ಅಧ್ಯಯನ ಲೇಖನ 1
“ಚಿಂತೆ ಮಾಡಬೇಡ, ನಾನೇ ನಿನ್ನ ದೇವರು”
“ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು [“ಚಿಂತೆ ಮಾಡಬೇಡ,” NW] , ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.”—ಯೆಶಾ. 41:10.
ಗೀತೆ 23 ಯೆಹೋವನು ನಮ್ಮ ಬಲ
ಕಿರುನೋಟa
1-2. (ಎ) ಯೆಶಾಯ 41:10ರಲ್ಲಿರುವ ಸಂದೇಶ ಯೋಷಿಕೋ ಎಂಬ ಸಹೋದರಿ ಮೇಲೆ ಯಾವ ಪ್ರಭಾವ ಬೀರಿತು? (ಬಿ) ಆ ವಚನದಲ್ಲಿರುವ ಮಾತುಗಳಿಂದ ಯಾರು ಪ್ರಯೋಜನ ಪಡೆಯಬೇಕೆಂದು ಯೆಹೋವನು ಅದನ್ನು ಬರೆಸಿಟ್ಟಿದ್ದಾನೆ?
ಯೋಷಿಕೋ ಎಂಬ ನಂಬಿಗಸ್ತ ಸಹೋದರಿಗೆ ಒಂದು ದುಃಖದ ಸುದ್ದಿ ತಿಳಿಸಲಾಯಿತು. ಅವರಿನ್ನು ಕೆಲವೇ ತಿಂಗಳು ಬದುಕಿರುತ್ತಾರೆ ಎಂದು ಅವರ ಡಾಕ್ಟರ್ ಹೇಳಿದರು. ಇದಕ್ಕೆ ಯೋಷಿಕೋ ಹೇಗೆ ಪ್ರತಿಕ್ರಿಯಿಸಿದರು? ಅವರಿಗೆ ಇಷ್ಟವಾದ ವಚನ ಯೆಶಾಯ 41:10 ನೆನಪಾಯಿತು. (ಓದಿ.) ಆಮೇಲೆ ಅವರು ತಮ್ಮ ಡಾಕ್ಟರ್ಗೆ, ‘ನನಗೆ ಭಯ ಆಗುತ್ತಿಲ್ಲ. ಯಾಕೆಂದರೆ ಯೆಹೋವನು ನನ್ನ ಕೈ ಹಿಡುಕೊಂಡಿದ್ದಾನೆ’ ಅಂದರು.b ಈ ವಚನದಲ್ಲಿ ಸಿಗುವ ಸಾಂತ್ವನದಿಂದ ನಮ್ಮ ಪ್ರಿಯ ಸಹೋದರಿ ಯೆಹೋವನಲ್ಲಿ ಪೂರ್ಣ ಭರವಸೆ ಇಡಲು ಸಾಧ್ಯವಾಯಿತು. ತುಂಬ ಕಷ್ಟಕರವಾದ ಪರೀಕ್ಷೆಗಳನ್ನು ಎದುರಿಸುವಾಗ ಶಾಂತವಾಗಿರಲು ಆ ವಚನ ನಮಗೂ ಸಹಾಯ ಮಾಡುತ್ತದೆ. ಹೇಗೆ? ಇದನ್ನು ಅರ್ಥಮಾಡಿಕೊಳ್ಳಲು, ದೇವರು ಆ ಸಂದೇಶವನ್ನು ಯೆಶಾಯನಿಗೆ ಯಾಕೆ ತಿಳಿಸಿದನು ಎಂದು ಮೊದಲು ನೋಡೋಣ.
2 ಬಾಬೆಲಿಗೆ ಬಂಧಿವಾಸಿಗಳಾಗಿ ಹೋಗಲಿದ್ದ ಯೆಹೂದ್ಯರನ್ನು ಸಂತೈಸಲಿಕ್ಕಾಗಿ ಯೆಹೋವನು ಯೆಶಾಯನ ಮೂಲಕ ಆ ಮಾತುಗಳನ್ನು ಹೇಳಿದನು. ಬಾಬೆಲಿಗೆ ಹೋದ ಯೆಹೂದ್ಯರಿಗೆ ಮಾತ್ರ ಅಲ್ಲ, ನಂತರ ಬರುವ ತನ್ನ ಎಲ್ಲಾ ಜನರಿಗೆ ಈ ಮಾತುಗಳಿಂದ ಪ್ರಯೋಜನ ಆಗಲಿ ಎಂದು ಆತನು ತನ್ನ ವಾಕ್ಯದಲ್ಲಿ ಜೋಪಾನವಾಗಿ ಬರೆಸಿಟ್ಟಿದ್ದಾನೆ. (ಯೆಶಾ. 40:8; ರೋಮ. 15:4) ಹಿಂದೆಂದಿಗಿಂತ ಹೆಚ್ಚಾಗಿ ಈಗ ನಮಗೆ ಯೆಶಾಯನ ಪುಸ್ತಕದ ಮೂಲಕ ಸಿಗುವ ಪ್ರೋತ್ಸಾಹ ಬೇಕೇಬೇಕು. ಯಾಕೆಂದರೆ ನಾವಿಂದು ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ.—2 ತಿಮೊ. 3:1.
3. (ಎ) ಯೆಶಾಯ 41:10ರಲ್ಲಿ ಯಾವ ವಾಗ್ದಾನಗಳು ಇವೆ? (ಬಿ) ನಮಗೆ ಈ ವಾಗ್ದಾನಗಳು ಯಾಕೆ ಬೇಕು?
