ಅಧ್ಯಯನ ಲೇಖನ 25
‘ನಾನೇ ನನ್ನ ಕುರಿಗಳನ್ನು ಹುಡುಕುವೆನು’
“ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.”—ಯೆಹೆ. 34:11.
ಗೀತೆ 3 “ದೇವರು ಪ್ರೀತಿಯಾಗಿದ್ದಾನೆ”
ಕಿರುನೋಟa
1. ಯೆಹೋವ ಯಾಕೆ ತನ್ನನ್ನ ಒಬ್ಬ ತಾಯಿಗೆ ಹೋಲಿಸಿದ್ದಾನೆ?
‘ಒಬ್ಬ ತಾಯಿ ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ?’ ಈ ಪ್ರಶ್ನೆಯನ್ನು ಯೆಹೋವನು ಯೆಶಾಯನ ಕಾಲದಲ್ಲಿದ್ದ ತನ್ನ ಜನ್ರಿಗೆ ಕೇಳಿದ್ನು. ಆಮೇಲೆ, “ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ” ಅಂದನು. (ಯೆಶಾ. 49:15) ಬೈಬಲಿನಲ್ಲಿ ಯೆಹೋವನು ತನ್ನನ್ನು ಒಬ್ಬ ತಾಯಿಗೆ ಹೋಲಿಸಿರೋದು ತುಂಬ ಕಡಿಮೆ. ಆದ್ರೆ ಈ ಸನ್ನಿವೇಶದಲ್ಲಿ ಯೆಹೋವ ತನ್ನನ್ನು ಒಬ್ಬ ತಾಯಿಗೆ ಹೋಲಿಸಿದ್ದಾನೆ. ತಾಯಿ ಹೇಗೆ ತನ್ನ ಮಗುನ ಪ್ರೀತಿಸುತ್ತಾಳೋ ಅದೇ ರೀತಿ ಯೆಹೋವನು ತನ್ನ ಸೇವಕರನ್ನು ಪ್ರೀತಿಸ್ತಾನೆ. ಒಬ್ಬ ತಾಯಿಗಿರೋ ಮಮತೆ ಬಗ್ಗೆ ಜಾಸ್ಮಿನ್ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ಒಬ್ಬ ತಾಯಿ ತನ್ನ ಮಗುವಿಗೆ ಹಾಲುಣಿಸಿ ಪೋಷಿಸುವಾಗ ಅವರಿಬ್ಬರ ಮಧ್ಯೆ ಜೀವ್ನಪರ್ಯಂತ ಉಳಿಯೋ ಒಂದು ಬಾಂಧವ್ಯ ಹುಟ್ಟಿಕೊಳ್ಳುತ್ತೆ.” ಅನೇಕ ತಾಯಂದಿರಿಗೂ ಹೀಗೇ ಅನ್ಸುತ್ತೆ.
2. ಯೆಹೋವನಿಗೆ ತನ್ನ ಮಕ್ಕಳಲ್ಲಿ ಒಬ್ರು ದೂರ ಹೋದ್ರೂ ಹೇಗನಿಸುತ್ತೆ?
2 ಯೆಹೋವನಿಗೆ ತನ್ನ ಮಕ್ಕಳಲ್ಲಿ ಒಬ್ರು ಕೂಟಗಳಿಗೆ ಬರೋದನ್ನು ಸುವಾರ್ತೆ ಸಾರೋದನ್ನು ನಿಲ್ಲಿಸಿದ್ರೂ ಗೊತ್ತಾಗುತ್ತೆ. ಪ್ರತಿ ವರ್ಷ ಯೆಹೋವನ ಸಾವಿರಾರು ಸೇವಕರು ನಿಷ್ಕ್ರಿಯರಾಗೋದನ್ನುb ನೋಡ್ವಾಗ ಆತನಿಗೆ ತುಂಬ ನೋವಾಗಬಹುದಲ್ವಾ?
3. ಯೆಹೋವನು ಏನು ಬಯಸ್ತಾನೆ?
3 ನಿಷ್ಕ್ರಿಯರಾಗಿರುವ ಅನೇಕ ಸಹೋದರ ಸಹೋದರಿಯರು ಸಭೆಗೆ ವಾಪಸ್ ಬಂದಿದ್ದಾರೆ. ಅವ್ರನ್ನು ನೋಡುವಾಗ ತುಂಬ ಖುಷಿಯಾಗುತ್ತೆ. ನಿಷ್ಕ್ರಿಯರಾಗಿರೋ ಎಲ್ಲರೂ ತಿರುಗಿ ಬರಬೇಕು ಅಂತ ಯೆಹೋವನು ಬಯಸ್ತಾನೆ. ನಾವೂ ಅದನ್ನೇ ಬಯಸ್ತೇವೆ. (1 ಪೇತ್ರ 2:25) ಅವ್ರು ಯೆಹೋವನ ಹತ್ತಿರ ವಾಪಸ್ ಬರೋಕೆ ಹೇಗೆ ಸಹಾಯ ಮಾಡಬಹುದು? ಈ ಪ್ರಶ್ನೆಗೆ ಉತ್ರ ತಿಳುಕೊಳ್ಳೋಕೆ ಮುಂಚೆ, ಯಾಕೆ ಕೆಲವ್ರು ಕೂಟಗಳಿಗೆ ಬರೋದನ್ನು ಸುವಾರ್ತೆ ಸಾರೋದನ್ನು ನಿಲ್ಲಿಸಿದ್ದಾರೆ ಅಂತ ತಿಳುಕೊಳ್ಳೋಣ.
ಕೆಲವ್ರು ಯಾಕೆ ಯೆಹೋವನ ಸೇವೆ ನಿಲ್ಸಿದ್ದಾರೆ?
