ಈ ದಿನದ ವರೆಗೂ ಯೆಹೋವನಿಂದ ಕಲಿಸಲ್ಪಡುವುದು
“ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ.”—ಯೆಶಾಯ 50:4.
1, 2. (ಎ) ಯಾವ ವಿಷಯಕ್ಕಾಗಿ ಯೆಹೋವನು ತನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಯನ್ನು ಸಿದ್ಧಗೊಳಿಸಿದನು, ಮತ್ತು ಫಲಿತಾಂಶವು ಏನಾಗಿತ್ತು? (ಬಿ) ಯೇಸು ತನ್ನ ಬೋಧನೆಗಳ ಮೂಲವನ್ನು ಹೇಗೆ ಅಂಗೀಕರಿಸಿದನು?
ಯೆಹೋವ ದೇವರು ತಾನು ಒಬ್ಬ ತಂದೆಯಾದಾಗಿನಿಂದ ಒಬ್ಬ ಶಿಕ್ಷಕನಾಗಿದ್ದಾನೆ. ತನ್ನ ಮಕ್ಕಳಲ್ಲಿ ರ್ನಿಷ್ಟರಾದ ಕೆಲವರು ದಂಗೆಯೆದ್ದ ಸ್ವಲ್ಪ ಸಮಯದ ನಂತರ, ತನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿ, ತನ್ನ ಜ್ಯೇಷ್ಠಪುತ್ರನನ್ನು ಭೂಮಿಯ ಮೇಲೆ ಶುಶ್ರೂಷೆಗಾಗಿ ಆತನು ಸಿದ್ಧಪಡಿಸಿದನು. (ಜ್ಞಾನೋಕ್ತಿ 8:30) ಈ ವಿದ್ಯಾರ್ಥಿಯು ಹೀಗೆ ಹೇಳುವುದಾಗಿ ಯೆಶಾಯ 50 ನೆಯ ಅಧ್ಯಾಯವು ಪ್ರವಾದನಾತ್ಮಕವಾಗಿ ಸಾದರಪಡಿಸುತ್ತದೆ: “ಬಳಲಿಹೋದವರನ್ನು ಮಾತುಗಳಿಂದ ಸುದಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ.” (ಯೆಶಾಯ 50:4) ಭೂಮಿಯ ಮೇಲಿದ್ದಾಗ ತನ್ನ ತಂದೆಯ ಬೋಧನೆಯನ್ನು ಅನ್ವಯಿಸಿದುದರ ಪರಿಣಾಮವಾಗಿ, ‘ಬಳಲಿಹೋದ ಮತ್ತು ಹೊರೆಹೊತ್ತ’ ಎಲ್ಲರಿಗೆ ಅವನು ವಿಶ್ರಾಂತಿಯ ಮೂಲನಾಗಿದ್ದನು.—ಮತ್ತಾಯ 11:28-30.
2 ಪ್ರಥಮ ಶತಮಾನದಲ್ಲಿ ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಅವನು ಕುರುಡರ ಕಣ್ಣುಗಳನ್ನು ತೆರೆದನು ಮತ್ತು ಸತ್ತವರನ್ನು ಸಹ ಎಬ್ಬಿಸಿದನು, ಆದರೂ ಅವನು ಪ್ರಧಾನವಾಗಿ ತನ್ನ ಸಮಕಾಲೀನರಿಂದ ಒಬ್ಬ ಬೋಧಕನೆಂದು ಗುರುತಿಸಲ್ಪಟ್ಟನು. ಅವನ ಹಿಂಬಾಲಕರು, ಅಷ್ಟೇ ಅಲ್ಲದೆ ಅವನ ವಿರೋಧಿಗಳು ಅವನನ್ನು ಹಾಗೆಂದು ಕರೆದರು. (ಮತ್ತಾಯ 8:19; 9:11; 12:38; 19:16; ಯೋಹಾನ 3:2) ತಾನು ಕಲಿಸಿದಂತಹ ವಿಷಯಕ್ಕಾಗಿ ಯೇಸು ಎಂದೂ ಕೀರ್ತಿಯನ್ನು ಪಡೆದುಕೊಳ್ಳಲಿಲ್ಲ, ಆದರೆ ದೀನನಾಗಿ ಅಂಗೀಕರಿಸಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು.” “ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿ” ದೆನು.—ಯೋಹಾನ 7:16; 8:28; 12:49.
ಆದರ್ಶಪ್ರಾಯ ಶಿಕ್ಷಕ ವಿದ್ಯಾರ್ಥಿ ಸಂಬಂಧ
3. ತಾನು ಯಾರಿಗೆ ಕಲಿಸುತ್ತಾನೊ, ಅವರಲ್ಲಿ ಯೆಹೋವನ ಆಸಕ್ತಿಯನ್ನು ಯೆಶಾಯನ ಪ್ರವಾದನೆಯು ಹೇಗೆ ಸೂಚಿಸುತ್ತದೆ?
3 ಒಬ್ಬ ಉತ್ಕೃಷ್ಟ ಶಿಕ್ಷಕನು ತನ್ನ ವಿದ್ಯಾರ್ಥಿಗಳಲ್ಲಿ ವೈಯಕ್ತಿಕವಾದ, ನಿಷ್ಠೆಯ ಮತ್ತು ಪ್ರೀತಿಯ ಆಸಕ್ತಿಯನ್ನು ವಹಿಸುತ್ತಾನೆ. ಯಾರಿಗೆ ಆತನು ಕಲಿಸುತ್ತಾನೊ ಅಂತಹವರ ಪ್ರತಿ ಯೆಹೋವ ದೇವರಿಗೆ ಆ ರೀತಿಯ ಆಸಕ್ತಿಯಿದೆ ಎಂದು ಯೆಶಾಯ 50 ನೆಯ ಅಧ್ಯಾಯವು ಪ್ರಕಟಿಸುತ್ತದೆ. ಪ್ರವಾದನೆಯು ಗಮನಿಸುವುದು: “ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ.” (ಯೆಶಾಯ 50:4) ಇಲ್ಲಿ ಬಳಸಲ್ಪಟ್ಟ ಭಾಷೆಯು, ತನ್ನ ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗುವಂತೆ ಬೆಳಗ್ಗೆ ಬೇಗನೆ ಅವರನ್ನು ಎಬ್ಬಿಸುವ ಒಬ್ಬ ಉಪದೇಶಕನನ್ನು ಸೂಚಿಸುತ್ತದೆ. ಪ್ರವಾದನೆಯ ಅನ್ವಯದ ಕುರಿತು ಮಾತಾಡುತ್ತಾ, ಒಬ್ಬ ಬೈಬಲ್ ಪಂಡಿತನು ಗಮನಿಸಿದ್ದು: “ವಿಚಾರವು ಏನಾಗಿದೆ ಎಂದರೆ, ವಿಮೋಚಕನಾಗಲಿರುವವನು . . . ಸಾಂಕೇತಿಕವಾಗಿ ಮಾತಾಡುವುದಾದರೆ, ದೇವರ ಶಾಲೆಯಲ್ಲಿ ಇರುವವನಾಗಿದ್ದು, ಅವನು ಇತರರಿಗೆ ಉಪದೇಶವನ್ನು ನೀಡಲು ಅರ್ಹನಾಗಲಿದ್ದನು. . . . ದೈವಿಕ ಬೋಧನೆಯ ಮೂಲಕ ಮೆಸ್ಸೀಯನು ಮಾನವ ಜಾತಿಯ ಉಪದೇಶಕನಾಗಲು ಉನ್ನತವಾಗಿ ಅರ್ಹನಾಗಲಿದ್ದನು.”
