ಸಾಂತ್ವನ ಮತ್ತು ಪ್ರೋತ್ಸಾಹನೆ ಅನೇಕ ಮುಖಗಳುಳ್ಳ ರತ್ನಗಳು
ನಮ್ಮಲ್ಲಿ ಹೆಚ್ಚಿನವರು ಅತಿರೇಕ ಬಡತನದ ಅನಿಸಿಕೆಯನ್ನು—ಹಣದ ಕಮ್ಮಿಯಿಂದಾಗಬೇಕೆಂದಿಲ್ಲ, ಭಾವನೆಗಳಲ್ಲಿ ಕೊರತೆಯಿಂದ—ಅನುಭವಿಸಿದ ಸಮಯಗಳಿವೆ. ನಾವು ಎದೆಗುಂದಿದ್ದೆವು, ತೀರ ಖಿನ್ನರೂ ಆಗಿದ್ದೆವು. ಆದರೂ, ಅಂತಹ ಸಮಯಗಳಲ್ಲಿ ನಮಗೆ ಅತ್ಯಂತ ಒಳ್ಳೇದನ್ನು ಮಾಡುವ ಒಂದು ಅಮೂಲ್ಯ ಸಂಗತಿಯು ನಮಗೆ ನಿಲುಕಸಾಧ್ಯವಿತ್ತು. ಆ “ರತ್ನ”ವೇ ಪ್ರೋತ್ಸಾಹನೆಯಾಗಿದೆ.
ಬೈಬಲಿನಲ್ಲಿ “ಪ್ರೋತ್ಸಾಹನೆ” ಮತ್ತು “ಸಾಂತ್ವನ”ಕ್ಕೆ ಒಂದೇ ಗ್ರೀಕ್ ಪದವನ್ನು ಉಪಯೋಗಿಸಲಾಗಿದೆ. ಎರಡೂ ಶಬ್ದಗಳು ಧೈರ್ಯ, ಬಲ, ಅಥವಾ ನಿರೀಕ್ಷೆಯನ್ನು ಹಂಚಿಕೊಳ್ಳುವ ಅಭಿಪ್ರಾಯವನ್ನು ಕೊಡುತ್ತವೆ. ಹೀಗಿರಲಾಗಿ ಸ್ಪಷ್ಟವಾಗಿ, ನಾವು ಬಲಹೀನತೆಯ ಅಥವಾ ಮನಗುಂದಿದ ಭಾವವನ್ನು ತಾಳುವಾಗ, ನಮಗೆ ನಿಜವಾಗಿ ಬೇಕಿರುವುದು ಸಾಂತ್ವನ ಮತ್ತು ಪ್ರೋತ್ಸಾಹನೆಯೇ. ಅವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಯೆಹೋವನು “ಸಕಲವಿಧವಾಗಿ ಸಂತೈಸುವ ದೇವರು” ಎಂಬ ಆಶ್ವಾಸನೆಯನ್ನು ಬೈಬಲು ಕೊಡುತ್ತದೆ. (2 ಕೊರಿಂಥ 1:3) “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ,” ಎಂದೂ ಅದು ನಮಗೆ ಹೇಳುತ್ತದೆ. (ಅ. ಕೃತ್ಯಗಳು 17:27) ಹೀಗೆ “ಸಾಂತ್ವನ” ಮತ್ತು “ಪ್ರೋತ್ಸಾಹನೆ”ಗಳು ಲಭ್ಯವಿವೆ. ಯೆಹೋವನು ಪ್ರೋತ್ಸಾಹನೆಯನ್ನು ಒದಗಿಸುವಂತಹ ನಾಲ್ಕು ಸಾಮಾನ್ಯ ಕ್ಷೇತ್ರಗಳನ್ನು ನಾವೀಗ ಪರಿಗಣಿಸೋಣ.
ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧದ ಮೂಲಕ
ಸಾಂತ್ವನದ ಅತ್ಯಂತ ಮಹಾ ಉಗಮವು ಯೆಹೋವ ದೇವರೂಂದಿಗಿನ ಒಂದು ವೈಯಕ್ತಿಕ ಸಂಬಂಧವೇ. ಅಂತಹ ಒಂದು ಸಂಬಂಧವು ಶಕ್ಯವೆಂಬುದು ತಾನೇ ಪ್ರೋತ್ಸಾಹನೀಯವು. ಎಷ್ಟೆಂದರೂ, ಯಾವ ಲೋಕಾಧಿಪತಿಯು ನಮ್ಮ ಟೆಲಿಫೋನ್ ಕರೆಯನ್ನು ಸ್ವೀಕರಿಸ್ಯಾನು ಅಥವಾ ನಮ್ಮ ಸಮಸ್ಯೆಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವ್ಯಕ್ತಪಡಿಸ್ಯಾನು? ಅಂತಹ ಮನುಷ್ಯರಿಗಿಂತ ಯೆಹೋವನು ಅನೇಕಾನೇಕ ಪಟ್ಟು ಬಲಿಷ್ಠನು. ಆದರೂ, ಆತನು ನಮ್ರನು—ಅಲ್ಪರಾದ ಮಾನವರೊಂದಿಗೆ ವ್ಯವಹರಿಸಲು ತೀರ ಸಿದ್ಧನು. (ಕೀರ್ತನೆ 18:35) ನಮಗೆ ಪ್ರೀತಿಯನ್ನು ತೋರಿಸುವ ಮೊದಲ ಹೆಜ್ಜೆಯನ್ನು ಸಹ ಯೆಹೋವನು ತೆಗೆದುಕೊಂಡಿದ್ದಾನೆ. ಒಂದನೆಯ ಯೋಹಾನ 4:10 ಹೇಳುವುದು: “ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.” ಅಷ್ಟಲ್ಲದೆ, ಯೆಹೋವನು ಪ್ರೀತಿಪೂರ್ವಕವಾಗಿ ನಮ್ಮನ್ನು ತನ್ನ ಮಗನ ಕಡೆಗೆ ಸೆಳೆಯುತ್ತಾನೆ.—ಯೋಹಾನ 6:44.
