ಅಧ್ಯಯನ ಲೇಖನ 37
“ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ”
“ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ. ಆಗ ಎಲ್ಲ ರಾಷ್ಟ್ರಗಳ ಅಮೂಲ್ಯ ವಸ್ತುಗಳು ಈ ಆಲಯಕ್ಕೆ ಬಂದು ಸೇರುತ್ತೆ.”—ಹಗ್ಗಾ. 2:7.
ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ
ಕಿರುನೋಟa
1-2. ನಮ್ಮ ಕಾಲದಲ್ಲಿ ಏನಾಗುತ್ತೆ ಅಂತ ಪ್ರವಾದಿ ಹಗ್ಗಾಯ ಮುಂಚೆನೇ ಹೇಳಿದ್ದ?
2015ರಲ್ಲಿ ನೇಪಾಳದಲ್ಲಿ ಆದ ಭೂಕಂಪದ ಬಗ್ಗೆ ಒಬ್ಬರು ಹೀಗೆ ಹೇಳಿದರು: “ಕಣ್ಮುಚ್ಚಿ ಕಣ್ ಬಿಡುವಷ್ಟರಲ್ಲಿ ಅಂಗಡಿಗಳು, ಹಳೇ ಬಿಲ್ಡಿಂಗ್ಗಳು ನೆಲಸಮ ಆಗೋಯ್ತು.” “ಎಲ್ರೂ ಕಿರಿಚಾಡ್ತಿದ್ರು . . . ಭೂಮಿ ಎರಡು ನಿಮಿಷ ಅಲುಗಾಡ್ತು ಅಂತ ಕೆಲವರು ಹೇಳಿದ್ರು. ಆದ್ರೆ ನನಗೇನೋ ತುಂಬ ಹೊತ್ತು ಅಲುಗಾಡ್ತಾ ಇದ್ದ ಹಾಗೆ ಅನಿಸ್ತು” ಅಂತ ಇನ್ನೊಬ್ಬರು ಹೇಳ್ತಾರೆ. ನೀವಿರೋ ಕಡೆ ಹೀಗೇನಾದ್ರೂ ಆದ್ರೆ ನೀವದನ್ನ ಅಷ್ಟು ಬೇಗ ಮರೆಯಲ್ಲ ಅಲ್ವಾ?
2 ಒಂದು ಜಾಗದಲ್ಲಿ ಭೂಕಂಪ ಆದ್ರೆ ಅದಾಗಿರೋ ಜಾಗ ಮಾತ್ರ ಅಲುಗಾಡುತ್ತೆ. ಆದ್ರೆ ಇವತ್ತು ಇಡೀ ಪ್ರಪಂಚನೇ ಅಲುಗಾಡ್ತಾ ಇದೆ. ತುಂಬ ವರ್ಷಗಳಿಂದ ಯೆಹೋವ ದೇವರು ಎಲ್ಲಾ ರಾಷ್ಟ್ರಗಳನ್ನ ಅಲುಗಾಡಿಸ್ತಾ ಇದ್ದಾರೆ. ಇದ್ರ ಬಗ್ಗೆ ಪ್ರವಾದಿ ಹಗ್ಗಾಯ ಮುಂಚೆನೇ ಹೀಗೆ ಹೇಳಿದ್ದ: “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಇನ್ನು ಸ್ವಲ್ಪ ಸಮಯದಲ್ಲೇ ನಾನು ಇನ್ನೊಂದು ಸಲ ಆಕಾಶ, ಭೂಮಿ, ಸಮುದ್ರ ಮತ್ತು ಒಣನೆಲವನ್ನ ಅದುರಿಸ್ತೀನಿ.’”—ಹಗ್ಗಾ. 2:6.
3. ಭೂಕಂಪಕ್ಕೂ ಯೆಹೋವ ದೇವರು ರಾಷ್ಟ್ರಗಳನ್ನ ನಡುಗಿಸುವುದಕ್ಕೂ ಇರೋ ವ್ಯತ್ಯಾಸ ಏನು?
3 ಭೂಕಂಪ ಆದ್ರೆ ಅದರಿಂದ ಬರೀ ನಷ್ಟನೇ ಆಗುತ್ತೆ. ಆದ್ರೆ ಯೆಹೋವ ದೇವರು ರಾಷ್ಟ್ರಗಳನ್ನ ಅಲುಗಾಡಿಸಿದ್ರೆ ಅದರಿಂದ ಒಳ್ಳೇದೂ ಆಗುತ್ತೆ. “ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ. ಆಗ ಎಲ್ಲ ರಾಷ್ಟ್ರಗಳ ಅಮೂಲ್ಯ ವಸ್ತುಗಳು ಈ ಆಲಯಕ್ಕೆ ಬಂದು ಸೇರುತ್ತೆ. ನಾನು ಈ ಆಲಯವನ್ನ ಮಹಿಮೆಯಿಂದ ತುಂಬಿಸ್ತೀನಿ” ಅಂತ ಯೆಹೋವ ದೇವರೇ ಹೇಳಿದ್ದಾರೆ. (ಹಗ್ಗಾ. 2:7) ಹಗ್ಗಾಯ ಹೇಳಿದ ಈ ಭವಿಷ್ಯವಾಣಿ ಅವನ ಕಾಲದಲ್ಲಿ ಯಾವ ಅರ್ಥ ಕೊಡ್ತು? ನಮ್ಮ ಕಾಲದಲ್ಲಿ ಯಾವ ಅರ್ಥ ಕೊಡುತ್ತೆ? ರಾಷ್ಟ್ರಗಳನ್ನ ನಡುಗಿಸುವುದರಲ್ಲಿ ನಮ್ಮ ಪಾಲೇನು? ಈ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರ ನೋಡೋಣ.
ಹಗ್ಗಾಯನ ಕಾಲದಲ್ಲಿ ಧೈರ್ಯ ತುಂಬಿದ ಸಂದೇಶ
4. ಪ್ರವಾದಿ ಹಗ್ಗಾಯನನ್ನ ಯೆಹೋವ ದೇವರು ತನ್ನ ಜನರ ಹತ್ರ ಯಾಕೆ ಕಳಿಸಿದ್ರು?