3 ಯೆಶಾಯ 41:10ರಲ್ಲಿ ಯೆಹೋವನು ನಮ್ಮ ನಂಬಿಕೆಯನ್ನು ಬಲಪಡಿಸಲು ಕೊಟ್ಟಿರುವ ಮೂರು ವಾಗ್ದಾನಗಳಿಗೆc ಈ ಲೇಖನದಲ್ಲಿ ಗಮನ ಕೊಡಲಿದ್ದೇವೆ. ಆ ಮೂರು ವಾಗ್ದಾನಗಳು ಯಾವುದೆಂದರೆ (1) ಯೆಹೋವನು ನಮ್ಮೊಂದಿಗೆ ಇರುತ್ತಾನೆ, (2) ಆತನೇ ನಮ್ಮ ದೇವರು ಮತ್ತು (3) ಆತನು ನಮಗೆ ಸಹಾಯ ಮಾಡುತ್ತಾನೆ. ನಮಗೆ ಈ ವಾಗ್ದಾನಗಳು ಬೇಕು. ಯಾಕೆಂದರೆ ಯೋಷಿಕೋ ತರ ನಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳು ಬರುತ್ತವೆ. ಲೋಕದಲ್ಲಿ ನಡೆಯುತ್ತಿರುವ ಕೆಟ್ಟ ವಿಷಯಗಳಿಂದ ಸಹ ಸಮಸ್ಯೆಗಳು ಎದುರಾಗುತ್ತವೆ. ನಮ್ಮಲ್ಲಿ ಕೆಲವರು ಶಕ್ತಿಶಾಲಿ ಸರ್ಕಾರಗಳಿಂದ ಹಿಂಸೆಯನ್ನು ಸಹ ಅನುಭವಿಸುತ್ತಿದ್ದೇವೆ. ನಾವೀಗ ಯೆಹೋವನು ಕೊಟ್ಟಿರುವ ಮೂರು ವಾಗ್ದಾನಗಳನ್ನು ಒಂದೊಂದಾಗಿ ನೋಡೋಣ.
“ನಾನೇ ನಿನ್ನೊಂದಿಗಿದ್ದೇನೆ”
4. (ಎ) ಯೆಹೋವನು ಕೊಡುವ ಮೊದಲ ಆಶ್ವಾಸನೆ ಏನು? (ಪಾದಟಿಪ್ಪಣಿ ಸಹ ನೋಡಿ.) (ಬಿ) ಯೆಹೋವನಿಗೆ ನಮ್ಮ ಬಗ್ಗೆ ಹೇಗನಿಸುತ್ತದೆ? (ಸಿ) ಈ ವಿಷಯ ತಿಳಿದುಕೊಂಡು ನಿಮಗೆ ಹೇಗನಿಸುತ್ತದೆ?
4 ಮೊದಲನೇದಾಗಿ ಯೆಹೋವನು “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ” ಎಂದು ಹೇಳಿ ಆಶ್ವಾಸನೆ ಕೊಡುತ್ತಾನೆ.d ಯೆಹೋವನು ನಮಗೆ ಪೂರ್ತಿ ಗಮನ ಕೊಡುವ ಮೂಲಕ ಮತ್ತು ಹೃದಯದಾಳದಿಂದ ಪ್ರೀತಿಸುವ ಮೂಲಕ ನಮ್ಮೊಂದಿಗಿದ್ದಾನೆ ಎಂದು ತೋರಿಸಿಕೊಡುತ್ತಾನೆ. ಆತನಿಗೆ ನಮ್ಮ ಮೇಲಿರುವ ಕೋಮಲವಾದ, ಆಳವಾದ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾನೆ ನೋಡಿ. ‘ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿದ್ದೀ.’ (ಯೆಶಾ. 43:4) ಈ ಇಡೀ ವಿಶ್ವದಲ್ಲಿರುವ ಯಾವುದೇ ಶಕ್ತಿ ನಮ್ಮ ಮೇಲೆ ಆತನಿಗಿರುವ ಪ್ರೀತಿಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆತನ ಕೃಪೆ ಅಥವಾ ನಿಷ್ಠೆ ನಮ್ಮನ್ನು ಬಿಟ್ಟುಹೋಗಲ್ಲ. (ಯೆಶಾ. 54:10) ಆತನ ಪ್ರೀತಿ ಮತ್ತು ಸ್ನೇಹ ನಮ್ಮಲ್ಲಿ ಧೈರ್ಯ ತುಂಬುತ್ತದೆ. ಆತನು ತನ್ನ ಸ್ನೇಹಿತನಾದ ಅಬ್ರಾಮನಿಗೆ (ಅಬ್ರಹಾಮನಿಗೆ) ಹೀಗಂದನು: “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ.” (ಆದಿ. 15:1) ಆತನು ಅಂದು ಅಬ್ರಹಾಮನನ್ನು ಸಂರಕ್ಷಿಸಿದಂತೆ ಇಂದು ನಮ್ಮನ್ನೂ ಸಂರಕ್ಷಿಸುತ್ತಾನೆ.
5-6. (ಎ) ನಮಗೆ ಎದುರಾಗುವ ಪರೀಕ್ಷೆಗಳನ್ನು ತಾಳಿಕೊಳ್ಳಲು ಯೆಹೋವನು ಸಹಾಯ ಮಾಡಲು ಬಯಸುತ್ತಾನೆ ಎಂದು ನಮಗೆ ಹೇಗೆ ಗೊತ್ತು? (ಬಿ) ಯೋಷಿಕೋ ಉದಾಹರಣೆಯಿಂದ ನಾವೇನು ಕಲಿಯಬಹುದು?
5 ನಮಗೆ ಎದುರಾಗುವ ಪರೀಕ್ಷೆಗಳನ್ನು ತಾಳಿಕೊಳ್ಳಲು ಯೆಹೋವನು ಸಹಾಯ ಮಾಡಲು ಬಯಸುತ್ತಾನೆ ಎಂದು ನಮಗೆ ಗೊತ್ತು. ಯಾಕೆಂದರೆ ಆತನು ತನ್ನ ಜನರಿಗೆ ಈ ವಾಗ್ದಾನ ಮಾಡಿದ್ದಾನೆ: “ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು.” (ಯೆಶಾ. 43:2) ಈ ಮಾತುಗಳ ಅರ್ಥ ಏನು?
