ದೇವರ ವಾಕ್ಯವು ಸದಾಕಾಲ ಬಾಳುತ್ತದೆ
“ನಮ್ಮ ದೇವರ ಮಾತೋ [“ವಾಕ್ಯವೋ,” NW] ಸದಾಕಾಲವೂ ಇರುವದು.”—ಯೆಶಾಯ 40:8.
1. (ಎ) “ನಮ್ಮ ದೇವರ ವಾಕ್ಯವು” ಇಲ್ಲಿ ಏನನ್ನು ಅರ್ಥೈಸುತ್ತದೆ? (ಬಿ) ಮಾನವರ ವಾಗ್ದಾನಗಳು ದೇವರ ವಾಕ್ಯದೊಂದಿಗೆ ಹೇಗೆ ಹೋಲುತ್ತವೆ?
ಮನುಷ್ಯರು, ಪ್ರಖ್ಯಾತ ಸ್ತ್ರೀಪುರುಷರ ವಾಗ್ದಾನಗಳಲ್ಲಿ ತಮ್ಮ ಭರವಸೆಯನ್ನಿಡುವ ಪ್ರವೃತ್ತಿಯುಳ್ಳವರಾಗಿದ್ದಾರೆ. ತಮ್ಮ ಜೀವನದ ಪರಿಸ್ಥಿತಿಯಲ್ಲಿ ಸುಧಾರಣೆಗಾಗಿ ಹಾತೊರೆಯುವ ಜನರಿಗೆ ಈ ವಾಗ್ದಾನಗಳು ಎಷ್ಟೇ ಅಪೇಕ್ಷಣೀಯವಾಗಿ ಕಂಡುಬರಬಹುದಾದರೂ, ನಮ್ಮ ದೇವರ ವಾಕ್ಯದೊಂದಿಗೆ ಹೋಲಿಸಲ್ಪಟ್ಟಾಗ ಈ ವಾಗ್ದಾನಗಳು ಬಾಡುತ್ತಿರುವ ಹೂವುಗಳಂತಿವೆ. (ಕೀರ್ತನೆ 146:3, 4) 2,700ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಯೆಹೋವ ದೇವರು ಪ್ರವಾದಿಯಾದ ಯೆಶಾಯನನ್ನು ಹೀಗೆ ಬರೆಯುವಂತೆ ಪ್ರೇರಿಸಿದನು: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ. . . . ಹುಲ್ಲು ಒಣಗಿಹೋಗುವದು, ಹೂವು ಬಾಡಿಹೋಗುವದು, ನಮ್ಮ ದೇವರ ಮಾತೋ [“ವಾಕ್ಯವು,” NW] ಸದಾಕಾಲವೂ ಇರುವದು.” (ಯೆಶಾಯ 40:6, 8) ಆ ಬಾಳುವಂತಹ “ವಾಕ್ಯವು” ಏನಾಗಿದೆ? ಅದು ತನ್ನ ಉದ್ದೇಶದ ಕುರಿತ ದೇವರ ಹೇಳಿಕೆಯಾಗಿದೆ. ಇಂದು ನಮ್ಮಲ್ಲಿ ಆ “ವಾಕ್ಯವು” ಲಿಖಿತ ರೂಪದಲ್ಲಿ ಬೈಬಲಿನಲ್ಲಿದೆ.—1 ಪೇತ್ರ 1:24, 25.
2. ಪ್ರಾಚೀನ ಇಸ್ರಾಯೇಲ್ ಮತ್ತು ಯೆಹೂದದ ಸಂಬಂಧದಲ್ಲಿ ಯೆಹೋವನು ತನ್ನ ಮಾತನ್ನು ಯಾವ ಮನೋಭಾವಗಳು ಹಾಗೂ ಕ್ರಿಯೆಗಳ ಎದುರಿನಲ್ಲಿ ನೆರವೇರಿಸಿದನು?
2 ಪ್ರಾಚೀನ ಇಸ್ರಾಯೇಲಿನ ದಿನಗಳಲ್ಲಿ ಜೀವಿಸುತ್ತಿದ್ದ ಜನರು, ಯೆಶಾಯನು ದಾಖಲಿಸಿದ ವಿಷಯದ ಸತ್ಯತೆಯನ್ನು ಅನುಭವಿಸಿದರು. ತನ್ನ ಪ್ರವಾದಿಗಳ ಮೂಲಕ ಯೆಹೋವನು ಮುಂತಿಳಿಸಿದ್ದೇನೆಂದರೆ, ತನ್ನೆಡೆಗೆ ಅತಿಯಾದ ಅಪನಂಬಿಗಸ್ತಿಕೆಯ ಕಾರಣ, ಪ್ರಥಮವಾಗಿ ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯವು, ಅನಂತರ ಯೆಹೂದದ ಎರಡು ಕುಲಗಳ ರಾಜ್ಯವು ದೇಶಭ್ರಷ್ಟಗೊಳಿಸಲ್ಪಡಲಿತ್ತು. (ಯೆರೆಮೀಯ 20:4; ಆಮೋಸ 5:2, 27) ಅವರು ಯೆಹೋವನ ಪ್ರವಾದಿಗಳನ್ನು ಹಿಂಸಿಸಿ ಕೊಂದರೂ, ದೇವರ ಎಚ್ಚರಿಕೆಯ ಸಂದೇಶವಿದ್ದ ಸುರುಳಿಯನ್ನು ಸುಟ್ಟುಹಾಕಿ, ಅದರ ನೆರವೇರಿಕೆಯನ್ನು ತಡೆಗಟ್ಟಲು ಮಿಲಿಟರಿ ಸಹಾಯಕ್ಕಾಗಿ ಐಗುಪ್ತಕ್ಕೆ ಮನವಿಮಾಡಿಕೊಂಡರೂ, ಯೆಹೋವನ ವಾಕ್ಯವು ನೆರವೇರದೆ ಹೋಗಲಿಲ್ಲ. (ಯೆರೆಮೀಯ 36:1, 2, 21-24; 37:5-10; ಲೂಕ 13:34) ಅಲ್ಲದೆ, ತಮ್ಮ ಸ್ವದೇಶಕ್ಕೆ ಪಶ್ಚಾತ್ತಾಪಿ ಯೆಹೂದಿ ಉಳಿಕೆಯವರನ್ನು ಪುನಸ್ಸ್ಥಾಪಿಸುವ ದೇವರ ವಾಗ್ದಾನವು ಗಮನಾರ್ಹವಾದ ನೆರವೇರಿಕೆಯನ್ನು ಪಡೆಯಿತು.—ಯೆಶಾಯ, ಅಧ್ಯಾಯ 35.
3. (ಎ) ಯೆಶಾಯನಿಂದ ದಾಖಲಿಸಲ್ಪಟ್ಟ ಯಾವ ವಾಗ್ದಾನಗಳು ನಮಗೆ ವಿಶೇಷ ಅಭಿರುಚಿಯುಳ್ಳವುಗಳಾಗಿವೆ? (ಬಿ) ಈ ವಿಷಯಗಳು ನಿಜವಾಗಿಯೂ ನೆರವೇರುವವು ಎಂಬುದನ್ನು ನೀವು ಏಕೆ ಮನಗಂಡಿದ್ದೀರಿ?
3 ಯೆಶಾಯನ ಮೂಲಕ ಯೆಹೋವನು, ಮೆಸ್ಸೀಯನ ಮುಖಾಂತರ ಮಾನವಜಾತಿಯ ಮೇಲೆ ನೀತಿಯ ಆಳ್ವಿಕೆಯನ್ನು, ಪಾಪ ಮತ್ತು ಮರಣದಿಂದ ಬಿಡುಗಡೆಯನ್ನು, ಮತ್ತು ಒಂದು ಪ್ರಮೋದವನವಾಗಿ ಭೂಮಿಯ ರೂಪಾಂತರವನ್ನೂ ಮುಂತಿಳಿಸಿದನು. (ಯೆಶಾಯ 9:6, 7; 11:1-9; 25:6-8; 35:5-7; 65:17-25) ಈ ಸಂಗತಿಗಳೂ ನೆರವೇರುವವೊ? ಲೇಶಮಾತ್ರವೂ ಸಂದೇಹವಿಲ್ಲದೆ! ‘ದೇವರು ಸುಳ್ಳಾಡಸಾಧ್ಯವಿಲ್ಲ.’ ನಮ್ಮ ಪ್ರಯೋಜನಕ್ಕಾಗಿ ಆತನು ತನ್ನ ಪ್ರವಾದನಾ ವಾಕ್ಯವನ್ನು ದಾಖಲಿಸಿದನು, ಮತ್ತು ಅದು ಸಂರಕ್ಷಿಸಲ್ಪಟ್ಟಿದೆ ಎಂಬುದನ್ನು ಆತನು ಖಚಿತಪಡಿಸಿದ್ದಾನೆ.—ತೀತ 1:2; ರೋಮಾಪುರ 15:4.
