ಯೆಹೋವ—ನೀತಿ ಮತ್ತು ನ್ಯಾಯವನ್ನು ಪ್ರೀತಿಸುವವನು
ತನ್ನ ನಗರದ ಮಕ್ಕಳು ಇಷ್ಟೊಂದು ಕಷ್ಟಾನುಭವವನ್ನು ಏಕೆ ತಾಳಿಕೊಳ್ಳಬೇಕೆಂದು, ಸಾರಯೆವೊದಲ್ಲಿರುವ ಒಬ್ಬ ಎಳೆಯ ಹುಡುಗಿಯು ತನ್ನನ್ನೇ ಕೇಳಿಕೊಳ್ಳುತ್ತಾಳೆ. “ಇಷ್ಟೊಂದು ಕಷ್ಟಾನುಭವಕ್ಕೆ ಪಾತ್ರರಾಗಲು ನಾವೇನೂ ಮಾಡಿರುವುದಿಲ್ಲ. ನಾವು ನಿರ್ದೋಷಿಗಳು,” ಎಂದು ಆಕೆ ಹೇಳುತ್ತಾಳೆ. ಕ್ಷೋಭೆಗೊಂಡ ಆರ್ಜೆಂಟೀನದ ತಾಯಂದಿರು, ತಮ್ಮ ಪುತ್ರರ ಕಾಣೆಯಾಗುವಿಕೆಯ ವಿಷಯದ ಕುರಿತು ಪ್ರತಿಭಟಿಸುತ್ತಾ, ಸುಮಾರು 15 ವರ್ಷಗಳ ಕಾಲ ಬ್ವೇನಸ್ ಆ್ಯರಿಸ್ನಲ್ಲಿರುವ ಒಂದು ಸಾರ್ವಜನಿಕ ಚೌಕದಲ್ಲಿ ಪ್ರತಿಭಟನೆಯನ್ನು ತೋರಿಸಿದ್ದಾರೆ. ಕುಲಸಂಬಂಧವಾದ ಹಿಂಸಾಕೃತ್ಯದ ತಲೆದೋರುವಿಕೆಯ ಸಮಯದಲ್ಲಿ, ಯಾರ ತಾಯಿ ಮತ್ತು ಮೂವರು ಸಹೋದರಿಯರು ಕ್ರೂರವಾಗಿ ಕೊಲೆ ಗೈಯಲ್ಪಟ್ಟರೊ, ಆ ಇಮ್ಮಾನುಎಲ್ ಎಂಬ ಹೆಸರಿನ ಒಬ್ಬ ಆಫ್ರಿಕನ್ ಪುರುಷನು ಆಗ್ರಹಮಾಡುವುದು: “ಪ್ರತಿಯೊಬ್ಬನು ತನಗೆ ಯೋಗ್ಯವಾದ ಬಹುಮಾನವನ್ನು ಪಡೆಯಬೇಕು . . . ನಮಗೆ ನ್ಯಾಯ ಬೇಕು.”
ನ್ಯಾಯ, ಯೆಹೋವ ದೇವರ ಪ್ರಧಾನ ಗುಣಗಳಲ್ಲಿ ಒಂದಾಗಿದೆ. “ಆತನು ನಡಿಸುವದೆಲ್ಲಾ ನ್ಯಾಯ,” ಎಂಬುದಾಗಿ ಬೈಬಲು ಹೇಳುತ್ತದೆ. ನಿಶ್ಚಯವಾಗಿ, ಯೆಹೋವನು “ನೀತಿನ್ಯಾಯಗಳನ್ನು ಪ್ರೀತಿಸುವವನು.” (ಧರ್ಮೋಪೇಶಕಾಂಡ 32:4; ಕೀರ್ತನೆ 33:5) ದೇವರನ್ನು ಚೆನ್ನಾಗಿ ಅರಿತುಕೊಳ್ಳಲು, ನಾವು ಆತನ ನ್ಯಾಯ ಪ್ರಜ್ಞೆಯನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಅನುಕರಿಸಲು ಕಲಿಯಬೇಕು.—ಹೋಶೇಯ 2:19, 20; ಎಫೆಸ 5:1.
