ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರುವುದು
ನಾಸಿ ಕೂಟ ಶಿಬಿರಗಳಲ್ಲಿ ಐದು ವರ್ಷಗಳನ್ನು ತಾಳಿಕೊಂಡ ಬಳಿಕ ಒಬ್ಬ ಮನುಷ್ಯನಿಗೆ ಯಾವ ಅನಿಸಿಕೆಯಾಗುತ್ತದೆ? ಎದೆಗುಂದಿಸಲ್ಪಟ್ಟಂತೆಯೊ? ಕಟುಧಿಕ್ಕಾರದ ಅನಿಸಿಕೆಯೊ? ಸೇಡಿನ ಭಾವನೆಯೊ?
ಅದು ವಿಚಿತ್ರವಾಗಿ ತೋರಬಹುದಾದರೂ, ಅಂತಹ ಒಬ್ಬ ಮನುಷ್ಯನು ಬರೆದುದು: “ನಾನು ಎಂದಾದರೂ ನಿರೀಕ್ಷಿಸಸಾಧ್ಯವಿದ್ದುದಕ್ಕಿಂತಲೂ ಹೆಚ್ಚಾಗಿ ನನ್ನ ಜೀವಿತವು ಸಂಪದ್ಯುಕ್ತಮಾಡಲ್ಪಟ್ಟಿತು.” ಅವನಿಗೆ ಆ ರೀತಿಯ ಅನಿಸಿಕೆ ಏಕೆ ಆಯಿತು? “ನಾನು ಸರ್ವೋನ್ನತನ ರೆಕ್ಕೆಗಳ ಕೆಳಗೆ ಆಶ್ರಯವನ್ನು ಕಂಡುಕೊಂಡೆ, ಹಾಗೂ ‘ಯೆಹೋವನಲ್ಲಿ ನಿರೀಕ್ಷೆಯನ್ನಿಡುತ್ತಿರುವವರು ಪುನಃ ಬಲವನ್ನು ಪಡೆದುಕೊಳ್ಳುವರು. ಅವರು ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರುವರು. ಅವರು . . . ನಡೆಯುವರು ಮತ್ತು ಬಳಲುವುದಿಲ್ಲ’ ಎಂದು ಪ್ರವಾದಿಯಾದ ಯೆಶಾಯನು ಹೇಳಿದ ಮಾತುಗಳ ನೆರವೇರಿಕೆಯನ್ನು ನಾನು ಅನುಭವಿಸಿದೆ.”—ಯೆಶಾಯ 40:31, NW.
ಯಾರ ದೇಹವು ಊಹಿಸಬಹುದಾದ ಅತ್ಯಂತ ಘೋರ ಅನುಪಚರಿಸುವಿಕೆಯಿಂದ ಬಾಧಿಸಲ್ಪಟ್ಟಿತೋ, ಈ ಕ್ರೈಸ್ತ ಪುರುಷನಿಗೆ, ನಾಸಿ ಪಾಶವೀಯತೆಯು ಜಯಿಸಲಸಾಧ್ಯವಾದ ಒಂದು ಮಾನಸಿಕ ಪ್ರವೃತ್ತಿ, ರೂಪಕಾತ್ಮಕವಾಗಿ ಬಹಳ ಎತ್ತರಕ್ಕೆ ಏರಿಸಿದ ಪ್ರಚೋದನಾತ್ಮಕ ಮಾನಸಿಕ ಪ್ರವೃತ್ತಿಯಿತ್ತು. ದಾವೀದನಂತೆ ಅವನು ದೇವರ “ರೆಕ್ಕೆಗಳ” ನೆರಳಿನಲ್ಲಿ ಆಶ್ರಯವನ್ನು ಕಂಡುಕೊಂಡನು. (ಕೀರ್ತನೆ 57:1) ತನ್ನ ಆತ್ಮಿಕ ಬಲವನ್ನು, ಆಕಾಶದಲ್ಲಿ ಎತ್ತೆತ್ತರಕ್ಕೆ ಹಾರುವ ಒಂದು ಹದ್ದಿನೊಂದಿಗೆ ಹೋಲಿಸಿಕೊಳ್ಳುತ್ತಾ, ಪ್ರವಾದಿಯಾದ ಯೆಶಾಯನಿಂದ ಉಪಯೋಗಿಸಲ್ಪಟ್ಟ ಒಂದು ಉಪಮಾಲಂಕಾರವನ್ನು ಈ ಕ್ರೈಸ್ತನು ಉಪಯೋಗಿಸಿಕೊಂಡನು.
ನಿಮಗೆ ಎಂದಾದರೂ ಸಮಸ್ಯೆಗಳಿಂದ ಕುಗ್ಗಿಹೋದ ಅನಿಸಿಕೆಯಾಗುತ್ತದೊ? “ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರ”ಲಿಕ್ಕಾಗಿ, ನೀವು ಸಹ ಸರ್ವೋನ್ನತನ ರೆಕ್ಕೆಗಳ ಕೆಳಗೆ ಆಶ್ರಯವನ್ನು ಕಂಡುಕೊಳ್ಳಲು ಇಷ್ಟಪಡುವಿರೆಂಬುದು ನಿಸ್ಸಂಶಯ. ಇದು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಶಾಸ್ತ್ರವಚನಗಳಲ್ಲಿ ಅನೇಕಾವರ್ತಿ ರೂಪಕಾತ್ಮಕವಾಗಿ ಉಪಯೋಗಿಸಲ್ಪಟ್ಟಿರುವ, ಹದ್ದಿನ ಕುರಿತಾಗಿ ಸ್ವಲ್ಪ ವಿಷಯವನ್ನು ತಿಳಿದುಕೊಳ್ಳುವುದು ಸಹಾಯಕರವಾಗಿದೆ.
