ಅಧ್ಯಾಯ ಮೂರು
“ನಾನು ಒಪ್ಪಿಗೆ ನೀಡಿರುವ ನನ್ನ ಚುನಾಯಿತನು!”
1, 2. ಇಂದು ಕ್ರೈಸ್ತರಿಗೆ ಯೆಶಾಯ 42ನೆಯ ಅಧ್ಯಾಯವು ಏಕೆ ಆಸಕ್ತಿದಾಯಕವಾದದ್ದಾಗಿದೆ?
“ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು.” (ಯೆಶಾಯ 43:10) ಪ್ರವಾದಿಯಾಗಿದ್ದ ಯೆಶಾಯನು, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ದಾಖಲಿಸಿರುವ ಯೆಹೋವನ ಈ ಘೋಷಣೆಯು, ಯೆಹೋವನ ಪುರಾತನ ಕಾಲದ ಒಡಂಬಡಿಕೆಯ ಜನರು ಸಾಕ್ಷಿಗಳಾದ ಒಂದು ಜನಾಂಗವಾಗಿದ್ದರೆಂಬುದನ್ನು ತೋರಿಸುತ್ತದೆ. ಅವರು ದೇವರ ಆರಿಸಿಕೊಂಡಿರುವ ಸೇವಕನು ಆಗಿದ್ದರು. ಸುಮಾರು 2,600 ವರ್ಷಗಳ ಬಳಿಕ, 1931ರಲ್ಲಿ ಈ ಮಾತುಗಳು ತಮಗೆ ಅನ್ವಯಿಸುತ್ತವೆ ಎಂದು ಅಭಿಷಿಕ್ತ ಕ್ರೈಸ್ತರು ಬಹಿರಂಗವಾಗಿ ಪ್ರಕಟಿಸಿದರು. ಆಗ ಅವರು ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಪಡೆದುಕೊಂಡು, ದೇವರ ಭೂಸೇವಕರಾಗಿರುವುದರೊಂದಿಗೆ ಕೂಡಿರುವ ಜವಾಬ್ದಾರಿಗಳನ್ನು ಪೂರ್ಣ ಹೃದಯದಿಂದ ಅಂಗೀಕರಿಸಿದರು.
2 ಯೆಹೋವನ ಸಾಕ್ಷಿಗಳಿಗೆ ದೇವರನ್ನು ಮೆಚ್ಚಿಸುವ ತೀವ್ರ ಬಯಕೆಯಿದೆ. ಈ ಕಾರಣದಿಂದ, ಯೆಶಾಯ ಪುಸ್ತಕದ 42ನೆಯ ಅಧ್ಯಾಯವು ಅವರಲ್ಲಿ ಪ್ರತಿಯೊಬ್ಬರಿಗೆ ತೀವ್ರಾಸಕ್ತಿಯ ವಿಷಯವಾಗಿದೆ. ಏಕೆಂದರೆ, ಅದು ಯೆಹೋವನು ಒಪ್ಪಿಗೆ ನೀಡುವ ಸೇವಕನ ಚಿತ್ರಣವನ್ನು ಮಾತ್ರವಲ್ಲ, ಆತನು ತಿರಸ್ಕರಿಸುವ ಸೇವಕನ ಚಿತ್ರಣವನ್ನೂ ಕೊಡುತ್ತದೆ. ಈ ಪ್ರವಾದನೆಯನ್ನು ಮತ್ತು ಅದರ ನೆರವೇರಿಕೆಯನ್ನು ಪರಿಗಣಿಸುವುದರಿಂದ, ದೇವರ ಮೆಚ್ಚಿಕೆಗೆ ಮತ್ತು ಆತನ ಅನಾದರಕ್ಕೆ ನಡೆಸುವ ವಿಚಾರಗಳ ಒಳನೋಟ ನಮಗೆ ದೊರೆಯುತ್ತದೆ.
“ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ”
3. ‘ನನ್ನ ಸೇವಕನ’ ಕುರಿತು ಯೆಹೋವನು ಯೆಶಾಯನ ಮೂಲಕ ಏನನ್ನು ಪ್ರವಾದಿಸುತ್ತಾನೆ?
3 ಯೆಹೋವನು ಯೆಶಾಯನ ಮೂಲಕ, ತಾನೇ ಚುನಾಯಿಸುವ ಸೇವಕನೊಬ್ಬನ ಬರೋಣದ ಕುರಿತು ಪ್ರವಾದಿಸುತ್ತಾನೆ: “ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ; ಇವನು ನನಗೆ ಇಷ್ಟನು, ನನ್ನ ಪ್ರಾಣ ಪ್ರಿಯನು [“ನಾನು ಒಪ್ಪಿಗೆ ನೀಡಿರುವ ನನ್ನ ಚುನಾಯಿತನು,” NW]. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ; ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು. [“ಅವನು ಅನ್ಯಜನಾಂಗಗಳಿಗೆ ನ್ಯಾಯವನ್ನು ಬರಮಾಡುವನು,” NW] ಇವನು ಕೂಗಾಡುವದಿಲ್ಲ, ಆರ್ಬಟಿಸುವದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದು ಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆತರುವನು. ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವ ತನಕ ಇವನು ಕಳೆಗುಂದದೆಯೂ ಜಜ್ಜಿಹೋಗದೆಯೂ [ತನ್ನ ಕಾರ್ಯದಲ್ಲಿ ನಿರತನಾಗಿರುವನು]; ದ್ವೀಪದ್ವೀಪಾಂತರಗಳು ಇವನ ಧರ್ಮಪ್ರಮಾಣಕ್ಕೆ ಕಾದಿರುವವು.”—ಯೆಶಾಯ 42:1-4.
4. ಮುಂತಿಳಿಸಲ್ಪಟ್ಟ “ಚುನಾಯಿತನು” ಯಾರು, ಮತ್ತು ಇದು ನಮಗೆ ಹೇಗೆ ಗೊತ್ತು?
4 ಇಲ್ಲಿ ಸೂಚಿಸಲಾಗಿರುವ ಸೇವಕನು ಯಾರು? ಇದರ ಕುರಿತು ನಮಗೆ ಅನುಮಾನವೇ ಇಲ್ಲ. ಈ ಮಾತುಗಳು ಮತ್ತಾಯನ ಸುವಾರ್ತೆಯಲ್ಲಿ ಉದ್ಧರಿಸಲ್ಪಟ್ಟಿದ್ದು, ಯೇಸು ಕ್ರಿಸ್ತನಿಗೆ ಅನ್ವಯಿಸಲ್ಪಟ್ಟಿರುವುದನ್ನು ನಾವು ನೋಡುತ್ತೇವೆ. (ಮತ್ತಾಯ 12:15-21) ಯೇಸುವೇ ಆ ಪ್ರಿಯ ಸೇವಕನು, ಅಂದರೆ “ಚುನಾಯಿತನು.” ಯೆಹೋವನು ತನ್ನ ಆತ್ಮವನ್ನು ಯೇಸುವಿನಲ್ಲಿ ಇರಿಸಿದ್ದು ಯಾವಾಗ? ಸಾ.ಶ. 29ರಲ್ಲಿ ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲೇ. ಆ ದೀಕ್ಷಾಸ್ನಾನವನ್ನು ಪ್ರೇರಿತ ದಾಖಲೆಯು ವರ್ಣಿಸುತ್ತ, ಯೇಸು ನೀರಿನಿಂದ ಮೇಲೆ ಬಂದಾಗ, “ಆಕಾಶವು ತೆರೆಯಿತು; ಮತ್ತು ಪವಿತ್ರಾತ್ಮನು ದೇಹಾಕಾರವಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ—ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು” ಎಂದು ಹೇಳುತ್ತದೆ. ಈ ರೀತಿಯಲ್ಲಿ ತನ್ನ ಪ್ರಿಯ ಸೇವಕನನ್ನು ಯೆಹೋವನು ವೈಯಕ್ತಿಕವಾಗಿ ಗುರುತಿಸಿದನು. ತರುವಾಯ ಯೇಸು ನಡಿಸಿದ ಶುಶ್ರೂಷೆ ಮತ್ತು ಅದ್ಭುತ ಕೃತ್ಯಗಳು, ಯೆಹೋವನ ಆತ್ಮವು ನಿಜವಾಗಿಯೂ ಅವನ ಮೇಲಿತ್ತೆಂಬುದನ್ನು ರುಜುಪಡಿಸಿದವು.—ಲೂಕ 3:21, 22; 4:14-21; ಮತ್ತಾಯ 3:16, 17.
