ಭಾಗ 9
ಇಂದೂ ಎಂದೆಂದಿಗೂ ಸಂತೃಪ್ತಿಕರವಾದ ಜೀವನದಲ್ಲಿ ಆನಂದಿಸಿರಿ!
ಬೈಬಲ್ ಇತಿಹಾಸದಲ್ಲಿ, ನಂಬಿಕೆಯ ಪುರುಷನೆಂದು ಪ್ರಖ್ಯಾತನಾಗಿರುವ ಅಬ್ರಹಾಮನು, ಊರ್ ಎಂಬ ಸಮೃದ್ಧ ನಗರದ ಸುಖಸೌಕರ್ಯಗಳ ಜೀವನವನ್ನು ಬಿಟ್ಟುಬಂದನು. ಖಾರಾನಿನಲ್ಲಿ ಸ್ವಲ್ಪ ಸಮಯ ಜೀವಿಸಿದ ಬಳಿಕ ಅವನ ಬಾಕಿ ಜೀವನವನ್ನು ಅವನು ಅಲೆಮಾರಿಯಾಗಿ, ಖಾಯಂ ಮನೆಯಿಲ್ಲದವನಾಗಿ ಡೇರೆಗಳಲ್ಲಿ ಜೀವಿಸಿದನು. (ಆದಿಕಾಂಡ 12:1-3; ಅ. ಕೃತ್ಯಗಳು 7:2-7; ಇಬ್ರಿಯ 11:8-10) ಆದರೂ, “ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ [“ಮತ್ತು ಸಂತೃಪ್ತಿಯಿಂದ,” NW]” ಪ್ರಾಣಬಿಟ್ಟನೆಂದು ದಾಖಲಿಸಲ್ಪಟ್ಟಿದೆ. (ಆದಿಕಾಂಡ 25:8) ಅವನ ಜೀವನವನ್ನು ಯಾವುದು ಅಷ್ಟು ಸಂತೃಪ್ತಿಕರವಾಗಿ ಮಾಡಿತು? ತನ್ನ ಜೀವಮಾನಕಾಲದಲ್ಲಿ ತಾನು ಮಾಡಿದ್ದ ಸಾಧನೆಗಳ ಕಾರಣದಿಂದಾಗಿ ಮರಣಶಯ್ಯೆಯಲ್ಲಿದ್ದಾಗ ಸಂತೃಪ್ತಿಯನ್ನು ಅನುಭವಿಸಿದ ಒಬ್ಬ ಮುದುಕನು ಅವನಾಗಿರಲಿಲ್ಲ. ದೇವರಲ್ಲಿ ಅವನಿಗಿದ್ದ ಗಮನಾರ್ಹವಾದ ನಂಬಿಕೆಯ ಕಾರಣ ಅವನನ್ನು ತರುವಾಯ “ಯೆಹೋವನ ಸ್ನೇಹಿತ”ನೆಂದು ಕರೆಯಲಾಯಿತು. (ಯಾಕೋಬ 2:23; ಯೆಶಾಯ 41:8) ಅಬ್ರಹಾಮನು ತನ್ನ ಸೃಷ್ಟಿಕರ್ತನೊಂದಿಗೆ ಬೆಳೆಸಿದ್ದ ಅರ್ಥವತ್ತಾದ ಸಂಬಂಧವೇ ಅವನ ಜೀವನವನ್ನು ಸಂತೃಪ್ತಿಕರವಾಗಿ ಮಾಡಿತ್ತು.
