ಅಧ್ಯಾಯ 19
ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ
1, 2. ಯೆಹೋವನ ಸೃಷ್ಟಿಗೆ ಹಾನಿಯಾಗುವಂತಾದದ್ದು ಹೇಗೆ?
ಒಬ್ಬ ಮಹಾ ಕಲಾಕಾರನು ಒಂದು ಸೊಗಸಾದ ವರ್ಣಚಿತ್ರವನ್ನು ಈಗತಾನೆ ಬರೆದು ಮುಗಿಸಿದ್ದಾನೆಂದು ಊಹಿಸಿ. ಯೋಗ್ಯವಾಗಿಯೆ ಅವನು ಅದನ್ನು ಅತಿ ಉತ್ತಮ—ಒಂದು ನಾಯಕ ಕೃತಿ—ಎಂದೆಣಿಸುತ್ತಾನೆ! ಆದರೆ ರಾತ್ರಿ ಹಗಲಾಗುವುದರೊಳಗೆ ಒಬ್ಬ ಈರ್ಷ್ಯೆಯ ಪ್ರತಿಸ್ಪರ್ಧಿಯು ಅದನ್ನು ರೂಪುಗೆಡಿಸುತ್ತಾನೆ. ಇದು ಆ ಕಲಾಕಾರನಿಗೆ ಮಹಾ ವೇದನೆಯನ್ನುಂಟುಮಾಡುತ್ತದೆಂಬುದು ಗ್ರಾಹ್ಯ. ಆ ವಿನಾಶಕನು ಬಂಧಿಸಲ್ಪಡುವುದನ್ನು ನೋಡಲು ಅವನೆಷ್ಟು ತವಕಿಸುತ್ತಾನೆ! ಮತ್ತು ತನ್ನ ಕೃತಿಯು ಅದರ ಮೊದಲಿನ ರಮ್ಯತೆಗೆ ಮತ್ತೆ ತರಲ್ಪಡುವಂತೆ ಆ ಕಲಾಕಾರನು ಎಷ್ಟು ಹಾತೊರೆಯುತ್ತಾನೆಂದು ನೀವು ಭಾವಿಸಬಲ್ಲಿರಿ.
2 ಆ ಕಲಾಕಾರನಂತೆ, ಭೂಮಿಯನ್ನು ತಯಾರಿಸಿದ್ದರಲ್ಲಿ ಮತ್ತು ಮಾನವ ಕುಲವನ್ನು ಅದರಲ್ಲಿ ಇಟ್ಟದ್ದರಲ್ಲಿ ಯೆಹೋವನು ಒಂದು ನಾಯಕ ಕೃತಿಯನ್ನು ಸೃಷ್ಟಿಸಿದನು. ಪುರುಷನನ್ನೂ ಸ್ತ್ರೀಯನ್ನೂ ಸೃಷ್ಟಿಸಿದ ಮೇಲೆ, ಆತನು ತನ್ನ ಸಮಸ್ತ ಐಹಿಕ ಕೆಲಸವನ್ನು ಕಂಡು ಅದು “ಬಹು ಒಳ್ಳೇದಾಗಿತ್ತು” ಎಂದು ಹೇಳಿದನು. (ಆದಿಕಾಂಡ 1:31) ಆದಾಮ ಮತ್ತು ಹವ್ವರು ದೇವರ ಸ್ವಂತ ಮಕ್ಕಳಾಗಿದ್ದರು ಮತ್ತು ಆತನು ಅವರನ್ನು ಪ್ರೀತಿಸಿದನು. ಆತನು ಅವರಿಗಾಗಿ ಒಂದು ಸಂತೋಷದ, ಶೋಭಾಯಮಾನವಾದ ಭವಿಷ್ಯತ್ತನ್ನು ಕಲ್ಪಿಸಿದನು. ನಿಜ, ಸೈತಾನನು ಅವರನ್ನು ದಂಗೆಗೆ ನಡಿಸಿದನು, ಆದರೆ ದೇವರ ಅದ್ಭುತಕರವಾದ ಸೃಷ್ಟಿಯು ದುರಸ್ತು ಮಾಡಲಾಗದ ರೀತಿಯಲ್ಲಿ ಹಾನಿಗೊಳ್ಳಲಿಲ್ಲ.—ಆದಿಕಾಂಡ 3:23, 24; 6:11, 12.
3. “ವಾಸ್ತವವಾದ ಜೀವ” ಎಂದರೇನು?
3 ದೇವರು ಸಂಗತಿಗಳನ್ನು ಸರಿಪಡಿಸಲು ದೃಢನಿಶ್ಚಯ ಮಾಡಿದ್ದಾನೆ. ತಾನು ಮೂಲದಲ್ಲಿ ಉದ್ದೇಶಿಸಿದ ವಿಧದಲ್ಲೇ ನಾವು ಜೀವಿಸುವುದನ್ನು ನೋಡಲು ಆತನು ಅಕ್ಕರೆಯಿಂದ ಬಯಸುತ್ತಾನೆ. ನಮ್ಮ ಅಲ್ಪಕಾಲಿಕ ಮತ್ತು ಕ್ಲೇಶಮಯ ಅಸ್ತಿತ್ವವು “ವಾಸ್ತವವಾದ ಜೀವ” ವಲ್ಲ, ಏಕೆಂದರೆ ಇದು ಯೆಹೋವನ ಮನಸ್ಸಿನಲ್ಲಿದ್ದುದಕ್ಕಿಂತ ತೀರ ಕೆಳಮಟ್ಟದ್ದಾಗಿದೆ. ದೇವರು ನಮಗಾಗಿ ಬಯಸುವ “ವಾಸ್ತವವಾದ ಜೀವ”ವು ಪರಿಪೂರ್ಣ ಪರಿಸ್ಥಿತಿಗಳ ಕೆಳಗೆ “ನಿತ್ಯಜೀವ”ವೇ.—1 ತಿಮೊಥೆಯ 6:12, 19.
4, 5. (ಎ) ಪ್ರಮೋದವನದ ನಿರೀಕ್ಷೆಯು ಹೇಗೆ ಕೈಗೂಡಿಸಲ್ಪಡುವುದು? (ಬಿ) ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯ ಕುರಿತು ನಾವೇಕೆ ಯೋಚಿಸಬೇಕು?