“ಅವನು ಅನ್ಯಜನಾಂಗಗಳಿಗೆ ನ್ಯಾಯವನ್ನು ಬರಮಾಡುವನು”
5. ಸಾ.ಶ. ಒಂದನೆಯ ಶತಮಾನದಲ್ಲಿ ನ್ಯಾಯವನ್ನು ಸ್ಪಷ್ಟೀಕರಿಸುವ ಅಗತ್ಯವು ಏಕಿತ್ತು?
5 ಯೆಹೋವನ ಚುನಾಯಿತನು ನಿಜವಾದ ನ್ಯಾಯವನ್ನು “ಬರಮಾಡುವನು,” ಇಲ್ಲವೆ, ಅದು ಎದ್ದುತೋರುವಂತೆ ಮಾಡುವನು. “ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು [“ಸ್ಪಷ್ಟಪಡಿಸುವನು,” NW].” (ಮತ್ತಾಯ 12:18) ಸಾ.ಶ. ಒಂದನೆಯ ಶತಮಾನದಲ್ಲಿ ಇದು ಎಷ್ಟೊಂದು ಅಗತ್ಯವಾಗಿತ್ತು! ಯೆಹೂದಿ ಧಾರ್ಮಿಕ ನಾಯಕರು ನ್ಯಾಯ ಮತ್ತು ನೀತಿಯನ್ನು ವಿಕೃತ ರೀತಿಯಲ್ಲಿ ಬೋಧಿಸುತ್ತಿದ್ದರು. ಕಟ್ಟುನಿಟ್ಟಿನ ನಿಯಮಾವಳಿಯನ್ನು ಅನುಸರಿಸುವ ಮೂಲಕ ನೀತಿಯನ್ನು ಸಾಧಿಸಲು ಅವರು ಪ್ರಯತ್ನಿಸಿದರು; ಅದರಲ್ಲಿ ಅನೇಕ ನಿಯಮಗಳನ್ನು ಅವರೇ ರೂಪಿಸಿದರು. ಕಾಯಿದೆಗನುಸಾರವಾದ ಅವರ ನ್ಯಾಯವು ಕರುಣೆ ಮತ್ತು ಕನಿಕರರಹಿತವಾದದ್ದಾಗಿತ್ತು.
6. ನಿಜವಾದ ನ್ಯಾಯವನ್ನು ಯೇಸು ಯಾವ ವಿಧಗಳಲ್ಲಿ ತಿಳಿಯಪಡಿಸಿದನು?
6 ಇದಕ್ಕೆ ವ್ಯತಿರಿಕ್ತವಾಗಿ, ದೇವರು ನ್ಯಾಯವನ್ನು ಹೇಗೆ ವೀಕ್ಷಿಸುತ್ತಾನೆಂಬುದನ್ನು ಯೇಸು ಪ್ರಕಟಪಡಿಸಿದನು. ಯೇಸು ತಾನು ಬೋಧಿಸಿದ ಹಾಗೂ ಜೀವಿಸಿದ ರೀತಿಯಿಂದ, ನಿಜವಾದ ನ್ಯಾಯವು ಕನಿಕರ ಮತ್ತು ಕರುಣೆಯುಳ್ಳದ್ದಾಗಿರುತ್ತದೆಂದು ತೋರಿಸಿದನು. ಅವನ ಪ್ರಸಿದ್ಧ ಪರ್ವತ ಪ್ರಸಂಗವನ್ನು ತುಸು ಪರಿಗಣಿಸಿ. (ಮತ್ತಾಯ 5-7ನೆಯ ಅಧ್ಯಾಯಗಳು) ನ್ಯಾಯ ಮತ್ತು ನೀತಿಯನ್ನು ಹೇಗೆ ಆಚರಿಸಬೇಕೆಂಬುದರ ಕುರಿತಾದ ಎಂತಹ ಕುಶಲ ವಿವರಣೆ ಅದಾಗಿದೆ! ನಾವು ಸುವಾರ್ತಾ ವೃತ್ತಾಂತಗಳನ್ನು ಓದುವಾಗ, ದೀನರಿಗೆ ಮತ್ತು ಪೀಡಿತರಿಗೆ ಯೇಸು ತೋರಿಸಿದ ಕನಿಕರವು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವುದಿಲ್ಲವೋ? (ಮತ್ತಾಯ 20:34; ಮಾರ್ಕ 1:41; 6:34; ಲೂಕ 7:13) ಅವನು ತನ್ನ ಸಾಂತ್ವನದಾಯಕ ಸಂದೇಶವನ್ನು ಜಜ್ಜಿದ ದಂಟುಗಳಂತಿರುವ, ಬಗ್ಗಿಸಲ್ಪಟ್ಟು ಗುದ್ದು ತಿನ್ನುವವರೂ ಆಗಿರುವಂಥ ಅನೇಕರಿಗೆ ತಿಳಿಸಿದನು. ಅವರು ಕಳೆಗುಂದಿದ ದೀಪದ ಬತ್ತಿಯಂತೆ, ಜೀವದ ಕೊನೆಯ ಕಿಡಿ ಇನ್ನೇನು ಆರಿಹೋಗಲಿದೆಯೊ ಎಂಬಂತೆ ಇದ್ದರು. ಯೇಸು ಜಜ್ಜಿದ ದಂಟನ್ನು ಮುರಿದದ್ದೂ ಇಲ್ಲ, “ಕಳೆಗುಂದಿದ ದೀಪವನ್ನು” ನಂದಿಸಲೂ ಇಲ್ಲ. ಇದಕ್ಕೆ ಬದಲಾಗಿ, ಅವನ ಪ್ರೀತಿ ಮತ್ತು ಕನಿಕರದ ಮಾತುಗಳು ಹಾಗೂ ಕ್ರಿಯೆಗಳು, ದೀನ ವ್ಯಕ್ತಿಗಳ ಹೃದಯಗಳನ್ನು ಹುರಿದುಂಬಿಸಿದವು.—ಮತ್ತಾಯ 11:28-30.
7. ಯೇಸು ‘ಆರ್ಭಟಿಸುವುದೂ ಇಲ್ಲ, ಬೀದಿಯಲ್ಲಿ ಅವನ ಧ್ವನಿ ಕೇಳಿಸುವುದೂ ಇಲ್ಲ’ ಎಂದು ಪ್ರವಾದನೆ ಹೇಳುವುದೇಕೆ?
7 ಆದರೆ, ಯೇಸು ‘ಕೂಗಾಡುವುದೂ ಇಲ್ಲ, ಆರ್ಬಟಿಸುವುದೂ ಇಲ್ಲ, ಬೀದಿಯಲ್ಲಿ ಅವನ ಧ್ವನಿ ಕೇಳಿಸುವುದೂ ಇಲ್ಲ’ ಎಂದು ಪ್ರವಾದನೆ ಹೇಳುವುದೇಕೆ? ಏಕೆಂದರೆ ಅವನ ದಿನಗಳಲ್ಲಿದ್ದ ಅನೇಕರು ಮಾಡಿದಂತೆ ಅವನು ತನ್ನನ್ನೇ ಹೊಗಳಿಕೊಳ್ಳಲಿಲ್ಲ. (ಮತ್ತಾಯ 6:5) ಯೇಸು ಒಬ್ಬ ಕುಷ್ಠರೋಗಿಯನ್ನು ಗುಣಪಡಿಸುತ್ತಿದ್ದಾಗ, “ಯಾರಿಗೂ ಏನೂ ಹೇಳಬೇಡ ನೋಡು” ಎಂದು ಸ್ವಸ್ಥನಾದ ಆ ವ್ಯಕ್ತಿಗೆ ಹೇಳಿದನು. (ಮಾರ್ಕ 1:40-44) ತನ್ನ ಪ್ರಸಿದ್ಧಿಯನ್ನು ಪ್ರಚಾರ ಮಾಡುತ್ತ, ಯಾರೋ ಹೇಳಿದ ಮಾತಿನ ಆಧಾರದ ಮೇಲೆ ಜನರು ತೀರ್ಮಾನಕ್ಕೆ ಬರುವಂತೆ ಮಾಡುವ ಬದಲಿಗೆ, ತಾನು ಕ್ರಿಸ್ತನು, ಯೆಹೋವನ ಅಭಿಷಿಕ್ತ ಸೇವಕನು ಎಂಬುದನ್ನು ಬಲವಾದ ಪುರಾವೆಯಿಂದ ಜನರು ಸ್ವತಃ ಗ್ರಹಿಸಬೇಕೆಂದು ಯೇಸು ಬಯಸಿದನು.
