ಅಧ್ಯಾಯ ಇಪ್ಪತ್ತೊಂದು
ಯೆಹೋವನು ಕೈಯೆತ್ತುತ್ತಾನೆ
1. ಯಾವ ಕಾರಣಕ್ಕಾಗಿ ಯೆಶಾಯನು ಯೆಹೋವನ ಪರವಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾನೆ?
ಯೆಶಾಯನು ಯೆಹೋವನನ್ನು ಬಹಳವಾಗಿ ಪ್ರೀತಿಸುತ್ತಾನೆ ಮತ್ತು ಆತನನ್ನು ಸ್ತುತಿಸುವುದರಲ್ಲಿ ಹರ್ಷಿಸುತ್ತಾನೆ. ಅವನು ಕೂಗಿ ಹೇಳುವುದು: “ಯೆಹೋವನೇ, ನೀನೇ ನನ್ನ ದೇವರು; . . . ನಿನ್ನ ನಾಮವನ್ನು ಮಹಿಮೆಗೊಳಿಸುವೆನು.” ಪ್ರವಾದಿಯು ತನ್ನ ಸೃಷ್ಟಿಕರ್ತನಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವಂತೆ ಯಾವುದು ಸಹಾಯಮಾಡಿತು? ಒಂದು ಪ್ರಧಾನ ಅಂಶವು, ಯೆಹೋವನ ಮತ್ತು ಆತನ ಚಟುವಟಿಕೆಗಳ ಕುರಿತು ಅವನಿಗಿರುವ ಜ್ಞಾನವೇ. ಈ ಜ್ಞಾನವನ್ನು ಯೆಶಾಯನ ಮುಂದಿನ ಮಾತುಗಳು ಪ್ರಕಟಿಸುತ್ತವೆ: “ನೀನು ಸತ್ಯಪ್ರಾಮಾಣಿಕತೆಗಳನ್ನು ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು.” (ಯೆಶಾಯ 25:1) ಅವನಿಗಿಂತ ಮುಂಚಿನವನಾದ ಯೆಹೋಶುವನಂತೆ ಯೆಶಾಯನಿಗೂ ತಿಳಿದಿತ್ತೇನಂದರೆ, ಯೆಹೋವನು ನಂಬಿಗಸ್ತನೂ ವಿಶ್ವಾಸಪಾತ್ರನೂ ಆಗಿದ್ದಾನೆ ಮಾತ್ರವಲ್ಲ, ಆತನ ಎಲ್ಲ ‘ಸಂಕಲ್ಪಗಳು,’ ಅಂದರೆ ಉದ್ದೇಶಗಳು ನಿಜವಾಗುವವು.—ಯೆಹೋಶುವ 23:14.
2. ಯೆಹೋವನ ಯಾವ ಸಂಕಲ್ಪಗಳನ್ನು ಯೆಶಾಯನು ಈಗ ಪ್ರಕಟಿಸುತ್ತಾನೆ, ಮತ್ತು ಈ ಸಂಕಲ್ಪದ ಉದ್ದೇಶವೇನಾಗಿರಬಹುದು?
2 ಯೆಹೋವನ ಸಂಕಲ್ಪಗಳಲ್ಲಿ, ಇಸ್ರಾಯೇಲಿನ ವೈರಿಗಳ ವಿರುದ್ಧ ಆತನ ನ್ಯಾಯತೀರ್ಪುಗಳು ಸಹ ಸೇರಿವೆ. ಅವುಗಳಲ್ಲಿ ಒಂದನ್ನು ಯೆಶಾಯನು ಈಗ ಪ್ರಕಟಿಸುತ್ತಾನೆ: “ನೀನು ದುರ್ಗವನ್ನು ನಾಶಪಡಿಸಿ ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದ ಹಾಳೂರನ್ನಾಗಿಯೂ ಮಾಡಿದ್ದೀ.” (ಯೆಶಾಯ 25:2) ಈ ಹೆಸರಿಲ್ಲದ ಪಟ್ಟಣವು ಯಾವುದು? ಯೆಶಾಯನು ಮೋವಾಬಿನ ಆರ್ ಪಟ್ಟಣಕ್ಕೆ ಸೂಚಿಸುತ್ತಿರಬಹುದು. ಮತ್ತು ಮೋವಾಬ್ ದೀರ್ಘ ಸಮಯದಿಂದಲೂ ದೇವಜನರ ವೈರಿಯಾಗಿದೆ.a ಇಲ್ಲದಿದ್ದರೆ, ಬಲಿಷ್ಠ ನಗರವಾದ ಬಾಬೆಲ್ ಅನ್ನೂ ಅವನು ಸೂಚಿಸುತ್ತಿರಬಹುದು.—ಯೆಶಾಯ 15:1; ಚೆಫನ್ಯ 2:8, 9.
