ದೇವರ ನೀತಿಯಲ್ಲಿ ನಮ್ಮ ಭರವಸೆಯನ್ನು ಬಲಪಡಿಸಿಕೊಳ್ಳುವುದು
“ನಿನ್ನ ಭರವಸೆಯು ಸ್ವತಃ ಯೆಹೋವನಲ್ಲಿ ಇರುವುದಕ್ಕೋಸ್ಕರ ನಾನು ನಿನಗೆ ಜ್ಞಾನವನ್ನು ಕೊಟ್ಟಿದ್ದೇನೆ.”—ಜ್ಞಾನೋಕ್ತಿ 22:19, NW.
1, 2. (ಎ) ಯೆಹೋವನ ಸಾಕ್ಷಿಗಳು ಯೆಹೋವನಲ್ಲಿ ಭರವಸೆಯನ್ನು ಏಕೆ ಪ್ರದರ್ಶಿಸುತ್ತಾರೆ? (ಜ್ಞಾನೋಕ್ತಿ 22:19) (ಬಿ) ಕೆಲವರು ಯೆಹೋವನಲ್ಲಿ ತಮ್ಮ ಭರವಸೆಯನ್ನು ಬಲಪಡಿಸುವ ಅಗತ್ಯವಿದೆಯೆಂದು ಯಾವುದು ಸೂಚಿಸುತ್ತದೆ?
ನಿಜ ಕ್ರೈಸ್ತರು, ಯೆಹೋವನ ಮತ್ತು ಆತನ ಉದ್ದೇಶಗಳ ಯಥಾರ್ಥ ಜ್ಞಾನದಿಂದ ಆಶೀರ್ವದಿಸಲ್ಪಟ್ಟಿದ್ದಾರೆ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪ್ರೀತಿಯಿಂದ ಅವರಿಗೆ “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರವನ್ನು” ಒದಗಿಸುತ್ತಾನೆ. (ಮತ್ತಾಯ 24:45) ಅವರು ಪಡೆದುಕೊಳ್ಳುವಂತಹ ಜ್ಞಾನವು, ದೇವರಲ್ಲಿನ ಅವರ ಭರವಸೆಗೆ ಆಧಾರವಾಗಿರುವ ದೃಢವಾದ ತಳಪಾಯವನ್ನು ಅವರಿಗೆ ನೀಡುತ್ತದೆ. ಹೀಗೆ, ಒಂದು ಗುಂಪಿನೋಪಾದಿ, ಯೆಹೋವನ ಸಾಕ್ಷಿಗಳು ಯೆಹೋವನಲ್ಲಿ ಮತ್ತು ಆತನ ನೀತಿಯಲ್ಲಿ ಗಮನಾರ್ಹವಾದ ಭರವಸೆಯನ್ನು ಪ್ರದರ್ಶಿಸುತ್ತಾರೆ.
2 ಆದರೆ, ವ್ಯಕ್ತಿಗತವಾಗಿ ಕೆಲವು ಸಾಕ್ಷಿಗಳು ಇಂತಹ ಭರವಸೆಯನ್ನು ಬಲಪಡಿಸಿಕೊಳ್ಳುವ ಅಗತ್ಯವಿರಬಹುದೆಂದು ತೋರುತ್ತದೆ. ಸೊಸೈಟಿಯು ಅದರ ಪ್ರಕಾಶನಗಳಲ್ಲಿರುವ ವಿವರಣೆಗಳ ಕುರಿತು ಅನಿಶ್ಚಯತೆಯನ್ನು ವ್ಯಕ್ತಪಡಿಸುವ ಪತ್ರಗಳನ್ನು ಆಗಿಂದಾಗ್ಗೆ ಪಡೆದುಕೊಳ್ಳುತ್ತದೆ. ಈ ಸಂದೇಹಗಳು, ತಿಳುವಳಿಕೆಯಲ್ಲಿ ಮಾಡಬೇಕಾದ ಹೊಂದಾಣಿಕೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿರಬಹುದು, ಇಲ್ಲವೆ ಅವು ವಿಚಾರಕನನ್ನು, ವಿಶೇಷವಾಗಿ ಒಂದು ಭಾವನಾತ್ಮಕ ವಿಧದಲ್ಲಿ ಬಾಧಿಸುವ ವಿಷಯಗಳಾಗಿರಬಹುದು.—ಯೋಹಾನ 6:60, 61ನ್ನು ಹೋಲಿಸಿರಿ.
3. ಯೆಹೋವನ ನಂಬಿಗಸ್ತ ಸೇವಕರಿಗೂ ಏನು ಸಂಭವಿಸಸಾಧ್ಯವಿದೆ, ಮತ್ತು ಏಕೆ?
3 ಯೆಹೋವನ ನಿಜ ಸೇವಕರು ಸಹ ಪ್ರಸಂಗಿ 9:11ರ ಸತ್ಯತೆಯನ್ನು ಅನುಭವಿಸುತ್ತಾರೆ: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.” ಇದು ಒಂದು ವಿಸ್ತೃತ, ಇಲ್ಲವೆ ಆತ್ಮಿಕ ಅರ್ಥದಲ್ಲಿ ಹೇಗೆ ಸತ್ಯವಾಗಿರಬಲ್ಲದು? ಬೈಬಲ್ ಸಲಹೆಯನ್ನು ಅನ್ವಯಿಸಿಕೊಳ್ಳುವುದರಲ್ಲಿ ಚುರುಕಾಗಿಯೂ, ಸತ್ಯವನ್ನು ರಕ್ಷಿಸುವುದರಲ್ಲಿ ಸಮರ್ಥರೂ, ಬೈಬಲ್ ಸಿದ್ಧಾಂತಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ವಿವೇಕಿಗಳೂ, ಯಥಾರ್ಥ ಜ್ಞಾನದ ಬೆನ್ನಟ್ಟುವಿಕೆಯಲ್ಲಿ ಹುರುಪುಳ್ಳವರೂ ಆಗಿದ್ದ ಕ್ರೈಸ್ತರ ಪರಿಚಯ ನಮಗಿರಬಹುದು. ಆದರೂ, ‘ಕಾಲ ಹಾಗೂ ಪ್ರಾಪ್ತಿಯ’ ಕಾರಣ, ಒಂದು ಅಪಘಾತ ಇಲ್ಲವೆ ವೃದ್ಧಾಪ್ಯದಿಂದಾಗಿ ಕೆಲವರು ತಮ್ಮನ್ನು ಮಿತಗೊಳಿಸಲ್ಪಟ್ಟವರಾಗಿ ಕಂಡುಕೊಳ್ಳುತ್ತಾರೆ. ತಾವು ಮರಣವನ್ನು ಅನುಭವಿಸದೆಯೇ ದೇವರ ನೂತನ ಲೋಕವನ್ನು ಪ್ರವೇಶಿಸುವೆವೊ ಎಂದು ಅವರು ಕುತೂಹಲಪಡಬಹುದು.
