ಯೆಹೋವನು ತನ್ನ ಜನರನ್ನು ಬೆಳಕಿನಿಂದ ಚಂದಗೊಳಿಸುತ್ತಾನೆ
“ಏಳು, [“ಓ ಸ್ತ್ರೀಯೇ,” NW] ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.”—ಯೆಶಾಯ 60:1.
1, 2. (ಎ) ಮಾನವಕುಲದ ಪರಿಸ್ಥಿತಿ ಹೇಗಿದೆ? (ಬಿ) ಮಾನವಕುಲದ ಅಂಧಕಾರದ ಹಿಂದೆ ಯಾರಿದ್ದಾರೆ?
“ಒಬ್ಬ ಯೆಶಾಯನಾಗಲಿ ಸಂತ ಪೌಲನಾಗಲಿ ಈಗ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!” ಇದು 1940ಗಳಷ್ಟು ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ರ ವಿಷಾದಭರಿತ ಕರೆಯಾಗಿತ್ತು. ಅವರು ಅಂತಹ ಮಾತುಗಳನ್ನು ಏಕೆ ಆಡಿದರು? ಏಕೆಂದರೆ ಅವರಿಗೆ ಆ ಸಮಯದಲ್ಲಿ ಲೋಕದಲ್ಲಿ ಅಂತಹ ನೈತಿಕ ಮುಖಂಡರ ಅಗತ್ಯವಿದೆಯೆಂದು ಅನಿಸಿತ್ತು. ಮಾನವಕುಲವು ಆಗ ತಾನೇ ಇಪ್ಪತ್ತನೆಯ ಶತಮಾನದ ಅತಿ ಅಂಧಕಾರದ ಸಮಯವಾದ ಎರಡನೆಯ ಜಾಗತಿಕ ಯುದ್ಧದಿಂದ ಹೊರಬಂದಿತ್ತು. ಯುದ್ಧವು ಮುಗಿದಿದ್ದರೂ, ಲೋಕದಲ್ಲಿ ಶಾಂತಿಯಿರಲಿಲ್ಲ. ಅಂಧಕಾರವು ಇನ್ನೂ ಇತ್ತು. ಹೌದು, ಇಂದು ಆ ಯುದ್ಧವು ಮುಗಿದು 57 ವರುಷಗಳಾಗಿವೆಯಾದರೂ ಲೋಕವು ಇನ್ನೂ ಅಂಧಕಾರದಲ್ಲಿದೆ. ಆ ಅಧ್ಯಕ್ಷ ಟ್ರೂಮನ್ ಈಗ ಜೀವಿಸುತ್ತಿರುತ್ತಿದ್ದರೆ, ಅವರು ಇನ್ನೂ ಯೆಶಾಯ ಮತ್ತು ಅಪೊಸ್ತಲ ಪೌಲರಂತಹ ನೈತಿಕ ನಾಯಕರ ಆವಶ್ಯಕತೆಯನ್ನು ಮನಗಾಣುತ್ತಿದ್ದರು.
2 ಅಧ್ಯಕ್ಷ ಟ್ರೂಮನ್ ಇದನ್ನು ತಿಳಿದಿದ್ದರೊ ಇಲ್ಲವೊ ನಾವರಿಯೆವು. ಆದರೆ ಅಪೊಸ್ತಲ ಪೌಲನು ಮಾನವಕುಲವನ್ನು ಬಾಧಿಸುವ ಕತ್ತಲೆಯ ಬಗ್ಗೆ ಮಾತಾಡಿದನು ಮತ್ತು ಅದರ ಕುರಿತು ತನ್ನ ಬರವಣಿಗೆಗಳಲ್ಲಿ ಅದರ ಕುರಿತು ಎಚ್ಚರಿಕೆಯನ್ನೂ ಕೊಟ್ಟನು. ಉದಾಹರಣೆಗೆ, ಅವನು ಜೊತೆ ವಿಶ್ವಾಸಿಗಳನ್ನು ಎಚ್ಚರಿಸಿದ್ದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” (ಓರೆ ಅಕ್ಷರಗಳು ನಮ್ಮವು.) (ಎಫೆಸ 6:12) ಪೌಲನು ಈ ಮಾತುಗಳ ಮೂಲಕ, ತನಗೆ ಲೋಕವನ್ನು ಆವರಿಸಿರುವ ಅಂಧಕಾರದ ಕುರಿತು ತಿಳಿದಿದೆಯೆಂದು ಮಾತ್ರವಲ್ಲ, ಅದರ ನಿಜ ಮೂಲದ ಬಗ್ಗೆಯೂ ಅಂದರೆ “ಲೋಕಾಧಿಪತಿಗಳು” ಎಂದು ವರ್ಣಿಸಲ್ಪಟ್ಟಿರುವ ಬಲಾಢ್ಯವಾದ ದೆವ್ವ ಸೈನ್ಯಗಳ ಬಗ್ಗೆಯೂ ತಿಳಿದಿತ್ತು ಎಂದು ತೋರಿಸಿದನು. ಲೋಕದ ಅಂಧಕಾರದ ಹಿಂದೆ ಬಲಾಢ್ಯವಾದ ಆತ್ಮಗಳಿರುವುದರಿಂದ, ಅದನ್ನು ಹೋಗಲಾಡಿಸಲು ಮನುಷ್ಯಮಾತ್ರರು ಏನು ಮಾಡಬಲ್ಲರು?
3. ಮಾನವಕುಲದಲ್ಲಿ ಅಂಧಕಾರದ ಅವಸ್ಥೆಯಿದ್ದರೂ, ಯೆಶಾಯನು ನಂಬಿಗಸ್ತರಿಗೆ ಏನನ್ನು ಮುಂತಿಳಿಸಿದನು?