4 ದೇವರ ಜ್ಞಾನವು ಯೆಹೋವನ ಮುಂದೆ ಜವಾಬ್ದಾರಿಯನ್ನು ತರುತ್ತದೆ. (ಯಾಕೋಬ 4:17) ಆದರೆ ನೀವು ಆ ಜ್ಞಾನವನ್ನು ಅನ್ವಯಿಸಿಕೊಂಡು ನಿತ್ಯಜೀವಕ್ಕಾಗಿ ಕೈ ಚಾಚುವಲ್ಲಿ ನೀವು ಅನುಭವಿಸಲಿರುವ ಆಶೀರ್ವಾದಗಳ ಕುರಿತು ಆಲೋಚಿಸಿರಿ. ತನ್ನ ವಾಕ್ಯವಾದ ಬೈಬಲಿನಲ್ಲಿ, ಈಗ ಬಲು ಹತ್ತಿರವಾಗಿರುವ ಪ್ರಮೋದವನ ಭೂಮಿಯಲ್ಲಿ ಆ ಜೀವನವು ಹೇಗಿರುವುದೆಂಬುದರ ಒಂದು ಸೊಗಸಾದ ಚಿತ್ರವನ್ನು ಯೆಹೋವ ದೇವರು ಬರೆದಿದ್ದಾನೆ. ಯೆಹೋವನ ಜನರೋಪಾದಿ, ನಾವು ದೇವರನ್ನು ಪ್ರತಿಫಲದ ಬಯಕೆಯಿಂದಾಗಿ ಮಾತ್ರ ಸೇವಿಸುವುದಿಲ್ಲವೆಂಬುದು ನಿಶ್ಚಯ. ನಾವು ದೇವರನ್ನು ಪ್ರೀತಿಸುವ ಕಾರಣ ಆತನನ್ನು ಸೇವಿಸುತ್ತೇವೆ. (ಮಾರ್ಕ 12:29, 30) ಅಲ್ಲದೆ, ಯೆಹೋವನನ್ನು ಸೇವಿಸುವ ಮೂಲಕ ನಾವು ಜೀವವನ್ನು ಪಡೆದುಕೊಳ್ಳುವುದಿಲ್ಲ. ನಿತ್ಯಜೀವವು ದೇವರ ಒಂದು ಕೊಡುಗೆಯಾಗಿದೆ. (ರೋಮಾಪುರ 6:23) ಇಂತಹ ಒಂದು ಜೀವನದ ವಿಷಯದಲ್ಲಿ ಮನನ ಮಾಡುವುದು ನಮಗೆ ಪ್ರಯೋಜನಕರವಾಗಿರುವುದು, ಏಕೆಂದರೆ ಪ್ರಮೋದವನದ ನಿರೀಕ್ಷೆಯು ಯೆಹೋವನು ಯಾವ ವಿಧದ ದೇವರು—ಪ್ರೀತಿಸುವ, “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವ ದೇವರು—ಎಂಬುದನ್ನು ನಮಗೆ ಜ್ಞಾಪಕ ಹುಟ್ಟಿಸುತ್ತದೆ. (ಇಬ್ರಿಯ 11:6) ನಮ್ಮ ಹೃದ್ಮನಗಳಲ್ಲಿ ಪ್ರಕಾಶಮಾನವಾಗಿ ಉರಿಯುವ ಒಂದು ನಿರೀಕ್ಷೆಯು, ನಾವು ಸೈತಾನನ ಲೋಕದ ಕಷ್ಟ ದೆಸೆಗಳನ್ನು ತಾಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು.—ಯೆರೆಮೀಯ 23:20.
5 ನಾವೀಗ ಭಾವೀ ಭೂಪ್ರಮೋದವನದಲ್ಲಿ ನಿತ್ಯಜೀವದ ಬೈಬಲ್ ಆಧರಿತ ನಿರೀಕ್ಷೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ. ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ ಜೀವನವು ಹೇಗಿರುವುದು?
ಅರ್ಮಗೆದೋನಿನ ಅನಂತರ—ಒಂದು ಪ್ರಮೋದವನ ಭೂಮಿ
6. ಅರ್ಮಗೆದೋನ್ ಎಂದರೇನು, ಮತ್ತು ಅದು ಮಾನವ ಕುಲಕ್ಕೆ ಏನನ್ನು ಅರ್ಥೈಸುವುದು?
6 ಈ ಹಿಂದೆ ತೋರಿಸಿರುವಂತೆ, ಯೆಹೋವ ದೇವರು ಬೇಗನೆ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯನ್ನು ನಾಶಮಾಡುವನು. ಬೈಬಲು ಹರ್ಮಗೆದೋನ್ ಅಥವಾ ಅರ್ಮಗೆದೋನ್ ಎಂದು ಯಾವುದನ್ನು ಕರೆಯುತ್ತದೋ ಅದನ್ನು ಲೋಕವು ಶೀಘ್ರವಾಗಿ ಸಮೀಪಿಸುತ್ತಿದೆ. ಆ ಪದವು ಕೆಲವರನ್ನು, ಅದು ಯುದ್ಧಮಾಡುತ್ತಿರುವ ರಾಷ್ಟ್ರಗಳು ಆಗಿಸುವ ನ್ಯೂಕ್ಲಿಯರ್ ಸರ್ವನಾಶದ ಕುರಿತು ಯೋಚಿಸುವಂತೆ ಮಾಡಬಹುದು, ಆದರೆ ಅರ್ಮಗೆದೋನ್ ಅಂತಹದೇನೂ ಅಲ್ಲ. ಪ್ರಕಟನೆ 16:14-16 ತೋರಿಸುವಂತೆ, ಅರ್ಮಗೆದೋನ್ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ವಾಗಿದೆ. ಅದು, “ಭೂಲೋಕದಲ್ಲೆಲ್ಲೆಲ್ಲಿಯೂ ಇರುವ ರಾಜರು” ಅಥವಾ ರಾಷ್ಟ್ರಗಳು ಒಳಗೂಡಿರುವ ಯುದ್ಧ. ಯೆಹೋವ ದೇವರ ಪುತ್ರನಾದ ನಿಯಮಿತ ಅರಸನು ಬೇಗನೆ ಯುದ್ಧಕ್ಕೆ ಸವಾರಿ ಮಾಡುವನು. ಪರಿಣಾಮವು ತೀರ ಖಾತ್ರಿ. ದೇವರ ರಾಜ್ಯವನ್ನು ವಿರೋಧಿಸುವ ಮತ್ತು ಸೈತಾನನ ದುಷ್ಟ ವ್ಯವಸ್ಥೆಯ ಭಾಗವಾಗಿರುವ ಎಲ್ಲರು ತೆಗೆದುಹಾಕಲ್ಪಡುವರು. ಯೆಹೋವನಿಗೆ ನಿಷ್ಠರಾಗಿರುವವರು ಮಾತ್ರ ಬದುಕಿ ಉಳಿಯುವರು.—ಪ್ರಕಟನೆ 7:9, 14; 19:11-21.
7. ಕ್ರಿಸ್ತನ ಸಾವಿರ ವರ್ಷಗಳ ಆಳಿಕೆಯಲ್ಲಿ ಸೈತಾನನೂ ಅವನ ದೆವ್ವಗಳೂ ಎಲ್ಲಿರುವರು ಮತ್ತು ಇದು ಮಾನವ ಕುಲಕ್ಕೆ ಹೇಗೆ ಪ್ರಯೋಜನವನ್ನು ತರುವುದು?
7 ಆ ಪ್ರಳಯವನ್ನು ನೀವು ಪಾರಾಗಿದ್ದೀರೆಂದು ಭಾವಿಸಿರಿ. ದೇವರ ವಾಗ್ದಾನಿತ ನೂತನ ಲೋಕದಲ್ಲಿ ಜೀವನವು ಹೇಗಿರುವುದು? (2 ಪೇತ್ರ 3:13) ನಾವು ಊಹಿಸುವ ಅಗತ್ಯವಿಲ್ಲ, ಏಕೆಂದರೆ ಬೈಬಲು ನಮಗೆ ಹೇಳುತ್ತದೆ, ಮತ್ತು ಅದು ಏನು ಹೇಳುತ್ತದೊ ಅದು ರೋಮಾಂಚಕವಾಗಿದೆ. ಸೈತಾನನೂ ಅವನ ದೆವ್ವಗಳೂ ನಿಷ್ಕ್ರಿಯಗೊಳಿಸಲ್ಪಟ್ಟು, ಯೇಸು ಕ್ರಿಸ್ತನ ಸಾವಿರ ವರ್ಷಗಳ ಆಳಿಕೆಯಲ್ಲಿ ಕಾರ್ಯಾಭಾವವಿರುವ ಅಧೋಲೋಕದಲ್ಲಿ ಬಂಧಿಸಲ್ಪಡುವರೆಂದು ನಾವು ತಿಳಿಯುತ್ತೇವೆ. ಇನ್ನುಮುಂದೆ ಆ ದುಷ್ಟ, ಹಗೆ ಸಾಧನೆಯ ಜೀವಿಗಳು ಗೋಪ್ಯವಾಗಿ ಹೊಂಚುಹಾಕುತ್ತಾ, ಕ್ಲೇಶಗಳನ್ನು ಉತ್ತೇಜಿಸುತ್ತಾ, ದೇವರ ವಿರುದ್ಧ ಅಪನಂಬಿಗಸ್ತಿಕೆಯ ಕೃತ್ಯಗಳನ್ನು ಮಾಡುವಂತೆ ನಮ್ಮನ್ನು ಉದ್ರೇಕಿಸವು. ಎಂತಹ ಉಪಶಮನ!—ಪ್ರಕಟನೆ 20:1-3.
