ್, ರೋಗಾಣು ಯುದ್ಧ, ಮತ್ತು ಎಲ್ ನೀನ್ಯೋ ಎಂಬ ಶಬ್ದಗಳು, ತಮ್ಮದೇ ಆದ ರೀತಿಯಲ್ಲಿ ಇಂದು ನಮ್ಮ ಹೃದಮನಗಳಲ್ಲಿ ಚಿಂತೆಯನ್ನು ಉಂಟುಮಾಡುತ್ತಿವೆ.
7 ಇಂದಿನ ಲೋಕವು ದುರಂತ ಹಾಗೂ ಮನೋವೇದನೆಯಿಂದ ತುಂಬಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ ಸನ್ನಿವೇಶದ ಗಂಭೀರತೆಯನ್ನು ತಗ್ಗಿಸಲೋ ಎಂಬಂತೆ, ಮನೋರಂಜನೆಯ ಉದ್ಯಮವು ನಿಯತಕ್ರಮವಾಗಿ ಯಾವುದೇ ಸಾರವಿಲ್ಲದ, ಅಸಭ್ಯವಾದ, ಅನೇಕ ವೇಳೆ ಅನೈತಿಕವಾದ ಹಾಗೂ ಹಿಂಸಾತ್ಮಕವಾದ ವಿಚಾರಗಳನ್ನು ಪ್ರಸ್ತುತಪಡಿಸುತ್ತದೆ. ಇವು ಇತರರು ಕಷ್ಟಾನುಭವಿಸುತ್ತಿದ್ದಾರೆ ಎಂಬ ಸಂಕಟಮಯ ವಿಚಾರವನ್ನು ಅಲಕ್ಷಿಸುವಂತೆ ನಮ್ಮನ್ನು ದಾರಿತಪ್ಪಿಸಲಿಕ್ಕಾಗಿ ರಚಿಸಲ್ಪಟ್ಟಿವೆ. ಆದರೆ ಅಂತಹ ಮನೋರಂಜನೆಯು ಉಂಟುಮಾಡುವ ಹಾಸ್ಯಭರಿತವಾದ ನಿರಾತಂಕ ಮನೋಭಾವ ಹಾಗೂ ಹುಡುಗಾಟಿಕೆಯ ನಗುವನ್ನು, ನಿಜವಾದ ಸಂತೋಷವೆಂದು ತಿಳಿಯಬೇಡಿ. ದೇವರಾತ್ಮದ ಫಲವಾಗಿರುವ ಸಂತೋಷವು, ಸೈತಾನನ ಲೋಕವು ಖಂಡಿತವಾಗಿಯೂ ಒದಗಿಸಸಾಧ್ಯವಿಲ್ಲದಂತಹ ಒಂದು ಫಲವಾಗಿದೆ.—ಗಲಾತ್ಯ 5:22, 23; ಎಫೆಸ 5:3, 4.
8. ಇಂದು ಕ್ರೈಸ್ತರು ಮಹತ್ವವನ್ನು ಕೊಡಬೇಕಾದದ್ದು ಅಳುವುದಕ್ಕೊ ಅಥವಾ ನಗುವುದಕ್ಕೊ? ವಿವರಿಸಿರಿ.
8 ಲೋಕದ ಶೋಕಗ್ರಸ್ತ ಸ್ಥಿತಿಯನ್ನು ಅರಿತವರಾಗಿರುವ ನಾವು, ನಗುವಿಗೆ ಹೆಚ್ಚು ಮಹತ್ವವನ್ನು ಕೊಡಲು ಇದು ಸೂಕ್ತವಾದ ಸಮಯವಲ್ಲ ಎಂಬುದನ್ನು ಗ್ರಹಿಸಬಲ್ಲೆವು. ಕೇವಲ ವಿನೋದ ಹಾಗೂ ಮನೋರಂಜನೆಗೋಸ್ಕರ ಮಾತ್ರ ಜೀವಿಸುವುದು ಅಥವಾ ಆತ್ಮಿಕ ವಿಷಯಗಳನ್ನು ಬೆನ್ನಟ್ಟುವುದಕ್ಕೆ ಬದಲಾಗಿ “ತಮಾಷೆ”ಗೆ ಆದ್ಯತೆ ನೀಡುವಂತಹ ಸಮಯವು ಇದಲ್ಲ. (ಪ್ರಸಂಗಿ 7:2-4ನ್ನು ಹೋಲಿಸಿರಿ.) “ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು” ಎಂದು ಅಪೊಸ್ತಲ ಪೌಲನು ಹೇಳಿದನು. ಏಕೆ? ಏಕೆಂದರೆ “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.” (1 ಕೊರಿಂಥ 7:31) ನಿಜ ಕ್ರೈಸ್ತರು ಪ್ರತಿ ದಿನ ತಾವು ಜೀವಿಸುತ್ತಿರುವ ಸಮಯಗಳ ಗಂಭೀರತೆಯ ಅರಿವುಳ್ಳವರಾಗಿದ್ದು ಜೀವಿಸುತ್ತಿದ್ದಾರೆ.—ಫಿಲಿಪ್ಪಿ 4:8.
ಅಳುತ್ತಿರುವುದಾದರೂ ನಿಜವಾಗಿಯೂ ಸಂತೋಷಿತರು!
9. ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ಯಾವ ವಿಷಾದಕರ ಸನ್ನಿವೇಶವು ಅಸ್ತಿತ್ವದಲ್ಲಿತ್ತು, ಮತ್ತು ಅದು ಇಂದು ನಮಗೆ ಯಾವ ಅರ್ಥದಲ್ಲಿದೆ?
9 ಭೌಗೋಲಿಕ ಜಲಪ್ರಳಯದ ಸಮಯದಲ್ಲಿ ಜೀವಿಸಿದ್ದ ಜನರಿಗೆ ಸಹ ಜೀವಿತದ ಬಗ್ಗೆ ಯಾವುದೇ ಗಂಭೀರ ದೃಷ್ಟಿಕೋನವಿರಲಿಲ್ಲ. ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ಮಗ್ನರಾಗಿದ್ದರು, ಮತ್ತು “ಅನ್ಯಾಯವು ಲೋಕವನ್ನು ತುಂಬಿ”ದ್ದುದ್ದನ್ನು ಅಲಕ್ಷ್ಯಭಾವದಿಂದ ನೋಡಿದರು. “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನು” ನೋಡಿ ಅವರು ಅಳಲಿಲ್ಲ. (ಆದಿಕಾಂಡ 6:5, 11) ಯೇಸು ಆ ವಿಷಾದಕರ ಸ್ಥಿತಿಯನ್ನು ಉದಾಹರಣೆಯಾಗಿ ಉಪಯೋಗಿಸುತ್ತಾ, ನಮ್ಮ ದಿನಗಳಲ್ಲಿರುವ ಜನರ ನಡುವೆಯೂ ತದ್ರೀತಿಯ ಮನೋಭಾವವು ಇರುವುದು ಎಂದು ಮುಂತಿಳಿಸಿದನು. ಅವನು ಎಚ್ಚರಿಸಿದ್ದು: “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:38, 39.
10. ಯೆಹೋವನ ನೇಮಿತ ಸಮಯಕ್ಕಾಗಿರುವ ಗಣ್ಯತೆಯು ತಮ್ಮಲ್ಲಿಲ್ಲವೆಂಬುದನ್ನು, ಹಗ್ಗಾಯನ ದಿನಗಳಲ್ಲಿ ಜೀವಿಸುತ್ತಿದ್ದ ಇಸ್ರಾಯೇಲ್ಯರು ಹೇಗೆ ತೋರ್ಪಡಿಸಿದರು?
10 ಪ್ರಳಯವು ಬಂದು ಸುಮಾರು 1,850 ವರ್ಷಗಳು ಕಳೆದ ಬಳಿಕ, ಹಗ್ಗಾಯನ ದಿನಗಳಲ್ಲಿ ಅನೇಕ ಇಸ್ರಾಯೇಲ್ಯರು ಆತ್ಮಿಕ ವಿಷಯಗಳ ಬಗ್ಗೆ ತದ್ರೀತಿಯ ಮನೋಭಾವವನ್ನು ತೋರಿಸಿದರು. ವೈಯಕ್ತಿಕ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲಿ ಕಾರ್ಯಮಗ್ನರಾಗಿದ್ದ ಅವರು, ತಾವು ಜೀವಿಸುತ್ತಿರುವ ಸಮಯವು ಯೆಹೋವನ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಬೇಕಾಗಿರುವಂತಹ ಸಮಯವಾಗಿದೆ ಎಂಬುದನ್ನು ಗ್ರಹಿಸಲು ತಪ್ಪಿಹೋದರು. ನಾವು ಓದುವುದು: “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಯೆಹೋವನ ಆಲಯವನ್ನು ಕಟ್ಟುವದಕ್ಕೆ ಸಮಯವು ಇನ್ನು ಬಂದಿಲ್ಲ ಎಂದು ಈ ಜನರು ಅಂದುಕೊಳ್ಳುತ್ತಾರಲ್ಲಾ. ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿಸಿದನು—ಈ ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ? ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.”—ಹಗ್ಗಾಯ 1:1-5.
11. ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೂಕ್ತವಾದದ್ದಾಗಿದೆ?
11 ಹಗ್ಗಾಯನ ಸಮಯದಲ್ಲಿದ್ದ ಇಸ್ರಾಯೇಲ್ಯರಿಗಿದ್ದಂತೆ, ಯೆಹೋವನ ಸಾಕ್ಷಿಗಳಾಗಿರುವ ನಮಗೆ ಇಂದು ಯೆಹೋವನ ಮುಂದೆ ಜವಾಬ್ದಾರಿಗಳು ಹಾಗೂ ಸುಯೋಗಗಳಿವೆ. ಆದುದರಿಂದ ನಾವು ನಮ್ಮ ಜೀವನ ರೀತಿಯನ್ನು ಗಂಭೀರವಾಗಿ ಪರಿಗಣಿಸುವುದು ಅತ್ಯುತ್ತಮವಾಗಿದೆ. ಲೋಕದ ಪರಿಸ್ಥಿತಿಗಳನ್ನು ಹಾಗೂ ಈ ಪರಿಸ್ಥಿತಿಗಳು ದೇವರ ಹೆಸರಿನ ಮೇಲೆ ತರುತ್ತಿರುವ ಕಳಂಕವನ್ನು ನೋಡಿ ನಾವು “ಅಳು”ತ್ತೇವೊ? ಜನರು ದೇವರ ಅಸ್ತಿತ್ವವನ್ನು ಅಲ್ಲಗಳೆಯುವಾಗ ಅಥವಾ ಆತನ ನೀತಿಯ ಮೂಲತತ್ವಗಳನ್ನು ನಿರ್ಲಜ್ಜೆಯಿಂದ ಅಸಡ್ಡೆಮಾಡುವಾಗ ನಮಗೆ ನೋವಾಗುತ್ತದೋ? ಸುಮಾರು 2,500 ವರ್ಷಗಳ ಹಿಂದೆ ಒಂದು ದರ್ಶನದಲ್ಲಿ ಯೆಹೆಜ್ಕೇಲನು ನೋಡಿದಂತಹ ಗುರುತುಹಾಕಲ್ಪಟ್ಟ ವ್ಯಕ್ತಿಗಳಂತೆ ನಾವು ಪ್ರತಿಕ್ರಿಯಿಸುತ್ತೇವೊ? ಅವರ ಕುರಿತಾಗಿ ನಾವು ಓದುವುದು: “[ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನನ್ನು] ಯೆಹೋವನು ಕೂಗಿ ಅವನಿಗೆ—ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು ಎಂದು ಅಪ್ಪಣೆಕೊಟ್ಟನು.”—ಯೆಹೆಜ್ಕೇಲ 9:4.
