ಸರಿಯಾದ ರೀತಿಯ ಸಂದೇಶವಾಹಕನ ಗುರುತು ಸ್ಥಾಪಿಸುವುದು
“ನಾನು . . . ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ.”—ಯೆಶಾಯ 44:25, 26.
1. ಸರಿಯಾದ ರೀತಿಯ ಸಂದೇಶವಾಹಕರನ್ನು ಯೆಹೋವನು ಹೇಗೆ ಗುರುತಿಸುತ್ತಾನೆ, ಮತ್ತು ಸುಳ್ಳು ಸಂದೇಶವಾಹಕರನ್ನು ಅವನು ಹೇಗೆ ಬಯಲುಗೊಳಿಸುತ್ತಾನೆ?
ಯೆಹೋವ ದೇವರು ತನ್ನ ನಿಜ ಸಂದೇಶವಾಹಕರ ಮಹಾ ಗುರುತು ಸ್ಥಾಪಕನು. ತಾನು ಅವರ ಮೂಲಕ ಕಳುಹಿಸುವ ಸಂದೇಶಗಳನ್ನು ನಿಜವಾಗುವಂತೆ ಮಾಡಿ, ಆತನು ಅವರನ್ನು ಗುರುತಿಸುತ್ತಾನೆ. ಯೆಹೋವನು ಸುಳ್ಳು ಸಂದೇಶವಾಹಕರ ಮಹಾ ಬಯಲುಗಾರನೂ ಆಗಿದ್ದಾನೆ. ಆತನು ಅವರನ್ನು ಹೇಗೆ ಬಯಲುಮಾಡುತ್ತಾನೆ? ಅವರ ಸೂಚನೆ ಮತ್ತು ಭವಿಷ್ಯನುಡಿಗಳನ್ನು ಆತನು ನಿಷ್ಫಲಗೊಳಿಸುತ್ತಾನೆ. ಈ ರೀತಿ, ಅವರು ಸ್ವನಿಯಮಿತ ಭವಿಷ್ಯವಾದಿಗಳೆಂದೂ, ಅವರ ಸಂದೇಶಗಳು ನಿಜವಾಗಿಯೂ ಅವರ ಸ್ವಂತ ಮಿಥ್ಯ ವಿವೇಚನಾಶಕ್ತಿಯಿಂದ—ಹೌದು, ಅವರ ಮೂರ್ಖತನದ ಮಾಂಸಿಕ ಯೋಚನೆಯಿಂದ ಹುಟ್ಟಿಬರುತ್ತವೆಂದೂ ಆತನು ತೋರಿಸುತ್ತಾನೆ!
2. ಇಸ್ರಾಯೇಲ್ಯ ಸಮಯಗಳಲ್ಲಿ ಸಂದೇಶವಾಹಕರ ಮಧ್ಯೆ ಯಾವ ಹೋರಾಟ ನಡೆಯಿತು?
2 ಯೆಶಾಯ ಮತ್ತು ಯೆಹೆಜ್ಕೇಲ—ಇವರಿಬ್ಬರೂ ತಾವು ಯೆಹೋವ ದೇವರ ಸಂದೇಶವಾಹಕರೆಂದು ಹೇಳಿಕೊಂಡರು. ಆದರೆ ಅವರು ಹಾಗಾಗಿದ್ದರೊ? ನಾವು ನೋಡೋಣ. ಯೆಶಾಯನು ಯೆರೂಸಲೇಮಿನಲ್ಲಿ ಸುಮಾರು ಸಾ.ಶ.ಪೂ. 778ರಿಂದ ಸಾ.ಶ.ಪೂ. 732ರ ತುಸು ತರುವಾಯದ ತನಕ ಪ್ರವಾದಿಸಿದನು. ಯೆಹೆಜ್ಕೇಲನು ಸಾ.ಶ.ಪೂ. 617ರಲ್ಲಿ ದೇಶಭ್ರಷ್ಟನಾಗಿ ಬಾಬೆಲ್ವಾಸಿಯಾದನು. ಅಲ್ಲಿ ಅವನು ತನ್ನ ಯೆಹೂದಿ ಸೋದರರಿಗೆ ಭವಿಷ್ಯನುಡಿದನು. ಇಬ್ಬರೂ ಪ್ರವಾದಿಗಳು ಯೆರೂಸಲೇಮ್ ನಾಶವಾಗುವುದೆಂದು ಧೈರ್ಯದಿಂದ ಸಾರಿದರು. ಇತರ ಪ್ರವಾದಿಗಳು, ಹಾಗಾಗಲು ದೇವರು ಬಿಡನೆಂದು ಹೇಳಿದರು. ಯಾರು ಸರಿಯಾದ ರೀತಿಯ ಸಂದೇಶವಾಹಕರಾಗಿ ಪರಿಣಮಿಸಿದರು?
ಯೆಹೋವನು ಸುಳ್ಳು ಪ್ರವಾದಿಗಳನ್ನು ಬಯಲುಗೊಳಿಸುತ್ತಾನೆ
3, 4. (ಎ) ಬಾಬೆಲಿನಲ್ಲಿ ಇಸ್ರಾಯೇಲ್ಯರಿಗೆ ಯಾವ ಎದುರುಬದುರಾದ ಎರಡು ಸಂದೇಶಗಳು ಕೊಡಲ್ಪಟ್ಟವು, ಮತ್ತು ಯೆಹೋವನು ಒಬ್ಬ ಸುಳ್ಳು ಸಂದೇಶವಾಹಕನನ್ನು ಹೇಗೆ ಬಯಲುಗೊಳಿಸಿದನು? (ಬಿ) ಸುಳ್ಳು ಪ್ರವಾದಿಗಳಿಗೆ ಏನು ಸಂಭವಿಸುವುದೆಂದು ಯೆಹೋವನು ಹೇಳಿದನು?