8, 9. ಹೊಸ ಲೋಕದಲ್ಲಿ ಬಾಧೆಗಳು, ಕಾಯಿಲೆ ಮತ್ತು ವಾರ್ಧಕ್ಯಕ್ಕೆ ಏನಾಗುವುದು?
8 ಸಕಾಲದಲ್ಲಿ, ಸಕಲ ವಿಧವಾದ ರೋಗವು ಇಲ್ಲದೆ ಹೋಗುವುದು. (ಯೆಶಾಯ 33:24) ಕುಂಟರು ಆಗ ಸ್ವಸ್ಥವಾದ, ಬಲಾಢ್ಯವಾದ ಕಾಲುಗಳಲ್ಲಿ ನಿಂತು, ನಡೆದು, ಓಡಿ, ನಲಿದಾಡುವರು. ತಮ್ಮ ಮೌನ ಲೋಕದಲ್ಲಿ ವರ್ಷಗಳ ಕಾಲ ಜೀವಿಸಿದ ಬಳಿಕ, ಕಿವುಡರು ತಮ್ಮ ಸುತ್ತಲೂ ಹರ್ಷಕರ ಧ್ವನಿಗಳನ್ನು ಕೇಳುವರು. ಶೋಭಾಯಮಾನವಾದ ವರ್ಣಗಳ ಮತ್ತು ರೂಪಗಳ ಲೋಕವು ತಮ್ಮ ಕಣ್ಣುಗಳ ಮುಂದೆ ಆಕಾರವನ್ನು ಪಡೆದುಕೊಳ್ಳುವಾಗ ಕುರುಡರು ಭಯಭಕ್ತಿಯಿಂದ ಮೇಲುಸಿರು ಸೆಳೆಯುವರು. (ಯೆಶಾಯ 35:5, 6) ಕಟ್ಟಕಡೆಗೆ, ಅವರು ತಮ್ಮ ಪ್ರಿಯರ ಮುಖಗಳನ್ನು ನೋಡುವರು! ಆಗ ಪ್ರಾಯಶಃ ಅವರ ದೃಷ್ಟಿಯು ಒಂದು ಕ್ಷಣಕ್ಕೆ ಆನಂದ ಬಾಷ್ಪಗಳಿಂದಾಗಿ ಮಬ್ಬಾಗುವುದು.
9 ಸ್ವಲ್ಪ ಯೋಚಿಸಿ! ಇನ್ನು ಕನ್ನಡಕಗಳಿಲ್ಲ, ಕಂಕುಳು ಕೋಲುಗಳಾಗಲಿ ಬೆತ್ತಗಳಾಗಲಿ ಇಲ್ಲ, ಇನ್ನು ಔಷಧಗಳು, ದಂತ ಚಿಕಿತ್ಸಾಲಯಗಳು ಅಥವಾ ಆಸ್ಪತ್ರೆಗಳಿಲ್ಲ! ಇನ್ನುಮುಂದೆ ಮನೋವಿಕಾರದ ಕಾಯಿಲೆಯಾಗಲಿ ಖಿನ್ನತೆಯಾಗಲಿ ಜನರಿಂದ ಸಂತೋಷವನ್ನು ಕಸಿದುಕೊಳ್ಳವು. ಯಾವ ಶೈಶವವೂ ರೋಗದಿಂದ ಬಾಧಿಸಲ್ಪಡದು. ವಾರ್ಧಕ್ಯದ ಧ್ವಂಸನವು ವಿಪರ್ಯಸ್ತಗೊಳ್ಳುವುದು. (ಯೋಬ 33:25) ನಾವು ಹೆಚ್ಚು ಆರೋಗ್ಯವುಳ್ಳವರೂ ಹೆಚ್ಚು ಬಲಾಢ್ಯರೂ ಆಗುವೆವು. ಪ್ರತಿ ಬೆಳಗ್ಗೆ ನಾವು ರಾತ್ರಿಯ ಚೈತನ್ಯದಾಯಕ ನಿದ್ದೆಯಿಂದ ನವೀಕರಿಸಲ್ಪಟ್ಟ ಶಕ್ತಿಯೊಡಗೂಡಿ ಎದ್ದು ಉತ್ಸಾಹದಿಂದ ತುಂಬಿ, ಕಂಪನಶೀಲ ಜೀವನ ಮತ್ತು ತೃಪ್ತಿಕರವಾದ ಕೆಲಸದ ಹೊಸ ದಿನಕ್ಕಾಗಿ ಆತುರದಿಂದಿರುವೆವು.
10. ಅರ್ಮಗೆದೋನನ್ನು ಪಾರಾಗುವವರು ಯಾವ ಕೆಲಸ ನೇಮಕವನ್ನು ವಹಿಸುವರು?
10 ಅರ್ಮಗೆದೋನನ್ನು ಪಾರಾಗುವವರಿಗೆ ಮಾಡಲು ಆನಂದಕರವಾದ ಕೆಲಸವು ಹೇರಳವಾಗಿರುವುದು. ಅವರು ಭೂಮಿಯನ್ನು ಒಂದು ಪ್ರಮೋದವನವಾಗಿ ರೂಪಾಂತರಿಸುವರು. ಮಲಿನಗೊಂಡಿದ್ದ ಹಳೆಯ ವ್ಯವಸ್ಥೆಯ ಯಾವುದೇ ಸುಳಿವುಗಳು ತೊಲಗಿಸಲ್ಪಡುವುವು. ಉದ್ಯಾನವನಗಳು ಮತ್ತು ತೋಟಗಳು ಹೊಲಸುಕೇರಿ ಮತ್ತು ಹಾಳುಮಾಡಲ್ಪಟ್ಟ ಪ್ರದೇಶಗಳಲ್ಲಿ ಎದ್ದುಬರುವುವು. ಎಲ್ಲರೂ ಹಿತಕರವಾದ, ಆಹ್ಲಾದಕರವಾದ ವಸತಿಗಳಲ್ಲಿ ಆನಂದಿಸುವರು. (ಯೆಶಾಯ 65:21) ಸಮಯ ದಾಟಿದಂತೆ, ಭೂಮಿಯ ಆ ಪ್ರಮೋದವನ್ಯ ಭಾಗಗಳು, ಇಡೀ ಭೂಗೋಳವು ಸೃಷ್ಟಿಕರ್ತನು ಏದೆನ್ ತೋಟದಲ್ಲಿ ಇಟ್ಟಿದ್ದ ಸೌಂದರ್ಯದ ಮಟ್ಟವನ್ನು ಮುಟ್ಟುವ ತನಕ ಬೆಳೆದು ಲೀನವಾಗುವುವು. ಆ ಪುನಸ್ಸ್ಥಾಪನೆಯ ಕೆಲಸದಲ್ಲಿ ಭಾಗಿಗಳಾಗುವುದು ಎಷ್ಟು ತೃಪ್ತಿಕರವಾಗಿರುವುದು!
