ಅಧ್ಯಾಯ 9
ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ?
1. ಮರಣವು ಪ್ರಿಯನೊಬ್ಬನನ್ನು ಹೊಡೆದಾಗ ಜನರಿಗೆ ಹೇಗೆನಿಸುತ್ತದೆ?
“ಪ್ರಿಯನೊಬ್ಬನು ಸಾಯುವಾಗ ಒಬ್ಬನು ಬಾಧೆಪಡುತ್ತಾನೆ, ಏಕೆಂದರೆ ಮರಣವು ಅಜ್ಞಾತಕ್ಕೆ ಕಣ್ಮರೆಯಾಗುವ ಪ್ರಿಯನೊಬ್ಬನ ಸಕಲ ಗ್ರಹಿಕೆಯನ್ನು ಮೀರುವ ನಷ್ಟವಾಗಿದೆ.” ತನ್ನ ತಂದೆ ಮತ್ತು ಅದಾಗಿ ಸ್ವಲ್ಪದರಲ್ಲಿ ತಾಯಿ ಸತ್ತಾಗ ಒಬ್ಬ ಮಗನು ಹಾಗೆ ಹೇಳಿದನು. ಅವನ ವೇದನೆ ಮತ್ತು ಅಗಾಧ ನಷ್ಟಪ್ರಜ್ಞೆಯಿಂದಾಗಿ ಅವನಿಗೆ “ಭಾವಾತ್ಮಕವಾಗಿ ಮುಳುಗುತ್ತಿರುವ” ಅನಿಸಿಕೆಯಾಯಿತು. ಪ್ರಾಯಶಃ ನೀವೂ ಅದೇ ರೀತಿ ಬಾಧೆ ಪಟ್ಟಿರಬಹುದು. ನಿಮ್ಮ ಪ್ರಿಯರು ಎಲ್ಲಿದ್ದಾರೆ ಮತ್ತು ನೀವು ಪುನಃ ಅವರನ್ನು ಎಂದಾದರೂ ನೋಡುವಿರೊ ಎಂದು ನೀವು ಕುತೂಹಲಗೊಂಡಿರಬಹುದು.
2. ಮರಣದ ವಿಷಯವಾಗಿ ಯಾವ ಗಲಿಬಿಲಿಗೊಳಿಸುವ ಪ್ರಶ್ನೆಗಳು ಏಳುತ್ತವೆ?
2 ಶೋಕಿಸುತ್ತಿರುವ ಕೆಲವು ಹೆತ್ತವರಿಗೆ, “ದೇವರು ತನಗಾಗಿ ಸ್ವರ್ಗಕ್ಕೆ ತೆಗೆದುಕೊಳ್ಳಲು ಅತಿ ಸುಂದರವಾದ ಪುಷ್ಪಗಳನ್ನು ಹೆಕ್ಕುತ್ತಾನೆ,” ಎಂದು ಹೇಳಲಾಗಿದೆ. ಅದು ನಿಜವಾಗಿ ಹಾಗೆಯೊ? ಮೃತರಾಗಿರುವ ನಮ್ಮ ಪ್ರಿಯರು ಒಂದು ಆತ್ಮ ಲೋಕಕ್ಕೆ ಹೋಗಿದ್ದಾರೆಯೆ? ಇದು ಸಕಲ ವೇದನೆ ಮತ್ತು ಬಯಕೆಗಳಿಂದ ಮುಕ್ತವಾಗಿರುವ ಪರಮಾನಂದ ಸ್ಥಿತಿಯೆಂದು ವರ್ಣಿಸಿ ಕೆಲವರು ಕರೆಯುವ ನಿರ್ವಾಣವೊ? ನಾವು ಪ್ರೀತಿಸುವವರು ಒಂದು ಪ್ರವೇಶದ್ವಾರವನ್ನು ದಾಟಿ ಪರದೈಸಿನಲ್ಲಿ ಅಮರವಾದ ಜೀವಕ್ಕೆ ಹೋಗಿದ್ದಾರೊ? ಇಲ್ಲವೆ, ಇತರರು ವಾದಿಸುವಂತೆ, ಮರಣವು ದೇವರನ್ನು ರೇಗಿಸಿದವರಿಗೆ ಅನಂತವಾದ ಯಾತನೆಗಾಗಿರುವ ಪತನವೊ? ಮೃತರು ನಮ್ಮ ಜೀವಿತಗಳನ್ನು ಪ್ರಭಾವಿಸಬಲ್ಲರೊ? ಇಂತಹ ಪ್ರಶ್ನೆಗಳಿಗೆ ಸತ್ಯವಾದ ಉತ್ತರಗಳನ್ನು ಪಡೆಯಲು ನಾವು ದೇವರ ವಾಕ್ಯವಾದ ಬೈಬಲನ್ನು ವಿಚಾರಿಸುವುದು ಅಗತ್ಯ.
ಮನುಷ್ಯನು ಏನಾಗಿದ್ದಾನೆ?
3. ಮೃತರ ಕುರಿತು ಸಾಕ್ರೆಟೀಸ್ ಮತ್ತು ಪ್ಲೇಟೊ ಅವರ ಅಭಿಪ್ರಾಯವೇನಾಗಿತ್ತು ಮತ್ತು ಇದು ಇಂದು ಜನರನ್ನು ಹೇಗೆ ಪ್ರಭಾವಿಸುತ್ತದೆ?
3 ಪ್ರಾಚೀನಕಾಲದ ಗ್ರೀಕ್ ತತ್ವಜ್ಞಾನಿಗಳಾಗಿದ್ದ ಸಾಕ್ರೆಟೀಸ್ ಮತ್ತು ಪ್ಲೇಟೊ, ಪುರುಷ ಮತ್ತು ಸ್ತ್ರೀಯೊಳಗೆ ಅಂತರ್ಗತವಾಗಿ ಅಮರವಾಗಿರುವ—ಮರಣವನ್ನು ಪಾರಾಗಿ ನಿಜವಾಗಿ ಎಂದಿಗೂ ಸಾಯದಿರುವ—ಆತ್ಮವೆಂಬ ಯಾವುದೋ ವಿಷಯವು ಇರಲೇಬೇಕೆಂದು ನಂಬಿದರು. ಭೂವ್ಯಾಪಕವಾಗಿ, ಕೋಟಿಗಟ್ಟಲೆ ಜನರು ಇಂದು ಇದನ್ನು ನಂಬುತ್ತಾರೆ. ಈ ವಿಶ್ವಾಸವು ಅನೇಕ ವೇಳೆ ಮೃತರ ಯೋಗಕ್ಷೇಮಕ್ಕಿರುವ ಚಿಂತೆಯಷ್ಟೇ ಅವರ ಭಯವನ್ನೂ ಉಂಟುಮಾಡುತ್ತದೆ. ಆದರೆ ಮನುಷ್ಯನು ನಿಜವಾಗಿಯೂ ಏನಾಗಿದ್ದಾನೆ ಮತ್ತು ಅವನು ಸಾಯುವಾಗ ಏನಾಗುತ್ತದೆಂಬುದರ ಕುರಿತಾಗಿ ಬೈಬಲು ನಮಗೆ ತೀರ ಭಿನ್ನವಾಗಿರುವ ವಿಷಯವನ್ನು ಕಲಿಸುತ್ತದೆ.