12. ಯೆಹೆಜ್ಕೇಲ 9:5, 6ನೆಯ ವಚನವು, ಇಂದು ಜನರಿಗೆ ಯಾವ ಸೂಚಿತಾರ್ಥವನ್ನು ಕೊಡುತ್ತದೆ?
12 ಗದೆಗಳನ್ನು ಹಿಡಿದುಕೊಂಡಿದ್ದ ಆರು ಮಂದಿ ಪುರುಷರಿಗೆ ಕೊಡಲ್ಪಟ್ಟ ಆದೇಶಗಳನ್ನು ನಾವು ಓದುವಾಗ, ಇಂದು ಜೀವಿಸುತ್ತಿರುವ ನಮಗೆ, ಈ ವೃತ್ತಾಂತದ ಸೂಚಿತಾರ್ಥವು ಸುವ್ಯಕ್ತವಾಗುತ್ತದೆ: “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ.” (ಯೆಹೆಜ್ಕೇಲ 9:5, 6) ವೇಗವಾಗಿ ಧಾವಿಸುತ್ತಿರುವ ಆ ಮಹಾ ಸಂಕಟದಿಂದ ನಾವು ಪಾರಾಗಿ ಉಳಿಯುವುದು, ಮುಖ್ಯವಾಗಿ ಇದು ಅಳುವ ಸಮಯವಾಗಿದೆ ಎಂಬುದನ್ನು ಮನಗಾಣುವುದರ ಮೇಲೆ ಅವಲಂಬಿಸಿದೆ.
13, 14. (ಎ) ಎಂತಹ ಜನರು ಸಂತೋಷಿತರು ಎಂದು ಯೇಸು ಹೇಳಿದನು? (ಬಿ) ಈ ವರ್ಣನೆಯು ಯೆಹೋವನ ಸಾಕ್ಷಿಗಳಿಗೆ ಸರಿಯಾಗಿ ಒಪ್ಪುತ್ತದೆ ಎಂದು ನೀವೇಕೆ ಭಾವಿಸುತ್ತೀರಿ ಎಂಬುದನ್ನು ವಿವರಿಸಿರಿ.
13 ಲೋಕದ ವ್ಯವಹಾರಗಳ ಅವನತಿಯನ್ನು ನೋಡಿ ಯೆಹೋವನ ಸಾಕ್ಷಿಗಳು “ಅಳು”ತ್ತಾರೆ ಎಂಬ ವಾಸ್ತವಾಂಶವು, ಅವರನ್ನು ಸಂತೋಷವಾಗಿರುವುದರಿಂದ ತಡೆಯುತ್ತದೆ ಎಂಬರ್ಥವನ್ನು ಕೊಡುವುದಿಲ್ಲ. ಅವರ ಸನ್ನಿವೇಶವು ಇದಕ್ಕೆ ತದ್ವಿರುದ್ಧವಾಗಿದೆ! ನಿಜವಾಗಿಯೂ ಇಡೀ ಭೂಮಿಯಲ್ಲೇ ಇವರು ಅತ್ಯಂತ ಸಂತೋಷಭರಿತ ಜನರ ಒಂದು ಗುಂಪಾಗಿದ್ದಾರೆ. ಈ ಕೆಳಗಿನಂತೆ ಯೇಸು ಹೇಳಿದಾಗ, ಅವನು ಸಂತೋಷಕ್ಕಾಗಿರುವ ಅತ್ಯುತ್ತಮ ಮಟ್ಟವನ್ನು ಒದಗಿಸಿದನು: “ತಮ್ಮ ಆತ್ಮಿಕ ಆವಶ್ಯಕತೆಗಳ ಅರುಹುಳ್ಳವರು, . . . ದುಃಖಪಡುವವರು, . . . ಮೃದು ಸ್ವಭಾವದವರು, . . . ನೀತಿಗಾಗಿ ಹಸಿದು ಬಾಯಾರುತ್ತಿರುವವರು, . . . ಕರುಣೆಯುಳ್ಳವರು, . . . ಶುದ್ಧ ಹೃದಯಿಗಳು, . . . ಸಮಾಧಾನಚಿತ್ತರು, . . . ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಂಡಿರುವವರು ಸಂತೋಷಿತರು.” (ಮತ್ತಾಯ 5:3-10, NW) ಬೇರೆ ಯಾವುದೇ ಧಾರ್ಮಿಕ ಸಂಸ್ಥೆಗಿಂತಲೂ, ಸಾಮೂಹಿಕವಾಗಿ ಯೆಹೋವನ ಸಾಕ್ಷಿಗಳಿಗೆ ಈ ಮೇಲಿನ ವರ್ಣನೆಯು ಸರಿಯಾಗಿ ಒಪ್ಪುತ್ತದೆ ಎಂಬುದನ್ನು ರುಜುಪಡಿಸಲು ಹೇರಳವಾದ ಪುರಾವೆಯಿದೆ.