ದೇವರೊಂದಿಗಿನ ಸ್ನೇಹಕ್ಕೆ ನೀವು ಪ್ರತಿವರ್ತನೆಯನ್ನು ತೋರಿಸಿ ಅದರಲ್ಲಿ ಸಾಂತ್ವನವನ್ನು ಹುಡುಕಿದ್ದೀರೋ? (ಹೋಲಿಸಿ ಯಾಕೋಬ 2:23.) ಉದಾಹರಣೆಗೆ, ನಿಮಗೊಬ್ಬ ಪ್ರಿಯನಾದ, ಆಪ್ತ ಸ್ನೇಹಿತನಿರುವುದಾದರೆ, ಅವನೊಂದಿಗೆ ಸ್ವಲ್ಪ ಸಮಯವನ್ನು ಏಕಾಂತದಲ್ಲಿ ಕಳೆದು ನಿಮ್ಮ ಚಿಂತೆಗಳನ್ನೂ ವ್ಯಾಕುಲಗಳನ್ನೂ, ನಿಮ್ಮ ನಿರೀಕ್ಷೆಗಳನ್ನೂ ಸಂತೋಷಗಳನ್ನೂ ಕುರಿತು ಸರಾಗವಾಗಿ ಮಾತನಾಡುವುದು ಉಲ್ಲಾಸಕರವಾಗಿರದೇ? ಇದನ್ನೇ ತನ್ನೊಂದಿಗೆ ಮಾಡುವಂತೆ ಯೆಹೋವನು ನಿಮ್ಮನ್ನು ಆಮಂತ್ರಿಸುತ್ತಾನೆ. ಪ್ರಾರ್ಥನೆಯಲ್ಲಿ ನೀವು ಅವನೊಂದಿಗೆ ಎಷ್ಟು ಸಮಯ ಮಾತಾಡಬಹುದೆಂಬ ಸೀಮಿತವನ್ನು ಅವನಿಡುವುದಿಲ್ಲ—ಮತ್ತು ಅವನು ನಿಜವಾಗಿಯೂ ಆಲೈಸುತ್ತಾನೆ. (ಕೀರ್ತನೆ 65:2; 1 ಥೆಸಲೊನೀಕ 5:17) ಯೇಸು ಕ್ರಮವಾಗಿ ಮತ್ತು ಎಡೆಬಿಡದೆ ಪ್ರಾರ್ಥನೆ ಮಾಡಿದನು. ವಾಸ್ತವವಾಗಿ, ತನ್ನ 12 ಮಂದಿ ಅಪೊಸ್ತಲರನ್ನು ಆರಿಸಿಕೊಳ್ಳುವ ಮುಂಚೆ, ಒಂದು ಇಡೀ ರಾತ್ರಿಯನ್ನು ಅವನು ಪ್ರಾರ್ಥನೆಯಲ್ಲಿ ಕಳೆದನು.—ಲೂಕ 6:12-16; ಇಬ್ರಿಯ 5:7.
ಆಗಿಂದಾಗ್ಗೆ ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನೊಂದಿಗೆ ಏಕಾಂತದಲ್ಲಿರುವುದನ್ನು ಸಾಧಿಸಬಲ್ಲೆವು. ಒಂದು ಕಿಟಿಕಿಯ ಬಳಿ ಕೇವಲ ಮೌನವಾಗಿ ಕುಳಿತುಕೊಳ್ಳುವುದು ಅಥವಾ ಒಂದು ಪ್ರಶಾಂತ ನಡಿಗೆಯು, ಯೆಹೋವನಿಗೆ ನಮ್ಮ ಹೃದಯಗಳನ್ನು ಪ್ರಾರ್ಥನೆಯಲ್ಲಿ ತೆರೆಯುವ ಸದವಕಾಶವನ್ನು ಒದಗಿಸಬಲ್ಲದು. ಹಾಗೆ ಮಾಡುವುದು ಪ್ರಚಂಡವಾದ ಉಪಶಮನ ಮತ್ತು ಸಾಂತ್ವನದ ಮೂಲವಾಗಿರಬಲ್ಲದು. ಮನನ ಮಾಡುವಾಗ ಯೆಹೋವನ ಸೃಷ್ಟಿಯ ಕೆಲವು ವಿಷಯಾಂಶಗಳು—ಗಗನದ ಒಂದು ದೃಶ್ಯ, ಕೆಲವು ವೃಕ್ಷಗಳು ಅಥವಾ ಪಕ್ಷಿಗಳು ಮಾತ್ರ ನೋಟಕ್ಕಿದ್ದರೂ, ಅವುಗಳಲ್ಲಿ ನಮಗಾಗಿ ಯೆಹೋವನ ಪ್ರೀತಿ ಮತ್ತು ಚಿಂತನೆಯ ಕೆಲವು ಸಾಂತ್ವನಕರ ಮರುಜ್ಞಾಪನಗಳನ್ನು ನಾವು ಕಂಡುಕೊಳ್ಳಬಹುದು.—ರೋಮಾಪುರ 1:20.