11. ಭೂಮಿಯ ಪರಿಸರ ಮತ್ತು ಪ್ರಾಣಿ ಜೀವದೊಂದಿಗೆ ಮಾನವ ಕುಲದ ಭಾವೀ ಸಂಬಂಧವು ಏನಾಗಿರುವುದು?
11 ಪರಿಸರಕ್ಕೆ ಹಾನಿಯಾಗದಂತೆ, ಇದೆಲ್ಲವೂ ದೈವಿಕ ಮಾರ್ಗದರ್ಶನದ ಕೆಳಗೆ ಮಾಡಲ್ಪಡುವುದು. ಮಾನವರು ಮೃಗಗಳೊಂದಿಗೆ ಶಾಂತಿಯಿಂದಿರುವರು. ಅವುಗಳನ್ನು ನಿಷ್ಕಾರಣವಾಗಿ ಕೊಲ್ಲುವ ಬದಲಿಗೆ, ಮನುಷ್ಯನು ಭೂಮಿಯ ಮೇಲೆ ಜವಾಬ್ದಾರಿಯ ಪಾರುಪತ್ಯವನ್ನು ಪುನಃ ವಹಿಸಿಕೊಂಡು, ಅವುಗಳ ಉತ್ತಮ ಜಾಗ್ರತೆಯನ್ನು ವಹಿಸುವನು. ತೋಳಗಳು, ಕುರಿಮರಿಗಳು, ಸಿಂಹಗಳು, ಕರುಗಳು ಕೂಡಿ ಮೇಯುವುದನ್ನು ಚಿತ್ರಿಸಿಕೊಳ್ಳಿರಿ—ಮತ್ತು ಸಾಕು ಮೃಗಗಳು ಪೂರ್ತಿ ಸುರಕ್ಷಿತವಾಗಿವೆ. ಒಂದು ಚಿಕ್ಕ ಮಗುವಿಗೂ ಕಾಡು ಮೃಗಗಳಿಂದ ಭಯಪಡುವ ಯಾವ ಸಂಗತಿ ಇರುವುದೂ ಇಲ್ಲ, ಆ ನೂತನ ಲೋಕದ ಪ್ರಶಾಂತತೆಯು ಕ್ರೂರರಾದ ಉಗ್ರ ಜನರಿಂದ ಭಂಗಗೊಳ್ಳುವುದೂ ಇಲ್ಲ. (ಯೆಶಾಯ 11:6-8) ಅದು ಎಂತಹ ಶಾಂತಿಭರಿತ ನೂತನ ಲೋಕವಾಗಿರುವುದು!
ಮಾನವ ಕುಲ ರೂಪಾಂತರಗೊಳ್ಳುವುದು
12. ಯೆಶಾಯ 11:9 ಇಂದು ಹೇಗೆ ನೆರವೇರುತ್ತಿದೆ, ಮತ್ತು ಪ್ರಮೋದವನದಲ್ಲಿ ಅದು ಹೇಗೆ ನೆರವೇರಲಿದೆ?
12 ಭೂಮಿಯಲ್ಲೆಲ್ಲ ಏಕೆ ಯಾವ ಹಾನಿಯೂ ಮಾಡಲ್ಪಡುವುದಿಲ್ಲವೆಂದು ಯೆಶಾಯ 11:9 ನಮಗೆ ಹೇಳುತ್ತದೆ. ಅದು ಹೇಳುವುದು: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಇದು ಜನರಿಗೆ ಅನ್ವಯಿಸುತ್ತದೆ ಏಕೆಂದರೆ ಮೃಗಗಳು ಹುಟ್ಟರಿವಿನಿಂದ ಆಳಲ್ಪಡುವುದರಿಂದ ಅವು “ಯೆಹೋವನ ಜ್ಞಾನ” ವನ್ನು ತೆಗೆದುಕೊಂಡು ಬದಲಾವಣೆಗಳನ್ನು ಮಾಡಲಾರವು. ಆದರೆ ನಮ್ಮ ಸೃಷ್ಟಿಕರ್ತನ ಜ್ಞಾನವು ಜನರನ್ನು ನಿಶ್ಚಯ ಬದಲಾಯಿಸುತ್ತದೆ. ನಿಮ್ಮ ಜೀವನದಲ್ಲಿ ದೇವರ ಜ್ಞಾನವನ್ನು ಅನ್ವಯಿಸಿದ್ದರ ಫಲವಾಗಿ ನೀವೇ ಕೆಲವು ಬದಲಾವಣೆಗಳನ್ನು ಈಗಾಗಲೆ ನಿಸ್ಸಂದೇಹವಾಗಿ ಮಾಡಿದ್ದೀರಿ. ಲಕ್ಷಾಂತರ ಜನರು ಹಾಗೆ ಮಾಡಿದ್ದಾರೆ. ಆದಕಾರಣ, ಯೆಹೋವನನ್ನು ಸೇವಿಸುವವರಲ್ಲಿ ಈ ಪ್ರವಾದನೆಯು ಆಗಲೇ ನೆರವೇರಲು ತೊಡಗಿದೆ. ಆದರೂ, ಜನರು ಲೋಕಾದ್ಯಂತ ಯಾವುದೇ ಮೃಗೀಯ ಅಥವಾ ಹಿಂಸಾತ್ಮಕ ಗುಣಗಳನ್ನು ಕಳಚಿಹಾಕಿ ಸದಾಕಾಲಕ್ಕೆ ಶಾಂತಚಿತ್ತರಾಗುವ ಒಂದು ಸಮಯವನ್ನೂ ಇದು ಸೂಚಿಸುತ್ತದೆ.
13. ಭೂಮಿಯ ಮೇಲೆ ಯಾವ ಶೈಕ್ಷಣಿಕ ಕಾರ್ಯಕ್ರಮವು ನಡೆಯುವುದು?
13 ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ ಅದೆಷ್ಟು ಸೊಗಸಾಗಿರುವುದು! ಅರಸನಾದ ಯೇಸು ಕ್ರಿಸ್ತನ ಮತ್ತು ಅವನ 1,44,000 ಮಂದಿ ಜೊತೆಪ್ರಭುಗಳ ನಿರ್ದೇಶನದ ಕೆಳಗೆ ವ್ಯಾಪಕವಾದ ಶೈಕ್ಷಣಿಕ ಕಾರ್ಯಕ್ರಮ ಅಲ್ಲಿರುವುದು. ಹೊಸ “ಪುಸ್ತಕಗಳು” [“ಸುರುಳಿಗಳು,” NW] ಆಗ ಬಳಕೆಗೆ ಬರುವುವು. ಭೂನಿವಾಸಿಗಳಿಗೆ ಶಿಕ್ಷಣಕೊಡಲು ಆಧಾರವಾಗಿ ಉಪಯೋಗಿಸಲ್ಪಡುವ ದೇವರ ಲಿಖಿತ ಉಪದೇಶಗಳು ಇವಾಗಿವೆಯೆಂಬುದು ವ್ಯಕ್ತ. (ಪ್ರಕಟನೆ 20:12) ಮಾನವ ಕುಲವು ಯುದ್ಧವನ್ನಲ್ಲ, ಶಾಂತಿಯನ್ನು ಕಲಿಯುವುದು. ಸಕಲ ನಾಶಕಾರಕ ಆಯುಧಗಳು ಸದಾಕಾಲಕ್ಕೂ ಇಲ್ಲದೆ ಹೋಗುವುವು. (ಕೀರ್ತನೆ 46:9) ನೂತನ ಲೋಕದ ನಿವಾಸಿಗಳಿಗೆ, ಅವರು ತಮ್ಮ ಜೊತೆ ಮಾನವರನ್ನು ಪ್ರೀತಿ, ಸನ್ಮಾನ ಮತ್ತು ಗೌರವದಿಂದ ಉಪಚರಿಸುವಂತೆ ಕಲಿಸಲಾಗುವುದು.