ನ್ಯಾಯದ ಕುರಿತಾದ ನಮ್ಮ ಪರಿಕಲ್ಪನೆಯು, ಮಾನವರು ಈ ಗುಣವನ್ನು ಪರಿಗಣಿಸುವ ರೀತಿಯಿಂದ ಬಹುಶಃ ಪ್ರಭಾವಿಸಲ್ಪಟ್ಟಿದೆ. ಲೋಕದ ಕೆಲವು ಭಾಗಗಳಲ್ಲಿ, ನ್ಯಾಯವು ಅನೇಕ ವೇಳೆ, ಒಂದು ಖಡ್ಗವನ್ನು ಹಾಗೂ ತಕ್ಕಡಿಯ ತಟ್ಟೆಯನ್ನು ಹಿಡಿದುಕೊಂಡಿರುವ, ಕಣ್ಣು ಕಟ್ಟಲ್ಪಟ್ಟ ಒಬ್ಬ ಸ್ತ್ರೀಯೋಪಾದಿ ಚಿತ್ರಿಸಲ್ಪಟ್ಟಿದೆ. ಮಾನವ ನ್ಯಾಯವು ನಿಷ್ಪಕ್ಷಪಾತಿಯಾಗಿರಬೇಕೆಂದು, ಅಂದರೆ ಸಂಪತ್ತು ಅಥವಾ ಪ್ರಭಾವಕ್ಕೆ ಕುರುಡಾಗಿರಬೇಕೆಂದು ಭಾವಿಸಲಾಗುತ್ತದೆ. ಅದು ಆಪಾದಿಸಲ್ಪಟ್ಟವನ ದೋಷ ಅಥವಾ ನಿರ್ದೋಷಿತ್ವವನ್ನು ತಕ್ಕಡಿಯಲ್ಲಿ ಜಾಗರೂಕತೆಯಿಂದ ತೂಗಬೇಕು. ಅದರ ಖಡ್ಗದಿಂದ, ನ್ಯಾಯವು ನಿರ್ದೋಷಿಗಳನ್ನು ಸಂರಕ್ಷಿಸಬೇಕು ಮತ್ತು ತಪ್ಪಿತಸ್ಥರನ್ನು ದಂಡಿಸಬೇಕು.
ರೈಟ್ ಆ್ಯಂಡ್ ರೀಸನ್—ಎತಿಕ್ಸ್ ಇನ್ ತೀಯೊರಿ ಆ್ಯಂಡ್ ಪ್ರ್ಯಾಕ್ಟಿಸ್ ಎಂಬ ಪುಸ್ತಕವು ಹೇಳುವುದೇನೆಂದರೆ, “ನ್ಯಾಯವು, ನಿಯಮ, ಹಂಗು, ಹಕ್ಕುಗಳು, ಮತ್ತು ಕರ್ತವ್ಯಗಳೊಂದಿಗೆ ಸಂಬಂಧಿಸಲ್ಪಟ್ಟಿದೆ, ಮತ್ತು ಸಮಾನತೆ ಅಥವಾ ಅರ್ಹತೆಗನುಸಾರ ತನ್ನ ಅಂತಿಮ ನಿರ್ಣಯವನ್ನು ಕೊಡುತ್ತದೆ.” ಆದರೆ ಯೆಹೋವನ ನ್ಯಾಯವು ಆ ಅರ್ಥವಿವರಣೆಯನ್ನು ಮೀರಿಹೋಗುತ್ತದೆ. ನಾವು ಇದನ್ನು ತನ್ನ ಸ್ವರ್ಗೀಯ ತಂದೆಯಂತೆಯೇ ಇರುವ ಯೇಸು ಕ್ರಿಸ್ತನ ಕ್ರಿಯೆಗಳನ್ನು ಮತ್ತು ಗುಣಗಳನ್ನು ಪರಿಗಣಿಸುವ ಮೂಲಕ ನೋಡಸಾಧ್ಯವಿದೆ.—ಇಬ್ರಿಯ 1:3.
