ನಿಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು
“ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.”—ಯೆಶಾಯ 54:17.
ದಶಕಗಳ ಹಿಂದೆ ಆಗ್ನೇಯ ಯೂರೋಪಿನಲ್ಲಿದ್ದ ಒಂದು ಚಿಕ್ಕ ಪರ್ವತಾಮಯ ದೇಶದಲ್ಲಿ ನಿರ್ಭೀತ ಕ್ರೈಸ್ತರ ಒಂದು ಗುಂಪಿತ್ತು. ಅಲ್ಲಿನ ನಾಸ್ತಿಕವಾದಿ ಕಮ್ಯೂನಿಸ್ಟ್ ಸರ್ಕಾರವು ಈ ಗುಂಪನ್ನು ಜಜ್ಜಿಹಾಕಲು ತನ್ನಿಂದಾದುದೆಲ್ಲವನ್ನೂ ಮಾಡಿತು. ಆದರೆ ಚಿತ್ರಹಿಂಸೆಯಾಗಲಿ, ಶಿಬಿರಗಳಲ್ಲಿ ಕಠಿನ ದುಡಿಮೆಯಾಗಲಿ, ವಾರ್ತಾ ಮಾಧ್ಯಮದ ಅಪಪ್ರಚಾರವಾಗಲಿ ಇವು ಯಾವವೂ ಅವರನ್ನು ಅಳಿಸಿಹಾಕಲು ಶಕ್ತವಾಗಲಿಲ್ಲ. ಈ ಕ್ರೈಸ್ತರು ಯಾರು? ಅಲ್ಬೇನಿಯದಲ್ಲಿನ ಯೆಹೋವನ ಸಾಕ್ಷಿಗಳು. ಕೂಟಗಳಿಗಾಗಿ ಕೂಡಿಬರುವುದು ಮತ್ತು ಸಾರುವುದು ವಿಪರೀತ ಕಷ್ಟವಾಗಿದ್ದರೂ ಹಲವಾರು ದಶಕಗಳ ವರೆಗೆ ಅವರು ಪಟ್ಟುಹಿಡಿದು ತಾಳಿಕೊಂಡದ್ದು ಕ್ರೈಸ್ತತ್ವವನ್ನು ಘನತೆಗೇರಿಸಿ, ಗೌರವಿಸಿ, ಯೆಹೋವನ ನಾಮಕ್ಕೆ ಸ್ತುತಿಯನ್ನು ತಂದಿದೆ. ಹೋದ ವರ್ಷ ಅಲ್ಬೇನಿಯದ ಹೊಸ ಬ್ರಾಂಚ್ ಸೌಕರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ, ಬಹುಕಾಲದಿಂದ ನಂಬಿಗಸ್ತನಾಗಿರುವ ಒಬ್ಬ ಸಾಕ್ಷಿ ಹೇಳಿದ್ದು: “ಸೈತಾನನು ಎಷ್ಟೇ ಪ್ರಯತ್ನಿಸಿದರೂ ಪುನಃ ಪುನಃ ಸೋಲುತ್ತಾನೆ; ಯೆಹೋವನಾದರೊ ಯಾವಾಗಲೂ ಗೆಲ್ಲುತ್ತಾನೆ!”
2 ಇದೆಲ್ಲವೂ, ದೇವರು ತನ್ನ ಜನರಿಗೆ ಕೊಟ್ಟ ಒಂದು ವಾಗ್ದಾನದ ನಿಜತ್ವಕ್ಕೆ ಜೀವಂತ ಪುರಾವೆ ಆಗಿದೆ. ಆ ವಾಗ್ದಾನವನ್ನು ಯೆಶಾಯ 54:17ರಲ್ಲಿ ಹೀಗೆ ದಾಖಲಿಸಲಾಗಿದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ.” ಸೈತಾನನ ಲೋಕವು ಏನನ್ನೇ ಮಾಡಲಿ ಅದು, ಯೆಹೋವ ದೇವರ ಸಮರ್ಪಿತ ಸೇವಕರು ಆತನಿಗೆ ಸಲ್ಲಿಸುವ ಆರಾಧನೆಯನ್ನು ಎಂದೂ ನಿಲ್ಲಿಸಲಾರದು.
ಸೈತಾನನ ವಿಫಲ ಪ್ರಯತ್ನಗಳು
3 ಸತ್ಯಾರಾಧಕರ ವಿರುದ್ಧ ಉಪಯೋಗಿಸಲಾಗಿರುವ ಆಯುಧಗಳಲ್ಲಿ ನಿಷೇಧಗಳು, ದೊಂಬಿಗಳು, ಸೆರೆಮನೆವಾಸ ಮತ್ತು ಕಾನೂನಿನ ‘ನೆವದಿಂದ ಕೇಡುಕಲ್ಪಿಸುವುದು’ ಸೇರಿರುತ್ತದೆ. (ಕೀರ್ತನೆ 94:20) ಈಗ ಯೆಹೋವನ ಸಾಕ್ಷಿಗಳು ಈ ಲೇಖನದ ಅಧ್ಯಯನ ಮಾಡುತ್ತಿರುವಾಗಲೂ ಕೆಲವೊಂದು ದೇಶಗಳಲ್ಲಿ ಈ ಸತ್ಯ ಕ್ರೈಸ್ತರು ದೇವರ ಕಡೆಗಿನ ಸಮಗ್ರತೆಯ ವಿಷಯದಲ್ಲಿ ‘ಪರೀಕ್ಷೆಗೆ’ ಒಳಗಾಗುತ್ತಿದ್ದಾರೆ.—ಪ್ರಕಟನೆ 2:10, NIBV.