4 ಕ್ರಿಸ್ತ ಪೂರ್ವ 537ರಲ್ಲಿ ಬಾಬೆಲಿಂದ ಯೆರೂಸಲೇಮಿಗೆ ವಾಪಸ್ಸು ಬಂದ ಯೆಹೂದಿಗಳ ಜೊತೆ ಹಗ್ಗಾಯನೂ ಇದ್ದಿರಬೇಕು. ಇವರೆಲ್ಲ ಯೆರೂಸಲೇಮಿಗೆ ಬಂದ ತಕ್ಷಣ ಯೆಹೋವ ದೇವರ ಆಲಯದ ಅಡಿಪಾಯ ಹಾಕೋಕೆ ಶುರುಮಾಡಿದ್ರು. (ಎಜ್ರ 3:8, 10) ಅಷ್ಟರಲ್ಲಿ ಅಲ್ಲಿದ್ದ ಜನ ಆ ಕೆಲಸಕ್ಕೆ ಅಡ್ಡಗಾಲು ಇಟ್ರು. ಆಗ ಆಲಯ ಕಟ್ಟುತ್ತಿದ್ದವರಿಗೆ ಬೇಜಾರಾಗಿ ಕೆಲಸ ನಿಲ್ಲಿಸಿಬಿಟ್ರು. (ಎಜ್ರ 4:4; ಹಗ್ಗಾ. 1:1, 2) ಅದಕ್ಕೆ ಕ್ರಿಸ್ತ ಪೂರ್ವ 520ರಲ್ಲಿ ಯೆಹೋವ ದೇವರು ಹಗ್ಗಾಯನಿಗೆ ಒಂದು ಮುಖ್ಯವಾದ ಕೆಲಸ ಕೊಟ್ಟು ಆ ಜನರ ಹತ್ರ ಕಳಿಸಿದ್ರು. ಆಲಯ ಕಟ್ಟಿ ಮುಗಿಸೋಕೆ ಜನರಿಗೆ ಧೈರ್ಯ ತುಂಬೋದೇ ಆ ಕೆಲಸ.b—ಎಜ್ರ 6:14, 15.
5. ಹಗ್ಗಾಯ ಹೇಳಿದ ಮಾತು ಯೆಹೋವನ ಜನರಿಗೆ ಹೇಗೆ ಧೈರ್ಯ ತುಂಬಿತು?
5 “ಯೆಹೋವ ಹೀಗೆ ಹೇಳ್ತಿದ್ದಾನೆ: ‘ದೇಶದ ಎಲ್ಲ ಜನ್ರೇ ನೀವೆಲ್ಲ ಧೈರ್ಯದಿಂದ ಕೆಲಸಕ್ಕೆ ಕೈಹಾಕಿ.’ ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ನಿಮ್ಮ ಜೊತೆ ಇದ್ದೀನಿ.’” (ಹಗ್ಗಾ. 2:4) ಯೆಹೂದ್ಯರನ್ನ ಹುರಿದುಂಬಿಸೋಕೆ, ತನ್ನ ಮೇಲಿರೋ ನಂಬಿಕೆನ ಇನ್ನೂ ಜಾಸ್ತಿ ಮಾಡೋಕೆ ದೇವರು ಪ್ರವಾದಿಯಿಂದ ಈ ಮಾತನ್ನ ಹೇಳಿಸಿದ್ರು. ಯೆಹೋವ ದೇವರ ಮೇಲೆ ನಂಬಿಕೆಯಿಟ್ಟಾಗ ಯೆಹೂದ್ಯರಿಗೆ ಆಲಯ ಕಟ್ಟೋಕೆ ಆಯ್ತು. ಯಾಕಂದ್ರೆ “ಸೈನ್ಯಗಳ ದೇವರಾದ ಯೆಹೋವ” ಅಂತ ಕೇಳಿಸಿಕೊಂಡ ತಕ್ಷಣ ಜನರಿಗೆ ಎಲ್ಲಿಲ್ಲದ ಧೈರ್ಯ ಬಂದಿರುತ್ತೆ. ಸ್ವರ್ಗದಲ್ಲಿ ಶಕ್ತಿಶಾಲಿಯಾದ, ಕೋಟಿಗಟ್ಟಲೆ ದೇವದೂತರಿರೋ ಸೈನ್ಯನೇ ಯೆಹೋವ ದೇವರ ಕೈಕೆಳಗಿದೆ.
6. ಹಗ್ಗಾಯನ ಭವಿಷ್ಯವಾಣಿಯಿಂದ ಯೆಹೂದ್ಯರಿಗೆ ಏನು ಗೊತ್ತಾಯ್ತು?
6 ‘ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ’ ಅಂತ ಹಗ್ಗಾಯನ ಮೂಲಕ ಯೆಹೋವ ದೇವರು ಹೇಳಿದ್ರು. ಆಲಯ ಕಟ್ಟೋಕೆ ಆಗದೇ ಕೈಚೆಲ್ಲಿ ಕೂತಿದ್ದ ಯೆಹೂದ್ಯರಿಗೆ ಈ ಸಂದೇಶ ಒಂದು ಆಶಾಕಿರಣ ಆಗಿತ್ತು. ಅದೇನಂದ್ರೆ ಆಗಿನ ಕಾಲದಲ್ಲಿ ಮಹಾಸಾಮ್ರಾಜ್ಯವಾಗಿದ್ದ ಪರ್ಷಿಯವನ್ನ ದೇವರು ನಡುಗಿಸ್ತಾರೆ ಅಂತ ಈ ಸಂದೇಶದಿಂದ ಯೆಹೂದ್ಯರು ಅರ್ಥಮಾಡ್ಕೊಂಡ್ರು. ಪರ್ಷಿಯವನ್ನ ನಡುಗಿಸಿದ್ರೆ ತಮ್ಮಿಂದ ದೇವರ ಆಲಯನ ಕಟ್ಟಿಮುಗಿಸೋಕೆ ಆಗುತ್ತೆ, ಅಷ್ಟೇ ಅಲ್ಲ ಈ ಆಲಯನ ಕಟ್ಟಿ ಮುಗಿಸಿದ ಮೇಲೆ ಯೆಹೂದ್ಯರಲ್ಲದ ಜನರು ಕೂಡ ಇಲ್ಲಿಗೆ ಬಂದು ಯೆಹೋವ ದೇವರನ್ನ ಆರಾಧಿಸೋಕೆ ಆಗುತ್ತೆ ಅಂತ ಅವರಿಗೆ ಗೊತ್ತಾಯ್ತು. ಈ ಭವಿಷ್ಯವಾಣಿ ಯೆಹೂದ್ಯರಿಗೆ ಸ್ಫೂರ್ತಿ ತುಂಬಿತು!—ಜೆಕ. 8:9.
ಇವತ್ತು ಇಡೀ ಪ್ರಪಂಚವನ್ನೇ ನಡುಗಿಸ್ತಿರೋ ಕೆಲಸ
7. ಜಗತ್ತನ್ನೇ ನಡುಗಿಸುತ್ತಾ ಇರೋ ಯಾವ ಕೆಲಸನ ನಾವು ಇವತ್ತು ಮಾಡ್ತಾ ಇದ್ದೀವಿ? ವಿವರಿಸಿ.