4. ಮೂಲ ಬೈಬಲಿನ ಹಸ್ತಪ್ರತಿಗಳು ಸಂರಕ್ಷಿಸಲ್ಪಡದಿದ್ದರೂ, ದೇವರ ವಾಕ್ಯವು ‘ಜೀವಂತ’ವಾಗಿದೆ ಎಂಬುದು ಹೇಗೆ ಸತ್ಯವಾಗಿದೆ?
4 ಯಾವುದರಲ್ಲಿ ಯೆಹೋವನ ಪ್ರಾಚೀನ ಬರಹಗಾರರು ಆ ಪ್ರವಾದನೆಗಳನ್ನು ಬರೆದರೊ, ಆ ಮೂಲ ಹಸ್ತಪ್ರತಿಗಳನ್ನು ಆತನು ಸಂರಕ್ಷಿಸಲಿಲ್ಲ. ಆದರೆ, ಆತನ “ವಾಕ್ಯ,” ಆತನ ಪ್ರಕಟಿತ ಉದ್ದೇಶವು, ಜೀವಂತ ವಾಕ್ಯವಾಗಿ ಪರಿಣಮಿಸಿದೆ. ಆ ಉದ್ದೇಶವು ಹತ್ತಿಕ್ಕಲಾಗದ ರೀತಿಯಲ್ಲಿ ಮುಂದುವರಿಯುತ್ತದೆ, ಮತ್ತು ಅದು ಹಾಗೆ ಮುಂದುವರಿದಂತೆ, ಯಾರ ಜೀವಿತಗಳು ಅದರಿಂದ ಪ್ರೇರಿಸಲ್ಪಡುತ್ತವೊ ಆ ಜನರ ಆಂತರಿಕ ಆಲೋಚನೆಗಳು ಹಾಗೂ ಪ್ರಚೋದನೆಗಳು ವ್ಯಕ್ತವಾಗುತ್ತವೆ. (ಇಬ್ರಿಯ 4:12) ಇನ್ನೂ ಹೆಚ್ಚಾಗಿ, ಐತಿಹಾಸಿಕ ದಾಖಲೆಯು ತೋರಿಸುವುದೇನೆಂದರೆ, ಪ್ರೇರಿತ ಶಾಸ್ತ್ರಗಳ ಸಂರಕ್ಷಣೆ ಹಾಗೂ ಭಾಷಾಂತರವು ತಾನೇ ದೈವಿಕ ಮಾರ್ಗದರ್ಶನೆಯಿಂದ ಸಾಧಿಸಲ್ಪಟ್ಟಿದೆ.
ಅದನ್ನು ನಿಗ್ರಹಿಸುವ ಪ್ರಯತ್ನಗಳು ಎದುರಾದಾಗ
5. (ಎ) ಪ್ರೇರಿತ ಹೀಬ್ರು ಶಾಸ್ತ್ರಗಳನ್ನು ನಾಶಮಾಡಲು, ಸಿರಿಯದ ಒಬ್ಬ ರಾಜನಿಂದ ಯಾವ ಪ್ರಯತ್ನವು ಮಾಡಲ್ಪಟ್ಟಿತು? (ಬಿ) ಅವನು ಏಕೆ ವಿಫಲನಾದನು?
5 ಅನೇಕ ಸಂದರ್ಭಗಳಲ್ಲಿ, ದೊರೆಗಳು ಪ್ರೇರಿತ ಬರಹಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ. ಸಾ.ಶ.ಪೂ. 168ರಲ್ಲಿ, (ಪುಟ 10ರಲ್ಲಿ ಚಿತ್ರಿಸಲ್ಪಟ್ಟಿರುವ) ಸಿರಿಯದ ರಾಜ ಆ್ಯಂಟೈಯಕಸ್ ಇಪಿಫೆನೀಸ್, ಯೆಹೋವನಿಗೆ ಸಮರ್ಪಿಸಲ್ಪಟ್ಟಿದ್ದ ದೇವಾಲಯದಲ್ಲಿ ಸೀಯುಸ್ಗೆ ಒಂದು ಯಜ್ಞವೇದಿಯನ್ನು ಕಟ್ಟಿಸಿದನು. ಅವನು ‘ಧರ್ಮಶಾಸ್ತ್ರದ ಪುಸ್ತಕಗಳನ್ನು’ ಹುಡುಕಿ, ಅವುಗಳನ್ನು ಸುಟ್ಟುಹಾಕಿ, ಅಂತಹ ಶಾಸ್ತ್ರಗಳನ್ನು ಪಡೆದಿರುವ ಯಾವನಾದರೂ ಮರಣಕ್ಕೊಪ್ಪಿಸಲ್ಪಡುವನೆಂದು ಸಹ ಘೋಷಿಸಿದನು. ಯೆರೂಸಲೇಮ್ ಮತ್ತು ಯೂದಾಯದಲ್ಲಿ ಅವನು ಎಷ್ಟೇ ಪ್ರತಿಗಳನ್ನು ಸುಟ್ಟುಹಾಕಿದರೂ, ಶಾಸ್ತ್ರಗಳನ್ನು ಸಂಪೂರ್ಣವಾಗಿ ನಿಗ್ರಹಿಸಲು ಅವನಿಂದ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಯೆಹೂದ್ಯರ ವಸಾಹತುಗಳು ಅನೇಕ ದೇಶಗಳಲ್ಲಿ ಹರಡಿದ್ದವು, ಮತ್ತು ಪ್ರತಿಯೊಂದು ಸಭಾಮಂದಿರದಲ್ಲಿ ಸುರುಳಿಗಳ ಒಂದು ಸಂಗ್ರಹವಿತ್ತು.—ಹೋಲಿಸಿ ಅ. ಕೃತ್ಯಗಳು 13:14, 15.
6. (ಎ) ಆದಿ ಕ್ರೈಸ್ತರಿಂದ ಬಳಸಲ್ಪಡುತ್ತಿದ್ದ ಶಾಸ್ತ್ರಗಳನ್ನು ನಾಶಮಾಡಲು ಯಾವ ತೀವ್ರವಾದ ಪ್ರಯತ್ನವು ಮಾಡಲ್ಪಟ್ಟಿತು? (ಬಿ) ಪರಿಣಾಮವು ಏನಾಗಿತ್ತು?
6 ಸಾ.ಶ. 303ರಲ್ಲಿ, ರೋಮನ್ ಚಕ್ರವರ್ತಿ ಡಯಕ್ಲೀಶನನು ತದ್ರೀತಿಯಲ್ಲಿ, ಕ್ರೈಸ್ತ ಕೂಟದ ಸ್ಥಳಗಳು ಅಳಿಸಿಬಿಡಲ್ಪಡುವಂತೆ ಮತ್ತು ಅವರ ‘ಶಾಸ್ತ್ರಗಳು ಬೆಂಕಿಯಿಂದ ದಹಿಸಲ್ಪಡುವಂತೆ’ ಆಜ್ಞೆಯಿತ್ತನು. ಅಂತಹ ನಾಶನವು ಒಂದು ದಶಕದ ವರೆಗೆ ಮುಂದುವರಿಯಿತು. ಆ ಹಿಂಸೆಯು ಭಯಂಕರವಾಗಿತ್ತಾದರೂ, ಕ್ರೈಸ್ತತ್ವವನ್ನು ನಿರ್ನಾಮಮಾಡುವುದರಲ್ಲಿ ಡಯಕ್ಲೀಶನನು ಸಫಲನಾಗಲಿಲ್ಲ, ಇಲ್ಲವೆ ಆ ಚಕ್ರವರ್ತಿಯ ಪ್ರತಿನಿಧಿಗಳು ದೇವರ ಪ್ರೇರಿತ ವಾಕ್ಯದ ಒಂದೇ ಒಂದು ಭಾಗದ ಎಲ್ಲ ಪ್ರತಿಗಳನ್ನು ನಾಶಮಾಡುವಂತೆಯೂ ದೇವರು ಅನುಮತಿಸಲಿಲ್ಲ. ಆದರೆ ದೇವರ ವಾಕ್ಯದ ಹಂಚುವಿಕೆ ಹಾಗೂ ಸಾರುವಿಕೆಗೆ ಅವರು ತೋರಿಸಿದ ಪ್ರತಿಕ್ರಿಯೆಯಿಂದ, ಆ ವಿರೋಧಿಗಳು ತಮ್ಮ ಹೃದಯಗಳಲ್ಲಿ ಇದ್ದದ್ದನ್ನು ಪ್ರದರ್ಶಿಸಿದರು. ಅವರು ತಮ್ಮನ್ನು ಸೈತಾನನಿಂದ ಕುರುಡುಗೊಳಿಸಲ್ಪಟ್ಟ ಹಾಗೂ ಅವನ ಚಿತ್ತಕ್ಕನುಸಾರ ನಡೆಯುವ ಮನುಷ್ಯರಾಗಿ ಗುರುತಿಸಿಕೊಂಡರು.—ಯೋಹಾನ 8:44; 1 ಯೋಹಾನ 3:10-12.
