ಮೆಸ್ಸೀಯನ ಸಾನ್ನಿಧ್ಯ ಮತ್ತು ಅವನ ಆಳಿಕ್ವೆ
“ಈ ಯೇಸು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು.”—ಅ. ಕೃತ್ಯಗಳು 1:11.
1, 2. (ಎ) ಯೇಸು ದಿವಾರೋಹಣಗೈದಾಗ ಇಬ್ಬರು ದೇವದೂತರು ಅವನ ಅಪೊಸ್ತಲರನ್ನು ಹೇಗೆ ಸಂತೈಸಿದರು? (ಬಿ) ಕ್ರಿಸ್ತನ ಹಿಂದಿರುಗುವಿಕೆಯ ಪ್ರತೀಕ್ಷೆಯಿಂದ ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
ಹನ್ನೊಂದು ಪುರುಷರು ಎಣ್ಣೆಯ ಮರಗಳ ಗುಡ್ಡದ ಪೂರ್ವ ಇಳಿಜಾರಿನಲ್ಲಿ ಆಕಾಶವನ್ನು ವೀಕ್ಷಿಸುತ್ತಾ ನಿಂತಿದ್ದರು. ಕೆಲವೇ ಕ್ಷಣಗಳ ಮೊದಲು ಯೇಸು ಕ್ರಿಸ್ತನು ಅವರ ಮಧ್ಯದಿಂದ ಮೇಲಕ್ಕೆತ್ತಲ್ಪಟ್ಟು, ಮೇಘದಿಂದ ಕಣ್ಮರೆಯಾಗುವ ತನಕ ಅವನ ರೂಪವು ಮಾಸಿಹೋಗುತ್ತಾ ಬಂತು. ಅವನೊಂದಿಗಿನ ಅವರ ವರುಷಗಳಲ್ಲಿ, ಅವನು ಮೆಸ್ಸೀಯನಾಗಿದ್ದನು ಎಂಬುದರ ಹೇರಳ ರುಜುವಾತನ್ನು ಯೇಸುವು ನೀಡಿರುವುದನ್ನು ಈ ಪುರುಷರು ನೋಡಿದ್ದರು; ಅವನ ಮರಣದ ದಾರುಣ ದುಃಖದ, ಮತ್ತು ಅವನ ಪುನರುತ್ಥಾನದ ಹರ್ಷೋನ್ಮಾದದ ಅನುಭವಗಳ ನಡುವೆಯೂ ಅವರು ಜೀವಿಸಿದ್ದರು. ಈಗ ಅವನು ಹೋಗಿದ್ದನು.
2 ಫಕ್ಕನೆ ಇಬ್ಬರು ದೇವದೂತರು ಕಾಣಿಸಿಕೊಂಡರು ಮತ್ತು ಅವರಿಗೆ ಈ ಸಂತೈಸುವಿಕೆಯ ಮಾತುಗಳನ್ನು ನುಡಿದರು: “ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು.” (ಅ. ಕೃತ್ಯಗಳು 1:11) ಎಂತಹ ಆಶ್ವಾಸನೆಯದು—ಯೇಸುವಿನ ದಿವಾರೋಹಣವು ಭೂಮಿಯ ಮತ್ತು ಮಾನವಕುಲದ ಬಗ್ಗೆ ಅವನಿಗೆ ಇನ್ನು ಮುಂದೆ ಆಸಕ್ತಿಯಿರುವುದಿಲವ್ಲೆಂಬ ಅರ್ಥವಲ್ಲ! ಇದಕ್ಕೆ ವಿಪರ್ಯಸ್ತವಾಗಿ, ಯೇಸುವು ಹಿಂದಕ್ಕೆ ಬರಲಿದ್ದಾನೆ. ಈ ಮಾತುಗಳು ಅಪೊಸ್ತಲರುಗಳಲ್ಲಿ ನಿರೀಕ್ಷೆಯನ್ನು ತುಂಬಿಸಿದವು ಎಂಬುದರಲ್ಲಿ ಸಂದೇಹವಿಲ್ಲ. ಇಂದು ಕೂಡ, ಲಕ್ಷಾಂತರ ಜನರು ಕ್ರಿಸ್ತನ ಹಿಂದಿರುಗುವಿಕೆಗೆ ಮಹತ್ತಾದ ಪ್ರಾಮುಖ್ಯತೆಯನ್ನು ಜೋಡಿಸುತ್ತಾರೆ. ಕೆಲವರು ಅದನ್ನು “ದ್ವಿತೀಯ ಬರೋಣ” ಯಾ “ಪುನರಾಗಮನ”ದೋಪಾದಿ ಮಾತಾಡುತ್ತಾರೆ. ಆದರೂ, ಅಧಿಕ ಮಂದಿ ಕ್ರಿಸ್ತನ ಹಿಂದಿರುಗುವಿಕೆಯ ಅರ್ಥವೇನಾಗಿರುತ್ತದೆ ಎಂಬುದರ ಕುರಿತು ಗಲಿಬಿಲಿಗೊಂಡಿದ್ದಾರೆಂದು ತೋರುತ್ತದೆ. ಕ್ರಿಸ್ತನು ಯಾವ ರೀತಿಯಲ್ಲಿ ಹಿಂದಿರುಗುತ್ತಾನೆ? ಯಾವಾಗ? ಮತ್ತು ಇದು ನಮ್ಮ ಜೀವಿತಗಳನ್ನು ಇಂದು ಹೇಗೆ ತಟ್ಟುತ್ತದೆ?
ಕ್ರಿಸ್ತನ ಹಿಂದಿರುಗುವಿಕೆಯ ರೀತಿ
3. ಕ್ರಿಸ್ತನ ಹಿಂದಿರುಗುವಿಕೆಯ ಕುರಿತು ಅನೇಕ ಜನರು ಏನನ್ನು ನಂಬುತ್ತಾರೆ?
3 ಆ್ಯನ್ ಇವ್ಯಾಂಜೆಲಿಕಲ್ ಕ್ರಿಸ್ಟಾಲೊಜಿ ಪುಸ್ತಕಕ್ಕನುಸಾರ, “ಕ್ರಿಸ್ತನ ದ್ವಿತೀಯ ಬರೋಣ ಯಾ ಹಿಂದಿರುಗುವಿಕೆಯು (ಪರೌಸಿಯ) ಕಟ್ಟಕಡೆಯದ್ದಾಗಿ, ಬಹಿರಂಗವಾಗಿ, ಮತ್ತು ನಿತ್ಯ ಶಾಶ್ವತೆಗಾಗಿ ದೇವರ ರಾಜ್ಯವನ್ನು ಸ್ಥಾಪಿಸುವುದು.” ಕ್ರಿಸ್ತನ ಹಿಂದಿರುಗುವಿಕೆಯು ಬಹಿರಂಗವಾಗಿ ದೃಶ್ಯಗೋಚರವೂ, ಗ್ರಹದ ಮೇಲಿರುವ ಪ್ರತಿಯೊಬ್ಬರಿಂದ ಅಕ್ಷರಶಃ ಕಾಣಲ್ಪಡುವದೂ ಆಗಿರುವುದು ಎಂದು ವ್ಯಾಪಕವಾಗಿ ನಂಬಲಾಗುತ್ತದೆ. ಈ ಕಲ್ಪನೆಯನ್ನು ಬೆಂಬಲಿಸಲು, ಅನೇಕರು ಪ್ರಕಟನೆ 1:7ಕ್ಕೆ ನಿರ್ದೇಶಿಸುತ್ತಾರೆ, ಅಲ್ಲಿ ಓದುವುದು: “ಇಗೋ, ಮೇಘಗಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು.” ಆದರೆ ಈ ವಚನವನ್ನು ಅಕ್ಷರಾರ್ಥಕವಾಗಿ ತೆಗೆದುಕೊಳ್ಳಬೇಕೊ?
4, 5. (ಎ) ಪ್ರಕಟನೆ 1:7 ಅಕ್ಷರಶಃ ಅರ್ಥದಲ್ಲಿ ಅಲ್ಲವೆಂದು ನಾವು ತಿಳಿದಿರುವುದು ಹೇಗೆ? (ಬಿ) ಈ ತಿಳಿವಳಿಕೆಯನ್ನು ಯೇಸುವಿನ ಸ್ವಂತ ಮಾತುಗಳು ತಾವೇ ಹೇಗೆ ಸ್ಥಿರೀಕರಿಸುತ್ತವೆ?