7 ಹಗ್ಗಾಯನ ಭವಿಷ್ಯವಾಣಿ ನಮ್ಮ ಕಾಲದಲ್ಲಿ ಯಾವ ಅರ್ಥ ಕೊಡುತ್ತೆ? ಇವತ್ತೂ ಯೆಹೋವ ದೇವರು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತಾ ಇದ್ದಾರೆ. ಅದ್ರಲ್ಲಿ ನಮ್ಮ ಪಾಲೂ ಇದೆ. 1914ರಲ್ಲಿ ಯೆಹೋವ ದೇವರು ಯೇಸುನ ಸ್ವರ್ಗದಲ್ಲಿ ರಾಜನಾಗಿ ಮಾಡಿದ್ರು. (ಕೀರ್ತ. 2:6) ಈ ಸಿಹಿಸುದ್ದಿ ಲೋಕದ ನಾಯಕರಿಗೆ ಕಹಿಸುದ್ದಿ ಆಗಿತ್ತು. ಯಾಕಂದ್ರೆ ಆ ರಾಷ್ಟ್ರಗಳಿಗೆ ಅಥವಾ “ದೇಶಗಳಿಗೆ ಕೊಟ್ಟಿರೋ ಸಮಯ” ಮುಗಿದು ಹೋಗಿತ್ತು ಮತ್ತು ಯೆಹೋವ ದೇವರನ್ನ ಪ್ರತಿನಿಧಿಸುತ್ತಿದ್ದ ಯಾವ ನಾಯಕನೂ ಈ ಭೂಮಿ ಮೇಲೆ ಇರಲಿಲ್ಲ. (ಲೂಕ 21:24) ಹಾಗಾಗಿ 1919ರಿಂದ ಇಲ್ಲಿವರೆಗೂ ಯೆಹೋವನ ಜನರು ದೇವರ ಸರ್ಕಾರ ಮಾತ್ರ ನಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ಕೊಡೋಕೆ ಆಗೋದು ಅಂತ ಎಲ್ರಿಗೂ ಸಾರುತ್ತಾ ಬಂದಿದ್ದಾರೆ. ‘ದೇವರ ಆಳ್ವಿಕೆಯ ಈ ಸಿಹಿಸುದ್ದಿನೇ’ ಇವತ್ತು ಜಗತ್ತನ್ನ ನಡುಗಿಸ್ತಾ ಇದೆ.—ಮತ್ತಾ. 24:14.
8. ಕೀರ್ತನೆ 2:1-3ರಲ್ಲಿ ಹೇಳೋ ಹಾಗೆ ದೇವರ ಸಂದೇಶ ಕೇಳಿಸಿಕೊಂಡಾಗ ತುಂಬ ಜನರಿಗೆ ಹೇಗನಿಸ್ತಿದೆ?
8 ಈ ಸಂದೇಶ ಎಲ್ಲ ಜನ್ರಿಗೆ ಇಷ್ಟ ಆಯ್ತಾ? ತುಂಬ ಜನ್ರಿಗೆ ಇಷ್ಟ ಆಗಲಿಲ್ಲ. (ಕೀರ್ತನೆ 2:1-3 ಓದಿ.) ಈಗಲೂ ಕೋಪದಿಂದ ಕೆಂಡಕಾರುತ್ತಾ ಇದ್ದಾರೆ. ಅವರು ಯೆಹೋವ ನೇಮಿಸಿರೋ ನಾಯಕನನ್ನ ಒಪ್ಪಿಕೊಳ್ತಿಲ್ಲ. ನಾವು ಸಾರುತ್ತಿರೋ ಸಂದೇಶನ ಅವರು “ಸಿಹಿಸುದ್ದಿ” ತರ ನೋಡ್ತಿಲ್ಲ. ಅಷ್ಟೇ ಅಲ್ಲ, ಕೆಲವು ಸರ್ಕಾರಗಳು ನಮ್ಮ ಸಾರುವ ಕೆಲಸನ ನಿಷೇಧ ಮಾಡಿವೆ! ಈ ಸರ್ಕಾರದ ನಾಯಕರಿಗೆ ದೇವರಿಗಿಂತ ತಮ್ಮ ಅಧಿಕಾರದ ಕುರ್ಚಿನೇ ಹೆಚ್ಚಾಗಿಬಿಟ್ಟಿದೆ. ಅದಕ್ಕೆ ದೇವಜನರ ಮೇಲೆ ದಾಳಿಮಾಡ್ತಾ ಇದ್ದಾರೆ. ಯೇಸುವಿನ ಕಾಲದಲ್ಲಿದ್ದ ನಾಯಕರು ಮಾಡಿದ ಹಾಗೇ ಇವರೂ ಯೆಹೋವನ ಅಭಿಷಿಕ್ತನನ್ನ ವಿರೋಧಿಸ್ತಾ ಇದ್ದಾರೆ.—ಅ. ಕಾ. 4:25-28.
9. ಸಿಹಿಸುದ್ದಿನ ಒಪ್ಪಿಕೊಳ್ಳದೇ ಇರುವವರಿಗೆ ಯೆಹೋವ ದೇವರು ಯಾವ ಅವಕಾಶ ಕೊಟ್ಟಿದ್ದಾರೆ?
9 ಸಿಹಿಸುದ್ದಿನ ಒಪ್ಪಿಕೊಳ್ಳದೇ ಇರುವವರಿಗೆ ಯೆಹೋವ ದೇವರು ಕೀರ್ತನೆ 2:10-12ರಲ್ಲಿ ಹೀಗೆ ಹೇಳ್ತಾರೆ: “ಹಾಗಾಗಿ ರಾಜರೇ, ಚೆನ್ನಾಗಿ ಯೋಚಿಸಿ ನಡ್ಕೊಳ್ಳಿ, ಭೂಮಿಯ ನ್ಯಾಯಾಧೀಶರೇ, ಎಚ್ಚರಿಕೆನ ಕೇಳಿಸ್ಕೊಳ್ಳಿ. ಭಯಭಕ್ತಿಯಿಂದ ಯೆಹೋವನ ಸೇವೆಮಾಡಿ, ಆತನಿಗೆ ತುಂಬ ಗೌರವ ಕೊಡ್ತಾ ಖುಷಿಪಡಿ. ದೇವರ ಮಗನಿಗೆ ಗೌರವಕೊಡಿ, ಇಲ್ಲದಿದ್ರೆ ದೇವರಿಗೆ ಕೋಪ ಬಂದು, ನೀವು ನಿಮ್ಮ ಪ್ರಾಣ ಕಳ್ಕೊಳ್ತೀರ. ಯಾಕಂದ್ರೆ ಆತನ ಕೋಪ ಯಾವಾಗ ಬೇಕಾದ್ರೂ ಹೊತ್ತಿ ಉರಿಬಹುದು. ಆತನಲ್ಲಿ ಆಶ್ರಯ ಪಡ್ಕೊಳ್ಳೋ ಜನ ಖುಷಿಯಾಗಿ ಇರ್ತಾರೆ.” ನೋಡಿದ್ರಾ, ಜನರಿಗೆ ತಮ್ಮ ಮನಸ್ಸನ್ನ ಬದಲಾಯಿಸಿಕೊಳ್ಳೋಕೆ ಯೆಹೋವ ಇನ್ನೊಂದು ಅವಕಾಶ ಕೊಟ್ಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಹಾಗಂತ ಜಾಸ್ತಿ ಸಮಯನೂ ಇಲ್ಲ. ನಾವೆಲ್ಲ “ಕೊನೇ ದಿನಗಳಲ್ಲಿ” ಇದ್ದೀವಿ. (2 ತಿಮೊ. 3:1; ಯೆಶಾ. 61:2) ಹಾಗಾಗಿ ಜನರು ಯೆಹೋವ ದೇವರ ಬಗ್ಗೆ ತಿಳಿದುಕೊಂಡು ಆತನನ್ನ ಆರಾಧಿಸೋ ನಿರ್ಧಾರವನ್ನ ಆದಷ್ಟು ಬೇಗ ಮಾಡಬೇಕಾಗಿದೆ.