14 ವಿಶೇಷವಾಗಿ 1919ರಲ್ಲಿ ಸತ್ಯಾರಾಧನೆಯ ಪುನಸ್ಸ್ಥಾಪನೆಯಾದ ಸಮಯದಿಂದ ಯೆಹೋವನ ಸಂತೋಷಭರಿತ ಜನರಿಗೆ “ನಗಲು” ಸಕಾರಣಗಳಿವೆ. ಆತ್ಮಿಕವಾಗಿ, ಸಾ.ಶ.ಪೂ. ಆರನೆಯ ಶತಮಾನದಲ್ಲಿ ಬಾಬೆಲಿನಿಂದ ಹಿಂದಿರುಗಿದಂತಹ ಜನರ ಉಲ್ಲಾಸಕರ ಅನುಭವದಲ್ಲಿ ಇವರೂ ಪಾಲ್ಗೊಂಡರು: “ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರಿಗಿ ಚೀಯೋನಿಗೆ ಬರಮಾಡಿದಾಗ ನಾವು ಕನಸುಕಂಡವರಂತಿದ್ದೆವು. ಆಗ ನಮ್ಮ ಬಾಯಿ ಬಲು ನಗೆಯಿಂದಲೂ ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು. . . . ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ; ಆದದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ.” (ಕೀರ್ತನೆ 126:1-3) ಆತ್ಮಿಕ ನಗುವಿನ ನಡುವೆಯೂ ಯೆಹೋವನ ಸಾಕ್ಷಿಗಳು ಸಮಯಗಳ ಗಂಭೀರತೆಯನ್ನು ವಿವೇಕದಿಂದ ಮನಸ್ಸಿನಲ್ಲಿಟ್ಟುಕೊಂಡವರಾಗಿದ್ದಾರೆ. ಹೊಸ ಲೋಕವು ಒಂದು ವಾಸ್ತವಿಕತೆಯಾಗಿ ಪರಿಣಮಿಸಿ, ಲೋಕದ ನಿವಾಸಿಗಳು “ವಾಸ್ತವವಾದ ಜೀವಿತಕ್ಕೆ ಭದ್ರವಾದ ಅಸ್ತಿವಾರ” ಹಾಕಿದ ಬಳಿಕ, ಅಳುವಿಗೆ ಬದಲಾಗಿ ಸದಾಕಾಲಕ್ಕೂ ನಗುವೇ ಇರುವಂತಹ ಒಂದು ಸಮಯವು ಬರುವುದು.—1 ತಿಮೊಥೆಯ 6:19, NW; ಪ್ರಕಟನೆ 21:3, 4.
“ಅಪ್ಪಿಕೊಳ್ಳುವ ಸಮಯ, ಅಪ್ಪಿಕೊಳ್ಳುವುದರಿಂದ ದೂರವಿರುವ ಸಮಯ”
15. ಕ್ರೈಸ್ತರು ತಮ್ಮ ಮಿತ್ರರನ್ನು ಏಕೆ ಬಹಳ ಜಾಗ್ರತೆಯಿಂದ ಆಯ್ಕೆಮಾಡುತ್ತಾರೆ?
15 ಕ್ರೈಸ್ತರು ಮಿತ್ರತ್ವದಲ್ಲಿ ಯಾರನ್ನು ಅಪ್ಪಿಕೊಳ್ಳುತ್ತಾರೊ ಅವರನ್ನು ಜಾಗ್ರತೆಯಿಂದ ಆಯ್ದುಕೊಳ್ಳುತ್ತಾರೆ. “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂಬ ಪೌಲನ ಎಚ್ಚರಿಕೆಯನ್ನು ಅವರು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. (1 ಕೊರಿಂಥ 15:33) ಮತ್ತು ಜ್ಞಾನಿಯಾದ ಸೊಲೊಮೋನನು ಹೇಳಿದ್ದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
16, 17. ಯೆಹೋವನ ಸಾಕ್ಷಿಗಳು ಸ್ನೇಹ, ಡೇಟಿಂಗ್, ಮತ್ತು ವಿವಾಹವನ್ನು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಮತ್ತು ಏಕೆ?