4 ಉದಾಹರಣೆಗಾಗಿ, ದೇವರ ಸೇವಕರು ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗ ಶಾರೀರಿಕ ಆಕ್ರಮಣಕ್ಕೊಳಗಾದ 32 ಪ್ರಕರಣಗಳನ್ನು ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್ ಆಫೀಸ್ ವರದಿಸಿತು. ಇನ್ನಿತರ 59 ಪ್ರಕರಣಗಳಲ್ಲಿ ಸಾರ್ವಜನಿಕವಾಗಿ ಸಾರುತ್ತಿದ್ದ ಯುವ ಜನರನ್ನು, ವೃದ್ಧರನ್ನು ಮತ್ತು ಸ್ತ್ರೀಪುರುಷರನ್ನು ಪೊಲೀಸರು ಬಂಧಿಸಿದರು. ಅಪರಾಧಿಗಳೋ ಎಂಬಂತೆ ಅವರಲ್ಲಿ ಕೆಲವರ ಬೆರಳುಗುರುತು ಹಾಗೂ ಫೋಟೋ ತೆಗೆದು, ಜೈಲಿಗೆ ಹಾಕಲಾಯಿತು. ಇತರರಿಗೆ ದೈಹಿಕ ಹಾನಿಯ ಬೆದರಿಕೆಯನ್ನೊಡ್ಡಲಾಗಿದೆ. ಇನ್ನೊಂದು ದೇಶದಲ್ಲಿ, ಯೆಹೋವನ ಸಾಕ್ಷಿಗಳನ್ನು ದಸ್ತಗಿರಿ ಮಾಡಲಾದ, ದಂಡ ಹೇರಲಾದ ಇಲ್ಲವೇ ಹೊಡೆಯಲಾದ 1,100 ಪ್ರಕರಣಗಳ ದಾಖಲೆಯಿದೆ. ಇವುಗಳಲ್ಲಿ 200ಕ್ಕಿಂತಲೂ ಹೆಚ್ಚು ಪ್ರಕರಣಗಳು, ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಸಾಕ್ಷಿಗಳು ಕೂಡಿಬಂದಾಗ ಸಂಭವಿಸಿದವು. ತುಂಬ ಪ್ರತಿಕೂಲ ಪರಿಸ್ಥಿತಿಗಳ ಎದುರಿನಲ್ಲೂ ಈ ದೇಶಗಳಲ್ಲಿ ಹಾಗೂ ಇತರ ದೇಶಗಳಲ್ಲಿ ಯೆಹೋವನ ಆತ್ಮವು ಆತನ ಜನರನ್ನು ಪಾರುಗೊಳಿಸಿದೆ. (ಜೆಕರ್ಯ 4:6) ಶತ್ರುಗಳ ಕ್ರೋಧದ ಭರವು ಯೆಹೋವನನ್ನು ಸ್ತುತಿಸುವವರ ಬಾಯಿಮುಚ್ಚಿಸಲಾರದು. ಹೌದು, ಯಾವುದೇ ಆಯುಧವು ದೇವರ ಉದ್ದೇಶವನ್ನು ಸೋಲಿಸಲಾರದೆಂಬ ದೃಢಭರವಸೆ ನಮಗಿದೆ.
ಸುಳ್ಳು ನಾಲಿಗೆಯ ಖಂಡನೆ
5 ದೇವಜನರ ವಿರುದ್ಧ ಏಳುವ ಪ್ರತಿಯೊಂದು ನಾಲಿಗೆಯನ್ನು ಅವರು ದೋಷಿಯೆಂದು ಖಂಡಿಸುವರೆಂದು ಯೆಶಾಯನು ಪ್ರವಾದಿಸಿದನು. ಪ್ರಥಮ ಶತಮಾನದಲ್ಲಿ ಕ್ರೈಸ್ತರು ದುಷ್ಕರ್ಮಿಗಳೆಂದು ಕರೆಯಲ್ಪಟ್ಟು ಅನೇಕವೇಳೆ ತಪ್ಪು ವರದಿಗಳ ಗುರಿಹಲಗೆಯಾದರು. ಅ. ಕೃತ್ಯಗಳು 16:20, 21ರಲ್ಲಿರುವ ಮಾತುಗಳು ಅಂಥ ಆರೋಪಗಳ ಸಾಮಾನ್ಯ ಸ್ವರೂಪವನ್ನು ಬಿಂಬಿಸುತ್ತವೆ: “ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಗಲಿಬಿಲಿ ಮಾಡುತ್ತಾರೆ; . . . ರೋಮಾಯರಾದ ನಾವು ಅವಲಂಬಿಸಿ ನಡಿಸಕೂಡದಂಥ ಆಚಾರಗಳನ್ನು ಪ್ರಕಟಿಸುತ್ತಾರೆ.” ಇನ್ನೊಂದು ಸಂದರ್ಭದಲ್ಲಿ, ಕ್ರಿಸ್ತನ ಹಿಂಬಾಲಕರ ವಿರುದ್ಧ ಕ್ರಮಗೈಯುವಂತೆ ಧಾರ್ಮಿಕ ವಿರೋಧಿಗಳು ನಗರದ ಅಧಿಪತಿಗಳನ್ನು ಚಿತಾಯಿಸಲು ಪ್ರಯತ್ನಿಸಿದರು. ಅವರಂದದ್ದು: “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಆ ಮನುಷ್ಯರು ಇಲ್ಲಿಗೂ ಬಂದಿದ್ದಾರೆ, . . . ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಚಕ್ರವರ್ತಿಯ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ.” (ಅ. ಕೃತ್ಯಗಳು 17:6, 7) ಅಪೊಸ್ತಲ ಪೌಲನನ್ನು “ಪೀಡೆ” ಎಂದೂ, “ಲೋಕದಲ್ಲಿ ಎಲ್ಲೆಲ್ಲಿಯೂ” ‘ದಂಗೆ ಎಬ್ಬಿಸುವವನು’ ಎಂದೂ ಆರೋಪಿಸಲಾಯಿತು.—ಅ. ಕೃತ್ಯಗಳು 24:2-5.
6 ಅಂತೆಯೇ ಅತಿರೇಕದ ತಪ್ಪು ವರದಿಗಳು, ದ್ವೇಷಪೂರಿತ ನಿಂದೆ ಮತ್ತು ಚಾರಿತ್ರ್ಯವಧೆಯ ಆಂದೋಲನಗಳನ್ನು ಸತ್ಯ ಕ್ರೈಸ್ತರು ಇಂದು ಎದುರಿಸಬೇಕಾಗುವುದು ಅಚ್ಚರಿಯ ಸಂಗತಿಯಲ್ಲ. ಆದರೆ ಅಂಥ ಮೌಖಿಕ ದಾಳಿಗಳನ್ನು ನಾವು ಖಂಡಿಸುತ್ತೇವೆಂದು ಹೇಗೆ ಹೇಳಸಾಧ್ಯವಿದೆ?—ಯೆಶಾಯ 54:17.
