ಅಧ್ಯಯನ ಲೇಖನ 49
ನಾವು ಶಾಶ್ವತವಾಗಿ ಜೀವಿಸಬಹುದು!
“ದೇವರು ಕೊಡೋ ಉಡುಗೊರೆ . . . ಶಾಶ್ವತ ಜೀವ.”—ರೋಮ. 6:23.
ಗೀತೆ 12 ನಿತ್ಯಜೀವದ ವಾಗ್ದಾನ
ಕಿರುನೋಟa
1. ಶಾಶ್ವತ ಜೀವ ಕೊಡ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತಿನ ಬಗ್ಗೆ ಯೋಚನೆ ಮಾಡಿದ್ರೆ ಏನಾಗುತ್ತೆ?
ತನ್ನ ಮಾತು ಕೇಳೋರಿಗೆ “ಶಾಶ್ವತ ಜೀವ” ಕೊಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ರೋಮ. 6:23) ಆತನು ನಮ್ಮನ್ನ ತುಂಬ ಪ್ರೀತಿಸ್ತಾನೆ. ನಾವು ಆತನಿಂದ ಯಾವತ್ತೂ ದೂರ ಆಗಬಾರದು ಅಂತ ಬಯಸ್ತಾನೆ. ಹಾಗಾಗಿ ಆತನು ಕೊಟ್ಟ ಮಾತಿನ ಬಗ್ಗೆ ಯೋಚನೆ ಮಾಡುವಾಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿಯಾಗುತ್ತೆ.
2. ಯೆಹೋವ ಶಾಶ್ವತ ಜೀವ ಕೊಡ್ತೀನಿ ಅಂತ ಹೇಳಿರೋ ಮಾತಿನಿಂದ ನಮಗೆ ಈಗ ಹೇಗೆ ಪ್ರಯೋಜನ ಆಗುತ್ತೆ?
2 ದೇವರು ಶಾಶ್ವತ ಜೀವ ಕೊಡ್ತೀನಿ ಅಂತ ಮಾತು ಕೊಟ್ಟಿರೋದ್ರಿಂದ ನಮಗೆ ಈಗ ಏನೇ ಕಷ್ಟ ಬಂದ್ರು ನಾವು ಸಹಿಸಿಕೊಳ್ತೀವಿ. ವಿರೋಧಿಗಳು ನಮ್ಮನ್ನ ಕೊಲ್ತೀವಿ ಅಂತ ಹೆದರಿಸಿದ್ರೂ ನಾವು ಯೆಹೋವನನ್ನು ಬಿಟ್ಟುಹೋಗಲ್ಲ. ಯಾಕಂದ್ರೆ ನಾವು ಸತ್ತು ಹೋದ್ರೂ ಯೆಹೋವ ನಮ್ಮನ್ನ ಮತ್ತೆ ಎಬ್ಬಿಸಿ ಶಾಶ್ವತ ಜೀವ ಕೊಡ್ತಾನೆ ಅಂತ ಮಾತು ಕೊಟ್ಟಿದ್ದಾನೆ. (ಯೋಹಾ. 5:28, 29; 1 ಕೊರಿಂ. 15:55-58; ಇಬ್ರಿ. 2:15) ದೇವರ ಮಾತನ್ನ ನಾವು ಯಾಕೆ ನಂಬಬಹುದು? ಅದಕ್ಕಿರೋ ಕಾರಣಗಳನ್ನ ಈಗ ನೋಡೋಣ.
ಯೆಹೋವ ಶಾಶ್ವತವಾಗಿ ಇರೋ ದೇವರು
3. ನಮಗೆ ಶಾಶ್ವತ ಜೀವ ಕೊಡೋಕೆ ಯೆಹೋವನಿಂದ ಆಗುತ್ತೆ ಅಂತ ಯಾಕೆ ನಂಬಬಹುದು? (ಕೀರ್ತನೆ 102:12, 24, 27)
3 ನಮಗೆ ಶಾಶ್ವತ ಜೀವ ಕೊಡೋಕೆ ಯೆಹೋವನಿಂದ ಆಗುತ್ತೆ. ಯಾಕಂದ್ರೆ ಆತನು ಜೀವದ ಮೂಲ ಆಗಿದ್ದಾನೆ ಮತ್ತು ಆತನು ಶಾಶ್ವತವಾಗಿ ಇರೋ ದೇವರು. (ಕೀರ್ತ. 36:9) ಅದಕ್ಕೆ ಕೀರ್ತನೆ 90:2ರಲ್ಲಿ “ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ ನೀನೇ ದೇವರಾಗಿ ಇರ್ತಿಯ” ಅಂತ ಯೆಹೋವ ದೇವರ ಬಗ್ಗೆ ಹೇಳುತ್ತೆ. ಕೀರ್ತನೆ 102 ಕೂಡ ಅದೇ ತರ ಹೇಳುತ್ತೆ. (ಕೀರ್ತನೆ 102:12, 24, 27 ಓದಿ.) ಪ್ರವಾದಿ ಹಬಕ್ಕೂಕ ಸಹ “ಯೆಹೋವ, ನೀನು ಆರಂಭದಿಂದಲೂ ಇದ್ದವನಲ್ವಾ? ನನ್ನ ದೇವರೇ, ಪವಿತ್ರ ದೇವರೇ, ನಿನಗೆ ಸಾವೇ ಇಲ್ಲ” ಅಂತ ಹೇಳಿದ.—ಹಬ. 1:12.