3 ತದ್ರೀತಿಯಲ್ಲಿ ಯೆಶಾಯನು ಸಹ ಮಾನವಕುಲವನ್ನು ಬಾಧಿಸುವ ಕತ್ತಲೆಯ ಕುರಿತು ಮಾತಾಡಿದನು. (ಯೆಶಾಯ 8:22; 59:9) ಆದರೂ, ನಮ್ಮ ದಿನಗಳನ್ನು ಮುನ್ನೋಡುತ್ತ, ಬೆಳಕನ್ನು ಪ್ರೀತಿಸುವವರ ಹೊರನೋಟವನ್ನು ಈ ಕತ್ತಲೆಯ ದಿನಗಳಲ್ಲಿಯೂ ಯೆಹೋವನು ಉಜ್ವಲಗೊಳಿಸುವನೆಂದು ಅವನು ಪವಿತ್ರಾತ್ಮದ ಪ್ರೇರಣೆಯಿಂದ ಮುಂತಿಳಿಸಿದನು. ಹೌದು, ಪೌಲನಾಗಲಿ ಯೆಶಾಯನಾಗಲಿ ವ್ಯಕ್ತಿಶಃ ನಮ್ಮೊಂದಿಗೆ ಇಲ್ಲವಾದರೂ, ನಮ್ಮನ್ನು ನಡೆಸಲು ಅವರ ಪ್ರೇರಿತ ಬರಹಗಳು ನಮ್ಮಲ್ಲಿವೆ. ಯೆಹೋವನನ್ನು ಪ್ರೀತಿಸುವವರಿಗೆ ಅದು ಎಷ್ಟು ಆಶೀರ್ವಾದದಾಯಕವೆಂದು ನೋಡಲು, ಯೆಶಾಯನ ಪುಸ್ತಕದ 60ನೆಯ ಅಧ್ಯಾಯದಲ್ಲಿ ಅವನ ಭವಿಷ್ಯಸೂಚಕ ಮಾತುಗಳನ್ನು ನಾವು ಪರಿಗಣಿಸೋಣ.
ಭವಿಷ್ಯಸೂಚಕ ಸ್ತ್ರೀ ಬೆಳಕನ್ನು ಪ್ರಕಾಶಿಸುತ್ತಾಳೆ
4, 5. (ಎ) ಒಬ್ಬಾಕೆ ಸ್ತ್ರೀಯು ಏನು ಮಾಡುವಂತೆ ಯೆಹೋವನು ಆಜ್ಞಾಪಿಸುತ್ತಾನೆ ಮತ್ತು ಆತನು ಯಾವ ಆಶ್ವಾಸನೆಯನ್ನು ನೀಡುತ್ತಾನೆ? (ಬಿ) ಯೆಶಾಯ 60ನೆಯ ಅಧ್ಯಾಯದಲ್ಲಿ ರೋಮಾಂಚಕವಾದ ಯಾವ ವಿಷಯಗಳಿವೆ?
4 ಯೆಶಾಯ 60ರ ಪ್ರಥಮ ಮಾತುಗಳು, ಅತಿ ದುಃಖಕರವಾದ ಸ್ಥಿತಿಯಲ್ಲಿ, ಕತ್ತಲೆಯಲ್ಲಿ ನೆಲದ ಮೇಲೆ ಬಿದ್ದುಕೊಂಡಿರುವ ಸ್ತ್ರೀಗೆ ಸಂಬೋಧಿಸಲ್ಪಟ್ಟಿವೆ. ಆಗ ಥಟ್ಟನೆ, ಆ ಅಂಧಕಾರವನ್ನು ಬೆಳಕು ತೂರಿಕೊಂಡು ಬರಲು, ಯೆಹೋವನು ಹೀಗೆ ಕೂಗಿ ಕರೆಯುತ್ತಾನೆ: “ಏಳು, ಪ್ರಕಾಶಿಸು, [“ಓ ಸ್ತ್ರೀಯೇ,” NW] ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” (ಯೆಶಾಯ 60:1) ಆ ಸ್ತ್ರೀಯು ಎದ್ದುನಿಂತು ದೇವರ ಬೆಳಕನ್ನು, ಆತನ ತೇಜಸ್ಸನ್ನು ಪ್ರತಿಬಿಂಬಿಸುವ ಸಮಯ ಬಂದಿದೆ. ಅದೇಕೆ? ಉತ್ತರವು ಮುಂದಿನ ವಚನದಲ್ಲಿದೆ: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.” (ಯೆಶಾಯ 60:2) ಆ ಸ್ತ್ರೀಯು ಯೆಹೋವನ ಆಜ್ಞೆಗೆ ವಿಧೇಯತೆ ತೋರಿಸುವಲ್ಲಿ, ಅದ್ಭುತಕರವಾದ ಫಲಿತಾಂಶಗಳನ್ನು ಪಡೆಯುವ ಆಶ್ವಾಸನೆ ಅವಳಿಗಿರುತ್ತದೆ. ಯೆಹೋವನು ಹೇಳುವುದು: “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು. ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.”—ಯೆಶಾಯ 60:3.
5 ಈ ಮೂರು ವಚನಗಳಲ್ಲಿರುವ ರೋಮಾಂಚಕ ಮಾತುಗಳು, ಯೆಶಾಯ 60ರಲ್ಲಿರುವ ಮಿಕ್ಕ ವಿಷಯಗಳ ಪೀಠಿಕೆಯೂ ಸಾರಾಂಶವೂ ಆಗಿವೆ. ಇದು ಆ ಭವಿಷ್ಯಸೂಚಕ ಸ್ತ್ರೀಯ ಅನುಭವಗಳನ್ನು ಮುಂತಿಳಿಸಿ, ಮಾನವಕುಲದ ಮೇಲೆ ನೆಲೆಸಿರುವ ಕತ್ತಲೆಯ ಮಧ್ಯದಲ್ಲೂ ನಾವು ಹೇಗೆ ಯೆಹೋವನ ಬೆಳಕಿನಲ್ಲಿ ಜೀವಿಸಸಾಧ್ಯವಿದೆ ಎಂಬುದನ್ನು ತಿಳಿಸುತ್ತದೆ. ಆದರೆ, ಈ ಮೂರು ಪ್ರಾರಂಭಿಕ ವಚನಗಳಲ್ಲಿರುವ ಪ್ರತೀಕಗಳು ಯಾವುದನ್ನು ಸೂಚಿಸುತ್ತವೆ?
6. ಯೆಶಾಯ 60ನೆಯ ಅಧ್ಯಾಯದ ಆ ಸ್ತ್ರೀಯು ಯಾರು, ಮತ್ತು ಭೂಮಿಯಲ್ಲಿ ಆಕೆಯನ್ನು ಯಾರು ಪ್ರತಿನಿಧಿಸುತ್ತಾರೆ?
