ಅಧ್ಯಾಯ ಏಳು
ಅಪನಂಬಿಗಸ್ತ ದ್ರಾಕ್ಷಾತೋಟಕ್ಕೆ ಅಯ್ಯೋ!
1, 2. ಆ “ಪ್ರಿಯನು” ಏನನ್ನು ನೆಡುತ್ತಾನೆ, ಆದರೆ ಅದು ಹೇಗೆ ನಿರಾಶೆಯನ್ನುಂಟುಮಾಡುತ್ತದೆ?
“ಭಾಷೆಯ ಉತ್ಕೃಷ್ಟವಾದ ಸೊಗಸು ಮತ್ತು ಪರಿಣಾಮಕಾರಿ ಸಂವಾದದ ಕೌಶಲದಲ್ಲಿ ಈ ಸಾಮ್ಯಕ್ಕೆ ಸರಿಸಾಟಿಯಿಲ್ಲ” ಎಂದರು ಒಬ್ಬ ಬೈಬಲ್ ವ್ಯಾಖ್ಯಾನಕಾರರು. ಅವರು ಯೆಶಾಯ 5ನೆಯ ಅಧ್ಯಾಯದ ಆರಂಭದ ವಚನಗಳನ್ನು ಸೂಚಿಸಿ ಹೇಳುತ್ತಿದ್ದರು. ಯೆಶಾಯನ ಮಾತುಗಳು ಕೇವಲ ಒಂದು ಕಲಾಕೃತಿಗಿಂತಲೂ ಹೆಚ್ಚಾಗಿವೆ. ಯೆಹೋವನು ತನ್ನ ಜನಕ್ಕೆ ತೋರಿಸುವ ಪ್ರೀತಿಯ ಆರೈಕೆಯ ಹೃದಯಸ್ಪರ್ಶಿಯಾದ ವರ್ಣನೆಯು ಅದಾಗಿದೆ. ಅದೇ ಸಮಯದಲ್ಲಿ, ಈ ಮಾತುಗಳು ದೇವರನ್ನು ಅಸಮಾಧಾನಗೊಳಿಸುವ ವಿಷಯಗಳ ಕುರಿತು ನಮ್ಮನ್ನು ಎಚ್ಚರಿಸುತ್ತವೆ.
2 ಯೆಶಾಯನ ಸಾಮ್ಯವು ಆರಂಭಗೊಳ್ಳುವುದು: “ನನ್ನ ಪ್ರಿಯನನ್ನೂ ಅವನ ತೋಟವನ್ನೂ ಕುರಿತ ನನ್ನ ಪ್ರಿಯನ ಒಂದು ಗೀತವನ್ನು ನಾನು ಹಾಡುವೆ, ಕೇಳಿರಿ. ಸಾರವತ್ತಾದ ಗುಡ್ಡದ ಮೇಲೆ ನನ್ನ ಪ್ರಿಯನಿಗೆ ದ್ರಾಕ್ಷೆಯ ತೋಟವಿತ್ತು. ಅವನು ಅದನ್ನು ಅಗತೆಮಾಡಿ ಕಲ್ಲುಗಳನ್ನು ತೆಗೆದುಹಾಕಿ ಒಳ್ಳೊಳ್ಳೇ ದ್ರಾಕ್ಷೆಯ ಸಸಿಗಳನ್ನು ನೆಟ್ಟು ಮಧ್ಯದಲ್ಲಿ ಬುರುಜನ್ನು ಕಟ್ಟಿ ದ್ರಾಕ್ಷೆಯ ತೊಟ್ಟಿಯನ್ನು ಕೊರೆಯಿಸಿ ಮಾಡಿಕೊಂಡು ತೋಟವು [ಒಳ್ಳೇ] ದ್ರಾಕ್ಷೆಯ ಹಣ್ಣನ್ನು ಕೊಡುವದೆಂದು ಎದುರು ನೋಡುತ್ತಿರಲು ಅದು ಹೊಲಸುಹಣ್ಣನ್ನು ಬಿಟ್ಟಿತು.”—ಯೆಶಾಯ 5:1, 2; ಹೋಲಿಸಿ ಮಾರ್ಕ 12:1.
ದ್ರಾಕ್ಷಾತೋಟದ ಆರೈಕೆ
3, 4. ದ್ರಾಕ್ಷೇತೋಟಕ್ಕೆ ಯಾವ ಪ್ರೀತಿಯ ಆರೈಕೆಯನ್ನು ಮಾಡಲಾಗುತ್ತದೆ?
3 ಈ ಸಾಮ್ಯವನ್ನು ತನ್ನ ಕೇಳುಗರಿಗೆ ಯೆಶಾಯನು ವಾಸ್ತವವಾಗಿ ಹಾಡಿರಲಿ, ಇಲ್ಲದಿರಲಿ, ಅದು ಅವರ ಗಮನವನ್ನು ಸೆಳೆಯುತ್ತದೆಂಬುದೇನೋ ಖಂಡಿತ. ಒಂದು ದ್ರಾಕ್ಷೆ ತೋಟದ ನೆಡುವ ಕೆಲಸ ಗೊತ್ತಿರುವ ಹೆಚ್ಚಿನವರಿಗೆ ಯೆಶಾಯನ ವರ್ಣನೆಯು ಸುವ್ಯಕ್ತವೂ ವಾಸ್ತವಿಕವೂ ಆಗಿದೆ. ಇಂದಿನ ದ್ರಾಕ್ಷೇ ಕೃಷಿಗಾರರಂತೆ, ದ್ರಾಕ್ಷೇತೋಟದ ಯಜಮಾನನು ದ್ರಾಕ್ಷೇಬೀಜಗಳನ್ನು ಬಿತ್ತುವುದಿಲ್ಲ. ಬದಲಿಗೆ “ಒಳ್ಳೊಳ್ಳೇ ದ್ರಾಕ್ಷೆಯ ಸಸಿಗಳನ್ನು” ಅಂದರೆ ಇನ್ನೊಂದು ದ್ರಾಕ್ಷೇಬಳ್ಳಿಯಿಂದ ಕತ್ತರಿಸಿದ ಬಳ್ಳಿತುಂಡು ಅಥವಾ ಚಿಗುರನ್ನು ನೆಡುತ್ತಾನೆ. ಅವನು ಯೋಗ್ಯವಾಗಿಯೇ, ದ್ರಾಕ್ಷೇತೋಟವು ಸಮೃದ್ಧಿಯಾಗಿ ಬೆಳೆಯುವಂತೆ ಇದನ್ನು “ಸಾರವತ್ತಾದ ಗುಡ್ಡದ” ಬದಿಯಲ್ಲಿ ನೆಡುತ್ತಾನೆ.
4 ದ್ರಾಕ್ಷೇತೋಟ ಫಲವತ್ತಾಗಿ ಬೆಳೆಯಬೇಕಾದರೆ ಕಠಿನ ಶ್ರಮ ಅಗತ್ಯ. ಯಜಮಾನನು ‘ಅಗತೆಮಾಡಿ ಕಲ್ಲುಗಳನ್ನು ತೆಗೆದುಹಾಕಿದನೆಂಬ’ ಯೆಶಾಯನ ವರ್ಣನೆಯು ಬಳಲಿಕೆಯ ಆಯಾಸಕರ ಕೆಲಸವನ್ನು ಸೂಚಿಸುತ್ತದೆ! ಅವನು ‘ಬುರುಜನ್ನು ಕಟ್ಟಲು’ ಪ್ರಾಯಶಃ ದೊಡ್ಡ ಕಲ್ಲುಗಳನ್ನು ಉಪಯೋಗಿಸುತ್ತಾನೆ. ಪುರಾತನ ಕಾಲಗಳಲ್ಲಿ ಬೆಳೆಯನ್ನು ಕಳ್ಳರಿಂದ ಮತ್ತು ಮೃಗಗಳಿಂದ ರಕ್ಷಿಸಲಿಕ್ಕಾಗಿ ಕಾವಲುಗಾರರು ಇಂತಹ ಬುರುಜುಗಳನ್ನು ಉಪಯೋಗಿಸುತ್ತಿದ್ದರು.a ಅಲ್ಲದೆ, ದ್ರಾಕ್ಷೇತೋಟದ ದಿಬ್ಬೆಗಳ ಎಲ್ಲೆಗೆರೆಯಾಗಿ ಅವನು ಒಂದು ಕಲ್ಲಿನ ಗೋಡೆಯನ್ನು ಕಟ್ಟುತ್ತಾನೆ. (ಯೆಶಾಯ 5:5) ಆವಶ್ಯಕವಾದ ಮೇಲ್ಮಣ್ಣನ್ನು ನೀರು ಕೊಚ್ಚಿಕೊಂಡು ಹೋಗದಂತೆ ತಡೆದುಹಿಡಿಯಲು, ಇದನ್ನು ಸಾಮಾನ್ಯವಾಗಿ ಕಟ್ಟಲಾಗುತ್ತಿತ್ತು.
5. ಯಜಮಾನನು ತನ್ನ ದ್ರಾಕ್ಷೇತೋಟದಿಂದ ನ್ಯಾಯವಾಗಿ ಏನನ್ನು ನಿರೀಕ್ಷಿಸುತ್ತಾನೆ, ಆದರೆ ಅವನು ಏನು ಪಡೆಯುತ್ತಾನೆ?