4. (ಎ) ಮನುಷ್ಯನು ಏನಾಗಿದ್ದಾನೆ ಎಂಬುದರ ಬಗ್ಗೆ ಆದಿಕಾಂಡವು ನಮಗೇನು ಹೇಳುತ್ತದೆ? (ಬಿ) ಸಜೀವಗೊಳಿಸಲು ದೇವರು ಆದಾಮನೊಳಗೆ ಏನನ್ನು ಹಾಕಿದನು?
4 ಮನುಷ್ಯನು ಹೇಗೆ ಸೃಷ್ಟಿಸಲ್ಪಟ್ಟನು ಎಂಬುದರ ಕುರಿತು ಬೈಬಲ್ ಕೊಡುವ ವರ್ಣನೆಯು ಸರಳವೂ, ಸಮಂಜಸವೂ, ಮನುಷ್ಯರ ಜಟಿಲವಾದ ತತ್ವಜ್ಞಾನಗಳು ಮತ್ತು ಮೂಢನಂಬಿಕೆಗಳಿಂದ ಮುಕ್ತವೂ ಆಗಿದೆ. ಬೈಬಲಿನ ಮೊತ್ತಮೊದಲ ಪುಸ್ತಕವಾಗಿರುವ ಆದಿಕಾಂಡ 2:7ರಲ್ಲಿ ಅದು ಹೇಳುವುದು: “ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿ [ನೆಫೆಷ್a (“ಉಸಿರಾಡುವವನು” ಎಂಬ ಅಕ್ಷರಾರ್ಥವುಳ್ಳ ಹೀಬ್ರು ಪದ)]ಯಾದನು.” ಮನುಷ್ಯನಿಗೆ ಒಂದು ಆತ್ಮವು ಕೊಡಲ್ಪಟ್ಟಿರಲಿಲ್ಲ ಎಂಬುದನ್ನು ಗಮನಿಸಿರಿ. ಅದರ ಬದಲು ನಿರ್ಜೀವವಾಗಿದ್ದ ದೇಹದೊಳಗೆ ‘ಜೀವಶ್ವಾಸವನ್ನು’ ಊದಲಾಯಿತು ಮತ್ತು ಆಗ ಅದು ಒಬ್ಬ ಮನುಷ್ಯ, ಅಥವಾ ಒಬ್ಬ ಜೀವಂತ ವ್ಯಕ್ತಿಯಾಯಿತು. ಆದುದರಿಂದ, ಒಬ್ಬ ಮನುಷ್ಯನು ಜೀವಂತ, ಪ್ರಜ್ಞೆಯುಳ್ಳ ವ್ಯಕ್ತಿಯಾಗಿರಬೇಕಾದರೆ ಅವನೊಳಗೆ ಒಂದು ಆತ್ಮವು ವಾಸಿಸುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದಾಮನ ಜೀವವು ಉಸಿರಾಟದಿಂದ ಪೋಷಿಸಲ್ಪಡುತ್ತಿತ್ತು. ಆದರೂ, ದೇವರು ಆದಾಮನೊಳಗೆ ಜೀವಶ್ವಾಸವನ್ನು ಹಾಕಿದಾಗ, ಮನುಷ್ಯನ ಶ್ವಾಸಕೋಶಗಳೊಳಗೆ ಗಾಳಿಯನ್ನು ಊದುವುದಕ್ಕಿಂತ ಹೆಚ್ಚಿನದ್ದು ಒಳಗೂಡಿತ್ತು. ಭೂಜೀವಿಗಳಲ್ಲಿ ಕಾರ್ಯಕಾರಿಯಾಗಿರುವ “ಜೀವದ ಶಕ್ತಿ”ಯ ಕುರಿತು ಬೈಬಲು ಮಾತಾಡುತ್ತದೆ.—ಆದಿಕಾಂಡ 7:22, NW.
5, 6. (ಎ) “ಜೀವದ ಶಕ್ತಿ” ಎಂದರೇನು? (ಬಿ) ಕೀರ್ತನೆ 146:4ರಲ್ಲಿ ಹೇಳಿರುವ “ಉಸಿರು” ಶರೀರವನ್ನು ಸಚೇತನಗೊಳಿಸುವುದನ್ನು ನಿಲ್ಲಿಸಿದಾಗ ಏನು ಸಂಭವಿಸುತ್ತದೆ?
5 ಆ “ಜೀವದ ಶಕ್ತಿ” ಎಂದರೇನು? ಆದಾಮನ ಜೀವರಹಿತ ದೇಹದೊಳಕ್ಕೆ ದೇವರು ಹಾಕಿದ ಜೀವನಾಧಾರವಾದ ಜೀವಕಿಡಿಯೇ ಅದು. ಈ ಶಕ್ತಿಯು ಉಸಿರಾಟದ ಪ್ರಕ್ರಿಯೆಯ ಮೂಲಕ ಪೋಷಿತವಾಗುತಿತ್ತು. ಆದರೆ ಕೀರ್ತನೆ 146:4ರಲ್ಲಿ ಸೂಚಿಸಲ್ಪಟ್ಟಿರುವ “ಉಸಿರು” ಎಂದರೇನು? ಸಾಯುವ ಒಬ್ಬನ ಕುರಿತು ಆ ವಚನವು ಹೇಳುವುದು: “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ಬೈಬಲ್ ಲೇಖಕರು “ಉಸಿರು” ಎಂಬ ಪದವನ್ನು ಈ ವಿಧದಲ್ಲಿ ಉಪಯೋಗಿಸಿದಾಗ, ಶರೀರವು ಸತ್ತ ಬಳಿಕ ಬದುಕುತ್ತಾ ಮುಂದುವರಿಯುವ ಅಶರೀರಿಯಾದ ಆತ್ಮದ ವಿಚಾರವು ಅವರ ಮನಸ್ಸಿನಲ್ಲಿರಲಿಲ್ಲ.
