“ದೇವರ ಇಸ್ರಾಯೇಲ್ಯರು” ಮತ್ತು “ಮಹಾ ಸಮೂಹ”
“ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ನಿಂತಿರುವದನ್ನು ಕಂಡೆನು.”—ಪ್ರಕಟನೆ 7:9.
1-3. (ಎ) ಅಭಿಷಿಕ್ತ ಕ್ರೈಸ್ತರಿಗೆ ಯಾವ ಮಹಿಮಾಭರಿತ ಸ್ವರ್ಗೀಯ ಪ್ರತೀಕ್ಷೆಗಳಿವೆ? (ಬಿ) ಒಂದನೆಯ ಶತಮಾನದ ಸಭೆಯನ್ನು ಸೈತಾನನು ಹೇಗೆ ನಾಶಮಾಡಲು ಪ್ರಯತ್ನಿಸಿದನು? (ಸಿ) ಅಭಿಷಿಕ್ತ ಕ್ರೈಸ್ತ ಸಭೆಯನ್ನು ಭ್ರಷ್ಟಗೊಳಿಸುವ ಸೈತಾನನ ಪ್ರಯತ್ನಗಳು ವಿಫಲಗೊಂಡವೆಂದು ತೋರಿಸಲು 1919 ರಲ್ಲಿ ಏನು ಸಂಭವಿಸಿತು?
ಸಾ.ಶ. 33 ರಲ್ಲಿ “ದೇವರ ಇಸ್ರಾಯೇಲ್ಯರ” ಸ್ಥಾಪನೆಯು, ಯೆಹೋವನ ಉದ್ದೇಶಗಳ ಸಾಧನೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. (ಗಲಾತ್ಯ 6:16) ಅದರ ಅಭಿಷಿಕ್ತ ಸದಸ್ಯರಿಗೆ ಅಮರರಾದ ಆತ್ಮಜೀವಿಗಳಾಗಿ ದೇವರ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳುವ ನಿರೀಕ್ಷೆಯಿದೆ. (1 ಕೊರಿಂಥ 15:50, 53, 54) ಆ ಸ್ಥಾನದಲ್ಲಿ ಅವರಿಗೆ ಯೆಹೋವನ ನಾಮವನ್ನು ಪವಿತ್ರೀಕರಿಸುವುದರಲ್ಲಿ ಮತ್ತು ಮಹಾ ವಿರೋಧಿಯಾದ ಪಿಶಾಚ ಸೈತಾನನ ತಲೆಯನ್ನು ಜಜ್ಜುವುದರಲ್ಲಿ ಒಂದು ಪ್ರಮುಖ ಭಾಗವಿದೆ. (ಆದಿಕಾಂಡ 3:15; ರೋಮಾಪುರ 16:20) ಈ ಹೊಸ ಸಭೆಯನ್ನು ಹಿಂಸಿಸುವ ಮೂಲಕ ಮತ್ತು ಅದನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುವ ಮೂಲಕ ಅದನ್ನು ನಾಶಗೊಳಿಸಲು ಸೈತಾನನು ತನ್ನ ಶಕ್ತಿಯಲ್ಲಿದ್ದುದನ್ನೆಲ್ಲ ಮಾಡಿದ್ದೇನೂ ಆಶ್ಚರ್ಯವಲ್ಲ!—2 ತಿಮೊಥೆಯ 2:18; ಯೂದ 4; ಪ್ರಕಟನೆ 2:10.
2 ಅಪೊಸ್ತಲರು ಜೀವದಿಂದಿದ್ದಾಗ ಸೈತಾನನು ಯಶಸ್ವಿಗೊಳ್ಳಲಿಲ್ಲ. ಆದರೆ ಅವರ ಮರಣಾನಂತರ, ಧರ್ಮಭ್ರಷ್ಟತೆಯು ಯಾವ ಪ್ರತಿಬಂಧವೂ ಇಲ್ಲದೆ ಹರಡಿತು. ಕಟ್ಟಕಡೆಗೆ, ಇಂದು ಕ್ರೈಸ್ತ ಪ್ರಪಂಚವೆಂದು ಜ್ಞಾತವಾಗಿರುವ ಭ್ರಷ್ಟ ಧಾರ್ಮಿಕ ವಿಕಟಾನುಕರಣೆಯನ್ನು ಸೈತಾನನು ಹೊರತಂದಾಗ, ಮಾನವ ಕಣ್ಣುಗಳಿಗೆ, ಯೇಸುವಿನಿಂದ ಸ್ಥಾಪಿಸಲ್ಪಟ್ಟ ಶುದ್ಧ ಕ್ರೈಸ್ತ ಸಭೆಯು ಭ್ರಷ್ಟವಾಗಿರುವಂತೆ ತೋರಿತು. (2 ಥೆಸಲೊನೀಕ 2:3-8) ಹೀಗಿದ್ದರೂ, ಸತ್ಯ ಕ್ರೈಸ್ತತ್ವವು ಬದುಕಿ ಉಳಿಯಿತು.—ಮತ್ತಾಯ 28:20.
3 ಯೇಸು ಗೋದಿ ಮತ್ತು ಹಣಜಿಗಳ ತನ್ನ ದೃಷ್ಟಾಂತದಲ್ಲಿ, ಸತ್ಯ ಕ್ರೈಸ್ತರು, “ಹಣಜಿಗಳು” ಅಥವಾ ಸುಳ್ಳು ಕ್ರೈಸ್ತರೊಂದಿಗೆ ಸ್ವಲ್ಪ ಕಾಲ ಬೆಳೆಯುವರೆಂದು ಮುಂತಿಳಿಸಿದನು; ಮತ್ತು ಇದು ಸಂಭವಿಸಿತು. ಆದರೆ ಕಡೆಯ ದಿವಸಗಳಲ್ಲಿ, “ಪರಲೋಕರಾಜ್ಯದವರು,” (“ರಾಜ್ಯದ ಪುತ್ರರು,” NW) “ಹಣಜಿ” ಗಳಿಂದ ಪುನಃ ವ್ಯಕ್ತವಾಗಿ ಪ್ರತ್ಯೇಕವಾಗುವರೆಂದೂ ಅವನು ಹೇಳಿದನು. (ಮತ್ತಾಯ 13:36-43) ಇದೂ ಸತ್ಯವಾಗಿ ಪರಿಣಮಿಸಿತು. 1919 ರಲ್ಲಿ ಸಾಚ ಅಭಿಷಿಕ್ತ ಕ್ರೈಸ್ತರು ಬಾಬೆಲಿನ ಸೆರೆಯೊಳಗಿಂದ ಹೊರಬಂದರು. ಅವರು ದೈವಿಕವಾಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬುದಾಗಿ ಒಪ್ಪಲ್ಪಟ್ಟರು, ಮತ್ತು ಅವರು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಧೈರ್ಯದಿಂದ ಆರಂಭಿಸಿದರು. (ಮತ್ತಾಯ 24:14, 45-47; ಪ್ರಕಟನೆ 18:4) ಅವರಲ್ಲಿ ಹೆಚ್ಚುಕಡಮೆ ಎಲ್ಲರೂ ಯೆಹೂದ್ಯೇತರರಾಗಿದ್ದರೂ ಅವರಲ್ಲಿ ಅಬ್ರಹಾಮನ ನಂಬಿಕೆಯಿದುದ್ದರಿಂದ, ಅವರು ವಾಸ್ತವವಾಗಿ, ‘ಅಬ್ರಹಾಮನ ಮಕ್ಕಳು’ ಆಗಿದ್ದರು. ಅವರು “ದೇವರ ಇಸ್ರಾಯೇಲ್ಯರ” ಸದಸ್ಯರಾಗಿದ್ದರು.—ಗಲಾತ್ಯ 3:7, 26-29.
