ಅಧ್ಯಯನ ಲೇಖನ 28
ಯೆಹೋವನ ಆರಾಧನೆಯನ್ನು ನಿಷೇಧ ಬಂದರೂ ನಿಲ್ಲಿಸಬೇಡಿ
“ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು.”—ಅ. ಕಾ. 4:19, 20.
ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
ಕಿರುನೋಟa
1-2. (ಎ) ಯೆಹೋವನ ಆರಾಧನೆ ಮೇಲೆ ಸರ್ಕಾರ ನಿಷೇಧ ಹಾಕಿದರೆ ನಮಗೆ ಯಾಕೆ ಆಶ್ಚರ್ಯ ಆಗುವುದಿಲ್ಲ? (ಬಿ) ನಾವು ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?
ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಮೇಲೆ ನಿಷೇಧ ಮತ್ತು ತುಂಬ ನಿರ್ಬಂಧ ಇರುವ ದೇಶಗಳಲ್ಲಿ 2018ರಲ್ಲಿ 2,23,000ಕ್ಕಿಂತ ಹೆಚ್ಚು ಪ್ರಚಾರಕರು ಇದ್ದರು. ಈ ನಿಷೇಧ ಮತ್ತು ನಿರ್ಬಂಧದ ಬಗ್ಗೆ ಕೇಳುವಾಗ ನಮಗೆ ಆಶ್ಚರ್ಯ ಆಗುವುದಿಲ್ಲ. ಯಾಕೆಂದರೆ ಹಿಂದಿನ ಲೇಖನದಲ್ಲಿ ಸತ್ಯ ಕ್ರೈಸ್ತರು ಹಿಂಸೆಗೆ ಗುರಿ ಆಗೇ ಆಗುತ್ತಾರೆ ಎಂದು ಕಲಿತೆವು. (2 ತಿಮೊ. 3:12) ನಾವಿರುವ ದೇಶದಲ್ಲಿ ಈಗ ನಿಷೇಧ ಅಥವಾ ನಿರ್ಬಂಧ ಇಲ್ಲದೇ ಇರಬಹುದು. ಆದರೆ ಸರ್ಕಾರ ಯಾವಾಗ ಬೇಕಾದರೂ ಯೆಹೋವನ ಆರಾಧನೆ ಮೇಲೆ ನಿಷೇಧ ಹಾಕಬಹುದು.
2 ಒಂದುವೇಳೆ ನೀವಿರುವ ದೇಶದಲ್ಲಿ ಸರ್ಕಾರ ನಿಷೇಧ ಹಾಕುವುದಾದರೆ ನಿಮಗೆ ಕೆಲವೊಂದು ಪ್ರಶ್ನೆಗಳು ಬರಬಹುದು. ‘ಹಿಂಸೆ ಬಂದರೆ ಅದರರ್ಥ ನಮ್ಮ ಮೇಲೆ ದೇವರ ಆಶೀರ್ವಾದ ಇಲ್ಲ ಅಂತನಾ? ನಿಷೇಧ ಇರುವಾಗ ಯೆಹೋವನ ಆರಾಧನೆ ಮಾಡಲು ಆಗೋದೇ ಇಲ್ವಾ? ನಾವು ಯೆಹೋವನ ಆರಾಧನೆ ಮಾಡಲು ನಿಷೇಧ ಇಲ್ಲದ ದೇಶಕ್ಕೆ ಹೋಗಬೇಕಾ?’ ಈ ಪ್ರಶ್ನೆಗಳ ಬಗ್ಗೆ ನಾವೀಗ ಚರ್ಚಿಸಲಿದ್ದೇವೆ. ಜೊತೆಗೆ, ನಿಷೇಧ ಬಂದರೂ ಯೆಹೋವನ ಆರಾಧನೆಯನ್ನು ಮುಂದುವರಿಸಲು ನಾವೇನು ಮಾಡಬೇಕು, ಏನು ಮಾಡಬಾರದು ಎಂದೂ ಚರ್ಚಿಸಲಿದ್ದೇವೆ.
ಹಿಂಸೆ ಬಂದರೆ ಅದರರ್ಥ ನಮ್ಮ ಮೇಲೆ ದೇವರ ಆಶೀರ್ವಾದ ಇಲ್ಲ ಅಂತನಾ?
3. ದೇವರಿಗೆ ನಂಬಿಗಸ್ತನಾಗಿದ್ದ ಅಪೊಸ್ತಲ ಪೌಲನಿಗೆ 2 ಕೊರಿಂಥ 11:23-27 ಹೇಳುವಂತೆ ಯಾವೆಲ್ಲ ಕಷ್ಟಗಳು ಬಂದವು? (ಬಿ) ಪೌಲನ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತದೆ?
3 ನಮ್ಮ ಆರಾಧನೆಯ ಮೇಲೆ ಸರ್ಕಾರ ನಿಷೇಧ ಹಾಕಿದಾಗ ನಮ್ಮ ಮೇಲೆ ದೇವರ ಆಶೀರ್ವಾದ ಇಲ್ಲ ಅಂತ ತಪ್ಪಾದ ತೀರ್ಮಾನಕ್ಕೆ ಬಂದುಬಿಡಬಹುದು. ಆದರೆ ನೆನಪಿಡಿ, ನಮಗೆ ಹಿಂಸೆ ಬಂದರೆ ಅದರರ್ಥ ನಮ್ಮ ಮೇಲೆ ದೇವರಿಗೆ ಪ್ರೀತಿ ಇಲ್ಲ ಅಂತಲ್ಲ. ಇದನ್ನು ಹೇಗೆ ಹೇಳಬಹುದು? ಅಪೊಸ್ತಲ ಪೌಲನ ಉದಾಹರಣೆ ನೋಡಿ. ಆತನ ಮೇಲೆ ದೇವರ ಆಶೀರ್ವಾದ ಖಂಡಿತ ಇತ್ತು. ಆದ್ದರಿಂದಲೇ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಇರುವ 14 ಪತ್ರಗಳನ್ನು ಬರೆದನು. ಅಷ್ಟೇ ಅಲ್ಲ, ಅನ್ಯಜನಾಂಗಗಳಿಗೆ ಅಪೊಸ್ತಲನೂ ಆದನು. ಆದರೆ ಪೌಲನು ಸಹ ಜನರಿಂದ ಹಿಂಸೆಯನ್ನು ಎದುರಿಸಿದನು. (2 ಕೊರಿಂಥ 11:23-27 ಓದಿ.) ಇದರಿಂದ ನಮಗೇನು ಗೊತ್ತಾಗುತ್ತದೆ? ತನ್ನ ನಂಬಿಗಸ್ತ ಸೇವಕರಿಗೆ ಹಿಂಸೆ ಬರುವಾಗ ಯೆಹೋವನು ಅದನ್ನು ಅನುಮತಿಸುತ್ತಾನೆ ಎಂದು ಗೊತ್ತಾಗುತ್ತದೆ.
