ಅಧ್ಯಾಯ ಇಪ್ಪತ್ತೊಂದು
ಸತ್ಯಾರಾಧನೆ ಲೋಕವ್ಯಾಪಕವಾಗಿ ವಿಸ್ತರಿಸುತ್ತದೆ
1. ಯೆಶಾಯ 60ನೆಯ ಅಧ್ಯಾಯದಲ್ಲಿ ಯಾವ ಪ್ರೋತ್ಸಾಹಕರವಾದ ಸಂದೇಶವು ಅಡಕವಾಗಿದೆ?
ಯೆಶಾಯ 60ನೆಯ ಅಧ್ಯಾಯವು ಒಂದು ಸ್ಫೂರ್ತಿದಾಯಕ ನಾಟಕದಂತೆ ಬರೆಯಲ್ಪಟ್ಟಿದೆ. ಆರಂಭದ ವಚನಗಳಲ್ಲಿ ಹೃದಯಸ್ಪರ್ಶಿಯಾದ ದೃಶ್ಯವೊಂದು ನಮ್ಮ ಗಮನವನ್ನು ಸೆರೆಹಿಡಿಯುತ್ತದೆ. ಘಟನೆಗಳ ಸರಮಾಲೆಯೇ ಒಂದನ್ನೊಂದು ಹಿಂಬಾಲಿಸುತ್ತಾ, ನಮ್ಮನ್ನು ಭಾವಪ್ರಚೋದಕ ಸಮಾಪ್ತಿಗೆ ಕೊಂಡೊಯ್ಯುತ್ತದೆ. ಈ ಅಧ್ಯಾಯವು, ಪುರಾತನ ಕಾಲದ ಯೆರೂಸಲೇಮಿನಲ್ಲಿ ಸತ್ಯಾರಾಧನೆಯ ಪುನಸ್ಸ್ಥಾಪನೆಯನ್ನೂ ಇಂದು ಸತ್ಯಾರಾಧನೆಯ ಲೋಕವ್ಯಾಪಕ ವಿಸ್ತರಣೆಯನ್ನೂ ಕಣ್ಣಿಗೆಕಟ್ಟುವಂಥ ರೀತಿಯಲ್ಲಿ ವರ್ಣಿಸುತ್ತದೆ. ಅಲ್ಲದೆ, ದೇವರ ನಿಷ್ಠಾವಂಥ ಆರಾಧಕರೆಲ್ಲರಿಗೆ ಕಾದಿರಿಸಲ್ಪಟ್ಟಿರುವ ನಿತ್ಯಾಶೀರ್ವಾದಗಳಿಗೆ ಅದು ಕೈತೋರಿಸುತ್ತದೆ. ಯೆಶಾಯನ ಪ್ರವಾದನೆಯ ಈ ಆಕರ್ಷಣೀಯ ಭಾಗದ ನೆರವೇರಿಕೆಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಒಂದು ಪಾತ್ರವನ್ನು ವಹಿಸಬಲ್ಲೆವು. ಆದಕಾರಣ, ನಾವೀಗ ಆ ಪ್ರವಾದನೆಯನ್ನು ಕೂಲಂಕಷವಾಗಿ ಪರೀಕ್ಷಿಸೋಣ.
ಕತ್ತಲಲ್ಲಿ ಬೆಳಕು ಪ್ರಕಾಶಿಸುತ್ತದೆ
2. ಕತ್ತಲಲ್ಲಿ ಬಿದ್ದುಕೊಂಡಿರುವ ಸ್ತ್ರೀಗೆ ಯಾವ ಆಜ್ಞೆಯನ್ನು ಕೊಡಲಾಗುತ್ತದೆ, ಮತ್ತು ಅದಕ್ಕೆ ಅವಳು ವಿಧೇಯಳಾಗುವುದು ಏಕೆ ತುರ್ತಿನದ್ದಾಗಿದೆ?
2 ಯೆಶಾಯನ ಈ ಅಧ್ಯಾಯದ ಆರಂಭದ ಮಾತುಗಳನ್ನು ದುಃಖಕರ ಪರಿಸ್ಥಿತಿಗಳಲ್ಲಿರುವ ಒಬ್ಬ ಸ್ತ್ರೀಗೆ ಸಂಬೋಧಿಸಲಾಗಿದೆ. ಆಕೆ ಕತ್ತಲಲ್ಲಿ ನೆಲದ ಮೇಲೆ ಬಿದ್ದುಕೊಂಡಿದ್ದಾಳೆ. ಥಟ್ಟನೆ, ಬೆಳಕು ಕತ್ತಲಲ್ಲಿ ತೂರಿಬರುವಾಗ ಯೆಹೋವನು ಯೆಶಾಯನ ಮೂಲಕ ಹೀಗೆ ಕರೆಕೊಡುತ್ತಾನೆ: “[“ಸ್ತ್ರೀಯೇ,” NW] ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” (ಯೆಶಾಯ 60:1) ಹೌದು, ಆ “ಸ್ತ್ರೀ” ಎದ್ದುನಿಂತು ದೇವರ ತೇಜಸ್ಸನ್ನು ಪ್ರತಿಬಿಂಬಿಸಬೇಕು! ಈ ಸಂಗತಿಯು ಏಕೆ ತುರ್ತಿನದ್ದಾಗಿದೆ? ಪ್ರವಾದನೆಯು ಮುಂದುವರಿಸುವುದು: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.” (ಯೆಶಾಯ 60:2) ಆಕೆಯ ಸುತ್ತಮುತ್ತಲಿದ್ದು ಕತ್ತಲಲ್ಲಿ ಇನ್ನೂ ತಡವರಿಸುತ್ತಿರುವವರಿಗೆ ಆ “ಸ್ತ್ರೀ” ಬೆಳಕನ್ನು “ಪ್ರಕಾಶಿಸ”ಬೇಕು. ಇದರ ಪರಿಣಾಮವೇನು? “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.” (ಯೆಶಾಯ 60:3) ಆರಂಭದ ಆ ಮಾತುಗಳು, ಮುಂದಿನ ವಚನಗಳಲ್ಲಿ ಹೆಚ್ಚಿನ ವಿವರಗಳೊಂದಿಗೆ ವಿವರಿಸಲಾಗುವ ವಿಷಯದ ಸಾರಾಂಶವನ್ನು ಕೊಡುತ್ತವೆ. ಸತ್ಯಾರಾಧನೆಯು ಲೋಕವ್ಯಾಪಕವಾಗಿ ವಿಸ್ತರಿಸತಕ್ಕದ್ದು ಎಂಬುದೇ ಆ ವಿಷಯ!
3. (ಎ) ಆ “ಸ್ತ್ರೀ” ಯಾರು? (ಬಿ) ಆ “ಸ್ತ್ರೀ” ಕತ್ತಲೆಯಲ್ಲಿ ಏಕೆ ಬಿದ್ದುಕೊಂಡಿದ್ದಳು?
3 ಭವಿಷ್ಯದಲ್ಲಾಗುವ ಘಟನೆಗಳ ಕುರಿತು ಯೆಹೋವನು ಮಾತಾಡುತ್ತಿದ್ದರೂ, ಆತನು ಆ “ಸ್ತ್ರೀ”ಗೆ ಬೆಳಕು “ಬಂತು” ಎಂದು ಹೇಳುತ್ತಾನೆ. ಈ ಪ್ರವಾದನೆಯು ನೆರವೇರುವುದೆಂಬ ನಿಶ್ಚಯತೆಯನ್ನು ಇದು ಒತ್ತಿ ಹೇಳುತ್ತದೆ. ಇಲ್ಲಿ ಸೂಚಿಸಲ್ಪಟ್ಟಿರುವ “ಸ್ತ್ರೀ,” ಯೆಹೂದದ ರಾಜಧಾನಿಯಾದ ಚೀಯೋನ್ ಅಥವಾ ಯೆರೂಸಲೇಮ್ ಆಗಿದೆ. (ಯೆಶಾಯ 52:1, 2; 60:14) ಆ ನಗರವು ಇಡೀ ಜನಾಂಗವನ್ನು ಪ್ರತಿನಿಧಿಸುತ್ತದೆ. ಈ ಪ್ರವಾದನೆಯು ಪ್ರಥಮವಾಗಿ ನೆರವೇರುವ ಸಮಯದಲ್ಲಿ, ಆ “ಸ್ತ್ರೀ” ಕತ್ತಲಲ್ಲಿ ಬಿದ್ದುಕೊಂಡಿದ್ದಳು. ಅವಳು ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶಗೊಂಡಂದಿನಿಂದ ಆ ಕತ್ತಲಲ್ಲಿ ಬಿದ್ದುಕೊಂಡಿದ್ದಳು. ಆದರೆ, ಸಾ.ಶ.ಪೂ. 537ರಲ್ಲಿ, ದೇಶಭ್ರಷ್ಟರಾಗಿದ್ದ ಯೆಹೂದ್ಯರ ನಂಬಿಗಸ್ತ ಜನಶೇಷವೊಂದು ಯೆರೂಸಲೇಮಿಗೆ ಹಿಂದಿರುಗಿ ಬಂದು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುತ್ತದೆ. ಹೀಗೆ ಕೊನೆಗೆ, ಯೆಹೋವನು ತನ್ನ “ಸ್ತ್ರೀ”ಯ ಮೇಲೆ ಬೆಳಕು ಬರುವಂತೆ ಮಾಡುತ್ತಾನೆ ಮತ್ತು ಆತನ ಪುನಸ್ಸ್ಥಾಪಿತ ಜನರು ಆತ್ಮಿಕವಾಗಿ ಅಂಧಕಾರದಲ್ಲಿದ್ದ ಜನಾಂಗಗಳ ಮಧ್ಯೆ ಜ್ಞಾನೋದಯಕ್ಕೆ ಕಾರಣರಾಗುತ್ತಾರೆ.
ಹೆಚ್ಚು ದೊಡ್ಡದಾದ ನೆರವೇರಿಕೆ
4. ಇಂದು ಭೂಮಿಯ ಮೇಲೆ ಆ “ಸ್ತ್ರೀ”ಯನ್ನು ಯಾರು ಪ್ರತಿನಿಧಿಸುತ್ತಾರೆ, ಮತ್ತು ಆ ಪ್ರವಾದನ ವಾಕ್ಯಗಳು ಇನ್ನೂ ಯಾರಿಗೆ ಅನ್ವಯಿಸುತ್ತವೆ?