“ಮಹಾ ಸಮೂಹ”
4. ಕ್ರೈಸ್ತರ ಯಾವ ಗುಂಪು, ವಿಶೇಷವಾಗಿ 1930 ಗಳಲ್ಲಿ, ಗಮನವನ್ನು ಸೆಳೆಯಿತು?
4 ಆರಂಭದಲ್ಲಿ, ಈ ಅಭಿಷಿಕ್ತ ಕ್ರೈಸ್ತರ ಸಾರುವಿಕೆಗೆ ಪ್ರತಿವರ್ತಿಸಿದವರು ಸಹ ಸ್ವರ್ಗೀಯ ನಿರೀಕ್ಷೆಯಿದ್ದ ಆತ್ಮಿಕ ಇಸ್ರಾಯೇಲ್ಯರು, ಆ 1,44,000 ಮಂದಿಯಲ್ಲಿ ಉಳಿದವರಾಗಿದ್ದರು. (ಪ್ರಕಟನೆ 12:17) ಆದರೂ, ವಿಶೇಷವಾಗಿ 1930 ಗಳಲ್ಲಿ, ಇನ್ನೊಂದು ಗುಂಪು ಗಮನಕ್ಕೆ ಬಂದಿತು. ಇವರನ್ನು ಕುರಿ ಹಟ್ಟಿಗಳ ದೃಷ್ಟಾಂತದ “ಬೇರೆ ಕುರಿಗಳು” ಎಂದು ಗುರುತಿಸಲಾಯಿತು. (ಯೋಹಾನ 10:16) ಪ್ರಮೋದವನ ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆಯಿರುವ ಕ್ರಿಸ್ತನ ಶಿಷ್ಯರು ಇವರಾಗಿದ್ದರು. ಅವರು ಅಭಿಷಿಕ್ತ ಕ್ರೈಸ್ತರ ಆತ್ಮಿಕ ಮಕ್ಕಳೋ ಎಂಬಂತಿದ್ದರು. (ಯೆಶಾಯ 59:21; 66:22; ಹೋಲಿಸಿ 1 ಕೊರಿಂಥ 4:15, 16.) ಅವರು ಅಭಿಷಿಕ್ತ ಕ್ರೈಸ್ತ ಸಭೆಯನ್ನು ನಂಬಿಗಸ್ತನೂ ವಿವೇಕಿಯೂ ಆದ ಆಳೆಂದು ಗುರುತಿಸಿದರು, ಮತ್ತು ಅವರಿಗೆ ಅವರ ಅಭಿಷಿಕ್ತ ಸಹೋದರರಂತೆ ಯೆಹೋವನಲ್ಲಿ ಆಳವಾದ ಪ್ರೀತಿಯೂ, ಯೇಸುವಿನ ಯಜ್ಞದಲ್ಲಿ ನಂಬಿಕೆಯೂ, ದೇವರನ್ನು ಸುತ್ತಿಸುವುದರಲ್ಲಿ ಹುರುಪೂ, ನೀತಿಗಾಗಿ ಬಾಧೆ ಪಡುವ ಇಚ್ಛೆಯೂ ಇತ್ತು.
5. ಬೇರೆ ಕುರಿಗಳ ಸ್ಥಾನವನ್ನು ಪ್ರಗತಿಪರವಾಗಿ, ಹೆಚ್ಚು ಉತ್ತಮವಾಗಿ ಹೇಗೆ ಅರ್ಥಮಾಡಿಕೊಳ್ಳಲಾಗಿದೆ?
5 ಮೊದಲಲ್ಲಿ ಈ ಬೇರೆ ಕುರಿಗಳ ಸ್ಥಾನವು ಉತ್ತಮವಾಗಿ ಗ್ರಹಿಸಲ್ಪಡಲಿಲ್ಲ, ಆದರೆ ಸಮಯ ದಾಟಿದಂತೆ, ವಿಷಯಗಳು ಹೆಚ್ಚು ಸ್ಪಷ್ಟವಾಗಿದವು. 1932 ರಲ್ಲಿ ಬೇರೆ ಕುರಿಗಳನ್ನು ಸಾರುವ ಕಾರ್ಯದಲ್ಲಿ ಭಾಗವಹಿಸಲಿಕ್ಕಾಗಿ—ಅನೇಕ ಬೇರೆ ಕುರಿಗಳು ಆಗಲೆ ಅದನ್ನು ಮಾಡುತ್ತಿದ್ದರು—ಉತ್ತೇಜಿಸುವಂತೆ ಅಭಿಷಿಕ್ತ ಕ್ರೈಸ್ತರನ್ನು ಪ್ರೋತ್ಸಾಹಿಸಲಾಯಿತು. 1934 ರಲ್ಲಿ ಬೇರೆ ಕುರಿಗಳನ್ನು ನೀರಿನ ದೀಕ್ಷಾಸ್ನಾನಕ್ಕೆ ಸಮ್ಮತಿಸುವಂತೆ ಪ್ರೋತ್ಸಾಹಿಸಲಾಯಿತು. 1935 ರಲ್ಲಿ ಅವರನ್ನು ಪ್ರಕಟನೆ 7 ನೆಯ ಅಧ್ಯಾಯದ “ಮಹಾ ಸಮೂಹ” ವೆಂದು ಗುರುತಿಸಲಾಯಿತು. 1938 ರಲ್ಲಿ ಯೇಸು ಕ್ರಿಸ್ತನ ಮರಣದ ಸ್ಮಾರಕದಲ್ಲಿ ಪ್ರೇಕ್ಷಕರಾಗಿ ಉಪಸ್ಥಿತರಾಗುವಂತೆ ಅವರನ್ನು ಆಮಂತ್ರಿಸಲಾಯಿತು. 1951 ರಲ್ಲಿ ಅವರಲ್ಲಿ ಪಕ್ವತೆಯ ಪುರುಷರು, “ಗಾಳಿಯಲ್ಲಿ ಮರೆಯಂತೆಯೂ ಅತಿವೃಷಿಯ್ಟಲ್ಲಿ ಆವರಣದ ಹಾಗೂ” ಸೇವೆ ಮಾಡುವ “ಅಧಿಪತಿ” ಗಳಲ್ಲಿ ಕೆಲವರಾಗಿದ್ದಾರೆಂದು ವಿವೇಚಿಸಿ ತಿಳಿಯಲಾಯಿತು. (ಕೀರ್ತನೆ 45:16; ಯೆಶಾಯ 32:1, 2) 1953 ರಲ್ಲಿ, ದೇವರ ಐಹಿಕ ಸಂಸ್ಥೆ—ಅಷ್ಟರೊಳಗೆ ಅದರ ಹೆಚ್ಚಿನ ಭಾಗವು ಬೇರೆ ಕುರಿಗಳಿಂದ ರಚಿಸಲ್ಪಟ್ಟಿತ್ತು—ನೂತನ ಲೋಕದಲ್ಲಿ ಅಸ್ತಿತ್ವದಲ್ಲಿರುವ ಭೂಸಮಾಜದ ಕೇಂದ್ರವಾಗಿರುವಂತೆ ವೀಕ್ಷಿಸಲ್ಪಟ್ಟಿತು. 1985 ರಲ್ಲಿ, ಬೇರೆ ಕುರಿಗಳು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇರೆಗೆ ದೇವರ ಸ್ನೇಹಿತರಾಗಿ ನೀತಿವಂತರೆಂದು ಘೋಷಿಸಲ್ಪಟ್ಟರೆಂದೂ, ಇದು ಅರ್ಮಗೆದೋನನ್ನು ಪಾರಾಗುವ ವೀಕ್ಷಣದಿಂದ ಎಂದೂ ಗ್ರಹಿಸಲಾಯಿತು.