ಯೆಶಾಯ 42:3ರ ಮಾತುಗಳು, ಹೀಗೆ ಹೇಳಿದ ಸುವಾರ್ತಾ ಬರಹಗಾರನಾದ ಮತ್ತಾಯನ ಮೂಲಕ ಯೇಸುವಿಗೆ ಅನ್ವಯಿಸಲ್ಪಟ್ಟವು: “ಜಜ್ಜಿದ ದಂಟನ್ನು ಮುರಿದುಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆತರುವನು.” ಬಾಗಿಸಲ್ಪಟ್ಟ ಮತ್ತು ತುಳಿಯಲ್ಪಟ್ಟ ಒಂದು ಜಜ್ಜಿದ ದಂಟಿನಂತಿದ್ದ ಜನರಿಗೆ ಯೇಸು ಸಾಂತ್ವನಪಡಿಸುವ ಸಂದೇಶವನ್ನು ಘೋಷಿಸಿದನು. ಅವರು, ತಮ್ಮ ಜೀವದ ಕೊನೆಯ ಕಿಡಿಯು ಬಹುಮಟ್ಟಿಗೆ ನಂದಿಸಲ್ಪಟ್ಟಿತ್ತೋ ಎಂಬಂತೆ ಒಂದು ಕಳೆಗುಂದಿದ ದೀಪದ ಬತ್ತಿಯಂತಿದ್ದರು. ಸಾಂಕೇತಿಕವಾಗಿ ಜಜ್ಜಿದ ದಂಟುಗಳನ್ನು ಮುರಿದುಹಾಕುವ ಮತ್ತು ಕಳೆಗುಂದಿದ ದೀಪಗಳನ್ನು ನಂದಿಸುವ ಬದಲಿಗೆ, ಯೇಸು ಬಾಧಿಸಲ್ಪಟ್ಟವರನ್ನು ಕನಿಕರಿಸಿದನು, ಅವರಿಗೆ ಕಲಿಸಿದನು ಮತ್ತು ಗುಣಪಡಿಸಿದನು, ಮತ್ತು ಯೆಹೋವ ದೇವರ ನ್ಯಾಯವನ್ನು ಅವರಿಗೆ ಸ್ಪಷ್ಟಗೊಳಿಸಿದನು. (ಮತ್ತಾಯ 12:10-21) ಯೆಶಾಯನ ಪ್ರವಾದನೆಯು ಮುಂತಿಳಿಸಿದಂತೆ, ಆ ರೀತಿಯ ನ್ಯಾಯವು ನಿರೀಕ್ಷೆಯನ್ನು ತುಂಬಿತು.
ಕರುಣೆ ಮತ್ತು ಯೆಹೋವನ ನ್ಯಾಯ
ಕರುಣೆ, ದೇವರ ನ್ಯಾಯದ ಸ್ವಾಭಾವಿಕ ಭಾಗವಾಗಿದೆ. ಯೇಸು ಭೂಮಿಯ ಮೇಲಿದ್ದಾಗ ಇದು ಸ್ಪಷ್ಟವಾಯಿತು. ಅವನು ದೇವರ ನ್ಯಾಯ ಮತ್ತು ನೀತಿಯ ಮಟ್ಟಗಳನ್ನು ಪರಿಪೂರ್ಣವಾಗಿ ಪ್ರತಿನಿಧಿಸಿದನು. ಹಾಗಿದ್ದರೂ, ಯೆಹೂದಿ ಶಾಸ್ತ್ರಿಗಳು ಮತ್ತು ಫರಿಸಾಯರು ಅನಮ್ಯ ನ್ಯಾಯಸೂತ್ರ—ಹೆಚ್ಚಿನವು ಅವರಿಂದಲೇ ಸ್ಥಾಪಿಸಲ್ಪಟ್ಟವುಗಳು—ಗಳನ್ನು ಅನುಸರಿಸುವ ಮೂಲಕ, ನೀತಿಯನ್ನು ಗಳಿಸಲು ಬಯಸಿದರು. ಅವರ ಶಾಸನಬದ್ಧವಾದ ನ್ಯಾಯವು ಸಾಮಾನ್ಯವಾಗಿ ಕರುಣೆಯನ್ನು ತಳ್ಳಿಬಿಟ್ಟಿತು. ಯೇಸುವಿನ ಮತ್ತು ಫರಿಸಾಯರ ನಡುವೆ ಇದ್ದ ಅನೇಕ ಸಂಘರ್ಷಣೆಗಳು ಈ ವಿವಾದಾಂಶದ ಸುತ್ತಲೂ ತಿರುಗಿದವು: ನಿಜವಾದ ನ್ಯಾಯ ಮತ್ತು ನೀತಿಯು ಏನಾಗಿದೆ?—ಮತ್ತಾಯ 9:10-13; ಮಾರ್ಕ 3:1-5; ಲೂಕ 7:36-47.
ಇತರರನ್ನು ನ್ಯಾಯ ಹಾಗೂ ನೀತಿಯುಳ್ಳ ವಿಧದಲ್ಲಿ ಹೇಗೆ ಉಪಚರಿಸಬೇಕೆಂಬುದನ್ನು ಯೇಸು ದೃಷ್ಟಾಂತಿಸಿದನು. ನಿತ್ಯ ಜೀವವನ್ನು ಪಡೆಯುವ ಸಲುವಾಗಿ ಯಾವುದು ಅಗತ್ಯವಾಗಿತ್ತೆಂದು, ಧರ್ಮಶಾಸ್ತ್ರದಲ್ಲಿ ನಿಪುಣನಾಗಿದ್ದ ಒಬ್ಬ ಮನುಷ್ಯನು ಯೇಸುವನ್ನು ಒಮ್ಮೆ ಕೇಳಿದನು. ಪ್ರತ್ಯುತ್ತರವಾಗಿ ಯೇಸು ಅವನಿಗೊಂದು ಪ್ರಶ್ನೆಯನ್ನು ಕೇಳಿದನು ಮತ್ತು ಅವನು, ದೇವರನ್ನು ಒಬ್ಬನ ಪೂರ್ಣ ಹೃದಯ, ಪ್ರಾಣ, ಮನಸ್ಸು, ಮತ್ತು ಬಲದಿಂದ ಪ್ರೀತಿಸುವುದು ಮತ್ತು ಒಬ್ಬನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಅತ್ಯಂತ ಪ್ರಾಮುಖ್ಯವಾದ ಎರಡು ನಿಯಮಗಳೆಂದು ಉತ್ತರಿಸಿದಾಗ ಅವನನ್ನು ಪ್ರಶಂಸಿಸಿದನು. ಆ ಮನುಷ್ಯನು ಅನಂತರ ಕೇಳಿದ್ದು: “ನನ್ನ ನೆರೆಯವನು ಯಾರು”? ಸ್ನೇಹಭಾವದ ಸಮಾರ್ಯದವನ ದೃಷ್ಟಾಂತವನ್ನು ಹೇಳುವ ಮೂಲಕ ಯೇಸು ಪ್ರತ್ಯುತ್ತರಿಸಿದನು.—ಲೂಕ 10:25-37.
ಸಮಾರ್ಯದವನ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ ಯೆಹೋವನ ನೀತಿ ಮತ್ತು ಕರುಣಾಮಯ ನ್ಯಾಯವು ಉದಾಹರಿಸಲ್ಪಟ್ಟವು. ತನಗೆ ಪರಿಚಯವಿಲ್ಲದ ಒಬ್ಬ ಗಾಯಗೊಂಡ ಮನುಷ್ಯನಿಗೆ ನಿಸ್ವಾರ್ಥವಾಗಿ ಸಹಾಯ ಮಾಡುವ ಮೂಲಕ, ಸಮಾರ್ಯದವನು ಪ್ರಾಮಾಣಿಕವಾದ, ನ್ಯಾಯವಾದ, ಹಾಗೂ ಕರುಣಾಮಯವಾದ ವಿಷಯವನ್ನು ಮಾಡಿದನು. ಭೂಮಿಯ ಮೇಲಿದ್ದಾಗ ಯೇಸು ತಾನೇ ಅದೇ ಆತ್ಮವನ್ನು ತೋರಿಸಿದನು. ಅವನು ನೀತಿವಂತನೂ ನ್ಯಾಯವಂತನೂ ಆಗಿದ್ದನು. ಅಲ್ಲದೆ, ಅವನು ನಿರ್ಗತಿಕ ಜನರಿಗಾಗಿ, ಕಷ್ಟಾನುಭವ, ಅನಾರೋಗ್ಯ ಮತ್ತು ಮರಣಕ್ಕೆ ಅಧೀನರಾಗಿರುವ ಪಾಪಮಯ ಹಾಗೂ ಅಪರಿಪೂರ್ಣ ಮಾನವ ಜಾತಿಗಾಗಿ ತನ್ನ ಜೀವವನ್ನು ನೀಡಿದನು. ಅಪೊಸ್ತಲ ಪೌಲನು ನೀತಿಯನ್ನು, ಪ್ರಾಯಶ್ಚಿತ್ತದ ಏರ್ಪಾಡಿನೊಂದಿಗೆ ಜೋಡಿಸಿದನು. ಅವನು ಬರೆದುದು: “ಹೀಗಿರಲಾಗಿ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಸಾಯಬೇಕೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಒಂದೇ ಸತ್ಕಾರ್ಯದಿಂದ [ಅಥವಾ, “ಒಂದೇ ನೀತಿಯುಕ್ತ ಕ್ರಿಯೆಯಿಂದ,” ಪಾದಟಿಪ್ಪಣಿ, NW] ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ.” (ರೋಮಾಪುರ 5:18) ಈ “ಒಂದೇ ನೀತಿಯುಕ್ತ ಕ್ರಿಯೆ”ಯು, ಯಾವುದಕ್ಕಾಗಿ ಅವರು ನೇರವಾಗಿ ಜವಾಬ್ದಾರರಾಗಿರಲಿಲ್ಲವೊ, ಆ ಆದಾಮನ ಪಾಪದ ವಿಪತ್ಕಾರಕ ಪರಿಣಾಮಗಳಿಂದ ವಿಧೇಯ ಮಾನವ ಜಾತಿಯನ್ನು ರಕ್ಷಿಸುವ ದೇವರ ವಿಧವಾಗಿತ್ತು.