ದೇವರ ವಾಕ್ಯದ ಒಂದು ವೈಯಕ್ತಿಕ ಅಧ್ಯಯನದ ಮೂಲಕ
ಆದರೂ, ಯೆಹೋವನ ಗುಣಗಳು ನಮಗೆ ನಿಜವಾಗಿ ಅನಾವರಣಗೊಳ್ಳುವುದು ಬೈಬಲಿನ ಒಂದು ವೈಯಕ್ತಿಕ ಅಧ್ಯಯನದ ಮೂಲಕವೇ. ಯೆಹೋವನು “ಕನಿಕರದಯೆಗಳುಳ್ಳವನೂ ದೀರ್ಘಶಾಂತನೂ ಕೃಪಾಳುವೂ ಆಗಿರುವ ದೇವರು” ಎಂದು ಬೈಬಲು ಪದೇ ಪದೇ ಪ್ರಕಟಿಸುತ್ತದೆ. (ವಿಮೋಚನಕಾಂಡ 34:6; ನೆಹೆಮೀಯ 9:17; ಕೀರ್ತನೆ 86:15) ತನ್ನ ಐಹಿಕ ಸೇವಕರನ್ನು ಸಾಂತ್ವನಗೊಳಿಸುವ ಅಪೇಕ್ಷೆಯು ಯೆಹೋವನ ವ್ಯಕ್ತಿತ್ವದ ಒಂದು ಸ್ವಾಭಾವಿಕವಾದ ಭಾಗವು.
ಉದಾಹರಣೆಗೆ, ಯೆಶಾಯ 66:13ರಲ್ಲಿರುವ ಯೆಹೋವನ ಮಾತುಗಳನ್ನು ಪರಿಗಣಿಸಿರಿ: “ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.” ಮಕ್ಕಳ ಕಡೆಗೆ ತಾಯಿಯ ಪ್ರೀತಿಯು ಸ್ವತ್ಯಾಗದ ಮತ್ತು ನಿಷ್ಠೆಯುಳ್ಳ ಪ್ರೀತಿಯಾಗಿರುವಂತೆ ಯೆಹೋವನು ರಚಿಸಿದನು. ಗಾಯಗೊಂಡ ತನ್ನ ಮಗುವನ್ನು ಪ್ರೀತಿಯುಳ್ಳ ತಾಯಿಯು ಸಂತೈಸುವುದನ್ನು ನೀವೆಂದಾದರೂ ಕಂಡಿದ್ದರೆ, ತಾನು ತನ್ನ ಜನರನ್ನು ಸಂತೈಸುವೆನು ಎಂದು ಯೆಹೋವನು ಹೇಳುವಾಗ ಅದರ ಅರ್ಥವೇನೆಂದು ನಿಮಗೆ ಗೊತ್ತಾಗುತ್ತದೆ.
ಬೈಬಲಿನ ಅನೇಕ ವೃತ್ತಾಂತಗಳು ಅಂತಹ ಸಾಂತ್ವನವನ್ನು ಕ್ರಿಯೆಯಲ್ಲಿ ತೋರಿಸುತ್ತವೆ. ಪ್ರವಾದಿಯಾದ ಎಲೀಯನು ದುಷ್ಟೆ ರಾಣಿಯಾದ ಈಜೆಬೆಲಳಿಂದ ಪ್ರಾಣಾಂತಕ ಬೆದರಿಕೆಗೆ ಗುರಿಯಾದಾಗ, ಅವನು ತನ್ನ ಧೈರ್ಯವನ್ನು ಕಳೆದುಕೊಂಡು ಪ್ರಾಣರಕ್ಷಣೆಗಾಗಿ ಓಡಿಹೋದನು. ಅವನೆಷ್ಟು ಎದೆಗುಂದಿದ್ದನೆಂದರೆ, ನೀರನ್ನು ಅಥವಾ ಬೇರೆ ಯಾವ ಸಂಗ್ರಹಗಳನ್ನೂ ತನ್ನ ಸಂಗಡ ಒಯ್ಯದೆ, ಒಂದು ದಿನದ ಪ್ರಯಾಣದಷ್ಟು ದೂರ ಅರಣ್ಯಕ್ಕೆ ಅವನು ನಡೆದನು. ಬೇಗುದಿಯಲ್ಲಿ ಎಲೀಯನು ತಾನು ಸಾಯಲು ಅಪೇಕ್ಷಿಸುತ್ತೇನೆಂದು ಯೆಹೋವನಿಗೆ ಹೇಳಿದನು. (1 ಅರಸುಗಳು 19:1-4) ತನ್ನ ಪ್ರವಾದಿಯನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಯೆಹೋವನು ಏನು ಮಾಡಿದನು?
ಒಂಟಿಯೂ, ನಿಷ್ಪ್ರಯೋಜಕನೂ, ಧೈರ್ಯಗೆಟ್ಟವನೂ ಆದುದಕ್ಕಾಗಿ ಎಲೀಯನನ್ನು ಯೆಹೋವನು ಗದರಿಸಲಿಲ್ಲ. ವ್ಯತಿರಿಕ್ತವಾಗಿ ಪ್ರವಾದಿಗೆ, “ಒಂದು ಶಾಂತವಾದ ಮೆಲುಧ್ವನಿಯು” ಕೇಳಿಸಿತು. (1 ಅರಸುಗಳು 19:12, NW) 1 ಅರಸುಗಳು 19ನೆಯ ಅಧ್ಯಾಯವನ್ನು ನೀವು ಓದುವುದಾದರೆ, ಯೆಹೋವನು ಎಲೀಯನನ್ನು ಹೇಗೆ ಸಂತೈಸಿ, ಅವನಿಗೆ ಉಪಶಮನಮಾಡಿ, ಅವನ ನಂಬಿಕೆಯನ್ನು ಬಲಪಡಿಸಿದನೆಂಬುದನ್ನು ಗಮನಿಸುವಿರಿ. ಈ ಸಾಂತ್ವನವು ಮೇಲುಮೇಲಿನದ್ದಾಗಿರಲಿಲ್ಲ. ಅದು ಎಲೀಯನ ಕ್ಷುಬ್ಧ ಹೃದಯಕ್ಕೆ ನೇರವಾಗಿ ನಾಟಿ, ಪ್ರವಾದಿಯನ್ನು ಮುಂದೆ ಸಾಗುವಂತೆ ಪ್ರೋತ್ಸಾಹಿಸಿತು. (ಹೋಲಿಸಿ ಯೆಶಾಯ 40:1, 2.) ತಡವಿಲ್ಲದೆ ಅವನು ತನ್ನ ಕೆಲಸಕ್ಕೆ ಹಿಂತಿರುಗಿದನು.