5 ತನ್ನ ದ್ರಾಕ್ಷೇತೋಟವನ್ನು ಕಾಪಾಡಲು ಅಷ್ಟೊಂದು ಪ್ರಯತ್ನಪಟ್ಟಿರುವ ಯಜಮಾನನಿಗೆ, ಅದು ಒಳ್ಳೇ ಫಲವನ್ನು ಫಲಿಸಬೇಕೆಂದು ನಿರೀಕ್ಷಿಸಲು ಸರ್ವ ಹಕ್ಕೂ ಇದೆ. ಇದನ್ನು ಎದುರುನೋಡುತ್ತ ಅವನು ಒಂದು ದ್ರಾಕ್ಷೆಯ ತೊಟ್ಟಿಯನ್ನು ಕೊರೆಯಿಸುತ್ತಾನೆ. ಆದರೆ ಅಪೇಕ್ಷಿತ ಬೆಳೆ ಸಿಗುತ್ತದೊ? ಇಲ್ಲ, ಆ ತೋಟವು ಹೊಲಸಾದ ಕಾಡು ದ್ರಾಕ್ಷೇಹಣ್ಣುಗಳನ್ನು ಫಲಿಸುತ್ತದೆ.
ದ್ರಾಕ್ಷೇತೋಟ ಮತ್ತು ಅದರ ಯಜಮಾನ
6, 7. (ಎ) ದ್ರಾಕ್ಷೇತೋಟದ ಯಜಮಾನನು ಯಾರು, ಮತ್ತು ದ್ರಾಕ್ಷೇತೋಟವೆಂದರೇನು? (ಬಿ) ಯಾವ ನ್ಯಾಯವಿಚಾರಣೆಯನ್ನು ಯಜಮಾನನು ಕೇಳಿಕೊಳ್ಳುತ್ತಾನೆ?
6 ಹಾಗಾದರೆ ಯಜಮಾನನು ಯಾರು ಮತ್ತು ದ್ರಾಕ್ಷೇತೋಟವೆಂದರೇನು? ತೋಟದ ಯಜಮಾನನು ಖುದ್ದಾಗಿ ಮಾತಾಡುವಾಗ ಈ ಪ್ರಶ್ನೆಗಳ ಉತ್ತರಗಳಿಗೆ ಕೈತೋರಿಸುತ್ತಾನೆ: “ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ಈಗ ನನಗೂ ನನ್ನ ತೋಟಕ್ಕೂ ನ್ಯಾಯತೀರಿಸಿರಿ, ನನ್ನ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು [ಒಳ್ಳೇ] ದ್ರಾಕ್ಷೆಯನ್ನು ಕೊಡುವದೆಂದು ನಾನು ನಿರೀಕ್ಷಿಸುತ್ತಿರಲು ಏಕೆ ಹೊಲಸುಹಣ್ಣನ್ನು ಬಿಟ್ಟಿತು? ನನ್ನ ತೋಟವನ್ನು ಏನು ಮಾಡುವೆನೋ ಈಗ ನಿಮಗೆ ತಿಳಿಸುವೆನು, ಕೇಳಿರಿ; ಅದರ ಬೇಲಿಯನ್ನು ಕೀಳುವೆನು, ದನವು ಅದನ್ನು ಮೇಯ್ದುಬಿಡುವದು; ಅದರ ಗೋಡೆಯನ್ನು ಕೆಡವಿಹಾಕುವೆನು, ಅದು ತುಳಿದಾಟಕ್ಕೆ ಈಡಾಗುವದು.”—ಯೆಶಾಯ 5:3-5.
7 ಹೌದು, ಯೆಹೋವನೇ ಆ ದ್ರಾಕ್ಷೇತೋಟದ ಯಜಮಾನನು. ಮತ್ತು ಅವನು ತನ್ನನ್ನು ಒಂದು ಸಾಂಕೇತಿಕ ನ್ಯಾಯಾಲಯದಲ್ಲಿಯೊ ಎಂಬಂತೆ ಇರಿಸಿಕೊಂಡು, ತನ್ನ ಮತ್ತು ಆ ನಿರಾಶೆಗೊಳಿಸಿರುವ ದ್ರಾಕ್ಷೇತೋಟದ ಮಧ್ಯೆ ನ್ಯಾಯತೀರಿಸುವಂತೆ ಕೇಳಿಕೊಳ್ಳುತ್ತಾನೆ. ಹಾಗಾದರೆ, ದ್ರಾಕ್ಷೇತೋಟವೆಂದರೇನು? ಯಜಮಾನನು ವಿವರಿಸುವುದು: “ಸೇನಾಧೀಶ್ವರನಾದ ಯೆಹೋವನ ದ್ರಾಕ್ಷೆಯ ತೋಟವು ಇಸ್ರಾಯೇಲ್ಯರ ಮನೆತನ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ.”—ಯೆಶಾಯ 5:7ಎ.
8. ಯೆಶಾಯನು ಯೆಹೋವನನ್ನು “ನನ್ನ ಪ್ರಿಯನು” ಎಂದು ಕರೆಯುವುದರ ಮಹತ್ವವೇನು?
8 ಯೆಶಾಯನು ತೋಟದ ಯಜಮಾನನಾದ ಯೆಹೋವನನ್ನು, “ನನ್ನ ಪ್ರಿಯನು” ಎಂದು ಕರೆಯುತ್ತಾನೆ. (ಯೆಶಾಯ 5:1) ದೇವರೊಂದಿಗೆ ಯೆಶಾಯನಿಗಿದ್ದ ಆಪ್ತ ಸಂಬಂಧದ ಕಾರಣ ಅವನು ದೇವರನ್ನು ಅಷ್ಟು ಆತ್ಮೀಯ ರೀತಿಯಲ್ಲಿ ಕರೆಯಬಹುದಾಗಿದೆ. (ಹೋಲಿಸಿ ಯೋಬ 29:4; ಕೀರ್ತನೆ 25:14.) ಆದರೂ, ಪ್ರವಾದಿಯು ದೇವರ ಕಡೆಗೆ ತೋರಿಸಿದ ಪ್ರೀತಿಯನ್ನು, ದೇವರು ತಾನೇ ‘ನೆಟ್ಟಿದ್ದ’ “ದ್ರಾಕ್ಷೇತೋಟ”ಕ್ಕೆ ತೋರಿಸಿದ ಪ್ರೀತಿಗೆ ಹೋಲಿಸುವಲ್ಲಿ, ಪ್ರವಾದಿಯ ಪ್ರೀತಿಯು ಏನೂ ಇಲ್ಲ.—ಹೋಲಿಸಿ ವಿಮೋಚನಕಾಂಡ 15:17; ಕೀರ್ತನೆ 80:8, 9.
9. ಒಂದು ಬೆಲೆಬಾಳುವ ದ್ರಾಕ್ಷೇತೋಟದಂತೆ, ಯೆಹೋವನು ತನ್ನ ಜನಾಂಗದ ಆರೈಕೆ ಮಾಡಿರುವುದು ಹೇಗೆ?
9 ಯೆಹೋವನು ತನ್ನ ಜನವನ್ನು ಕಾನಾನ್ ದೇಶದಲ್ಲಿ ‘ನೆಟ್ಟು,’ ಅವರಿಗೆ ತನ್ನ ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಕೊಟ್ಟನು. ಇವು ಅವರು ಇತರ ಜನಾಂಗಗಳಿಂದ ಭ್ರಷ್ಟರಾಗುವುದರಿಂದ ಅವರನ್ನು ಕಾಪಾಡುವ ಗೋಡೆಯಂತಿತ್ತು. (ವಿಮೋಚನಕಾಂಡ 19:5, 6; ಕೀರ್ತನೆ 147:19, 20; ಎಫೆಸ 2:14) ಇದಲ್ಲದೆ, ಯೆಹೋವನು ಅವರಿಗೆ ಶಿಕ್ಷಣವನ್ನು ಒದಗಿಸಲು ನ್ಯಾಯಾಧಿಪತಿಗಳನ್ನು, ಯಾಜಕರನ್ನು ಮತ್ತು ಪ್ರವಾದಿಗಳನ್ನು ಕೊಟ್ಟನು. (2 ಅರಸುಗಳು 17:13; ಮಲಾಕಿಯ 2:7; ಅ. ಕೃತ್ಯಗಳು 13:20) ಇಸ್ರಾಯೇಲ್ಯರಿಗೆ ಶತ್ರು ಸೈನ್ಯಗಳಿಂದ ಮುತ್ತಿಗೆಯ ಬೆದರಿಕೆಯುಂಟಾದಾಗ, ಯೆಹೋವನು ವಿಮೋಚಕರನ್ನು ಎಬ್ಬಿಸಿದನು. (ಇಬ್ರಿಯ 11:32, 33) ಸಕಾರಣದಿಂದಲೇ ಯೆಹೋವನು ಕೇಳುವುದು: “ನನ್ನ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು?”
