“ಮೌನವಾಗಿರುವ ಸಮಯ”
“ಮಾತು ಬೆಳ್ಳಿ, ಮೌನ ಬಂಗಾರ.” ಇದು ಪೂರ್ವದೇಶದಲ್ಲಿ ಹುಟ್ಟಿತ್ತೆಂದು ಹೇಳಲಾಗುವ ಒಂದು ಹಳೆಯ ನಾಣ್ಣುಡಿ. ಇದಕ್ಕೆ ಸಮಾನಾಗಿ “ಮಾತು ಕ್ಷಣಿಕ ಮೌನ ಅನಂತ” ಎಂಬ ಇನ್ನೊಂದು ಗಾದೆಯೂ ಇದೆ. “ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ. . . . ಮೌನವಾಗಿರುವ ಸಮಯ, ಮಾತಾಡುವ ಸಮಯ” ಎಂದು ಪ್ರಾಚೀನ ಇಸ್ರಾಯೇಲಿನ ವಿವೇಕಿ ರಾಜ ಸೊಲೊಮೋನನು ಬರೆದನು.—ಪ್ರಸಂ. 3:1, 7, ಪರಿಶುದ್ಧ ಬೈಬಲ್.a
ಮಾತಾಡದೆ ಸುಮ್ಮನಿರುವುದು ಯಾವಾಗ ತಕ್ಕದಾಗಿದೆ? “ಮೌನ” ಮತ್ತು “ಸುಮ್ಮನಿರು” ಎಂಬ ಪದಗಳು ಬೈಬಲಿನಲ್ಲಿ ಅನೇಕ ಬಾರಿ ಕಂಡುಬರುತ್ತವೆ. ಈ ಪದಗಳನ್ನು ಉಪಯೋಗಿಸಲಾದ ಸನ್ನಿವೇಶವು ಕಡಿಮೆಪಕ್ಷ ಜೀವನದ ಮೂರು ಸಂದರ್ಭಗಳಲ್ಲಿ ಮೌನವಾಗಿರುವುದು ಉಚಿತ ಎಂಬುದನ್ನು ತೋರಿಸುತ್ತದೆ. ಈಗ ನಾವು, ಮೌನ ಹೇಗೆ ಗೌರವ ಸೂಚಕವಾಗಿದೆ, ಬುದ್ಧಿವಂತಿಕೆ ಹಾಗೂ ವಿವೇಚನೆಯ ಪುರಾವೆಯಾಗಿದೆ ಮತ್ತು ಧ್ಯಾನಿಸುವಿಕೆಗೆ ಸಹಾಯಕಾರಿಯಾಗಿದೆ ಎಂಬುದನ್ನು ಪರಿಶೀಲಿಸೋಣ.
ಗೌರವ ಸೂಚಕ
ಮೌನವು ಗೌರವದ ಲಕ್ಷಣವಾಗಿದೆ. “ಯೆಹೋವನೋ ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ” ಎಂದು ಪ್ರವಾದಿ ಹಬಕ್ಕೂಕನು ಹೇಳಿದನು. (ಹಬ. 2:20) ಸತ್ಯಾರಾಧಕರು “ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ [“ಮೌನವಾಗಿ,” NW] ಕಾದುಕೊಂಡಿರುವದು ಒಳ್ಳೇದು.” (ಪ್ರಲಾ. 3:26) ಕೀರ್ತನೆಗಾರನು ಹಾಡಿದ್ದು: “ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ [“ಮೌನವಾಗಿ,” NW] ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.”—ಕೀರ್ತ. 37:7.