ಹದ್ದಿನ ಪತಾಕೆಯ ಕೆಳಗೆ
ಪುರಾತನ ಜನರು ಗಮನಿಸಿರುವ ಎಲ್ಲಾ ಪಕ್ಷಿಗಳಲ್ಲಿ, ಹದ್ದು ತನ್ನ ಶಕ್ತಿ ಮತ್ತು ಘನಗಾಂಭೀರ್ಯವುಳ್ಳ ಹಾರಾಟದ ಕಾರಣದಿಂದಾಗಿ, ಬಹುಶಃ ಅತ್ಯಂತ ಪ್ರಶಂಸಾರ್ಹ ಪಕ್ಷಿಯಾಗಿತ್ತು. ಬಾಬೆಲ್, ಪಾರಸೀಯ, ಹಾಗೂ ರೋಮ್ನ ಸೇನಾಬಲಗಳನ್ನು ಒಳಗೊಂಡ ಅನೇಕ ಪುರಾತನ ಸೇನಾಬಲಗಳು, ಹದ್ದಿನ ಪತಾಕೆಯ ಕೆಳಗೆ ಮುಂದುವರಿದಿದ್ದವು. ಮಹಾ ಕೋರೆಷನ ಸೇನಾಬಲವು ಇವುಗಳಲ್ಲಿ ಒಂದಾಗಿತ್ತು. ಈ ಪಾರಸೀಯ ಅರಸನು, ಬ್ಯಾಬಿಲೋನಿಯದ ಚಕ್ರಾಧಿಪತ್ಯವನ್ನು ಕಬಳಿಸಲು ಪೂರ್ವದಿಕ್ಕಿನಿಂದ ಬರುತ್ತಿರುವ ಹಿಂಸ್ರ ಪಕ್ಷಿಯಂತಿರುವನೆಂದು ಬೈಬಲು ಪ್ರವಾದಿಸಿತು. (ಯೆಶಾಯ 45:1; 46:11) ಈ ಪ್ರವಾದನೆಯು ಬರೆಯಲ್ಪಟ್ಟ ಇನ್ನೂರು ವರ್ಷಗಳ ಬಳಿಕ, ತಮ್ಮ ಕದನ ಧ್ವಜಗಳ ಮೇಲೆ ಹದ್ದುಗಳನ್ನು ಹೊಂದಿದ್ದ ಕೋರೆಷನ ಸೇನಾಪಡೆಗಳು, ಒಂದು ಹದ್ದು ತನ್ನ ಆಹಾರಪ್ರಾಣಿಯ ಮೇಲೆ ಥಟ್ಟನೆ ಮೇಲೆರಗುವಂತೆ, ಬಾಬೆಲಿನ ನಗರದ ಮೇಲೆ ಫಕ್ಕನೆ ಆಕ್ರಮಣಮಾಡಿದವು.
ತೀರ ಇತ್ತೀಚೆಗೆ, ಷಾರ್ಲ್ಮೆನ್ ಮತ್ತು ನಪೋಲಿಯನರಂತಹ ಯುದ್ಧಯೋಧರು ಹಾಗೂ ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳು ಸಹ, ಹದ್ದನ್ನು ತಮ್ಮ ರಾಷ್ಟ್ರೀಯ ಲಾಂಛನವನ್ನಾಗಿ ಆರಿಸಿಕೊಂಡಿವೆ. ಹದ್ದುಗಳ ಅಥವಾ ಇತರ ಯಾವುದೇ ಜೀವಿಗಳ ವಿಗ್ರಹಗಳನ್ನು ಪೂಜ್ಯಭಾವದಿಂದ ಕಾಣಬಾರದೆಂದು ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಿದ್ದರು. (ವಿಮೋಚನಕಾಂಡ 20:4, 5) ಆದರೂ, ಬೈಬಲ್ ಬರಹಗಾರರು ತಮ್ಮ ಸಂದೇಶವನ್ನು ದೃಷ್ಟಾಂತಿಸಲಿಕ್ಕಾಗಿ, ಹದ್ದಿನ ವೈಶಿಷ್ಟ್ಯಗಳನ್ನು ಪರೋಕ್ಷವಾಗಿ ಸೂಚಿಸಿದರು. ಹೀಗೆ ಶಾಸ್ತ್ರವಚನಗಳಲ್ಲಿ ತೀರ ಅನೇಕಾವರ್ತಿ ಪ್ರಸ್ತಾಪಿಸಲ್ಪಟ್ಟಿರುವ ಪಕ್ಷಿಯಾದ ಹದ್ದು, ವಿವೇಕ, ದೈವಿಕ ಸಂರಕ್ಷಣೆ, ಮತ್ತು ಚುರುಕುತನದಂತಹ ವಿಷಯಗಳನ್ನು ಸಾಂಕೇತಿಕವಾಗಿ ನಿರೂಪಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿದೆ.