6 ಯೆಶಾಯ 60:1-3ರಲ್ಲಿ ಹೇಳಲ್ಪಟ್ಟಿರುವ ಸ್ತ್ರೀಯು ಯೆಹೋವನ ಆತ್ಮಜೀವಿಗಳ ಸ್ವರ್ಗೀಯ ಸಂಸ್ಥೆಯಾದ ಚೀಯೋನ್ ಆಗಿದೆ. ಇಂದು ಭೂಮಿಯ ಮೇಲೆ ಚೀಯೋನನ್ನು ಪ್ರತಿನಿಧಿಸುವವರು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯಿರುವ ಆತ್ಮಾಭಿಷಿಕ್ತ ಕ್ರೈಸ್ತರ ಅಂತಾರಾಷ್ಟ್ರೀಯ ಸಭೆಯಾದ “ದೇವರ ಇಸ್ರಾಯೇಲ್ಯ”ರಲ್ಲಿ ಉಳಿಕೆಯವರೇ ಆಗಿದ್ದಾರೆ. (ಗಲಾತ್ಯ 6:16) ಈ ಆತ್ಮಿಕ ಜನಾಂಗದಲ್ಲಿ ಕೊನೆಗೆ ಒಟ್ಟು 1,44,000 ಜನರಿರುತ್ತಾರೆ ಮತ್ತು ಯೆಶಾಯ 60ರ ಆಧುನಿಕ ನೆರವೇರಿಕೆಯು ಈ “ಕಡೇ ದಿವಸಗಳಲ್ಲಿ” ಭೂಮಿಯಲ್ಲಿ ಜೀವದಿಂದಿರುವವರ ಮೇಲೆ ಕೇಂದ್ರೀಕೃತವಾಗುತ್ತದೆ. (2 ತಿಮೊಥೆಯ 3:1; ಪ್ರಕಟನೆ 14:1) ಈ ಅಭಿಷಿಕ್ತ ಕ್ರೈಸ್ತರ ಸಂಗಾತಿಗಳಾಗಿರುವ “ಬೇರೆ ಕುರಿಗಳ” “ಮಹಾ ಸಮೂಹ”ದವರ ಬಗ್ಗೆಯೂ ಈ ಪ್ರವಾದನೆ ತುಂಬ ವಿಷಯಗಳನ್ನು ತಿಳಿಸುತ್ತದೆ.—ಪ್ರಕಟನೆ 7:9; ಯೋಹಾನ 10:16.
7. ವರುಷ 1918ರಲ್ಲಿ ಚೀಯೋನಿನ ಅವಸ್ಥೆ ಏನಾಗಿತ್ತು, ಮತ್ತು ಇದು ಹೇಗೆ ಪ್ರವಾದಿಸಲ್ಪಟ್ಟಿತ್ತು?
7 “ದೇವರ ಇಸ್ರಾಯೇಲ್ಯರು” ಆ ಭವಿಷ್ಯಸೂಚಕ ಸ್ತ್ರೀಯಿಂದ ಮುಂತಿಳಿಸಲ್ಪಟ್ಟಂತೆ ಕತ್ತಲೆಯಲ್ಲಿ ಬಿದ್ದುಕೊಂಡಿದ್ದ ಸಮಯವೊಂದಿತ್ತೊ? ಹೌದು, ಇದು 80ಕ್ಕೂ ಹೆಚ್ಚು ವರುಷಗಳ ಮೊದಲು ಸಂಭವಿಸಿತು. ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಸಾಕ್ಷಿಕಾರ್ಯದಲ್ಲಿ ಮುಂದುವರಿಯಲು ಈ ಅಭಿಷಿಕ್ತ ಕ್ರೈಸ್ತರು ಬಹಳ ಪ್ರಯಾಸಪಟ್ಟಿದ್ದರು. ಆದರೆ ಆ ಯುದ್ಧದ ಕೊನೆಯ ವರುಷವಾದ 1918ರಲ್ಲಿ, ಸಂಘಟಿತ ಸಾರುವ ಕೆಲಸವು ಕಾರ್ಯತಃ ನಿಂತುಹೋಯಿತು. ಲೋಕವ್ಯಾಪಕವಾದ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ಆಗ ಮಾಡುತ್ತಿದ್ದ ಜೋಸೆಫ್ ರದರ್ಫರ್ಡ್ ಮತ್ತು ಇತರ ಪ್ರಮುಖ ಕ್ರೈಸ್ತರಿಗೆ ಸುಳ್ಳು ಆರೋಪದ ಮೇಲೆ ದೀರ್ಘಕಾಲದ ಸೆರೆಮನೆಯ ಶಿಕ್ಷೆಯನ್ನು ವಿಧಿಸಲಾಯಿತು. ಪ್ರಕಟನೆ ಪುಸ್ತಕದಲ್ಲಿ, ಆಗ ಭೂಮಿಯ ಮೇಲಿದ್ದ ಅಭಿಷಿಕ್ತ ಕ್ರೈಸ್ತರನ್ನು “ಗೂಢಾರ್ಥವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಹೆಸರುಗಳು” ಇದ್ದ “ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವ” ಶವಗಳಂತೆ ಚಿತ್ರಿಸಲಾಗಿತ್ತು. (ಪ್ರಕಟನೆ 11:8) ಅದು ಭೂಮಿಯ ಮೇಲೆ ಅಭಿಷಿಕ್ತ ಮಕ್ಕಳಿಂದ ಪ್ರತಿನಿಧಿಸಲ್ಪಟ್ಟಿದ್ದ ಚೀಯೋನಿಗೆ ನಿಜವಾಗಿಯೂ ಕತ್ತಲೆಯ ಸಮಯವಾಗಿತ್ತು!
8. ವರುಷ 1919ರಲ್ಲಿ ಯಾವ ನಾಟಕೀಯ ಬದಲಾವಣೆ ಉಂಟಾಯಿತು, ಮತ್ತು ಫಲಿತಾಂಶವೇನು?
