ನಿಮ್ಮ ಜೀವನ—ಅದರ ಉದ್ದೇಶವೇನು?
“ಆಕಾಶದ ಕೆಳಗೆ ನರಜನ್ಮದವರು ಅಲ್ಪಾಯುಷ್ಯದಲ್ಲಿ ಏನು ಮಾಡುವದು ಯುಕ್ತವೆಂದು ನಾನು ತಿಳಿದುಕೊಳ್ಳುವದಕ್ಕೋಸ್ಕರ . . . ಮನಸ್ಸಿನಲ್ಲಿ ವಿಚಾರಮಾಡಿಕೊಂಡೆನು.”—ಪ್ರಸಂಗಿ 2:3.
1, 2. ಸ್ವತಃ ತನ್ನಲ್ಲಿ ಒಂದು ಸಮಂಜಸವಾದ ಆಸಕ್ತಿಯನ್ನು ಹೊಂದಿರುವುದು ತಪ್ಪಾಗಿರುವುದಿಲ್ಲವೇಕೆ?
ನಿಮಗೆ ನಿಮ್ಮಲ್ಲೇ ಆಸಕ್ತಿಯಿದೆ, ಅಲ್ಲವೇ? ಅದು ಸಾಧಾರಣವಾದ ವಿಷಯ. ಹೀಗಿರುವುದರಿಂದಲೇ ನಾವು ಪ್ರತಿದಿನ ಊಟಮಾಡುತ್ತೇವೆ, ಆಯಾಸಗೊಂಡಾಗ ಮಲಗುತ್ತೇವೆ, ಮತ್ತು ಮಿತ್ರರು ಹಾಗೂ ಪ್ರಿಯ ಜನರೊಂದಿಗೆ ಇರಲು ಇಷ್ಟಪಡುತ್ತೇವೆ. ಕೆಲವೊಮ್ಮೆ ನಾವು ಆಟಗಳನ್ನು ಆಡುತ್ತೇವೆ, ಈಜುತ್ತೇವೆ, ಅಥವಾ ನಮ್ಮಲ್ಲಿ ಒಂದು ಸಮತೂಕದ ಆಸಕ್ತಿಯನ್ನು ಪ್ರತಿಫಲಿಸುತ್ತಾ, ನಾವು ಆನಂದಿಸುವಂತಹ ಇತರ ಸಂಗತಿಗಳನ್ನು ಮಾಡುತ್ತೇವೆ.
2 ಅಂತಹ ಸ್ವಆಸಕ್ತಿಯು, ಸೊಲೊಮೋನನು ಏನನ್ನು ಬರೆಯುವಂತೆ ದೇವರು ಪ್ರೇರಿಸಿದನೊ ಅದರೊಂದಿಗೆ ಹೊಂದಿಕೆಯಲ್ಲಿದೆ: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” ಅನುಭವದ ಆಧಾರದ ಮೇಲೆ, ಸೊಲೊಮೋನನು ಕೂಡಿಸಿದ್ದು: “ಇದು ದೇವರಿಂದಾಯಿತೆಂಬದನ್ನೂ ಕಂಡುಕೊಂಡೆನು. ಆತನಿಲ್ಲದೆ ಯಾರು ಭೋಜನಮಾಡಿ ಸುಖವನ್ನನುಭವಿಸಾರು?”—ಪ್ರಸಂಗಿ 2:24, 25.
3. ಗಲಿಬಿಲಿಗೊಳಿಸುವಂತಹ ಯಾವ ಪ್ರಶ್ನೆಗಳನ್ನು ಅನೇಕರು ಉತ್ತರಿಸಲಸಾಧ್ಯವಾದದ್ದಾಗಿ ಕಂಡುಕೊಳ್ಳುತ್ತಾರೆ?
3 ಆದರೂ ಜೀವನವು, ತಿನ್ನುವುದು, ಕುಡಿಯುವುದು, ಮಲಗುವುದು ಮತ್ತು ಸ್ವಲ್ಪ ಒಳಿತನ್ನು ಮಾಡುವುದಕ್ಕಿಂತಲೂ ಹೆಚ್ಚಿನದ್ದಾಗಿದೆಯೆಂಬುದು ನಿಮಗೆ ತಿಳಿದಿದೆ. ನಮಗೆ ನೋವುಗಳು, ನಿರಾಶೆಗಳು ಮತ್ತು ಚಿಂತೆಗಳಿವೆ. ಮತ್ತು ಜೀವನದ ಉದ್ದೇಶದ ಕುರಿತಾಗಿ ಚಿಂತಿಸಲು ನಾವು ತೀರ ಕಾರ್ಯಮಗ್ನರಾಗಿರುವಂತೆ ತೋರುತ್ತದೆ. ಅದು ನಿಮ್ಮ ವಿಷಯದಲ್ಲಿ ಸತ್ಯವಾಗಿಲ್ಲವೊ? ದ ವಾಲ್ ಸ್ಟ್ರೀಟ್ ಜರ್ನಲ್ನ ಮಾಜಿ ಸಂಪಾದಕರಾದ ವರ್ಮಂಟ್ ರಾಯ್ಸ್ಟರ್, ಮಾನವಕುಲದ ವಿಸ್ತೃತವಾದ ಜ್ಞಾನ ಮತ್ತು ಕೌಶಲಗಳನ್ನು ಅವಲೋಕಿಸಿದ ನಂತರ ಬರೆದುದು: “ಇಲ್ಲೊಂದು ಕುತೂಹಲಕರ ವಿಷಯವಿದೆ. ನಾವು ಮಾನವನ ಕುರಿತಾಗಿ ಮತ್ತು ಅವನ ಉಭಯಸಂಕಟಗಳ ಕುರಿತಾಗಿ, ಮತ್ತು ಈ ವಿಶ್ವದಲ್ಲಿನ ಅವನ ಸ್ಥಾನದ ಕುರಿತಾಗಿ ಯೋಚಿಸುವಾಗ, ಜೀವವು ಯಾವಾಗ ಆರಂಭಿಸಿತೆಂಬುದರ ಕುರಿತಾಗಿ ತಿಳಿದಿರುವಂತಹದ್ದಕ್ಕಿಂತ ಹೆಚ್ಚೇನೂ ನಮಗೆ ತಿಳಿದಿರುವುದಿಲ್ಲ. ಈಗಲೂ, ನಾವು ಯಾರು ಮತ್ತು ಏಕೆ ಇಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆಂಬ ಪ್ರಶ್ನೆಗಳು ನಮ್ಮಲ್ಲಿ ಉಳಿದಿವೆ.”
4. ನಮ್ಮಲ್ಲಿ ಪ್ರತಿಯೊಬ್ಬನೂ ನಮ್ಮನ್ನು ಒಳಗೊಂಡಿರುವ ಪ್ರಶ್ನೆಗಳನ್ನು ಉತ್ತರಿಸಲು ಶಕ್ತರಾಗಿರುವಂತೆ ಬಯಸಬೇಕು ಏಕೆ?
4 ನಾವು ಯಾರು? ನಾವು ಏಕೆ ಇಲ್ಲಿದ್ದೇವೆ? ಮತ್ತು ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ನೀವು ಹೇಗೆ ಉತ್ತರಿಸುವಿರಿ. ಕಳೆದ ಜುಲೈ ತಿಂಗಳಿನಲ್ಲಿ ಶ್ರೀ. ರಾಯ್ಸ್ಟರ್ ಸತ್ತುಹೋದರು. ಅಷ್ಟರಲ್ಲಿ ಅವರು ತೃಪ್ತಿದಾಯಕವಾದ ಉತ್ತರಗಳನ್ನು ಕಂಡುಹಿಡಿದಿದ್ದರೆಂದು ನೀವು ಎಣಿಸುತ್ತೀರೊ? ಇನ್ನೂ ನೇರವಾಗಿ ಹೇಳುವುದಾದರೆ, ನೀವು ಉತ್ತರಗಳನ್ನು ಕಂಡುಹಿಡಿಯುವ ಒಂದು ಮಾರ್ಗವಿದೆಯೊ? ಮತ್ತು ಇದು ನಿಮಗೆ, ಹೆಚ್ಚು ಸಂತೋಷಕರವಾದ, ಹೆಚ್ಚು ಅರ್ಥಭರಿತವಾದ ಜೀವನವನ್ನು ಅನುಭವಿಸುವಂತೆ ಹೇಗೆ ಸಹಾಯ ಮಾಡಸಾಧ್ಯವಿದೆ? ನಾವು ನೋಡೋಣ.