7. (ಎ) ಪಾಶ್ಚಾತ್ಯ ಯೂರೋಪಿನಲ್ಲಿ ಬೈಬಲ್ ಜ್ಞಾನದ ಹಬ್ಬುವಿಕೆಯನ್ನು ಅಡಗಿಸಿಡಲು ಯಾವ ಪ್ರಯತ್ನಗಳು ಮಾಡಲ್ಪಟ್ಟವು? (ಬಿ) ಬೈಬಲನ್ನು ಭಾಷಾಂತರಿಸುವ ಮತ್ತು ಪ್ರಕಾಶಿಸುವ ವಿಷಯದಲ್ಲಿ ಏನು ಸಾಧಿಸಲ್ಪಟ್ಟಿತು?
7 ಬೈಬಲ್ ಜ್ಞಾನದ ಹಬ್ಬುವಿಕೆಯನ್ನು ಅಡಗಿಸಿಡುವ ಪ್ರಯತ್ನಗಳು, ಇತರ ರೂಪಗಳನ್ನೂ ತಾಳಿದವು. ಲ್ಯಾಟಿನ್ ಮೃತ ಭಾಷೆಯಾಗಿ ಪರಿಣಮಿಸಿದಾಗ, ಸಾಮಾನ್ಯ ಜನರಿಂದ ಉಪಯೋಗಿಸಲ್ಪಡುವ ಭಾಷೆಗಳಿಗೆ ಬೈಬಲಿನ ಭಾಷಾಂತರವನ್ನು ಸಕ್ರಿಯವಾಗಿ ವಿರೋಧಿಸಿದವರು ವಿಧರ್ಮಿ ದೊರೆಗಳಲ್ಲ, ಕ್ರೈಸ್ತರೆಂದು ಹೇಳಿಕೊಂಡ VIIನೆಯ ಪೋಪ್ ಗ್ರೆಗರಿ (1073-85) ಮತ್ತು IIIನೆಯ ಪೋಪ್ ಇನೊಸೆಂಟ್ರೇ (1198-1216) ಆಗಿದ್ದರು. ಚರ್ಚಿನ ಅಧಿಕಾರದ ವಿರುದ್ಧವಿರುವ ಅಸಮ್ಮತಿಯನ್ನು ಅದುಮಿಬಿಡುವ ಒಂದು ಪ್ರಯತ್ನದಲ್ಲಿ, ಒಬ್ಬ ಸಾಮಾನ್ಯ ಮನುಷ್ಯನು ಬೈಬಲಿನ ಪುಸ್ತಕಗಳನ್ನು ಸಾಮಾನ್ಯ ಭಾಷೆಯಲ್ಲಿ ಪಡೆದಿರಲು ಸಾಧ್ಯವಿಲ್ಲವೆಂದು, 1229ರಲ್ಲಿ ಫ್ರಾನ್ಸ್ನ ಟೌಲೂಸ್ನಲ್ಲಿ ನಡೆದ ರೋಮನ್ ಕ್ಯಾಥೊಲಿಕ್ ಸಭೆಯು ಆಜ್ಞೆ ವಿಧಿಸಿತು. ಆ ಆಜ್ಞೆಯನ್ನು ಜಾರಿಗೊಳಿಸಲು, ಮಠೀಯ ನ್ಯಾಯಸ್ಥಾನವನ್ನು ಆಕ್ರಮಣಕಾರಿಯಾಗಿ ಉಪಯೋಗಿಸಲಾಯಿತು. ಆದರೂ, ಮಠೀಯ ನ್ಯಾಯಸ್ಥಾನದ 400 ವರ್ಷಗಳ ಬಳಿಕವೂ, ದೇವರ ವಾಕ್ಯವನ್ನು ಪ್ರೀತಿಸುವವರು ಇಡೀ ಬೈಬಲನ್ನು ಭಾಷಾಂತರಿಸಿದ್ದರು ಮತ್ತು ಅದರ ಮುದ್ರಣಗಳನ್ನು ಸುಮಾರು 20 ಭಾಷೆಗಳು, ಜೊತೆಗೆ ಹೆಚ್ಚಿನ ಉಪಭಾಷೆಗಳು, ಮತ್ತು ಅದರ ಪ್ರಧಾನ ಭಾಗಗಳನ್ನು ಇನ್ನೂ 16 ಭಾಷೆಗಳಲ್ಲಿ ವಿತರಿಸುತ್ತಿದ್ದರು.
8. ಹತ್ತೊಂಬತ್ತನೆಯ ಶತಮಾನದಲ್ಲಿ, ರಷ್ಯದಲ್ಲಿ ಬೈಬಲ್ ಭಾಷಾಂತರ ಮತ್ತು ಹಂಚಿಕೆಯ ಕ್ಷೇತ್ರದಲ್ಲಿ ಏನು ಸಂಭವಿಸುತ್ತಾ ಇತ್ತು?
8 ಬೈಬಲನ್ನು ಸಾಮಾನ್ಯ ಜನರಿಂದ ದೂರವಿಡಲು ಪ್ರಯತ್ನಿಸಿದವರಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್ ಒಂಟಿಯಾಗಿರಲಿಲ್ಲ. 19ನೆಯ ಶತಮಾನದ ಆರಂಭದಲ್ಲಿ, ಸೆಂಟ್ ಪೀಟರ್ಸ್ಬರ್ಗ್ ಅಕ್ಯಾಡೆಮಿ ಆಫ್ ಡಿವಿನಿಟಿಯಲ್ಲಿ ಪ್ರೊಫೆಸರ್ ಆಗಿದ್ದ ಪಾವ್ಸ್ಕೀ, ಮತ್ತಾಯನ ಸುವಾರ್ತೆಯನ್ನು ಗ್ರೀಕ್ನಿಂದ ರಷ್ಯನ್ ಭಾಷೆಗೆ ಭಾಷಾಂತರಿಸಿದರು. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಇತರ ಪುಸ್ತಕಗಳೂ ರಷ್ಯನ್ ಭಾಷೆಗೆ ಭಾಷಾಂತರಿಸಲ್ಪಟ್ಟವು ಮತ್ತು ಪಾವ್ಸ್ಕೀ ಅದರ ಸಂಪಾದಕರಾಗಿ ಕಾರ್ಯಮಾಡಿದರು. ಚರ್ಚಿನ ಕುತಂತ್ರದಿಂದ 1826ರಲ್ಲಿ ರಷ್ಯನ್ ಬೈಬಲ್ ಸೊಸೈಟಿಯನ್ನು ರಷ್ಯನ್ ಆರ್ತೊಡಾಕ್ಸ್ ಚರ್ಚಿನ “ಪವಿತ್ರ ಸಭೆ”ಯ ನಿರ್ವಹಣೆಯ ಅಧೀನದಲ್ಲಿ ಇರಿಸುವಂತೆ ಸಾರ (ರಷ್ಯದ ಚಕ್ರವರ್ತಿ)ನು ಪ್ರಚೋದಿಸಲ್ಪಟ್ಟ ತನಕ ಇವನ್ನು ವ್ಯಾಪಕವಾಗಿ ಹಂಚಲಾಯಿತು. ಆಗ ರಷ್ಯನ್ ಬೈಬಲ್ ಸೊಸೈಟಿಯ ಕಾರ್ಯಾಚರಣೆಗಳು ಪ್ರಭಾವಕಾರಿಯಾಗಿ ನಿಗ್ರಹಿಸಲ್ಪಟ್ಟವು. ತದನಂತರ, ಪಾವ್ಸ್ಕೀ ಹೀಬ್ರು ಶಾಸ್ತ್ರಗಳನ್ನು ಹೀಬ್ರುವಿನಿಂದ ರಷ್ಯನ್ ಭಾಷೆಗೆ ಭಾಷಾಂತರಿಸಿದರು. ಸುಮಾರು ಅದೇ ಸಮಯದಲ್ಲಿ, ಆರ್ತೊಡಾಕ್ಸ್ ಚರ್ಚಿನ ಮುಖ್ಯಾಧಿಕಾರಿಯಾದ ಮಕಾರಿಯಾಸ್ ಸಹ ಹೀಬ್ರು ಶಾಸ್ತ್ರಗಳನ್ನು ಹೀಬ್ರುವಿನಿಂದ ರಷ್ಯನ್ಗೆ ಭಾಷಾಂತರಿಸಿದನು. ಇಬ್ಬರೂ ತಮ್ಮ ಪ್ರಯತ್ನಗಳಿಗಾಗಿ ಶಿಕ್ಷಿಸಲ್ಪಟ್ಟರು, ಮತ್ತು ಅವರ ಭಾಷಾಂತರಗಳನ್ನು ಚರ್ಚಿನ ಪತ್ರಾಗಾರದಲ್ಲಿ ಹಾಕಲಾಯಿತು. ಬೈಬಲನ್ನು ಹಳೆಯ ಸ್ಲಾವಾನಿಕ್ ಭಾಷೆಯಲ್ಲಿ—ಆ ಸಮಯದಲ್ಲಿ ಅದು ಸಾಮಾನ್ಯ ಜನರಿಂದ ಓದಲ್ಪಡಲಿಲ್ಲ ಇಲ್ಲವೆ ಅರ್ಥಮಾಡಿಕೊಳ್ಳಲ್ಪಡಲಿಲ್ಲ—ಇಡಲು ಚರ್ಚು ನಿಶ್ಚಯಿಸಿತ್ತು. ಬೈಬಲ್ ಜ್ಞಾನವನ್ನು ಪಡೆಯಲಿಕ್ಕಾಗಿದ್ದ ಜನರ ಪ್ರಯತ್ನಗಳು ಇನ್ನು ಮುಂದೆ ನಿಗ್ರಹಿಸಲ್ಪಡಲು ಸಾಧ್ಯವಿರದಿದ್ದಾಗ ಮಾತ್ರ, 1856ರಲ್ಲಿ “ಪವಿತ್ರ ಸಭೆ”ಯು ತನ್ನ ಸ್ವಂತ ಭಾಷಾಂತರವನ್ನು ಕೈಗೊಂಡಿತು. ಆದರೆ, ಬಳಸಲ್ಪಟ್ಟ ಅಭಿವ್ಯಕ್ತಿಗಳು ಚರ್ಚಿನ ವೀಕ್ಷಣೆಗಳಿಗೆ ಸರಿಹೊಂದುವವು ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಜಾಗರೂಕವಾಗಿ ರಚಿಸಿದ ಮಾರ್ಗದರ್ಶಕಗಳೊಂದಿಗೆ ಅದು ಭಾಷಾಂತರವನ್ನು ಮಾಡಿತು. ಹೀಗೆ, ದೇವರ ವಾಕ್ಯದ ಪ್ರಸರಣದ ಸಂಬಂಧದಲ್ಲಿ, ಧಾರ್ಮಿಕ ಮುಖಂಡರ ಮಾತುಗಳು ಹಾಗೂ ಕ್ರಿಯೆಗಳಿಂದ ಪ್ರಕಟಿಸಲ್ಪಟ್ಟಂತೆ, ಅವರ ಬಾಹ್ಯ ತೋರಿಕೆ ಹಾಗೂ ಅವರ ಉದ್ದೇಶದ ನಡುವೆ ಒಂದು ಅಂತರವು ಪ್ರದರ್ಶಿಸಲ್ಪಡುತ್ತಿತ್ತು.—2 ಥೆಸಲೊನೀಕ 2:3, 4.
ಭ್ರಷ್ಟತೆಯ ವಿರುದ್ಧ ವಾಕ್ಯವನ್ನು ಕಾಪಾಡುವುದು
9. ಕೆಲವು ಬೈಬಲ್ ಭಾಷಾಂತರಕಾರರು ದೇವರ ವಾಕ್ಯಕ್ಕಾಗಿದ್ದ ತಮ್ಮ ಪ್ರೀತಿಯನ್ನು ಹೇಗೆ ಪ್ರದರ್ಶಿಸಿದರು?
9 ಶಾಸ್ತ್ರಗಳನ್ನು ಭಾಷಾಂತರಿಸಿ ನಕಲುಮಾಡಿದವರಲ್ಲಿ, ದೇವರ ವಾಕ್ಯವನ್ನು ನಿಜವಾಗಿಯೂ ಪ್ರೀತಿಸಿ, ಅದು ಎಲ್ಲರಿಗೂ ಲಭ್ಯವಾಗುವಂತೆ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಮಾಡಿದವರು ಇದ್ದರು. ಇಂಗ್ಲಿಷ್ ಭಾಷೆಯಲ್ಲಿ ಬೈಬಲನ್ನು ಲಭ್ಯಗೊಳಿಸಲು ವಿಲ್ಯಮ್ ಟಿಂಡೆಲ್ ಮಾಡಿದ ವಿಷಯಕ್ಕಾಗಿ ಅವನನ್ನು (1536ರಲ್ಲಿ) ಧರ್ಮಬಲಿಯಾಗಿ ಕೊಲ್ಲಲಾಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಭಾಷಾಂತರಿಸಿ ಪ್ರಕಟಿಸಿದ್ದಕ್ಕಾಗಿ ಫ್ರಾನ್ತೀಸ್ಕೊ ಡೆ ಎನ್ತೀನಾಸ್ ಕ್ಯಾಥೊಲಿಕ್ ಮಠೀಯ ನ್ಯಾಯಸ್ಥಾನದಿಂದ (1544ರ ತರುವಾಯ) ಬಂಧಿಸಲ್ಪಟ್ಟನು. ತನ್ನ ಜೀವವನ್ನು ಗಂಡಾಂತರಕ್ಕೆ ಒಡ್ಡುತ್ತಾ, ರಾಬರ್ಟ್ ಮಾರಿಸನ್ (1807ರಿಂದ 1818ರ ವರೆಗೆ) ಬೈಬಲನ್ನು ಚೈನೀಸ್ ಭಾಷೆಗೆ ಭಾಷಾಂತರಿಸಿದನು.