4 ಪ್ರಕಟನೆ ಪುಸ್ತಕವನ್ನು “ಸಂಕೇತಗಳಲ್ಲಿ” ಪ್ರಸ್ತುತಪಡಿಸಲಾಗಿದೆ ಎಂಬುದನ್ನು ನೆನಪಿಡಿರಿ. (ಪ್ರಕಟನೆ 1:1, NW) ಈ ವಾಕ್ಸರಣಿಯು, ಹಾಗಾದರೆ, ಸಾಂಕೇತಿಕವಾಗಿರಲೇ ಬೇಕು; ಎಷ್ಟೆಂದರೂ, “ಆತನನ್ನು ಇರಿದವರು” ಕ್ರಿಸ್ತನು ಹಿಂದಿರುಗಿದಾಗ, ಹೇಗೆ ಕಾಣಶಕ್ತರಾಗುವರು? ಅವರು ಮೃತರಾಗಿ ಬಹುಮಟ್ಟಿಗೆ 20 ಶತಕಗಳು ಕಳೆದಿವೆ! ಅದಲ್ಲದೆ, ಅವನು ಬಿಟ್ಟುಹೋದ “ಅದೇ ರೀತಿಯಲ್ಲಿ” ಕ್ರಿಸ್ತನು ಹಿಂದಿರುಗುವನು ಎಂದು ದೇವದೂತರುಗಳು ಹೇಳಿದ್ದರು. ಒಳ್ಳೇದು, ಅವನು ಬಿಟ್ಟುಹೋದದ್ದು ಹೇಗೆ? ಲಕ್ಷಾಂತರ ಮಂದಿ ನೋಡುತ್ತಾ ಇದ್ದರೋ? ಇಲ್ಲ, ಆ ಘಟನೆಯನ್ನು ಕೇವಲ ಸ್ವಲ್ಪ ನಂಬಿಗಸ್ತರು ವೀಕ್ಷಿಸಿದರು. ಮತ್ತು ಅವರೊಂದಿಗೆ ದೇವದೂತರು ಮಾತಾಡಿದಾಗ, ಅಪೊಸ್ತಲರು ಅಕ್ಷರಾರ್ಥಕವಾಗಿ ಕ್ರಿಸ್ತನ ಪ್ರಯಾಣವನ್ನು ಪರಲೋಕದ ವರೆಗೂ ಕಂಡರೋ? ಇಲ್ಲ, ಯೇಸುವನ್ನು ನೋಟದಿಂದ ಒಂದು ಮೇಘವು ಮರೆಮಾಡಿತು. ಅದಾದ ಸ್ವಲ್ಪ ಸಮಯದ ನಂತರ ಒಬ್ಬ ಆತ್ಮ ಜೀವಿಯಾಗಿ, ಮಾನವ ನೇತ್ರಗಳಿಗೆ ಅಗೋಚರನಾಗಿ ಆತ್ಮ ಲೋಕದಲ್ಲಿ ಅವನು ಪ್ರವೇಶಿಸಿರಬೇಕು. (1 ಕೊರಿಂಥ 15:50) ಆದುದರಿಂದ, ಹೆಚ್ಚೆಂದರೆ, ಪ್ರಯಾಣದ ಕೇವಲ ಆರಂಭವನ್ನು ಮಾತ್ರ ಅಪೊಸ್ತಲರು ನೋಡಿದರು; ಅದರ ಮುಕ್ತಾಯವನ್ನು, ಅವನ ತಂದೆಯಾದ ಯೆಹೋವನ ಸ್ವರ್ಗೀಯ ಸಾನ್ನಿಧ್ಯಕ್ಕೆ ಅವನ ಹಿಂದಿರುಗುವಿಕೆಯನ್ನು ಅವರು ನೋಡಶಕ್ತರಾಗಿರಲಿಲ್ಲ. ಇದನ್ನು ಅವರು ತಮ್ಮ ನಂಬಿಕೆಯ ಕಣ್ಣುಗಳಿಂದ ಮಾತ್ರವೇ ವಿವೇಚಿಸಶಕ್ತರಾಗಿದ್ದರು.—ಯೋಹಾನ 20:17.
5 ಯೇಸುವು ಬಹುಮಟ್ಟಿಗೆ ಅದೇ ರೀತಿಯಲ್ಲಿ ಹಿಂದಿರುಗುವನು ಎಂದು ಬೈಬಲ್ ಕಲಿಸುತ್ತದೆ. ಅವನ ಮರಣದ ಸ್ವಲ್ಪ ಮೊದಲು ಯೇಸುವು ಸ್ವತಃ ಹೇಳಿದ್ದು: “ಇನ್ನು ಸ್ವಲ್ಪಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ.” (ಯೋಹಾನ 14:19) “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂಥದಲ್ಲ” ಎಂದು ಕೂಡ ಅವನು ಹೇಳಿದ್ದನು. (ಲೂಕ 17:20) ಹಾಗಾದರೆ, ‘ಎಲ್ಲರ ಕಣ್ಣುಗಳು ಆತನನ್ನು ಕಾಣುವವು’ ಯಾವ ಅರ್ಥದಲ್ಲಿ? ಇದನ್ನುತ್ತರಿಸಲು, ಅವನ ಹಿಂದಿರುಗುವಿಕೆಯ ಸಂಬಂಧದಲ್ಲಿ ಯೇಸು ಮತ್ತು ಅವನ ಹಿಂಬಾಲಕರು ಬಳಸಿದ ಶಬ್ದದ ಒಂದು ಸ್ಪಷ್ಟ ಅರ್ಥದ ಅಗತ್ಯ ನಮಗಿದೆ.
6. (ಎ) “ಹಿಂದಿರುಗುವಿಕೆ,” “ಆಗಮನ,” “ಪುನರಾಗಮನ,” ಯಾ “ಬರೋಣ,”ದಂತಹ ಶಬ್ದಗಳು ಗ್ರೀಕ್ ಶಬ್ದವಾದ ಪ·ರೌ·ಸಿ΄ಯದ ಸಮರ್ಪಕವಾದ ತರ್ಜುಮೆಗಳಲ್ಲ ಯಾಕೆ? (ಬಿ) ಯಾವುದೇ ಒಂದು ಕ್ಷಣಿಕವಾದ ಘಟನೆಗಿಂತಲೂ, ಪ·ರೌ·ಸಿ΄ಯ ಯಾ “ಸಾನ್ನಿಧ್ಯ”ವು ಹೆಚ್ಚು ದೀರ್ಘಕಾಲ ಇರುತ್ತದೆ ಎಂದು ಯಾವುದು ತೋರಿಸುತ್ತದೆ?
6 ವಾಸ್ತವಾಂಶವೇನಂದರೆ, ಕೇವಲ “ಹಿಂದಿರುಗು”ವುದಕ್ಕಿಂತ ಎಷ್ಟೋ ಹೆಚ್ಚಿನದ್ದನ್ನು ಕ್ರಿಸ್ತನು ಮಾಡುವನು. “ಬರೋಣ,” “ಆಗಮನ,” ಯಾ “ಪುನರಾಗಮನ,”ಗಳಂತೆ, ಆ ಶಬ್ದವು ಸಮಯದ ಸಂಕ್ಷಿಪ್ತ ಕ್ಷಣವೊಂದರ ಕೇವಲ ಏಕ ಘಟನೆಯನ್ನು ಸೂಚಿಸುತ್ತದೆ. ಆದರೆ ಯೇಸು ಮತ್ತು ಆತನ ಅನುಯಾಯಿಗಳು ಬಳಸಿದ ಗ್ರೀಕ್ ಶಬ್ದವು ಎಷ್ಟೋ ಅಧಿಕ ಅರ್ಥವನ್ನು ಕೊಡುತ್ತದೆ. ಪ·ರೌ·ಸಿ΄ಯ ಶಬ್ದದ ಅಕ್ಷರಶಃ ಅರ್ಥವು ಒಂದು “ಪಕ್ಕಪಕ್ಕದಲ್ಲಿಯೇ” ಯಾ “ಸಾನ್ನಿಧ್ಯ” ಎಂದಾಗಿದೆ. ಇದು ಕೇವಲ ಆಗಮನವನ್ನು ಮಾತ್ರವಲ್ಲದೆ, ಅದರ ತರುವಾಯದ ಸಾನ್ನಿಧ್ಯತೆಯನ್ನೂ ಸೇರಿಸುತ್ತದೆ—ರಾಜಮನೆತನದ ವ್ಯಕ್ತಿಯಿಂದ ಮಾಡಲ್ಪಡುವ ಒಂದು ಅಧಿಕೃತ ಭೇಟಿಯಲ್ಲಿರುವಂತೆ. ಈ ಸಾನ್ನಿಧ್ಯವು ಒಂದು ಕಣ್ಷಿಕ ಘಟನೆಯಲ್ಲ; ಅದೊಂದು ವಿಶೇಷ ಶಕೆ, ಸಮಯದ ಒಂದು ಗುರುತಿಸಲ್ಪಟ್ಟ ಅವಧಿಯಾಗಿರುತ್ತದೆ. ಮತ್ತಾಯ 24:37-39 ರಲ್ಲಿ ಯೇಸುವು “ಮನುಷ್ಯ ಕುಮಾರನ ಪ್ರತ್ಯಕ್ಷತೆಯು [ಪ·ರೌ·ಸಿ΄ಯ]” ಜಲಪ್ರಲಯದಲ್ಲಿ ಪರಾಕಾಷ್ಠೆಗೇರಿದ “ನೋಹನ ದಿನಗಳಿಗೆ” ಸಮಾನವಾಗಿರುವುದು ಎಂದು ಹೇಳಿದ್ದನು. ಜಲಪ್ರಲಯವು ಬಂದು ಆ ಭ್ರಷ್ಟ ಲೋಕ ವ್ಯವಸ್ಥೆಯನ್ನು ಅಳಿಸಿಬಿಡುವ ಮುಂಚೆ, ದಶಕಗಳ ತನಕ ನೋಹನು ನಾವೆಯನ್ನು ಕಟ್ಟುತ್ತಾ, ದುಷ್ಟರಿಗೆ ಎಚ್ಚರಿಕೆಯನ್ನೀಯುತ್ತಾ ಇದ್ದನು. ತದ್ರೀತಿಯಲ್ಲಿ, ಹಾಗಾದರೆ, ಕ್ರಿಸ್ತನ ಅದೃಶ್ಯ ಸಾನ್ನಿಧ್ಯವು ಸಹ ಮಹಾ ನಾಶನದಲ್ಲಿ ಪರಾಕಾಷ್ಠೆಗೇರುವ ಮೊದಲು ಕೆಲವು ದಶಕಗಳ ಅವಧಿಯ ತನಕ ಬಾಳುವದು.