ಒಳನೋಟದ ಒಂದು ಆದ್ಯ ಮೂಲ
5. ಜೀವನದ ಅರ್ಥದ ಕುರಿತಾದ ಪ್ರಶ್ನೆಗಳ ಒಳನೋಟವನ್ನು ನಾವು ಹುಡುಕುತ್ತಿರುವಾಗ, ನಾವು ದೇವರ ಕಡೆಗೆ ನೋಡತಕ್ಕದ್ದೇಕೆ?
5 ಜೀವನದ ಉದ್ದೇಶವನ್ನು ನಾವು ನಮ್ಮಷ್ಟಕ್ಕೆ ಹುಡುಕುವಲ್ಲಿ, ನಮಗೆ ಸ್ವಲ್ಪವೇ ಯಶಸ್ಸು ದೊರೆಯುವುದು ಅಥವಾ ನಾವು ಯಶಸ್ಸನ್ನೇ ಪಡೆಯಲಿಕ್ಕಿಲ್ಲ. ಇದು ವಿಸ್ತಾರವಾದ ವಿದ್ಯೆ ಮತ್ತು ಅನುಭವವೂ ಇರುವ ಹೆಚ್ಚಿನ ಸ್ತ್ರೀಪುರುಷರಲ್ಲಿ ಸತ್ಯವಾಗಿ ಪರಿಣಮಿಸಿದೆ. ಆದರೆ ನಾವು ನಮ್ಮಷ್ಟಕ್ಕೆ ಬಿಡಲ್ಪಟ್ಟಿಲ್ಲ. ನಮ್ಮ ಸೃಷ್ಟಿಕರ್ತನು ಸಹಾಯವನ್ನು ಒದಗಿಸಿದ್ದಾನೆ. ನೀವು ಅದರ ಕುರಿತಾಗಿ ಆಲೋಚಿಸಿರಿ. ಆತನು “ಯುಗಯುಗಾಂತರಗಳಲ್ಲಿಯೂ” ಇರುವ ಮತ್ತು ವಿಶ್ವ ಹಾಗೂ ಇತಿಹಾಸದ ಕುರಿತಾಗಿ ಸಂಪೂರ್ಣ ಜ್ಞಾನವನ್ನು ಹೊಂದಿರುವ, ಒಳನೋಟ ಮತ್ತು ವಿವೇಕದ ಅಂತಿಮ ಮೂಲನಾಗಿಲ್ಲವೊ? (ಕೀರ್ತನೆ 90:1, 2) ಆತನು ಮನುಷ್ಯರನ್ನು ಸೃಷ್ಟಿಸಿ, ಇಡೀ ಮಾನವ ಅನುಭವವನ್ನು ಅವಲೋಕಿಸಿದ್ದಾನೆ. ಆದುದರಿಂದ, ನಾವು ಒಳನೋಟಕ್ಕಾಗಿ, ಸೀಮಿತ ಜ್ಞಾನ ಮತ್ತು ಗ್ರಹಿಕೆಗಳಿರುವ ಅಪರಿಪೂರ್ಣ ಮಾನವರ ಕಡೆಗೆ ಅಲ್ಲ, ಬದಲಾಗಿ ಆತನ ಕಡೆಗೆ ನೋಡಬೇಕು.—ಕೀರ್ತನೆ 14:1-3; ರೋಮಾಪುರ 3:10-12.
6. (ಎ) ಅಗತ್ಯವಾಗಿರುವ ಒಳನೋಟವನ್ನು ಸೃಷ್ಟಿಕರ್ತನು ಹೇಗೆ ಒದಗಿಸಿದ್ದಾನೆ? (ಬಿ) ಸೊಲೊಮೋನನು ಹೇಗೆ ಒಳಗೂಡಿದ್ದಾನೆ?
6 ಜೀವನದ ಅರ್ಥದ ಕುರಿತಾಗಿ ಸೃಷ್ಟಿಕರ್ತನು ನಮ್ಮೊಂದಿಗೆ ವೈಯಕ್ತಿಕವಾಗಿ ಸಂವಾದಮಾಡುವುದನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲವಾದರೂ, ಆತನು ಒಳನೋಟದ ಒಂದು ಮೂಲವನ್ನು ಒದಗಿಸಿದ್ದಾನೆ—ಆತನ ಪ್ರೇರಿತ ವಾಕ್ಯ. (ಕೀರ್ತನೆ 32:8; 111:10) ಪ್ರಸಂಗಿ ಪುಸ್ತಕವು ಈ ವಿಷಯದಲ್ಲಿ ವಿಶೇಷವಾಗಿ ಅಮೂಲ್ಯವಾಗಿದೆ. ದೇವರು ಅದರ ಬರಹಗಾರನನ್ನು ಪ್ರೇರಿಸಿದನು, ಆದುದರಿಂದ “ಅವನ [“ಸೊಲೊಮೋನನ,” NW] ಜ್ಞಾನವು [“ವಿವೇಕವು,” NW] ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ . . . ಮಿಗಿಲಾದದ್ದು” ಆಗಿತ್ತು. (1 ಅರಸುಗಳು 3:6-12; 4:30-34) ‘ಸೊಲೊಮೋನನ ವಿವೇಕವು,’ ಭೇಟಿನೀಡುತ್ತಿದ್ದ ಒಬ್ಬ ರಾಣಿಯನ್ನು ಎಷ್ಟು ಪ್ರಭಾವಿಸಿತೆಂದರೆ, ಅದರಲ್ಲಿ ಅರ್ಧಾಂಶವೂ ತನಗೆ ತಿಳಿಸಲ್ಪಟ್ಟಿರಲಿಲ್ಲವೆಂದು ಮತ್ತು ಅವನ ವಿವೇಕಕ್ಕೆ ಕಿವಿಗೊಡುವವರು, ಖಂಡಿತವಾಗಿಯೂ ಸಂತೋಷವುಳ್ಳವರಾಗಿರುವರೆಂದು ಆಕೆ ಹೇಳಿದಳು.a (1 ಅರಸುಗಳು 10:4-8) ನಮ್ಮ ಸೃಷ್ಟಿಕರ್ತನು, ಸೊಲೊಮೋನನ ಮೂಲಕ ಒದಗಿಸಿರುವ ದೈವಿಕ ವಿವೇಕದಿಂದ, ನಾವೂ ಒಳನೋಟ ಮತ್ತು ಸಂತೋಷವನ್ನು ಗಳಿಸಬಲ್ಲೆವು.
7. (ಎ) ಆಕಾಶದ ಕೆಳಗಿನ ಹೆಚ್ಚಿನ ಚಟುವಟಿಕೆಗಳ ಕುರಿತು ಸೊಲೊಮೋನನು ಯಾವ ತೀರ್ಮಾನಕ್ಕೆ ಬಂದನು? (ಬಿ) ಸೊಲೊಮೋನನ ವಾಸ್ತವಿಕ ಮೌಲ್ಯಮಾಪನಗಳನ್ನು ಯಾವುದು ದೃಷ್ಟಾಂತಿಸುತ್ತದೆ?