6 ಮರಣದಲ್ಲಿ ಮಾನವರನ್ನು ಬಿಟ್ಟುಹೋಗುವ “ಉಸಿರು” ನಮ್ಮ ಸೃಷ್ಟಿಕರ್ತನಿಂದ ಉದ್ಭವಿಸಿದ ಜೀವಶಕ್ತಿಯಾಗಿದೆ. (ಕೀರ್ತನೆ 36:9; ಅ. ಕೃತ್ಯಗಳು 17:28) ಒಂದು ಉಪಕರಣಕ್ಕೆ ಶಕ್ತಿಕೊಡುವ ವಿದ್ಯುತ್ತು ಆ ಉಪಕರಣದ ವೈಲಕ್ಷಣ್ಯವನ್ನು ಹೇಗೆ ತೆಗೆದುಕೊಳ್ಳುವುದಿಲ್ಲವೋ ಹಾಗೆಯೇ ಈ ಜೀವಶಕ್ತಿಗೆ ಅದು ಯಾವುದನ್ನು ಸಚೇತನಗೊಳಿಸುತ್ತದೋ ಆ ಜೀವಿಯ ಯಾವುದೇ ಗುಣಲಕ್ಷಣಗಳಿರುವುದಿಲ್ಲ. ವಿದ್ಯುತ್ತನ್ನು ಬಂದು ಮಾಡಿದಾಗ ಹೇಗೆ ಬೆಳಕು ಆರಿಹೋಗುತ್ತದೆಯೋ ಸರಿ ಸುಮಾರಾಗಿ ಹಾಗೆಯೇ ಒಬ್ಬನು ಸಾಯುವಾಗ, “ಉಸಿರು” (ಜೀವಶಕ್ತಿ) ಆ ಶರೀರದ ಜೀವಕಣಗಳನ್ನು ಸಚೇತನಗೊಳಿಸುವುದನ್ನು ನಿಲ್ಲಿಸುತ್ತದೆ. ಆ ಜೀವಶಕ್ತಿಯು ಮಾನವ ದೇಹವನ್ನು ಪೋಷಿಸುವುದನ್ನು ನಿಲ್ಲಿಸುವಾಗ, ಇಡೀ ಮನುಷ್ಯನು ಸಾಯುತ್ತಾನೆ.—ಕೀರ್ತನೆ 104:29.
“ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ”
7. ದೇವರಿಗೆ ಅವಿಧೇಯನಾಗುವಲ್ಲಿ ಆದಾಮನಿಗೆ ಏನು ಸಂಭವಿಸಲಿತ್ತು?
7 ಪಾಪಿಯಾದ ಆದಾಮನಿಗೆ ಮರಣವು ಯಾವ ಅರ್ಥದಲ್ಲಿರುವುದೆಂದು ಯೆಹೋವನು ಸ್ಪಷ್ಟವಾಗಿ ವಿವರಿಸಿದನು. ದೇವರು ಹೇಳಿದ್ದು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಆದಾಮನು ಎಲ್ಲಿಗೆ ಹಿಂದಿರುಗಲಿದ್ದನು? ನೆಲಕ್ಕೆ, ಅವನು ಯಾವ ಮಣ್ಣಿನಿಂದ ಸೃಷ್ಟಿಸಲ್ಪಟ್ಟಿದ್ದನೋ ಅಲ್ಲಿಗೆ. ಮರಣದಲ್ಲಿ ಆದಾಮನು ಕೇವಲ ಇಲ್ಲದೆ ಹೋಗಲಿದ್ದನು!
8. ಯಾವ ವಿಧದಲ್ಲಿ ಮನುಷ್ಯರು ಪಶುಗಳಿಗಿಂತ ಶ್ರೇಷ್ಠರಲ್ಲ?
8 ಈ ಸಂಬಂಧದಲ್ಲಿ, ಮಾನವ ಮರಣವು ಪ್ರಾಣಿಗಳ ಮರಣಕ್ಕಿಂತ ಭಿನ್ನವಾಗಿರುವುದಿಲ್ಲ. ಅವುಗಳೂ ನೆಫೆಷ್ ಆಗಿವೆ, ಮತ್ತು ಅದೇ “ಉಸಿರು” ಅಥವಾ ಜೀವಶಕ್ತಿಯು ಅವುಗಳನ್ನೂ ಚೇತನಗೊಳಿಸುತ್ತದೆ. (ಆದಿಕಾಂಡ 1:24) ಪ್ರಸಂಗಿ 3:19, 20ರಲ್ಲಿ ವಿವೇಕಿ ಮನುಷ್ಯನಾದ ಸೊಲೊಮೋನನು ನಮಗನ್ನುವುದು: “ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು; ಎಲ್ಲಕ್ಕೂ ಪ್ರಾಣ [“ಉಸಿರು,” NW] ಒಂದೇ; ಮನುಷ್ಯನು [ಮರಣದಲ್ಲಿ] ಪಶುವಿಗಿಂತ ಶ್ರೇಷ್ಠನಲ್ಲ; . . . ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.” ಮನುಷ್ಯನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟು, ಯೆಹೋವನ ಗುಣಗಳನ್ನು ಪ್ರತಿಬಿಂಬಿಸುತ್ತಿದ್ದುದರಿಂದ ಪಶುಗಳಿಗಿಂತ ಶ್ರೇಷ್ಠನಾಗಿದ್ದನು. (ಆದಿಕಾಂಡ 1:26, 27) ಆದರೂ, ಮರಣದಲ್ಲಿ ಮಾನವರೂ ಪ್ರಾಣಿಗಳೂ ಏಕಪ್ರಕಾರವಾಗಿ ಮಣ್ಣಿಗೆ ಹಿಂದಿರುಗುತ್ತಾರೆ.
9. ಮೃತರ ಸ್ಥಿತಿಯೇನು, ಮತ್ತು ಅವರು ಎಲ್ಲಿಗೆ ಹೋಗುತ್ತಾರೆ?
9 ಸೊಲೊಮೋನನು ಮರಣದ ಅರ್ಥವನ್ನು ಇನ್ನೂ ವಿವರಿಸುತ್ತಾ ಹೇಳುವುದು: “ಜೀವಿತರಿಗೆ ತಾವು ಸಾಯುತ್ತೇವೆಂಬ ಪ್ರಜ್ಞೆಯಿರುತ್ತದೆ; ಆದರೆ ಮೃತರಿಗೋ, ಯಾವುದರ ಪ್ರಜ್ಞೆಯೂ ಇಲ್ಲ.” ಹೌದು, ಮೃತರಿಗೆ ಯಾವುದರ ಅರಿವೂ ಇಲ್ಲ. ಈ ದೃಷ್ಟಿಯಿಂದ, ಸೊಲೊಮೋನನು ಪ್ರೋತ್ಸಾಹಿಸಿದ್ದು: “ನಿನ್ನ ಕೈಗೆ ಮಾಡಲು ದೊರೆಯುವುದೆಲ್ಲವನ್ನೂ ನಿನ್ನ ಸಾಕ್ಷಾತ್ ಶಕ್ತಿಯಿಂದ ಮಾಡು, ಏಕೆಂದರೆ ನೀನು ಹೋಗುತ್ತಿರುವ ಷೀಓಲ್ನಲ್ಲಿ ಯಾವ ಕೆಲಸವೂ, ಯಾವ ಹೂಟ ಹೂಡುವಿಕೆಯೂ ಯಾವ ಜ್ಞಾನವೂ ವಿವೇಕವೂ ಇರುವುದಿಲ್ಲ.” (ಪ್ರಸಂಗಿ 9:5, 10, NW) ಮೃತರು ಎಲ್ಲಿಗೆ ಹೋಗುತ್ತಾರೆ? ಮಾನವ ಕುಲದ ಸಾಮಾನ್ಯ ಸಮಾಧಿಯಾದ ಷೀಓಲ್ (ಹೀಬ್ರು, ಷೀಆಲ್)ಗೆ. ನಮಗೆ ಪ್ರಿಯರಾಗಿದ್ದ ಮೃತರು ಯಾವುದರ ಪ್ರಜ್ಞೆಯೂ ಇಲ್ಲದವರಾಗಿದ್ದಾರೆ. ಅವರು ನರಳಾಡುತ್ತಿಲ್ಲ, ಮತ್ತು ಅವರು ನಮ್ಮ ಮೇಲೆ ಯಾವ ವಿಧದ ಪರಿಣಾಮವನ್ನೂ ಉಂಟುಮಾಡರು.