4. ತನ್ನ ತಂದೆಯ ಕಲಿಸುವಿಕೆಗೆ ಯೇಸು ಹೇಗೆ ಪ್ರತಿಕ್ರಿಯಿಸಿದನು?
4 ಆದರ್ಶಪ್ರಾಯವಾಗಿ ವಿದ್ಯಾರ್ಥಿಗಳು ತಮ್ಮ ಉಪದೇಶಕನ ಬೋಧನೆಗೆ ಪ್ರತಿಕ್ರಿಯಿಸುವವರಾಗಿದ್ದಾರೆ. ತನ್ನ ತಂದೆಯ ಬೋಧನೆಗೆ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅವನ ಪ್ರತಿಕ್ರಿಯೆಯು, ನಾವು ಯೆಶಾಯ 50:5 ರಲ್ಲಿ ಓದುವ ವಿಷಯಕ್ಕನುಗುಣವಾಗಿದೆ: “ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.” ಹೌದು, ಯೇಸು ಕಲಿಯಲು ಆತುರವುಳ್ಳವನಾಗಿದ್ದನು. ಅವನು, ನಾಣ್ಣುಡಿಯು ಹೇಳುವಂತೆ, ಮೈಯೆಲ್ಲ ಕಿವಿಯಾಗಿದ್ದನು. ಇನ್ನೂ ಹೆಚ್ಚಾಗಿ, ತಂದೆಯು ಅವನಿಂದ ಅಪೇಕ್ಷಿಸಿದ ಏನನ್ನಾದರೂ ಮಾಡಲು ಅವನು ಸಿದ್ಧನಾಗಿದ್ದನು. ಅವನು ದಂಗೆಕೋರನಾಗಿರಲಿಲ್ಲ; ಬದಲಿಗೆ ಅವನು ಹೇಳಿದ್ದು: “ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.”—ಲೂಕ 22:42.
5. (ಎ) ಭೂಮಿಯ ಮೇಲೆ ತಾನು ಅನುಭವಿಸಬೇಕಾಗಿದ್ದ ಕಷ್ಟಗಳ ಬಗ್ಗೆ ಯೇಸುವಿಗೆ ಮುಂಚಿತವಾಗಿಯೇ ತಿಳಿದಿತ್ತೆಂದು ಯಾವುದು ಸೂಚಿಸುತ್ತದೆ? (ಬಿ) ಯೆಶಾಯ 50:6 ರಲ್ಲಿರುವ ಪ್ರವಾದನೆಯು ಹೇಗೆ ನೆರವೇರಿತು?
5 ದೇವರ ಚಿತ್ತವನ್ನು ತಾನು ಮಾಡುವುದರ ಸಂಭಾವ್ಯ ಪರಿಣಾಮಗಳ ಬಗ್ಗೆ ಮಗನಿಗೆ ತಿಳಿಸಲಾಗಿತ್ತೆಂದು ಪ್ರವಾದನೆಯು ಸೂಚಿಸುತ್ತದೆ. ಕಲಿಸಲ್ಪಟ್ಟವನು ಏನನ್ನು ಹೇಳಿದನೊ ಅದರಿಂದ ಇದು ವ್ಯಕ್ತವಾಗುತ್ತದೆ: “ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ.” (ಯೆಶಾಯ 50:6) ಪ್ರವಾದನೆಯು ಸೂಚಿಸುವಂತೆ, ಭೂಮಿಯ ಮೇಲೆ ಯೇಸು ಕ್ರೂರವಾಗಿ ಉಪಚರಿಸಲ್ಪಟ್ಟನು. “ಆತನ ಮುಖದ ಮೇಲೆ ಉಗುಳಿ” ದರೆಂದು ಅಪೊಸ್ತಲ ಮತ್ತಾಯನು ಬರೆದನು. “ಕೆಲವರು ಆತನ ಕೆನ್ನೆಗೆ ಏಟುಹಾಕಿ” ದರು. (ಮತ್ತಾಯ 26:67) ಇದು ಸಾ.ಶ. 33ರ ಪಸ್ಕದ ರಾತ್ರಿಯಂದು ಧಾರ್ಮಿಕ ಮುಖಂಡರ ಮೂಲಕ ಸಂಭವಿಸಿತು. ಮರುದಿನ, ಸಾಯುವಂತೆ ಒಂದು ಕಂಬಕ್ಕೆ ತೂಗುಹಾಕುವ ಮೊದಲು ರೋಮನ್ ಸೈನಿಕರು ಅವನನ್ನು ನಿಷ್ಕರುಣೆಯಿಂದ ಹೊಡೆದಂತೆ, ಯೇಸು ಹೊಡೆಯುವವರಿಗೆ ತನ್ನ ಬೆನ್ನುಕೊಟ್ಟನು.—ಯೋಹಾನ 19:1-3, 16-23.
6. ಯೇಸು ತನ್ನ ಶಿಕ್ಷಕನಲ್ಲಿ ಭರವಸೆಯನ್ನು ಎಂದೂ ಕಳೆದುಕೊಳ್ಳಲಿಲ್ಲವೆಂದು ಯಾವುದು ತೋರಿಸುತ್ತದೆ, ಮತ್ತು ಅವನ ಭರವಸೆಯು ಹೇಗೆ ಬಹುಮಾನಿಸಲ್ಪಟ್ಟಿತು?
6 ಮುಂಚಿತವಾಗಿಯೇ ಚೆನ್ನಾಗಿ ಶಿಕ್ಷಣಪಡೆದ ಮಗನು, ತನ್ನ ಶಿಕ್ಷಕನಲ್ಲಿ ಎಂದೂ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಪ್ರವಾದನೆಗನುಸಾರ ಅವನು ಮುಂದೆ ಹೇಳುವ ವಿಷಯದಿಂದ ಇದು ತೋರಿಸಲ್ಪಟ್ಟಿದೆ: “ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು; ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ.” (ಯೆಶಾಯ 50:7) ತನ್ನ ಶಿಕ್ಷಕನ ಸಹಾಯದಲ್ಲಿದ್ದ ಯೇಸುವಿನ ಭರವಸೆಯು ಹೇರಳವಾಗಿ ಬಹುಮಾನಿಸಲ್ಪಟ್ಟಿತು. ಅವನ ತಂದೆ ಅವನಿಗೆ, ದೇವರ ಬೇರೆ ಎಲ್ಲ ಸೇವಕರಿಗಿಂತ ಶ್ರೇಷ್ಠವಾದ ಒಂದು ಸ್ಥಾನವನ್ನು ಕೊಟ್ಟು ಆಶೀರ್ವದಿಸುತ್ತಾ, ಅವನನ್ನು ಘನತೆಗೇರಿಸಿದನು. (ಫಿಲಿಪ್ಪಿ 2:5-11) ನಾವು ವಿಧೇಯತೆಯಿಂದ ಯೆಹೋವನ ಬೋಧನೆಗೆ ಕಿವಿಗೊಡುವುದಾದರೆ ಮತ್ತು “ವಿಮುಖ” ರಾಗದಿದ್ದರೆ, ನಮಗೂ ಮಹಾ ಆಶೀರ್ವಾದಗಳು ಕಾದಿವೆ. ಆ ಬೋಧನೆಯು ನಮ್ಮ ದಿನದ ವರೆಗೆ ಹೇಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂಬುದರ ಕಡೆಗೆ ಗಮನ ಹರಿಸೋಣ.
ಒಂದು ವಿಸ್ತೃತ ಬೋಧನಾ ಕಾರ್ಯಕ್ರಮ
7. ಭೂಮಿಯ ಮೇಲೆ ತನ್ನ ಕಲಿಸುವಿಕೆಯನ್ನು ಯೆಹೋವನು ಹೇಗೆ ಮುಂದುವರಿಸಿದ್ದಾನೆ?