4 ಈ ಪ್ರವಾದನ ವಾಕ್ಯಗಳು ಪುರಾತನ ಯೆರೂಸಲೇಮಿನ ಮೇಲೆ ಹೇಗೆ ನೆರವೇರಿದವೆಂಬುದಕ್ಕಿಂತಲೂ ಹೆಚ್ಚಿನ ವಿಷಯಗಳಲ್ಲಿ ನಾವು ಆಸಕ್ತರಾಗಿದ್ದೇವೆ. ಇಂದು ಯೆಹೋವನ ಸ್ವರ್ಗೀಯ “ಸ್ತ್ರೀ”ಯನ್ನು ಭೂಮಿಯ ಮೇಲೆ ‘ದೇವರ ಇಸ್ರಾಯೇಲ್’ ಪ್ರತಿನಿಧಿಸುತ್ತದೆ. (ಗಲಾತ್ಯ 6:16) ಸಾ.ಶ. 33ರ ಪಂಚಾಶತ್ತಮದಿಂದ ಹಿಡಿದು ಇಂದಿನ ತನಕ ಅಸ್ತಿತ್ವದಲ್ಲಿರುವ ಈ ಆತ್ಮಿಕ ಜನಾಂಗದಲ್ಲಿ ಒಟ್ಟು 1,44,000 ಮಂದಿ ಆತ್ಮಾಭಿಷಿಕ್ತ ಸದಸ್ಯರು ಇದ್ದಾರೆ. ಇವರು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವ ಪ್ರತೀಕ್ಷೆಯುಳ್ಳವರಾಗಿದ್ದು, “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ” ಜನರಾಗಿದ್ದಾರೆ. (ಪ್ರಕಟನೆ 14:1, 3) ಯೆಶಾಯ 60ನೆಯ ಅಧ್ಯಾಯದ ಆಧುನಿಕ ದಿನದ ನೆರವೇರಿಕೆಯು, ಈ “ಕಡೇ ದಿವಸಗಳಲ್ಲಿ” ಆ 1,44,000 ಮಂದಿಯ ಪೈಕಿ ಭೂಮಿಯಲ್ಲಿ ಇನ್ನೂ ಜೀವಿಸುತ್ತಿರುವವರ ಮೇಲೆ ಕೇಂದ್ರೀಕರಿಸುತ್ತದೆ. (2 ತಿಮೊಥೆಯ 3:1) ಈ ಅಭಿಷಿಕ್ತ ಕ್ರೈಸ್ತರ ಸಂಗಾತಿಗಳಾದ “ಬೇರೆ ಕುರಿ”ಗಳ “ಮಹಾ ಸಮೂಹ”ಕ್ಕೂ ಈ ಪ್ರವಾದನೆಯು ಸಂಬಂಧಿಸುತ್ತದೆ.—ಪ್ರಕಟನೆ 7:9; ಯೋಹಾನ 10:11, 16.
5. ದೇವರ ಇಸ್ರಾಯೇಲಿನಲ್ಲಿ ಉಳಿದಿದ್ದ ಸದಸ್ಯರು ಕತ್ತಲೆಯಲ್ಲಿ ಬಿದ್ದುಕೊಂಡಿದ್ದದ್ದು ಯಾವಾಗ, ಮತ್ತು ಯೆಹೋವನ ಬೆಳಕು ಅವರ ಮೇಲೆ ಪ್ರಕಾಶಿಸಿದ್ದು ಯಾವಾಗ?
5 ಭೂಮಿಯ ಮೇಲೆ ಇನ್ನೂ ಇದ್ದ ದೇವರ ಇಸ್ರಾಯೇಲ್, 1900ಗಳ ಆದಿಭಾಗದಲ್ಲಿ ಸ್ವಲ್ಪ ಸಮಯದ ವರೆಗೆ ಕಾರ್ಯತಃ ಕತ್ತಲೆಯಲ್ಲಿ ಬಿದ್ದುಕೊಂಡಿತ್ತು. ಒಂದನೆಯ ಲೋಕ ಯುದ್ಧವು ಮುಗಿಯುವಷ್ಟರಲ್ಲಿ ಅವರು, ಪ್ರಕಟನೆ ಪುಸ್ತಕದಲ್ಲಿ ಸಾಂಕೇತಿಕವಾಗಿ ವರ್ಣಿಸಿದ ಸ್ಥಿತಿಯಲ್ಲಿದ್ದರು. ಅಂದರೆ ಅವರ ಶವಗಳು, “ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿ”ದ್ದು, “ಆ ಪಟ್ಟಣಕ್ಕೆ ಗೂಢಾರ್ಥವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಹೆಸರುಗಳುಂಟು.” (ಪ್ರಕಟನೆ 11:8) ಆದರೆ 1919ರಲ್ಲಿ, ಯೆಹೋವನು ಅವರ ಮೇಲೆ ತನ್ನ ಬೆಳಕನ್ನು ಬೀರಿದನು. ಇದಕ್ಕೆ ಪ್ರತಿಕ್ರಿಯಿಸುತ್ತಾ ಅವರು ಎದ್ದು ನಿಂತು, ದೇವರ ಬೆಳಕನ್ನು ಪ್ರತಿಬಿಂಬಿಸುತ್ತ, ದೇವರ ರಾಜ್ಯದ ಸುವಾರ್ತೆಯನ್ನು ಧೈರ್ಯದಿಂದ ಸಾರಿದರು.—ಮತ್ತಾಯ 5:14-16; 24:14.
6. ಯೇಸುವಿನ ರಾಜ್ಯವೈಭವದ ಸಾನ್ನಿಧ್ಯದ ಪ್ರಕಟನೆಯ ಸಂಬಂಧದಲ್ಲಿ ಲೋಕದ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ, ಆದರೆ ಯೆಹೋವನ ಬೆಳಕಿಗೆ ಯಾರು ಸೆಳೆಯಲ್ಪಟ್ಟಿದ್ದಾರೆ?
6 “ಈ ಅಂಧಕಾರದ ಲೋಕಾಧಿಪತಿಗಳ” ಮುಖ್ಯಾಧಿಪತಿಯಾದ ಸೈತಾನನಿಂದ ಪ್ರಭಾವಿಸಲ್ಪಟ್ಟು, ಲೋಕದ ಜನರು “ಲೋಕಕ್ಕೆ ಬೆಳಕು” ಆಗಿರುವ ಯೇಸು ಕ್ರಿಸ್ತನ ರಾಜ್ಯವೈಭವದ ಸಾನ್ನಿಧ್ಯದ ಪ್ರಕಟನೆಯನ್ನು ತಿರಸ್ಕರಿಸಿದ್ದಾರೆ. (ಎಫೆಸ 6:12; ಯೋಹಾನ 8:12; 2 ಕೊರಿಂಥ 4:3, 4) ಹಾಗಿದ್ದರೂ, ದಶಲಕ್ಷಾಂತರ ಜನರು ಯೆಹೋವನ ಬೆಳಕಿನ ಕಡೆಗೆ ಸೆಳೆಯಲ್ಪಟ್ಟಿದ್ದಾರೆ. ಇವರಲ್ಲಿ “ಅರಸರು” (ಸ್ವರ್ಗೀಯ ರಾಜ್ಯದಲ್ಲಿ ಅಭಿಷಿಕ್ತ ಬಾಧ್ಯಸ್ಥರಾಗುವವರು) ಮತ್ತು “ಜನಾಂಗಗಳು” (ಬೇರೆ ಕುರಿಗಳ ಮಹಾ ಸಮೂಹ) ಸೇರಿದ್ದಾರೆ.
ವಿಸ್ತರಣೆಯು ಹೃತ್ಪೂರ್ವಕವಾದ ಹರ್ಷವನ್ನು ಉಂಟುಮಾಡುತ್ತದೆ
7. ಆ “ಸ್ತ್ರೀ” ಯಾವ ಹೃದಯಂಗಮ ದೃಶ್ಯವನ್ನು ನೋಡುತ್ತಾಳೆ?
7 ಯೆಶಾಯ 60:3ರ ಮುಖ್ಯ ವಿಷಯವನ್ನು ವಿಸ್ತರಿಸುತ್ತ, ಯೆಹೋವನು ಆ “ಸ್ತ್ರೀ”ಗೆ “ಕಣ್ಣೆತ್ತಿ ಸುತ್ತಲು ನೋಡು” ಎಂಬ ಇನ್ನೊಂದು ಆಜ್ಞೆಯನ್ನು ಕೊಡುತ್ತಾನೆ! ಆ “ಸ್ತ್ರೀ” ಇದಕ್ಕೆ ವಿಧೇಯಳಾದಾಗ ಅವಳು ಒಂದು ಹೃದಯಂಗಮ ದೃಶ್ಯವನ್ನು ನೋಡುತ್ತಾಳೆ—ಆಕೆಯ ಮಕ್ಕಳು ಮನೆಗೆ ಬರುತ್ತಿದ್ದಾರೆ! “ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.” (ಯೆಶಾಯ 60:4) 1919ರಲ್ಲಿ ಆರಂಭಗೊಂಡ ಅಂತಾರಾಷ್ಟ್ರೀಯ ರಾಜ್ಯ ಘೋಷಣೆಯ ಪರಿಣಾಮವಾಗಿ, ಇನ್ನೂ ಸಾವಿರಾರು ಮಂದಿ ಅಭಿಷಿಕ್ತ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳು” ದೇವರ ಇಸ್ರಾಯೇಲಿಗೆ ಕೂಡಿಸಲ್ಪಡುವಂತಾಯಿತು. ಈ ರೀತಿಯಲ್ಲಿ ಕ್ರಿಸ್ತನೊಂದಿಗೆ ಆಳಲಿರುವ, ಮುಂತಿಳಿಸಲ್ಪಟ್ಟ 1,44,000 ಮಂದಿಯ ಸಂಖ್ಯೆಯು ಪೂರ್ಣಗೊಳ್ಳುವಂತೆ ಯೆಹೋವನು ತಕ್ಕ ಹೆಜ್ಜೆಗಳನ್ನು ತೆಗೆದುಕೊಂಡನು.—ಪ್ರಕಟನೆ 5:9, 10.
8. ದೇವರ ಇಸ್ರಾಯೇಲಿಗೆ 1919ರಿಂದ ಹಿಡಿದು ಹರ್ಷಕ್ಕೆ ಯಾವ ಕಾರಣವಿದೆ?
8 ಈ ಅಭಿವೃದ್ಧಿಯು ಹರ್ಷವನ್ನುಂಟುಮಾಡಿತು. “ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರಸಮೃದ್ಧಿಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.” (ಯೆಶಾಯ 60:5) 1920 ಮತ್ತು 1930ನೆಯ ದಶಕಗಳಲ್ಲಿ ಅಭಿಷಿಕ್ತರ ಒಟ್ಟುಗೂಡಿಸುವಿಕೆಯು ದೇವರ ಇಸ್ರಾಯೇಲಿಗೆ ಮಹಾ ಸಂತೋಷವನ್ನು ತಂದಿತು. ಆದರೆ ಅದಕ್ಕೆ ಹರ್ಷಿಸಲು ಇನ್ನೊಂದು ಕಾರಣವೂ ಇತ್ತು. ವಿಶೇಷವಾಗಿ 1930ನೆಯ ದಶಕದ ಮಧ್ಯಭಾಗದಿಂದ ಆರಂಭಿಸುತ್ತಾ, ಒಂದು ಸಮಯದಲ್ಲಿ ದೇವರಿಂದ ವಿಮುಖವಾಗಿರುವ ಮಾನವಕುಲವೆಂಬ “ಸಮುದ್ರ”ದ ಭಾಗವಾಗಿದ್ದ ಜನರು, ದೇವರ ಇಸ್ರಾಯೇಲಿನೊಂದಿಗೆ ಆರಾಧಿಸಲು ಎಲ್ಲ ಜನಾಂಗಗಳಿಂದ ಹೊರಬಂದಿದ್ದಾರೆ. (ಯೆಶಾಯ 57:20; ಹಗ್ಗಾಯ 2:7) ಈ ಜನರು ತಮ್ಮ ಸ್ವಂತ ಆಯ್ಕೆಗನುಸಾರ ದೇವರನ್ನು ಆರಾಧಿಸಲು ಹೋಗುವುದಿಲ್ಲ. ಬದಲಿಗೆ, ಅವರು ದೇವರ “ಸ್ತ್ರೀ”ಯ ಬಳಿ ಬಂದು, ದೇವರ ಐಕ್ಯಗೊಂಡಿರುವ ಮಂದೆಯ ಭಾಗವಾಗುತ್ತಾರೆ. ಇದರ ಪರಿಣಾಮವಾಗಿ, ಸತ್ಯಾರಾಧನೆಯ ವಿಸ್ತರಣೆಯಲ್ಲಿ ದೇವರ ಸೇವಕರೆಲ್ಲರೂ ಭಾಗವಹಿಸುತ್ತಾರೆ.