7 ಅಂಥ ಆರೋಪಗಳು ಮತ್ತು ಅಪಪ್ರಚಾರವು ಸುಳ್ಳೆಂದು ಯೆಹೋವನ ಸಾಕ್ಷಿಗಳ ಉತ್ತಮ ನಡತೆ ತೋರಿಸಿಕೊಡುತ್ತದೆ. (1 ಪೇತ್ರ 2:12) ಕ್ರೈಸ್ತರು, ತಾವು ನಿಯಮ-ಪಾಲಕ ಪ್ರಜೆಗಳು ಮತ್ತು ತಮ್ಮ ಜೊತೆ ಮಾನವರ ಕ್ಷೇಮದಲ್ಲಿ ನಿಜ ಆಸಕ್ತಿಯಿರುವ ನೈತಿಕ ಜನರೆಂದು ತೋರಿಸುವಾಗ ಅವರ ಮೇಲೆ ಹಾಕಲಾದ ಆರೋಪಗಳು ಸುಳ್ಳೆಂದು ಬಯಲಾಗುತ್ತವೆ. ನಮ್ಮ ಒಳ್ಳೇ ನಡತೆಯೇ ನಿಜ ಸಾಕ್ಷ್ಯವಾಗಿದೆ. ನಮ್ಮನ್ನು ಗಮನಿಸುವವರು ನಾವು ಒಳ್ಳೇ ಕಾರ್ಯಗಳಲ್ಲಿ ಪಟ್ಟುಹಿಡಿಯುವುದನ್ನು ನೋಡುವಾಗ, ನಮ್ಮ ಸ್ವರ್ಗೀಯ ಪಿತನನ್ನು ಮಹಿಮೆಪಡಿಸಲು ಮತ್ತು ಆತನ ಸೇವಕರ ಜೀವನಶೈಲಿಯು ಉನ್ನತವಾದದ್ದೆಂದು ಒಪ್ಪಿಕೊಳ್ಳಲು ಪ್ರೇರಿತರಾಗುತ್ತಾರೆ.—ಯೆಶಾಯ 60:14; ಮತ್ತಾಯ 5:14-16.
8 ನಮ್ಮ ಶಾಸ್ತ್ರಾಧಾರಿತ ನಿಲುವನ್ನು ನಮ್ಮ ಕ್ರೈಸ್ತ ನಡತೆಯಿಂದಲ್ಲದೆ, ಬಾಯಿಮಾತಿನ ಮೂಲಕವೂ ಧೈರ್ಯದಿಂದ ಸಮರ್ಥಿಸುವ ಅಗತ್ಯ ಉಂಟಾದೀತು. ಒಂದು ವಿಧ ಯಾವುದೆಂದರೆ ಸುರಕ್ಷೆಗಾಗಿ ಸರಕಾರಗಳಿಗೆ ಮತ್ತು ನ್ಯಾಯಾಲಯಗಳಿಗೆ ಮನವಿ ಮಾಡುವ ಮೂಲಕವೇ. (ಎಸ್ತೇರಳು 8:3; ಅ. ಕೃತ್ಯಗಳು 22:25-29; 25:10-12) ಯೇಸು ಭೂಮಿಯಲ್ಲಿದ್ದಾಗ ಆಗಾಗ್ಗೆ ತನ್ನ ಟೀಕಾಕಾರರೊಂದಿಗೆ ಬಹಿರಂಗವಾಗಿ ವಿವಾದಿಸಿ, ಅವರ ಸುಳ್ಳಾರೋಪಗಳು ತಪ್ಪೆಂದು ರುಜುಪಡಿಸಿದನು. (ಮತ್ತಾಯ 12:34-37; 15:1-11) ಯೇಸುವನ್ನು ಅನುಕರಿಸುತ್ತಾ, ನಮ್ಮ ಹೃತ್ಪೂರ್ವಕ ನಿಶ್ಚಿತಾಭಿಪ್ರಾಯಗಳ ಬಗ್ಗೆ ಇತರರಿಗೆ ಸ್ಪಷ್ಟ ವಿವರಣೆಯನ್ನು ಕೊಡಲು ಸಿಗುವ ಅವಕಾಶವನ್ನು ನಾವು ಸದುಪಯೋಗಿಸುತ್ತೇವೆ. (1 ಪೇತ್ರ 3:15) ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ ಇಲ್ಲವೇ ಅವಿಶ್ವಾಸಿ ಸಂಬಂಧಿಕರಿಂದ ಬರುವ ಅಪಹಾಸ್ಯವು ದೇವರ ಸತ್ಯವನ್ನು ತಿಳಿಯಪಡಿಸುವುದರಿಂದ ನಮ್ಮನ್ನೆಂದೂ ತಡೆಯದಿರಲಿ.—2 ಪೇತ್ರ 3:3, 4.