4, 5. ಯೆಹೋವನ ನೀತಿಯಲ್ಲಿ ತಮ್ಮ ಭರವಸೆಯನ್ನು ಕಳೆದುಕೊಳ್ಳಲು ಕ್ರೈಸ್ತರಿಗೆ ಯಾವ ಕಾರಣವೂ ಇರುವುದಿಲ್ಲ ಏಕೆ?
4 ಕ್ರೈಸ್ತನೊಬ್ಬನು ತನ್ನ ವಿವಾಹ ಸಂಗಾತಿಯನ್ನು ಕಳೆದುಕೊಳ್ಳುವಾಗ, ವೇದನೆಯೂ ನಷ್ಟದ ಪ್ರಜ್ಞೆಯೂ ತೀವ್ರವಾಗಿರುತ್ತದೆ. ದಂಪತಿಗಳೋಪಾದಿ ಅವರು ಅನೇಕ ವರ್ಷಗಳು ಇಲ್ಲವೆ ದಶಕಗಳು ಸಹ ಯೆಹೋವನ ಸೇವೆಯನ್ನು ಜೊತೆಯಾಗಿ ಮಾಡಿದ್ದಿರಬಹುದು. ಮರಣವು ವಿವಾಹ ಬಂಧವನ್ನು ಕಡಿದುಹಾಕುತ್ತದೆ ಎಂಬುದು ಬದುಕಿ ಉಳಿದಿರುವ ಸಂಗಾತಿಗೆ ತಿಳಿದಿದೆ.a (1 ಕೊರಿಂಥ 7:39) ಈಗ, ಅವನ ಭರವಸೆಯು ಕುಗ್ಗಿಹೋಗದೆ ಇರಲಿಕ್ಕಾಗಿ ಅವನು ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.—ಮಾರ್ಕ 16:8ನ್ನು ಹೋಲಿಸಿರಿ.
5 ಒಬ್ಬ ಸಂಗಾತಿ, ಹೆತ್ತವರು, ಮಗು, ಇಲ್ಲವೆ, ಆಪ್ತ ಕ್ರೈಸ್ತ ಮಿತ್ರನ ಮರಣವನ್ನು, ಯೆಹೋವನ ನೀತಿಯಲ್ಲಿ ಭರವಸೆಯನ್ನು ತೋರಿಸುವ ಒಂದು ಅವಕಾಶವಾಗಿ ವೀಕ್ಷಿಸುವುದು ಎಷ್ಟು ವಿವೇಕಪ್ರದವು! ವೈಯಕ್ತಿಕ ನಷ್ಟದ ಎದುರಿನಲ್ಲೂ, ಯೆಹೋವನು ಅನ್ಯಾಯಗಾರನಲ್ಲ ಎಂಬ ಭರವಸೆಯು ನಮಗಿರಸಾಧ್ಯವಿದೆ. ಪಾರಾಗುವ ಮೂಲಕ ಇಲ್ಲವೆ ಪುನರುತ್ಥಾನದ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವ ಪ್ರತಿಯೊಬ್ಬರೂ ಸಂತೋಷಿಸುವರೆಂಬ ಭರವಸೆ ನಮಗಿರಸಾಧ್ಯವಿದೆ. ದೇವರ ಕುರಿತು ಕೀರ್ತನೆಗಾರನು ಹೇಳುವುದು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ. ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು. ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.”—ಕೀರ್ತನೆ 145:16-19.
ಅನಾವಶ್ಯಕವಾಗಿ ಕಷ್ಟಾನುಭವಿಸಿದ್ದರ ಅನಿಸಿಕೆಗಳು
6, 7. (ಎ) ಈ ಮೊದಲು ಕಷ್ಟಾನುಭವಿಸಿದ್ದಿರಬಹುದಾದ ಕೆಲವು ಸಾಕ್ಷಿಗಳು ಈಗ ಭಿನ್ನವಾದ ತಿಳುವಳಿಕೆಯನ್ನು ಪಡೆದುಕೊಂಡಿರುವುದು ಏಕೆ? (ಬಿ) ಗತಕಾಲದಲ್ಲಿ ಇಂತಹ ಕಷ್ಟಾನುಭವವನ್ನು ಅನುಮತಿಸಿರುವುದಕ್ಕಾಗಿ ನಾವು ಯೆಹೋವನನ್ನು ಏಕೆ ಅನೀತಿವಂತನೆಂದು ವೀಕ್ಷಿಸಬಾರದು?
6 ಗತಕಾಲದಲ್ಲಿ, ಕೆಲವು ಸಾಕ್ಷಿಗಳು, ತಮ್ಮ ಮನಸ್ಸಾಕ್ಷಿಯು ಈಗ ಅನುಮತಿಸಬಹುದಾದ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕಾಗಿ ಕಷ್ಟಾನುಭವಿಸಿದ್ದಾರೆ. ಉದಾಹರಣೆಗೆ, ಇದು ಕೆಲವೊಂದು ರೀತಿಯ ನಾಗರಿಕ ಸೇವೆಯ ವಿಷಯದಲ್ಲಿ, ಕೆಲವು ವರ್ಷಗಳ ಹಿಂದೆ ಅವರು ಮಾಡಿದ್ದ ಆಯ್ಕೆಯಾಗಿದ್ದಿರಬಹುದು. ಪ್ರಚಲಿತ ವಿಷಯಗಳ ವ್ಯವಸ್ಥೆಯ ಸಂಬಂಧದಲ್ಲಿ ತನ್ನ ಕ್ರೈಸ್ತ ತಾಟಸ್ಥ್ಯವನ್ನು ಕಡೆಗಣಿಸದೆಯೇ, ಇಂತಹ ಸೇವೆಯನ್ನು ತಾನು ಆತ್ಮಸಾಕ್ಷಿಕವಾಗಿ ಮಾಡಸಾಧ್ಯವೆಂದು ಒಬ್ಬ ಸಹೋದರನಿಗೆ ಈಗ ಅನಿಸಬಹುದು.