4. ಜನರು ನಮ್ಮನ್ನು ಯಾಕೆ ದ್ವೇಷಿಸುತ್ತಾರೆ?
4 ನಾವು ಯಾಕೆ ಹಿಂಸೆಯನ್ನು ಎದುರುನೋಡಬೇಕು ಎಂದು ಯೇಸು ವಿವರಿಸಿದ್ದಾನೆ. ನಾವು ಈ ಲೋಕದ ಭಾಗವಾಗಿಲ್ಲದ ಕಾರಣ ಜನರು ನಮ್ಮನ್ನು ದ್ವೇಷಿಸುತ್ತಾರೆ ಎಂದು ಯೇಸು ಹೇಳಿದ್ದಾನೆ. (ಯೋಹಾ. 15:18, 19) ಹಿಂಸೆ ಅನ್ನುವುದು ಯೆಹೋವನ ಆಶೀರ್ವಾದ ನಮಗಿಲ್ಲ ಅಂತ ಸೂಚಿಸಲ್ಲ. ನಾವು ಸರಿಯಾದ ವಿಷಯವನ್ನೇ ಮಾಡುತ್ತಿದ್ದೇವೆ ಅನ್ನುವುದನ್ನು ಸೂಚಿಸುತ್ತದೆ!
ನಿಷೇಧ ಇರುವಾಗ ಯೆಹೋವನ ಆರಾಧನೆ ಮಾಡಲು ಆಗೋದೇ ಇಲ್ವಾ?
5. ಯೆಹೋವನ ಆರಾಧನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಶಕ್ತಿ ಯಾವ ಮನುಷ್ಯನಿಗಾದರೂ ಇದ್ಯಾ? ವಿವರಿಸಿ.
5 ಸರ್ವಶಕ್ತನಾದ ಯೆಹೋವ ದೇವರ ಆರಾಧನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ. ಎಷ್ಟೋ ಜನರು ಈ ಕೆಲಸಕ್ಕೆ ಕೈಹಾಕಿ ಸೋತುಹೋಗಿದ್ದಾರೆ. ಇದಕ್ಕೆ ಒಂದು ಉದಾಹರಣೆ ನೋಡಿ. ಎರಡನೇ ಮಹಾಯುದ್ಧದ ಸಮಯದಲ್ಲಿ ಅನೇಕ ದೇಶಗಳಲ್ಲಿ ಸರ್ಕಾರಗಳು ದೇವಜನರಿಗೆ ತುಂಬ ಹಿಂಸೆ ಕೊಟ್ಟವು. ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ನಾಜಿ ಪಕ್ಷ ನಿಷೇಧಿಸಿತು. ಆಸ್ಟ್ರೇಲಿಯ, ಕೆನಡ ಮತ್ತು ಇತರ ದೇಶಗಳ ಸರ್ಕಾರಗಳು ಕೂಡ ಯೆಹೋವನ ಆರಾಧನೆ ಮೇಲೆ ನಿಷೇಧ ಹಾಕಿದವು. ಆದರೂ ಮುಂದೆ ಏನಾಯಿತು? 1939ರಲ್ಲಿ ಯುದ್ಧ ಶುರುವಾದಾಗ ಇಡೀ ಲೋಕದಲ್ಲಿ 72,475 ಪ್ರಚಾರಕರು ಇದ್ದರು. ಆದರೆ 1945ರಲ್ಲಿ ಯುದ್ಧ ಕೊನೆ ಆದಾಗ 1,56,299 ಪ್ರಚಾರಕರಿದ್ದರು. ಅಂದರೆ ಪ್ರಚಾರಕರ ಸಂಖ್ಯೆ ಎರಡು ಪಟ್ಟಾಗಿತ್ತು! ಇದಕ್ಕೆ ಯೆಹೋವನ ಆಶೀರ್ವಾದನೇ ಕಾರಣ.
6. ವಿರೋಧ-ಹಿಂಸೆ ಏನನ್ನು ಮಾಡಲ್ಲ, ಬದಲಿಗೆ ಏನು ಮಾಡುತ್ತದೆ? ಇದಕ್ಕೆ ಒಂದು ಉದಾಹರಣೆ ಕೊಡಿ.
6 ವಿರೋಧ-ಹಿಂಸೆ ನಮ್ಮ ಧೈರ್ಯವನ್ನು ಬತ್ತಿಸಿಬಿಡಲ್ಲ, ನಾವು ಯೆಹೋವನನ್ನು ಆರಾಧಿಸಬೇಕು ಅನ್ನುವ ನಮ್ಮ ತೀರ್ಮಾನವನ್ನು ಇನ್ನೂ ಗಟ್ಟಿ ಮಾಡುತ್ತದೆ. ಉದಾಹರಣೆಗೆ, ಒಂದು ದೇಶದಲ್ಲಿ ಯೆಹೋವನ ಆರಾಧನೆಗೆ ನಿಷೇಧ ಹಾಕಿದಾಗ ಒಂದು ಕುಟುಂಬ ಏನು ಮಾಡಿತೆಂದು ನೋಡಿ. ಒಂದು ಪುಟ್ಟ ಮಗು ಇದ್ದರೂ ಆ ಗಂಡ-ಹೆಂಡತಿ ಭಯದಿಂದ ಸುಮ್ಮನೆ ಕೂರಲಿಲ್ಲ. ಪಯನೀಯರ್ ಸೇವೆ ಮಾಡಲು ಆರಂಭಿಸಿದರು. ಇದಕ್ಕಾಗಿ ಆ ಸಹೋದರಿ ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸವನ್ನೂ ಬಿಟ್ಟಳು. ನಿಷೇಧದಿಂದಾಗಿ ತುಂಬ ಜನರಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ಕುತೂಹಲ ಮೂಡಿತು ಎಂದು ಆ ಸಹೋದರನು ಹೇಳಿದನು. ಹೀಗೆ ಆ ಸಹೋದರನಿಗೆ ತುಂಬ ಬೈಬಲ್ ಅಧ್ಯಯನಗಳು ಸಿಕ್ಕಿದವು. ನಿಷೇಧದಿಂದಾಗಿ ಆ ದೇಶದಲ್ಲಿ ಇನ್ನೊಂದು ರೀತಿಯಲ್ಲಿಯೂ ಒಳ್ಳೇದಾಯಿತು. ಅಲ್ಲಿನ ಒಬ್ಬ ಹಿರಿಯರು ವರದಿಸಿದಂತೆ ಯೆಹೋವನ ಸೇವೆಯನ್ನು ಬಿಟ್ಟುಬಿಟ್ಟಿದ್ದ ಅನೇಕರು ಪುನಃ ಕೂಟಗಳಿಗೆ ಬರಲು ಮತ್ತು ಸಾರಲು ಆರಂಭಿಸಿದರು.