8 ಆದರೂ, 1919ನೆಯ ವರುಷವು ಮಹತ್ತರವಾದ ಬದಲಾವಣೆಯನ್ನು ನೋಡಿತು. ಆಗ ಯೆಹೋವನು ಚೀಯೋನಿನ ಮೇಲೆ ಬೆಳಕನ್ನು ಪ್ರಕಾಶಿಸಿದನು! ಆ ಬೆಳಕನ್ನು ಪ್ರತಿಬಿಂಬಿಸಲು ಬದುಕಿ ಉಳಿದಿದ್ದ ದೇವರ ಇಸ್ರಾಯೇಲ್ಯರು ಎದ್ದು ನಿಂತು, ನಿರ್ಭೀತಿಯಿಂದ ಸುವಾರ್ತೆಯ ಘೋಷಣೆಯನ್ನು ಮಾಡುವ ಕೆಲಸವನ್ನು ವಹಿಸಿಕೊಂಡರು. (ಮತ್ತಾಯ 5:14-16) ಈ ಕ್ರೈಸ್ತರ ಪುನರ್ಜನಿತ ಆಸಕ್ತಿಯ ಪರಿಣಾಮವಾಗಿ, ಇತರರು ಬೆಳಕಿನತ್ತ ಆಕರ್ಷಿಸಲ್ಪಟ್ಟರು. ಆರಂಭದಲ್ಲಿ, ಹೊಸಬರನ್ನು ದೇವರ ಇಸ್ರಾಯೇಲಿನ ಕೂಡಿಸಲ್ಪಟ್ಟ ಸದಸ್ಯರಾಗಿ ಅಭಿಷೇಕಿಸಲಾಯಿತು. ಅವರು ಕ್ರಿಸ್ತನೊಂದಿಗೆ ದೇವರ ಸ್ವರ್ಗೀಯ ರಾಜ್ಯದಲ್ಲಿ ಜೊತೆ ಬಾಧ್ಯಸ್ಥರಾಗಲಿರುವುದರಿಂದ, ಅವರನ್ನು ಯೆಶಾಯ 60:3 ಅರಸರೆಂದು ಕರೆಯುತ್ತದೆ. (ಪ್ರಕಟನೆ 20:6) ತರುವಾಯ, ಬೇರೆ ಕುರಿಗಳ ಮಹಾ ಸಮೂಹವೊಂದು ಯೆಹೋವನ ಬೆಳಕಿನತ್ತ ಆಕರ್ಷಿಸಲ್ಪಡತೊಡಗಿತು. ಆ ಪ್ರವಾದನೆಯಲ್ಲಿ ಹೇಳಲ್ಪಟ್ಟಿರುವ “ಜನಾಂಗಗಳು” ಇವರೇ ಆಗಿದ್ದಾರೆ.
ಆ ಸ್ತ್ರೀಯ ಮಕ್ಕಳು ಮನೆಗೆ ಬಂದು ಸೇರುತ್ತಾರೆ
9, 10. (ಎ) ಯಾವ ಗಮನಾರ್ಹ ದೃಶ್ಯವು ಆ ಸ್ತ್ರೀಗೆ ನೋಡಲು ಸಿಕ್ಕಿತು, ಮತ್ತು ಅದು ಏನನ್ನು ಮುನ್ಸೂಚಿಸಿತು? (ಬಿ) ಚೀಯೋನಿಗೆ ಸಂತೋಷಿಸಲು ಯಾವ ಕಾರಣವಿತ್ತು?
9 ಈಗ ಯೆಹೋವನು ಯೆಶಾಯ 60:1-3ರಲ್ಲಿ ಕೊಟ್ಟಿರುವ ಮಾಹಿತಿಗೆ ಹೆಚ್ಚು ವಿವರಗಳನ್ನು ಕೂಡಿಸುತ್ತಾನೆ. ಆ ಸ್ತ್ರೀಗೆ ಇನ್ನೊಂದು ಆಜ್ಞೆಯನ್ನು ಕೊಡುತ್ತಾನೆ. ಆತನು ಹೇಳುವುದನ್ನು ಕೇಳಿರಿ: “ಕಣ್ಣೆತ್ತಿ ಸುತ್ತಲು ನೋಡು.” ಆ ಸ್ತ್ರೀ ಅದಕ್ಕೆ ವಿಧೇಯಳಾದಾಗ ಎಂತಹ ಹಾರ್ದಿಕ ದೃಶ್ಯವನ್ನು ಆಕೆ ನೋಡುತ್ತಾಳೆ! ಆಕೆಯ ಮಕ್ಕಳು ಮನೆಗೆ ಬರುತ್ತಿದ್ದಾರೆ. ಶಾಸ್ತ್ರವಚನವು ಹೇಳುವುದು: “ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.” (ಯೆಶಾಯ 60:4) ವರುಷ 1919ರಲ್ಲಿ ಆರಂಭಗೊಂಡ ಲೋಕವ್ಯಾಪಕವಾದ ರಾಜ್ಯ ಘೋಷಣೆಯು ಯೆಹೋವನ ಸೇವೆಗೆ ಸಾವಿರಾರು ಮಂದಿ ಹೊಸಬರನ್ನು ಆಕರ್ಷಿಸಿತು. ಇವರೂ ಚೀಯೋನಿನ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳು” ಆಗಿ ಪರಿಣಮಿಸಿದರು. ಹೀಗೆ ಯೆಹೋವನು, ಆ 1,44,000 ಮಂದಿಯಲ್ಲಿ ಕೊನೆಯವರನ್ನು ಬೆಳಕಿಗೆ ತರುತ್ತ ಚೀಯೋನನ್ನು ಚಂದಗೊಳಿಸಿದನು.