4. ಕೆಲವು ಸಹೋದರರು ದುಡಿಮೆಯಲ್ಲೇ ಮುಳುಗಿ ಹೋಗಿರೋದ್ರಿಂದ ಏನಾಗಿದೆ?
4 ಕೆಲವ್ರು ದುಡಿಮೆಯಲ್ಲೇ ಮುಳುಗಿ ಬಿಟ್ಟಿದ್ದಾರೆ. ಏಷ್ಯಾದಲ್ಲಿರುವ ಸಹೋದರ ಹಂಗ್c ಹೀಗೆ ಹೇಳ್ತಾನೆ: “ನನ್ನ ಸಮಯ ಶಕ್ತಿನೆಲ್ಲಾ ಕೆಲಸದಲ್ಲೇ ಕಳೀತಿದ್ದೆ. ನಾನೆಷ್ಟು ಮೂರ್ಖನಾಗಿದ್ದೆ ಅಂದ್ರೆ ಹೆಚ್ಚು ಹಣ ಸಂಪಾದನೆ ಮಾಡಿದ್ರೆ ಯೆಹೋವನ ಸೇವೆನ ಜಾಸ್ತಿ ಮಾಡಬಹುದು ಅಂತ ಅಂದ್ಕೊಂಡೆ. ಅದಕ್ಕಾಗಿ ಓವರ್ಟೈಮ್ ಕೆಲಸ ಮಾಡ್ತಿದ್ದೆ. ಮೊದ ಮೊದ್ಲು ಕೂಟಗಳನ್ನು ತಪ್ಪಿಸ್ತಿದ್ದೆ. ಕೊನೆಗೆ ಕೂಟಗಳಿಗೆ ಹೋಗೋದನ್ನೇ ಬಿಟ್ಟುಬಿಟ್ಟೆ. ಈ ಲೋಕ ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ತುಂಬ ಪ್ರಯತ್ನ ಮಾಡುತ್ತೆ.”
5. ಒಬ್ಬ ಸಹೋದರಿಗೆ ಒಂದರ ಮೇಲೊಂದು ಸಮಸ್ಯೆ ಬಂದಾಗ ಏನಾಯ್ತು?
5 ಕೆಲವು ಸಹೋದರ ಸಹೋದರಿಯರಿಗೆ ಒಂದರ ಮೇಲೊಂದು ಸಮಸ್ಯೆ ಬರುತ್ತೆ. ಬ್ರಿಟನ್ನಲ್ಲಿರೋ ಆ್ಯನ್ ಅನ್ನೋ ಸಹೋದರಿಗೆ ಐದು ಮಕ್ಕಳು. ಅವ್ರು ಹೇಳೋದು: “ನನ್ನ ಕೊನೇ ಮಗನಿಗೆ ಹುಟ್ಟಿದಾಗಿಂದನೇ ಅಂಗವಿಕಲತೆ ಇತ್ತು. ನನ್ನ ಮಗಳಿಗೆ ಬಹಿಷ್ಕಾರ ಆಯ್ತು. ನನ್ನ ಇನ್ನೊಂದು ಮಗನಿಗೆ ಮಾನಸಿಕ ಕಾಯಿಲೆ ಬಂತು. ನಾನು ಎಷ್ಟು ಖಿನ್ನಳಾಗಿದ್ದೆ ಅಂದ್ರೆ ಕೂಟಗಳಿಗೆ, ಸೇವೆಗೆ ಹೋಗೋದನ್ನು ನಿಲ್ಲಿಸಿಬಿಟ್ಟೆ. ಆಮೇಲೆ ಯೆಹೋವನಿಂದ್ಲೇ ದೂರ ಹೋಗಿಬಿಟ್ಟೆ.” ಸಹೋದರಿ ಆ್ಯನ್ ಮತ್ತವರ ಕುಟುಂಬ ಹಾಗೂ ಅದೇ ರೀತಿ ಕಷ್ಟ ಅನುಭವಿಸುತ್ತಿರೋ ಸಹೋದರ ಸಹೋದರಿಯರನ್ನು ನೋಡುವಾಗ ನಮಗೆ ತುಂಬ ದುಃಖ ಆಗುತ್ತೆ.
6. ಒಬ್ಬನು ಕೊಲೊಸ್ಸೆ 3:13 ರಲ್ಲಿರುವ ತತ್ವ ಅನ್ವಯಿಸದೇ ಹೋದ್ರೆ ಯೆಹೋವನಿಂದ ದೂರ ಹೋಗೋ ಸಾಧ್ಯತೆ ಇದೆ. ಯಾಕೆ?