7. (ಎ) ಯಾಜಕಕಾಂಡ 26:36, 37ರಿಂದ ನಾವೇನು ಕಲಿಯಬಹುದು? (ಬಿ) ನಿಷೇಧ ಇದ್ದಾಗ ನೀವು ಏನು ಮಾಡುತ್ತೀರಿ?
7 ನಾವು ಹೆದರಿ ಯೆಹೋವನ ಆರಾಧನೆ ಮಾಡುವುದನ್ನು ಬಿಟ್ಟುಬಿಡಬೇಕು ಅನ್ನುವ ಉದ್ದೇಶದಿಂದ ವಿರೋಧಿಗಳು ನಿಷೇಧ ಹಾಕುತ್ತಾರೆ. ಅಷ್ಟೇ ಅಲ್ಲ, ಅವರು ನಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬಹುದು, ಅಧಿಕಾರಿಗಳನ್ನು ಕಳುಹಿಸಿ ನಮ್ಮ ಮನೆಗಳನ್ನು ಶೋಧಿಸಬಹುದು, ಕೋರ್ಟ್ ಮೆಟ್ಟಿಲು ಹತ್ತಿಸಬಹುದು, ಜೈಲಿಗೂ ಹಾಕಬಹುದು. ಕೆಲವರನ್ನು ಜೈಲಿಗೆ ಹಾಕಿದರೆ ಉಳಿದವರೆಲ್ಲರೂ ಹೆದರಿ ಯೆಹೋವನ ಆರಾಧನೆಯನ್ನು ಬಿಟ್ಟುಬಿಡುತ್ತಾರೆ ಅಂತ ನೆನಸಿ ಅವರು ಹೀಗೆಲ್ಲ ಮಾಡುತ್ತಾರೆ. ಆದರೆ ಭಯಪಟ್ಟರೆ ಯೆಹೋವನ ಆರಾಧನೆಗೆ ಸ್ವತಃ ನಾವೇ ನಿಷೇಧ ಹಾಕಿಕೊಂಡಂತೆ. ಯಾಜಕಕಾಂಡ 26:36, 37ರಲ್ಲಿ ಹೇಳಿರುವ ಜನರ ತರ ಇರಲು ನಾವು ಇಷ್ಟಪಡಲ್ಲ. (ಓದಿ) ನಾವು ಆಧ್ಯಾತ್ಮಿಕ ಚಟುವಟಿಕೆಗಳನ್ನು ಕಡಿಮೆ ಮಾಡುವಷ್ಟರ ಮಟ್ಟಿಗೆ ಅಥವಾ ಸಂಪೂರ್ಣವಾಗಿ ನಿಲ್ಲಿಸುವಷ್ಟರ ಮಟ್ಟಿಗೆ ಹೆದರಿಕೊಳ್ಳಲ್ಲ. ನಾವು ಯೆಹೋವನ ಮೇಲೆ ಪೂರ್ಣ ನಂಬಿಕೆ ಇಡುತ್ತೇವೆ, ಭಯಪಡಲ್ಲ. (ಕೀರ್ತ. 27:1) ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿ ಮಾರ್ಗದರ್ಶನ ಕೊಡು ಅಂತ ಬೇಡಿಕೊಳ್ಳುತ್ತೇವೆ. ಯೆಹೋವನು ನಮ್ಮ ಜೊತೆ ಇರುವುದರಿಂದ ಅದೆಷ್ಟೇ ಶಕ್ತಿಶಾಲಿಯಾದ ಸರ್ಕಾರಕ್ಕೂ ನಾವು ಯೆಹೋವನ ಆರಾಧನೆ ಮಾಡುವುದನ್ನು ತಡೆಯಲು ಸಾಧ್ಯವೇ ಇಲ್ಲ.—ಇಬ್ರಿ. 13:6.
ಯೆಹೋವನ ಆರಾಧನೆ ಮಾಡಲು ನಿಷೇಧ ಇಲ್ಲದ ದೇಶಕ್ಕೆ ಹೋಗಬೇಕಾ?
8-9. (ಎ) ಪ್ರತಿಯೊಬ್ಬ ಕ್ರೈಸ್ತನು ತನ್ನ ಮತ್ತು ತನ್ನ ಕುಟುಂಬದ ಪರವಾಗಿ ಯಾವ ತೀರ್ಮಾನ ಮಾಡಬೇಕಾಗಿದೆ? (ಬಿ) ಒಳ್ಳೇ ತೀರ್ಮಾನ ಮಾಡಲು ಯಾವುದು ಸಹಾಯ ಮಾಡುತ್ತದೆ?
8 ನೀವು ಇರುವ ದೇಶದಲ್ಲಿ ಸರ್ಕಾರ ಯೆಹೋವನ ಆರಾಧನೆಯ ಮೇಲೆ ನಿಷೇಧ ಹಾಕಿದರೆ ‘ಯೆಹೋವನ ಆರಾಧನೆಗೆ ಯಾವುದೇ ಅಡ್ಡಿ-ತಡೆ ಇಲ್ಲದಿರುವ ದೇಶಕ್ಕೆ ಹೋದರೆ ಚೆನ್ನಾಗಿರುತ್ತೆ’ ಅಂತ ನಿಮಗೆ ಅನಿಸಬಹುದು. ಇದರ ಬಗ್ಗೆ ನೀವೇ ನಿರ್ಧಾರ ಮಾಡಬೇಕು. ಬೇರೆಯವರು ನಿಮಗಾಗಿ ನಿರ್ಧಾರ ಮಾಡಕ್ಕಾಗಲ್ಲ. ಆದರೆ ನಿರ್ಧಾರ ಮಾಡುವ ಮುಂಚೆ ಒಂದನೇ ಶತಮಾನದಲ್ಲಿ ಕ್ರೈಸ್ತರಿಗೆ ಹಿಂಸೆ ಬಂದಾಗ ಅವರು ಏನು ಮಾಡಿದರು ಎಂದು ನೀವು ಅಧ್ಯಯನ ಮಾಡಿದರೆ ಒಳ್ಳೇದು. ಆ ಸಮಯದಲ್ಲಿ ಸ್ತೆಫನನನ್ನು ವಿರೋಧಿಗಳು ಕಲ್ಲೆಸೆದು ಕೊಂದರು, ಆಗ ಯೆರೂಸಲೇಮಿನಲ್ಲಿದ್ದ ಶಿಷ್ಯರು ಯೂದಾಯ, ಸಮಾರ್ಯ ಮತ್ತು ದೂರದ ಪ್ರದೇಶಗಳಾದ ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯಕ್ಕೆ ಹೋಗಿ ವಾಸಿಸಿದರು. (ಮತ್ತಾ. 10:23; ಅ. ಕಾ. 8:1; 11:19) ಒಂದನೇ ಶತಮಾನದಲ್ಲೇ ಇನ್ನೊಮ್ಮೆ ಹಿಂಸೆಯ ಅಲೆ ಎದ್ದಾಗ ಅಪೊಸ್ತಲ ಪೌಲ ಏನು ಮಾಡಿದನು ಅನ್ನುವುದರ ಬಗ್ಗೆ ಕೂಡ ನೀವು ಅಧ್ಯಯನ ಮಾಡಬಹುದು. ಆ ಸಮಯದಲ್ಲಿ ಸುವಾರ್ತೆ ಸಾರುವಾಗ ಪೌಲನಿಗೆ ಎಲ್ಲೆಲ್ಲ ವಿರೋಧ ಬಂತೋ ಆ ಜಾಗಗಳನ್ನು ಬಿಟ್ಟು ಅವನು ಬೇರೆ ಕಡೆ ಹೋಗಲಿಲ್ಲ. ತನ್ನ ಪ್ರಾಣಕ್ಕೆ ಅಪಾಯ ಇದ್ದರೂ ಆ ಸ್ಥಳಗಳಲ್ಲೇ ಸುವಾರ್ತೆ ಸಾರಿದನು ಮತ್ತು ಆ ಪಟ್ಟಣಗಳಲ್ಲಿ ತೀವ್ರ ಹಿಂಸೆಯನ್ನು ಅನುಭವಿಸುತ್ತಿದ್ದ ಸಹೋದರರನ್ನು ಬಲಪಡಿಸಿದನು.—ಅ. ಕಾ. 14:19-23.