ನೀವು ದೇವರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಲ್ಲಿ, ಒಂದು ಸಂತೃಪ್ತಿಕರ ಜೀವನವನ್ನು ನಡೆಸಬಲ್ಲಿರಿ
2 ಅಬ್ರಹಾಮನು ಸುಮಾರು 4,000 ವರ್ಷಗಳ ಹಿಂದೆ ನಡೆಸಿದಂತೆಯೇ ನೀವೂ ಇಂದು ದೇವರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಲ್ಲಿ ಅರ್ಥವತ್ತಾದ ಸಂತೃಪ್ತಿಕರ ಜೀವನವನ್ನು ನಡೆಸಬಲ್ಲಿರಿ. ವಿಶ್ವದ ಸೃಷ್ಟಿಕರ್ತನ ಸ್ನೇಹಿತನಾಗುವ ಯೋಚನೆಯೇ ನಿಮ್ಮನ್ನು ಭಾವಪರವಶಗೊಳಿಸಬಹುದಾದರೂ ನೀವು ಖಂಡಿತವಾಗಿಯೂ ಆತನ ಸ್ನೇಹಿತರಾಗಬಲ್ಲಿರಿ. ಅದು ಹೇಗೆ? ನೀವು ಆತನ ಪರಿಚಯ ಮಾಡಿಕೊಂಡು ಆತನನ್ನು ಪ್ರೀತಿಸಬೇಕು. (1 ಕೊರಿಂಥ 8:3; ಗಲಾತ್ಯ 4:9) ನಿಮ್ಮ ಸೃಷ್ಟಿಕರ್ತನೊಂದಿಗೆ ಇಂತಹ ಸಂಬಂಧವನ್ನು ಇಟ್ಟುಕೊಳ್ಳುವುದು ನಿಮ್ಮ ಜೀವನವನ್ನು ಅರ್ಥಪೂರ್ಣವೂ ಸಂತೃಪ್ತಿಕರವೂ ಆಗಿ ಮಾಡಬಲ್ಲದು.
3 ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸಲು ಇಷ್ಟಪಡುವವರಿಗೆ, ಅವರು ಸಂತೋಷವುಳ್ಳ ಜೀವನವನ್ನು ನಡೆಸುವಂತೆ ಯೆಹೋವನು ಮಾರ್ಗದರ್ಶನಗಳನ್ನು ಒದಗಿಸಿದ್ದಾನೆ. (ಯೆಶಾಯ 48:17) ಆದಾಮನು ಒಳ್ಳೇದು ಮತ್ತು ಕೆಟ್ಟದ್ದು ಯಾವುದೆಂದು ಸ್ವತಃ ನಿರ್ಧರಿಸುವ ಮೂಲಕ ದೇವರ ವಿರುದ್ಧ ದಂಗೆಯೆದ್ದನು ಎಂಬುದು ನೆನಪಿರಲಿ. ಯೆಹೋವನು ತನ್ನ ಪುತ್ರನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಪಾಪ ಮತ್ತು ಮರಣಗಳ ದಾಸತ್ವದಿಂದ ಬಿಡುಗಡೆಯ ದಾರಿಯನ್ನು ತೆರೆದು ಮಾನವ ಕುಟುಂಬವನ್ನು ಖರೀದಿಸಿದ್ದು ನಿಜವಾದರೂ, ಪ್ರತಿಯೊಬ್ಬನೂ ಆ ಪ್ರಾಯಶ್ಚಿತ್ತವನ್ನು ಅಂಗೀಕರಿಸಿ, ಒಳ್ಳೇದು ಮತ್ತು ಕೆಟ್ಟದ್ದು ಯಾವುದೆಂಬ ತನ್ನ ಸ್ವಂತ ಮಟ್ಟವನ್ನು ಸ್ಥಾಪಿಸುವುದನ್ನು ನಿಲ್ಲಿಸಬೇಕು. ಯೇಸುವಿನ ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸುವವರಿಗೆ ದೇವರು ಒದಗಿಸುವ ನಿಯಮ ಮತ್ತು ಮೂಲತತ್ತ್ವಗಳಿಗೆ ನಾವು ನಮ್ಮನ್ನು ಅಧೀನರಾಗಿ ಮಾಡಿಕೊಳ್ಳಬೇಕು.