7 ನಾವು ಈ ಮುಂಚೆ ಗಮನಿಸಿದಂತೆ, ಪ್ರಥಮ ಶತಮಾನದಲ್ಲಿ ದೈವಿಕ ಬೋಧನೆಯನ್ನು ಸಾಗಿಸಲು ಯೆಹೋವನು ತನ್ನ ಭೂಪ್ರತಿನಿಧಿಯಾದ ಯೇಸು ಕ್ರಿಸ್ತನನ್ನು ಉಪಯೋಗಿಸಿದನು. (ಯೋಹಾನ 16:27, 28) ತಾನು ಯಾರಿಗೆ ಕಲಿಸಿದನೊ ಅಂತಹವರಿಗೆ ಮಾದರಿಯನ್ನಿಡುತ್ತಾ, ಯೇಸು ಸತತವಾಗಿ ತನ್ನ ಬೋಧನೆಗೆ ಅಧಿಕಾರವೆಂಬಂತೆ ದೇವರ ವಾಕ್ಯದ ಕಡೆಗೆ ಕೈತೋರಿಸಿದನು. (ಮತ್ತಾಯ 4:4, 7, 10; 21:13; 26:24, 31) ತದನಂತರ ಇಂತಹ ಕಲಿಸಲ್ಪಟ್ಟವರ ಶುಶ್ರೂಷೆಯ ಮೂಲಕ ಯೆಹೋವನ ಬೋಧನೆಯು ಭೂಮಿಯಲ್ಲಿ ಸಾಗಿಸಲ್ಪಟ್ಟಿತು. “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ,” ಎಂದು ಯೇಸು ಅವರಿಗೆ ಆಜ್ಞಾಪಿಸಿದ್ದನ್ನು ಜ್ಞಾಪಿಸಿಕೊಳ್ಳಿ. (ಮತ್ತಾಯ 28:19, 20, ಓರೆಅಕ್ಷರಗಳು ನಮ್ಮವು.) ಶಿಷ್ಯರು ಮಾಡಲ್ಪಟ್ಟಾಗ, ಅವರು “ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯ” ಒಂದು ಭಾಗವಾದರು. (1 ತಿಮೊಥೆಯ 3:15) ಅವರು ವೈಯಕ್ತಿಕ ಸಭೆಗಳಾಗಿಯೂ ರೂಪಿಸಲ್ಪಟ್ಟರು, ಅಲ್ಲಿ ಅವರು ಯೆಹೋವನಿಂದ ಕಲಿಸಲ್ಪಟ್ಟರು. (ಅ. ಕೃತ್ಯಗಳು 14:23; 15:41; 16:5; 1 ಕೊರಿಂಥ 11:16) ಆ ವಿಧದಲ್ಲಿ ದೈವಿಕ ಬೋಧನೆಯು ನಮ್ಮ ದಿನದ ವರೆಗೂ ಮುಂದುವರಿದಿದೆಯೊ?
8. ಅಂತ್ಯವು ಬರುವ ಮೊದಲು ಭೂಮಿಯ ಮೇಲೆ ಸಾರುವ ಕೆಲಸವು ಹೇಗೆ ನಿರ್ದೇಶಿಸಲ್ಪಡುವುದೆಂದು ಯೇಸು ಸೂಚಿಸಿದನು?
8 ನಿಶ್ಚಯವಾಗಿಯೂ ಹೌದು! ತನ್ನ ಮರಣಕ್ಕೆ ಮೂರು ದಿನಗಳ ಮುಂಚೆ, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಮೊದಲು ಸಾರುವ ಒಂದು ಮಹಾ ಕಾರ್ಯವು ನಡೆಯುವುದೆಂದು ಯೇಸು ಮುಂತಿಳಿಸಿದನು. “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು,” ಎಂದು ಅವನು ಹೇಳಿದನು. ಯಾವುದರ ಮೂಲಕ ಈ ಲೋಕವ್ಯಾಪಕ ಸಾರುವ ಹಾಗೂ ಕಲಿಸುವ ಕಾರ್ಯಕ್ರಮವು ನಿರ್ದೇಶಿಸಲ್ಪಡುವುದೊ, ಆ ಸಾಧನವನ್ನು ವರ್ಣಿಸಲು ಯೇಸು ಮುಂದುವರಿದನು. ತನ್ನ ಸೇವಕರಿಗೆ ಆತ್ಮಿಕ ಆಹಾರವನ್ನು ಒದಗಿಸಲು ಒಂದು ಮಾಧ್ಯಮದಂತೆ ಅಥವಾ ಸಾಧನದಂತೆ ಕಾರ್ಯನಡಿಸಲಿದ್ದ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನ ಕುರಿತು ಅವನು ಮಾತಾಡಿದನು. (ಮತ್ತಾಯ 24:14, 45-47) ಭೂಮ್ಯಾದ್ಯಂತ ರಾಜ್ಯ ಅಭಿರುಚಿಗಳ ಮೇಲ್ವಿಚಾರಣೆ ಮಾಡಲು ಯೆಹೋವ ದೇವರು ಈ “ಆಳ”ನ್ನು ಉಪಯೋಗಿಸಿದ್ದಾನೆ.
9. ನಂಬಿಗಸ್ತನೂ ವಿವೇಕಿಯೂ ಆದ ಆಳಿನಲ್ಲಿ ಯಾರು ಒಳಗೊಂಡಿದ್ದಾರೆ?
9 ಇಂದು, ನಂಬಿಗಸ್ತನೂ ವಿವೇಕಿಯೂ ಆದ ಆಳು, ರಾಜ್ಯ ಬಾಧ್ಯಸ್ಥರ ಉಳಿಕೆಯವರಿಂದ ರಚಿಸಲ್ಪಟ್ಟಿದೆ. ಇವರು ಅಭಿಷಿಕ್ತ ಕ್ರೈಸ್ತರು, ಭೂಮಿಯ ಮೇಲೆ 1,44,000 ಮಂದಿಯಲ್ಲಿ ಉಳಿಕೆಯವರು. ಇವರು “ಕ್ರಿಸ್ತನವ”ರು ಮತ್ತು “ಅಬ್ರಹಾಮನ ಸಂತತಿಯವರೂ” ಆಗಿದ್ದಾರೆ. (ಗಲಾತ್ಯ 3:16, 29; ಪ್ರಕಟನೆ 14:1-3) ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ನೀವು ಹೇಗೆ ಗುರುತಿಸಬಲ್ಲಿರಿ? ವಿಶೇಷವಾಗಿ ಅವರು ಮಾಡುವ ಕೆಲಸದಿಂದ ಮತ್ತು ದೇವರ ವಾಕ್ಯವಾದ ಬೈಬಲಿಗೆ ಅವರ ಆಪ್ತ ನಿಷ್ಠೆಯಿಂದಲೇ.
10. ಯೆಹೋವನ ಬೋಧನೆಗಳನ್ನು ಪ್ರವರ್ಧಿಸಲು ಆಳು ವರ್ಗದ ಮೂಲಕ ಯಾವ ಸಾಧನಗಳು ಬಳಸಲ್ಪಡುತ್ತವೆ?