9 ಈ ಉದಾಹರಣೆಗಳಿಂದ ನಾವೇನು ಕಲಿಯಬಹುದು? ಯೆಹೋವನನ್ನು ಆರಾಧಿಸಲು ಬೇರೆ ದೇಶಕ್ಕೆ ಹೋಗಬೇಕಾ ಬೇಡ್ವಾ ಎಂದು ಪ್ರತಿಯೊಂದು ಕುಟುಂಬದಲ್ಲಿ ಕುಟುಂಬದ ಯಜಮಾನ ತೀರ್ಮಾನ ಮಾಡಬೇಕು. ತೀರ್ಮಾನ ಮಾಡುವ ಮುಂಚೆ ಅವರು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಬೇಕು. ಅಷ್ಟೇ ಅಲ್ಲ, ತಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆ ಮತ್ತು ಬೇರೆ ದೇಶಕ್ಕೆ ಹೋಗುವುದರಿಂದ ಆಗುವ ಒಳ್ಳೇ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಚೆನ್ನಾಗಿ ಯೋಚಿಸಬೇಕು. ಹೀಗೆ “ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು” ಹೊತ್ತುಕೊಳ್ಳಬೇಕು. (ಗಲಾ. 6:5) ಅವರು ಏನೇ ತೀರ್ಮಾನ ಮಾಡಿದರೂ ಬೇರೆಯವರು ಅದರ ಬಗ್ಗೆ ಕೆಟ್ಟದಾಗಿ ಮಾತಾಡಬಾರದು.
ನಿಷೇಧ ಇದ್ದಾಗ ಯೆಹೋವನ ಆರಾಧನೆ ಮಾಡುವುದು ಹೇಗೆ?
10. ಶಾಖಾ ಕಚೇರಿ ಮತ್ತು ಹಿರಿಯರು ಯಾವ ಮಾರ್ಗದರ್ಶನ ಕೊಡುತ್ತಾರೆ?
10 ನಿಷೇಧ ಬಂದರೂ ಯೆಹೋವನ ಆರಾಧನೆಯನ್ನು ಮುಂದುವರಿಸಲು ನಾವೇನು ಮಾಡಬೇಕು? ಆಧ್ಯಾತ್ಮಿಕ ಆಹಾರವನ್ನು ಹೇಗೆ ಪಡಕೊಳ್ಳಬೇಕು, ಕೂಟಗಳಿಗೆ ಹೇಗೆ ಸೇರಿಬರಬೇಕು ಮತ್ತು ಸುವಾರ್ತೆಯನ್ನು ಹೇಗೆ ಸಾರಬೇಕು ಅನ್ನುವ ವಿಷಯದಲ್ಲಿ ಶಾಖಾ ಕಚೇರಿ ನಿಮ್ಮ ಸಭೆಯ ಹಿರಿಯರಿಗೆ ಸಲಹೆ-ಸೂಚನೆಗಳನ್ನು ಮತ್ತು ಮಾರ್ಗದರ್ಶನವನ್ನು ಕೊಡುತ್ತದೆ. ಶಾಖಾ ಕಚೇರಿಗೆ ಹಿರಿಯರನ್ನು ಸಂಪರ್ಕಿಸಲು ಆಗದೇ ಹೋದಾಗ ಯೆಹೋವನ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಏನು ಮಾಡಬೇಕು ಎಂದು ಹಿರಿಯರು ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ಕೊಡುತ್ತಾರೆ. ಅವರು ಬೈಬಲ್ ಮತ್ತು ನಮ್ಮ ಪ್ರಕಾಶನಗಳಲ್ಲಿ ಇರುವ ಮಾರ್ಗದರ್ಶನಕ್ಕೆ ಅನುಗುಣವಾಗಿ ನಿಮಗೆ ನಿರ್ದೇಶನಗಳನ್ನು ಕೊಡುತ್ತಾರೆ.—ಮತ್ತಾ. 28:19, 20; ಅ. ಕಾ. 5:29; ಇಬ್ರಿ. 10:24, 25.
11. (ಎ) ನಿಷೇಧ ಇದ್ದಾಗ ನಿಮಗೆ ಬೇಕಾದ ಆಧ್ಯಾತ್ಮಿಕ ಆಹಾರ ಖಂಡಿತ ಸಿಗುತ್ತದೆ ಎಂದು ಹೇಗೆ ಹೇಳುತ್ತೀರಿ? (ಬಿ) ನಿಮ್ಮ ಹತ್ತಿರ ಇರುವ ಬೈಬಲ್ ಮತ್ತು ಪ್ರಕಾಶನಗಳನ್ನು ನೀವು ಹೇಗೆ ಕಾಪಾಡುತ್ತೀರಿ?