ಯೆಹೋವ ನಡುಗಿಸ್ತಾ ಇರೋದ್ರಿಂದ ಒಳ್ಳೇದೂ ಆಗ್ತಿದೆ
10. ಯೆಹೋವ ದೇವರು ರಾಷ್ಟ್ರಗಳನ್ನ ನಡುಗಿಸುವಾಗ ಯಾವ ಒಳ್ಳೆ ವಿಷಯ ನಡಿಯುತ್ತೆ ಅಂತ ಹಗ್ಗಾಯ 2:7-9ರಲ್ಲಿದೆ?
10 ಯೆಹೋವ ದೇವರು ರಾಷ್ಟ್ರಗಳನ್ನ ನಡುಗಿಸುವಾಗ ಒಂದು ಒಳ್ಳೆ ವಿಷಯನೂ ನಡಿಯುತ್ತೆ. ಅದೇನು ಅಂತ ಹಗ್ಗಾಯ ಹೀಗೆ ಹೇಳಿದ್ದಾನೆ: ‘ಎಲ್ಲಾ ರಾಷ್ಟ್ರಗಳ ಅಮೂಲ್ಯ ವಸ್ತುಗಳು [ಒಳ್ಳೆ ಜನರು] ಯೆಹೋವನನ್ನ ಆರಾಧಿಸೋಕೆ ಬರುತ್ತಾರೆ.’c (ಹಗ್ಗಾಯ 2:7-9 ಓದಿ.) “ಕೊನೇ ದಿನಗಳಲ್ಲಿ” ಹೀಗಾಗುತ್ತೆ ಅಂತ ಪ್ರವಾದಿ ಯೆಶಾಯ ಮತ್ತು ಮೀಕನೂ ಭವಿಷ್ಯವಾಣಿ ಹೇಳಿದ್ರು.—ಯೆಶಾ. 2:2-4; ಮೀಕ 4:1, 2.
11. ಮೊದಲನೇ ಸಲ ಸಿಹಿಸುದ್ದಿ ಕೇಳಿಸಿಕೊಂಡಾಗ ಒಬ್ಬ ಸಹೋದರ ಏನು ಮಾಡಿದ್ರು?
11 ನಮ್ಮ ಮುಖ್ಯ ಕಾರ್ಯಾಲಯದಲ್ಲಿ ಈಗ ಸೇವೆ ಮಾಡ್ತಾ ಇರೋ ಸಹೋದರ ಕೆನ್ ಅವರು 40 ವರ್ಷಗಳ ಹಿಂದೆ ಸಿಹಿಸುದ್ದಿ ಕೇಳಿಸಿಕೊಂಡ್ರು. ಆಗ ಅವರು ಏನು ಮಾಡಿದ್ರು ಅಂತ ಅವರ ಮಾತಲ್ಲೇ ಕೇಳಿ: “ನಾನು ಮೊದಲನೇ ಸಲ ಬೈಬಲಿಂದ ಸಿಹಿಸುದ್ದಿ ಕೇಳಿಸಿಕೊಂಡಾಗ ತುಂಬ ಖುಷಿ ಆಯ್ತು. ನಾವು ಕೊನೇ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅಂತ ಅದ್ರಿಂದ ಕಲಿತೆ. ಯೆಹೋವ ದೇವರು ನನ್ನನ್ನ ಮೆಚ್ಚಿಕೊಳ್ಳಬೇಕಂದ್ರೆ, ಶಾಶ್ವತ ಜೀವ ಸಿಗಬೇಕಂದ್ರೆ ಏನು ಮಾಡಬೇಕು ಅಂತ ನನಗೆ ಗೊತ್ತಾಯ್ತು. ಅದೇನಂದ್ರೆ ಇವತ್ತೋ ನಾಳೆನೋ ನಾಶ ಆಗೋ ಲೋಕದಿಂದ ನಾನು ತಪ್ಪಿಸಿಕೊಳ್ಳಬೇಕಿತ್ತು. ಅಷ್ಟೇ ಅಲ್ಲ, ಏನೇ ಆದ್ರೂ ಯೆಹೋವನ ಪಕ್ಷದಲ್ಲೇ ನಾನು ನಿಂತುಕೊಳ್ಳಬೇಕಿತ್ತು. ಹಾಗಾಗಿ ಚೆನ್ನಾಗಿ ಪ್ರಾರ್ಥನೆ ಮಾಡಿದೆ. ನಾನು ಮಾಡಬೇಕಿದ್ದ ಕೆಲಸನ ತಕ್ಷಣ ಮಾಡಿದೆ. ಅಂದ್ರೆ ಈ ಲೋಕಕ್ಕೆ ಬೆಂಬಲ ಕೊಡೋದನ್ನ ನಿಲ್ಲಿಸಿದೆ, ದೇವರ ಸರ್ಕಾರಕ್ಕೆ ಬೆಂಬಲ ಕೊಡೋಕೆ ಶುರುಮಾಡಿದೆ. ಯಾಕಂದ್ರೆ ಆ ಸರ್ಕಾರಕ್ಕೆ ಮಾತ್ರ ನಮಗೆ ಶಾಶ್ವತ ರಕ್ಷಣೆ ಕೊಡೋಕೆ ಸಾಧ್ಯ ಅನ್ನೋದು ಅರ್ಥ ಆಯ್ತು.”
12. ಕೊನೇ ದಿನಗಳಲ್ಲಿ ಯೆಹೋವ ದೇವರ ಹೆಸರಿಗೆ ಹೇಗೆ ಗೌರವ ಸಿಕ್ತಿದೆ?
