‘ನಿಮ್ಮ ತಂದೆಯು ಕರುಣೆಯುಳ್ಳವನಾಗಿದ್ದಾನೆ’
“ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರ ನೀವೂ ಕರುಣೆಯುಳ್ಳವರಾಗಿರಿ.”—ಲೂಕ 6:36, NIBV.
ಮೋಶೆಯ ಮೂಲಕ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಸುಮಾರು 600 ವಿವಿಧ ನಿಯಮಗಳೂ ಕಟ್ಟಳೆಗಳೂ ಅಡಕವಾಗಿದ್ದವು. ಮೋಶೆಯ ಧರ್ಮಶಾಸ್ತ್ರದ ಆ ನಿಯಮಗಳನ್ನು ಪಾಲಿಸುವುದು ಆವಶ್ಯಕವಾಗಿದ್ದರೂ, ಕರುಣೆಯನ್ನು ತೋರಿಸುವುದು ಸಹ ಬಹಳ ಪ್ರಾಮುಖ್ಯವಾಗಿತ್ತು. ಕರುಣೆಯಿಲ್ಲದ ಮನೋಭಾವವನ್ನು ತೋರಿಸಿದ ಫರಿಸಾಯರಿಗೆ ಯೇಸು ಏನಂದನು ಎಂಬುದನ್ನು ಗಮನಿಸಿರಿ. ಎರಡು ಸಂದರ್ಭಗಳಲ್ಲಿ ಅವನು ಅವರನ್ನು ಗದರಿಸುತ್ತಾ ದೇವರ ಈ ಆಜ್ಞಾವಿಧಿಗೆ ಕೈತೋರಿಸಿದನು: “ನನಗೆ ಯಜ್ಞವು ಬೇಡ ಕರುಣೆಯೇ ಬೇಕು.” (ಮತ್ತಾಯ 9:10-13; 12:1-7; ಹೋಶೇಯ 6:6) ತನ್ನ ಶುಶ್ರೂಷೆಯ ಕೊನೆಯಲ್ಲಿ ಯೇಸುವಂದದ್ದು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ.”—ಮತ್ತಾಯ 23:23.
2 ಯೇಸು ಕರುಣೆಯನ್ನು ಅತಿ ಪ್ರಾಮುಖ್ಯವಾದ ಗುಣವಾಗಿ ಪರಿಗಣಿಸಿದನೆಂಬುದು ನಿಸ್ಸಂದೇಹ. ಆತನು ತನ್ನ ಹಿಂಬಾಲಕರಿಗೆ ಅಂದದ್ದು: “ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರ ನೀವೂ ಕರುಣೆಯುಳ್ಳವರಾಗಿರಿ.” (ಲೂಕ 6:36, NIBV) ಆದರೂ ಈ ವಿಷಯದಲ್ಲಿ ‘ದೇವರನ್ನು ಅನುಸರಿಸುವವರಾಗಲು’ ನಿಜ ಕರುಣೆ ಏನೆಂಬುದನ್ನು ನಾವು ತಿಳಿಯುವುದು ಅಗತ್ಯ. (ಎಫೆಸ 5:1) ಅಷ್ಟಲ್ಲದೆ, ಕರುಣೆ ತೋರಿಸುವುದರ ಪ್ರಯೋಜನಗಳನ್ನು ಗಣ್ಯಮಾಡುವುದರಿಂದ ಈ ಗುಣವನ್ನು ನಮ್ಮ ಜೀವನದಲ್ಲಿ ಅಧಿಕ ಪೂರ್ಣವಾಗಿ ತೋರಿಸಲು ನಾವು ಪ್ರಚೋದಿಸಲ್ಪಡುವೆವು.
ಕೊರತೆಯಿರುವವರಿಗೆ ಕರುಣೆದೋರುವುದು
3 ಕೀರ್ತನೆಗಾರನು ಹಾಡಿದ್ದು: “ಯೆಹೋವನು ದಯೆಯೂ ಕನಿಕರವೂ ಉಳ್ಳವನು; ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ. ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.” (ಕೀರ್ತನೆ 145:8, 9) ಯೆಹೋವನು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ” ಆಗಿದ್ದಾನೆ. (2 ಕೊರಿಂಥ 1:3) ಯಾರನ್ನಾದರೂ ಕನಿಕರದಿಂದ ಉಪಚರಿಸುವ ಮೂಲಕ ಕರುಣೆಯನ್ನು ತೋರಿಸಲಾಗುತ್ತದೆ. ದೇವರ ವ್ಯಕ್ತಿತ್ವದ ಮಹತ್ತಾದ ಅಂಶವೇ ಕರುಣೆಯಾಗಿದೆ. ಆತನ ಮಾದರಿ ಮತ್ತು ಉಪದೇಶಗಳು ನಿಜ ಕರುಣೆ ಏನೆಂಬುದನ್ನು ನಮಗೆ ಕಲಿಸಬಲ್ಲವು.