ತದ್ರೀತಿ ಯೇಸು ಕ್ರಿಸ್ತನು ತನ್ನ ನಿಷ್ಠಾವಂತ ಹಿಂಬಾಲಕರನ್ನು ಸಂತೈಸಿ, ಪ್ರೋತ್ಸಾಹಿಸುತ್ತಾನೆ. ವಾಸ್ತವದಲ್ಲಿ ಯೆಶಾಯನು ಮೆಸ್ಸೀಯನ ಕುರಿತು ಪ್ರವಾದಿಸಿದನು: “ಕರ್ತನಾದ ಯೆಹೋವ . . . ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ . . . ದುಃಖಿತರೆಲ್ಲರನ್ನು ಸಂತೈಸುವದಕ್ಕೂ . . . ನನ್ನನ್ನು ಕಳುಹಿಸಿದ್ದಾನೆ.” (ಯೆಶಾಯ 61:1-3) ಈ ಮಾತುಗಳು ತನಗೆ ಅನ್ವಯಿಸಿದವು ಎಂಬುದನ್ನು ಯೇಸು ತನ್ನ ಜೀವಮಾನದಲ್ಲಿ ಸ್ಪಷ್ಟಪಡಿಸಿದನು. (ಲೂಕ 4:17-21) ಸಾಂತ್ವನದ ಅಗತ್ಯದ ಅನಿಸಿಕೆಯು ನಿಮಗಾದರೆ, ದುಃಖಿತರೂ ಕೊರತೆಯುಳ್ಳವರೂ ಆಗಿದ್ದ ಜನರೊಂದಿಗೆ ಯೇಸುವಿನ ಸೌಮ್ಯ, ಪ್ರೀತಿಯುಕ್ತ ವ್ಯವಹಾರಗಳನ್ನು ಮನನ ಮಾಡಿರಿ. ನಿಶ್ಚಯವಾಗಿಯೂ ಬೈಬಲಿನ ಜಾಗ್ರತೆಯ ಅಧ್ಯಯನವು ಸಾಂತ್ವನ ಮತ್ತು ಪ್ರೋತ್ಸಾಹನೆಯ ಒಂದು ಮಹಾ ಮೂಲವಾಗಿದೆ.
ಸಭೆಯ ಮೂಲಕ
ಕ್ರೈಸ್ತ ಸಭೆಯಲ್ಲಿ, ಸಾಂತ್ವನ ಮತ್ತು ಪ್ರೋತ್ಸಾಹನೆಯ ರತ್ನಗಳು ತಮ್ಮ ಅನೇಕ ಮುಖಗಳಲ್ಲಿ ಹೊಳೆಯುತ್ತವೆ. ಅಪೊಸ್ತಲ ಪೌಲನು ಬರೆಯಲು ಪ್ರೇರಿಸಲ್ಪಟ್ಟದ್ದು: “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.” (1 ಥೆಸಲೊನೀಕ 5:11) ಸಭಾ ಕೂಟಗಳಲ್ಲಿ ಸಾಂತ್ವನ ಮತ್ತು ಪ್ರೋತ್ಸಾಹವನ್ನು ಹೇಗೆ ಕಂಡುಕೊಳ್ಳಬಹುದು?
ಮುಖ್ಯವಾಗಿ, ನಾವು ಕ್ರೈಸ್ತ ಕೂಟಗಳನ್ನು ಹಾಜರಾಗುವುದು ‘ಯೆಹೋವನಿಂದ ಶಿಕ್ಷಿತರಾಗ’ಲಿಕ್ಕಾಗಿ, ಆತನ ಕುರಿತು ಮತ್ತು ಆತನ ಮಾರ್ಗಗಳ ಕುರಿತು ಉಪದೇಶವನ್ನು ಪಡೆಯಲಿಕ್ಕಾಗಿ, ನಿಶ್ಚಯ. (ಯೋಹಾನ 6:45) ಅಂತಹ ಉಪದೇಶವು ಪ್ರೋತ್ಸಾಹನೀಯವೂ ಸಾಂತ್ವನದಾಯಕವೂ ಆಗಿರುತ್ತದೆ. ಅಪೊಸ್ತಲರ ಕೃತ್ಯಗಳು 15:32ರಲ್ಲಿ ನಾವು ಓದುವುದು: “ಯೂದನೂ ಸೀಲನೂ . . . ಸಹೋದರರನ್ನು ಅನೇಕ ಮಾತುಗಳಿಂದ ಪ್ರಬೋಧಿಸಿ [“ಪ್ರೋತ್ಸಾಹಿಸಿ,” NW] ದೃಢಪಡಿಸಿದರು.”