3 ಬಾಬೆಲಿನಲ್ಲಿದ್ದಾಗ ಯೆಹೆಜ್ಕೇಲನಿಗೆ, ಯೆರೂಸಲೇಮಿನ ದೇವಾಲಯದಲ್ಲಿನ ಆಗುಹೋಗುಗಳ ಒಂದು ದರ್ಶನವನ್ನು ಕೊಡಲಾಯಿತು. ಅದರ ಪೂರ್ವಬಾಗಿಲಲ್ಲಿ 25 ಮಂದಿ ಪುರುಷರಿದ್ದರು. ಅವರಲ್ಲಿ ಯಾಜನ್ಯ ಮತ್ತು ಪೆಲತ್ಯರೆಂಬ ಇಬ್ಬರು ರಾಜಕುಮಾರರಿದ್ದರು. ಯೆಹೋವನು ಅವರನ್ನು ಹೇಗೆ ವೀಕ್ಷಿಸಿದನು? ಯೆಹೆಜ್ಕೇಲ 11:2, 3, (NW) ಉತ್ತರಿಸುವುದು: “ನರಪುತ್ರನೇ, ಈ ನಗರದ ವಿರುದ್ಧ ಕೆಟ್ಟದ್ದನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಪುರುಷರೇ; ಇವರು—ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಸನ್ನಿಹಿತವಾಗಿಲ್ಲವೊ ಎನ್ನುತ್ತಿದ್ದಾರೆ.” ಈ ದುರಹಂಕಾರದ ಶಾಂತಿದೂತರು, ‘ಯೆರೂಸಲೇಮಿಗೇನೂ ಅಪಾಯವಿಲ್ಲ. ಅದರೊಳಗೆ ನಾವು ಬೇಗನೆ ಹೆಚ್ಚು ಮನೆಗಳನ್ನು ಕಟ್ಟಲಿದ್ದೇವೆ!’ ಎಂದು ಹೇಳುತ್ತಿದ್ದರು. ಆದಕಾರಣ ಸುಳ್ಳಾಡುತ್ತಿರುವ ಈ ಪ್ರವಾದಿಗಳ ವಿರುದ್ಧ ಪ್ರತಿಯಾಗಿ ಪ್ರವಾದಿಸುವಂತೆ ದೇವರು ಯೆಹೆಜ್ಕೇಲನಿಗೆ ಹೇಳಿದನು. ಅಧ್ಯಾಯ 11ರ 13ನೆಯ ವಚನದಲ್ಲಿ, ಅವರಲ್ಲಿ ಒಬ್ಬನಿಗೆ ಏನು ಸಂಭವಿಸಿತೆಂದು ಯೆಹೆಜ್ಕೇಲನು ನಮಗೆ ಹೇಳುತ್ತಾನೆ: “ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು.” ಪೆಲತ್ಯನು ಅತಿ ಪ್ರಧಾನನೂ ಪ್ರಭಾವಶಾಲಿಯೂ ಆದ ರಾಜಕುಮಾರನು ಮತ್ತು ಪ್ರಮುಖ ವಿಗ್ರಹಾರಾಧಕನೂ ಆಗಿದ್ದುದರಿಂದ ಪ್ರಾಯಶಃ ಹಾಗೆ ಸಂಭವಿಸಿದ್ದಿರಬೇಕು. ಅವನ ಹಠಾತ್ತಾದ ಮರಣವು ಅವನು ಸುಳ್ಳು ಪ್ರವಾದಿಯೆಂಬುದನ್ನು ರುಜುಪಡಿಸಿತು!
4 ಯೆಹೋವನ ಕೈಯಿಂದಾದ ಪೆಲತ್ಯನ ವಧೆಯು, ಇತರ ಪ್ರವಾದಿಗಳನ್ನು ಅವರು ದೇವರ ಹೆಸರಿನಲ್ಲಿ ಸುಳ್ಳು ಹೇಳುವುದರಿಂದ ತಡೆಯಲಿಲ್ಲ. ಈ ವಂಚಕರು ದೇವರ ಚಿತ್ತದ ವಿರುದ್ಧ ಭವಿಷ್ಯ ನುಡಿಯುವ ತಮ್ಮ ಹುಚ್ಚು ಮಾರ್ಗದಲ್ಲಿ ಮುಂದೆ ಸಾಗಿದರು. ಆದಕಾರಣ ಯೆಹೋವ ದೇವರು ಯೆಹೆಜ್ಕೇಲನಿಗೆ ಹೇಳಿದ್ದು: “ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯು ಏನೆಂದು ಹೇಳಲಿ!” ಪೆಲತ್ಯನಂತೆ, ಮೂದಲಿಸುತ್ತ ಯೆರೂಸಲೇಮಿಗೆ “ಕ್ಷೇಮವಿಲ್ಲದಿದ್ದರೂ ಕ್ಷೇಮವಾಗುವದೆಂಬ ದರ್ಶನಗಳನ್ನು” ನೋಡಿದ್ದರಿಂದ, ಅವರೂ “ಸತ್ತು” ಹೋಗಲಿದ್ದರು.—ಯೆಹೆಜ್ಕೇಲ 13:3, 15, 16.
5, 6. ಸಕಲ ಸುಳ್ಳು ಸಂದೇಶವಾಹಕರ ಎದುರಿನಲ್ಲಿಯೂ ಯೆಶಾಯನು ಸತ್ಯ ಪ್ರವಾದಿಯೆಂದು ಹೇಗೆ ನಿರ್ದೋಷೀಕರಿಸಲ್ಪಟ್ಟನು?
5 ಯೆಶಾಯನ ಸಂಬಂಧದಲ್ಲಿಯಾದರೋ, ಯೆರೂಸಲೇಮಿನ ಕುರಿತ ಅವನ ಸಕಲ ದೈವಿಕ ಸಂದೇಶಗಳೂ ಸತ್ಯವಾಗಿ ಪರಿಣಮಿಸಿದವು. ಸಾ.ಶ.ಪೂ. 607ರ ಬೇಸಗೆಯಲ್ಲಿ, ಬಾಬೆಲಿನವರು ನಗರವನ್ನು ನಾಶಮಾಡಿ, ಯೆಹೂದ್ಯ ಜನಶೇಷವನ್ನು ಸೆರೆಯಾಳುಗಳಾಗಿ ಬಾಬೆಲಿಗೆ ಕೊಂಡೊಯ್ದರು. (2 ಪೂರ್ವಕಾಲವೃತ್ತಾಂತ 36:15-21; ಯೆಹೆಜ್ಕೇಲ 22:28; ದಾನಿಯೇಲ 9:2) ಈ ವಿಪತ್ತುಗಳು ಸುಳ್ಳು ಪ್ರವಾದಿಗಳನ್ನು ಅವರು ತಮ್ಮ ವ್ಯರ್ಥ ಹರಟೆಗಳನ್ನು ದೇವಜನರ ಮೇಲೆ ಹೊಯ್ಯುವುದರಿಂದ ತಡೆದವೊ? ಇಲ್ಲ, ಈ ಸುಳ್ಳಾಡುವ ದೂತರು ಅದನ್ನೇ ಮುಂದುವರಿಸಿದರು!