4 ನೀವು ಬೈಬಲ್ ಅಧ್ಯಯನ ಮಾಡುವುದನ್ನು ಮತ್ತು ಅದರಲ್ಲಿ ಕೊಡಲ್ಪಟ್ಟಿರುವ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದನ್ನು ಮುಂದುವರಿಸುವಾಗ, ನೀವು ಒಳ್ಳೇದರ ಮತ್ತು ಕೆಟ್ಟದ್ದರ ಕುರಿತು ದೇವರ ಮಟ್ಟದ ಮೌಲ್ಯವನ್ನು ಗ್ರಹಿಸುವಿರೆಂಬುದು ನಿಶ್ಚಯ. (ಕೀರ್ತನೆ 19:7-9) ಆಗ ನೀವು ಯೆಹೋವನ ಪ್ರವಾದಿಯಾಗಿದ್ದ ಮೋಶೆಯು ಹೇಳಿದಂತೆಯೇ ಹೇಳಲು ಪ್ರಚೋದಿಸಲ್ಪಡುವಿರಿ: “ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು.” (ವಿಮೋಚನಕಾಂಡ 33:13; ಕೀರ್ತನೆ 25:4) ಈ “ಕಠಿನಕಾಲಗಳ” ಸಮಸ್ಯೆಗಳ ಮಧ್ಯೆ ನಿಮ್ಮನ್ನು ನಡೆಸಲಿಕ್ಕಾಗಿ, ಬೈಬಲು ಮೂಲತತ್ತ್ವಗಳನ್ನು ಒದಗಿಸುತ್ತದೆ. (2 ತಿಮೊಥೆಯ 3:1) ಆಗ ನಿಮ್ಮ ಕೃತಜ್ಞತಾಭಾವವು ಬೆಳೆದು, ನೀವು ಯೆಹೋವನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ಮತ್ತು ಆತನೊಂದಿಗೆ ನಿಮಗಿರುವ ಸ್ನೇಹವನ್ನು ಬಲಪಡಿಸುವಂತೆ ನಡೆಸುವುದು.
5 ಅಬ್ರಹಾಮನು ‘ದಿನತುಂಬಿದವನಾಗಿ ಮತ್ತು ಸಂತೃಪ್ತನಾಗಿ’ ಸತ್ತನು. ಆದರೆ ಎಷ್ಟರ ತನಕ ಮನುಷ್ಯನು ಸಾಯಲೇಬೇಕಾಗುತ್ತದೊ ಅಷ್ಟರ ತನಕ ಜೀವನವು ಇನ್ನೂ ಅಲ್ಪಾವಧಿಯದ್ದಾಗಿರುವುದು. ಏಕೆಂದರೆ, ನಾವು ಎಷ್ಟೇ ವೃದ್ಧರಾಗಿರಲಿ, ಬದುಕುವ ಆಸೆಯು ನಮ್ಮೆಲ್ಲರಲ್ಲಿ ಸ್ವಭಾವಸಿದ್ಧವಾಗಿರುತ್ತದೆ. ಮತ್ತು ಇದಕ್ಕೆ ಕಾರಣವು, “[ದೇವರು] ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” (ಪ್ರಸಂಗಿ 3:11) ನಾವು ಅನಂತಕಾಲ ಜೀವಿಸಿದರೂ ಯೆಹೋವನ ಸಕಲ ಸೃಷ್ಟಿಗಳನ್ನು ನಾವು ಅರ್ಥಮಾಡಿಕೊಳ್ಳಲು ಶಕ್ತರಾಗೆವು. ಯೆಹೋವನ ಅದ್ಭುತಕರವಾದ ಕೆಲಸಗಳನ್ನು ನಾವು ಅವಲೋಕಿಸಿ, ಅಧ್ಯಯನ ಮಾಡಿ, ಅದರಲ್ಲಿ ಆನಂದಿಸುವ ಅವಕಾಶಕ್ಕೆ ಅಂತ್ಯವೇ ಇರುವುದಿಲ್ಲ!—ಕೀರ್ತನೆ 19:1-4; 104:24; 139:14.
6 ಇಂದು ನಾವು ನೋಡುವಂತಹ ಸಮಸ್ಯೆಗಳಿಂದ ಈ ಭೂಮಿಯು ತುಂಬಿರುವುದು ಮುಂದುವರಿಯುವುದಾದರೆ ಸದಾಕಾಲ ಜೀವಿಸುವ ವಿಚಾರವು ನಿಮಗೆ ಅಷ್ಟು ಹಿಡಿಸಲಿಕ್ಕಿಲ್ಲ. ಆದರೆ, ಅದು ಚಿಂತೆಗೆ ಕಾರಣವಾಗಿರಬಾರದು. ಬೈಬಲು ವಾಗ್ದಾನಿಸುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) “ನೂತನಾಕಾಶಮಂಡಲ” ಎಂಬ ಪದವು ಇಡೀ ಭೂಮಿಯನ್ನು ಆಳುವ ನೂತನ ಸ್ವರ್ಗೀಯ ಸರಕಾರವನ್ನು ಅಂದರೆ ದೇವರ ರಾಜ್ಯವನ್ನು ಸೂಚಿಸುತ್ತದೆ. ‘ನೂತನಭೂಮಂಡಲವು’ ಆ ರಾಜ್ಯದ ಆಳಿಕೆಗೆ ವಿಧೇಯತೆಯನ್ನು ತೋರಿಸುವವರಿಂದ ಕೂಡಿದ ನೂತನ ಮಾನವ ಸಮಾಜವಾಗಿದೆ. ಇದನ್ನು ವಾಸ್ತವವಾಗಿಸಲು, ಯೆಹೋವನು “ಲೋಕನಾಶಕರ” ವಿರುದ್ಧವಾಗಿ ಬೇಗನೇ ಕ್ರಮಕೈಕೊಳ್ಳುವನು.—ಪ್ರಕಟನೆ 11:18; 2 ಪೇತ್ರ 3:10.