ದೇವರ ನ್ಯಾಯವು, ಒಂದೇ ಸಮಯದಲ್ಲಿ ಪಾಪಪೂರ್ಣ ಮಾನವರನ್ನು ವಿಮೋಚಿಸಲು ಮತ್ತು ನೀತಿಯ ತತ್ವಗಳನ್ನು ಎತ್ತಿಹಿಡಿಯಲು ಬಯಸಿತು. ಪಾಪವನ್ನು ಕಡೆಗಣಿಸುವುದು, ಅನ್ಯಾಯವೂ ಪ್ರೀತಿಯಿಲ್ಲದ್ದೂ—ಎರಡೂ—ಆಗಿರುತ್ತಿತ್ತು, ಏಕೆಂದರೆ ಅದು ನಿಯಮರಾಹಿತ್ಯವನ್ನು ಉತ್ತೇಜಿಸುತ್ತಿತ್ತು. ಮತ್ತೊಂದು ಕಡೆಯಲ್ಲಿ, ದೇವರ ನ್ಯಾಯವು ಒಂದು ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವುದಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದರೆ, ಮಾನವ ಜಾತಿಯು ನಿರೀಕ್ಷಾರಹಿತವಾಗಿರುತ್ತಿತ್ತು. ಬೈಬಲಿಗನುಸಾರ, “ಪಾಪವು ಕೊಡುವ ಸಂಬಳ ಮರಣ” ಮತ್ತು “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ.” (ರೋಮಾಪುರ 3:10; 6:23) ತನಗೆ ಮತ್ತು ತನ್ನ ಪ್ರಿಯ ಪುತ್ರನಿಗೆ ಮಹಾ ವೈಯಕ್ತಿಕ ವೆಚ್ಚದಲ್ಲಿ, ಯೆಹೋವನು ಪಾಪಗಳಿಗಾಗಿ ಪರಿಹಾರ ಯಜ್ಞವನ್ನು ಒದಗಿಸಿದನು.—1 ಯೋಹಾನ 2:1, 2.