4. ಯೆಹೋವ ಶಾಶ್ವತವಾಗಿ ಇರೋ ದೇವರು ಅನ್ನೋದನ್ನ ಅರ್ಥಮಾಡಿಕೊಳ್ಳೋಕೆ ನಮಗೆ ಕಷ್ಟ ಆದ್ರೂ ಯಾಕೆ ನಂಬಬಹುದು? ವಿವರಿಸಿ.
4 ಯೆಹೋವ “ಶಾಶ್ವತವಾಗಿ” ಇರೋ ದೇವರು ಅನ್ನೋದನ್ನ ಅರ್ಥಮಾಡಿಕೊಳ್ಳೋಕೆ ನಿಮಗೆ ಕಷ್ಟ ಆಗಬಹುದು. ತುಂಬ ಜನರಿಗೆ ಹಾಗೇ ಅನಿಸಿದೆ. (ಯೆಶಾ. 40:28) ಎಲೀಹು ಕೂಡ “[ದೇವರ] ವಯಸ್ಸೆಷ್ಟು ಅಂತ ಕಂಡುಹಿಡಿಯೋಕೆ ನಮ್ಮಿಂದ ಆಗಲ್ಲ” ಅಂತ ಹೇಳಿದ. (ಯೋಬ 36:26) ನಮಗೆ ಒಂದು ವಿಷಯ ಗೊತ್ತಿಲ್ಲ ಅಂದ ತಕ್ಷಣ ಅದು ಇಲ್ಲವೇ ಇಲ್ಲ ಅಂತೇನಿಲ್ಲ. ಉದಾಹರಣೆಗೆ, ವಿದ್ಯುಚ್ಛಕ್ತಿ ಹೇಗೆ ಕೆಲಸ ಮಾಡುತ್ತೆ ಅಂತ ಇಲ್ಲಿವರೆಗೂ ನಮಗೆ ಪೂರ್ತಿಯಾಗಿ ತಿಳಿದುಕೊಳ್ಳೋಕೆ ಆಗಿಲ್ಲ. ಹಾಗಂತ ವಿದ್ಯುಚ್ಛಕ್ತಿ ಅನ್ನೋದು ಇಲ್ವೇ ಇಲ್ಲ ಅಂತ ಹೇಳ್ತೀವಾ? ಇಲ್ಲ ತಾನೇ. ಅದೇ ತರ ಯೆಹೋವ ದೇವರು ಈ ಮುಂಚೆನೂ ಇದ್ದನು ಮತ್ತು ಯಾವಾಗ್ಲೂ ಇರ್ತಾನೆ ಅನ್ನೋ ವಿಷ್ಯನ ನಮಗೆ ಅರ್ಥ ಮಾಡಿಕೊಳ್ಳೋಕೆ ಆಗಲಿಲ್ಲ ಅಂದ ತಕ್ಷಣ ಯೆಹೋವ ಶಾಶ್ವತವಾಗಿ ಇರೋಕೆ ಸಾಧ್ಯನೇ ಇಲ್ಲ ಅಂತ ಹೇಳೋಕೆ ಆಗಲ್ಲ. (ರೋಮ. 11:33-36) ಸೂರ್ಯ, ನಕ್ಷತ್ರ ಮತ್ತು ಇಡೀ ವಿಶ್ವ ಸೃಷ್ಟಿ ಆಗೋಕೂ ಮುಂಚೆ ಯೆಹೋವ ಇದ್ದನು. “ಭೂಮಿಯನ್ನ ತನ್ನ ಶಕ್ತಿಯಿಂದ ಸೃಷ್ಟಿ ಮಾಡಿದವನು ಆತನೇ,” “ಆಕಾಶವನ್ನ ಹರಡಿದವನೂ ಆತನೇ.” (ಯೆರೆ. 51:15; ಅ. ಕಾ. 17:24) ಹಾಗಾಗಿ ನಮಗೆ ಶಾಶ್ವತ ಜೀವ ಕೊಡೋಕೆ ಆತನಿಂದ ಆಗುತ್ತೆ ಅಂತ ನಾವು ಹೇಳಬಹುದು. ಇದನ್ನ ನಂಬೋಕೆ ಇನ್ನೂ ಬೇರೆ ಕಾರಣಗಳಿವೆ. ಅದನ್ನೀಗ ನೋಡೋಣ.
ನಾವು ಶಾಶ್ವತವಾಗಿ ಇರಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿ ಮಾಡಿದ್ದು
5. ಮೊದಲ ಮಾನವ ದಂಪತಿಗೆ ಯಾವ ಅವಕಾಶ ಇತ್ತು?