7 ಪ್ರಸಂಗಿ ಪುಸ್ತಕವು, ಸೊಲೊಮೋನನ ಹೃದಯ ಮತ್ತು ಮಿದುಳನ್ನು ಪ್ರಭಾವಿಸಿದಂತಹ ದೇವದತ್ತ ವಿವೇಕವನ್ನು ಪ್ರತಿಬಿಂಬಿಸುತ್ತದೆ. “ಆಕಾಶದ ಕೆಳಗೆ [ನಡೆದಿದ್ದ] ಎಲ್ಲಾ ಕೆಲಸಗಳನ್ನು” ಪರೀಕ್ಷಿಸಲು, ಸೊಲೊಮೋನನ ಬಳಿ ಸಮಯ, ಸಂಪನ್ಮೂಲಗಳು ಮತ್ತು ಒಳನೋಟವಿದ್ದದರಿಂದ, ಅವನು ಅದನ್ನು ಮಾಡಿದನು. ಅದರಲ್ಲಿ ಹೆಚ್ಚಿನದ್ದು “ಗಾಳಿಯನ್ನು ಹಿಂದಟ್ಟಿದ ಹಾಗೆ . . . ವ್ಯರ್ಥ”ವೆಂಬುದನ್ನು ಅವನು ನೋಡಿದನು. ಇದು, ನಾವು ಜೀವನದಲ್ಲಿನ ನಮ್ಮ ಉದ್ದೇಶದ ಕುರಿತಾಗಿ ಯೋಚಿಸುತ್ತಿರುವಾಗ ಮನಸ್ಸಿನಲ್ಲಿಡಬೇಕಾದ ಒಂದು ಪ್ರೇರಿತ ಮೌಲ್ಯಮಾಪನವಾಗಿದೆ. (ಪ್ರಸಂಗಿ 1:13, 14, 16) ಸೊಲೊಮೋನನು ಬಿಚ್ಚುಮನಸ್ಸಿನವನೂ, ವಾಸ್ತವವಾದಿಯೂ ಆಗಿದ್ದನು. ಉದಾಹರಣೆಗಾಗಿ, ಪ್ರಸಂಗಿ 1:15, 18ರಲ್ಲಿ ಕಂಡುಬರುವ ಅವನ ಮಾತುಗಳ ಕುರಿತು ಆಲೋಚಿಸಿರಿ. ಶತಮಾನಗಳಿಂದಲೂ ಮನುಷ್ಯರು, ಕೆಲವೊಮ್ಮೆ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಜನರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾ, ವಿವಿಧ ರೀತಿಯ ಸರಕಾರವನ್ನು ಪ್ರಯತ್ನಿಸಿ ನೋಡಿದ್ದಾರೆಂಬುದು ನಿಮಗೆ ತಿಳಿದಿದೆ. ಆದರೂ, ಯಾವುದೇ ಸರಕಾರವು, ಈ ಅಪರಿಪೂರ್ಣ ವ್ಯವಸ್ಥೆಯ ಎಲ್ಲ “ವಕ್ರ” ಸಂಗತಿಗಳನ್ನು ಸರಿಪಡಿಸಿದೆಯೊ? ಮತ್ತು ಒಬ್ಬನಿಗೆ ಎಷ್ಟು ಹೆಚ್ಚು ಜ್ಞಾನವಿದೆಯೊ ಅಷ್ಟು ಹೆಚ್ಚು ತೀಕ್ಷ್ಣವಾಗಿ, ಅಲ್ಪ ಜೀವಾವಧಿಯಲ್ಲಿ ವಿಷಯಗಳನ್ನು ಪೂರ್ಣವಾಗಿ ತಿದ್ದುವುದು ಅಸಾಧ್ಯವೆಂಬುದನ್ನು ಅವನು ಗ್ರಹಿಸುತ್ತಾನೆಂದು ನೀವು ನೋಡಿರಬಹುದು. ಅಂತಹ ಅರಿವು ಅನೇಕರಿಗೆ ಆಶಾಭಂಗವನ್ನು ತರುತ್ತದಾದರೂ, ಅನಿವಾರ್ಯವಾಗಿ ನಮಗೆ ತರುವುದಿಲ್ಲ.
8. ಯಾವ ಚಕ್ರಗಳು ದೀರ್ಘ ಸಮಯದಿಂದ ಅಸ್ತಿತ್ವದಲ್ಲಿವೆ?
8 ಪರಿಗಣಿಸಬೇಕಾದ ಇನ್ನೊಂದು ಅಂಶವು, ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಅಥವಾ ಗಾಳಿ ಮತ್ತು ನೀರಿನ ಚಲನೆಗಳಂತಹ, ನಮ್ಮ ಮೇಲೆ ಪರಿಣಾಮವನ್ನು ಬೀರುವ ಪುನರಾವರ್ತನ ಚಕ್ರಗಳಾಗಿವೆ. ಅವು ಮೋಶೆ, ಸೊಲೊಮೋನ, ನಪೋಲಿಯನ್, ಮತ್ತು ನಮ್ಮ ಮುತ್ತಜ್ಜರ ಸಮಯದಲ್ಲಿ ಅಸ್ತಿತ್ವದಲ್ಲಿದ್ದವು. ಮತ್ತು ಅವು ಮುಂದುವರಿಯುತ್ತಾ ಇವೆ. ತದ್ರೀತಿಯಲ್ಲಿ ‘ಒಂದು ತಲಾಂತರವು ಗತಿಸುತ್ತಿದೆ, ಇನ್ನೊಂದು ತಲಾಂತರವು ಬರುತ್ತಿದೆ.’ (ಪ್ರಸಂಗಿ 1:4-7) ಮಾನವ ದೃಷ್ಟಿಕೋನದಲ್ಲಿ, ಏನೂ ಬದಲಾಗಿಲ್ಲ. ಪುರಾತನಕಾಲದ ಮತ್ತು ಆಧುನಿಕದಿನದ ಜನರಿಗೆ, ತುಲನಾತ್ಮಕ ಚಟುವಟಿಕೆಗಳು, ನಿರೀಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಸಾಧನೆಗಳು ಇವೆ. ಮಾನವಕುಲದೊಳಗೆ, ಒಬ್ಬ ವ್ಯಕ್ತಿಯು ಒಂದು ಗಮನಾರ್ಹವಾದ ಹೆಸರನ್ನು ಮಾಡಿಕೊಂಡರೂ, ಸೌಂದರ್ಯ ಅಥವಾ ಸಾಮರ್ಥ್ಯದಲ್ಲಿ ಅಸಾಧಾರಣನಾಗಿದ್ದರೂ, ಈಗ ಆ ವ್ಯಕ್ತಿ ಎಲ್ಲಿದ್ದಾನೆ? ಅವನು ಸತ್ತಿದ್ದಾನೆ ಮತ್ತು ಬಹುಶಃ ಮರೆಯಲ್ಪಟ್ಟಿದ್ದಾನೆ. ಆ ದೃಷ್ಟಿಕೋನವು ಅಸ್ವಸ್ಥ ಭಾವನೆಯಿಂದ ಕೂಡಿದಂಥದ್ದಲ್ಲ. ಹೆಚ್ಚಿನ ಜನರು, ತಮ್ಮ ಮುತ್ತಜ್ಜಅಜ್ಜಿಯರ ಹೆಸರುಗಳನ್ನು ಅಥವಾ ಅವರು ಎಲ್ಲಿ ಹುಟ್ಟಿದ್ದರು ಮತ್ತು ಹೂಳಲ್ಪಟ್ಟರು ಎಂಬುದನ್ನೂ ಹೇಳಲು ಶಕ್ತರಾಗಿರುವುದಿಲ್ಲ. ಮಾನವ ಕೆಲಸಗಳು ಮತ್ತು ಪ್ರಯಾಸಗಳಲ್ಲಿ ಸೊಲೊಮೋನನು ವಾಸ್ತವಿಕವಾಗಿ ವ್ಯರ್ಥತೆಯನ್ನು ಕಂಡ ಕಾರಣವನ್ನು ನೀವು ನೋಡಬಲ್ಲಿರಿ.—ಪ್ರಸಂಗಿ 1:9-11.
9. ಮಾನವಕುಲದ ಪರಿಸ್ಥಿತಿಯ ಕುರಿತಾಗಿ ವಾಸ್ತವಿಕವಾದ ಒಳನೋಟವನ್ನು ಗಳಿಸುವ ಮೂಲಕ ನಮಗೆ ಹೇಗೆ ಸಹಾಯವಾಗಬಹುದು?