ಯೆರೂಸಲೇಮ್—“ಭಾರೀ ಬಂಡೆ”
9 ಜನಾಂಗಗಳು ಸತ್ಯ ಕ್ರೈಸ್ತರ ವಿರುದ್ಧ ಏಕೆ ಎದ್ದುನಿಲ್ಲುತ್ತವೆ ಎಂಬ ವಿಷಯದ ಮೇಲೆ ಜೆಕರ್ಯನ ಪ್ರವಾದನೆ ಬೆಳಕು ಬೀರುತ್ತದೆ. ಜೆಕರ್ಯ 12:3 ಏನನ್ನುತ್ತದೆ ಎಂಬುದನ್ನು ಗಮನಿಸಿರಿ: “ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತ ಜನಗಳಿಗೂ ಭಾರೀ ಬಂಡೆಯನ್ನಾಗಿ ಮಾಡುವೆನು.” ಈ ಪ್ರವಾದನೆಯು ಯಾವ ಯೆರೂಸಲೇಮಿಗೆ ಸೂಚಿಸುತ್ತದೆ? ಯೆರೂಸಲೇಮಿನ ಕುರಿತಾದ ಜೆಕರ್ಯನ ಪ್ರವಾದನೆಯು, ‘ಪರಲೋಕದ ಯೆರೂಸಲೇಮಿಗೆ’ ಅಂದರೆ ಅಭಿಷಿಕ್ತ ಕ್ರೈಸ್ತರನ್ನು ಎಲ್ಲಿಗೆ ಕರೆಯಲಾಗಿದೆಯೋ ಆ ಸ್ವರ್ಗೀಯ ರಾಜ್ಯಕ್ಕೆ ಅನ್ವಯವಾಗುತ್ತದೆ. (ಇಬ್ರಿಯ 12:22) ಮೆಸ್ಸೀಯನ ರಾಜ್ಯದ ಈ ಬಾಧ್ಯಸ್ಥರಲ್ಲಿ ಉಳಿಕೆಯವರ ಚಿಕ್ಕ ಗುಂಪು ಈಗಲೂ ಭೂಮಿಯಲ್ಲಿದೆ. ಈ ಉಳಿಕೆಯವರು ಅವರ ಸಂಗಡಿಗರಾದ “ಬೇರೆ ಕುರಿ”ಗಳೊಂದಿಗೆ, ಇನ್ನೂ ಸಮಯ ಇರುವಾಗಲೇ ಜನರು ದೇವರ ರಾಜ್ಯದೆಡೆಗೆ ತಿರುಗುವಂತೆ ಉತ್ತೇಜಿಸುತ್ತಿದ್ದಾರೆ. (ಯೋಹಾನ 10:16; ಪ್ರಕಟನೆ 11:15) ಈ ಆಮಂತ್ರಣಕ್ಕೆ ಜನಾಂಗಗಳು ಹೇಗೆ ಪ್ರತಿಕ್ರಿಯಿಸಿವೆ? ಇಂದು ಯೆಹೋವನು ಸತ್ಯಾರಾಧಕರಿಗೆ ಯಾವ ರೀತಿಯ ಬೆಂಬಲ ಕೊಡುತ್ತಾನೆ? ಜೆಕರ್ಯ 12ನೇ ಅಧ್ಯಾಯದ ಅರ್ಥವನ್ನು ಮುಂದಕ್ಕೆ ಪರಿಶೀಲಿಸುವ ಮೂಲಕ ಕಂಡುಹಿಡಿಯೋಣ. ಹಾಗೆ ಮಾಡುವಾಗ, ದೇವರ ಅಭಿಷಿಕ್ತರ ಮತ್ತು ಅವರ ಸಮರ್ಪಿತ ಒಡನಾಡಿಗಳ ವಿರುದ್ಧ ‘ಯಾವ ಆಯುಧವೂ ಜಯಿಸದು’ ಎಂಬ ಆಶ್ವಾಸನೆ ನಮಗಿರಬಲ್ಲದು.
10 ಜನಾಂಗಗಳಿಗೆ “ಕಡುಗಾಯ” ಆಗುತ್ತದೆಂದು ಜೆಕರ್ಯ 12:3 ಸೂಚಿಸುತ್ತದೆ. ಇದು ಹೇಗೆ? ರಾಜ್ಯದ ಸುವಾರ್ತೆಯು ಸಾರಲ್ಪಡಬೇಕೆಂದು ದೇವರು ಅಪ್ಪಣೆ ಕೊಟ್ಟಿದ್ದಾನೆ. ಸಾರುವ ಈ ಕರ್ತವ್ಯವನ್ನು ಯೆಹೋವನ ಸಾಕ್ಷಿಗಳು ತುಂಬ ಗಂಭೀರವೆಂದು ಪರಿಗಣಿಸುತ್ತಾರೆ. ಆದರೆ ದೇವರ ರಾಜ್ಯವೇ ಮಾನವಕುಲದ ಏಕೈಕ ನಿರೀಕ್ಷೆ ಎಂಬ ಘೋಷಣೆಯು ಜನಾಂಗಗಳಿಗೆ ಒಂದು ‘ಭಾರೀ ಬಂಡೆ’ಯಾಗಿಬಿಟ್ಟಿದೆ. ಅವರು ರಾಜ್ಯ ಸುವಾರ್ತಿಕರಿಗೆ ಅಡ್ಡಗಾಲು ಹಾಕುವ ಮೂಲಕ ಅದನ್ನು ಎತ್ತಿಹಾಕಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುತ್ತಿರುವಾಗ, ಈ ಕೆಲಸದಲ್ಲಿ ಮಧ್ಯೆ ಕೈಹಾಕುತ್ತಿರುವ ಜನಾಂಗಗಳು “ಕಡುಗಾಯ”ಗಳನ್ನು, ಎಲ್ಲ ಕಡೆಗಳಲ್ಲೂ ತರಚುಗಾಯಗಳನ್ನು ಹೊಂದಿದ್ದಾರೆ. ಅವರ ಕೃತ್ಯಗಳು ಅವಮಾನಕರ ರೀತಿಯಲ್ಲಿ ವಿಫಲವಾಗಿರುವುದರಿಂದ ಅವರ ಹೆಸರು ಮಣ್ಣುಪಾಲಾಗಿದೆ. ಅವರು ಎಂದಿಗೂ ಸತ್ಯಾರಾಧಕರ ಬಾಯಿಮುಚ್ಚಿಸಲಾರರು. ಈ ಸತ್ಯಾರಾಧಕರು, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಮುಂಚೆ ದೇವರ ಮೆಸ್ಸೀಯ ರಾಜ್ಯದ ‘ನಿತ್ಯ ಶುಭವರ್ತಮಾನವನ್ನು’ ಘೋಷಿಸುವುದು ತಮ್ಮ ಗೌರವವೆಂದು ಬಹುಮೂಲ್ಯವಾಗಿ ಪರಿಗಣಿಸುತ್ತಾರೆ. (ಪ್ರಕಟನೆ 14:6) ಯೆಹೋವನ ಸೇವಕರ ಮೇಲೆ ನಡೆಸಲಾಗುತ್ತಿದ್ದ ದೌರ್ಜನ್ಯವನ್ನು ನೋಡಿ ಆಫ್ರಿಕ ದೇಶದ ಸೆರೆಮನೆ ಕಾವಲುಗಾರನೊಬ್ಬನು ಕಾರ್ಯತಃ ಹೀಗಂದನು: ‘ಈ ಜನರನ್ನು ಹಿಂಸಿಸಲು ನೀವು ಮಾಡುವ ಪ್ರಯತ್ನಗಳೆಲ್ಲ ವ್ಯರ್ಥ. ಅವರೆಂದೂ ರಾಜಿಮಾಡಿಕೊಳ್ಳುವುದಿಲ್ಲ. ಅವರು ಹೆಚ್ಚಾಗುತ್ತಲೇ ಹೋಗುತ್ತಾರೆ.’