3. ಯಾವ ವಿಧದಲ್ಲಿ ಯೆಹೋವನ ವೈರಿಗಳು ಆತನನ್ನು ಘನಪಡಿಸುತ್ತಾರೆ?
3 ತಮ್ಮ ಬಲಿಷ್ಠ ಪಟ್ಟಣದ ಮೇಲೆ ಯೆಹೋವನ ಸಂಕಲ್ಪವು ನೆರವೇರಿದಾಗ, ದೇವರ ವೈರಿಗಳು ಹೇಗೆ ಪ್ರತಿಕ್ರಿಯಿಸುವರು? “ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವದು, ಭಯಂಕರ ಜನರ ಪಟ್ಟಣವು ನಿನಗೆ ಅಂಜುವದು.” (ಯೆಶಾಯ 25:3) ಸರ್ವಶಕ್ತ ದೇವರ ವೈರಿಗಳು ಅವನಿಗೆ ಹೆದರಿ ಗಡಗಡನೆ ನಡುಗುವರು ಎಂಬುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ಅವರು ದೇವರನ್ನು ಘನಪಡಿಸುವುದು ಹೇಗೆ? ಅವರು ತಮ್ಮ ಸುಳ್ಳು ದೇವರುಗಳನ್ನು ತೊರೆದು, ಸತ್ಯಾರಾಧನೆಯನ್ನು ಅಂಗೀಕರಿಸುವರೊ? ಖಂಡಿತವಾಗಿಯೂ ಇಲ್ಲ! ಬದಲಿಗೆ, ಅವರು ಫರೋಹ ಹಾಗೂ ನೆಬೂಕದ್ನೆಚ್ಚರರಂತೆ ಯೆಹೋವನ ಅತಿಶಯವಾದ ಶ್ರೇಷ್ಠತೆಯನ್ನು ಅಂಗೀಕರಿಸುವಂತೆ ಒತ್ತಾಯಿಸಲ್ಪಡುವಾಗ ದೇವರನ್ನು ಘನಪಡಿಸುವರು.—ವಿಮೋಚನಕಾಂಡ 10:16, 17; 12:30-33; ದಾನಿಯೇಲ 4:37.
4. “ಭಯಂಕರ ಜನರ” ಯಾವ “ಪಟ್ಟಣವು” ಇಂದು ಅಸ್ತಿತ್ವದಲ್ಲಿದೆ, ಮತ್ತು ಅದು ಕೂಡ ಯೆಹೋವನನ್ನು ಹೇಗೆ ಘನಪಡಿಸುವುದು?