11 ತನ್ನ ಸೇವಕರಿಗೆ ಆಧ್ಯಾತ್ಮಿಕ ಆಹಾರದ ಕೊರತೆ ಆಗುವುದೇ ಇಲ್ಲ ಎಂದು ಯೆಹೋವನು ಮಾತುಕೊಟ್ಟಿದ್ದಾನೆ. (ಯೆಶಾ. 65:13, 14; ಲೂಕ 12:42-44) ಆದ್ದರಿಂದ ನಿಮಗೆ ಬೇಕಾದ ಆಧ್ಯಾತ್ಮಿಕ ಆಹಾರವನ್ನು ಕೊಡಲು ಆತನ ಸಂಘಟನೆ ಎಲ್ಲಾ ಪ್ರಯತ್ನವನ್ನು ಮಾಡೇ ಮಾಡುತ್ತದೆ. ಆದರೆ ನೀವು ಕೂಡ ಮಾಡಬೇಕಾದ ಒಂದು ವಿಷಯ ಇದೆ. ಅದೇನೆಂದರೆ, ನಿಷೇಧ ಬಂದಾಗ ನಿಮ್ಮ ಬೈಬಲನ್ನು ಮತ್ತು ನಿಮ್ಮ ಹತ್ತಿರ ಇರುವ ಪ್ರಕಾಶನಗಳನ್ನು ಸುರಕ್ಷಿತವಾದ ಜಾಗದಲ್ಲಿ ಬಚ್ಚಿಡಬೇಕು. ಅದನ್ನು ವಿರೋಧಿಗಳಿಗೆ ಸಿಗದಂಥ ಜಾಗದಲ್ಲಿ ಇಡಬೇಕು. ಯಾಕೆಂದರೆ ನಿಮ್ಮ ಹತ್ತಿರ ಮುದ್ರಿತ ರೂಪದಲ್ಲಿ ಆಗಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಆಗಲಿ ಇರುವ ಆಧ್ಯಾತ್ಮಿಕ ಆಹಾರ ತುಂಬ ಅಮೂಲ್ಯವಾದ ವಿಷಯ. ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ಬಲವಾಗಿರಲು ಇಂಥ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು.
12. ಜನರ ಗಮನಸೆಳೆಯದ ರೀತಿಯಲ್ಲಿ ಕೂಟಗಳನ್ನು ನಡೆಸಲು ಹಿರಿಯರು ಏನು ಮಾಡುತ್ತಾರೆ?
12 ಪ್ರತಿವಾರ ಕೂಟಗಳು ಹೇಗೆ ನಡೆಯುತ್ತವೆ? ಹಿರಿಯರು ವಿರೋಧಿಗಳಿಗೆ ಗೊತ್ತಾಗದ ರೀತಿಯಲ್ಲಿ ಕೂಟಗಳನ್ನು ಏರ್ಪಡಿಸುತ್ತಾರೆ. ಅದಕ್ಕಾಗಿ ಚಿಕ್ಕ ಚಿಕ್ಕ ಗುಂಪಾಗಿ ಕೂಡಿಬರುವಂತೆ ಅವರು ನಿಮಗೆ ಹೇಳಬಹುದು ಮತ್ತು ಕೂಟ ನಡೆಯುವ ಸ್ಥಳವನ್ನು, ಸಮಯವನ್ನು ಆಗಾಗ ಬದಲಾಯಿಸಬಹುದು. ನೀವು ಕೂಟಕ್ಕೆ ಬರುವಾಗ ಮತ್ತು ಹೋಗುವಾಗ ಮೆಲ್ಲಗೆ ಮಾತಾಡಿ, ಗಟ್ಟಿಯಾಗಿ ಮಾತಾಡಬೇಡಿ. ನಾವು ಜೋರಾಗಿ ಮಾತಾಡಿದರೆ ಕೂಟಕ್ಕೆ ಬರುವ ಎಲ್ಲಾ ಸಹೋದರ-ಸಹೋದರಿಯರನ್ನು ಅಪಾಯಕ್ಕೆ ತಳ್ಳಿಬಿಡಬಹುದು. ಬೇರೆಯವರ ಗಮನ ನಮ್ಮ ಕಡೆಗೆ ಸೆಳೆಯದ ರೀತಿಯಲ್ಲಿ ಬಟ್ಟೆ ಧರಿಸುವುದು ಕೂಡ ಪ್ರಾಮುಖ್ಯ.
13. ಸೋವಿಯತ್ ಒಕ್ಕೂಟದಲ್ಲಿದ್ದ ನಮ್ಮ ಸಹೋದರರಿಂದ ನಾವೇನು ಕಲಿಯಬಹುದು?
13 ಸುವಾರ್ತೆ ಸಾರುವುದರ ಬಗ್ಗೆ ಏನು? ಎಲ್ಲಾ ದೇಶಗಳ ಸನ್ನಿವೇಶ ಒಂದೇ ರೀತಿ ಇರುವುದಿಲ್ಲ. ಆದರೂ ನಾವು ಯೆಹೋವನನ್ನು ಪ್ರೀತಿಸುವುದರಿಂದ ಮತ್ತು ಆತನ ರಾಜ್ಯದ ಬಗ್ಗೆ ಬೇರೆಯವರಿಗೆ ಹೇಳಲು ಇಷ್ಟಪಡುವುದರಿಂದ ಸಾರಲಿಕ್ಕಾಗಿ ದಾರಿ ಹುಡುಕುತ್ತಾ ಇರುತ್ತೇವೆ. (ಲೂಕ 8:1; ಅ. ಕಾ. 4:29, 30) ಹಿಂದೆ ಸೋವಿಯತ್ ಒಕ್ಕೂಟದಲ್ಲಿ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರಿದ್ದರ ಬಗ್ಗೆ ಎಮಲೀ ಬೆರನ್ ಎಂಬ ಇತಿಹಾಸಗಾರ್ತಿ ಹೀಗೆ ಬರೆದರು: “ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆ ಬಗ್ಗೆ ಬೇರೆಯವರಿಗೆ ಸಾರಬಾರದು ಅಂತ ಸರ್ಕಾರ ಹೇಳಿದಾಗ ಸಾಕ್ಷಿಗಳು ತಮ್ಮ ನೆರೆಯವರಿಗೆ, ಜೊತೆಯಲ್ಲಿ ಕೆಲಸ ಮಾಡುವವರಿಗೆ, ಸ್ನೇಹಿತರಿಗೆ ಸುವಾರ್ತೆ ಸಾರಿದರು. ಇದರಿಂದಾಗಿ ಅವರನ್ನು ಸೆರೆಶಿಬಿರಗಳಿಗೆ ಹಾಕಲಾಯಿತು. ಅಲ್ಲಿಯೂ ಅವರು ತಮ್ಮ ಜೊತೆ ಇದ್ದ ಕೈದಿಗಳಿಗೆ ಸಾರುವುದಕ್ಕೆ ಹಿಂಜರಿಯಲಿಲ್ಲ.” ಅವತ್ತು ಸೋವಿಯತ್ ಒಕ್ಕೂಟದಲ್ಲಿ ನಿಷೇಧ ಇದ್ದರೂ ನಮ್ಮ ಸಹೋದರ-ಸಹೋದರಿಯರು ಸುವಾರ್ತೆ ಸಾರುವುದನ್ನು ನಿಲ್ಲಿಸಲಿಲ್ಲ. ಒಂದುವೇಳೆ ನಿಮ್ಮ ದೇಶದಲ್ಲಿ ಈ ರೀತಿ ನಿಷೇಧ ಬಂದರೆ ಆ ಸಹೋದರ-ಸಹೋದರಿಯರ ತರಾನೇ ನೀವೂ ಸುವಾರ್ತೆ ಸಾರಬಹುದು!