7. (ಎ) ಪ·ರೌ·ಸಿ΄ಯ ಮಾನವ ನೇತ್ರಗಳಿಗೆ ಗೋಚರವಲ್ಲವೆಂದು ಯಾವುದು ರುಜುಪಡಿಸುತ್ತದೆ? (ಬಿ) “ಎಲ್ಲರ ಕಣ್ಣು”ಗಳಿಗೆ ಗೋಚರಿಸುವಂತೆ ಕ್ರಿಸ್ತನ ಹಿಂದಿರುಗುವಿಕೆಯನ್ನು ವರ್ಣಿಸುವ ಶಾಸ್ತ್ರವಚನಗಳು ಹೇಗೆ ಮತ್ತು ಯಾವಾಗ ನೆರವೇರಲಿವೆ?
7 ನಿಸ್ಸಂದೇಹವಾಗಿ, ಪ·ರೌ·ಸಿ΄ಯವು ಮಾನವ ನೇತ್ರಗಳಿಗೆ ಅಕ್ಷರಶಃ ದೃಶ್ಯಗೋಚರವಾಗಿರುವುದಿಲ್ಲ. ಅದು ಹಾಗಿರುತ್ತಿದ್ದರೆ, ನಾವು ನೋಡಲಿರುವಂತೆ, ಈ ಸಾನ್ನಿಧ್ಯವನ್ನು ವಿವೇಚಿಸಿಕೊಳ್ಳಲು ಅವರಿಗೆ ಸಹಾಯವಾಗಲು, ತನ್ನ ಹಿಂಬಾಲಕರಿಗೆ ಸೂಚನೆಯನ್ನು ಕೊಡಲು ಯೇಸು ಅಷ್ಟೊಂದು ಸಮಯವನ್ನು ಯಾಕೆ ವ್ಯಯಿಸುತ್ತಿದ್ದನು?a ಆದಾಗ್ಯೂ, ಸೈತಾನನ ಲೋಕ ವ್ಯವಸ್ಥೆಯನ್ನು ನಾಶಮಾಡಲು ಕ್ರಿಸ್ತನು ಬರುವಾಗ, ಅವನ ಸಾನ್ನಿಧ್ಯದ ವಾಸ್ತವಾಂಶವು ತಡೆಯಲಾಗದ ರೀತಿಯಲ್ಲಿ ಎಲ್ಲರಿಗೂ ವ್ಯಕ್ತವಾಗಲಿರುವುದು. ಆಗ “ಎಲ್ಲರ ಕಣ್ಣುಗಳು ಆತನನ್ನು ಕಾಣುವವು.” ಯೇಸುವಿನ ವಿರೋಧಕರು ಕೂಡ, ಕ್ರಿಸ್ತನ ಆಳಿಕೆ ನೈಜವಾಗಿದೆ ಎಂಬುದನ್ನು ಅವರನ್ನು ಎದೆಗುಂದಿಸುವ ರೀತಿಯಲ್ಲಿ, ವಿವೇಚಿಸಲು ಶಕ್ಯರಾಗುವರು.—ನೋಡಿ ಮತ್ತಾಯ 24:30; 2 ಥೆಸಲೊನೀಕ 2:8; ಪ್ರಕಟನೆ 1:5, 6.
ಅದು ಯಾವಾಗ ಆರಂಭಗೊಳ್ಳುವದು?
8. ಕ್ರಿಸ್ತನ ಸಾನ್ನಿಧ್ಯದ ಆರಂಭವನ್ನು ಯಾವ ಘಟನೆ ಗುರುತಿಸುತ್ತದೆ, ಮತ್ತು ಇದು ಎಲ್ಲಿ ಸಂಭವಿಸಿತು?
8 ಮೆಸ್ಸೀಯನೀಕ ಪ್ರವಾದನೆಗಳ ಮರುಕೊಳಿಸುವ ವಿಷಯವೊಂದನ್ನು ನೆರವೇರಿಸುವ ಘಟನೆಯೊಂದಿಗೆ ಮೆಸ್ಸೀಯನ ಸಾನ್ನಿಧ್ಯವು ಆರಂಭಗೊಳ್ಳುತ್ತದೆ. ಅವನು ಪರಲೋಕದಲ್ಲಿ ರಾಜನಾಗಿ ಪಟ್ಟಾಭಿಷೇಕಿಸಲ್ಪಟ್ಟಿದ್ದಾನೆ. (2 ಸಮುವೇಲ 7:12-16; ಯೆಶಾಯ 9:6, 7; ಯೆಹೆಜ್ಕೇಲ 21:26, 27) ಅವನ ರಾಜತ್ವದೊಂದಿಗೆ ಅವನ ಸಾನ್ನಿಧ್ಯವು ಜೋಡಿಸಲ್ಪಟ್ಟಿರುವುದು ಎಂದು ಸ್ವತಃ ಯೇಸು ತೋರಿಸಿದ್ದನು. ಹಲವಾರು ನಿದರ್ಶನಗಳಲ್ಲಿ, ತನ್ನ ಮನೆವಾರ್ತೆ ಮತ್ತು ಸೇವಕರುಗಳನ್ನು ಹಿಂದಕ್ಕೆ ಬಿಟ್ಟು, ಎಲ್ಲಿ ಅವನು “ರಾಜ್ಯಾಧಿಕಾರವನ್ನು” ಪಡೆಯುವನೋ ಆ “ದೂರದೇಶಕ್ಕೆ” ದೀರ್ಘಕಾಲದ ತನಕ ಹೋಗುವ ಒಬ್ಬ ಮನುಷ್ಯನಿಗೆ ತನ್ನನ್ನು ಸ್ವತಃ ಹೋಲಿಸಿ ಕೊಂಡಿದ್ದಾನೆ. ಅವನ ಪ·ರೌ·ಸಿ΄ಯವು ಯಾವಾಗ ಆರಂಭಗೊಳ್ಳಲಿರುವುದು ಎಂಬ ಅವನ ಅಪೊಸ್ತಲರ ಪ್ರಶ್ನೆಗೆ ಉತ್ತರದ ಒಂದು ಭಾಗವಾಗಿ ಅಂತಹ ಒಂದು ನಿದರ್ಶನವನ್ನು ಅವನು ಕೊಟ್ಟನು; “ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದದ್ದರಿಂದಲೂ” ಅವನು ಇನ್ನೊಂದನ್ನು ಕೊಟ್ಟನು. (ಲೂಕ 19:11, 12, 15; ಮತ್ತಾಯ 24:3; 25:14, 19) ಆದುದರಿಂದ ಮನುಷ್ಯನೋಪಾದಿ ಭೂಮಿಯ ಮೇಲೆ ಅವನಿದ್ದ ಸಮಯಾವಧಿಯಲ್ಲಿ, ಅವನ ಪಟ್ಟಾಭಿಷೇಕವು ಪರಲೋಕದ “ದೂರದೇಶ”ದಲ್ಲಿ ಸಂಭವಿಸಲು, ಇನ್ನು ಬಹಳ ಸಮಯ ದೂರದಲ್ಲಿತ್ತು. ಅದು ಯಾವಾಗ ಸಂಭವಿಸುವುದು?