8. (ಎ) ಯೇಸು, ‘ಅನ್ಯಜನರಿಗೆ ನ್ಯಾಯವನ್ನು’ ಬರಮಾಡಿದ್ದು ಹೇಗೆ? (ಬಿ) ಒಳ್ಳೆಯ ನೆರೆಯವನಾದ ಸಮಾರ್ಯದವನ ಕುರಿತಾದ ಯೇಸುವಿನ ದೃಷ್ಟಾಂತವು, ನ್ಯಾಯದ ಕುರಿತು ನಮಗೆ ಏನನ್ನು ಕಲಿಸುತ್ತದೆ?
8 ಆ ಚುನಾಯಿತ ಸೇವಕನು, ‘ಅನ್ಯಜನಗಳಿಗೆ ನ್ಯಾಯವನ್ನು’ ಬರಮಾಡಲಿದ್ದನು. ಯೇಸು ಹಾಗೆಯೇ ಮಾಡಿದನು. ದೈವಿಕ ನ್ಯಾಯದ ಕನಿಕರ ಪ್ರವೃತ್ತಿಯ ಕುರಿತು ಯೇಸು ಒತ್ತಿಹೇಳಿದ್ದು ಮಾತ್ರವಲ್ಲ, ಅದರಲ್ಲಿ ಸರ್ವ ಮಾನವರು ಒಳಗೂಡಿರಬೇಕೆಂದೂ ಬೋಧಿಸಿದನು. ಒಂದು ಸಂದರ್ಭದಲ್ಲಿ ಯೇಸು ಒಬ್ಬ ಧರ್ಮೋಪದೇಶಕನಿಗೆ, ಅವನು ದೇವರನ್ನೂ ನೆರೆಯವನನ್ನೂ ಪ್ರೀತಿಸಬೇಕೆಂದು ಜ್ಞಾಪಕ ಹುಟ್ಟಿಸಿದನು. ಆಗ ಆ ಮನುಷ್ಯನು, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಪ್ರಶ್ನಿಸಿದನು. ಇದಕ್ಕೆ ಯೇಸು, “ನಿನ್ನ ಜೊತೆ ಯೆಹೂದ್ಯನು” ಎಂದು ಉತ್ತರ ಕೊಡುವನೆಂದು ಅವನು ನೆನಸಿದ್ದಿರಬಹುದು. ಆದರೆ, ಇದಕ್ಕೆ ಬದಲಾಗಿ, ಒಳ್ಳೆಯ ನೆರೆಯವನಾದ ಸಮಾರ್ಯದವನ ಸಾಮ್ಯವನ್ನು ಯೇಸು ಹೇಳಿದನು. ಈ ಸಾಮ್ಯದಲ್ಲಿ, ಕಳ್ಳರ ಕೈಗೆ ಸಿಕ್ಕಿಬಿದ್ದಿದ್ದ ಒಬ್ಬ ಮನುಷ್ಯನಿಗೆ ಸಹಾಯಮಾಡಲು ಒಬ್ಬ ಲೇವಿಯನೂ ಯಾಜಕನೂ ನಿರಾಕರಿಸಿದಾಗ, ಒಬ್ಬ ಸಮಾರ್ಯದವನು ಸಹಾಯಕ್ಕೆ ಬಂದನು. ಈ ಸಂದರ್ಭದಲ್ಲಿ, ಆ ಲೇವಿಯನಾಗಲಿ ಯಾಜಕನಾಗಲಿ ಅಲ್ಲ, ಬದಲಾಗಿ ಕೀಳಾಗಿ ಕಾಣಲ್ಪಡುತ್ತಿದ್ದ ಸಮಾರ್ಯದವನೇ ನೆರೆಯವನಾಗಿದ್ದನು ಎಂದು ಪ್ರಶ್ನೆಯನ್ನು ಕೇಳಿದ ಆ ವ್ಯಕ್ತಿಯು ಒಪ್ಪಲೇಬೇಕಾಯಿತು. ಯೇಸು ತನ್ನ ದೃಷ್ಟಾಂತವನ್ನು, “ಹೋಗು, ನೀನೂ ಅದರಂತೆ ಮಾಡು,” ಎಂದು ಹೇಳುತ್ತ ಮುಗಿಸಿದನು.—ಲೂಕ 10:25-37; ಯಾಜಕಕಾಂಡ 19:18.
“ಇವನು ಕಳೆಗುಂದದೆಯೂ ಜಜ್ಜಿಹೋಗದೆಯೂ” ಇರುವನು
9. ನಿಜವಾದ ನ್ಯಾಯದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರುವುದು?
9 ನಿಜವಾದ ನ್ಯಾಯದ ಸ್ವರೂಪವನ್ನು ಯೇಸು ಹೀಗೆ ಸ್ಪಷ್ಟಗೊಳಿಸಿದ್ದರಿಂದ, ಅವನ ಶಿಷ್ಯರೂ ಈ ಗುಣವನ್ನು ತೋರಿಸಲು ಕಲಿತರು. ಆದುದರಿಂದ ನಾವೂ ಹಾಗೆ ಮಾಡಬೇಕು. ಪ್ರಥಮವಾಗಿ, ಒಳ್ಳೇದು ಮತ್ತು ಕೆಟ್ಟದ್ದರ ಕುರಿತಾದ ದೇವರ ಮಟ್ಟಗಳನ್ನು ನಾವು ಅಂಗೀಕರಿಸಬೇಕು. ಏಕೆಂದರೆ, ಯಾವುದು ನ್ಯಾಯ ಮತ್ತು ನೀತಿ ಎಂಬುದನ್ನು ನಿರ್ಣಯಿಸುವ ಹಕ್ಕು ಆತನಿಗಿದೆ. ಮತ್ತು ನಾವು ಯೆಹೋವನ ಮಾರ್ಗಾನುಸಾರ ವಿಷಯಗಳನ್ನು ಮಾಡಲು ಪ್ರಯತ್ನಿಸುವಾಗ, ನಮ್ಮ ಪ್ರಾಮಾಣಿಕ ನಡತೆಯು ನಿಜವಾದ ನ್ಯಾಯವೇನೆಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸುವುದು.—1 ಪೇತ್ರ 2:12.
10. ನ್ಯಾಯವನ್ನು ತೋರಿಸುವುದರಲ್ಲಿ, ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಭಾಗವಹಿಸುವುದೂ ಒಳಗೂಡಿದೆ ಏಕೆ?
10 ನಾವು ಶ್ರದ್ಧೆಯಿಂದ ಸಾರುವ ಮತ್ತು ಬೋಧಿಸುವ ಕಾರ್ಯಗಳಲ್ಲಿ ಒಳಗೂಡುವಾಗಲೂ ನಿಜವಾದ ನ್ಯಾಯವನ್ನು ತೋರ್ಪಡಿಸುತ್ತೇವೆ. ಯೆಹೋವನು ಉದಾರಭಾವದಿಂದ, ಸ್ವತಃ ತನ್ನ, ತನ್ನ ಪುತ್ರನ ಮತ್ತು ತನ್ನ ಉದ್ದೇಶಗಳ ಕುರಿತಾದ ಜೀವರಕ್ಷಕ ಜ್ಞಾನವನ್ನು ಒದಗಿಸಿ ಕೊಟ್ಟಿದ್ದಾನೆ. (ಯೋಹಾನ 17:3) ಆ ಜ್ಞಾನವನ್ನು ನಮ್ಮಲ್ಲಿಯೇ ಇಟ್ಟುಕೊಳ್ಳುವುದು ಸರಿಯೂ ಅಲ್ಲ, ನ್ಯಾಯವೂ ಅಲ್ಲ. ಏಕೆಂದರೆ ಸೊಲೊಮೋನನು ಹೇಳುವುದು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.” (ಜ್ಞಾನೋಕ್ತಿ 3:27) ಆದುದರಿಂದ, ನಮಗೆ ದೇವರ ಕುರಿತು ಏನು ತಿಳಿದಿದೆಯೊ ಅದನ್ನು, ಜನರ ಜಾತಿ, ಕುಲ, ಅಥವಾ ರಾಷ್ಟ್ರೀಯ ಹಿನ್ನೆಲೆಯು ಯಾವುದೇ ಆಗಿರಲಿ, ಎಲ್ಲರಿಗೂ ಪೂರ್ಣ ಹೃದಯದಿಂದ ಹಂಚಿಕೊಳ್ಳೋಣ.—ಅ. ಕೃತ್ಯಗಳು 10:34, 35.