7 ಈಗ ಅವನು ಯಾವುದೇ ಪರಿಣಾಮಗಳನ್ನು ಅನುಭವಿಸದೇ ಮಾಡಬಹುದಾದ ಕೆಲಸವನ್ನು ಈ ಹಿಂದೆ ಮಾಡಲು ನಿರಾಕರಿಸಿದ್ದಕ್ಕಾಗಿ ಕಷ್ಟಾನುಭವಿಸುವಂತೆ ಬಿಟ್ಟದ್ದು, ಯೆಹೋವನ ವತಿಯಿಂದ ಅನ್ಯಾಯವಾಗಿತ್ತೊ? ಆ ರೀತಿಯ ಅನುಭವಕ್ಕೆ ಒಳಗಾಗಿರುವವರಲ್ಲಿ ಹೆಚ್ಚಿನವರು ಹಾಗೆಂದು ನೆನಸಲಾರರು. ಬದಲಿಗೆ, ವಿಶ್ವ ಪರಮಾಧಿಕಾರದ ವಿವಾದಾಂಶದ ಸಂಬಂಧದಲ್ಲಿ ತಾವು ದೃಢರಾಗಿರಲು ನಿಶ್ಚಯಿಸಿಕೊಂಡಿದ್ದೇವೆಂದು, ಸಾರ್ವಜನಿಕವಾಗಿ ಮತ್ತು ಸ್ಪಷ್ಟವಾಗಿ ಪ್ರದರ್ಶಿಸುವ ಅವಕಾಶ ತಮಗಿದ್ದುದಕ್ಕಾಗಿ ಅವರು ಹರ್ಷಿಸುತ್ತಾರೆ. (ಯೋಬ 27:5ನ್ನು ಹೋಲಿಸಿರಿ.) ಯೆಹೋವನಿಗಾಗಿ ಒಂದು ದೃಢವಾದ ನಿಲುವನ್ನು ತೆಗೆದುಕೊಂಡದ್ದರಲ್ಲಿ ತನ್ನ ಮನಸ್ಸಾಕ್ಷಿಯನ್ನು ಅನುಸರಿಸಿದುದಕ್ಕಾಗಿ ವಿಷಾದಪಡಲು ಒಬ್ಬನಿಗೆ ಯಾವ ಕಾರಣವಿರಸಾಧ್ಯವಿದೆ? ಕ್ರೈಸ್ತ ಮೂಲತತ್ವಗಳನ್ನು ನಿಷ್ಠೆಯಿಂದ ಎತ್ತಿಹಿಡಿಯುವ ಮೂಲಕ ಅಥವಾ ಮನಸ್ಸಾಕ್ಷಿಯ ಚುಚ್ಚಾಟಗಳಿಗೆ ಪ್ರತಿಕ್ರಿಯಿಸುವ ಮೂಲಕ, ಅವರು ಯೆಹೋವನ ಸ್ನೇಹಕ್ಕೆ ಯೋಗ್ಯರೆಂದು ಎಣಿಸಲ್ಪಟ್ಟರು. ನಿಶ್ಚಯವಾಗಿಯೂ, ಒಬ್ಬನ ಮನಸ್ಸಾಕ್ಷಿಯನ್ನು ಕ್ಷೋಭೆಗೊಳಿಸುವ ಇಲ್ಲವೆ, ಬಹುಶಃ ಇತರರು ಎಡವುವಂತೆಮಾಡುವ ಮಾರ್ಗಕ್ರಮದಿಂದ ದೂರವಿರುವುದು ವಿವೇಕಪ್ರದವಾಗಿದೆ. ಈ ಸಂಬಂಧದಲ್ಲಿ ಅಪೊಸ್ತಲ ಪೌಲನು ಇಟ್ಟ ಮಾದರಿಯ ಕುರಿತು ನಾವು ಯೋಚಿಸಬಲ್ಲೆವು.—1 ಕೊರಿಂಥ 8:12, 13; 10:31-33.
8. ಈ ಹಿಂದೆ ಧರ್ಮಶಾಸ್ತ್ರಕ್ಕೆ ಅಂಟಿಕೊಂಡಿದ್ದ ಯೆಹೂದಿ ಕ್ರೈಸ್ತರಿಗೆ, ಯೆಹೋವನ ನೀತಿಯನ್ನು ಪ್ರಶ್ನಿಸಲು ಯಾವ ಕಾರಣವೂ ಇರಲಿಲ್ಲವೇಕೆ?
8 ಯೆಹೋವನನ್ನು ಮೆಚ್ಚಿಸಲಿಕ್ಕಾಗಿ, ಯೆಹೂದ್ಯರು ದಶಾಜ್ಞೆಗಳಿಗೆ ಮತ್ತು ಸುಮಾರು 600 ಹೆಚ್ಚಿನ ವಿಭಿನ್ನ ನಿಯಮಗಳಿಗೆ ವಿಧೇಯರಾಗುವಂತೆ ಕೇಳಿಕೊಳ್ಳಲ್ಪಟ್ಟರು. ತರುವಾಯ, ಕ್ರೈಸ್ತ ಏರ್ಪಾಡಿನ ಕೆಳಗೆ, ಈ ನಿಯಮಗಳಿಗೆ ವಿಧೇಯತೆಯು—ಶಾರೀರಿಕ ಯೆಹೂದ್ಯರಿಗೆ ಸಹ—ಯೆಹೋವನನ್ನು ಸೇವಿಸುವುದಕ್ಕಾಗಿರುವ ಒಂದು ಆವಶ್ಯಕತೆಯಾಗಿರಲಿಲ್ಲ. ಸುನ್ನತಿ, ಸಬ್ಬತ್ತಿನ ಆಚರಣೆ, ಪ್ರಾಣಿ ಬಲಿಗಳ ಅರ್ಪಣೆ, ಮತ್ತು ನಿರ್ದಿಷ್ಟ ಆಹಾರಪಥ್ಯದ ನಿರ್ಬಂಧಗಳ ಅನುಸರಣೆಯೊಂದಿಗೆ ವ್ಯವಹರಿಸುವ ನಿಯಮಗಳು ಇನ್ನುಮುಂದೆ ಬಂಧಕವಾಗಿರಲಿಲ್ಲ. (1 ಕೊರಿಂಥ 7:19; 10:25; ಕೊಲೊಸ್ಸೆ 2:16, 17; ಇಬ್ರಿಯ 10:1, 11-14) 12 ಮಂದಿ ಅಪೊಸ್ತಲರನ್ನೂ ಸೇರಿಸಿ, ಕ್ರೈಸ್ತರಾದ ಯೆಹೂದ್ಯರು, ತಾವು ನಿಯಮದ ಒಡಂಬಡಿಕೆಯ ಅಧೀನದಲ್ಲಿದ್ದಾಗ ವಿಧೇಯರಾಗುವಂತೆ ಕೇಳಿಕೊಳ್ಳಲ್ಪಟ್ಟ ನಿಯಮಗಳಿಗನುಸಾರ ನಡೆದುಕೊಳ್ಳುವ ಹಂಗಿನಿಂದ ಬಿಡುಗಡೆಗೊಳಿಸಲ್ಪಟ್ಟರು. ಇನ್ನುಮುಂದೆ ಅಗತ್ಯವಾಗಿರದ ವಿಷಯಗಳನ್ನು ಈ ಮೊದಲು ತಮ್ಮಿಂದ ಕೇಳಿಕೊಂಡದುದಕ್ಕಾಗಿ ಅವರು ದೇವರ ಏರ್ಪಾಡು ಅನ್ಯಾಯವೆಂದು ದೂರಿದರೊ? ಇಲ್ಲ, ಅವರು ಯೆಹೋವನ ಉದ್ದೇಶಗಳ ವಿಶಾಲವಾದ ತಿಳುವಳಿಕೆಯಲ್ಲಿ ಹರ್ಷಿಸಿದರು.—ಅ. ಕೃತ್ಯಗಳು 16:4, 5.
