ವಾಚಕರಿಂದ ಪ್ರಶ್ನೆಗಳು
ಯೆಶಾಯ 53ನೆಯ ಅಧ್ಯಾಯದಲ್ಲಿ ಮೆಸ್ಸೀಯನ ಕುರಿತಾದ ಒಂದು ಪ್ರಸಿದ್ಧ ಪ್ರವಾದನೆಯಿದೆ. 10ನೆಯ ವಚನವು ಹೀಗನ್ನುತ್ತದೆ: “ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು [“ಆನಂದವಾಗಿತ್ತು,” NW]. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ”ದನು. ಇದರರ್ಥವೇನು?
ನಮ್ಮ ಕರುಣಾಳು ಹಾಗೂ ಕೋಮಲಸ್ವಭಾವದ ದೇವರು ಯಾರನ್ನೇ ಆಗಲಿ, ಜಜ್ಜಿಹಾಕಲು ಅಥವಾ ವ್ಯಾಧಿಯಿಂದ ಭಾದಿಸಲು ಸಂಕಲ್ಪ ಮಾಡುವ ಅಥವಾ ಆನಂದಿಸುವ ಸಂಗತಿಯನ್ನು ಸತ್ಯ ಕ್ರೈಸ್ತರು ಯೋಚಿಸಲೂ ಸಾಧ್ಯವಿಲ್ಲ. ಆದುದರಿಂದಲೇ ಯೆಶಾಯ 53:10ರ ಕುರಿತಾಗಿ ಈ ಪ್ರಶ್ನೆಯೇಳುತ್ತದೆ. ಆದರೆ ದೇವರು ನಿರ್ದೋಷಿ ವ್ಯಕ್ತಿಗಳನ್ನು ಪೀಡಿಸುವುದರಲ್ಲಿ ಆನಂದಿಸುವುದಿಲ್ಲವೆಂಬ ವಿಷಯದಲ್ಲಿ ಭರವಸೆಯನ್ನಿಡಲು ಬೈಬಲ್ ನಮಗೆ ಆಧಾರವನ್ನು ಕೊಡುತ್ತದೆ. (ಧರ್ಮೋಪದೇಶಕಾಂಡ 32:4; ಯೆರೆಮೀಯ 7:30, 31) ಈ ಎಲ್ಲ ಶತಮಾನಗಳಲ್ಲಿ ಯೆಹೋವನು ಕೆಲವೊಂದು ಸಂದರ್ಭಗಳಲ್ಲಿ ಕಷ್ಟಾನುಭವವನ್ನು ಅನುಮತಿಸಿದ್ದಿರಬಹುದು. ಆದರೆ ಆತನು ಹಾಗೆ ಮಾಡಲಿಕ್ಕಾಗಿದ್ದ ಕಾರಣಗಳು ಆತನ ವಿವೇಕ ಮತ್ತು ಪ್ರೀತಿಯೊಂದಿಗೆ ಹೊಂದಿಕೆಯಲ್ಲಿದ್ದವು. ಹೀಗಿದ್ದರೂ, ತನ್ನ ಪ್ರಿಯ ಮಗನಾದ ಯೇಸುವಿನ ಕಷ್ಟಾನುಭವವನ್ನು ಖಂಡಿತವಾಗಿಯೂ ಆತನು ಉಂಟುಮಾಡಿರಲಿಲ್ಲ. ಹಾಗಾದರೆ, ಆ ವಚನದ ನಿಜ ಅರ್ಥವೇನು?
ನಾವು ಆ ಇಡೀ ವಚನವನ್ನು ಪರಿಗಣಿಸುವುದಾದರೆ, ನಮಗೆ ಅದರ ಅರ್ಥವನ್ನು ತಿಳಿದುಕೊಳ್ಳಲು ಸಹಾಯಸಿಗುವುದು. ಆ ವಚನದಲ್ಲಿ “ಆನಂದ” (NW) ಎಂಬ ಪದವು ಎರಡು ಬಾರಿ ತೋರಿಬರುತ್ತದೆ. ಯೆಶಾಯ 53:10 ಹೀಗೆ ಹೇಳುತ್ತದೆ: “ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು [“ಆನಂದವಾಗಿತ್ತು,” NW]. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು—ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು, ನನ್ನ ಸಂಕಲ್ಪವು [“ಆನಂದವು,” NW] ಇವನ ಕೈಯಿಂದ ನೆರವೇರುವದು.”