ಒಂದು ಹದ್ದಿನ ಕಣ್ಣು
ಹದ್ದಿನ ತೀಕ್ಷ್ಣ ದೃಷ್ಟಿಶಕ್ತಿಯು ಯಾವಾಗಲೂ ಲೋಕಪ್ರಸಿದ್ಧವಾದ ಗಾದೆಯ ಮಾತಾಗಿದೆ. ಹೊಂಬಣ್ಣದ ಹದ್ದು ಐದು ಕಿಲೊಗ್ರ್ಯಾಮ್ಗಳಿಗಿಂತಲೂ ಹೆಚ್ಚು ತೂಕವುಳ್ಳದ್ದಾಗಿರುವುದು ವಿರಳವಾಗಿರುವುದಾದರೂ, ಅದರ ಕಣ್ಣು ವಾಸ್ತವವಾಗಿ ಮನುಷ್ಯನೊಬ್ಬನ ಕಣ್ಣಿಗಿಂತಲೂ ಹೆಚ್ಚು ದೊಡ್ಡದಾಗಿದೆ, ಮತ್ತು ಅದರ ದೃಷ್ಟಿಶಕ್ತಿಯು ಹೆಚ್ಚು ತೀಕ್ಷ್ಣವಾಗಿದೆ. ಸ್ವತಃ ಯೆಹೋವನು, ತನ್ನ ಆಹಾರವನ್ನು ಕಂಡುಹಿಡಿಯುವ ಹದ್ದಿನ ಸಾಮರ್ಥ್ಯವನ್ನು ಯೋಬನಿಗೆ ವರ್ಣಿಸುತ್ತಾ ಹೇಳಿದ್ದು: “ಅತಿ ದೂರದಲ್ಲಿರುವುದನ್ನೂ ಅದರ ಕಣ್ಣುಗಳು ನೋಡುತ್ತಾ ಇರುತ್ತವೆ.” (ಯೋಬ 39:27, 29, NW) “ಒಮ್ಮೆ ಒಂದು ಹದ್ದು, ಐದು ಕಿಲೊಮೀಟರ್ಗಳಷ್ಟು ದೂರದಲ್ಲಿರುವ ಒಂದು ಸರೋವರದಲ್ಲಿ ತೇಲುತ್ತಿರುವ ಸತ್ತ ಮೀನೊಂದನ್ನು ಕಂಡಾಗ, ನಿರ್ದಿಷ್ಟವಾದ ಅದೇ ಸ್ಥಳಕ್ಕೆ ಕರ್ಣೀಯವಾಗಿ ಧುಮುಕಿತು. ಮನುಷ್ಯನೊಬ್ಬನು ನೋಡಸಾಧ್ಯವಿರುವುದಕ್ಕಿಂತಲೂ ತೀರ ಹೆಚ್ಚು ದೂರದಲ್ಲಿರುವ ಒಂದು ಸಣ್ಣ ವಸ್ತುವನ್ನು ಆ ಹದ್ದು ನೋಡಶಕ್ತವಾಗಿತ್ತು ಮಾತ್ರವಲ್ಲದೆ, ಆ ಪಕ್ಷಿಯು ತನ್ನ ಮೂರು ಮೈಲುದ್ದದ ಧುಮುಕುವಿಕೆಯಲ್ಲಿ ಸತತವಾಗಿ ಮೀನಿನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿತು,” ಎಂದು ಆ್ಯಲಿಸ್ ಪಾರ್ಮಿಲೀ, ಆಲ್ ದ ಬರ್ಡ್ಸ್ ಆಫ್ ದ ಬೈಬಲ್ ಎಂಬ ತಮ್ಮ ಪುಸ್ತಕದಲ್ಲಿ ವರದಿಸುತ್ತಾರೆ.
ತನ್ನ ತೀಕ್ಷ್ಣ ದೃಷ್ಟಿಶಕ್ತಿಯ ಕಾರಣದಿಂದಾಗಿ ಹದ್ದು, ಯೆಹೋವನ ಪ್ರಮುಖ ಗುಣಗಳಲ್ಲಿ ಒಂದಾದ ವಿವೇಕಕ್ಕೆ ಸರಿಹೊಂದುವ ಸಂಕೇತವಾಗಿದೆ. (ಹೋಲಿಸಿರಿ ಯೆಹೆಜ್ಕೇಲ 1:10; ಪ್ರಕಟನೆ 4:7.) ಹದ್ದು ವಿವೇಕಕ್ಕೆ ಸರಿಹೊಂದುವ ಸಂಕೇತವಾಗಿದೆ ಏಕೆ? ನಾವು ಕೈಕೊಳ್ಳಬಹುದಾದ ಯಾವುದೇ ಕ್ರಿಯೆಯ ಪರಿಣಾಮಗಳನ್ನು ಮುಂಗಾಣುವುದು, ವಿವೇಕವನ್ನು ಒಳಗೊಳ್ಳುತ್ತದೆ. (ಜ್ಞಾನೋಕ್ತಿ 22:3) ಒಂದು ಬಿರುಗಾಳಿಯ ಸಂಭವನೀಯತೆಯನ್ನು ಮುಂಗಂಡು, ಬಂಡೆಯೊಂದರ ಮೇಲೆ ತನ್ನ ಮನೆಯನ್ನು ಕಟ್ಟಿಕೊಂಡ, ಯೇಸುವಿನ ದೃಷ್ಟಾಂತದಲ್ಲಿನ ವಿವೇಕಿಯಾದ ಮನುಷ್ಯನಂತೆಯೇ, ಬಹು ದೂರಕ್ಕೆ ನೋಡುವ ಸಾಮರ್ಥ್ಯವನ್ನು ಹೊಂದಿರುವ ಹದ್ದು, ಬಹುದೂರದಿಂದಲೇ ಅಪಾಯವನ್ನು ಕಂಡುಹಿಡಿದು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಲ್ಲದು. (ಮತ್ತಾಯ 7:24, 25) ಆಸಕ್ತಿಕರವಾಗಿಯೇ, ಸ್ಪ್ಯಾನಿಷ್ ಭಾಷೆಯಲ್ಲಿ, ಯಾರಾದರೊಬ್ಬರನ್ನು ಒಂದು ಹದ್ದಿನೋಪಾದಿ ವರ್ಣಿಸುವುದರ ಅರ್ಥ, ಅವನಿಗೆ ಒಳನೋಟ ಅಥವಾ ವಿವೇಚನಾಶಕ್ತಿಯಿದೆ ಎಂಬುದಾಗಿದೆ.