4 ಯೆಶಾಯ 49:15ರಲ್ಲಿ ದಾಖಲಿಸಲ್ಪಟ್ಟಂತೆ ಯೆಹೋವನು ಹೀಗನ್ನುತ್ತಾನೆ: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ಮರೆತಾಳೇ?” ಯೆಹೋವನನ್ನು ಕರುಣೆಗೆ ಪ್ರೇರಿಸುವ ಭಾವನೆಯನ್ನು ತಾಯಿಯೊಬ್ಬಳು ತನ್ನ ಮೊಲೆಗೂಸಿನ ಕಡೆಗೆ ಸಹಜವಾಗಿ ತೋರಿಸುವ ಹೃತ್ಪೂರ್ವಕ ಭಾವನೆಗೆ ಹೋಲಿಸಲಾಗಿದೆ. ಪ್ರಾಯಶಃ ಮಗು ಹಸಿದಿದೆ ಅಥವಾ ಅದಕ್ಕೆ ಬೇರೆ ಏನೋ ಬೇಕಾಗಿದೆ. ಕನಿಕರ ಮತ್ತು ಅನುತಾಪದ ಭಾವನೆಗಳಿಂದ ಪ್ರೇರಿತಳಾಗಿ ತಾಯಿ ತನ್ನ ಕೂಸಿನ ಅಗತ್ಯಗಳನ್ನು ಪೂರೈಸಲು ಧಾವಿಸುತ್ತಾಳೆ. ಯೆಹೋವನಿಗೂ ತಾನು ಕರುಣೆತೋರಿಸುವವರ ಕಡೆಗೆ ಅಂಥ ಕೋಮಲವಾದ ಭಾವನೆಗಳಿವೆ.
5 ಇತರರ ಕಡೆಗೆ ಕರುಣೆಯಿರುವುದು ಪ್ರಶಂಸಾರ್ಹ, ಆದರೆ ಕೊರತೆಯಿರುವವರಿಗೆ ಪ್ರಯೋಜನವಾಗುವಂತೆ ಕರುಣೆಯನ್ನು ಕ್ರಿಯೆಯಲ್ಲಿ ತೋರಿಸುವುದು ಹೆಚ್ಚು ಪ್ರಶಂಸಾರ್ಹ. ಸುಮಾರು 3,500 ವರ್ಷಗಳ ಹಿಂದೆ ತನ್ನ ಆರಾಧಕರು ಐಗುಪ್ತದಲ್ಲಿ ದಾಸ್ಯದಲ್ಲಿದ್ದಾಗ ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನೆಂಬುದನ್ನು ಗಮನಿಸಿರಿ. ಅವನು ಮೋಶೆಗೆ ಹೇಳಿದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ . . . ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ.” (ವಿಮೋಚನಕಾಂಡ 3:7, 8) ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆಮಾಡಿದ ಸುಮಾರು 500 ವರ್ಷಗಳ ಅನಂತರ ಯೆಹೋವನು ಅವರಿಗೆ ಜ್ಞಾಪಕ ಹುಟ್ಟಿಸಿದ್ದು: “ನೀವು ಐಗುಪ್ತ್ಯರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ.” (1 ಸಮುವೇಲ 10:18) ದೇವರ ನೀತಿಯ ಮಟ್ಟಗಳಿಂದ ದೂರತೊಲಗಿದ್ದ ಕಾರಣ ಇಸ್ರಾಯೇಲ್ಯರು ಆಗಿಂದಾಗ್ಗೆ ಕಡು ಸಂಕಟವನ್ನು ಅನುಭವಿಸಿದರು. ಆದರೂ ಯೆಹೋವನು ಅವರಿಗೆ ಕನಿಕರ ತೋರಿಸಿ ಪದೇ ಪದೇ ಅವರನ್ನು ದುಸ್ಥಿತಿಯಿಂದ ಪಾರುಗೊಳಿಸಿದನು. (ನ್ಯಾಯಸ್ಥಾಪಕರು 2:11-16; 2 ಪೂರ್ವಕಾಲವೃತ್ತಾಂತ 36:15) ಪ್ರೀತಿಪರನಾದ ದೇವರು ಕೊರತೆಯುಳ್ಳವರಿಗೆ, ಅಪಾಯದಲ್ಲಿರುವವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತಾನೆಂದು ಇದು ಚೆನ್ನಾಗಿ ದೃಷ್ಟಾಂತಿಸುತ್ತದೆ. ಯೆಹೋವನು “ಕರುಣಾನಿಧಿಯಾಗಿರುವ ದೇವರು” ನಿಶ್ಚಯ.—ಎಫೆಸ 2:4.
6 ಯೇಸು ಕ್ರಿಸ್ತನು ಭೂಮಿಯಲ್ಲಿರುವಾಗ ಕರುಣೆಯನ್ನು ತೋರಿಸುವುದರಲ್ಲಿ ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸಿದನು. “ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಇಬ್ಬರು ಕುರುಡರು ಕೂಗಿ ಬೇಡಿಕೊಂಡಾಗ ಯೇಸು ಹೇಗೆ ಸ್ಪಂದಿಸಿದನು? ತಮಗೆ ದೃಷ್ಟಿಯನ್ನು ಅದ್ಭುತಕರವಾಗಿ ಕೊಡಬೇಕೆಂದು ಅವರು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಯೇಸು ಅವರನ್ನು ವಾಸಿಮಾಡಿದನು ಆದರೆ ಅನುಕಂಪರಹಿತವಾಗಿ ಅಲ್ಲ. “ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣುಬಂದವು” ಎಂದು ಬೈಬಲು ಹೇಳುತ್ತದೆ. (ಮತ್ತಾಯ 20:30-34) ಕನಿಕರವು ಯೇಸು ಅನೇಕ ಅದ್ಭುತಗಳನ್ನು ಮಾಡುವಂತೆ ಪ್ರಚೋದಿಸಿ ಕುರುಡರಿಗೆ, ದೆವ್ವಪೀಡಿತರಿಗೆ, ಕುಷ್ಠರೋಗಿಗಳಿಗೆ ಮತ್ತು ರೋಗಪೀಡಿತ ಮಕ್ಕಳ ಹೆತ್ತವರಿಗೆ ಪರಿಹಾರವನ್ನು ತಂದಿತು.—ಮತ್ತಾಯ 9:27; 15:22; 17:15; ಮಾರ್ಕ 5:18, 19; ಲೂಕ 17:12, 13.