11. ಯೇಸುವನ್ನು ಅನುಕರಿಸುತ್ತಾ ನಾವು ಇತರರೊಂದಿಗೆ ಹೇಗೆ ವರ್ತಿಸಬೇಕು?
11 ಇದಲ್ಲದೆ ಒಬ್ಬ ನಿಜ ಕ್ರೈಸ್ತನು, ಯೇಸು ಇತರರೊಂದಿಗೆ ವರ್ತಿಸಿದ ಪ್ರಕಾರವೇ ವರ್ತಿಸುತ್ತಾನೆ. ಇಂದು ಅನೇಕರು ಎದೆಗುಂದಿಸುವಂತಹ ಸಮಸ್ಯೆಗಳನ್ನು ಎದುರಿಸುವುದರಿಂದ, ಕನಿಕರ ಮತ್ತು ಪ್ರೋತ್ಸಾಹದ ಅಗತ್ಯ ಅವರಿಗಿರುತ್ತದೆ. ಸಮರ್ಪಿತ ಕ್ರೈಸ್ತರಲ್ಲಿಯೂ ಕೆಲವರು ತಮ್ಮ ಸ್ಥಿತಿಗತಿಗಳಿಂದ ಎಷ್ಟು ಜರ್ಜರಿತರಾಗುತ್ತಾರೆಂದರೆ, ಅವರು ಜಜ್ಜಲ್ಪಟ್ಟ ದಂಟನ್ನೂ ಕಳೆಗುಂದಿದ ದೀಪದ ಬತ್ತಿಯನ್ನೂ ಹೋಲುತ್ತಾರೆ. ಹೀಗಿರುವಾಗ, ಅವರಿಗೆ ನಮ್ಮ ಬೆಂಬಲದ ಅಗತ್ಯವಿರುವುದಿಲ್ಲವೆ? (ಲೂಕ 22:32; ಅ. ಕೃತ್ಯಗಳು 11:23) ಆದುದರಿಂದ, ನ್ಯಾಯವನ್ನು ಆಚರಿಸುವುದರಲ್ಲಿ ಯೇಸುವನ್ನು ಅನುಕರಿಸಲು ಪ್ರಯತ್ನಿಸುವಂತಹ ಸತ್ಯ ಕ್ರೈಸ್ತರ ಒಂದು ಒಕ್ಕೂಟದ ಭಾಗವಾಗಿರುವುದು ಅದೆಷ್ಟು ಚೈತನ್ಯದಾಯಕ!
12. ನ್ಯಾಯವು ಎಲ್ಲರಿಗೆ ಬೇಗನೆ ಒಂದು ವಾಸ್ತವಿಕತೆಯಾಗಲಿರುವುದೆಂದು ನಾವೇಕೆ ಭರವಸೆಯಿಂದಿರಬಲ್ಲೆವು?
12 ಸರ್ವರಿಗೂ ನ್ಯಾಯ ದೊರೆಯುವ ಸಂದರ್ಭ ಎಂದಾದರೂ ಬಂದೀತೆ? ನಿಶ್ಚಯವಾಗಿಯೂ ಬರುವುದು. ಭೂಮಿಯ ಮೇಲೆ “ಸದ್ಧರ್ಮವನ್ನು [“ನ್ಯಾಯವನ್ನು,” NW] ಸ್ಥಾಪಿಸುವ ತನಕ” ಯೆಹೋವನ ಚುನಾಯಿತನು “ಕಳೆಗುಂದದೆಯೂ ಜಜ್ಜಿಹೋಗದೆಯೂ” ಇರುವನು. ಸಿಂಹಾಸನವನ್ನೇರಿರುವ ರಾಜನಾದ ಕ್ರಿಸ್ತ ಯೇಸುವು ಅತಿ ಬೇಗನೆ, ‘ದೇವರನ್ನರಿಯದವರಿಗೆ ಪ್ರತೀಕಾರವನ್ನು ಸಲ್ಲಿಸುವನು.’ (2 ಥೆಸಲೊನೀಕ 1:6-9; ಪ್ರಕಟನೆ 16:14-16) ಆಗ, ಮಾನವ ಆಳ್ವಿಕೆಯ ಸ್ಥಾನದಲ್ಲಿ ದೇವರ ರಾಜ್ಯವಿರುವುದು. ನ್ಯಾಯ ಮತ್ತು ನೀತಿಗಳು ವ್ಯಾಪಕವಾಗಿರುವವು. (ಜ್ಞಾನೋಕ್ತಿ 2:21, 22; ಯೆಶಾಯ 11:3-5; ದಾನಿಯೇಲ 2:44; 2 ಪೇತ್ರ 3:13) ಇದಕ್ಕಾಗಿ ಹಾತೊರೆಯುತ್ತ, ಎಲ್ಲ ಕಡೆಗಳಲ್ಲಿರುವ ಯೆಹೋವನ ಸೇವಕರು, “ದ್ವೀಪದ್ವೀಪಾಂತರ”ಗಳಷ್ಟು ದೂರ ಪ್ರದೇಶಗಳಲ್ಲಿರುವವರು ಸಹ, ಆ ದಿನಕ್ಕಾಗಿ ಕಾಯುತ್ತಿದ್ದಾರೆ.
‘ನಾನು ಅವನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ನೇಮಿಸಿದ್ದೇನೆ’
13. ತನ್ನ ಚುನಾಯಿತ ಸೇವಕನ ವಿಷಯದಲ್ಲಿ ಯೆಹೋವನ ಪ್ರವಾದನೆ ಏನನ್ನುತ್ತದೆ?
13 ಯೆಶಾಯನು ಮುಂದುವರಿಸುವುದು: “ಆಕಾಶಮಂಡಲವನ್ನುಂಟುಮಾಡಿ ಹರವಿ ಭೂಮಂಡಲವನ್ನೂ ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಚರರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗನ್ನುತ್ತಾನೆ.” (ಯೆಶಾಯ 42:5) ಇದು ಸೃಷ್ಟಿಕರ್ತನಾದ ಯೆಹೋವನ ಕುರಿತಾದ ಎಷ್ಟೊಂದು ಶಕ್ತಿಯುತ ವರ್ಣನೆಯಾಗಿದೆ! ಯೆಹೋವನ ಶಕ್ತಿಯ ಕುರಿತಾದ ಈ ಮರುಜ್ಞಾಪನವು, ಆತನ ಹೇಳಿಕೆಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ. ಯೆಹೋವನು ಹೇಳುವುದು: “ನೀನು ಕುರುಡರಿಗೆ ಕಣ್ಣುಕೊಟ್ಟು ಬಂದಿಗಳನ್ನು ಸೆರೆಯಿಂದಲೂ ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ಕರತರಬೇಕು ಎಂದು ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕರೆದು ಕೈಹಿಡಿದು ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ [“ಅನ್ಯ ಜನಾಂಗಗಳ ಬೆಳಕನ್ನಾಗಿಯೂ,” NW] ನೇಮಿಸಿದ್ದೇನೆ.”—ಯೆಶಾಯ 42:6, 7.
14. (ಎ) ಯೆಹೋವನು ತನ್ನ ಅಂಗೀಕೃತ ಸೇವಕನ ಕೈಹಿಡಿದುಕೊಳ್ಳುವುದರ ಅರ್ಥವೇನು? (ಬಿ) ಚುನಾಯಿತ ಸೇವಕನು ಯಾವ ಪಾತ್ರವನ್ನು ವಹಿಸುತ್ತಾನೆ?
14 ಜೀವದಾತನೂ ಪೋಷಕನೂ ಆದ ವಿಶ್ವದ ಮಹಾನ್ ಸೃಷ್ಟಿಕರ್ತನು, ತನ್ನ ಚುನಾಯಿತ ಸೇವಕನ ಕೈಹಿಡಿದು, ಅವನಿಗೆ ಪೂರ್ತಿಯಾದ ಮತ್ತು ಸತತವಾದ ಬೆಂಬಲವನ್ನು ಕೊಡುತ್ತೇನೆಂದು ವಾಗ್ದಾನಿಸುತ್ತಾನೆ. ಅದೆಷ್ಟು ಪುನರಾಶ್ವಾಸನದಾಯಕವಾಗಿದೆ! ಇದಲ್ಲದೆ, ಅವನನ್ನು “ಜನರಿಗೆ ಒಡಂಬಡಿಕೆ”ಯಾಗಿ ನೀಡುವ ಉದ್ದೇಶದಿಂದ ಯೆಹೋವನು ಅವನನ್ನು ಸುರಕ್ಷಿತವಾಗಿ ಇಡುತ್ತಾನೆ. ಒಡಂಬಡಿಕೆಯು ಒಂದು ಕರಾರು, ಒಂದು ಒಪ್ಪಂದ, ಒಂದು ಗಂಭೀರವಾದ ವಾಗ್ದಾನವಾಗಿದೆ. ಅದು ನಿಶ್ಚಿತವಾದ ಒಂದು ನಿರ್ದೇಶನವಾಗಿದೆ. ಹೌದು, ಯೆಹೋವನು ತನ್ನ ಸೇವಕನನ್ನು, “ಜನರಿಗೆ ವಿಧಿವತ್ತಾದ ಒಂದು ಪ್ರತಿಜ್ಞೆ” ಆಗಿ ಮಾಡಿದ್ದಾನೆ.—ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್.