6. ಇಂದು ಅಭಿಷಿಕ್ತರ ಮತ್ತು ಬೇರೆ ಕುರಿಗಳ ಸಂಬಂಧಿತ ಸ್ಥಾನಗಳಾವುವು, ಇವು ಯಾವ ಪ್ರಶ್ನೆಗಳಿಗೆ ನಡೆಸುತ್ತವೆ?
6 ಇಷ್ಟರೊಳಗೆ, “ಕಡೇ ದಿವಸಗಳ” ಈ ಕೊನೆಯ ಭಾಗದಲ್ಲಿ, ಆ 1,44,000 ಮಂದಿಯಲ್ಲಿ ಹೆಚ್ಚಿನವರು ಸತ್ತು ಹೋಗಿ ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದಿದ್ದಾರೆ. (2 ತಿಮೊಥೆಯ 3:1; ಪ್ರಕಟನೆ 6:9-11; 14:13) ಈಗ ಸುವಾರ್ತೆ ಸಾರುವುದರಲ್ಲಿ ಹೆಚ್ಚಿನದನ್ನು ಭೂನಿರೀಕ್ಷೆಯಿರುವ ಕ್ರೈಸ್ತರು ಮಾಡುತ್ತಾರೆ, ಮತ್ತು ಇದರಲ್ಲಿ ಯೇಸುವಿನ ಅಭಿಷಿಕ್ತ ಸಹೋದರರನ್ನು ಬೆಂಬಲಿಸುವುದನ್ನು ಅವರು ಒಂದು ಸುಯೋಗವಾಗಿ ಪರಿಗಣಿಸುತ್ತಾರೆ. (ಮತ್ತಾಯ 25:40) ಆದರೂ, ಈ ಅಭಿಷಿಕ್ತರು, ಯಾರ ಮೂಲಕ ಈ ಕೊನೆಯ ದಿವಸಗಳಲ್ಲೆಲ್ಲ ಆತ್ಮಿಕಾಹಾರವು ಸರಬರಾಯಿ ಮಾಡಲಾಗುತ್ತದೋ ಆ ನಂಬಿಗಸ್ತನೂ ವಿವೇಕಿಯೂ ಆದ ಆಳಾಗಿದ್ದಾರೆ. ಅಭಿಷಿಕ್ತರೆಲ್ಲ ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದಾಗ ಬೇರೆ ಕುರಿಗಳ ಸ್ಥಿತಿಗತಿ ಏನಾಗಿರುವುದು? ಆಗ ಬೇರೆ ಕುರಿಗಳಿಗೆ ಯಾವ ಒದಗಿಸುವಿಕೆಗಳನ್ನು ಮಾಡಲಾಗುವುದು? ಪುರಾತನ ಕಾಲದ ಇಸ್ರಾಯೇಲಿನ ಕಡೆಗಿನ ಅಲ್ಪಕಾಲಿಕ ನೋಟವು ಈ ಪ್ರಶ್ನೆಗಳನ್ನು ಉತ್ತರಿಸುವರೆ ನಮಗೆ ಸಹಾಯ ಮಾಡುವುದು.
ಪ್ರತಿನಿಧಿರೂಪವಾದ ಒಂದು “ಯಾಜಕ ರಾಜ್ಯ”
7, 8. ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ಪ್ರಾಚೀನ ಇಸ್ರಾಯೇಲು ಎಷ್ಟರ ಮಟ್ಟಿಗೆ ಒಂದು ಯಾಜಕರ ರಾಜ್ಯವೂ ಒಂದು ಪವಿತ್ರ ಜನಾಂಗವೂ ಆಗಿತ್ತು?
7 ಯೆಹೋವನು ಇಸ್ರಾಯೇಲನ್ನು ತನ್ನ ವಿಶೇಷ ಜನಾಂಗವಾಗಿ ಆರಿಸಿಕೊಂಡಾಗ, ಆತನು ಅವರೊಂದಿಗೆ ಹೀಗೆ ಹೇಳುತ್ತ ಒಂದು ಒಡಂಬಡಿಕೆಯನ್ನು ಮಾಡಿದನು: “ಹೀಗಿರಲಾಗಿ ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸಕ್ವೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ.” (ವಿಮೋಚನಕಾಂಡ 19:5, 6) ಇಸ್ರಾಯೇಲು ಧರ್ಮಶಾಸ್ತ್ರದ ಒಡಂಬಡಿಕೆಯ ಆಧಾರದ ಮೇರೆಗೆ ಯೆಹೋವನ ವಿಶೇಷ ಜನವಾಗಿತ್ತು. ಆದರೆ, ಯಾಜಕ ರಾಜ್ಯ ಮತ್ತು ಪರಿಶುದ್ಧ ಜನಾಂಗವು ಒಳಗೂಡಿರುವ ಆ ವಾಗ್ದಾನ ಹೇಗೆ ನೆರವೇರುವುದು?
8 ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದಾಗ ಯೆಹೋವನ ಪರಮಾಧಿಕಾರವನ್ನು ಒಪ್ಪಿ ಆತನನ್ನು ತಮ್ಮ ಅರಸನಾಗಿ ಅಂಗೀಕರಿಸಿದರು. (ಯೆಶಾಯ 33:22) ಹೀಗೆ, ಅವರು ಒಂದು ರಾಜ್ಯವಾಗಿದ್ದರು. ಆದರೆ, ಬಳಿಕ ತೋರಿಬಂದಂತೆ, “ರಾಜ್ಯ”ದ ಕುರಿತ ವಾಗ್ದಾನವು ಅದಕ್ಕಿಂತಲೂ ಹೆಚ್ಚಿನ ಅರ್ಥವನ್ನು ಕೊಡಲಿತ್ತು. ಇದಲ್ಲದೆ, ಅವರು ಯೆಹೋವನ ನಿಯಮಕ್ಕೆ ವಿಧೇಯರಾದಾಗ, ತಮ್ಮ ಸುತ್ತಲಿನ ಜನಾಂಗಗಳಿಂದ ಪ್ರತ್ಯೇಕರಾಗಿದ್ದು ಶುದ್ಧರಾಗಿದ್ದರು. ಅವರು ಒಂದು ಪವಿತ್ರ ಜನಾಂಗವಾಗಿದ್ದರು. (ಧರ್ಮೋಪದೇಶಕಾಂಡ 7:5, 6, NW) ಅವರು ಯಾಜಕರ ರಾಜ್ಯವಾಗಿದ್ದರೊ? ಸರಿ, ಇಸ್ರಾಯೇಲಿನಲ್ಲಿ ಲೇವಿಯ ಕುಲವು ದೇವಾಲಯದ ಸೇವೆಗಾಗಿ ಬದಿಗಿಡಲ್ಪಟ್ಟಿತ್ತು, ಮತ್ತು ಆ ಕುಲದೊಳಗೆ ಲೇವ್ಯ ಯಾಜಕತ್ವಏತ್ತು. ಮೋಶೆಯ ಧರ್ಮಶಾಸ್ತ್ರವು ಉದ್ಘಾಟಿಸಲ್ಪಟ್ಟಾಗ, ಲೇವ್ಯ ಗಂಡುಗಳನ್ನು ಪ್ರತಿಯೊಂದು ಲೇವ್ಯೇತರ ಕುಟುಂಬದ ಚೊಚ್ಚಲಿನ ಬದಲಾಗಿ ತೆಗೆದುಕೊಳ್ಳಲಾಯಿತು.a (ವಿಮೋಚನಕಾಂಡ 22:29; ಅರಣ್ಯಕಾಂಡ 3:11-16, 40-51) ಹೀಗೆ, ಇಸ್ರಾಯೇಲಿನಲ್ಲಿದ್ದ ಪ್ರತಿಯೊಂದು ಕುಟುಂಬವು ದೇವಾಲಯದ ಸೇವೆಯಲ್ಲಿ ಪ್ರತಿನಿಧೀಕರಿಸಲ್ಪಟ್ಟಂತಿತ್ತು. ಆ ಜನಾಂಗವು ಯಾಜಕತ್ವಕ್ಕೆ ಅತಿ ಹತ್ತಿರದ್ದಾಗಿ ತೋರಿಬಂದದ್ದು ಹೀಗೆಯೇ. ಆದರೂ ಅವರು ಜನಾಂಗಗಳ ಮುಂದೆ ಯೆಹೋವನನ್ನು ಪ್ರತಿನಿಧೀಕರಿಸಿದರು. ಸತ್ಯ ದೇವರನ್ನು ಆರಾಧಿಸಬಯಸಿದ ಯಾವನೇ ವಿದೇಶಿಯು ಇಸ್ರಾಯೇಲಿನೊಂದಿಗಿನ ಸಹವಾಸದಲ್ಲಿ ಅದನ್ನು ಮಾಡಬೇಕಾಗಿತ್ತು.—2 ಪೂರ್ವಕಾಲವೃತ್ತಾಂತ 6:32, 33; ಯೆಶಾಯ 60:10.