10 ಚೀಯೋನಿನ ಮಕ್ಕಳು ಆಕೆಯ ಬಳಿ ಬಂದಾಗ ಆಕೆಗಾದ ಸಂತೋಷವನ್ನು ನೀವು ಊಹಿಸಬಲ್ಲಿರೊ? ಆದರೆ ಯೆಹೋವನು ಚೀಯೋನಿಗೆ ಆನಂದಪಡಲು ಹೆಚ್ಚಿನ ಕಾರಣಗಳನ್ನು ಕೊಡುತ್ತಾನೆ. ನಾವು ಓದುವುದು: “ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರಸಮೃದ್ಧಿಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.” (ಯೆಶಾಯ 60:5) ಆ ಭವಿಷ್ಯಸೂಚಕ ಮಾತುಗಳಿಗೆ ಹೊಂದಿಕೆಯಲ್ಲಿ, 1930ನೆಯ ದಶಕದಿಂದ ಹಿಡಿದು ಭೂಮಿಯ ಮೇಲೆ ಅನಂತವಾಗಿ ಜೀವಿಸುವ ನಿರೀಕ್ಷೆಯಿರುವ ಕ್ರೈಸ್ತರು ಮಹಾ ಸಂಖ್ಯೆಗಳಲ್ಲಿ ಚೀಯೋನಿಗೆ ಗುಂಪಾಗಿ ಬಂದಿರುತ್ತಾರೆ. ಅವರು ದೇವರಿಂದ ವಿಮುಖವಾಗಿರುವ ಮಾನವಕುಲವೆಂಬ “ಸಮುದ್ರ”ದಿಂದ ಬಂದವರಾಗಿದ್ದು, ಆ ಜನಾಂಗಗಳ ಮೂಲಸಂಪತ್ತುಗಳನ್ನು ಪ್ರತಿನಿಧಿಸುತ್ತಾರೆ. ಅವರೇ “ಸಮಸ್ತ ಜನಾಂಗಗಳ ಇಷ್ಟವಸ್ತುಗಳು.” (ಹಗ್ಗಾಯ 2:7; ಯೆಶಾಯ 57:20) ಈ “ಇಷ್ಟವಸ್ತುಗಳು” ಯೆಹೋವನನ್ನು ಸೇವಿಸುವಾಗ ಒಬ್ಬೊಬ್ಬರು ತಮ್ಮ ತಮ್ಮ ಸ್ವಂತ ದಾರಿಗಳಲ್ಲಿ ಹೋಗುವುದಿಲ್ಲವೆಂಬುದನ್ನು ಗಮನಿಸಿರಿ. ಇಲ್ಲ, ಅವರು ತಮ್ಮ ಅಭಿಷಿಕ್ತ ಸಹೋದರರ ಜೊತೆಗೂಡಿ ಆರಾಧನೆಗೆ ಬರುವ ಮೂಲಕ ಚೀಯೋನಿನ ಸೌಂದರ್ಯವನ್ನು ಹೆಚ್ಚಿಸಿ, ಅವರೊಂದಿಗೆ “ಒಬ್ಬನೇ ಕುರುಬ”ನ ಕೆಳಗೆ “ಒಂದೇ ಹಿಂಡು” ಆಗುತ್ತಾರೆ.—ಯೋಹಾನ 10:16.
ವ್ಯಾಪಾರಿಗಳು, ಕುರುಬರು ಮತ್ತು ಸಾರ್ಥವಾಹರು ಚೀಯೋನಿಗೆ ಬರುತ್ತಾರೆ
11, 12. ಚೀಯೋನಿನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ವರ್ಣಿಸಿರಿ.
11 ಮುಂತಿಳಿಸಲ್ಪಟ್ಟಿರುವ ಈ ಒಟ್ಟುಗೂಡಿಸುವಿಕೆಯ ಪರಿಣಾಮವು, ಯೆಹೋವನ ಸ್ತುತಿಗಾರರ ಸಂಖ್ಯೆಯಲ್ಲಿ ಆಗುವ ಗಮನಾರ್ಹವಾದ ವೃದ್ಧಿಯೇ. ಇದನ್ನು ಆ ಪ್ರವಾದನೆಯ ಮುಂದಿನ ಮಾತುಗಳು ಮುಂತಿಳಿಸುತ್ತವೆ. ನೀವು ಆ ಭವಿಷ್ಯಸೂಚಕ ಸ್ತ್ರೀಯೊಂದಿಗೆ ಚೀಯೋನ್ ಬೆಟ್ಟದಲ್ಲಿ ನಿಂತಿದ್ದೀರೆಂದು ಭಾವಿಸಿರಿ. ಆಗ ನೀವು ಪೂರ್ವದಿಕ್ಕಿಗೆ ದೃಷ್ಟಿಸುವಾಗ ಏನು ನೋಡುತ್ತೀರಿ? “ಉಷ್ಟ್ರಸಮೂಹವೂ ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಆ ಸಾರ್ಥವಾಹರೆಲ್ಲಾ ಕನಕವನ್ನೂ ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.” (ಯೆಶಾಯ 60:6) ವ್ಯಾಪಾರಿಗಳ ಸಮೂಹವು ತಮ್ಮ ಒಂಟೆಗಳನ್ನು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತದೆ. ಆ ಒಂಟೆಗಳು ದೇಶದಲ್ಲಿ ನೆರೆ ತುಂಬಿರುವ ಹಾಗೆ ತುಂಬಿವೆ! ಸಾರ್ಥವಾಹರು ಅಮೂಲ್ಯ ಕೊಡುಗೆಗಳಾದ “ಕನಕವನ್ನೂ ಧೂಪವನ್ನೂ” ಹೇರಿಕೊಂಡು ಬಂದಿರುತ್ತಾರೆ. ಮತ್ತು ಈ ವ್ಯಾಪಾರಿಗಳು ದೇವರನ್ನು ಬಹಿರಂಗವಾಗಿ ಸ್ತುತಿಸಲು, ‘ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರಲು’ ಆತನ ಬೆಳಕಿನೊಳಗೆ ಬರುತ್ತಾರೆ.
12 ಬರುತ್ತಿರುವುದು ವ್ಯಾಪಾರಿಗಳು ಮಾತ್ರವಲ್ಲ. ಕುರುಬರೂ ಚೀಯೋನಿಗೆ ಕೂಡಿಬರುತ್ತಾರೆ. ಪ್ರವಾದನೆಯು ಹೇಳುವುದು: “ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು [“ನಿನಗೆ ಸೇವೆಮಾಡುವವು,” NW] ನೀನು ಮಾಡುವ ಯಜ್ಞಕ್ಕೆ ಅನುಕೂಲಿಸಿ ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು.” (ಯೆಶಾಯ 60:7ಎ) ಕುರುಬರ ಕುಲಗಳು ತಮ್ಮ ಮಂದೆಗಳಲ್ಲಿ ಅತ್ಯುತ್ತಮವಾಗಿರುವವುಗಳನ್ನು ಯೆಹೋವನಿಗೆ ಅರ್ಪಿಸಲು ಪವಿತ್ರ ನಗರಕ್ಕೆ ಬರುತ್ತಿವೆ. ಅವರು ಚೀಯೋನಿನ ಸೇವೆಮಾಡಲು ತಮ್ಮನ್ನೂ ಅರ್ಪಿಸಿಕೊಳ್ಳುತ್ತಾರೆ! ಈ ವಿದೇಶೀಯರನ್ನು ಯೆಹೋವನು ಹೇಗೆ ಸ್ವಾಗತಿಸುತ್ತಾನೆ? ದೇವರು ತಾನೇ ಹೇಳುವುದು: “ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ನನ್ನ ಸುಂದರಾಲಯವನ್ನು ಚಂದಗೊಳಿಸುವೆನು.” (ಯೆಶಾಯ 60:7ಬಿ) ಈ ವಿದೇಶೀಯರ ಅರ್ಪಣೆಗಳನ್ನೂ ಸೇವೆಯನ್ನೂ ಯೆಹೋವನು ವಿನಯಭಾವದಿಂದ ಅಂಗೀಕರಿಸುತ್ತಾನೆ. ಅವರ ಉಪಸ್ಥಿತಿಯು ಆತನ ಆಲಯವನ್ನು ಚಂದಗೊಳಿಸುತ್ತದೆ.