ದೈವಿಕ ನ್ಯಾಯವು ತತ್ವಾಧಾರಿತ ಪ್ರೀತಿ (ಗ್ರೀಕ್, ಅಗಾಪೆ)ಯೊಂದಿಗೆ ಅನ್ಯೋನ್ಯವಾಗಿ ಬೆರಸಲ್ಪಟ್ಟಿದೆ ಎಂಬುದನ್ನು ಪ್ರಾಯಶ್ಚಿತ್ತವು ತೋರಿಸುತ್ತದೆ. ನಿಶ್ಚಯವಾಗಿ, ದೇವರ ನ್ಯಾಯವು ಆತನ ನೀತಿವಂತ ತತ್ವಗಳ ಪೂರ್ಣತೆ—ನೈತಿಕತೆಯ ವಿಷಯದಲ್ಲಿ ದೇವರ ಮಟ್ಟದ ಒಂದು ಪ್ರತಿಬಿಂಬವಾಗಿದೆ. ಆದುದರಿಂದ, ದೈವಿಕ ನ್ಯಾಯವು ದೇವರಿಂದ ಪ್ರಯೋಗಿಸಲ್ಪಟ್ಟಾಗ, ಅಗಾಪೆಯು, ದೈವಿಕ ನ್ಯಾಯವು ಆಧರಿಸಲ್ಪಟ್ಟಿರುವ ಪ್ರೀತಿಯಾಗಿದೆ. (ಮತ್ತಾಯ 5:43-48) ಆದುದರಿಂದ, ನಾವು ಯೆಹೋವನ ನ್ಯಾಯವನ್ನು ನಿಜವಾಗಿಯೂ ಗ್ರಹಿಸುವುದಾದರೆ, ಆತನ ನ್ಯಾಯ ಸಂಬಂಧಿತ ನಿರ್ಣಯಗಳಲ್ಲಿ ನಮಗೆ ಸಂಪೂರ್ಣ ಭರವಸೆಯಿರುವುದು. ಆತನು “ಸರ್ವಲೋಕಕ್ಕೆ ನ್ಯಾಯತೀರಿಸುವವ”ನೋಪಾದಿ, ಯೋಗ್ಯವಾದದ್ದನ್ನೇ ಯಾವಾಗಲೂ ಮಾಡುತ್ತಾನೆ.—ಆದಿಕಾಂಡ 18:25; ಕೀರ್ತನೆ 119:75.
ಯೆಹೋವನ ನ್ಯಾಯವನ್ನು ಅನುಕರಿಸಿರಿ
“ದೇವರನ್ನು ಅನುಕರಿಸುವವರಾಗಿರಿ,” ಎಂಬುದಾಗಿ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (ಎಫೆಸ 5:1, NW) ಇದರ ಅರ್ಥ, ಆತನ ನ್ಯಾಯ ಹಾಗೂ ಪ್ರೀತಿಯನ್ನು ಅನುಕರಿಸುವುದು. ಆದರೆ, ನಾವು ಅಪರಿಪೂರ್ಣರಾಗಿರುವುದರಿಂದ, ನಮ್ಮ ಮಾರ್ಗಗಳು ಯೆಹೋವ ದೇವರ ಮಾರ್ಗಗಳಷ್ಟು ಉನ್ನತವಾಗಿರುವುದಿಲ್ಲ. (ಯೆಶಾಯ 55:8, 9; ಯೆಹೆಜ್ಕೇಲ 18:25) ಆದುದರಿಂದ ನಾವು ನೀತಿ ಮತ್ತು ನ್ಯಾಯವನ್ನು ಪ್ರೀತಿಸುವವರೆಂದು ಹೇಗೆ ರುಜುಪಡಿಸಬಲ್ಲೆವು? “ಯಾವುದು ದೇವರ ಇಷ್ಟಾನುಸಾರ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟಿತೊ ಆ ನೂತನ ವ್ಯಕ್ತಿತ್ವವನ್ನು” ಧರಿಸಿಕೊಳ್ಳುವ ಮೂಲಕವೇ. (ಎಫೆಸ 4:24, NW) ಆಗ ನಾವು ದೇವರು ಪ್ರೀತಿಸುವುದನ್ನು ಪ್ರೀತಿಸುವೆವು ಮತ್ತು ಆತನು ಹಗೆಮಾಡುವುದನ್ನು ಹಗೆಮಾಡುವೆವು. “ನಿಜ ನೀತಿ,” ಹಿಂಸಾಕೃತ್ಯ, ಅನೈತಿಕತೆ, ಅಶುದ್ಧತ್ವ, ಮತ್ತು ಧರ್ಮಭ್ರಷ್ಟತೆಯನ್ನು ವರ್ಜಿಸುತ್ತದೆ, ಏಕೆಂದರೆ ಇವು ಪವಿತ್ರವಾಗಿರುವುದನ್ನು ಉಲ್ಲಂಘಿಸುತ್ತವೆ. (ಕೀರ್ತನೆ 11:5; ಎಫೆಸ 5:3-5; 2 ತಿಮೊಥೆಯ 2:16, 17) ದಿವ್ಯ ನ್ಯಾಯವು, ಇತರರಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ತೋರಿಸುವಂತೆಯೂ ನಮ್ಮನ್ನು ಪ್ರೇರೇಪಿಸುತ್ತದೆ.—ಕೀರ್ತನೆ 37:21; ರೋಮಾಪುರ 15:1-3.