9. ಉತ್ತರದ ಇಸ್ರಾಯೇಲ್ ರಾಜ್ಯವು ‘ತನಗೆ ಯಾಜಕನಾಗಿ ಸೇವೆಮಾಡುವುದನ್ನು’ ಯೆಹೋವನು ನಿರಾಕರಿಸುವಂತೆ ಯಾವುದು ಮಾಡಿತು?
9 ಸೊಲೊಮೋನನ ಮರಣಾನಂತರ, ದೇವಜನರು ಅರಸ ಯಾರೊಬ್ಬಾಮನ ಅಧಿಕಾರದಲ್ಲಿ ಉತ್ತರದ ಇಸ್ರಾಯೇಲ್ ಜನಾಂಗವಾಗಿ ಮತ್ತು ಅರಸ ರೆಹಬ್ಬಾಮನ ಅಧಿಕಾರದಲ್ಲಿ ದಕ್ಷಿಣದ ಯೆಹೂದ ಜನಾಂಗವಾಗಿ ಬೇರ್ಪಟ್ಟರು. ಶುದ್ಧಾರಾಧನೆಯ ಕೇಂದ್ರವಾಗಿದ್ದ ದೇವಾಲಯವು ಯೆಹೂದದ ಕ್ಷೇತ್ರದಲ್ಲಿದುದ್ದರಿಂದ, ಯಾರೊಬ್ಬಾಮನು ತನ್ನ ಸ್ವಂತ ರಾಷ್ಟ್ರೀಯ ಕ್ಷೇತ್ರದಲ್ಲಿ ಕರುಗಳ ವಿಗ್ರಹಗಳನ್ನು ಸ್ಥಾಪಿಸಿ ನಿಯಮಬದ್ಧವಲ್ಲದ ಆರಾಧನಾ ರೀತಿಯನ್ನು ಆರಂಭಿಸಿದನು. ಅಲ್ಲದೆ, “ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ ಲೇವಿಯರಲ್ಲದ ಕನಿಷ್ಠ ಜನರನ್ನೂ ಯಾಜಕರನ್ನಾಗಿ ನೇಮಿಸಿದನು.” (1 ಅರಸುಗಳು 12:31) ಅರಸ ಆಹಾಬನು ತನ್ನ ವಿದೇಶೀ ಪತ್ನಿ ಈಜೆಬೆಲಳು ದೇಶದಲ್ಲಿ ಬಾಳನ ಆರಾಧನೆಯನ್ನು ಸ್ಥಾಪಿಸುವಂತೆ ಅನುಮತಿಸಿದಾಗ, ಆ ಉತ್ತರದ ಜನಾಂಗವು ಇನ್ನೂ ಆಳವಾಗಿ ಮಿಥ್ಯಾರಾಧನೆಯೊಳಗೆ ಮುಳುಗಿತು. ಕೊನೆಗೆ, ಯೆಹೋವನು ಆ ದಂಗೆಕೋರ ರಾಜ್ಯಕ್ಕೆ ನ್ಯಾಯತೀರ್ಪನ್ನು ಪ್ರಕಟಿಸಿದನು. ಹೋಶೇಯನ ಮೂಲಕ ಆತನಂದದ್ದು: “ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿಬಿಟ್ಟದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು.” (ಹೋಶೇಯ 4:6) ಇದಾಗಿ ಸ್ವಲ್ಪದರಲ್ಲಿ ಅಶ್ಶೂರರು ಉತ್ತರದ ಇಸ್ರಾಯೇಲ್ ರಾಜ್ಯವನ್ನು ನಿರ್ನಾಮ ಮಾಡಿದರು.
10. ದಕ್ಷಿಣದ ಯೆಹೂದ ರಾಜ್ಯವು ನಂಬಿಗಸ್ತಿಕೆಯಿಂದಿದ್ದಾಗ ಜನಾಂಗಗಳ ಮುಂದೆ ಯೆಹೋವನನ್ನು ಹೇಗೆ ಪ್ರತಿನಿಧೀಕರಿಸಿತು?
10 ದಕ್ಷಿಣದ ರಾಷ್ಟ್ರವಾದ ಯೆಹೂದದ ವಿಷಯವೇನು? ಹಿಜ್ಕೀಯನ ದಿನಗಳಲ್ಲಿ, ಯೆಹೋವನು ಯೆಶಾಯನ ಮೂಲಕ ಹೇಳಿದ್ದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; . . . ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರು.” (ಯೆಶಾಯ 43:10, 21; 44:21) ನಂಬಿಗಸತ್ತೆಯಿಂದಿದ್ದಾಗ, ಆ ದಕ್ಷಿಣದ ರಾಜ್ಯವು ಇತರ ಜನಾಂಗಗಳಿಗೆ ಯೆಹೋವನ ಮಹಿಮೆಯನ್ನು ಪ್ರಕಟಿಸುವ ಮತ್ತು ಸಹೃದಯಿಗಳು ಆತನನ್ನು ಆತನ ಆಲಯದಲ್ಲಿ ಆರಾಧಿಸುವಂತೆ ಆಕರ್ಷಿಸುವ ಹಾಗೂ ನ್ಯಾಯಬದ್ಧವಾದ ಲೇವ್ಯ ಯಾಜಕತ್ವದಿಂದ ಶುಶ್ರೂಷೆ ಮಾಡಲ್ಪಡುವ ಸಾಧನವಾಯಿತು.
ಇಸ್ರಾಯೇಲಿನಲ್ಲಿ ವಿದೇಶೀಯರು
11, 12. ಇಸ್ರಾಯೇಲಿನೊಂದಿಗೆ ಜೊತೆಗೂಡಿ ಯೆಹೋವನ ಸೇವೆ ಮಾಡುವವರಾದ ಕೆಲವು ವಿದೇಶೀಯರನ್ನು ಹೆಸರಿಸಿರಿ.