9 ನಮ್ಮನ್ನು ಆಶಾಭಂಗಗೊಳಿಸುವುದರ ಬದಲಿಗೆ, ಮಾನವಕುಲದ ಮೂಲ ಪರಿಸ್ಥಿತಿಯ ಕುರಿತಾದ ಈ ದೈವಿಕ ಒಳನೋಟವು, ಒಂದು ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು. ಬೇಗನೆ ಹೋಗಿಬಿಡುವ ಅಥವಾ ಮರೆಯಲ್ಪಡುವ ಗುರಿಗಳು ಅಥವಾ ಬೆನ್ನಟ್ಟುವಿಕೆಗಳಿಗೆ, ಅಗತ್ಯವಿಲ್ಲದ ಮಹತ್ತ್ವವನ್ನು ಜೋಡಿಸುವುದನ್ನು ಹೋಗಲಾಡಿಸುವಂತೆ ಇದು ನಮ್ಮನ್ನು ಪ್ರಚೋದಿಸಬೇಕು. ನಾವು ಜೀವನದಿಂದ ಏನನ್ನು ಗಳಿಸುತ್ತಿದ್ದೇವೆ ಮತ್ತು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆಂಬುದಕ್ಕೆ ಬೆಲೆಕಟ್ಟುವಂತೆ ಈ ದೈವಿಕ ಒಳನೋಟವು ನಮಗೆ ಸಹಾಯಮಾಡತಕ್ಕದ್ದು. ದೃಷ್ಟಾಂತಿಸಲು, ವೈರಾಗಿಗಳಾಗಿರುವ ಬದಲಿಗೆ, ಸಮತೂಕದ ಉಣ್ಣುವಿಕೆ ಮತ್ತು ಕುಡಿಯುವಿಕೆಯಲ್ಲಿ ನಾವು ಆನಂದವನ್ನು ಕಂಡುಕೊಳ್ಳಸಾಧ್ಯವಿದೆ. (ಪ್ರಸಂಗಿ 2:24) ಮತ್ತು ನಾವು ನೋಡಲಿರುವಂತೆ, ಸೊಲೊಮೋನನು ಅತಿ ಸಕಾರಾತ್ಮಕವೂ ಆಶಾವಾದಿಯೂ ಆದ ಒಂದು ತೀರ್ಮಾನಕ್ಕೆ ಬರುತ್ತಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆ ತೀರ್ಮಾನವು, ಒಂದು ನಿತ್ಯವಾದ ಸಂತೋಷದ, ಉದ್ದೇಶಭರಿತ ಭವಿಷ್ಯತ್ತನ್ನು ಪಡೆಯಲು ಸಹಾಯಮಾಡಸಾಧ್ಯವಿರುವ, ನಮ್ಮ ಸೃಷ್ಟಿಕರ್ತನೊಂದಿಗಿನ ಸಂಬಂಧವನ್ನು ನಾವು ಗಾಢವಾಗಿ ಗಣ್ಯಮಾಡಬೇಕು ಎಂದಾಗಿರುತ್ತದೆ. ಸೊಲೊಮೋನನು ಒತ್ತಿಹೇಳಿದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
ಜೀವನದ ಚಕ್ರಗಳ ನೋಟದಲ್ಲಿ ಜೀವನದ ಉದ್ದೇಶ
10. ಯಾವ ವಿಧದಲ್ಲಿ ಸೊಲೊಮೋನನು ಪ್ರಾಣಿಗಳು ಮತ್ತು ಮನುಷ್ಯರನ್ನು ಹೋಲಿಸಿದನು?
10 ಪ್ರಸಂಗಿ ಪುಸ್ತಕದಲ್ಲಿ ಪ್ರತಿಬಿಂಬಿಸಲ್ಪಟ್ಟಿರುವ ದೈವಿಕ ವಿವೇಕವು, ಜೀವನದಲ್ಲಿನ ನಮ್ಮ ಉದ್ದೇಶವನ್ನು ಪರಿಗಣಿಸುವುದರಲ್ಲಿ ನಮಗೆ ಇನ್ನೂ ಹೆಚ್ಚಾಗಿ ಸಹಾಯ ಮಾಡಬಲ್ಲದು. ಹೇಗೆ? ನಾವು ಅಪರೂಪವಾಗಿ ಯೋಚಿಸುವಂತಹ ಇತರ ಸತ್ಯಗಳ ಕುರಿತಾಗಿ ಸೊಲೊಮೋನನು ವಾಸ್ತವಿಕವಾಗಿ ಕೇಂದ್ರೀಕರಿಸಿದ್ದರಿಂದಲೇ. ಒಂದು ಸತ್ಯವು, ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಹೋಲಿಕೆಗಳನ್ನು ಒಳಗೂಡುತ್ತದೆ. ಯೇಸು ತನ್ನ ಹಿಂಬಾಲಕರನ್ನು ಕುರಿಗಳಿಗೆ ಹೋಲಿಸಿದನಾದರೂ, ಸಾಮಾನ್ಯವಾಗಿ ಜನರು ಪ್ರಾಣಿಗಳಿಗೆ ಹೋಲಿಸಲ್ಪಡುವುದನ್ನು ಇಷ್ಟಪಡುವುದಿಲ್ಲ. (ಯೋಹಾನ 10:11-16) ಆದರೂ ಸೊಲೊಮೋನನು ನಿರಾಕರಿಸಲಾಗದಂತಹ ಕೆಲವು ವಾಸ್ತವಾಂಶಗಳನ್ನು ಮುಂತಂದನು: “ದೇವರು ಮನುಷ್ಯರನ್ನು ಪರೀಕ್ಷಿಸುವದಕ್ಕೂ ಮನುಷ್ಯರು ಪಶುಪ್ರಾಯರಾಗಿದ್ದೇವೆಂದು ತಾವು ಗ್ರಹಿಸಿಕೊಳ್ಳುವುದಕ್ಕೂ ಇದು ನರಜನ್ಮದವರ ನಿಮಿತ್ತವಾಗಿ ಆಯಿತಲ್ಲವೆ. . . . ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು . . . ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ; ಎಲ್ಲಾ ಬರೀ ಗಾಳಿಯೇ. . . . ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಸೇರುವವು.”—ಪ್ರಸಂಗಿ 3:18-20.
11. (ಎ) ಒಂದು ಪ್ರಾಣಿಯ ಪ್ರಾತಿನಿಧಿಕ ಜೀವನ ಚಕ್ರವನ್ನು ಹೇಗೆ ವರ್ಣಿಸಬಹುದು? (ಬಿ) ಅಂತಹ ಒಂದು ವಿಶ್ಲೇಷಣೆಯ ಕುರಿತು ನಿಮಗೆ ಹೇಗನಿಸುತ್ತದೆ?
11 ನೀವು ನೋಡಲು ಆನಂದಿಸುವ ಒಂದು ಪ್ರಾಣಿಯ ಕುರಿತಾಗಿ ಯೋಚಿಸಿರಿ. ಪ್ರಾಯಶಃ ಒಂದು ಮಂಗ ಅಥವಾ ಒಂದು ಮೊಲ. (ಧರ್ಮೋಪದೇಶಕಾಂಡ 14:7; ಜ್ಞಾನೋಕ್ತಿ 30:26) ಅಥವಾ ನೀವು ಒಂದು ಅಳಿಲಿನ ಕುರಿತಾಗಿ ಊಹಿಸಿಕೊಳ್ಳಬಹುದು; ಲೋಕದ ಸುತ್ತಲೂ 300ಕ್ಕಿಂತಲೂ ಹೆಚ್ಚು ಜಾತಿಗಳಿವೆ. ಅದರ ಜೀವನ ಚಕ್ರವೇನಾಗಿದೆ? ಅದು ಹುಟ್ಟಿದ ನಂತರ, ಅದರ ತಾಯಿಯು ಕೆಲವು ವಾರಗಳ ವರೆಗೆ ಅದಕ್ಕೆ ಹಾಲುಣಿಸುತ್ತದೆ. ಬೇಗನೆ ಅದಕ್ಕೆ ತುಪ್ಪುಳುಚರ್ಮ ಬರುತ್ತದೆ ಮತ್ತು ಅದು ಗೂಡಿನ ಹೊರಗೆ ಹೋಗಬಲ್ಲದು. ಆಹಾರ ಹುಡುಕುವುದನ್ನು ಕಲಿತುಕೊಳ್ಳುತ್ತಾ ಅದು ಎಗರಾಡುತ್ತಿರುವುದನ್ನು ನೀವು ನೋಡಬಹುದು. ಆದರೆ ಅನೇಕವೇಳೆ ಅದು ಕೇವಲ ಆಡುತ್ತಿದ್ದು, ತನ್ನ ಯೌವನಾವಸ್ಥೆಯನ್ನು ಆನಂದಿಸುತ್ತಿರುವಂತೆ ತೋರುತ್ತದೆ. ಒಂದು ವರ್ಷ ಅಥವಾ ಸ್ವಲ್ಪ ಹೆಚ್ಚು ಸಮಯದ ವರೆಗೆ ಬೆಳೆದ ನಂತರ, ಅದು ಒಂದು ಸಂಗಾತಿಯನ್ನು ಕಂಡುಕೊಳ್ಳುತ್ತದೆ. ಅನಂತರ ಅದು ಒಂದು ಗೂಡು ಅಥವಾ ಬಿಲವನ್ನು ಕಟ್ಟಿ, ಮರಿಗಳನ್ನು ಪರಾಮರಿಸಬೇಕು. ಅಳಿಲು ಸಾಕಷ್ಟು ಬೆರಿ ಹಣ್ಣುಗಳು, ಕಾಯಿಗಳು ಮತ್ತು ಬೀಜಗಳನ್ನು ಕಂಡುಕೊಳ್ಳುವಲ್ಲಿ, ಅದರ ಕುಟುಂಬವು ದುಂಡುದುಂಡಾಗಬಹುದು ಮತ್ತು ತಮ್ಮ ಬಿಲವನ್ನು ವಿಸ್ತರಿಸಲು ಸಮಯವನ್ನು ಹೊಂದಿರಬಹುದು. ಆದರೆ ಕೆಲವೇ ವರ್ಷಗಳಲ್ಲಿ, ಆ ಪ್ರಾಣಿಯು ಮುದಿಯಾಗಿ, ಅಪಘಾತ ಮತ್ತು ರೋಗಕ್ಕೆ ತುತ್ತಾಗುವ ಸಂಭವವು ಹೆಚ್ಚಾಗುತ್ತದೆ. ಸುಮಾರು ಹತ್ತು ವರ್ಷ ಪ್ರಾಯದಲ್ಲಿ ಅದು ಸಾಯುತ್ತದೆ. ಅಳಿಲಿನ ಜಾತಿಗಳಲ್ಲಿ ಅಲ್ಪಸ್ವಲ್ಪವಾದ ಭಿನ್ನತೆಗಳೊಂದಿಗೆ, ಇದು ಅದರ ಜೀವನ ಚಕ್ರವಾಗಿದೆ.