5 ಯೆಹೋವ ದೇವರು ಮನುಷ್ಯರನ್ನ ಬಿಟ್ಟು ಬೇರೆಲ್ಲ ಜೀವಿಗಳನ್ನ ಸ್ವಲ್ಪ ದಿನ ಆದಮೇಲೆ ಸಾಯೋ ತರ ಸೃಷ್ಟಿ ಮಾಡಿದನು. ಮನುಷ್ಯರಿಗೆ ಶಾಶ್ವತವಾಗಿ ಜೀವಿಸೋ ಅವಕಾಶ ಕೊಟ್ಟನು. ಅದಕ್ಕೆ ಆತನು ಆದಾಮನಿಗೆ “ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಅದೇ ದಿನ ಸತ್ತು ಹೋಗ್ತಿಯ” ಅಂತ ಹೇಳಿದನು. (ಆದಿ. 2:17) ಒಂದುವೇಳೆ ಆದಾಮ ಹವ್ವ ಯೆಹೋವನ ಮಾತು ಕೇಳಿದ್ರೆ, ಆ ಹಣ್ಣನ್ನ ತಿನ್ನದೇ ಇದ್ದಿದ್ರೆ ಅವರು ಸಾಯ್ತಾ ಇರಲಿಲ್ಲ. ಅಷ್ಟೇ ಅಲ್ಲ, ಸ್ವಲ್ಪ ದಿನ ಆದಮೇಲೆ ಯೆಹೋವ ಅವ್ರಿಗೆ “ಜೀವದ ಮರದ ಹಣ್ಣನ್ನ” ತಿನ್ನೋಕೆ ಅವಕಾಶ ಕೊಡುತ್ತಿದ್ದನು. ಆಗ ಅವರು ಸಾಯದೆ “ಶಾಶ್ವತವಾಗಿ” ಜೀವಿಸಬಹುದಿತ್ತು.b—ಆದಿ. 3:22.
6-7. (ಎ) ಮನುಷ್ಯನನ್ನ ಸಾಯೋ ಹಾಗೆ ಸೃಷ್ಟಿ ಮಾಡಿಲ್ಲ ಅಂತ ಹೇಳೋಕೆ ಯಾವ ಆಧಾರಗಳಿವೆ? (ಬಿ) ಶಾಶ್ವತ ಜೀವ ಸಿಕ್ಕಾಗ ನೀವು ಏನೆಲ್ಲಾ ಮಾಡೋಕೆ ಇಷ್ಟಪಡ್ತೀರಾ? (ಚಿತ್ರಗಳನ್ನ ನೋಡಿ.)
6 ಈಗ ನಮ್ಮ ಇಡೀ ಜೀವಮಾನದಲ್ಲೇ ಮೆದುಳು ಎಷ್ಟು ಮಾಹಿತಿಯನ್ನ ಕೂಡಿಸಿಕೊಳ್ತಾ ಇದೆಯೋ ಅದಕ್ಕಿಂತ ಜಾಸ್ತಿ ಮಾಹಿತಿಯನ್ನ ಕೂಡಿಸಿಕೊಳ್ಳೋ ಸಾಮರ್ಥ್ಯ ಅದಕ್ಕಿದೆ ಅಂತ ಸಂಶೋಧಕರು ಕಂಡುಹಿಡಿದಿದ್ದಾರೆ. 2010ರಲ್ಲಿ ಸೈಂಟಿಫಿಕ್ ಅಮೇರಿಕನ್ ಮೈಂಡ್ ಅನ್ನೋ ಪುಸ್ತಕದಲ್ಲಿ ಹೀಗೆ ಹೇಳಿತ್ತು: “ನಮ್ಮ ಮೆದುಳಿಗೆ ಸುಮಾರು 25 ಲಕ್ಷ GBಗಳಷ್ಟು ಮಾಹಿತಿಯನ್ನ ತುಂಬಿಕೊಳ್ಳೋ ಸಾಮರ್ಥ್ಯ ಇದೆ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ, 30 ಲಕ್ಷ ತಾಸುಗಳಷ್ಟು ಅಥವಾ 300ಕ್ಕಿಂತ ಜಾಸ್ತಿ ವರ್ಷಗಳ ತನಕ ಒಂದೇ ಸಮನೆ ಓಡ್ತಿರೋ ಟಿ.ವಿ. ಪ್ರೋಗ್ರ್ಯಾಮ್ಗಳ ಮಾಹಿತಿಯನ್ನ ನಮ್ಮ ಮೆದುಳಿನಲ್ಲಿ ತುಂಬಿಸಿಕೊಳ್ಳಬಹುದು.” ಇದು ಒಂದು ಅಂದಾಜು ಅಷ್ಟೇ. ಆದ್ರೆ ಇದಕ್ಕಿಂತ ಜಾಸ್ತಿ ಮಾಹಿತಿಯನ್ನ ಕೂಡಿಸಿಕೊಳ್ಳೋ ಸಾಮರ್ಥ್ಯ ಇದೆ. ನಮ್ಮ ಮೆದುಳಿಗೆ ಇಷ್ಟೆಲ್ಲ ಸಾಮರ್ಥ್ಯ ಇದೆ ಅಂದಮೇಲೆ ಯೆಹೋವ ನಮ್ಮನ್ನ ಬರೀ 70-80 ವರ್ಷ ಅಲ್ಲ, ಶಾಶ್ವತವಾಗಿ ಜೀವಿಸೋ ಹಾಗೆ ಸೃಷ್ಟಿ ಮಾಡಿದ್ದಾನೆ ಅಂತ ಗೊತ್ತಾಗುತ್ತೆ.—ಕೀರ್ತ. 90:10.