11 ಈ ರಾಷ್ಟ್ರೀಯ ಸಾಕ್ಷಿಗೆ ಪ್ರತಿವರ್ತನೆ ತೋರಿಸುವ ವಿದೇಶೀಯರಿಗೆ, ಯಾರ ಹೆಂಡತಿಯಾಗಿದ್ದ ಚಿಪ್ಪೋರಳು ಮಿದ್ಯಾನ್ಯಳಾಗಿದ್ದಳೋ ಆ ಮೋಶೆಯ ಮೂಲಕ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಒದಗಿಸುವಿಕೆಯು ಮಾಡಲ್ಪಟ್ಟಿತು. ಇಸ್ರಾಯೇಲ್ಯೇತರರಾಗಿದ್ದ “ಬಹುಮಂದಿ ಅನ್ಯರು” ಇಸ್ರಾಯೇಲಿನೊಂದಿಗೆ ಐಗುಪ್ತವನ್ನು ಬಿಟ್ಟು ಹೋಗಿ, ಧರ್ಮಶಾಸ್ತ್ರವು ಕೊಡಲ್ಪಟ್ಟಾಗ ಉಪಸ್ಥಿತರಿದ್ದರು. (ವಿಮೋಚನಕಾಂಡ 2:16-22; 12:38; ಅರಣ್ಯಕಾಂಡ 11:4) ರಾಹಾಬ ಮತ್ತು ಅವಳ ಕುಟುಂಬವು ಯೆರಿಕೋವಿನಿಂದ ರಕ್ಷಿಸಲ್ಪಟ್ಟು ತರುವಾಯ ಯೆಹೂದಿ ಸಭೆಯೊಳಗೆ ಅಂಗೀಕರಿಸಲ್ಪಟ್ಟಿತು. (ಯೆಹೋಶುವ 6:23-25) ಇದಾಗಿ ಸ್ವಲ್ಪದರಲ್ಲಿ, ಗಿಬ್ಯೋನ್ಯರು ಇಸ್ರಾಯೇಲಿನೊಂದಿಗೆ ಶಾಂತಿ ಮಾಡಿ, ಸಾಕ್ಷಿಗುಡಾರ ಸಂಬಂಧದ ಕೆಲಸಗಳಿಗೆ ನಿಯಮಿತರಾದರು.—ಯೆಹೋಶುವ 9:3-27; ನೋಡಿ 1 ಅರಸುಗಳು 8:41-43; ಎಸ್ತೇರಳು 8:17 ಸಹ.
12 ಕ್ರಮೇಣ, ವಿದೇಶೀಯರು ದೊಡ್ಡ ಹುದ್ದೆಗಳಲ್ಲಿ ಸೇವೆಮಾಡಿದರು. ಬತ್ಷೆಬೆಯ ಗಂಡನಾಗಿದ್ದ ಹಿತ್ತೀಯನಾದ ಊರೀಯನು ಹಾಗೂ ಅಮ್ಮೋನಿಯನಾದ ಚೆಲೆಕನು ದಾವೀದನ “ರಣವೀರರ” ಮಧ್ಯೆ ಸೇರಿಸಲ್ಪಟ್ಟಿದ್ದರು. (1 ಪೂರ್ವಕಾಲವೃತ್ತಾಂತ 11:26, 39, 41; 2 ಸಮುವೇಲ 11:3, 4) ಇಥಿಯೋಪ್ಯದವನಾದ ಎಬೆದ್ಮೆಲೆಕನು ಅರಮನೆಯಲ್ಲಿ ಸೇವೆಮಾಡಿದನು ಮತ್ತು ಅವನು ರಾಜನ ಸಮ್ಮುಖಕ್ಕೂ ಹೋದನು. (ಯೆರೆಮೀಯ 38:7-9) ಇಸ್ರಾಯೇಲು ಬಾಬೆಲಿನಲ್ಲಿ ದೇಶಭ್ರಷ್ಟತೆಯಿಂದ ಹಿಂದಿರುಗಿದ ಬಳಿಕ, ಇಸ್ರಾಯೇಲ್ಯೇತರ ದೇವಸ್ಥಾನದಾಸರಿಗೆ, (ನೆತಿನಿಮ್, NW) ಯಾಜಕರಿಗೆ ನೆರವಾಗುವ ವರ್ಧಿಸಲ್ಪಟ್ಟ ಜವಾಬ್ದಾರಿಯನ್ನು ಕೊಡಲಾಯಿತು. (ಎಜ್ರ 7:24) ಈ ನಂಬಿಗಸ್ತ ಅನ್ಯದೇಶೀಯರಲ್ಲಿ ಅಥವಾ ಅನ್ಯನಿವಾಸಿಗಳಲ್ಲಿ ಅನೇಕರು ಇಂದಿನ ಮಹಾ ಸಮೂಹವನ್ನು ಮುನ್ಸೂಚಿಸುತ್ತಾರೆಂದು ವೀಕ್ಷಿಸಲ್ಪಡುವುದರಿಂದ, ಅವರ ಸನ್ನಿವೇಶವು ನಮಗೆ ಆಸಕ್ತಿಯದ್ದಾಗಿದೆ.
13, 14. (ಎ) ಇಸ್ರಾಯೇಲಿನಲ್ಲಿ ಮತಾವಲಂಬಿಗಳಿಗಿದ್ದ ಸುಯೋಗಗಳೂ ಜವಾಬ್ದಾರಿಗಳೂ ಯಾವುವು? (ಬಿ) ನಂಬಿಗಸ್ತ ಮತಾವಲಂಬಿಗಳನ್ನು ಇಸ್ರಾಯೇಲ್ಯರು ಹೇಗೆ ಕಾಣಬೇಕಾಗಿತ್ತು?