ಜನಾಂಗಗಳು ಯೆರೂಸಲೇಮಿನಲ್ಲಿ ಒಟ್ಟುಸೇರುತ್ತವೆ
9, 10. ಯೆರೂಸಲೇಮಿನಲ್ಲಿ ಯಾರು ಒಟ್ಟುಸೇರುತ್ತಿರುವುದನ್ನು ನೋಡಲಾಗುತ್ತದೆ, ಮತ್ತು ಯೆಹೋವನು ಅವರನ್ನು ಹೇಗೆ ಬರಮಾಡಿಕೊಳ್ಳುತ್ತಾನೆ?
9 ಯೆಶಾಯನ ಸಮಕಾಲೀನರಿಗೆ ಪರಿಚಯವಿರುವ ದೃಷ್ಟಾಂತಗಳನ್ನು ಉಪಯೋಗಿಸುತ್ತ ಯೆಹೋವನು ಆ ವಿಸ್ತರಣೆಯನ್ನು ವರ್ಣಿಸುತ್ತಾನೆ. ಚೀಯೋನ್ ಪರ್ವತದ ಅನುಕೂಲ ಸ್ಥಳದಿಂದ ನೋಡುತ್ತಿರುವ ಆ “ಸ್ತ್ರೀ” ಪ್ರಥಮವಾಗಿ ಮೂಡಣ ದಿಗಂತವನ್ನು ಪರೀಕ್ಷಿಸುತ್ತಾಳೆ. ಅವಳು ಏನು ನೋಡುತ್ತಾಳೆ? “ಉಷ್ಟ್ರಸಮೂಹವೂ ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಆ ಸಾರ್ಥವಾಹರೆಲ್ಲಾ ಕನಕವನ್ನೂ ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.” (ಯೆಶಾಯ 60:6) ವಿವಿಧ ಕುಲಗಳ ಪ್ರಯಾಣಿಕ ವರ್ತಕರು ಉಪಯೋಗಿಸುವ ಒಂಟೆಗಳು ಯೆರೂಸಲೇಮಿಗೆ ನಡೆಸುತ್ತಿರುವ ಮಾರ್ಗಗಳಲ್ಲಿ ಪಯಣಿಸುತ್ತಿವೆ. (ಆದಿಕಾಂಡ 37:25, 28; ನ್ಯಾಯಸ್ಥಾಪಕರು 6:1, 5; 1 ಅರಸುಗಳು 10:1, 2) ಎಲ್ಲೆಲ್ಲೂ ಒಂಟೆಗಳಿವೆ. ಜಮೀನನ್ನು ಆವರಿಸಿರುವ ನೆರೆಯಂತೆ ಕಾಣುತ್ತಿವೆ! ಈ ಒಂಟೆ ತಂಡಗಳು ಬೆಲೆಬಾಳುವ ಕೊಡುಗೆಗಳನ್ನು ತರುತ್ತವೆ. ವರ್ತಕರು ಶಾಂತಿಯ ಉದ್ದೇಶದಿಂದ ಬಂದಿದ್ದಾರೆಂಬುದನ್ನು ಇದು ತೋರಿಸುತ್ತದೆ. ಅವರು ಯೆಹೋವನನ್ನು ಆರಾಧಿಸಲು ಬಯಸುತ್ತಾರೆ ಮತ್ತು ತಮ್ಮ ಬಳಿಯಿರುವ ಅತ್ಯುತ್ತಮವಾದುದನ್ನು ಆತನಿಗೆ ಕೊಡಬಯಸುತ್ತಾರೆ.
10 ಈ ದಂಡಿನಲ್ಲಿ ಇರುವವರು ವರ್ತಕರಷ್ಟೇಯಲ್ಲ. “ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸಿ [“ನಿನಗೆ ಶುಶ್ರೂಷೆ ಮಾಡುವವು,” NW]” ಬರುವವು. ಹೌದು, ಕುರುಬ ಕುಲಗಳು ಸಹ ಯೆರೂಸಲೇಮಿಗೆ ಪಯಣಿಸುತ್ತವೆ. ಅವರು ತಮ್ಮ ಅತ್ಯಂತ ಬೆಲೆಬಾಳುವ ಸ್ವತ್ತುಗಳಾದ ಕುರಿಹಿಂಡುಗಳನ್ನು ಕೊಡುಗೆಯಾಗಿ ತಂದು, ತಮ್ಮನ್ನು ಶುಶ್ರೂಷಕರಾಗಿ ಒಪ್ಪಿಸಿಕೊಡುವರು. ಅವರನ್ನು ಯೆಹೋವನು ಹೇಗೆ ಬರಮಾಡಿಕೊಳ್ಳುವನು? ಆತನು ಹೇಳುವುದು: “ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ನನ್ನ ಸುಂದರಾಲಯವನ್ನು ಚಂದಗೊಳಿಸುವೆನು.” (ಯೆಶಾಯ 60:7) ಯೆಹೋವನು ಅವರ ಕೊಡುಗೆಗಳನ್ನು ಅಂಗೀಕರಿಸುತ್ತಾನೆ. ಅವು ಸತ್ಯಾರಾಧನೆಯಲ್ಲಿ ಉಪಯೋಗಿಸಲ್ಪಡುವವು.—ಯೆಶಾಯ 56:7; ಯೆರೆಮೀಯ 49:28, 29.
11, 12. (ಎ) ಪಡುವಣ ದಿಕ್ಕಿಗೆ ನೋಡುವಾಗ ಆ “ಸ್ತ್ರೀ”ಗೆ ಯಾವ ದೃಶ್ಯವು ಕಾಣಸಿಗುತ್ತದೆ? (ಬಿ) ಅಷ್ಟೊಂದು ಜನರು ಅವಸರದಿಂದ ಯೆರೂಸಲೇಮಿಗೆ ಬರುತ್ತಿರುವುದೇಕೆ?
11 ಈಗ ಆ “ಸ್ತ್ರೀ”ಗೆ ಪಡುವಣ ದಿಗಂತವನ್ನು ನೋಡುವಂತೆ ಹೇಳಿ ಯೆಹೋವನು ಪ್ರಶ್ನಿಸುವುದು: “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿ ಬರುತ್ತಿರುವ ಇವರು ಯಾರು?” ಆದರೆ ಯೆಹೋವನು ತಾನೇ ಹೀಗೆ ಉತ್ತರ ಕೊಡುತ್ತಾನೆ: “ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! . . . ಯೆಹೋವನು ನಿನ್ನನ್ನು ವೈಭವಪಡಿಸಿರುವದನ್ನು ಕೇಳಿ ತಾರ್ಷೀಷಿನ ಹಡಗುಗಳು ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯೂ ಆದ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿಬಂಗಾರಗಳ ಸಮೇತ ದೂರದಿಂದ ತರುವದರಲ್ಲಿ ಮುಂದಾಗುತ್ತಿವೆ.”—ಯೆಶಾಯ 60:8, 9.
12 ನೀವು ಆ “ಸ್ತ್ರೀ”ಯ ಸಂಗಡ ನಿಂತುಕೊಂಡು ಭೂಮಧ್ಯ ಸಮುದ್ರದಾಚೆಗೆ ಪಡುವಣ ದಿಕ್ಕಿಗೆ ನೋಡುತ್ತಿದ್ದೀರೆಂದು ಭಾವಿಸಿ. ನೀವು ಏನನ್ನು ನೋಡುತ್ತೀರಿ? ದೂರದಲ್ಲಿ ಕಡಲನೀರಿನ ಮೇಲ್ಮೈಯನ್ನು ಸವರಿಕೊಂಡು ಬಿಳಿಯ ಚುಕ್ಕೆಗಳಿರುವ ಮೋಡವೊಂದು ಎದ್ದುಬರುತ್ತಿದೆ. ಅವು ಪಕ್ಷಿಗಳಂತೆ ಕಾಣುತ್ತವಾದರೂ, ಹತ್ತಿರಕ್ಕೆ ಬರುವಾಗ ಅವು ಹಾಯಿಬಿಟ್ಟ ಹಡಗುಗಳೆಂದು ನಿಮಗೆ ಗೊತ್ತಾಗುತ್ತದೆ. ಅವು “ದೂರದಿಂದ” ಬಂದಿರುತ್ತವೆ.a (ಯೆಶಾಯ 49:12) ಚೀಯೋನಿನ ಕಡೆಗೆ ಎಷ್ಟೊಂದು ಹಡಗುಗಳು ವೇಗವಾಗಿ ಬರುತ್ತಿವೆಯೆಂದರೆ, ಅವು ಗೂಡುಗಳಿಗೆ ಹಿಂದೆರಳುತ್ತಿರುವ ಪಾರಿವಾಳಗಳ ಹಿಂಡನ್ನು ಹೋಲುತ್ತವೆ. ಹಡಗುಗಳ ಆ ಗುಂಪು ಅಷ್ಟು ತ್ವರೆಯಿಂದ ಬರುತ್ತಿರುವುದೇಕೆ? ದೂರದೂರದ ಬಂದರುಗಳಿಂದ ಬರುತ್ತಿರುವ ಸರಕುಗಳಾದ ಯೆಹೋವನ ಆರಾಧಕರನ್ನು ಒಪ್ಪಿಸಲು ಆ ಹಡಗುಗಳ ಸಮೂಹವು ತ್ವರೆಪಡುತ್ತದೆ. ಹೌದು, ಹೊಸದಾಗಿ ಆಗಮಿಸುವವರೆಲ್ಲರೂ, ಅಂದರೆ ಪೂರ್ವ ಅಥವಾ ಪಶ್ಚಿಮ ದಿಕ್ಕಿನಿಂದ ಮತ್ತು ಹತ್ತಿರದ ಹಾಗೂ ದೂರದ ದೇಶಗಳಿಂದ ಬಂದಿರುವ ಇಸ್ರಾಯೇಲ್ಯರೂ ವಿದೇಶೀಯರೂ, ತಮ್ಮನ್ನೂ ತಮ್ಮಲ್ಲಿರುವ ಸರ್ವಸ್ವವನ್ನೂ ತಮ್ಮ ದೇವರಾದ ಯೆಹೋವನ ಹೆಸರಿಗೆ ಸಮರ್ಪಿಸಲು ಯೆರೂಸಲೇಮಿಗೆ ಅವಸರದಿಂದ ಬರುತ್ತಿದ್ದಾರೆ.—ಯೆಶಾಯ 55:5.
13. ಆಧುನಿಕ ಸಮಯಗಳಲ್ಲಿ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳು” ಯಾರು, ಮತ್ತು “ಜನಾಂಗಗಳ ಐಶ್ವರ್ಯ” ಯಾರು?