ಒಂದು ಹದ್ದನ್ನು ತೀರ ಹತ್ತಿರದಿಂದ ನೋಡುವ ಅವಕಾಶವು ನಿಮಗೆ ಎಂದಾದರೂ ಇರುವಲ್ಲಿ, ಅದು ತನ್ನ ಕಣ್ಣುಗಳನ್ನು ಉಪಯೋಗಿಸುವ ರೀತಿಯನ್ನು ಗಮನಿಸಿರಿ. ಅದು ನಿಮ್ಮ ಕಡೆಗೆ ಅವಸರದಿಂದ ನೋಡುವುದಿಲ್ಲ; ಬದಲಾಗಿ, ಅದು ನಿಮ್ಮ ತೋರಿಕೆಯ ಪ್ರತಿಯೊಂದು ವಿವರವನ್ನು ಸೂಕ್ಷ್ಮವಾಗಿ ಪರಿಶೋಧಿಸುವಂತೆ ತೋರುತ್ತದೆ. ತದ್ರೀತಿಯಲ್ಲಿ, ಒಬ್ಬ ವಿವೇಕಿ ಮನುಷ್ಯನು, ತನ್ನ ಸಹಜ ಪ್ರವೃತ್ತಿ ಅಥವಾ ತನ್ನ ಭಾವನೆಗಳ ಮೇಲೆ ಭರವಸೆಯಿಡುವುದಕ್ಕೆ ಬದಲಾಗಿ, ಒಂದು ನಿರ್ಧಾರವನ್ನು ಮಾಡುವುದಕ್ಕೆ ಮೊದಲು ಆ ವಿಷಯವನ್ನು ಜಾಗರೂಕತೆಯಿಂದ ವಿಶ್ಲೇಷಿಸುತ್ತಾನೆ. (ಜ್ಞಾನೋಕ್ತಿ 28:26) ಹದ್ದಿನ ತೀಕ್ಷ್ಣ ದೃಷ್ಟಿಶಕ್ತಿಯು, ಅದನ್ನು ವಿವೇಕದ ದೈವಿಕ ಗುಣದ ಒಂದು ಯೋಗ್ಯವಾದ ಸಂಕೇತವನ್ನಾಗಿ ಮಾಡುವಾಗ, ಅದರ ಘನಗಾಂಭೀರ್ಯವುಳ್ಳ ಹಾರಾಟವು ಸಹ ಬೈಬಲ್ ಬರಹಗಾರರಿಂದ ಸಾಂಕೇತಿಕವಾಗಿ ಉಪಯೋಗಿಸಲ್ಪಟ್ಟಿದೆ.
“ಆಕಾಶದಲ್ಲಿ ಹದ್ದಿನ ಹಾದಿ”
“ಆಕಾಶದಲ್ಲಿ ಹದ್ದಿನ ಹಾದಿ”ಯು, ಅದರ ವೇಗ ಹಾಗೂ ಮುಂದಾಗಿ ಯೋಜಿಸಲ್ಪಟ್ಟ ಹಾದಿಯನ್ನು ಅನುಸರಿಸದೆ ಮತ್ತು ಯಾವುದೇ ಜಾಡನ್ನು ಬಿಟ್ಟುಹೋಗದೆ, ತೀರ ನಿರಾಯಾಸವಾಗಿ ಹಾರುವಂತೆ ತೋರುವ ರೀತಿಗೆ—ಎರಡಕ್ಕೂ—ಗಮನಾರ್ಹವಾಗಿದೆ. (ಜ್ಞಾನೋಕ್ತಿ 30:19) ಹದ್ದಿನ ಚುರುಕುತನವು, ಪ್ರಲಾಪಗಳು 4:19ರಲ್ಲಿ ನಿರ್ದೇಶಿಸಲ್ಪಟ್ಟಿದೆ; ಅಲ್ಲಿ ಬಾಬೆಲಿನ ಸೈನಿಕರು ಹೀಗೆ ವರ್ಣಿಸಲ್ಪಟ್ಟಿದ್ದಾರೆ: “ನಮ್ಮನ್ನು ಹಿಂದಟ್ಟಿದವರು ಆಕಾಶದ ಹದ್ದುಗಳಿಗಿಂತ ವೇಗಿಗಳಾಗಿದ್ದರು; ಬೆಟ್ಟಗಳ ಮೇಲೆ ನಮ್ಮನ್ನು ಬೆನ್ನಹತ್ತಿ ಅರಣ್ಯದಲ್ಲಿ ಹೊಂಚುಹಾಕಿದರು.” ಕೆಲವು ವರದಿಗಳಿಗನುಸಾರ, ಮೇಲ್ಗಡೆ ವೃತ್ತಾಕಾರವಾಗಿ ಸುತ್ತುತ್ತಿರುವ ಒಂದು ಹದ್ದು ತನ್ನ ಆಹಾರಪ್ರಾಣಿಯನ್ನು ಕಂಡುಕೊಳ್ಳುವಾಗ, ಅದು ತನ್ನ ರೆಕ್ಕೆಗಳನ್ನು ಕೋನೀಕರಿಸಿ, ಕಡಿದಾದ ಧುಮುಕುವಿಕೆಯನ್ನು ಮಾಡುತ್ತದೆ; ಆ ಸಮಯದಲ್ಲಿ ಅದು ತಾಸೊಂದಕ್ಕೆ 130 ಕಿಲೊಮೀಟರ್ಗಳಷ್ಟರ ವರೆಗಿನ ವೇಗವನ್ನು ಪಡೆಯಬಲ್ಲದು. ಶಾಸ್ತ್ರವಚನಗಳು ಹದ್ದನ್ನು ವೇಗಕ್ಕೆ—ವಿಶೇಷವಾಗಿ ಮಿಲಿಟರಿ ಸೇನಾಪಡೆಗೆ ಸಂಬಂಧಿಸಿ—ಸಮಾನಾರ್ಥಕ ಪದವಾಗಿ ಉಪಯೋಗಿಸುವುದು ಆಶ್ಚರ್ಯಕರವೇನಲ್ಲ.—2 ಸಮುವೇಲ 1:23; ಯೆರೆಮೀಯ 4:13; 49:22.