6 ನಮ್ಮ ಜೀವಹಿಂಡುವಂಥ ಸಮಸ್ಯೆಗಳನ್ನು ಯೆಹೋವನು ತೆಗೆದುಹಾಕುತ್ತೇನೆ ಎಂದು ಹೇಳುತ್ತಿಲ್ಲ. ಆದರೆ ಕಷ್ಟಗಳೆಂಬ ‘ನದಿಯಲ್ಲಿ’ ನಾವು ಮುಳುಗಿಹೋಗಲು ಆತನು ಬಿಡಲ್ಲ, ಪರೀಕ್ಷೆಯೆಂಬ “ಜ್ವಾಲೆ” ನಮಗೆ ಶಾಶ್ವತ ಹಾನಿಮಾಡಲು ಬಿಡಲ್ಲ. ಆತನು ಯಾವಾಗಲೂ ನಮ್ಮ ಜೊತೆ ಇರುತ್ತೇನೆ ಎಂದು ಆಶ್ವಾಸನೆ ಕೊಡುತ್ತಾನೆ. ನಾವು ಕಷ್ಟಕರ ಸನ್ನಿವೇಶಗಳನ್ನು “ಹಾದು ಹೋಗುವಾಗ” ನಮ್ಮ ಜೊತೆಜೊತೆ ಬರುತ್ತೇನೆ ಎಂದು ಹೇಳುತ್ತಾನೆ. ಆತನು ನಮ್ಮ ಭಯವನ್ನು ತೆಗೆಯುತ್ತಾನೆ. ಆಗ ನಾವು ಮರಣದ ಬೆದರಿಕೆ ಬಂದರೂ ಸಮಗ್ರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. (ಯೆಶಾ. 41:13) ಆರಂಭದಲ್ಲಿ ನೋಡಿದ ಯೋಷಿಕೋ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವರ ಮಗಳು ಹೇಳುವುದು: “ಅಮ್ಮನ ಮುಖದಲ್ಲಿದ್ದ ಪ್ರಶಾಂತತೆ ನೋಡಿ ನಮಗೆ ಆಶ್ಚರ್ಯ ಆಯಿತು. ಯೆಹೋವನು ಅಮ್ಮನಿಗೆ ಮನಶ್ಶಾಂತಿ ಕೊಟ್ಟಿದ್ದಾನೆ ಎಂದು ಚೆನ್ನಾಗಿ ಕಾಣುತ್ತಿತ್ತು. ಅಮ್ಮ ತೀರಿಹೋಗುವ ದಿನದ ತನಕ ನರ್ಸ್ಗಳ ಹತ್ತಿರ, ಬೇರೆ ರೋಗಿಗಳ ಹತ್ತಿರ ಯೆಹೋವನ ಬಗ್ಗೆ ಮತ್ತು ಆತನ ವಾಗ್ದಾನಗಳ ಬಗ್ಗೆ ಮಾತಾಡುತ್ತಿದ್ದರು.” ಯೋಷಿಕೋ ಉದಾಹರಣೆಯಿಂದ ನಾವೇನು ಕಲಿಯಬಹುದು? “ನಾನೇ ನಿನ್ನೊಂದಿಗಿದ್ದೇನೆ” ಎಂದು ದೇವರು ಕೊಟ್ಟಿರುವ ವಾಗ್ದಾನವನ್ನು ನಾವು ನಂಬುವಾಗ, ಪರೀಕ್ಷೆಗಳು ಬಂದರೂ ಧೈರ್ಯವಾಗಿರುತ್ತೇವೆ.
“ನಾನೇ ನಿನ್ನ ದೇವರು”
7-8. (ಎ) ನಾವು ನೋಡಲಿರುವ ಎರಡನೇ ಆಶ್ವಾಸನೆ ಏನು ಮತ್ತು ಅದರ ಅರ್ಥ ಏನು? (ಬಿ) “ಚಿಂತೆ ಮಾಡಬೇಡ” ಎಂದು ಯೆಹೋವನು ಬಂಧಿವಾಸಿಗಳಾಗಿದ್ದ ಯೆಹೂದ್ಯರಿಗೆ ಯಾಕೆ ಹೇಳಿದನು? (ಸಿ) ಯೆಶಾಯ 46:3, 4ರಲ್ಲಿರುವ ಮಾತುಗಳಿಂದ ದೇವಜನರಿಗೆ ಯಾವ ಸಾಂತ್ವನ ಸಿಕ್ಕಿರುತ್ತದೆ?
7 ಯೆಹೋವನು ಕೊಡುವ ಎರಡನೇ ಆಶ್ವಾಸನೆ ಗಮನಿಸಿ: “ಚಿಂತೆ ಮಾಡಬೇಡ, ನಾನೇ ನಿನ್ನ ದೇವರು.” ಮೂಲ ಭಾಷೆಯಲ್ಲಿ ‘ಚಿಂತೆ ಮಾಡು’ ಅಥವಾ ‘ದಿಗ್ಭ್ರಮೆಗೊಳ್ಳು’ ಎಂಬ ಪದಕ್ಕೆ “ಏನಾದರೂ ಅಪಾಯ ಬಂದುಬಿಡುತ್ತದಾ ಎಂದು ಆಗಾಗ ಹಿಂದೆ ತಿರುಗಿ ನೋಡುವುದು” ಅಥವಾ “ಅಪಾಯದಲ್ಲಿರುವ ವ್ಯಕ್ತಿ ಗಾಬರಿಯಿಂದ ನೋಡುವುದು” ಎಂಬ ಅರ್ಥ ಇದೆ.