9. ಕೆಲವು ಸಾಕ್ಷಿಗಳ ವಿಷಯದಲ್ಲಿ ಯಾವುದು ಸತ್ಯವಾಗಿದೆ, ಆದರೆ ವಿಷಾದಪಡಲು ಅವರಿಗೆ ಯಾವ ಕಾರಣವೂ ಇರುವುದಿಲ್ಲವೇಕೆ?
9 ಆಧುನಿಕ ಸಮಯಗಳಲ್ಲಿ, ತಾವು ಮಾಡಲಿದ್ದ ಅಥವಾ ಮಾಡದೆ ಇರಲಿದ್ದ ವಿಷಯಗಳ ಸಂಬಂಧದಲ್ಲಿ ಬಹಳ ಕಟ್ಟುನಿಟ್ಟಿನವರಾಗಿದ್ದ ಕೆಲವು ಸಾಕ್ಷಿಗಳಿದ್ದರು. ಆ ಕಾರಣಕ್ಕಾಗಿ ಅವರು ಇತರರಿಗಿಂತ ಹೆಚ್ಚು ಕಷ್ಟಾನುಭವಿಸಿದರು. ತರುವಾಯ, ಹೆಚ್ಚಿನ ಜ್ಞಾನವು, ವಿಷಯಗಳ ಸಂಬಂಧದಲ್ಲಿ ಅವರ ನೋಟವನ್ನು ವಿಸ್ತರಿಸುವಂತೆ ಅವರಿಗೆ ಸಹಾಯಮಾಡಿತು. ಆದರೆ ಈ ಮೊದಲು ತಮ್ಮ ಮನಸ್ಸಾಕ್ಷಿಗನುಗುಣವಾಗಿ ಕಾರ್ಯಮಾಡಿದ್ದಕ್ಕೆ—ಇದು ಬಹುಶಃ ಹೆಚ್ಚಿನ ಕಷ್ಟಾನುಭವವನ್ನು ತಂದಾಗಲೂ—ವಿಷಾದಪಡಲು ಯಾವ ಕಾರಣವೂ ಇರುವುದಿಲ್ಲ. ಯೆಹೋವನಿಗೆ ನಂಬಿಗಸ್ತರಾಗಿದ್ದು ಕಷ್ಟಾನುಭವಿಸಲು ಮತ್ತು “ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡು”ತ್ತೇವೆಂಬ ತಮ್ಮ ಸ್ವಇಚ್ಛೆಯನ್ನು ಪ್ರದರ್ಶಿಸಿದ್ದು, ನಿಜವಾಗಿಯೂ ಪ್ರಶಂಸನೀಯವಾಗಿದೆ. ಆ ರೀತಿಯ ದಿವ್ಯ ಭಕ್ತಿಯನ್ನು ಯೆಹೋವನು ಆಶೀರ್ವದಿಸುತ್ತಾನೆ. (1 ಕೊರಿಂಥ 9:23; ಇಬ್ರಿಯ 6:10) ಅಪೊಸ್ತಲ ಪೇತ್ರನು ಸೂಕ್ಷ್ಮದೃಷ್ಟಿಯಿಂದ ಬರೆದುದು: “ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.”—1 ಪೇತ್ರ 2:20.
ಯೋನನಿಂದ ಕಲಿತುಕೊಳ್ಳುವುದು
10, 11. (ಎ) ನಿನೆವೆಗೆ ಹೋಗುವ ನೇಮಕವನ್ನು ಕೊಟ್ಟಾಗ ಮತ್ತು (ಬಿ) ದೇವರು ನಿನೆವೆಯ ವಾಸಿಗಳನ್ನು ನಾಶಮಾಡದಿದ್ದಾಗ, ಯೋನನು ಯೆಹೋವನಲ್ಲಿ ಭರವಸೆಯ ಕೊರತೆಯನ್ನು ಹೇಗೆ ತೋರಿಸಿದನು?
10 ನಿನೆವೆಗೆ ಹೋಗುವಂತೆ ನಿರ್ದೇಶಿಸಲ್ಪಟ್ಟಾಗ, ಯೆಹೋವನು ಅವನಲ್ಲಿಡುತ್ತಿದ್ದ ಭರವಸೆಗೆ ಯೋನನು ಗಣ್ಯತೆಯ ಕೊರತೆಯನ್ನು ತೋರ್ಪಡಿಸಿದನು. ವಿಧೇಯನಾಗಲು ತನ್ನ ಸ್ವಂತ ಅನಿಚ್ಛೆಯಿಂದ ಬರಮಾಡಿಕೊಂಡ ಒಂದು ಭಯಂಕರ ಅನುಭವದ ತರುವಾಯ, ಯೋನನಿಗೆ ಬುದ್ಧಿಬಂದು, ಅವನು ತನ್ನ ತಪ್ಪನ್ನು ಗ್ರಹಿಸಿ, ತನ್ನ ವಿದೇಶಿ ನೇಮಕವನ್ನು ಸ್ವೀಕರಿಸಿ, ಆಸನ್ನವಾಗಿರುವ ನಾಶನದ ಕುರಿತು ನಿನೆವೆಯ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದನು. ಆಗ ಅನಿರೀಕ್ಷಿತವಾದ ಸಂಗತಿಯೊಂದು ಸಂಭವಿಸಿತು: ನಿನೆವೆಯ ನಿವಾಸಿಗಳ ಪಶ್ಚಾತ್ತಾಪಿ ಮನೋಭಾವದ ಕಾರಣ, ಅವರನ್ನು ನಾಶಮಾಡದೆ ಬಿಟ್ಟುಬಿಡಲು ಯೆಹೋವನು ನಿರ್ಧರಿಸಿದನು.—ಯೋನ 1:1–3:10.