9, 10. ಪರಲೋಕದಲ್ಲಿ ಕ್ರಿಸ್ತನು ಪ್ರಚಲಿತದಲ್ಲಿ ಆಳುತ್ತಾ ಇದ್ದಾನೆ ಎಂಬುದಕ್ಕೆ ಯಾವ ಪುರಾವೆ ಇದೆ, ಮತ್ತು ಅವನ ಆಳಿಕೆಯನ್ನು ಆತನು ಆರಂಭಿಸಿದ್ದು ಯಾವಾಗ?
9 ಯೇಸುವಿನ ಶಿಷ್ಯರು ಅವನಿಗೆ “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” ಎಂದು ಕೇಳಿದಾಗ, ಆ ಭವಿಷ್ಯತ್ತಿನ ಸಮಯದ ಸವಿವರವಾದ ವರ್ಣನೆಯೊಂದನ್ನು ಯೇಸುವು ಕೊಡುವುದರ ಮೂಲಕ ಪ್ರತಿವರ್ತಿಸಿದನು. (ಮತ್ತಾಯ, ಅಧ್ಯಾಯ 24; ಮಾರ್ಕ, ಅಧ್ಯಾಯ 13; ಲೂಕ, ಅಧ್ಯಾಯ 21; ಇದನ್ನೂ ನೋಡಿ 2 ತಿಮೊಥೆಯ 3:1-5; ಪ್ರಕಟನೆ, ಅಧ್ಯಾಯ 6.) ಈ ಸೂಚನೆಯು ಕ್ಲೇಶಮಯ ಯುಗದ ಒಂದು ಸವಿವರವಾದ ಚಿತ್ರಣವನ್ನು ಮಾಡುತ್ತದೆ. ಅಂತಾರಾಷ್ಟ್ರೀಯ ಯುದ್ಧಗಳು, ವರ್ಧಿಸುತ್ತಿರುವ ಪಾತಕ, ಅವನತಿಗೊಳ್ಳುತ್ತಿರುವ ಕುಟುಂಬ ಜೀವನ, ಸೋಂಕು ರೋಗಗಳು, ಬರಗಳು, ಮತ್ತು ಭೂಕಂಪಗಳು—ಸ್ಥಳೀಕವಾಗಿರುವ ಸಮಸ್ಯೆಗಳಲ್ಲ, ಬದಲಾಗಿ ಭೂಗೋಲ-ವ್ಯಾಪಕವಾಗಿರುವ ಸಂಕಟಗಳು—ಇವುಗಳಿಂದ ಆ ಸಮಯವು ಗುರುತಿಸಲ್ಪಡಲಿದೆ. ಇದು ಪರಿಚಿತವಾಗಿರುವಂತೆ ಧ್ವನಿಸುತ್ತದೋ? ಯೇಸುವಿನ ವರ್ಣನೆಗೆ 20 ನೆಯ ಶತಮಾನವು ಪರಿಪೂರ್ಣವಾಗಿ ಸರಿಹೊಂದುತ್ತದೆ ಎಂದು ಗತಿಸುವ ಪ್ರತಿ ದಿನವು ಸ್ಥಿರೀಕರಿಸುತ್ತದೆ.
10 ಇತಿಹಾಸಜ್ಞರು ಒಪ್ಪುವುದೇನಂದರೆ, ಮಾನವ ಇತಿಹಾಸದಲ್ಲಿ 1914 ಒಂದು ತಿರುಗುವ ಬಿಂದುವಾಗಿತ್ತು, ಆ ಸಂಧಿಕಾಲದ ವರ್ಷಾನಂತರ, ಈ ಸಮಸ್ಯೆಗಳಲ್ಲಿ ಹೆಚ್ಚಿನವು ನಿಯಂತ್ರಣ ಮೀರಿಹೋಗಲು ಆರಂಭಗೊಂಡು, ಭೌಗೋಳಿಕ ಮಟ್ಟದಲ್ಲಿ ಏರುತ್ತಿವೆ. ಹೌದು, ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಭೌತಿಕ ಲೋಕ ಘಟನೆಗಳೆಲ್ಲವು, ಅರಸನಾಗಿ ಯೇಸುವು ಪರಲೋಕದಲ್ಲಿ ಆಳಲು ಆರಂಭಿಸಿದ ವರುಷದೋಪಾದಿ, 1914ಕ್ಕೆ ಕೈತೋರಿಸುತ್ತವೆ. ಇನ್ನೂ ಹೆಚ್ಚಾಗಿ, ದಾನಿಯೇಲ ಅಧ್ಯಾಯ 4 ರಲ್ಲಿನ ಒಂದು ಪ್ರವಾದನೆಯು ಕಾಲಗಣನಶಾಸ್ತ್ರದ ಪುರಾವೆಯನ್ನು ಒದಗಿಸುತ್ತಾ, ಅದು ನಮ್ಮನ್ನು ಯೆಹೋವನ ನೇಮಿತ ಅರಸನು ತನ್ನಾಳಿಕೆಯನ್ನು ಆರಂಭಿಸುವ ಸಮಯವಾದ ಅದೇ 1914 ನೆಯ ವರುಷಕ್ಕೆ ನಡಿಸುತ್ತದೆ.b
ಕ್ಲೇಶಗಳ ಸಮಯ ಯಾಕೆ?
11, 12. (ಎ) ಈಗಲೇ ಪರಲೋಕದಲ್ಲಿ ಕ್ರಿಸ್ತನು ಆಳುತ್ತಾನೆ ಎಂದು ನಂಬಲು ಕೆಲವರಿಗೆ ಕಷ್ಟವಾಗಿದೆ ಯಾಕೆ? (ಬಿ) ಯೇಸು ರಾಜನಾಗಿ ಪಟ್ಟಾಭಿಷೇಕ ಹೊಂದಿದ ನಂತರ ಏನು ಸಂಭವಿಸಿತೋ ಅದನ್ನು ನಾವು ಹೇಗೆ ಉದಾಹರಿಸಬಹುದು?
11 ಆದರೂ, ಕೆಲವರು ವಿಸ್ಮಿತರಾಗುತ್ತಾರೆ, ‘ಮೆಸ್ಸೀಯನು ಪರಲೋಕದಿಂದ ಆಳುತ್ತಾನಾದರೆ, ಲೋಕವು ಯಾಕೆ ಅಷ್ಟೊಂದು ತೊಂದರೆಗೀಡಾಗಿದೆ? ಅವನ ಆಳಿಕೆಯು ಫಲಕಾರಿಯಾಗಿಲ್ಲವೇ?’ ಒಂದು ನಿದರ್ಶನವು ಸಹಾಯಿಸಬಹುದು. ದುಷ್ಟ ಅಧ್ಯಕ್ಷನೊಬ್ಬನಿಂದ ದೇಶವೊಂದು ನಡಿಸಲ್ಪಡುತ್ತದೆ. ದೇಶದ ಪ್ರತಿಯೊಂದು ಮೂಲೆಯೊಳಗೂ ವ್ಯಾಪಕವಾದ ದುಷ್ಟ ವ್ಯವಸ್ಥೆಯ ನಿಯಂತ್ರಣ ಪ್ರಭಾವವನ್ನು ಅವನು ಸ್ಥಾಪಿಸಿರುತ್ತಾನೆ. ಆದರೆ ಒಂದು ಚುನಾವಣೆ ನಡೆಯುತ್ತದೆ; ಒಬ್ಬ ಸತ್ಪುರುಷನು ಜಯಗಳಿಸುತ್ತಾನೆ. ಈಗ ಏನು ಸಂಭವಿಸುತ್ತದೆ? ಕೆಲವೊಂದು ಪ್ರಜಾಪ್ರಭುತ್ವ ದೇಶಗಳ ವಿದ್ಯಮಾನಗಳಂತೆ, ಹೊಸ ಅಧ್ಯಕ್ಷನು ಪ್ರತಿಷ್ಠಾಪಿಸಲ್ಪಡುವ ಮೊದಲು, ಕೆಲವು ತಿಂಗಳುಗಳ ಬದಲಾವಣೆಯ ಅವಧಿಯು ಆರಂಭಗೊಳ್ಳುತ್ತದೆ. ಅಂಥ ಒಂದು ಸಮಯಾವಧಿಯಲ್ಲಿ ಈ ಇಬ್ಬರು ಪುರುಷರು ಹೇಗೆ ವರ್ತಿಸುವರು? ದೇಶದಲ್ಲೆಲ್ಲಾ ಅವನ ಹಿಂದಿನವನು ಎಸಗಿದ ಎಲ್ಲಾ ದುಷ್ಟತ್ವಗಳನ್ನು ಸತ್ಪುರುಷನು ಕೂಡಲೆ ಆಕ್ರಮಿಸಿ, ಅವೆಲ್ಲವನ್ನು ಕೆಡವಿಹಾಕುವನೋ? ಇದಕ್ಕೆ ಬದಲಾಗಿ, ಅವನು ಮೊದಲು ತನ್ನ ರಾಜಧಾನಿಯ ಮೇಲೆ ಏಕಾಗ್ರತೆಯನ್ನಿಟ್ಟು, ಹೊಸ ಮಂತ್ರಿಮಂಡಲವನ್ನು ರಚಿಸಿ, ಮಾಜಿ ಅಧ್ಯಕ್ಷನ ದಗಾಕೋರ ಗೆಳೆಯರಿಗೆ ಮತ್ತು ಅನುಚರರಿಗೆ ಸೂಚನಪತ್ರಗಳನ್ನು ಜ್ಯಾರಿಗೊಳಿಸುವನಲ್ಲವೇ? ಆ ರೀತಿಯಲ್ಲಿ, ಅವನು ಪೂರ್ಣಾಧಿಕಾರಕ್ಕೆ ಬಂದಾಗ, ಅವನು ಅಧಿಕಾರದ ಒಂದು ಶುದ್ಧ, ಕಾರ್ಯಸಾಧಕ ಆಸನದಿಂದ ನಿರ್ವಹಿಸಶಕ್ತನಾಗಿದ್ದಾನೆ. ಭ್ರಷ್ಟ ಅಧ್ಯಕ್ಷನಾದರೋ, ತಾನು ಎಲ್ಲಾ ಅಧಿಕಾರವನ್ನು ಕಳಗೊಳ್ಳುವ ಮೊದಲು, ದೇಶದಿಂದ ಎಲ್ಲಾ ಅನ್ಯಾಯಾರ್ಜಿತ ಸಂಪಾದನೆಗಳನ್ನು ತನ್ನಿಂದಾದಷ್ಟು ಕಸಿದುಕೊಳ್ಳಲು ಉಳಿದಿರುವ ಕೊಂಚ ಸಮಯವನ್ನು ಪೂರ್ಣವಾಗಿ ಬಳಸಿಕೊಳ್ಳದೆ ಇರುವನೇ?