8 ಬಾಬೆಲಿಗೆ ಬಂಧಿವಾಸಿಗಳಾಗಿ ಹೋಗಲಿದ್ದ ಯೆಹೂದ್ಯರಿಗೆ ಯೆಹೋವನು ಯಾಕೆ ‘ಚಿಂತೆ ಮಾಡಬೇಡಿ’ ಎಂದನು? ಯಾಕೆಂದರೆ ಬಾಬೆಲಲ್ಲಿರುವ ಜನ ಹೆದರಿ ನಡುಗುವ ಪರಿಸ್ಥಿತಿ ಬರುತ್ತದೆ ಎಂದು ಯೆಹೋವನಿಗೆ ಗೊತ್ತಿತ್ತು. ಅವರು ಹೆದರುವಂಥ ಯಾವ ವಿಷಯ ನಡೆಯಲಿತ್ತು? ಯೆಹೂದ್ಯರು ಬಾಬೆಲಿನಲ್ಲಿ ಬಂಧಿಗಳಾಗಿದ್ದ 70ನೇ ವರ್ಷದ ಕೊನೆಯಲ್ಲಿ ಮೇದ್ಯ-ಪಾರಸೀಯದ ಶಕ್ತಿಶಾಲಿ ಸೈನ್ಯ ಬಾಬೆಲಿನ ಮೇಲೆ ದಾಳಿಮಾಡಲಿತ್ತು. ಯೆಹೋವನು ಈ ಸೈನ್ಯದ ಮೂಲಕ ತನ್ನ ಜನರನ್ನು ಬಾಬೆಲಿನ ಬಂಧಿವಾಸದಿಂದ ಬಿಡಿಸಲಿದ್ದನು. (ಯೆಶಾ. 41:2-4) ಆ ಸಮಯದಲ್ಲಿದ್ದ ಬಾಬೆಲಿನವರಿಗೆ ಮತ್ತು ಬೇರೆ ದೇಶಗಳವರಿಗೆ ತಮ್ಮ ಶತ್ರುಗಳು ಹತ್ತಿರ ಬರುತ್ತಿದ್ದಾರೆ ಎಂದು ಗೊತ್ತಾದಾಗ ಅವರು ಒಬ್ಬರಿಗೊಬ್ಬರು “ಧೈರ್ಯವಾಗಿರು” ಎಂದು ಹೇಳಿ ಗುಂಡಿಗೆ ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿದರು. ಹೆಚ್ಚು ವಿಗ್ರಹಗಳನ್ನೂ ಮಾಡಿಕೊಂಡರು. ಅವು ತಮ್ಮನ್ನು ಕಾಪಾಡುತ್ತವೆ ಎಂದು ನೆನಸಿದರು. (ಯೆಶಾ. 41:5-7) ಈ ಸಮಯದಲ್ಲೇ ಯೆಹೋವನು ಬಂಧಿಗಳಾಗಿದ್ದ ಯೆಹೂದ್ಯರಿಗೆ, ‘ನನ್ನ ಸೇವಕನಾದ ಇಸ್ರಾಯೇಲೇ, ನೀನು ನನ್ನ ಸೇವಕನು [ನಿನ್ನ ನೆರೆಯವರಲ್ಲ]. ಚಿಂತೆ ಮಾಡಬೇಡ, ನಾನೇ ನಿನ್ನ ದೇವರು’ ಎಂದು ಹೇಳಿ ಧೈರ್ಯ ತುಂಬಿದನು. (ಯೆಶಾ. 41:8-10) ಯೆಹೋವನು ಅವರಿಗೆ “ನಾನೇ ನಿನ್ನ ದೇವರು” ಎಂದು ಹೇಳಿದ್ದನ್ನು ಗಮನಿಸಿದ್ರಾ? ಈ ಮಾತುಗಳ ಮೂಲಕ ತಾನು ತನ್ನ ನಿಷ್ಠಾವಂತ ಸೇವಕರನ್ನು ಮರೆತಿಲ್ಲ ಎಂದು ಯೆಹೋವನು ಹೇಳುತ್ತಿದ್ದಾನೆ. ಆತನಿನ್ನೂ ಅವರ ದೇವರಾಗಿದ್ದನು ಮತ್ತು ಅವರು ಆತನ ಜನರಾಗಿದ್ದರು. ‘ನಾನೇ ನಿನ್ನನ್ನು ಹೊತ್ತು’ ಸಂರಕ್ಷಿಸುವೆನು ಎಂಬ ಆಶ್ವಾಸನೆ ಕೊಟ್ಟನು. ಇದರಿಂದ ಬಂಧಿವಾಸಿಗಳಾಗಿದ್ದ ಯೆಹೂದ್ಯರಿಗೆ ಖಂಡಿತ ಬಲ ಸಿಕ್ಕಿರುತ್ತದೆ.—ಯೆಶಾಯ 46:3, 4 ಓದಿ.
9-10. ಅದೇನೇ ಆದರೂ ನಾವು ಹೆದರುವ ಆವಶ್ಯಕತೆ ಇಲ್ಲ ಯಾಕೆ? ಉದಾಹರಣೆ ಕೊಡಿ.
9 ಹಿಂದೆಂದಿಗಿಂತ ಈಗ ನಮ್ಮ ಸುತ್ತಲೂ ಇರುವ ಜನರು ಚಿಂತೆಯಲ್ಲಿ ಮುಳುಗಿಹೋಗಿದ್ದಾರೆ. ಯಾಕೆಂದರೆ ಲೋಕದಲ್ಲಿರುವ ಪರಿಸ್ಥಿತಿ ಕೆಟ್ಟುಹೋಗುತ್ತಾ ಇದೆ. ಲೋಕದ ಜನರು ಎದುರಿಸುವ ಸಮಸ್ಯೆಗಳನ್ನೇ ನಾವೂ ಎದುರಿಸುತ್ತೇವೆ. ಆದರೂ ನಾವು ಹೆದರುವ ಆವಶ್ಯಕತೆ ಇಲ್ಲ. ಯಾಕೆಂದರೆ “ನಾನೇ ನಿನ್ನ ದೇವರು” ಎಂದು ಯೆಹೋವನು ಹೇಳುತ್ತಾನೆ. ಇದು ಚಿಂತೆ ಮಾಡದೇ ಇರಲು ಯಾಕೆ ಬಲವಾದ ಕಾರಣವಾಗಿದೆ?
