ಅಧ್ಯಾಯ 22
ನಾಲ್ವರು ಶಿಷ್ಯರು ಕರೆಯಲ್ಪಟ್ಟರು
ಯೇಸುವನ್ನು ಕೊಲ್ಲಲು ಅವನ ಸ್ವಂತ ಊರಾದ ನಜರೇತಿನಲ್ಲಿ ಪ್ರಯತ್ನಗಳು ಮಾಡಲ್ಪಟ್ಟ ಮೇಲೆ, ಆತನು ಗಲಿಲಾಯ ಸಮುದ್ರದ ಬಳಿಯಿರುವ ಕಪೆರ್ನೌಮೆಂಬ ಪಟ್ಟಣಕ್ಕೆ ಹೊರಟುಹೋಗುತ್ತಾನೆ. ಇದು ಯೆಶಾಯನ ಇನ್ನೊಂದು ಪ್ರವಾದನೆಯನ್ನು ನೆರವೇರಿಸುತ್ತದೆ. ಗಲಿಲಾಯ ಸಮುದ್ರದ ಬಳಿ ವಾಸಿಸುವ ಜನರಿಗೆ ಒಂದು ದೊಡ್ಡ ಬೆಳಕು ಕಾಣಿಸುತ್ತದೆ ಎಂದು ಮುಂತಿಳಿಸಿದ ಒಂದು ಪ್ರವಾದನೆ ಅದು.
ಬೆಳಕನ್ನು ಬೀರುವ ರಾಜ್ಯದ ಸಂದೇಶವನ್ನು ಯೇಸು ಸಾರುತ್ತಾ ಹೋದ ಹಾಗೆ, ನಾಲ್ವರು ಶಿಷ್ಯರನ್ನು ಅವನು ಕಂಡುಕೊಳ್ಳುತ್ತಾನೆ. ಆರಂಭದಲ್ಲಿ ಇವರು ಆತನೊಂದಿಗೆ ಪ್ರಯಾಣಮಾಡಿದವರಾಗಿದ್ದರು, ಆದರೆ ಯೇಸುವಿನೊಂದಿಗೆ ಯೂದಾಯದಿಂದ ಹಿಂತಿರುಗಿದಾಗ ಅವರು ತಮ್ಮ ಮೀನು ಹಿಡಿಯುವ ಕಸುಬಿಗೆ ಹಿಂತೆರಳಿದ್ದರು. ಯೇಸು ಪ್ರಾಯಶಃ ಅವರನ್ನು ಹುಡುಕಿ ಕಂಡುಕೊಳ್ಳುತ್ತಾನೆ, ಯಾಕಂದರೆ ತಾನು ಹೊರಟು ಹೋದ ಮೇಲೆ ಶುಶ್ರೂಪಷೆಯನ್ನು ಮುಂದುವರಿಸಲು ಶಕ್ಯರಾಗುವಂತೆ ತಾನು ತರಬೇತು ಮಾಡಶಕ್ತವಾದ ಸ್ಥಿರತೆಯ ಹಾಗೂ ಕ್ರಮದ ಸಹಾಯಕರು ಈಗ ಇರಬೇಕಿದ್ದ ಸಮಯವಾಗಿತ್ತು.
ಹೀಗೆ ಯೇಸುವು ಸಮುದ್ರ ಕಿನಾರೆಯಲ್ಲಿ ನಡೆಯುತ್ತಾ ಹೋಗುತ್ತಿರಲು, ಸೀಮೋನ ಪೇತ್ರ ಮತ್ತು ಅವನ ಸಂಗಡಿಗರು ತಮ್ಮ ಬಲೆಗಳನ್ನು ತೊಳೆಯುತ್ತಿರುವದನ್ನು ಕಂಡು, ಅವರ ಬಳಿಗೆ ಹೋಗುತ್ತಾನೆ. ಪೇತ್ರನ ದೋಣಿಯ ಮೇಲೆ ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಅವನನ್ನು ಕೇಳಿಕೊಳ್ಳುತ್ತಾನೆ. ಸ್ವಲ್ಪ ದೂರ ಹೋದಾಗ, ಯೇಸುವು ದೋಣಿಯಲ್ಲಿ ಕುಳಿತುಕೊಂಡು, ದಡದಲ್ಲಿರುವ ಜನರ ಗುಂಪಿಗೆ ಉಪದೇಶಿಸಲಾರಂಭಿಸುತ್ತಾನೆ.