12 ಕಾರ್ಯತಃ, ಕ್ರಿಸ್ತನ ಪ·ರೌ·ಸಿ΄ಯದೊಂದಿಗೂ ಹಾಗೆಯೇ ಇರುತ್ತದೆ. ಪ್ರಕಟನೆ 12:7-12 ತೋರಿಸುವುದೇನಂದರೆ, ಪರಲೋಕದಲ್ಲಿ ಕ್ರಿಸ್ತನನ್ನು ಅರಸನಾಗಿ ಮಾಡಿದಾಗ, ಅವನು ಮೊದಲು ಸೈತಾನನನ್ನು ಮತ್ತು ದೆವ್ವಗಳನ್ನು ಪರಲೋಕದಿಂದ ಹೊರಗೆ ದೊಬ್ಬಿದನು, ಈ ರೀತಿಯಲ್ಲಿ ಅವನ ಸರಕಾರದ ನೆಲೆಯನ್ನು ಶುದ್ಧೀಕರಿಸಿದನು. ದೀರ್ಘ ಕಾಲದಿಂದ ಕಾದುನಿಂತಿದ್ದ ಈ ಸೋಲನ್ನು ಅನುಭವಿಸಿದ್ದರಿಂದ, ಭೂಮಿಯ ಮೇಲೆ ತನ್ನ ಪೂರ್ಣಾಧಿಕಾರವನ್ನು ಕ್ರಿಸ್ತನು ಚಲಾಯಿಸುವ ಮೊದಲು ಇರುವ “ಕೊಂಚ ಸಮಯಾವಧಿ”ಯಲ್ಲಿ (NW) ಸೈತಾನನು ಹೇಗೆ ವರ್ತಿಸುತ್ತಾನೆ? ಆ ಭ್ರಷ್ಟ ಅಧ್ಯಕ್ಷನಂತೆ, ಈ ಹಳೇ ವ್ಯವಸ್ಥೆಯಿಂದ ತನ್ನಿಂದ ಸಾಧ್ಯವಿರುವ ಪ್ರತಿಯೊಂದನ್ನು ಪಡೆದುಕೊಳ್ಳಲು ಅವನು ಪ್ರಯತ್ನಿಸುತ್ತಾನೆ. ಅವನು ಹಣದ ಹಿಂದೆ ಇಲ್ಲ; ಅವನು ಮಾನವ ಜೀವಗಳನ್ನು ಬಯಸುತ್ತಾನೆ. ಅವನಿಗೆ ಶಕ್ಯವಾಗುವಷ್ಟು ಅಧಿಕ ಜನರನ್ನು ಯೆಹೋವನಿಂದ ಮತ್ತು ಆಳುತ್ತಿರುವ ಅವನ ಅರಸನಿಂದ ಪ್ರತ್ಯೇಕಿಸಲು ಅವನು ಆಶಿಸುತ್ತಾನೆ.
13. ಕ್ರಿಸ್ತನ ಆಳಿಕೆಯ ಆರಂಭವು ಇಲ್ಲಿ ಭೂಮಿಯ ಮೇಲೆ ತೊಂದರೆಯುಕ್ತ ಸಮಯವಾಗಿರುವುದು ಎಂದು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ?
13 ಆದುದರಿಂದ, ಮೆಸ್ಸೀಯನಾಳಿಕೆಯ ಆರಂಭವು “ಭೂಮಿಗೆ ದುರ್ಗತಿ”ಯ ಸಮಯವೆಂಬದರಲ್ಲಿ ಆಶ್ಚರ್ಯವೇನೂ ಇಲ್ಲ. (ಪ್ರಕಟನೆ 12:12) ತದ್ರೀತಿಯಲ್ಲಿ, ಮೆಸ್ಸೀಯನು ತನ್ನಾಳಿಕೆಯನ್ನು ‘ಅವನ ವೈರಿಗಳ ಮಧ್ಯದಲ್ಲಿ’ ಆರಂಭಿಸುತ್ತಾನೆ ಎಂದು ಕೀರ್ತನೆ 110:1, 2, 6 ತೋರಿಸುತ್ತದೆ. ಸಮಯಾನಂತರವೇ, ಅವನು ಪೂರ್ಣವಾಗಿ “ಜನಾಂಗಗಳ”ನ್ನು, ಸೈತಾನನ ಭ್ರಷ್ಟ ವ್ಯವಸ್ಥೆಯ ಪ್ರತಿಯೊಂದು ರೂಪದೊಂದಿಗೆ ನಜ್ಜುಗುಜ್ಜುಮಾಡಿ, ವಿಸ್ಮೃತಿಗೊಳಿಸುತ್ತಾನೆ!
ಮೆಸ್ಸೀಯನು ಭೂಮಿಯನ್ನಾಳುವಾಗ
14. ಸೈತಾನನ ವಿಷಯಗಳ ದುಷ್ಟ ವ್ಯವಸ್ಥೆಯನ್ನು ಅವನು ನಾಶಮಾಡಿದ ನಂತರ, ಮೆಸ್ಸೀಯನು ಏನನ್ನು ಮಾಡಲು ಶಕ್ತನಾಗುವನು?
14 ಸೈತಾನನ ವ್ಯವಸ್ಥೆಯನ್ನು ಮತ್ತು ಅದನ್ನು ಬೆಂಬಲಿಸುವವರೆಲ್ಲರನ್ನು ಅವನು ನಾಶಮಾಡಿದ ನಂತರ, ಮೆಸ್ಸೀಯನೀಕ ರಾಜ, ಯೇಸು ಕ್ರಿಸ್ತನು, ಕಟ್ಟಕಡೆಗೆ ಅವನ ಸಹಸ್ರ ವರ್ಷಗಳ ಆಳಿಕೆಯನ್ನು ವರ್ಣಿಸುವ ಅದ್ಭುತಕರ ಬೈಬಲ್ ಪ್ರವಾದನೆಗಳನ್ನು ನೆರವೇರಿಸುವ ಸ್ಥಾನದಲ್ಲಿರುವನು. ಮೆಸ್ಸೀಯನು ಎಂತಹ ವಿಧದ ಅಧಿಪತಿಯಾಗಲಿರುವನು ಎಂದು ಕಾಣಲು ಯೆಶಾಯ 11:1-10 ನಮಗೆ ಸಹಾಯ ಮಾಡುತ್ತದೆ. ಅವನಲ್ಲಿ “ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ . . . ಅಂತು ಯೆಹೋವನ ಆತ್ಮವೇ . . . ” ಇರುವುದು ಎಂದು ವಚನ 2 ನಮಗೆ ಹೇಳುತ್ತದೆ.