10 ಈ ಉದಾಹರಣೆ ನೋಡಿ: ಜಿಮ್ ಮತ್ತು ಜಾನಿ ವಿಮಾನದಲ್ಲಿ ಹೋಗುತ್ತಿದ್ದಾರೆ. ಬಲವಾದ ಗಾಳಿ ವಿಮಾನವನ್ನು ಮೇಲೆ ಕೆಳಗೆ ಎತ್ತಿಹಾಕುತ್ತಿದೆ. ಆಗ ವಿಮಾನ ಚಾಲಕನ ಧ್ವನಿ ಅವರಿಗೆ ಕೇಳಿಸುತ್ತೆ. “ಸೀಟ್ ಬೆಲ್ಟ್ ಹಾಕಿರಿ. ಸ್ವಲ್ಪ ಸಮಯ ವಿಮಾನ ಪ್ರಯಾಣ ಸುಗಮವಾಗಿರಲ್ಲ.” ಆಗ ಜಿಮ್ಗೆ ತುಂಬ ಚಿಂತೆ ಆಗುತ್ತದೆ. ಅದೇ ಸಮಯಕ್ಕೆ “ಚಿಂತೆ ಮಾಡಬೇಡಿ. ನಾನು ನಿಮ್ಮ ವಿಮಾನ ಚಾಲಕ. ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಹೇಳುವುದು ಕೇಳಿಸುತ್ತೆ. ಆಗ ಜಿಮ್ “ಹೇಗೆ ಚಿಂತೆ ಮಾಡದೆ ಇರಕ್ಕಾಗುತ್ತೆ?” ಅನ್ನುತ್ತಾನೆ. ಆದರೆ ಜಾನಿ ಯಾವುದೇ ಚಿಂತೆ ಇಲ್ಲದೇ ಕೂತಿರುವುದನ್ನು ನೋಡುತ್ತಾನೆ. “ನೀನು ಹೇಗೆ ಇಷ್ಟು ಆರಾಮವಾಗಿ ಕೂತಿದ್ದೀ?” ಎಂದು ಕೇಳುತ್ತಾನೆ. ಆಗ ಜಾನಿ ನಸುನಗೆಯೊಂದಿಗೆ “ನನಗೆ ಈ ವಿಮಾನ ಚಾಲಕನ ಬಗ್ಗೆ ಚೆನ್ನಾಗಿ ಗೊತ್ತು. ಅವರು ನನ್ನ ಅಪ್ಪ!” ಎನ್ನುತ್ತಾನೆ. ಆಮೇಲೆ ಅವನು ಹೇಳುವುದು: “ನಾನು ನನ್ನ ಅಪ್ಪನ ಬಗ್ಗೆ ಹೇಳುತ್ತೇನೆ ಕೇಳು. ಅವರು ಎಷ್ಟು ಒಳ್ಳೇದಾಗಿ ವಿಮಾನ ನಡಿಸುತ್ತಾರೆ ಅಂತ ನಿನಗೆ ಗೊತ್ತಾದರೆ ನೀನೂ ಆರಾಮವಾಗಿ ಇರುತ್ತೀ.”
11. ಜಿಮ್ ಮತ್ತು ಜಾನಿಯ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತದೆ?
11 ಈ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತದೆ? ಜಾನಿ ತರ ನಾವು ಸಹ ಚಿಂತೆ ಇಲ್ಲದೆ ಆರಾಮವಾಗಿ ಇದ್ದೇವೆ. ಯಾಕೆಂದರೆ ನಮಗೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಬಗ್ಗೆ ತುಂಬ ಚೆನ್ನಾಗಿ ಗೊತ್ತಿದೆ. ಈ ಕಡೇ ದಿವಸಗಳಲ್ಲಿ ತುಂಬ ಕಷ್ಟಗಳು ಎದುರಾದರೂ ಅವನ್ನು ತಾಳಿಕೊಳ್ಳಲು ಆತನು ಸಹಾಯ ಮಾಡುತ್ತಾನೆ ಅಂತ ನಮಗೆ ಗೊತ್ತು. (ಯೆಶಾ. 35:4) ನಮಗೆ ಯೆಹೋವನಲ್ಲಿ ಭರವಸೆ ಇದೆ. ಹಾಗಾಗಿ ಇಡೀ ಲೋಕವೇ ಭಯ-ಭೀತಿಯಿಂದ ತತ್ತರಿಸುತ್ತಿರುವಾಗ ನಾವು ಪ್ರಶಾಂತವಾಗಿರಲು ಸಾಧ್ಯವಾಗುತ್ತದೆ. (ಯೆಶಾ. 30:15) ಜಾನಿ ತನ್ನ ತಂದೆಯ ಬಗ್ಗೆ ಮಾತಾಡಿದಂತೆ, ನಾವು ಸಹ ನಮ್ಮ ನೆರೆಯವರ ಜೊತೆ ನಮ್ಮ ದೇವರ ಬಗ್ಗೆ ಮಾತಾಡುತ್ತೇವೆ. ಆತನಲ್ಲಿ ನಂಬಿಕೆ ಇಡಲು ಯಾವೆಲ್ಲಾ ಕಾರಣಗಳಿವೆ ಎಂದು ವಿವರಿಸುತ್ತೇವೆ. ಆಗ ಏನೇ ಸಮಸ್ಯೆ ಬಂದರೂ ಯೆಹೋವನು ತಮ್ಮ ಕೈಬಿಡಲ್ಲ ಎಂಬ ಭರವಸೆ ಅವರಿಗೂ ಬರುತ್ತದೆ.
‘ನಾನು ನಿನ್ನನ್ನು ಬಲಪಡಿಸುತ್ತೇನೆ, ಸಹಾಯಕೊಡುತ್ತೇನೆ’
12. (ಎ) ಯೆಶಾಯನು ದಾಖಲಿಸಿರುವ ಮೂರನೇ ವಾಗ್ದಾನ ಯಾವುದು? (ಬಿ) ಯೆಹೋವನ ಭುಜಬಲದ ಬಗ್ಗೆ ಓದುವಾಗ ನಮಗೆ ಯಾವ ವಿಚಾರ ನೆನಪಿಗೆ ಬರುತ್ತದೆ?