13 ಇಂಥವರು ಮತಾಂತರ ಹೊಂದಿದವರು, ಮೋಶೆಯ ಧರ್ಮಶಾಸ್ತ್ರದ ಕೆಳಗೆ ಯೆಹೋವನ ಸಮರ್ಪಿತ ಆರಾಧಕರು, ಇಸ್ರಾಯೇಲ್ಯರೊಂದಿಗೆ ಜನಾಂಗಗಳಿಂದ ಬೇರ್ಪಡಿಸಲ್ಪಟ್ಟವರು ಆಗಿದ್ದರು. (ಯಾಜಕಕಾಂಡ 24:22) ಅವರು ಇಸ್ರಾಯೇಲ್ಯರು ಮಾಡಿದಂತೆಯೇ, ಯಜ್ಞಗಳನ್ನು ಅರ್ಪಿಸಿ, ಮಿಥ್ಯಾರಾಧನೆಯಿಂದ ದೂರವಿದ್ದು, ರಕ್ತವನ್ನು ವಿಸರ್ಜಿಸಿದರು. (ಯಾಜಕಕಾಂಡ 17:10-14; 20:2) ಅವರು ಸೊಲೊಮೋನನ ದೇವಾಲಯ ನಿರ್ಮಾಣಕಾರ್ಯದಲ್ಲಿ ಸಹಾಯಮಾಡಿ, ಅರಸ ಆಸ ಮತ್ತು ಅರಸ ಹಿಜ್ಕೀಯನ ಕೆಳಗೆ ಸತ್ಯಾರಾಧನೆಯ ಪುನಃಸ್ಥಾಪನೆಯಲ್ಲಿ ಜೊತೆಗೂಡಿದರು. (1 ಪೂರ್ವಕಾಲವೃತ್ತಾಂತ 22:2; 2 ಪೂರ್ವಕಾಲವೃತ್ತಾಂತ 15:8-14; 30:25) ಪೇತ್ರನು, ಸಾ.ಶ. 33ರ ಪಂಚಾಶತ್ತಮದಲ್ಲಿ ರಾಜ್ಯದ ಪ್ರಥಮ ಕೀಲಿ ಕೈಯನ್ನು ಉಪಯೋಗಿಸಿದಾಗ, ಅವನ ಮಾತುಗಳನ್ನು, “ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳೂ” ಕೇಳಿದರು. ಆ ದಿನದಲ್ಲಿ ದೀಕ್ಷಾಸ್ನಾನ ಹೊಂದಿದ ಮೂರು ಸಾವಿರ ಜನರಲ್ಲಿ ಕೆಲವರು ಮತಾವಲಂಬಿಗಳಾಗಿದ್ದದ್ದು ಸಂಭವನೀಯ. (ಅ. ಕೃತ್ಯಗಳು 2:10, 41) ಇದಾಗಿ ಸ್ವಲ್ಪದರಲ್ಲಿ, ಇಥಿಯೋಪ್ಯದ ಒಬ್ಬ ಮತಾವಲಂಬಿಯು ಫಿಲಿಪ್ಪನಿಂದ—ರಾಜ್ಯದ ಅಂತಿಮ ಕೀಲಿ ಕೈಯನ್ನು ಪೇತ್ರನು ಕೊರ್ನೇಲ್ಯ ಮತ್ತು ಅವನ ಕುಟುಂಬದ ಮೇಲೆ ಉಪಯೋಗಿಸುವುದಕ್ಕೆ ಮೊದಲು—ದೀಕ್ಷಾಸ್ನಾನ ಮಾಡಿಸಿಕೊಂಡನು. (ಮತ್ತಾಯ 16:19; ಅ. ಕೃತ್ಯಗಳು 8:26-40; 10:30-48) ಮತಾವಲಂಬಿಗಳು ಯೆಹೂದ್ಯೇತರರಂತೆ ವೀಕ್ಷಿಸಲ್ಪಡಲಿಲ್ಲವೆಂಬುದು ಸ್ಪಷ್ಟ.
14 ಆದರೂ, ಆ ದೇಶದಲ್ಲಿ ಮತಾವಲಂಬಿಗಳ ಸ್ಥಾನವು ಸ್ವದೇಶಜನಿತ ಇಸ್ರಾಯೇಲ್ಯರಂತಿರಲಿಲ್ಲ. ಮತಾವಲಂಬಿಗಳು ಯಾಜಕರಾಗಿ ಸೇವೆಮಾಡಲಿಲ್ಲ, ಮತ್ತು ಅವರ ಚೊಚ್ಚಲುಗಳು ಲೇವ್ಯ ಯಾಜಕತ್ವದಲ್ಲಿ ಪ್ರತಿನಿಧೀಕರಿಸಲ್ಪಡಲಿಲ್ಲ.b ಮತ್ತು ಮತಾವಲಂಬಿಗಳಿಗೆ ಇಸ್ರಾಯೇಲಿನಲ್ಲಿ ಜಮೀನಿನ ಬಾಧ್ಯತೆ ಇರಲಿಲ್ಲ. ಆದರೂ, ನಂಬಿಗಸ್ತ ಮತಾವಲಂಬಿಗಳ ಕುರಿತು ಹಿತಾಸಕ್ತರಾಗಿರಬೇಕೆಂದೂ ಅವರನ್ನು ಸೋದರರಂತೆ ಕಾಣಬೇಕೆಂದೂ ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಿದ್ದರು.—ಯಾಜಕಕಾಂಡ 19:33, 34.
ಆತ್ಮಿಕ ಜನಾಂಗ
15. ಪ್ರಾಕೃತಿಕ ಇಸ್ರಾಯೇಲ್ಯರು ಮೆಸ್ಸೀಯನನ್ನು ಅಂಗೀಕರಿಸಲು ನಿರಾಕರಿಸಿದಾಗ ಏನು ಫಲಿಸಿತು?
15 ಇಸ್ರಾಯೇಲ್ಯರು ಶುದ್ಧರಾಗಿ, ತಮ್ಮ ಸುತ್ತಲಿನ ಜನಾಂಗಗಳಿಂದ ಪ್ರತ್ಯೇಕವಾಗಿರುವಂತೆ ಧರ್ಮಶಾಸ್ತ್ರವು ರೂಪಿಸಲ್ಪಟ್ಟಿತು. ಆದರೆ ಅದು ಇನ್ನೊಂದು ಉದ್ದೇಶವನ್ನೂ ನೆರವೇರಿಸಿತು. ಅಪೊಸ್ತಲ ಪೌಲನು ಬರೆದುದು: “ನಾವು ನಂಬಿಕೆಯ ಕಾರಣ ನೀತಿವಂತರೆಂದು ಘೋಷಿಸಲ್ಪಡುವ ಹಾಗೆ ಧರ್ಮಶಾಸ್ತ್ರವು ಕ್ರಿಸ್ತನಿಗೆ ನಡೆಸುವ ಖಾಸಗಿ ಶಿಕ್ಷಕನಂತಿದೆ.” (ಗಲಾತ್ಯ 3:24, NW) ಅಸಂತೋಷಕರವಾಗಿ, ಅಧಿಕಾಂಶ ಇಸ್ರಾಯೇಲ್ಯರು ಧರ್ಮಶಾಸ್ತ್ರದ ಮೂಲಕ ಕ್ರಿಸ್ತನ ಬಳಿಗೆ ನಡೆಸಲ್ಪಡುವುದರಲ್ಲಿ ವಿಫಲಗೊಂಡರು. (ಮತ್ತಾಯ 23:15; ಯೋಹಾನ 1:11) ಆದಕಾರಣ ಯೆಹೋವ ದೇವರು ಆ ಜನಾಂಗವನ್ನು ತಳ್ಳಿಹಾಕಿ, “ದೇವರ ಇಸ್ರಾಯೇಲ್ಯರು” ಹುಟ್ಟುವಂತೆ ಮಾಡಿದನು. ಅಷ್ಟಲ್ಲದೆ, ಆತನು ಈ ಹೊಸ ಇಸ್ರಾಯೇಲಿನಲ್ಲಿ ಪೂರ್ತಿ ಹಕ್ಕಿರುವ ಪೌರರಾಗುವಂತೆ ಯೆಹೂದ್ಯೇತರರಿಗೆ ಆಮಂತ್ರಣವನ್ನು ಕೊಟ್ಟನು. (ಗಲಾತ್ಯ 3:28; 6:16) ವಿಮೋಚನಕಾಂಡ 19:5, 6 ರಲ್ಲಿ ಒಂದು ರಾಜಯೋಗ್ಯ ಯಾಜಕತ್ವದ ಕುರಿತ ಯೆಹೋವನ ವಾಗ್ದಾನದ ಅದ್ಭುತಕರವಾದ ಅಂತಿಮ ನೆರವೇರಿಕೆಯಾಗುವುದು ಈ ಹೊಸ ಜನಾಂಗದ ಮೇಲೆಯೇ. ಹೇಗೆ?
16, 17. ಅಭಿಷಿಕ್ತ ಕ್ರೈಸ್ತರು ಯಾವ ಅರ್ಥದಲ್ಲಿ ಭೂಮಿಯಲ್ಲಿ ‘ರಾಜಯೋಗ್ಯರು’? ಯಾವ ಅರ್ಥದಲ್ಲಿ ‘ಯಾಜಕತ್ವ’?