7 ನಾವು ಯಾವಾಗಲೂ ಜೀವಿಸಬೇಕು ಅನ್ನೋ ಆಸೆನ ಯೆಹೋವ ನಮ್ಮಲ್ಲಿ ಇಟ್ಟು ಸೃಷ್ಟಿ ಮಾಡಿದನು. “ಶಾಶ್ವತವಾಗಿ ಜೀವಿಸೋ ಆಸೆಯನ್ನ ದೇವರು ಮನುಷ್ಯರ ಹೃದಯದಲ್ಲಿ ಇಟ್ಟಿದ್ದಾನೆ” ಅಂತ ಬೈಬಲ್ನಲ್ಲಿದೆ. (ಪ್ರಸಂ. 3:11) ಅದಕ್ಕೇ ನಾವ್ಯಾರೂ ಸಾಯೋಕೆ ಇಷ್ಟ ಪಡಲ್ಲ. ಸಾವನ್ನ ಶತ್ರು ತರ ನೋಡ್ತೀವಿ. (1 ಕೊರಿಂ. 15:26) ನಮಗೆ ಹುಷಾರಿಲ್ಲದಾಗ ‘ಒಂದಲ್ಲಾ ಒಂದಿನ ಸಾಯುತ್ತೀವಲ್ಲ’ ಅಂತ ಅಂದ್ಕೊಂಡು ಸುಮ್ಮನೆ ಇರ್ತೀವಾ? ಇಲ್ಲ. ಡಾಕ್ಟರ್ ಹತ್ರ ಹೋಗ್ತೀವಿ, ಚಿಕಿತ್ಸೆ ಪಡಕೊಳ್ತೀವಿ. ಆದಷ್ಟು ಬೇಗ ಕಾಯಿಲೆ ವಾಸಿ ಮಾಡಿಕೊಳ್ಳೋಕೆ ಬೇಕಾದ ಎಲ್ಲಾ ಪ್ರಯತ್ನ ಮಾಡ್ತೀವಿ. ವಯಸ್ಸಾದವರಾಗಿರಲಿ ಅಥವಾ ಚಿಕ್ಕ ಮಕ್ಕಳಾಗಿರಲಿ ಯಾರಾದ್ರೂ ತೀರಿಹೋದ್ರೆ ನಾವು ತುಂಬ ದುಃಖ ಪಡ್ತೀವಿ. (ಯೋಹಾ. 11:32, 33) ನಾವು ಸಾಯೋ ಹಾಗೆ ದೇವರು ನಮ್ಮನ್ನ ಸೃಷ್ಟಿ ಮಾಡಿಲ್ಲ. ಆ ರೀತಿ ಸೃಷ್ಟಿ ಮಾಡಿದ್ರೆ ನಮಗೆ ಜೀವಿಸೋ ಆಸೆಯನ್ನ ಮತ್ತು ಅಷ್ಟೊಂದು ಸಾಮರ್ಥ್ಯಗಳನ್ನ ಯಾಕೆ ಕೊಡ್ತಿದ್ದನು? ನಾವು ಶಾಶ್ವತವಾಗಿ ಜೀವಿಸಬೇಕು ಅನ್ನೋ ಉದ್ದೇಶದಿಂದನೇ ನಮ್ಮನ್ನ ಯೆಹೋವ ಸೃಷ್ಟಿ ಮಾಡಿದ್ದಾನೆ ಅಂತ ಹೇಳೋಕೆ ಇನ್ನೂ ತುಂಬ ಕಾರಣಗಳಿವೆ. ಆತನ ಉದ್ದೇಶ ಇವತ್ತಿನ ತನಕ ಬದಲಾಗಿಲ್ಲ, ನಾವು ಯಾಕೆ ಹಾಗೆ ಹೇಳಬಹುದು ಅಂತ ಈಗ ನೋಡೋಣ.
ಯೆಹೋವನ ಉದ್ದೇಶ ಬದಲಾಗಿಲ್ಲ
8. ಯೆಹೋವನ ಉದ್ದೇಶದ ಬಗ್ಗೆ ಯೆಶಾಯ 55:11ರಿಂದ ನಾವು ಏನು ಕಲಿತೀವಿ?
8 ಆದಾಮ ಹವ್ವ ತಪ್ಪು ಮಾಡಿ ತಾವು ಸಾಯೋದೂ ಅಲ್ಲದೆ ತಮ್ಮ ಮಕ್ಕಳೂ ಸಾಯೋ ತರ ಮಾಡಿದ್ರು. ಹಾಗಂತ ಯೆಹೋವ ದೇವರ ಉದ್ದೇಶ ಬದಲಾಗಿಲ್ಲ. (ಯೆಶಾಯ 55:11 ಓದಿ.) ತನ್ನ ಜನರು ಶಾಶ್ವತವಾಗಿ ಜೀವಿಸಬೇಕು ಅಂತ ಈಗಲೂ ಆಸೆಪಡ್ತಾನೆ. ಇದು, ಆತನು ತನ್ನ ಜನರಿಗೆ ಕೊಟ್ಟ ಮಾತಿನಿಂದ ಮತ್ತು ಅವರ ಜೊತೆ ನಡಕೊಂಡ ರೀತಿಯಿಂದ ನಮಗೆ ಗೊತ್ತಾಗುತ್ತೆ. ಅದರ ಬಗ್ಗೆ ಈಗ ನೋಡೋಣ.