10 ಯೆಹೋವನು ಇಂದು ಈ “ಆಳ”ನ್ನು ಜನರಿಗೆ ಕಲಿಸುವ ತನ್ನ ಸಾಧನವಾಗಿ ಬಳಸುತ್ತಾನೆ. ಆ ಆಳು ವರ್ಗದವರು 1931 ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದರು. ಆಗಿನಿಂದ ಲಕ್ಷಾಂತರ ಜನರು ಅವರೊಂದಿಗೆ ಸೇರಿದ್ದಾರೆ ಮತ್ತು ಆ ಹೆಸರನ್ನು ಸ್ವೀಕರಿಸಿ, ದೇವರ ರಾಜ್ಯವನ್ನು ಘೋಷಿಸುವುದರಲ್ಲಿ ಜೊತೆಸೇರಿದ್ದಾರೆ. ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವದು ಎಂಬ ಈ ಪತ್ರಿಕೆಯು, ಕಲಿಸುವ ಕೆಲಸದಲ್ಲಿ “ಆಳಿ”ನ ಮೂಲಕ ಬಳಸಲ್ಪಡುವ ಪ್ರಧಾನ ಸಾಧನವಾಗಿದೆ. ಹಾಗಿದ್ದರೂ ಪುಸ್ತಕಗಳು, ಪುಸ್ತಿಕೆಗಳು, ಬ್ರೋಷರ್ಗಳು, ಕಿರುಹೊತ್ತಗೆಗಳು, ಮತ್ತು ಎಚ್ಚರ! ಪತ್ರಿಕೆಯನ್ನು ಸೇರಿಸಿ ಇತರ ಪ್ರಕಾಶನಗಳೂ ಉಪಯೋಗಿಸಲ್ಪಡುತ್ತವೆ.
11. ಯಾವ ಶಾಲೆಗಳನ್ನು “ಆಳು” ನಡೆಸಿದೆ, ಮತ್ತು ಈ ಶಾಲೆಗಳಲ್ಲಿ ಪ್ರತಿಯೊಂದು ಯಾವ ಉದ್ದೇಶವನ್ನು ಪೂರೈಸುತ್ತವೆ?
11 ಇದರ ಜೊತೆಗೆ “ಆಳು,” ಹಲವಾರು ಶಾಲೆಗಳನ್ನು ನಡೆಸುತ್ತದೆ. ಇವು ವಿದೇಶೀ ಮಿಷನೆರಿ ಸೇವೆಗೆ ಯುವ ಶುಶ್ರೂಷಕರನ್ನು ತಯಾರಿಸುವ ಐದು ತಿಂಗಳಿನ ಪಾಠಕ್ರಮವಾಗಿರುವ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಅನ್ನು ಮತ್ತು ವಿಶೇಷ ದೇವಪ್ರಭುತ್ವ ನೇಮಕಗಳಿಗೆ ಅವಿವಾಹಿತ ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ತರಬೇತುಗೊಳಿಸುವ ಎರಡು ತಿಂಗಳಿನ ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ ಪಾಠಕ್ರಮವನ್ನು ಒಳಗೊಳ್ಳುತ್ತವೆ. ರಾಜ್ಯ ಶುಶ್ರೂಷಾ ಶಾಲೆಯೂ ಇದೆ, ಅದರಲ್ಲಿ ಕ್ರೈಸ್ತ ಹಿರಿಯರು ಮತ್ತು ಶುಶ್ರೂಷಾ ಸೇವಕರು ತಮ್ಮ ಸಭಾ ಜವಾಬ್ದಾರಿಗಳ ವಿಷಯದಲ್ಲಿ ನಿಯತಕಾಲಿಕವಾಗಿ ಉಪದೇಶಿಸಲ್ಪಡುತ್ತಾರೆ. ಮತ್ತು ಪಯನೀಯರ್ ಸೇವಾ ಶಾಲೆಯೂ ಇದೆ. ಇದು, ತಮ್ಮ ಸಾರುವ ಚಟುವಟಿಕೆಯಲ್ಲಿ ಪೂರ್ಣ ಸಮಯದ ಸೌವಾರ್ತಿಕರು ಹೆಚ್ಚು ಕಾರ್ಯಸಾಧಕರಾಗುವಂತೆ ತಯಾರಿಸುತ್ತದೆ.
12. ಕಲಿಸುವ ಕಾರ್ಯಕ್ರಮದ ಒಂದು ಸಾಪ್ತಾಹಿಕ ವೈಶಿಷ್ಟ್ಯವು ಏನು?
12 ಲೋಕವ್ಯಾಪಕವಾಗಿ ಯೆಹೋವನ ಜನರ 75,500 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ನಡೆಸಲ್ಪಡುವ ವಾರದ ಐದು ಕೂಟಗಳು, ಈ ಕಲಿಸುವ ಕಾರ್ಯಕ್ರಮದ ಇನ್ನೊಂದು ವೈಶಿಷ್ಟ್ಯವಾಗಿದೆ. ಈ ಕೂಟಗಳಿಂದ ಸಾಧ್ಯವಾದಷ್ಟು ಪೂರ್ಣವಾಗಿ ನೀವು ಪ್ರಯೋಜನ ಪಡೆಯುತ್ತೀರೊ? ಕೊಡಲ್ಪಡುವ ಉಪದೇಶಕ್ಕೆ ನಿಮ್ಮ ಲಕ್ಷ್ಯದಿಂದ, ಸಾಂಕೇತಿಕವಾಗಿ ಹೇಳುವುದಾದರೆ, ದೇವರ ಶಾಲೆಯಲ್ಲಿ ನೀವು ನಿಜವಾಗಿಯೂ ಇರುವುದಾಗಿ ನಂಬುತ್ತೀರೆಂದು ತೋರಿಸುತ್ತೀರೊ? ನಿಮ್ಮ ಆತ್ಮಿಕ ಪ್ರಗತಿಯು ನಿಮಗೆ “ಶಿಕ್ಷಿತರ ನಾಲಿಗೆ” ಇದೆ ಎಂಬುದನ್ನು ಇತರರಿಗೆ ಸ್ಪಷ್ಟಪಡಿಸುತ್ತದೊ?—ಯೆಶಾಯ 50:4; 1 ತಿಮೊಥೆಯ 4:15, 16.
ಸಭಾ ಕೂಟಗಳಲ್ಲಿ ಕಲಿಸಲ್ಪಡುವುದು
13. (ಎ) ಇಂದು ಯೆಹೋವನು ತನ್ನ ಜನರಿಗೆ ಬೋಧನೆ ನೀಡುವ ಒಂದು ಪ್ರಾಮುಖ್ಯ ವಿಧ ಯಾವುದು? (ಬಿ) ಕಾವಲಿನಬುರುಜು ಪತ್ರಿಕೆಗಾಗಿ ನಮ್ಮ ಗಣ್ಯತೆಯನ್ನು ನಾವು ಹೇಗೆ ತೋರಿಸಬಲ್ಲೆವು?