6 ಇದು ಸಾಲದೊ ಎಂಬಂತೆ, ಇಸ್ರಾಯೇಲಿನ ದೇಶಭ್ರಷ್ಟರು, ಬಾಬೆಲಿನ ಅಹಂಕಾರದ ಕಣಿಗಾರರು, ಭವಿಷ್ಯಜ್ಞಾನಿಗಳು ಮತ್ತು ಜೋತಿಷಿಗಳಿಗೂ ಒಡ್ಡಲ್ಪಟ್ಟರು. ಆದರೂ, ಈ ಎಲ್ಲಾ ಸುಳ್ಳು ದೂತರು ಆಶಾಭಂಗಪಟ್ಟ ಮೂರ್ಖರೆಂದೂ, ಹಿಂದುಮುಂದಾಗಿ ಪ್ರವಾದಿಸುವವರೆಂದೂ ಯೆಹೋವನು ತೋರಿಸಿಕೊಟ್ಟನು. ಸಕಾಲದಲ್ಲಿ, ಯೆಶಾಯನಂತೆ, ತನ್ನ ನಿಜ ಸಂದೇಶವಾಹಕನು ಯೆಹೆಜ್ಕೇಲನೆಂದು ಆತನು ರುಜುಪಡಿಸಿದನು. ತಾನು ವಾಗ್ದಾನಿಸಿದ್ದಂತೆಯೇ ಅವರ ಮೂಲಕ ಹೇಳಿಸಿದಂತಹ ಸಕಲ ಮಾತುಗಳನ್ನು ಯೆಹೋವನು ನೆರವೇರಿಸಿದನು: “ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ ಕಣಿ ಹೇಳುವವರನ್ನು ಮರುಳುಗೊಳಿಸಿ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಹುಚ್ಚುತನವಾಗ ಮಾಡಿ ನನ್ನ ಸೇವಕನ ಮಾತನ್ನು ಸ್ಥಾಪಿಸಿ ನನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದೇನೆ.”—ಯೆಶಾಯ 44:25, 26.
ಬಾಬೆಲ್ ಮತ್ತು ಯೆರೂಸಲೇಮನ್ನು ಕುರಿತ ಬೆಚ್ಚಿಬೀಳಿಸುವ ಸಂದೇಶಗಳು
7, 8. ಯೆಶಾಯನಲ್ಲಿ ಬಾಬೆಲಿಗಾಗಿ ಯಾವ ಪ್ರೇರಿತ ಸಂದೇಶವಿತ್ತು, ಮತ್ತು ಅವನ ಮಾತುಗಳ ಅರ್ಥವೇನಾಗಿತ್ತು?
7 ಯೆಹೂದ ಮತ್ತು ಯೆರೂಸಲೇಮು ಮಾನವ ನಿವಾಸವಿಲ್ಲದೆ 70 ವರ್ಷಕಾಲ ಹಾಳುಬೀಳಲಿಕ್ಕಿತ್ತು. ಆದರೂ, ಯೆಶಾಯ ಮತ್ತು ಯೆಹೆಜ್ಕೇಲನ ಮುಖಾಂತರ, ತಾನು ಮುಂತಿಳಿಸಿದ್ದ ನಿಷ್ಕೃಷ್ಟ ಸಮಯದಲ್ಲಿ ನಗರವು ಪುನಃ ಕಟ್ಟಲ್ಪಟ್ಟು ನಿವಾಸಿಸಲ್ಪಡುವುದೆಂದು ಯೆಹೋವನು ಪ್ರಕಟಿಸಿದನು! ಇದೊಂದು ಬೆರಗುಗೊಳಿಸುವ ಕಾಲಜ್ಞಾನವಾಗಿತ್ತು. ಏಕೆ? ಏಕೆಂದರೆ ತಾನು ಸೆರೆಹಿಡಿದವರನ್ನು ಎಂದಿಗೂ ಬಿಡುಗಡೆಮಾಡದ ದೇಶವೆಂಬ ಖ್ಯಾತಿ ಬಾಬೆಲಿಗಿತ್ತು. (ಯೆಶಾಯ 14:4, 15-17) ಹಾಗಾದರೆ ಆ ಸೆರೆಯಾಳುಗಳನ್ನು ಯಾರು ತಾನೇ ಬಿಡಿಸಶಕ್ತನು? ದೈತ್ಯಾಕಾರದ ಗೋಡೆಗಳೂ ನದೀರಕ್ಷಣಾ ವ್ಯವಸ್ಥೆಯೂ ಇದ್ದ ಬಲಾಢ್ಯವಾದ ಬಾಬೆಲನ್ನು ಯಾರು ಕೆಡವಶಕ್ತನು? ಸರ್ವಶಕ್ತನಾದ ಯೆಹೋವನು ಕೆಡವಶಕ್ತನು! ಮತ್ತು ತಾನು ಹಾಗೆಯೇ ಮಾಡುವೆನೆಂದು ಆತನಂದನು: “ಜಲರಾಶಿಗೆ—ಬತ್ತಿಹೋಗು, ನಿನ್ನಲ್ಲಿ ಸೇರುವ ನದಿ [ಅಂದರೆ, ಜಲರಕ್ಷಣಾ ವ್ಯವಸ್ಥೆ]ಗಳನ್ನು ಒಣಗಿಸುವೆನು ಎಂದು ನಾನು ಅಪ್ಪಣೆ ಕೊಡುವವನಾಗಿದ್ದೇನೆ; ಮತ್ತು ಕೋರೆಷನ ವಿಷಯವಾಗಿ—ಅವನು ನನ್ನ ಮಂದೆ ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ ಎಂದು ಹೇಳಿ ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು ಎಂಬದಾಗಿ ಮಾತಾಡುವವನಾಗಿದ್ದೇನೆ.”—ಯೆಶಾಯ 44:26-28.
8 ಭಾವಿಸಿರಿ! ಜನರಿಗೆ ನಿಜವಾಗಿಯೂ ದುಸ್ಸಾಧ್ಯವಾಗಿದ್ದ ಯೂಫ್ರೇಟೀಸ್ ನದಿಯು, ಯೆಹೋವನಿಗೆ ಕೆಂಪಾಗಿ ಉರಿಯುತ್ತಿರುವ ಮೇಲ್ಮೈಯ ಮೇಲೆ ಹಾಕಿದ ಒಂದು ಹನಿ ನೀರಿನಂತಿತ್ತು. ಸುಯಿಕ್, ತಡೆಯು ಹಬೆಯಾಗಿ ಹೋಗಲಿತ್ತು! ಬಾಬೆಲ್ ಪತನಹೊಂದಲಿತ್ತು. ಅದು ಪರ್ಸಿಯದ ಕೋರೆಷನ ಜನನಕ್ಕೆ ಸುಮಾರು 150 ವರ್ಷಗಳಿಗೆ ಮೊದಲೇ ಆಗಿದ್ದರೂ, ಈ ಅರಸನು ಬಾಬೆಲನ್ನು ವಶಮಾಡಿಕೊಂಡು, ಯೆರೂಸಲೇಮನ್ನೂ ಅದರ ಆಲಯವನ್ನೂ ಪುನಃ ಕಟ್ಟಲು ಯೆಹೂದಿ ಸೆರೆಯಾಳುಗಳನ್ನು ಅನುಮತಿಸುವ ಮೂಲಕ ಅವರನ್ನು ಸ್ವತಂತ್ರಗೊಳಿಸುವನೆಂದು ಯೆಶಾಯನು ಮುಂತಿಳಿಸುವಂತೆ ಯೆಹೋವನು ಏರ್ಪಡಿಸಿದ್ದನು.