12 ಯೆಹೋವ ದೇವರು ತನ್ನ ಜನರನ್ನ ಆಶೀರ್ವದಿಸ್ತಾ ಬಂದಿದ್ದಾರೆ. ಯೆಹೋವನನ್ನ ಆರಾಧಿಸುತ್ತಿರೋ ಜನರ ಸಂಖ್ಯೆ ಈ ಕೊನೇ ದಿನಗಳಲ್ಲಿ ಜಾಸ್ತಿ ಆಗ್ತಾ ಬರ್ತಿದೆ. 1914ರಲ್ಲಿ ಅವರ ಸಂಖ್ಯೆ ಐದು ಸಾವಿರ ಚಿಲ್ಲರೆ ಇತ್ತಷ್ಟೆ. ಆದ್ರೆ ಈಗ 80 ಲಕ್ಷ ದಾಟಿದೆ. ಇನ್ನೂ ಲಕ್ಷಾಂತರ ಜನರು ಕ್ರಿಸ್ತನ ಮರಣದ ಸ್ಮರಣೆಗೆ ಪ್ರತಿವರ್ಷ ಬರ್ತಾರೆ. ಹೀಗೆ ಭೂಮಿಯಲ್ಲೂ ಯೆಹೋವ ದೇವರ ಸಾಂಕೇತಿಕ ಆಲಯದ ಅಂಗಳಗಳಿಗೆ ‘ಎಲ್ಲ ರಾಷ್ಟ್ರಗಳಿಂದ ಅಮೂಲ್ಯ ವಸ್ತುಗಳು’ ಬಂದು ಸೇರುತ್ತಿವೆ. ಅಂದ್ರೆ ಯೆಹೋವನನ್ನ ಆರಾಧನೆ ಮಾಡೋಕೆ ಎಲ್ಲಾ ಕಡೆಗಳಿಂದ ಜನರು ಬರ್ತಾ ಇದ್ದಾರೆ. ಅಷ್ಟೇ ಅಲ್ಲ, ಈ ಜನರು ಹೊಸ ವ್ಯಕ್ತಿತ್ವ ಹಾಕೊಂಡು ಜೀವನದಲ್ಲಿ ಬದಲಾವಣೆಯನ್ನೂ ಮಾಡಿಕೊಳ್ತಾ ಇದ್ದಾರೆ. ಇದೆಲ್ಲದ್ರಿಂದ ಯೆಹೋವ ದೇವರ ಹೆಸರಿಗೆ ಗೌರವ ಸಿಕ್ತಿದೆ.—ಎಫೆ. 4:22-24.
13. ಯೆಹೋವನ ಆರಾಧಕರ ಸಂಖ್ಯೆ ಹೆಚ್ಚಾಗುವುದರ ಬಗ್ಗೆ ಇನ್ನೂ ಯಾವ ಭವಿಷ್ಯವಾಣಿಗಳು ನಿಜ ಆಗ್ತಾ ಇವೆ? (ಮುಖಪುಟ ಚಿತ್ರ ನೋಡಿ.)
13 ತುಂಬ ಜನ ಯೆಹೋವನ ಆರಾಧನೆ ಮಾಡೋಕೆ ಬರ್ತಾರೆ ಅಂತ ಇನ್ನೂ ಕೆಲವು ಭವಿಷ್ಯವಾಣಿಗಳು ಹೇಳಿದ್ದವು. ಯೆಶಾಯ 60:22ರಲ್ಲಿ “ನಿಮ್ಮಲ್ಲಿರೋ ಅಲ್ಪನು ಸಾವಿರ ಮಂದಿ ಆಗ್ತಾನೆ, ಕನಿಷ್ಠನು ಒಂದು ದೊಡ್ಡ ಜನಾಂಗ ಆಗ್ತಾನೆ. ಯೆಹೋವನಾದ ನಾನೇ ತಕ್ಕ ಸಮಯಕ್ಕೆ ಅದ್ರ ವೇಗವನ್ನ ಹೆಚ್ಚಿಸ್ತೀನಿ” ಅಂತ ಇದೆ. ಈ ಭವಿಷ್ಯವಾಣಿ ಈಗ ನೆರವೇರುತ್ತಿದೆ. ಯೆಹೋವನನ್ನ ಆರಾಧಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇದೆ. ಈ “ಅಮೂಲ್ಯ ವಸ್ತುಗಳು” ಅಂದ್ರೆ ಜನರು “ದೇವರ ಆಳ್ವಿಕೆಯ ಸಿಹಿಸುದ್ದಿ” ಸಾರೋಕೆ ತಾವಾಗೇ ಮುಂದೆ ಬರ್ತಾ ಇದ್ದಾರೆ. ಅಷ್ಟೇ ಅಲ್ಲ, ಇದಕ್ಕೋಸ್ಕರ ತಮ್ಮ ಕೌಶಲಗಳನ್ನ ಧಾರೆ ಎರೆಯುತ್ತಾ ಇದ್ದಾರೆ. ಈ ಕೌಶಲಗಳನ್ನ ಯೆಶಾಯ ರಾಷ್ಟ್ರಗಳ “ಎದೆಹಾಲು” ಅಂತ ಕರೆದಿದ್ದಾನೆ. (ಯೆಶಾ. 60:5, 16) ಕೌಶಲಗಳಿರೋ ಈ ಸಹೋದರ ಸಹೋದರಿಯರಿಂದ 240 ದೇಶಗಳಲ್ಲಿ ನಮಗೆ ಸಿಹಿಸುದ್ದಿ ಸಾರೋಕೆ ಆಗ್ತಿದೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಭಾಷೆಗಳಲ್ಲಿ ನಮ್ಮ ಪುಸ್ತಕ, ಪತ್ರಿಕೆಗಳನ್ನ ತಯಾರಿಸೋಕೆ ಆಗ್ತಿದೆ.
ಇದು ಆಯ್ಕೆ ಮಾಡಬೇಕಾದ ಸಮಯ
14. ಜನರು ಈಗ ಯಾವ ಆಯ್ಕೆ ಮಾಡಬೇಕಿದೆ?