6 ಕೊಲೊಸ್ಸೆ 3:13 ಓದಿ. ಕೆಲವರಿಗೆ ಸಭೆಯವ್ರಿಂದ್ಲೇ ನೋವಾಗಿರುತ್ತೆ. ಅಪೊಸ್ತಲ ಪೌಲ ಹೇಳಿದಂತೆ, ನಮಗೆ ಕೆಲವೊಮ್ಮೆ ಸಭೆಯಲ್ಲಿರೋ ಸಹೋದರ ಅಥ್ವಾ ಸಹೋದರಿಯರ ‘ವಿರುದ್ಧ ದೂರುಹೊರಿಸಲು ಕಾರಣಗಳಿರಬಹುದು.’ ಅಥ್ವಾ ಅನ್ಯಾಯನೂ ಆಗಿರಬಹುದು. ಇದ್ರಿಂದ ಕಹಿ ಭಾವನೆ ಮತ್ತು ಅಸಮಾಧಾನ ಹುಟ್ಟಿಕೊಂಡು ನಾವು ಸಭೆಯಿಂದ, ಸಹೋದರ ಸಹೋದರಿಯರಿಂದ ದೂರ ಹೋಗಬಹುದು. ದಕ್ಷಿಣ ಅಮೆರಿಕದಲ್ಲಿರುವ ಸಹೋದರ ಪಾಬ್ಲೋ ಅವ್ರ ಅನುಭವ ನೋಡಿ. ಅವ್ರ ಮೇಲೆ ಸುಳ್ಳಾರೋಪ ಹೊರಿಸಲಾಯಿತು. ಇದ್ರಿಂದ ಅವ್ರು ತಮ್ಮ ಸೇವಾ ಸುಯೋಗ ಕಳಕೊಂಡ್ರು. ಇದಕ್ಕೆ ಹೇಗೆ ಪ್ರತಿಕ್ರಿಯಿಸಿದರು? ಅವ್ರು ಹೀಗೆ ಹೇಳ್ತಾರೆ: “ನಂಗೆ ತುಂಬ ಕೋಪ ಬಂತು, ಹೋಗ್ತಾ ಹೋಗ್ತಾ ಸಭೆಗೆ ಹೋಗೋದನ್ನೇ ನಿಲ್ಸಿ ಬಿಟ್ಟೆ.”
7. ಒಬ್ಬ ವ್ಯಕ್ತಿಗೆ ದೋಷಿ ಭಾವನೆ ಇದ್ರೆ ಏನಾಗಬಹುದು?
7 ಹಿಂದೆ ಮಾಡಿರೋ ಗಂಭೀರ ಪಾಪದಿಂದಾಗಿ ಕೆಲವ್ರಿಗೆ ಈಗ್ಲೂ ದೋಷಿ ಭಾವ ಕಾಡ್ತಿರಬಹುದು. ‘ದೇವರ ಪ್ರೀತಿಗೆ ಅರ್ಹನಲ್ಲ’ ಅಂತ ಅನಿಸ್ತಿರಬಹುದು. ಅವ್ರು ಪಶ್ಚಾತ್ತಾಪ ಪಟ್ಟಿರಬಹುದು. ಅವ್ರ ತಪ್ಪಿಗೆ ಕ್ಷಮೆನೂ ಸಿಕ್ಕಿರಬಹುದು. ಆದ್ರೂ ‘ಯೆಹೋವನ ಸೇವಕನಾಗಿರೋಕೆ ನಾನು ಲಾಯಕ್ಕಿಲ್ಲ’ ಅಂತ ಅನಿಸ್ತಿರಬಹುದು. ಸಹೋದರ ಫ್ರಾನ್ಸಿಸ್ಕೋ ಅವ್ರಿಗೂ ಹೀಗೆ ಅನಿಸ್ತು. “ನಾನು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದ್ದಕ್ಕೆ ನಂಗೆ ಶಿಸ್ತು ಸಿಕ್ತು. ಆದ್ರೂ ಕೂಟಗಳಿಗೆ ಹೋಗೋದನ್ನು ನಿಲ್ಲಿಸಲಿಲ್ಲ. ಒಳಗೊಳಗೆ ನಂಗೆ ತುಂಬ ದುಃಖ ಇತ್ತು. ನಾನು ಏನಕ್ಕೂ ಅರ್ಹ ಅಲ್ಲ, ಯೆಹೋವನ ಸೇವಕರಲ್ಲಿ ಒಬ್ಬನಾಗಿರೋದಕ್ಕೆ ಅರ್ಹತೆ ಇಲ್ಲ ಅಂತ ಅನಿಸ್ತಿತ್ತು. ಮನಸ್ಸಾಕ್ಷಿ ನನ್ನನ್ನು ಕಿತ್ತು ತಿನ್ನುತ್ತಿತ್ತು. ಯೆಹೋವ ನನ್ನನ್ನು ಕ್ಷಮಿಸಿಲ್ಲ ಅಂತ ಅನಿಸ್ತಿತ್ತು. ಅದಕ್ಕೆ ಕೂಟಗಳಿಗೆ ಹೋಗೋದನ್ನೇ ಬಿಟ್ಟು ಬಿಟ್ಟೆ.” ನಾವೀಗ ಚರ್ಚೆ ಮಾಡಿದ ಸನ್ನಿವೇಶಗಳಲ್ಲಿರುವ ಸಹೋದರ ಸಹೋದರಿಯರನ್ನ ನೆನಸಿದಾಗ ನಿಮಗೆ ಏನನಿಸುತ್ತೆ? ಅವ್ರ ಸನ್ನಿವೇಶ ನಿಮ್ಗೆ ಅರ್ಥ ಆಗುತ್ತಾ? ಎಲ್ಲಕ್ಕಿಂತ ಹೆಚ್ಚಾಗಿ ಅವ್ರ ಬಗ್ಗೆ ಯೆಹೋವ ದೇವ್ರಿಗೆ ಹೇಗನಿಸುತ್ತೆ?
ಯೆಹೋವ ತನ್ನ ಸೇವಕರನ್ನು ಪ್ರೀತಿಸ್ತಾನೆ
8. ಹಿಂದೆ ತನ್ನ ಸೇವಕರಾಗಿದ್ದವ್ರನ್ನು ಯೆಹೋವ ಮರೆಯುತ್ತಾನಾ? ವಿವರಿಸಿ.