4 ಇಂದು ಆ “ಭಯಂಕರ ಜನರ ಪಟ್ಟಣವು,” “ಭೂರಾಜರ ಮೇಲೆ ಅಧಿಕಾರ ಹೊಂದಿರುವ ಮಹಾನಗರಿಯೇ” ಆಗಿದೆ. ಇದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲ್’ ಎಂಬ ಹೆಸರನ್ನು ಪಡೆದಿದೆ. (ಪ್ರಕಟನೆ 17:5, 18) ಈ ಸಾಮ್ರಾಜ್ಯದ ಪ್ರಧಾನ ಭಾಗವು ಕ್ರೈಸ್ತಪ್ರಪಂಚವಾಗಿದೆ. ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಯೆಹೋವನನ್ನು ಘನಪಡಿಸುವುದು ಹೇಗೆ? ದೇವರು ತನ್ನ ಸಾಕ್ಷಿಗಳ ಪರವಾಗಿ ಸಾಧಿಸಿರುವ ಮಹತ್ತರವಾದ ವಿಷಯಗಳನ್ನು ಕಹಿ ಮನಸ್ಸಿನಿಂದ ಅಂಗೀಕರಿಸುವ ಮೂಲಕವೇ. ವಿಶೇಷವಾಗಿ 1919ರಲ್ಲಿ ಯೆಹೋವನು ತನ್ನ ಸೇವಕರನ್ನು ಮಹಾ ಬಾಬೆಲಿನ ಆತ್ಮಿಕ ಸೆರೆವಾಸದಿಂದ ಬಿಡಿಸಿ, ಹುರುಪುಳ್ಳ ಚಟುವಟಿಕೆಯನ್ನು ಮತ್ತೆ ಆರಂಭಿಸುವಂತೆ ಮಾಡಿದಾಗ, ಈ ಮುಖಂಡರು “ಭಯಗ್ರಸ್ತರಾಗಿ ಪರಲೋಕ ದೇವರನ್ನು ಘನಪಡಿಸಿದರು.”—ಪ್ರಕಟನೆ 11:13.b
5. ತನ್ನಲ್ಲಿ ಸಂಪೂರ್ಣ ಭರವಸೆಯುಳ್ಳವರನ್ನು ಯೆಹೋವನು ಹೇಗೆ ರಕ್ಷಿಸುತ್ತಾನೆ?
5 ಯೆಹೋವನು ತನ್ನ ವೈರಿಗಳಲ್ಲಿ ನಡುಕವನ್ನುಂಟುಮಾಡಿದರೂ, ಆತನನ್ನು ಸೇವಿಸಬಯಸುವ ದೀನರಿಗೂ ನಮ್ರರಿಗೂ ಆತನು ಒಂದು ಆಶ್ರಯದುರ್ಗವಾಗಿದ್ದಾನೆ. ಸತ್ಯ ಆರಾಧಕರ ನಂಬಿಕೆಯನ್ನು ಮುರಿದುಹಾಕಲು ಧಾರ್ಮಿಕ ಹಾಗೂ ರಾಜಕೀಯ ಪೀಡಕರು ಪ್ರಯತ್ನಿಸಬಹುದಾದರೂ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಏಕೆಂದರೆ ಇವರಿಗೆ ಯೆಹೋವನಲ್ಲಿ ಸಂಪೂರ್ಣ ಭರವಸೆಯಿದೆ. ಮರುಭೂಮಿಯಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನನ್ನು ಒಂದು ಮೋಡದಿಂದ ಮರೆಮಾಡುವಂತೆ ಇಲ್ಲವೆ ಬಿರುಗಾಳಿಯ ವೇಗವನ್ನು ಗೋಡೆಯಿಂದ ಅಡ್ಡತಡೆಯುವಂತೆ, ಯೆಹೋವನು ಕಟ್ಟಕಡೆಗೆ ಕ್ಷಣಮಾತ್ರದಲ್ಲಿ ತನ್ನ ವೈರಿಗಳ ಸೊಲ್ಲಡಗಿಸಿಬಿಡುತ್ತಾನೆ.—ಓದಿ ಯೆಶಾಯ 25:4, 5.
‘ಸಕಲಜನಾಂಗಗಳಿಗೂ ಔತಣ’
6, 7. (ಎ) ಯೆಹೋವನು ಯಾವ ರೀತಿಯ ಔತಣವನ್ನು ಅಣಿಮಾಡುತ್ತಾನೆ, ಮತ್ತು ಯಾರಿಗಾಗಿ? (ಬಿ) ಯೆಶಾಯನು ಪ್ರವಾದಿಸಿದ ಔತಣವು ಏನನ್ನು ಮುನ್ಚಿತ್ರಿಸುತ್ತದೆ?