14 ಈ ಅಂತ್ಯಕಾಲದಲ್ಲಿ ರಾಷ್ಟ್ರಗಳನ್ನ ನಡುಗಿಸೋ ಸಂದೇಶನ ಕೇಳಿಸಿಕೊಳ್ಳೋರು ಒಂದು ತೀರ್ಮಾನ ಮಾಡಬೇಕಿದೆ. ಅವರ ಮುಂದೆ ದೇವರ ಸರ್ಕಾರ ಮತ್ತು ಮಾನವ ಸರ್ಕಾರ ಇದೆ. ಇವೆರಡರಲ್ಲಿ ಯಾವುದರ ಮೇಲೆ ನಂಬಿಕೆ ಇಡಬೇಕು ಅನ್ನೋ ಆಯ್ಕೆನ ಅವರು ಮಾಡಬೇಕಿದೆ. ಯೆಹೋವನ ಜನರು ಅವರಿರೋ ದೇಶದ ಸರ್ಕಾರ ಹಾಕೋ ನಿಯಮಗಳನ್ನೆಲ್ಲಾ ಪಾಲಿಸ್ತಾರೆ. ಆದ್ರೆ ರಾಜಕೀಯ ವಿಷ್ಯಗಳಿಗೆ ತಲೆಹಾಕಲ್ಲ. (ರೋಮ. 13:1-7) ದೇವರ ಸರ್ಕಾರಕ್ಕೆ ಮಾತ್ರ ಜನರ ಕಷ್ಟಗಳಿಗೆ ಶಾಶ್ವತ ಪರಿಹಾರ ಕೊಡೋಕೆ ಆಗೋದು ಮತ್ತು ಈ ಸರ್ಕಾರ ಲೋಕದ ಸರ್ಕಾರಗಳ ತರ ಅಲ್ಲ ಅಂತ ಅವರಿಗೆ ಚೆನ್ನಾಗಿ ಗೊತ್ತು.—ಯೋಹಾ. 18:36, 37.
15. ದೇವಜನರಿಗೆ ಯಾವ ಪರೀಕ್ಷೆ ಬರುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ?
15 ಕೊನೇ ದಿನಗಳಲ್ಲಿ ದೇವಜನರು ಯೆಹೋವನಿಗೆ ನಿಯತ್ತಾಗಿ ಇರ್ತಾರಾ ಇಲ್ವಾ ಅನ್ನೋ ಪರೀಕ್ಷೆ ನಡಿಯುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. ಈ ಪರೀಕ್ಷೆ ನಡಿಯುವಾಗ ನಮಗೆ ತುಂಬ ಹಿಂಸೆ, ವಿರೋಧ ಬರುತ್ತೆ. ದೇವರಿಗೆ ಕೊಡಬೇಕಾಗಿರೋದನ್ನ ತಮಗೆ ಕೊಡಬೇಕು ಅಂತ ಈ ಲೋಕದ ಸರ್ಕಾರ ನಮ್ಮನ್ನ ಒತ್ತಾಯ ಮಾಡುತ್ತೆ. ನಾವು ಹಾಗೆ ಮಾಡದೆ ಇದ್ದಾಗ ಹಿಂಸೆ ಕೊಡುತ್ತೆ. (ಪ್ರಕ. 13:12, 15) ‘ಚಿಕ್ಕವರು-ದೊಡ್ಡವರು ಶ್ರೀಮಂತರು-ಬಡವರು ಸ್ವತಂತ್ರರು-ದಾಸರು ಹೀಗೆ ಎಲ್ರೂ ಅವ್ರ ಬಲಗೈಯಲ್ಲಿ ಅಥವಾ ಹಣೆ ಮೇಲೆ ಒಂದು ಗುರುತು ಹಾಕೊಳ್ಳಬೇಕು ಅಂತ ಅದು ಒತ್ತಾಯ ಮಾಡುತ್ತೆ.’ (ಪ್ರಕ. 13:16) ಹಿಂದಿನ ಕಾಲದಲ್ಲಿ ದಾಸರು ಅಳಿಸೋಕೆ ಆಗದ ಗುರುತನ್ನ ಹಾಕೊಳ್ಳಬೇಕಿತ್ತು. ಅವರು ಯಾರ ದಾಸರು ಅಂತ ಆ ಗುರುತು ತೋರಿಸ್ತಿತ್ತು. ಅದೇ ತರ ಇವತ್ತು ಪ್ರತಿಯೊಬ್ಬರೂ ತಮ್ಮ ಕೈ ಮೇಲೆ ಅಥವಾ ಹಣೆ ಮೇಲೆ ಸಾಂಕೇತಿಕ ಗುರುತುಗಳನ್ನ ಹಾಕೊಳ್ಳಬೇಕು ಅಂತ ಸರ್ಕಾರಗಳು ಬಯಸುತ್ತೆ. ಅಂದ್ರೆ ಜನರು ತಮ್ಮ ಯೋಚನೆ ಮತ್ತು ನಡತೆಯಲ್ಲಿ ರಾಜಕೀಯ ವಿಷಯಗಳಿಗೆ ಬೆಂಬಲ ಕೊಡಬೇಕು ಅಂತ ಒತ್ತಾಯ ಮಾಡುತ್ತೆ.
16. ನಾವು ಈಗ್ಲಿಂದಾನೇ ಯಾಕೆ ನಮ್ಮ ನಂಬಿಕೆನ ಕಬ್ಬಿಣದಷ್ಟು ಗಟ್ಟಿಮಾಡಿಕೊಳ್ಳಬೇಕು?
16 ಯಾರು ಈ ಸಾಂಕೇತಿಕ ಗುರುತನ್ನ ಹಾಕಿಕೊಳ್ಳಲ್ವೋ ಅಂದ್ರೆ ಈ ಲೋಕದ ಸರ್ಕಾರಗಳಿಗೆ ಬೆಂಬಲ ಕೊಡಲ್ವೋ ಅಂಥವರಿಗೆ ಮುಂದೆ ಕಷ್ಟಗಳು, ಅಪಾಯಗಳು ತಪ್ಪಿದ್ದಲ್ಲ. “ಯಾರಿಗಾದ್ರೂ ಈ ಗುರುತು . . . ಇಲ್ಲದಿದ್ರೆ ಅವರು ಕೊಂಡ್ಕೊಳ್ಳಕ್ಕಾಗಲಿ ಮಾರಕ್ಕಾಗಲಿ ಆಗಲ್ಲ” ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. (ಪ್ರಕ. 13:17) ಆದ್ರೆ ಆ ಗುರುತು ಹಾಕಿಕೊಂಡವರಿಗೆ ದೇವರು ಏನು ಮಾಡ್ತಾರೆ ಅಂತ ಪ್ರಕಟನೆ 14:9, 10ರಲ್ಲಿದೆ. ಅದು ದೇವಜನರಿಗೆ ಚೆನ್ನಾಗಿ ಗೊತ್ತು. ಅದಕ್ಕೆ ದೇವಜನರು ಆ ಗುರುತನ್ನ ಹಾಕಿಕೊಳ್ಳದೇ “ನಾನು ಯೆಹೋವನಿಗೆ ಸೇರಿದವನು” ಅಂತ ಕೈ ಮೇಲೆ ಬರೆದುಕೊಳ್ತಾರೆ. (ಯೆಶಾ. 44:5) ನಾವು ಈಗ್ಲಿಂದಾನೇ ಯೆಹೋವನ ಮೇಲಿರೋ ನಂಬಿಕೆನ ಕಬ್ಬಿಣದಷ್ಟು ಗಟ್ಟಿಮಾಡಿಕೊಂಡ್ರೆ ಮುಂದೆ ಎಂಥ ಕಷ್ಟ ಬಂದ್ರೂ ಯೆಹೋವ ದೇವರನ್ನ ಬಿಟ್ಟುಹೋಗಲ್ಲ. ಆಗ ಯೆಹೋವ ದೇವರು ನಮ್ಮನ್ನ ತನ್ನವರು ಅಂತ ಎದೆ ತಟ್ಟಿ ಹೇಳ್ತಾರೆ!