7 ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಮಾದರಿಗಳು ಕರುಣೆಯಲ್ಲಿ ಎರಡು ಅಂಶಗಳಿವೆ ಎಂಬುದನ್ನು ತೋರಿಸುತ್ತವೆ—ಕೊರತೆಯಲ್ಲಿರುವವರ ಕಡೆಗೆ ಕನಿಕರ, ಅನುಕಂಪ, ಅಥವಾ ದಯೆಯ ಭಾವನೆ ಉಳ್ಳವರಾಗಿರುವುದು ಮತ್ತು ಅವರಿಗೆ ಪರಿಹಾರವನ್ನು ತರುವಂಥ ಕ್ರಿಯೆಗಳನ್ನು ಮಾಡುವುದು. ಕರುಣೆಯುಳ್ಳವರಾಗಿರುವುದರಲ್ಲಿ ಈ ಎರಡೂ ಅಂಶಗಳು ಸೇರಿರುವುದು ಆವಶ್ಯಕ. ದೇವರ ವಾಕ್ಯದಲ್ಲಿ ಕರುಣೆಯು ಹೆಚ್ಚಾಗಿ ಕೊರತೆಯುಳ್ಳವರಿಗೆ ಸಹಾಯಕೊಡುವ ರೀತಿಯಲ್ಲಿ ದಯೆತೋರಿಸುವುದಕ್ಕೆ ಸೂಚಿತವಾಗಿದೆ. ಆದರೆ ಒಂದು ನ್ಯಾಯಾಂಗ ಪ್ರಕರಣದಲ್ಲಿ ಕರುಣೆಯನ್ನು ಹೇಗೆ ತೋರಿಸಲಾಗುತ್ತದೆ? ತಪ್ಪಿಗೆ ಶಿಕ್ಷೆ ಕೊಡದೆ ಇರುವ ಮೂಲಕವೋ?
ಪಾಪಿಗಳ ಕಡೆಗೆ ಕರುಣೆ
8 ಪುರಾತನ ಇಸ್ರಾಯೇಲಿನ ಅರಸನಾದ ದಾವೀದನು ಬತ್ಷೆಬೆಯೊಂದಿಗೆ ನಡಿಸಿದ ವ್ಯಭಿಚಾರದ ಸಂಬಂಧದಲ್ಲಿ ಪ್ರವಾದಿಯಾದ ನಾತಾನನು ದಾವೀದನನ್ನು ಮುಖಾಮುಖಿಯಾಗಿ ಎದುರಿಸಿದ ಬಳಿಕ ಏನಾಯಿತೆಂದು ಗಮನಿಸಿರಿ. ದಾವೀದನು ಪಶ್ಚಾತ್ತಾಪಪಟ್ಟು ಹೀಗೆಂದು ಪ್ರಾರ್ಥಿಸಿದನು: “ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನಿನಗೇ ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವದನ್ನೇ ಮಾಡಿದ್ದೇನೆ.”—ಕೀರ್ತನೆ 51:1-4.
9 ದಾವೀದನು ತನ್ನ ತಪ್ಪಿಗಾಗಿ ಹೃದಯದಾಳದಿಂದ ಪಶ್ಚಾತ್ತಾಪಪಟ್ಟನು. ಆದುದರಿಂದ ಯೆಹೋವನು ಅವನ ಪಾಪವನ್ನು ಕ್ಷಮಿಸಿ ಅವನಿಗೆ ಮತ್ತು ಬತ್ಷೆಬೆಗೆ ಸಲ್ಲತಕ್ಕ ಶಿಕ್ಷೆಗಿಂತ ಕಡಿಮೆ ಶಿಕ್ಷೆಯನ್ನು ವಿಧಿಸಿದನು. ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನೋಡುವುದಾದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕಿತ್ತು. (ಧರ್ಮೋಪದೇಶಕಾಂಡ 22:22) ಅವರಿಗೆ ತಮ್ಮ ಪಾಪದ ಸಕಲ ಕೆಟ್ಟ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಅವರ ಜೀವಗಳು ಉಳಿಸಲ್ಪಟ್ಟವು. (2 ಸಮುವೇಲ 12:13) ದೇವರ ಕರುಣೆಯಲ್ಲಿ ಪಾಪಕ್ಷಮೆಯು ಒಳಗೂಡಿರುತ್ತದೆ. ಆದರೂ ತಕ್ಕದಾದ ಶಿಕ್ಷೆಯನ್ನು ವಿಧಿಸುವುದರಿಂದ ಆತನು ತಡೆದುಹಿಡಿಯುವುದಿಲ್ಲ.