6 ಯೆಹೋವನು ಒಬ್ಬ ಪ್ರೀತಿಪರ ತಂದೆಯಂತೆ, ತನ್ನ ಮಕ್ಕಳನ್ನು ರಕ್ಷಿಸುವುದು ಮಾತ್ರವಲ್ಲ ಅವರಿಗೆ ಬೇಕಾದ ಆಹಾರವನ್ನೂ, ವಿಶೇಷವಾಗಿ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ. 1919ರಲ್ಲಿ ತನ್ನ ಜನರನ್ನು ಸ್ವತಂತ್ರಗೊಳಿಸಿದ ಬಳಿಕ, ಆತನು ಅವರಿಗಾಗಿ ಹೇರಳವಾದ ಆತ್ಮಿಕ ಆಹಾರವನ್ನು ಒಂದು ವಿಜಯದ ಔತಣದೋಪಾದಿ ಅಣಿಮಾಡಿದನು: “ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.”—ಯೆಶಾಯ 25:6.
7 ಈ ಔತಣವು ಯೆಹೋವನ ‘ಪರ್ವತದ’ ಮೇಲೆ ಅಣಿಮಾಡಲ್ಪಟ್ಟಿದೆ. ಈ ಪರ್ವತವು ಏನಾಗಿದೆ? ಅದು “ಅಂತ್ಯಕಾಲದಲ್ಲಿ” ಎಲ್ಲ ಜನಾಂಗಗಳು ಪ್ರವಾಹಗಳಂತೆ ಹರಿದುಬರುವ “ಯೆಹೋವನ ಮಂದಿರದ ಬೆಟ್ಟ”ವಾಗಿದೆ. ಅದು ಯೆಹೋವನ “ಪರಿಶುದ್ಧ ಪರ್ವತ”ವೂ ಆಗಿದೆ. ಅಲ್ಲಿ ಆತನ ನಂಬಿಗಸ್ತ ಆರಾಧಕರು ಕೇಡನ್ನಾಗಲಿ ಹಾನಿಯನ್ನಾಗಲಿ ಉಂಟುಮಾಡಲಾರರು. (ಯೆಶಾಯ 2:2; 11:9) ಈ ಉನ್ನತ ಆರಾಧನಾ ಸ್ಥಳದಲ್ಲಿ, ಯೆಹೋವನು ತನ್ನ ನಂಬಿಗಸ್ತ ಆರಾಧಕರಿಗೆ ಈ ಸಮೃದ್ಧವಾದ ಭೋಜನವನ್ನು ಬಡಿಸುತ್ತಾನೆ. ಈಗ ಯಥೇಷ್ಟವಾಗಿ ಬಡಿಸಲ್ಪಡುವ ಆತ್ಮಿಕ ವಿಷಯಗಳು, ಮುಂದೆ ದೇವರ ರಾಜ್ಯವು ಮಾನವಕುಲದ ಏಕೈಕ ಸರಕಾರವಾಗಿ ಕಾರ್ಯಮಾಡುವಾಗ ಒದಗಿಸಲಿರುವ ಎಲ್ಲ ಭೌತಿಕ ಸುವಿಷಯಗಳನ್ನು ಮುನ್ಚಿತ್ರಿಸುತ್ತವೆ. ಆಗ ಹಸಿವಿನ ಸುಳಿವೇ ಇರಲಾರದು. ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿರುವುದು.’—ಕೀರ್ತನೆ 72:8, 16.
8, 9. (ಎ) ಮಾನವಕುಲದ ಯಾವ ಎರಡು ಮಹಾ ವೈರಿಗಳು ಇಲ್ಲದೆಹೋಗುವವು? ವಿವರಿಸಿರಿ. (ಬಿ) ತನ್ನ ಜನರ ಅವಮಾನವನ್ನು ನೀಗಿಸಲು ದೇವರು ಏನು ಮಾಡುವನು?