16 ತನ್ನ ದಿನಗಳ ಅಭಿಷಿಕ್ತ ಕ್ರೈಸ್ತರಿಗೆ ಬರೆದಾಗ, ಪೇತ್ರನು ವಿಮೋಚನಕಾಂಡ 19:6 ನ್ನು ಉದ್ಧರಿಸಿದನು: “ನೀವಾದರೋ . . . ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ಇದರ ಅರ್ಥವೇನು? ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರು ಅರಸರಾಗಿರುತ್ತಾರೊ? ಇಲ್ಲ, ಅವರ ರಾಜತ್ವವು ಇನ್ನೂ ಭವಿಷ್ಯತ್ತಿನಲ್ಲಿದೆ. (1 ಕೊರಿಂಥ 4:8) ಆದರೂ, ಅವರು ಭಾವೀ ರಾಜಯೋಗ್ಯ ಸುಯೋಗಗಳಿಗಾಗಿ ಗುರುತಿಸಲ್ಪಟ್ಟಿರುವ ಅರ್ಥದಲ್ಲಿ “ರಾಜಯೋಗ್ಯ” ರಾಗಿದ್ದಾರೆ. ಅವರು ಈಗಲೂ, ಮಹಾ ಪರಮಾಧಿಕಾರಿಯಾದ ಯೆಹೋವ ದೇವರು ನೇಮಿಸಿದ ಅರಸನಾದ ಯೇಸುವಿನ ಕೆಳಗೆ ಒಂದು ಜನಾಂಗವಾಗಿದ್ದಾರೆ. ಪೌಲನು ಬರೆದುದು: “ದೇವರು ನಮ್ಮನ್ನು ಅಂಧಕಾರದ ಧೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು.”—ಕೊಲೊಸ್ಸೆ 1:13.
17 ಅಭಿಷಿಕ್ತ ಕ್ರೈಸ್ತರು ಭೂಮಿಯ ಮೇಲೆ ಒಂದು ಯಾಜಕತ್ವವಾಗಿದ್ದಾರೊ? ಒಂದು ಅರ್ಥದಲ್ಲಿ, ಹೌದು. ಒಂದು ಸಭೆಯೋಪಾದಿ, ಅವರು ನಿರ್ವಿವಾದವಾದ ಒಂದು ಯಾಜಕ ಕಾರ್ಯವನ್ನು ನಡೆಸುತ್ತಾರೆ. ಪೇತ್ರನು ಇದನ್ನು, “ನೀವು ಸಹ . . . ಆತ್ಮಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ . . . ಪವಿತ್ರ ಯಾಜಕವರ್ಗದವರಾಗಿದ್ದೀರಿ” ಎಂದು ಹೇಳಿದಾಗ ವಿವರಿಸಿದನು. (1 ಪೇತ್ರ 2:5; 1 ಕೊರಿಂಥ 3:16) ಇಂದು, ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದಿರುವವರು ಒಂದು ಸಮುದಾಯವಾಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿರುತ್ತಾ ಆತ್ಮಿಕಾಹಾರ ವಿತರಣೆಗಾಗಿ ಮಾಧ್ಯಮವಾಗಿದ್ದಾರೆ. (ಮತ್ತಾಯ 24:45-47) ಪುರಾತನ ಕಾಲದ ಇಸ್ರಾಯೇಲಿನಲ್ಲಿ ಸಂಭವಿಸಿದಂತೆ, ಯೆಹೋವನನ್ನು ಆರಾಧಿಸಬಯಸುವ ಯಾವನೂ ಈ ಅಭಿಷಿಕ್ತ ಕ್ರೈಸ್ತರ ಜೊತೆಸೇರಿಯೇ ಆರಾಧಿಸಬೇಕು.
18. ಯಾಜಕತ್ವದೋಪಾದಿ, ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತ ಸಭೆಗೆ ಯಾವ ಪ್ರಧಾನ ಜವಾಬ್ದಾರಿಯಿದೆ?
18 ಇದಲ್ಲದೆ, ಅಭಿಷಿಕ್ತ ಕ್ರೈಸ್ತರು ಯೆಹೋವನ ಮಹತ್ವಕ್ಕೆ ಜನಾಂಗಗಳ ಮಧ್ಯೆ ಸಾಕ್ಷಿನೀಡುವ ಸುಯೋಗವನ್ನು ಇಸ್ರಾಯೇಲಿನಿಂದ ವಹಿಸಿಕೊಂಡರು. ಪೇತ್ರನು ಅಭಿಷಿಕ್ತ ಕ್ರೈಸ್ತರನ್ನು ರಾಜವಂಶಸ್ಥರಾದ ಯಾಜಕರು ಎಂದು ಕರೆದಾಗ, ಅವನ ಮನಸ್ಸಿನಲ್ಲಿ ಸಾರುವ ಕಾರ್ಯವಿತ್ತೆಂದು ಪೂರ್ವಾಪರವು ತೋರಿಸುತ್ತದೆ. ವಾಸ್ತವವಾಗಿ, ಅವನು ಒಂದೇ ಉದ್ಧರಣೆಯಲ್ಲಿ ವಿಮೋಚನಕಾಂಡ 19:6 ರಲ್ಲಿರುವ ಯೆಹೋವನ ವಾಗ್ದಾನದೊಂದಿಗೆ ಯೆಶಾಯ 43:21 ರಲ್ಲಿರುವ ಇಸ್ರಾಯೇಲಿಗೆ ಆತನ ಮಾತುಗಳನ್ನು ಸಂಯೋಜಿಸಿ ಹೀಗೆಂದನು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ . . . ರಾಜವಂಶಸ್ಥರಾದ ಯಾಜಕರೂ . . . ಆಗಿದ್ದೀರಿ.” (1 ಪೇತ್ರ 2:9) ಇದಕ್ಕೆ ಹೊಂದಿಕೆಯಾಗಿ, ಪೌಲನು ಯೆಹೋವನ ಗುಣಾತಿಶಯಗಳ ಪ್ರಕಟನೆಯನ್ನು ದೇವಾಲಯದ ಒಂದು ಯಜ್ಞದಂತೆ ಮಾತಾಡಿದನು. ಅವನು ಬರೆದುದು: “ಆದದರಿಂದ ಆತನ [ಆತನ] ಮೂಲಕವಾಗಿಯೇ ದೇವರಿಗೆ ಸ್ತೊತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.”— ಇಬ್ರಿಯ 13:15.
ಒಂದು ಸ್ವರ್ಗೀಯ ನೆರವೇರಿಕೆ
19. ಇಸ್ರಾಯೇಲು ಯಾಜಕ ರಾಜ್ಯವಾಗುವ ವಾಗ್ದಾನದ ಅಂತಿಮ, ಮಹಾ ನೆರವೇರಿಕೆ ಯಾವುದು?