11 ಜೆಕರ್ಯ 12:4 ಓದಿ. ಯೆಹೋವನು, ತನ್ನ ಧೀರ ರಾಜ್ಯ ಸಂದೇಶಕರ ವಿರುದ್ಧ ಹೋರಾಡುವವರನ್ನು ಸಾಂಕೇತಿಕವಾಗಿ ಕುರುಡುಗೊಳಿಸಿ ‘ತಬ್ಬಿಬ್ಬು’ಗೊಳಿಸುವೆನೆಂದು ವಾಗ್ದಾನಮಾಡುತ್ತಾನೆ. ಆತನು ತನ್ನ ಮಾತನ್ನು ಪಾಲಿಸಿದ್ದಾನೆ. ಉದಾಹರಣೆಗಾಗಿ ಒಂದು ದೇಶದಲ್ಲಿ ಸತ್ಯಾರಾಧನೆಯ ಮೇಲೆ ನಿಷೇಧವಿತ್ತು. ಆದರೂ ಆಧ್ಯಾತ್ಮಿಕ ಆಹಾರವು ದೇವರ ಜನರ ಕೈಗೆ ಸಿಗದಂತೆ ಮಾಡಲು ವಿರೋಧಿಗಳು ಅಶಕ್ತರಾಗಿದ್ದರು. ಯೆಹೋವನ ಸಾಕ್ಷಿಗಳು ದೇಶದೊಳಗೆ ಬೈಬಲ್ ಸಾಹಿತ್ಯವನ್ನು ತರಲಿಕ್ಕಾಗಿ ಬಲೂನುಗಳನ್ನು ಬಳಸುತ್ತಿದ್ದಾರೆಂದು ಸಹ ಒಂದು ವಾರ್ತಾಪತ್ರಿಕೆ ಹೇಳಿತು! ದೇವರು ತನ್ನ ನಿಷ್ಠಾವಂತ ಸೇವಕರಿಗೆ ಮಾಡಿದ ಈ ಮುಂದಿನ ವಾಗ್ದಾನವು ಸತ್ಯವೆಂದು ರುಜುವಾಯಿತು: “ನಾನು ಎಲ್ಲಾ ಕುದುರೆಗಳಿಗೆ ತಬ್ಬಿಬ್ಬನ್ನು ಉಂಟುಮಾಡುವೆನು, ಸವಾರರನ್ನು ಭ್ರಮೆಗೊಳಿಸುವೆನು; ಯೆಹೂದ ವಂಶವನ್ನು ಕಟಾಕ್ಷಿಸಿ ಜನಾಂಗಗಳ ಅಶ್ವಗಳನ್ನೆಲ್ಲಾ ಕುರುಡುಮಾಡುವೆನು.” ಕ್ರೋಧದಿಂದ ಕುರುಡರಾಗಿರುವ, ದೇವರ ರಾಜ್ಯದ ಶತ್ರುಗಳಿಗೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದು ತಿಳಿಯುವುದಿಲ್ಲ. ಆದರೆ, ಯೆಹೋವನು ತನ್ನ ಜನರನ್ನು ಒಂದು ಗುಂಪಾಗಿ ಸಂರಕ್ಷಿಸಿ, ಅವರನ್ನು ಸುಕ್ಷೇಮವಾಗಿರಿಸುವನೆಂಬ ಪೂರ್ಣ ಭರವಸೆ ನಮಗಿದೆ.—2 ಅರಸುಗಳು 6:15-19.
12 ಜೆಕರ್ಯ 12:5, 6 ಓದಿ. “ಯೆಹೂದದ ಕುಲಪತಿಗಳು” ದೇವಜನರ ಮಧ್ಯೆ ಮೇಲ್ವಿಚಾರಣೆ ಮಾಡುತ್ತಿರುವವರಿಗೆ ಸೂಚಿಸುತ್ತಾರೆ. ತನ್ನ ರಾಜ್ಯದ ಭೂ-ಅಭಿರುಚಿಗಳಿಗಾಗಿ ಬೆಂಕಿಯಂಥ ಹುರುಪನ್ನು ಯೆಹೋವನು ಅವರಲ್ಲಿ ತುಂಬಿಸುತ್ತಾನೆ. ಒಂದು ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರಿಗೆ ಅಂದದ್ದು: “ನಾನು ಬೆಂಕಿಯನ್ನು ಭೂಮಿಯ ಮೇಲೆ ಹಾಕಬೇಕೆಂದು ಬಂದೆನು.” (ಲೂಕ 12:49) ನಿಜವಾಗಿಯೂ ಆತನೊಂದು ಬೆಂಕಿ ಹೊತ್ತಿಸಿದನು. ತನ್ನ ಹುರುಪಿನ ಸಾರುವ ಚಟುವಟಿಕೆಯ ಮೂಲಕ ಆತನು ಜನರ ಮುಂದೆ, ದೇವರ ರಾಜ್ಯವನ್ನು ಒಂದು ಅತಿ ಪ್ರಧಾನ ವಿಷಯವನ್ನಾಗಿ ಮಾಡಿದನು. ಇದು, ಆ ಯೆಹೂದಿ ಜನಾಂಗದಾದ್ಯಂತ ಬಿರುಸಾದ ವಾಗ್ವಾದವನ್ನು ಹುಟ್ಟಿಸಿತು. (ಮತ್ತಾಯ 4:17, 25; 10:5-7, 17-20) ಅದೇ ರೀತಿಯಲ್ಲಿ, ‘ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯಂತೆಯೂ ಸಿವುಡುಗಳ ನಡುವಣ ಪಂಜಿನಂತೆಯೂ’ ನಮ್ಮ ದಿನದಲ್ಲಿರುವ ಯೇಸುವಿನ ಹೆಜ್ಜೆಜಾಡಿನ ಹಿಂಬಾಲಕರು ಆಧ್ಯಾತ್ಮಿಕ ರೀತಿಯಲ್ಲಿ ಬೆಂಕಿ ಹೊತ್ತಿಸಿದ್ದಾರೆ. 1917ರಲ್ಲಿ ಬಿಡುಗಡೆಯಾದ ದ ಫಿನಿಷ್ಡ್ ಮಿಸ್ಟರಿa ಎಂಬ ಪುಸ್ತಕವು ಕ್ರೈಸ್ತಪ್ರಪಂಚದ ಕಪಟಾಚಾರವನ್ನು ಬಹಳ ಪ್ರಬಲವಾದ ರೀತಿಯಲ್ಲಿ ಬಯಲುಪಡಿಸಿತು. ಇದು ಪಾದ್ರಿವರ್ಗದವರಿಂದ ಕ್ರೋಧಭರಿತ ಪ್ರತಿಕ್ರಿಯೆಯನ್ನು ಬರಮಾಡಿತು. ಇತ್ತೀಚಿನ ಸಮಯಗಳಲ್ಲಿ, “ಧರ್ಮದ ಹೆಸರಿನಲ್ಲಿ ನಡೆಸಲಾಗುವ ದುಷ್ಕೃತ್ಯಗಳು ಅಂತ್ಯವಾಗುವವೋ?” ಎಂಬ ರಾಜ್ಯ ವಾರ್ತೆ (ನಂ. 37) ಅನೇಕ ಜನರು ಒಬ್ಬನೇ ದೇವರ ಪರವಾಗಿ ಇಲ್ಲವೆ ಆತನಿಗೆ ವಿರುದ್ಧವಾಗಿ ನಿಲುವನ್ನು ತೆಗೆದುಕೊಳ್ಳುವ ಆಯ್ಕೆಮಾಡಲು ಕಾರಣವಾಗಿದೆ.