8 ದೈವಿಕವಾಗಿ ಒದಗಿಸಲ್ಪಟ್ಟ ಈ ಆತ್ಮಿಕ ಔತಣದಲ್ಲಿ ಭಾಗವಹಿಸುವವರೆಲ್ಲರಿಗೂ ಅದ್ಭುತವಾದ ಪ್ರತೀಕ್ಷೆಗಳಿವೆ. ಯೆಶಾಯನ ಮುಂದಿನ ಮಾತುಗಳಿಗೆ ಗಮನಕೊಡಿರಿ. ಅವನು ಪಾಪಮರಣಗಳನ್ನು ಉಸಿರುಕಟ್ಟಿಸುವ “ಮುಸುಕು” ಇಲ್ಲವೆ ‘ತೆರೆಗೆ’ ಹೋಲಿಸುತ್ತಾ ಹೇಳುವುದು: “ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶೀಯರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ [ಯೆಹೋವನು] ನಾಶಮಾಡುವನು. ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:7, 8ಎ.
9 ಹೌದು, ಇನ್ನು ಮುಂದೆ ಪಾಪ ಹಾಗೂ ಮರಣಗಳಿಲ್ಲ! (ಪ್ರಕಟನೆ 21:3, 4) ಅಲ್ಲದೆ, ಯೆಹೋವನ ಸೇವಕರು ಸಾವಿರಾರು ವರ್ಷಗಳಿಂದ ತಾಳಿಕೊಂಡು ಬಂದಿರುವ ಅವಮಾನವು ಸಹ ಅಳಿಸಿಹಾಕಲ್ಪಡುವುದು. “ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 25:8ಬಿ) ಇದು ಹೇಗೆ ಸಂಭವಿಸುವುದು? ಯೆಹೋವನು ಆ ಅವಮಾನದ ಬುಡವನ್ನೇ, ಅಂದರೆ ಸೈತಾನ ಮತ್ತು ಅವನ ಸಂತತಿಯನ್ನೇ ಕಿತ್ತೆಸೆಯುವನು. (ಪ್ರಕಟನೆ 20:1-3) ಆ ಕಾರಣ, ದೇವಜನರು ಹೀಗೆ ಉದ್ಗರಿಸಲು ಪ್ರೇರಿಸಲ್ಪಡುವುದರಲ್ಲಿ ಆಶ್ಚರ್ಯವೇ ಇಲ್ಲ: “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು ಎಂದು ಹೇಳಿಕೊಳ್ಳುವರು.”—ಯೆಶಾಯ 25:9.
ಅಹಂಕಾರಿಗಳು ಹೀನೈಸಲ್ಪಡುತ್ತಾರೆ
10, 11. ಯೆಹೋವನು ಮೋವಾಬಿಗಾಗಿ ಯಾವ ಕಠೋರ ತೀರ್ಪನ್ನು ಕಾದಿರಿಸಿದ್ದಾನೆ?
10 ಯೆಹೋವನು ದೀನಭಾವವನ್ನು ತೋರಿಸುವ ಜನರನ್ನು ರಕ್ಷಿಸುತ್ತಾನೆ. ಆದರೆ, ಇಸ್ರಾಯೇಲಿನ ನೆರೆರಾಜ್ಯವಾದ ಮೋವಾಬ್ ಗರ್ವದಿಂದ ಮೆರೆಯುತ್ತದೆ ಮತ್ತು ಇಂತಹ ಗರ್ವವನ್ನು ಯೆಹೋವನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 16:18) ಆದುದರಿಂದಲೇ, ಮೋವಾಬ್ ಅಪಮಾನಕ್ಕೆ ಗುರಿಯಾಗಲಿದೆ. “ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವದು; ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾನಿದ್ದಲ್ಲೇ ತುಳಿಯಲ್ಪಡುವದು. ಈಜುವವನು ಕೈಯಾಡಿಸುವಂತೆ ಅದರಲ್ಲಿಯೇ ಕೈಯಾಡಿಸುವದು; [ಯೆಹೋವನು] ಅದರ ಗರ್ವವನ್ನೂ ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು. ದುರ್ಗಮವಾಗಿಯೂ ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ ತಗ್ಗಿಸಿ ನೆಲಸಮಮಾಡಿ ದೂಳಿಗೇ ತರುವನು.”—ಯೆಶಾಯ 25:10-12.