12. (ಎ) ವಾಸ್ತವಿಕವಾಗಿ, ಅನೇಕ ಮನುಷ್ಯರ ಜೀವನ ಚಕ್ರವು, ಸಾಮಾನ್ಯ ಪ್ರಾಣಿಯ ಜೀವನ ಚಕ್ರದಂತಿದೆ ಏಕೆ? (ಬಿ) ನಮ್ಮ ಮನಸ್ಸಿನಲ್ಲಿದ್ದ ಒಂದು ಪ್ರಾಣಿಯನ್ನು ನಾವು ಇನ್ನೊಂದು ಸಲ ನೋಡುವಾಗ, ನಾವು ಯಾವುದರ ಕುರಿತು ಯೋಚಿಸಬಲ್ಲೆವು?
12 ಒಂದು ಪ್ರಾಣಿಗೆ ಅಂತಹ ಒಂದು ಜೀವನ ಚಕ್ರವು ಇರುವ ವಿಷಯದಲ್ಲಿ ಹೆಚ್ಚಿನ ಜನರು ಆಕ್ಷೇಪವನ್ನೆತ್ತರು. ಮತ್ತು ಒಂದು ಅಳಿಲಿಗೆ ಜೀವನದಲ್ಲಿ ಒಂದು ಸುವಿಚಾರಿತ ಉದ್ದೇಶವಿರುವುದನ್ನು ಅವರು ನಿರೀಕ್ಷಿಸುವುದಿಲ್ಲ. ಆದಾಗಲೂ, ಹೆಚ್ಚಿನ ಮನುಷ್ಯರ ಜೀವನವು ಅದಕ್ಕಿಂತ ತೀರ ಭಿನ್ನವಾಗಿರುವುದಿಲ್ಲ, ಅಲ್ಲವೇ? ಅವರು ಜನಿಸುತ್ತಾರೆ ಮತ್ತು ಶಿಶುಗಳಾಗಿರುವಾಗ ಪರಾಮರಿಸಲ್ಪಡುತ್ತಾರೆ. ಅವರು ತಿನ್ನುತ್ತಾರೆ, ಬೆಳೆಯುತ್ತಾರೆ ಮತ್ತು ಎಳೆಯರಾಗಿರುವಾಗ ಆಡುತ್ತಾರೆ. ಸ್ವಲ್ಪ ಸಮಯದಲ್ಲೇ ಅವರು ವಯಸ್ಕರಾಗುತ್ತಾರೆ, ಒಬ್ಬ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ, ಮತ್ತು ಜೀವಿಸಲು ಒಂದು ಸ್ಥಳವನ್ನು ಹಾಗೂ ಆಹಾರವನ್ನು ಒದಗಿಸಲಿಕ್ಕಾಗಿ ಒಂದು ಮಾಧ್ಯಮವನ್ನು ಹುಡುಕುತ್ತಾರೆ. ಅವರು ಯಶಸ್ವಿಯಾಗುವಲ್ಲಿ, ಮೈಕೈತುಂಬಿಕೊಂಡು, ತಮ್ಮ ಮನೆಯನ್ನು (ಗೂಡನ್ನು) ವಿಸ್ತರಿಸಿ, ಅದರಲ್ಲಿ ತಮ್ಮ ಸಂತಾನವನ್ನು ಬೆಳೆಸುತ್ತಾರೆ. ಆದರೆ ದಶಕಗಳು ಕ್ಷಿಪ್ರವಾಗಿ ಗತಿಸುತ್ತವೆ ಮತ್ತು ಅವರು ವೃದ್ಧರಾಗುತ್ತಾರೆ. “ಕಷ್ಟಸಂಕಟ”ಗಳಿಂದ ತುಂಬಿರುವ 70 ಅಥವಾ 80 ವರ್ಷಗಳ ಮುಂಚೆ, ಅಲ್ಲದಿದ್ದರೆ ಅದರ ಅನಂತರ ಅವರು ಸಾಯಬಹುದು. (ಕೀರ್ತನೆ 90:9, 10, 12) ಇನ್ನೊಂದು ಸಲ ನೀವು ಒಂದು ಅಳಿಲನ್ನು (ಅಥವಾ ನಿಮ್ಮ ಮನಸ್ಸಿನಲ್ಲಿದ್ದ ಇತರ ಪ್ರಾಣಿಯನ್ನು) ನೋಡುವಾಗ, ಈ ಸ್ತಿಮಿತ ವಾಸ್ತವಾಂಶಗಳ ಕುರಿತಾಗಿ ನೀವು ಯೋಚಿಸಬಹುದು.
13. ಪ್ರಾಣಿಗಳಿಗೂ ಮನುಷ್ಯರಿಗೂ ಇಬ್ಬರಿಗೂ ಯಾವ ಅಂತ್ಯಫಲವಿರುತ್ತದೆ?
13 ಸೊಲೊಮೋನನು ಜನರ ಜೀವನಗಳನ್ನು ಪ್ರಾಣಿಗಳ ಜೀವನಕ್ಕೆ ಏಕೆ ಹೋಲಿಸಿದನೆಂಬುದನ್ನು ನೀವು ನೋಡಸಾಧ್ಯವಿದೆ. ಅವನು ಬರೆದುದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; . . . ಹುಟ್ಟುವ ಸಮಯ, ಸಾಯುವ ಸಮಯ.” ಆ ಎರಡನೆಯ ಸಂಭವನೀಯ ಘಟನೆಯಾದ ಮರಣವು, ಮನುಷ್ಯ ಮತ್ತು ಪ್ರಾಣಿಗೆ ಒಂದೇ ರೀತಿಯದ್ದಾಗಿದೆ, “ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು.” ಅವನು ಕೂಡಿಸಿದ್ದು: “ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.”—ಪ್ರಸಂಗಿ 3:1, 2, 19, 20.
14. ಕೆಲವು ಮನುಷ್ಯರು ಸಾಮಾನ್ಯವಾದ ಜೀವನ ಚಕ್ರವನ್ನು ಯಾವ ರೀತಿಯಲ್ಲಿ ಬದಲಾಯಿಸಲು ಪ್ರಯತ್ನಿಸುತ್ತಾರೆ, ಆದರೆ ಯಾವ ಪರಿಣಾಮದೊಂದಿಗೆ?