7 ಬೇಗನೆ ಅಂದರೆ ಎಷ್ಟು ಬೇಗನೆ? “ಯುಗದ [“ವಿಷಯಗಳ ವ್ಯವಸ್ಥೆಯ,” NW] ಸಮಾಪ್ತಿಯ ಸೂಚನೆ”ಯ ಭಾಗವಾಗಿ, ಯೇಸು ಕ್ರಿಸ್ತನು ಜನಾಂಗಗಳ ಯುದ್ಧಗಳನ್ನು, “ಅಲ್ಲಲ್ಲಿ ಬರಗಳು . . . ಭೂಕಂಪಗಳು” ಆಗುವುದನ್ನು, “ಉಪದ್ರವಗಳು, [“ಮಾರಕಬೇನೆಗಳು,” NW]” ಬರುವುದನ್ನು ಮತ್ತು ‘ಅಧರ್ಮವು ಹೆಚ್ಚಾಗುವುದನ್ನು’ ಸೇರಿಸಿದನು. (ಮತ್ತಾಯ 24:3-13; ಲೂಕ 21:10, 11; 2 ತಿಮೊಥೆಯ 3:1-5) ಆ ಮೇಲೆ ಅವನು ಪ್ರವಾದಿಸಿದ್ದು: “ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.” (ಲೂಕ 21:31) ಹೌದು, ಯೆಹೋವನು ದುಷ್ಟರನ್ನು ನಾಶಮಾಡುವ ಸಮಯವು ಅತಿ ವೇಗವಾಗಿ ಸಮೀಪಿಸುತ್ತಿದೆಯೆಂಬುದು ನಿಶ್ಚಯ.a
8 ಯೆಹೋವನು ದುಷ್ಟತನವನ್ನು ತೆಗೆದುಹಾಕಿ ಭೂಮಿಯನ್ನು ಶುಚಿಗೊಳಿಸುವ ಆ “ಸರ್ವಶಕ್ತನಾದ ದೇವರ ಮಹಾ ದಿನ”ದ ತರುವಾಯ ನಮ್ಮ ಭೂಗೋಲವು ಪರದೈಸಾಗಿ ಮಾರ್ಪಡುವುದು. (ಪ್ರಕಟನೆ 16:14, 16; ಯೆಶಾಯ 51:3) ಆಗ, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಆದರೆ ಮೃತರಾಗಿರುವವರ ವಿಷಯದಲ್ಲಿ ಏನು? ಯೇಸು ಹೇಳಿದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.” (ಯೋಹಾನ 5:28, 29) ಪ್ರತಿಯೊಬ್ಬ ವ್ಯಕ್ತಿಯಲ್ಲಿ ಆಸಕ್ತನಾಗಿರುವ ಯೆಹೋವನು ಮರಣದಲ್ಲಿ ನಿದ್ದೆ ಹೋಗಿರುವವರನ್ನು ಪುನರುಜ್ಜೀವಿಸಲು ಬಯಸುತ್ತಾನೆ. ವಿಜ್ಞಾನಿಗಳು ತಳಿ ಎಂಜಿನಿಯರಿಂಗ್ ಮೂಲಕ ಅಬೀಜಜಾತ ಮಾನವರನ್ನು ಹುಟ್ಟಿಸಲು ಪ್ರಯತ್ನಿಸಬಹುದು, ಆದರೆ ಸೃಷ್ಟಿಕರ್ತನಿಗೆ ಅಂತಹ ಅಬೀಜ ವಿಧಾನವನ್ನು ಆಯ್ದುಕೊಳ್ಳುವ ಆವಶ್ಯಕತೆ ಇರುವುದಿಲ್ಲ. ಆತನು ಪ್ರತಿಯೊಬ್ಬ ವಿಮೋಚನೀಯ ಮಾನವನ ವಿವರಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಮತ್ತು ಅಂಥವರನ್ನು ಪುನರುಜ್ಜೀವಿಸಲು ಶಕ್ತನಾಗಿದ್ದಾನೆ. ಹೌದು, ಮೃತರಾಗಿರುವ ನಿಮ್ಮ ಪ್ರಿಯರನ್ನು ಭೂಪರದೈಸಿನಲ್ಲಿ ಭೇಟಿಯಾಗುವ ಪ್ರತೀಕ್ಷೆ ನಿಮಗಿದೆ!