‘ಯೆಹೂದದ ಪಾಳೆಯಗಳು’ ಉಳಿಸಲ್ಪಟ್ಟವು
13 ಜೆಕರ್ಯ 12:7, 8 ಓದಿ. ಪುರಾತನಕಾಲದ ಇಸ್ರಾಯೇಲಿನಲ್ಲಿ ದೇಶದಾದ್ಯಂತ ಪಾಳೆಯಗಳು ಇಲ್ಲವೇ ಗುಡಾರಗಳು ಒಂದು ವಿಶಿಷ್ಟ ನೋಟವಾಗಿದ್ದವು. ಇಂಥ ಗುಡಾರಗಳನ್ನು ಕೆಲವೊಮ್ಮೆ ಕುರುಬರು ಮತ್ತು ಕೃಷಿ ಕಾರ್ಮಿಕರು ಬಳಸುತ್ತಿದ್ದರು. ಒಂದು ಶತ್ರು ಜನಾಂಗವು ಯೆರೂಸಲೇಮ್ ಪಟ್ಟಣದ ಮೇಲೆ ಆಕ್ರಮಣ ಮಾಡುತ್ತಿದ್ದಲ್ಲಿ ಈ ಜನರೇ ಪ್ರಥಮವಾಗಿ ಬಾಧಿತರಾಗುತ್ತಿದ್ದು, ಅವರಿಗೆ ಸಂರಕ್ಷಣೆಯ ಅಗತ್ಯವಿರುತ್ತಿತ್ತು. ‘ಯೆಹೂದದ ಪಾಳೆಯಗಳು’ ಎಂಬ ಅಭಿವ್ಯಕ್ತಿಯು ನಮ್ಮ ಸಮಯದಲ್ಲಿ ಅಭಿಷಿಕ್ತ ಉಳಿಕೆಯವರು ಭದ್ರವಾದ ಕೋಟೆಪಟ್ಟಣಗಳಲ್ಲಿ ಅಲ್ಲ ಬದಲಾಗಿ ಹೊರಗೆ ಬಯಲಿನಲ್ಲಿದ್ದಾರೆ ಎಂಬುದನ್ನು ಸಾಂಕೇತಿಕಾರ್ಥದಲ್ಲಿ ಸೂಚಿಸುತ್ತದೆ. ಅಲ್ಲಿ ಅವರು ಮೆಸ್ಸೀಯನ ರಾಜ್ಯದ ಅಭಿರುಚಿಗಳನ್ನು ನಿರ್ಭೀತಿಯಿಂದ ಸಮರ್ಥಿಸುತ್ತಾರೆ. ಸೇನಾಧೀಶ್ವರನಾದ ಯೆಹೋವನು ಈ ‘ಯೆಹೂದದ ಪಾಳೆಯಗಳನ್ನು’ ಮೊದಲಾಗಿ ರಕ್ಷಿಸುವನು ಏಕೆಂದರೆ ಇವರೇ ಸೈತಾನನ ಆಕ್ರಮಣದ ನೇರ ಗುರಿಹಲಗೆಯಾಗಿದ್ದಾರೆ.
14 ಯೆಹೋವನು, ರಾಜ್ಯದ ಈ ಅಭಿಷಿಕ್ತ ರಾಯಭಾರಿಗಳು ಹೊರಗೆ ಬಯಲಿನಲ್ಲಿ ತಮ್ಮ ‘ಪಾಳೆಯದಲ್ಲಿರುವಾಗ’ ಅವರನ್ನು ಕಾಪಾಡುತ್ತಾನೆಂದು ಇತಿಹಾಸದ ದಾಖಲೆಯು ರುಜುಪಡಿಸುತ್ತದೆ.b ಅವರು “ಕುಂಟ”ರಾಗದೆ, ಯೋಧ-ಅರಸನಾದ ದಾವೀದನಂತೆ ಬಲಶಾಲಿಗಳೂ ಧೀರರೂ ಆಗಿರುವಂತೆ ಮಾಡುತ್ತಾನೆ.
15 ಜೆಕರ್ಯ 12:9 ಓದಿ. ಯೆಹೋವನು ‘ಜನಾಂಗಗಳ ಧ್ವಂಸಕ್ಕೆ ಕೈಹಾಕುವುದು’ ಏಕೆ? ಅವರು ಮೆಸ್ಸೀಯನ ರಾಜ್ಯವನ್ನು ಪಟ್ಟುಬಿಡದೇ ವಿರೋಧಿಸುವುದರಿಂದಾಗಿಯೇ. ಅವರು ದೇವರ ಜನರನ್ನು ಪೀಡಿಸಿ, ಹಿಂಸಿಸುವುದರಿಂದ ತೀರ್ಪಿಗೆ ಒಳಗಾಗುತ್ತಾರೆ. ಬೇಗನೆ ಭೂಮಿಯಲ್ಲಿರುವ ಸೈತಾನನ ಕಾರ್ಯಕರ್ತರು ದೇವರ ಸತ್ಯಾರಾಧಕರ ಮೇಲೆ ಕೊನೆಯ ಆಕ್ರಮಣವನ್ನು ಮಾಡುವರು. ಇದು, ಬೈಬಲ್ನಲ್ಲಿ ಹರ್ಮಗೆದೋನ್ ಎಂದು ವರ್ಣಿಸಲಾಗಿರುವ ಜಾಗತಿಕ ಸನ್ನಿವೇಶಕ್ಕೆ ನಡೆಸುವುದು. (ಪ್ರಕಟನೆ 16:13-16) ಈ ದಾಳಿಗೆ ಪ್ರತಿಕ್ರಿಯೆಯಲ್ಲಿ ಸರ್ವೋಚ್ಛ ನ್ಯಾಯಾಧಿಪತಿಯು ತನ್ನ ಸೇವಕರನ್ನು ರಕ್ಷಿಸಿ, ಜನಾಂಗಗಳ ಮಧ್ಯೆ ತನ್ನ ಹೆಸರನ್ನು ಪವಿತ್ರೀಕರಿಸುವನು.—ಯೆಹೆಜ್ಕೇಲ 38:14-18, 22, 23.