11 ಯೋನನ ಪ್ರತಿಕ್ರಿಯೆಯು ಏನಾಗಿತ್ತು? ಅತೃಪ್ತಗೊಂಡು, ಅವನು ಪ್ರಾರ್ಥನೆಯಲ್ಲಿ ದೇವರಿಗೆ ದೂರುಸಲ್ಲಿಸಿದನು. ಅವನ ಕೊರಗಿನ ತಿರುಳು ಇದಾಗಿತ್ತು: ‘ವಿಷಯಗಳು ಈ ರೀತಿ ತಿರುವು ಪಡೆಯುವವೆಂದು ನನಗೆ ಗೊತ್ತಿತ್ತು. ಆದುದರಿಂದಲೇ ನಾನು ನಿನೆವೆಗೆ ಬರಲು ಇಷ್ಟಪಡಲಿಲ್ಲ. ಈಗ, ಎಲ್ಲವನ್ನೂ ಅನುಭವಿಸಿದ—ಒಂದು ದೊಡ್ಡ ಮೀನಿನಿಂದ ನುಂಗಲ್ಪಟ್ಟ ದಿಗಿಲು ಮತ್ತು ಅವಮಾನವನ್ನು ಸೇರಿಸಿ, ಸನ್ನಿಹಿತವಾಗಿರುವ ನಾಶನದ ಕುರಿತು ನಿನೆವೆಯ ನಿವಾಸಿಗಳಿಗೆ ಎಚ್ಚರನೀಡುವ ಪ್ರಯಾಸಕರ ಕೆಲಸವನ್ನು ಮಾಡಿದ—ಬಳಿಕ, ಸಂಭವಿಸಿದ್ದು ಇದು! ನನ್ನ ಎಲ್ಲ ಶ್ರಮ ಹಾಗೂ ಕಷ್ಟಾನುಭವ ವ್ಯರ್ಥವಾಗಿ ಹೋಯಿತು! ನಾನು ಸತ್ತುಹೋಗಿದ್ದರೆ ಎಷ್ಟೋ ಒಳ್ಳೇದಾಗಿರುತ್ತಿತ್ತು!’—ಯೋನ 4:1-3.
12. ಯೋನನ ಅನುಭವದಿಂದ ನಾವು ಏನನ್ನು ಕಲಿಯಸಾಧ್ಯವಿದೆ?
12 ದೂರು ಸಲ್ಲಿಸಲು ಯೋನನಲ್ಲಿ ಸಮಂಜಸವಾದ ಕಾರಣವೊಂದಿತ್ತೊ? ಪಶ್ಚಾತ್ತಾಪಿ ತಪ್ಪಿತಸ್ಥರಿಗೆ ಕರುಣೆಯನ್ನು ತೋರಿಸುವುದರಲ್ಲಿ ಯೆಹೋವನು ಅನ್ಯಾಯಗಾರನಾಗಿದ್ದನೊ? ವಾಸ್ತವದಲ್ಲಿ, ಯೋನನು ಹರ್ಷಿಸಬೇಕಿತ್ತು; ಸಾವಿರಾರು ಜನರು ನಾಶನದಿಂದ ಪಾರಾಗಲಿದ್ದರು! (ಯೋನ 4:11) ಆದರೆ ಅವನ ಅಗೌರವಪೂರ್ಣ, ದೂರುವ ಮನೋಭಾವವು, ಅವನು ಯೆಹೋವನ ನೀತಿಯಲ್ಲಿ ಗಾಢವಾದ ಭರವಸೆಯನ್ನು ವ್ಯಕ್ತಪಡಿಸುತ್ತಿರಲಿಲ್ಲ ಎಂಬುದನ್ನು ತೋರಿಸಿತು. ಅವನು ತನ್ನ ಕುರಿತು ಅತಿಯಾಗಿ, ಇತರರ ಕುರಿತು ತೀರ ಅಲ್ಪವಾಗಿ ಯೋಚಿಸುತ್ತಿದ್ದನು. ನಮ್ಮನ್ನು ಮತ್ತು ನಮ್ಮ ವೈಯಕ್ತಿಕ ಅನಿಸಿಕೆಗಳನ್ನು ಎರಡನೆಯ ಸ್ಥಾನದಲ್ಲಿಡುವ ಮೂಲಕ ನಾವು ಯೋನನಿಂದ ಪಾಠವನ್ನು ಕಲಿತುಕೊಳ್ಳೋಣ. ಯೆಹೋವನಿಗೆ ವಿಧೇಯರಾಗುವುದು, ಆತನ ಸಂಸ್ಥೆಯ ಮುಖಾಂತರ ಕೊಡಲ್ಪಡುವ ಮಾರ್ಗದರ್ಶನವನ್ನು ಅನುಸರಿಸಿ, ಆತನ ನಿರ್ಣಯಗಳನ್ನು ಸ್ವೀಕರಿಸುವುದೇ ನಾವು ಮಾಡಬೇಕಾದ ಸರಿಯಾದ ಕಾರ್ಯವೆಂಬ ಮನವರಿಕೆ ನಮಗಿರಲಿ. “ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗು”ವುದೆಂಬ ಮನವರಿಕೆ ನಮಗಿದೆ.—ಪ್ರಸಂಗಿ 8:12.
ನಮ್ಮ ಭರವಸೆಯನ್ನು ಬಲಪಡಿಸುವ ಸಮಯವು ಇದೇ ಆಗಿದೆ!
13. ನಾವೆಲ್ಲರೂ ಯೆಹೋವನಲ್ಲಿ ನಮ್ಮ ಭರವಸೆಯನ್ನು ಹೇಗೆ ಬಲಪಡಿಸಿಕೊಳ್ಳಸಾಧ್ಯವಿದೆ?
13 ಯೆಹೋವನಲ್ಲಿನ ನಮ್ಮ ಭರವಸೆಯನ್ನು ಬಲಪಡಿಸಿಕೊಳ್ಳುವುದು, ಬುದ್ಧಿವಂತಿಕೆಯ ಕ್ರಮವಾಗಿದೆ. (ಜ್ಞಾನೋಕ್ತಿ 3:5-8) ನಾವು ಹೆಚ್ಚು ಭರವಸೆಯುಳ್ಳವರಾಗಿರಲು ಸಹಾಯಮಾಡುವಂತೆ ಯೆಹೋವನಿಗೆ ಕೇವಲ ಪ್ರಾರ್ಥಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ನಾವೇ ಮಾಡಬೇಕೆಂಬುದು ನಿಶ್ಚಯ. ಯಥಾರ್ಥ ಜ್ಞಾನದ ಮೇಲಾಧಾರಿಸಿ ಭರವಸೆಯು ಬೆಳೆಯುತ್ತದೆ, ಆದುದರಿಂದ ನಾವು ವೈಯಕ್ತಿಕ ಬೈಬಲ್ ಅಧ್ಯಯನವನ್ನು—ಬೈಬಲನ್ನು ಮತ್ತು ಬೈಬಲನ್ನು ವಿವರಿಸುವ ಸಾಹಿತ್ಯದ ಓದುವಿಕೆಯನ್ನು—ನಮ್ಮ ದಿನಚರಿಯ ಭಾಗವಾಗಿ ಮಾಡಿಕೊಳ್ಳಬೇಕು. ಒಳ್ಳೆಯ ತಯಾರಿ ಮತ್ತು ಸಾಧ್ಯವಿರುವಷ್ಟರ ಮಟ್ಟಿಗಿನ ಭಾಗವಹಿಸುವಿಕೆಯು ಅತ್ಯಾವಶ್ಯಕವಾಗಿರುವಂತೆಯೇ, ಕ್ರೈಸ್ತ ಕೂಟಗಳಲ್ಲಿನ ಕ್ರಮವಾದ ಹಾಜರಿಯು ಅತ್ಯಾವಶ್ಯಕವಾಗಿದೆ. ಇತರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚಿಕೊಳ್ಳುವುದನ್ನು ಒಂದು ರೂಢಿಯಾಗಿ ಮಾಡಿಕೊಳ್ಳುತ್ತಾ, ಆಕ್ಷೇಪಣೆಗಳನ್ನು ಜಾಣ್ಮೆಯಿಂದ ಜಯಿಸುವುದು ಸಹ, ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿನ ನಮ್ಮ ಭರವಸೆಯನ್ನು ಆಳಗೊಳಿಸುತ್ತದೆ. ಹೀಗೆ ನಾವು ದಿನೇ ದಿನೇ ಆತನೊಂದಿಗೆ ಹೆಚ್ಚೆಚ್ಚು ಒಳಗೊಳ್ಳುವವರಾಗುತ್ತೇವೆ.