13 ಕಾವಲಿನಬುರುಜು ಪತ್ರಿಕೆಯನ್ನು ಕಲಿಸುವ ಒಂದು ಸಹಾಯಕದಂತೆ ಬಳಸುತ್ತಾ, ಬೈಬಲಿನ ವಾರದ ಅಧ್ಯಯನದ ಮೂಲಕ ಯೆಹೋವನು ವಿಶೇಷವಾಗಿ ತನ್ನ ಜನರಿಗೆ ಕಲಿಸುತ್ತಾನೆ. ಈ ಕೂಟವನ್ನು ಯೆಹೋವನಿಂದ ಕಲಿಸಲ್ಪಡಲು ಸಾಧ್ಯವಿರುವ ಒಂದು ಸ್ಥಳವಾಗಿ ನೀವು ವೀಕ್ಷಿಸುತ್ತೀರೊ? ಯೆಶಾಯ 50:4 ಮೂಲಭೂತವಾಗಿ ಯೇಸುವಿಗೆ ಅನ್ವಯಿಸಿದರೂ, “ಶಿಕ್ಷಿತರ ನಾಲಿಗೆ” ಯನ್ನು ಪಡೆಯಲು, ದೇವರ ಒದಗಿಸುವಿಕೆಗಳ ಪ್ರಯೋಜನಗಳನ್ನು ಸ್ವತಃ ಪಡೆದುಕೊಳ್ಳುವವರೆಲ್ಲರಿಗೂ ಅದನ್ನು ಅನ್ವಯಿಸಸಾಧ್ಯವಿದೆ. ಕಾವಲಿನಬುರುಜು ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು ಪಡೆದಾದ ನಂತರ ಸಾಧ್ಯವಾದಷ್ಟು ಬೇಗನೆ ಓದುವುದು, ಅದನ್ನು ನೀವು ಮೌಲ್ಯವುಳ್ಳದ್ದೆಂದು ಎಣಿಸುತ್ತೀರೆಂದು ತೋರಿಸಬಲ್ಲ ಒಂದು ವಿಧವಾಗಿದೆ. ಆಮೇಲೆ, ಕಾವಲಿನಬುರುಜು ಪತ್ರಿಕೆಯು ಸಭೆಯಲ್ಲಿ ಅಭ್ಯಸಿಸಲ್ಪಡುವಾಗ, ಉಪಸ್ಥಿತರಿರುವ ಮೂಲಕ ಮತ್ತು ನಿಮ್ಮ ನಿರೀಕ್ಷೆಯ ಬಹಿರಂಗ ಘೋಷಣೆಯನ್ನು ಮಾಡಲು ಸಿದ್ಧರಾಗಿರುವ ಮೂಲಕವೂ ಯೆಹೋವನಿಗೆ ನಿಮ್ಮ ಗಣ್ಯತೆಯನ್ನು ನೀವು ತೋರಿಸಬಲ್ಲಿರಿ.—ಇಬ್ರಿಯ 10:23.
14. (ಎ) ಕೂಟಗಳಲ್ಲಿ ಹೇಳಿಕೆಗಳನ್ನು ಮಾಡುವುದು ಬಹಳ ಪ್ರಾಮುಖ್ಯವಾದ ಸುಯೋಗವಾಗಿದೆ ಏಕೆ? (ಬಿ) ಎಳೆಯರಿಂದ ಯಾವ ರೀತಿಯ ಹೇಳಿಕೆಗಳು ಬಹಳ ಉತ್ತೇಜನದಾಯಕವಾದವುಗಳು?
14 ಕೂಟಗಳಲ್ಲಿ ನಿಮ್ಮ ಹೇಳಿಕೆಗಳ ಮೂಲಕ ಯೆಹೋವನ ಮಹತ್ತರವಾದ ಕಲಿಸುವ ಕಾರ್ಯಕ್ರಮದಲ್ಲಿ ನಿಮಗೊಂದು ಭಾಗ ಇರಸಾಧ್ಯವೆಂಬುದನ್ನು ನೀವು ಗಣ್ಯಮಾಡುತ್ತೀರೊ? ಖಂಡಿತವಾಗಿ, ಕೂಟಗಳಲ್ಲಿ ಹೇಳಿಕೆಗಳನ್ನು ಮಾಡುವುದು ನಾವು ಒಬ್ಬರನ್ನೊಬ್ಬರು ‘ಪ್ರೀತಿ ಮತ್ತು ಸತ್ಕಾರ್ಯಗಳಿಗೆ’ ಪ್ರೇರೇಪಿಸಬಲ್ಲ ಒಂದು ಪ್ರಾಮುಖ್ಯ ವಿಧಾನವಾಗಿದೆ. (ಇಬ್ರಿಯ 10:24, 25) ಉಪದೇಶದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೂ ಒಂದು ಭಾಗವಿರಸಾಧ್ಯವೊ? ಹೌದು ಇರಸಾಧ್ಯವಿದೆ. ಎಳೆಯರಿಂದ ಬರುವ ಹೃತ್ಪೂರ್ವಕ ಹೇಳಿಕೆಗಳು ಅನೇಕವೇಳೆ ವೃದ್ಧರಿಗೆ ಉತ್ತೇಜನ ನೀಡುವಂಥವುಗಳಾಗಿವೆ. ಕೆಲವೊಮ್ಮೆ ನಮ್ಮ ಕೂಟಗಳಲ್ಲಿರುವ ಹೊಸ ವ್ಯಕ್ತಿಗಳು ಮಕ್ಕಳ ಹೇಳಿಕೆಗಳಿಂದ ಬೈಬಲಿನ ಸತ್ಯದಲ್ಲಿ ಅಧಿಕ ಗಂಭೀರವಾದ ಆಸಕ್ತಿಯನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಕೆಲವು ಎಳೆಯರು ತಮ್ಮ ಹೇಳಿಕೆಗಳನ್ನು ನೇರವಾಗಿ ಪ್ಯಾರಗ್ರಾಫ್ನಿಂದ ಓದುವುದನ್ನು ಅಥವಾ ತಮ್ಮ ಕಿವಿಯಲ್ಲಿ ಉತ್ತರವನ್ನು ಪಿಸುಪಿಸುಗುಟ್ಟುವ ಒಬ್ಬ ವಯಸ್ಕನು ಹೇಳಿದ ವಿಷಯವನ್ನು ಪುನಃ ಹೇಳುವುದನ್ನು ಒಂದು ರೂಢಿಯನ್ನಾಗಿ ಮಾಡಿಕೊಳ್ಳುತ್ತಾರೆ. ಹಾಗಿದ್ದರೂ ಅವರ ಹೇಳಿಕೆಗಳು ಚೆನ್ನಾಗಿ ತಯಾರಿಸಲ್ಪಡುವಾಗ, ಬಹಳ ಉತ್ತೇಜನದಾಯಕವಾಗಿರುತ್ತವೆ. ಹೇಳಿಕೆಗಳನ್ನು ಮಾಡುವಂತಹ ಸಂಗತಿಯು ನಮ್ಮ ಮಹಾ ಉಪದೇಶಕನಿಗೆ ಮತ್ತು ಕಲಿಸುವ ಆತನ ಉಚ್ಚ ಕಾರ್ಯಕ್ರಮಕ್ಕೆ ನಿಜವಾಗಿಯೂ ಘನತೆಯನ್ನು ತರುತ್ತದೆ.—ಯೆಶಾಯ 30:20, 21.
15. ಮಕ್ಕಳು ಹೆಚ್ಚು ಪರಿಣಾಮಕಾರಿಯಾಗಿ ಹೇಳಿಕೆಗಳನ್ನು ಮಾಡುವಂತೆ ನೆರವು ನೀಡಲು ಹೆತ್ತವರು ಏನು ಮಾಡಬಲ್ಲರು?