14. ಮಾನವ ಕುಲವು ಒಂದು ಐಕ್ಯವಾದ ಕುಟುಂಬವಾಗಿರುವಾಗ ಲೋಕವು ಹೇಗೆ ಭಿನ್ನವಾಗಿರುವುದು?
14 ಮಾನವ ಕುಲವು ಒಂದು ಐಕ್ಯ ಕುಟುಂಬವಾಗಿ ಪರಿಣಮಿಸುವುದು. ಐಕ್ಯ ಮತ್ತು ಸಹೋದರತ್ವಕ್ಕೆ ಯಾವ ತಡೆಗಳೂ ಇರವು. (ಕೀರ್ತನೆ 133:1-3) ಕಳ್ಳರು ಬರದಂತೆ ಮಾಡಲು ಯಾವನ ಮನೆಗೂ ಬೀಗ ಹಾಕಬೇಕೆಂದಿರದು. ಪ್ರತಿಯೊಂದು ಹೃದಯದಲ್ಲಿ, ಪ್ರತಿಯೊಂದು ಮನೆಯಲ್ಲಿ, ಭೂಮಿಯ ಪ್ರತಿಯೊಂದು ಭಾಗದಲ್ಲಿ ಶಾಂತಿಯು ಆಳುವುದು.—ಮೀಕ 4:4.
ಹರ್ಷಕರವಾದ ಪುನರುತ್ಥಾನ
15. ಭೂಮಿಯಲ್ಲಿ ಯಾವ ಎರಡು ಗುಂಪುಗಳು ಪುನರುತ್ಥಾನ ಹೊಂದುವುವು?
15 ಆ ಸಾವಿರ ವರುಷಗಳಲ್ಲಿ ಪುನರುತ್ಥಾನವು ನಡೆಯುವುದು. ಯಾರು ದೇವರ ಪವಿತ್ರಾತ್ಮ, ಅಥವಾ ಕಾರ್ಯಕಾರಿ ಶಕ್ತಿಯ ವಿರುದ್ಧ, ಅದರ ವ್ಯಕ್ತಪಡಿಸುವಿಕೆ ಅಥವಾ ನಡೆಸುವಿಕೆಗೆ ಬೇಕುಬೇಕೆಂದು ಪಶ್ಚಾತ್ತಾಪರಹಿತವಾಗಿ ವ್ಯತಿರಿಕ್ತವಾಗಿ ವರ್ತಿಸಿದರೋ, ಅವರು ಪುನರುತ್ಥಾನ ಹೊಂದರು. (ಮತ್ತಾಯ 23:15, 33; ಇಬ್ರಿಯ 6:4-6) ಆ ವಿಧದಲ್ಲಿ ಯಾರು ಪಾಪಮಾಡಿದರೆಂದು ದೇವರು ನಿರ್ಣಯಿಸುವನು ಎಂಬುದು ನಿಶ್ಚಯ. ಆದರೆ ಎರಡು ಪ್ರತ್ಯೇಕ ಗುಂಪುಗಳಿಗೆ ಪುನರುತ್ಥಾನವಾಗುವುದು—“ನೀತಿವಂತರಿಗೂ ಅನೀತಿವಂತರಿಗೂ.” (ಅ. ಕೃತ್ಯಗಳು 24:15) ಯೋಗ್ಯವಾದ ಕ್ರಮವು ಅಲ್ಲಿರುವ ಕಾರಣ, ಭೂಮಿಯ ಮೇಲಿನ ಜೀವನಕ್ಕೆ ಪ್ರಥಮವಾಗಿ ಹಿಂದೆ ಸ್ವಾಗತಿಸಲ್ಪಡುವವರು ಯೆಹೋವನನ್ನು ನಿಷ್ಠೆಯಿಂದ ಸೇವಿಸಿದ್ದ ನೀತಿವಂತರೆಂದು ತೀರ್ಮಾನಿಸುವುದು ನ್ಯಾಯಸಮ್ಮತವಾಗಿದೆ.—ಇಬ್ರಿಯ 11:35-39.
16. (ಎ) ಭೂಮಿಯ ಮೇಲೆ ಪುನರುತ್ಥಾನ ಹೊಂದುವ “ನೀತಿವಂತ” ರಲ್ಲಿ ಯಾರಿರುವರು? (ಬಿ) ಪುರಾತನ ಕಾಲಗಳ ಯಾವ ನಂಬಿಗಸ್ತರನ್ನು ನೀವು ಪ್ರತ್ಯೇಕವಾಗಿ ಭೇಟಿಯಾಗಲು ಬಯಸುತ್ತೀರಿ, ಮತ್ತು ಏಕೆ?
16 ಯುದ್ಧಗಳು, ವಿಪತ್ತುಗಳು ಮತ್ತು ಮರಣದ ಕುರಿತು ಸುದ್ದಿಯನ್ನು ಕೇಳುವ ಬದಲಿಗೆ, ಯೆಹೋವನ ಸೇವಕರು ಪುನರುತ್ಥಾನದ ಅದ್ಭುತಕರವಾದ ವರದಿಗಳನ್ನು ಪಡೆಯುವರು. ಹೇಬೆಲ, ಹನೋಕ, ನೋಹ, ಅಬ್ರಹಾಮ, ಸಾರ, ಯೋಬ, ಮೋಶೆ, ರಾಹಾಬ, ರೂತ್, ದಾವೀದ, ಎಲೀಯ, ಎಸ್ತೇರ—ಇವರಂತಹ ನಂಬಿಗಸ್ತರಾದ ಪುರುಷ ಮತ್ತು ಸ್ತ್ರೀಯರ ಹಿಂದಿರುಗುವಿಕೆಯ ಕುರಿತು ತಿಳಿಯುವುದು ರೋಮಾಂಚಕವಾಗಿರುವುದು. ಬೈಬಲಿನ ಅನೇಕ ವೃತ್ತಾಂತಗಳ ಹಿನ್ನೆಲೆಯ ವಿವರಣೆಗಳನ್ನು ಅವರು ಕೊಡುವಾಗ, ಎಂತಹ ಭಾವೋದ್ರೇಕವಾಗುವ ಐತಿಹಾಸಿಕ ನಿಜತ್ವಗಳನ್ನು ಅವರು ನೀಡುವರು! ಅವರು ಮತ್ತು ಇತ್ತೀಚೆಗಿನ ಸಮಯಗಳಲ್ಲಿ ಸತ್ತಿರುವ ನೀತಿವಂತರು ಸೈತಾನನ ವ್ಯವಸ್ಥೆಯ ಅಂತ್ಯ ಮತ್ತು ಯೆಹೋವನು ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸಿ ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಿದ ವಿಧದ ಕುರಿತು ಕಲಿಯಲು ಸಹ ಅಷ್ಟೇ ಆತುರದಿಂದಿರುವರೆಂಬುದು ನಿಸ್ಸಂದೇಹ.
17. ಪುನರುತ್ಥಾನ ಹೊಂದುವ ಇತರರಿಗೆ ನಂಬಿಗಸ್ತರು ಯಾವ ನೆರವನ್ನು ನೀಡುವರು?