13, 14. ಪಶ್ಚಿಮದಿಕ್ಕಿನಿಂದ ಏನು ಬರುವುದು ಕಾಣಿಸುತ್ತದೆ?
13 ಈಗ ನಿಮ್ಮ ತಲೆಯನ್ನು ಪಶ್ಚಿಮದಿಕ್ಕಿಗೆ ತಿರುಗಿಸಿರಿ. ನೀವೇನು ನೋಡುತ್ತೀರಿ? ಬಹುದೂರದಲ್ಲಿ ಸಮುದ್ರದ ಮೇಲ್ಮೈಯ ಮೇಲೆ ಬಿಳಿ ಮೋಡಗಳು ಹರಡಿರುವಂತೆ ಕಾಣಿಸುತ್ತದೆ. ಯೆಹೋವನು ಈಗ ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ಕೇಳುತ್ತಾನೆ: “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿ ಬರುತ್ತಿರುವ ಇವರು ಯಾರು?” (ಯೆಶಾಯ 60:8) ಯೆಹೋವನು ತಾನೇ ಆ ಪ್ರಶ್ನೆಗೆ ಉತ್ತರ ಕೊಡುತ್ತಾನೆ: “ಯೆಹೋವನು ನಿನ್ನನ್ನು ವೈಭವಪಡಿಸಿರುವದನ್ನು ಕೇಳಿ ತಾರ್ಷೀಷಿನ ಹಡಗುಗಳು ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯೂ ಆದ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿಬಂಗಾರಗಳ ಸಮೇತ ದೂರದಿಂದ ತರುವದರಲ್ಲಿ ಮುಂದಾಗುತ್ತಿವೆ.”—ಯೆಶಾಯ 60:9.
14 ನೀವು ಆ ದೃಶ್ಯದ ಮನಶ್ಚಿತ್ರವನ್ನು ನೋಡಬಲ್ಲಿರೊ? ಆ ಬಿಳಿ ಮೋಡವು ಈಗ ಹತ್ತಿರ ಬಂದಿರಲಾಗಿ, ಅದು ಪಶ್ಚಿಮ ದಿಕ್ಕಿನಲ್ಲಿ ಚುಕ್ಕೆಗಳ ಸಮೂಹದಂತೆ ಕಾಣಿಸುತ್ತದೆ. ಅವು ತೆರೆಗಳ ಮೇಲಿಂದ ಹಾರಿಬರುತ್ತಿರುವ ಪಕ್ಷಿಗಳ ಗುಂಪಿನಂತೆ ಕಾಣಿಸುತ್ತವೆ. ಆದರೆ ಅವು ಸಮೀಪಕ್ಕೆ ಬಂದಂತೆ, ಗಾಳಿಯನ್ನು ಹಿಡಿಯಲು ಬಿಚ್ಚಿರುವ ಹಾಯಿ ಹಡಗುಗಳಾಗಿವೆಯೆಂದು ನೀವು ಕಂಡುಹಿಡಿಯುತ್ತೀರಿ. ಯೆರೂಸಲೇಮಿನ ಕಡೆಗೆ ಎಷ್ಟೊಂದು ಹಡಗುಗಳು ಬರುತ್ತಿವೆಯೆಂದರೆ, ಅವು ಪಾರಿವಾಳಗಳ ಗುಂಪನ್ನು ಹೋಲುತ್ತವೆ. ದೂರದ ರೇವು ಪಟ್ಟಣಗಳಿಂದ ಆ ನೌಕಾಗುಂಪುಗಳು ಅತಿ ವೇಗದಲ್ಲಿ ಪ್ರಯಾಣಿಸುತ್ತ, ಯೆಹೋವನನ್ನು ಆರಾಧಿಸಲಿಕ್ಕಾಗಿ ವಿಶ್ವಾಸಿಗಳನ್ನು ತರುತ್ತಿವೆ.
ಯೆಹೋವನ ಸಂಸ್ಥೆ ವಿಸ್ತರಿಸುತ್ತದೆ
15. (ಎ) ಯೆಶಾಯ 60:4-9ರ ಮಾತುಗಳು, ಯಾವ ವೃದ್ಧಿಯನ್ನು ಮುಂತಿಳಿಸುತ್ತವೆ? (ಬಿ) ನಿಜ ಕ್ರೈಸ್ತರು ಯಾವ ಮನೋಭಾವವನ್ನು ಪ್ರದರ್ಶಿಸುತ್ತಾರೆ?