ನೀವು ಎದೆಗುಂದಿದವರಾಗಿದ್ದಾಗ ಕ್ರೈಸ್ತ ಕೂಟಗಳಿಗೆ ಹೋದ ಮತ್ತು ಹೆಚ್ಚು ಹಿತಕರ ಭಾವದಿಂದ ಮನೆಗೆ ಹಿಂತಿರುಗಿ ಬಂದ ಅನುಭವವು ನಿಮಗೆಂದಾದರೂ ಆದದ್ದುಂಟೋ? ಪ್ರಾಯಶಃ ಒಂದು ಭಾಷಣದಲ್ಲಿ, ಒಂದು ಹೇಳಿಕೆಯಲ್ಲಿ, ಅಥವಾ ಒಂದು ಪ್ರಾರ್ಥನೆಯಲ್ಲಿ ಹೇಳಿದ ಯಾವುದೋ ಒಂದು ಸಂಗತಿಯು ನಿಮ್ಮ ಹೃದಯವನ್ನು ಸ್ಪರ್ಶಿಸಿ, ನಿಮಗೆ ಬೇಕಾಗಿದ್ದ ಸಾಂತ್ವನ ಮತ್ತು ಪ್ರೋತ್ಸಾಹನೆಯನ್ನು ಒದಗಿಸಿತು. ಆದುದರಿಂದ ಕ್ರೈಸ್ತ ಕೂಟಗಳಿಗೆ ಬಾರದೆ ಇರಬೇಡಿರಿ.—ಇಬ್ರಿಯ 10:24, 25.
ಶುಶ್ರೂಷೆಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ನಮ್ಮ ಸಹೋದರ ಮತ್ತು ಸಹೋದರಿಯರ ಸಂಗಡ ಸಾಹಚರ್ಯ ಮಾಡುವುದು ತದ್ರೀತಿಯ ಪರಿಣಾಮವನ್ನು ತರಬಲ್ಲದು. ಹೀಬ್ರುವಿನಲ್ಲಿ “ಒಟ್ಟಾಗಿ ಕಟ್ಟು” ಎಂಬ ಅರ್ಥದ ಹಲವಾರು ಕ್ರಿಯಾಪದಗಳು “ಬಲ” ಅಥವಾ “ಬಲಪಡಿಸು” ಎಂಬುದಕ್ಕೂ ನಿರ್ದೇಶಿಸಲ್ಪಡುತ್ತವೆ—ಒಟ್ಟಾಗಿ ಕಟ್ಟಲ್ಪಡುವಾಗ ವಿಷಯಗಳು ಬಲಗೊಳ್ಳುವ ವಿಚಾರದಿಂದಾಗಿ ಎಂಬುದು ವ್ಯಕ್ತ. ಈ ಮೂಲತತ್ವವು ಸಭೆಯಲ್ಲಿ ಸತ್ಯವಾಗಿ ಅನ್ವಯಿಸುತ್ತದೆ. ಒಟ್ಟಾಗಿ ಕೂಡಿಬರುವ ಮೂಲಕ ನಾವು ಸಂತೈಸಲ್ಪಡುತ್ತೇವೆ, ಪ್ರೋತ್ಸಾಹಿಸಲ್ಪಡುತ್ತೇವೆ, ಹೌದು, ಬಲಗೊಳಿಸಲ್ಪಡುತ್ತೇವೆ. ಮತ್ತು ಬಂಧಗಳಲ್ಲಿ ಅತ್ಯಂತ ಬಲವಾದ ಪ್ರೀತಿಯಿಂದ ನಾವು ಒಟ್ಟಾಗಿ ಕಟ್ಟಲ್ಪಡುತ್ತೇವೆ.—ಕೊಲೊಸ್ಸೆ 3:14.
ಕೆಲವು ಸಲ ನಮಗೆ ಪ್ರೋತ್ಸಾಹನೆ ಕೊಡುವಂತಹದ್ದು ನಮ್ಮ ಆತ್ಮಿಕ ಸಹೋದರರ ಅಥವಾ ಸಹೋದರಿಯರ ನಂಬಿಗಸ್ತಿಕೆಯೇ. (1 ಥೆಸಲೊನೀಕ 3:7, 8) ಕೆಲವೊಮ್ಮೆ ಅದು ಅವರು ತೋರಿಸುವ ಪ್ರೀತಿ. (ಫಿಲೆಮೋನ 7) ಮತ್ತು ಕೆಲವು ಸಾರಿ ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತನಾಡುವಾಗ, ನಾವು ಹೆಗಲು ಹೆಗಲಾಗಿ, ಕೇವಲ ಒಂದುಗೂಡಿ ಕಾರ್ಯನಡಿಸುವ ವಿಷಯವು ಅದಾಗಿದೆ. ಶುಶ್ರೂಷೆಯ ವಿಷಯದಲ್ಲಿ ದುರ್ಬಲರಾಗಿದ್ದು ಪ್ರೋತ್ಸಾಹನೆಯ ಅಗತ್ಯವಿದೆ ಎಂದು ನೀವು ಭಾವಿಸುವುದಾದರೆ, ಒಬ್ಬ ಪ್ರೌಢರಾದ, ಅಥವಾ ಹೆಚ್ಚು ಅನುಭವಿಯಾದ ರಾಜ್ಯ ಪ್ರಚಾರಕರೊಂದಿಗೆ ಸೇವೆಮಾಡಲು ಯಾಕೆ ಏರ್ಪಡಿಸಬಾರದು? ಹಾಗೆ ಮಾಡುವುದರಲ್ಲಿ ಬಹಳಷ್ಟು ಸಾಂತ್ವನವನ್ನು ನೀವು ಕಂಡುಕೊಳ್ಳುವುದು ಸಂಭವನೀಯ.—ಪ್ರಸಂಗಿ 4:9-12; ಫಿಲಿಪ್ಪಿ 1:27.