17 ಈ ನಂಬಿಗಸ್ತರು ಪುನರುತ್ಥಾನದ ಮುಂದಿನ ಮಜಲಿನ ಸಮಯದಲ್ಲಿ, ಕೋಟಿಗಟ್ಟಲೆ “ಅನೀತಿವಂತ”ರು ಮರಣದ ಬಂಧಗಳೊಳಗಿಂದ ಬಿಡುಗಡೆ ಹೊಂದುವಾಗ ಎಷ್ಟು ಸಹಾಯ ನೀಡುವವರಾಗಿರುವರು! ಮಾನವ ಕುಲದ ಅಧಿಕಾಂಶ ಜನರಿಗೆ ಎಂದೂ ಯೆಹೋವನ ಕುರಿತು ತಿಳಿಯುವ ಸಂದರ್ಭವಿದ್ದಿರಲಿಲ್ಲ. ಸೈತಾನನು ಅವರ ‘ಮನಸ್ಸುಗಳನ್ನು ಕುರುಡು ಮಾಡುತ್ತಿದ್ದನು.’ (2 ಕೊರಿಂಥ 4:4) ಆದರೆ ಪಿಶಾಚನ ಕೆಲಸವು ರದ್ದುಗೊಳಿಸಲ್ಪಡುವುದು. ಅನೀತಿವಂತರು ಒಂದು ಸುಂದರವಾದ ಮತ್ತು ಶಾಂತಿಭರಿತವಾದ ಭೂಮಿಗೆ ಹಿಂದಿರುಗುವರು. ಯೆಹೋವನ ಮತ್ತು ಆತನ ಆಳುವ ಪುತ್ರನಾದ ಯೇಸು ಕ್ರಿಸ್ತನ ಕುರಿತು ಅವರಿಗೆ ಕಲಿಸಲು ಸುವ್ಯವಸ್ಥಿತರಾದ ಜನರಿಂದ ಅವರು ಸ್ವಾಗತಿಸಲ್ಪಡುವರು. ಕೋಟ್ಯಂತರ ಪುನರುತ್ಥಿತರು ತಮ್ಮ ಸೃಷ್ಟಿಕರ್ತನನ್ನು ಅರಿತಂತೆ ಮತ್ತು ಪ್ರೀತಿಸಿದಂತೆ, ಯೆಹೋವನ ಜ್ಞಾನವು ಅಭೂತಪೂರ್ವ ರೀತಿಯಲ್ಲಿ ಭೂಮಿಯನ್ನು ತುಂಬಿಕೊಳ್ಳುವುದು.
18. ಪುನರುತ್ಥಿತ ಪ್ರಿಯರನ್ನು ಸ್ವಾಗತಿಸುವಾಗ ನಿಮಗೆ ಹೇಗನಿಸೀತೆಂದು ನೀವು ಯೋಚಿಸುತ್ತೀರಿ?
18 ಪುನರುತ್ಥಾನವು ನಮ್ಮ ಹೃದಯಕ್ಕೆ ಎಷ್ಟು ಆನಂದವನ್ನು ತರುವುದು! ನಮ್ಮ ಶತ್ರುವಾದ ಮರಣದಿಂದಾಗಿ ಬಾಧೆಪಡದವನು ಯಾರು? ರೋಗ, ವಾರ್ಧಕ್ಯ, ಅಪಘಾತ ಅಥವಾ ಹಿಂಸಾಚಾರವು ಒಬ್ಬ ಪ್ರಿಯನ ಜೀವವನ್ನು ಅಪಹರಿಸಿ, ಪ್ರೀತಿ ಅಥವಾ ಮಿತ್ರತ್ವದ ಬಂಧವು ಹರಿಯಲ್ಪಟ್ಟಾಗ ನಿಶ್ಚಯವಾಗಿ ತೀರ ಜರ್ಜರಿತವಾದ ಅನಿಸಿಕೆಯು ಯಾರಿಗೆ ತಾನೇ ಆಗಿರುವುದಿಲ್ಲ? ಹಾಗಾದರೆ ಪ್ರಮೋದವನದಲ್ಲಾಗಲಿರುವ ಪುನರ್ಮಿಲನಗಳ ಕುರಿತು ಭಾವಿಸಿರಿ. ತಾಯಿತಂದೆಯರು, ಪುತ್ರಪುತ್ರಿಯರು, ಸ್ನೇಹಿತರು ಮತ್ತು ಸಂಬಂಧಿಕರು ಒಬ್ಬರನ್ನೊಬ್ಬರು ತಬ್ಬಿಕೊಳ್ಳಲಿಕ್ಕಾಗಿ ಆನಂದದಿಂದ ನಗುತ್ತಾ ಕೂಗುತ್ತಾ ಓಡುವರು.
ಕಟ್ಟಕಡೆಗೆ ಪರಿಪೂರ್ಣತೆ!
19. ಸಾವಿರ ವರ್ಷದಾಳಿಕೆಯಲ್ಲಿ ಯಾವ ಪವಾಡವು ನಡೆಯುವುದು?
19 ಸಾವಿರ ವರ್ಷಗಳಾದ್ಯಂತ, ಒಂದು ಆಶ್ಚರ್ಯಕರವಾದ ಪವಾಡವು ಸಂಭವಿಸುತ್ತಿರುವುದು. ಮಾನವ ಕುಲಕ್ಕಾದರೊ, ಅದು ಪ್ರಾಯಶಃ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಅತಿ ರೋಮಾಂಚಕ ಸಂಗತಿಯಾಗಿರುವುದು. ತನ್ನ ಪುತ್ರನು ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳನ್ನು ನಂಬಿಗಸ್ತರೂ ವಿಧೇಯರೂ ಆದ ಪ್ರತಿಯೊಬ್ಬ ಪುರುಷ ಮತ್ತು ಸ್ತ್ರೀಗೆ ಅನ್ವಯಿಸುವಂತೆ ಯೆಹೋವನು ಮಾರ್ಗದರ್ಶಿಸುವನು. ಆ ಸಾಧನದ ಮೂಲಕ ಪಾಪವೆಲ್ಲ ತೆಗೆದುಹಾಕಲ್ಪಟ್ಟು ಮಾನವ ಕುಲವು ಪರಿಪೂರ್ಣತೆಗೆ ಎತ್ತಲ್ಪಡುವುದು.—1 ಯೋಹಾನ 2:2; ಪ್ರಕಟನೆ 21:1-4.
20. (ಎ) ಪರಿಪೂರ್ಣರಾಗಿರುವುದರ ಅರ್ಥವೇನಾಗಿರುವುದು? (ಬಿ) ಅರ್ಮಗೆದೋನನ್ನು ಪಾರಾದವರು ಮತ್ತು ಪುನರುತ್ಥಿತರು ಅತಿ ಪೂರ್ಣಾರ್ಥದಲ್ಲಿ ಯಾವಾಗ ಜೀವಿಸಲಾರಂಭಿಸುವರು?