13 ಯೆಶಾಯ 60:4-9ನೆಯ ವಚನಗಳು, ಯೆಹೋವನ “ಸ್ತ್ರೀ” ಈ ಲೋಕದ ಕತ್ತಲೆಯ ಮಧ್ಯೆ ಬೆಳಕನ್ನು ಬೀರಲಾರಂಭಿಸಿದಂದಿನಿಂದ ಆಗಿರುವ ಲೋಕವ್ಯಾಪಕವಾದ ವಿಸ್ತರಣೆಯನ್ನು ಎಷ್ಟು ಸುವ್ಯಕ್ತವಾಗಿ ಚಿತ್ರಿಸುತ್ತವೆ! ಪ್ರಥಮವಾಗಿ ಸ್ವರ್ಗೀಯ ಚೀಯೋನಿನ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳು,” ಅಂದರೆ ಅಭಿಷಿಕ್ತ ಕ್ರೈಸ್ತರಾಗಿ ಪರಿಣಮಿಸಿದವರು ಬಂದರು. ಇವರು 1931ರಲ್ಲಿ ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಬಹಿರಂಗವಾಗಿ ಗುರುತಿಸಿಕೊಂಡರು. ಬಳಿಕ, “ಜನಾಂಗಗಳ ಐಶ್ವರ್ಯ” ಮತ್ತು “ಸಮುದ್ರವ್ಯಾಪಾರಸಮೃದ್ಧಿಯು,” ಅಂದರೆ ದೀನ ಜನರ ಮೇಘವು ಕ್ರಿಸ್ತನ ಸಹೋದರರಲ್ಲಿ ಉಳಿದಿರುವವರನ್ನು ಜೊತೆಗೂಡಲು ಅತ್ಯಾತುರದಿಂದ ಬಂತು.b ಇಂದು ಜಗತ್ತಿನ ನಾಲ್ಕೂ ಮೂಲೆಗಳಿಂದಲೂ ಎಲ್ಲ ಅಂತಸ್ತುಗಳಿಂದಲೂ ಬರುತ್ತಿರುವ ಯೆಹೋವನ ಸೇವಕರಾದ ಇವರು, ತಮ್ಮ ಪರಮಾಧಿಕಾರಿ ಪ್ರಭುವಾದ ಯೆಹೋವನನ್ನು ಸ್ತುತಿಸುವುದರಲ್ಲಿ ಮತ್ತು ಆತನ ನಾಮವನ್ನು ಇಡೀ ವಿಶ್ವದಲ್ಲೇ ಅತ್ಯಂತ ಭವ್ಯ ನಾಮವೆಂದು ಘನತೆಗೇರಿಸುವುದರಲ್ಲಿ ದೇವರ ಇಸ್ರಾಯೇಲನ್ನು ಜೊತೆಗೂಡುತ್ತಿದ್ದಾರೆ.
14. ಹೊಸದಾಗಿ ಆಗಮಿಸಿರುವವರು ‘[ದೇವರ] ಯಜ್ಞವೇದಿಯ ಮೇಲೆ ಒಯ್ಯಲ್ಪಡುವದು’ ಹೇಗೆ?
14 ಆದರೆ ಜನಾಂಗಗಳಿಂದ ಬಂದಿದ್ದ ಈ ಹೊಸಬರು “[ದೇವರ] ಯಜ್ಞವೇದಿಯ ಮೇಲೆ . . . ಒಯ್ಯಲ್ಪಡು”ವರು ಎಂಬುದರ ಅರ್ಥವೇನು? ಯಜ್ಞವನ್ನು ಯಜ್ಞವೇದಿಯ ಮೇಲೆ ಇಡಲಾಗುತ್ತದೆ. ಯಜ್ಞವನ್ನು ಒಳಗೂಡುವ ಒಂದು ವಾಕ್ಸರಣಿಯನ್ನು ಅಪೊಸ್ತಲ ಪೌಲನು ಹೀಗೆ ಬರೆಯುವಾಗ ಉಪಯೋಗಿಸಿದನು: “ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆ.” (ರೋಮಾಪುರ 12:1) ನಿಜ ಕ್ರೈಸ್ತರು ತಮ್ಮನ್ನೇ ಒಪ್ಪಿಸಿಕೊಡಲು ಸಿದ್ಧರಿದ್ದಾರೆ. (ಲೂಕ 9:23, 24) ಶುದ್ಧಾರಾಧನೆಗೆ ಒತ್ತಾಸೆಯನ್ನು ಕೊಡಲಿಕ್ಕಾಗಿ ಅವರು ತಮ್ಮ ಸಮಯ, ಶಕ್ತಿ ಮತ್ತು ಕೌಶಲಗಳನ್ನು ಮೀಸಲಾಗಿಡುತ್ತಾರೆ. (ರೋಮಾಪುರ 6:13) ಹೀಗೆ ಮಾಡುವ ಮೂಲಕ ಅವರು ದೇವರಿಗೆ ಸ್ವೀಕರಣೀಯವಾದ ಸ್ತೋತ್ರಯಜ್ಞವನ್ನು ಅರ್ಪಿಸುತ್ತಾರೆ. (ಇಬ್ರಿಯ 13:15) ಇಂದು ಆಬಾಲವೃದ್ಧರೆಲ್ಲರೂ ಸೇರಿ ದಶಲಕ್ಷಾಂತರ ಮಂದಿ ಯೆಹೋವನ ಆರಾಧಕರು, ದೇವರ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಟ್ಟು, ತಮ್ಮ ಸ್ವಂತ ಬಯಕೆಗಳನ್ನು ದ್ವಿತೀಯ ಸ್ಥಾನದಲ್ಲಿಟ್ಟುಕೊಂಡಿರುವುದು ಅದೆಷ್ಟು ಹೃದಯೋತ್ತೇಜಕವಾದದ್ದಾಗಿದೆ! ಅವರು ನಿಜವಾದ ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸುತ್ತಾರೆ.—ಮತ್ತಾಯ 6:33; 2 ಕೊರಿಂಥ 5:15.
ಹೊಸದಾಗಿ ಆಗಮಿಸಿರುವವರು ವಿಸ್ತರಣೆಯಲ್ಲಿ ಪಾಲಿಗರಾಗುತ್ತಾರೆ
15. (ಎ) ಪುರಾತನ ಕಾಲದಲ್ಲಿ ವಿದೇಶೀಯರ ಸಂಬಂಧದಲ್ಲಿ ಯೆಹೋವನ ಕರುಣೆ ಹೇಗೆ ವ್ಯಕ್ತವಾಯಿತು? (ಬಿ) ಆಧುನಿಕ ಸಮಯಗಳಲ್ಲಿ, “ವಿದೇಶೀಯರು” ಸತ್ಯಾರಾಧನೆಯನ್ನು ಕಟ್ಟುವುದರಲ್ಲಿ ಹೇಗೆ ಭಾಗಿಗಳಾಗಿದ್ದಾರೆ?
15 ಹೊಸದಾಗಿ ಆಗಮಿಸಿರುವವರು ಯೆಹೋವನ “ಸ್ತ್ರೀ”ಯ ಬೆಂಬಲಾರ್ಥವಾಗಿ ತಮ್ಮ ಸ್ವತ್ತುಗಳನ್ನೂ ವೈಯಕ್ತಿಕ ಸೇವೆಗಳನ್ನೂ ಅರ್ಪಿಸುತ್ತಾರೆ. “ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದುಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.” (ಯೆಶಾಯ 60:10) ಸಾ.ಶ.ಪೂ. ಆರನೆಯ ಶತಮಾನದಲ್ಲಿ, ಯೆರೂಸಲೇಮನ್ನು ಕಟ್ಟುವುದರಲ್ಲಿ ವಿದೇಶೀಯರು ಭಾಗವಹಿಸಿದಾಗ ಯೆಹೋವನ ಕರುಣೆಯು ವ್ಯಕ್ತವಾಯಿತು. (ಎಜ್ರ 3:7; ನೆಹೆಮೀಯ 3:26) ಇಂದಿನ ದೊಡ್ಡ ನೆರವೇರಿಕೆಯಲ್ಲಿ, “ವಿದೇಶೀಯರು” ಅಂದರೆ ಮಹಾ ಸಮೂಹದವರು ಸತ್ಯಾರಾಧನೆಯನ್ನು ಕಟ್ಟುವುದರಲ್ಲಿ ಅಭಿಷಿಕ್ತ ಉಳಿಕೆಯವರನ್ನು ಬೆಂಬಲಿಸುತ್ತಾರೆ. ಅವರು ತಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಕ್ರಿಸ್ತೀಯ ಗುಣಗಳನ್ನು ಕಟ್ಟಲು ಸಹಾಯಮಾಡುತ್ತಾರೆ ಮತ್ತು ಹೀಗೆ ಕ್ರೈಸ್ತ ಸಭೆಗಳ ಭಕ್ತಿವೃದ್ಧಿ ಮಾಡಿ, ಯೆಹೋವನ ಸಂಸ್ಥೆಯ ನಗರಸದೃಶ “ಪೌಳಿಗೋಡೆಗಳನ್ನು” ಬಲಪಡಿಸುತ್ತಾರೆ. (1 ಕೊರಿಂಥ 3:10-15) ರಾಜ್ಯ ಸಭಾಗೃಹಗಳು, ಅಸೆಂಬ್ಲಿ ಹಾಲ್ಗಳು ಮತ್ತು ಬ್ರಾಂಚ್ ಸೌಕರ್ಯಗಳನ್ನು ಕಟ್ಟುವುದರಲ್ಲಿ ಕಠಿನ ಕೆಲಸವನ್ನು ಮಾಡುವ ಮೂಲಕ ಅವರು ಅಕ್ಷರಶಃ ಕಟ್ಟುವ ಕೆಲಸವನ್ನು ಮಾಡುತ್ತಾರೆ. ಹೀಗೆ ಅವರು ಯೆಹೋವನ ವಿಸ್ತಾರಗೊಳ್ಳುತ್ತಿರುವ ಸಂಸ್ಥೆಯ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ತಮ್ಮ ಅಭಿಷಿಕ್ತ ಸಹೋದರರೊಂದಿಗೆ ಜೊತೆಗೂಡುತ್ತಾರೆ.—ಯೆಶಾಯ 61:5.
16, 17. (ಎ) ದೇವರ ಸಂಸ್ಥೆಯ “ಬಾಗಿಲುಗಳು” ಹೇಗೆ ತೆರೆದಿಡಲ್ಪಟ್ಟಿವೆ? (ಬಿ) “ಅರಸರು” ಚೀಯೋನನ್ನು ಸೇವಿಸಿರುವುದು ಹೇಗೆ? (ಸಿ) ಯೆಹೋವನು ತೆರೆದಿಡಬೇಕೆಂದು ಇಚ್ಛಿಸುವ “ಬಾಗಿಲುಗಳನ್ನು” ಮುಚ್ಚಲು ಪ್ರಯತ್ನಿಸುವವರಿಗೆ ಏನಾಗುವುದು?