“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮೂಲಕ
ನಮ್ಮ ಆರಾಧನೆಯ ಸಾಂತ್ವನಕಾರಿ ವೈಶಿಷ್ಟ್ಯಗಳನ್ನು ವ್ಯವಸ್ಥಾಪಿಸುವವರು ಯಾರು? “ಹೊತ್ತು ಹೊತ್ತಿಗೆ [ಆತ್ಮಿಕ] ಆಹಾರವನ್ನು” ಕೊಡುವುದಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಹೆಸರಿಸಿದ ವರ್ಗವನ್ನು ಯೇಸು ನೇಮಿಸಿದನು. (ಮತ್ತಾಯ 24:45) ಸಾ.ಶ. ಮೊದಲನೆಯ ಶತಮಾನದಲ್ಲಿ, ಆತ್ಮಾಭಿಷಿಕ್ತ ಕ್ರೈಸ್ತರ ಈ ಮಂಡಲಿಯು ಆವಾಗಲೇ ಕಾರ್ಯಕ್ಕೆ ತೊಡಗಿತ್ತು. ಯೆರೂಸಲೇಮಿನಲ್ಲಿ ಹಿರಿಯರ ಆಡಳಿತ ಮಂಡಲಿಯು ಸಭೆಗಳಿಗೆ ಸೂಚನೆ ಮತ್ತು ಮಾರ್ಗದರ್ಶನೆಯ ಪತ್ರಗಳನ್ನು ಕಳುಹಿಸಿತು. ಫಲಿತಾಂಶವೇನು? ಅಂತಹ ಒಂದು ಪತ್ರಕ್ಕೆ ಸಭೆಗಳು ಹೇಗೆ ಪ್ರತಿಕ್ರಿಯಿಸಿದುವೆಂದು ಬೈಬಲು ದಾಖಲಿಸುತ್ತದೆ: “ಅವರು ಓದಿ ಅದರಿಂದ ಧೈರ್ಯತಂದುಕೊಂಡು ಸಂತೋಷ [“ಪ್ರೋತ್ಸಾಹ,” NW]ಪಟ್ಟರು.”—ಅ. ಕೃತ್ಯಗಳು 15:23-31.
ತದ್ರೀತಿಯಲ್ಲಿ, ಈ ಸಂಕಷ್ಟದ ಕಡೇ ದಿನಗಳಲ್ಲಿ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯೆಹೋವನ ಜನರಿಗೆ ಮಹಾ ಸಾಂತ್ವನವನ್ನೂ ಪ್ರೋತ್ಸಾಹವನ್ನೂ ಒದಗಿಸುವ ಆತ್ಮಿಕ ಆಹಾರವನ್ನು ನೀಡುತ್ತಾ ಇದ್ದಾನೆ. ಆ ಆಹಾರವನ್ನು ನೀವು ಸೇವಿಸುತ್ತೀರೋ? ಆಳು ವರ್ಗವು ಭೂಮಿಯಲ್ಲೆಲ್ಲೂ ಲಭ್ಯಗೊಳಿಸುವ ಮುದ್ರಿತ ಸಾಹಿತ್ಯದಲ್ಲಿ ಅದು ಸುಲಭವಾಗಿ ದೊರೆಯುತ್ತದೆ. ವಾಚ್ ಟವರ್ ಸೊಸೈಟಿಯು ಪ್ರಕಾಶಿಸುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಹಾಗೂ ಪುಸ್ತಕಗಳು, ಬ್ರೋಷರ್ಗಳು ಮತ್ತು ಕಿರುಹೊತ್ತಗೆಗಳು, ಅಸಂಖ್ಯಾತ ವಾಚಕರಿಗೆ ಸಾಂತ್ವನವನ್ನು ತಂದಿರುತ್ತವೆ.
ಒಬ್ಬ ಸಂಚಾರ ಮೇಲ್ವಿಚಾರಕರು ಬರೆದುದು: “ನಮ್ಮ ಹೆಚ್ಚಿನ ಸಹೋದರರು ಮತ್ತು ಸಹೋದರಿಯರು ಯೋಗ್ಯವಾದುದನ್ನು ಮಾಡಲು ಬಯಸುತ್ತಾರೆ, ಆದರೆ ಹತಾಶೆಗಳು, ಭಯಗಳು, ಮತ್ತು ತಮಗೆ ಸಹಾಯ ಮಾಡಿಕೊಳ್ಳಲು ತಾವು ಅಶಕ್ತರೆಂಬ ಭಾವನೆಯೊಂದಿಗೆ ಅವರು ಆಗಿಂದಾಗ್ಗೆ ಹೋರಾಡುತ್ತಾರೆ. ನಮ್ಮ ಪತ್ರಿಕೆಗಳಲ್ಲಿರುವ ಲೇಖನಗಳು ಅನೇಕರಿಗೆ ತಮ್ಮ ಜೀವಿತಗಳ ಮತ್ತು ಭಾವನೆಗಳ ಮರು ನಿಯಂತ್ರಣವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಿವೆ. ಈ ಲೇಖನಗಳು ಹಿರಿಯರಿಗೆ ಮೇಲುಮೇಲಿನ ಉತ್ತೇಜನಕ್ಕಿಂತ ಹೆಚ್ಚಿನದ್ದನ್ನೂ ನೀಡಲು ವಿಷಯವನ್ನು ಒದಗಿಸುತ್ತವೆ.”