ಇಂದು ದೇವರ ದ್ರಾಕ್ಷೇತೋಟವನ್ನು ಗುರುತಿಸುವುದು
10. ಒಂದು ದ್ರಾಕ್ಷೇತೋಟದ ಕುರಿತಾದ ಯಾವ ಸಾಮ್ಯವನ್ನು ಯೇಸು ಕೊಟ್ಟನು?
10 ಕೊಲೆಮಾಡುವ ಹೇತುವಿದ್ದ ವ್ಯವಸಾಯಗಾರರ ಸಾಮ್ಯವನ್ನು ಕೊಟ್ಟಾಗ, ಯೇಸುವಿನ ಮನಸ್ಸಿನಲ್ಲಿ ಯೆಶಾಯನ ಈ ಮಾತುಗಳು ಇದ್ದಿರಬಹುದು. ಅವನು ಹೇಳಿದ್ದು: “ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷೇತೋಟವನ್ನು ಮಾಡಿ ಅದರ ಸುತ್ತಲೂ ಬೇಲಿಹಾಕಿಸಿ ಅದರಲ್ಲಿ ದ್ರಾಕ್ಷೆಯ ಆಲೆಯನ್ನು ಮಾಡಿಸಿ ಹೂಡೆಯನ್ನು ಕಟ್ಟಿಸಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬೇರೊಂದು ದೇಶಕ್ಕೆ ಹೋದನು.” ಆದರೆ ಈ ಒಕ್ಕಲಿಗರು ದ್ರಾಕ್ಷೇತೋಟದ ಯಜಮಾನನಿಗೆ ದ್ರೋಹ ಬಗೆದು, ಅವನ ಮಗನನ್ನೂ ಕೊಂದುಹಾಕಿದರು. ಆ ಸಾಮ್ಯದಲ್ಲಿ ಅಕ್ಷರಾರ್ಥ ಇಸ್ರಾಯೇಲಿಗಿಂತ ಹೆಚ್ಚಿನದ್ದು ಸೇರಿದೆ ಎಂಬುದನ್ನು ಯೇಸು ತಿಳಿಸಿದನು. ಅವನು ಹೀಗೆ ಹೇಳಿದನು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.”—ಮತ್ತಾಯ 21:33-41, 43.
11. ಒಂದನೆಯ ಶತಮಾನದಲ್ಲಿ ಯಾವ ಆತ್ಮಿಕ ದ್ರಾಕ್ಷೇತೋಟವು ಅಸ್ತಿತ್ವದಲ್ಲಿತ್ತು, ಆದರೆ ಅಪೊಸ್ತಲರ ಮರಣಾನಂತರ ಏನು ಸಂಭವಿಸಿತು?
11 ಆ ಹೊಸ “ಜನ” “ದೇವರ ಇಸ್ರಾಯೇಲು,” ಅಂದರೆ 1,44,000 ಮಂದಿಯಿರುವ ಅಭಿಷಿಕ್ತ ಕ್ರೈಸ್ತರ ಆತ್ಮಿಕ ಇಸ್ರಾಯೇಲಾಗಿ ಪರಿಣಮಿಸಿತು. (ಗಲಾತ್ಯ 6:16; 1 ಪೇತ್ರ 2:9, 10; ಪ್ರಕಟನೆ 7:3, 4) ಯೇಸು ಈ ಶಿಷ್ಯರನ್ನು “ನಿಜವಾದ ದ್ರಾಕ್ಷೇಬಳ್ಳಿ”ಯಾದ ತನ್ನ “ಕೊಂಬೆ”ಗಳಿಗೆ ಹೋಲಿಸಿದನು. ಆದುದರಿಂದ ಈ ಕೊಂಬೆಗಳು ಫಲಬಿಡಬೇಕೆಂದು ನಿರೀಕ್ಷಿಸುವುದು ಸ್ವಾಭಾವಿಕ. (ಯೋಹಾನ 15:1-5) ಅವರು ಕ್ರಿಸ್ತಸದೃಶ ಗುಣಗಳನ್ನು ಪ್ರದರ್ಶಿಸಿ, “ರಾಜ್ಯದ ಈ ಸುವಾರ್ತೆ”ಯನ್ನು ಸಾರುವ ಕೆಲಸದಲ್ಲಿ ಭಾಗವಹಿಸತಕ್ಕದ್ದು. (ಮತ್ತಾಯ 24:14; ಗಲಾತ್ಯ 5:22, 23) ಆದರೆ ಹನ್ನೆರಡು ಮಂದಿ ಅಪೊಸ್ತಲರ ಮರಣದ ನಂತರ, ಆ “ನಿಜವಾದ ದ್ರಾಕ್ಷೇಬಳ್ಳಿ”ಯ ಕೊಂಬೆಗಳೆಂದು ಹೇಳಿಕೊಳ್ಳುವವರಲ್ಲಿ ಬಹುತೇಕ ಮಂದಿ ನಕಲುಗಳಾಗಿ ಪರಿಣಮಿಸಿದ್ದಾರೆ, ಅಂದರೆ, ಅವರು ಒಳ್ಳೆಯ ಹಣ್ಣುಗಳ ಬದಲು ಕಾಡು ದ್ರಾಕ್ಷೆಹಣ್ಣನ್ನು ಫಲಿಸಿದ್ದಾರೆ.—ಮತ್ತಾಯ 13:24-30, 38, 39.
12. ಯೆಶಾಯನ ಮಾತುಗಳು ಕ್ರೈಸ್ತಪ್ರಪಂಚವನ್ನು ಹೇಗೆ ಖಂಡಿಸುತ್ತವೆ, ಮತ್ತು ಸತ್ಯ ಕ್ರೈಸ್ತರು ಅವುಗಳಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?
12 ಈ ಕಾರಣದಿಂದ, ಯೆಹೂದದ ಕುರಿತಾಗಿ ಯೆಶಾಯನು ಮಾಡಿದ ಖಂಡನೆಯು ಇಂದು ಕ್ರೈಸ್ತಪ್ರಪಂಚಕ್ಕೆ ಅನ್ವಯಿಸುತ್ತದೆ. ಅದರ ಇತಿಹಾಸದ, ಅಂದರೆ ಅದರ ಯುದ್ಧಗಳು, ಧಾರ್ಮಿಕಯುದ್ಧಗಳು, ಮಠೀಯ ನ್ಯಾಯಸ್ಥಾನಗಳ ಅಧ್ಯಯನವು, ಅದು ಫಲಿಸಿದ ಫಲವು ಎಷ್ಟು ಹುಳಿಯಾಗಿತ್ತೆಂಬುದನ್ನು ತಿಳಿಯಪಡಿಸುತ್ತದೆ! ಆದರೆ ಅಭಿಷಿಕ್ತ ಉಳಿಕೆಯವರ ನಿಜ ದ್ರಾಕ್ಷೇತೋಟ ಮತ್ತು ಅವರ ಸಂಗಡಿಗರ “ಮಹಾ ಸಮೂಹವು” ಸಹ ಯೆಶಾಯನ ಮಾತುಗಳಿಗೆ ಕಿವಿಗೊಡತಕ್ಕದ್ದು. (ಪ್ರಕಟನೆ 7:9) ದ್ರಾಕ್ಷೇತೋಟದ ಯಜಮಾನನನ್ನು ಮೆಚ್ಚಿಸಬಯಸುವುದಾದರೆ ಅವರು ವೈಯಕ್ತಿಕವಾಗಿಯೂ ಗುಂಪಾಗಿಯೂ ಆತನನ್ನು ಮೆಚ್ಚಿಸುವ ಫಲವನ್ನು ಫಲಿಸತಕ್ಕದ್ದು.
“ಹೊಲಸುಹಣ್ಣು”
13. ಕೆಟ್ಟ ಫಲವನ್ನು ಕೊಟ್ಟದ್ದಕ್ಕಾಗಿ, ಯೆಹೋವನು ತನ್ನ ದ್ರಾಕ್ಷೇತೋಟಕ್ಕೆ ಏನು ಮಾಡಲಿದ್ದನು?
13 ಯೆಹೋವನು ತನ್ನ ದ್ರಾಕ್ಷೇತೋಟವನ್ನು ಪೋಷಿಸಿ, ವ್ಯವಸಾಯ ಮಾಡಲು ವಿಪರೀತ ಪ್ರಯತ್ನವನ್ನು ಮಾಡಿರುವುದರಿಂದ, ಅದು “ನೊರೆಗರೆಯುವ ದ್ರಾಕ್ಷಾಮದ್ಯದ ತೋಟ”ವಾಗುವುದೆಂದು (NW) ಯೆಹೋವನು ನಿರೀಕ್ಷಿಸುವುದು ನ್ಯಾಯವಾಗಿದೆ! (ಯೆಶಾಯ 27:2) ಆದರೆ ಉಪಯುಕ್ತವಾದ ಫಲವನ್ನು ಬಿಡುವ ಬದಲಾಗಿ ಅದು “ಕಾಡು ದ್ರಾಕ್ಷೇಹಣ್ಣು”ಗಳನ್ನು, ಅಕ್ಷರಾರ್ಥವಾಗಿ, “ನಾರುವ ವಸ್ತು”ಗಳನ್ನು, “ಅಸಹ್ಯವಾದ (ಕೊಳೆತಿರುವ) ಹಣ್ಣು”ಗಳನ್ನು ಫಲಿಸುತ್ತದೆ. (ಯೆಶಾಯ 5:2, NW ಪಾದಟಿಪ್ಪಣಿ; ಯೆರೆಮೀಯ 2:21) ಆದಕಾರಣ ತಾನು ಆ ಜನಾಂಗದ ಸುತ್ತಲೂ ಹಾಕಿದ್ದ ರಕ್ಷಣಾತ್ಮಕ “ಬೇಲಿಯನ್ನು” ತೆಗೆದುಬಿಡುವೆನೆಂದು ಯೆಹೋವನು ಪ್ರಕಟಿಸುತ್ತಾನೆ. ಆ ಜನಾಂಗವು ‘ಹಾಳಾಗಿ’ ತ್ಯಜನವನ್ನೂ ಅನಾವೃಷ್ಟಿಯನ್ನೂ ಅನುಭವಿಸುವುದು. (ಯೆಶಾಯ 5:6ನ್ನು ಓದಿ.) ಇವರು ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯರಾಗುವಲ್ಲಿ ಇಂತಹ ಸಂಗತಿಗಳು ಸಂಭವಿಸುವುವೆಂದು ಮೋಶೆಯು ಆಗಲೇ ಎಚ್ಚರಿಸಿದ್ದನು.—ಧರ್ಮೋಪದೇಶಕಾಂಡ 11:17; 28:63, 64; 29:22, 23.