9. ಬಾಬೆಲನ್ನು ಶಿಕ್ಷೆಗೊಳಪಡಿಸಲು ಯೆಹೋವನು ತನ್ನ ನಿಯೋಗಿಯಾಗಿ ಯಾರನ್ನು ಹೆಸರಿಸಿದನು?
9 ಯೆಶಾಯ 45:1-3ರಲ್ಲಿ ನಾವು ಈ ಪ್ರವಾದನೆಯನ್ನು ಕಂಡುಕೊಳ್ಳುತ್ತೇವೆ: “ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು . . . ಯಾವನ ಮುಂದೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ—ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು. ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.”
10. ಕೋರೆಷನಿಗೆ ಯಾವ ವಿಧದಲ್ಲಿ “ಅಭಿಷೇಕ” ಆಯಿತು, ಮತ್ತು ಅವನ ಜನನಕ್ಕೆ ನೂರಕ್ಕೂ ಹೆಚ್ಚು ವರ್ಷಗಳ ಮುಂದಾಗಿಯೇ ಯೆಹೋವನು ಅವನೊಂದಿಗೆ ಹೇಗೆ ಮಾತಾಡಸಾಧ್ಯವಿತ್ತು?
10 ಯೆಹೋವನು ಕೋರೆಷನೊಂದಿಗೆ, ಅವನು ಆವಾಗಲೇ ಜೀವಿಸುತ್ತಿರುವಂತೆ ಮಾತಾಡುತ್ತಾನೆಂಬುದನ್ನು ಗಮನಿಸಿ. ಇದು ಪೌಲನ ಹೇಳಿಕೆಯಾದ, ಯೆಹೋವನು “ಇಲ್ಲದ್ದನ್ನು ಇರುವದಾಗಿ ಕರೆಯುವವನಾಗಿಯೂ ಇದ್ದಾನೆ” ಎಂಬುದಕ್ಕೆ ಹೊಂದಿಕೊಳ್ಳುತ್ತದೆ. (ರೋಮಾಪುರ 4:17) ಅಲ್ಲದೆ, ದೇವರು ಕೋರೆಷನನ್ನು “ತಾನು ಅಭಿಷೇಕಿಸಿದ” ವ್ಯಕ್ತಿ ಎಂದು ಗುರುತಿಸುತ್ತಾನೆ. ಆತನು ಹಾಗೇಕೆ ಮಾಡಿದನು? ಎಷ್ಟೆಂದರೂ, ಯೆಹೋವನ ಮಹಾ ಯಾಜಕನು ಕೋರೆಷನ ತಲೆಯ ಮೇಲೆ ಅಭಿಷೇಕ ತೈಲವನ್ನು ಹೊಯ್ಯಲಿಲ್ಲ ಅಲ್ಲವೆ? ಹೌದು, ಸರಿ, ಆದರೆ ಇದೊಂದು ಪ್ರವಾದನಾತ್ಮಕ ಅಭಿಷೇಕವಾಗಿದೆ. ಇದು ಒಂದು ವಿಶೇಷ ಸ್ಥಾನಕ್ಕೆ ಸ್ಥಾಪಿಸುವುದನ್ನು ಸೂಚಿಸುತ್ತದೆ. ಆದಕಾರಣ ದೇವರು ಕೋರೆಷನ ಮುನ್ನೇಮಕವನ್ನು ಒಂದು ಅಭಿಷೇಕದೋಪಾದಿ ಮಾತಾಡಸಾಧ್ಯವಿತ್ತು.—ಹೋಲಿಸಿ 1 ಅರಸುಗಳು 19:15-17; 2 ಅರಸುಗಳು 8:13.
ದೇವರು ತನ್ನ ಸಂದೇಶವಾಹಕರ ಮಾತುಗಳನ್ನು ನೆರವೇರಿಸುತ್ತಾನೆ
11. ಬಾಬೆಲಿನ ನಿವಾಸಿಗಳು ತಾವು ಸುರಕ್ಷಿತರೆಂದೆಣಿಸಿದ್ದು ಏಕೆ?
11 ಕೋರೆಷನು ಬಾಬೆಲಿಗೆದುರಾಗಿ ಹೋದ ಸಮಯದಲ್ಲಿ, ಅದರ ಪೌರರು ತಾವು ತೀರ ಸುರಕ್ಷಿತರು ಮತ್ತು ಭದ್ರರೆಂದೆಣಿಸುತ್ತಿದ್ದರು. ಅವರ ನಗರವು ಯೂಫ್ರೇಟೀಸ್ ನದಿಯು ರಚಿಸಿದ್ದ ಒಂದು ಆಳವಾದ ಮತ್ತು ವಿಶಾಲವಾದ ರಕ್ಷಣಾ ಕಂದಕದಿಂದ ಆವರಿಸಲ್ಪಟ್ಟಿತ್ತು. ನದಿಯು ನಗರವನ್ನು ದಾಟಿಹೋಗುತ್ತಿದ್ದಲ್ಲಿ, ಪೂರ್ವ ದಡದುದ್ದಕ್ಕೂ ಮುಂದುವರಿದ ಇಳಿದಾಣವಿತ್ತು. ಇದನ್ನು ನಗರದಿಂದ ಪ್ರತ್ಯೇಕಿಸಲಿಕ್ಕಾಗಿ ನೆಬೂಕದ್ನೆಚ್ಚರನು, “ಒಂದು ಬೆಟ್ಟದಂತೆ ಚಲಿಸಸಾಧ್ಯವಾಗದ ಮಹಾಗೋಡೆ . . . ಅದರ ತಲೆಯನ್ನು [ಅವನು] ಬೆಟ್ಟದಷ್ಟು ಎತ್ತರ ಏರಿಸಿದನು.”a ಈ ಗೋಡೆಯಲ್ಲಿ ತಾಮ್ರದ ಬಾಗಿಲುಗಳುಳ್ಳ ಮಹಾದ್ವಾರಗಳಿದ್ದವು. ಇವನ್ನು ಪ್ರವೇಶಿಸಲು ಒಬ್ಬನು ನದೀಅಂಚಿನಿಂದ ಇಳಿಜಾರನ್ನು ಹತ್ತಿ ಬರಬೇಕಾಗಿತ್ತು. ಬಾಬೆಲಿನ ಕೈದಿಗಳು ಎಂದಾದರೂ ಬಿಡುಗಡೆಹೊಂದುವ ವಿಷಯದಲ್ಲಿ ನಿರಾಶೆಪಟ್ಟದ್ದರಲ್ಲಿ ಆಶ್ಚರ್ಯವಿಲ್ಲ!
12, 13. ಬಾಬೆಲು ಕೋರೆಷನೆದುರು ಪತನಗೊಂಡಾಗ, ತನ್ನ ಸಂದೇಶವಾಹಕನಾದ ಯೆಶಾಯನ ಮೂಲಕ ಯೆಹೋವನು ಹೇಳಿದ ಮಾತುಗಳು ಹೇಗೆ ನಿಜವಾದವು?