9 ಪರದೈಸಿನಲ್ಲಿ ಜೀವನ ಹೇಗಿರುವುದು? ಈ ಭೂಮಿಯು ಸೃಷ್ಟಿಕರ್ತನನ್ನು ಐಕ್ಯದಿಂದ ಸ್ತುತಿಸುವ ಸಂತೋಷವುಳ್ಳ ಸ್ತ್ರೀಪುರುಷರಿಂದ ತುಂಬಿರುವುದು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24; 54:13) ಅನಾರೋಗ್ಯಕರವಾದ ಒತ್ತಡಕ್ಕೆ ಯಾವನೂ ಬಲಿಬೀಳನು; ಭಾವೋದ್ರಿಕ್ತ ಅಥವಾ ಮಾನಸಿಕ ಕಾಯಿಲೆಗಳು ಯಾವನಲ್ಲಿಯೂ ಬೆಳೆಯದು. ಎಲ್ಲರಿಗೂ ಹೇರಳವಾದ ಆಹಾರವಿದ್ದು, ಅವರು ದೇವರ ಉದ್ದೇಶಕ್ಕೆ ಹೊಂದಿಕೆಯಾಗಿರುವ ಅರ್ಥಪೂರ್ಣವಾದ ಕೆಲಸದಲ್ಲಿ ಸಂತೋಷವನ್ನು ಪಡೆಯುವರು. (ಕೀರ್ತನೆ 72:16; ಯೆಶಾಯ 65:23) ಅವರು ಮೃಗಗಳೊಂದಿಗೆ, ಜೊತೆ ಮಾನವರೊಂದಿಗೆ ಮತ್ತು ಎಲ್ಲಕ್ಕೂ ಮಿಗಿಲಾಗಿ, “ದೇವರೊಂದಿಗೆ . . . ಸಮಾಧಾನದಲ್ಲಿ” ಇರುವರು.—ರೋಮಾಪುರ 5:1; ಕೀರ್ತನೆ 37:11; 72:7; ಯೆಶಾಯ 11:6-9.
10 ಆ ಪರದೈಸಿನಲ್ಲಿರಲು ಮತ್ತು ಪೂರ್ಣ ಸಂತೃಪ್ತಿಯಿಂದ ಜೀವನದಲ್ಲಿ ಆನಂದಿಸಲು ನೀವೇನು ಮಾಡತಕ್ಕದ್ದು? ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ [“ಜ್ಞಾನವನ್ನು ಪಡೆದುಕೊಳ್ಳುವುದೇ,” NW] ನಿತ್ಯಜೀವವು.” (ಯೋಹಾನ 17:3) ಆದುದರಿಂದ, ಯೆಹೋವನ ಮತ್ತು ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ, ದೇವರು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿತುಕೊಳ್ಳಿರಿ. ಆಗ ನೀವು ಯೆಹೋವ ದೇವರನ್ನು ಮೆಚ್ಚಿಸಲು ಶಕ್ತರಾಗುವಿರಿ ಮತ್ತು ಇದು ನಿಮ್ಮ ಜೀವನವನ್ನು ಅತಿ ಸಂತೃಪ್ತಿಕರವಾದದ್ದಾಗಿ ಮಾಡುವುದು.
a ಈ ಪ್ರವಾದನೆಯ ವಿಷಯದಲ್ಲಿ ಇನ್ನೂ ಹೆಚ್ಚನ್ನು, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 11ನೆಯ ಅಧ್ಯಾಯದಿಂದ ತಿಳಿದುಕೊಳ್ಳಬಲ್ಲಿರಿ.