ನಾವೇನು ಮಾಡಬಾರದು?
14. ನಾವು ಏನು ಮಾಡಬೇಕು ಎಂದು ಕೀರ್ತನೆ 39:1 ಹೇಳುತ್ತದೆ?
14 ಗುಟ್ಟಾಗಿ ಇಡಬೇಕಾದ ವಿಷಯವನ್ನು ಯಾರಿಗೂ ಹೇಳಬೇಡಿ. ನಿಷೇಧ ಇದ್ದಾಗ ಅದು ನಾವು ‘ಸುಮ್ಮನಿರಬೇಕಾದ ಸಮಯ’ ಅನ್ನುವುದನ್ನು ಮನಸ್ಸಲ್ಲಿಡಬೇಕು. (ಪ್ರಸಂ. 3:7) ಗುಟ್ಟಾಗಿ ಇಡಬೇಕಾದ ಮಾಹಿತಿಯನ್ನು ನಾವು ಯಾರಿಗೂ ತಿಳಿಸಲ್ಲ. ಉದಾಹರಣೆಗೆ, ನಮ್ಮ ಸಹೋದರ-ಸಹೋದರಿಯರ ಹೆಸರುಗಳನ್ನು, ನಾವು ಕೂಟಕ್ಕಾಗಿ ಎಲ್ಲಿ ಸೇರಿಬರುತ್ತೇವೆ, ನಾವು ಹೇಗೆ ಸೇವೆ ಮಾಡುತ್ತೇವೆ, ನಮಗೆ ಹೇಗೆ ಆಧ್ಯಾತ್ಮಿಕ ಆಹಾರ ಸಿಗುತ್ತದೆ ಇಂಥ ವಿಷಯಗಳನ್ನು ಸರ್ಕಾರಿ ಅಧಿಕಾರಿಗಳಿಗಾಗಲಿ, ನಾವಿರುವ ದೇಶದಲ್ಲಿ ಅಥವಾ ಬೇರೆ ದೇಶದಲ್ಲಿ ಇರುವ ನಮ್ಮ ಸ್ನೇಹಿತರಿಗಾಗಲಿ ಸಂಬಂಧಿಕರಿಗಾಗಲಿ ತಿಳಿಸಲ್ಲ. ಆ ಸ್ನೇಹಿತರು-ಸಂಬಂಧಿಕರು ಸಾಕ್ಷಿಗಳಾಗಿದ್ದರೂ ತಿಳಿಸಲ್ಲ. ಹಾಗೇನಾದರೂ ತಿಳಿಸಿಬಿಟ್ಟರೆ ನಮ್ಮಿಂದಾಗಿ ನಮ್ಮ ಸಹೋದರ-ಸಹೋದರಿಯರಿಗೆ ಅಪಾಯ ಆಗುತ್ತದೆ.—ಕೀರ್ತನೆ 39:1 ಓದಿ.
15. (ಎ) ಸೈತಾನನು ಏನು ಮಾಡಲು ಪ್ರಯತ್ನಿಸುತ್ತಾನೆ? (ಬಿ) ಅವನ ಕುತಂತ್ರಕ್ಕೆ ಬಲಿಯಾಗದಂತೆ ನಾವು ಹೇಗೆ ತಪ್ಪಿಸಿಕೊಳ್ಳಬಹುದು?
15 ಚಿಕ್ಕ-ಪುಟ್ಟ ಮನಸ್ತಾಪಗಳಿದ್ದರೂ ದೂರ ಆಗಬೇಡಿ. ಒಡಕು ಬಂದ ಕುಟುಂಬ ಬೇಗ ಬಿದ್ದುಹೋಗುತ್ತೆ ಅಂತ ಸೈತಾನನಿಗೆ ಗೊತ್ತು. (ಮಾರ್ಕ 3:24, 25) ಹಾಗಾಗಿ ಅವನು ನಮ್ಮ ಆಧ್ಯಾತ್ಮಿಕ ಕುಟುಂಬದಲ್ಲಿ ಒಡಕು ತರಲು ಪ್ರಯತ್ನಿಸುತ್ತಾ ಇರುತ್ತಾನೆ. ಯಾಕೆಂದರೆ ನಾವು ಅವನ ವಿರುದ್ಧ ಹೋರಾಡುವುದನ್ನು ಬಿಟ್ಟು ನಾವು ನಾವೇ ಜಗಳ ಆಡಿಕೊಂಡು ಇರಬೇಕು ಅನ್ನುವುದೇ ಅವನ ಆಸೆ.
16. ಸಹೋದರಿ ಗರ್ಟ್ರೂಡ್ ಪೊಟ್ಸಿಂಗರ್ ನಮಗೆ ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ?
16 ಪ್ರೌಢ ಕ್ರೈಸ್ತರು ಕೂಡ ಸೈತಾನನ ಈ ಕುತಂತ್ರಕ್ಕೆ ಬಲಿಯಾಗದೆ ಇರುವಂತೆ ನೋಡಿಕೊಳ್ಳಬೇಕು. ಇಬ್ಬರು ಅಭಿಷಿಕ್ತ ಸಹೋದರಿಯರ ಉದಾಹರಣೆ ನೋಡಿ. ಒಬ್ಬರ ಹೆಸರು ಗರ್ಟ್ರೂಡ್ ಪೊಟ್ಸಿಂಗರ್, ಇನ್ನೊಬ್ಬರ ಹೆಸರು ಎಲ್ಫ್ರೀಡ್ ಲೊರ್. ಇಬ್ಬರೂ ನಾಜಿ ಸೆರೆಶಿಬಿರದಲ್ಲಿ ಇದ್ದರು. ಅಲ್ಲಿ ಬೇರೆ ಸಹೋದರಿಯರೂ ಇದ್ದರು. ಶಿಬಿರದಲ್ಲಿದ್ದ ಬೇರೆ ಸಹೋದರಿಯರಿಗೆ ಸಹೋದರಿ ಎಲ್ಫ್ರೀಡ್ ಧೈರ್ಯತುಂಬಿಸುವ ಭಾಷಣಗಳನ್ನು ಕೊಟ್ಟಾಗ ಸಹೋದರಿ ಗರ್ಟ್ರೂಡ್ಗೆ ಹೊಟ್ಟೆಕಿಚ್ಚಾಯಿತು. ಆದರೆ ನಂತರ, ಹೊಟ್ಟೆಕಿಚ್ಚು ಪಟ್ಟಿದ್ದಕ್ಕೆ ತನ್ನ ಬಗ್ಗೆ ತನಗೇ ನಾಚಿಕೆ ಆಗಿ ಅವರು ಯೆಹೋವನ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿದರು. ಅವರು