16 ಯೆಹೋವನ ಸೇವಕರು, ತಮ್ಮಂತೆಯೇ ಯೆಹೋವನನ್ನು ಹಾಗೂ ಆತನ ನೀತಿಯನ್ನು ಪ್ರೀತಿಸುವಂಥವರನ್ನು ಮಾತ್ರ ತಮ್ಮ ಮಿತ್ರರನ್ನಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ಅವರು ತಮ್ಮ ಮಿತ್ರರ ಸಹವಾಸವನ್ನು ಗಣ್ಯಮಾಡುತ್ತಾ, ಆ ಸ್ನೇಹದಲ್ಲಿ ಆನಂದಿಸುತ್ತಾರಾದರೂ, ಇಂದು ಕೆಲವು ದೇಶಗಳಲ್ಲಿ ರೂಢಿಯಲ್ಲಿರುವ ಗಂಡುಹೆಣ್ಣಿನ ಪರಸ್ಪರ ವಿಹಾರಕಾಲ (ಡೇಟಿಂಗ್)ದಲ್ಲಿನ ಸ್ವೇಚ್ಛಾಚಾರ ಹಾಗೂ ವಿಪರೀತ ಸ್ವಚ್ಛಂದವಾದ ಮನೋಭಾವದಿಂದ ಅವರು ಬುದ್ಧಿವಂತಿಕೆಯಿಂದ ದೂರವಿರುತ್ತಾರೆ. ಡೇಟಿಂಗ್ ಒಂದು ಅಪಾಯರಹಿತವಾದ ವಿನೋದವಾಗಿದೆ ಎಂಬ ಮನೋಭಾವದಿಂದ ಅವರು ಅದರಲ್ಲಿ ಒಳಗೂಡುವುದಿಲ್ಲ. ಬದಲಾಗಿ, ಅದು ವಿವಾಹಕ್ಕೆ ನಡಿಸುವ ಒಂದು ಗಂಭೀರ ಹೆಜ್ಜೆಯಾಗಿದೆ, ಆದುದರಿಂದ ಶಾಶ್ವತವಾದ ಒಂದು ಪಾಲುಗಾರಿಕೆಯಲ್ಲಿ ಪ್ರವೇಶಿಸಲು ಒಬ್ಬನು ಶಾರೀರಿಕವಾಗಿ, ಮಾನಸಿಕವಾಗಿ, ಆತ್ಮಿಕವಾಗಿ ಸಿದ್ಧನಾಗಿರುವಾಗ, ಹಾಗೂ ಶಾಸ್ತ್ರಸಂಬಂಧವಾಗಿ ಸ್ವತಂತ್ರನಾಗಿರುವಾಗ ಮಾತ್ರವೇ ಈ ಹೆಜ್ಜೆಯನ್ನು ತೆಗೆದುಕೊಳ್ಳಬೇಕು ಎಂಬುದು ಅವರ ದೃಷ್ಟಿಕೋನವಾಗಿದೆ.—1 ಕೊರಿಂಥ 7:36.
17 ಡೇಟಿಂಗ್ ಹಾಗೂ ವಿವಾಹದ ಕುರಿತು ಇಂತಹ ದೃಷ್ಟಿಕೋನವಿರುವುದು ಹಳೇಕಾಲದ ಫ್ಯಾಷನ್ ಎಂದು ಕೆಲವರು ಭಾವಿಸಬಹುದು. ಆದರೆ ಮಿತ್ರರನ್ನು ಆರಿಸಿಕೊಳ್ಳುವಾಗ ಅಥವಾ ಡೇಟಿಂಗ್ ಹಾಗೂ ವಿವಾಹಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಾಗ, ಸ್ನೇಹಿತರ ಒತ್ತಡವು ತಮ್ಮ ಮೇಲೆ ಪ್ರಭಾವ ಬೀರುವಂತೆ ಯೆಹೋವನ ಸಾಕ್ಷಿಗಳು ಬಿಡುವುದಿಲ್ಲ. “ಜ್ಞಾನವು ತನ್ನ ಕೆಲಸಗಳಿಂದ ಜ್ಞಾನವೇ ಎಂದು ಗೊತ್ತಾಗುವದು” ಎಂಬುದು ಅವರಿಗೆ ತಿಳಿದಿದೆ. (ಮತ್ತಾಯ 11:19) ಯಾವುದು ಅತ್ಯುತ್ತಮವಾಗಿದೆ ಎಂಬುದು ಯಾವಾಗಲೂ ಯೆಹೋವನಿಗೆ ಗೊತ್ತಿರುತ್ತದೆ, ಆದುದರಿಂದ “ಕರ್ತನಲ್ಲಿ ಮಾತ್ರ” ವಿವಾಹವಾಗುವಂತೆ ಕೊಡಲ್ಪಟ್ಟಿರುವ ಆತನ ಸಲಹೆಯನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ. (1 ಕೊರಿಂಥ 7:39, NW; 2 ಕೊರಿಂಥ 6:14) ಒಂದುವೇಳೆ ವಿವಾಹ ಸಂಬಂಧದಲ್ಲಿ ಸ್ವಲ್ಪ ಎಡವಟ್ಟಾದರೂ, ವಿವಾಹ ವಿಚ್ಛೇದ ಅಥವಾ ಪ್ರತ್ಯೇಕವಾಸಗಳು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವ ಆಯ್ಕೆಗಳಾಗಿವೆ ಎಂಬ ತಪ್ಪು ಅಭಿಪ್ರಾಯದೊಂದಿಗೆ ವಿವಾಹಮಾಡಿಕೊಳ್ಳಲು ಅವರು ಅವಸರಪಡುವುದಿಲ್ಲ. ಒಬ್ಬ ಸರಿಯಾದ ಸಂಗಾತಿಯನ್ನು ಕಂಡುಕೊಳ್ಳಲು ಅವರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ, ಒಂದು ಸಾರಿ ವಿವಾಹ ಪ್ರತಿಜ್ಞೆಗಳನ್ನು ಸ್ವೀಕರಿಸಿದ ಬಳಿಕ, “ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ, ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು” ಎಂಬ ಯೆಹೋವನ ನಿಯಮವು ಅನ್ವಯವಾಗುತ್ತದೆ ಎಂಬುದನ್ನು ಅವರು ಮನಗಂಡವರಾಗಿರುತ್ತಾರೆ.—ಮತ್ತಾಯ 19:6; ಮಾರ್ಕ 10:9.