ಯೆಹೋವ ಕೊನೆದಾಗಿ ನಡುಗಿಸುವಾಗ. . .
17. ಯೆಹೋವ ದೇವರು ಹೀಗೆ ಯಾವಾಗಲೂ ಕಾಯ್ತಾ ಇರ್ತಾರಾ? ವಿವರಿಸಿ.
17 ಈ ಕೊನೇ ದಿನಗಳಲ್ಲಿ ಯೆಹೋವ ದೇವರು ತುಂಬ ತಾಳ್ಮೆ ತೋರಿಸ್ತಿದ್ದಾರೆ. ಯಾರೂ ನಾಶ ಆಗಬಾರದು ಅನ್ನೋದೇ ದೇವರ ಆಸೆ. (2 ಪೇತ್ರ 3:9) ಜನರು ತಪ್ಪನ್ನ ತಿದ್ದಿಕೊಂಡು ತನ್ನನ್ನ ಆರಾಧನೆ ಮಾಡೋ ಆಯ್ಕೆ ಮಾಡಬೇಕು ಅಂತ ಎಲ್ರಿಗೂ ಇನ್ನೊಂದು ಅವಕಾಶ ಕೊಡ್ತಿದ್ದಾರೆ. ಆದ್ರೆ ತುಂಬ ದಿನ ದೇವರು ಹೀಗೆ ಕಾಯಲ್ಲ. ಯಾರು ಆತನ ಮಾತಿಗೆ ಬೆಲೆ ಕೊಡಲ್ವೋ ಅಂಥವರಿಗೆ ಮೋಶೆ ಕಾಲದಲ್ಲಿದ್ದ ಫರೋಹನಿಗೆ ಆದ ಗತಿನೇ ಆಗೋದು. ಯೆಹೋವ ದೇವರು ಫರೋಹನಿಗೆ “ಇಷ್ಟರೊಳಗೆ ನಾನು ಕೈಚಾಚಿ ನಿನಗೆ, ನಿನ್ನ ಜನ್ರಿಗೆ ಒಂದು ದೊಡ್ಡ ಕಾಯಿಲೆ ಬರೋ ಹಾಗೆ ಮಾಡಬಹುದಿತ್ತು. ಹಾಗೆ ಮಾಡಿದ್ರೆ ನೀನು ನಾಶವಾಗಿ ಭೂಮಿ ಮೇಲಿಂದ ನಾಪತ್ತೆ ಆಗಿಹೋಗ್ತಿದ್ದೆ. ಆದ್ರೆ ನಿನಗೆ ನನ್ನ ಶಕ್ತಿ ತೋರಿಸಬೇಕು, ಇಡೀ ಭೂಮೀಲಿ ನನ್ನ ಹೆಸರನ್ನ ತಿಳಿಸಬೇಕು ಅಂತಾನೇ ನಿನ್ನನ್ನ ಇನ್ನೂ ಜೀವಂತ ಬಿಟ್ಟಿದ್ದೀನಿ.” (ವಿಮೋ. 9:15, 16) ಅದೇ ತರ ಮುಂದೆ ಒಂದಿನ ಯೆಹೋವನೇ ಸತ್ಯ ದೇವರು ಅಂತ ಎಲ್ರಿಗೂ ಅರ್ಥ ಆಗುತ್ತೆ. (ಯೆಹೆ. 38:23) ಹೇಗೆ ಅಂತ ನೋಡೋಣ.
18. (ಎ) ಹಗ್ಗಾಯ 2:6, 20-22ರಲ್ಲಿ ಹೇಳಿರೋ ಹಾಗೆ ಯೆಹೋವ ದೇವರು ಏನನ್ನ ನಡುಗಿಸ್ತಾರೆ? (ಬಿ) ಆ ಭವಿಷ್ಯವಾಣಿ ನಿಜ ಆಗುತ್ತೆ ಅಂತ ನಾವು ಹೇಗೆ ಹೇಳಬಹುದು?
18 ಹಗ್ಗಾಯ ಸತ್ತು ತುಂಬ ವರ್ಷಗಳಾದ ಮೇಲೆ ಪೌಲನು ಹಗ್ಗಾಯ 2:6, 20-22ರಲ್ಲಿ ಇರೋ ಮಾತು ನಿಜ ಆಗುತ್ತೆ ಅಂತ ಹೇಳಿದ. (ಓದಿ.) ಪೌಲ ಹೇಳಿದ್ದು: “ಈಗ ಆತನು ‘ನಾನು ಇನ್ನೊಂದು ಸಲ ಭೂಮಿಯನ್ನ ಅಷ್ಟೇ ಅಲ್ಲ ಆಕಾಶವನ್ನೂ ಅಲುಗಾಡಿಸ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ‘ಇನ್ನೊಂದು ಸಲ’ ಅನ್ನೋ ಮಾತು ಅಲುಗಾಡಿಸೋಕೆ ಆಗುವಂಥ ವಿಷ್ಯಗಳು ಅಂದ್ರೆ ದೇವರು ಮಾಡಿರದ ವಿಷ್ಯಗಳು ನಾಶ ಆಗುತ್ತೆ ಅನ್ನೋದನ್ನ ಸೂಚಿಸುತ್ತೆ. ಅಲುಗಾಡಿಸೋಕೆ ಆಗದ ವಿಷ್ಯಗಳು ಯಾವಾಗ್ಲೂ ಇರಬೇಕು ಅಂತಾನೇ ಅವು ನಾಶ ಆಗುತ್ತೆ.” (ಇಬ್ರಿ. 12:26, 27) ಇಲ್ಲಿ ಹೇಳಿರೋ ತರ ಯೆಹೋವ ದೇವರು ನಡುಗಿಸುವಾಗ ಏನಾಗುತ್ತೆ? ಯಾರೆಲ್ಲಾ ಯೆಹೋವನಿಗೆ ಆಳೋ ಹಕ್ಕಿಲ್ಲ ಅಂತ ಫರೋಹನ ತರ ಅಹಂಕಾರ ತೋರಿಸ್ತಾರೋ ಅವರನ್ನ ದೇವರು ಸಂಪೂರ್ಣವಾಗಿ ನಾಶ ಮಾಡಿಬಿಡ್ತಾರೆ.
19. (ಎ) ಯೆಹೋವ ದೇವರು ನಡುಗಿಸುವಾಗ ಯಾವುದು ಅಲುಗಾಡಲ್ಲ? (ಬಿ) ಅದನ್ನ ನಾವು ಹೇಗೆ ಹೇಳಬಹುದು?