14. ಯೆಹೋವನು ತನ್ನ ಜನಾಂಗದಿಂದ ಯಾವ ಫಲವನ್ನು ನಿರೀಕ್ಷಿಸುತ್ತಾನೆ, ಆದರೆ ಅದು ಯಾವ ಫಲವನ್ನು ಬಿಡುತ್ತದೆ?
14 ಆ ಜನಾಂಗವು ಒಳ್ಳೆಯ ಫಲವನ್ನು ಫಲಿಸಬೇಕೆಂದು ದೇವರು ನಿರೀಕ್ಷಿಸುತ್ತಾನೆ. ಯೆಶಾಯನ ಸಮಕಾಲೀನನಾದ ಮೀಕನು ಪ್ರಕಟಪಡಿಸುವುದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” (ಮೀಕ 6:8; ಜೆಕರ್ಯ 7:9) ಆದರೂ, ಆ ಜನಾಂಗವು ಯೆಹೋವನ ಬುದ್ಧಿವಾದಕ್ಕೆ ಕಿವಿಗೊಡುವುದಿಲ್ಲ. “[ದೇವರು] ನ್ಯಾಯವನ್ನು ನಿರೀಕ್ಷಿಸಿದಾಗ ಆಹಾ, ಸಿಕ್ಕಿದ್ದು ನರಹತ್ಯವೇ; ಧರ್ಮವನ್ನು ಎದುರುನೋಡಿದಾಗ ಆಹಾ, ದೊರಕಿದ್ದು ಅರಚಾಟವೇ.” (ಯೆಶಾಯ 5:7ಬಿ) ಆ ಅಪನಂಬಿಗಸ್ತ ಜನಾಂಗವು ‘ಸೊದೋಮ್ಯರ ದ್ರಾಕ್ಷಾಲತೆ’ಯಿಂದ ವಿಷಕರವಾದ ದ್ರಾಕ್ಷೆಯನ್ನು ಫಲಿಸುವುದೆಂದು ಮೋಶೆ ನುಡಿದಿದ್ದನು. (ಧರ್ಮೋಪದೇಶಕಾಂಡ 32:32) ಆದಕಾರಣ, ಅವರು ದೇವರ ನಿಯಮಗಳಿಂದ ತೊಲಗಿ ಹೋಗಿದ್ದುದರ ಆಂಶಿಕ ಕಾರಣವು ಸಲಿಂಗೀಕಾಮ ಸೇರಿರುವ ಲೈಂಗಿಕ ದುರಾಚಾರವೇ ಆಗಿದ್ದಿರಬಹುದು. (ಯಾಜಕಕಾಂಡ 18:22) ನಿಸ್ಸಂದೇಹವಾಗಿಯೂ ಇಂತಹ ‘ನರಹತ್ಯೆಯು,’ ಅದಕ್ಕೆ ಬಲಿಬಿದ್ದವರ ‘ಅರಚಾಟದಲ್ಲಿ’ ಫಲಿಸಿದೆ. ಮತ್ತು ಈ ಅರಚಾಟವು ದ್ರಾಕ್ಷೇತೋಟವನ್ನು ನೆಟ್ಟವನ ಕಿವಿಗೆ ಬಿದ್ದಿದೆ.—ಹೋಲಿಸಿ ಯೋಬ 34:28.
15, 16. ಇಸ್ರಾಯೇಲ್ಯರಂತೆ ಕೆಟ್ಟ ಫಲವನ್ನು ಕೊಡುವುದರಿಂದ ನಿಜ ಕ್ರೈಸ್ತರು ಹೇಗೆ ದೂರವಿರಸಾಧ್ಯವಿದೆ?
15 ಯೆಹೋವ ದೇವರು “ನೀತಿನ್ಯಾಯಗಳನ್ನು ಪ್ರೀತಿಸುವವನು.” (ಕೀರ್ತನೆ 33:5) ಆತನು ಯೆಹೂದ್ಯರಿಗೆ ಹೀಗೆ ಆಜ್ಞಾಪಿಸಿದ್ದನು: “ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.” (ಯಾಜಕಕಾಂಡ 19:15) ಆದುದರಿಂದ ನಾವು ಒಬ್ಬರೊಂದಿಗೊಬ್ಬರು ವ್ಯವಹರಿಸುವಾಗ ಪಕ್ಷಪಾತದಿಂದ ದೂರವಿದ್ದು, ಕುಲ, ವಯಸ್ಸು, ಸಂಪತ್ತು ಅಥವಾ ಬಡತನವು ಅಂತಹವರ ಕುರಿತಾದ ನಮ್ಮ ಅಭಿಪ್ರಾಯವನ್ನು ಪ್ರಭಾವಿಸುವಂತೆ ಎಂದಿಗೂ ಬಿಡಬಾರದು. (ಯಾಕೋಬ 2:1-4) ವಿಶೇಷವಾಗಿ, ಮೇಲ್ವಿಚಾರಣೆಯ ಸ್ಥಾನದಲ್ಲಿರುವವರು ‘ಪಕ್ಷಪಾತ’ ಮಾಡದವರಾಗಿದ್ದು, ನ್ಯಾಯತೀರ್ಪು ಮಾಡುವ ಮೊದಲು ಎರಡೂ ಪಕ್ಷಗಳ ಅಭಿಪ್ರಾಯಗಳಿಗೆ ಕಿವಿಗೊಡಬೇಕು.—1 ತಿಮೊಥೆಯ 5:21; ಜ್ಞಾನೋಕ್ತಿ 18:13.
16 ಇದಲ್ಲದೆ, ಕ್ರೈಸ್ತರು ನಿಯಮರಹಿತವಾದ ಲೋಕದಲ್ಲಿ ಜೀವಿಸುತ್ತಿರುವುದರಿಂದ, ದೈವಿಕ ಮಟ್ಟಗಳ ಬಗೆಗೆ ಅವರು ಒಂದು ನಕಾರಾತ್ಮಕ ಅಥವಾ ಪ್ರತಿಭಟನಾತ್ಮಕ ಮನೋಭಾವವನ್ನು ಬೆಳೆಸುವುದು ಸುಲಭ. ಆದರೆ ನಿಜ ಕ್ರೈಸ್ತರು ದೇವರ ನಿಯಮಗಳಿಗೆ “ವಿಧೇಯರಾಗಲು ಸಿದ್ಧ” (NW)ರಾಗಿರಬೇಕು. (ಯಾಕೋಬ 3:17) ‘ಈಗಿನ ದುಷ್ಟಯುಗದೊಳಗಿನ’ ಲೈಂಗಿಕ ದುರಾಚಾರ ಮತ್ತು ಹಿಂಸಾಚಾರಗಳ ಎದುರಿನಲ್ಲಿಯೂ ಅವರು ‘ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳುತ್ತ, ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿ’ರಬೇಕು. (ಗಲಾತ್ಯ 1:4; ಎಫೆಸ 5:15) ಅವರು ಲೈಂಗಿಕತೆಯ ಕುರಿತ ಅನಿರ್ಬಂಧಿತ ದೃಷ್ಟಿಕೋನಗಳನ್ನು ತ್ಯಜಿಸಬೇಕು, ಮತ್ತು ಭಿನ್ನಾಭಿಪ್ರಾಯಗಳು ತಲೆದೋರುವಾಗ, “ಕ್ರೋಧ ಕೋಪ ಕಲಹ ದೂಷಣೆ”ಗಳಿಲ್ಲದೆ ಅವುಗಳನ್ನು ಬಗೆಹರಿಸಬೇಕು. (ಎಫೆಸ 4:31) ನೀತಿಯನ್ನು ಬೆಳೆಸುವವರಾಗಿರುತ್ತಾ, ನಿಜ ಕ್ರೈಸ್ತರು ದೇವರಿಗೆ ಘನತೆಯನ್ನು ತರುತ್ತಾರೆ ಮತ್ತು ಆತನ ಅನುಗ್ರಹವನ್ನು ಪಡೆಯುತ್ತಾರೆ.