12 ಯೆಶಾಯನು ದಾಖಲಿಸಿದ ಮೂರನೇ ವಾಗ್ದಾನ ನೋಡಿ. “ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.” ಯೆಹೋವನು ತನ್ನ ಜನರನ್ನು ಹೇಗೆ ಬಲಪಡಿಸುತ್ತಾನೆ ಎಂದು ಯೆಶಾಯ ಇದಕ್ಕೆ ಮುಂಚೆ ಕೂಡ ಹೇಳಿದ್ದಾನೆ. “ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು” ಎಂದು ಆತನು ಹೇಳಿದನು. (ಯೆಶಾ. 40:10) ಯೆಹೋವನು ಶಕ್ತಿಶಾಲಿ ರಾಜ ಎಂಬ ವಿಚಾರವನ್ನು ಇದು ನೆನಪಿಗೆ ತರುತ್ತದೆ. ಹಿಂದಿನ ಕಾಲದಲ್ಲಿದ್ದ ತನ್ನ ಸೇವಕರನ್ನು ಬೆಂಬಲಿಸಲು ಮತ್ತು ಕಾಪಾಡಲು ದೇವರು ತನ್ನ ಮಹಾ ಶಕ್ತಿಯನ್ನು ಉಪಯೋಗಿಸಿದನು. ಇಂದು ಸಹ ಆತನು ತನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಗಳನ್ನು ಬಲಪಡಿಸಿ ಕಾಪಾಡುತ್ತಾನೆ.—ಧರ್ಮೋ. 1:30, 31; ಯೆಶಾ. 43:10.
13. (ಎ) ಯೆಹೋವನು ಮುಖ್ಯವಾಗಿ ಎಂಥ ಸಮಯದಲ್ಲಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ? (ಬಿ) ಯೆಹೋವನು ಕೊಟ್ಟಿರುವ ಯಾವ ಆಶ್ವಾಸನೆಯಿಂದ ನಮಗೆ ಬಲ ಸಿಗುತ್ತದೆ?
13 ಮುಖ್ಯವಾಗಿ ವೈರಿಗಳು ನಮ್ಮನ್ನು ಹಿಂಸಿಸುವಾಗ, “ನಾನು ನಿನ್ನನ್ನು ಬಲಪಡಿಸುತ್ತೇನೆ” ಎಂದು ಕೊಟ್ಟಿರುವ ಮಾತನ್ನು ಯೆಹೋವನು ಉಳಿಸಿಕೊಳ್ಳುತ್ತಾನೆ. ಇಂದು ಲೋಕದ ಕೆಲವು ಕಡೆಗಳಲ್ಲಿ ವೈರಿಗಳು ನಮ್ಮ ಸಾರುವ ಕೆಲಸವನ್ನು ತಡೆಯಲು ಅಥವಾ ನಮ್ಮ ಸಂಘಟನೆಯ ಮೇಲೆ ನಿಷೇಧವನ್ನು ತರಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ನಾವು ಇಂಥ ದಾಳಿಗಳ ಬಗ್ಗೆ ತುಂಬ ಚಿಂತೆ ಮಾಡುವುದಿಲ್ಲ. ಯಾಕೆಂದರೆ ಯೆಹೋವನು ಕೊಟ್ಟಿರುವ ಈ ಆಶ್ವಾಸನೆಯಿಂದ ನಮಗೆ ಬಲ ಸಿಗುತ್ತದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” (ಯೆಶಾ. 54:17) ಈ ವಾಕ್ಯ ನಮಗೆ ಮೂರು ಮುಖ್ಯ ಅಂಶಗಳನ್ನು ನೆನಪಿಗೆ ತರುತ್ತದೆ.
14. ದೇವರ ವೈರಿಗಳು ನಮ್ಮ ಮೇಲೆ ದಾಳಿ ಮಾಡಿದರೆ ನಾವು ಯಾಕೆ ಆಶ್ಚರ್ಯಪಡುವುದಿಲ್ಲ?
14 ಮೊದಲನೇ ಅಂಶ ಏನೆಂದರೆ, ನಾವು ಯೇಸುವಿನ ಹಿಂಬಾಲಕರು ಆಗಿರುವುದರಿಂದ ಜನರು ನಮ್ಮನ್ನು ಖಂಡಿತ ದ್ವೇಷಿಸುತ್ತಾರೆ. (ಮತ್ತಾ. 10:22) ಕಡೇ ದಿವಸಗಳಲ್ಲಿ ತನ್ನ ಶಿಷ್ಯರು ತೀವ್ರ ಹಿಂಸೆಯನ್ನು ಎದುರಿಸುತ್ತಾರೆ ಎಂದು ಯೇಸು ಮೊದಲೇ ತಿಳಿಸಿದ್ದಾನೆ. (ಮತ್ತಾ. 24:9; ಯೋಹಾ. 15:20) ಎರಡನೇ ಅಂಶ ಏನೆಂದರೆ, ವೈರಿಗಳು ನಮ್ಮನ್ನು ದ್ವೇಷಿಸುವುದಷ್ಟೇ ಅಲ್ಲ ನಮ್ಮ ವಿರುದ್ಧ ಬೇರೆ ಬೇರೆ ರೀತಿಯ ಆಯುಧಗಳನ್ನು ಉಪಯೋಗಿಸುತ್ತಾರೆ ಎಂದು ಯೆಶಾಯನು ಪ್ರವಾದನೆ ಹೇಳಿದ್ದಾನೆ. ಈ ಆಯುಧಗಳಲ್ಲಿ ನಯವಂಚನೆ, ಶುದ್ಧ ಸುಳ್ಳು ಮತ್ತು ಚಿತ್ರಹಿಂಸೆ ಸೇರಿದೆ. (ಮತ್ತಾ. 5:11) ನಮ್ಮ ವಿರುದ್ಧ ಯುದ್ಧ ಮಾಡಲು ವೈರಿಗಳು ಈ ಆಯುಧಗಳನ್ನು ಉಪಯೋಗಿಸುವಾಗ ಯೆಹೋವನು ತಡೆಯುವುದಿಲ್ಲ. (ಎಫೆ. 6:12; ಪ್ರಕ. 12:17) ಆದರೆ ನಾವು ಹೆದರುವ ಆವಶ್ಯಕತೆ ಇಲ್ಲ. ಯಾಕೆ?
15-16. (ಎ) ನಾವು ನೆನಪಲ್ಲಿಡಬೇಕಾದ ಮೂರನೇ ಅಂಶ ಯಾವುದು? (ಬಿ) ಯೆಶಾಯ 25:4, 5 ಈ ಮಾತನ್ನು ಸತ್ಯ ಎಂದು ಹೇಗೆ ತೋರಿಸುತ್ತದೆ? (ಸಿ) ನಮ್ಮ ವಿರುದ್ಧ ಹೋರಾಡುವವರ ಗತಿ ಏನಾಗುತ್ತದೆ ಎಂದು ಯೆಶಾಯ 41:11, 12 ತಿಳಿಸುತ್ತದೆ?