16 ಈ ಆತ್ಮಿಕ ಕಟ್ಟಡ ನಿರ್ಮಾಣ ಕಾರ್ಯಕ್ರಮದ ಪರಿಣಾಮವಾಗಿ ಪ್ರತಿವರ್ಷ ಸಾವಿರಾರು ಮಂದಿ “ವಿದೇಶೀಯರು” ಯೆಹೋವನ ಸಂಸ್ಥೆಯೊಂದಿಗೆ ಜೊತೆಗೂಡಲು ಆರಂಭಿಸುತ್ತಾರೆ ಮತ್ತು ಆ ಅವಕಾಶದ ಬಾಗಿಲು ಇನ್ನೂ ಹೆಚ್ಚು ಜನರಿಗಾಗಿ ತೆರೆದೇ ಇದೆ. ಯೆಹೋವನು ಹೇಳುವುದು: “ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, ಅವುಗಳ ಅರಸರು ಮೆರಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.” (ಯೆಶಾಯ 60:11) ಆದರೆ ಜನಾಂಗಗಳ ಐಶ್ವರ್ಯವನ್ನು ಚೀಯೋನಿಗೆ ತರುವುದರಲ್ಲಿ ನಾಯಕತ್ವವನ್ನು ವಹಿಸುವ ಈ “ಅರಸರು” ಯಾರು? ಪುರಾತನ ಕಾಲದಲ್ಲಿ ಚೀಯೋನನ್ನು ‘ಸೇವಿಸುವಂತೆ’ ಯೆಹೋವನು ಕೆಲವು ಅರಸರ ಹೃದಯಗಳನ್ನು ಪ್ರಚೋದಿಸಿದ್ದನು. ಉದಾಹರಣೆಗೆ, ಯೆಹೂದ್ಯರು ದೇವಾಲಯವನ್ನು ಪುನಃ ಕಟ್ಟುವಂತೆ ಯೆರೂಸಲೇಮಿಗೆ ಅವರನ್ನು ಕಳುಹಿಸುವುದರಲ್ಲಿ ಕೋರೆಷನು ಆರಂಭದ ಹೆಜ್ಜೆಯನ್ನು ತೆಗೆದುಕೊಂಡಿದ್ದನು. ತರುವಾಯ, ಅರ್ತಷಸ್ತನು ಯೆರೂಸಲೇಮಿನ ಗೋಡೆಗಳನ್ನು ಪುನರ್ನಿರ್ಮಿಸುವಂತೆ ಸಂಪನ್ಮೂಲಗಳನ್ನು ಕಾಣಿಕೆಯಾಗಿ ನೀಡಿ ನೆಹೆಮೀಯನನ್ನು ಅಲ್ಲಿಗೆ ಕಳುಹಿಸಿದನು. (ಎಜ್ರ 1:2, 3; ನೆಹೆಮೀಯ 2:1-8) “ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲಿವೆಗಳಂತೆ ಇವೆ” ಎಂಬುದು ಸತ್ಯ. (ಜ್ಞಾನೋಕ್ತಿ 21:1) ಪ್ರಬಲರಾದ ಅರಸರೂ ತನ್ನ ಚಿತ್ತಾನುಸಾರ ವರ್ತಿಸುವಂತೆ ನಮ್ಮ ದೇವರು ಪ್ರಚೋದಿಸಬಲ್ಲನು.
17 ಆಧುನಿಕ ಸಮಯಗಳಲ್ಲಿ ಅನೇಕ ಮಂದಿ “ಅರಸರು” ಅಥವಾ ಲೌಕಿಕ ಅಧಿಕಾರಿಗಳು, ಯೆಹೋವನ ಸಂಸ್ಥೆಯ “ಬಾಗಿಲುಗಳ”ನ್ನು ಮುಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಇನ್ನು ಕೆಲವರು ಆ “ಬಾಗಿಲು”ಗಳನ್ನು ತೆರೆದಿಡುವಂತೆ ಸಹಾಯಮಾಡುವ ತೀರ್ಮಾನಗಳನ್ನು ಮಾಡಿ ಚೀಯೋನನ್ನು ಸೇವಿಸಿದ್ದಾರೆ. (ರೋಮಾಪುರ 13:4) 1919ರಲ್ಲಿ ಲೌಕಿಕ ಅಧಿಕಾರಿಗಳು ಜೋಸೆಫ್ ಎಫ್. ರದರ್ಫರ್ಡ್ ಮತ್ತು ಅವರ ಸಂಗಾತಿಗಳನ್ನು ಅನ್ಯಾಯದ ಬಂಧನದಿಂದ ಬಿಡಿಸಿದರು. (ಪ್ರಕಟನೆ 11:13) ಸೈತಾನನು ಸ್ವರ್ಗದಿಂದ ಕೆಳಗೆ ದೊಬ್ಬಲ್ಪಟ್ಟ ಬಳಿಕ ಅವನು ತಂದ ಹಿಂಸೆಯ ನದಿಯನ್ನು ಮಾನವ ಸರಕಾರಗಳು ‘ಕುಡಿದು ಬಿಟ್ಟವು.’ (ಪ್ರಕಟನೆ 12:16) ಕೆಲವು ಸರಕಾರಗಳು ಧಾರ್ಮಿಕ ಸಹಿಷ್ಣುತೆಯನ್ನು, ಕೆಲವು ಬಾರಿ ಪ್ರತ್ಯೇಕವಾಗಿ ಯೆಹೋವನ ಸಾಕ್ಷಿಗಳ ಪರವಾಗಿ ಉತ್ತೇಜಿಸಿವೆ. ಈ ರೀತಿಯಲ್ಲಿ ಸೇವೆಮಾಡುವುದು, ದೀನರ ಗುಂಪುಗಳು ತೆರೆದಿರುವ ‘ಬಾಗಿಲುಗಳ’ ಮೂಲಕ ಯೆಹೋವನ ಸಂಸ್ಥೆಯನ್ನು ಪ್ರವೇಶಿಸುವುದನ್ನು ಹೆಚ್ಚು ಸುಲಭವಾಗಿ ಮಾಡಿದೆ. ಆದರೆ ಆ “ಬಾಗಿಲುಗಳನ್ನು” ಮುಚ್ಚಲು ಪ್ರಯತ್ನಿಸುವ ವಿರೋಧಿಗಳಿಗೇನಾಗುತ್ತದೆ? ಅವರು ಎಂದಿಗೂ ಜಯಹೊಂದರು. ಅವರ ಕುರಿತು ಯೆಹೋವನು ಹೇಳುವುದು: “ನಿನ್ನನ್ನು ಸೇವಿಸಲೊಲ್ಲದ ಜನಾಂಗ ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳೇ ಹಾಳಾಗಿ ಹೋಗುವವು.” (ಯೆಶಾಯ 60:12) ದೇವರ “ಸ್ತ್ರೀ”ಗೆ ಎದುರಾಗಿ ಹೋರಾಡುವವರೆಲ್ಲರೂ, ಅವರು ವ್ಯಕ್ತಿಗಳಾಗಿರಲಿ ಇಲ್ಲವೆ ಸಂಸ್ಥೆಗಳಾಗಿರಲಿ, ಕೊನೆಯ ಪಕ್ಷ ಬರಲಿರುವ ಅರ್ಮಗೆದ್ದೋನ್ ಯುದ್ಧದಲ್ಲಿ ನಾಶವಾಗುವರು.—ಪ್ರಕಟನೆ 16:14, 16.
18. (ಎ) ಇಸ್ರಾಯೇಲಿನಲ್ಲಿ ಮರಗಳು ಸೊಂಪಾಗಿ ಬೆಳೆಯುವವು ಎಂಬ ವಾಗ್ದಾನದ ಅರ್ಥವೇನು? (ಬಿ) ಇಂದು ‘ಯೆಹೋವನ ಪಾದಸನ್ನಿಧಿ’ ಯಾವುದು?
18 ನ್ಯಾಯತೀರ್ಪಿನ ಈ ಎಚ್ಚರಿಕೆಯ ಬಳಿಕ, ಪ್ರವಾದನೆಯು ಪುನಃ ಒಮ್ಮೆ ಘನತೆಗೇರಿಸುವಿಕೆ ಮತ್ತು ಸಮೃದ್ಧಿಯ ಕುರಿತಾದ ವಾಗ್ದಾನಗಳನ್ನು ತಿಳಿಸುತ್ತದೆ. ಯೆಹೋವನು ತನ್ನ “ಸ್ತ್ರೀ”ಯೊಂದಿಗೆ ಮಾತಾಡುತ್ತ ಹೇಳುವುದು: “ನನ್ನ ಪವಿತ್ರಾಲಯವನ್ನು ಭೂಷಿಸುವದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.” (ಯೆಶಾಯ 60:13) ಸೊಂಪಾಗಿ ಬೆಳೆದಿರುವ ಮರಗಳು ಸೌಂದರ್ಯವನ್ನೂ ಫಲೋತ್ಪಾದಕತೆಯನ್ನೂ ಚಿತ್ರಿಸುತ್ತವೆ. (ಯೆಶಾಯ 41:19; 55:13) ಈ ವಚನದಲ್ಲಿರುವ “ಪವಿತ್ರಾಲಯ” ಮತ್ತು “ಪಾದಸನ್ನಿಧಿ” ಎಂಬ ಪದಗಳು, ಯೆರೂಸಲೇಮಿನ ದೇವಾಲಯವನ್ನು ಸೂಚಿಸುತ್ತವೆ. (1 ಪೂರ್ವಕಾಲವೃತ್ತಾಂತ 28:2; ಕೀರ್ತನೆ 99:5) ಆದರೂ, ಯೆರೂಸಲೇಮಿನ ದೇವಾಲಯವು ಪ್ರಾತಿನಿಧಿಕವೆಂದೂ ಅದು ಹೆಚ್ಚು ಮಹತ್ವವುಳ್ಳ ಆತ್ಮಿಕ ದೇವಾಲಯವನ್ನು, ಅಂದರೆ ಕ್ರಿಸ್ತನ ಯಜ್ಞದ ಆಧಾರದ ಮೇರೆಗೆ ಆರಾಧನೆಯಲ್ಲಿ ಯೆಹೋವನನ್ನು ಸಮೀಪಿಸುವ ಏರ್ಪಾಡನ್ನು ಮುನ್ಸೂಚಿಸುತ್ತದೆಂದೂ ಅಪೊಸ್ತಲ ಪೌಲನು ವಿವರಿಸಿದನು. (ಇಬ್ರಿಯ 8:1-5; 9:2-10, 23) ಇಂದು ಯೆಹೋವನು ತನ್ನ “ಪಾದಸನ್ನಿಧಿ”ಯನ್ನು ಅಂದರೆ ಈ ಮಹಾ ಆತ್ಮಿಕ ದೇವಾಲಯದ ಭೂಅಂಗಣಗಳನ್ನು ವೈಭವಪಡಿಸುತ್ತಾನೆ. ಆ ಅಂಗಣಗಳು ಎಷ್ಟು ಆಕರ್ಷಕವಾಗಿರುತ್ತವೆಂದರೆ, ಅವು ಎಲ್ಲ ಜನಾಂಗಗಳ ಜನರು ಅಲ್ಲಿ ಸತ್ಯಾರಾಧನೆಯಲ್ಲಿ ಭಾಗವಹಿಸುವಂತೆ ಅವರನ್ನು ಸೆಳೆಯುತ್ತವೆ.—ಯೆಶಾಯ 2:1-4; ಹಗ್ಗಾಯ 2:7.
19. ವಿರೋಧಿಗಳು ಏನನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಡುವರು, ಮತ್ತು ಕಡಿಮೆಪಕ್ಷ ಯಾವಾಗ ಅವರು ಇದನ್ನು ಮಾಡುವರು?
19 ಯೆಹೋವನು ಈಗ ತನ್ನ ವಿರೋಧಿಗಳ ಕಡೆಗೆ ಗಮನ ಹರಿಸುತ್ತ ಹೇಳುವುದು: “ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು.” (ಯೆಶಾಯ 60:14) ಹೌದು, ಸಮೃದ್ಧವಾದ ಅಭಿವೃದ್ಧಿಯನ್ನು ಮತ್ತು ಯೆಹೋವನ ಆಶೀರ್ವಾದವು ಆತನ ಜನರಿಗೆ ಒದಗಿಸುವ ಶ್ರೇಷ್ಠಮಟ್ಟದ ಜೀವನರೀತಿಯನ್ನು ನೋಡಿ, ಕೆಲವು ವಿರೋಧಿಗಳು ಆ “ಸ್ತ್ರೀ”ಗೆ ಅಡ್ಡಬೀಳುವಂತೆ ಮತ್ತು ಅವಳನ್ನು ಕರೆಯುವಂತೆ ನಿರ್ಬಂಧಿಸಲ್ಪಡುವರು. ಇದರರ್ಥ, ಕಡಿಮೆಪಕ್ಷ ಅರ್ಮಗೆದೋನಿನಲ್ಲಿಯಾದರೂ ಅವರು, ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳು ನಿಜವಾಗಿಯೂ “ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್” ಆದ ಯೆಹೋವನ ಸ್ವರ್ಗೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಡುವರು.