14. ಹಿಂದೆಂದಿಗಿಂತಲೂ ಹೆಚ್ಚಾಗಿ ದೇವರ ಜನರು ತಮ್ಮ ಭರವಸೆಯನ್ನು ಯೆಹೋವನಲ್ಲಿ ಪ್ರದರ್ಶಿಸುವಂತೆ ಬೇಗನೆ ಕೇಳಿಕೊಳ್ಳಲ್ಪಡುವರು ಏಕೆ?
14 ನಿಕಟ ಭವಿಷ್ಯತ್ತಿನಲ್ಲಿ, ಮಾನವಕುಲವನ್ನು ಎಂದಾದರೂ ತಾಕಿರುವ ಸಂಕಟದ ಮಹಾನ್ ಸಮಯವು ಹಠಾತ್ತನೆ ಸಂಭವಿಸುವುದು. (ಮತ್ತಾಯ 24:21) ಅದು ಸಂಭವಿಸುವಾಗ, ದೇವರ ಸೇವಕರಿಗೆ ಹಿಂದೆಂದೂ ಪ್ರದರ್ಶಿಸಲಾರದಷ್ಟು ಭರವಸೆಯನ್ನು, ಯೆಹೋವನ ನೀತಿಯಲ್ಲಿ ಮತ್ತು ಆತನ ಸಂಸ್ಥೆಯಿಂದ ಒದಗಿಸಲ್ಪಡುವ ಮಾರ್ಗದರ್ಶನದಲ್ಲಿ ಪ್ರದರ್ಶಿಸುವ ಅಗತ್ಯವಿರುವುದು. ಒಂದು ಸಾಂಕೇತಿಕ ವಿಧದಲ್ಲಿ, ಆಗ ಅವರು ಭರವಸೆಯಿಂದ ದೇವರ ಬುದ್ಧಿವಾದಕ್ಕೆ ವಿಧೇಯರಾಗುವರು: “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.” (ಯೆಶಾಯ 26:20) ಈಗಾಗಲೇ ಅವರು 232 ದೇಶಗಳಲ್ಲಿ, 85,000ಕ್ಕಿಂತಲೂ ಹೆಚ್ಚಿನ ಸಭೆಗಳ ರಕ್ಷಣಾತ್ಮಕ ಪರಿಸರದೊಳಕ್ಕೆ ಪ್ರವೇಶಿಸಿದ್ದಾರೆ. “ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ” ಎಂಬ ಬುದ್ಧಿವಾದದಲ್ಲಿ, ಯಾವುದೇ ಹೆಚ್ಚಿನ ವಿಷಯವು ಸೇರಿರಲಿ, ಅದನ್ನು ಪೂರೈಸಲು ಯೆಹೋವನು ನಮಗೆ ಸಹಾಯ ಮಾಡುವನೆಂಬ ಭರವಸೆ ನಮಗಿರಸಾಧ್ಯವಿದೆ.
15. ಭರವಸೆಯ ವಿಷಯವು 1998ರಲ್ಲಿ ಹೇಗೆ ಒತ್ತಿಹೇಳಲ್ಪಟ್ಟಿದೆ, ಮತ್ತು ಅದು ಏಕೆ ಸೂಕ್ತವಾದದ್ದಾಗಿದೆ?
15 ನಮ್ಮ ಭರವಸೆಯನ್ನು ಈಗ ಬಲಪಡಿಸಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಕ್ರೈಸ್ತ ಸಹೋದರರಲ್ಲಿ, ಯೆಹೋವನ ಸಂಸ್ಥೆಯಲ್ಲಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವತಃ ಯೆಹೋವನಲ್ಲಿ ನಮಗೆ ಭರವಸೆಯಿಲ್ಲದಿದ್ದರೆ, ಪಾರಾಗುವುದು ಅಸಾಧ್ಯವೇ ಸರಿ. ಆದುದರಿಂದಲೇ, 1998ರಲ್ಲಿ, ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು, “ಯೆಹೋವನ ನಾಮವನ್ನು ಕರೆಯುವವರೆಲ್ಲರ ರಕ್ಷಣೆಯಾಗುವುದು” ಎಂಬ ತಮ್ಮ ವರ್ಷವಚನದ ಮಾತುಗಳಿಂದ ಅನೇಕಾವರ್ತಿ ಮರುಜ್ಞಾಪಿಸಲ್ಪಟ್ಟಿರುವುದು ಎಷ್ಟೊಂದು ಸೂಕ್ತವಾಗಿದೆ! (ರೋಮಾಪುರ 10:13, NW) ಆ ವಿಷಯವಾಗಿ ನಾವು ಭರವಸೆಯುಳ್ಳವರಾಗಿ ಮುಂದುವರಿಯಬೇಕು. ಈ ಭರವಸೆಯಲ್ಲಿ ನಾವು ಅತ್ಯಂತ ಅಲ್ಪ ಪ್ರಮಾಣದ ಅನಿಶ್ಚಯತೆಯನ್ನೂ ಕಂಡುಹಿಡಿಯುವುದಾದರೆ, ಅದನ್ನು ಈಗಲೇ, ಹೌದು, ಈ ದಿನವೇ ಸರಿಪಡಿಸಲು ನಾವು ಕೆಲಸಮಾಡಬೇಕು.
ಯೆಹೋವನ ನ್ಯಾಯತೀರ್ಪು ನೀತಿಯುತವಾಗಿರುವುದು
16. ಭರವಸೆಯನ್ನು ಬೆಳೆಸಿಕೊಳ್ಳದಿದ್ದಲ್ಲಿ ಏನು ಸಂಭವಿಸಸಾಧ್ಯವಿದೆ, ಮತ್ತು ಇದು ಸಂಭವಿಸುವುದರಿಂದ ತಡೆಯಲು ನಾವು ಏನು ಮಾಡಸಾಧ್ಯವಿದೆ?