10 ‘ಒಬ್ಬ ಮನುಷ್ಯನಿಂದಲೇ [ಆದಾಮ] ಪಾಪವು ಲೋಕದೊಳಗೆ ಸೇರಿದ್ದರಿಂದ’ ಮತ್ತು ‘ಪಾಪವು ಕೊಡುವ ಸಂಬಳ ಮರಣ’ ಆಗಿರುವುದರಿಂದ ಮನುಷ್ಯರೆಲ್ಲರೂ ಮರಣಕ್ಕೆ ಅರ್ಹರಾಗಿರುತ್ತಾರೆ. (ರೋಮಾಪುರ 5:12; 6:23) ಯೆಹೋವನು ಶಿಕ್ಷೆ ವಿಧಿಸುವಾಗ ಕರುಣೆಯನ್ನು ತೋರಿಸುತ್ತಾನೆ ಎಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ಆದರೂ ದೇವರ ಕರುಣೆಯನ್ನು ಹಗುರವೆಂದೆಣಿಸಿ ಉಪೇಕ್ಷಿಸದಂತೆ ನಾವು ಜಾಗರೂಕರಾಗಿರಬೇಕು. “ಆತನು [ಯೆಹೋವನು] ನಡಿಸುವದೆಲ್ಲಾ ನ್ಯಾಯ” ಎಂದು ಹೇಳುತ್ತದೆ ಧರ್ಮೋಪದೇಶಕಾಂಡ 32:4. ಕರುಣೆಯನ್ನು ತೋರಿಸುವುದರಲ್ಲಿ ದೇವರು ತನ್ನ ನ್ಯಾಯದ ಪರಿಪೂರ್ಣ ಮಟ್ಟಗಳನ್ನು ಮಾತ್ರ ಅಲಕ್ಷ್ಯಮಾಡುವುದಿಲ್ಲ.
11 ದಾವೀದ ಮತ್ತು ಬತ್ಷೆಬೆಯ ಪ್ರಕರಣದಲ್ಲಾದರೊ ಮರಣ ಶಿಕ್ಷೆಯ ತೀರ್ಪನ್ನು ಕಡಿಮೆಗೊಳಿಸುವ ಮುಂಚೆ ಅವರ ಪಾಪಗಳು ಕ್ಷಮಿಸಲ್ಪಡಲೇ ಬೇಕಾದ ಅಗತ್ಯವಿತ್ತು. ಇಸ್ರಾಯೇಲ್ಯ ನ್ಯಾಯಸ್ಥಾಪಕರಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರವಿರಲಿಲ್ಲ. ಒಂದುವೇಳೆ ಈ ಪ್ರಕರಣದ ನ್ಯಾಯತೀರಿಸುವಿಕೆಯು ಅವರಿಗೆ ಬಿಡಲ್ಪಟ್ಟಿದ್ದಲ್ಲಿ, ಮರಣ ಶಿಕ್ಷೆಯನ್ನು ವಿಧಿಸುವುದಲ್ಲದೆ ಬೇರೆ ಯಾವ ಮಾರ್ಗವೂ ಅವರಿಗೆ ಇದ್ದಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರವು ಮರಣ ಶಿಕ್ಷೆಯನ್ನೇ ಅವಶ್ಯಪಡಿಸಿತ್ತು. ಆದರೂ ದಾವೀದನೊಂದಿಗೆ ಮಾಡಿದ್ದ ಒಡಂಬಡಿಕೆಯ ಕಾರಣ, ಅವನ ಪಾಪಕ್ಷಮೆಗೆ ಯಾವುದಾದರೂ ಕಾರಣವಿತ್ತೊ ಎಂದು ನೋಡಲು ಯೆಹೋವನು ಬಯಸಿದನು. (2 ಸಮುವೇಲ 7:12-16) ಆದುದರಿಂದ “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಮತ್ತು “ಹೃದಯವನ್ನು ಶೋಧಿಸುವವನೂ” ಆಗಿರುವ ಯೆಹೋವ ದೇವರು ತಾನೇ ಆ ಪ್ರಕರಣವನ್ನು ನಿರ್ವಹಿಸಲು ಆರಿಸಿಕೊಂಡನು. (ಆದಿಕಾಂಡ 18:25; 1 ಪೂರ್ವಕಾಲವೃತ್ತಾಂತ 29:17) ದಾವೀದನ ಹೃದಯವನ್ನು ಸೂಕ್ಷ್ಮವಾಗಿ ಶೋಧಿಸಿ ತಿಳುಕೊಳ್ಳಲು, ಅವನ ಪಶ್ಚಾತ್ತಾಪದ ಯಥಾರ್ಥತೆಯನ್ನು ತೂಗಿನೋಡಲು ಮತ್ತು ಕ್ಷಮಾಪಣೆಯನ್ನು ನೀಡಲು ದೇವರು ಶಕ್ತನಿದ್ದನು.