15 ನಾವು ನೆನಪಲ್ಲಿಡಬೇಕಾದ ಮೂರನೇ ಅಂಶ ಏನೆಂದು ನೋಡಿ. ನಮ್ಮನ್ನು ಎದುರಿಸಲು ಕಲ್ಪಿಸಿದ “ಯಾವ ಆಯುಧವೂ ಜಯಿಸದು” ಎಂದು ಯೆಹೋವನು ಖಂಡಿತವಾಗಿ ಹೇಳಿದ್ದಾನೆ. ಒಂದು ಗೋಡೆ ನಮ್ಮನ್ನು ಒಂದು ಭಯಂಕರವಾದ ಬಿರುಗಾಳಿಯಿಂದ ಕಾಪಾಡುವಂತೆ ಯೆಹೋವನು ನಮ್ಮನ್ನು ‘ಭೀಕರರ ಶ್ವಾಸದಿಂದ’ ಕಾಪಾಡುತ್ತಾನೆ. (ಯೆಶಾಯ 25:4, 5 ಓದಿ.) ನಮ್ಮ ವೈರಿಗಳು ನಮ್ಮ ಮೇಲೆ ಶಾಶ್ವತವಾದ ಹಾನಿಯನ್ನು ತರಕ್ಕಾಗಲ್ಲ.—ಯೆಶಾ. 65:17.
16 ನಮ್ಮ ಮೇಲೆ ‘ಕಿಡಿಕಿಡಿಯಾಗುವವರಿಗೆ’ ಏನಾಗುತ್ತದೆ ಎಂದು ಸವಿವರವಾಗಿ ಹೇಳುವ ಮೂಲಕ ಯೆಹೋವನು ತನ್ನ ಮೇಲೆ ಭರವಸೆ ಇಡಲು ಇನ್ನಷ್ಟು ಕಾರಣ ಕೊಡುತ್ತಾನೆ. (ಯೆಶಾಯ 41:11, 12 ಓದಿ.) ನಮ್ಮ ವೈರಿಗಳು ಎಷ್ಟೇ ಹೋರಾಟ ಮಾಡಿದರೂ ಅಥವಾ ನಮ್ಮ ವಿರುದ್ಧ ಎಷ್ಟೇ ತೀವ್ರವಾಗಿ ಯುದ್ಧ ಮಾಡಿದರೂ ಫಲಿತಾಂಶ ಒಂದೇ: ದೇವಜನರ ವೈರಿಗಳೆಲ್ಲರೂ “ನಾಶವಾಗಿ ಇಲ್ಲದೆ ಹೋಗುವರು.”
ಯೆಹೋವನ ಮೇಲೆ ಬಲವಾದ ಭರವಸೆ
17-18. (ಎ) ಬೈಬಲನ್ನು ಓದಿದರೆ ಯೆಹೋವನ ಮೇಲಿರುವ ಭರವಸೆ ಹೇಗೆ ಬಲವಾಗುತ್ತದೆ? ಒಂದು ಉದಾಹರಣೆ ಕೊಡಿ. (ಬಿ) 2019ರ ವರ್ಷವಚನದ ಬಗ್ಗೆ ಧ್ಯಾನಿಸುವುದರಿಂದ ನಮಗೆ ಯಾವ ಪ್ರಯೋಜನ ಸಿಗುತ್ತದೆ?
17 ನಾವು ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಆತನ ಮೇಲೆ ಬಲವಾದ ಭರವಸೆ ಬೆಳೆಸಿಕೊಳ್ಳಬಹುದು. ನಾವು ಬೈಬಲನ್ನು ಗಮನ ಕೊಟ್ಟು ಓದಿ, ಓದಿದ ವಿಷಯದ ಬಗ್ಗೆ ಧ್ಯಾನಿಸಿದಾಗ ಮಾತ್ರ ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಯೆಹೋವನು ಹಿಂದಿನ ಕಾಲದಲ್ಲಿ ತನ್ನ ಜನರನ್ನು ಹೇಗೆ ಸಂರಕ್ಷಿಸಿದನು ಎಂಬ ದಾಖಲೆ ಬೈಬಲಲ್ಲಿದೆ. ಆ ದಾಖಲೆಯನ್ನು ತೆಗೆದು ನೋಡಿದರೆ ಆತನು ನಮ್ಮನ್ನು ಈಗಲೂ ಸಂರಕ್ಷಿಸುತ್ತಾನೆ ಎಂಬ ಆಶ್ವಾಸನೆ ಸಿಗುತ್ತದೆ.
18 ಯೆಹೋವನು ನಮ್ಮನ್ನು ಹೇಗೆ ಸಂರಕ್ಷಿಸುತ್ತಾನೆ ಅಂತ ಅರ್ಥಮಾಡಿಕೊಳ್ಳಲು ಯೆಶಾಯನು ಉಪಯೋಗಿಸುವ ಒಂದು ಸುಂದರ ಚಿತ್ರಣಕ್ಕೆ ಗಮನ ಕೊಡಿ. ಆತನು ಯೆಹೋವನನ್ನು ಒಬ್ಬ ಕುರುಬನಿಗೆ ಮತ್ತು ದೇವರ ಸೇವಕರನ್ನು ಕುರಿಗಳಿಗೆ ಹೋಲಿಸಿದ್ದಾನೆ. “ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು” ಎಂದು ಯೆಶಾಯ ಯೆಹೋವನ ಬಗ್ಗೆ ಹೇಳಿದ್ದಾನೆ. (ಯೆಶಾ. 40:11) ಯೆಹೋವನ ಬಲವಾದ ಭುಜ ನಮಗೆ ಕಾವಲಾಗಿರುವುದನ್ನು ನಾವು ಗ್ರಹಿಸಿದಾಗ ನಮಗೆ ಸುರಕ್ಷಿತ ಭಾವನೆ ಬರುತ್ತದೆ, ಮನಸ್ಸು ಪ್ರಶಾಂತವಾಗುತ್ತದೆ. ನಾವು ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೂ ಪ್ರಶಾಂತವಾಗಿರಲು ಯೆಶಾಯ 41:10 ಸಹಾಯ ಮಾಡುತ್ತದೆ. ಈ ಕಾರಣದಿಂದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಆ ವಚನದಲ್ಲಿರುವ ಈ ಮಾತನ್ನು 2019ರ ವರ್ಷವಚನವಾಗಿ ಆರಿಸಿದೆ: “ಚಿಂತೆ ಮಾಡಬೇಡ, ನಾನೇ ನಿನ್ನ ದೇವರು.” ಈ ಮಾತುಗಳಿಂದ ತುಂಬ ಆಶ್ವಾಸನೆ ಸಿಗುತ್ತದೆ. ಅದರ ಬಗ್ಗೆ ಧ್ಯಾನಿಸಿ. ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಬೇಕಾದ ಬಲವನ್ನು ಅದು ಕೊಡುತ್ತದೆ.