ಲಭ್ಯವಿರುವ ಸಂಪನ್ಮೂಲಗಳನ್ನು ಉಪಯೋಗಿಸುವುದು
20. ಆ “ಸ್ತ್ರೀ” ತನ್ನ ಸ್ಥಿತಿಯಲ್ಲಿ ಯಾವ ಮಹಾ ಬದಲಾವಣೆಯನ್ನು ಅನುಭವಿಸುತ್ತಾಳೆ?
20 ಯೆಹೋವನ “ಸ್ತ್ರೀ”ಯು ತನ್ನ ಸ್ಥಿತಿಯಲ್ಲಿ ಎಷ್ಟು ದೊಡ್ಡ ಬದಲಾವಣೆಯನ್ನು ಅನುಭವಿಸುತ್ತಾಳೆ! ಯೆಹೋವನು ಹೇಳುವುದು: “ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರಗಳವರಿಗೆ ಉಲ್ಲಾಸಕರವಾಗುವಂತೆ ಮಾಡುವೆನು. ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.”—ಯೆಶಾಯ 60:15, 16.
21. (ಎ) ಪುರಾತನ ಕಾಲದ ಯೆರೂಸಲೇಮು “ನಿತ್ಯಶ್ರೇಷ್ಠತೆ”ಯಾಗಿರುವುದು ಹೇಗೆ? (ಬಿ) ಯೆಹೋವನ ಅಭಿಷಿಕ್ತ ಸೇವಕರು 1919ರಿಂದ ಯಾವ ಆಶೀರ್ವಾದಗಳನ್ನು ಅನುಭವಿಸಿದ್ದಾರೆ, ಮತ್ತು ಇವರು “ಜನಾಂಗಗಳ ಮೊಲೆಕೂಸು” ಆದದ್ದು ಹೇಗೆ?
21 ಪುರಾತನ ಕಾಲದ ಯೆರೂಸಲೇಮು 70 ವರುಷಗಳ ವರೆಗೆ “ಯಾರೂ ಹಾದುಹೋಗದ,” ಕಾರ್ಯತಃ ಅಸ್ತಿತ್ವದಲ್ಲಿಲ್ಲದಂಥ ಸ್ಥಳವಾಗಿತ್ತು. ಆದರೆ ಸಾ.ಶ.ಪೂ. 537ರಿಂದ ಹಿಡಿದು ಯೆಹೋವನು ಆ ನಗರದಲ್ಲಿ ಜನರು ಪುನಃ ವಾಸಿಸುವಂತೆ ಮಾಡಿ, ಅದಕ್ಕೆ “ನಿತ್ಯಶ್ರೇಷ್ಠತೆಯನ್ನು” ಕೊಟ್ಟನು. ಅದೇ ರೀತಿ, ಒಂದನೆಯ ಲೋಕ ಯುದ್ಧದ ಕೊನೆಯಲ್ಲಿ ದೇವರ ಇಸ್ರಾಯೇಲು ನಿರ್ಜನಸ್ಥಿತಿಯನ್ನು ಅನುಭವಿಸಿತು ಮತ್ತು ಆಗ ಅವರಿಗೆ ‘ಬಿಟ್ಟುಬಿಡಲ್ಪಟ್ಟಿರುವ’ ಅನಿಸಿಕೆಯಾಯಿತು. ಆದರೆ 1919ರಲ್ಲಿ ಯೆಹೋವನು ತನ್ನ ಅಭಿಷಿಕ್ತ ಸೇವಕರನ್ನು ಬಂಧನದಿಂದ ವಿಮೋಚಿಸಿ, ಅಂದಿನಿಂದ ಅವರಿಗೆ ಅಭೂತಪೂರ್ವವಾದ ವಿಸ್ತರಣೆಯನ್ನೂ ಆತ್ಮಿಕ ಸಮೃದ್ಧಿಯನ್ನೂ ಕೊಟ್ಟು ಆಶೀರ್ವದಿಸಿದ್ದಾನೆ. ಆತನ ಜನರು “ಜನಾಂಗಗಳ ಮೊಲೆಕೂಸು”ಗಳಾಗಿದ್ದಾರೆ, ಅಂದರೆ ಜನಾಂಗಗಳ ಲೌಕಿಕ ಸಂಪನ್ಮೂಲಗಳನ್ನು ಸತ್ಯಾರಾಧನೆಯ ಅಭಿವೃದ್ಧಿಗಾಗಿ ಉಪಯೋಗಿಸಿದ್ದಾರೆ. ಉದಾಹರಣೆಗೆ, ಆಧುನಿಕ ತಂತ್ರಜ್ಞಾನದ ಸದುಪಯೋಗವು, ಬೈಬಲ್ಗಳು ಮತ್ತು ಬೈಬಲ್ ಸಾಹಿತ್ಯಗಳನ್ನು ನೂರಾರು ಭಾಷೆಗಳಿಗೆ ತರ್ಜುಮೆಮಾಡಿ ಪ್ರಕಾಶಿಸುವುದನ್ನು ಸಾಧ್ಯಗೊಳಿಸಿದೆ. ಇದರ ಪರಿಣಾಮವಾಗಿ, ಪ್ರತಿ ವರುಷ ನೂರಾರು ಸಾವಿರ ಜನರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸಿ, ಯೆಹೋವನು ಕ್ರಿಸ್ತನ ಮೂಲಕ ತಮ್ಮ ರಕ್ಷಕನೂ ವಿಮೋಚಕನೂ ಆಗಿದ್ದಾನೆ ಎಂಬ ಜ್ಞಾನವನ್ನು ಪಡೆದುಕೊಳ್ಳುವಂತಾಗಿದೆ.—ಅ. ಕೃತ್ಯಗಳು 5:31; 1 ಯೋಹಾನ 4:14.
ಸಂಘಟನಾತ್ಮಕ ಪ್ರಗತಿ
22. ಯೆಹೋವನು ಯಾವ ವಿಶೇಷ ರೀತಿಯ ಪ್ರಗತಿಯನ್ನು ವಾಗ್ದಾನಿಸುತ್ತಾನೆ?
22 ಯೆಹೋವನ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಾಗ ಸಂಘಟನಾತ್ಮಕ ಪ್ರಗತಿಯೂ ಆಗುತ್ತಿದೆ. ಯೆಹೋವನು ಹೇಳುವುದು: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.” (ಯೆಶಾಯ 60:17) ತಾಮ್ರಕ್ಕೆ ಬದಲಾಗಿ ಚಿನ್ನವನ್ನು ಹಾಕುವುದು, ಸುಧಾರಣೆಯನ್ನು ಸೂಚಿಸುತ್ತದೆ ಮತ್ತು ಇದು ಇಲ್ಲಿ ತಿಳಿಸಲ್ಪಟ್ಟಿರುವ ಇತರ ವಸ್ತುಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಹೊಂದಿಕೆಯಲ್ಲಿ, ಯೆಹೋವನ ಜನರು ಈ ಕಡೇ ದಿವಸಗಳಾದ್ಯಂತ ಸಂಘಟನಾತ್ಮಕವಾಗಿ ಸುಧಾರಿತ ಏರ್ಪಾಡುಗಳನ್ನು ಅನುಭವಿಸುತ್ತಿದ್ದಾರೆ.
23, 24. ಯೆಹೋವನ ಜನರು 1919ರಿಂದ ಹಿಡಿದು ಸುಧಾರಣೆಗೊಂಡಿರುವ ಯಾವ ಸಂಘಟನಾತ್ಮಕ ಏರ್ಪಾಡುಗಳನ್ನು ಅನುಭವಿಸುತ್ತಿದ್ದಾರೆ?
23 ಸಭೆಗಳಲ್ಲಿ, 1919ರೊಳಗೆ ಪ್ರಜಾಪ್ರಭುತ್ವಾತ್ಮಕವಾಗಿ ಆಯ್ಕೆಮಾಡಲ್ಪಟ್ಟ ಹಿರಿಯರೂ ಡೀಕನರೂ ಇದ್ದರು. ಆ ವರುಷ ಮೊದಲ್ಗೊಂಡು, ಸಭೆಯಲ್ಲಿ ಕ್ಷೇತ್ರ ಸೇವಾ ಚಟುವಟಿಕೆಗಳನ್ನು ನೋಡಿಕೊಳ್ಳಲು ಒಬ್ಬ ಸೇವಾ ನಿರ್ದೇಶಕನನ್ನು ದೇವಪ್ರಭುತ್ವಾತ್ಮಕವಾಗಿ ನೇಮಿಸಲಾಯಿತು. ಆದರೆ ಚುನಾಯಿಸಲ್ಪಟ್ಟಿದ್ದ ಹಿರಿಯರು ಸೇವಾ ನಿರ್ದೇಶಕನನ್ನು ಪ್ರತಿಭಟಿಸಿದ ಸಂದರ್ಭಗಳೂ ಇದ್ದವು. ಆದರೆ 1932ರಲ್ಲಿ ವಿಷಯಗಳು ಬದಲಾದವು. ಆಗ ಸಭೆಗಳು ಹಿರಿಯರನ್ನು ಮತ್ತು ಡೀಕನರನ್ನು ಚುನಾಯಿಸುವುದನ್ನು ನಿಲ್ಲಿಸಬೇಕೆಂದು ವಾಚ್ಟವರ್ ಪತ್ರಿಕೆಯ ಮೂಲಕ ತಿಳಿಸಲಾಯಿತು. ಅದರ ಬದಲಿಗೆ, ಸೇವಾ ನಿರ್ದೇಶಕನೊಂದಿಗೆ ಕೆಲಸಮಾಡಲು ಸಭೆಗಳು ಸೇವಾ ಕಮಿಟಿಯನ್ನು ಚುನಾಯಿಸಬೇಕಾಗಿತ್ತು. ಇದು ಒಂದು ದೊಡ್ಡ ಸುಧಾರಣೆಯಾಗಿತ್ತು.