ದುರಾಶೆಗೆ ತೆರಬೇಕಾದ ಬೆಲೆ
17. ಯೆಶಾಯನ ಮೊದಲನೆಯ ದುರ್ಗತಿಯಲ್ಲಿ ಯಾವ ದುಷ್ಟ ನಡತೆಯನ್ನು ಖಂಡಿಸಲಾಗಿದೆ?
17 ಯೆಶಾಯನು, 8ನೆಯ ವಚನದಲ್ಲಿ ಯೆಹೋವನ ಮಾತುಗಳನ್ನು ಉಲ್ಲೇಖಿಸುವುದಿಲ್ಲ. ಯೆಹೂದದಲ್ಲಿ ಬೆಳೆಸಿದ ಕೆಲವು “ಕಾಡು ದ್ರಾಕ್ಷೆಹಣ್ಣು”ಗಳನ್ನು ಖಂಡಿಸುತ್ತ, ಅವನು ತಾನೇ ಆರು ದುರ್ಗತಿಗಳಲ್ಲಿ ಮೊದಲನೆಯದನ್ನು ಪ್ರಕಟಪಡಿಸುತ್ತಾನೆ: “ಅಯ್ಯೋ, ಮನೆಗೆ ಮನೆಯನ್ನೂ ಹೊಲಕ್ಕೆ ಹೊಲವನ್ನೂ ಸೇರಿಸಿಕೊಳ್ಳುತ್ತಾ ಬಂದು ಇತರರಿಗೆ ಸ್ವಲ್ಪ ಸ್ಥಳವನ್ನೂ ಬಿಡದೆ ದೇಶದ ಮಧ್ಯದಲ್ಲಿ ತಾವೇ ತಾವಾಗಿ ವಾಸಿಸುವವರ ಗತಿಯನ್ನು ಏನು ಹೇಳಲಿ! ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನ ಒಂದು ಮಾತು ಬಿದ್ದಿತು, ನೋಡಿರಿ—ಸೊಗಸಾದ ಅನೇಕ ದೊಡ್ಡ ಮನೆಗಳು ವಾಸಿಸುವವರೇ ಇಲ್ಲದೆ ಖಂಡಿತವಾಗಿ ಹಾಳಾಗುವವು. ಏಕಂದರೆ ಹತ್ತು ಎಕರೆ ಬಾಗಾಯಿತು ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನೀಯುವದು, ಬಿತ್ತಿದ ಒಂದು ಕಂಡುಗ ಬೀಜದಿಂದ ಇಕ್ಕಳ ದವಸವು ಬರುವದು.”—ಯೆಶಾಯ 5:8-10.
18, 19. ಯೆಶಾಯನ ಸಮಕಾಲೀನರು ಆಸ್ತಿಯ ಕುರಿತ ಯೆಹೋವನ ನಿಯಮಗಳನ್ನು ಹೇಗೆ ಅಸಡ್ಡೆಮಾಡುತ್ತಾರೆ, ಮತ್ತು ಅವರಿಗೆ ಇದರ ಪರಿಣಾಮವೇನಾಗಲಿದೆ?
18 ಪುರಾತನ ಕಾಲದ ಇಸ್ರಾಯೇಲಿನಲ್ಲಿ ಜಮೀನೆಲ್ಲ ಮೂಲಭೂತವಾಗಿ ಯೆಹೋವನದ್ದಾಗಿತ್ತು. ಪ್ರತಿಯೊಂದು ಕುಟುಂಬಕ್ಕೆ ದೇವದತ್ತ ಆಸ್ತಿಯಿತ್ತು. ಅದನ್ನು ಅವರು ಬಾಡಿಗೆಗೆ ಅಥವಾ ಎರವಲಾಗಿ ಕೊಡಬಹುದಾಗಿದ್ದರೂ, “ಶಾಶ್ವತವಾಗಿ” ವಿಕ್ರಯಿಸಸಾಧ್ಯವಿರಲಿಲ್ಲ. (ಯಾಜಕಕಾಂಡ 25:23) ಈ ನಿಯಮವು ಸ್ಥಿರಾಸ್ತಿಯ ಏಕಸ್ವಾಮ್ಯದಿಂದ ಕೆಲವರೇ ಧನಿಕರಾಗುವಂತಹ ದುರುಪಯೋಗಗಳನ್ನು ತಡೆದು ಹಿಡಿಯಿತು. ಕುಟುಂಬಗಳು ವಿಪರೀತ ದಾರಿದ್ರ್ಯಕ್ಕಿಳಿಯುವುದರಿಂದಲೂ ಇದು ಕಾಪಾಡಿತು. ಆದರೂ, ಯೆಹೂದದಲ್ಲಿ ಕೆಲವರು ಆಸ್ತಿಯ ಕುರಿತ ದೇವರಾಜ್ಞೆಯನ್ನು ದುರಾಶೆಯಿಂದಾಗಿ ಮುರಿಯುತ್ತಿದ್ದರು. ಮೀಕನು ಬರೆದುದು: “ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ, ಮನೆಗಳನ್ನು ಲೋಭದಿಂದ ಅಪಹರಿಸುತ್ತಾರೆ; ಮನೆಯನ್ನೂ ಮನೆಯವನನ್ನೂ ಸ್ವಾಸ್ತ್ಯವನ್ನೂ ಸ್ವಾಸ್ತ್ಯದವನನ್ನೂ ತುಳಿದುಬಿಡುತ್ತಾರೆ.” (ಮೀಕ 2:2) ಆದರೆ ಜ್ಞಾನೋಕ್ತಿ 20:21 ಎಚ್ಚರಿಸುವುದು: “ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು.”
19 ಈ ಲೋಭಿಗಳ ಸುಲಿಗೆಯ ಸಂಪಾದನೆಯನ್ನು ತಾನು ಬರಿದುಮಾಡುತ್ತೇನೆಂದು ಯೆಹೋವನು ವಚನಕೊಡುತ್ತಾನೆ. ಅವರು ಸುಲಿಗೆ ಮಾಡಿ ಪಡೆದಿರುವ ಮನೆಗಳು “ವಾಸಿಸುವವರೇ ಇಲ್ಲ”ದಿರುವ ಮನೆಗಳಾಗುವುವು. ಅವರು ಆಶಿಸಿ ಪಡೆದುಕೊಂಡಿರುವ ಜಮೀನು ಅದಕ್ಕಿರುವ ಸಾಮರ್ಥ್ಯದ ಬರಿಯ ಚಿಕ್ಕ ಅಂಶವನ್ನೇ ಉತ್ಪಾದಿಸುವುದು. ಈ ಶಾಪವು ನಿಷ್ಕೃಷ್ಟವಾಗಿ ಯಾವಾಗ ಮತ್ತು ಹೇಗೆ ನೆರವೇರುವುದೆಂದು ಹೇಳಲಾಗಿರುವುದಿಲ್ಲ. ಇದು ಮುಂದೆ ಬಾಬೆಲಿನಲ್ಲಿನ ದೇಶಭ್ರಷ್ಟತೆಯ ಸಮಯದಲ್ಲಿ ಬರಲಿದ್ದ ಪರಿಸ್ಥಿತಿಗಳನ್ನು ಆಂಶಿಕವಾಗಿ ಸೂಚಿಸಿರಬಹುದು.—ಯೆಶಾಯ 27:10.
20. ಇಸ್ರಾಯೇಲಿನಲ್ಲಿ ಕೆಲವರು ತೋರಿಸಿದ ಲೋಭದ ಮನೋಭಾವವನ್ನು ಅನುಕರಿಸುವುದರಿಂದ ಕ್ರೈಸ್ತರು ಇಂದು ಹೇಗೆ ದೂರವಿರಬಲ್ಲರು?
20 ಹಿಂದಿನ ಕಾಲದ ಕೆಲವು ಮಂದಿ ಇಸ್ರಾಯೇಲ್ಯರು ತೋರಿಸಿದ ತಣಿಸಲಾಗದ ಲೋಭವನ್ನು ಇಂದಿನ ಕ್ರೈಸ್ತರು ಹೇಸಬೇಕು. (ಜ್ಞಾನೋಕ್ತಿ 27:20) ಪ್ರಾಪಂಚಿಕ ವಸ್ತುಗಳು ಬಹಳ ಪ್ರಾಮುಖ್ಯವಾಗಿ ಕಾಣುವಾಗ, ಯಾವುದಕ್ಕೂ ಹೇಸದ ರೀತಿಯಲ್ಲಿ ಹಣಸಂಪಾದನೆಯ ಮಾರ್ಗಗಳಿಗೆ ಇಳಿಯುವುದು ಸುಲಭ. ಸಂಶಯಾಸ್ಪದವಾದ ವ್ಯಾಪಾರ ವ್ಯವಹಾರಗಳಲ್ಲಿ ಅಥವಾ ರಾತ್ರಿ ಹಗಲಾಗುವುದರೊಳಗೆ ಲಕ್ಷಾಧೀಶರಾಗುವ ಹಂಚಿಕೆಗಳಲ್ಲಿ ನಾವು ಸಿಕ್ಕಿಬೀಳಬಹುದು. “ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದಿರನು.” (ಜ್ಞಾನೋಕ್ತಿ 28:20) ಆದಕಾರಣ, ನಮಗಿರುವುದರಲ್ಲೇ ಸಂತೃಪ್ತರಾಗಿರುವುದು ಎಷ್ಟು ಪ್ರಾಮುಖ್ಯ!—1 ತಿಮೊಥೆಯ 6:8.