15, 16. ಯೇಸು ಹೇಗೆ ‘ಅನ್ಯ ಜನಾಂಗಗಳ ಬೆಳಕಾಗಿ’ ಕಾರ್ಯನಡಿಸಿದನು?
15 ‘ಅನ್ಯ ಜನಾಂಗಗಳ ಬೆಳಕಿ’ನೋಪಾದಿ ಈ ವಾಗ್ದತ್ತ ಸೇವಕನು, “ಕುರುಡರಿಗೆ” ದೃಷ್ಟಿ ಕೊಟ್ಟು, “ಕತ್ತಲಲ್ಲಿ ಬಿದ್ದವರನ್ನು” ಬಿಡಿಸುವನು. ಯೇಸು ಹೀಗೆ ಮಾಡಿದನು. ಯೇಸು ಸತ್ಯಕ್ಕೆ ಸಾಕ್ಷಿಯನ್ನು ಕೊಡುವ ಮೂಲಕ ತನ್ನ ಸ್ವರ್ಗೀಯ ಪಿತನ ನಾಮವನ್ನು ಮಹಿಮೆಪಡಿಸಿದನು. (ಯೋಹಾನ 17:4, 6) ಅವನು ಧಾರ್ಮಿಕ ಅಸತ್ಯಗಳನ್ನು ಬಯಲುಪಡಿಸಿ, ರಾಜ್ಯದ ಸುವಾರ್ತೆಯನ್ನು ಸಾರಿ, ಧಾರ್ಮಿಕ ಬಂಧನದಲ್ಲಿದ್ದವರಿಗೆ ಆತ್ಮಿಕ ಬಿಡುಗಡೆಯ ಬಾಗಿಲನ್ನು ತೆರೆದನು. (ಮತ್ತಾಯ 15:3-9; ಲೂಕ 4:43; ಯೋಹಾನ 18:37) ಅವನು ಕತ್ತಲೆಗೆ ಸೇರಿದ ಕೃತ್ಯಗಳ ಕುರಿತು ಎಚ್ಚರಿಸಿ, ಸೈತಾನನನ್ನು “ಸುಳ್ಳಿಗೆ ಮೂಲಪುರುಷನು” ಮತ್ತು “ಇಹಲೋಕಾಧಿಪತಿ” ಎಂದು ಕರೆದು ಅವನನ್ನು ಬಯಲುಪಡಿಸಿದನು.—ಯೋಹಾನ 3:19-21; 8:44; 16:11.
16 “ನಾನೇ ಲೋಕಕ್ಕೆ ಬೆಳಕು” ಎಂದು ಯೇಸು ಹೇಳಿದನು. (ಯೋಹಾನ 8:12) ತನ್ನ ಪರಿಪೂರ್ಣ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ಸಮರ್ಪಿಸಿದಾಗ, ಅವನು ಅದನ್ನು ಎದ್ದುಕಾಣುವ ರೀತಿಯಲ್ಲಿ ರುಜುಪಡಿಸಿದನು. ಹೀಗೆ, ನಂಬಿಕೆಯಿಡುವವರಿಗೆ ಪಾಪಗಳ ಕ್ಷಮಾಪಣೆ, ದೇವರೊಂದಿಗೆ ಅಂಗೀಕೃತ ಸಂಬಂಧ ಮತ್ತು ನಿತ್ಯಜೀವದ ಪ್ರತೀಕ್ಷೆಯ ದಾರಿಯನ್ನು ಅವನು ತೆರೆದನು. (ಮತ್ತಾಯ 20:28; ಯೋಹಾನ 3:16) ಯೇಸು ತನ್ನ ಜೀವನದಾದ್ಯಂತ ಪರಿಪೂರ್ಣವಾದ ದೈವಿಕ ಭಕ್ತಿಯನ್ನು ಕಾಪಾಡಿಕೊಳ್ಳುವ ಮೂಲಕ, ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಿ, ಪಿಶಾಚನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸಿದನು. ಯೇಸು ನಿಜವಾಗಿಯೂ ಕುರುಡರಿಗೆ ದೃಷ್ಟಿ ನೀಡಿ, ಆತ್ಮಿಕ ಕತ್ತಲೆಯಲ್ಲಿ ಬಂದಿಗಳಾಗಿರುವವರ ವಿಮೋಚಕನಾದನು.
17. ಯಾವ ವಿಧಗಳಲ್ಲಿ ನಾವು ಬೆಳಕು ವಾಹಕರಾಗಿ ಕಾರ್ಯನಡಿಸುತ್ತೇವೆ?
17 ಪರ್ವತ ಪ್ರಸಂಗದಲ್ಲಿ, “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 5:14) ನಾವೂ ಬೆಳಕು ವಾಹಕರಾಗಿದ್ದೇವಲ್ಲವೇ? ನಮ್ಮ ಜೀವನ ರೀತಿಯ ಮೂಲಕ ಮತ್ತು ಸಾರುವ ಕೆಲಸದ ಮೂಲಕ, ನಿಜ ಜ್ಞಾನೋದಯದ ಮೂಲನಾದ ಯೆಹೋವನ ಕಡೆಗೆ ಜನರನ್ನು ನಡೆಸುವ ಸದವಕಾಶ ನಮಗಿದೆ. ಯೇಸುವನ್ನು ಅನುಸರಿಸುತ್ತ ನಾವು ಯೆಹೋವನ ನಾಮವನ್ನು ಪ್ರಸಿದ್ಧಪಡಿಸಿ, ಆತನ ಪರಮಾಧಿಕಾರವನ್ನು ಸಮರ್ಥಿಸಿ, ಆತನ ರಾಜ್ಯವನ್ನು ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿ ಸಾರುತ್ತೇವೆ. ಇದಲ್ಲದೆ, ಬೆಳಕು ವಾಹಕರಾದ ನಾವು ಧಾರ್ಮಿಕ ಸುಳ್ಳುಗಳನ್ನು ಬಯಲುಪಡಿಸಿ, ಕತ್ತಲೆಗೆ ಸಂಬಂಧಪಟ್ಟ ಅಶುದ್ಧ ಕಾರ್ಯಗಳ ಕುರಿತು ಎಚ್ಚರಿಕೆ ನೀಡಿ, ದುಷ್ಟನಾದ ಸೈತಾನನನ್ನು ಬಯಲಿಗೆಳೆಯುತ್ತೇವೆ.—ಅ. ಕೃತ್ಯಗಳು 1:8; 1 ಯೋಹಾನ 5:19.
“ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ”
18. ಯೆಹೋವನು ತನ್ನ ಜನರು ಏನನ್ನು ತಿಳಿಯುವಂತೆ ಮಾಡುತ್ತಾನೆ?
18 ಈಗ ಯೆಹೋವನು ತನ್ನ ಜನರ ಕಡೆಗೆ ಗಮನಹರಿಸುತ್ತಾ ಹೇಳುವುದು: “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು. ಇಗೋ, ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ತಲೆದೋರುವದಕ್ಕೆ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ.” (ಯೆಶಾಯ 42:8, 9) “ನನ್ನ ಸೇವಕನ” ಕುರಿತಾದ ಆ ಪ್ರವಾದನೆಯು ಕೆಲಸಕ್ಕೆ ಬಾರದ ದೇವತೆಗಳಿಂದಲ್ಲ, ಬದಲಾಗಿ ಜೀವಸ್ವರೂಪನಾದ ಒಬ್ಬನೇ ಸತ್ಯ ದೇವರಿಂದ ಕೊಡಲ್ಪಟ್ಟಿತು. ಅದು ಖಂಡಿತವಾಗಿ ನೆರವೇರಲಿತ್ತು ಮತ್ತು ಹಾಗೆಯೇ ಆಯಿತು. ಯೆಹೋವ ದೇವರು ನಿಶ್ಚಯವಾಗಿಯೂ ಹೊಸ ಸಂಗತಿಗಳ ಮೂಲನಾಗಿದ್ದಾನೆ, ಮತ್ತು ಅವು ಸಂಭವಿಸುವುದಕ್ಕೆ ಮೊದಲೇ ತನ್ನ ಜನರು ಅವುಗಳ ಕುರಿತು ತಿಳಿದುಕೊಳ್ಳುವಂತೆ ಆತನು ಮಾಡುತ್ತಾನೆ. ಆದಕಾರಣ, ನಮ್ಮ ಪ್ರತಿಕ್ರಿಯೆ ಹೇಗಿರಬೇಕು?