12 ಬಾಧ್ಯತೆಯಾಗಿ ಹೊಂದಿದ ಪಾಪದ ಸಂಬಳವಾದ ಮರಣದಿಂದ ನಮ್ಮನ್ನು ಬಿಡುಗಡೆ ಮಾಡುವುದಕ್ಕಾಗಿ ಯೆಹೋವನು ತೋರಿಸುವ ಕರುಣೆಯು ಆತನ ನ್ಯಾಯಕ್ಕೆ ಹೊಂದಿಕೆಯಲ್ಲಿದೆ. ತನ್ನ ನ್ಯಾಯದ ಮಟ್ಟವನ್ನು ಉಲ್ಲಂಘಿಸದೇ ಪಾಪಕ್ಷಮೆಯನ್ನು ಸಾಧ್ಯಗೊಳಿಸಲಿಕ್ಕಾಗಿ ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನ ವಿಮೋಚನಾ ಯಜ್ಞವನ್ನು ನಮಗಾಗಿ ಏರ್ಪಡಿಸಿದನು. ಇದು ಕರುಣೆಯ ಅತ್ಯಂತ ಮಹತ್ತಮ ಅಭಿವ್ಯಕ್ತಿಯಾಗಿದೆ. (ಮತ್ತಾಯ 20:28; ರೋಮಾಪುರ 6:22, 23) ಬಾಧ್ಯತೆಯಾಗಿ ಬಂದ ಪಾಪದ ಶಿಕ್ಷೆಯಾದ ಮರಣದಿಂದ ನಮ್ಮನ್ನು ವಿಮೋಚಿಸಬಲ್ಲ ದೇವರ ಕರುಣೆಯು ನಮಗೆ ಪ್ರಯೋಜನ ತರಬೇಕಾದರೆ, ನಾವು ‘ಆತನ ಮಗನಲ್ಲಿ ನಂಬಿಕೆಯನ್ನು ಇಡಲೇಬೇಕು.’—ಯೋಹಾನ 3:16, 36.
ಕರುಣೆಯೂ ನ್ಯಾಯವೂ ಉಳ್ಳ ದೇವರು
13 ನಾವು ಮೇಲೆ ಚರ್ಚಿಸಿದ ಪ್ರಕಾರ ಯೆಹೋವನ ಕರುಣೆಯು ಆತನ ನ್ಯಾಯದ ಮಟ್ಟವನ್ನು ಉಲ್ಲಂಘಿಸುವುದಿಲ್ಲವಾದರೂ, ಅದು ಅವನ ನ್ಯಾಯವನ್ನು ಯಾವುದೋ ವಿಧದಲ್ಲಿ ತಪ್ಪಾಗಿ ಪ್ರಭಾವಿಸುತ್ತದೋ? ಅಂದರೆ ಕರುಣೆಯು ಮಧ್ಯೆ ಪ್ರವೇಶಿಸುವ ಮೂಲಕ ದೈವಿಕ ನ್ಯಾಯದ ಪೂರ್ಣ ಪ್ರಭಾವವು ಕಡಿಮೆಯಾಗುತ್ತದೋ? ಇಲ್ಲ, ಕಡಿಮೆಯಾಗುವುದಿಲ್ಲ.
14 ಪ್ರವಾದಿಯಾದ ಹೋಶೇಯನ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: “ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿನ್ಯಾಯಪ್ರೀತಿದಯೆಗಳಿಂದ ನಿನ್ನನ್ನು ವರಿಸುವೆನು.” (ಹೋಶೇಯ 2:19) ಈ ಮಾತುಗಳು ಸ್ಪಷ್ಟವಾಗಿ ತೋರಿಸುತ್ತವೆ ಏನಂದರೆ ಯೆಹೋವನ ಕರುಣೆಯು ನ್ಯಾಯವನ್ನು ಸೇರಿಸಿ ಯಾವಾಗಲೂ ಆತನ ಇತರ ಗುಣಗಳಿಗೂ ಹೊಂದಿಕೆಯಲ್ಲಿದೆ. ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು, . . . ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ಯೆಹೋವನು ಕರುಣೆಯೂ ದಯೆಯೂ ಉಳ್ಳ ದೇವರು. ಆತನ ಕುರಿತು ಬೈಬಲ್ ಹೇಳುವುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ.” (ಧರ್ಮೋಪದೇಶಕಾಂಡ 32:4) ದೇವರ ಕರುಣೆಯು ಹೇಗೊ ಹಾಗೆ ಆತನ ನ್ಯಾಯವೂ ಪರಿಪೂರ್ಣವಾಗಿದೆ. ಅವು ಒಂದು ಇನ್ನೊಂದಕ್ಕಿಂತ ಶ್ರೇಷ್ಠವಲ್ಲ ಮತ್ತು ತಮ್ಮ ಪ್ರಭಾವವನ್ನು ಕಡಿಮೆಗೊಳಿಸಲು ಅವುಗಳಲ್ಲಿ ಒಂದಕ್ಕೆ ಇನ್ನೊಂದರ ಅಗತ್ಯವೂ ಇಲ್ಲ. ಬದಲಿಗೆ ಎರಡೂ ಗುಣಗಳು ಪರಸ್ಪರವಾಗಿ ಪರಿಪೂರ್ಣ ಹೊಂದಿಕೆಯಲ್ಲಿ ಕಾರ್ಯನಡಿಸುತ್ತವೆ.