ಬರೆದಿದ್ದು: “ಬೇರೆಯವರಿಗೆ ನಮಗಿಂತ ಹೆಚ್ಚಿನ ಸಾಮರ್ಥ್ಯಗಳು, ಜವಾಬ್ದಾರಿಗಳು ಇದ್ದಾಗ ಅವರ ಬಗ್ಗೆ ನಾವು ಸಂತೋಷ ಪಡಬೇಕು.” ಆ ಸಹೋದರಿ ಹೊಟ್ಟೆಕಿಚ್ಚು ಪಡುವುದನ್ನು ಹೇಗೆ ಬಿಟ್ಟುಬಿಟ್ಟರು? ಸಹೋದರಿ ಎಲ್ಫ್ರೀಡ್ ಎಲ್ಲರ ಜೊತೆ ಪ್ರೀತಿ-ಸ್ನೇಹದಿಂದ ಮಾತಾಡುತ್ತಿದ್ದರು. ಅವರ ಈ ಸ್ವಭಾವ ಮತ್ತು ಇನ್ನೂ ಬೇರೆ ಒಳ್ಳೇ ಗುಣಗಳ ಕಡೆಗೆ ಸಹೋದರಿ ಗರ್ಟ್ರೂಡ್ ಗಮನಕೊಟ್ಟರು. ಹೀಗೆ ಅವರ ಜೊತೆ ಮತ್ತೆ ಆಪ್ತ ಸಂಬಂಧ ಬೆಳೆಸಿಕೊಂಡರು. ಇಬ್ಬರೂ ಸೆರೆಶಿಬಿರದಿಂದ ನಂಬಿಗಸ್ತರಾಗಿ ಹೊರಗೆ ಬಂದರು ಮತ್ತು ತಮ್ಮ ಭೂಜೀವಿತ ಮುಗಿಯುವವರೆಗೂ ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡಿದರು. ನಮ್ಮ ಸಹೋದರರ ಬಗ್ಗೆ ಏನೇ ಮನಸ್ತಾಪ ಇದ್ದರೂ ಅದನ್ನು ಶತಪ್ರಯತ್ನ ಹಾಕಿ ಬಗೆಹರಿಸಿಕೊಂಡರೆ ಸೈತಾನನ ಬಲೆಗೆ ನಾವು ಬೀಳಲ್ಲ.—ಕೊಲೊ. 3:13, 14.
17. ಯೆಹೋವನ ಸಂಘಟನೆಯಿಂದ ಸಿಗುವ ಪ್ರತಿಯೊಂದು ನಿರ್ದೇಶನವನ್ನು ನಾವು ಯಾಕೆ ಪಾಲಿಸಲೇಬೇಕು?
17 ನಿರ್ದೇಶನಗಳನ್ನು ಮೀರಬೇಡಿ. ಭರವಸಾರ್ಹ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಹೋದರರಿಂದ ಸಿಗುವ ನಿರ್ದೇಶನಗಳನ್ನು ನಾವು ಪಾಲಿಸಿದರೆ ಅಪಾಯದಿಂದ ತಪ್ಪಿಸಿಕೊಳ್ಳುತ್ತೇವೆ. (1 ಪೇತ್ರ 5:5) ಉದಾಹರಣೆಗೆ, ನಿಷೇಧ ಇದ್ದ ಒಂದು ದೇಶದಲ್ಲಿ ಜವಾಬ್ದಾರಿಯುತ ಸಹೋದರರು ಅನೌಪಚಾರಿಕ ಸಾಕ್ಷಿಕಾರ್ಯದ ಏರ್ಪಾಡು ಮಾಡಿದ್ದರು, ಆದರೆ ಮುದ್ರಿತ ಪ್ರಕಾಶನಗಳನ್ನು ಕೊಡಬಾರದು ಎಂದು ನಿರ್ದೇಶನ ಕೊಟ್ಟಿದ್ದರು. ಅದನ್ನು ಒಬ್ಬ ಪಯನೀಯರ್ ಸಹೋದರ ಪಾಲಿಸಲಿಲ್ಲ. ಸೇವೆ ಮಾಡುತ್ತಿದ್ದಾಗ ಪ್ರಕಾಶನಗಳನ್ನು ಕೊಟ್ಟರು. ಇದರಿಂದ ಏನಾಯಿತು? ಅವರು ಸೇವೆ ಮಾಡುತ್ತಿದ್ದಾಗ ಸರ್ಕಾರಿ ಅಧಿಕಾರಿಗಳು ಅವರನ್ನು ಹಿಂಬಾಲಿಸುತ್ತಾ ಇದ್ದರು ಮತ್ತು ಅವರು ಜನರಿಗೆ ಕೊಟ್ಟ ಪ್ರಕಾಶನಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಆ ಸಹೋದರ ಮತ್ತು ಇನ್ನು ಕೆಲವರು ಸಾಕ್ಷಿಕಾರ್ಯ ಮುಗಿಸಿದ ಸ್ವಲ್ಪ ಸಮಯದಲ್ಲೇ ಪೊಲೀಸರು ಅವರನ್ನು ವಿಚಾರಣೆ ಮಾಡಿದರು. ಇದರಿಂದ ನಾವೇನು ಕಲಿಯುತ್ತೇವೆ? ನಮಗೆ ಇಷ್ಟ ಇಲ್ಲದಿದ್ದರೂ ನಿರ್ದೇಶನಗಳನ್ನು ಪಾಲಿಸಲೇಬೇಕು. ನಮ್ಮನ್ನು ನಡೆಸುವುದಕ್ಕಾಗಿ ಯೆಹೋವನು ನೇಮಿಸಿರುವ ಸಹೋದರರಿಗೆ ಸಹಕಾರ ಕೊಟ್ಟರೆ ಆತನು ನಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ.—ಇಬ್ರಿ. 13:7, 17.
18. ನಾವು ಯಾಕೆ ಅನಾವಶ್ಯಕವಾಗಿ ನಿಯಮಗಳನ್ನು ಮಾಡಬಾರದು?