ಮಾತಿಲ್ಲದೆ ನಾವು ಯೆಹೋವನನ್ನು ಸ್ತುತಿಸಸಾಧ್ಯವೋ? ಸೃಷ್ಟಿಯ ಸೊಬಗನ್ನು ನೋಡಿ ಕೆಲವೊಮ್ಮೆ ನಾವು ವಿಸ್ಮಿತರಾಗಿ ಮಾತೇ ಬಾರದೆ ನಿಂತುಬಿಡುವುದಿಲ್ಲವೇ? ಅಂಥ ಭವ್ಯ ಸೊಬಗಿನ ಕುರಿತು ಆಲೋಚಿಸುವುದು ಯೆಹೋವನನ್ನು ನಮ್ಮ ಮನದಲ್ಲೇ ಸ್ತುತಿಸುವ ಒಂದು ವಿಧವಲ್ಲವೇ? ಕೀರ್ತನೆಗಾರ ದಾವೀದನು ತನ್ನ ಒಂದು ಗೀತೆಯನ್ನು ಹೀಗೆ ಆರಂಭಿಸಿದನು: “ದೇವರೇ, ಚೀಯೋನಿನಲ್ಲಿ ನಿನಗೋಸ್ಕರ [ಮೌನ] ಸ್ತೋತ್ರವು ಸಿದ್ಧವಾಗಿದೆ; ಹರಕೆಗಳು ನಿನಗೆ ಸಲ್ಲುತ್ತವೆ.”—ಕೀರ್ತ. 65:1.
ಯೆಹೋವನು ಹೇಗೆ ನಮ್ಮ ಗೌರವಕ್ಕೆ ಯೋಗ್ಯನೋ ಹಾಗೆಯೇ ಆತನ ಮಾತುಗಳು ಸಹ ನಮ್ಮ ಗೌರವಕ್ಕೆ ಯೋಗ್ಯವಾಗಿವೆ. ಉದಾಹರಣೆಗೆ ದೇವರ ಪ್ರವಾದಿಯಾದ ಮೋಶೆಯು ತನ್ನ ಕೊನೆಯ ಭಾಷಣ ನೀಡಿದ ಸಮಯದಲ್ಲಿ ಅವನೂ ಯಾಜಕರೂ ಇಸ್ರಾಯೇಲ್ಯ ಜನರಿಗೆ, ‘ನಿಶ್ಯಬ್ದವಾಗಿದ್ದು . . . ಆತನ [ಯೆಹೋವನ] ಮಾತುಗಳಿಗೆ ಕಿವಿಗೊಡಿರಿ’ ಎಂದು ಬುದ್ಧಿವಾದ ನೀಡಿದರು. ಇಸ್ರಾಯೇಲ್ಯರು ದೇವರ ಧರ್ಮಶಾಸ್ತ್ರವನ್ನು ಓದಲು ಒಟ್ಟುಗೂಡಿದಾಗ ಮಕ್ಕಳು ಸಹ ಏಕಾಗ್ರತೆಯಿಂದ ಕಿವಿಗೊಡಬೇಕಿತ್ತು. “ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ . . . ಕೂಡಿಸಬೇಕು” ಎಂದು ಮೋಶೆಯು ಹೇಳಿದನು.—ಧರ್ಮೋ. 27:9, 10; 31:11, 12.
ಹಾಗಾದರೆ, ಆಧುನಿಕ ದಿನಗಳ ಯೆಹೋವನ ಆರಾಧಕರು ಸಹ ದೊಡ್ಡ ಅಧಿವೇಶನಗಳನ್ನೂ ಒಳಗೊಂಡು ಎಲ್ಲಾ ಕ್ರೈಸ್ತ ಕೂಟಗಳಲ್ಲಿ ಸಿಗುವ ನಿರ್ದೇಶನಗಳಿಗೆ ಗೌರವಪೂರ್ವಕವಾಗಿ ಕಿವಿಗೊಡುವುದು ಎಷ್ಟೊಂದು ಯೋಗ್ಯವಾಗಿದೆ! ವೇದಿಕೆಯಿಂದ ಪ್ರಮುಖ ಬೈಬಲ್ ಸತ್ಯಗಳನ್ನು ತಿಳಿಸುವಾಗ ನಾವು ಅನಗತ್ಯವಾಗಿ ಇನ್ನೊಬ್ಬರೊಂದಿಗೆ ಮಾತನಾಡುವುದಾದರೆ ಅದು ದೇವರ ವಾಕ್ಯಕ್ಕೂ ಆತನ ಸಂಘಟನೆಗೂ ಅಗೌರವ ತೋರಿಸಿದಂತಾಗುವುದಿಲ್ಲವೇ? ಕಾರ್ಯಕ್ರಮದ ಸಮಯವು, ಸುಮ್ಮನಿದ್ದು ಆಲಿಸುವ ಸಮಯವಾಗಿದೆ.