15 ಯೆಹೋವನ ನ್ಯಾಯವು ಕಠೋರವಲ್ಲ. ನ್ಯಾಯಶಾಸ್ತ್ರದಲ್ಲಿ ಬಹುಮಟ್ಟಿಗೆ ಯಾವಾಗಲೂ ನ್ಯಾಯಾಂಗ ಕಟ್ಟಳೆಗಳು ಸೇರಿರುತ್ತವೆ ಮತ್ತು ಸಾಮಾನ್ಯವಾಗಿ ತಪ್ಪಿತಸ್ಥರಿಗೆ ತಕ್ಕದಾದ ಶಿಕ್ಷೆ ವಿಧಿಸುವುದನ್ನು ತೀರ್ಪು ಅವಶ್ಯಪಡಿಸುತ್ತದೆ. ಆದರೆ ದೈವಿಕ ನ್ಯಾಯದಲ್ಲಾದರೊ ಯೋಗ್ಯರಾದವರಿಗೆ ರಕ್ಷಣೆ ಸಹ ಒಳಗೂಡಿರಬಲ್ಲದು. ಉದಾಹರಣೆಗೆ, ಸೊದೋಮ್ ಗೊಮೋರ ಪಟ್ಟಣಗಳ ದುಷ್ಟಜನರು ನಾಶಗೊಳಿಸಲ್ಪಟ್ಟಾಗ, ಮೂಲಪಿತೃವಾದ ಲೋಟನು ಮತ್ತು ಅವನ ಇಬ್ಬರು ಕುಮಾರ್ತೆಯರು ರಕ್ಷಿಸಲ್ಪಟ್ಟರು.—ಆದಿಕಾಂಡ 19:12-26.
16 ಅಂತೆಯೇ, ಸದ್ಯದ ದುಷ್ಟ ವ್ಯವಸ್ಥೆಯ ಮೇಲೆ ಯೆಹೋವನು ತೀರ್ಪನ್ನು ಜಾರಿಗೊಳಿಸುವಾಗ, “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿ”ರುವ ಸತ್ಯಾರಾಧಕರ “ಮಹಾಸಮೂಹ” ರಕ್ಷಿಸಲ್ಪಡುವುದು. ಹೀಗೆ ಅವರು ‘ಮಹಾ ಸಂಕಟದಿಂದ’ ಪಾರಾಗುವರು.—ಪ್ರಕಟನೆ 7:9-14.
ಕರುಣೆಯುಳ್ಳವರಾಗಿರಬೇಕು ಯಾಕೆ?
17 ನಿಜ ಕರುಣೆ ಎಂದರೇನು ಎಂಬುದನ್ನು ಯೆಹೋವನ ಮತ್ತು ಯೇಸು ಕ್ರಿಸ್ತನ ಮಾದರಿಗಳು ನಿಶ್ಚಯವಾಗಿಯೂ ನಮಗೆ ಕಲಿಸುತ್ತವೆ. ನಾವು ಕರುಣೆಯುಳ್ಳವರಾಗಿರಲಿಕ್ಕಾಗಿ ಒಂದು ಮೂಲಭೂತ ಕಾರಣವನ್ನು ಕೊಡುತ್ತಾ ಜ್ಞಾನೋಕ್ತಿ 19:17 ಹೇಳುವುದು: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು.” ನಮ್ಮ ಪರಸ್ಪರ ಸಂಬಂಧಗಳಲ್ಲಿ ಒಬ್ಬರಿಗೊಬ್ಬರು ಕರುಣೆ ತೋರಿಸುವ ಮೂಲಕ ಆತನ ಮತ್ತು ಕ್ರಿಸ್ತನ ಮಾದರಿಯನ್ನು ಅನುಸರಿಸುವಾಗ ಯೆಹೋವನಿಗೆ ಸಂತೋಷವಾಗುತ್ತದೆ. (1 ಕೊರಿಂಥ 11:1) ಕರುಣೆ ತೋರಿಸುವುದು ಇತರರು ಸಹ ಕರುಣೆ ತೋರಿಸುವಂತೆ ಪ್ರೋತ್ಸಾಹಿಸುತ್ತದೆ.—ಲೂಕ 6:38.
18 ಕರುಣೆಯಲ್ಲಿ ಅನೇಕ ಒಳ್ಳೆಯ ಗುಣಗಳು ಒಂದುಗೂಡಿರುತ್ತವೆ. ಉಪಕಾರಶೀಲತೆ, ಪ್ರೀತಿ, ದಯೆ ಮತ್ತು ಒಳ್ಳೇತನವು ಅದರಲ್ಲಿವೆ. ಕರುಣೆಯ ಕ್ರಿಯೆಗಳಿಗೆ ಪ್ರಚೋದನೆ ಕೊಡುವಂಥದ್ದು ಕನಿಕರ ಅಥವಾ ಅನುತಾಪದ ಕೋಮಲ ಭಾವನೆಗಳೇ. ದೇವರ ಕರುಣೆಯು ನ್ಯಾಯದ ವಿಷಯದಲ್ಲಿ ರಾಜಿಮಾಡದಿದ್ದರೂ, ಯೆಹೋವನು ದೀರ್ಘಶಾಂತನಾಗಿದ್ದಾನೆ ಮತ್ತು ಕೆಟ್ಟವರು ಪಶ್ಚಾತ್ತಾಪಪಡುವಂತೆ ತಾಳ್ಮೆಯಿಂದ ಸಾಕಷ್ಟು ಸಮಯವನ್ನು ಕೊಡುತ್ತಾನೆ. (2 ಪೇತ್ರ 3:9, 10) ಹೀಗೆ ಕರುಣೆಯು ತಾಳ್ಮೆ ಮತ್ತು ದೀರ್ಘಶಾಂತಿಗೆ ಸಂಬಂಧಿಸಿದಂಥ ಗುಣವಾಗಿದೆ. ದೇವರಾತ್ಮದ ಫಲದ ವಿವಿಧ ಅಂಶಗಳೂ ಸೇರಿದಂತೆ ಅನೇಕ ಅಪೇಕ್ಷಣೀಯ ಗುಣಗಳು ಕರುಣೆಯಲ್ಲಿ ಒಂದುಗೂಡಿರಲಾಗಿ, ಅದು ಈ ಗುಣಗಳನ್ನು ಬೆಳೆಸಿಕೊಳ್ಳಬಹುದಾದ ಆಧಾರಕಟ್ಟಾಗಿ ಪರಿಣಮಿಸುತ್ತದೆ. (ಗಲಾತ್ಯ 5:22, 23) ಆದುದರಿಂದ ನಾವು ಇತರರಿಗೆ ಕರುಣೆಯನ್ನು ತೋರಿಸಲು ಶ್ರಮಿಸುವುದು ಅದೆಷ್ಟು ಪ್ರಾಮುಖ್ಯ!