16 ಲೋಕವ್ಯಾಪಕವಾಗಿ ದೇವರ ಜನರ ನಂಬಿಕೆಯನ್ನು ದುರ್ಬಲಗೊಳಿಸುವುದಕ್ಕಾಗಲಿ ಅವರ ಹುರುಪನ್ನು ನಂದಿಸಲಿಕ್ಕಾಗಲಿ ಸೈತಾನನ ಬಳಿ ಯಾವುದೇ ಆಯುಧವಿಲ್ಲ. ಯೆಹೋವನ ರಕ್ಷಣಾ ಶಕ್ತಿಯಿಂದಾಗಿ ಫಲಿಸುವಂಥ ನಮ್ಮ ಆಧ್ಯಾತ್ಮಿಕ ಶಾಂತಿಯು “ಯೆಹೋವನ ಸೇವಕರ ಸ್ವಾಸ್ತ್ಯ” ಆಗಿದೆ. (ಯೆಶಾಯ 54:17) ನಮ್ಮ ಶಾಂತಿ ಮತ್ತು ಆಧ್ಯಾತ್ಮಿಕ ಸಮೃದ್ಧಿಯನ್ನು ಯಾರೂ ಬಲವಂತವಾಗಿ ಕಸಿದುಕೊಳ್ಳಲಾರರು. (ಕೀರ್ತನೆ 118:6) ಉರಿಯುವ ಬೆಂಕಿಗೆ ತುಪ್ಪಸುರಿದರೆ ಹೇಗೋ ಹಾಗೆ ಸೈತಾನನು ವಿರೋಧವನ್ನು ಹೆಚ್ಚಿಸುತ್ತಾ ಇರುವನು ಮತ್ತು ಕಷ್ಟಗಳನ್ನು ಎಬ್ಬಿಸಲು ಪ್ರಯತ್ನಿಸುವನು. ಅವಮಾನದ ಎದುರಿನಲ್ಲೂ ನಾವು ನಿಷ್ಠೆಯಿಂದ ತಾಳಿಕೊಳ್ಳುತ್ತಿರುವುದು, ದೇವರಾತ್ಮವು ನಮ್ಮ ಮೇಲೆ ನೆಲೆಸಿದೆ ಎಂಬುದಕ್ಕೆ ರುಜುವಾತಾಗಿದೆ. (1 ಪೇತ್ರ 4:14) ಯೆಹೋವನ ಸ್ಥಾಪಿತ ರಾಜ್ಯದ ಕುರಿತಾದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಘೋಷಿಸಲಾಗುತ್ತಿದೆ. ಸ್ತಬ್ಧಗೊಳಿಸುವ ಹೊಡೆತದಂತೆ ದೇವಜನರ ಮೇಲೆ ವಿರೋಧವೆಂಬ ಸಾಂಕೇತಿಕ “ಕವಣೆಯ ಕಲ್ಲು”ಗಳನ್ನು ಎಸೆಯಲಾಗಿದೆ. ಆದರೆ ಯೆಹೋವನ ಬಲದಿಂದ ಆತನ ಸೇವಕರು ಇಂಥ ಕಲ್ಲುಗಳ ಹೊಡೆತವನ್ನು ಜಯಿಸಿ ಅವುಗಳ ಪರಿಣಾಮವನ್ನು ಶೂನ್ಯಮಾಡಿದ್ದಾರೆ. (ಜೆಕರ್ಯ 9:15) ಅಭಿಷಿಕ್ತ ಉಳಿಕೆಯವರು ಮತ್ತು ಅವರ ನಿಷ್ಠಾವಂತ ಸಂಗಡಿಗರನ್ನು ಯಾರೂ ತಡೆಗಟ್ಟಲಾರರು!
17 ಪಿಶಾಚನ ಆಕ್ರಮಣಗಳಿಂದ ನಮಗೆ ಸಂಪೂರ್ಣ ಬಿಡುಗಡೆ ಸಿಗುವ ಸಮಯಕ್ಕಾಗಿ ನಾವು ಎದುರುನೋಡುತ್ತೇವೆ. ‘ನಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಮಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ಖಂಡಿಸುವೆವು’ ಎಂಬ ಖಾತರಿಯ ಮಾತುಗಳಿಂದ ನಮಗೆಷ್ಟು ಸಾಂತ್ವನ ಸಿಗುತ್ತದೆ!
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಆದರೆ ಈಗ ಲಭ್ಯವಿಲ್ಲ.
b ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕದ 675-6 ಪುಟಗಳನ್ನು ನೋಡಿರಿ.
ನಿಮ್ಮ ಉತ್ತರ ಏನು?
• ಸೈತಾನನ ಆಯುಧಗಳು ಜಯಿಸುವುದಿಲ್ಲ ಎಂದು ಯಾವುದು ತೋರಿಸುತ್ತದೆ?
• ಸ್ವರ್ಗೀಯ ಯೆರೂಸಲೇಮು ಹೇಗೆ ಒಂದು ‘ಭಾರೀ ಬಂಡೆ’ ಆಗಿದೆ?
• ಯೆಹೋವನು ಹೇಗೆ ‘ಯೆಹೂದದ ಪಾಳೆಯಗಳನ್ನು’ ಉಳಿಸುತ್ತಾನೆ?
• ಹರ್ಮಗೆದೋನ್ ಸಮೀಪಿಸುತ್ತಿರುವಾಗ ನಿಮಗೆ ಯಾವುದರ ಬಗ್ಗೆ ದೃಢಭರವಸೆ ಇದೆ?