ಗೀತೆ 60 ಆತನು ನಿನ್ನನ್ನು ಬಲಪಡಿಸುವನು
a ಲೋಕದಲ್ಲಿ ಅಥವಾ ನಮ್ಮ ಜೀವನದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಿದಾಗ ನಾವು ಮನಶ್ಶಾಂತಿ ಕಳಕೊಳ್ಳಬಹುದು. ಆದರೆ ಹೀಗಾಗದಿರಲು 2019ರ ವರ್ಷವಚನ ಮೂರು ಕಾರಣಗಳನ್ನು ಕೊಡುತ್ತದೆ. ಈ ಲೇಖನದಲ್ಲಿ ಆ ಮೂರು ಕಾರಣಗಳ ಬಗ್ಗೆ ಮಾತಾಡಲಿದ್ದೇವೆ. ಇದರಿಂದ ನಮ್ಮ ಚಿಂತೆ ಕಡಿಮೆಯಾಗಿ ಯೆಹೋವನ ಮೇಲೆ ಭರವಸೆ ಜಾಸ್ತಿ ಆಗುತ್ತದೆ. ಆದ್ದರಿಂದ ವರ್ಷವಚನದ ಬಗ್ಗೆ ಧ್ಯಾನಿಸಿ. ಸಾಧ್ಯವಾದರೆ ಬಾಯಿಪಾಠ ಮಾಡಿ. ಮುಂದೆ ಬರಲಿರುವ ಸಮಸ್ಯೆಗಳನ್ನು ಎದುರಿಸಲು ಬೇಕಾದ ಬಲವನ್ನು ಇದು ಕೊಡುತ್ತದೆ.
c ಪದ ವಿವರಣೆ: ವಾಗ್ದಾನ ಅಂದರೆ ಒಂದು ವಿಷಯ ಖಂಡಿತ ನಡೆಯುತ್ತದೆ ಎಂದು ಮಾತು ಕೊಡುವುದು ಆಗಿದೆ. ಯೆಹೋವನ ವಾಗ್ದಾನಗಳು ಇರುವುದರಿಂದ ನಾವು ಜೀವನದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ತುಂಬ ಚಿಂತೆ ಮಾಡುವುದಿಲ್ಲ.
d ಯೆಶಾಯ 41:10ರಲ್ಲಿ “ಹೆದರಬೇಡ” ಎಂದು ಒಂದು ಸಲ ಮತ್ತು ವಚನ 13 ಹಾಗೂ 14ರಲ್ಲಿ “ಭಯಪಡಬೇಡ” ಎಂದು ಎರಡು ಸಲ ಕಂಡುಬರುತ್ತದೆ. ಇದೇ ವಚನಗಳಲ್ಲಿ ಯೆಹೋವನಿಗೆ ಸೂಚಿಸುತ್ತಾ “ನಾನೇ” ಎಂಬ ಪದವನ್ನು ತುಂಬ ಸಲ ಬಳಸಲಾಗಿದೆ. “ನಾನೇ” ಎಂಬ ಪದವನ್ನು ಯೆಶಾಯನು ತುಂಬ ಸಲ ಬಳಸುವಂತೆ ಯೆಹೋವನು ಯಾಕೆ ಮಾಡಿದನು? ಇದರ ಮೂಲಕ ಯೆಹೋವನು ಒಂದು ಪ್ರಾಮುಖ್ಯ ಅಂಶವನ್ನು ಒತ್ತಿಹೇಳಲು ಬಯಸಿದನು. ಅದೇನೆಂದರೆ, ಯೆಹೋವನಲ್ಲಿ ಭರವಸೆ ಇಟ್ಟರೆ ಮಾತ್ರ ನಾವು ಹೆದರಿಕೊಳ್ಳದೆ ಧೈರ್ಯವಾಗಿ ಇರುತ್ತೇವೆ.
e ಚಿತ್ರ ವಿವರಣೆ: ಒಂದು ಕುಟುಂಬದ ಸದಸ್ಯರು ಕೆಲಸದ ಸ್ಥಳದಲ್ಲಿ, ಆರೋಗ್ಯದ ವಿಷಯದಲ್ಲಿ, ಸೇವೆಯಲ್ಲಿ ಮತ್ತು ಶಾಲೆಯಲ್ಲಿ ಸವಾಲುಗಳನ್ನು ಎದುರಿಸುತ್ತಾರೆ.
f ಚಿತ್ರ ವಿವರಣೆ: ಒಂದು ಮನೆಯಲ್ಲಿ ಸಾಕ್ಷಿಗಳ ಕೂಟ ನಡೆಯುತ್ತಿರುವಾಗ ಪೊಲೀಸರು ದಾಳಿ ಮಾಡುತ್ತಾರೆ, ಆದರೆ ಸಹೋದರ-ಸಹೋದರಿಯರು ಹೆದರುವುದಿಲ್ಲ.
g ಚಿತ್ರ ವಿವರಣೆ: ತಪ್ಪದೆ ಕುಟುಂಬ ಆರಾಧನೆ ಮಾಡಿದರೆ ತಾಳಿಕೊಳ್ಳಲು ಬೇಕಾದ ಬಲ ಸಿಗುತ್ತದೆ.