“ಕರುಣೆಯುಳ್ಳವರು ಧನ್ಯರು”
19 ಕರುಣೆಯನ್ನು ನಮ್ಮ ಜೀವನದಲ್ಲಿ ಒಂದು ಅತ್ಯಾವಶ್ಯಕ ಗುಣವಾಗಿ ಏಕೆ ಮಾಡಬೇಕೆಂದು ಶಿಷ್ಯ ಯಾಕೋಬನು ನಮಗೆ ತಿಳಿಸುತ್ತಾನೆ. ಅವನು ಬರೆದದ್ದು: “ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ.” (ಯಾಕೋಬ 2:13ಬಿ) ಯೆಹೋವನ ಆರಾಧಕನೊಬ್ಬನು ಇತರರ ಕಡೆಗೆ ತೋರಿಸುವ ಕರುಣೆಯ ಕುರಿತು ಯಾಕೋಬನು ಮಾತಾಡುತ್ತಿದ್ದನು. “ಪ್ರತಿಯೊಬ್ಬನು ತನ್ನ ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕಕೊಡ”ಬೇಕಾದ ಸಮಯವು ಬರುವಾಗ ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ. ಹೇಗಂದರೆ ಯೆಹೋವನು ಅವನ ಕರುಣೆಯ ಕ್ರಿಯೆಗಳನ್ನು ಆಗ ಪರಿಗಣಿಸುತ್ತಾನೆ ಮತ್ತು ತನ್ನ ಮಗನ ವಿಮೋಚನಾ ಯಜ್ಞದ ಆಧಾರದ ಮೇಲೆ ಅವನನ್ನು ಕ್ಷಮಿಸುತ್ತಾನೆ. (ರೋಮಾಪುರ 14:12) ಬತ್ಷೆಬೆಯೊಂದಿಗೆ ಗೈದ ಪಾಪಕ್ಕಾಗಿ ದಾವೀದನಿಗೆ ಕರುಣೆಯು ತೋರಿಸಲ್ಪಟ್ಟ ಒಂದು ಕಾರಣವು ಅವನು ಸ್ವತಃ ಕರುಣೆಯುಳ್ಳ ಪುರುಷನಾಗಿದ್ದದ್ದೇ ಎಂಬುದಕ್ಕೆ ಸಂದೇಹವಿಲ್ಲ. (1 ಸಮುವೇಲ 24:4-7) ಇನ್ನೊಂದು ಕಡೆ, “ಕರುಣೆತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ.” (ಯಾಕೋಬ 2:13ಎ) “ಕರುಣೆಯಿಲ್ಲದವರು” ದೇವರ ದೃಷ್ಟಿಯಲ್ಲಿ “ಮರಣಕ್ಕೆ ಪಾತ್ರರೆಂದು” ಗುರುತಿಸಲ್ಪಟ್ಟಿರುವುದರಲ್ಲಿ ಆಶ್ಚರ್ಯವೇನಿಲ್ಲ!—ರೋಮಾಪುರ 1:31, 32.
20 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಅಂದದ್ದು: “ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.” (ಮತ್ತಾಯ 5:7) ಯಾರು ದೇವರ ಕರುಣೆಯನ್ನು ಕೋರುತ್ತಾರೊ ಅವರು ಸ್ವತಃ ಕರುಣೆ ತೋರಿಸುವವರಾಗಿ ಇರಬೇಕೆಂದು ಈ ಮಾತುಗಳು ಎಷ್ಟು ಬಲವತ್ತಾಗಿ ತೋರಿಸುತ್ತವೆ! ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಕರುಣೆಯನ್ನು ಅಭ್ಯಾಸಿಸಸಾಧ್ಯವಿದೆ ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು. (w07 9/15)
ನೀವೇನನ್ನು ಕಲಿತಿರಿ?
• ಕರುಣೆ ಎಂದರೇನು?
• ಕರುಣೆಯನ್ನು ಯಾವ ವಿಧಗಳಲ್ಲಿ ತೋರಿಸಲಾಗುತ್ತದೆ?
• ಯೆಹೋವನು ಕರುಣೆಯೂ ನ್ಯಾಯವೂ ಉಳ್ಳ ದೇವರಾಗಿರುವುದು ಹೇಗೆ?
• ನಾವು ಕರುಣೆಯುಳ್ಳವರಾಗಿರಬೇಕು ಏಕೆ?
