‘ಆತನು ದಣಿದವನಿಗೆ ಶಕ್ತಿಯನ್ನು ಕೊಡುತ್ತಾನೆ’
1 ನಮಗೆಲ್ಲರಿಗೂ ಆಗಿಂದಾಗ್ಗೆ ಆಯಾಸವಾಗುತ್ತದೆ. ಇದು ಕೆಲಸ ಅಥವಾ ಇತರ ಚಟುವಟಿಕೆಗಳಿಂದ ಮಾತ್ರವಲ್ಲ ಈ ‘ಕಠಿನಕಾಲಗಳಲ್ಲಿ’ ನಾವು ಎದುರಿಸುವ ಪಂಥಾಹ್ವಾನಗಳಿಂದ ಸಹ ಆಗಬಹುದು. (2 ತಿಮೊ. 3:1) ಯೆಹೋವನ ಸೇವಕರಾಗಿರುವ ನಾವು ನಮ್ಮ ಶುಶ್ರೂಷೆಯನ್ನು ನಿಧಾನಿಸದಂತೆ ನೋಡಿಕೊಳ್ಳಲು ಬೇಕಾದ ಆಧ್ಯಾತ್ಮಿಕ ಬಲವನ್ನು ಹೇಗೆ ಗಳಿಸಸಾಧ್ಯವಿದೆ? ‘ಮಹಾಶಕ್ತನಾದ’ ಯೆಹೋವನ ಮೇಲೆ ಆತುಕೊಳ್ಳುವುದರಿಂದಲೇ. (ಯೆಶಾ. 40:26) ಆತನಿಗೆ ನಮ್ಮ ಆವಶ್ಯಕತೆಗಳ ಅರಿವಿದೆ. ನಮಗೆ ಸಹಾಯ ಮಾಡುವ ಯಥಾರ್ಥ ಆಸಕ್ತಿಯೂ ಆತನಿಗಿದೆ.—1 ಪೇತ್ರ 5:7.
2 ಯೆಹೋವನ ಒದಗಿಸುವಿಕೆಗಳು: ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಬಲಪಡಿಸುತ್ತಾನೆ. ಪ್ರತಿರೋಧಿಸಲಾಗದ ಈ ಶಕ್ತಿಯನ್ನೇ ಆತನು ವಿಶ್ವವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದನು. ನಾವು ದಣಿದು ಹೋದರೆ ಮತ್ತೆ ‘ಹೊಸ ಬಲವನ್ನು ಹೊಂದಲು’ ದೇವರ ಆತ್ಮವು ನಮಗೆ ಸಹಾಯ ಮಾಡುತ್ತದೆ. (ಯೆಶಾ. 40:31) ನಿಮ್ಮನ್ನು ಹೀಗೆ ಕೇಳಿಕೊಳ್ಳಿ, ‘ಕ್ರೈಸ್ತ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಬಲಗೊಳ್ಳಲು ನಾನು ಪವಿತ್ರಾತ್ಮಕ್ಕಾಗಿ ಕೊನೆಯ ಸಲ ಬೇಡಿದ್ದು ಯಾವಾಗ?’—ಲೂಕ 11:11-13.
3 ದೇವರ ಪ್ರೇರಿತ ವಾಕ್ಯವನ್ನು ಅನುದಿನವೂ ಓದಿ ಧ್ಯಾನಿಸುವ ಮೂಲಕ ಮತ್ತು ನಮ್ಮ ಕ್ರೈಸ್ತ ಪ್ರಕಾಶನಗಳನ್ನು ಕ್ರಮವಾಗಿ ಅಧ್ಯಯನ ಮಾಡಿ ಆಧ್ಯಾತ್ಮಿಕವಾಗಿ ಪುಷ್ಟಿಗೊಳ್ಳುವ ಮೂಲಕ ನಾವು, ‘ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ’ ಜೀವಕಳೆ ತುಂಬಿದವರಾಗುತ್ತೇವೆ. “ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ.”—ಕೀರ್ತ. 1:2, 3.