9. ದೇವರು ಏನಂತ ಮಾತು ಕೊಟ್ಟಿದ್ದಾನೆ? (ದಾನಿಯೇಲ 12:2, 13)
9 ತೀರಿಹೋದವರನ್ನ ಮತ್ತೆ ಎಬ್ಬಿಸಿ ಶಾಶ್ವತ ಜೀವ ಕೊಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಅ. ಕಾ. 24:15; ತೀತ 1:1, 2) ಸತ್ತವರಿಗೆ ಮತ್ತೆ ಜೀವ ಕೊಡೋಕೆ ಆತನಿಗೆ ತುಂಬ ಆಸೆ ಇದೆ ಅಂತ ಯೋಬನಿಗೆ ಗೊತ್ತಿತ್ತು. (ಯೋಬ 14:14, 15) ಪ್ರವಾದಿ ದಾನಿಯೇಲ ಕೂಡ ಸತ್ತವರು ಮತ್ತೆ ಎದ್ದು ಬರ್ತಾರೆ, ಅವರಿಗೆ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ ಅಂತ ನಂಬಿದ. (ಕೀರ್ತ. 37:29; ದಾನಿಯೇಲ 12:2, 13 ಓದಿ.) ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರಿಗೆ “ಶಾಶ್ವತ ಜೀವ” ಕೊಡ್ತಾನೆ ಅಂತ ಯೇಸುವಿನ ಕಾಲದಲ್ಲಿದ್ದ ಯೆಹೂದ್ಯರು ಕೂಡ ನಂಬಿದ್ದರು. (ಲೂಕ 10:25; 18:18) ದೇವರು ಕೊಟ್ಟ ಈ ಮಾತಿನ ಬಗ್ಗೆ ಯೇಸು ಎಷ್ಟೋ ಸಲ ಜನರಿಗೆ ಹೇಳಿದನು. ಅಷ್ಟೇ ಯಾಕೆ, ಸ್ವತಃ ಯೇಸುವನ್ನೇ ಯೆಹೋವ ಮತ್ತೆ ಜೀವಂತ ಎಬ್ಬಿಸಿದನು.—ಮತ್ತಾ. 19:29; 22:31, 32; ಲೂಕ 18:30; ಯೋಹಾ. 11:25.
10. ಸತ್ತು ಹೋದವರು ಮತ್ತೆ ಎದ್ದುಬಂದ ಘಟನೆಗಳ ಬಗ್ಗೆ ಬೈಬಲ್ನಲ್ಲಿ ಓದುವಾಗ ನಮಗೆ ಏನು ಗೊತ್ತಾಗುತ್ತೆ? (ಚಿತ್ರ ನೋಡಿ.)
10 ನಮ್ಮೆಲ್ಲರಿಗೂ ಜೀವ ಕೊಟ್ಟಿರೋದು ಯೆಹೋವನೇ. ಹಾಗಾಗಿ ಸತ್ತವರಿಗೂ ಮತ್ತೆ ಜೀವ ಕೊಡೋ ಶಕ್ತಿ ಆತನಿಗಿದೆ. ಚಾರೆಪ್ತದ ವಿಧವೆಯ ಮಗ ಸತ್ತಾಗ ಅವನನ್ನ ಮತ್ತೆ ಬದುಕಿಸೋ ಶಕ್ತಿಯನ್ನ ಯೆಹೋವ ಎಲೀಯನಿಗೆ ಕೊಟ್ಟನು. (1 ಅರ. 17:21-23) ಶೂನೇಮಿನ ಸ್ತ್ರೀಯ ಮಗ ಸತ್ತಾಗಲೂ ಅವನನ್ನ ಬದುಕಿಸೋ ಶಕ್ತಿನ ಯೆಹೋವ ಎಲೀಷನಿಗೆ ಕೊಟ್ಟನು. (2 ಅರ. 4:18-20, 34-37) ಈ ರೀತಿ ಬೈಬಲಲ್ಲಿರೋ ಎಷ್ಟೋ ಘಟನೆಗಳು, ಸತ್ತವರನ್ನ ಮತ್ತೆ ಬದುಕಿಸೋ ಶಕ್ತಿ ಯೆಹೋವನಿಗಿದೆ ಅನ್ನೋದಕ್ಕೆ ಬಲವಾದ ಆಧಾರಗಳನ್ನ ಕೊಡುತ್ತೆ. ಈ ಶಕ್ತಿಯನ್ನ ಯೆಹೋವ ತನಗೂ ಕೊಟ್ಟನು ಅಂತ ಯೇಸು ತೋರಿಸಿದ್ದಾನೆ. (ಯೋಹಾ. 11:23-25, 43, 44) ಈಗ ಯೇಸು ಸ್ವರ್ಗದಲ್ಲಿದ್ದಾನೆ ಮತ್ತು ಆತನಿಗೆ “ಸ್ವರ್ಗದಲ್ಲೂ ಭೂಮಿಯಲ್ಲೂ . . . ಎಲ್ಲ ಅಧಿಕಾರ” ಕೊಡಲಾಗಿದೆ. ಹಾಗಾಗಿ ದೇವರು ಮಾತುಕೊಟ್ಟಿರೋ ಹಾಗೆ ‘ಸಮಾಧಿಗಳಲ್ಲಿ ಇರೋರನ್ನ’ ಯೇಸು ಜೀವಂತವಾಗಿ ಮತ್ತೆ ಎಬ್ಬಿಸ್ತಾನೆ. ಆಗ ಇದೇ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಅವಕಾಶ ಅವರಿಗೆ ಸಿಗುತ್ತೆ.—ಮತ್ತಾ. 28:18; ಯೋಹಾ. 5:25-29.