11 ಯೆಹೋವನ ಕೈ ಮೋವಾಬಿನ ಪರ್ವತದ ಮೇಲೆ ‘ನೆಲೆಸುವುದು.’ ಆಗೇನು ಸಂಭವಿಸುವುದು? ಅಹಂಕಾರಿ ಮೋವಾಬ್ನ ವಿರುದ್ಧ ಕೈಯಾಡಿಸಲ್ಪಡುವುದು ಮತ್ತು “ತಿಪ್ಪೆಗುಂಡಿಯ ರೊಚ್ಚಿನಲ್ಲಿ . . . ತುಳಿಯಲ್ಪಡುವ ಹಾಗೆ” ತುಳಿದಾಡಲ್ಪಡುವುದು. ಯೆಶಾಯನ ಸಮಯದಲ್ಲಿ, ಒಣಹುಲ್ಲನ್ನು ಸೆಗಣಿಯಲ್ಲಿ ಹಾಕಿ ತುಳಿದು ಗೊಬ್ಬರವನ್ನು ತಯಾರಿಸುತ್ತಿದ್ದರು; ಹಾಗೆಯೇ ಮೋವಾಬಿನಲ್ಲಿ ಎತ್ತರವೂ ದುರ್ಗಮವೂ ಆದ ಕೋಟೆಗಳಿದ್ದರೂ ಅವು ಅವಮಾನಕ್ಕೆ ಗುರಿಯಾಗಲಿವೆ ಎಂಬುದನ್ನು ಯೆಶಾಯನು ಮುಂತಿಳಿಸುತ್ತಾನೆ.
12. ಯೆಹೋವನ ನ್ಯಾಯತೀರ್ಪಿಗಾಗಿ ಮೋವಾಬ್ ಏಕೆ ಗುರುತಿಸಲ್ಪಟ್ಟಿದೆ?
12 ಯೆಹೋವನು ಮೋವಾಬ್ ದೇಶಕ್ಕೇ ಇಂತಹ ಕಠೋರ ನ್ಯಾಯವನ್ನು ನೀಡುವುದೇಕೆ? ಮೋವಾಬ್ಯರು, ಯೆಹೋವನ ಆರಾಧಕನೂ ಅಬ್ರಹಾಮನ ಸೋದರಳಿಯನೂ ಆಗಿದ್ದ ಲೋಟನ ವಂಶಸ್ಥರು. ಹೀಗೆ, ಅವರು ದೇವರ ಒಡಂಬಡಿಕೆಯ ಜನಾಂಗದ ನೆರೆಯವರು ಮಾತ್ರವಲ್ಲ ಅವರ ಸಂಬಂಧಿಕರೂ ಆಗಿದ್ದಾರೆ. ಹಾಗಿದ್ದರೂ ಅವರು ಸುಳ್ಳು ದೇವರುಗಳನ್ನು ಆರಾಧಿಸಿ, ಇಸ್ರಾಯೇಲಿನ ಕಡೆಗೆ ನಿಷ್ಠುರತೆಯನ್ನು ಪ್ರದರ್ಶಿಸಿದ್ದಾರೆ. ಇದಕ್ಕಾಗಿ ಅವರು ಶಿಕ್ಷೆಯನ್ನು ಅನುಭವಿಸಲೇಬೇಕು. ಈ ವಿಷಯದಲ್ಲಿ ಮೋವಾಬ್, ಯೆಹೋವನ ಸೇವಕರ ಇಂದಿನ ವೈರಿಗಳನ್ನು ಹೋಲುತ್ತದೆ. ಅದು ವಿಶೇಷವಾಗಿ ಕ್ರೈಸ್ತಪ್ರಪಂಚದಂತಿದೆ. ಏಕೆಂದರೆ, ತನಗೆ ಪ್ರಥಮ ಶತಮಾನದ ಕ್ರೈಸ್ತ ಸಭೆಯೊಂದಿಗೆ ಸಂಬಂಧವಿರುವುದಾಗಿ ಕ್ರೈಸ್ತಪ್ರಪಂಚವು ಹೇಳಿಕೊಂಡರೂ, ಅದು ನಾವು ಈಗಾಗಲೇ ನೋಡಿರುವಂತೆ ಮಹಾ ಬಾಬೆಲಿನ ಪ್ರಧಾನ ಭಾಗವಾಗಿದೆ.