10. ಮರಣವು ಅಂತಿಮ ಸ್ಥಿತಿಯಾಗಿರಬೇಕಿಲ್ಲವೆಂದು ನಾವು ಏಕೆ ಹೇಳಬಲ್ಲೆವು?
10 ನಾವೆಲ್ಲರು ಮತ್ತು ನಮ್ಮ ಪ್ರಿಯರು ಕೇವಲ ಕೆಲವೇ ವರುಷ ಬದುಕಿ, ಅನಂತರ ಸದಾಕಾಲಕ್ಕಾಗಿ ಇಲ್ಲದೆ ಹೋಗಬೇಕೊ? ಬೈಬಲಿಗನುಸಾರ ಹಾಗಿರುವುದಿಲ್ಲ. ಆದಾಮನ ದಂಗೆಯ ಸಮಯದಲ್ಲಿ, ಮಾನವ ಪಾಪದ ಭಯಂಕರ ಪರಿಣಾಮಗಳನ್ನು ವಿಪರ್ಯಸ್ತಗೊಳಿಸಲು ಯೆಹೋವ ದೇವರು ಆ ಕೂಡಲೆ ಏರ್ಪಾಡುಗಳನ್ನು ಸ್ಥಾಪಿಸಿದನು. ಮರಣವು ಮಾನವ ಕುಲಕ್ಕಾಗಿದ್ದ ದೇವರ ಉದ್ದೇಶದ ಭಾಗವಾಗಿರಲಿಲ್ಲ. (ಯೆಹೆಜ್ಕೇಲ 33:11; 2 ಪೇತ್ರ 3:9) ಆದಕಾರಣ, ಮರಣವು ನಮಗಾಗಲಿ, ನಮ್ಮ ಪ್ರಿಯರಿಗಾಗಲಿ ಅಂತಿಮ ಸ್ಥಿತಿಯಾಗಿರಬೇಕಾಗಿಲ್ಲ.
“ನಿದ್ರೆ ಮಾಡುತ್ತಾನೆ”
11. ತನ್ನ ಸತ್ತುಹೋಗಿದ್ದ ಮಿತ್ರ ಲಾಜರನ ಸ್ಥಿತಿಯನ್ನು ಯೇಸುವು ಹೇಗೆ ವರ್ಣಿಸಿದನು?
11 ನಮ್ಮನ್ನೂ ನಮಗೆ ಪ್ರಿಯರಾಗಿದ್ದ ಮೃತರನ್ನೂ ಆದಾಮಸಂಬಂಧದ ಮರಣದಿಂದ ರಕ್ಷಿಸುವುದು ಯೆಹೋವನ ಉದ್ದೇಶವಾಗಿದೆ. ಈ ಕಾರಣದಿಂದ, ದೇವರ ವಾಕ್ಯವು ಮೃತರನ್ನು ಸೂಚಿಸಿ ಅವರು ನಿದ್ರಿಸುತ್ತಿದ್ದಾರೆಂದು ಹೇಳುತ್ತದೆ. ದೃಷ್ಟಾಂತಕ್ಕೆ, ತನ್ನ ಮಿತ್ರ ಲಾಜರನು ಸತ್ತಿದ್ದಾನೆಂದು ತಿಳಿದಾಗ, ಯೇಸು ಕ್ರಿಸ್ತನು ಅವನ ಶಿಷ್ಯರಿಗೆ ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” ಶಿಷ್ಯರು ಈ ಹೇಳಿಕೆಯ ಅರ್ಥವನ್ನು ಆ ಕೂಡಲೆ ಗ್ರಹಿಸದೆ ಹೋದಕಾರಣ, ಯೇಸು ಸರಳವಾಗಿ, “ಲಾಜರನು ಸತ್ತುಹೋದನು,” ಎಂದನು. (ಯೋಹಾನ 11:11, 14) ಬಳಿಕ ಯೇಸುವು, ಲಾಜರನ ಸೋದರಿಯರಾದ ಮಾರ್ಥ ಮತ್ತು ಮರಿಯ ತಮ್ಮ ತಮ್ಮನಿಗಾಗಿ ಎಲ್ಲಿ ಶೋಕಿಸುತ್ತಿದ್ದರೋ, ಆ ಬೇಥಾನ್ಯ ಪಟ್ಟಣಕ್ಕೆ ಹೋದನು. ಯೇಸುವು ಮಾರ್ಥಳಿಗೆ, “ನಿನ್ನ ತಮ್ಮನು ಎದ್ದುಬರುವ”ನು ಎಂದು ಹೇಳಿದಾಗ, ಮಾನವ ಕುಟುಂಬದ ಮೇಲಿರುವ ಮರಣದ ಪರಿಣಾಮಗಳನ್ನು ವಿಪರ್ಯಸ್ತ ಮಾಡುವ ದೇವರ ಉದ್ದೇಶದಲ್ಲಿ ತನ್ನ ನಂಬಿಕೆಯನ್ನು ಆಕೆ ವ್ಯಕ್ತಪಡಿಸಿದಳು. ಆಕೆ ಹೇಳಿದ್ದು: “ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.”—ಯೋಹಾನ 11:23, 24.
12. ಮೃತರ ವಿಷಯದಲ್ಲಿ ವಿಯೋಗಿಯಾಗಿದ್ದ ಮಾರ್ಥಳಿಗೆ ಯಾವ ನಿರೀಕ್ಷೆಯಿತ್ತು?