11. ಬಿಡುಗಡೆ ಬೆಲೆಯಿಂದ ನಮಗೆ ಹೇಗೆ ಶಾಶ್ವತ ಜೀವ ಸಿಗುತ್ತೆ?
11 ತನ್ನ ಮಗ ಅಷ್ಟೊಂದು ನೋವನ್ನ ಅನುಭವಿಸಿ ಸಾಯೋ ಹಾಗೆ ಯೆಹೋವ ಯಾಕೆ ಬಿಟ್ಟುಕೊಟ್ಟನು? ಅದಕ್ಕೆ ಉತ್ತರ ಯೇಸು ಹೇಳಿದ ಮಾತಿನಲ್ಲಿದೆ: “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.” (ಯೋಹಾ. 3:16) ನಮ್ಮ ಪಾಪಗಳನ್ನ ಕ್ಷಮಿಸೋಕೆ ಯೆಹೋವ ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಇದ್ರಿಂದ ನಮಗೆ ಶಾಶ್ವತ ಜೀವ ಸಿಗುತ್ತೆ. (ಮತ್ತಾ. 20:28) ಅದು ಹೇಗೆ? “ಒಬ್ಬ ಮನುಷ್ಯನಿಂದ ಸಾವು ಬಂದ ಹಾಗೇ ಒಬ್ಬ ಮನುಷ್ಯನಿಂದ ಸತ್ತವ್ರನ್ನ ಮತ್ತೆ ಜೀವಕೊಟ್ಟು ಎಬ್ಬಿಸಲಾಗುತ್ತೆ. ಆದಾಮನಿಂದ ಎಲ್ರೂ ಸತ್ತಿರೋ ಹಾಗೇ ಕ್ರಿಸ್ತನಿಂದ ಎಲ್ರೂ ಬದುಕ್ತಾರೆ” ಅಂತ ಅಪೊಸ್ತಲ ಪೌಲ ಹೇಳಿದ.—1 ಕೊರಿಂ. 15:21, 22.
12. ಯೆಹೋವನ ಆಸೆ ಯಾವಾಗ ಮತ್ತು ಹೇಗೆ ನೆರವೇರುತ್ತೆ?
12 ದೇವರ ಆಳ್ವಿಕೆ ಬರಲಿ, ಆತನ ಇಷ್ಟ ಈ ಭೂಮಿ ಮೇಲೆ ನೆರವೇರಲಿ ಅಂತ ಪ್ರಾರ್ಥಿಸೋಕೆ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. (ಮತ್ತಾ. 6:9, 10) ಮನುಷ್ಯರೆಲ್ಲ ಇದೇ ಭೂಮಿ ಮೇಲೆ ಶಾಶ್ವತವಾಗಿ ಜೀವಿಸಬೇಕು ಅನ್ನೋದು ಯೆಹೋವನ ಆಸೆ. ಅದನ್ನ ನೆರವೇರಿಸೋಕೆ ಆತನು ತನ್ನ ಸರ್ಕಾರಕ್ಕೆ ಯೇಸುವನ್ನ ರಾಜನಾಗಿ ನೇಮಿಸಿದ್ದಾನೆ. ಯೇಸು ಜೊತೆ ರಾಜರಾಗಿ ಆಳೋಕೆ ಭೂಮಿಯಿಂದ 1,44,000 ಜನರನ್ನ ಆರಿಸಿಕೊಂಡಿದ್ದಾನೆ. ಅವರು ಈ ಭೂಮಿಯನ್ನ ಆಳುವಾಗ ಯೆಹೋವ ಆಸೆಪಟ್ಟಿದ್ದು ಪೂರ್ತಿಯಾಗಿ ನೆರವೇರುತ್ತೆ.—ಪ್ರಕ. 5:9, 10.
13. (ಎ) ಯೆಹೋವ ತನ್ನ ಜನರಿಗೆ ಏನೆಲ್ಲ ಕಲಿಸ್ತಿದ್ದಾನೆ? (ಬಿ) ಆತನ ಸರ್ಕಾರದಲ್ಲಿ ಇರೋಕೆ ದೊಡ್ಡ ಗುಂಪಿನ ಜನರು ಇವತ್ತು ಏನು ಮಾಡ್ತಿದ್ದಾರೆ?