8 ನಂಬಿಗಸ್ತಿಕೆಯಿಂದ ಸೇವೆ ಮಾಡಿದವರು ಈಗ ಸಭೆಗೆ ಬರೋದನ್ನೇ ಬಿಟ್ಟುಬಿಟ್ಟಿದ್ರೂ ಯೆಹೋವನು ಅವ್ರನ್ನ ಯಾವತ್ತೂ ಮರೆಯಲ್ಲ. ಅವ್ರು ಮಾಡಿದ ಸೇವೆನೂ ಮರೆಯಲ್ಲ. (ಇಬ್ರಿ. 6:10) ಯೆಹೋವ ತನ್ನ ಸೇವಕರಿಗೆ ಎಷ್ಟು ಕಾಳಜಿ ತೋರಿಸ್ತಾನೆ ಅನ್ನೋದನ್ನು ವಿವರಿಸೋಕೆ ಯೆಶಾಯ ಒಂದು ಸುಂದರ ಉದಾಹರಣೆ ಬಳಸಿದ್ದಾನೆ. “ಆತನು [ಯೆಹೋವನು] ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು” ಅಂತ ಯೆಶಾಯ ಬರೆದ. (ಯೆಶಾ. 40:11) ಮಹಾ ಕುರುಬನಾದ ಯೆಹೋವನಿಗೆ ತನ್ನ ಮಂದೆಯಲ್ಲಿರುವ ಒಂದು ಕುರಿ ದೂರ ಹೋದ್ರೂ ಹೇಗನಿಸುತ್ತೆ? ಹೇಗನಿಸುತ್ತೆ ಅನ್ನೋದು ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತಿಂದ ಗೊತ್ತಾಗುತ್ತೆ. ಆತ ಹೇಳಿದ್ದು: “ನಿಮ್ಮ ಅಭಿಪ್ರಾಯವೇನು? ಒಬ್ಬ ಮನುಷ್ಯನ ಬಳಿ ನೂರು ಕುರಿಗಳಿದ್ದು ಅವುಗಳಲ್ಲಿ ಒಂದು ಹಿಂಡಿನಿಂದ ಬೇರೆಯಾದರೆ ಅವನು ತೊಂಬತ್ತೊಂಬತ್ತು ಕುರಿಗಳನ್ನು ಬೆಟ್ಟದಲ್ಲೇ ಬಿಟ್ಟು ಬೇರೆಯಾಗಿರುವ ಆ ಒಂದು ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೆ? ಅವನು ಅದನ್ನು ಕಂಡುಕೊಂಡರೆ, ಬೇರೆಯಾಗದೇ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ.”—ಮತ್ತಾ. 18:12, 13.
9. ಬೈಬಲ್ ಕಾಲದಲ್ಲಿದ್ದ ಒಳ್ಳೆ ಕುರುಬರು ತಮ್ಮ ಕುರಿಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದರು? (ಮುಖಪುಟ ಚಿತ್ರ ನೋಡಿ.)
9 ಯೆಹೋವ ದೇವ್ರನ್ನು ಒಬ್ಬ ಕುರುಬನಿಗೆ ಹೋಲಿಸಿರೋದು ಯಾಕೆ ಸೂಕ್ತವಾಗಿದೆ? ಯಾಕಂದ್ರೆ ಬೈಬಲ್ ಸಮಯದಲ್ಲಿ ಒಬ್ಬ ಒಳ್ಳೇ ಕುರುಬ ತನ್ನ ಕುರಿಮಂದೆಗಳನ್ನು ತುಂಬ ಚೆನ್ನಾಗಿ ನೋಡಿಕೊಳ್ತಿದ್ದ. ಉದಾಹರಣೆಗೆ ದಾವೀದ. ಅವ್ನು ತನ್ನ ಮಂದೆನ ಕಾಪಾಡೋಕೆ ಸಿಂಹ ಮತ್ತು ಕರಡಿ ಜೊತೆ ಹೋರಾಡಿದ. (1 ಸಮು. 17:34, 35) ಒಬ್ಬ ಒಳ್ಳೇ ಕುರುಬನಿಗೆ ತನ್ನ ಮಂದೆಯಿಂದ ಒಂದು ಕುರಿ ಕಳೆದುಹೋದ್ರೂ ಗೊತ್ತಾಗುತ್ತೆ. (ಯೋಹಾ. 10:3, 14) ಅಂಥ ಕುರುಬ ಏನು ಮಾಡ್ತಾನೆ? ತನ್ನ ತೊಂಬತ್ತೊಂಬತ್ತು ಕುರಿಗಳನ್ನು ಕುರಿಹಟ್ಟಿಯಲ್ಲಿ ಬಿಟ್ಟೋ ಅಥ್ವಾ ಅವನ್ನು ಬೇರೆ ಕುರುಬರಿಗೆ ಒಪ್ಪಿಸಿನೋ ಕಳೆದು ಹೋಗಿರೋ ಆ ಒಂದು ಕುರಿ ಹುಡುಕೋಕೆ ಹೋಗ್ತಾನೆ. ಯೇಸು ಈ ಕಥೆ ಹೇಳಿದ ನಂತ್ರ ಒಂದು ಪ್ರಾಮುಖ್ಯ ಸತ್ಯವನ್ನು ಕಲಿಸಿದ್ನು. ಅದೇನಂದ್ರೆ “ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವುದನ್ನು ಸ್ವರ್ಗದಲ್ಲಿರುವ ನನ್ನ ತಂದೆಯು ಇಷ್ಟಪಡುವುದಿಲ್ಲ.”—ಮತ್ತಾ. 18:14.
ಕಳೆದುಹೋದ ಕುರಿಯನ್ನು ಯೆಹೋವ ಹುಡುಕ್ತಾನೆ
10. ಯೆಹೆಜ್ಕೇಲ 34:11-16 ರಲ್ಲಿ ಹೇಳಿರೋ ಪ್ರಕಾರ ಕಳೆದುಹೋದ ಕುರಿಗೋಸ್ಕರ ಏನೆಲ್ಲಾ ಮಾಡುತ್ತೇನೆ ಅಂತ ಯೆಹೋವ ಮಾತು ಕೊಟ್ಟಿದ್ದಾನೆ?