15 ಲೋಕವ್ಯಾಪಕವಾಗಿ 1919ರಿಂದ ನಡೆದಿರುವ ಅಭಿವೃದ್ಧಿಯ ಎಂತಹ ಉಜ್ಜ್ವಲವಾದ ಭವಿಷ್ಯಸೂಚಿತ ಚಿತ್ರವನ್ನು 4ರಿಂದ 9ರ ವರೆಗಿನ ವಚನಗಳು ಚಿತ್ರಿಸುತ್ತವೆ! ಯೆಹೋವನು ಚೀಯೋನಿಗೆ ಅಂತಹ ವೃದ್ಧಿಯನ್ನು ಕೊಟ್ಟು ಆಶೀರ್ವದಿಸಿರುವುದೇಕೆ? ಏಕೆಂದರೆ, 1919ರಿಂದ ಹಿಡಿದು, ದೇವರ ಇಸ್ರಾಯೇಲ್ಯರು ವಿಧೇಯತೆ ಮತ್ತು ಹೊಂದಿಕೆಯಿಂದ ಯೆಹೋವನ ಬೆಳಕನ್ನು ಪ್ರಕಾಶಿಸಿದ್ದಾರೆ. ಆದರೆ, 7ನೆಯ ವಚನವು ಹೇಳುವಂತೆ, ಹೊಸಬರು ದೇವರ “ಯಜ್ಞವೇದಿಯ ಮೇಲೆ” ಬರುವುದನ್ನು ನೀವು ಗಮನಿಸಿದ್ದೀರೊ? ಒಂದು ಯಜ್ಞವೇದಿಯು ಯಜ್ಞಗಳನ್ನು ಅರ್ಪಿಸುವ ಸ್ಥಳವಾಗಿದೆ ಮತ್ತು ಪ್ರವಾದನೆಯ ಈ ಭಾಗವು, ಯೆಹೋವನ ಆರಾಧನೆಯಲ್ಲಿ ಯಜ್ಞವು ಒಳಗೂಡಿದೆಯೆಂಬುದನ್ನು ನಮಗೆ ಜ್ಞಾಪಕ ಹುಟ್ಟಿಸುತ್ತದೆ. ಅಪೊಸ್ತಲ ಪೌಲನು ಬರೆದುದು: “ನಿಮ್ಮನ್ನು ಬೇಡಿಕೊಳ್ಳುವದೇನಂದರೆ—ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.” (ರೋಮಾಪುರ 12:1) ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿ, ನಿಜ ಕ್ರೈಸ್ತರು ಕೇವಲ ವಾರಕ್ಕೊಂದಾವರ್ತಿ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿ ತೃಪ್ತಿಯನ್ನು ಪಡೆಯಬಾರದು. ಅವರು ಸತ್ಯಾರಾಧನೆಯನ್ನು ವರ್ಧಿಸಲು ತಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ಅರ್ಪಿಸುತ್ತಾರೆ. ಇಂತಹ ಪೂರ್ಣಭಕ್ತಿಯ ಆರಾಧಕರ ಉಪಸ್ಥಿತಿಯು ಯೆಹೋವನ ಆಲಯವನ್ನು ಸುಂದರಗೊಳಿಸುವುದಿಲ್ಲವೆ? ಹಾಗೆ ಮಾಡುತ್ತದೆಂದು ಯೆಶಾಯನ ಪ್ರವಾದನೆ ತಿಳಿಸುತ್ತದೆ. ಮತ್ತು ಇಂತಹ ಹುರುಪಿನ ಆರಾಧಕರು, ಯೆಹೋವನ ದೃಷ್ಟಿಯಲ್ಲಿ ಸುಂದರವಾಗಿ ಕಾಣುತ್ತಾರೆಂಬುದರ ಬಗ್ಗೆ ನಾವು ಖಾತ್ರಿಯಿಂದಿರಬಲ್ಲೆವು.
16. ಹಿಂದಿನ ಕಾಲದಲ್ಲಿ ಪುನರ್ನಿರ್ಮಾಣದ ಕಾರ್ಯಕ್ಕೆ ಯಾರು ಸಹಾಯ ನೀಡಿದರು, ಮತ್ತು ಆಧುನಿಕ ಸಮಯಗಳಲ್ಲಿ ಯಾರು ಹಾಗೆ ಮಾಡಿದ್ದಾರೆ?
16 ಹೊಸದಾಗಿ ಬಂದಿರುವವರು ಕೆಲಸ ಮಾಡಲು ಅಪೇಕ್ಷಿಸುತ್ತಾರೆ. ಪ್ರವಾದನೆಯು ಹೇಳುವುದು: “ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು.” (ಯೆಶಾಯ 60:10) ಬಾಬೆಲಿನ ಸೆರೆವಾಸದಿಂದ ದೇವಜನರು ಹಿಂದಿರುಗಿ ಬಂದಾಗ ನಡೆದ ಈ ಮಾತುಗಳ ಪ್ರಥಮ ನೆರವೇರಿಕೆಯಲ್ಲಿ, ಜನಾಂಗಗಳ ಅರಸರು ಮತ್ತು ಇತರರು, ದೇವಾಲಯ ಮತ್ತು ಯೆರೂಸಲೇಮ್ ನಗರದ ಪುನರ್ನಿರ್ಮಾಣದಲ್ಲಿ ನಿಜವಾಗಿಯೂ ಸಹಾಯಮಾಡಿದ್ದರು. (ಎಜ್ರ 3:7; ನೆಹೆಮೀಯ 3:26) ಆಧುನಿಕ ನೆರವೇರಿಕೆಯಲ್ಲಿ, ಮಹಾ ಸಮೂಹದವರು ಸತ್ಯಾರಾಧನೆಯ ಕಟ್ಟುವಿಕೆಯಲ್ಲಿ ಅಭಿಷಿಕ್ತ ಉಳಿಕೆಯವರಿಗೆ ಬೆಂಬಲ ನೀಡಿದ್ದಾರೆ. ಅವರು ಕ್ರೈಸ್ತ ಸಭೆಗಳನ್ನು ಕಟ್ಟಿ ಸ್ಥಾಪಿಸಲು ಸಹಾಯಮಾಡಿ, ಹೀಗೆ ಯೆಹೋವನ ನಗರಸದೃಶ ಸಂಸ್ಥೆಯ “ಪೌಳಿಗೋಡೆಗಳನ್ನು” ಬಲಪಡಿಸಿದ್ದಾರೆ. ಅವರು ಅಕ್ಷರಾರ್ಥವಾಗಿ ಕಟ್ಟುವುದರಲ್ಲಿಯೂ ಅಂದರೆ ರಾಜ್ಯ ಸಭಾಗೃಹ, ಸಮ್ಮೇಳನದ ಹಾಲ್ ಮತ್ತು ಬೆತೆಲ್ ಸೌಕರ್ಯಗಳನ್ನು ಕಟ್ಟುವುದರಲ್ಲಿಯೂ ಭಾಗವಹಿಸುತ್ತಾರೆ. ಈ ಎಲ್ಲ ವಿಧಗಳಲ್ಲಿ, ಅವರು ಯೆಹೋವನ ವಿಸ್ತರಿಸುತ್ತಿರುವ ಸಂಸ್ಥೆಯ ಅಗತ್ಯಗಳ ಬಗ್ಗೆ ಜಾಗರೂಕತೆ ವಹಿಸಿ, ತಮ್ಮ ಅಭಿಷಿಕ್ತ ಸಹೋದರರನ್ನು ಸಮರ್ಥಿಸುತ್ತಾರೆ!
17. ಯೆಹೋವನು ತನ್ನ ಜನರನ್ನು ಚಂದಗೊಳಿಸುವ ಒಂದು ವಿಧ ಯಾವುದು?