19, 20. (ಎ) ಯಾವ ಗೀತವನ್ನು ಹಾಡಲೇಬೇಕು? (ಬಿ) ಇಂದು ಯೆಹೋವನಿಗೆ ಸ್ತುತಿಗೀತಗಳನ್ನು ಯಾರು ಹಾಡುತ್ತಿದ್ದಾರೆ?
19 ಯೆಶಾಯನು ಬರೆಯುವುದು: “ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ. ಅರಣ್ಯವೂ ಅಲ್ಲಿನ ಊರುಗಳೂ ಕೇದಾರಿನವರ ಗ್ರಾಮಗಳೂ ಆರ್ಬಟಿಸಲಿ, ಸೆಲಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಕೇಕೆಹಾಕಲಿ. ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.”—ಯೆಶಾಯ 42:10-12.
20 ನಗರಗಳು, ಗ್ರಾಮಗಳು ಮತ್ತು ದ್ವೀಪಾಂತರ ವಾಸಿಗಳು ಮತ್ತು “ಕೇದಾರಿನವರ” ಅಂದರೆ ಮರುಭೂಮಿಯ ಶಿಬಿರವಾಸಿಗಳು ಕೂಡ ಯೆಹೋವನಿಗೆ ಸ್ತುತಿಗೀತಗಳನ್ನು ಹಾಡುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. ನಮ್ಮ ದಿನಗಳಲ್ಲಿ ಈ ಪ್ರವಾದನ ಆಮಂತ್ರಣಕ್ಕೆ ಲಕ್ಷಾಂತರ ಜನರು ಓಗೊಟ್ಟಿರುವುದು ಅದೆಷ್ಟು ರೋಮಾಂಚಕವಾದದ್ದಾಗಿದೆ! ಅವರು ದೇವರ ವಾಕ್ಯದ ಸತ್ಯವನ್ನು ತಮ್ಮದಾಗಿ ಮಾಡಿಕೊಂಡು, ಯೆಹೋವನನ್ನು ತಮ್ಮ ದೇವರಾಗಿ ಅಂಗೀಕರಿಸಿದ್ದಾರೆ. ಯೆಹೋವನ ಜನರು 230ಕ್ಕೂ ಹೆಚ್ಚು ದೇಶಗಳಲ್ಲಿ ಈ ನೂತನ ಗೀತವನ್ನು ಹಾಡುತ್ತಿದ್ದಾರೆ, ಅಂದರೆ ಯೆಹೋವನಿಗೆ ಮಹಿಮೆಯನ್ನು ಸಲ್ಲಿಸುತ್ತಿದ್ದಾರೆ. ಈ ಬಹುಸಾಂಸ್ಕೃತಿಕ, ಬಹುಭಾಷೀಯ ಮತ್ತು ಬಹುಜನಾಂಗೀಯ ಗಾಯಕರತಂಡದೊಂದಿಗೆ ಹಾಡುವುದು ಅದೆಷ್ಟು ರೋಮಾಂಚಕವಾದದ್ದಾಗಿದೆ!
21. ಯೆಹೋವನಿಗೆ ಹಾಡಲ್ಪಡುವ ಸ್ತುತಿಗೀತವನ್ನು ದೇವಜನರ ವೈರಿಗಳು ಏಕೆ ನಿಲ್ಲಿಸಲಾರರು?
21 ವಿರೋಧಿಗಳು ದೇವರಿಗೆ ವಿರುದ್ಧವಾಗಿ ಎದ್ದು ಈ ಸ್ತುತಿಗೀತದ ಧ್ವನಿಯನ್ನು ಅಡಗಿಸಬಲ್ಲರೊ? ಅದು ಅಸಾಧ್ಯ! “ಯೆಹೋವನು ಶೂರನಂತೆ ಹೊರಟು ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು; ಆರ್ಬಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.” (ಯೆಶಾಯ 42:13) ಯೆಹೋವನಿಗೆ ಎದುರಾಗಿ ಯಾವ ಶಕ್ತಿಯು ತಾನೇ ನಿಂತೀತು? ಸುಮಾರು 3,500 ವರ್ಷಗಳ ಹಿಂದೆ ಪ್ರವಾದಿಯಾದ ಮೋಶೆಯೂ ಇಸ್ರಾಯೇಲ್ಯರೂ ಗಟ್ಟಿಯಾಗಿ ಹಾಡಿದ್ದು: “ಯೆಹೋವನು ಯುದ್ಧಶೂರನು; ಆತನ ನಾಮಧೇಯವು ಯೆಹೋವನೇ. ಆತನು ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದಲ್ಲಿ ಕೆಡವಿದನು; ಅವನ ಶ್ರೇಷ್ಠವೀರರನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.” (ವಿಮೋಚನಕಾಂಡ 15:3, 4) ಆಗ ಯೆಹೋವನು ಆ ಸಮಯದ ಅತಿ ಬಲಾಢ್ಯವಾದ ಮಿಲಿಟರಿ ಸೈನ್ಯವನ್ನು ಸೋಲಿಸಿ ಜಯಹೊಂದಿದನು. ಯೆಹೋವನು ಮಹಾ ಯುದ್ಧವೀರನಂತೆ ಮುಂದೆ ಸಾಗುವಾಗ, ದೇವಜನರ ಯಾವ ವೈರಿಯೂ ಜಯಹೊಂದಲಾರನು.
“ನಾನು ಬಹುಕಾಲದಿಂದ . . . ಮೌನವಾಗಿ” ಇದ್ದೇನೆ
22, 23. ಯೆಹೋವನು ‘ಬಹುಕಾಲದಿಂದ ಮೌನವಾಗಿ’ ಇರುವುದೇಕೆ?
22 ಯೆಹೋವನು ತನ್ನ ಶತ್ರುಗಳಿಗೆ ನ್ಯಾಯತೀರ್ಪನ್ನು ವಿಧಿಸುವಾಗಲೂ ನಿಷ್ಪಕ್ಷಪಾತಿಯೂ ನ್ಯಾಯವಂತನೂ ಆಗಿರುತ್ತಾನೆ. ಆತನು ಹೇಳುವುದು: “ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. [ಈಗ] ಹೆರುವವಳಂತೆ ಮೂಲುಗುತ್ತಾ ಅಸುರುಸಿರಿನೊಡನೆ ಏದುವೆನು. ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ತಾರಿಸಿ ನದಿಗಳನ್ನು ಒಣದಿಣ್ಣೆಮಾಡಿ ಕೆರೆಗಳನ್ನು ಬತ್ತಿಸುವೆನು.”—ಯೆಶಾಯ 42:14, 15.