[ಅಧ್ಯಯನ ಪ್ರಶ್ನೆಗಳು]
1, 2. ಕರುಣೆಯು ಒಂದು ಅಪೇಕ್ಷಣೀಯ ಗುಣವೆಂದು ಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ಹಾಗೂ ತನ್ನ ಹಿಂಬಾಲಕರಿಗೆ ಯೇಸು ನುಡಿದ ಮಾತುಗಳು ಹೇಗೆ ತೋರಿಸುತ್ತವೆ?
3. ನಿಜ ಕರುಣೆ ಏನೆಂಬುದನ್ನು ಕಲಿಯಲಿಕ್ಕೆ ನಾವು ಯೆಹೋವನನ್ನು ಏಕೆ ಪರಿಗಣಿಸಬೇಕು?
4. ಕರುಣೆಯ ಕುರಿತಾಗಿ ಯೆಶಾಯ 49:15 ನಮಗೆ ಏನನ್ನು ಕಲಿಸುತ್ತದೆ?
5. ಯೆಹೋವನು ತಾನು ‘ಕರುಣಾನಿಧಿಯಾದ’ ದೇವರೆಂದು ಇಸ್ರಾಯೇಲ್ಯರಿಗೆ ತೋರಿಸಿದ್ದು ಹೇಗೆ?
6. ಕರುಣೆ ತೋರಿಸುವುದರಲ್ಲಿ ಯೇಸು ಕ್ರಿಸ್ತನು ತನ್ನ ತಂದೆಯನ್ನು ಅನುಕರಿಸಿದ್ದು ಹೇಗೆ?
7. ಯೆಹೋವ ದೇವರ ಮತ್ತು ಆತನ ಪುತ್ರನ ಮಾದರಿಗಳು ಕರುಣೆಯ ಕುರಿತು ನಮಗೆ ಏನನ್ನು ಕಲಿಸುತ್ತವೆ?
8, 9. ಬತ್ಷೆಬೆಯೊಂದಿಗೆ ನಡಿಸಿದ ಪಾಪಕೃತ್ಯದ ಬಳಿಕ ದಾವೀದನಿಗೆ ತೋರಿಸಲಾದ ಕರುಣೆಯಲ್ಲಿ ಏನು ಒಳಗೂಡಿತ್ತು?
10. ಶಿಕ್ಷೆ ವಿಧಿಸುವುದರಲ್ಲಿ ಯೆಹೋವನು ಕರುಣೆಯುಳ್ಳವನಾಗಿದ್ದರೂ, ಆತನ ಕರುಣೆಯನ್ನು ನಾವು ಹಗುರವೆಂದು ಎಣಿಸಬಾರದೇಕೆ?
11. ಬತ್ಷೆಬೆಯೊಂದಿಗೆ ದಾವೀದನು ನಡಿಸಿದ ಪಾಪಕ್ಕೆ ತೀರ್ಪುಮಾಡುವಾಗ ಯೆಹೋವನು ನ್ಯಾಯಕ್ಕೆ ತಕ್ಕದಾದ ಪರಿಗಣನೆ ತೋರಿಸಿದ್ದು ಹೇಗೆ?
12. ಪಾಪಿಗಳಾದ ಮನುಷ್ಯರು ದೇವರ ಕರುಣೆಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು?
13, 14. ದೇವರ ಕರುಣೆಯು ಆತನ ನ್ಯಾಯದ ಪ್ರಭಾವವನ್ನು ಕಡಿಮೆಗೊಳಿಸುತ್ತದೋ? ವಿವರಿಸಿರಿ.
15, 16. (ಎ) ದೈವಿಕ ನ್ಯಾಯವು ಕಠೋರವಲ್ಲ ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಯೆಹೋವನು ಈ ದುಷ್ಟ ವಿಷಯ ವ್ಯವಸ್ಥೆಯ ಮೇಲೆ ನಾಶನ ತರುವಾಗ ಆತನ ಆರಾಧಕರಿಗೆ ಯಾವ ಖಾತ್ರಿ ಇರಬಲ್ಲದು?
17. ಕರುಣೆಯುಳ್ಳವರಾಗಿರುವುದಕ್ಕೆ ಒಂದು ಮೂಲಭೂತ ಕಾರಣ ಯಾವುದು?
18. ನಾವು ಕರುಣೆಯುಳ್ಳವರಾಗಿರಲು ಶ್ರಮಿಸಬೇಕು ಏಕೆ?
19, 20. ಯಾವ ರೀತಿಯಲ್ಲಿ ಕರುಣೆಯು ನ್ಯಾಯತೀರ್ಮಾನವನ್ನು ಜಯಿಸಿ ಹಿಗ್ಗುತ್ತದೆ?
[ಪುಟ 9ರಲ್ಲಿರುವ ಚಿತ್ರ]
ಕೊರತೆಯುಳ್ಳವರಿಗಾಗಿ ಯೆಹೋವನ ಕೋಮಲಭಾವವು ತಾಯಿ ತನ್ನ ಮಗುವಿಗೆ ತೋರಿಸುವ ಕೋಮಲಭಾವದಂತಿದೆ
[ಪುಟ 12ರಲ್ಲಿರುವ ಚಿತ್ರ]
ದಾವೀದನಿಗೆ ಕರುಣೆಯನ್ನು ತೋರಿಸಿದ ಮೂಲಕ ಯೆಹೋವನು ತನ್ನ ನ್ಯಾಯವನ್ನು ಉಲ್ಲಂಘಿಸಿದನೋ?