12 ಆದರೆ ಯೆಹೋವನಲ್ಲಿ ನಂಬಿಕೆಯಿದ್ದ ಯೆಹೂದಿ ಕೈದಿಗಳು ಹಾಗೆ ನಿರಾಶರಾಗಲಿಲ್ಲ! ಅವರಿಗೊಂದು ಉಜ್ವಲ ನಿರೀಕ್ಷೆಯಿತ್ತು. ದೇವರು ತನ್ನ ಪ್ರವಾದಿಗಳ ಮೂಲಕ ಅವರನ್ನು ವಿಮೋಚಿಸುವ ವಚನವನ್ನಿತ್ತಿದ್ದನು. ದೇವರು ತನ್ನ ವಚನವನ್ನು ಹೇಗೆ ನೆರವೇರಿಸಿದನು? ಬಾಬೆಲಿಗೆ ಅನೇಕ ಕಿಲೊಮೀಟರುಗಳಷ್ಟಿದ್ದ ಉತ್ತರದ ಸ್ಥಳವೊಂದರಲ್ಲಿ ಯೂಫ್ರೇಟೀಸ್ ನದಿಯನ್ನು ಮಾರ್ಗಾಂತರ ಮಾಡುವಂತೆ ತನ್ನ ಸೈನ್ಯಗಳಿಗೆ ಕೋರೆಷನು ಆಜ್ಞೆಕೊಟ್ಟನು. ಹೀಗೆ, ನಗರದ ಮುಖ್ಯ ರಕ್ಷಣಾವ್ಯವಸ್ಥೆಯು, ಸಾಪೇಕ್ಷವಾಗಿ ಒಣಗಿಹೋಗಿದ್ದ ನದೀತಳವಾಗಿ ಮಾರ್ಪಟ್ಟಿತು. ಆ ನಿರ್ಧಾರಕ ರಾತ್ರಿಯಲ್ಲಿ, ಬಾಬೆಲಿನ ಪಾನವಿಲಾಸಮಗ್ನರು ಅಜಾಗ್ರತೆಯಿಂದ ಯೂಫ್ರೇಟೀಸ್ ನದೀಮುಖದಲ್ಲಿದ್ದ ದ್ವಿಬಾಗಿಲ ಕದಗಳನ್ನು ತೆರೆದಿಟ್ಟಿದ್ದರು. ಯೆಹೋವನು ಆ ತಾಮ್ರದ ಕದಗಳನ್ನು ಪದಶಃ ಒಡೆದು ಪುಡಿ ಮಾಡಲಿಲ್ಲ; ಅವುಗಳನ್ನು ಮುಚ್ಚಿದ ಕಬ್ಬಿಣದ ಪಟ್ಟೆಗಳನ್ನು ಕಡಿದುಹಾಕಲೂ ಇಲ್ಲ. ಬದಲಿಗೆ, ಅವುಗಳು ತೆರೆದಿಡಲ್ಪಟ್ಟಿರುವಂತೆ ಮತ್ತು ಸಲಾಕಿ ಹಾಕಲ್ಪಟ್ಟಿರದಂತೆ ಮಾಡಿದ ಆತನ ಅದ್ಭುತಕರವಾದ ಹಂಚಿಕೆಯು ಅದೇ ಪರಿಣಾಮವನ್ನುಂಟುಮಾಡಿತು. ಬಾಬೆಲಿನ ಗೋಡೆಗಳು ನಿರರ್ಥಕವಾಗಿದ್ದವು. ಕೋರೆಷನ ಸೇನೆಗಳಿಗೆ ಅವುಗಳನ್ನು ಹತ್ತಿ ಒಳಬರಬೇಕೆಂದಿರಲಿಲ್ಲ. ಯೆಹೋವನು “ದಿಣ್ಣೆಗಳನ್ನು,” ಹೌದು, ಎಲ್ಲ ತಡೆಗಳನ್ನು ಸಮಮಾಡುತ್ತ ಕೋರೆಷನ ಮುಂದಿನಿಂದ ಹೋದನು. ಯೆಶಾಯನು ದೇವರ ನಿಜ ಸಂದೇಶವಾಹಕನಾಗಿ ಪರಿಣಮಿಸಿದನು.
13 ನಗರವು ಕೋರೆಷನಿಗೆ ಪೂರ್ತಿ ವಶವಾದಾಗ, ಕತ್ತಲೆಯಲ್ಲಿ, ಗುಪ್ತಸ್ಥಳಗಳಲ್ಲಿ ಬಚ್ಚಿಡಲ್ಪಟ್ಟಿದ್ದವುಗಳು ಸೇರಿ, ಅದರ ಎಲ್ಲ ನಿಧಿಗಳು ಅವನ ಕೈವಶವಾದವು. ಯೆಹೋವ ದೇವರು ಇದನ್ನು ಕೋರೆಷನಿಗಾಗಿ ಏಕೆ ಮಾಡಿದನು? ‘ಅವನ ಹೆಸರು ಹಿಡಿದು ಕರೆದ’ ಯೆಹೋವನು, ನಿಜ ಪ್ರವಾದನೆಯ ದೇವರೂ ವಿಶ್ವಸಾರ್ವಭೌಮನೂ ಆಗಿದ್ದಾನೆಂದು ಅವನು ತಿಳಿಯುವಂತೆಯೇ. ದೇವರ ಜನರಾದ ಇಸ್ರಾಯೇಲ್ಯರನ್ನು ವಿಮೋಚಿಸಲಿಕ್ಕಾಗಿ ತಾನು ಅಧಿಕಾರಕ್ಕೆ ಬರುವಂತೆ ದೇವರು ಏರ್ಪಡಿಸಿದ್ದನೆಂದು ಅವನು ತಿಳಿಯಲಿದ್ದನು.
14, 15. ಬಾಬೆಲನ್ನು ಸೋಲಿಸಿದ್ದಕ್ಕೆ ಕೋರೆಷನು ಯೆಹೋವನಿಗೆ ಋಣಿಯಾಗಿದ್ದನೆಂದು ನಮಗೆ ಹೇಗೆ ತಿಳಿಯುತ್ತದೆ?
14 ಯೆಹೋವನು ಕೋರೆಷನಿಗೆ ಹೇಳಿದ ಮಾತುಗಳನ್ನು ಕೇಳಿರಿ: “ನನ್ನ ಸೇವಕನಾದ ಯಾಕೋಬಿಗಾಗಿ, ನಾನು ಆದುಕೊಂಡ ಇಸ್ರಾಯೇಲಿಗಾಗಿ ಹೆಸರುಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಬಿರುದನ್ನು ದಯಪಾಲಿಸಿದ್ದೇನೆ. ನಾನೇ ಯೆಹೋವನು, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು. ಮೂಡಲಿಂದ ಪಡುವಲ ತನಕ ಇರುವವರೆಲ್ಲರೂ ಇದನ್ನು ನೋಡಿ ನನ್ನ ವಿನಹ ಯಾರೂ ಇಲ್ಲ, ನಾನೇ ಯೆಹೋವನು, ಇನ್ನು ಯಾವನೂ ಅಲ್ಲ, ನಾನು ಬೆಳಕಿಗೂ ಕತ್ತಲಿಗೂ ಸೃಷ್ಟಿಕರ್ತನು, ಮೇಲನ್ನೂ ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಯಿಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.”—ಯೆಶಾಯ 45:4-7.