ಅನಂತರ, ಯೇಸುವು ಪೇತ್ರನಿಗೆ ಅನ್ನುವದು: “ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆ ಹಾಕಿರಿ.”
ಪೇತ್ರನು ಉತ್ತರಿಸುವದು: “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ.”
ಅವರು ಬಲೆಗಳನ್ನು ಹಾಕಲಾಗಿ, ಮೀನುಗಳು ಎಷ್ಟು ರಾಶಿ ರಾಶಿಯಾಗಿ ಸಿಕ್ಕಿಕೊಂಡವೆಂದರೆ ಬಲೆಗಳು ಹರಿದು ಹೋಗತೊಡಗಿದವು. ಆಗ ಅವರು ತುರ್ತಾಗಿ ಇನ್ನೊಂದು ದೋಣಿಯಲ್ಲಿದ್ದ ಅವರ ಪಾಲುಗಾರರಿಗೆ ಬಂದು ಸಹಾಯ ಮಾಡುವಂತೆ ಸನ್ನೆ ಮಾಡುತ್ತಾರೆ. ಬಲುಬೇಗನೆ ಎರಡು ದೋಣಿಗಳಲ್ಲಿ ಎಷ್ಟೊಂದು ತುಂಬಿಸಿದರೆಂದರೆ, ಅವು ಮುಳುಗುವ ಹಾಗಾದವು. ಇದನ್ನು ಕಂಡು, ಪೇತ್ರನು ಯೇಸುವಿನ ಮುಂದೆ ಅಡ್ಡಬಿದ್ದು, ಹೇಳುವದು: “ಸ್ವಾಮೀ, ನಾನು ಪಾಪಾತ್ಮನು, ನನ್ನನ್ನು ಬಿಟ್ಟು ಹೋಗಬೇಕು.”
“ಅಂಜಬೇಡ,” ಎಂದುತ್ತರಿಸುತ್ತಾನೆ ಯೇಸು. “ಇಂದಿನಿಂದ ನೀನು ಮನುಷ್ಯರನ್ನು ಜೀವಂತ ಹಿಡಿಯುವವನಾಗಿರುವಿ.”
ಯೇಸುವು ಪೇತ್ರನ ತಮ್ಮನಾದ ಅಂದ್ರೆಯನನ್ನೂ ಆಮಂತ್ರಿಸುತ್ತಾನೆ. “ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು,” ಎಂದು ಆತನು ಅವರನ್ನು ಉತ್ತೇಜಿಸುತ್ತಾನೆ. ಅವರ ಮೀನುಗಾರಿಕೆಯ ಪಾಲುಗಾರರಾದ ಜೆಬೆದಾಯನ ಪುತ್ರರುಗಳಾದ ಯಾಕೋಬ ಮತ್ತು ಯೋಹಾನರಿಗೂ ಅದೇ ಆಮಂತ್ರಣವನ್ನೀಯಲಾಗಿ, ಅವರೂ ತಡವಿಲ್ಲದೆ ಪ್ರತಿಕ್ರಿಯೆ ತೋರಿಸುತ್ತಾರೆ. ಹೀಗೆ, ಈ ನಾಲ್ವರು ಅವರ ಮೀನುಗಾರಿಕೆಯ ವ್ಯವಹಾರವನ್ನು ತೊರೆದು, ಯೇಸುವಿನ ಮೊತ್ತ ಮೊದಲ ಸ್ಥಿರತೆಯ ಹಾಗೂ ಕ್ರಮಬದ್ಧ ಹಿಂಬಾಲಕರಾಗುತ್ತಾರೆ. ಲೂಕ 5:1-11; ಮತ್ತಾಯ 4:13-22; ಮಾರ್ಕ 1:16-20; ಯೆಶಾಯ 9:1,2.
▪ ತನ್ನನ್ನು ಹಿಂಬಾಲಿಸಲು ಯೇಸು ತನ್ನ ಶಿಷ್ಯರನ್ನು ಕರೆದದ್ದು ಏಕೆ, ಮತ್ತು ಅವರು ಯಾರು?
▪ ಯಾವ ಅದ್ಭುತವು ಪೇತ್ರನನ್ನು ಗಾಬರಿಗೊಳಿಸುತ್ತದೆ?
▪ ಯಾವ ರೀತಿಯ ಮೀನುಗಾರಿಕೆಯನ್ನು ಮಾಡಲು ಯೇಸು ತನ್ನ ಶಿಷ್ಯರನ್ನು ಕರೆಯುತ್ತಾನೆ?