15. ಮೆಸ್ಸೀಯನೀಕ ಆಳಿಕೆಯಲ್ಲಿ ‘ಪರಾಕ್ರಮದ ಆತ್ಮ’ ಯಾವ ಅರ್ಥದಲ್ಲಿರುವುದು?
15 ಯೇಸುವಿನ ಆಳಿಕೆಯಲ್ಲಿ ‘ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ’ ಯಾವ ಅರ್ಥದಲ್ಲಿರುವುದೆಂಬುದನ್ನು ಪರಿಗಣಿಸಿರಿ. ಅವನು ಭೂಮಿಯ ಮೇಲೆ ಇದ್ದಾಗ, ಯೆಹೋವನ ಪರಾಕ್ರಮದ ಒಂದು ಪ್ರಮಾಣವು ಅವನಿಗಿತ್ತು, ಅದು ಅದ್ಭುತಗಳನ್ನು ಮಾಡಲು ಅವನಿಗೆ ಸಾಧ್ಯಮಾಡಿತು. ಮತ್ತು “ನನಗೆ ಮನಸ್ಸುಂಟು” ಎಂದು ಹೇಳುವ ಮೂಲಕ, ಜನರಿಗೆ ಸಹಾಯ ಮಾಡುವ ಹೃದಯಪೂರಕ ಅಪೇಕ್ಷೆಯನ್ನು ಅವನು ತೋರಿಸಿದನು. (ಮತ್ತಾಯ 8:3) ಆ ದಿವಸಗಳ ಅವನ ಅದ್ಭುತಗಳು, ಪರಲೋಕದಿಂದ ಅವನು ಆಳುವಾಗ, ಅವನೇನು ಮಾಡಲಿದ್ದಾನೆ ಎಂಬುದರ ಕೇವಲ ಪೂರ್ವಭಾವಿ ಕ್ಷಣಿಕಪ್ರಭೆಯಾಗಿತ್ತು. ಯೇಸುವು ಒಂದು ಭೌಗೋಲಿಕ ಪ್ರಮಾಣದಲ್ಲಿ ಅದ್ಭುತಗಳನ್ನು ನಡಿಸಲಿರುವನು! ರೋಗಿಗಳು, ಕುರುಡರು, ಕಿವುಡರು, ಅಂಗವಿಕಲರು, ಮತ್ತು ಕುಂಟರು, ಎಲ್ಲಾ ಕಾಲಕ್ಕೂ ವಾಸಿಮಾಡಲ್ಪಡುವರು. (ಯೆಶಾಯ 35:5, 6) ಹೇರಳವಾದ ಆಹಾರ, ನ್ಯಾಯೋಚಿತವಾಗಿ ವಿತರಿಸಲ್ಪಡುವುದರಿಂದ ಹಸಿವು ಎಂದೆಂದಿಗೂ ಅಂತ್ಯಗೊಳ್ಳುವುದು. (ಕೀರ್ತನೆ 72:16) ದೇವರು ಜ್ಞಾಪಿಸಿಕೊಳ್ಳಲು ಇಷ್ಟೈಸುವ, ಸಮಾಧಿಗಳಲ್ಲಿರುವ ಅಗಣಿತ ಲಕ್ಷಾಂತರ ಮಂದಿಗಳ ಕುರಿತಾಗಿ ಏನು? ಅವರನ್ನು ಪುನರುತ್ಥಾನಗೊಳಿಸಿ, ಪ್ರಮೋದವನದಲ್ಲಿ ಸದಾ ಕಾಲಕ್ಕೂ ಜೀವಿಸಲು ಪ್ರತಿಯೊಬ್ಬರಿಗೂ ಅವಕಾಶವನ್ನು ಕೊಡುವ ಶಕ್ತಿ, ಯೇಸುವಿನ “ಪರಾಕ್ರಮ” ದಲ್ಲಿ ಒಳಗೂಡಿರುವುದು! (ಯೋಹಾನ 5:28, 29) ಆದರೂ, ಇವೆಲ್ಲಾ ಪರಾಕ್ರಮದೊಂದಿಗೆ ಸಹ, ಮೆಸ್ಸೀಯನೀಕ ರಾಜನು ಯಾವಾಗಲೂ ಪರಮ ವಿನೀತನಾಗಿರುವನು. “ಯೆಹೋವನ ಭಯದಲ್ಲಿ . . . ಆನಂದವನ್ನು” ಅವನು ಕಂಡುಕೊಳ್ಳುತ್ತಾನೆ.—ಯೆಶಾಯ 11:3, NW.
16. ಮೆಸ್ಸೀಯನೀಕ ಅರಸನು ಯಾವ ತೆರದ ನ್ಯಾಯಾಧೀಶನಾಗಿರುವನು, ಮತ್ತು ಮಾನವ ನ್ಯಾಯಾಧೀಶರುಗಳ ದಾಖಲೆಗಳೊಂದಿಗೆ ಅದು ಹೇಗೆ ವಿಪರ್ಯಸ್ತವಾಗಿದೆ?
16 ಈ ಅರಸನು ಪರಿಪೂರ್ಣ ನ್ಯಾಯಾಧಿಪತಿ ಸಹ ಆಗಿರುವನು. ಅವನು “ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ.” ಗತ ಯಾ ಪ್ರಚಲಿತ ಸಮಯದ ಯಾವ ಮಾನವ ನ್ಯಾಯಾಧೀಶನನ್ನು ಆ ರೀತಿಯಲ್ಲಿ ವರ್ಣಿಸಸಾಧ್ಯವಿದೆ? ಅತಿ ಯುಕ್ತಾಯುಕ್ತ ಪರಿಜ್ಞಾನವುಳ್ಳ ಮನುಷ್ಯನೊಬ್ಬನು ಸಹ, ಅವನಿಗಿರಬಹುದಾದ ಯಾವುದೇ ವಿವೇಕ ಯಾ ವಿವೇಚನೆಯನ್ನು ಬಳಸಿ, ಅವನೇನನ್ನು ನೋಡುತ್ತಾನೊ, ಮತ್ತು ಆಲಿಸುತ್ತಾನೊ, ಅದರ ಮೇಲೆ ಮಾತ್ರ ತೀರ್ಮಾನಿಸಬಲ್ಲನು. ಆದಕಾರಣ, ಈ ಹಳೇ ಲೋಕದ ನ್ಯಾಯಾಧೀಶರು ಮತ್ತು ನ್ಯಾಯದರ್ಶಿಗಳು ಜಾಣತನದ ತರ್ಕಾಭಾಸದಿಂದ, ನ್ಯಾಯಸ್ಥಾನದ ವಕ್ರತನಗಳಿಂದ, ಯಾ ಪರಸ್ಪರ ವಿರೋಧವಾಗಿರುವ ಪುರಾವೆಯಿಂದ ಪ್ರಭಾವಿಸಲ್ಪಡಬಹುದು ಯಾ ಗಲಿಬಿಲಿಗೊಳ್ಳಲ್ಪಡಬಹುದು. ಪರಿಣಾಮಕಾರಿ ಪ್ರತಿವಾದ ಮಾಡಲು ಕೆಲವೊಮ್ಮೆ ಕೇವಲ ಶ್ರೀಮಂತರಿಗೆ ಮತ್ತು ಶಕ್ತಿಯುಳ್ಳವರಿಗೆ ಮಾತ್ರ ಸಾಮರ್ಥ್ಯವಿದ್ದು, ವಾಸ್ತವತೆಯಲ್ಲಿ ನ್ಯಾಯವನ್ನು ಅವರು ಖರೀದಿಸುತ್ತಾರೆ. ಮೆಸ್ಸೀಯನೀಕ ನ್ಯಾಯಾಧೀಶನ ಕೆಳಗೆ ಹಾಗಿರುವುದಿಲ್ಲ! ಅವನು ಹೃದಯಗಳನ್ನು ಓದುತ್ತಾನೆ. ಅವನ ಗಮನದಿಂದ ಪಾರಾಗುವಂತಹದ್ದು ಏನೂ ಇರುವುದಿಲ್ಲ. ಪ್ರೀತಿ ಮತ್ತು ಕರುಣೆಯಿಂದ ಹದಗೊಳಿಸಲ್ಪಟ್ಟ ನ್ಯಾಯವು, ಮಾರಾಟಕ್ಕೆ ಇರುವುದಿಲ್ಲ. ಅದು ಯಾವಾಗಲೂ ಸಲುವಳಿಯಲ್ಲಿರುವುದು.—ಯೆಶಾಯ 11:3-5.