24 ಇಸವಿ 1938ರಲ್ಲಿ ಸಭೆಯ ಎಲ್ಲ ಸೇವಕರು ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಡಬೇಕೆಂಬ ಸಂಗತಿಯು ಜಾರಿಗೆಬಂದಾಗ, ಇನ್ನೂ ಹೆಚ್ಚು “ಚಿನ್ನ”ವು ಒಳತರಲ್ಪಟ್ಟಿತು. ಸಭೆಯ ಆಡಳಿತವು, ಕಂಪನಿ ಸೇವಕ (ತರುವಾಯ, ಸಭಾಸೇವಕ)ನ ಮೇಲ್ವಿಚಾರಣೆಯ ಕೆಳಗೆ ಬಂತು. ಮತ್ತು ಅವನಿಗೆ ನೆರವಾಗುತ್ತಿದ್ದ ವಿವಿಧ ರೀತಿಯ ಸೇವಕರೆಲ್ಲರೂ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೇಲ್ವಿಚಾರಣೆಯ ಕೆಳಗೆ ನೇಮಿಸಲ್ಪಟ್ಟರು.c (ಮತ್ತಾಯ 24:45-47) ಆದರೂ 1972ರಲ್ಲಿ, ಸಭೆಯನ್ನು ನೋಡಿಕೊಳ್ಳುವ ಶಾಸ್ತ್ರೀಯ ವಿಧಾನವು ಕೇವಲ ಒಬ್ಬ ವ್ಯಕ್ತಿಯ ಮೂಲಕವಲ್ಲ, ಬದಲಾಗಿ ಹಿರಿಯರ ಒಂದು ಮಂಡಳಿಯ ಮೂಲಕ ಎಂಬುದು ತಿಳಿದುಬಂತು. (ಫಿಲಿಪ್ಪಿ 1:1) ಸಭೆಯ ಮಟ್ಟದಲ್ಲಿಯೂ ಆಡಳಿತ ಮಂಡಳಿಯ ಮಟ್ಟದಲ್ಲಿಯೂ ಬೇರೆ ಬದಲಾವಣೆಗಳನ್ನು ಮಾಡಲಾಯಿತು. ಇದರ ಒಂದು ಉದಾಹರಣೆಯನ್ನು 2000 ಇಸವಿಯ ಅಕ್ಟೋಬರ್ 7ರಲ್ಲಿ ನೋಡಲಾಯಿತು. ಆಗ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಮತ್ತು ಅದಕ್ಕೆ ಒಳಪಟ್ಟ ಕಾರ್ಪೊರೇಶನ್ಗಳಲ್ಲಿ ಡೈರೆಕ್ಟರ್ಗಳಾಗಿ ಸೇವೆಮಾಡುತ್ತಿದ್ದ ಆಡಳಿತ ಮಂಡಳಿಯ ಸದಸ್ಯರು, ಇಷ್ಟಪೂರ್ವಕವಾಗಿ ತಮ್ಮ ಪದವಿಯನ್ನು ಬಿಟ್ಟಿದ್ದಾರೆಂದು ಪ್ರಕಟಿಸಲಾಯಿತು. ಈ ವಿಧದಲ್ಲಿ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು ಪ್ರತಿನಿಧಿಸುವ ಆಡಳಿತ ಮಂಡಳಿಯು, ‘ದೇವರ ಸಭೆ’ಯ ಮತ್ತು ಬೇರೆ ಕುರಿಗಳಾದ ಅವರ ಜೊತೆಗಾರರ ಆತ್ಮಿಕ ಮೇಲ್ವಿಚಾರಣೆಯನ್ನು ಮಾಡಲು ಹೆಚ್ಚು ಗಮನವನ್ನು ಕೊಡಶಕ್ತವಾಗಿದೆ. (ಅ. ಕೃತ್ಯಗಳು 20:28) ಈ ಎಲ್ಲ ಏರ್ಪಾಡುಗಳು ಸುಧಾರಣೆಗಳಾಗಿವೆ. ಅವು ಯೆಹೋವನ ಸಂಸ್ಥೆಯನ್ನು ಬಲಪಡಿಸಿ, ಆತನ ಆರಾಧಕರಿಗೆ ಆಶೀರ್ವಾದಗಳನ್ನು ತಂದಿವೆ.
25. ಯೆಹೋವನ ಜನರ ಸಂಘಟನಾತ್ಮಕ ಪ್ರಗತಿಯ ಹಿಂದೆ ಯಾರಿದ್ದರು, ಮತ್ತು ಯಾವ ಪ್ರಯೋಜನಗಳನ್ನು ಕೊಯ್ಯಲಾಗಿದೆ?
25 ಈ ಸುಧಾರಣೆಗಳ ಹಿಂದೆ ಯಾರಿದ್ದಾರೆ? ಕೆಲವು ಮನುಷ್ಯರ ಉತ್ತಮ ಸಂಘಟನಾ ಸಾಮರ್ಥ್ಯ ಅಥವಾ ಚತುರ ಯೋಚನೆಗಳಿಂದ ಈ ಸುಧಾರಣೆಗಳಾಗಿವೆಯೋ? ಇಲ್ಲ, ಏಕೆಂದರೆ ಯೆಹೋವನೇ, ‘ಚಿನ್ನವನ್ನು ಒದಗಿಸುವೆನೆಂದು’ ಹೇಳಿದ್ದಾನೆ. ಈ ಎಲ್ಲ ಅಭಿವೃದ್ಧಿ ದೈವಿಕ ಮಾರ್ಗದರ್ಶನದ ಫಲವಾಗಿದೆ. ಯೆಹೋವನ ಜನರು ಆತನ ಮಾರ್ಗದರ್ಶನಕ್ಕೆ ಅಧೀನರಾಗಿ, ಹೊಂದಾಣಿಕೆಗಳನ್ನು ಮಾಡಿಕೊಳ್ಳುವಾಗ, ಅವರು ಪ್ರಯೋಜನಗಳನ್ನು ಕೊಯ್ಯುತ್ತಾರೆ. ಅವರ ಮಧ್ಯೆ ಸಮಾಧಾನವಿರುತ್ತದೆ, ಮತ್ತು ಅವರಲ್ಲಿರುವ ನೀತಿಪ್ರೇಮವು ಆತನನ್ನು ಸೇವಿಸುವಂತೆ ಅವರನ್ನು ಪ್ರೇರಿಸುತ್ತದೆ.
26. ಸತ್ಯ ಕ್ರೈಸ್ತರನ್ನು ಗುರುತಿಸುವ ಯಾವ ಗುರುತನ್ನು ವಿರೋಧಿಗಳೂ ಗಮನಿಸುತ್ತಾರೆ?
26 ದೇವದತ್ತ ಶಾಂತಿಗೆ ಪರಿವರ್ತನೆಯನ್ನು ಮಾಡುವ ಶಕ್ತಿಯಿದೆ. ಯೆಹೋವನು ವಾಗ್ದಾನಿಸುವುದು: “ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.” (ಯೆಶಾಯ 60:18) ಇದೆಷ್ಟು ಸತ್ಯ! ಸತ್ಯ ಕ್ರೈಸ್ತರ ಎದ್ದುಕಾಣುವ ಗುರುತು, ಶಾಂತಿಪೂರ್ಣ ಸ್ವಭಾವವಾಗಿದೆ ಎಂಬುದನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. (ಮೀಕ 4:3) ದೇವರೊಂದಿಗೆ ಮತ್ತು ತಮ್ಮೊಳಗೆ ಯೆಹೋವನ ಸಾಕ್ಷಿಗಳಿಗಿರುವ ಶಾಂತಿಯು, ಕ್ರೈಸ್ತರ ಪ್ರತಿಯೊಂದು ಕೂಟದ ಸ್ಥಳವನ್ನು ಈ ಹಿಂಸಾಚಾರದ ಲೋಕದಲ್ಲಿ ಒಂದು ತಂಪು ಜಾಗ (ಓಯಸಿಸ್)ವಾಗಿ ಮಾಡುತ್ತದೆ. (1 ಪೇತ್ರ 2:17) ಭೂಮಿಯ ಎಲ್ಲ ನಿವಾಸಿಗಳು “ಯೆಹೋವನಿಂದ ಶಿಕ್ಷಿತ”ರಾದ ಜನರಾಗುವಾಗ, ಅಲ್ಲಿರುವ ಶಾಂತಿಯ ಸಮೃದ್ಧಿಯ ಮುನ್ರುಚಿ ಇದಾಗಿದೆ.—ಯೆಶಾಯ 11:9; 54:13.
ದೈವಿಕ ಒಪ್ಪಿಗೆಯೆಂಬ ಮಹಿಮಾಭರಿತ ಬೆಳಕು
27. ಯೆಹೋವನ “ಸ್ತ್ರೀ”ಯ ಮೇಲೆ ಯಾವ ಬೆಳಕು ಸತತವಾಗಿ ಪ್ರಕಾಶಿಸುತ್ತದೆ?
27 ಯೆರೂಸಲೇಮಿನ ಮೇಲೆ ಪ್ರಕಾಶಿಸುವ ಬೆಳಕಿನ ತೀಕ್ಷ್ಣತೆಯನ್ನು ಯೆಹೋವನು ವರ್ಣಿಸುತ್ತ ಹೇಳುವುದು: “ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗೊಳ್ಳನು; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು. ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು.” (ಯೆಶಾಯ 60:19, 20) ಯೆಹೋವನು ತನ್ನ “ಸ್ತ್ರೀ”ಗೆ “ನಿತ್ಯಪ್ರಕಾಶ”ವಾಗಿರುವನು. ಆತನು ಎಂದಿಗೂ ಸೂರ್ಯನಂತೆ “ಮುಣುಗನು” ಇಲ್ಲವೆ ಚಂದ್ರನಂತೆ “ತೊಲಗನು.”d ಆತನ ಒಪ್ಪಿಗೆಯೆಂಬ ಸತತವಾದ ಬೆಳಕು, ದೇವರ “ಸ್ತ್ರೀ”ಯ ಮಾನವ ಪ್ರತಿನಿಧಿಗಳಾದ ಅಭಿಷಿಕ್ತ ಕ್ರೈಸ್ತರ ಮೇಲೆ ಬೆಳಗುತ್ತದೆ. ಅವರು ಮಹಾ ಸಮೂಹದವರೊಂದಿಗೆ ಆತ್ಮಿಕ ಬೆಳಕಿನ ತೇಜಸ್ಸನ್ನು ಎಷ್ಟೊಂದು ಅನುಭವಿಸುತ್ತಾರೆಂದರೆ, ಲೋಕದ ರಾಜಕೀಯ ಅಥವಾ ಆರ್ಥಿಕ ಕ್ಷೇತ್ರದಲ್ಲಿ ಅಂಧಕಾರವು ಎಷ್ಟೇ ಇರಲಿ, ಅದು ಆ ಬೆಳಕನ್ನು ಕುಂದಿಸದು. ಯೆಹೋವನು ತಮ್ಮ ಮುಂದೆ ಇಟ್ಟಿರುವ ಉಜ್ವಲ ಭವಿಷ್ಯತ್ತಿನಲ್ಲಿ ಅವರಿಗೆ ಭರವಸೆಯಿದೆ.—ರೋಮಾಪುರ 2:7; ಪ್ರಕಟನೆ 21:3-5.
28. (ಎ) ಯೆರೂಸಲೇಮಿಗೆ ಹಿಂದಿರುಗುತ್ತಿರುವ ನಿವಾಸಿಗಳ ಸಂಬಂಧದಲ್ಲಿ ಏನನ್ನು ವಾಗ್ದಾನಿಸಲಾಗಿದೆ? (ಬಿ) ಅಭಿಷಿಕ್ತ ಕ್ರೈಸ್ತರು 1919ರಲ್ಲಿ ಏನನ್ನು ಪಡೆದುಕೊಂಡರು? (ಸಿ) ನೀತಿವಂತರು ದೇಶವನ್ನು ಎಷ್ಟು ದೀರ್ಘಕಾಲ ಅನುಭವಿಸುವರು?