10 ಯೆಹೋವ ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರೀತಿಸ್ತಾನೆ. ತನ್ನ ಮಂದೆಯಿಂದ ದೂರ ಹೋಗಿರೋ ‘ಚಿಕ್ಕವರನ್ನೂ’ ಪ್ರೀತಿಸುತ್ತಾನೆ. ‘ಕಳೆದುಹೋದ ಕುರಿನ ಹುಡುಕ್ತೀನಿ ಮತ್ತು ತನ್ನೊಟ್ಟಿಗೆ ಪುನಃ ಆಪ್ತ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತೀನಿ’ ಅಂತ ಯೆಹೋವನು ಯೆಹೆಜ್ಕೇಲನ ಮೂಲಕ ಮಾತು ಕೊಟ್ಟಿದ್ದಾನೆ. ಅವುಗಳನ್ನು ಕಾಪಾಡೋಕೆ ಏನೆಲ್ಲಾ ಮಾಡ್ತೀನಿ ಅಂತನೂ ಹೇಳಿದ್ದಾನೆ. ಇಸ್ರಾಯೇಲಿನ ಕುರುಬರು ಕುರಿಗಳು ಕಳೆದು ಹೋದಾಗ ಇದನ್ನೇ ಮಾಡ್ತಿದ್ರು. (ಯೆಹೆಜ್ಕೇಲ 34:11-16 ಓದಿ.) ಮೊದ್ಲು, ಕುರುಬ ಕಳೆದುಹೋದ ಕುರಿನ ಹುಡುಕುತ್ತಿದ್ದ. ಅದಕ್ಕಾಗಿ ತನ್ನ ಸಮಯ-ಶಕ್ತಿನಾ ಧಾರೆಯೆರೆಯುತ್ತಿದ್ದ. ಕುರಿ ಸಿಕ್ಕಿದ ಮೇಲೆ ಅದನ್ನ ಮಂದೆಗೆ ವಾಪಸ್ ಕರ್ಕೊಂಡು ಬರ್ತಿದ್ದ. ಒಂದು ವೇಳೆ ಕುರಿಗೆ ಗಾಯ ಆಗಿದ್ರೆ ಅದಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುತ್ತಿದ್ದ. ಅದು ಹಸಿದಿದ್ದರೆ ಅದನ್ನ ಎತ್ತಿಕೊಂಡು ಅದಕ್ಕೆ ಮೇವು ಹಾಕ್ತಿದ್ದ. ‘ದೇವರ ಮಂದೆಯ’ ಕುರುಬರಾದ ಹಿರಿಯರು ಸಹ ಸಭೆಯಿಂದ ಯಾರಾದ್ರೂ ದೂರ ಹೋಗಿದ್ರೆ ಇದೇ ರೀತಿ ಕಾಳಜಿ ತೋರಿಸಬೇಕು. (1 ಪೇತ್ರ 5:2, 3) ಹಿರಿಯರು ಅವ್ರನ್ನು ಹುಡುಕಬೇಕು, ಅವ್ರು ಸಭೆಗೆ ವಾಪಸ್ ಬರೋಕೆ ಸಹಾಯ ಮಾಡಬೇಕು ಮತ್ತು ಅವ್ರು ಪುನಃ ದೇವರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡಬೇಕು.d
11. ಒಬ್ಬ ಒಳ್ಳೇ ಕುರುಬನಿಗೆ ಏನು ಗೊತ್ತಿರುತ್ತೆ?
11 ಕುರಿಗಳು ಮೇಯ್ತಾ ಮೇಯ್ತಾ ಮಂದೆ ಬಿಟ್ಟು ದೂರ ಹೋಗೋ ಸಾಧ್ಯತೆ ಇದೆ ಅಂತ ಒಬ್ಬ ಒಳ್ಳೇ ಕುರುಬ ಅರ್ಥಮಾಡ್ಕೊಂಡಿರುತ್ತಾನೆ. ಹಾಗಾಗಿ ಕಳೆದುಹೋದ ಕುರಿ ಪುನಃ ಸಿಕ್ಕಿದಾಗ ಶಿಕ್ಷೆ ಕೊಡಲ್ಲ. ಯೆಹೋವ ಸಹ ಅದೇ ರೀತಿ ತುಂಬ ಕಾಳಜಿಯಿಂದ ನಡಕೊಳ್ತಾನೆ. ಹಿಂದಿನ ಕಾಲದಲ್ಲಿದ್ದ ತನ್ನ ಸೇವಕರಿಗೆ ಯೆಹೋವ ಹೇಗೆ ಸಹಾಯ ಮಾಡಿದ, ಅದ್ರಿಂದ ನಾವೇನು ಕಲೀಬಹುದು ಅನ್ನೋದನ್ನು ಈಗ ನೋಡೋಣ.
12. ಯೋನನ ಜೊತೆ ಯೆಹೋವ ಹೇಗೆ ನಡ್ಕೊಂಡ?