13 ಯೆಹೋವ ದೇವರು ‘ದೊಡ್ಡ ಗುಂಪಿನ’ ಜನರನ್ನ ತನ್ನ ಕಡೆಗೆ ಸೆಳೀತಾ ಇದ್ದಾನೆ. ತನ್ನ ಸರ್ಕಾರದ ಪ್ರಜೆಗಳಾಗೋಕೆ ಅವರಿಗೆ ಈಗಿಂದನೇ ಕಲಿಸಿಕೊಡ್ತಿದ್ದಾನೆ. (ಪ್ರಕ. 7:9, 10; ಯಾಕೋ. 2:8) ಇವತ್ತು ಜನ ರಾಷ್ಟ್ರೀಯತೆ, ಜಾತಿ ಮತ್ತು ಇನ್ನೂ ಬೇರೆಬೇರೆ ಕಾರಣಗಳಿಂದ ಒಬ್ಬರನ್ನೊಬ್ಬರು ದ್ವೇಷಿಸ್ತಿದ್ದಾರೆ. ಆದ್ರೆ ತನ್ನ ಜನರಿಗೆ ಎಲ್ರನ್ನೂ ಪ್ರೀತಿಸೋಕೆ ಕಲಿಸ್ತಿದ್ದಾನೆ. ಇವತ್ತು ಯುದ್ಧಗಳಿಂದ ಮುಗ್ಧ ಜನರ ಜೀವ ಹೋಗ್ತಿದೆ. ಅದಕ್ಕೇ ಯೆಹೋವನ ಜನರು ಯುದ್ಧಕ್ಕೆ ಹೋಗಲ್ಲ. ಹೀಗೆ ಒಂದರ್ಥದಲ್ಲಿ, ಅವರು ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಿದ್ದಾರೆ. (ಮೀಕ 4:3) ಅಷ್ಟೇ ಅಲ್ಲ, ಆತನ ಜನರು ಸತ್ಯ ದೇವರ ಬಗ್ಗೆ ಮತ್ತು ಆತನ ಉದ್ದೇಶಗಳ ಬಗ್ಗೆ ಜನರಿಗೆ ಕಲಿಸ್ತಾ “ನಿಜವಾದ ಜೀವನವನ್ನ ಬಿಗಿಯಾಗಿ” ಹಿಡಿದುಕೊಳ್ಳೋಕೆ ಅವರಿಗೆ ಸಹಾಯ ಮಾಡ್ತಿದ್ದಾರೆ. (1 ತಿಮೊ. 6:19) ಆದ್ರೆ ಈ ರೀತಿ ಅವರು ದೇವರ ಆಳ್ವಿಕೆಗೆ ಬೆಂಬಲ ಕೊಡ್ತಿರೋದ್ರಿಂದ ಕೆಲವೊಮ್ಮೆ ಅವರ ಕುಟುಂಬದವರೇ ಅವರನ್ನ ವಿರೋಧಿಸಬಹುದು ಅಥವಾ ಹಣಕಾಸಿನ ಸಮಸ್ಯೆ ಬರಬಹುದು. ಆದ್ರೆ ಇಂಥ ಸಮಯದಲ್ಲಿ ಯೆಹೋವ ಅವರ ಕೈ ಬಿಟ್ಟಿಲ್ಲ. ಅವರಿಗೆ ಬೇಕಾಗಿರೋದನ್ನ ಕೊಟ್ಟಿದ್ದಾನೆ. (ಮತ್ತಾ. 6:25, 30-33; ಲೂಕ 18:29, 30) ಇದು ಮನುಷ್ಯರ ಮೇಲೆ ಯೆಹೋವನಿಗೆ ಎಷ್ಟು ಪ್ರೀತಿ ಇದೆ ಅನ್ನೋದನ್ನ ತೋರಿಸಿಕೊಡುತ್ತೆ. ಹಾಗಾಗಿ ಆತನು ತನ್ನ ಸರ್ಕಾರವನ್ನ ಈ ಭೂಮಿ ಮೇಲೆ ತಂದೇ ತರ್ತಾನೆ ಮತ್ತು ತನ್ನ ಉದ್ದೇಶವನ್ನ ನೆರವೇರಿಸ್ತಾನೆ ಅಂತ ನಾವು ಗ್ಯಾರಂಟಿಯಾಗಿ ಹೇಳಬಹುದು.
ಸುಂದರ ಭವಿಷ್ಯ
14-15. ಸಾವನ್ನ ತೆಗೆದುಹಾಕ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತು ಹೇಗೆ ನೆರವೇರುತ್ತೆ?
14 ಯೇಸು ಈಗ ಸ್ವರ್ಗದಲ್ಲಿ ದೇವರ ಸರ್ಕಾರದ ರಾಜನಾಗಿದ್ದಾನೆ ಮತ್ತು ಯೆಹೋವ ಕೊಟ್ಟ ಮಾತನ್ನೆಲ್ಲ ಮುಂದೆ ನಿಜ ಮಾಡ್ತಾನೆ. (2 ಕೊರಿಂ. 1:20) 1914ರಿಂದ ಆತನು ತನ್ನ ಶತ್ರುಗಳನ್ನ ಸೋಲಿಸ್ತಾ ಬಂದಿದ್ದಾನೆ. (ಕೀರ್ತ. 110:1, 2) ಮುಂದೆ ಯೇಸು ಮತ್ತು ಆತನ ಜೊತೆ ಆಳುವವರು ಈ ಲೋಕದಲ್ಲಿರೋ ಎಲ್ಲಾ ಕೆಟ್ಟ ಜನರನ್ನ ನಾಶ ಮಾಡ್ತಾರೆ.—ಪ್ರಕ. 6:2.
15 ಯೇಸುವಿನ ಸಾವಿರ ವರ್ಷ ಆಳ್ವಿಕೆಯಲ್ಲಿ ಸತ್ತವರು ಮತ್ತೆ ಜೀವ ಪಡಕೊಳ್ತಾರೆ ಮತ್ತು ಯಾರೆಲ್ಲಾ ಯೆಹೋವನ ಮಾತನ್ನ ಕೇಳ್ತಾರೋ ಅವರೆಲ್ಲಾ ಪರಿಪೂರ್ಣರಾಗ್ತಾರೆ. ಕೊನೇ ಪರೀಕ್ಷೆ ಆದಮೇಲೆ ಯೆಹೋವ ಯಾರನ್ನೆಲ್ಲಾ ನೀತಿವಂತರು ಅಂತ ತೀರ್ಪು ಮಾಡ್ತಾನೋ ಅವರು ಈ “ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.” (ಕೀರ್ತ. 37:10, 11, 29) ಖುಷಿ ಕೊಡೋ ಇನ್ನೊಂದು ವಿಷ್ಯ ಏನಂದ್ರೆ ಆ ಸಮಯದಲ್ಲಿ “ಕೊನೇ ಶತ್ರು ಆಗಿರೋ ಸಾವನ್ನ ಆತನು ನಾಶ ಮಾಡ್ತಾನೆ.”—1 ಕೊರಿಂ. 15:26.