18. ಒಂದು ಸಂತೋಷಭರಿತ ವಿವಾಹಕ್ಕೆ ಯಾವುದು ಆರಂಭದ ಹಂತವಾಗಿ ಕಾರ್ಯನಡಿಸಬಲ್ಲದು?
18 ವಿವಾಹವು ಜೀವನಪರ್ಯಂತ ಇರುವ ಒಂದು ಒಪ್ಪಂದವಾಗಿರುವುದರಿಂದ, ಜಾಗರೂಕವಾದ ಯೋಜನೆಯನ್ನು ಮಾಡಬೇಕಾಗುತ್ತದೆ. ಸಮಂಜಸವಾಗಿಯೇ ‘ನಿಜವಾಗಿಯೂ ಅವಳು ನನಗೆ ಯೋಗ್ಯವಾದ ವ್ಯಕ್ತಿಯಾಗಿದ್ದಾಳೋ?’ ಎಂದು ಪುರುಷನೊಬ್ಬನು ಸ್ವತಃ ಪ್ರಶ್ನಿಸಿಕೊಳ್ಳಬಹುದು. ಆದರೆ ಅದೇ ಸಮಯದಲ್ಲಿ, ‘ಖಂಡಿತವಾಗಿಯೂ ನಾನು ಅವಳಿಗೆ ಯೋಗ್ಯ ವ್ಯಕ್ತಿಯಾಗಿದ್ದೇನೋ? ಅವಳ ಆತ್ಮಿಕ ಆವಶ್ಯಕತೆಗಳನ್ನು ಪೂರೈಸಸಾಧ್ಯವಿರುವಂತಹ ಒಬ್ಬ ಪ್ರೌಢ ಕ್ರೈಸ್ತನು ನಾನಾಗಿದ್ದೇನೋ?’ ಎಂದು ಅವನು ಕೇಳಿಕೊಳ್ಳುವುದು ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆ. ಈ ಇಬ್ಬರು ಭಾವೀ ಸಂಗಾತಿಗಳು ಆತ್ಮಿಕವಾಗಿ ಸ್ಥಿರರಾಗಿದ್ದು, ದೇವರ ಸಮ್ಮತಿಯನ್ನು ಪಡೆದುಕೊಳ್ಳಸಾಧ್ಯವಿರುವಂತಹ ಒಂದು ಸದೃಢ ವಿವಾಹ ಬಂಧವನ್ನು ರೂಪಿಸಲು ಸಮರ್ಥರಾಗಿರುವುದೇ, ಯೆಹೋವನ ಮುಂದೆ ಅವರು ಪೂರೈಸಬೇಕಾಗಿರುವ ಹಂಗಾಗಿದೆ. ಸಾವಿರಾರು ಕ್ರೈಸ್ತ ದಂಪತಿಗಳು ಇದಕ್ಕೆ ರುಜುವಾತು ನೀಡಬಲ್ಲರು, ಏಕೆಂದರೆ ಇದು ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಆದುದರಿಂದ, ಪೂರ್ಣ ಸಮಯದ ಶುಶ್ರೂಷೆಯು, ಒಂದು ಸಂತೋಷಭರಿತ ವಿವಾಹವನ್ನು ಆರಂಭಿಸಲು ಅತ್ಯುತ್ತಮವಾದ ಆಧಾರವಾಗಿರಬಲ್ಲದು.
19. ಕೆಲವು ಕ್ರೈಸ್ತರು ಏಕೆ ಅವಿವಾಹಿತರಾಗಿ ಉಳಿಯುತ್ತಾರೆ?
19 ಸುವಾರ್ತೆಗೋಸ್ಕರ ಅವಿವಾಹಿತರಾಗಿ ಉಳಿಯಲು ನಿರ್ಧರಿಸುವ ಮೂಲಕ ಕೆಲವು ಕ್ರೈಸ್ತರು “ಅಪ್ಪಿಕೊಳ್ಳುವುದರಿಂದ ದೂರ”ವಿರಲು ಪ್ರಯತ್ನಿಸುತ್ತಾರೆ. (ಪ್ರಸಂಗಿ 3:5, NW) ಇನ್ನಿತರರು, ಒಬ್ಬ ಯೋಗ್ಯವಾದ ಸಂಗಾತಿಯನ್ನು ಆಕರ್ಷಿಸಲು ತಾವು ಆತ್ಮಿಕವಾಗಿ ಅರ್ಹರಾಗಿದ್ದೇವೆ ಎಂಬ ಅನಿಸಿಕೆಯಾಗುವ ತನಕ ವಿವಾಹವನ್ನು ಮುಂದೂಡುತ್ತಾರೆ. ಆದರೆ ವೈವಾಹಿಕ ಸಂಬಂಧಗಳು ಹಾಗೂ ಅದರಿಂದ ಬರುವ ಪ್ರಯೋಜನಗಳನ್ನು ಪಡೆದುಕೊಳ್ಳಲು ಹಾತೊರೆಯುತ್ತಿರುವುದಾದರೂ, ಇಷ್ಟರ ತನಕ ಒಬ್ಬ ಸಂಗಾತಿಯನ್ನು ಕಂಡುಕೊಳ್ಳದಿರುವಂತಹ ಅವಿವಾಹಿತ ಕ್ರೈಸ್ತರನ್ನೂ ನಾವು ಜ್ಞಾಪಿಸಿಕೊಳ್ಳೋಣ. ವಿವಾಹ ಸಂಗಾತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಾಗ, ದೇವರ ಮೂಲತತ್ವಗಳಿಗೆ ವಿರುದ್ಧವಾಗಿ ಹೋಗಲು ಅವರು ನಿರಾಕರಿಸುವುದನ್ನು ನೋಡಿ ಯೆಹೋವನು ತುಂಬ ಸಂತೋಷಪಡುತ್ತಾನೆ ಎಂಬ ದೃಢಭರವಸೆಯು ನಮಗೆ ಇರಸಾಧ್ಯವಿದೆ. ಅವರ ನಿಷ್ಠೆಯನ್ನು ಗಣ್ಯಮಾಡಿ, ಅವರಿಗೆ ಯೋಗ್ಯವಾದ ಬೆಂಬಲವನ್ನು ನೀಡುವಾಗಲೂ ನಾವು ಸರಿಯಾದದ್ದನ್ನೇ ಮಾಡುವೆವು.