12 ಪ್ರವಾದಿ ಯೋನ ಯೆಹೋವ ದೇವ್ರು ಕೊಟ್ಟ ಕೆಲಸ ಮಾಡ್ದೆ ಓಡಿ ಹೋದ. ಆದ್ರೂ ಯೆಹೋವ ಅವನನ್ನು ಬಿಟ್ಟು ಬಿಡಲಿಲ್ಲ. ಒಬ್ಬ ಒಳ್ಳೇ ಕುರುಬನಂತೆ ಅವ್ನ ಜೀವ ಕಾಪಾಡಿದ. ಯೋನನಿಗೆ ಕೆಲಸವನ್ನು ಮಾಡೋಕೆ ಬೇಕಾದ ಧೈರ್ಯ ಕೊಟ್ಟ. (ಯೋನ 2:7; 3:1, 2) ಅಷ್ಟೇ ಅಲ್ಲ, ಸೋರೆ ಗಿಡ ಬಳಸಿ ಪ್ರತಿಯೊಬ್ಬರ ಜೀವ ಅಮೂಲ್ಯ ಅಂತ ಯೋನನಿಗೆ ಅರ್ಥ ಮಾಡಿಸಿದ. (ಯೋನ 4:10, 11) ಇದ್ರಿಂದ ಯಾವ ಪಾಠ ಕಲೀಬಹುದು? ಹಿರಿಯರು ನಿಷ್ಕ್ರಿಯರಾದವರನ್ನು ಬಿಟ್ಟುಬಿಡಬಾರದು. ಅವ್ರು ಸಭೆಯಿಂದ ದೂರ ಹೋಗೋಕೆ ಏನು ಕಾರಣ ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವ್ರು ಪುನಃ ಯೆಹೋವನ ಬಳಿ ಬಂದಾಗ ಅವ್ರ ಜೊತೆ ಪ್ರೀತಿಯಿಂದ ನಡಕೊಳ್ಬೇಕು.
13. ಕೀರ್ತನೆ 73 ನ್ನು ಬರೆದವನ ಮಾತುಗಳಿಗೆ ಯೆಹೋವ ಪ್ರತಿಕ್ರಿಯಿಸಿದ ವಿಧದಿಂದ ನಾವೇನು ಕಲಿಯಬಹುದು?
13 ಕೀರ್ತನೆ 73 ನ್ನು ಬರೆದವನ ಉದಾಹರಣೆ ನೋಡಿ. ದುಷ್ಟರಿಗೆ ಒಳ್ಳೇದಾಗುತ್ತಿರೋದನ್ನು ನೋಡಿ ಅವ್ನಿಗೆ ನಿರುತ್ತೇಜನವಾಯ್ತು. ‘ದೇವ್ರ ಸೇವೆ ಮಾಡೋದ್ರಿಂದ ಏನು ಪ್ರಯೋಜನ?’ ಅಂತ ಪ್ರಶ್ನಿಸಿದ. (ಕೀರ್ತ. 73:12, 13, 16) ಅದಕ್ಕೆ ಯೆಹೋವನ ಪ್ರತಿಕ್ರಿಯೆ ಏನಾಗಿತ್ತು? ಯೆಹೋವ ಅವನನ್ನು ಖಂಡಿಸಲಿಲ್ಲ. ಬೈಬಲಿನಲ್ಲಿ ಆ ಕೀರ್ತನೆಗಾರನ ಮಾತುಗಳನ್ನು ದಾಖಲಿಸೋಕೆ ಅನುಮತಿಸಿದ. ಸಮ್ಯ ಕಳೆದಂತೆ ಕೀರ್ತನೆಗಾರನಿಗೆ ಯೆಹೋವನ ಜೊತೆ ಇರೋ ಸಂಬಂಧನೇ ಎಲ್ಲಕ್ಕಿಂತ ಮುಖ್ಯ, ಅದ್ರಿಂದನೇ ಜೀವನ ಸಾರ್ಥಕವಾಗೋದು ಅನ್ನೋದು ಅರ್ಥವಾಯ್ತು. (ಕೀರ್ತ. 73:23, 24, 26, 28) ಇದ್ರಿಂದ ಯಾವ ಪಾಠ ಕಲೀಬಹುದು? ಯೆಹೋವನ ಸೇವೆ ಮಾಡೋದ್ರಿಂದ ಏನು ಪ್ರಯೋಜನ ಅಂತ ಯಾರಾದ್ರೂ ಹೇಳಿಕೊಂಡರೆ ಹಿರಿಯರು ಅವ್ರ ಬಗ್ಗೆ ತಪ್ಪಾದ ನಿರ್ಧಾರಕ್ಕೆ ಬಂದು ಬಿಡಬಾರದು. ಅವ್ರು ಯೋಚಿಸ್ತಿರೋದು ತಪ್ಪು ಅಂತ ಹೇಳಬಾರದು. ಬದ್ಲಿಗೆ ಅವ್ರು ಹಾಗೆ ಹೇಳೋಕೆ, ನಡಕೊಳ್ಳೋಕೆ ಏನು ಕಾರಣ ಅಂತ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮಾಡಿದಾಗ ಅವ್ರಿಗೆ ಬೇಕಾದ ಉತ್ತೇಜನವನ್ನು ಬೈಬಲಿಂದ ಕೊಡೋಕೆ ಹಿರಿಯರಿಗೆ ಸಾಧ್ಯವಾಗುತ್ತೆ.
14. ಎಲೀಯನಿಗೆ ಯಾಕೆ ಸಹಾಯ ಬೇಕಿತ್ತು? ಯೆಹೋವನು ಹೇಗೆ ಸಹಾಯ ಮಾಡಿದ?