ಅವನ ಆಳಿಕ್ವೆಯು ನಿಮ್ಮನ್ನು ಪ್ರಭಾವಿಸುವ ವಿಧ
17, 18. (ಎ) ಯೆಶಾಯ 11:6-9 ರಲ್ಲಿ ಮಾನವ ಕುಲದ ಭವಿಷ್ಯತ್ತಿನ ಯಾವ ಉಜ್ವಲ ಚಿತ್ರವನ್ನು ಬಣ್ಣಿಸಲಾಗಿದೆ? (ಬಿ) ಮೊದಲಾಗಿ ಈ ಪ್ರವಾದನೆಯು ಯಾರಿಗೆ ಅನ್ವಯವಾಗುತ್ತದೆ, ಮತ್ತು ಹಾಗೆ ಏಕೆ? (ಸಿ) ಈ ಪ್ರವಾದನೆಗೆ ಒಂದು ಅಕ್ಷರಶಃ ನೆರವೇರಿಕೆ ಇರುವುದು ಹೇಗೆ?
17 ಅರ್ಥವತ್ತಾಗಿಯೇ, ಅದರ ಪ್ರಜೆಗಳ ಮೇಲೆ ಮೆಸ್ಸೀಯನ ಆಳಿಕೆಯು ಗಾಢವಾದ ಪ್ರಭಾವ ಉಳ್ಳದ್ದಾಗಿದೆ. ಅದು ಜನರನ್ನು ಪರಿವರ್ತಿಸುತ್ತದೆ. ಅಂತಹ ಪರಿವರ್ತನೆ ಎಷ್ಟೊಂದು ವಿಸ್ತಾರವಾಗಿರುತ್ತದೆ ಎಂದು ಯೆಶಾಯ 11:6-9 ತೋರಿಸುತ್ತದೆ. ಅಪಾಯಕಾರಿ, ಹಿಂಸ್ರಕ ಪ್ರಾಣಿಗಳು—ಕರಡಿಗಳು, ತೋಳಗಳು, ಚಿರತೆಗಳು, ಸಿಂಹಗಳು, ನಾಗರಹಾವುಗಳು—ನಿರುಪದ್ರವಕಾರಿ ಸಾಕುಪ್ರಾಣಿಗಳೊಂದಿಗೆ ಮತ್ತು ಮಕ್ಕಳೊಂದಿಗೆ ಸಹ ಇರುವ ಒಂದು ಮನತಾಕುವ ಚಿತ್ರವನ್ನು ಈ ಪ್ರವಾದನೆಯು ಬಣ್ಣಿಸುತ್ತದೆ. ಆದರೆ ಈ ಕೊಳ್ಳೆಹೊಡೆಯುವ ಪ್ರಾಣಿಗಳು ಯಾವುದೇ ಬೆದರಿಕೆಯನ್ನೊಡ್ಡುವುದಿಲ್ಲ! ಯಾಕೆ? ವಚನ 9 ಉತ್ತರಿಸುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ; ಯಾರೂ ಹಾಳು ಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”
18 ನಿಜವಾಗಿಯೂ, “ಯೆಹೋವನ ಜ್ಞಾನವು” ನೈಜ ಪ್ರಾಣಿಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದು; ಆದಕಾರಣ ಈ ವಚನಗಳು ಮೊದಲನೆಯದಾಗಿ ಜನರಿಗೆ ಅನ್ವಯವಾಗತಕ್ಕದ್ದು. ಮೆಸ್ಸೀಯನ ಆಳಿಕೆಯು ಯೆಹೋವನ ಮತ್ತು ಆತನ ಮಾರ್ಗಗಳ ಕುರಿತು ಜನರಿಗೆ ಕಲಿಸುವ, ಎಲ್ಲಾ ಸಹ ಮಾನವರನ್ನು ಪ್ರೀತಿ, ಗೌರವ, ಮತ್ತು ಘನತೆಯಿಂದ ಉಪಚರಿಸುವಂತೆ ಕಲಿಸುವ ಭೌಗೋಲಿಕ ಶಿಕ್ಷಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊರುತ್ತದೆ. ಬರುವ ಪ್ರಮೋದವನದಲ್ಲಿ, ಮೆಸ್ಸೀಯನು ಮಾನವ ಕುಲವನ್ನು ದೈಹಿಕ ಮತ್ತು ನೈತಿಕ ಪರಿಪೂರ್ಣತೆಗೆ ಅದ್ಭುತವಾಗಿ ಏರಿಸುವನು. ಅಪರಿಪೂರ್ಣ ಮಾನವ ಸ್ವಭಾವವನ್ನು ಕೆಡಿಸುವ ಹಿಂಸ್ರಕ, ಮೃಗೀಯ ಸ್ವಭಾವಗಳು ಹೋಗುವುವು. ಅಕ್ಷರಶಃ ಅರ್ಥದಲ್ಲಿ ಸಹ, ಮಾನವ ಕುಲವು ಮೃಗಗಳೊಂದಿಗೆ—ಕೊನೆಗೂ—ಶಾಂತಿಯಲ್ಲಿರುವುದು!—ಹೋಲಿಸಿ ಆದಿಕಾಂಡ 1:28.
19. ಈ ಕಡೇ ದಿವಸಗಳಲ್ಲಿ ಜನರ ಜೀವಿತಗಳ ಮೇಲೆ ಮೆಸ್ಸೀಯನ ಆಳಿಕೆಯು ಹೇಗೆ ಪ್ರಭಾವ ಬೀರುತ್ತದೆ?
19 ಆದರೂ ನೆನಪಿಡಿರಿ, ಮೆಸ್ಸೀಯನು ಈಗ ರಾಜ್ಯಭಾರ ನಡಿಸುತ್ತಾ ಇದ್ದಾನೆ. ಈಗಲೂ ಕೂಡ, ಅವನ ರಾಜ್ಯದ ಪ್ರಜೆಗಳು, ಸಮಾಧಾನಕರವಾಗಿ ಒಟ್ಟಿಗೆ ಜೀವಿಸಲು ಕಲಿಯುತ್ತಾ ಇದ್ದು, ಯೆಶಾಯ 11:6-9ನ್ನು ಒಂದರ್ಥದಲ್ಲಿ ನೆರವೇರಿಸುತ್ತಾ ಇದ್ದಾರೆ. ಇನ್ನೂ ಹೆಚ್ಚಾಗಿ, ಬಹುತೇಕ 80 ವರುಷಗಳಿಂದ ಯೇಸು ಯೆಶಾಯ 11:10ರ ಮಾತುಗಳನ್ನು ನೆರವೇರಿಸುತ್ತಾ ಇದ್ದಾನೆ: “ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಮಸ್ಥಾನವು ವೈಭವವುಳ್ಳದ್ದಾಗಿರುವದು.” ಪ್ರತಿಯೊಂದು ಜನಾಂಗದ ಜನರು ಮೆಸ್ಸೀಯನೆಡೆಗೆ ತಿರುಗುತ್ತಾ ಇದ್ದಾರೆ. ಯಾಕೆ? ಯಾಕಂದರೆ ಅವನು ಆಳಲು ಆರಂಭಿಸಿದಂದಿನಿಂದ, “ಧ್ವಜಪ್ರಾಯನಾಗಿ ನಿಂತಿರು”ತ್ತಾನೆ. ಮೇಲೆ ವರ್ಣಿಸಲ್ಪಟ್ಟ ಅಪಾರವಾದ ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಅವನ ಸಾನ್ನಿಧ್ಯವನ್ನು ಎಲ್ಲರಿಗೂ ಅವನು ಪ್ರಕಟಪಡಿಸುತ್ತಾ ಇದ್ದಾನೆ. ವಾಸ್ತವದಲ್ಲಿ, ಈ ಹಳೇ ವ್ಯವಸ್ಥೆಯ ಅಂತ್ಯದ ಮೊದಲು ಅವನ ಸಾನ್ನಿಧ್ಯದ ಎದ್ದುತೋರುವ ಚಿಹ್ನೆಯು ಭೌಗೋಲಿಕ ಸಾರುವ ಕಾರ್ಯವೆಂದು ಯೇಸುವು ಮುಂತಿಳಿಸಿದನು.—ಮತ್ತಾಯ 24:14.
20. ಮೆಸ್ಸೀಯನ ಆಳಿಕೆಯ ಎಲ್ಲಾ ಪ್ರಜೆಗಳು ಯಾವ ಮನೋಭಾವವನ್ನು ತ್ಯಜಿಸಬೇಕು, ಮತ್ತು ಯಾಕೆ?