10. ದೇವರ ವಾಕ್ಯಕ್ಕಾಗಿದ್ದ ಪ್ರೀತಿಗಿಂತ ಇತರ ಪ್ರಭಾವಗಳಿಂದ ಪ್ರಚೋದಿಸಲ್ಪಟ್ಟ ಭಾಷಾಂತರಕಾರರು ಇದ್ದರೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
10 ಆದರೆ ಕೆಲವೊಮ್ಮೆ, ದೇವರ ವಾಕ್ಯಕ್ಕಾಗಿರುವ ಪ್ರೀತಿಗಿಂತ ಇತರ ಕಾರಣಗಳು ನಕಲುಗಾರರು ಮತ್ತು ಭಾಷಾಂತರಕಾರರ ಕೆಲಸವನ್ನು ಪ್ರಭಾವಿಸಿದವು. ನಾಲ್ಕು ಉದಾಹರಣೆಗಳನ್ನು ಪರಿಗಣಿಸಿರಿ: (1) ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕೆ ಪ್ರತಿಸ್ಪರ್ಧಿಯಾಗಿ ಸಮಾರ್ಯದವರು ಗೆರಿಜ್ಜೀಮ್ ಬೆಟ್ಟದ ಮೇಲೆ ಒಂದು ಆಲಯವನ್ನು ಕಟ್ಟಿಸಿದರು. ಆ ಕ್ರಿಯೆಯನ್ನು ಸಮರ್ಥಿಸುತ್ತಾ, ಸಮ್ಯಾರಿಟನ್ ಪೆಂಟಟ್ಯೂಕ್ನಲ್ಲಿ ವಿಮೋಚನಕಾಂಡ 20:17ರಲ್ಲಿ ಒಂದು ಪ್ರಕ್ಷೇಪಣವು ಮಾಡಲಾಯಿತು. ದಶಸೂತ್ರಗಳ ಒಂದು ಭಾಗವೊ ಎಂಬಂತೆ, ಗೆರಿಜ್ಜೀಮ್ ಬೆಟ್ಟದ ಮೇಲೆ ಕಲ್ಲಿನ ಒಂದು ವೇದಿಯನ್ನು ಕಟ್ಟಿ, ಅಲ್ಲಿ ಯಜ್ಞಗಳನ್ನು ಅರ್ಪಿಸುವಂತೆ ಒಂದು ಆಜ್ಞೆಯನ್ನು ಕೂಡಿಸಲಾಯಿತು. (2) ಗ್ರೀಕ್ ಸೆಪ್ಟೂಅಜಿಂಟ್ಗಾಗಿ ದಾನಿಯೇಲನ ಪುಸ್ತಕವನ್ನು ಪ್ರಥಮವಾಗಿ ಭಾಷಾಂತರಿಸಿದ ವ್ಯಕ್ತಿಯು, ತನ್ನ ತರ್ಜುಮೆಗಳಲ್ಲಿ ಮನಬಂದಂತೆ ಬದಲಾವಣೆಗಳನ್ನು ಮಾಡಿದನು. ಹೀಬ್ರು ಗ್ರಂಥಪಾಠದಲ್ಲಿರುವ ವಿಷಯವನ್ನು ವಿವರಿಸುವುದು ಇಲ್ಲವೆ ಅತಿಶಯಿಸುವುದೆಂದು ತಾನು ನೆನಸಿದ ಹೇಳಿಕೆಗಳನ್ನು ಅವನು ಕೂಡಿಸಿದನು. ಓದುಗರಿಗೆ ಸ್ವೀಕಾರಯೋಗ್ಯವಾಗಿರದು ಎಂದು ತಾನು ನೆನಸಿದ ವಿವರಗಳನ್ನು ಅವನು ಬಿಟ್ಟುಬಿಟ್ಟನು. ದಾನಿಯೇಲ 9:24-27ರಲ್ಲಿ ಕಂಡುಕೊಳ್ಳಲ್ಪಡುವ ಮೆಸ್ಸೀಯನ ಕಾಣಿಸಿಕೊಳ್ಳುವಿಕೆಯ ಸಮಯದ ಕುರಿತಾದ ಪ್ರವಾದನೆಯನ್ನು ಅವನು ಭಾಷಾಂತರಿಸಿದಾಗ, ಪ್ರವಾದನೆಯು ಮಕಬೀಸರ ಹೋರಾಟವನ್ನು ಬೆಂಬಲಿಸುತ್ತಿರುವಂತೆ ತೋರ್ಪಡಿಸುವ ಉದ್ದೇಶದಿಂದ ಅಲ್ಲಿ ಹೇಳಲ್ಪಟ್ಟ ಸಮಯಾವಧಿಯನ್ನು ಅವನು ತಪ್ಪಾಗಿಸಿ, ಪದಗಳನ್ನು ಕೂಡಿಸಿ, ಮಾರ್ಪಡಿಸಿ ಮತ್ತು ಸ್ಥಳಾಂತರಿಸಿದನು. (3) ಸಾ.ಶ. ನಾಲ್ಕನೆಯ ಶತಮಾನದಲ್ಲಿ, ಲ್ಯಾಟಿನ್ ಒಪ್ಪಂದವೊಂದರಲ್ಲಿ, ತ್ರಯೈಕ್ಯವಾದದ ಅತಿಹುರುಪುಳ್ಳ ಒಬ್ಬ ಪಕ್ಷವಾದಿಯು, ಅವು 1 ಯೋಹಾನ 5:7ರಿಂದ ತೆಗೆಯಲ್ಪಟ್ಟ ಒಂದು ಉದ್ಧರಣೆಯಾಗಿವೆಯೊ ಎಂಬಂತೆ, “ಸ್ವರ್ಗದಲ್ಲಿ, ತಂದೆ, ವಾಕ್ಯ, ಮತ್ತು ಪವಿತ್ರಾತ್ಮ; ಮತ್ತು ಈ ಮೂವರೂ ಒಂದು” ಎಂಬ ಪದಗಳನ್ನು ಕೂಡಿಸಿದನೆಂಬುದು ಸ್ಪಷ್ಟ. ತದನಂತರ ಆ ಭಾಗವನ್ನು ಬೈಬಲಿನ ಒಂದು ಲ್ಯಾಟಿನ್ ಹಸ್ತಪ್ರತಿಯಲ್ಲಿ ಸೇರಿಸಲಾಯಿತು. (4) ಫ್ರಾನ್ಸ್ನಲ್ಲಿ, XIIIನೆಯ ಲೂಯಿಸ್ (1610-43), ಪ್ರಾಟೆಸ್ಟಂಟರ ಪ್ರಯತ್ನಗಳನ್ನು ಸಮಕಾರಕ ಮಾಡುವ ಸಲುವಾಗಿ ಬೈಬಲನ್ನು ಫ್ರೆಂಚ್ ಭಾಷೆಯಲ್ಲಿ ಭಾಷಾಂತರಿಸುವಂತೆ ಸಾಕ್ ಕೊರ್ಬಾನ್ಗೆ ಅಧಿಕಾರ ನೀಡಿದನು. ಆ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಅ. ಕೃತ್ಯಗಳು 13:2ರಲ್ಲಿ “ವ್ರತಾಚರಣೆ (ಮಾಸ್)ಯ ಪವಿತ್ರ ಯಜ್ಞ”ಕ್ಕಿರುವ ಉಲ್ಲೇಖವನ್ನು ಸೇರಿಸಿ, ಕೊರ್ಬನ್ ಕೆಲವೊಂದು ಮೂಲ ಗ್ರಂಥದ ಪ್ರಕ್ಷೇಪಣಗಳನ್ನು ಒಳಗೂಡಿಸಿದನು.
11. (ಎ) ಕೆಲವು ಭಾಷಾಂತರಕಾರರ ಅಪ್ರಾಮಾಣಿಕತೆಯ ಎದುರಿನಲ್ಲೂ ದೇವರ ವಾಕ್ಯವು ಹೇಗೆ ಬಾಳಿತು? (ಬಿ) ಬೈಬಲು ಮೂಲಭೂತವಾಗಿ ಹೇಳಿದ್ದೇನೆಂದು ರುಜುಪಡಿಸಲು ಪ್ರಾಚೀನ ಹಸ್ತಪ್ರತಿಯ ಪುರಾವೆಯು ಎಷ್ಟಿದೆ? (ರೇಖಾಚೌಕವನ್ನು ನೋಡಿರಿ.)