20. ಕೆಲವೊಮ್ಮೆ ವಿವಾಹ ಸಂಗಾತಿಗಳು ಸಹ “ಅಪ್ಪಿಕೊಳ್ಳುವುದರಿಂದ ದೂರ”ವಿರಲು ಏಕೆ ಪ್ರಯತ್ನಿಸುತ್ತಾರೆ?
20 ಕೆಲವೊಮ್ಮೆ ವಿವಾಹಿತ ದಂಪತಿಗಳು ಸಹ “ಅಪ್ಪಿಕೊಳ್ಳುವುದರಿಂದ ದೂರ” ಇರಬೇಕೊ? ಒಂದು ಅರ್ಥದಲ್ಲಿ ಅದು ಹೌದೆಂದು ಕಾಣುತ್ತದೆ, ಏಕೆಂದರೆ ಪೌಲನು ಗಮನಿಸಿದ್ದು: “ಸಹೋದರರೇ, ನಾನು ಹೇಳುವದೇನಂದರೆ—ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ” ಇರಲಿ. (1 ಕೊರಿಂಥ 7:29) ಈ ವಚನಕ್ಕನುಸಾರ, ಕೆಲವೊಮ್ಮೆ ಅವರು ದೇವಪ್ರಭುತ್ವ ಜವಾಬ್ದಾರಿಗಳಿಗೆ ಮೊದಲ ಸ್ಥಾನವನ್ನು ಕೊಟ್ಟು, ವಿವಾಹದಿಂದ ಬರುವ ಆನಂದ ಹಾಗೂ ಆಶೀರ್ವಾದಗಳಿಗೆ ಎರಡನೆಯ ಸ್ಥಾನವನ್ನು ಕೊಡಬೇಕಾಗುತ್ತದೆ. ಈ ವಿಚಾರದಲ್ಲಿ ಸಮತೂಕವಾದ ದೃಷ್ಟಿಕೋನವಿರುವುದಾದರೆ, ಇದು ವಿವಾಹವನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಇನ್ನೂ ಸದೃಢಗೊಳಿಸುತ್ತದೆ. ಏಕೆಂದರೆ ತಮ್ಮಿಬ್ಬರ ವೈವಾಹಿಕ ಸಂಬಂಧದಲ್ಲಿ ಯಾವಾಗಲೂ ಯೆಹೋವನೇ ಸ್ಥಿರತೆಯನ್ನು ಕಾಪಾಡುವ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಜ್ಞಾಪಿಸಿಕೊಳ್ಳಲು ಇದು ಇಬ್ಬರಿಗೂ ಸಹಾಯ ಮಾಡುತ್ತದೆ.—ಪ್ರಸಂಗಿ 4:12.
21. ಮಕ್ಕಳನ್ನು ಪಡೆಯುವ ವಿಷಯದಲ್ಲಿ ವಿವಾಹಿತ ದಂಪತಿಗಳನ್ನು ನಾವು ಏಕೆ ಟೀಕಿಸಬಾರದು?