19 ಯೆಹೋವ ದೇವರು ಅಲುಗಾಡಿಸುವಾಗ ಯಾವುದು ಅಲುಗಾಡಲ್ಲ? ಪೌಲ ಹೇಳಿದ್ದು, “ಯಾರೂ ಅಲುಗಾಡಿಸೋಕೆ ಆಗದ ಆಳ್ವಿಕೆಯಲ್ಲಿ ನಾವು ಇರ್ತಿವಿ. ಹಾಗಾಗಿ ದೇವರ ಅಪಾರ ಕೃಪೆಯನ್ನ ಪಡೀತಾ ಇರೋಣ. ಭಯಭಕ್ತಿಯಿಂದ ದೇವರು ಮೆಚ್ಚೋ ಹಾಗೆ ಪವಿತ್ರ ಸೇವೆ ಮಾಡ್ತಾ ಇರೋಣ.” (ಇಬ್ರಿ. 12:28) ಯೆಹೋವ ದೇವರು ಕೊನೆದಾಗಿ ಎಲ್ಲವನ್ನ ನಡುಗಿಸುವಾಗ ಆತನ ಸರ್ಕಾರ ಅಲುಗಾಡಲ್ಲ ಅಥವಾ ಬಿದ್ದುಹೋಗಲ್ಲ. ಅದು ಕದಲದೆ ಹಾಗೇ ಇರುತ್ತೆ!—ಕೀರ್ತ. 110:5, 6; ದಾನಿ. 2:44.
20. (ಎ) ಜನರ ಮುಂದೆ ಯಾವ ಆಯ್ಕೆ ಇದೆ? (ಬಿ) ಸರಿಯಾದ ಆಯ್ಕೆ ಮಾಡೋಕೆ ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?
20 ಸಮಯ ತುಂಬ ಕಮ್ಮಿ ಇದೆ. ಜನರ ಮುಂದೆ ಈಗ ಎರಡು ಆಯ್ಕೆ ಇದೆ. ನಾಶಕ್ಕೆ ಕರಕೊಂಡು ಹೋಗೋ ಈ ಲೋಕ ಹೇಳಿದ ಹಾಗೆ ಜೀವನ ಮಾಡ್ಕೊಂಡು ಅವರು ಹೋಗ್ತಾರಾ? ಅಥವ ಶಾಶ್ವತ ಜೀವ ಕೊಡೋ ಯೆಹೋವ ದೇವರು ಹೇಳಿದ ಹಾಗೆ ಜೀವನ ಮಾಡ್ತಾರಾ? (ಇಬ್ರಿ. 12:25) ಸರಿಯಾದ ಆಯ್ಕೆ ಮಾಡೋಕೆ ಜನರಿಗೆ ನಾವು ಹೇಗೆ ಸಹಾಯ ಮಾಡಬಹುದು? ಸಿಹಿಸುದ್ದಿ ಸಾರಿ ಸಹಾಯ ಮಾಡಬಹುದು. ಯೆಹೋವನ ಸರ್ಕಾರಕ್ಕೆ ಬೆಂಬಲ ಕೊಡೋ ಒಳ್ಳೇ ಮನಸ್ಸು ತುಂಬ ಜನರಿಗಿದೆ. ಅಂಥ ಅಮೂಲ್ಯ ಜನರಿಗೆ ನಾವು ಸಹಾಯ ಮಾಡೋಣ. “ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ” ಅಂತ ಯೇಸು ಹೇಳಿರೋ ಮಾತನ್ನ ಮನಸ್ಸಲ್ಲಿ ಇಡೋಣ.—ಮತ್ತಾ. 24:14.
ಗೀತೆ 62 ನಾವು ಯಾರ ಸ್ವತ್ತು?
a ಹಗ್ಗಾಯ 2:7ನ್ನ ಅರ್ಥ ಮಾಡಿಕೊಂಡಿರೋ ವಿಷಯದಲ್ಲಿ ಈಗ ಸ್ವಲ್ಪ ಬದಲಾವಣೆ ಆಗಿದೆ. ಅದನ್ನ ಈ ಲೇಖನದಲ್ಲಿ ನೋಡೋಣ. ರಾಷ್ಟ್ರಗಳನ್ನ ನಡುಗಿಸೋ ಕೆಲಸದಲ್ಲಿ ನಮ್ಮ ಪಾಲು ಏನು ಮತ್ತು ಈ ಕೆಲಸಕ್ಕೆ ಜನರು ಯಾವೆರಡು ರೀತಿಯಲ್ಲಿ ಪ್ರತಿಕ್ರಿಯಿಸ್ತಾರೆ ಅಂತನೂ ನೋಡೋಣ.
b ಯೆಹೂದ್ಯರು ಕ್ರಿಸ್ತ ಪೂರ್ವ 515ರಲ್ಲಿ ಆಲಯ ಕಟ್ಟಿ ಮುಗಿಸಿದ್ರು. ಯೆಹೋವ ದೇವರು ಹಗ್ಗಾಯನಿಗೆ ಕೊಟ್ಟ ಕೆಲಸವನ್ನ ಅವನು ಮಾಡಿ ಮುಗಿಸಿದ ಅಂತ ಇದ್ರಿಂದ ನಮಗೆ ಗೊತ್ತಾಗುತ್ತೆ.
c ಯೆಹೋವ ದೇವರು ರಾಷ್ಟ್ರಗಳನ್ನ ನಡುಗಿಸುವಾಗ ಪ್ರಾಮಾಣಿಕ ಜನರು ಆತನ ಹತ್ರ ಬರಲ್ಲ ಅಂತ ನಾವು ಈ ಮುಂಚೆ ಅಂದುಕೊಂಡಿದ್ವಿ. ಆದ್ರೆ ಈಗ ಈ ತಿಳುವಳಿಕೆ ಬದಲಾಗಿದೆ. ಮೇ 15, 2006ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.
d ಚಿತ್ರ ವಿವರಣೆ: ದೇವರ ಆಲಯನ ಮತ್ತೆ ಕಟ್ಟೋಕೆ ಹಗ್ಗಾಯ ಯೆಹೂದ್ಯರನ್ನ ಹುರಿದುಂಬಿಸಿದ. ಕೊನೇ ದಿನಗಳಲ್ಲಿ ದೇವಜನರು ಹುರುಪಿಂದ ಆತನ ಸಂದೇಶ ಸಾರುತ್ತಿದ್ದಾರೆ. ಕೊನೆದಾಗಿ ಯೆಹೋವ ದೇವರು ನಡುಗಿಸುವ ಸಂದೇಶವನ್ನ ದಂಪತಿ ಸಾರುತ್ತಿದ್ದಾರೆ.