17 ಯೆಶಾಯ 60:10ರ ಕೊನೆಯ ಮಾತುಗಳು ಎಷ್ಟು ಪ್ರೋತ್ಸಾಹನೀಯ! ಯೆಹೋವನು ಹೇಳುವುದು: “ನನ್ನ ಕೋಪದಿಂದ ನಿನ್ನನ್ನು ಹೊಡೆದುಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.” ಹೌದು, 1918/19ರಲ್ಲಿ ಯೆಹೋವನು ಅವರನ್ನು ಶಿಸ್ತಿಗೊಳಪಡಿಸಿದ್ದು ನಿಜ. ಆದರೆ ಅದು ಗತಕಾಲದಲ್ಲಿ. ಈಗಲಾದರೊ, ಯೆಹೋವನು ತನ್ನ ಅಭಿಷಿಕ್ತ ಸೇವಕರಿಗೂ ಅವರ ಬೇರೆ ಕುರಿಗಳಾದ ಸಂಗಾತಿಗಳಿಗೂ ಕರುಣೆಯನ್ನು ತೋರಿಸುವ ಕಾಲವಾಗಿದೆ. ಇದಕ್ಕೆ ರುಜುವಾತು, ಆತನು ಅವರನ್ನು ಅಸಾಧಾರಣವಾದ ವೃದ್ಧಿಯೊಂದಿಗೆ ಆಶೀರ್ವದಿಸುತ್ತಾ ಕಾರ್ಯತಃ ‘ಚಂದಗೊಳಿಸಿರುವುದರಲ್ಲಿ’ ಕಂಡುಬರುತ್ತದೆ.
18, 19. (ಎ) ಹೊಸಬರು ಯೆಹೋವನ ಸಂಸ್ಥೆಯೊಳಗೆ ಬರುವ ವಿಷಯದಲ್ಲಿ ಆತನು ಯಾವ ಮಾತು ಕೊಡುತ್ತಾನೆ? (ಬಿ) ಯೆಶಾಯ 60ನೆಯ ಅಧ್ಯಾಯದ ಮಿಕ್ಕ ವಚನಗಳು ನಮಗೆ ಏನು ಹೇಳುತ್ತವೆ?
18 ಪ್ರತಿ ವರುಷ, ಲಕ್ಷಾಂತರ ಮಂದಿ “ವಿದೇಶೀಯರು” ಯೆಹೋವನ ಸಂಸ್ಥೆಯೊಂದಿಗೆ ಜೊತೆಗೂಡುತ್ತಾರೆ. ಮತ್ತು ಅವರನ್ನು ಹಿಂಬಾಲಿಸಿ ಬರಲು ಇನ್ನೂ ಹೆಚ್ಚಿನ ಜನರಿಗಾಗಿ ಮಾರ್ಗವು ತೆರೆದಿರುವುದು. ಯೆಹೋವನು ಚೀಯೋನಿಗೆ ಹೇಳುವುದು: “ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.” (ಯೆಶಾಯ 60:11) ಕೆಲವು ವಿರೋಧಿಗಳು ಈ “ಬಾಗಿಲು”ಗಳನ್ನು ಮುಚ್ಚಲು ಪ್ರಯತ್ನಿಸುತ್ತಾರಾದರೂ, ಅವರು ಅದರಲ್ಲಿ ಜಯಶಾಲಿಗಳಾಗುವುದಿಲ್ಲವೆಂಬುದು ನಮಗೆ ತಿಳಿದಿದೆ. ಏಕೆಂದರೆ, ಒಂದಲ್ಲ ಒಂದು ವಿಧದಲ್ಲಿ ಬಾಗಿಲುಗಳು ತೆರೆದೇ ಇರುವವೆಂದು ಯೆಹೋವನು ತಾನೇ ಹೇಳಿದ್ದಾನೆ. ವೃದ್ಧಿಯು ಮುಂದುವರಿಯುವುದು.
19 ಯೆಹೋವನು ತನ್ನ ಜನರನ್ನು ಆಶೀರ್ವದಿಸಿ ಸುಂದರಗೊಳಿಸಿರುವ ಇನ್ನಿತರ ವಿಧಗಳೂ ಇವೆ. ಆ ವಿಧಗಳು ಯಾವುವೆಂಬುದನ್ನು ಯೆಶಾಯ 60ರ ಬಾಕಿ ವಚನಗಳು ಭವಿಷ್ಯಸೂಚಕವಾಗಿ ತಿಳಿಸುತ್ತವೆ.
ವಿವರಿಸಬಲ್ಲಿರೊ?
• ದೇವರ “ಸ್ತ್ರೀ” ಯಾರು, ಮತ್ತು ಭೂಮಿಯಲ್ಲಿ ಆಕೆಯನ್ನು ಯಾರು ಪ್ರತಿನಿಧಿಸುತ್ತಾರೆ?
• ಚೀಯೋನಿನ ಮಕ್ಕಳು ನೆಲದಲ್ಲಿ ಬಿದ್ದುಕೊಂಡಿದ್ದದ್ದು ಯಾವಾಗ, ಮತ್ತು ಅವರು ‘ಎದ್ದಿದ್ದು’ ಯಾವಾಗ ಮತ್ತು ಹೇಗೆ?
• ವಿಭಿನ್ನ ಪ್ರತೀಕಗಳನ್ನು ಉಪಯೋಗಿಸುತ್ತ, ಯೆಹೋವನು ರಾಜ್ಯ ಘೋಷಕರಲ್ಲಿ ಇಂದಿನ ವೃದ್ಧಿಯನ್ನು ಹೇಗೆ ಮುಂತಿಳಿಸಿದನು?
• ಯೆಹೋವನು ಯಾವ ವಿಧಗಳಲ್ಲಿ ತನ್ನ ಜನರ ಮೇಲೆ ಬೆಳಕು ಪ್ರಕಾಶಿಸುವಂತೆ ಮಾಡಿದ್ದಾನೆ?
[ಪುಟ 10ರಲ್ಲಿರುವ ಚಿತ್ರ]
ಯೆಹೋವನ “ಸ್ತ್ರೀ”ಗೆ ಎದ್ದೇಳುವ ಆಜ್ಞೆ ದೊರೆಯುತ್ತದೆ
[ಪುಟ 12ರಲ್ಲಿರುವ ಚಿತ್ರ]
ಹಡಗು ಪಂಕ್ತಿಗಳು ದಿಗಂತದಲ್ಲಿ ಪಾರಿವಾಳಗಳು ಹಾರುವಂತೆ ತೋರುತ್ತವೆ