19 ಆದರೂ, ವಿಮೋಚನಕಾಂಡ 19:5, 6ಕ್ಕೆ ಅಂತಿಮವಾಗಿ ಎಷ್ಟೋ ಹೆಚ್ಚು ಮಹಿಮೆಯುಳ್ಳ ನೆರವೇರಿಕೆಯಿದೆ. ಪ್ರಕಟನೆ ಪುಸ್ತಕದಲ್ಲಿ, ಸ್ವರ್ಗೀಯ ಜೀವಿಗಳು ಪುನರುತಿತ್ಥ ಯೇಸುವನ್ನು ಸುತ್ತಿಸುವಾಗ ಈ ಶಾಸ್ತ್ರವಚನವನ್ನು ಅನ್ವಯಿಸುವುದನ್ನು ಅಪೊಸ್ತಲ ಯೋಹಾನನು ಕೇಳಿಸಿಕೊಳ್ಳುತ್ತಾನೆ: “ನೀನು ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ; ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ. ಅವರು ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:9, 10) ಹಾಗಾದರೆ ಅದರ ಅಂತಿಮ ಅರ್ಥದಲ್ಲಿ, ಆ ರಾಜಯೋಗ್ಯ ಯಾಜಕತ್ವವು ದೇವರ ಸ್ವರ್ಗೀಯ ರಾಜ್ಯವಾಗಿದೆ, ಯಾವುದಕ್ಕಾಗಿ ಪ್ರಾರ್ಥಿಸಲು ಯೇಸು ನಮಗೆ ಕಲಿಸಿದನೋ ಆ ಆಳುವ ಅಧಿಕಾರವಾಗಿದೆ. (ಲೂಕ 11:2) ಅಂತ್ಯದ ತನಕ ನಂಬಿಗಸ್ತರಾಗಿ ತಾಳಿಕೊಳ್ಳುವ ಎಲ್ಲ 1,44,000 ಮಂದಿ ಅಭಿಷಿಕ್ತ ಕ್ರೈಸ್ತರಿಗೆ ಆ ರಾಜ್ಯ ಏರ್ಪಾಡಿನಲ್ಲಿ ಭಾಗವಿರುವುದು. (ಪ್ರಕಟನೆ 20:4, 6) ಮೋಶೆಯ ಮೂಲಕ ಎಷ್ಟೋ ಸಮಯಗಳ ಹಿಂದೆ ಮಾಡಲ್ಪಟ್ಟ ವಾಗ್ದಾನದ ಎಂತಹ ಅದ್ಭುತಕರವಾದ ನೆರವೇರಿಕೆಯಿದು!
20. ಯಾವ ಪ್ರಶ್ನೆಯು ಇನ್ನೂ ಉತ್ತರಿಸಲ್ಪಡಬೇಕಾಗಿದೆ?
20 ಎಲ್ಲ ಅಭಿಷಿಕ್ತರು ತಮ್ಮ ಅದ್ಭುತಕರವಾದ ಬಾಧ್ಯತೆಯನ್ನು ಪಡೆದಾಗ, ಇವೆಲ್ಲದಕ್ಕೆ ಮತ್ತು ಮಹಾ ಸಮೂಹದವರ ಸನ್ನಿವೇಶ ಹಾಗೂ ಅವರ ಭವಿಷ್ಯತ್ತಿಗೆ ಏನು ಸಂಬಂಧವಿದೆ? ಈ ಲೇಖನಮಾಲೆಯ ಅಂತಿಮ ಲೇಖನದಲ್ಲಿ ಇದು ಸ್ಪಷ್ಟವಾಗಿಗುವುದು.
[ಅಧ್ಯಯನ ಪ್ರಶ್ನೆಗಳು]
a ಇಸ್ರಾಯೇಲಿನ ಯಾಜಕತ್ವವು ಉದ್ಘಾಟಿಸಲ್ಪಟ್ಟಾಗ, ಇಸ್ರಾಯೇಲ್ಯರ ಲೇವ್ಯೇತರ ಕುಲಗಳ ಚೊಚ್ಚಲು ಗಂಡುಗಳನ್ನು ಮತ್ತು ಲೇವಿ ಕುಲದ ಗಂಡುಗಳನ್ನು ಲೆಕ್ಕಿಸಲಾಯಿತು. ಲೇವ್ಯ ಗಂಡುಗಳಿಗಿಂತ 273 ಹೆಚ್ಚು ಚೊಚ್ಚಲುಗಳಿದ್ದವು. ಆದಕಾರಣ, ಈ ಹೆಚ್ಚಿಗೆಗಾಗಿ 273 ರಲ್ಲಿ ಪ್ರತಿಯೊಬ್ಬನಿಗೆ ಐದು ಶೆಕೆಲ್ಗಳನ್ನು ಪ್ರಾಯಶ್ಚಿತವ್ತಾಗಿ ತೆರಬೇಕೆಂದು ಯೆಹೋವನು ಆಜ್ಞಾಪಿಸಿದನು.
b ಸಾ.ಶ.ಪೂ. 1513 ರಲ್ಲಿ ಧರ್ಮಶಾಸ್ತ್ರವು ಉದ್ಘಾಟಿಸಲ್ಪಟ್ಟಾಗ ಆ ಇಸ್ರಾಯೇಲ್ಯೇತರ ಮಿಶ್ರ ಜನರ ಮಹಾ ಗುಂಪು ಅಲ್ಲಿ ಉಪಸ್ಥಿತವಾಗಿದ್ದರೂ ಇಸ್ರಾಯೇಲ್ಯರ ಚೊಚ್ಚಲುಗಳ ಬದಲಾಗಿ ಲೇವಿಯರು ತೆಗೆದುಕೊಳ್ಳಲ್ಪಟ್ಟಾಗ ಆ ಗುಂಪಿನವರ ಚೊಚ್ಚಲುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಲಿಲ್ಲ. (ಪರಿಚ್ಛೇದ 8ನ್ನು ನೋಡಿ.) ಈ ಕಾರಣದಿಂದ, ಈ ಇಸ್ರಾಯೇಲ್ಯೇತರರ ಚೊಚ್ಚಲುಗಳ ಬದಲಾಗಿ ಲೇವಿಯರೂ ತೆಗೆದುಕೊಳ್ಳಲ್ಪಡಲಿಲ್ಲ.
ವಿವರಿಸಬಲ್ಲಿರಾ?
▫ ಬೇರೆ ಕುರಿಗಳ ಸ್ಥಾನವು ಪ್ರಗತಿಪರವಾಗಿ ಹೇಗೆ ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲ್ಪಟ್ಟಿದೆ?
▫ ಉತ್ತರದ ಇಸ್ರಾಯೇಲ್ ರಾಜ್ಯವು ತನಗೆ ಯಾಜಕನಾಗಿ ಸೇವೆಮಾಡುವುದರಿಂದ ಯೆಹೋವನು ಅದನ್ನು ನಿರಾಕರಿಸಿದ್ದೇಕೆ?
▫ ನಂಬಿಗಸ್ತಿಕೆಯಿಂದಿದ್ದಾಗ, ಜನಾಂಗಗಳ ಮುಂದೆ ಯೆಹೂದದ ಸ್ಥಾನವೇನಾಗಿತ್ತು?
▫ ಇಸ್ರಾಯೇಲಿನಲ್ಲಿ ನಂಬಿಗಸ್ತ ಮತಾವಲಂಬಿಗಳ ಸ್ಥಾನವೇನಾಗಿತ್ತು?
▫ ಅಭಿಷಿಕ್ತ ಸಭೆಯು ಯಾಜಕ ರಾಜ್ಯವಾಗಿ ಸೇವೆಮಾಡುವುದು ಹೇಗೆ?
[ಪುಟ 16 ರಲ್ಲಿರುವ ಚಿತ್ರ]
ರಾಜಯೋಗ್ಯ ಯಾಜಕವರ್ಗದೋಪಾದಿ, ಅಭಿಷಿಕ್ತ ಕ್ರೈಸ್ತರು ಯೆಹೋವನ ಮಹಿಮೆಯನ್ನು ಭೂಮಿಯಲ್ಲಿ ಘೋಷಿಸುತ್ತಾರೆ
[ಪುಟ 18 ರಲ್ಲಿರುವ ಚಿತ್ರ]
ವಿಮೋಚನಕಾಂಡ 19:6ರ ಅಂತಿಮ ನೆರವೇರಿಕೆಯು ರಾಜ್ಯವೇ