20 ಪರಿಪೂರ್ಣತೆ! ಅದರ ಅರ್ಥವೇನಾಗಿರುವುದು? ಯೆಹೋವ ದೇವರ ವಿರುದ್ಧವಾಗಿ ಪಾಪ ಮಾಡುವುದಕ್ಕೆ ಮೊದಲು ಆದಾಮ ಮತ್ತು ಹವ್ವರು ಅನುಭವಿಸುತ್ತಿದ್ದ ರೀತಿಯ ಜೀವನಕ್ಕೆ ಹಿಂದಿರುಗುವಿಕೆಯೆಂದು ಇದರ ಅರ್ಥವಾಗಿರುವುದು. ಶಾರೀರಿಕವಾಗಿ, ಮಾನಸಿಕವಾಗಿ, ಭಾವಾತ್ಮಕವಾಗಿ, ನೈತಿಕವಾಗಿ, ಆತ್ಮಿಕವಾಗಿ—ಊಹಿಸಸಾಧ್ಯವಿರುವ ಪ್ರತಿಯೊಂದು ವಿಧದಲ್ಲಿ—ಪರಿಪೂರ್ಣ ಮಾನವರು ದೇವರ ಮಟ್ಟಗಳನ್ನು ಪೂರ್ಣವಾಗಿ ಮುಟ್ಟುವರು. ಆದರೆ ಆಗ ಪ್ರತಿಯೊಬ್ಬರೂ ಒಂದೇ ವಿಧದವರಾಗಿರುವರೊ? ಇಲ್ಲವೇ ಇಲ್ಲ! ಯೆಹೋವನ ಸೃಷ್ಟಿಗಳು—ವೃಕ್ಷಗಳು, ಪುಷ್ಪಗಳು, ಪ್ರಾಣಿಗಳು—ಎಲ್ಲವೂ ಆತನು ವೈವಿಧ್ಯವನ್ನು ಪ್ರೀತಿಸುತ್ತಾನೆಂದು ಕಲಿಸುತ್ತವೆ. ಪರಿಪೂರ್ಣ ಮಾನವರಿಗೆ ವಿಭಿನ್ನ ವ್ಯಕ್ತಿತ್ವಗಳೂ ಸಾಮರ್ಥ್ಯಗಳೂ ಇರುವುವು. ಪ್ರತಿಯೊಬ್ಬನೂ ದೇವರು ಅರ್ಥೈಸಿದಂತೆ ಜೀವನದಲ್ಲಿ ಆನಂದಿಸುವನು. ಪ್ರಕಟನೆ 20:5 ಹೇಳುವುದು: “ಮಿಕ್ಕ ಸತ್ತವರು ಆ ಸಾವಿರ ವರುಷ ತೀರುವ ತನಕ ಜೀವಿತರಾಗಿ ಏಳಲಿಲ್ಲ.” ಅರ್ಮಗೆದೋನನ್ನು ಪಾರಾದ ಮಹಾ ಸಮೂಹದಂತೆ, ಪುನರುತ್ಥಿತರು ಪಾಪರಹಿತ ಪರಿಪೂರ್ಣತೆಯನ್ನು ತಲಪುವಾಗ ಅವರು ಪೂರ್ತಿಯಾಗಿ ಜೀವಿತರಾಗುವರು.
21. (ಎ) ಕ್ರಿಸ್ತನ ಸಾವಿರ ವರ್ಷಗಳ ಆಳಿಕೆಯ ಅಂತ್ಯದಲ್ಲಿ ಏನು ನಡೆಯುವುದು? (ಬಿ) ಕಟ್ಟಕಡೆಗೆ ಸೈತಾನನಿಗೂ ಅವನ ಪಕ್ಷ ವಹಿಸುವ ಎಲ್ಲರಿಗೂ ಏನಾಗುವುದು?
21 ಪರಿಪೂರ್ಣ ಮಾನವರು ಒಂದು ಅಂತಿಮ ಪರೀಕ್ಷೆಯನ್ನು ಎದುರಿಸುವರು. ಸಾವಿರ ವರ್ಷಗಳ ಅಂತ್ಯದಲ್ಲಿ, ಸೈತಾನನನ್ನೂ ಅವನ ದೆವ್ವಗಳನ್ನೂ ಕೊಂಚ ಸಮಯಕ್ಕಾಗಿ ಅಧೋಲೋಕದಿಂದ ಬಿಡುಗಡೆ ಮಾಡಲಾಗುವುದು ಮತ್ತು ಜನರನ್ನು ಯೆಹೋವನಿಂದ ತಿರುಗಿಸಲು ಅಂತಿಮ ಪ್ರಯತ್ನವನ್ನು ಮಾಡುವಂತೆ ಬಿಡಲ್ಪಡುವರು. ಕೆಲವರು ದೇವರ ಪ್ರೀತಿಗಿಂತ ತಪ್ಪು ಬಯಕೆಗಳನ್ನು ಮೇಲಿಡುವರು, ಆದರೆ ಈ ದಂಗೆಯು ಥಟ್ಟನೆ ನಿಲ್ಲಿಸಲ್ಪಡುವುದು. ಯೆಹೋವನು ಈ ಸ್ವಾರ್ಥಿಗಳನ್ನು ಸೈತಾನ ಮತ್ತು ಅವನ ಸಕಲ ದೆವ್ವಗಳೊಂದಿಗೆ ಸಂಹರಿಸುವನು. ಆಗ ಸಕಲ ತಪ್ಪುಗಾರರು ನಿತ್ಯಕ್ಕೂ ಇಲ್ಲದೆ ಹೋಗಿರುವರು.—ಪ್ರಕಟನೆ 20:7-10.
ನೀವೇನು ಮಾಡುವಿರಿ?
22. ಪ್ರಮೋದವನದಲ್ಲಿ ನೀವು ಏನು ಮಾಡಲು ಮುನ್ನೋಡುತ್ತೀರಿ?
22 ನಿತ್ಯತೆಯು ಯೆಹೋವ ದೇವರನ್ನು ಪ್ರೀತಿಸುವವರ ಮತ್ತು ಪ್ರಮೋದವನವಾದ ಭೂಮಿಯಲ್ಲಿ ಜೀವಿಸುವವರ ಮುಂದೆ ಹರಡಿರುವುದು. ಅವರ ಆನಂದವನ್ನು ನಮಗೆ ಭಾವಿಸುವುದೂ ಅಸಾಧ್ಯ ಮತ್ತು ನೀವೂ ಇದರಲ್ಲಿ ಪಾಲಿಗರಾಗಬಲ್ಲಿರಿ. ಸಂಗೀತ, ಕಲೆ, ಶಿಲ್ಪ—ಅದೇಕೆ, ಪರಿಪೂರ್ಣ ಮಾನವ ಕುಲದ ಸಾಧನೆಗಳು ಹಳೆಯ ಜಗತ್ತಿನ ಅತಿ ಶ್ರೇಷ್ಠ ಕಲಾಕಾರರ ಅತಿ ಶ್ರೇಷ್ಠ ಕೃತಿಗಳನ್ನೂ ಮೀರಿಸುವುವು! ಎಷ್ಟೆಂದರೂ, ಮಾನವರು ಪರಿಪೂರ್ಣರಾಗಿರುವರು, ಮತ್ತು ಅವರ ಮುಂದೆ ಕೊನೆಯಿಲ್ಲದ ಸಮಯವಿರುವುದು. ಪರಿಪೂರ್ಣ ಮಾನವನೋಪಾದಿ ನೀವು ಯಾವುದನ್ನೆಲ್ಲ ಮಾಡಲು ಸಮರ್ಥರಾಗಿರುವಿರಿ ಎಂದು ಭಾವಿಸಿರಿ. ಯೆಹೋವನ ಸೃಷ್ಟಿ—ವಿಶ್ವದಲ್ಲಿರುವ ಕೋಟ್ಯಂತರ ಆಕಾಶಗಂಗೆಗಳಿಂದ ಹಿಡಿದು ಅತಿ ಚಿಕ್ಕ ಉಪಪರಮಾಣು ಕಣಗಳ ವರೆಗೆ ನೀವು ಮತ್ತು ಜೊತೆಮಾನವರು ಏನು ಕಲಿಯಬಹುದೆಂದೂ ಯೋಚಿಸಿರಿ. ಮಾನವ ಕುಲವು ಸಾಧಿಸುವ ಪ್ರತಿ ವಿಷಯವೂ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವನ ಹೃದಯವನ್ನು ಇನ್ನೂ ಹೆಚ್ಚು ಆನಂದಪಡಿಸುವುದು.—ಕೀರ್ತನೆ 150:1-6.