16 ಇಬ್ರಿಯ 3:14ರಲ್ಲಿ ಅಭಿಷಿಕ್ತ ಕ್ರೈಸ್ತರು ಹೀಗೆಂದು ಎಚ್ಚರಿಸಲ್ಪಟ್ಟಿದ್ದಾರೆ: “ಮೊದಲಿಂದಿರುವ ಭರವಸವನ್ನು ಅಂತ್ಯದ ವರೆಗೂ ದೃಢವಾಗಿ ಹಿಡುಕೊಳ್ಳುವ ಪಕ್ಷಕ್ಕೆ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವಲ್ಲಾ!” ಸೈದ್ಧಾಂತಿಕವಾಗಿ, ಈ ಮಾತುಗಳು ಭೂನಿರೀಕ್ಷೆಯಿರುವ ಕ್ರೈಸ್ತರಿಗೂ ಅನ್ವಯಿಸುತ್ತವೆ. ಆರಂಭಿಕ ಭರವಸೆಯನ್ನು ಅಭಿವೃದ್ಧಿಗೊಳಿಸದಿದ್ದಲ್ಲಿ ಅದು ಸವೆದುಹೋಗಬಲ್ಲದು. ಆದುದರಿಂದ ನಾವು ಯಥಾರ್ಥ ಜ್ಞಾನವನ್ನು ಬೆನ್ನಟ್ಟುತ್ತಾ ಹೋಗುವುದು ಎಷ್ಟು ಅತ್ಯಾವಶ್ಯಕವಾಗಿದೆ. ಈ ಮೂಲಕ, ನಾವು ನಮ್ಮ ಭರವಸೆಯು ಯಾವುದರ ಮೇಲೆ ಆಧರಿಸಿದೆಯೊ ಆ ತಳಪಾಯವನ್ನು ಬಲಪಡಿಸುತ್ತಿರುವೆವು!
17. ಪಾರಾಗುವಿಕೆಯ ಸಂಬಂಧದಲ್ಲಿ, ಯೇಸು ಸರಿಯಾಗಿ ನ್ಯಾಯತೀರ್ಪು ಮಾಡುವನೆಂಬ ಭರವಸೆ ನಮಗೆ ಏಕೆ ಇರಸಾಧ್ಯವಿದೆ?
17 ಎಲ್ಲಾ ರಾಷ್ಟ್ರಗಳು ಬೇಗನೆ ಕ್ರಿಸ್ತನಿಂದ ಪರೀಕ್ಷಿಸಲ್ಪಡುವವು. ಹೀಗೆ “ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆ” ಮಾಡಬಲ್ಲನು. (ಮತ್ತಾಯ 25:31-33) ಬದುಕಿ ಉಳಿಯಲು ಯಾರು ಯೋಗ್ಯರಾಗಿರುವರು ಎಂಬುದನ್ನು ತೀರ್ಮಾನಿಸುವುದರಲ್ಲಿ ಕ್ರಿಸ್ತನು ನೀತಿವಂತನಾಗಿರುವನೆಂಬ ಭರವಸೆ ನಮಗಿರಸಾಧ್ಯವಿದೆ. “ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ” ಯೆಹೋವನು ಅವನಿಗೆ ವಿವೇಕ, ಒಳನೋಟ ಮತ್ತು ಇತರ ಆವಶ್ಯಕ ಗುಣಗಳನ್ನು ದಯಪಾಲಿಸಿದ್ದಾನೆ. (ಅ. ಕೃತ್ಯಗಳು 17:30, 31) ನಮ್ಮ ಮನವರಿಕೆಯು ಅಬ್ರಹಾಮನ ಮನವರಿಕೆಯಂತೆ ಇರಲಿ. ಅವನು ಹೇಳಿದ್ದು: “ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವದು ನಿನ್ನಿಂದ [ಯೆಹೋವನಿಂದ] ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ.”—ಆದಿಕಾಂಡ 18:25.
18. ಈಗ ಸದ್ಯಕ್ಕೆ ನಮಗೆ ತಿಳಿದಿರದಂತಹ ವಿಷಯಗಳ ಕುರಿತು ನಾವು ಏಕೆ ಹೆಚ್ಚು ಚಿಂತಿಸಬಾರದು?
18 ಯೆಹೋವನ ನೀತಿಯಲ್ಲಿ ಸಂಪೂರ್ಣ ಭರವಸೆಯುಳ್ಳವರಾಗಿ, ನಾವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದರ ಕುರಿತು ಚಿಂತಿಸಬಾರದು: ‘ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ನ್ಯಾಯತೀರ್ಪು ಹೇಗೆ ನಡೆಯುವುದು? ಅರ್ಮಗೆದೋನ್ ತಾಕುವಾಗ, ಒಂದು ದೊಡ್ಡ ಸಂಖ್ಯೆಯ ಜನರಿಗೆ ಸುವಾರ್ತೆಯು ಇನ್ನೂ ತಲಪದೆ ಇರಸಾಧ್ಯವೋ? ಮಾನಸಿಕವಾಗಿ ಅಸ್ವಸ್ಥರಾಗಿರುವವರ ಕುರಿತೇನು? . . . ಕುರಿತೇನು?’ ಈ ವಿಷಯಗಳನ್ನು ಯೆಹೋವನು ಹೇಗೆ ಪರಿಹರಿಸುವನೆಂಬುದು ನಮಗೆ ಈಗ ತಿಳಿದಿರುವುದಿಲ್ಲ ನಿಜ. ಆದರೆ ಆತನು ಅದನ್ನು ಒಂದು ನೀತಿಯುತ ಹಾಗೂ ದಯಾಪೂರ್ಣ ವಿಧದಲ್ಲಿ ಮಾಡುವನು. ಅದನ್ನು ನಾವು ಎಂದಿಗೂ ಸಂದೇಹಿಸಬಾರದು. ವಾಸ್ತವದಲ್ಲಿ, ನಾವೆಂದಿಗೂ ಪರಿಗಣಿಸದಿದ್ದ ವಿಧದಲ್ಲಿ ಆತನು ಅವುಗಳನ್ನು ಪರಿಹರಿಸುವುದನ್ನು ನೋಡಿ, ನಾವು ವಿಸ್ಮಿತರೂ ಆನಂದಿತರೂ ಆಗಿರಬಹುದು.—ಹೋಲಿಸಿ ಯೋಬ 42:3; ಕೀರ್ತನೆ 78:11-16; 136:4-9; ಮತ್ತಾಯ 15:31; ಲೂಕ 2:47.
19, 20. (ಎ) ತರ್ಕಸಮ್ಮತ ಪ್ರಶ್ನೆಗಳನ್ನು ಕೇಳುವುದು ತಪ್ಪಲ್ಲ ಏಕೆ? (ಬಿ) ಬೇಕಾದ ಉತ್ತರಗಳನ್ನು ಯೆಹೋವನು ಯಾವಾಗ ಒದಗಿಸುವನು?