ನಂಬಿಗಸ್ತ ಆಳು ವರ್ಗದಿಂದ ಬರುವ ಸಾಹಿತ್ಯದ ಪೂರ್ಣ ಉಪಯೋಗವನ್ನು ಮಾಡಿಕೊಳ್ಳಿರಿ. ಈ ಸಮಯೋಚಿತ ಪತ್ರಿಕೆಗಳು, ಪುಸ್ತಕಗಳು, ಮತ್ತು ಇತರ ಪ್ರಕಾಶನಗಳು ಕಷ್ಟ ಕಾಲದಲ್ಲಿ ನಾವು ಸಾಂತ್ವನವನ್ನು ಕಂಡುಕೊಳ್ಳುವಂತೆ ನಮಗೆ ನೆರವಾಗಬಲ್ಲವು. ಇನ್ನೊಂದು ಕಡೆ, ಖಿನ್ನನಾದ ಒಬ್ಬನಿಗೆ ನೀವು ಪ್ರೋತ್ಸಾಹನೆ ನೀಡುವ ಸ್ಥಾನದಲ್ಲಿದ್ದರೆ, ಈ ಪತ್ರಿಕೆಗಳಲ್ಲಿರುವ ಶಾಸ್ತ್ರೀಯ ಮಾಹಿತಿಯನ್ನು ಉಪಯೋಗಿಸಿರಿ. ಲೇಖನಗಳನ್ನು ಅತಿ ಜಾಗ್ರತೆಯಿಂದ, ಆಗಾಗ್ಗೆ ಅನೇಕ ವಾರಗಳ ಅಥವಾ ತಿಂಗಳುಗಳ ಶ್ರಮಭರಿತ ಸಂಶೋಧನೆ, ಅಧ್ಯಯನ, ಮತ್ತು ಪ್ರಾರ್ಥನೆಯ ಬಳಿಕ ಬರೆಯಲಾಗುತ್ತದೆ. ಬುದ್ಧಿವಾದವು ಬೈಬಲಾಧಾರಿತವೂ, ಪರೀಕ್ಷಿತವೂ ಮತ್ತು ಸತ್ಯವೂ ಆಗಿದೆ. ಮನಗುಂದಿದವರಿಗೆ ತಕ್ಕದಾದ ಒಂದೆರಡು ಲೇಖನಗಳನ್ನು ಓದಿ ಹೇಳುವುದನ್ನು ಕೆಲವರು ಅತಿ ಸಹಾಯಕಾರಿಯಾಗಿ ಕಂಡಿದ್ದಾರೆ. ಇದು ಬಹಳ ಸಾಂತ್ವನ ಮತ್ತು ಪ್ರೋತ್ಸಾಹನೆಯಲ್ಲಿ ಪರಿಣಮಿಸಬಲ್ಲದು.
ಅಮೂಲ್ಯ ರತ್ನಗಳನ್ನು ನೀವು ಕಂಡುಕೊಂಡದ್ದಾದರೆ, ನೀವದನ್ನು ಸಂಗ್ರಹಿಸಿಡುವಿರೋ ಅಥವಾ ಆ ಐಶ್ವರ್ಯದಲ್ಲಿ ಸ್ವಲ್ಪವನ್ನು ನೀವು ಉದಾರವಾಗಿ ಇತರರೊಂದಿಗೆ ಹಂಚಿಕೊಳ್ಳುವಿರೋ? ಸಭೆಯಲ್ಲಿರುವ ಸಹೋದರ ಮತ್ತು ಸಹೋದರಿಯರಿಗೆ ಸಾಂತ್ವನ ಮತ್ತು ಪ್ರೋತ್ಸಾಹನೆಯ ಒಂದು ಮೂಲವಾಗಿರುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ. ನೀವು ಕೆಡವಿ ಹಾಕುವ ಬದಲಿಗೆ ಕಟ್ಟುವುದಾದರೆ, ಟೀಕಿಸುವ ಬದಲಾಗಿ ಪ್ರಶಂಸಿಸುವುದಾದರೆ, “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವ” ಬದಲಿಗೆ “ಶಿಕ್ಷಿತರ ನಾಲಿಗೆ”ಯಿಂದ ಮಾತಾಡುವುದಾದರೆ, ಬೇರೆಯವರ ಜೀವನದಲ್ಲಿ ನೀವು ವ್ಯತ್ಯಾಸವನ್ನು ಮಾಡಬಹುದು. (ಯೆಶಾಯ 50:4; ಜ್ಞಾನೋಕ್ತಿ 12:18) ನಿಶ್ಚಯವಾಗಿಯೂ ನೀವು ಸ್ವತಃ ಒಂದು ರತ್ನವಾಗಿ—ನಿಜ ಸಾಂತ್ವನ ಮತ್ತು ಪ್ರೋತ್ಸಾಹನೆಯ ಒಂದು ಮೂಲವಾಗಿ ವೀಕ್ಷಿಸಲ್ಪಡುವಿರಿ!