ಮತ್ತೊಂದು ಕಡೆಯಲ್ಲಿ, ಯೆಶಾಯನು ಹದ್ದಿನ ನಿರಾಯಾಸಕರವಾದ ಹಾರಾಟಕ್ಕೆ ನಿರ್ದೇಶಿಸುತ್ತಾನೆ. “ಯೆಹೋವನಲ್ಲಿ ನಿರೀಕ್ಷೆಯನ್ನಿಡುತ್ತಿರುವವರು ಪುನಃ ಬಲವನ್ನು ಪಡೆದುಕೊಳ್ಳುವರು. ಅವರು ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರುವರು. ಅವರು ಓಡುವರು ಮತ್ತು ದಣಿಯುವುದಿಲ್ಲ; ಅವರು ನಡೆಯುವರು ಮತ್ತು ಬಳಲುವುದಿಲ್ಲ.” (ಯೆಶಾಯ 40:31, NW) ಹದ್ದಿನ ತೇಲುವ ಹಾರಿಕೆಯ ರಹಸ್ಯವೇನು? ಹದ್ದು ಉಷ್ಣಗಾಳಿಗಳನ್ನು, ಅಥವಾ ಬಿಸಿಕಾವಿನ ಗಾಳಿಯ ಸಾಲುಗಳನ್ನು ಉಪಯೋಗಿಸುವುದರಿಂದ, ಮೇಲೇರುವುದು ಕಡಿಮೆ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಉಷ್ಣಗಾಳಿಗಳು ಅದೃಶ್ಯವಾಗಿವೆ, ಆದರೆ ಹದ್ದು ಅವುಗಳನ್ನು ಕಂಡುಹಿಡಿಯುವುದರಲ್ಲಿ ನಿಪುಣವಾಗಿದೆ. ಒಮ್ಮೆ ಉಷ್ಣಗಾಳಿಯನ್ನು ಕಂಡುಕೊಂಡ ನಂತರ, ಹದ್ದು ತನ್ನ ರೆಕ್ಕೆಗಳನ್ನೂ ಬಾಲವನ್ನೂ ಅಗಲವಾಗಿ ಚಾಚಿ, ಹದ್ದನ್ನು ಹೆಚ್ಚೆಚ್ಚು ಎತ್ತರಕ್ಕೆ ಕೊಂಡೊಯ್ಯುವ ಬಿಸಿಕಾವಿನ ಗಾಳಿಯ ಸಾಲಿನೊಳಗೆ ವೃತ್ತಾಕಾರವಾಗಿ ಸುತ್ತುತ್ತದೆ. ಸಾಕಷ್ಟು ಎತ್ತರವನ್ನು ತಲಪಿದಾಗ, ಅದು ಮುಂದಿನ ಉಷ್ಣಗಾಳಿಗೆ ಜಾರಿಕೊಂಡುಹೋಗುತ್ತದೆ, ಅಲ್ಲಿ ಈ ಪ್ರಕ್ರಿಯೆಯು ಪುನರಾವರ್ತಿಸಲ್ಪಡುತ್ತದೆ. ಈ ರೀತಿಯಲ್ಲಿ ಹದ್ದು, ಶಕ್ತಿಯ ಕಡಿಮೆ ಖರ್ಚಿನೊಂದಿಗೆ ಅನೇಕ ತಾಸುಗಳ ವರೆಗೆ ಆಕಾಶದ ಎತ್ತರದಲ್ಲಿ ಉಳಿಯಬಲ್ಲದು.
ಇಸ್ರಾಯೇಲಿನಲ್ಲಿ, ಹದ್ದುಗಳು ವಿಶೇಷವಾಗಿ ಕೆಂಪು ಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರ್ನಿಂದ, ಉತ್ತರ ಭಾಗದಲ್ಲಿನ ದಾನ್ನ ವರೆಗೆ ವಿಸ್ತೃತವಾಗಿರುವ ರಿಫ್ಟ್ ಕಣಿವೆಯಲ್ಲಿ ಒಂದು ಚಿರಪರಿಚಿತ ನೋಟವಾಗಿವೆ. ವಸಂತಕಾಲ ಹಾಗೂ ಶರತ್ಕಾಲದಲ್ಲಿ ಅವುಗಳು ವಲಸೆಹೋಗುವಾಗ, ವಿಶೇಷವಾಗಿ ಬಹುಸಂಖ್ಯಾತ ಹದ್ದುಗಳು ಅಲ್ಲಿರುತ್ತವೆ. ಕೆಲವು ವರ್ಷಗಳಲ್ಲಿ ಬಹುಮಟ್ಟಿಗೆ 1,00,000 ಹದ್ದುಗಳು ಎಣಿಕೆಮಾಡಲ್ಪಟ್ಟಿವೆ. ಬೆಳಗ್ಗಿನ ಸೂರ್ಯನು ಗಾಳಿಯನ್ನು ಬೆಚ್ಚಗೆ ಮಾಡುವಾಗ, ರಿಫ್ಟ್ ಕಣಿವೆಯ ಅಂಚಿನಲ್ಲಿರುವ ಕಡಿದಾದ ಬಂಡೆಗಳ ಮೇಲೆ ನೂರಾರು ಮಾಂಸಾಹಾರಿ ಪಕ್ಷಿಗಳು ಹಾರಾಡುತ್ತಿರುವುದನ್ನು ನೋಡಸಾಧ್ಯವಿದೆ.
ನಾವು ನಮ್ಮ ಕೆಲಸದೊಂದಿಗೆ ಮುಂದುವರಿಯಸಾಧ್ಯವಾಗುವಂತೆ, ಯೆಹೋವನ ಬಲವು ಹೇಗೆ ನಮ್ಮನ್ನು ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಮೇಲೆತ್ತಬಲ್ಲದೆಂಬುದಕ್ಕೆ, ಹದ್ದಿನ ನಿರಾಯಾಸಕರವಾದ ಹಾರಾಟವು ಒಂದು ಅತ್ಯುತ್ತಮವಾದ ದೃಷ್ಟಾಂತವಾಗಿದೆ. ಹದ್ದು ತನ್ನ ಸ್ವಂತ ಬಲವನ್ನು ಉಪಯೋಗಿಸಿ, ಅಷ್ಟು ಎತ್ತರಕ್ಕೆ ಹಾರಲು ಅಸಾಧ್ಯವಾಗಿರುವಂತೆಯೇ, ನಾವು ನಮ್ಮ ಸ್ವಂತ ಸಾಮರ್ಥ್ಯಗಳ ಮೇಲೆ ಆತುಕೊಳ್ಳುವುದಾದರೆ, ನಿಭಾಯಿಸಲಾರೆವು. “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅಪೊಸ್ತಲ ಪೌಲನು ವಿವರಿಸಿದನು. (ಫಿಲಿಪ್ಪಿ 4:13) ಅದೃಶ್ಯ ಉಷ್ಣಗಾಳಿಗಳಿಗಾಗಿ ಸತತವಾಗಿ ಅನ್ವೇಷಣೆ ನಡೆಸುವ ಒಂದು ಹದ್ದಿನಂತೆ, ನಾವು ನಮ್ಮ ಕಟ್ಟಾಸಕ್ತಿಯ ನಿರಂತರ ಪ್ರಾರ್ಥನೆಗಳ ಮುಖಾಂತರವಾಗಿ ಯೆಹೋವನ ಅದೃಶ್ಯ ಕಾರ್ಯಕಾರಿ ಶಕ್ತಿಗಾಗಿ “ಕೇಳಿಕೊಳ್ಳುತ್ತಾ” ಇರುತ್ತೇವೆ.—ಲೂಕ 11:9, 13, NW.