12 ಮರಣಾನಂತರ ಎಲ್ಲಿಯೋ ಜೀವಿಸುವ ಒಂದು ಅಮರವಾದ ಆತ್ಮದ ಕುರಿತಾದ ಯಾವ ಅಭಿಪ್ರಾಯವನ್ನೂ ಮಾರ್ಥಳು ವ್ಯಕ್ತಪಡಿಸಲಿಲ್ಲ. ಲಾಜರನು ತನ್ನ ಅಸ್ತಿತ್ವವನ್ನು ಮುಂದುವರಿಸಲಿಕ್ಕಾಗಿ ಯಾವುದೋ ಆತ್ಮಲೋಕಕ್ಕೆ ಆಗಲೇ ಹೋಗಿದ್ದಾನೆಂದು ಆಕೆ ನಂಬಲಿಲ್ಲ. ಮಾರ್ಥಳಿಗೆ ಸತ್ತವರೊಳಗಿಂದ ಆಗುವ ಪುನರುತ್ಥಾನದ ಆಶ್ಚರ್ಯಕರ ನಿರೀಕ್ಷೆಯಲ್ಲಿ ನಂಬಿಕೆಯಿತ್ತು. ಲಾಜರನ ದೇಹದಿಂದ ಒಂದು ಅಮರವಾದ ಆತ್ಮವು ಅಗಲಿ ಹೋಗಿತ್ತೆಂದಲ್ಲ, ಬದಲಾಗಿ ತನ್ನ ಮೃತ ಸೋದರನು ಇಲ್ಲದೆ ಹೋಗಿದ್ದನು ಎಂದು ಅವಳು ಅರ್ಥಮಾಡಿಕೊಂಡಳು. ಆಕೆಯ ಸೋದರನ ಪುನರುತ್ಥಾನವೇ ಇದರ ಪರಿಹಾರವಾಗಿರುವುದು.
13. ಯೇಸುವಿಗೆ ಯಾವ ದೇವದತ್ತ ಶಕ್ತಿಯಿದೆ, ಮತ್ತು ಅವನು ಈ ಶಕ್ತಿಯನ್ನು ಹೇಗೆ ಪ್ರದರ್ಶಿಸಿದನು?
13 ಮಾನವ ಕುಲವನ್ನು ವಿಮೋಚಿಸಲು ಯೆಹೋವ ದೇವರಿಂದ ಶಕ್ತಿಕೊಡಲ್ಪಟ್ಟವನು ಯೇಸು ಕ್ರಿಸ್ತನು. (ಹೋಶೇಯ 13:14) ಆದಕಾರಣ, ಮಾರ್ಥಳ ಹೇಳಿಕೆಗೆ ಉತ್ತರವಾಗಿ ಯೇಸು ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 11:25) ಸತ್ತು ನಾಲ್ಕು ದಿನಗಳಾಗಿದ್ದ ಲಾಜರನ ಗೋರಿಗೆ ಹೋಗಿ ಅವನನ್ನು ಜೀವಕ್ಕೆ ಪುನಃ ಸ್ಥಾಪಿಸಿದಾಗ, ಈ ಸಂಬಂಧದಲ್ಲಿ ತನಗಿದ್ದ ದೇವದತ್ತ ಶಕ್ತಿಯನ್ನು ಯೇಸು ಪ್ರದರ್ಶಿಸಿದನು. (ಯೋಹಾನ 11:38-44) ಈ ಪುನರುತ್ಥಾನವನ್ನು ಅಥವಾ ಯೇಸು ಕ್ರಿಸ್ತನು ಮಾಡಿದ ಬೇರೆ ಪುನರುತ್ಥಾನಗಳನ್ನು ನೋಡಿದವರ ಆನಂದವನ್ನು ಊಹಿಸಿರಿ!—ಮಾರ್ಕ 5:35-42; ಲೂಕ 7:12-16.
14. ಪುನರುತ್ಥಾನವೂ ಅಮರವಾದ ಆತ್ಮದ ಕಲ್ಪನೆಯೂ ಅಸಂಬದ್ಧವೇಕೆ?
14 ಒಂದು ಕ್ಷಣ ನಿಂತು, ಇದನ್ನು ಪರಿಗಣಿಸಿರಿ: ಒಂದು ಅಮರವಾದ ಆತ್ಮವು ಮರಣವನ್ನು ಪಾರಾಗುವುದಾದರೆ, ಯಾರನ್ನೂ ಪುನರುತ್ಥಾನಗೊಳಿಸುವ ಅಥವಾ ಜೀವಕ್ಕೆ ಹಿಂದೆ ತರುವ ಅವಶ್ಯವಿರುವುದಿಲ್ಲ. ವಾಸ್ತವವಾಗಿ, ಲಾಜರನಂಥವನೊಬ್ಬನು ಆಗಲೇ ಒಂದು ಅದ್ಭುತಕರವಾದ ಸ್ವರ್ಗೀಯ ಪ್ರತಿಫಲಕ್ಕೆ ದಾಟಿ ಹೋಗಿರುವುದಾದರೆ, ಅವನನ್ನು ಭೂಮಿಯ ಮೇಲಿನ ಅಪರಿಪೂರ್ಣ ಜೀವಕ್ಕೆ ಹಿಂದೆ ತರುವುದು ದಯೆಯಾಗಿರಲಿಕ್ಕಿಲ್ಲ. ನಿಜವಾಗಿ, “ಅಮರವಾದ ಆತ್ಮ” ಎಂಬ ವಾಕ್ಸರಣಿಯನ್ನು ಬೈಬಲು ಉಪಯೋಗಿಸುವುದೇ ಇಲ್ಲ. ಬದಲಿಗೆ, ಪಾಪಮಾಡುವ ಮಾನವ ಆತ್ಮವು ಖಂಡಿತ ಸಾಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. (ಯೆಹೆಜ್ಕೇಲ 18:4, 20, NW) ಹೀಗೆ, ಮರಣಕ್ಕೆ ನಿಜ ಪರಿಹಾರವಾಗಿ ಪುನರುತ್ಥಾನದ ಮುನ್ನೇರ್ಪಾಡನ್ನು ಬೈಬಲು ಸೂಚಿಸುತ್ತದೆ.
“ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರು”
15. (ಎ) “ಪುನರುತ್ಥಾನ” ಎಂಬ ಪದದ ಅರ್ಥವೇನು? (ಬಿ) ಒಬ್ಬೊಬ್ಬ ವ್ಯಕ್ತಿಗಳ ಪುನರುತ್ಥಾನವು ಯೆಹೋವ ದೇವರಿಗೆ ಏಕೆ ಸಮಸ್ಯೆಯಾಗಿರದು?