[ಪುಟ 20 ರಲ್ಲಿರುವ ಚೌಕ]
ಅಗತ್ಯವಿರುವವರಿಗಾಗಿ ಸಾಂತ್ವನ
ನಿರ್ದಿಷ್ಟ ಕಾವಲಿನಬುರಜು ಮತ್ತು ಎಚ್ಚರ! ಲೇಖನಗಳು ಯೆಹೋವನೊಂದಿಗೆ ತಮ್ಮ ವೈಯಕ್ತಿಕ ಸಂಬಂಧವನ್ನು ಹೇಗೆ ಆಳಗೊಳಿಸಿವೆಯೆಂದು ಅನೇಕರು ಹೇಳಿಕೆ ಕೊಟ್ಟಿದ್ದಾರೆ. ಒಬ್ಬಳು ಅಂದದ್ದು: “ಈ ಲೇಖನವನ್ನು ಓದಿದ ಬಳಿಕ, ಯೆಹೋವನು ತನ್ನೆಲ್ಲ ಪರಾಕ್ರಮ ಮತ್ತು ಮಹೋನ್ನತಿಯಲ್ಲಿ ನನ್ನ ಬಳಿಯಲ್ಲೀ ಇದ್ದ ಅನುಭವ ನನಗಾಯಿತು. ಆತನು ಒಬ್ಬ ನೈಜ ವ್ಯಕ್ತಿಯೆಂಬ ಅನಿಸಿಕೆ ನನಗಾಯಿತು.” ಇನ್ನೊಂದು ಪತ್ರ ಹೇಳಿದ್ದು: “ಯೆಹೋವನ ಕುರಿತಾದ ನಮ್ಮ ವೀಕ್ಷಣೆಯಲ್ಲಿ ನಮ್ಮ ಹೃದಯಗಳು ಮತ್ತು ಮನಸ್ಸುಗಳು ಎಷ್ಟು ಮನಮುಟ್ಟುವ ರೀತಿಯಲ್ಲಿ ಬದಲಾಗಿವೆಯೆಂದರೆ ನಾವು ಹಿಂದಿನ ಆ ವ್ಯಕ್ತಿಗಳೇ ಅಲ್ಲ. ಅದು, ಯಾರೋ ನಮ್ಮ ಕನ್ನಡಕಗಳನ್ನು ಒರಸಿ ಸ್ವಚ್ಛಮಾಡಿದಂತಿತ್ತು, ಮತ್ತು ನಾವು ಈಗ ಎಲ್ಲವನ್ನು ಅತಿ ಸ್ಪಷ್ಟವಾಗಿ ಕಾಣಬಲ್ಲೆವು.”
ಅವರಲ್ಲಿ ಯೆಹೋವನ ವೈಯಕ್ತಿಕ ಆಸಕ್ತಿಯ ಆಶ್ವಾಸನೆ ಕೊಡುತ್ತಾ, ಪತ್ರಿಕೆಗಳು ನಿರ್ದಿಷ್ಟ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ನಿಭಾಯಿಸಲು ಹೇಗೆ ಸಹಾಯ ಮಾಡುತ್ತವೆಂದು ಹೇಳಲು ಕೆಲವರು ಬರೆಯುತ್ತಾರೆ. ಒಬ್ಬ ವಾಚಕಳು ಅದನ್ನು ಈ ರೀತಿ ಹೇಳಿದಳು: “ಯೆಹೋವನು ತನ್ನ ಜನರನ್ನು ಎಷ್ಟು ಪರಾಮರಿಕೆ ಮಾಡುತ್ತಾನೆ ಮತ್ತು ಪ್ರೀತಿಸುತ್ತಾನೆಂದು ನಾವು ಮತ್ತೆ ಕಾಣುವಂತೆ ಮಾಡಿದುದಕ್ಕಾಗಿ ನಿಮಗೆ ತುಂಬಾ ಉಪಕಾರ.” ತನ್ನ ಮಗುವನ್ನು ಮರಣದಲ್ಲಿ ಕಳೆದುಕೊಂಡ ಜಪಾನಿನ ಒಬ್ಬ ಸ್ತ್ರೀಯು, ಆ ವಿಷಯದ ಮೇಲಿನ ಎಚ್ಚರ! ಲೇಖನಗಳ ಕುರಿತು ಹೀಗಂದಳು: “ಆ ಪುಟಗಳಿಂದ ದೇವರ ಕರುಣೆಯ ಆಳವು ಸುರಿಯಿತು, ಮತ್ತು ನಾನು ಬಹಳವಾಗಿ ಅತ್ತೆನು. ನನಗೆ ದುಃಖದ ಮತ್ತು ಒಂಟಿಗ ಭಾವನೆಯಾದಾಗಲೆಲ್ಲ ಈ ಲೇಖನಗಳನ್ನು ಕೂಡಲೆ ತೆಗೆದು ಓದಲಾಗುವಂಥ ಒಂದು ಸ್ಥಳದಲ್ಲಿ ಅವನ್ನು ಇಟ್ಟಿದ್ದೇನೆ.” ಇನ್ನೊಬ್ಬ ಶೋಕಾರ್ಥ ಸ್ತ್ರೀಯು ಬರೆದುದು: “ಕಾವಲಿನಬುರುಜು ಮತ್ತು ಎಚ್ಚರ! ಲೇಖನಗಳು ಮತ್ತು “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರ್ ನನ್ನ ದುಃಖದ ಸಮಯಗಳನ್ನು ತಾಳಿಕೊಳ್ಳುವಂತೆ ನನಗೆ ಬೇಕಾದ ಬಲವನ್ನು ಕೊಟ್ಟಿವೆ.”
ಪವಿತ್ರ ಶಾಸ್ತ್ರಗಳು ಸಾಂತ್ವನದ ಪ್ರಧಾನ ಮೂಲವಾಗಿವೆ. (ರೋಮಾಪುರ 15:4) ಕಾವಲಿನಬುರುಜು ಹಾಗೂ ಅದರ ಜೊತೆ ಪತ್ರಿಕೆಯಾದ ಎಚ್ಚರ! ತಮ್ಮ ಅಧಿಕೃತ ಆಧಾರವಾಗಿ ಬೈಬಲಿಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿಯೇ, ಈ ಪತ್ರಿಕೆಗಳು ಅವುಗಳ ವಾಚಕರಿಗೆ ಸಾಂತ್ವನ ಮತ್ತು ಪ್ರೋತ್ಸಾಹನೆಯವುಗಳಾಗಿ ಪರಿಣಮಿಸಿರುತ್ತವೆ.
[ಪುಟ 23 ರಲ್ಲಿರುವ ಚಿತ್ರ]
ಸಕಲವಿಧವಾಗಿ ಸಂತೈಸುವ ದೇವರು, ಪ್ರಾರ್ಥನೆಯನ್ನು ಕೇಳುವವನೂ ಆಗಿದ್ದಾನೆ