ಇನ್ನೊಬ್ಬರೊಂದಿಗೆ ಮಾತಾಡುವಾಗ ಸಹ ಗಮನಕೊಟ್ಟು ಆಲಿಸುವುದು ನಾವು ಅವರನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಡುತ್ತದೆ. ಉದಾಹರಣೆಗೆ ಮೂಲಪಿತ ಯೋಬನು ತನ್ನ ಮೇಲೆ ದೋಷಾರೋಪ ಹೊರಿಸುತ್ತಿದ್ದವರಿಗೆ ಹೇಳಿದ್ದು: “ನನಗೆ ಉಪದೇಶಮಾಡಿ . . . , ನಾನು ಮೌನದಿಂದಿರುವೆನು.” ಅವರು ಮಾತನಾಡುವಾಗ ಯೋಬನು ಮೌನವಾಗಿದ್ದು ಕೇಳಲು ಸಿದ್ಧನಿದ್ದನು. ತಾನು ಮಾತನಾಡಬೇಕಾದ ಸಮಯ ಬಂದಾಗ ಅವನು ಹೇಳಿದ್ದು: “ಸುಮ್ಮನಿರಿ, ನನ್ನನ್ನು ಬಿಡಿರಿ, ನಾನು ಮಾತಾಡಬೇಕು.”—ಯೋಬ 6:24; 13:13.
ಬುದ್ಧಿವಂತಿಕೆ ಹಾಗೂ ವಿವೇಚನೆಯ ಪುರಾವೆ
“ಮೌನಿಯು ಮತಿವಂತ,” “ವಿವೇಕಿಯು ಬಾಯಿಬಿಡನು” ಎಂದು ಹೇಳುತ್ತದೆ ಬೈಬಲ್. (ಜ್ಞಾನೋ. 10:19; 11:12) ಮೌನವಹಿಸುವ ಮೂಲಕ ಯೇಸು ಹೇಗೆ ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ತೋರಿಸಿಕೊಟ್ಟನೆಂಬುದನ್ನು ಗಮನಿಸಿ. ವೈರಿಗಳು ತನ್ನನ್ನು ಕಠಿನವಾಗಿ ವಿರೋಧಿಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲವೆಂದು ವಿವೇಚಿಸಿ ತಿಳಿದ “ಯೇಸು, ಸುಮ್ಮನಿದ್ದನು.” (ಮತ್ತಾ. 26:63) ನಂತರ, ಪಿಲಾತನು ವಿಚಾರಣೆ ನಡೆಸಿದಾಗ ಸಹ “ಅವನು ಏನೂ ಉತ್ತರಕೊಡಲಿಲ್ಲ.” ತಾನು ಮಾಡಿದ ಕ್ರಿಯೆಗಳೇ ಉತ್ತರಕೊಡುವಂತೆ ಜಾಣತನದಿಂದ ಬಿಟ್ಟುಬಿಟ್ಟನು.—ಮತ್ತಾ. 27:11-14.