15 ಯೇಸುವಿನ ಶಿಷ್ಯರು “ಪುನರುತ್ಥಾನ”ಕ್ಕೆ ಬಳಸಿದ ಪದದ ಅಕ್ಷರಾರ್ಥವು “ಎದ್ದೇಳುವುದು” ಅಥವಾ “ಎದ್ದು ನಿಲ್ಲುವುದು” ಎಂದಾಗಿದೆ. ಇದು ಮರಣದ ಜೀವರಹಿತ ಸ್ಥಿತಿಯಿಂದ ಎದ್ದೇಳುವುದಾಗಿದೆ—ಮಾನವ ಕುಲದ ಸಾಮಾನ್ಯ ಸಮಾಧಿಯಿಂದ ಎದ್ದು ನಿಲ್ಲುವುದೋ ಎಂಬಂತೆ. ದೇವರು ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಪುನರುತ್ಥಾನಗೊಳಿಸಬಲ್ಲನು. ಏಕೆ? ಯೆಹೋವನು ಜೀವದ ಕರ್ತೃವಾಗಿರುವುದರಿಂದಲೇ. ಇಂದು ಮಾನವರು ಪುರುಷ ಮತ್ತು ಸ್ತ್ರೀಯರ ಸ್ವರಗಳನ್ನು ಮತ್ತು ಬಿಂಬಗಳನ್ನು ವಿಡಿಯೋಟೇಪಿನಲ್ಲಿ ರೆಕಾರ್ಡುಮಾಡಿ, ಆ ವ್ಯಕ್ತಿಗಳು ಸತ್ತ ಮೇಲೆ ಅದನ್ನು ಪುನಃ ನುಡಿಸಬಲ್ಲರು. ಹಾಗಿರುವಾಗ ನಮ್ಮ ಸರ್ವಶಕ್ತ ಸೃಷ್ಟಿಕರ್ತನು ಯಾವನೇ ವ್ಯಕ್ತಿಯ ವಿವರಗಳನ್ನು ದಾಖಲೆಮಾಡಿ, ಅದೇ ವ್ಯಕ್ತಿಯನ್ನು, ಅವನಿಗೆ ಅಥವಾ ಅವಳಿಗೆ ಒಂದು ಹೊಸದಾಗಿ ರಚಿಸಲ್ಪಟ್ಟ ಶರೀರವನ್ನು ಕೊಟ್ಟು ಪುನರುತ್ಥಾನಗೊಳಿಸಬಲ್ಲನೆಂಬುದು ನಿಶ್ಚಯ.
16. (ಎ) ಸ್ಮರಣೆಯ ಸಮಾಧಿಗಳಲ್ಲಿರುವವರೆಲ್ಲರ ಕುರಿತಾಗಿ ಯೇಸು ಯಾವ ವಾಗ್ದಾನವನ್ನು ಮಾಡಿದನು? (ಬಿ) ಒಬ್ಬ ವ್ಯಕ್ತಿಯ ಪುನರುತ್ಥಾನವು ಏನಾಗಿ ಪರಿಣಮಿಸುವುದೆಂಬುದನ್ನು ಯಾವುದು ನಿರ್ಧರಿಸುವುದು?
16 ಯೇಸು ಕ್ರಿಸ್ತನು ಹೇಳಿದ್ದು: “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರು ಅವನ [ಯೇಸುವಿನ] ಧ್ವನಿಯನ್ನು ಕೇಳಿ ಹೊರಕ್ಕೆ ಬರುವ, ಒಳ್ಳೆಯದನ್ನು ಮಾಡಿದವರಿಗೆ ಜೀವದ, ಕೆಟ್ಟದ್ದನ್ನು ರೂಢಿಸಿದವರಿಗೆ ನ್ಯಾಯತೀರ್ಪಿನ ಪುನರುತ್ಥಾನವಾಗುವ ಕಾಲವು ಬರುತ್ತದೆ.” (ಯೋಹಾನ 5:28, 29, NW) ಯೆಹೋವನ ಸ್ಮರಣೆಯಲ್ಲಿರುವವರೆಲ್ಲರೂ ಪುನರುತ್ಥಾನಹೊಂದಿ, ಆತನ ಮಾರ್ಗಗಳಲ್ಲಿ ಉಪದೇಶಿಸಲ್ಪಡುವರು. ದೇವರ ಜ್ಞಾನಕ್ಕೆ ಹೊಂದಿಕೆಯಲ್ಲಿ ಕ್ರಿಯೆನಡಿಸುವವರಿಗೆ, ಇದು ಜೀವದ ಪುನರುತ್ಥಾನವಾಗಿ ಪರಿಣಮಿಸುವುದು. ಆದರೂ, ದೇವರ ಬೋಧನೆಗಳನ್ನು ಮತ್ತು ಆಳಿಕೆಯನ್ನು ನಿರಾಕರಿಸುವವರಿಗೆ ಇದು ದಂಡನಾತ್ಮಕ ನ್ಯಾಯತೀರ್ಪಿನ ಪುನರುತ್ಥಾನವಾಗಿ ಪರಿಣಮಿಸುವುದು.
17. ಯಾರಿಗೆ ಪುನರುತ್ಥಾನವಾಗಲಿರುವುದು?
17 ಯೆಹೋವನ ಸೇವಕರಾಗಿ ನೀತಿಯ ಮಾರ್ಗವನ್ನು ಬೆನ್ನಟ್ಟಿರುವವರಿಗೆ ಪುನರುತ್ಥಾನವಾಗುವುದಂತೂ ಸ್ವಾಭಾವಿಕ. ವಾಸ್ತವವೇನಂದರೆ, ಆ ಪುನರುತ್ಥಾನದ ನಿರೀಕ್ಷೆಯು ಅನೇಕರನ್ನು, ಹಿಂಸಾತ್ಮಕ ಪೀಡೆಯ ಸಂದರ್ಭಗಳಲ್ಲಿಯೂ, ಅವರು ಮರಣವನ್ನು ಎದುರಿಸುವಂತೆ ಬಲಪಡಿಸಿತು. ದೇವರು ತಮ್ಮನ್ನು ಜೀವಕ್ಕೆ ಹಿಂದಿರುಗಿಸಬಲ್ಲನೆಂದು ಅವರು ತಿಳಿದಿದ್ದರು. (ಮತ್ತಾಯ 10:28) ಆದರೆ ಕೋಟಿಗಟ್ಟಲೆ ಜನರು, ತಾವು ದೇವರ ನೀತಿಯ ಮಟ್ಟಗಳಿಗೆ ಅನುಸಾರವಾಗಿ ವರ್ತಿಸಲಿದ್ದರೋ ಇಲ್ಲವೋ ಎಂದು ತೋರಿಸಿಕೊಡದೆ ಸತ್ತುಹೋಗಿದ್ದಾರೆ. ಅವರಿಗೂ ಪುನರುತ್ಥಾನವಾಗುವುದು. ಈ ಸಂಬಂಧದಲ್ಲಿ ಯೆಹೋವನ ಉದ್ದೇಶದಲ್ಲಿ ಭರವಸೆಯುಳ್ಳವನಾಗಿ ಅಪೊಸ್ತಲ ಪೌಲನು ಹೇಳಿದ್ದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”—ಅ. ಕೃತ್ಯಗಳು 24:15.
18. (ಎ) ಪುನರುತ್ಥಾನದ ಯಾವ ದರ್ಶನವನ್ನು ಅಪೊಸ್ತಲ ಯೋಹಾನನು ಪಡೆದನು? (ಬಿ) “ಬೆಂಕಿಯ ಕೆರೆ”ಯಲ್ಲಿ ಏನು ನಾಶವಾಗುತ್ತದೆ, ಮತ್ತು ಈ “ಕೆರೆ” ಏನನ್ನು ಸಂಕೇತಿಸುತ್ತದೆ?