14 ವಾಸ್ತವಿಕವಾದ ಈ ಗುಣವಿಮರ್ಶೆಯನ್ನು ನಾವು ನಕಾರಾತ್ಮಕ ಯೋಚನೆಯೆಂದು ಎಣಿಸುವ ಅಗತ್ಯವಿಲ್ಲ. ಕೆಲವರು ತಮ್ಮ ಹೆತ್ತವರಿಗಿದ್ದ ಭೌತಿಕ ಧನಕ್ಕಿಂತ ಹೆಚ್ಚನ್ನು ಪಡೆಯಲಿಕ್ಕಾಗಿ ಹೆಚ್ಚು ಕೆಲಸ ಮಾಡುವ ಮೂಲಕ, ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ ನಿಜ. ಜೀವನದ ಕುರಿತಾಗಿ ತಮ್ಮ ತಿಳಿವಳಿಕೆಯನ್ನು ವಿಸ್ತಾರಗೊಳಿಸಲು ಪ್ರಯತ್ನಿಸುತ್ತಿರುವಾಗ, ಒಂದು ಉಚ್ಚಮಟ್ಟದ ಜೀವಿತಕ್ಕಾಗಿ ಒದಗಿಸಲು ಅವರು, ಇನ್ನೂ ಹೆಚ್ಚು ವರ್ಷಗಳ ಶಿಕ್ಷಣವನ್ನು ಬೆನ್ನಟ್ಟಬಹುದು. ಅಥವಾ ಉತ್ತಮ ಆರೋಗ್ಯ ಮತ್ತು ಕೊಂಚ ದೀರ್ಘಾವಧಿಯ ಜೀವನವನ್ನು ಗಳಿಸಲಿಕ್ಕಾಗಿ ಅವರು, ವ್ಯಾಯಾಮ ಅಥವಾ ಆಹಾರಪಥ್ಯ ಕಟ್ಟುಪಾಡುಗಳ ಮೇಲೆ ಕೇಂದ್ರೀಕರಿಸಬಹುದು. ಮತ್ತು ಈ ಪ್ರಯತ್ನಗಳು ನಿರ್ದಿಷ್ಟ ಪ್ರಯೋಜನಗಳನ್ನು ತರಬಹುದು. ಆದರೆ ಅಂತಹ ಪ್ರಯತ್ನಗಳು ಸಫಲವಾಗುವವು ಎಂಬ ವಿಷಯದಲ್ಲಿ ಯಾರು ಖಚಿತರಾಗಿರಬಲ್ಲರು? ಅವು ಸಫಲವಾಗುವುದಾದರೂ, ಎಷ್ಟರ ವರೆಗೆ?
15. ಹೆಚ್ಚಿನ ಜನರ ಜೀವನಗಳ ವಿಷಯದಲ್ಲಿ ಯಾವ ಮುಚ್ಚುಮರೆಯಿಲ್ಲದ ಮೌಲ್ಯಮಾಪನವು ನ್ಯಾಯಸಮ್ಮತವಾಗಿದೆ?
15 ಸೊಲೊಮೋನನು ಕೇಳಿದ್ದು: “ನಿರರ್ಥಕವಾದ ಮಾತುಗಳು ಬಹಳ, ಅವುಗಳಿಂದ ಮನುಷ್ಯನಿಗೆ ಏನು ಪ್ರಯೋಜನ? ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ದಿನಗಳಲ್ಲೆಲ್ಲಾ ಅವನಿಗೆ ಯಾವದು ಮೇಲೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವದೆಂದು ಅವನು ಯಾರಿಂದ ತಿಳಿದುಕೊಂಡಾನು?” (ಪ್ರಸಂಗಿ 6:11, 12) ಮರಣವು ಒಬ್ಬ ವ್ಯಕ್ತಿಯ ಪ್ರಯತ್ನಗಳನ್ನು ಸಂಬಂಧಿತವಾಗಿ ಬೇಗನೆ ಅಂತ್ಯಗೊಳಿಸುವುದರಿಂದ, ಹೆಚ್ಚು ಭೌತಿಕ ವಿಷಯಗಳನ್ನು ಗಳಿಸಲಿಕ್ಕಾಗಿ ಹೆಣಗಾಡುವುದರಲ್ಲಿ ಅಥವಾ ಪ್ರಮುಖವಾಗಿ ಹೆಚ್ಚು ಸ್ವತ್ತುಗಳನ್ನು ಪಡೆಯಲಿಕ್ಕಾಗಿ ದೀರ್ಘ ವರ್ಷಗಳ ಶಾಲಾಭ್ಯಾಸವನ್ನು ಬೆನ್ನಟ್ಟುವುದರಲ್ಲಿ ನಿಜವಾಗಿಯೂ ತುಂಬ ಲಾಭವಿದೆಯೊ? ಮತ್ತು ಜೀವನವು ಒಂದು ನೆರಳಿನಂತೆ ಗತಿಸಿಹೋಗುತ್ತಾ, ಇಷ್ಟು ಅಲ್ಪಾವಧಿಯದ್ದಾಗಿರುವುದರಿಂದ, ಅವರು ವಿಫಲತೆಯನ್ನು ಗ್ರಹಿಸಿಕೊಳ್ಳುವಾಗ ಇನ್ನೊಂದು ಮಾನವ ಗುರಿಯ ಕಡೆಗೆ ಪ್ರಯತ್ನಗಳನ್ನು ಪುನರ್ನಿರ್ದೇಶಿಸಲು ಸಮಯವಿರುವುದಿಲ್ಲವೆಂಬುದನ್ನು ಅನೇಕರು ಗ್ರಹಿಸುತ್ತಾರೆ. ಅಥವಾ “ತಾನು ಕಾಲವಾದ” ನಂತರ ತನ್ನ ಮಕ್ಕಳಿಗೆ ಏನು ಸಂಭವಿಸುವುದೆಂಬುದರ ಕುರಿತಾಗಿ ಒಬ್ಬ ಮನುಷ್ಯನು ನಿಶ್ಚಿತನಾಗಿರಸಾಧ್ಯವಿಲ್ಲ.
ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳುವ ಸಮಯ
16. (ಎ) ಪ್ರಾಣಿಗಳು ಮಾಡಲಾರದ ಯಾವ ವಿಷಯವನ್ನು ನಾವು ಮಾಡಬೇಕು? (ಬಿ) ಬೇರೆ ಯಾವ ಸತ್ಯವು ನಮ್ಮ ಆಲೋಚನೆಯನ್ನು ಪ್ರಭಾವಿಸಬೇಕು?
16 ಪ್ರಾಣಿಗಳಿಗೆ ಅಸದೃಶವಾಗಿ, ಮನುಷ್ಯರಾದ ನಮಗೆ ‘ನನ್ನ ಅಸ್ತಿತ್ವದ ಅರ್ಥವೇನು? ಅದು ಜನಿಸಲಿಕ್ಕಾಗಿ ಒಂದು ಸಮಯ ಮತ್ತು ಸಾಯಲಿಕ್ಕಾಗಿ ಒಂದು ಸಮಯವಿರುವ ಒಂದು ಸ್ಥಿರವಾದ ಚಕ್ರವಾಗಿದೆಯೊ?’ ಎಂದು ವಿಚಾರಮಾಡುವ ಸಾಮರ್ಥ್ಯವಿದೆ. ಈ ಸಂಬಂಧದಲ್ಲಿ, ಮನುಷ್ಯ ಮತ್ತು ಪ್ರಾಣಿಯ ಕುರಿತಾದ ಸೊಲೊಮೋನನ ಮಾತುಗಳ ಸತ್ಯತೆಯನ್ನು ಜ್ಞಾಪಿಸಿಕೊಳ್ಳಿರಿ: “ಎಲ್ಲಾ ಮಣ್ಣಿಗೆ ಪುನಃ ಸೇರುವವು.” ಮರಣವು ಒಬ್ಬನ ಅಸ್ತಿತ್ವವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುತ್ತದೆಂಬುದು ಅದರ ಅರ್ಥವೊ? ಒಳ್ಳೇದು, ದೇಹದಿಂದ ಪಾರಾಗುವ ಒಂದು ಅಮರ ಪ್ರಾಣ ಮನುಷ್ಯರಿಗಿಲ್ಲವೆಂದು ಬೈಬಲ್ ತೋರಿಸುತ್ತದೆ. ಮನುಷ್ಯರು ಪ್ರಾಣಗಳಾಗಿದ್ದಾರೆ, ಮತ್ತು ಪಾಪಮಾಡುವ ಪ್ರಾಣವು ಸಾಯುತ್ತದೆ. (ಯೆಹೆಜ್ಕೇಲ 18:4, 20) ಸೊಲೊಮೋನನು ವಿವರಿಸಿದ್ದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ. ಅವರ ಜ್ಞಾಪಕವೇ ಹೋಯಿತಲ್ಲವೆ. ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 10.
17. ಪ್ರಸಂಗಿ 7:1, 2 ನಮಗೆ ಏನನ್ನು ವಿಚಾರಮಾಡುವಂತೆ ಮಾಡಬೇಕು?