15 ನಮ್ಮ ದೇವರನ್ನು ಸುತ್ತಿಸುವುದರಲ್ಲಿ ಪಾಲ್ಗೋಳ್ಳಲು ಮಕ್ಕಳು ಬಯಸುವುದನ್ನು ನೋಡುವುದು ಒಂದು ಆನಂದವಾಗಿದೆ. ಎಳೆಯರಿಂದ ಬಂದ ಸುತ್ತಿಯ ಅಭಿವ್ಯಕ್ತಿಗಳನ್ನು ಯೇಸು ಗಣ್ಯಮಾಡಿದನು. (ಮತ್ತಾಯ 21:15, 16) ಒಬ್ಬ ಕ್ರೈಸ್ತ ಹಿರಿಯನು ಗಮನಿಸುವುದು: “ನಾನು ಮಗುವಾಗಿದ್ದಾಗ ಕಾವಲಿನಬುರುಜು ಅಭ್ಯಾಸದಲ್ಲಿ ಹೇಳಿಕೆಯನ್ನು ನೀಡಲು ನಾನು ಬಯಸಿದೆ. ಒಂದು ಹೇಳಿಕೆಯನ್ನು ತಯಾರಿಸಲು ನನಗೆ ಸಹಾಯ ಮಾಡಿದ ಮೇಲೆ ಆ ಹೇಳಿಕೆಯನ್ನು ಕಡಿಮೆಪಕ್ಷ ಏಳು ಬಾರಿ ರೂಢಿಮಾಡುವಂತೆ ನನ್ನ ತಂದೆಯು ಅವಶ್ಯಪಡಿಸಿದರು.” ಸಾಧ್ಯವಾದಲ್ಲಿ ನಿಮ್ಮ ಕುಟುಂಬ ಬೈಬಲ್ ಅಧ್ಯಯನದ ಸಮಯದಲ್ಲಿ, ಕಾವಲಿನಬುರುಜು ಪತ್ರಿಕೆಯಲ್ಲಿನ ಆಯ್ದ ಪ್ಯಾರಗ್ರಾಫ್ಗಳ ಮೇಲೆ ತಮ್ಮ ಸ್ವಂತ ಮಾತುಗಳಲ್ಲಿ ಹೇಳಿಕೆಗಳನ್ನು ತಯಾರಿಸುವಂತೆ ಹೆತ್ತವರಾದ ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡಬಲ್ಲಿರಿ. ಅವರಿಗೆ ಯೆಹೋವನ ಕಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಇರುವ ಮಹಾ ಸುಯೋಗವನ್ನು ಗಣ್ಯಮಾಡುವಂತೆ ಸಹಾಯ ಮಾಡಿರಿ.
16. ದೇವಪ್ರಭುತ್ವ ಶುಶ್ರೂಷಾ ಶಾಲೆಯ ಪ್ರಯೋಜನವೇನು, ಮತ್ತು ಯಾರು ಶಾಲೆಯಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಬಹುದು?
16 ಇತರ ಕ್ರೈಸ್ತ ಕೂಟಗಳಲ್ಲಿ ನೀಡಲ್ಪಡುವ ಬೋಧನೆಗೂ ಗಂಭೀರ ಪರಿಗಣನೆಯನ್ನು ನೀಡತಕ್ಕದ್ದು. ಇದು ಮಾಹಿತಿಯನ್ನು ನೀಡುವ ಸುಯೋಗವನ್ನು ಪಡೆದಿರುವವರಿಂದ ಮತ್ತು ಸಾದರಪಡಿಸಲ್ಪಟ್ಟ ಉಪದೇಶಕ್ಕೆ ಕಿವಿಗೊಡುವವರಿಂದ—ಇಬ್ಬರಿಂದಲೂ ಮಾಡಲ್ಪಡತಕ್ಕದ್ದು. ಈಗ 50 ಕ್ಕಿಂತಲೂ ಹೆಚ್ಚು ವರ್ಷಗಳಿಂದ, ರಾಜ್ಯದ ಸಂದೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾದರಪಡಿಸಲು ಲಕ್ಷಾಂತರ ಪುರುಷರಿಗೆ ಮತ್ತು ಸ್ತ್ರೀಯರಿಗೆ ತರಬೇತಿ ನೀಡಲಿಕ್ಕಾಗಿ, ಯೆಹೋವನು ವಾರದ ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ಉಪಯೋಗಿಸಿದ್ದಾನೆ. ಕ್ರೈಸ್ತ ತತ್ವಗಳೊಂದಿಗೆ ಹೊಂದಿಕೆಯಲ್ಲಿರುವ ಜೀವನವನ್ನು ಅವರು ನಡೆಸುವ ವರೆಗೆ, ಇತ್ತೀಚೆಗೆ ಕೂಟಗಳಿಗೆ ಹಾಜರಾಗಲು ತೊಡಗಿರುವ ಜನರನ್ನು ಸೇರಿಸಿ, ಸಭೆಯೊಂದಿಗೆ ಸಕ್ರಿಯವಾಗಿ ಸೇರಿ ಬರುವವರೂ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಬಹುದು.
17. (ಎ) ವಿಶೇಷವಾಗಿ ಯಾವ ಉದ್ದೇಶಕ್ಕಾಗಿ ಸಾರ್ವಜನಿಕ ಕೂಟವನ್ನು ಸ್ಥಾಪಿಸಲಾಯಿತು? (ಬಿ) ಸಾರ್ವಜನಿಕ ಭಾಷಣಕಾರರು ಮನಸ್ಸಿನಲ್ಲಿಡಬೇಕಾದ ವಿಷಯಗಳಾವುವು?
17 ಕಲಿಸುವ ಕಾರ್ಯಕ್ರಮದ ಮತ್ತೊಂದು ದೀರ್ಘಸಮಯದ ವೈಶಿಷ್ಟ್ಯವು ಸಾರ್ವಜನಿಕ ಕೂಟವಾಗಿದೆ. ಅದರ ಹೆಸರು ಸೂಚಿಸುವಂತೆ, ಈ ಕೂಟವನ್ನು ವಿಶೇಷವಾಗಿ ಸಾಕ್ಷಿಗಳಲ್ಲದವರಿಗೆ ಮೂಲಭೂತ ಬೈಬಲ್ ಬೋಧನೆಗಳನ್ನು ಪರಿಚಯಿಸಲು ಸ್ಥಾಪಿಸಲಾಗಿತ್ತು. ಹೀಗೆ ಭಾಷಣವನ್ನು ಕೊಡುತ್ತಿರುವವನು, ಸಂದೇಶವನ್ನು ಮೊದಲ ಬಾರಿ ಕೇಳುತ್ತಿರುವವರಿಗೆ ಅದು ಅರ್ಥವಾಗುವಂತೆ ಮಾಹಿತಿಯನ್ನು ಸಾದರಪಡಿಸುವ ಆವಶ್ಯಕತೆಯಿದೆ. ಸಾಕ್ಷಿಗಳಲ್ಲದವರಿಗೆ ಅರ್ಥವಾಗದೆ ಇರಬಹುದಾದ “ಬೇರೆ ಕುರಿಗಳು,” “ಸಹೋದರರು,” ಮತ್ತು “ಉಳಿಕೆಯವರು,” ಎಂಬಂತಹ ಪದಗಳನ್ನು ವಿವರಿಸುವುದನ್ನು ಇದು ಅರ್ಥೈಸುತ್ತದೆ. ಸಾರ್ವಜನಿಕ ಕೂಟವನ್ನು ಹಾಜರಾಗುವ ಜನರಲ್ಲಿ, ಇಂದಿನ ಸಮಾಜದಲ್ಲಿ ಅದು ಸ್ವೀಕಾರಾರ್ಹವಾಗಿದ್ದರೂ ಶಾಸ್ತ್ರಗಳಿಗೆ ತದ್ವಿರುದ್ಧವಾಗಿರುವ ನಂಬಿಕೆಗಳು ಅಥವಾ ಜೀವನ ಶೈಲಿಗಳಿರಬಹುದಾದರ್ದಿಂದ, ಭಾಷಣಕಾರನು ಯಾವಾಗಲೂ ಚಾತುರ್ಯದಿಂದ ನಡೆದುಕೊಳ್ಳಬೇಕು ಮತ್ತು ಅಂತಹ ನಂಬಿಕೆಗಳ ಅಥವಾ ಜೀವನ ಶೈಲಿಗಳ ಪರಿಹಾಸ್ಯವನ್ನು ಎಂದೂ ಮಾಡಬಾರದು.—ಹೋಲಿಸಿ 1 ಕೊರಿಂಥ 9:19-23.