23. ಪ್ರಮೋದವನದ ಜೀವನವು ಏಕೆ ಎಂದಿಗೂ ಬೇಸರ ಹಿಡಿಸುವಂತಹದ್ದಾಗದು?
23 ಆಗ ಜೀವವು ಬೇಸರ ಹಿಡಿಸುವಂತಹದ್ದಾಗಿರದು. ಸಮಯ ಸಂದಷ್ಟಕ್ಕೆ ಅದು ಅಧಿಕಾಧಿಕ ಅಭಿರುಚಿಯುಳ್ಳದ್ದಾಗಿ ಹೋಗುವುದು. ದೇವರ ಜ್ಞಾನಕ್ಕೆ ಅಂತ್ಯವೇ ಇಲ್ಲ ಎಂಬುದು ನಿಮಗೆ ತಿಳಿದೇ ಇದೆ. (ರೋಮಾಪುರ 11:33) ನಿತ್ಯತೆಯಾದ್ಯಂತ, ಕಲಿಯಲು ಸದಾ ಹೊಸ ವಿಷಯಗಳಿರುವುವು ಮತ್ತು ಕಂಡು ಹಿಡಿಯಲು ಹೊಸ ವ್ಯಾಪ್ತಿಗಳಿರುವುವು. (ಪ್ರಸಂಗಿ 3:11) ಮತ್ತು ನೀವು ಯೆಹೋವ ದೇವರ ಕುರಿತು ಕಲಿಯುವುದನ್ನು ಮುಂದುವರಿಸುವಾಗ, ನೀವು ಕೇವಲ ಕೆಲವು ವರುಷಗಳಿಗಲ್ಲ, ಸದಾಕಾಲಕ್ಕೆ ಜೀವಿಸುತ್ತಾ ಮುಂದುವರಿಯುವಿರಿ!—ಕೀರ್ತನೆ 22:26.
24, 25. ದೇವರ ಜ್ಞಾನಕ್ಕೆ ಹೊಂದಿಕೆಯಾಗಿ ನೀವೀಗ ಏಕೆ ಜೀವಿಸಬೇಕು?
24 ಒಂದು ಪ್ರಮೋದವನ ಭೂಮಿಯ ಮೇಲಿನ ಆಹ್ಲಾದಕರವಾದ ಭವಿಷ್ಯತ್ತು ನೀವು ಮಾಡುವ ಯಾವುದೇ ಪ್ರಯತ್ನ ಅಥವಾ ತ್ಯಾಗಕ್ಕೆ ತಕ್ಕ ಪ್ರತಿಫಲವಾಗಿರುವುದಿಲ್ಲವೆ? ಹೌದು, ಅದು ನಿಶ್ಚಯ! ಒಳ್ಳೆಯದು, ಯೆಹೋವನು ಆ ಸೊಗಸಾದ ಭವಿಷ್ಯಕ್ಕೆ ನಿಮಗೆ ಕೀಲಿ ಕೈಯನ್ನು ನೀಡಿದ್ದಾನೆ. ದೇವರ ಜ್ಞಾನವೇ ಆ ಕೀಲಿ ಕೈ. ನೀವು ಅದನ್ನು ಉಪಯೋಗಿಸುವಿರೊ?
25 ನೀವು ಯೆಹೋವನನ್ನು ಪ್ರೀತಿಸುವಲ್ಲಿ, ಆತನ ಇಷ್ಟವನ್ನು ಮಾಡುವುದರಲ್ಲಿ ಹರ್ಷವನ್ನು ಕಂಡುಕೊಳ್ಳುವಿರಿ. (1 ಯೋಹಾನ 5:3) ನೀವು ಆ ಮಾರ್ಗವನ್ನು ಬೆನ್ನಟ್ಟುವಲ್ಲಿ, ನೀವು ಎಷ್ಟೊಂದು ಆಶೀರ್ವಾದಗಳನ್ನು ಅನುಭವಿಸುವಿರಿ! ದೇವರ ಜ್ಞಾನವನ್ನು ನೀವು ಅನ್ವಯಿಸಿಕೊಳ್ಳುವಲ್ಲಿ, ಅದು ನಿಮಗೆ ಈ ಕ್ಲೇಶ ತುಂಬಿದ ಜಗತ್ತಿನಲ್ಲೂ ಹೆಚ್ಚು ಸಂತೋಷಕರವಾದ ಜೀವಿತವನ್ನು ತರಬಲ್ಲದು. ಮತ್ತು ಭಾವೀ ಪ್ರತಿಫಲಗಳೊ, ಅಪಾರವಾಗಿವೆ, ಏಕೆಂದರೆ ನಿತ್ಯಜೀವಕ್ಕೆ ನಡೆಸುವ ಜ್ಞಾನವು ಇದೇ! ನೀವು ಕ್ರಿಯೆ ಕೈಕೊಳ್ಳಲು ಇದೇ ಅನುಕೂಲಕರ ಸಮಯ. ದೇವರ ಜ್ಞಾನಕ್ಕೆ ಹೊಂದಿಕೆಯಾಗಿ ಜೀವಿಸಲು ನಿರ್ಧರಿಸಿರಿ. ಯೆಹೋವನಿಗಾಗಿ ನಿಮ್ಮ ಪ್ರೀತಿಯನ್ನು ಪ್ರದರ್ಶಿಸಿರಿ. ಆತನ ಪವಿತ್ರ ನಾಮವನ್ನು ಗೌರವಿಸಿ ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸಿರಿ. ಸರದಿಯಾಗಿ, ನಿಜ ವಿವೇಕ ಮತ್ತು ಜ್ಞಾನದ ಮೂಲನಾದ ಯೆಹೋವ ದೇವರು, ತನ್ನ ಮಹತ್ತಾದ ಮತ್ತು ಪ್ರೀತಿಸುವ ಹೃದಯದಲ್ಲಿ ನಿಮ್ಮ ವಿಷಯದ ಕುರಿತು ಹರ್ಷಿಸುವನು. (ಯೆರೆಮೀಯ 31:3; ಚೆಫನ್ಯ 3:17) ಮತ್ತು ಆತನು ನಿಮ್ಮನ್ನು ಶಾಶ್ವತವಾಗಿ ಪ್ರೀತಿಸುವನು!
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
“ವಾಸ್ತವವಾದ ಜೀವ” ಎಂದರೇನು?
ಅರ್ಮಗೆದೋನಿನ ಬಳಿಕ, ಭೂಮಿಯಲ್ಲಿ ಏನು ಸಂಭವಿಸುವುದು?
ಭೂಮಿಯ ಮೇಲೆ ಯಾರು ಪುನರುತ್ಥಾನ ಹೊಂದುವರು?
ಮಾನವ ಕುಲವು ಹೇಗೆ ಪರಿಪೂರ್ಣವಾಗುವುದು ಮತ್ತು ಅಂತಿಮವಾಗಿ ಪರೀಕ್ಷಿಸಲ್ಪಡುವುದು?
ಪ್ರಮೋದವನದ ಸಂಬಂಧದಲ್ಲಿ ನಿಮ್ಮ ನಿರೀಕ್ಷೆ ಏನು?
[ಪುಟ 188, 189ರಲ್ಲಿರುವ ಚಿತ್ರ]
ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ ನೀವು ಪ್ರಮೋದವನದಲ್ಲಿ ಜೀವಿಸಲು ನಿರೀಕ್ಷಿಸುವಿರೊ?