28 ಯೆರೂಸಲೇಮಿನ ನಿವಾಸಿಗಳ ವಿಷಯದಲ್ಲಿ ಯೆಹೋವನು ಹೇಳುವುದು: “ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.” (ಯೆಶಾಯ 60:21) ಮಾಂಸಿಕ ಇಸ್ರಾಯೇಲ್ಯರು ಬಾಬೆಲಿಗೆ ಹಿಂದಿರುಗಿದಾಗ, ಅವರು ‘ದೇಶವನ್ನು ಸದಾ ಅನುಭವಿಸಿದರು.’ ಆದರೆ ಆ ಸಮಯದಲ್ಲಿ “ಸದಾ”ಕಾಲ ಎಂಬುದು ಸಾ.ಶ. ಒಂದನೆಯ ಶತಮಾನದ ವರೆಗೆ ಮಾತ್ರ ಆಗಿತ್ತು. ಏಕೆಂದರೆ ಆಗ ರೋಮನ್ ಸೈನ್ಯಗಳು ಯೆರೂಸಲೇಮನ್ನೂ ಯೆಹೂದಿ ರಾಜ್ಯವನ್ನೂ ನಾಶಗೊಳಿಸಿದವು. ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು 1919ರಲ್ಲಿ ಆತ್ಮಿಕ ಬಂಧನದಿಂದ ಹೊರಬಂದು, ಒಂದು ಆತ್ಮಿಕ ದೇಶವನ್ನು ಪಡೆದುಕೊಂಡು ಅದನ್ನು ಅನುಭವಿಸಿದರು. (ಯೆಶಾಯ 66:8) ಈ ದೇಶ ಅಥವಾ ಕಾರ್ಯಕ್ಷೇತ್ರವು, ಎಂದಿಗೂ ಕುಂದಿಹೋಗದ ಪರದೈಸೀಯ ಆತ್ಮಿಕ ಸಮೃದ್ಧಿಯಿಂದ ಗುರುತಿಸಲ್ಪಡುತ್ತದೆ. ಪ್ರಾಚೀನ ಯೆರೂಸಲೇಮಿಗೆ ಅಸದೃಶವಾಗಿ, ಆತ್ಮಿಕ ಇಸ್ರಾಯೇಲ್ ಒಂದು ಸಮುದಾಯವಾಗಿ ಅಪನಂಬಿಗಸ್ತವಾಗದು. ಇದಲ್ಲದೆ, ಭೂಮಿಯು “ಮಹಾ ಸೌಖ್ಯ”ದಿಂದ ಗುರುತಿಸಲ್ಪಟ್ಟಿರುವ ಅಕ್ಷರಾರ್ಥ ಪರದೈಸ್ ಆಗುವಾಗ, ಯೆಶಾಯನ ಪ್ರವಾದನೆಗೆ ಭೌತಿಕವಾದ ನೆರವೇರಿಕೆಯೂ ಇರುವುದು. ಆಗ ಭೂನಿರೀಕ್ಷೆಯಿರುವ ನೀತಿವಂತರು ದೇಶವನ್ನು ಸದಾ ಅನುಭವಿಸುವರು.—ಕೀರ್ತನೆ 37:11, 29.
29, 30. “ಚಿಕ್ಕವನಿಂದ ಒಂದು ಕುಲ”ವಾಗಿರುವುದು ಹೇಗೆ?
29 ಯೆಶಾಯ 60ನೆಯ ಅಧ್ಯಾಯದ ಕೊನೆಯಲ್ಲಿ ಒಂದು ಘನವಾದ ವಾಗ್ದಾನವು ಕಂಡುಬರುತ್ತದೆ ಮತ್ತು ಇದಕ್ಕೆ ಯೆಹೋವನು ತನ್ನ ಸ್ವಂತ ನಾಮದಿಂದ ಖಾತ್ರಿನೀಡುತ್ತಾನೆ. ಆತನು ಹೇಳುವುದು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:22) ಚದರಿಹೋಗಿದ್ದ ಅಭಿಷಿಕ್ತರು 1919ರಲ್ಲಿ ಕ್ರಿಯಾಶೀಲರಾಗುವಂತೆ ಪುನಸ್ಸ್ಥಾಪಿಸಲ್ಪಟ್ಟಾಗ, ಅವರು “ಚಿಕ್ಕ” ಸಂಖ್ಯೆಯಲ್ಲಿದ್ದರು.e ಆದರೆ ಆತ್ಮಿಕ ಇಸ್ರಾಯೇಲಿನ ಉಳಿದವರು ಒಳತರಲ್ಪಟ್ಟಾಗ ಅವರ ಸಂಖ್ಯೆಯು ವೃದ್ಧಿಸಿತು. ಮತ್ತು ಮಹಾ ಸಮೂಹದವರು ಒಟ್ಟುಗೂಡಿಸಲ್ಪಟ್ಟಾಗಲಾದರೊ ಅವರ ಅಭಿವೃದ್ಧಿ ಅಪೂರ್ವವಾದದ್ದಾಗಿತ್ತು.
30 ಸ್ವಲ್ಪ ಸಮಯದೊಳಗೆ ದೇವರ ಜನರ ಮಧ್ಯೆಯಿದ್ದ ಶಾಂತಿ ಮತ್ತು ನೀತಿಯು ಎಷ್ಟೊಂದು ಜನ ಪ್ರಾಮಾಣಿಕ ಹೃದಯಿಗಳನ್ನು ಆಕರ್ಷಿಸಿತೆಂದರೆ, “ಅಲ್ಪನು” ಅಕ್ಷರಾರ್ಥಕವಾಗಿ ಬೆಳೆದು “ಬಲವಾದ ಜನಾಂಗ”ವಾದನು. ಈಗ, ಲೋಕದ ಅನೇಕ ಸ್ವತಂತ್ರ ರಾಜ್ಯಗಳಿಗಿಂತ ಇದು ಹೆಚ್ಚು ಜನಭರಿತವಾಗಿದೆ. ಯೆಹೋವನು ಯೇಸು ಕ್ರಿಸ್ತನ ಮೂಲಕ ರಾಜ್ಯದ ಕೆಲಸವನ್ನು ನಿರ್ದೇಶಿಸಿ, ಅದನ್ನು “ಬಲುಬೇಗನೆ” ಆಗುವಂತೆ ಮಾಡಿದ್ದಾನೆಂಬುದು ಸ್ಪಷ್ಟ. ಸತ್ಯಾರಾಧನೆಯ ಲೋಕವ್ಯಾಪಕ ವಿಸ್ತರಣೆಯನ್ನು ನೋಡಿ ಅದರಲ್ಲಿ ಭಾಗವಹಿಸುವುದು ಅದೆಷ್ಟು ರೋಮಾಂಚಕ! ಹೌದು, ಈ ಉನ್ನತಿಯು, ಯಾರು ಇದನ್ನು ದೀರ್ಘಕಾಲದ ಹಿಂದೆಯೇ ಪ್ರವಾದಿಸಿದನೋ ಆ ಯೆಹೋವನಿಗೆ ಮಹಿಮೆಯನ್ನು ತರುತ್ತದೆಂದು ತಿಳಿಯುವುದು ಹರ್ಷಕರವಾದದ್ದಾಗಿದೆ.
[ಪಾದಟಿಪ್ಪಣಿಗಳು]
a ತಾರ್ಷೀಷ್ ಪ್ರಾಯಶಃ ಈಗ ಸ್ಪೆಯ್ನ್ ಎಂದು ಕರೆಯಲ್ಪಡುವ ದೇಶದಲ್ಲಿ ನೆಲೆಸಿತ್ತು. ಆದರೂ ಕೆಲವು ಪ್ರಮಾಣ ಗ್ರಂಥಗಳಿಗನುಸಾರ, “ತಾರ್ಷೀಷಿನ ಹಡಗುಗಳು” ಎಂಬ ಅಭಿವ್ಯಕ್ತಿಯು, “ತಾರ್ಷೀಷಿಗೆ ಪಯಣಿಸಲು ತಕ್ಕದ್ದಾಗಿರುವ” ರೀತಿಯ ಹಡಗುಗಳನ್ನು, ಅಂದರೆ “ಸಮುದ್ರ ಪ್ರಯಾಣ ಮಾಡುವ ಎತ್ತರ ಕೂವೆಮರಗಳ ಹಡಗುಗಳನ್ನು” ಸೂಚಿಸುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬಹು ದೂರದ ಬಂದರುಗಳಿಗೆ ದೀರ್ಘಕಾಲದ ಪ್ರಯಾಣಕ್ಕಾಗಿ ಯೋಗ್ಯವೆಂದು ಎಣಿಸಲ್ಪಡುವ ಹಡಗುಗಳನ್ನು ಸೂಚಿಸುತ್ತವೆ.—1 ಅರಸುಗಳು 22:48.
b ಭೂನಿರೀಕ್ಷೆಯುಳ್ಳ, ಕ್ರಿಯಾಶೀಲ ಹಾಗೂ ಹುರುಪಿನ ಕ್ರೈಸ್ತರು 1930ರ ಮುಂಚೆಯೂ ದೇವರ ಇಸ್ರಾಯೇಲಿನೊಂದಿಗೆ ಜೊತೆಗೂಡಿದ್ದರೂ, ಅವರ ಸಂಖ್ಯೆಯು ಗಮನಾರ್ಹವಾಗಿ ವೃದ್ಧಿಯಾಗತೊಡಗಿದ್ದು 1930ಗಳಲ್ಲೇ.
c ಆ ದಿನಗಳಲ್ಲಿ ಸ್ಥಳಿಕ ಸಭೆಗಳನ್ನು ಕಂಪನಿಗಳೆಂದು ಕರೆಯಲಾಗುತ್ತಿತ್ತು.
d ಅಪೊಸ್ತಲ ಯೋಹಾನನು “ಹೊಸ ಯೆರೂಸಲೇಮ”ನ್ನು, ಅಂದರೆ ಸ್ವರ್ಗೀಯ ಮಹಿಮೆಯಲ್ಲಿರುವ 1,44,000 ಮಂದಿಯನ್ನು ವರ್ಣಿಸುವಾಗ ತದ್ರೀತಿಯ ಭಾಷೆಯನ್ನು ಉಪಯೋಗಿಸುತ್ತಾನೆ. (ಪ್ರಕಟನೆ 3:12; 21:10, 22-26) ಇದು ಯೋಗ್ಯವಾಗಿದೆ, ಏಕೆಂದರೆ “ಹೊಸ ಯೆರೂಸಲೇಮ್,” ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದುಕೊಂಡಿರುವ ದೇವರ ಇಸ್ರಾಯೇಲಿನ ಎಲ್ಲ ಸದಸ್ಯರನ್ನು ಪ್ರತಿನಿಧಿಸುತ್ತದೆ. ಆಗ ಅವರು ಯೇಸು ಕ್ರಿಸ್ತನೊಂದಿಗೆ “ಮೇಲಣ ಯೆರೂಸಲೇಮ್” ಆಗಿರುವ ದೇವರ “ಸ್ತ್ರೀ”ಯ ಪ್ರಮುಖ ಭಾಗವಾಗುತ್ತಾರೆ.—ಗಲಾತ್ಯ 4:26.
e ವಾಕ್ಯವನ್ನು ಸಾರುವುದರಲ್ಲಿ 1918ರಲ್ಲಿ ಭಾಗವಹಿಸಿದ್ದವರ ಸರಾಸರಿ ಸಂಖ್ಯೆಯು, ತಿಂಗಳಿಗೆ 4,000ಕ್ಕೂ ಕಡಿಮೆಯಾಗಿತ್ತು.
[ಪುಟ 305ರಲ್ಲಿರುವ ಚಿತ್ರಗಳು]
ಆ “ಸ್ತ್ರೀ”ಗೆ “ಏಳು”ವಂತೆ ಆಜ್ಞಾಪಿಸಲಾಗುತ್ತದೆ
[ಪುಟ 312, 313ರಲ್ಲಿರುವ ಚಿತ್ರ]
“ತಾರ್ಷೀಷಿನ ಹಡಗುಗಳು” ಯೆಹೋವನ ಆರಾಧಕರೆಂಬ ಸರಕನ್ನು ಒಯ್ಯುತ್ತವೆ