18. ವಾರದಲ್ಲಿ ಬೇರೆ ಯಾವ ಸಭಾ ಕೂಟಗಳಿವೆ ಮತ್ತು ಅವು ಯಾವ ಉದ್ದೇಶಗಳನ್ನು ಪೂರೈಸುತ್ತವೆ?
18 ಸಭಾ ಪುಸ್ತಕ ಅಭ್ಯಾಸವು, ನಂಬಿಗಸ್ತನೂ ವಿವೇಕಿಯೂ ಆದ ಆಳಿನ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಕಾಶನಗಳನ್ನು ಪ್ರತಿ ವಾರ ಬೈಬಲಿನೊಂದಿಗೆ ಅಭ್ಯಸಿಸುವ ಒಂದು ಕೂಟವಾಗಿದೆ. ಸದ್ಯದಲ್ಲಿ ಅನೇಕ ದೇಶಗಳಲ್ಲಿ ಅಭ್ಯಸಿಸಲ್ಪಡುತ್ತಿರುವ ಪುಸ್ತಕವು ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಆಗಿದೆ. ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಶಿಷ್ಯರನ್ನು ಮಾಡುವುದರಲ್ಲಿ ಪೂರ್ಣ ಪಾಲನ್ನು ಹೊಂದಿರುವಂತೆ ಯೆಹೋವನ ಜನರನ್ನು ಸಿದ್ಧಮಾಡಲು ಸೇವಾ ಕೂಟವು ರಚಿಸಲ್ಪಟ್ಟಿದೆ.—ಮತ್ತಾಯ 28:19, 20; ಮಾರ್ಕ 13:10.
ಹೆಚ್ಚು ದೊಡ್ಡದಾದ ಕೂಟಗಳಲ್ಲಿ ಕಲಿಸಲ್ಪಡುವುದು
19. ಯಾವ ದೊಡ್ಡ ಕೂಟಗಳನ್ನು “ಆಳು,” ಪ್ರತಿ ವರ್ಷ ಏರ್ಪಡಿಸುತ್ತದೆ?
19 ಒಂದು ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ, ಸತ್ಯ ಕ್ರೈಸ್ತರ ಕಲಿಸುವಿಕೆ ಮತ್ತು ವಿಶೇಷ ಪ್ರೋತ್ಸಾಹನೆಗಾಗಿ ‘ನಂಬಿಗಸ್ತ ಆಳು,’ ಅಧಿವೇಶನಗಳನ್ನು ಮತ್ತು ಸಮ್ಮೇಳನಗಳನ್ನು ಏರ್ಪಡಿಸಿದೆ. ಈಗ ಪ್ರತಿ ವರ್ಷ ಅಂತಹ ಮೂರು ದೊಡ್ಡ ಕೂಟಗಳು ನಡೆಸಲ್ಪಡುತ್ತವೆ. ಒಂದು ಸರ್ಕಿಟನ್ನು ರಚಿಸುವ ಸಭೆಗಳ ಒಂದು ಗುಂಪು ಹಾಜರಾಗುವ ಒಂದು ದಿನದ ಸಮ್ಮೇಳನವಿದೆ. ವರ್ಷದಲ್ಲಿ ಪ್ರತಿಯೊಂದು ಸರ್ಕಿಟ್, ಸರ್ಕಿಟ್ ಸಮ್ಮೇಳನವೆಂದು ಕರೆಯಲ್ಪಡುವ ಎರಡು ದಿನದ ಕೂಟವನ್ನು ನಡೆಸುತ್ತದೆ. ಇದಕ್ಕೆ ಕೂಡಿಸಿ ಜಿಲ್ಲಾ ಅಧಿವೇಶನವೆಂದು ಕರೆಯಲ್ಪಡುವ ಒಂದು ಕೂಟವಿದೆ. ಹಲವಾರು ಸರ್ಕಿಟ್ಗಳು ಇದಕ್ಕೆ ಹಾಜರಾಗುತ್ತವೆ. ಸಾಮಯಿಕವಾಗಿ ಅಂತಾರಾಷ್ಟ್ರೀಯ ಅಧಿವೇಶನಗಳಿರಬಹುದು. ಅನೇಕ ದೇಶಗಳಿಂದ ಬರುವ ಅತಿಥಿ ಸಾಕ್ಷಿಗಳನ್ನೊಳಗೊಂಡ ಈ ದೊಡ್ಡ ಕೂಟಗಳು, ನಿಜವಾಗಿಯೂ ಯೆಹೋವನ ಜನರಿಗೆ ನಂಬಿಕೆಯನ್ನು ಬಲಪಡಿಸುವಂಥವುಗಳಾಗಿವೆ!—ಹೋಲಿಸಿ ಧರ್ಮೋಪದೇಶಕಾಂಡ 16:16.
20. ಯೆಹೋವನ ಸಾಕ್ಷಿಗಳ ದೊಡ್ಡ ಕೂಟಗಳಲ್ಲಿ ಯಾವ ವಿಷಯವು ಏಕರೂಪವಾಗಿ ಒತ್ತಿಹೇಳಲ್ಪಟ್ಟಿದೆ?
20 ಇಸವಿ 1922 ರಲ್ಲಿ ಸುಮಾರು 10,000 ಜನರು ಅಮೆರಿಕದ ಸೀಡರ್ ಪಾಯಿಂಟ್ ಓಹೈಯೊವಿನಲ್ಲಿ ಕೂಡಿಬಂದಾಗ, ಪ್ರತಿನಿಧಿಗಳು ಭಾಷಣಕಾರನ ಉತ್ತೇಜನದಿಂದ ಪ್ರೇರಿಸಲ್ಪಟ್ಟರು: “ಇದು ಎಲ್ಲಾ ದಿನಗಳ ದಿನ. ಅಗೋ, ನೋಡಿರಿ, ರಾಜನು ಆಳುತ್ತಾನೆ! ನೀವು ಅವನ ಪ್ರಕಟನೋದ್ಯೋಗಿಗಳು. ಆದುದರಿಂದ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ, ರಾಜ ಮತ್ತು ಅವನ ರಾಜ್ಯವನ್ನು.” ಇಂತಹ ದೊಡ್ಡ ಅಧಿವೇಶನಗಳು ಏಕರೂಪವಾಗಿ ಸಾರುವ ಕಾರ್ಯದ ಮೇಲೆ ಒತ್ತನ್ನು ಹಾಕಿವೆ. ಉದಾಹರಣೆಗೆ 1953 ರಲ್ಲಿ ನ್ಯೂ ಯಾರ್ಕ್ ಸಿಟಿಯಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ, ಎಲ್ಲ ಸಭೆಗಳಲ್ಲಿ ಮನೆಮನೆಯ ತರಬೇತು ಕಾರ್ಯಕ್ರಮದ ಸ್ಥಾಪನೆಯ ಬಗ್ಗೆ ಪ್ರಕಟನೆಯನ್ನು ಮಾಡಲಾಯಿತು. ಇದರ ಜಾರಿಗೊಳಿಸುವಿಕೆಯು ಅನೇಕ ದೇಶಗಳಲ್ಲಿ ರಾಜ್ಯವನ್ನು ಸಾರುವ ಕೆಲಸದ ಮೇಲೆ ಬಹಳ ಸಕಾರಾತ್ಮಕವಾದ ಪರಿಣಾಮವನ್ನು ಬೀರಿತ್ತು.
ಕಲಿಸುವಂತೆ ದೇವರಿಂದ ಕಲಿಸಲ್ಪಡುವುದು
21. ಯಾವ ಸುಯೋಗವನ್ನು, ಅದರ ಉದ್ದೇಶವನ್ನು ತಪ್ಪದೆ ಸ್ವೀಕರಿಸಲು ನಾವು ಬಯಸುತ್ತೇವೆ?