18 ಅನಾವಶ್ಯಕವಾಗಿ ನಿಯಮಗಳನ್ನು ಮಾಡಬೇಡಿ. ಹಿರಿಯರು ಅನಾವಶ್ಯಕವಾಗಿ ನಿಯಮಗಳನ್ನು ಮಾಡಿದರೆ ಸಹೋದರ-ಸಹೋದರಿಯರಿಗೆ ತುಂಬ ಕಷ್ಟ ಆಗುತ್ತದೆ. ಹಿಂದಿನ ಜೆಕೊಸ್ಲೊವಾಕಿಯದಲ್ಲಿ ನಿಷೇಧ ಇದ್ದಾಗ ಏನಾಯಿತು ಅಂತ ಸಹೋದರ ಯೂರೈ ಕಾಮಿನ್ಸ್ಕೀ ನೆನಪಿಸಿಕೊಳ್ಳುತ್ತಾರೆ. ಅವರು ಹೇಳಿದ್ದು: “ಅನೇಕ ಹಿರಿಯರನ್ನು ಅರೆಸ್ಟ್ ಮಾಡಿದ ನಂತರ ಸಭೆಯಲ್ಲಿ ಮತ್ತು ಸರ್ಕಿಟಿನಲ್ಲಿ ಮುಂದಾಳತ್ವ ವಹಿಸಿದ ಕೆಲವರು ತಮ್ಮದೇ ನಿಯಮಗಳನ್ನು ಮಾಡಿ ಪ್ರಚಾರಕರಿಗೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋದರ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಟ್ಟರು.” ಯೆಹೋವನು ಯಾರಿಗೂ ಬೇರೆಯವರ ಪರವಾಗಿ ತೀರ್ಮಾನ ಮಾಡುವ ಅಧಿಕಾರ ಕೊಟ್ಟಿಲ್ಲ. ನಾವು ಅನಾವಶ್ಯಕವಾಗಿ ನಿಯಮಗಳನ್ನು ಮಾಡಿದರೆ ನಮ್ಮ ಸಹೋದರರನ್ನು ಅಪಾಯದಿಂದ ಕಾಪಾಡಲ್ಲ, ಬದಲಿಗೆ ಅವರ ನಂಬಿಕೆಯ ಒಡೆಯರಾಗುತ್ತೇವೆ.—2 ಕೊರಿಂ. 1:24.
ಯೆಹೋವನನ್ನು ಆರಾಧಿಸುವುದನ್ನು ಯಾವತ್ತಿಗೂ ನಿಲ್ಲಿಸಬೇಡಿ
19. ಸೈತಾನ ಏನೇ ಮಾಡಿದರೂ ನಾವು ಧೈರ್ಯವಾಗಿ ಇರಲು 2 ಪೂರ್ವಕಾಲವೃತ್ತಾಂತ 32:7, 8 ನಮಗೆ ಯಾವ ಕಾರಣ ಕೊಡುತ್ತದೆ?
19 ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುತ್ತಿರುವವರಿಗೆ ವೈರಿಯಾದ ಸೈತಾನ ಹಿಂಸೆ ಕೊಡುವುದನ್ನು ನಿಲ್ಲಿಸಲ್ಲ. (1 ಪೇತ್ರ 5:8; ಪ್ರಕ. 2:10) ಸೈತಾನ ಮತ್ತು ಅವನ ಬೆಂಬಲಿಗರು ಯೆಹೋವನ ಆರಾಧನೆಯ ಮೇಲೆ ನಿಷೇಧ ಹಾಕಲು ಪ್ರಯತ್ನಿಸುತ್ತಾರೆ. ಸರ್ಕಾರ ಹಾಗೇನಾದರೂ ನಿಷೇಧ ಹಾಕಿದರೆ ನಾವು ಭಯದಲ್ಲಿ ಮುಳುಗಿಹೋಗುವ ಅವಶ್ಯಕತೆ ಇಲ್ಲ! (ಧರ್ಮೋ. 7:21) ಯಾಕೆಂದರೆ ನಮ್ಮ ಜೊತೆ ಯೆಹೋವನಿದ್ದಾನೆ. ನಮ್ಮ ಕೆಲಸದ ಮೇಲೆ ನಿಷೇಧ ಬಂದರೂ ಆತನ ಸಹಾಯ ನಮಗೆ ಇದ್ದೇ ಇರುತ್ತದೆ.—2 ಪೂರ್ವಕಾಲವೃತ್ತಾಂತ 32:7, 8 ಓದಿ.
20. ನಿಮ್ಮ ದೃಢತೀರ್ಮಾನ ಏನು?
20 ಒಂದನೇ ಶತಮಾನದಲ್ಲಿದ್ದ ನಮ್ಮ ಸಹೋದರರು ತಮ್ಮ ಮೇಲೆ ಅಧಿಕಾರ ನಡೆಸುತ್ತಿದ್ದವರಿಗೆ ಹೀಗೆ ಹೇಳಿದರು: “ದೇವರಿಗೆ ಬದಲಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ನ್ಯಾಯವಾಗಿದೆಯೋ ಎಂಬುದನ್ನು ನೀವೇ ತೀರ್ಪುಮಾಡಿಕೊಳ್ಳಿರಿ. ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು.” (ಅ. ಕಾ. 4:19, 20) ಇದೇ ದೃಢತೀರ್ಮಾನವನ್ನು ನಾವೂ ಮಾಡೋಣ.
ಗೀತೆ 137 ಕೊಡು ನಮಗೆ ಧೈರ್ಯ
a ಯೆಹೋವನನ್ನು ಆರಾಧನೆ ಮಾಡಬಾರದು ಎಂದು ಸರ್ಕಾರ ನಿಷೇಧ ಹಾಕಿದರೆ ನಾವೇನು ಮಾಡಬೇಕು? ಇಂಥ ಸನ್ನಿವೇಶದಲ್ಲೂ ನಾವು ಯೆಹೋವನ ಆರಾಧನೆಯನ್ನು ಮುಂದುವರಿಸುತ್ತಾ ಹೋಗಬೇಕೆಂದರೆ ನಾವೇನು ಮಾಡಬೇಕು, ಏನು ಮಾಡಬಾರದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.
b ಚಿತ್ರ ವಿವರಣೆ: ನಿರ್ಬಂಧ ಇರುವ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಆರಾಧಿಸುತ್ತಾರೆ ಅನ್ನುವುದನ್ನು ಈ ಚಿತ್ರಗಳಲ್ಲಿ ತೋರಿಸಲಾಗಿದೆ.ಒಬ್ಬ ಸಹೋದರನ ಮನೆಯ ಸ್ಟೋರ್ರೂಮಿನಲ್ಲಿ ಸಹೋದರ-ಸಹೋದರಿಯರು ಚಿಕ್ಕ ಗುಂಪಾಗಿ ಕೂಟಕ್ಕೆ ಸೇರಿಬಂದಿದ್ದಾರೆ.
c ಚಿತ್ರ ವಿವರಣೆ: ಎಡಗಡೆಯಲ್ಲಿರುವ ಸಹೋದರಿ ಒಬ್ಬ ಮಹಿಳೆ ಹತ್ತಿರ ಮಾತಾಡುತ್ತಾ ಸುವಾರ್ತೆ ಸಾರಲು ಅವಕಾಶ ಮಾಡಿಕೊಳ್ಳುತ್ತಿದ್ದಾಳೆ.
d ಚಿತ್ರ ವಿವರಣೆ: ಒಬ್ಬ ಸಹೋದರನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವಾಗ ಆತನು ತನ್ನ ಸಭೆಯ ಬಗ್ಗೆ ಯಾವ ಮಾಹಿತಿಯನ್ನೂ ಕೊಡುತ್ತಿಲ್ಲ.