15 ಬಾಬೆಲಿನ ಮೇಲಿನ ತನ್ನ ವಿಜಯಕ್ಕೆ ಕೋರೆಷನು ಯೆಹೋವನಿಗೆ ಋಣಿಯಾಗಿದ್ದನು, ಏಕೆಂದರೆ ತನ್ನ ಇಷ್ಟಾರ್ಥವನ್ನು ಆ ದುಷ್ಟ ನಗರದ ವಿರುದ್ಧ ನಿರ್ವಹಿಸಿ, ತನ್ನ ಬಂದಿ ಜನರನ್ನು ಬಿಡುಗಡೆಮಾಡುವಂತೆ ಅವನನ್ನು ಬಲಪಡಿಸಿದವನು ಆತನೇ ಆಗಿದ್ದನು. ಹೀಗೆ ಮಾಡುವುದರಲ್ಲಿ, ದೇವರು ತನ್ನ ಆಕಾಶಮಂಡಲಕ್ಕೆ, ಅದು ಧರ್ಮರಸವನ್ನು ಅಥವಾ ಶಕ್ತಿಗಳನ್ನು ಸುರಿಸುವಂತೆ ಕರೆಕೊಟ್ಟನು. ತನ್ನ ಭೂಮಿಯು ಬಾಯ್ದೆರೆದು, ತನ್ನ ದೇಶಭ್ರಷ್ಟ ಜನರಿಗೆ ನೀತಿಯ ಸಂಭವಗಳನ್ನೂ ರಕ್ಷಣೆಯನ್ನೂ ಉತ್ಪಾದಿಸುವಂತೆ ಆತನು ಕರೆಕೊಟ್ಟನು. ಮತ್ತು ಆತನ ಸಾಂಕೇತಿಕ ಆಕಾಶ ಮತ್ತು ಭೂಮಿಗಳು ಈ ಆಜ್ಞೆಗೆ ಓಗೊಟ್ಟವು. (ಯೆಶಾಯ 45:8) ಯೆಶಾಯನು ಮರಣಪಟ್ಟು ಒಂದು ನೂರಕ್ಕೂ ಹೆಚ್ಚು ವರ್ಷಗಳ ಬಳಿಕ ಅವನು ಯೆಹೋವನ ನಿಜ ಸಂದೇಶವಾಹಕನೆಂಬುದಾಗಿ ತೋರಿಸಿಕೊಡಲಾಯಿತು!
ಚೀಯೋನಿಗೆ ಸಂದೇಶವಾಹಕನ ಸುವಾರ್ತೆ
16. ಬಾಬೆಲು ಸೋತಾಗ, ಹಾಳು ಬಿದ್ದಿದ್ದ ಯೆರೂಸಲೇಮ್ ನಗರದಲ್ಲಿ ಯಾವ ಸುವಾರ್ತೆಯನ್ನು ಘೋಷಿಸಸಾಧ್ಯವಿತ್ತು?
16 ಇನ್ನೂ ಹೆಚ್ಚಿನ ವಿಷಯವು ಇದೆ. ಯೆಶಾಯ 52:7 ಯೆರೂಸಲೇಮಿಗೆ ಸುವಾರ್ತೆಯನ್ನು ತಿಳಿಸುತ್ತದೆ: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ—ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.” ಪರ್ವತಗಳಿಂದ ಯೆರೂಸಲೇಮನ್ನು ಸಮೀಪಿಸುತ್ತಿರುವ ಒಬ್ಬ ಸಂದೇಶವಾಹಕನನ್ನು ನೋಡುವುದು, ಎಷ್ಟು ರೋಮಾಂಚದಾಯಕವಾಗಿತ್ತೆಂಬುದನ್ನು ಊಹಿಸಿಕೊಳ್ಳಿರಿ! ಅವನಲ್ಲಿ ಸಂದೇಶವು ಇದ್ದಿರಲೇಬೇಕು. ಆ ಸಂದೇಶವೇನು? ಅದು ಚೀಯೋನಿಗೆ ಉತ್ತೇಜಕ ಸಂದೇಶವಾಗಿತ್ತು. ಶಾಂತಿಯ ಸಂದೇಶ, ಹೌದು, ದೇವರ ಸುಚಿತ್ತದ ಸಂದೇಶ. ಯೆರೂಸಲೇಮೂ ಅವಳ ದೇವಾಲಯವೂ ಕಟ್ಟಲ್ಪಡಲಿಕ್ಕಿತ್ತು! ಮತ್ತು ಆ ಸಂದೇಶವಾಹಕನು ಪರಮೋತ್ಸಾಹದ ಹುರುಪಿನಿಂದ ಹೀಗೆ ಘೋಷಿಸುತ್ತಾನೆ: “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ.”
17, 18. ಕೋರೆಷನು ಬಾಬೆಲನ್ನು ಸೋಲಿಸಿದ್ದು, ಯೆಹೋವನ ಸ್ವಂತ ಹೆಸರನ್ನು ಹೇಗೆ ಪ್ರಭಾವಿಸಿತು?
17 ಬಾಬೆಲಿನವರು ದಾವೀದನ ಸಂತತಿಯ ರಾಜರುಗಳು ಕುಳಿತಿದ್ದ ತನ್ನ ಪ್ರಾತಿನಿಧಿಕ ಸಿಂಹಾಸನವನ್ನು ಕೆಡವುವಂತೆ ಯೆಹೋವನು ಅನುಮತಿಸಿದಾಗ, ಆತನು ಇನ್ನುಮುಂದೆ ರಾಜನಲ್ಲವೆಂಬಂತೆ ಕಂಡುಬಂದಿದ್ದಿರಬಹುದು. ಬದಲಿಗೆ ಬಾಬೆಲಿನ ಮುಖ್ಯ ದೇವನಾದ ಮಾರ್ಡುಕ್ ರಾಜನಾಗಿದ್ದನೆಂಬಂತೆ ತೋರಿಬಂತು. ಆದಾಗಲೂ, ಚೀಯೋನಿನ ದೇವರು ಬಾಬೆಲನ್ನು ಸೋಲಿಸಿದಾಗ, ಆತನು ತನ್ನ ವಿಶ್ವ ಪರಮಾಧಿಕಾರವನ್ನು, ತಾನು ಅತ್ಯಂತ ಮಹಾ ಅರಸನೆಂಬುದನ್ನು ಪ್ರದರ್ಶಿಸಿದನು. ಮತ್ತು ಈ ನಿಜತ್ವವನ್ನು ಒತ್ತಿಹೇಳಲು, ಆ “ದೊಡ್ಡ ಅರಸನ ಪಟ್ಟಣ”ವಾದ ಯೆರೂಸಲೇಮು, ಅದರ ದೇವಾಲಯದೊಂದಿಗೆ ಪುನಸ್ಸ್ಥಾಪಿಸಲ್ಪಡಲಿತ್ತು. (ಮತ್ತಾಯ 5:35) ಅಂತಹ ಸುವಾರ್ತೆಯನ್ನು ತಂದ ಸಂದೇಶವಾಹಕನ ವಿಷಯದಲ್ಲಿಯಾದರೋ, ಅವನ ಪಾದಗಳು ಧೂಳು ತುಂಬಿದವುಗಳಾಗಿದ್ದು, ಕೊಳೆಯಾಗಿದ್ದು, ಅವುಗಳಿಗೆ ಜಜ್ಜುಗಾಯಗಳಿದ್ದುದಾದರೂ, ಚೀಯೋನ್ ಮತ್ತು ಅದರ ದೇವರ ಪ್ರೇಮಿಗಳ ದೃಷ್ಟಿಯಲ್ಲಿಯೊ, ಅವು ಎಷ್ಟೋ ಸುಂದರವಾಗಿದ್ದವು!