ನಾವು ತುಂಬ ಸಿಟ್ಟುಗೊಂಡಿರುವಾಗ ಮೌನದಿಂದಿರುವುದು ವಿವೇಕವಾಗಿದೆ. “ದೀರ್ಘಶಾಂತನು ಕೇವಲ ಬುದ್ಧಿವಂತನು; ಮುಂಗೋಪಿಯು ಮೂರ್ಖತನವನ್ನು [ಧ್ವಜವಾಗಿ] ಎತ್ತುವನು” ಎಂದು ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋ. 14:29) ಕ್ಲಿಷ್ಟಕರ ಸನ್ನಿವೇಶದಲ್ಲಿ ದುಡುಕಿ ಉತ್ತರ ಕೊಡುವುದು ತೀವ್ರ ವಾಗ್ವಾದಕ್ಕೆ ನಡೆಸಿ ತದನಂತರ ಪರಿತಪಿಸುವಂತೆ ಮಾಡಬಲ್ಲದು. ಅಂಥ ಸಂದರ್ಭಗಳಲ್ಲಿ ನಾವು ಮೂರ್ಖತನದಿಂದ ಮಾತಾಡಿಬಿಡಬಹುದು. ಹೀಗೆ ನಮ್ಮ ಮನಶ್ಶಾಂತಿ ಕದಡಬಹುದು.
ಕೆಟ್ಟ ಜನರ ಮಧ್ಯೆ ಇರುವಾಗ ನಮ್ಮ ಮಾತು ಅಂಕೆಮೀರದಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆಯಾಗಿದೆ. ಶುಶ್ರೂಷೆಯಲ್ಲಿ ಅಪಹಾಸ್ಯಕ್ಕೆ ಗುರಿಯಾಗುವಾಗ ಮೌನವಾಗಿರುವುದೇ ಲೇಸು. ನಮ್ಮ ಸಹಪಾಠಿಗಳಾಗಲಿ ಸಹೋದ್ಯೋಗಿಗಳಾಗಲಿ ಅಶ್ಲೀಲ ಹಾಸ್ಯಗಳನ್ನು ಅಥವಾ ಅಸಭ್ಯ ಮಾತುಗಳನ್ನಾಡುವಾಗ ಸಮ್ಮತಿ ಸೂಚಿಸುವ ಯಾವುದೇ ಪ್ರತಿಕ್ರಿಯೆಯನ್ನು ಕೊಡದೇ ಸುಮ್ಮನಿರುವುದು ವಿವೇಕಯುತವಾಗಿರುವುದಿಲ್ಲವೇ? (ಎಫೆ. 5:3) “ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆಹಾಕಿಕೊಂಡಿರುವೆನು” ಎಂದು ಕೀರ್ತನೆಗಾರನು ಬರೆದನು.—ಕೀರ್ತ. 39:1.
“ವಿವೇಕಿಯು” ನಂಬಿಕೆದ್ರೋಹ ಮಾಡುವುದಿಲ್ಲ. (ಜ್ಞಾನೋ. 11:12) ಕಡಿವಾಣವಿಲ್ಲದೆ ಮಾತನಾಡುವ ಮೂಲಕ ನಿಜ ಕ್ರೈಸ್ತನು ಗುಟ್ಟನ್ನು ರಟ್ಟು ಮಾಡುವುದಿಲ್ಲ. ಈ ವಿಚಾರದಲ್ಲಿ ಕ್ರೈಸ್ತ ಹಿರಿಯರು ತುಂಬಾ ಜಾಗರೂಕರಾಗಿದ್ದು ಸಭೆಯ ಸದಸ್ಯರ ಭರವಸೆಯನ್ನು ಉಳಿಸಿಕೊಳ್ಳಬೇಕು.
ಮೌನಕ್ಕೆ ಶಬ್ದವಿಲ್ಲದಿದ್ದರೂ, ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು. ತನ್ನೊಬ್ಬ ಸಮಕಾಲೀನನ ಬಗ್ಗೆ 19ನೇ ಶತಮಾನದ ಇಂಗ್ಲಿಷ್ ಲೇಖಕ ಸಿಡ್ನಿ ಸ್ಮಿತ್ ಬರೆದದ್ದು: “ಅವರಲ್ಲಿ ಆಗೊಮ್ಮೆ ಈಗೊಮ್ಮೆ ಇಣುಕುವ ಮೌನವೇ ಅವರ ಸಂಭಾಷಣೆಯನ್ನು ತುಂಬ ಹಿತಕರವನ್ನಾಗಿಸುತ್ತದೆ.” ಸ್ನೇಹಿತರ ದಿನನಿತ್ಯದ ಸಂಭಾಷಣೆಯಲ್ಲಿ ಇಬ್ಬರೂ ಪರಸ್ಪರ ಮಾತಾಡುವುದು ಅವಶ್ಯ. ಆದರೆ ಒಳ್ಳೆಯ ಮಾತುಗಾರನು ಒಳ್ಳೆಯ ಕೇಳುಗನಾಗಿರುತ್ತಾನೆ.