23 ತನ್ನ ನ್ಯಾಯತೀರ್ಪನ್ನು ಜಾರಿಗೆ ತರುವ ಮೊದಲು, ತಪ್ಪಿತಸ್ಥರು ತಮ್ಮ ಕೆಟ್ಟಮಾರ್ಗಗಳಿಂದ ತಿರುಗಲಿಕ್ಕಾಗಿ ಯೆಹೋವನು ಅವರಿಗೆ ಸಮಯಾವಕಾಶವನ್ನು ಕೊಡುತ್ತಾನೆ. (ಯೆರೆಮೀಯ 18:7-10; 2 ಪೇತ್ರ 3:9) ಉದಾಹರಣೆಗೆ, ಬಾಬೆಲಿನವರನ್ನು ತೆಗೆದುಕೊಳ್ಳಿ. ಪ್ರಮುಖ ಲೋಕ ಶಕ್ತಿಯಾಗಿದ್ದ ಬಾಬೆಲ್ ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ಧ್ವಂಸಗೊಳಿಸಿತು. ಅಪನಂಬಿಗಸ್ತರಾಗಿದ್ದ ಇಸ್ರಾಯೇಲ್ಯರಿಗೆ ಶಿಕ್ಷೆಯನ್ನು ನೀಡಲಿಕ್ಕಾಗಿ ಯೆಹೋವನು ಇದನ್ನು ಅನುಮತಿಸುತ್ತಾನೆ. ಆದರೂ, ಬಾಬೆಲಿನವರು ತಾವು ವಹಿಸುತ್ತಿರುವ ಪಾತ್ರವನ್ನು ಗುರುತಿಸುವುದಿಲ್ಲ. ಅವರು ದೇವರ ನ್ಯಾಯತೀರ್ಪು ಏನನ್ನು ಕೇಳಿಕೊಂಡಿತೊ ಅದಕ್ಕಿಂತಲೂ ಹೆಚ್ಚು ಕಠಿನವಾಗಿ ದೇವಜನರನ್ನು ಹಿಂಸಿಸುತ್ತಾರೆ. (ಯೆಶಾಯ 47:6, 7; ಜೆಕರ್ಯ 1:15) ತನ್ನ ಜನರು ಈ ರೀತಿಯಲ್ಲಿ ಯಾತನೆಪಡುವುದನ್ನು ನೋಡುವಾಗ ಸತ್ಯ ದೇವರಿಗೆ ಅದೆಷ್ಟು ನೋವಾಗಿದ್ದಿರಬೇಕು! ಆದರೂ, ತನ್ನ ತಕ್ಕ ಸಮಯವು ಬರುವ ವರೆಗೂ, ಆತನು ಕ್ರಮ ಕೈಕೊಳ್ಳುವುದನ್ನು ತಡೆದು ಹಿಡಿಯುತ್ತಾನೆ. ಆ ಸಮಯದಲ್ಲಿ, ಆತನು ತನ್ನ ಒಡಂಬಡಿಕೆಯ ಜನರನ್ನು ವಿಮೋಚಿಸಲಿಕ್ಕಾಗಿ, ಹೆರುತ್ತಿರುವ ಒಬ್ಬ ಹೆಂಗಸಿನಂತೆ ಪ್ರಯಾಸಪಟ್ಟು, ಅವರನ್ನು ಒಂದು ಸ್ವತಂತ್ರ ಜನಾಂಗವಾಗಿ ಹೊರತರುತ್ತಾನೆ. ಇದನ್ನು ಪೂರೈಸಲಿಕ್ಕಾಗಿ, ಸಾ.ಶ.ಪೂ. 539ರಲ್ಲಿ ಆತನು ಬಾಬೆಲನ್ನೂ ಅದರ ರಕ್ಷಣಾವ್ಯವಸ್ಥೆಯನ್ನೂ ಬತ್ತಿಸಿ ನಾಶಮಾಡುತ್ತಾನೆ.
24. ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರ ಮುಂದೆ ಯಾವ ಪ್ರತೀಕ್ಷೆಯನ್ನಿಡುತ್ತಾನೆ?
24 ದೇಶಭ್ರಷ್ಟರಾಗಿ ಅಷ್ಟು ಕಾಲ ಕಳೆದ ಬಳಿಕ, ಅಂತಿಮವಾಗಿ ಸ್ವದೇಶಕ್ಕೆ ತೆರಳುವ ದಾರಿ ತೆರೆದಾಗ ದೇವಜನರು ಎಷ್ಟೊಂದು ರೋಮಾಂಚನಗೊಂಡಿದ್ದಿರಬೇಕು! (2 ಪೂರ್ವಕಾಲವೃತ್ತಾಂತ 36:22, 23) ಯೆಹೋವನ ಈ ವಾಗ್ದಾನದ ನೆರವೇರಿಕೆಯನ್ನು ಅನುಭವಿಸಲು ಅವರು ತುಂಬ ಹರ್ಷಗೊಂಡಿದ್ದಿರಬೇಕು: “ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಯಿಸುವೆನು; ಅವರೆದುರಿನ ಕತ್ತಲನ್ನು ಬೆಳಕುಮಾಡಿ ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು [“ನಾನು ಅವರನ್ನು ಬಿಟ್ಟುಬಿಡೆನು,” NW].”—ಯೆಶಾಯ 42:16.
25. (ಎ) ಇಂದು ಯೆಹೋವನ ಜನರು ಯಾವುದರ ಕುರಿತು ಖಾತ್ರಿಯಿಂದಿರಬಲ್ಲರು? (ಬಿ) ನಮ್ಮ ದೃಢನಿಶ್ಚಯ ಏನಾಗಿರಬೇಕು?
25 ಈ ಮಾತುಗಳು ಇಂದು ಹೇಗೆ ಅನ್ವಯಿಸುತ್ತವೆ? ದೀರ್ಘಕಾಲದಿಂದ, ಅಂದರೆ ಶತಮಾನಗಳಿಂದ ಜನಾಂಗಗಳು ತಮಗೆ ಇಷ್ಟಬಂದಂತೆ ಕಾರ್ಯನಡಿಸಲು ಯೆಹೋವನು ಬಿಟ್ಟಿದ್ದಾನೆ. ಆದರೆ, ವಿವಾದಾಂಶಗಳನ್ನು ಇತ್ಯರ್ಥಮಾಡುವ ಆತನ ನೇಮಿತ ಸಮಯವು ನಿಕಟವಾಗಿದೆ. ಆಧುನಿಕ ದಿನಗಳಲ್ಲಿ ತನ್ನ ನಾಮಕ್ಕೆ ಸಾಕ್ಷಿ ನೀಡುವರೆ ಆತನು ಒಂದು ಜನಸಮೂಹವನ್ನು ಎಬ್ಬಿಸಿದ್ದಾನೆ. ಅವರ ಮುಂದೆ ಎದ್ದುಬಂದಿರುವ ವಿರೋಧವನ್ನು ನೆಲಸಮಮಾಡಿ, ಅವರು ತನ್ನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸುವಂತೆ ಆತನು ಅವರ ಮಾರ್ಗಗಳನ್ನು ಸರಾಗಮಾಡಿದ್ದಾನೆ. (ಯೋಹಾನ 4:24) “ನಾನು ಅವರನ್ನು ಬಿಟ್ಟುಬಿಡೆನು” ಎಂದು ಆತನು ಮಾತುಕೊಟ್ಟನು ಮಾತ್ರವಲ್ಲ, ಕೊಟ್ಟ ಮಾತಿಗನುಸಾರ ನಡೆದುಕೊಂಡಿದ್ದಾನೆ ಸಹ. ಆದರೆ, ಸುಳ್ಳು ದೇವರುಗಳನ್ನು ಆರಾಧಿಸಲು ಪಟ್ಟುಹಿಡಿಯುವವರಿಗೆ ಏನಾಗುತ್ತದೆ? ಯೆಹೋವನು ಹೇಳುವುದು: “ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು ನೀವೇ ನಮ್ಮ ದೇವರುಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.” (ಯೆಶಾಯ 42:17) ಆದಕಾರಣ, ಯೆಹೋವನ ಚುನಾಯಿತನಂತೆ ನಾವು ಆತನಿಗೆ ನಂಬಿಗಸ್ತರಾಗಿ ಉಳಿಯುವುದು ಎಷ್ಟು ಅತ್ಯಾವಶ್ಯಕವಾದ ವಿಷಯವಾಗಿದೆ!
‘ಕಿವುಡನೂ ಕುರುಡನೂ ಆದ ಸೇವಕನು’
26, 27. ಇಸ್ರಾಯೇಲು ‘ಕುರುಡನೂ ಕಿವುಡನೂ ಆದ ಸೇವಕನು’ ಆದದ್ದು ಹೇಗೆ, ಮತ್ತು ಇದರ ಪರಿಣಾಮಗಳೇನು?
26 ದೇವರ ಚುನಾಯಿತ ಸೇವಕನಾದ ಯೇಸು ಕ್ರಿಸ್ತನು, ಮರಣದ ವರೆಗೆ ನಂಬಿಗಸ್ತನಾಗಿದ್ದನು. ಆದರೆ ಯೆಹೋವನ ಜನರಾದ ಇಸ್ರಾಯೇಲ್ಯರು ಅಪನಂಬಿಗಸ್ತ ಸೇವಕರಾಗಿ ಪರಿಣಮಿಸಿದರು, ಮತ್ತು ಆತ್ಮಿಕ ಅರ್ಥದಲ್ಲಿ ಕಿವುಡರೂ ಕುರುಡರೂ ಆದರು. ಅವರನ್ನು ಸಂಬೋಧಿಸುತ್ತ ಯೆಹೋವನು ಹೇಳುವುದು: “ಕಿವುಡರೇ, ಕೇಳಿರಿ! ಕುರುಡರೇ, ನಿಮ್ಮ ಕಣ್ಣಿಟ್ಟು ನೋಡಿರಿ! ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೆ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧಕರು ಯಾರು? ನೀನು ಬಹು ವಿಷಯಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಇವನ ಕಿವಿ ತೆರೆದಿದ್ದರೂ ಕೇಳನು. ಯೆಹೋವನು ಧರ್ಮಸ್ವರೂಪನಾಗಿರುವದರಿಂದ ಧರ್ಮೋಪದೇಶವನ್ನು ಘನಪಡಿಸಿ ಮಹತ್ತಿಗೆ ತರಬೇಕೆಂದು ಇಷ್ಟಪಟ್ಟನು.”—ಯೆಶಾಯ 42:18-21.