14 ಪ್ರವಾದಿ ಎಲೀಯ ರಾಣಿ ಈಜೆಬೆಲಳಿಂದ ತಪ್ಪಿಸಿಕೊಂಡು ಓಡಿಹೋದ. (1 ಅರ. 19:1-3) ಬೇರೆ ಯಾರೂ ದೇವರ ಪ್ರವಾದಿಗಳಾಗಿ ಕೆಲ್ಸ ಮಾಡ್ತಿಲ್ಲ, ತಾನು ಮಾಡ್ತಿರೋ ಕೆಲಸದಿಂದ ಏನೂ ಪ್ರಯೋಜನ ಇಲ್ಲ ಅಂತ ಅಂದ್ಕೊಂಡ. ಸತ್ತು ಹೋಗಬೇಕು ಅನ್ನುವಷ್ಟು ದುಃಖ ಆಯ್ತು. (1 ಅರ. 19:4, 10) ಯೆಹೋವನು ಎಲೀಯನನ್ನು ಖಂಡಿಸೋ ಬದ್ಲು ‘ನೀನು ಒಂಟಿಯಲ್ಲ, ನಾನು ನಿನ್ನ ಜೊತೆ ಇದ್ದೀನಿ’ ಅಂತ ಭರವಸೆ ಕೊಟ್ಟ. ಜೊತೆಗೆ ಇನ್ನೂ ಹೆಚ್ಚು ಕೆಲಸ ಮಾಡೋಕಿದೆ ಅಂತ ತಿಳಿಸಿದ. ಎಲೀಯ ಹೇಳಿದ್ದನ್ನೆಲ್ಲಾ ಯೆಹೋವ ಗಮನ ಕೊಟ್ಟು ಕೇಳಿಸಿಕೊಂಡ. ಆಮೇಲೆ ಅವನಿಗೆ ಹೊಸ ನೇಮಕ ಕೊಟ್ಟ. (1 ಅರ. 19:11-16, 18) ನಾವೇನು ಪಾಠ ಕಲೀಬಹುದು? ಎಲ್ರೂ, ವಿಶೇಷವಾಗಿ ಹಿರಿಯರು ಯೆಹೋವನ ಸೇವಕರ ಜೊತೆ ಪ್ರೀತಿಯಿಂದ ನಡಕೊಳ್ಳಬೇಕು. ಯಾರಿಗಾದ್ರೂ ಕಹಿ ಮನೋಭಾವ ಇದ್ರೆ ಅಥ್ವಾ ಯೆಹೋವನ ಕರುಣೆ ಪಡೆಯೋಕೆ ತಾವು ಅರ್ಹರಲ್ಲ ಅಂತ ಅನಿಸಿದ್ರೆ ಅದನ್ನವರು ಹಿರಿಯರ ಹತ್ರ ಹೇಳಿಕೊಳ್ಳಬಹುದು. ಆಗ ಹಿರಿಯರು ಅದನ್ನು ಗಮನಕೊಟ್ಟು ಕೇಳಿಸಿಕೊಳ್ಳಬೇಕು. ನಂತ್ರ ಅವ್ರು ಯೆಹೋವನಿಗೆ ಅಮೂಲ್ಯರು ಅಂತ ಭರವಸೆ ಮೂಡಿಸಬೇಕು.
ಕಳೆದುಹೋದ ದೇವರ ಕುರಿ ಬಗ್ಗೆ ನಮಗೆ ಹೇಗನಿಸಬೇಕು?
15. ಯೋಹಾನ 6:39 ರ ಪ್ರಕಾರ ಯೇಸುಗೆ ತನ್ನ ತಂದೆಯ ಕುರಿಗಳ ಬಗ್ಗೆ ಹೇಗನಿಸುತ್ತೆ?
15 ಕಳೆದುಹೋದ ದೇವರ ಕುರಿ ಬಗ್ಗೆ ನಮಗೆ ಹೇಗನಿಸಬೇಕು? ಯೇಸುವಿನ ಮಾದರಿಯಿಂದ ನಾವು ಕಲಿಯಬಹುದು. ಯೆಹೋವನಿಗೆ ತನ್ನ ಪ್ರತಿಯೊಂದು ಕುರಿಯೂ ಅಮೂಲ್ಯ ಅಂತ ಯೇಸುಗೆ ಗೊತ್ತಿತ್ತು. ‘ಇಸ್ರಾಯೇಲ್ಯ ಮನೆತನದ ತಪ್ಪಿಹೋದ ಕುರಿಗಳು’ ಪುನಃ ಯೆಹೋವನ ಬಳಿ ಬರೋಕೆ ಯೇಸು ತನ್ನಿಂದಾದ ಎಲ್ಲವನ್ನು ಮಾಡಿದ. (ಮತ್ತಾ. 15:24; ಲೂಕ 19:9, 10) ಯೇಸು ಒಬ್ಬ ಒಳ್ಳೆ ಕುರುಬನಾಗಿದ್ದ ಕಾರಣ ಯೆಹೋವನ ಕುರಿಗಳಲ್ಲಿ ಒಂದೂ ಕಳೆದು ಹೋಗದಿರೋಕೆ ಎಲ್ಲ ಪ್ರಯತ್ನ ಮಾಡಿದ.—ಯೋಹಾನ 6:39 ಓದಿ.
16-17. ಯೆಹೋವನಿಂದ ದೂರ ಹೋಗಿರೋರ ಬಗ್ಗೆ ಹಿರಿಯರಿಗೆ ಹೇಗನಿಸಬೇಕು? (“ಕಳೆದುಹೋದ ಕುರಿಗೆ ಹೇಗನಿಸುತ್ತೆ?” ಚೌಕ ನೋಡಿ.)