16. ನಾವು ಯಾಕೆ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳಬೇಕು?
16 ನಾವು ಶಾಶ್ವತವಾಗಿ ಜೀವಿಸ್ತೀವಿ ಅನ್ನೋದಕ್ಕಿರೋ 3 ಆಧಾರಗಳನ್ನ ಬೈಬಲ್ನಿಂದ ಇಷ್ಟರ ತನಕ ನೋಡಿದ್ವಿ. ಈ ನಿರೀಕ್ಷೆ ಇರೋದ್ರಿಂದ ಕೊನೇ ದಿನಗಳಲ್ಲಿ ನಮಗೆ ಬರೋ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಆಗುತ್ತೆ. ಆದ್ರೆ ನಾವು ಶಾಶ್ವತ ಜೀವ ಸಿಗುತ್ತೆ ಅಂತಲ್ಲ, ಬದಲಿಗೆ ಯೆಹೋವ ಮತ್ತು ಯೇಸುವನ್ನು ಪ್ರೀತಿಸೋದ್ರಿಂದ ಅವರಿಗೆ ಇಷ್ಟ ಆಗೋ ತರ ನಡಕೊಳ್ಳಬೇಕು. (2 ಕೊರಿಂ. 5:14, 15) ಯೆಹೋವ ಮತ್ತು ಯೇಸು ತರ ನಡಕೊಳ್ಳೋಕೆ ಮತ್ತು ಬೇರೆಯವರಿಗೆ ಶಾಶ್ವತ ಜೀವದ ಬಗ್ಗೆ ಸಾರೋಕೆ ಈ ಪ್ರೀತಿ ನಮ್ಮನ್ನ ಪ್ರೇರಿಸುತ್ತೆ. (ರೋಮ. 10:13-15) ನಾವು ಹೀಗೆ ನಿಸ್ವಾರ್ಥಿಗಳಾಗಿ ಇರುವಾಗ ಮತ್ತು ಬೇರೆಯವರಿಗೆ ಸಹಾಯ ಮಾಡುವಾಗ ಯೆಹೋವ ಶಾಶ್ವತವಾಗಿ ನಮ್ಮ ಫ್ರೆಂಡಾಗಿ ಇರೋಕೆ ಇಷ್ಟಪಡ್ತಾನೆ.—ಇಬ್ರಿ. 13:16.
17. ನಾವು ಶಾಶ್ವತ ಜೀವ ಪಡಕೊಳ್ಳೋಕೆ ಏನು ಮಾಡಬೇಕು? (ಮತ್ತಾಯ 7:13, 14)
17 ಶಾಶ್ವತ ಜೀವ ಪಡಕೊಳ್ಳೋ ಆಸೆ ನಿಮಗೆ ಇದಿಯಾ? ಆ ಅವಕಾಶದ ಬಾಗಿಲನ್ನ ಯೆಹೋವ ನಮ್ಮೆಲ್ಲರಿಗೂ ತೆರೆದಿಟ್ಟಿದ್ದಾನೆ. ಆದ್ರೆ ಅದನ್ನ ನಾವು ಪಡಕೊಳ್ಳಬೇಕಂದ್ರೆ ಜೀವಕ್ಕೆ ನಡಿಸೋ ದಾರಿಯಲ್ಲಿ ನಡಿಬೇಕು. (ಮತ್ತಾಯ 7:13, 14 ಓದಿ.) ಅದನ್ನ ಪಡಕೊಂಡಾಗ ನಮ್ಮ ಜೀವನ ಹೇಗಿರುತ್ತೆ? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.
ಗೀತೆ 130 ಜೀವವೆಂಬ ಅದ್ಭುತ
a ಶಾಶ್ವತವಾಗಿ ಜೀವಿಸೋಕೆ ನಿಮಗೆ ಆಸೆ ಇದಿಯಾ? ನಾವೆಲ್ಲರು ಸಾವಿನ ಭಯ ಇಲ್ಲದೇ ಜೀವನ ಮಾಡಬಹುದು. ಅಂಥ ಜೀವನ ಕೊಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಆ ಮಾತನ್ನ ನಾವು ನಂಬಬಹುದಾ? ಅದಕ್ಕೆ ಕೆಲವು ಆಧಾರಗಳನ್ನ ಈ ಲೇಖನದಲ್ಲಿ ನೋಡೋಣ.
c ಚಿತ್ರ ವಿವರಣೆ: ಒಬ್ಬ ವಯಸ್ಸಾದ ಸಹೋದರ ತನಗೆ ಶಾಶ್ವತ ಜೀವ ಸಿಕ್ಕಾಗ ಏನೆಲ್ಲಾ ಮಾಡಬಹುದು ಅಂತ ಕಲ್ಪಿಸಿಕೊಳ್ತಿದ್ದಾನೆ.