27 ಇಸ್ರಾಯೇಲ್ಯರು ಎಷ್ಟು ಶೋಚನೀಯವಾಗಿ ವಿಫಲಗೊಂಡರು! ಅವರು ಜನಾಂಗಗಳ ದೆವ್ವದೇವತೆಗಳನ್ನು ಪದೇ ಪದೇ ಆರಾಧಿಸತೊಡಗಿದರು. ಆಗ ಯೆಹೋವನು ತನ್ನ ಸಂದೇಶವಾಹಕರನ್ನು ಮತ್ತೆ ಮತ್ತೆ ಅವರ ಬಳಿಗೆ ಕಳುಹಿಸಿದನು. ಆದರೆ ಆತನ ಜನರು ಅವರಿಗೆ ಕಿವಿಗೊಡಲಿಲ್ಲ. (2 ಪೂರ್ವಕಾಲವೃತ್ತಾಂತ 36:14-16) ಯೆಶಾಯನು ಇದರ ಅಂತ್ಯಫಲವನ್ನು ಮುಂತಿಳಿಸುತ್ತಾನೆ: “ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ; ಎಲ್ಲರೂ ಹಳ್ಳಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ, ಸೆರೆಮನೆಗಳಲ್ಲಿ ಮುಚ್ಚಲ್ಪಟ್ಟಿದ್ದಾರೆ; ಅವರು ಸುಲಿಗೆಯಾಗಿದ್ದರೂ ಯಾರೂ ಬಿಡಿಸರು, ಸೂರೆಯಾಗಿದ್ದರೂ ಯಾರೂ ಹಿಂದಕ್ಕೆ ಬಿಡು ಅನ್ನರು. ನಿಮ್ಮಲ್ಲಿ ಯಾರು ಈ ಮಾತಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು? ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾವನಿಗೆ ವಿರುದ್ಧವಾಗಿ ನಾವು ದ್ರೋಹಮಾಡಿದೆವೋ ಆ ಯೆಹೋವನಲ್ಲವೆ. ಆತನ ಜನರು ಆತನ ಮಾರ್ಗಗಳಲ್ಲಿ ನಡೆಯಲೊಲ್ಲದೆ ಆತನ ಉಪದೇಶವನ್ನು ಕೇಳದೆ ಹೋದರಷ್ಟೆ. ಆಗ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹತ್ತಿತು, ಆದರೆ ಅವರು ತಿಳಿಯಲಿಲ್ಲ; ದಹಿಸಿತು, ಲಕ್ಷ್ಯಕ್ಕೆ ತರಲಿಲ್ಲ.”—ಯೆಶಾಯ 42:22-25.
28. (ಎ) ಯೆಹೂದದ ನಿವಾಸಿಗಳ ಉದಾಹರಣೆಯಿಂದ ನಾವೇನನ್ನು ಕಲಿಯಬಲ್ಲೆವು? (ಬಿ) ನಾವು ಯೆಹೋವನ ಮೆಚ್ಚುಗೆಯನ್ನು ಹೇಗೆ ಪಡೆಯಲು ಪ್ರಯತ್ನಿಸಬಹುದು?
28 ಯೆಹೂದದ ನಿವಾಸಿಗಳ ಅಪನಂಬಿಗಸ್ತಿಕೆಯ ಕಾರಣ, ಸಾ.ಶ.ಪೂ. 607ರಲ್ಲಿ ಆ ದೇಶವು ಸುಲಿಗೆ ಮತ್ತು ಸೂರೆಗೊಳಗಾಗುವಂತೆ ಯೆಹೋವನು ಬಿಟ್ಟನು. ಬಾಬೆಲಿನವರು ಯೆಹೋವನ ಆಲಯವನ್ನು ಸುಟ್ಟುಹಾಕಿ, ಯೆರೂಸಲೇಮನ್ನು ಧ್ವಂಸಗೊಳಿಸಿ, ಯೆಹೂದ್ಯರನ್ನು ಸೆರೆಯಾಳುಗಳಾಗಿ ಒಯ್ಯುತ್ತಾರೆ. (2 ಪೂರ್ವಕಾಲವೃತ್ತಾಂತ 36:17-21) ನಾವೂ ಈ ಎಚ್ಚರಿಕೆಯ ಉದಾಹರಣೆಯನ್ನು ಮನಸ್ಸಿಗೆ ತೆಗೆದುಕೊಂಡು, ಯೆಹೋವನ ಉಪದೇಶಗಳ ವಿಷಯದಲ್ಲಿ ಕಿವುಡರೂ ಆತನ ಲಿಖಿತ ವಾಕ್ಯದ ವಿಷಯದಲ್ಲಿ ಕುರುಡರೂ ಆಗದಿರೋಣ. ಬದಲಿಗೆ, ನಾವು ಯೆಹೋವನು ತಾನೇ ಅಂಗೀಕರಿಸಿರುವ ಸೇವಕನಾದ ಕ್ರಿಸ್ತ ಯೇಸುವನ್ನು ಅನುಕರಿಸುವ ಮೂಲಕ, ಯೆಹೋವನ ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸೋಣ. ಯೇಸುವಿನಂತೆ, ನಾವು ನಮ್ಮ ನಡೆನುಡಿಗಳಿಂದ ನಿಜವಾದ ನ್ಯಾಯವನ್ನು ತೋರಿಸೋಣ. ಈ ರೀತಿಯಲ್ಲಿ, ನಾವು ಯೆಹೋವನ ಜನರಾಗಿ ಉಳಿಯುವೆವು, ಮತ್ತು ಸತ್ಯ ದೇವರನ್ನು ಸ್ತುತಿಸಿ ಆತನಿಗೆ ಮಹಿಮೆಯನ್ನು ತರುವ ಬೆಳಕು ವಾಹಕರಾಗಿರುವೆವು.
[ಪುಟ 33ರಲ್ಲಿರುವ ಚಿತ್ರಗಳು]
ನಿಜವಾದ ನ್ಯಾಯವು ಕನಿಕರ ಮತ್ತು ಕರುಣೆಯುಳ್ಳದ್ದಾಗಿದೆ
[ಪುಟ 34ರಲ್ಲಿರುವ ಚಿತ್ರ]
ಒಳ್ಳೆಯ ನೆರೆಯವನಾದ ಸಮಾರ್ಯದವನ ಸಾಮ್ಯದಲ್ಲಿ, ನಿಜವಾದ ನ್ಯಾಯವು ಎಲ್ಲ ರೀತಿಯ ಜನರನ್ನು ಒಳಗೂಡುತ್ತದೆ ಎಂಬುದನ್ನು ಯೇಸು ತೋರಿಸಿದನು
[ಪುಟ 36ರಲ್ಲಿರುವ ಚಿತ್ರಗಳು]
ಇತರರನ್ನು ಉತ್ತೇಜಿಸುವವರೂ ದಯಾಪರರೂ ಆಗಿರುವ ಮೂಲಕ ನಾವು ದೈವಿಕ ನ್ಯಾಯವನ್ನು ಕಾರ್ಯರೂಪದಲ್ಲಿ ತೋರಿಸುತ್ತೇವೆ
[ಪುಟ 39ರಲ್ಲಿರುವ ಚಿತ್ರಗಳು]
ನಮ್ಮ ಸಾರುವ ಚಟುವಟಿಕೆಯ ಮೂಲಕ ನಾವು ದೈವಿಕ ನ್ಯಾಯವನ್ನು ತೋರಿಸುತ್ತೇವೆ
[ಪುಟ 40ರಲ್ಲಿರುವ ಚಿತ್ರ]
ನೇಮಿತ ಸೇವಕನು ‘ಅನ್ಯ ಜನಾಂಗಗಳಿಗೆ ಬೆಳಕಾಗಿ’ ಕೊಡಲ್ಪಟ್ಟನು