ಸೊಲೊಮೋನನು ಎಚ್ಚರಿಸಿದ್ದು: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.” (ಜ್ಞಾನೋ. 10:19) ಆದುದರಿಂದ, ಕಡಿಮೆ ಮಾತಾಡಿದಷ್ಟು ಅವಿವೇಕದಿಂದ ಮಾತಾಡುವ ಸಂಭವ ಕಡಿಮೆ. ನಿಜವೇನೆಂದರೆ, “ಮೂಢನು ಕೂಡ ಸುಮ್ಮನಿದ್ದರೆ, ಜ್ಞಾನಿಯೆಂತಲೂ ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.” (ಜ್ಞಾನೋ. 17:28) ಆದುದರಿಂದ ‘ನಮ್ಮ ತುಟಿಗಳೆಂಬ ಕದವನ್ನು ಕಾಯುವಂತೆ’ ಯೆಹೋವನಿಗೆ ಪ್ರಾರ್ಥಿಸೋಣ.—ಕೀರ್ತ. 141:3.
ಧ್ಯಾನಿಸುವಿಕೆಗೆ ಸಹಾಯಕಾರಿ
ನೀತಿಯ ಮಾರ್ಗದಲ್ಲಿ ನಡೆಯುವವನು ‘ಯೆಹೋವನ ಧರ್ಮಶಾಸ್ತ್ರವನ್ನು ಹಗಲಿರುಳು ಧ್ಯಾನಿಸುತ್ತಿರುವನು’ ಎಂದು ಬೈಬಲ್ ಹೇಳುತ್ತದೆ. (ಕೀರ್ತ. 1:2) ಅಂಥ ಧ್ಯಾನಿಸುವಿಕೆಗೆ ಯಾವ ಸನ್ನಿವೇಶವು ಅನುಕೂಲವಾಗಿರುತ್ತದೆ?
ಮೂಲಪಿತ ಅಬ್ರಹಾಮನ ಮಗನಾದ ಇಸಾಕನು ‘ಸಂಜೇ ವೇಳೆಯಲ್ಲಿ ಧ್ಯಾನ ಮಾಡುವದಕ್ಕೋಸ್ಕರ ಅಡವಿಗೆ ಹೋಗಿದ್ದನು.’ (ಆದಿ. 24:63) ಧ್ಯಾನಕ್ಕಾಗಿ ನಿಶ್ಯಬ್ದವಾದ ಸ್ಥಳ ಹಾಗೂ ಸಮಯವನ್ನು ಅವನು ಆರಿಸಿಕೊಂಡನು. ರಾಜ ದಾವೀದನು ಮೌನವಾಗಿರುವ ರಾತ್ರಿ ಜಾವಗಳಲ್ಲಿ ಧ್ಯಾನಿಸಿದನು. (ಕೀರ್ತ. 63:6) ಪರಿಪೂರ್ಣ ಮನುಷ್ಯನಾಗಿದ್ದ ಯೇಸುವಿಗೇ ಏಕಾಂತದಲ್ಲಿದ್ದು ಧ್ಯಾನಿಸುವ ಆವಶ್ಯಕತೆಯಿತ್ತು. ಅದನ್ನು ಪೂರೈಸಲು ಅವನು ತುಂಬ ಪ್ರಯತ್ನ ಮಾಡಿದನು. ಜನರ ಗುಂಪಿನ ಗದ್ದಲದಿಂದ ದೂರವಿರುವ ಬೆಟ್ಟ, ಅರಣ್ಯ ಮುಂತಾದ ಏಕಾಂತ ಸ್ಥಳಗಳನ್ನು ಆತನು ಆರಿಸಿಕೊಂಡನು.—ಮತ್ತಾ. 14:23; ಲೂಕ 4:42; 5:16.