11 ಯೆಹೋವನು ತನ್ನ ವಾಕ್ಯದೊಂದಿಗಿನ ಇಂತಹ ಹಸ್ತಕ್ಷೇಪವನ್ನು ತಡೆಗಟ್ಟಲಿಲ್ಲ, ಇಲ್ಲವೆ ಇಂತಹ ಹಸ್ತಕ್ಷೇಪವು ಆತನ ಉದ್ದೇಶವನ್ನು ಬದಲಾಯಿಸಲಿಲ್ಲ. ಅದು ಯಾವ ಪರಿಣಾಮಗಳನ್ನು ಬೀರಿತು? ಗೆರಿಜ್ಜೀಮ್ ಬೆಟ್ಟದ ವಿಷಯದಲ್ಲಿ ಉಲ್ಲೇಖಗಳನ್ನು ಕೂಡಿಸುವುದು, ಮಾನವಜಾತಿಯನ್ನು ಆಶೀರ್ವದಿಸಲಿಕ್ಕಾಗಿ ಸಮಾರ್ಯದ ಧರ್ಮವನ್ನು ದೇವರ ಸಾಧನವನ್ನಾಗಿ ಮಾಡಲಿಲ್ಲ. ಬದಲಿಗೆ, ಸಮಾರ್ಯದ ಧರ್ಮವು ಪೆಂಟಟ್ಯೂಕನ್ನು ನಂಬುವ ಪ್ರತಿಪಾದನೆ ಮಾಡಿದರೂ, ಸತ್ಯವನ್ನು ಕಲಿಸಲಿಕ್ಕಾಗಿ ಅದರ ಮೇಲೆ ಆತುಕೊಳ್ಳಲು ಸಾಧ್ಯವಿಲ್ಲವೆಂಬ ಪುರಾವೆಯನ್ನು ಅದು ಕೊಟ್ಟಿತು. (ಯೋಹಾನ 4:20-24) ಸೆಪ್ಟೂಅಜಿಂಟ್ನಲ್ಲಿನ ಅಸ್ಪಷ್ಟವಾದ ಪದಜೋಡಣೆಯು, ಪ್ರವಾದಿಯಾದ ದಾನಿಯೇಲನ ಮೂಲಕ ಮುಂತಿಳಿಸಲ್ಪಟ್ಟ ಸಮಯದಲ್ಲಿ ಮೆಸ್ಸೀಯನ ಬರುವಿಕೆಯನ್ನು ತಡೆಗಟ್ಟಲಿಲ್ಲ. ಇನ್ನೂ ಹೆಚ್ಚಾಗಿ, ಸೆಪ್ಟೂಅಜಿಂಟ್ ಪ್ರಥಮ ಶತಮಾನದಲ್ಲಿ ಬಳಕೆಯಲ್ಲಿತ್ತಾದರೂ, ತಮ್ಮ ಸಭಾಮಂದಿರಗಳಲ್ಲಿ ಶಾಸ್ತ್ರಗಳು ಹೀಬ್ರು ಭಾಷೆಯಲ್ಲಿ ಓದಲ್ಪಡುವುದನ್ನು ಕೇಳುವ ರೂಢಿಗೆ ಯೆಹೂದ್ಯರು ಒಗ್ಗಿಕೊಂಡಿದ್ದರೆಂಬುದು ಸುವ್ಯಕ್ತ. ಫಲಸ್ವರೂಪವಾಗಿ, ಪ್ರವಾದನೆಯ ನೆರವೇರಿಕೆಯ ಸಮಯವು ಹತ್ತಿರವಾದಂತೆ, “ಜನರು . . . ಎದುರುನೋಡು”ವವರಾಗಿದ್ದರು. (ಲೂಕ 3:15) ತ್ರಯೈಕ್ಯವನ್ನು ಬೆಂಬಲಿಸಲು 1 ಯೋಹಾನ 5:7ರಲ್ಲಿ ಮತ್ತು ವ್ರತಾಚರಣೆಯ ಬೋಧನೆಯನ್ನು ಬೆಂಬಲಿಸಲು ಅ. ಕೃತ್ಯಗಳು 13:2ರಲ್ಲಿನ ಪ್ರಕ್ಷೇಪಣಗಳ ವಿಷಯದಲ್ಲಾದರೊ, ಸತ್ಯವಾಗಿದ್ದದ್ದನ್ನು ಅವು ಬದಲಾಯಿಸಲಿಲ್ಲ. ಮತ್ತು ಸಕಾಲದಲ್ಲಿ ಈ ಸುಳ್ಳು ನಿರೂಪಣೆಗಳು ಸಂಪೂರ್ಣವಾಗಿ ಬಯಲಾದವು. ಬೈಬಲಿನ ಮೂಲ ಭಾಷೆಯ ಹಸ್ತಪ್ರತಿಗಳ ದೊಡ್ಡ ಸಂಗ್ರಹವು, ಯಾವುದೇ ಭಾಷಾಂತರದ ಸಮಂಜಸತೆಯನ್ನು ಪರಿಶೀಲಿಸಲಿಕ್ಕಾಗಿ ಒಂದು ಮಾಧ್ಯಮವನ್ನು ಒದಗಿಸುತ್ತದೆ.
12. (ಎ) ಕೆಲವು ಬೈಬಲ್ ಭಾಷಾಂತರಕಾರರಿಂದ ಯಾವ ಗಂಭೀರ ಬದಲಾವಣೆಗಳು ಮಾಡಲ್ಪಟ್ಟವು? (ಬಿ) ಇವು ಎಷ್ಟು ವ್ಯಾಪಕವಾಗಿದ್ದವು?
12 ಶಾಸ್ತ್ರಗಳನ್ನು ಬದಲಾಯಿಸುವ ಇತರ ಪ್ರಯತ್ನಗಳು, ಕೆಲವೊಂದು ವಚನಗಳನ್ನು ಬೇರೆ ರೀತಿಯಲ್ಲಿ ನಿರೂಪಿಸುವುದಕ್ಕಿಂತ ಹೆಚ್ಚಿನದ್ದನ್ನು ಒಳಗೊಂಡವು. ಇವು ಸ್ವತಃ ಸತ್ಯ ದೇವರ ಗುರುತಿನ ಮೇಲಿನ ಆಕ್ರಮಣವನ್ನು ಸೂಚಿಸಿದವು. ಬದಲಾವಣೆಗಳ ಸ್ವರೂಪ ಹಾಗೂ ವಿಸ್ತಾರವು ತಾನೆ, ಯಾವುದೇ ವ್ಯಕ್ತಿಗತ ಮನುಷ್ಯ ಇಲ್ಲವೆ ಮಾನವ ಸಂಸ್ಥೆಗಿಂತ ಹೆಚ್ಚು ಬಲಶಾಲಿಯಾದ ಒಂದು ಮೂಲದಿಂದ ಬಂದ ಪ್ರಭಾವ—ಹೌದು ಯೆಹೋವನ ಕಡುವೈರಿ, ಪಿಶಾಚನಾದ ಸೈತಾನನ ಪ್ರಭಾವ—ದ ಸ್ಪಷ್ಟವಾದ ಪುರಾವೆಯನ್ನು ನೀಡಿತು. ಆ ಪ್ರಭಾವಕ್ಕೆ ಒಳಗಾಗುತ್ತಾ, ಭಾಷಾಂತರಕಾರರು ಮತ್ತು ನಕಲುಗಾರರು—ಕೆಲವರು ಅತ್ಯಾಸಕ್ತಿಯಿಂದ, ಇತರರು ಮನಸ್ಸಿಲ್ಲದೆ—ಯೆಹೋವ ಎಂಬ ದೇವರ ಸ್ವಂತ ವೈಯಕ್ತಿಕ ನಾಮವನ್ನು, ಆತನ ಪ್ರೇರಿತ ವಾಕ್ಯದಿಂದ, ಅದು ಕಾಣಿಸಿಕೊಂಡ ಸಾವಿರಾರು ಸ್ಥಳಗಳಿಂದ ತೆಗೆದುಹಾಕಲಾರಂಭಿಸಿದರು. ಬಹಳ ಆದಿ ಸಮಯದಲ್ಲೇ, ಇತರ ಭಾಷಾಂತರಗಳಲ್ಲಿ ಹೀಬ್ರುವಿನಿಂದ ಗ್ರೀಕ್, ಲ್ಯಾಟಿನ್, ಜರ್ಮನ್, ಇಂಗ್ಲಿಷ್, ಇಟ್ಯಾಲಿಯನ್, ಮತ್ತು ಡಚ್ ಭಾಷೆಗಳ ಕೆಲವು ಭಾಷಾಂತರಗಳು ದೈವಿಕ ನಾಮವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟವು ಇಲ್ಲವೆ ಕೆಲವು ಸ್ಥಳಗಳಲ್ಲಿ ಮಾತ್ರ ಅದನ್ನು ಉಳಿಸಿದವು. ಅದನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಪ್ರತಿಗಳಿಂದಲೂ ತೆಗೆದುಹಾಕಲಾಯಿತು.
13. ಬೈಬಲನ್ನು ತಿದ್ದುವ ವ್ಯಾಪಕವಾದ ಪ್ರಯತ್ನವು, ಮಾನವ ಸ್ಮರಣೆಯಿಂದ ದೇವರ ನಾಮವನ್ನು ತೊಡೆದುಹಾಕುವುದರಲ್ಲಿ ಪರಿಣಮಿಸಲಿಲ್ಲವೇಕೆ?