ಅದಲ್ಲದೆ, ನಾವು ದೇವರ ನ್ಯಾಯದ ಕರುಣಾಮಯ ಸ್ವಭಾವವನ್ನು ಗಣ್ಯಮಾಡುವುದಾದರೆ, ಆತ್ಮಿಕ ಸಹೋದರರ ಅಥವಾ ಸಹೋದರಿಯರ ತೀರ್ಪು ಮಾಡುವ ಒಲವು ನಮಗಿರದು. ಯೆಹೋವನು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ನಾವು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ನಾವು ಅವರನ್ನು ನಮ್ಮ ಸ್ವಂತ ಪಕ್ಷಪಾತದ ದೃಷ್ಟಿಕೋನದಿಂದ ತೀರ್ಪು ಮಾಡಲಾರೆವೊ? ಹೀಗೆ, ಯೇಸು ಎಚ್ಚರಿಸಿದ್ದು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು. ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ? ನೀನು ನಿನ್ನ ಸಹೋದರನಿಗೆ—ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ. ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.” (ಮತ್ತಾಯ 7:1-5) ನಮ್ಮ ಸ್ವಂತ ಅಪರಿಪೂರ್ಣತೆಗಳ ಕುರಿತಾದ ಪ್ರಾಮಾಣಿಕವಾದ ಗುಣವಿಮರ್ಶೆಯು, ಯೆಹೋವನು ನ್ಯಾಯವಲ್ಲದ್ದೆಂದು ಪರಿಗಣಿಸುವ ನ್ಯಾಯತೀರ್ಪುಗಳನ್ನು ಮಾಡುವುದರಿಂದ ನಮ್ಮನ್ನು ತಡೆಯುವವು.
ನೇಮಿತ ಸಭಾ ಹಿರಿಯರು ಗಂಭೀರವಾದ ತಪ್ಪುಮಾಡುವಿಕೆಯ ಮೊಕದ್ದಮೆಗಳನ್ನು ತೀರ್ಪು ಮಾಡುವ ಹಂಗಿನವರಾಗಿದ್ದಾರೆ. (1 ಕೊರಿಂಥ 5:12, 13) ಹಾಗೆ ಮಾಡುವಾಗ, ದೇವರ ನ್ಯಾಯವು ಸಾಧ್ಯವಾಗುವಲ್ಲೆಲ್ಲಾ ಕರುಣೆಯನ್ನು ನೀಡಲು ಕೋರುತ್ತದೆ ಎಂಬುದನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. ಕರುಣೆಗಾಗಿ ಆಧಾರವು ಇಲ್ಲದಿರುವಲ್ಲಿ—ಪಶ್ಚಾತ್ತಾಪವಿಲ್ಲದ ಪಾಪಿಗಳ ವಿಷಯದಲ್ಲಿರುವಂತೆ—ಅದನ್ನು ನೀಡಸಾಧ್ಯವಿಲ್ಲ. ಆದರೆ ಅಂತಹ ಒಬ್ಬ ತಪ್ಪಿತಸ್ಥನನ್ನು ಹಿರಿಯರು, ಸೇಡನ್ನು ತೀರಿಸಲು ಸಭೆಯಿಂದ ಬಹಿಷ್ಕರಿಸುವುದಿಲ್ಲ. ಬಹಿಷ್ಕಾರ ಮಾಡುವ ಕ್ರಿಯೆಯು ತಾನೇ ಅವನಿಗೆ ಬುದ್ಧಿ ಕಲಿಸುವುದೆಂದು ಅವರು ನಿರೀಕ್ಷಿಸುತ್ತಾರೆ. (ಹೋಲಿಸಿ ಯೆಹೆಜ್ಕೇಲ 18:23.) ಕ್ರಿಸ್ತನ ತಲೆತನದ ಕೆಳಗೆ, ಹಿರಿಯರು ನ್ಯಾಯಪಾಲನೆಗಾಗಿ ಸೇವೆ ಮಾಡುತ್ತಾರೆ, ಮತ್ತು ಇದು “ಗಾಳಿಯಲ್ಲಿ ಮರೆಯಂತೆ” ಇರುವುದನ್ನು ಒಳಗೊಳ್ಳುತ್ತದೆ. (ಯೆಶಾಯ 32:1, 2) ಆದುದರಿಂದ ಅವರು ನಿಷ್ಪಕ್ಷಪಾತವನ್ನೂ ವಿವೇಚನೆಯನ್ನೂ ತೋರಿಸಬೇಕು.—ಧರ್ಮೋಪದೇಶಕಾಂಡ 1:16, 17.