ಸಂಶಯಾಸ್ಪದವಾದ ಮನೋರಂಜನೆಯ ಬೋನು
21. ಯೆಶಾಯನು ಹೇಳಿದ ಎರಡನೆಯ ದುರ್ಗತಿಯಲ್ಲಿ ಯಾವ ಪಾಪಗಳನ್ನು ಖಂಡಿಸಲಾಗಿದೆ?
21 ಈಗ ಯೆಶಾಯನು ಹೇಳಿದ ಎರಡನೆಯ ದುರ್ಗತಿ ಬರುತ್ತದೆ: “ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು ಸಂಜೆಯಾದ ಮೇಲೆಯೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲಕಳೆಯುವವರ ಪಾಡು ಏನು ಹೇಳಲಿ! ಕಿನ್ನರಿ, ವೀಣೆ, ದಮ್ಮಡಿ, ಕೊಳಲು, ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು; ಯೆಹೋವನ ಕೆಲಸವನ್ನೋ ಅವರು ಲಕ್ಷಿಸರು, ಆತನ ಹಸ್ತಕಾರ್ಯವನ್ನು ಆಲೋಚಿಸರು.”—ಯೆಶಾಯ 5:11, 12.
22. ಇಸ್ರಾಯೇಲ್ ಯಾವ ವಿಷಯದಲ್ಲಿ ನಿಯಂತ್ರಣವನ್ನು ತೋರಿಸುವುದಿಲ್ಲ, ಮತ್ತು ಆ ಜನಾಂಗಕ್ಕೆ ಇದರಿಂದಾಗಲಿರುವ ಪರಿಣಾಮವೇನು?
22 ಯೆಹೋವನು “ಸಂತೋಷವುಳ್ಳ ದೇವರು” (NW). (1 ತಿಮೊಥೆಯ 1:11) ತನ್ನ ಸೇವಕರ ಯೋಗ್ಯ ರೀತಿಯ ಮನೋರಂಜನೆಯನ್ನು ನೋಡಿ ಆತನು ಅಸೂಯೆಪಡುವುದಿಲ್ಲ. ಆದರೆ, ಈ ಸುಖಾನ್ವೇಷಕರು ಎಲ್ಲಾ ಮೇರೆ ಮೀರಿ ಹೋಗುತ್ತಾರೆ! “ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ,” ಎನ್ನುತ್ತದೆ ಬೈಬಲು. (1 ಥೆಸಲೊನೀಕ 5:7) ಆದರೆ ಈ ಪ್ರವಾದನೆಯಲ್ಲಿನ ಮೋಜುಗಾರರು ತಮ್ಮ ಪಾನಕೇಳಿಯನ್ನು ಮುಂಜಾನೆಯಿಂದ ಹಿಡಿದು ಸಾಯಂಕಾಲದ ತನಕ ಮಾಡುತ್ತಾರೆ! ದೇವರೇ ಇಲ್ಲವೆಂಬಂತೆ ಅವರು ವರ್ತಿಸುತ್ತಾರೆ. ತಮ್ಮ ಕೃತ್ಯಗಳಿಗೆ ತಮ್ಮನ್ನು ಉತ್ತರವಾದಿಗಳಾಗಿ ಆತನು ಮಾಡುವುದಿಲ್ಲವೊ ಎಂಬಂತೆ ಅವರು ನಡೆದುಕೊಳ್ಳುತ್ತಾರೆ. ಇಂತಹವರಿಗಿರುವ ಸಂಕಷ್ಟಕರ ಭವಿಷ್ಯತ್ತನ್ನು ಯೆಶಾಯನು ಮುಂತಿಳಿಸುತ್ತಾನೆ: “ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವದು ಖಂಡಿತ; ಘನವಂತರು ಹಸಿಯುವರು, ಸಾಮಾನ್ಯರು ಬಾಯಾರುವರು.” (ಯೆಶಾಯ 5:13) ದೇವರ ಒಡಂಬಡಿಕೆಯ ಜನರಲ್ಲಿ ಘನವಂತರೂ ಸಾಮಾನ್ಯರೂ, ಸತ್ಯಜ್ಞಾನಾನುಸಾರ ವರ್ತಿಸಲು ನಿರಾಕರಿಸುವ ಸಲುವಾಗಿ ಪಾತಾಳಕ್ಕೆ (“ಷೀಯೋಲಿಗೆ,” NW) ಇಳಿದುಹೋಗುವರು.—ಯೆಶಾಯ 5:14-17ನ್ನು ಓದಿ.
23, 24. ಯಾವ ನಿಯಂತ್ರಣ ಮತ್ತು ಮಿತಭಾವವನ್ನು ತೋರಿಸಬೇಕೆಂದು ಕ್ರೈಸ್ತರಿಗೆ ಹೇಳಲಾಗುತ್ತದೆ?
23 “ದುಂದೌತನ” ಅಥವಾ “ಹತೋಟಿಮೀರಿದ ಗೋಷ್ಠಿಗಳು” ಮೊದಲನೆಯ ಶತಮಾನದ ಕೆಲವು ಕ್ರೈಸ್ತರ ಮಧ್ಯೆಯೂ ಒಂದು ಸಮಸ್ಯೆಯಾಗಿತ್ತು. (ಗಲಾತ್ಯ 5:21, ಬೈಯಿಂಗ್ಟನ್; 2 ಪೇತ್ರ 2:13) ಹೀಗಿರುವುದರಿಂದ, ಸಾಮಾಜಿಕ ಗೋಷ್ಠಿಗಳ ವಿಷಯದಲ್ಲಿ ಇಂದಿನ ಕೆಲವು ಮಂದಿ ಸಮರ್ಪಿತ ಕ್ರೈಸ್ತರೂ ಸರಿಯಾದ ತೀರ್ಮಾನವನ್ನು ಮಾಡದೆ ಇರುವುದು ಆಶ್ಚರ್ಯವಲ್ಲ. ಮದ್ಯ ಪಾನೀಯಗಳ ನಿಯಂತ್ರಣ ತಪ್ಪಿದ ಉಪಯೋಗವು ಕೆಲವರನ್ನು ಕೂಗಾಡುವ, ಅಬ್ಬರಿಸುವ ವ್ಯಕ್ತಿಗಳನ್ನಾಗಿ ಮಾಡಿದೆ. (ಜ್ಞಾನೋಕ್ತಿ 20:1) ತೀರ ಮತ್ತರಾಗಿದ್ದ ಕಾರಣ ಅನೈತಿಕವಾಗಿಯೂ ವರ್ತಿಸಿದವರು ಇದ್ದಾರೆ ಮಾತ್ರವಲ್ಲ, ಗೋಷ್ಠಿಯು ಹೆಚ್ಚುಕಡಿಮೆ ಇಡೀ ರಾತ್ರಿ ನಡೆಯುವಂತೆ ಬಿಟ್ಟ ಕಾರಣ, ಮರುದಿನದ ಕ್ರೈಸ್ತ ಚಟುವಟಿಕೆಗಳಿಗೆ ತಡೆಬರುವಂತೆ ಮಾಡಿದ ಸಂದರ್ಭಗಳೂ ಇವೆ.
24 ಆದರೆ ಸಮತೆಯುಳ್ಳ ಕ್ರೈಸ್ತರು ತಮ್ಮ ಮನೋರಂಜನೆಯ ಆಯ್ಕೆಗಳಲ್ಲಿ ದೈವಿಕ ಫಲಗಳನ್ನು ಫಲಿಸಿ ನಿಯಂತ್ರಣವನ್ನೂ ಮಿತಭಾವವನ್ನೂ ತೋರಿಸುತ್ತಾರೆ. ಅವರು ರೋಮಾಪುರ 13:13ರಲ್ಲಿರುವ ಪೌಲನ ಈ ಸಲಹೆಗೆ ಕಿವಿಗೊಡುತ್ತಾರೆ: “ದುಂದೌತಣ ಕುಡಿಕತನಗಳಲ್ಲಿಯಾಗಲಿ . . . ಕಾಲಕಳೆಯದೆ ಹಗಲು ಹೊತ್ತಿಗೆ ತಕ್ಕಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.”
ಪಾಪವನ್ನು ದ್ವೇಷಿಸಿ ಸತ್ಯವನ್ನು ಪ್ರೀತಿಸುವುದು
25, 26. ಯೆಶಾಯನು ತನ್ನ ಮೂರನೆಯ ಮತ್ತು ನಾಲ್ಕನೆಯ ದುರ್ಗತಿಗಳಲ್ಲಿ ಇಸ್ರಾಯೇಲ್ಯರ ಯಾವ ದುರಾಲೋಚನೆಯನ್ನು ಬಯಲುಪಡಿಸುತ್ತಾನೆ?