18 ಪುನರುತ್ಥಾನ ಹೊಂದಿರುವವರು, ದೇವರ ಸಿಂಹಾಸನದ ಮುಂದೆ ನಿಂತಿರುವ ಒಂದು ರೋಮಾಂಚಕ ದರ್ಶನವನ್ನು ಅಪೊಸ್ತಲ ಯೋಹಾನನು ಪಡೆದನು. ಬಳಿಕ ಯೋಹಾನನು ಬರೆದುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.” (ಪ್ರಕಟನೆ 20:12-14) ಅದರ ಕುರಿತು ಯೋಚಿಸಿರಿ! ದೇವರ ಸ್ಮರಣೆಯಲ್ಲಿರುವ ಸಕಲ ಮೃತರಿಗೆ ಮಾನವ ಕುಲದ ಸಾಮಾನ್ಯ ಸಮಾಧಿಯಾದ ಹೇಡೀಸ್ (ಗ್ರೀಕ್, ಹೈಡೀಸ್), ಅಥವಾ ಷೀಓಲ್ನಿಂದ ವಿಮೋಚಿತರಾಗುವ ಪ್ರತೀಕ್ಷೆಯಿದೆ. (ಕೀರ್ತನೆ 16:10; ಅ. ಕೃತ್ಯಗಳು 2:31) ಅವರ ಕೃತ್ಯಗಳಿಂದ ಅವರು ದೇವರನ್ನು ಸೇವಿಸುವರೋ ಇಲ್ಲವೋ ಎಂದು ಪ್ರದರ್ಶಿಸುವ ಸಂದರ್ಭ ಅವರಿಗಿರುವುದು. ಆಮೇಲೆ ‘ಮೃತ್ಯುವೂ ಹೇಡಿಸೂ,’ “ಗೆಹೆನ್ನ” ಎಂಬ ಪದದಂತೆಯೇ ಸಂಪೂರ್ಣ ನಾಶನವನ್ನು ಸೂಚಿಸುವ “ಬೆಂಕಿಯ ಕೆರೆ”ಯೆಂದು ಕರೆಯಲ್ಪಡುವ ಸ್ಥಳದೊಳಕ್ಕೆ ಎಸೆಯಲ್ಪಡುವುವು. (ಲೂಕ 12:5) ಮಾನವ ಕುಲದ ಸಾಮಾನ್ಯ ಸಮಾಧಿಯು ತಾನೇ ಬರಿದುಗೊಳಿಸಲ್ಪಟ್ಟಿರುವುದು ಮತ್ತು ಪುನರುತ್ಥಾನವು ಪೂರ್ತಿಗೊಳ್ಳುವಾಗ ಇಲ್ಲದೆ ಹೋಗಿರುವುದು. ದೇವರು ಯಾರಿಗೂ ಚಿತ್ರಹಿಂಸೆ ಕೊಡುವುದಿಲ್ಲ ಎಂದು ಬೈಬಲಿನಿಂದ ಕಲಿಯುವುದು ಅದೆಷ್ಟು ಸಾಂತ್ವನದಾಯಕ!—ಯೆರೆಮೀಯ 7:30, 31.
ಪುನರುತ್ಥಾನ ಎಲ್ಲಿಗೆ?
19. ಮಾನವ ಕುಲದಲ್ಲಿ ಕೆಲವರಿಗೆ ಸ್ವರ್ಗಕ್ಕೆ ಏಕೆ ಪುನರುತ್ಥಾನವಾಗಲಿರುವುದು, ಮತ್ತು ದೇವರು ಅವರಿಗೆ ಯಾವ ವಿಧದ ದೇಹವನ್ನು ಕೊಡುವನು?
19 ಪುರುಷ ಮತ್ತು ಸ್ತ್ರೀಯರ ಒಂದು ಪರಿಮಿತ ಸಂಖ್ಯೆಯು ಸ್ವರ್ಗದ ಜೀವಿತಕ್ಕಾಗಿ ಪುನರುತ್ಥಾನಗೊಳಿಸಲ್ಪಡುವುದು. ಯೇಸುವಿನೊಂದಿಗೆ ರಾಜರು ಮತ್ತು ಯಾಜಕರಾಗಿ, ಅವರು ಪ್ರಥಮ ಮನುಷ್ಯನಾದ ಆದಾಮನಿಂದ ಮಾನವ ಕುಲವು ಬಾಧ್ಯತೆಯಾಗಿ ಪಡೆದ ಮರಣದ ಸಕಲ ಪರಿಣಾಮಗಳನ್ನು ರದ್ದುಗೊಳಿಸುವುದರಲ್ಲಿ ಪಾಲಿಗರಾಗುವರು. (ರೋಮಾಪುರ 5:12; ಪ್ರಕಟನೆ 5:9, 10) ಕ್ರಿಸ್ತನೊಂದಿಗೆ ಆಳಲು ದೇವರು ಎಷ್ಟು ಜನರನ್ನು ಸ್ವರ್ಗಕ್ಕೆ ಕೊಂಡೊಯ್ಯುವನು? ಬೈಬಲಿಗನುಸಾರ, 1,44,000 ಜನರು ಮಾತ್ರ. (ಪ್ರಕಟನೆ 7:4; 14:1) ಯೆಹೋವನು ಈ ಪುನರುತ್ಥಿತರಲ್ಲಿ ಪ್ರತಿಯೊಬ್ಬನಿಗೆ, ಅವರು ಸ್ವರ್ಗದಲ್ಲಿ ಜೀವಿಸಲಾಗುವಂತೆ ಒಂದು ಆತ್ಮ ದೇಹವನ್ನು ಕೊಡುವನು.—1 ಕೊರಿಂಥ 15:35, 38, 42-45; 1 ಪೇತ್ರ 3:18.
20. ವಿಧೇಯರಾದ ಮಾನವರು—ಪುನರುತ್ಥಿತರು ಸೇರಿ—ಏನನ್ನು ಅನುಭವಿಸಲಿರುವರು?