21 ಖಂಡಿತವಾಗಿಯೂ ಯೆಹೋವನಿಗೆ ಇಂದು ಭೂಮಿಯ ಮೇಲೆ ಒಂದು ಅದ್ಭುತವಾದ ಕಲಿಸುವ ಕಾರ್ಯಕ್ರಮವಿದೆ! ಅದರ ಲಾಭವನ್ನು ಪಡೆಯುವ ಎಲ್ಲರು ದೇವರಿಂದ ಕಲಿಸಲ್ಪಡಸಾಧ್ಯವಿದೆ, ಹೌದು, ಯಾರಿಗೆ “ಶಿಕ್ಷಿತರ ನಾಲಿಗೆ” ಕೊಡಲ್ಪಟ್ಟಿದೆಯೊ, ಅಂತಹವರ ಮಧ್ಯದಲ್ಲಿ ಇರಸಾಧ್ಯವಿದೆ. ಸಾಂಕೇತಿಕವಾಗಿ ಹೇಳುವುದಾದರೆ, ದೇವರ ಶಾಲೆಯಲ್ಲಿರುವುದು ಎಂತಹ ಒಂದು ಸುಯೋಗವಾಗಿದೆ! ಆದರೂ ಈ ಸುಯೋಗವನ್ನು ಸ್ವೀಕರಿಸುವಾಗ ಅದರ ಉದ್ದೇಶವನ್ನು ನಾವು ತಪ್ಪಬಾರದು. ಯೆಹೋವನು ಯೇಸುವಿಗೆ ಕಲಿಸಿದನು, ಇದರಿಂದ ಅವನು ಇತರರಿಗೆ ಕಲಿಸಸಾಧ್ಯವಾಯಿತು. ಮತ್ತು ಯೇಸು ತನ್ನ ಶಿಷ್ಯರಿಗೆ ಕಲಿಸಿದನು, ಇದರಿಂದ ಅವರು ಅವನು ಮಾಡುತ್ತಿದ್ದ ಅದೇ ಕೆಲಸವನ್ನು ಆದರೆ ಇನ್ನೂ ಅತಿದೊಡ್ಡ ಪ್ರಮಾಣದಲ್ಲಿ ಮಾಡಸಾಧ್ಯವಾಯಿತು. ತದ್ರೀತಿಯಲ್ಲಿ ಇತರರಿಗೆ ಕಲಿಸುವ ಉದ್ದೇಶಕ್ಕಾಗಿ ನಾವು ಯೆಹೋವನ ಮಹತ್ತರವಾದ ಕಲಿಸುವ ಕಾರ್ಯಕ್ರಮದಲ್ಲಿ ತರಬೇತುಗೊಳಿಸಲ್ಪಡುತ್ತಿದ್ದೇವೆ.—ಯೋಹಾನ 6:45; 14:12; 2 ಕೊರಿಂಥ 5:20, 21; 6:1; 2 ತಿಮೊಥೆಯ 2:2.
22. (ಎ) ಮೋಶೆ ಮತ್ತು ಯೆರೆಮೀಯರಿಗೆ ಯಾವ ಸಮಸ್ಯೆಯಿತ್ತು, ಮತ್ತು ಅದು ಹೇಗೆ ಬಗೆಹರಿಸಲ್ಪಟ್ಟಿತು? (ಬಿ) ರಾಜ್ಯದ ಸಾರುವಿಕೆಯು ಪೂರೈಸಲ್ಪಡುವಂತೆ ದೇವರು ನೋಡಿಕೊಳ್ಳುವನೆಂಬ ಯಾವ ಆಶ್ವಾಸನೆ ನಮಗಿರಸಾಧ್ಯ?
22 ನೀವು ಮೋಶೆಯಂತೆ “ನಾನು . . . ವಾಕಾತ್ಚುರ್ಯವಿಲ್ಲದವನು,” ಅಥವಾ ಯೆರೆಮೀಯನು ಹೇಳಿದಂತೆ “ನಾನು ಮಾತು ಬಲ್ಲವನಲ್ಲ” ಎಂದು ಹೇಳುತ್ತೀರೊ? ಯೆಹೋವನು ಅವರಿಗೆ ಸಹಾಯ ಮಾಡಿದಂತೆ ನಿಮಗೂ ಸಹಾಯ ಮಾಡುವನು. “ನಾನು ನಿನ್ನ ಬಾಯಿಗೆ ಸಹಾಯ” ವಾಗಿರುವೆನೆಂದು ಆತನು ಮೋಶೆಗೆ ಹೇಳಿದನು. ಮತ್ತು ಯೆರೆಮೀಯನಿಗೆ ಆತನು ಹೇಳಿದ್ದು: “ಅಂಜಬೇಡ . . . ನಾನೇ ನಿನ್ನೊಂದಿಗಿರುವೆನು.” (ವಿಮೋಚನಕಾಂಡ 4:10-12; ಯೆರೆಮೀಯ 1:6-8) ಧಾರ್ಮಿಕ ಮುಖಂಡರು ತನ್ನ ಶಿಷ್ಯರ ಬಾಯಿ ಮುಚ್ಚಿಸಲು ಬಯಸಿದಾಗ, ಯೇಸು ಹೇಳಿದ್ದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು.” (ಲೂಕ 19:40) ಆದರೆ ಕಲ್ಲುಗಳು ಆಗ ಕೂಗಬೇಕಾಗಿರಲಿಲ್ಲ, ಮತ್ತು ಈಗಲೂ ಅವುಗಳಿಗೆ ಕೂಗುವ ಅಗತ್ಯವಿಲ್ಲ ಯಾಕೆಂದರೆ ಆತನ ರಾಜ್ಯದ ಸಂದೇಶವನ್ನು ನೀಡಲು ಯೆಹೋವನು ತನ್ನ ಶಿಕ್ಷಿತರ ನಾಲಿಗೆಯನ್ನು ಉಪಯೋಗಿಸುತ್ತಿದ್ದಾನೆ.
ನೀವು ಉತ್ತರಿಸಬಲ್ಲಿರೊ?
◻ ಯೆಶಾಯ 50 ನೆಯ ಅಧ್ಯಾಯದಲ್ಲಿ ಯಾವ ಆದರ್ಶಪ್ರಾಯ ಶಿಕ್ಷಕ ವಿದ್ಯಾರ್ಥಿ ಸಂಬಂಧವು ಎತ್ತಿತೋರಿಸಲ್ಪಟ್ಟಿದೆ?
◻ ವಿಸ್ತಾರವಾದ ಕಲಿಸುವ ಕಾರ್ಯಕ್ರಮವನ್ನು ಯೆಹೋವನು ಹೇಗೆ ಮುಂದುವರಿಸಿದ್ದಾನೆ?
◻ ಯೆಹೋವನ ಕಲಿಸುವ ಕಾರ್ಯಕ್ರಮದ ಕೆಲವು ವೈಶಿಷ್ಟ್ಯಗಳಾವುವು?
◻ ಯೆಹೋವನ ಕಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ಅದ್ಭುತವಾದ ಸುಯೋಗವಾಗಿದೆ ಏಕೆ?
[ಪುಟ 16 ರಲ್ಲಿರುವ ಚಿತ್ರ]
ಮಕ್ಕಳ ಹೃತ್ಪೂರ್ವಕ ಹೇಳಿಕೆಗಳು ಅನೇಕವೇಳೆ ವೃದ್ಧರಿಗೆ ಉತ್ತೇಜನ ನೀಡುವಂಥವುಗಳಾಗಿವೆ