ವಲಸೆಹೋಗುತ್ತಿರುವ ಹದ್ದುಗಳು, ಅನೇಕವೇಳೆ ಇತರ ಹಿಂಸ್ರ ಪಕ್ಷಿಗಳನ್ನು ಗಮನಿಸುವ ಮೂಲಕ ಉಷ್ಣಗಾಳಿಗಳನ್ನು ಕಂಡುಕೊಳ್ಳುತ್ತವೆ. ಒಂದು ಸಂದರ್ಭದಲ್ಲಿ 250 ಹದ್ದುಗಳು ಮತ್ತು ರಣಹದ್ದುಗಳು, ಒಂದೇ ಉಷ್ಣಗಾಳಿಯಲ್ಲಿ ಮೇಲ್ಮುಖವಾಗಿ ವೃತ್ತಾಕಾರದಲ್ಲಿ ಸುತ್ತುತ್ತಿದ್ದವು, ಎಂದು ಪ್ರಕೃತಿಶಾಸ್ತ್ರಜ್ಞರಾದ ಡಿ. ಆರ್. ಮ್ಯಾಕಿಂಟಷ್ ವರದಿಸಿದರು. ತದ್ರೀತಿಯಲ್ಲಿ ಇಂದು ಕ್ರೈಸ್ತರು, ಇತರ ದೇವಭಕ್ತಿಯುಳ್ಳ ಸೇವಕರ ನಂಬಿಗಸ್ತ ಮಾದರಿಗಳನ್ನು ಅನುಕರಿಸುವ ಮೂಲಕ ಯೆಹೋವನ ಬಲದ ಮೇಲೆ ಆತುಕೊಳ್ಳಲು ಕಲಿಯಬಲ್ಲರು.—ಹೋಲಿಸಿರಿ 1 ಕೊರಿಂಥ 11:1.
ಒಂದು ಹದ್ದಿನ ರೆಕ್ಕೆಗಳ ನೆರಳಿನಲ್ಲಿ
ಒಂದು ಹದ್ದಿನ ಜೀವಿತದ ಅತ್ಯಂತ ಅಪಾಯಕರವಾದ ಕಾಲಾವಧಿಗಳಲ್ಲಿ ಒಂದು, ಅದು ಹಾರಲು ಕಲಿಯುವಾಗಲೇ ಆಗಿದೆ. ಬಹುಸಂಖ್ಯಾತ ಹದ್ದುಗಳು ಈ ಪ್ರಯತ್ನದಲ್ಲಿ ಸಾಯುತ್ತವೆ. ಅನನುಭವಿ ಇಸ್ರಾಯೇಲ್ ಜನಾಂಗವು ಐಗುಪ್ತದಿಂದ ವಿಭಾಗಿತವಾದಾಗ, ಅದು ಸಹ ಅಪಾಯದಲ್ಲಿತ್ತು. ಹೀಗೆ ಯೆಹೋವನು ಇಸ್ರಾಯೇಲ್ಯರಿಗೆ ನುಡಿದ ಮಾತುಗಳು ಅತ್ಯಂತ ಹೊಂದಿಕೆಯುಳ್ಳವುಗಳಾಗಿದ್ದವು: “ನಾನು ಐಗುಪ್ತ್ಯರಿಗೆ ಏನು ಮಾಡಿದೆನೋ, ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ನನ್ನ ಸ್ಥಳಕ್ಕೆ ಹೇಗೆ ಸೇರಿಸಿದೆನೋ ಇದನ್ನೆಲ್ಲಾ ನೀವು ನೋಡಿದ್ದೀರಷ್ಟೆ.” (ವಿಮೋಚನಕಾಂಡ 19:4) ಎಳೆಯ ಮರಿಯು ಹಾರುವ ತನ್ನ ಆರಂಭದ ಪ್ರಯತ್ನಗಳಲ್ಲಿ ದಢೀರನೆ ಬೀಳದಿರುವಂತೆ, ಒಂದು ಎಳೆಯ ಪಕ್ಷಿಯನ್ನು ಅಲ್ಪಾವಧಿಯ ವರೆಗೆ ತನ್ನ ಬೆನ್ನಿನ ಮೇಲೆ ಕೊಂಡೊಯ್ಯುವ ಹದ್ದುಗಳ ಕುರಿತಾದ ವರದಿಗಳು ಇವೆ. ಅಂತಹ ವರದಿಗಳ ಕುರಿತಾಗಿ ಜಿ. ಆರ್. ಡ್ರೈವರ್, ಪ್ಯಾಲೆಸ್ಟೀನ್ ಎಕ್ಸ್ಪ್ಲೊರೇಷ್ನ್ ಕ್ವಾರ್ಟರ್ಲಿಯಲ್ಲಿ ಹೇಳಿಕೆ ನೀಡುತ್ತಾ ನುಡಿದದ್ದು: “ಆಗಿನ [ಬೈಬಲ್ ಸಂಬಂಧಿತ] ಚಿತ್ರಣವು, ಒಂದು ಊಹಾತ್ಮಕ ಕಲ್ಪನೆಯಾಗಿರುವುದಿಲ್ಲ, ಬದಲಾಗಿ ಇದು ವಾಸ್ತವವಾದ ಸಂಗತಿಯ ಮೇಲಾಧಾರಿತವಾಗಿದೆ.”