21 ಅಷ್ಟುಮಾತ್ರವಲ್ಲ, ಯಾವುದೇ ಅಡೆತಡೆಯಿಲ್ಲದೆ ದೇವರ ಸೇವೆಯನ್ನು ಮುಂದುವರಿಸಲಿಕ್ಕಾಗಿ ಕೆಲವು ವಿವಾಹಿತ ದಂಪತಿಗಳು ಮಕ್ಕಳಾಗದೆ ಇರುವಂತೆ ಜಾಗ್ರತೆ ವಹಿಸಿದ್ದಾರೆ. ಇದರ ಅರ್ಥ, ಅವರು ತಮ್ಮ ಜೀವನದಲ್ಲಿ ದೊಡ್ಡ ತ್ಯಾಗವನ್ನು ಮಾಡಿದ್ದಾರೆ, ಮತ್ತು ಇದಕ್ಕನುಸಾರ ಯೆಹೋವನು ಅವರಿಗೆ ಪ್ರತಿಫಲವನ್ನು ಕೊಡುವನು. ಸುವಾರ್ತೆಗೋಸ್ಕರ ಅವಿವಾಹಿತರಾಗಿ ಉಳಿಯುವಂತೆ ಬೈಬಲು ಉತ್ತೇಜಿಸುತ್ತದಾದರೂ, ಸುವಾರ್ತೆಗೋಸ್ಕರ ಮಕ್ಕಳನ್ನು ಪಡೆಯದವರಾಗಿ ಇರಬೇಕು ಎಂದು ಬೈಬಲಿನಲ್ಲಿ ಎಲ್ಲಿಯೂ ನೇರವಾಗಿ ತಿಳಿಸಲ್ಪಟ್ಟಿಲ್ಲ. (ಮತ್ತಾಯ 19:10-12; 1 ಕೊರಿಂಥ 7:38; ಹೋಲಿಸಿರಿ ಮತ್ತಾಯ 24:19 ಮತ್ತು ಲೂಕ 23:28-30.) ಹೀಗೆ, ತಮ್ಮ ವೈಯಕ್ತಿಕ ಸನ್ನಿವೇಶಗಳು ಹಾಗೂ ಸ್ವಂತ ಮನಸ್ಸಾಕ್ಷಿಯ ಅನಿಸಿಕೆಗಳ ಆಧಾರದಿಂದ ವಿವಾಹಿತ ದಂಪತಿಗಳು ಈ ನಿರ್ಣಯವನ್ನು ಮಾಡತಕ್ಕದ್ದು. ಆ ನಿರ್ಣಯವು ಯಾವುದೇ ಆಗಿರಲಿ, ಅದಕ್ಕೋಸ್ಕರ ವಿವಾಹಿತ ದಂಪತಿಗಳನ್ನು ಟೀಕಿಸಬಾರದು.
22. ನಾವು ಯಾವುದನ್ನು ನಿರ್ಧರಿಸುವುದು ಪ್ರಾಮುಖ್ಯವಾದ ಸಂಗತಿಯಾಗಿದೆ?
22 ಹೌದು, “ಪ್ರತಿಯೊಂದಕ್ಕೂ ನಿಯುಕ್ತವಾದ ಸಮಯವೊಂದಿದೆ, ಅಂದರೆ, ಆಕಾಶದ ಕೆಳಗಿನ ಪ್ರತಿಯೊಂದು ಕಾರ್ಯಕ್ಕೆ ಸಮಯವೊಂದಿದೆ.” “ಯುದ್ಧದ ಸಮಯ, ಶಾಂತಿಯ ಸಮಯ” ಸಹ ಇದೆ. (ಪ್ರಸಂಗಿ 3:1, 8, NW) ಈ ಎರಡರಲ್ಲಿ ಈಗ ಯಾವುದಕ್ಕೆ ಸಮಯವಾಗಿದೆ ಎಂಬುದನ್ನು ನಾವು ನಿರ್ಧರಿಸುವುದು ಏಕೆ ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ಮುಂದಿನ ಲೇಖನವು ವಿವರಿಸುವುದು.
ನೀವು ವಿವರಿಸಬಲ್ಲಿರೋ?
◻ “ಪ್ರತಿಯೊಂದಕ್ಕೂ ನಿಯುಕ್ತವಾದ ಸಮಯವೊಂದಿದೆ” ಎಂಬುದನ್ನು ನಾವು ತಿಳಿದುಕೊಳ್ಳುವುದು ಏಕೆ ಅತ್ಯಾವಶ್ಯಕವಾದದ್ದಾಗಿದೆ?
◻ ವಿಶೇಷವಾಗಿ ಇದು ಏಕೆ “ಅಳಲು ಒಂದು ಸಮಯ”ವಾಗಿದೆ?
◻ ಕ್ರೈಸ್ತರು “ಅಳು”ತ್ತಿದ್ದಾರಾದರೂ ವಾಸ್ತವದಲ್ಲಿ ಸಂತೋಷಿತರಾಗಿದ್ದಾರೆ ಏಕೆ?
◻ ಸದ್ಯದ ಸಮಯವನ್ನು “ಅಪ್ಪಿಕೊಳ್ಳುವುದರಿಂದ ದೂರವಿರುವ ಸಮಯ”ವಾಗಿ ತಾವು ಪರಿಗಣಿಸುತ್ತೇವೆ ಎಂಬುದನ್ನು ಕೆಲವು ಕ್ರೈಸ್ತರು ಹೇಗೆ ತೋರಿಸುತ್ತಾರೆ?
[ಪುಟ 11 ರಲ್ಲಿರುವಚಿತ್ರಗಳು]
ಲೋಕದ ಪರಿಸ್ಥಿತಿಗಳನ್ನು ನೋಡಿ ಕ್ರೈಸ್ತರು “ಅಳು”ತ್ತಾರಾದರೂ . . .
. . . ವಾಸ್ತವದಲ್ಲಿ ಇಡೀ ಲೋಕದಲ್ಲೇ ಇವರು ಅತ್ಯಂತ ಸಂತೋಷಭರಿತ ಜನರಾಗಿದ್ದಾರೆ
[ಪುಟ 8 ರಲ್ಲಿರುವ ಚಿತ್ರ]
ಸಂತೋಷಭರಿತ ವಿವಾಹ ಜೀವನಕ್ಕೆ, ಪೂರ್ಣ ಸಮಯದ ಶುಶ್ರೂಷೆಯು ಒಂದು ಅತ್ಯುತ್ತಮ ಆಧಾರವಾಗಿದೆ