4 ಯೆಹೋವನು ಜೊತೆ ವಿಶ್ವಾಸಿಗಳನ್ನು ಸಹ ಉಪಯೋಗಿಸುತ್ತಾನೆ. ಅವರು ನಮಗೆ “ಬಲಪಡಿಸುವ ಸಹಾಯಕದಂತೆ” ಇರುತ್ತಾರೆ. (ಕೊಲೊ. 4:10, 11 NW) ಅವರು ಸಭಾ ಕೂಟಗಳಲ್ಲಿ ತಮ್ಮ ಭಕ್ತಿವರ್ಧಕ ಸಂಭಾಷಣೆ, ಹೇಳಿಕೆಗಳು ಮತ್ತು ಭಾಷಣಗಳ ಮೂಲಕ ನಮ್ಮನ್ನು ದೃಢಪಡಿಸುತ್ತಾರೆ. (ಅ. ಕೃ. 15:32) ಮುಖ್ಯವಾಗಿ ಕ್ರೈಸ್ತ ಹಿರಿಯರು ಆಧ್ಯಾತ್ಮಿಕ ನೆರವನ್ನು ಮತ್ತು ಚೈತನ್ಯದಾಯಕ ಉತ್ತೇಜನವನ್ನು ಒದಗಿಸುತ್ತಾರೆ.—ಯೆಶಾ. 32:1, 2.
5 ಶುಶ್ರೂಷೆ: ಬಳಲಿ ಹೋದ ಅನಿಸಿಕೆ ನಿಮಗಾಗುವಾಗಲೂ ಸಾರುವುದನ್ನು ನಿಲ್ಲಿಸಬೇಡಿ! ಯಾಕೆಂದರೆ ಬೇರೆಲ್ಲ ಚಟುವಟಿಕೆಗಳು ನಿಮ್ಮನ್ನು ಆಯಾಸಗೊಳಿಸುವಾಗ ಕ್ರಮದ ಶುಶ್ರೂಷೆಯಾದರೊ ನಿಮ್ಮನ್ನು ಚೈತನ್ಯಗೂಳಿಸುತ್ತದೆ. (ಮತ್ತಾ. 11:28-30) ಸುವಾರ್ತೆ ಸಾರುವುದರ ಮೂಲಕ ದೇವರ ರಾಜ್ಯದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ನಿತ್ಯತೆಯನ್ನು ಹಾಗೂ ಅದರ ಭವ್ಯ ಪ್ರತೀಕ್ಷೆಗಳನ್ನು ಮುಂದಿಡಲು ನಮಗೆ ಸಹಾಯವಾಗುತ್ತದೆ.
6 ಈ ದುಷ್ಟ ವ್ಯವಸ್ಥೆ ನಾಶಗೊಳ್ಳುವ ಮುಂಚೆ ಮಾಡಲು ಎಷ್ಟೋ ವಿಷಯಗಳಿವೆ. “ದೇವರಿಂದ ಶಕ್ತಿಯನ್ನು ಹೊಂದಿ” ನಮ್ಮ ಸೇವೆಯಲ್ಲಿ ದೃಢರಾಗಿರಲು ನಮಗೆ ಸಕಾರಣಗಳಿವೆ. (1 ಪೇತ್ರ 4:11) ಯೆಹೋವನ ಸಹಾಯದಿಂದ ನಾವು ನಮ್ಮ ಕೆಲಸವನ್ನು ನಿಶ್ಚಯವಾಗಿ ಪೂರೈಸುವೆವು ಏಕೆಂದರೆ ಆತನು ‘ದಣಿದವನಿಗೆ ಶಕ್ತಿಯನ್ನು ಕೊಡುತ್ತಾನೆ’.—ಯೆಶಾ. 40:29 NIBV.