ಹದ್ದುಗಳು, ಬೇರೆ ವಿಧಗಳಲ್ಲಿಯೂ ಆದರ್ಶಪ್ರಾಯ ಹೆತ್ತವರಾಗಿವೆ. ಅವುಗಳು ಗೂಡಿನ ಮರಿಗಳಿಗೆ ಕ್ರಮವಾಗಿ ಆಹಾರಗಳನ್ನು ಒದಗಿಸುವುದು ಮಾತ್ರವಲ್ಲ, ಮರಿ ಹದ್ದು ಆಹಾರವನ್ನು ನುಂಗಸಾಧ್ಯವಾಗುವಂತೆ, ಗಂಡು ಹದ್ದು ಗೂಡಿಗೆ ತರುವ ಮಾಂಸವನ್ನು, ತಾಯಿ ಹದ್ದು ಜಾಗರೂಕತೆಯಿಂದ ತುಂಡುಮಾಡುತ್ತದೆ ಸಹ. ಅವುಗಳ ಗೂಡುಗಳು ಸಾಮಾನ್ಯವಾಗಿ ಕಡಿದಾದ ಬಂಡೆಗಳ ಮೇಲೆ ಅಥವಾ ಎತ್ತರವಾದ ಮರಗಳಲ್ಲಿ ಕಟ್ಟಲ್ಪಡುವ ಕಾರಣದಿಂದ, ಎಳೆಯ ಪಕ್ಷಿಗಳು ಘಟಕಾಂಶಗಳ ಕಾರ್ಯಾಚರಣೆಯಿಂದ ಉಂಟುಮಾಡಲ್ಪಡುವ ಹವಾಮಾನ ಸ್ಥಿತಿಗಳಿಗೆ ಒಡ್ಡಲ್ಪಡುತ್ತವೆ. (ಯೋಬ 39:27, 28) ಬೈಬಲ್ ದೇಶಗಳಿಗೆ ಸಾಮಾನ್ಯವಾಗಿರುವ ಸುಡುತ್ತಿರುವ ಸೂರ್ಯನು, ಎಳೆಯ ಪಕ್ಷಿಯು ತನ್ನ ಹೆತ್ತವರಿಂದ ಪರಾಮರಿಕೆ ಮಾಡಲ್ಪಡದಿರುವಲ್ಲಿ, ಅದಕ್ಕೆ ಮರಣವನ್ನುಂಟುಮಾಡಸಾಧ್ಯವಿತ್ತು. ತನ್ನ ಕೋಮಲವಾದ ಗೂಡಿನ ಮರಿಗೆ ನೆರಳನ್ನು ಒದಗಿಸಲಿಕ್ಕಾಗಿ, ವಯಸ್ಕ ಹದ್ದು ತನ್ನ ರೆಕ್ಕೆಗಳನ್ನು ಅಗಲವಾಗಿ—ಕೆಲವೊಮ್ಮೆ ಒಂದು ಸಲಕ್ಕೆ ಅನೇಕ ತಾಸುಗಳ ವರೆಗೆ—ಚಾಚುತ್ತದೆ.
ಹೀಗೆ ಶಾಸ್ತ್ರವಚನಗಳಲ್ಲಿ ಹದ್ದೊಂದರ ರೆಕ್ಕೆಗಳು, ದೈವಿಕ ಸಂರಕ್ಷಣೆಯ ಒಂದು ಸಂಕೇತವಾಗಿ ಉಪಯೋಗಿಸಲ್ಪಟ್ಟಿರುವುದು ಬಹಳ ಸೂಕ್ತವಾದದ್ದಾಗಿದೆ. ಇಸ್ರಾಯೇಲ್ಯರನ್ನು ಅವರ ಅರಣ್ಯವಾಸದ ಪ್ರಯಾಣದ ಸಮಯದಲ್ಲಿ ಯೆಹೋವನು ಹೇಗೆ ಸಂರಕ್ಷಿಸಿದನು ಎಂಬುದನ್ನು ಧರ್ಮೋಪದೇಶಕಾಂಡ 32:9-12 ಹೀಗೆ ವರ್ಣಿಸುತ್ತದೆ: “ಇಸ್ರಾಯೇಲ್ಯರು ಮಾತ್ರ ಯೆಹೋವನ ಸ್ವಂತ ಜನರಾದದ್ದೂ; ಯಾಕೋಬ್ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದದ್ದೂ; ಆತನು ಅವರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದ್ದೂ; ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ; ಯಾವ ಅನ್ಯದೇವರಾದರೂ ಇಲ್ಲದೆ ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದದ್ದೂ.” ನಾವು ಯೆಹೋವನಲ್ಲಿ ಭರವಸೆಯಿಡುವುದಾದರೆ, ಆತನು ನಮಗೆ ಅದೇ ರೀತಿಯ ಪ್ರೀತಿಪೂರ್ಣ ಸಂರಕ್ಷಣೆಯನ್ನು ಕೊಡುವನು.
ತಪ್ಪಿಸಿಕೊಳ್ಳುವ ಮಾರ್ಗ
ಕೆಲವೊಮ್ಮೆ ನಾವು ಸಮಸ್ಯೆಗಳಿಂದ ಎದುರಿಸಲ್ಪಡುವಾಗ, ನಮ್ಮ ಎಲ್ಲಾ ಕಷ್ಟತೊಂದರೆಗಳಿಂದ ದೂರ ಹಾರಲಿಕ್ಕಾಗಿ ಬಯಸುತ್ತಿರುವ ಸನ್ನಿವೇಶದಲ್ಲಿ ನಾವು ನಮ್ಮನ್ನು ಕಂಡುಕೊಳ್ಳಬಹುದು. ದಾವೀದನಿಗನಿಸಿದ್ದೂ ನಿರ್ದಿಷ್ಟವಾಗಿ ಅದೇ ರೀತಿಯಾಗಿತ್ತು. (ಹೋಲಿಸಿರಿ ಕೀರ್ತನೆ 55:6, 7.) ಆದರೆ ಈ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ಮತ್ತು ಕಷ್ಟಾನುಭವಗಳನ್ನು ನಾವು ಎದುರಿಸುತ್ತಿರುವಾಗ, ಯೆಹೋವನು ನಮಗೆ ಸಹಾಯ ಮಾಡುವ ವಾಗ್ದಾನವನ್ನು ಮಾಡಿರುವುದಾದರೂ, ಆತನು ಸಂಪೂರ್ಣವಾದ ಒಂದು ತಪ್ಪಿಸಿಕೊಳ್ಳುವಿಕೆಯನ್ನು ಒದಗಿಸುವುದಿಲ್ಲ. ನಮಗೆ ಈ ಬೈಬಲ್ ಆಶ್ವಾಸನೆಯಿದೆ: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”—1 ಕೊರಿಂಥ 10:13.