16 ಪೌಲ ಎಫೆಸದಲ್ಲಿದ್ದ ಹಿರಿಯರಿಗೆ ಯೇಸುವಿನ ಮಾದರಿಯನ್ನು ಅನುಕರಿಸುವಂತೆ ಹೇಳಿದ. ‘ನೀವು ಬಲಹೀನರಿಗೆ ನೆರವು ನೀಡಬೇಕು ಮತ್ತು ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ ಎಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.’ ಅಂದನು. (ಅ. ಕಾ. 20:17, 35) ಯೆಹೋವನ ಜನರನ್ನು ನೋಡಿಕೊಳ್ಳುವ ಜವಾಬ್ದಾರಿ ವಿಶೇಷವಾಗಿ ಹಿರಿಯರಿಗಿದೆ ಅನ್ನೋದು ಈ ವಚನದಿಂದ ಗೊತ್ತಾಗುತ್ತೆ. ಸ್ಪೇನ್ನಲ್ಲಿರೋ ಹಿರಿಯರಾದ ಸಾಲ್ವಡಾರ್ ಹೀಗೆ ಹೇಳ್ತಾರೆ: “ಯೆಹೋವನು ಕಳೆದುಹೋಗಿರೋ ತನ್ನ ಕುರಿಯನ್ನ ಎಷ್ಟು ಪ್ರೀತಿಸ್ತಾನೆ ಅನ್ನೋದನ್ನು ಯೋಚಿಸುವಾಗ ನಿಷ್ಕ್ರಿಯರಿಗೆ ಸಹಾಯ ಮಾಡೋಕೆ ನನ್ನಿಂದಾದ ಎಲ್ಲವನ್ನು ಮಾಡಬೇಕು ಅಂತ ಅನಿಸುತ್ತೆ. ನಾನು ಮಂದೆಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಯೆಹೋವ ಬಯಸ್ತಾನೆ.”
17 ಈ ಲೇಖನದಲ್ಲಿ ಯೆಹೋವನಿಂದ ದೂರ ಹೋದವರ ಬಗ್ಗೆ ಚರ್ಚಿಸಿದವು. ಅವ್ರಿಗೆ ಸಹಾಯ ಸಿಕ್ಕಿದರಿಂದ ಅವ್ರು ಪುನಃ ಯೆಹೋವನ ಬಳಿಗೆ ಬಂದ್ರು. ಈಗ್ಲೂ ಯೆಹೋವನಿಂದ ದೂರ ಹೋಗಿರೋ ಅನೇಕರು ಆತನ ಬಳಿ ವಾಪಸ್ ಬರೋಕೆ ಬಯಸ್ತಿದ್ದಾರೆ. ಅವ್ರು ಪುನಃ ಯೆಹೋವನ ಬಳಿ ಬರೋಕೆ ನಾವು ಹೇಗೆ ಸಹಾಯ ಮಾಡಬಹುದು ಅನ್ನೋದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.
ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು
a ತುಂಬ ವರ್ಷ ಯೆಹೋವನ ಸೇವೆ ಮಾಡಿದ ನಂಬಿಗಸ್ತ ಸೇವಕರು ಈಗ್ಯಾಕೆ ಸಭೆಯಿಂದ ದೂರ ಹೋಗಿದ್ದಾರೆ? ಅವ್ರ ಬಗ್ಗೆ ದೇವ್ರಿಗೆ ಏನನಿಸುತ್ತೆ? ಈ ಲೇಖನದಲ್ಲಿ ಇವುಗಳಿಗೆ ಉತ್ರ ಇದೆ. ಹಿಂದಿನ ಕಾಲದಲ್ಲಿದ್ದ ಕೆಲವು ಸೇವಕರಿಗೆ ಯೆಹೋವ ಸಹಾಯ ಮಾಡಿದ ವಿಧದಿಂದ ನಾವೇನು ಕಲೀಬಹುದು ಅಂತನೂ ನೋಡಲಿದ್ದೇವೆ.
b ಪದ ವಿವರಣೆ: ಆರು ತಿಂಗಳು ಅಥ್ವಾ ಅದಕ್ಕಿಂತ ಹೆಚ್ಚು ಸಮಯ ಕ್ಷೇತ್ರ ಸೇವಾ ವರದಿ ಕೊಡದಿರುವವರನ್ನು ನಿಷ್ಕ್ರಿಯ ಪ್ರಚಾರಕರು ಅಂತ ಕರೆಯಲಾಗುತ್ತೆ. ಅವ್ರು ನಿಷ್ಕ್ರಿಯರಾದರೂ ನಮ್ಮ ಸಹೋದರ ಸಹೋದರಿಯರೇ. ನಾವು ಅವ್ರನ್ನು ಪ್ರೀತಿಸ್ತೇವೆ.
c ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
d ಮುಂದಿನ ಲೇಖನದಲ್ಲಿ ಈ ಮೂರು ವಿಧಾನಗಳನ್ನು ಹಿರಿಯರು ಹೇಗೆ ಮಾಡುತ್ತಾರೆ ಅನ್ನೋದನ್ನು ಸವಿವರವಾಗಿ ತಿಳಿಸಲಾಗಿದೆ.
e ಚಿತ್ರ ವಿವರಣೆ: ಇಸ್ರಾಯೇಲ್ಯ ಕುರುಬನಿಗೆ ಕಳೆದು ಹೋಗಿರೋ ಕುರಿ ಬಗ್ಗೆ ಚಿಂತೆ ಆಗ್ತಿತ್ತು. ಅದನ್ನು ಹುಡುಕಿ ಮತ್ತೆ ಮಂದೆಗೆ ಸೇರಿಸುತ್ತಿದ್ದನು. ಸಭಾಹಿರಿಯರು ಇದನ್ನೇ ಮಾಡ್ತಾರೆ.
f ಚಿತ್ರ ವಿವರಣೆ: ಬಸ್ನಲ್ಲಿ ಕುಳಿತಿರೋ ಒಬ್ಬ ನಿಷ್ಕ್ರಿಯ ಸಹೋದರಿ ಇಬ್ಬರು ಸಾಕ್ಷಿಗಳು ಖುಷಿಖುಷಿಯಾಗಿ ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿರೋದನ್ನು ನೋಡ್ತಿದ್ದಾಳೆ.