20 ಆದುದರಿಂದ ರಾಜ್ಯಾಧಿಕಾರದೊಂದಿಗೆ ಕ್ರಿಸ್ತನ ಸಾನ್ನಿಧ್ಯವು ಬಹುದೂರದ, ಒಂದು ಕಲ್ಪನಾಶಾಸ್ತ್ರದ ವಿಷಯವಲ್ಲ, ದೇವತಾಶಾಸ್ತ್ರಜ್ಞರ ನಡುವಿನ ಬುದ್ಧಿಸಾಮರ್ಥ್ಯದ ಕೇವಲ ಒಂದು ವಿಚಾರ ಕೂಡ ಅಲ್ಲ. ಅದು ಆಗುವದು ಎಂದು ಯೆಶಾಯನು ಮುನ್ನುಡಿದಂತೆ, ಅವನ ಆಳಿಕೆಯು ಪರಿಣಾಮ ಬೀರುತ್ತದೆ ಮತ್ತು ಇಲ್ಲಿ ಭೂಮಿಯ ಮೇಲೆ ಜೀವಿತಗಳನ್ನು ಬದಲಾಯಿಸುತ್ತದೆ. ಈ ಭ್ರಷ್ಟ ಲೋಕ ವ್ಯವಸ್ಥೆಯಿಂದ ತನ್ನ ರಾಜ್ಯಕ್ಕಾಗಿ ಲಕ್ಷಾಂತರ ಪ್ರಜೆಗಳನ್ನು ಯೇಸುವು ಸೆಳೆದಿದ್ದಾನೆ. ನೀವು ಅಂತಹ ಒಬ್ಬ ಪ್ರಜೆಯಾಗಿದ್ದಿರೋ? ಹಾಗಿದ್ದಲ್ಲಿ, ಆ ನಮ್ಮ ಅಧಿಪತಿಯು ಅರ್ಹನಾಗಿರುವ ಎಲ್ಲಾ ಉತ್ಸುಕತೆ ಮತ್ತು ಆನಂದದಿಂದ ಸೇವಿಸಿರಿ! ಲೋಕದ ಸಿನಿಕತನದ “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು?” ಎಂಬ ಕೂಗುವಿಕೆಯೊಂದಿಗೆ ಸೇರಲು, ಎಲ್ಲಾ ರೀತಿಯಲ್ಲೂ ಆಯಾಸಗೊಳ್ಳಲು ತೀರಾ ಸುಲಭವೆಂಬದು ಗ್ರಾಹ್ಯ. (2 ಪೇತ್ರ 3:4) ಆದರೆ ಯೇಸು ತಾನೇ ಹೇಳಿದಂತೆ, “ಆದರೆ ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:13.
21. ಮೆಸ್ಸೀಯನೀಕ ನಿರೀಕ್ಷೆಯ ನಮ್ಮ ಗಣ್ಯತೆಯನ್ನು ನಾವೆಲ್ಲರೂ ಹೇಗೆ ಹೆಚ್ಚಿಸಸಾಧ್ಯವಿದೆ?
21 ಗತಿಸುವ ಪ್ರತಿಯೊಂದು ದಿನವೂ, ಇಡೀ ಲೋಕಕ್ಕೆ ತನ್ನ ಸಾನ್ನಿಧ್ಯವನ್ನು ವ್ಯಕ್ತಪಡಿಸುವಂತೆ ಯೆಹೋವನು ತನ್ನ ಮಗನನ್ನು ಮಾರ್ಗದರ್ಶಿಸುವ ಆ ಮಹಾ ದಿನದ ಹತ್ತಿರಕ್ಕೆ ನಮ್ಮನ್ನು ಸೆಳೆಯುತ್ತದೆ. ಆ ದಿನದಲ್ಲಿ ನಿಮ್ಮ ನಿರೀಕ್ಷೆಯು ಮಸಕಾಗಲು ಎಂದೂ ಬಿಡಬೇಡಿರಿ. ಯೇಸುವಿನ ಮೇಸ್ಸೀಯತ್ವದ ಮೇಲೆ ಮತ್ತು ಆಳುವ ರಾಜನೋಪಾದಿ ಅವನ ಗುಣಗಳ ಮೇಲೆ ಧ್ಯಾನಿಸಿರಿ. ಬೈಬಲಿನಲ್ಲಿ ವಿನ್ಯಾಸಿಸಲ್ಪಟ್ಟ ಮಹಾ ಮೆಸ್ಸೀಯನೀಕ ನಿರೀಕ್ಷೆಯ ಕರ್ತೃವೂ, ಸರ್ವನಿಯಂತ್ರಕನೂ ಆದ ಯೆಹೋವ ದೇವರ ಕುರಿತು ಸಹ, ಆಳವಾಗಿ ಯೋಚಿಸಿರಿ. ನೀವು ಇದನ್ನು ಮಾಡುತ್ತಿದ್ದ ಹಾಗೆಯೇ, ಅವನು ಹೀಗೆ ಬರೆದಾಗ, ಅಪೊಸ್ತಲ ಪೌಲನು ಹೇಗೆ ಭಾವಿಸಿದನೋ ಅಂತೆಯೇ, ನೀವು ನಿಸ್ಸಂದೇಹವಾಗಿ ಹೆಚ್ಚೆಚ್ಚು ಭಾವಿಸುವಿರಿ: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!”—ರೋಮಾಪುರ 11:33. (w92 10⁄1)
[ಅಧ್ಯಯನ ಪ್ರಶ್ನೆಗಳು]
a ದೇವತಾಶಾಸ್ತ್ರಜ್ಞ ಆರ್. ಗಾವಿಟ್, 1864 ರಷ್ಟು ಹಿಂದಕ್ಕೆ, ಅದನ್ನು ಈ ರೀತಿಯಲ್ಲಿ ನಮೂದಿಸಿದ್ದಾನೆ: “ಇದು ನನಗೆ ಅತಿ ನಿರ್ಣಾಯಕವಾಗಿ ತೋರುತ್ತದೆ. ಸಾನ್ನಿಧ್ಯದ ಒಂದು ಸೂಚನೆಯನ್ನು ಕೊಡುವುದು, ಅದು ಗುಪ್ತವಾಗಿದೆ ಎಂಬದನ್ನು ತೋರಿಸುತ್ತದೆ. ನಾವೇನನ್ನು ನೋಡುತ್ತೇವೊ ಅದರ ಸಾನ್ನಿಧ್ಯವನ್ನು ನಮಗೆ ತಿಳಿಯಪಡಿಸಲು ಯಾವುದೇ ಸಂಕೇತ ನಮಗೆ ಬೇಕಿಲ್ಲ.”
b ವಿವರಗಳಿಗಾಗಿ, “ನಿನ್ನ ರಾಜ್ಯವು ಬರಲಿ,” ಪುಟಗಳು 133-9 ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ಕ್ರಿಸ್ತನು ಯಾವ ರೀತಿಯಲ್ಲಿ ಹಿಂದಿರುಗುತ್ತಾನೆ?
▫ ಕ್ರಿಸ್ತನ ಪ·ರೌ·ಸಿ΄ಯ ಅದೃಶ್ಯವೂ, ಗಮನಾರ್ಹ ಸಮಯಾವಧಿಯ ತನಕ ಇರುವುದೂ ಎಂದು ನಾವು ಹೇಗೆ ಬಲ್ಲೆವು?
▫ ಕ್ರಿಸ್ತನ ಸಾನ್ನಿಧ್ಯವು ಯಾವಾಗ ಆರಂಭಗೊಳ್ಳುತ್ತದೆ, ಮತ್ತು ನಾವಿದನ್ನು ಹೇಗೆ ತಿಳಿಯುತ್ತೇವೆ?
▫ ಮೆಸ್ಸೀಯನು ಯಾವ ತೆರದ ಸ್ವರ್ಗೀಯ ಅಧಿಪತಿಯಾಗಿದ್ದಾನೆ?
▫ ಅದರ ಪ್ರಜೆಗಳ ಜೀವಿತಗಳ ಮೇಲೆ ಕ್ರಿಸ್ತನ ಆಡಳಿತವು ಯಾವ ವಿಧಗಳಲ್ಲಿ ಪರಿಣಾಮ ಬೀರುತ್ತದೆ?
[ಪುಟ 15 ರಲ್ಲಿರುವ ಚಿತ್ರ]
ಯೇಸುವಿನ ಹಿಂದಿರುಗುವಿಕೆಯ ನಿರೀಕ್ಷೆಯು ಅವನ ನಂಬಿಗಸ್ತ ಅಪೊಸ್ತಲರುಗಳಿಗೆ ಬಹಳಷ್ಟು ಅರ್ಥವುಳ್ಳದ್ದಾಗಿತ್ತು
[ಪುಟ 17 ರಲ್ಲಿರುವ ಚಿತ್ರ]
ಪರಲೋಕದಿಂದ ಆಳುತ್ತಾ, ಯೇಸುವು ಭೌಗೋಲಿಕ ಪ್ರಮಾಣದಲ್ಲಿ ಅದ್ಭುತಗಳನ್ನು ನಡಿಸುವನು
[ಕೃಪೆ]
Earth: Based on NASA photo