17 ದೂರೀಕರಿಸಲಾಗದ ಈ ವಾಸ್ತವಾಂಶದ ನೋಟದಲ್ಲಿ, ಈ ಹೇಳಿಕೆಯನ್ನು ಪರಿಗಣಿಸಿರಿ: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು. ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವುದು ಲೇಸು; ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ; ಜೀವಂತನು ಇದನ್ನು ನೋಡಿ ಸ್ಮರಿಸಿಕೊಳ್ಳುವನು.” (ಪ್ರಸಂಗಿ 7:1, 2) ಮರಣವು, “ಎಲ್ಲಾ ಮನುಷ್ಯರಿಗೂ ಕೊನೆ” ಆಗಿದೆಯೆಂಬುದನ್ನು ನಾವು ಒಪ್ಪತಕ್ಕದ್ದು. ಯಾವ ಮನುಷ್ಯನೂ ನಿತ್ಯಜೀವದಲ್ಲಿ ಫಲಿಸಿರುವ ಯಾವುದೇ ಜೀವ ಸಂಜೀವಿನಿಯನ್ನು ಕುಡಿಯಲು, ಯಾವುದೇ ವಿಟಮಿನ್ ಮಿಶ್ರಣವನ್ನು ತಿನ್ನಲು, ಯಾವುದೇ ಆಹಾರಪಥ್ಯವನ್ನು ಅನುಸರಿಸಲು, ಅಥವಾ ಯಾವುದೇ ವ್ಯಾಯಾಮದಲ್ಲಿ ತೊಡಗಲು ಶಕ್ತನಾಗಿಲ್ಲ. ಮತ್ತು ಸಾಮಾನ್ಯವಾಗಿ ಅವರ ಮರಣದ ನಂತರ ಸ್ವಲ್ಪ ಸಮಯದಲ್ಲೇ, ‘ಅವರ ಜ್ಞಾಪಕವೇ ಹೋಗಿರುತ್ತದೆ.’ ಆದುದರಿಂದ ಒಂದು ಹೆಸರು, ‘ಸುಗಂಧತೈಲಕ್ಕಿಂತ ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು’ ಏಕೆ?
18. ಸೊಲೊಮೋನನು ಪುನರುತ್ಥಾನದಲ್ಲಿ ನಂಬಿಕೆಯಿಟ್ಟಿದ್ದನೆಂಬುದರ ಕುರಿತಾಗಿ ನಾವು ಏಕೆ ಖಚಿತರಾಗಿರಬಲ್ಲೆವು?
18 ಈಗಾಗಲೇ ಗಮನಿಸಿರುವಂತೆ, ಸೊಲೊಮೋನನು ವಾಸ್ತವವಾದಿಯಾಗಿದ್ದನು. ನಿಶ್ಚಯವಾಗಿಯೂ ನಮ್ಮ ಸೃಷ್ಟಿಕರ್ತನೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿದ್ದಂತಹ ತನ್ನ ಪೂರ್ವಜರಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬರ ಕುರಿತಾಗಿ ಅವನಿಗೆ ತಿಳಿದಿತ್ತು. ಅಬ್ರಹಾಮನೊಂದಿಗೆ ಸುಪರಿಚಿತನಾಗಿದ್ದು, ಯೆಹೋವ ದೇವರು ಅವನನ್ನು ಮತ್ತು ಅವನ ಸಂತಾನವನ್ನು ಆಶೀರ್ವದಿಸುವ ವಾಗ್ದಾನಮಾಡಿದನು. (ಆದಿಕಾಂಡ 18:18, 19; 22:17) ಹೌದು, ಅಬ್ರಹಾಮನು ದೇವರ ಸ್ನೇಹಿತನಾಗುತ್ತಾ, ದೇವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಹೊಂದಿದ್ದನು. (2 ಪೂರ್ವಕಾಲವೃತ್ತಾಂತ 20:7; ಯೆಶಾಯ 41:8; ಯಾಕೋಬ 2:23) ತನ್ನ ಜೀವ ಮತ್ತು ತನ್ನ ಮಗನ ಜೀವವು, ಜನನ ಮರಣದ ಒಂದು ಅಂತ್ಯವಿಲ್ಲದ ಚಕ್ರದ ಭಾಗವಾಗಿರಲಿಲ್ಲವೆಂಬುದು ಅಬ್ರಹಾಮನಿಗೆ ತಿಳಿದಿತ್ತು. ಖಂಡಿತವಾಗಿಯೂ ಅದಕ್ಕಿಂತಲೂ ಹೆಚ್ಚಿನ ಸಂಗತಿಯು ಇತ್ತು. ಅವರಿಗೆ ಪುನಃ ಒಮ್ಮೆ ಜೀವಿಸುವ ದೃಢವಾದ ಪ್ರತೀಕ್ಷೆಯಿತ್ತು. ಅವರು ಒಂದು ಅಮರವಾದ ಪ್ರಾಣವನ್ನು ಹೊಂದಿರುವುದರಿಂದಾಗಿ ಅಲ್ಲ, ಬದಲಾಗಿ ಅವರಿಗೆ ಪುನರುತ್ಥಾನವಾಗುವ ಕಾರಣದಿಂದಲೇ. “[ಇಸಾಕನು] ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು” ಅಬ್ರಹಾಮನಿಗೆ ಮನವರಿಕೆಯಾಗಿತ್ತು.—ಇಬ್ರಿಯ 11:17-19.
19. ಪ್ರಸಂಗಿ 7:1ರ ಅರ್ಥದ ಕುರಿತಾಗಿ ನಾವು ಯೋಬನಿಂದ ಯಾವ ಒಳನೋಟವನ್ನು ಪಡೆದುಕೊಳ್ಳಸಾಧ್ಯವಿದೆ?
19 “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.” ಇದು ಹೇಗೆಂಬುದನ್ನು ಅರ್ಥಮಾಡಿಕೊಳ್ಳಲು ಅದು ಒಂದು ಕೀಲಿ ಕೈ. ತನಗಿಂತ ಮುಂಚೆ ಜೀವಿಸಿದ ಯೋಬನಂತೆ, ಮಾನವ ಜೀವವನ್ನು ಸೃಷ್ಟಿಸಿದಾತನು ಅದನ್ನು ಪುನಸ್ಸ್ಥಾಪಿಸಬಲ್ಲನೆಂದು ಸೊಲೊಮೋನನಿಗೆ ಮನವರಿಕೆಯಾಗಿತ್ತು. ಸತ್ತಿರುವ ಮನುಷ್ಯರನ್ನು ಆತನು ಉಜ್ಜೀವಿಸಬಲ್ಲನು. (ಯೋಬ 14:7-14) ನಂಬಿಗಸ್ತ ಯೋಬನು ಹೇಳಿದ್ದು: “ನೀನು [ಯೆಹೋವನು] ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:15) ಅದರ ಕುರಿತಾಗಿ ಯೋಚಿಸಿರಿ! ಸತ್ತಿರುವ ತನ್ನ ನಿಷ್ಠಾವಂತ ಸೇವಕರಿಗಾಗಿ, ನಮ್ಮ ಸೃಷ್ಟಿಕರ್ತನಿಗೆ “ಹಂಬಲಿಕೆ” ಇದೆ. (“ನಿನ್ನ ಹಸ್ತಗಳ ಕೆಲಸವನ್ನು ನೀನು ಪುನಃ ಒಮ್ಮೆ ನೋಡಬಯಸುವಿ.”—ದ ಜೆರುಸಲೆಮ್ ಬೈಬಲ್.) ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು ಅನ್ವಯಿಸುತ್ತಾ, ಸೃಷ್ಟಿಕರ್ತನು ಮಾನವರನ್ನು ಪುನರುತ್ಥಾನಗೊಳಿಸಬಲ್ಲನು. (ಯೋಹಾನ 3:16; ಅ. ಕೃತ್ಯಗಳು 24:15) ಸಾಯುವಂತಹ ಬರಿಯ ಪ್ರಾಣಿಗಳಿಗಿಂತ ಮನುಷ್ಯರು ಭಿನ್ನರಾಗಿರಬಲ್ಲರೆಂಬುದು ಸ್ಪಷ್ಟ.
20. (ಎ) ಜನನ ದಿನಕ್ಕಿಂತ ಮರಣದ ದಿನವು ಉತ್ತಮವಾಗಿರುವುದು ಯಾವಾಗ? (ಬಿ) ಲಾಜರನ ಪುನರುತ್ಥಾನವು ಅನೇಕರನ್ನು ಹೇಗೆ ಪ್ರಭಾವಿಸಿದ್ದಿರಬೇಕು?