ಆ ವಚನದ ಅಂತ್ಯದಲ್ಲಿ ತಿಳಿಸಲ್ಪಟ್ಟಿರುವ “ಯೆಹೋವನ ಆನಂದವು,” ಆತನು ತನ್ನ ರಾಜ್ಯದ ಮೂಲಕ ತನ್ನ ಉದ್ದೇಶವನ್ನು ನೆರವೇರಿಸುವುದರಲ್ಲಿ ಕೇಂದ್ರೀಕೃತವಾಗಿದೆಯೆಂದು ಇಡೀ ಬೈಬಲಿನಲ್ಲಿರುವ ಸಂದೇಶವು ಸೂಚಿಸುತ್ತದೆ. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವುದರಿಂದ ಆತನ ಪರಮಾಧಿಕಾರದ ನಿರ್ದೋಷೀಕರಣವಾಗುವುದು ಮಾತ್ರವಲ್ಲ, ವಿಧೇಯ ಮಾನವಕುಲವು ಬಾಧ್ಯತೆಯಾಗಿ ಪಡೆದ ಪಾಪದಿಂದ ಮಾತ್ರವಲ್ಲದೆ ಅದರ ಸ್ವಂತ ಪಾಪಗಳಿಂದ ಸಹ ಮುಕ್ತವಾಗುವುದು. (1 ಪೂರ್ವಕಾಲವೃತ್ತಾಂತ 29:11; ಕೀರ್ತನೆ 83:18; ಅ. ಕೃತ್ಯಗಳು 4:24; ಇಬ್ರಿಯ 2:14, 15; 1 ಯೋಹಾನ 3:8) ಇದೆಲ್ಲವು ಪೂರೈಸಲ್ಪಡಲಿಕ್ಕಾಗಿ, ದೇವರ ಮಗನು ಒಬ್ಬ ಮಾನವನಾಗಿ ಬಂದು, ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸುವುದು ಅತ್ಯಾವಶ್ಯಕವಾಗಿತ್ತು. ಮತ್ತು ಹೀಗೆ ಮಾಡುವಾಗ ಯೇಸು ತುಂಬ ಕಷ್ಟಾನುಭವಿಸಿದನು ಎಂಬುದು ನಮಗೆ ತಿಳಿದಿರುವ ಸಂಗತಿಯಾಗಿದೆ. “ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು” ಎಂದು ಬೈಬಲ್ ನಮಗೆ ಹೇಳುತ್ತದೆ. ಹಾಗಾದರೆ, ಆ ಕಷ್ಟಾನುಭವದಿಂದ ಯೇಸು ಖಂಡಿತವಾಗಿಯೂ ಪ್ರಯೋಜನವನ್ನು ಪಡೆದನು.—ಇಬ್ರಿಯ 5:7-9.
ತಾನು ಆಯ್ದುಕೊಳ್ಳುತ್ತಿರುವ ಮಾರ್ಗದಲ್ಲಿ ಯಾತನೆಯಿರುವುದೆಂದು ಯೇಸುವಿಗೆ ಮುಂಚೆಯೇ ತಿಳಿದಿತ್ತು. ಇದು ಯೋಹಾನ 12:23, 24ರಲ್ಲಿರುವ ಅವನ ಮಾತುಗಳಿಂದ ಸ್ಪಷ್ಟವಾಗಿ ಕಂಡುಬರುತ್ತದೆ: “ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು.” ಹೌದು, ತಾನು ಮರಣದ ವರೆಗೂ ಸಮಗ್ರತೆಯನ್ನು ಕಾಪಾಡಿಕೊಂಡು ಹೋಗಬೇಕಾಗುವುದು ಎಂಬ ಸಂಗತಿಯು ಯೇಸುವಿಗೆ ತಿಳಿದಿತ್ತು. ಆ ವೃತ್ತಾಂತವು ಮುಂದೆ ಹೇಳುವುದು: “ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು. ಆದರೆ ಇದಕ್ಕಾಗಿಯೇ ಈ ಕಾಲ ಸೇರಿದೆನು. ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಅದಕ್ಕೆ—ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು ಎಂದು ಆಕಾಶವಾಣಿಯಾಯಿತು.”—ಯೋಹಾನ 12:27, 28; ಮತ್ತಾಯ 26:38, 39.
ಈ ಪೂರ್ವಾಪರ ಮಾತುಗಳನ್ನು ಪರಿಗಣಿಸುವ ಮೂಲಕವೇ ನಾವು ಯೆಶಾಯ 53:10ನ್ನು ಅರ್ಥಮಾಡಿಕೊಳ್ಳಬಹುದು. ತನ್ನ ಮಗನು ಭೂಮಿಯ ಮೇಲಿರುವಾಗ, ಅವನು ಒಂದು ರೀತಿಯಲ್ಲಿ ಜಜ್ಜಲ್ಪಡುವನೆಂಬುದು ಯೆಹೋವನಿಗೆ ಚೆನ್ನಾಗಿ ತಿಳಿದಿತ್ತು. ಆದರೂ ಇದರಿಂದ ಫಲಿಸಲಿರುವ ಮಹಿಮಾಭರಿತವಾದ ಮತ್ತು ವಿಸ್ತೃತವಾದ ಒಳಿತನ್ನು ಮನಸ್ಸಿನಲ್ಲಿಟ್ಟುಕೊಂಡು, ಯೇಸು ಏನನ್ನು ಅನುಭವಿಸಲಿದ್ದನೊ ಅದರ ಕುರಿತಾಗಿ ಯೆಹೋವನು ಆನಂದಿಸಿದನು. ಮೆಸ್ಸೀಯನನ್ನು ‘ಜಜ್ಜುವುದು ಆತನ ಆನಂದವಾಗಿದ್ದದ್ದು’ ಇದೇ ಅರ್ಥದಲ್ಲಿ. ಮತ್ತು ಯೇಸು ಕೂಡ ತಾನು ಪೂರೈಸಸಾಧ್ಯವಿದ್ದ ಮತ್ತು ಆತನು ಪೂರೈಸಿಯೇ ಬಿಟ್ಟ ಸಂಗತಿಯಲ್ಲಿ ಆನಂದಿಸಿದನು. ಯೆಶಾಯ 53:10ರ ಕೊನೆಯಲ್ಲಿ ತಿಳಿಸುವಂತೆ, ನಿಜವಾಗಿಯೂ ‘ಯೆಹೋವನ ಸಂಕಲ್ಪವು ಇವನ ಕೈಯಿಂದ ನೆರವೇರಿತು.’