ಮೌನಕ್ಕಿರುವ ಚೈತನ್ಯಕಾರಿ ಗುಣವನ್ನು ಅಲ್ಲಗಳೆಯಸಾಧ್ಯವಿಲ್ಲ. ಮೌನವು ಸ್ವಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುತ್ತದೆ; ಇದು ಸ್ವಪ್ರಗತಿಗೆ ಅತ್ಯಾವಶ್ಯಕ. ಮೌನವು ಮನಶ್ಶಾಂತಿಯನ್ನು ನೀಡಬಲ್ಲದು. ಶಾಂತ ಪರಿಸ್ಥಿತಿಯಲ್ಲಿ ಧ್ಯಾನಿಸುವುದು ನಮ್ಮಲ್ಲಿ ವಿನಯಶೀಲತೆ ಮತ್ತು ದೀನತೆಯಂಥ ಗುಣಗಳನ್ನು ಬೆಳೆಸಿ ಜೀವನದಲ್ಲಿ ಪ್ರಮುಖವಾಗಿರುವ ವಿಷಯಗಳಿಗಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದು.
ಮೌನವೆಂಬುದು ಒಂದು ಸದ್ಗುಣವಾಗಿದೆ, ಆದರೆ “ಮಾತಾಡುವ ಸಮಯ” ಕೂಡ ಇದೆ. (ಪ್ರಸಂ. 3:7) ಇಂದು ಸತ್ಯಾರಾಧಕರು “ನಿವಾಸಿತ ಭೂಮಿಯಾದ್ಯಂತ” ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಿರತರಾಗಿದ್ದಾರೆ. (ಮತ್ತಾ. 24:14) ಅವರ ಸಂಖ್ಯೆಯು ದ್ವಿಗುಣಗೊಳ್ಳುತ್ತಿದ್ದಂತೆ ಆನಂದದಿಂದ ‘ಗಿಜುಗುಟ್ಟುವ’ ಅವರ ಶಬ್ದವು ಉನ್ನತೋನ್ನತ ಸ್ವರದಲ್ಲಿ ಕೇಳಿಬರುತ್ತಿದೆ. (ಮೀಕ 2:12) ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುವ ಹಾಗೂ ದೇವರ ಮಹತ್ಕಾರ್ಯಗಳ ಕುರಿತು ಮಾತಾಡುವ ಈ ಜನರಲ್ಲಿ ನಾವೂ ಒಬ್ಬರಾಗಿರೋಣ. ಈ ಪ್ರಮುಖ ಕೆಲಸದಲ್ಲಿ ಭಾಗವಹಿಸುತ್ತಿರುವಾಗ ನಮ್ಮ ಜೀವನಶೈಲಿಯ ಮೂಲಕ ಮೌನವು ಬಂಗಾರವಾಗಿದೆ ಎಂಬುದನ್ನು ನಾವು ತೋರಿಸಿಕೊಡೋಣ.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 3ರಲ್ಲಿರುವ ಚಿತ್ರ]
ಕ್ರೈಸ್ತ ಕೂಟಗಳಲ್ಲಿ ನಾವು ಆಲಿಸಿ ಕಲಿಯಬೇಕು
[ಪುಟ 4ರಲ್ಲಿರುವ ಚಿತ್ರ]
ಶುಶ್ರೂಷೆಯಲ್ಲಿ ಎದುರಾಗುವ ವಾಗ್ದಾಳಿಗಳಿಗೆ ಮೌನವೇ ತಕ್ಕ ಪ್ರತಿಕ್ರಿಯೆ
[ಪುಟ 5ರಲ್ಲಿರುವ ಚಿತ್ರ]
ಮೌನವು ಧ್ಯಾನಿಸುವಿಕೆಗೆ ಸಹಾಯಕಾರಿ