20 ಇದರ ಅರ್ಥವೇನೆಂದರೆ, ಒಬ್ಬನು ಜನಿಸಿರುವ ದಿನಕ್ಕಿಂತ ಮರಣದ ದಿನವು ಉತ್ತಮವಾಗಿರಬಲ್ಲದು. ಸಾಯುವಂತಹ ನಂಬಿಗಸ್ತ ವ್ಯಕ್ತಿಗಳನ್ನು ಪುನರುತ್ಥಾನಗೊಳಿಸಸಾಧ್ಯವಿರುವ ಯೆಹೋವನೊಂದಿಗೆ ಒಬ್ಬನು ಅಷ್ಟರೊಳಗೆ ಒಂದು ಒಳ್ಳೆಯ ಹೆಸರನ್ನು ಗಳಿಸಿರುವಲ್ಲಿ ಮಾತ್ರ. ಮಹಾ ಸೊಲೊಮೋನನಾದ ಯೇಸು ಕ್ರಿಸ್ತನು ಅದನ್ನು ರುಜುಪಡಿಸಿದನು. ದೃಷ್ಟಾಂತಕ್ಕಾಗಿ, ಅವನು ನಂಬಿಗಸ್ತ ಪುರುಷನಾದ ಲಾಜರನನ್ನು ಉಜ್ಜೀವಿಸಿದನು. (ಲೂಕ 11:31; ಯೋಹಾನ 11:1-44) ನೀವು ಊಹಿಸಸಾಧ್ಯವಿರುವಂತೆ, ಲಾಜರನು ಜೀವಕ್ಕೆ ಹಿಂದಿರುಗುವುದನ್ನು ಪ್ರತ್ಯಕ್ಷವಾಗಿ ನೋಡಿದವರಲ್ಲಿ ಅನೇಕರು, ಮಹತ್ತಾಗಿ ಪ್ರಭಾವಿಸಲ್ಪಟ್ಟು, ದೇವರ ಮಗನಲ್ಲಿ ನಂಬಿಕೆಯನ್ನಿಟ್ಟರು. (ಯೋಹಾನ 11:45) ಅವರು ಯಾರು ಮತ್ತು ಎಲ್ಲಿಗೆ ಹೋಗುತ್ತಿದ್ದರೆಂಬುದರ ಕುರಿತಾಗಿ ಯಾವುದೇ ಕಲ್ಪನೆಯಿಲ್ಲದೆ, ಜೀವನದಲ್ಲಿ ಉದ್ದೇಶವಿಲ್ಲದಿರುವಂತೆ ಅವರಿಗೆ ಅನಿಸಿತೆಂದು ನೀವು ಯೋಚಿಸುತ್ತೀರೊ? ವ್ಯತಿರಿಕ್ತವಾಗಿ, ಜನಿಸಿ, ಸ್ವಲ್ಪ ಸಮಯದ ವರೆಗೆ ಜೀವಿಸಿ, ಅನಂತರ ಸಾಯುವ ಬರಿಯ ಪ್ರಾಣಿಗಳಂತೆ ಅವರು ಇರುವ ಅಗತ್ಯವಿಲ್ಲವೆಂಬುದನ್ನು ಅವರು ನೋಡಸಾಧ್ಯವಿತ್ತು. ಜೀವನದಲ್ಲಿನ ಅವರ ಉದ್ದೇಶವು, ಯೇಸುವಿನ ತಂದೆಯನ್ನು ತಿಳಿದು ಆತನ ಚಿತ್ತವನ್ನು ಮಾಡುವುದರೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿತ್ತು. ನಿಮ್ಮ ಕುರಿತಾಗಿ ಏನು? ಈ ಚರ್ಚೆಯು, ನಿಮ್ಮ ಜೀವನವು ಒಂದು ನಿಜವಾದ ಉದ್ದೇಶವನ್ನು ಹೊಂದಿರಸಾಧ್ಯವಿದೆ ಮತ್ತು ಹೊಂದಿರಬೇಕೆಂಬುದನ್ನು ನೀವು ಕಾಣುವಂತೆ ಅಥವಾ ಇನ್ನೂ ಸ್ಪಷ್ಟವಾಗಿ ಕಾಣುವಂತೆ ನಿಮಗೆ ಸಹಾಯ ಮಾಡಿದೆಯೊ?
21. ನಮ್ಮ ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳುವ ಯಾವ ಅಂಶವನ್ನು ನಾವು ಇನ್ನೂ ಪರೀಕ್ಷಿಸಲು ಬಯಸುತ್ತೇವೆ?
21 ಆದರೂ, ಜೀವಿಸುವುದರಲ್ಲಿ ಪ್ರಾಮಾಣಿಕವಾದ ಮತ್ತು ಅರ್ಥಭರಿತವಾದ ಉದ್ದೇಶವನ್ನು ಹೊಂದಿರುವುದು, ಮರಣ ಮತ್ತು ಅನಂತರ ಪುನಃ ಜೀವಿಸುವುದರ ಕುರಿತಾಗಿ ಯೋಚಿಸುವುದಕ್ಕಿಂತ ಇನ್ನೂ ಹೆಚ್ಚನ್ನು ಅರ್ಥೈಸುತ್ತದೆ. ಅನುದಿನವೂ ನಾವು ನಮ್ಮ ಜೀವನಗಳೊಂದಿಗೆ ಏನು ಮಾಡುತ್ತಿದ್ದೇವೊ ಅದನ್ನು ಅದು ಒಳಗೂಡುತ್ತದೆ. ಮುಂದಿನ ಲೇಖನದಲ್ಲಿ ನಾವು ನೋಡಲಿರುವಂತೆ, ಸೊಲೊಮೋನನು ಅದನ್ನೂ ಪ್ರಸಂಗಿ ಪುಸ್ತಕದಲ್ಲಿ ಸ್ಪಷ್ಟಪಡಿಸಿದನು.
[ಅಧ್ಯಯನ ಪ್ರಶ್ನೆಗಳು]
a “ಶೆಬಾ ದೇಶದ ರಾಣಿಯ ಕುರಿತಾದ ಕಥನವು, ಸೊಲೊಮೋನನ ವಿವೇಕವನ್ನು ಒತ್ತಿಹೇಳುತ್ತದೆ, ಮತ್ತು ಆ ಕಥೆಯನ್ನು ಅನೇಕವೇಳೆ ಒಂದು ಐತಿಹ್ಯವೆಂದು ಕರೆಯಲಾಗಿದೆ (1 ಅರ. 10:1-13). ಆದರೆ ಸೊಲೊಮೋನನಿಗೆ ಆಕೆಯಿತ್ತ ಭೇಟಿಯು, ನಿಜವಾಗಿ ವ್ಯಾಪಾರದೊಂದಿಗೆ ಸಂಬಂಧಿಸಲ್ಪಟ್ಟಿತ್ತೆಂದು ಪೂರ್ವಾಪರ ವಚನಗಳು ಸೂಚಿಸುತ್ತವೆ ಮತ್ತು ಈ ಕಾರಣದಿಂದ ಅದು ಗ್ರಹಿಸಬಹುದಾದ ಸಂಗತಿಯಾಗಿದೆ; ಅದರ ಐತಿಹಾಸಿಕತೆಯನ್ನು ಸಂದೇಹಿಸುವ ಅಗತ್ಯವಿಲ್ಲ.”—ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ (1988), ಸಂಪುಟ IV, ಪುಟ 567.
ನಿಮಗೆ ಜ್ಞಾಪಕವಿದೆಯೊ?
◻ ಪ್ರಾಣಿಗಳು ಮತ್ತು ಮನುಷ್ಯರು ಯಾವ ವಿಧಗಳಲ್ಲಿ ತುಲನಾತ್ಮಕರಾಗಿದ್ದಾರೆ?
◻ ಮಾನವ ಪ್ರಯಾಸ ಮತ್ತು ಚಟುವಟಿಕೆಯಲ್ಲಿ ಹೆಚ್ಚಿನದ್ದು ವ್ಯರ್ಥವೆಂಬುದನ್ನು ಮರಣವು ಏಕೆ ಪ್ರಬಲವಾಗಿ ತೋರಿಸುತ್ತದೆ?
◻ ಜನನ ದಿನಕ್ಕಿಂತ ಮರಣದ ದಿನವು ಉತ್ತಮವಾಗಿರಬಲ್ಲದು ಹೇಗೆ?
◻ ಜೀವನದಲ್ಲಿ ನಾವು ಒಂದು ಅರ್ಥಭರಿತ ಉದ್ದೇಶವನ್ನು ಹೊಂದಿರುವುದು, ಯಾವ ಸಂಬಂಧದ ಮೇಲೆ ಆಧಾರಿಸಿರುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ನಿಮ್ಮ ಜೀವನವು ಪ್ರಮುಖವಾಗಿ ಯಾವ ರೀತಿಯಲ್ಲಿ ಪ್ರಾಣಿಗಳ ಜೀವನಕ್ಕಿಂತ ಭಿನ್ನವಾಗಿದೆ?