[ಅಧ್ಯಯನ ಪ್ರಶ್ನೆಗಳು]
1, 2. ಅಲ್ಬೇನಿಯದಲ್ಲಿನ ಯೆಹೋವನ ಸಾಕ್ಷಿಗಳ ಅನುಭವಗಳು ಯೆಶಾಯ 54:17ರ ನಿಜತ್ವವನ್ನು ಹೇಗೆ ದೃಷ್ಟಾಂತಿಸುತ್ತವೆ?
3, 4. (ಎ) ಸೈತಾನನ ಆಯುಧಗಳಲ್ಲಿ ಏನೇನು ಸೇರಿವೆ? (ಬಿ) ಪಿಶಾಚನ ಆಯುಧಗಳು ಹೇಗೆ ವಿಫಲವಾಗಿವೆ?
5. ಪ್ರಥಮ ಶತಮಾನದಲ್ಲಿ ಯೆಹೋವನ ಸೇವಕರ ವಿರುದ್ಧ ಯಾವ ಸುಳ್ಳು ನಾಲಿಗೆಗಳು ಎದ್ದವು?
6, 7. ಸತ್ಯ ಕ್ರೈಸ್ತರು ತಮ್ಮ ವಿರುದ್ಧವಾದ ಮೌಖಿಕ ದಾಳಿಗಳನ್ನು ಖಂಡಿಸುವ ಒಂದು ವಿಧ ಯಾವುದು?
8. (ಎ) ನಮ್ಮ ಶಾಸ್ತ್ರಾಧಾರಿತ ನಿಲುವನ್ನು ಸಮರ್ಥಿಸಲಿಕ್ಕಾಗಿ ಕೆಲವೊಮ್ಮೆ ಏನು ಆವಶ್ಯಕ? (ಬಿ) ವಿರೋಧಿಸುವ ನಾಲಿಗೆಗಳನ್ನು ಖಂಡಿಸುವುದರಲ್ಲಿ ನಾವು ಕ್ರಿಸ್ತನನ್ನು ಹೇಗೆ ಅನುಕರಿಸುತ್ತೇವೆ?
9. ಜೆಕರ್ಯ 12:3ರಲ್ಲಿ ತಿಳಿಸಲಾಗಿರುವ ‘ಭಾರೀ ಬಂಡೆ’ ಯಾವ ಯೆರೂಸಲೇಮಿಗೆ ಸೂಚಿಸುತ್ತದೆ, ಮತ್ತು ಭೂಮಿಯಲ್ಲಿ ಅದನ್ನು ಯಾರು ಪ್ರತಿನಿಧಿಸುತ್ತಾರೆ?
10. (ಎ) ದೇವರ ಜನರ ಮೇಲೆ ಏಕೆ ಆಕ್ರಮಣಮಾಡಲಾಗುತ್ತದೆ? (ಬಿ) ‘ಭಾರೀ ಬಂಡೆಯನ್ನು’ ಎತ್ತಿಹಾಕಲು ಪ್ರಯತ್ನಿಸುವವರಿಗೆ ಏನಾಗಿದೆ?
11. ಜೆಕರ್ಯ 12:4ರಲ್ಲಿ ದಾಖಲಾಗಿರುವ ವಾಗ್ದಾನವನ್ನು ದೇವರು ಹೇಗೆ ಪಾಲಿಸಿದ್ದಾನೆ?
12. (ಎ) ಯೇಸು ಭೂಮಿಯಲ್ಲಿದ್ದಾಗ ಯಾವ ಅರ್ಥದಲ್ಲಿ ಬೆಂಕಿ ಹೊತ್ತಿಸಿದನು? (ಬಿ) ಆಧ್ಯಾತ್ಮಿಕ ರೀತಿಯಲ್ಲಿ ಅಭಿಷಿಕ್ತ ಉಳಿಕೆಯವರು ಹೇಗೆ ಬೆಂಕಿ ಹೊತ್ತಿಸಿದ್ದಾರೆ, ಮತ್ತು ಫಲಿತಾಂಶಗಳೇನು?
13. ‘ಯೆಹೂದದ ಪಾಳೆಯಗಳು’ ಎಂಬ ಅಭಿವ್ಯಕ್ತಿ ಯಾವ ಸನ್ನಿವೇಶಕ್ಕೆ ಸೂಚಿಸುತ್ತದೆ, ಮತ್ತು ಬಾಧಿತರಾದವರನ್ನು ಯೆಹೋವನು ಏಕೆ ರಕ್ಷಿಸುತ್ತಾನೆ?
14. ‘ಯೆಹೂದದ ಪಾಳೆಯದಲ್ಲಿರುವವರನ್ನು’ ಯೆಹೋವನು ಹೇಗೆ ಕಾಪಾಡುತ್ತಾನೆ, ಮತ್ತು ‘ಕುಂಟ’ರಾಗದೇ ಇರುವಂತೆ ಮಾಡುವುದು ಹೇಗೆ?
15. ಯೆಹೋವನು ‘ಎಲ್ಲಾ ಜನಾಂಗಗಳ ಧ್ವಂಸಕ್ಕೆ ಕೈಹಾಕುವುದು’ ಏಕೆ, ಮತ್ತು ಯಾವ ಹಂತದಲ್ಲಿ ಇದನ್ನು ಮಾಡುವನು?
16, 17. (ಎ) “ಯೆಹೋವನ ಸೇವಕರ ಸ್ವಾಸ್ತ್ಯ” ಏನು? (ಬಿ) ಸೈತಾನನ ದಾಳಿಗಳನ್ನು ನಾವು ತಾಳಿಕೊಳ್ಳುವುದು ಯಾವುದರ ರುಜುವಾತಾಗಿದೆ?
[Pictures on page 23]
ಅಲ್ಬೇನಿಯದಲ್ಲಿರುವ ಯೆಹೋವನ ಜನರು ಸೈತಾನನ ದಾಳಿಗಳ ಮಧ್ಯೆಯೂ ನಂಬಿಗಸ್ತರಾಗಿ ಉಳಿದರು
[Picture on page 25]
ಯೇಸು ಸುಳ್ಳಾರೋಪಗಳನ್ನು ತಪ್ಪೆಂದು ರುಜುಪಡಿಸಿದನು
[Pictures on page 26]
ಸುವಾರ್ತೆಯನ್ನು ಘೋಷಿಸುವವರ ವಿರುದ್ಧ ಕಲ್ಪಿಸಲಾಗುವ ಯಾವುದೇ ಆಯುಧ ಜಯಿಸದು