18 ಒಂದು ಪ್ರವಾದನಾರ್ಥದಲ್ಲಿ, ಬಾಬೆಲಿನ ಪತನವು, ದೇವರ ರಾಜ್ಯವು ಸ್ಥಾಪಿಸಲ್ಪಟ್ಟಿತೆಂದೂ ಸುವಾರ್ತಾಧಾರಿಯು ಆ ವಾಸ್ತವ ಸಂಗತಿಯ ಘೋಷಕನಾಗಿದ್ದನೆಂದೂ ಅರ್ಥೈಸಿತು. ಅಲ್ಲದೆ, ಯೆಶಾಯನು ಮುಂತಿಳಿಸಿದ ಈ ಪೂರ್ವಕಾಲದ ವಾಹಕನು, ಹೆಚ್ಚು ಮಹತ್ತಾದ—ಹೆಚ್ಚು ಮಹತ್ತಾದದ್ದು, ಏಕೆಂದರೆ ಅದರ ಭವ್ಯವಾದ ಒಳವಿಷಯ ಮತ್ತು ಅದರ ರಾಜ್ಯ ಮುಖ್ಯ ವಿಷಯ—ಸುವಾರ್ತೆಯ ಸಂದೇಶವಾಹಕನನ್ನು ಮುನ್ಸೂಚಿಸಿದನು. ಇದು ನಂಬಿಕೆಯ ಸಕಲ ಜನರಿಗೆ ಅದ್ಭುತಕರವಾದ ಸೂಚಿತಾರ್ಥವನ್ನು ಕೊಟ್ಟಿತು.
19. ಇಸ್ರಾಯೇಲ್ ದೇಶದ ಕುರಿತ ಯಾವ ಸಂದೇಶವನ್ನು ಯೆಹೋವನು ಯೆಹೆಜ್ಕೇಲನ ಮೂಲಕ ಕೊಟ್ಟನು?
19 ಪುನಸ್ಸ್ಥಾಪನೆಯ ಕುರಿತ ಭಾವಪೂರ್ಣ ಪ್ರವಾದನೆಗಳನ್ನು ಯೆಹೆಜ್ಕೇಲನಿಗೂ ಕೊಡಲಾಯಿತು. ಅವನು ಪ್ರವಾದಿಸಿದ್ದು: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ನಾನು . . . ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು, ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವವು. ಆಗ ಜನರು—ಕಾಡಾಗಿದ್ದ ಈ ದೇಶವು ಏದೆನ್ ಉದ್ಯಾನದಂತೆ ಕಳಕಳಿಸುತ್ತದೆ; . . . ಎಂದು ಹೇಳುವರು.”—ಯೆಹೆಜ್ಕೇಲ 36:33, 35.
20. ಯೆಶಾಯನು ಯೆರೂಸಲೇಮಿಗೆ ಪ್ರವಾದನಾರೂಪವಾಗಿ ಯಾವ ಹರ್ಷಕರ ಪ್ರಬೋಧನೆಯನ್ನು ಕೊಟ್ಟನು?
20 ಬಾಬೆಲಿನಲ್ಲಿ ಸೆರೆಯ ಕಾಲದಲ್ಲಿ ದೇವಜನರು ಚೀಯೋನಿಗಾಗಿ ದುಃಖಿಸುತ್ತಿದ್ದರು. (ಕೀರ್ತನೆ 137:1) ಆದರೆ ಈಗ ಅವರು ಹರ್ಷಿಸಸಾಧ್ಯವಿತ್ತು. ಯೆಶಾಯನು ಪ್ರಬೋಧಿಸಿದ್ದು: “ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ. ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ; ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಕಾರ್ಯವನ್ನು ನೋಡುವರು.”—ಯೆಶಾಯ 52:9, 10.
21. ಬಾಬೆಲಿನ ಸೋಲನ್ನನುಸರಿಸಿ, ಯೆಶಾಯ 52:9, 10ರ ಮಾತುಗಳು ಹೇಗೆ ನೆರವೇರಿದವು?