ನೀತಿಯಲ್ಲಿ ಬೀಜಗಳನ್ನು ಬಿತ್ತಿರಿ
ನಾವು ದೇವರ ನೀತಿಯ ಹೊಸ ಲೋಕವನ್ನು ನಿರೀಕ್ಷಿಸುವಾಗ, ದೈವಿಕ ಅನುಗ್ರಹವನ್ನು ಅನುಭವಿಸುವ ಸಲುವಾಗಿ ನಾವು “ನೀತಿಯನ್ನು ಹುಡುಕ”ಬೇಕು. (ಚೆಫನ್ಯ 2:3, NW; 2 ಪೇತ್ರ 3:13) ಈ ವಿಚಾರವು ಹೋಶೇಯ 10:12ರಲ್ಲಿ ಕಂಡುಕೊಳ್ಳಲ್ಪಡುವ ಈ ಮಾತುಗಳಲ್ಲಿ ಸುಂದರವಾಗಿ ವ್ಯಕ್ತಪಡಿಸಲ್ಪಟ್ಟಿದೆ: “ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಗೆಯ್ಯದ ನಿಮ್ಮ ಭೂಮಿಯನ್ನು ಗೆಯ್ಯಿರಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನನ್ನು ಶರಣುಹೋಗುವ ಸಮಯವು ಒದಗಿದೆ.”
ನಮ್ಮ ದೈನಂದಿನ ಜೀವಿತಗಳಲ್ಲಿ, ಸ್ನೇಹಭಾವದ ಸಮಾರ್ಯದವನ ಸಾಮ್ಯದಲ್ಲಿ ಯೇಸು ದೃಷ್ಟಾಂತಿಸಿದಂತೆಯೇ, ‘ನೀತಿಯಲ್ಲಿ ಬೀಜಗಳನ್ನು ಬಿತ್ತಲು’ ನಮಗೆ ಅನೇಕ ಅವಕಾಶಗಳಿವೆ. ನಾವು ‘ಪ್ರೀತಿಯ ಫಲವನ್ನು ಕೊಯ್ಯು’ವೆವೆಂಬುದನ್ನು ಯೆಹೋವನು ನಿಶ್ಚಿತಗೊಳಿಸುವನು. ನಾವು “ನ್ಯಾಯಮಾರ್ಗದಲ್ಲಿ” ನಡೆಯುತ್ತಾ ಇರುವುದಾದರೆ, ರಾಜ್ಯದಾಳಿಕೆಯ ಕೆಳಗೆ ನೀತಿಯಲ್ಲಿ ಉಪದೇಶವನ್ನು ಪಡೆಯುತ್ತಾ ಮುಂದುವರಿಯುವೆವು. (ಯೆಶಾಯ 40:14) ಸಮಯವು ಗತಿಸಿದ ಹಾಗೆ, ಯೆಹೋವನು ನೀತಿಯನ್ನು ಮತ್ತು ನ್ಯಾಯವನ್ನು ಪ್ರೀತಿಸುವವನೆಂಬುದನ್ನು ನಾವು ಇನ್ನೂ ಹೆಚ್ಚು ಪೂರ್ಣವಾಗಿ ಗಣ್ಯಮಾಡುವೆವೆಂಬುದು ನಿಸ್ಸಂದೇಹ.—ಕೀರ್ತನೆ 33:4, 5.
[ಪುಟ 23 ರಲ್ಲಿರುವ ಚಿತ್ರ]
ಸ್ನೇಹಭಾವದ ಸಮಾರ್ಯದವನು ಯೆಹೋವನ ನ್ಯಾಯವನ್ನು ಉದಾಹರಿಸಿದನು
[ಪುಟ 23 ರಲ್ಲಿರುವ ಚಿತ್ರ]
ಜಜ್ಜಿದ ದಂಟುಗಳಂತಿದ್ದ, ಬಾಧಿಸಲ್ಪಟ್ಟ ಜನರಿಗಾಗಿ ಯೇಸುವಿನಲ್ಲಿ ಕನಿಕರವಿತ್ತು