19 ಕೆಲವು ವಿರೋಧಿಗಳು ತಪ್ಪಾಗಿ ಪ್ರತಿಪಾದಿಸುವಂತೆ, ಯೆಹೋವನ ಸಂಸ್ಥೆಯು ಪ್ರಾಮಾಣಿಕವಾದ, ಸಮಯೋಚಿತ ಪ್ರಶ್ನೆಗಳನ್ನು ನಿರುತ್ತೇಜಿಸುವುದಿಲ್ಲ. (1 ಪೇತ್ರ 1:10-12) ಹಾಗಿದ್ದರೂ, ನಾವು ಮೂರ್ಖ, ಊಹಾತ್ಮಕ ಪ್ರಶ್ನೆಗಳಿಂದ ದೂರವಿರಬೇಕೆಂದು ಬೈಬಲು ಸಲಹೆ ನೀಡುತ್ತದೆ. (ತೀತ 3:9) ತರ್ಕಸಮ್ಮತ ಪ್ರಶ್ನೆಗಳನ್ನು ಕೇಳುವುದು ಮತ್ತು ಶಾಸ್ತ್ರೀಯ ಉತ್ತರಗಳನ್ನು ಕಂಡುಕೊಳ್ಳಲು ದೇವರ ವಾಕ್ಯ ಮತ್ತು ಕ್ರೈಸ್ತ ಪ್ರಕಾಶನಗಳಲ್ಲಿ ಹುಡುಕುವುದು, ನಮ್ಮ ಯಥಾರ್ಥ ಜ್ಞಾನವನ್ನು ಹೆಚ್ಚಿಸುತ್ತದೆ, ಮತ್ತು ಹೀಗೆ ಯೆಹೋವನಲ್ಲಿ ನಮ್ಮ ಭರವಸೆಯನ್ನು ಬಲಪಡಿಸಸಾಧ್ಯವಿದೆ. ಈ ಸಂಸ್ಥೆಯು ಯೇಸುವಿನ ಮಾದರಿಯನ್ನು ಅನುಸರಿಸುತ್ತದೆ. ಯಾವ ಪ್ರಶ್ನೆಗಳಿಗೆ ಉತ್ತರನೀಡುವ ಸೂಕ್ತ ಸಮಯವು ಬಂದ್ದಿರಲಿಲ್ಲವೊ ಅವುಗಳನ್ನು ಉತ್ತರಿಸುವುದರಿಂದ ಅವನು ತಡೆದನು. ಅವನು ವಿವರಿಸಿದ್ದು: “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.” (ಯೋಹಾನ 16:12) ಈ ಹಂತದಲ್ಲಿ ತನಗೂ ಕೆಲವೊಂದು ವಿಷಯಗಳು ಗೊತ್ತಿರಲಿಲ್ಲವೆಂದು ಅವನು ಒಪ್ಪಿಕೊಂಡನು.—ಮತ್ತಾಯ 24:36.
20 ಯೆಹೋವನು ತಿಳಿಯಪಡಿಸಬೇಕಾದ ವಿಷಯಗಳು ಇನ್ನೂ ಇವೆ. ತನ್ನ ಉದ್ದೇಶಗಳನ್ನು ಆತನು ಸೂಕ್ತವಾದ ಸಮಯದಲ್ಲಿ ಪ್ರಕಟಿಸುವನೆಂಬ ಭರವಸೆಯಿಂದ ಆತನಿಗಾಗಿ ಕಾಯುವುದು ಎಷ್ಟೊಂದು ವಿವೇಕಪ್ರದವು! ಯೆಹೋವನ ಕ್ಲುಪ್ತ ಸಮಯವು ಬಂದಾದ ಮೇಲೆ, ಆತನ ಮಾರ್ಗಗಳ ವಿಷಯವಾಗಿ ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳುವ ಆನಂದವು ನಮಗಿರುವುದೆಂಬ ಭರವಸೆಯೊಂದಿಗೆ ನಾವಿರಬಲ್ಲೆವು. ಹೌದು, ಯೆಹೋವನಲ್ಲಿ ಮತ್ತು ಆತನು ಉಪಯೋಗಿಸುತ್ತಿರುವ ಸಂಸ್ಥೆಯಲ್ಲಿ ನಾವು ಸಂಪೂರ್ಣ ಭರವಸೆಯನ್ನು ಇಡುವಲ್ಲಿ ಮಾತ್ರ, ನಾವು ಬಹುಮಾನಿಸಲ್ಪಡುವೆವು. ಜ್ಞಾನೋಕ್ತಿ 14:26 ನಮಗೆ ಆಶ್ವಾಸನೆ ನೀಡುವುದು, “ಯೆಹೋವನಿಗೆ ಭಯಪಡುವದರಿಂದ ಕೇವಲ ನಿರ್ಭಯ; ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವದು.”
[ಪಾದಟಿಪ್ಪಣಿ]
a ಕಾವಲಿನಬುರುಜು (ಇಂಗ್ಲಿಷ್), ಅಕ್ಟೋಬರ್ 15, 1967, ಪುಟ 638; ಜೂನ್ 1, 1987, ಪುಟ 30ನ್ನು ನೋಡಿರಿ.
ನೀವು ಏನು ನೆನಸುತ್ತೀರಿ?
◻ ಭಾವನೆಗಳು ಯೆಹೋವನಲ್ಲಿನ ನಮ್ಮ ಭರವಸೆಯನ್ನು ಕುಗ್ಗಿಸುವಂತೆ ಬಿಡುವುದು ಏಕೆ ಬುದ್ಧಿಹೀನವಾಗಿದೆ?
◻ ನಾವು ಯೋನನ ಅನುಭವದಿಂದ ಏನನ್ನು ಕಲಿಯಬಲ್ಲೆವು?
◻ ಬೈಬಲ್ ಅಧ್ಯಯನ ಮತ್ತು ಕೂಟದ ಹಾಜರಿಯು ಅಷ್ಟೊಂದು ಪ್ರಾಮುಖ್ಯವಾಗಿದೆ ಏಕೆ?
[ಪುಟ 16 ರಲ್ಲಿರುವ ಚಿತ್ರ]
ವೈಯಕ್ತಿಕ ನಷ್ಟದ ಎದುರಿನಲ್ಲೂ, ಯೆಹೋವನು ನೀತಿವಂತನೆಂಬ ವಿಷಯದಲ್ಲಿ ನಾವು ಭರವಸೆಯುಳ್ಳವರಾಗಿರಬಲ್ಲೆವು
[ಪುಟ 18 ರಲ್ಲಿರುವ ಚಿತ್ರ]
ನಿಮ್ಮ ಭರವಸೆಯು ಯೆಹೋವನಲ್ಲಿದೆ ಎಂಬ ವಿಷಯದಲ್ಲಿ ನೀವು ಖಚಿತರಾಗಿದ್ದೀರೊ?