21 ಹೌದು, ಯೆಹೋವನಾದುಕೊಂಡ ಜನರಿಗೆ ಹರ್ಷಿಸಲು ಮಹತ್ತಾದ ಕಾರಣವಿತ್ತು. ಈಗ ಅವರು ಆ ಹಾಳುಗೆಡವಲ್ಪಟ್ಟ ಸ್ಥಳಗಳನ್ನು ಪುನರ್ವಶಮಾಡಿಕೊಂಡು, ಅವನ್ನು ಏದೆನ್ ಉದ್ಯಾನವನದಂತೆ ಮಾಡಲಿದ್ದರು. ಯೆಹೋವನು ಅವರಿಗಾಗಿ ತನ್ನ “ದಿವ್ಯಬಾಹುವನ್ನು” ತೆರೆದಿದ್ದನು. ಆತನು ಬಟ್ಟೆಯನ್ನು ಎತ್ತಿಕಟ್ಟಿ ಕೆಲಸಕ್ಕೆ ಸಿದ್ಧನಾದನೊ ಎಂಬಂತೆ, ಅವರನ್ನು ಅವರ ಮುದ್ದಿನ ಸ್ವದೇಶಕ್ಕೆ ಹಿಂತರಲು ಕೆಲಸ ನಡೆಸಿದನು. ಇದು ಇತಿಹಾಸದಲ್ಲಿ ನಡೆದ ಯಾವುದೊ ಒಂದು ಸಣ್ಣ, ಅಸ್ಫುಟವಾದ ವಿಷಯವಾಗಿರಲಿಲ್ಲ. ಇಲ್ಲ, ಆಗ ಜೀವಿಸುತ್ತಿದ್ದ ಸಕಲರೂ, ಒಂದು ಜನಾಂಗಕ್ಕೆ ಆಶ್ಚರ್ಯಕರವಾದ ರಕ್ಷಣೆಯನ್ನು ತರಲಿಕ್ಕಾಗಿ, ಮಾನವ ವಿಚಾರಗಳಲ್ಲಿ ದೇವರ ‘ಬಾಹು’ ಅದರ ಶಕ್ತಿಯನ್ನು ಪ್ರಯೋಗಿಸುವುದನ್ನು ಕಂಡರು. ಯೆಶಾಯ ಮತ್ತು ಯೆಹೆಜ್ಕೇಲರು ಯೆಹೋವನ ನಿಜ ಪ್ರವಾದಿಗಳೆಂಬುದಕ್ಕೆ ನಿಸ್ಸಂದೇಹವಾದ ರುಜುವಾತನ್ನು ಅವರಿಗೆ ಕೊಡಲಾಯಿತು. ಚೀಯೋನಿನ ದೇವರೊಬ್ಬನೇ ಭೂಮಿಯಲ್ಲೆಲ್ಲ ಜೀವಸ್ವರೂಪನೂ ಸತ್ಯವಂತನೂ ಆದ ಏಕ ದೇವರೆಂಬುದನ್ನು ಯಾರೂ ಸಂದೇಹಿಸುವಂತಿರಲಿಲ್ಲ. ಯೆಶಾಯ 35:2ರಲ್ಲಿ ನಾವು ಓದುವುದು: “ಇವೆಲ್ಲಾ [“ಇವರೆಲ್ಲ,” NW] ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣುವವು [“ಕಾಣುವರು,” NW].” ಯೆಹೋವನ ದೇವತ್ವದ ಈ ರುಜುವಾತನ್ನು ಅಂಗೀಕರಿಸಿದವರು ಆತನ ಆರಾಧನೆಗೆ ತಿರುಗಿದರು.
22. (ಎ) ನಾವಿಂದು ಯಾವ ವಿಷಯಕ್ಕಾಗಿ ಕೃತಜ್ಞರಾಗಿರಬಲ್ಲೆವು? (ಬಿ) ಯೆಹೋವನು ಸುಳ್ಳು ಸಂದೇಶವಾಹಕರನ್ನು ಬಯಲುಪಡಿಸುವುದಕ್ಕಾಗಿ ನಾವೇಕೆ ವಿಶೇಷವಾಗಿ ಆಭಾರಿಗಳಾಗಿರಬೇಕು?
22 ಯೆಹೋವನು ತನ್ನ ನಿಜ ಸಂದೇಶವಾಹಕರನ್ನು ಗುರುತಿಸುತ್ತಾನೆಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬೇಕು! ಆತನು ‘ತನ್ನ ಸೇವಕನ ಮಾತನ್ನು ಸ್ಥಾಪಿಸಿ ತನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವವನಾಗಿದ್ದಾನೆ.’ (ಯೆಶಾಯ 44:26) ಆತನು ಯೆಶಾಯ ಮತ್ತು ಯೆಹೆಜ್ಕೇಲರಿಗೆ ಕೊಟ್ಟ ಪುನಸ್ಸ್ಥಾಪನಾ ಪ್ರವಾದನೆಗಳು, ತನ್ನ ಸೇವಕರ ಕಡೆಗೆ ಆತನಿಗಿರುವ ಮಹಾ ಪ್ರೀತಿ, ಅಪಾತ್ರ ದಯೆ ಮತ್ತು ಕರುಣೆಯನ್ನು ಉತ್ಪ್ರೇಕ್ಷಿಸುತ್ತವೆ. ಇದಕ್ಕಾಗಿ ಯೆಹೋವನು ನಮ್ಮ ಸಕಲ ಸ್ತುತಿಗೂ ಪಾತ್ರನೆಂಬುದು ನಿಶ್ಚಯ! ಮತ್ತು ನಾವು ಈ ದಿನಗಳಲ್ಲಿ ಆತನು ಸುಳ್ಳು ಸಂದೇಶವಾಹಕರನ್ನು ಬಯಲುಪಡಿಸುತ್ತಾನೆಂಬುದಕ್ಕೆ ವಿಶೇಷವಾಗಿ ಆಭಾರಿಗಳಾಗಿರಬೇಕು. ಏಕೆಂದರೆ ಈಗ ಇಂಥವರು ಲೋಕರಂಗದಲ್ಲಿ ಅನೇಕರಿದ್ದಾರೆ. ಅವರ ಆಡಂಬರದ ಸಂದೇಶಗಳು ಯೆಹೋವನ ಪ್ರಕಟಿತ ಉದ್ದೇಶಗಳನ್ನು ಅಲಕ್ಷಿಸುತ್ತವೆ. ಆ ಸುಳ್ಳು ಸಂದೇಶವಾಹಕರನ್ನು ಗುರುತಿಸಲು ಮುಂದಿನ ಲೇಖನವು ನಮಗೆ ಸಹಾಯಮಾಡುವುದು.
[ಅಧ್ಯಯನ ಪ್ರಶ್ನೆಗಳು]
a ಸ್ಮಾರಕಗಳೂ ಹಳೆಯ ಒಡಂಬಡಿಕೆಯೂ (ಇಂಗ್ಲಿಷ್), ಐರ ಮಾರಿಸ್ ಪ್ರೈಸ್ ಅವರಿಂದ, 1925.
ನೀವು ವಿವರಿಸಬಲ್ಲಿರೊ?
◻ ಯೆಹೋವನು ತನ್ನ ನಿಜ ಸಂದೇಶವಾಹಕರನ್ನು ಹೇಗೆ ಗುರುತಿಸುತ್ತಾನೆ?
◻ ಬಾಬೆಲನ್ನು ಸೋಲಿಸಲು ತನ್ನ ನಿಯೋಗಿಯಾಗಿ ಯೆಹೋವನು ಯೆಶಾಯನ ಮೂಲಕ ಯಾರನ್ನು ಹೆಸರಿಸಿದನು?
◻ ಬಾಬೆಲಿನ ಸೋಲನ್ನು ವರ್ಣಿಸುವ ಯೆಶಾಯನ ಪ್ರವಾದನೆಗಳು ಹೇಗೆ ನೆರವೇರಿದವು?
◻ ಬಾಬೆಲಿನ ಸೋಲು ಯೆಹೋವನ ಹೆಸರಿನ ಮೇಲೆ ಯಾವ ಸತ್ಪರಿಣಾಮವನ್ನು ಬೀರಿತು?
[ಪುಟ 9 ರಲ್ಲಿರುವ ಚಿತ್ರ]
ಯೆಹೆಜ್ಕೇಲನ ದಿನಗಳ ಜನಾಂಗಗಳಿಗೆ ಬಾಬೆಲ್ ಅಭೇದ್ಯವಾದುದಾಗಿ ತೋರಿಬಂತು