“ತಪ್ಪಿಸಿಕೊಳ್ಳುವ ಮಾರ್ಗ” ಅಥವಾ “ತಪ್ಪಿಸಿಕೊಳ್ಳಲಿಕ್ಕಾಗಿ ಮಾರ್ಗ”ವು (ಕಿಂಗ್ ಜೇಮ್ಸ್ ವರ್ಷನ್), ಯೆಹೋವನಲ್ಲಿ ಭರವಸೆಯನ್ನಿಡಲು ಕಲಿಯುವುದನ್ನು ಒಳಗೊಳ್ಳುತ್ತದೆ. ಈ ಲೇಖನದ ಆರಂಭದಲ್ಲಿ ಯಾರ ಹೇಳಿಕೆಗಳು ಉಲ್ಲೇಖಿಸಲ್ಪಟ್ಟಿದ್ದವೂ, ಆ ಮ್ಯಾಕ್ಸ್ ಲೆಬ್ಸ್ಟರ್ ಕಂಡುಕೊಂಡದ್ದು ಇದೇ ಆಗಿದೆ. ಕೂಟ ಶಿಬಿರಗಳಲ್ಲಿ ಅವನು ಕಳೆದ ಅನೇಕ ವರ್ಷಗಳ ಸಮಯದಲ್ಲಿ, ಅವನು ಯೆಹೋವನನ್ನು ತಿಳಿದುಕೊಂಡು, ಆತನ ಮೇಲೆ ಆತುಕೊಂಡನು. ಮ್ಯಾಕ್ಸ್ ಕಂಡುಕೊಂಡಂತೆ, ಯೆಹೋವನು ತನ್ನ ವಾಕ್ಯ, ತನ್ನ ಆತ್ಮ, ಮತ್ತು ತನ್ನ ಸಂಸ್ಥೆಯ ಮೂಲಕ ನಮ್ಮನ್ನು ಬಲಪಡಿಸುತ್ತಾನೆ. ಶಿಬಿರಗಳಲ್ಲಿ ಸಹ, ಶಾಸ್ತ್ರೀಯ ಅಭಿಪ್ರಾಯಗಳನ್ನು ಹಾಗೂ ಲಭ್ಯವಿದ್ದಂತಹ ಯಾವುದೇ ಬೈಬಲ್ ಸಾಹಿತ್ಯವನ್ನು ಹಂಚಿಕೊಳ್ಳುತ್ತಾ, ಸಾಕ್ಷಿಗಳು ಜೊತೆ ವಿಶ್ವಾಸಿಗಳನ್ನು ಕಂಡುಕೊಂಡು, ಅವರಿಗೆ ಆತ್ಮಿಕ ಸಹಾಯವನ್ನು ನೀಡಿದರು. ಮತ್ತು ನಂಬಿಗಸ್ತರಾಗಿ ಪಾರಾಗಿ ಉಳಿದವರು, ಪದೇ ಪದೇ ಸಾಕ್ಷ್ಯವನ್ನೊದಗಿಸಿದಂತೆ, ಯೆಹೋವನು ನಿಶ್ಚಯವಾಗಿಯೂ ಅವರನ್ನು ಬಲಪಡಿಸಿದ್ದಾನೆ. “ಸಹಾಯ ಮಾಡುವಂತೆ ನಾನು ಯೆಹೋವನಿಗೆ ನಿರಂತರವಾಗಿ ಕೇಳಿಕೊಂಡೆ, ಮತ್ತು ಆತನ ಆತ್ಮವು ನನ್ನನ್ನು ಪೋಷಿಸಿತು” ಎಂದು ಮ್ಯಾಕ್ಸ್ ವಿವರಿಸುತ್ತಾರೆ.
ನಾವು ಯಾವುದೇ ಪರೀಕ್ಷೆಯನ್ನು ಎದುರಿಸಲಿ, ನಾವು ದೇವರ ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳುತ್ತಾ ಇರುವುದಾದರೆ, ನಾವು ಅದರ ಮೇಲೆ ತದ್ರೀತಿಯಲ್ಲಿ ಆತುಕೊಳ್ಳಬಲ್ಲೆವು. (ಮತ್ತಾಯ 7:7-11) ಈ “ಸಾಮಾನ್ಯವಾಗಿರುವುದಕ್ಕಿಂತಲೂ ಅತೀತವಾಗಿರುವ ಬಲ”ದಿಂದ ಚೈತನ್ಯಗೊಳಿಸಲ್ಪಟ್ಟು, ನಮ್ಮ ಸಮಸ್ಯೆಗಳಿಂದ ಪೂರ್ಣವಾಗಿ ಕಂಗೆಡಿಸಲ್ಪಡುವುದಕ್ಕೆ ಬದಲಾಗಿ, ನಾವು ಬಹಳ ಎತ್ತರಕ್ಕೆ ಹಾರುವೆವು. ನಾವು ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರುವೆವು, ಮತ್ತು ನಾವು ಬಳಲುವುದಿಲ್ಲ. ನಾವು ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರುವೆವು.—2 ಕೊರಿಂಥ 4:7, NW; ಯೆಶಾಯ 40:31.
[ಪುಟ 10 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅದು ನಿಮ್ಮ ಕಡೆಗೆ ಅವಸರದಿಂದ ನೋಡುವುದಿಲ್ಲ
[ಪುಟ 9 ರಲ್ಲಿರುವ ಚಿತ್ರ ಕೃಪೆ]
Foto: Cortesía de GREFA
[ಪುಟ 10 ರಲ್ಲಿರುವ ಚಿತ್ರ ಕೃಪೆ]
Foto: Cortesía de Zoo de Madrid