13 ಆದರೂ, ಆ ಮಹಿಮಾನ್ವಿತ ನಾಮವು ಮಾನವ ಸ್ಮರಣೆಯಿಂದ ತೊಡೆದುಹಾಕಲ್ಪಡಲಿಲ್ಲ. ಸ್ಪ್ಯಾನಿಷ್, ಪೋರ್ಟ್ಯುಗೀಸ್, ಜರ್ಮನ್, ಇಂಗ್ಲಿಷ್, ಫ್ರೆಂಚ್ ಮತ್ತು ಇತರ ಅನೇಕ ಭಾಷೆಗಳಲ್ಲಿ ಹೀಬ್ರು ಶಾಸ್ತ್ರಗಳ ಭಾಷಾಂತರಗಳು ಪ್ರಾಮಾಣಿಕವಾಗಿ ದೇವರ ವೈಯಕ್ತಿಕ ನಾಮವನ್ನು ಸೇರಿಸಿದವು. 16ನೆಯ ಶತಮಾನದೊಳಗೆ, ದೇವರ ವೈಯಕ್ತಿಕ ನಾಮವು, ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಹಲವಾರು ಹೀಬ್ರು ಭಾಷಾಂತರಗಳಲ್ಲಿ, 18ನೆಯ ಶತಮಾನದೊಳಗೆ ಜರ್ಮನ್ ಭಾಷೆಯಲ್ಲಿ, 19ನೆಯ ಶತಮಾನದೊಳಗೆ ಕ್ರೋಯೇಷನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಹ ಪುನಃ ಕಾಣಿಸಿಕೊಳ್ಳಲಾರಂಭವಾಯಿತು. ಜನರು ದೇವರ ನಾಮವನ್ನು ಒಂದು ಮೂಲೆಗೆ ತಳ್ಳಲು ಪ್ರಯತ್ನಿಸಿದರೂ, “ಯೆಹೋವನ ದಿನವು” ಆಗಮಿಸಿದಾಗ, ಆ ಸಮಯದಲ್ಲಿ, ದೇವರು ಪ್ರಕಟಿಸುವಂತೆ, ‘ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವವು.’ ದೇವರ ಆ ಪ್ರಕಟಿತ ಉದ್ದೇಶವು ನೆರವೇರದೆ ಹೋಗದು.—2 ಪೇತ್ರ 3:10; ಯೆಹೆಜ್ಕೇಲ 38:23; ಯೆಶಾಯ 11:9; 55:11.
ಭೂಮಂಡಲದ ಸುತ್ತಲೂ ಸಂದೇಶವು ತಲಪುತ್ತದೆ
14. (ಎ) ಇಪ್ಪತ್ತನೆಯ ಶತಮಾನದೊಳಗೆ, ಯೂರೋಪಿನ ಎಷ್ಟು ಭಾಷೆಗಳಲ್ಲಿ ಬೈಬಲು ಮುದ್ರಿಸಲ್ಪಟ್ಟಿತ್ತು, ಮತ್ತು ಯಾವ ಪರಿಣಾಮದೊಂದಿಗೆ? (ಬಿ) 1914ರ ಅಂತ್ಯದೊಳಗಾಗಿ, ಆಫ್ರಿಕದ ಎಷ್ಟು ಭಾಷೆಗಳಲ್ಲಿ ಬೈಬಲು ಲಭ್ಯವಿತ್ತು?
14 ಇಪ್ಪತ್ತನೆಯ ಶತಮಾನದ ಉದಯದೊಳಗಾಗಿ, ಬೈಬಲು ಆಗಲೇ ಯೂರೋಪಿನ 94 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿತ್ತು. 1914ರಲ್ಲಿ ಅನ್ಯಜನಾಂಗಗಳ ಸಮಯಗಳ ಅಂತ್ಯದೊಂದಿಗೆ ಲೋಕವನ್ನು ನಡುಗಿಸುವ ಘಟನೆಗಳು ಸಂಭವಿಸುವವು—ಮತ್ತು, ಅವು ನಿಶ್ಚಯವಾಗಿಯೂ ಸಂಭವಿಸಿದವು—ಎಂಬ ನಿಜತ್ವಕ್ಕೆ ಲೋಕದ ಆ ಭಾಗದಲ್ಲಿದ್ದ ಬೈಬಲ್ ವಿದ್ಯಾರ್ಥಿಗಳನ್ನು ಅದು ಎಚ್ಚರಿಸಿತು! (ಲೂಕ 21:24) ಯುಗಾರಂಭದ ವರ್ಷವಾದ 1914 ಮುಗಿಯುವುದರೊಳಗಾಗಿ, ಇಡೀ ಬೈಬಲು ಇಲ್ಲವೆ ಅದರ ಕೆಲವು ಪುಸ್ತಕಗಳು, ವ್ಯಾಪಕವಾಗಿ ಬಳಸಲ್ಪಡುವ ಇಂಗ್ಲಿಷ್, ಫ್ರೆಂಚ್ ಮತ್ತು ಪೋರ್ಟ್ಯುಗೀಸ್ ಭಾಷೆಗಳನ್ನು ಸೇರಿಸಿ, ಆಫ್ರಿಕದ 157 ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿತು. ಹೀಗೆ, ಅಲ್ಲಿ ಜೀವಿಸುತ್ತಿರುವ ಅನೇಕ ಕುಲಗಳು ಹಾಗೂ ರಾಷ್ಟ್ರೀಯ ಗುಂಪುಗಳ ನಮ್ರ ಜನರಿಗೆ ಆತ್ಮಿಕವಾಗಿ ಬಿಡುಗಡೆಗೊಳಿಸುವ ಬೈಬಲ್ ಸತ್ಯಗಳನ್ನು ಕಲಿಸುವುದಕ್ಕಾಗಿ ತಳಪಾಯವು ಹಾಕಲ್ಪಟ್ಟಿತು.
15. ಕಡೇ ದಿವಸಗಳು ಆರಂಭಗೊಂಡಂತೆ, ಅಮೆರಿಕದಲ್ಲಿರುವ ಜನರ ಭಾಷೆಗಳಲ್ಲಿ ಬೈಬಲು ಎಷ್ಟು ವ್ಯಾಪಕವಾಗಿ ಲಭ್ಯವಿತ್ತು?
15 ಮುಂತಿಳಿಸಲ್ಪಟ್ಟ ಕಡೇ ದಿವಸಗಳನ್ನು ಲೋಕವು ಪ್ರವೇಶಿಸಿದಂತೆ, ಅಮೆರಿಕದಲ್ಲಿ ಬೈಬಲು ವ್ಯಾಪಕವಾಗಿ ಲಭ್ಯವಾಗಿತ್ತು. ಯೂರೋಪಿನಿಂದ ಬಂದ ವಲಸೆಗಾರರು ಅದನ್ನು ತಮ್ಮೊಂದಿಗೆ ತಮ್ಮ ಎಲ್ಲ ವಿವಿಧ ಭಾಷೆಗಳಲ್ಲಿ ತಂದಿದ್ದರು. ಬೈಬಲ್ ಭಾಷಣಗಳು ಮತ್ತು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳಿಂದ—ಯೆಹೋವನ ಸಾಕ್ಷಿಗಳು ಆಗ ಜ್ಞಾತರಾಗಿದ್ದಂತೆ—ಪ್ರಕಾಶಿಸಲ್ಪಟ್ಟ ಬೈಬಲ್ ಸಾಹಿತ್ಯದ ತೀವ್ರವಾದ ಹಂಚಿಕೆಯೊಂದಿಗೆ, ಬೈಬಲ್ ಶಿಕ್ಷಣದ ಒಂದು ವ್ಯಾಪಕವಾದ ಕಾರ್ಯಕ್ರಮವು ಜರಗುತ್ತಾ ಇತ್ತು. ಇದಕ್ಕೆ ಕೂಡಿಸಿ, ಪಾಶ್ಚಾತ್ಯ ಗೋಳಾರ್ಧದ ಸ್ವದೇಶಿ ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಬೈಬಲ್ ಸೊಸೈಟಿಗಳಿಂದ ಇನ್ನೂ 57 ಭಾಷೆಗಳಲ್ಲಿ ಬೈಬಲ್ ಮುದ್ರಣವು ಈಗಾಗಲೇ ಮಾಡಲ್ಪಡುತ್ತಿತ್ತು.
16, 17. (ಎ) ಭೌಗೋಲಿಕ ಸಾರುವಿಕೆಗಾಗಿ ಸಮಯವು ಆಗಮಿಸಿದಾಗ, ಬೈಬಲು ಎಷ್ಟು ವ್ಯಾಪಕವಾಗಿ ಲಭ್ಯವಾಗಿತ್ತು? (ಬಿ) ಬೈಬಲು ನಿಜವಾಗಿಯೂ ಬಾಳುವ ಮತ್ತು ಬಹಳಷ್ಟು ಪ್ರಭಾವಶಾಲಿಯಾದ ಪುಸ್ತಕವಾಗಿ ಹೇಗೆ ಪರಿಣಮಿಸಿದೆ?