25 ಈಗ ಯೆಶಾಯನು ಹೇಳಿದ ಮೂರನೆಯ ಮತ್ತು ನಾಲ್ಕನೆಯ ದುರ್ಗತಿಯನ್ನು ಕೇಳಿರಿ: “ಅಯ್ಯೋ, ಅಕಾರ್ಯಗಳೆಂಬ ಹಗ್ಗಗಳಿಂದ ಅಪರಾಧ ದಂಡನೆಯನ್ನು, ತೇರನ್ನು ಹೊರಜಿಯಿಂದಲೋ ಎಂಬಂತೆ ಪಾಪದ ಫಲವನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾ ಆತನು ತ್ವರೆಪಡಲಿ, ನಾವು ಆತನ ಕೆಲಸವನ್ನು ನೋಡಬೇಕು, ಅದನ್ನು ಬೇಗನೆ ನಡಿಸಲಿ, ಇಸ್ರಾಯೇಲ್ಯರ ಸದಮಲಸ್ವಾಮಿಯ ಉದ್ದೇಶವನ್ನು ನಾವು ತಿಳಿಯಬೇಕು, ಅದು ಸಮೀಪಿಸಿ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ! ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ!”—ಯೆಶಾಯ 5:18-20.
26 ಪಾಪವನ್ನು ರೂಢಿಯಾಗಿ ಮಾಡುವವರ ಎಂತಹ ಸುವ್ಯಕ್ತವಾದ ಚಿತ್ರಣವು ಇಲ್ಲಿದೆ! ಬಂಡಿಗೆ ಕಟ್ಟಿದ ಎತ್ತುಗಳಂತೆ ಅವರು ಪಾಪಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟಿದ್ದಾರೆ. ಬರಲಿರುವ ಯಾವ ನ್ಯಾಯತೀರ್ಪಿನ ದಿನಕ್ಕೂ ಈ ಪಾಪಿಗಳು ಭಯಪಡುವುದಿಲ್ಲ. ಅವರು ಮೂದಲಿಸುತ್ತ, “ಅದನ್ನು [ದೇವರ ಕೆಲಸವನ್ನು] ಬೇಗನೆ ನಡಿಸಲಿ” ಎಂದು ಹೇಳುತ್ತಾರೆ. ದೇವರ ನಿಯಮಕ್ಕೆ ಅಧೀನರಾಗುವ ಬದಲು, ಅವರು ಸಂಗತಿಗಳನ್ನು ತಿರುಚಿ “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಹೇಳುತ್ತಾರೆ.—ಹೋಲಿಸಿ ಯೆರೆಮೀಯ 6:15; 2 ಪೇತ್ರ 3:3-7.
27. ಇಸ್ರಾಯೇಲ್ಯರಿಗಿದ್ದಂತಹ ರೀತಿಯ ಮನೋಭಾವದಿಂದ ಇಂದು ಕ್ರೈಸ್ತರು ಹೇಗೆ ದೂರವಿರಸಾಧ್ಯವಿದೆ?
27 ಇಂದು ಕ್ರೈಸ್ತರು ಇಂತಹ ಮನೋಭಾವದಿಂದ ದೂರವಿರಲು ಸರ್ವಪ್ರಯತ್ನವನ್ನೂ ಮಾಡಬೇಕು. ಉದಾಹರಣೆಗೆ, ಅವರು ಹಾದರ ಮತ್ತು ಸಲಿಂಗೀಕಾಮದ ಕುರಿತಾದ ಲೋಕದ ಭಾವನೆಯನ್ನು ಅನುಸರಿಸಲು ನಿರಾಕರಿಸುತ್ತಾರೆ. (ಎಫೆಸ 4:18, 19) ನಿಜ, ಕ್ರೈಸ್ತನೊಬ್ಬನು ಘೋರವಾದ ಪಾಪಕ್ಕೆ ನಡೆಸಸಾಧ್ಯವಿರುವ ಒಂದು ‘ತಪ್ಪುಹೆಜ್ಜೆ’ಯನ್ನಿಡಬಹುದು (NW). (ಗಲಾತ್ಯ 6:1) ಪಾಪದಲ್ಲಿ ಸಿಕ್ಕಿಬಿದ್ದವರಿಗೆ ಬೇಕಾದ ಸಹಾಯನೀಡಲು ಸಭೆಯ ಹಿರಿಯರು ಸಿದ್ಧರಾಗಿದ್ದಾರೆ. (ಯಾಕೋಬ 5:14, 15) ಪ್ರಾರ್ಥನೆ ಮತ್ತು ಬೈಬಲಾಧಾರಿತ ಸಲಹೆಗಳ ಸಹಾಯದಿಂದ ಆತ್ಮಿಕ ರೀತಿಯ ವಾಸಿಯು ಸಾಧ್ಯವಿದೆ. ಇಲ್ಲದಿರುವಲ್ಲಿ “ಪಾಪಕ್ಕೆ ದಾಸರು” ಆಗುವ ಅಪಾಯವಿದೆ. (ಯೋಹಾನ 8:34) ದೇವರನ್ನು ಮೂದಲಿಸಿ, ಆತನ ನ್ಯಾಯತೀರ್ಪಿನ ದಿನವು ಬರುತ್ತಿದೆ ಎಂಬ ಸಂಗತಿಯನ್ನು ಅಲಕ್ಷಿಸುವ ಬದಲಿಗೆ, ಕ್ರೈಸ್ತರು ಯೆಹೋವನ ಮುಂದೆ “ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ” ಉಳಿಯಲು ಪ್ರಯತ್ನಿಸುತ್ತಾರೆ.—2 ಪೇತ್ರ 3:14; ಗಲಾತ್ಯ 6:7, 8.
28. ಯೆಶಾಯನು ಹೇಳಿದ ಕೊನೆಯ ದುರ್ಗತಿಯಲ್ಲಿ ಯಾವ ಪಾಪಗಳನ್ನು ಖಂಡಿಸಲಾಗಿದೆ, ಮತ್ತು ಕ್ರೈಸ್ತರು ಇಂದು ಇಂತಹ ಪಾಪಗಳಿಂದ ಹೇಗೆ ದೂರವಿರಬಲ್ಲರು?
28 ಯೆಶಾಯನು ಯೋಗ್ಯವಾಗಿಯೇ ಈ ಕೊನೆಯ ದುರ್ಗತಿಗಳನ್ನು ಕೂಡಿಸಿ ಹೇಳುತ್ತಾನೆ: “ಅಯ್ಯೋ, ತಮ್ಮಲ್ಲಿ ತಾವೇ ಜ್ಞಾನಿಗಳೆಂದೂ ಸ್ವಂತ ಗಣನೆಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಪಾಡು ಏನು ಹೇಳಲಿ! ಅಯ್ಯೋ, ಸುರಾಪಾನದಲ್ಲಿ ಶೂರರೂ ಮದ್ಯಮಿಶ್ರಣದಲ್ಲಿ ಸಾಹಸಿಗಳೂ ಆಗಿ ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನೆಂದು ಹೇಳಲಿ!” (ಯೆಶಾಯ 5:21-23) ಈ ಮಾತುಗಳನ್ನು ದೇಶದಲ್ಲಿದ್ದ ನ್ಯಾಯಾಧೀಶರಿಗೆ ಸಂಬೋಧಿಸಲಾಗಿತ್ತೆಂಬುದು ವ್ಯಕ್ತ. ಇಂದು ಸಭಾಹಿರಿಯರು “ತಮ್ಮಲ್ಲಿ ತಾವೇ ಜ್ಞಾನಿಗಳೆಂದು” ತೋರಿಸಿಕೊಳ್ಳಬಾರದು. ಜೊತೆಹಿರಿಯರು ಕೊಡುವ ಸಲಹೆಯನ್ನು ಅವರು ದೀನಭಾವದಿಂದ ಅಂಗೀಕರಿಸಿ ಸಂಸ್ಥೆಯ ಆಜ್ಞೆಗಳಿಗೆ ಒತ್ತಾಗಿ ಅಂಟಿಕೊಳ್ಳಬೇಕು. (ಜ್ಞಾನೋಕ್ತಿ 1:5; 1 ಕೊರಿಂಥ 14:33) ಮದ್ಯ ಪಾನೀಯಗಳ ಬಳಕೆಯಲ್ಲಿ ಅವರು ಮಿತಭಾವವನ್ನು ಅನುಸರಿಸುತ್ತಾರೆ. ಸಭಾ ಚಟುವಟಿಕೆಗಳ ಮೊದಲು ಅದನ್ನು ಎಂದಿಗೂ ಉಪಯೋಗಿಸುವುದಿಲ್ಲ. (ಹೋಶೇಯ 4:11) ಚಿಕ್ಕ ರೀತಿಯಲ್ಲಿ ಪಕ್ಷಪಾತ ತೋರಿಸುವುದರಿಂದಲೂ ಹಿರಿಯರು ದೂರವಿರುವರು. (ಯಾಕೋಬ 2:9) ಕ್ರೈಸ್ತಪ್ರಪಂಚದ ಪಾದ್ರಿಗಳಿಗಿಂತ ಇದು ಎಷ್ಟು ಭಿನ್ನ! ಈ ಪಾದ್ರಿಗಳಲ್ಲಿ ಅನೇಕರು ತಮ್ಮ ಮಧ್ಯೆ ಇರುವ ಅಧಿಕಾರಯುಕ್ತರೂ ಧನಿಕರೂ ಆದ ಪಾಪಿಗಳನ್ನು, ಅಪೊಸ್ತಲ ಪೌಲನು ರೋಮಾಪುರ 1:18, 26, 27; 1 ಕೊರಿಂಥ 6:9, 10 ಮತ್ತು ಎಫೆಸ 5:3-5ರಲ್ಲಿ ಕೊಡಲ್ಪಟ್ಟಿರುವ ಎಚ್ಚರಿಕೆಗಳಿಂದ ಗದರಿಸುವುದಿಲ್ಲ. ಅದಕ್ಕೆ ಬದಲಾಗಿ ಅವರ ಪಾಪಗಳಿಗೆ ಸುಣ್ಣ ಹಚ್ಚಿ ಅವನ್ನು ಮುಚ್ಚಿಹಾಕುತ್ತಾರೆ.