20 ಸತ್ತಿರುವವರಲ್ಲಿ ಅತಿ ದೊಡ್ಡ ಭಾಗವು ಪರದೈಸ್ ಭೂಮಿಗೆ ಪುನರುತ್ಥಾನ ಹೊಂದುವರು. (ಕೀರ್ತನೆ 37:11, 29; ಮತ್ತಾಯ 6:10) ಕೆಲವರನ್ನು ಸ್ವರ್ಗಕ್ಕೆ ಪುನರುತ್ಥಾನಗೊಳಿಸುವ ಆಂಶಿಕ ಕಾರಣವು ಭೂಮಿಗಾಗಿರುವ ದೇವರ ಉದ್ದೇಶವನ್ನು ಪೂರ್ತಿಗೊಳಿಸುವುದೇ. ಸ್ವರ್ಗದಲ್ಲಿರುವ ಯೇಸು ಕ್ರಿಸ್ತನೂ 1,44,000 ಮಂದಿಯೂ ವಿಧೇಯ ಮಾನವ ಕುಲವನ್ನು, ನಮ್ಮ ಮೂಲ ಪಿತೃಗಳು ಎಸೆದು ಬಿಟ್ಟಿದ್ದ ಪರಿಪೂರ್ಣತೆಗೆ ಪ್ರಗತಿಪರವಾಗಿ ಹಿಂದಿರುಗಿಸುವರು. ಯೇಸು ತನ್ನ ಪಕ್ಕದಲ್ಲಿ ಶೂಲಕ್ಕೇರಿಸಲ್ಪಟ್ಟು ಸಾಯುತ್ತಿದ್ದ ಮನುಷ್ಯನಿಗೆ, “ನೀನು ನನ್ನ ಸಂಗಡ ಪರದೈಸಿನಲ್ಲಿರುವಿ,” ಎಂದು ಹೇಳಿದಾಗ ಸೂಚಿಸಲ್ಪಟ್ಟಂತೆ, ಇದರಲ್ಲಿ ಪುನರುತ್ಥಿತರು ಸೇರಿರುವರು.—ಲೂಕ 23:42, 43, NW.
21. ಪ್ರವಾದಿ ಯೆಶಾಯ ಮತ್ತು ಅಪೊಸ್ತಲ ಯೋಹಾನರಿಗನುಸಾರ, ಮರಣಕ್ಕೆ ಏನು ಸಂಭವಿಸುವುದು?
21 ಪರದೈಸಾಗಿರುವ ಭೂಮಿಯಲ್ಲಿ, ಇಂದು ತೀರ ನಿರರ್ಥಕತೆಯನ್ನು ಉತ್ಪಾದಿಸುವ ಮರಣವು ತೊಲಗಿಸಲ್ಪಡುವುದು. (ರೋಮಾಪುರ 8:19-21) ಯೆಹೋವ ದೇವರು, “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು,” ಎಂದು ಪ್ರವಾದಿ ಯೆಶಾಯನು ಘೋಷಿಸಿದನು. (ಯೆಶಾಯ 25:8) ವಿಧೇಯ ಮಾನವ ಕುಲವು ವೇದನೆ ಮತ್ತು ಮರಣದಿಂದ ವಿಮೋಚನೆಯನ್ನು ಅನುಭವಿಸುವ ಸಮಯದ ಒಂದು ದರ್ಶನವು ಅಪೊಸ್ತಲ ಯೋಹಾನನಿಗೆ ಕೊಡಲಾಯಿತು. ಹೌದು, “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:1-4.
22. ಪುನರುತ್ಥಾನದ ಜ್ಞಾನವು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
22 ಬೈಬಲಿನ ಸ್ಪಷ್ಟ ಬೋಧನೆಗಳು ಮೃತರಿಗೆ ಏನು ಸಂಭವಿಸುತ್ತದೆಂಬ ವಿಷಯದಲ್ಲಿರುವ ಗಲಿಬಿಲಿಯನ್ನು ಹೋಗಲಾಡಿಸುತ್ತದೆ. ನಾಶಮಾಡಲ್ಪಡುವ “ಕಡೇ ಶತ್ರು” ಮರಣವೆಂದು ಶಾಸ್ತ್ರಗಳು ಸರಳವಾಗಿ ಹೇಳುತ್ತವೆ. (1 ಕೊರಿಂಥ 15:26) ಪುನರುತ್ಥಾನದ ನಿರೀಕ್ಷೆಯ ಜ್ಞಾನದಿಂದ ನಾವೆಂತಹ ಬಲ ಮತ್ತು ದುಃಖಶಮನವನ್ನು ಪಡೆದುಕೊಳ್ಳಬಲ್ಲೆವು! ದೇವರ ಸ್ಮರಣೆಯಲ್ಲಿರುವ ಮೃತರಾಗಿರುವ ನಮ್ಮ ಪ್ರಿಯರು, ತನ್ನನ್ನು ಪ್ರೀತಿಸುವವರಿಗಾಗಿ ಆತನು ಕಾದಿರಿಸಿರುವ ಸಕಲ ಒಳ್ಳೆಯ ವಿಷಯಗಳನ್ನು ಅನುಭವಿಸುವರೆ ಮರಣದ ನಿದ್ರೆಯಿಂದ ಎಚ್ಚರಗೊಳ್ಳುವರೆಂಬುದಕ್ಕೆ ನಾವೆಷ್ಟು ಹರ್ಷಿತರಾಗಿರಬಲ್ಲೆವು! (ಕೀರ್ತನೆ 145:16) ಇಂತಹ ಆಶೀರ್ವಾದಗಳು ದೇವರ ರಾಜ್ಯದ ಮೂಲಕ ನೆರವೇರಿಸಲ್ಪಡುವುವು. ಆದರೆ ಅದರ ಆಳಿಕೆ ಯಾವಾಗ ಆರಂಭವಾಗಲಿತ್ತು? ನಾವು ನೋಡೋಣ.
[ಪಾದಟಿಪ್ಪಣಿ]
a ನೆಫೆಷ್ ಎಂಬ ಹೀಬ್ರು ಪದವು ಬೈಬಲಿನಲ್ಲಿ ಸುಮಾರು 700 ಬಾರಿ ಕಂಡುಬರುತ್ತದೆ. ಮತ್ತು ಅದು ಎಂದೂ, ಒಬ್ಬ ಮನುಷ್ಯನಲ್ಲಿರುವ ಪ್ರತ್ಯೇಕ ಹಾಗೂ ಅಲೌಕಿಕವಾದ ಭಾಗಕ್ಕೆ ಸೂಚಿಸುವುದಿಲ್ಲ, ಬದಲಾಗಿ ಸ್ಪರ್ಶಿಸಸಾಧ್ಯವಿರುವ ಮತ್ತು ಶಾರೀರಿಕವಾಗಿರುವ ಸಂಗತಿಗೆ ಸೂಚಿಸುತ್ತದೆ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಮನುಷ್ಯನು ಏನಾಗಿದ್ದಾನೆ?
ಮೃತರ ಸ್ಥಿತಿಯನ್ನು ನೀವು ಹೇಗೆ ವರ್ಣಿಸುವಿರಿ?
ಯಾರಿಗೆ ಪುನರುತ್ಥಾನವಾಗಲಿರುವುದು?
[ಪುಟ 85ರಲ್ಲಿರುವ ಚಿತ್ರ]
ಯೇಸುವು ಲಾಜರನನ್ನು ಸಮಾಧಿಯಿಂದ ಕರೆದಂತೆಯೇ, ಕೋಟ್ಯಂತರ ಮಂದಿ ಪುನರುತ್ಥಾನಗೊಳಿಸಲ್ಪಡುವರು
[ಪುಟ 86ರಲ್ಲಿರುವ ಚಿತ್ರ]
‘ದೇವರು ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವಾಗ’ ಆನಂದವು ಅಸ್ತಿತ್ವದಲ್ಲಿರುವುದು