16 ‘ಅಂತ್ಯವು ಬರುವ’ ಮೊದಲು, ಸುವಾರ್ತೆಯ ಭೌಗೋಲಿಕ ಸಾರುವಿಕೆಗಾಗಿ ಸಮಯವು ಆಗಮಿಸಿದಾಗ, ಬೈಬಲು ಏಷಿಯ ಮತ್ತು ಶಾಂತಿಸಾಗರದ ದ್ವೀಪಗಳಿಗೆ ಒಂದು ಹೊಸ ಕೃತಿಯಾಗಿರಲಿಲ್ಲ. (ಮತ್ತಾಯ 24:14) ಭೂಮಂಡಲದ ಆ ಭಾಗದ ವೈಶಿಷ್ಟ್ಯವಾಗಿರುವ 232 ಭಾಷೆಗಳಲ್ಲಿ ಅದು ಈಗಾಗಲೇ ಪ್ರಕಾಶಿಸಲ್ಪಡುತ್ತಿತ್ತು. ಕೆಲವು ಸಂಪೂರ್ಣ ಬೈಬಲುಗಳಾಗಿದ್ದವು; ಹೆಚ್ಚಿನವು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಭಾಷಾಂತರಗಳಾಗಿದ್ದವು; ಇನ್ನೂ ಕೆಲವು ಪವಿತ್ರ ಶಾಸ್ತ್ರಗಳ ಏಕೈಕ ಪುಸ್ತಕವಾಗಿದ್ದವು.
17 ಸ್ಪಷ್ಟವಾಗಿಯೇ, ಬೈಬಲು ಬರಿಯ ಪುರಾವಶೇಷ (ಮ್ಯೂಸಿಯಮ್) ಪ್ರದರ್ಶನವಾಗಿ ಬಾಳುತ್ತಿರಲಿಲ್ಲ. ಅಸ್ತಿತ್ವದಲ್ಲಿರುವ ಸಕಲ ಪುಸ್ತಕಗಳಲ್ಲಿ, ಅದು ಅತ್ಯಂತ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟ ಹಾಗೂ ಅತ್ಯಂತ ವಿಸ್ತಾರವಾಗಿ ಹಂಚಲ್ಪಟ್ಟ ಪುಸ್ತಕವಾಗಿತ್ತು. ದೈವಿಕ ಅನುಗ್ರಹದ ಆ ಪುರಾವೆಯೊಂದಿಗೆ ಸುಸಂಗತವಾಗಿ, ಆ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿದ್ದ ಸಂಗತಿಯು ನೆರವೇರಲಿತ್ತು. ಅದರ ಬೋಧನೆಗಳು ಮತ್ತು ಆ ಬೋಧನೆಗಳನ್ನು ಪ್ರೇರಿಸಿದ ಪವಿತ್ರಾತ್ಮವು ಸಹ ಅನೇಕ ದೇಶಗಳಲ್ಲಿರುವ ಜನರ ಜೀವಿತಗಳ ಮೇಲೆ ಬಾಳುವ ಪ್ರಭಾವವನ್ನು ಬೀರುತ್ತಿತ್ತು. (1 ಪೇತ್ರ 1:24, 25) ಆದರೆ ಇನ್ನೂ ಅತ್ಯಧಿಕವಾದದ್ದು ಬರಲಿಕ್ಕಿತ್ತು.
ನಿಮಗೆ ನೆನಪಿದೆಯೇ?
◻ ಸದಾಕಾಲ ಬಾಳುವಂತಹ “ನಮ್ಮ ದೇವರ ವಾಕ್ಯವು” ಏನಾಗಿದೆ?
◻ ಬೈಬಲನ್ನು ನಿಗ್ರಹಿಸಲು ಯಾವ ಪ್ರಯತ್ನಗಳು ಮಾಡಲ್ಪಟ್ಟಿವೆ, ಮತ್ತು ಯಾವ ಪರಿಣಾಮಗಳೊಂದಿಗೆ?
◻ ಬೈಬಲಿನ ಸಮಗ್ರತೆಯು ಹೇಗೆ ಕಾಪಾಡಲ್ಪಟ್ಟಿದೆ?
◻ ದೇವರ ಉದ್ದೇಶದ ಹೇಳಿಕೆಯು, ಹೇಗೆ ಒಂದು ಜೀವಂತ ವಾಕ್ಯವಾಗಿ ಪರಿಣಮಿಸಿದೆ?
[ಪುಟ 12 ರಲ್ಲಿರುವ ಚೌಕ]
ಬೈಬಲು ಮೂಲಭೂತವಾಗಿ ಹೇಳಿದ್ದೇನೆಂದು ನಮಗೆ ನಿಜವಾಗಿಯೂ ಗೊತ್ತಿದೆಯೊ?
ಹೀಬ್ರು ಶಾಸ್ತ್ರಗಳ ಒಳವಿಷಯಗಳನ್ನು, ಸುಮಾರು 6,000 ಲಿಖಿತ ಹೀಬ್ರು ಹಸ್ತಪ್ರತಿಗಳು ದೃಢೀಕರಿಸುತ್ತವೆ. ಇವುಗಳಲ್ಲಿ ಕೆಲವು ಕ್ರೈಸ್ತ ಪೂರ್ವ ಶಕದಷ್ಟು ಹಿಂದಿನವುಗಳಾಗಿವೆ. ಇಡೀ ಹೀಬ್ರು ಶಾಸ್ತ್ರಗಳಲ್ಲಿ ಕಡಿಮೆ ಪಕ್ಷ 19 ಉಪಲಬ್ಧ ಹಸ್ತಪ್ರತಿಗಳು, ಚಲನ ವಿಧಾನದ ಮುದ್ರಣದ ಕಂಡುಹಿಡಿತಕ್ಕೆ ಮುಂಚಿನ ಸಮಯಾವಧಿಯಷ್ಟು ಹಿಂದಿನವುಗಳಾಗಿವೆ. ಇದಕ್ಕೆ ಕೂಡಿಸಿ, ಅದೇ ಕಾಲಾವಧಿಯಿಂದಲೇ, ಇತರ 28 ಭಾಷೆಗಳಲ್ಲಿ ಮಾಡಲ್ಪಟ್ಟ ಭಾಷಾಂತರಗಳು ಅಸ್ತಿತ್ವದಲ್ಲಿವೆ.
ಕ್ರೈಸ್ತ ಗ್ರೀಕ್ ಶಾಸ್ತ್ರಗಳಿಗೆ, ಗ್ರೀಕ್ ಭಾಷೆಯಲ್ಲಿ ಸುಮಾರು 5,000 ಹಸ್ತಪ್ರತಿಗಳು ಪಟ್ಟಿಮಾಡಲ್ಪಟ್ಟಿವೆ. ಇವುಗಳಲ್ಲೊಂದು ಸಾ.ಶ. 125ಕ್ಕಿಂತ ಹಿಂದಿನದ್ದಾಗಿದ್ದು, ಹೀಗೆ ಮೂಲ ಬರವಣಿಗೆಯ ಸಮಯದ ಬಳಿಕ ಕೇವಲ ಕೆಲವೇ ವರ್ಷಗಳ ಅಂತರವುಳ್ಳದ್ದಾಗಿದೆ. ಮತ್ತು ಕೆಲವು ತುಣುಕುಗಳು ಗಣನೀಯವಾಗಿ ಇನ್ನೂ ಹಿಂದಿನವುಗಳೆಂದು ನೆನಸಲಾಗುತ್ತದೆ. 27 ಪ್ರೇರಿತ ಪುಸ್ತಕಗಳಲ್ಲಿ 22 ಪುಸ್ತಕಗಳಿಗೆ, 10ರಿಂದ 19 ಸಂಪೂರ್ಣ ದೊಡ್ಡಕ್ಷರದ ಹಸ್ತಪ್ರತಿಗಳಿವೆ. ಬೈಬಲಿನ ಈ ಭಾಗದಲ್ಲಿರುವ ಪುಸ್ತಕಗಳಲ್ಲಿ ಯಾವುದೇ ಪುಸ್ತಕಕ್ಕಿರುವ ಸಂಪೂರ್ಣ ದೊಡ್ಡಕ್ಷರದ ಹಸ್ತಪ್ರತಿಗಳ ಅತ್ಯಂತ ಕನಿಷ್ಠ ಸಂಖ್ಯೆಯು ಮೂರಾಗಿದೆ—ಅದು ಪ್ರಕಟನೆ ಪುಸ್ತಕಕ್ಕೆ. ಇಡೀ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಒಂದು ಹಸ್ತಪ್ರತಿಯು, ಸಾ.ಶ. ನಾಲ್ಕನೆಯ ಶತಮಾನದಷ್ಟು ಹಿಂದಿನದ್ದಾಗಿದೆ.
ಬೇರೆ ಯಾವ ಪ್ರಾಚೀನ ಸಾಹಿತ್ಯವೂ ಪ್ರಾಚೀನ ದಾಖಲೆಗಳ ಪುರಾವೆಯ ಇಂತಹ ಪ್ರವಾಹದಿಂದ ದೃಢೀಕರಿಸಲ್ಪಟ್ಟಿರುವುದಿಲ್ಲ.