29. ಯೆಹೋವನ ಇಸ್ರಾಯೇಲ್ಯ ದ್ರಾಕ್ಷೇತೋಟಕ್ಕೆ ಯಾವ ವಿಪತ್ಕಾರಕ ಅಂತ್ಯವು ಕಾದಿದೆ?
29 ಯೆಶಾಯನು ಈ ಪ್ರವಾದನಾ ಸಂದೇಶವನ್ನು, “ಯೆಹೋವನ ಉಪದೇಶವನ್ನು ನಿರಾಕರಿಸಿ” ನೀತಿಯ ಫಲವನ್ನು ಕೊಡದವರಿಗೆ ಬರುವ ವಿಪತ್ಕಾರಕ ಅಂತ್ಯವನ್ನು ವರ್ಣಿಸುತ್ತ ಮುಗಿಸುತ್ತಾನೆ. (ಯೆಶಾಯ 5:24, 25; ಹೋಶೇಯ 9:16; ಮಲಾಕಿಯ 4:1) ಅವನು ಪ್ರಕಟಿಸಿದ್ದು: “[ಯೆಹೋವನು] ದೂರದ [“ಮಹಾ,” NW] ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ ಅವರನ್ನು ಭೂಲೋಕದ ಅಂಚಿನಲ್ಲಿಂದ ಸಿಳ್ಳುಹಾಕಿ ಕರೆಯುವನು; ಇಗೋ, ತ್ವರೆಪಟ್ಟು ವೇಗವಾಗಿ ಬರುತ್ತಾರೆ!”—ಯೆಶಾಯ 5:26; ಧರ್ಮೋಪದೇಶಕಾಂಡ 28:49; ಯೆರೆಮೀಯ 5:15.
30. ಯೆಹೋವನ “ಜನಾಂಗ”ದ ಎದುರಾಗಿ ಯಾರು ಒಟ್ಟುಸೇರಿಸಲ್ಪಡುವರು, ಮತ್ತು ಪರಿಣಾಮವೇನಾಗುವುದು?
30 ಪುರಾತನ ಕಾಲದಲ್ಲಿ, ಎತ್ತರದ ಸ್ಥಳದಲ್ಲಿ ನೆಡಲ್ಪಟ್ಟ ಒಂದು ಕಂಬವು ಜನರಿಗೆ ಅಥವಾ ಸೈನ್ಯಗಳಿಗೆ ಒಂದು “ಗುರುತು” ಅಥವಾ ಒಟ್ಟಿಗೆ ಸೇರುವ ಸ್ಥಳ ಆಗಿರುತ್ತಿತ್ತು. (ಹೋಲಿಸಿ ಯೆಶಾಯ 18:3; ಯೆರೆಮೀಯ 51:27.) ಆದರೆ ಈಗ, ಯೆಹೋವನೇ ಈ ಅನಾಮಧೇಯ “ಮಹಾ ಜನಾಂಗ”ದವರು (NW) ನ್ಯಾಯತೀರ್ಪನ್ನು ಬರಿಸುವಂತೆ ಅವರನ್ನು ಕೂಡಿಸುವನು.b ಆತನು “ಸಿಳ್ಳುಹಾಕಿ” ಅಂದರೆ ಗಮನ ಸೆಳೆದು ತನ್ನ ಮೊಂಡ ಜನರು ಸೋಲಿಗೆ ಯೋಗ್ಯರೆಂದು ಗುರುತಿಸುವನು. ಬಳಿಕ ಆ ಪ್ರವಾದಿಯು ಆ ಸಿಂಹಸದೃಶ ಜಯಶಾಲಿಗಳ ಶರವೇಗದ ಮತ್ತು ಭಯಂಕರವಾದ ಆಕ್ರಮಣವನ್ನು ವಿವರಿಸುತ್ತಾನೆ. ಅವರು “ಬೇಟೆಹಿಡಿದು,” ಅಂದರೆ ದೇವರ ಜನಾಂಗವನ್ನು ಹಿಡಿದು, ಅವರನ್ನು ಸೆರೆಗೆ “ಹೊತ್ತುಕೊಂಡು ಹೋಗುತ್ತಾರೆ.” (ಓದಿ ಯೆಶಾಯ 5:27-30ಎ.) ಇದರಿಂದಾಗಿ ಯೆಹೋವನ ಜನರ ದೇಶಕ್ಕೆ ಎಷ್ಟೊಂದು ದುಃಖಕರವಾದ ಪರಿಣಾಮ! “ದೇಶದಲ್ಲಿಯೋ, ಆಹಾ, ಅಂಧಕಾರವೂ ವ್ಯಾಕುಲವೂ ತುಂಬಿರುವವು, ಮೋಡ ಕವಿದು ಬೆಳಕು ಕತ್ತಲಾಗುವದು.”—ಯೆಶಾಯ 5:30ಬಿ.
31. ಯೆಹೋವನ ಇಸ್ರಾಯೇಲ್ಯ ದ್ರಾಕ್ಷೇತೋಟಕ್ಕೆ ಬಂದ ಶಿಕ್ಷೆಯಿಂದ ನಿಜ ಕ್ರೈಸ್ತರು ಹೇಗೆ ದೂರವಿರಬಲ್ಲರು?
31 ಹೌದು, ಯೆಹೋವನು ಅಷ್ಟೊಂದು ಪ್ರೀತಿಯಿಂದ ನೆಟ್ಟ ದ್ರಾಕ್ಷೇತೋಟವು ಫಲಬಿಡದ ತೋಟವಾಯಿತಲ್ಲದೆ, ಕೇವಲ ನಾಶಯೋಗ್ಯವಾಗಿ ಪರಿಣಮಿಸಿತು. ಯೆಹೋವನನ್ನು ಇಂದು ಸೇವಿಸುವ ಸಕಲರಿಗೆ ಯೆಶಾಯನ ಮಾತುಗಳು ಎಂತಹ ಪ್ರಬಲವಾದ ಪಾಠವನ್ನು ಕಲಿಸುತ್ತವೆ! ಆದುದರಿಂದ ಅವರೆಲ್ಲರೂ, ಯೆಹೋವನ ಸ್ತುತಿ ಮತ್ತು ತಮ್ಮ ರಕ್ಷಣೆಗಾಗಿ ಕೇವಲ ನೀತಿಯ ಫಲವನ್ನು ಫಲಿಸುವಂತಾಗಲಿ!
[ಪಾದಟಿಪ್ಪಣಿಗಳು]
a ಕಡಿಮೆ ಖರ್ಚಿನ, ಚಪ್ಪರ ಅಥವಾ ಗುಡಿಸಲಿನಂತಹ ತಾತ್ಕಾಲಿಕ ಕಟ್ಟಡಗಳು ಕಲ್ಲಿನ ಬುರುಜುಗಳಿಗಿಂತ ಹೆಚ್ಚು ಸಾಮಾನ್ಯವಾಗಿದ್ದವೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. (ಯೆಶಾಯ 1:8) ಬುರುಜಿನ ಕಟ್ಟುವಿಕೆಯು, ಯಜಮಾನನು ತನ್ನ “ದ್ರಾಕ್ಷೇತೋಟ”ದ ವಿಷಯದಲ್ಲಿ ವಿಪರೀತ ಶ್ರಮವನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ತೋರಿಸುತ್ತಿತ್ತು.
b ಬೇರೆ ಪ್ರವಾದನೆಗಳಲ್ಲಿ, ಯೆಹೂದದ ಮೇಲೆ ಯೆಹೋವನ ಧ್ವಂಸಕಾರಕ ತೀರ್ಪನ್ನು ಹೊಯ್ಯುವ ದೇಶವು ಬಾಬೆಲ್ ಎಂದು ಯೆಶಾಯನು ಗುರುತಿಸುತ್ತಾನೆ.
[ಪುಟ 83ರಲ್ಲಿರುವ ಚಿತ್ರ]
ಒಬ್ಬ ಪಾಪಿಯು, ಬಂಡಿಗೆ ಕಟ್ಟಲ್ಪಟ್ಟಿರುವ ಎತ್ತಿನಂತೆ ಪಾಪಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟಿದ್ದಾನೆ
[ಪುಟ 85ರಲ್ಲಿ ಇಡೀ ಪುಟದ ಚಿತ್ರ]