ರಕ್ಷಣೆಯ ಗೀತೆ
13, 14. ಇಂದು ದೇವಜನರಿಗೆ ಯಾವ “ಬಲವಾದ ಪಟ್ಟಣ”ವಿದೆ, ಮತ್ತು ಅದರಲ್ಲಿ ಪ್ರವೇಶಿಸುವವರು ಯಾರು?
13 ಹಾಗಾದರೆ, ದೇವಜನರ ಕುರಿತೇನು? ಯೆಹೋವನ ಅನುಗ್ರಹ ಮತ್ತು ರಕ್ಷಣೆಯನ್ನು ಪಡೆದಿರುವ ಇವರು, ಪುಳಕಿತರಾಗಿ ತಮ್ಮ ಧ್ವನಿಗಳನ್ನು ಏರಿಸಿ ಹಾಡುತ್ತಾರೆ. “ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಗೀತವನ್ನು ಹಾಡುವರು—ನಮಗೆ ಬಲವಾದ ಪಟ್ಟಣವಿದೆ. [ಯೆಹೋವನು ತನ್ನ] ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ. ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗವು ಪ್ರವೇಶಿಸಲಿ!” (ಯೆಶಾಯ 26:1, 2) ಈ ಮಾತುಗಳು ಹಿಂದೊಮ್ಮೆ ನೆರವೇರಿದವಾದರೂ, ಇಂದು ಸಹ ಅವುಗಳು ಸ್ಪಷ್ಟವಾದ ರೀತಿಯಲ್ಲಿ ನೆರವೇರುತ್ತಿವೆ. ಯೆಹೋವನ ‘ಧರ್ಮಸತ್ಯಗಳನ್ನು ಕೈಗೊಳ್ಳುವ ಜನಾಂಗ’ವಾದ ಆತ್ಮಿಕ ಇಸ್ರಾಯೇಲಿಗೆ, ಬಲವಾದ ಪಟ್ಟಣಸದೃಶ ಸಂಘಟನಾ ವ್ಯವಸ್ಥೆಯಿದೆ. ಹರ್ಷೋಲ್ಲಾಸಕ್ಕೆ, ಗೀತಹಾಡುವುದಕ್ಕೆ ಎಂತಹ ಸಕಾರಣ!
14 ಯಾವ ರೀತಿಯ ಜನರು ಈ “ಪಟ್ಟಣ”ವನ್ನು ಪ್ರವೇಶಿಸುತ್ತಾರೆ? ಅದರ ಉತ್ತರವನ್ನು ಈ ಗೀತೆಯು ನೀಡುತ್ತದೆ: “ಸ್ಥಿರಚಿತ್ತನನ್ನು [“ಸ್ಥಿರಚಿತ್ತವನ್ನು,” NW] ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ [“ಅದಕ್ಕೆ,” NW] ನಿನ್ನಲ್ಲಿ ಭರವಸವಿದೆ. ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.” (ಯೆಶಾಯ 26:3, 4) ಈ ಲೋಕದ ತತ್ತರಿಸುತ್ತಿರುವ ವ್ಯಾಪಾರಿ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗಳ ಮೇಲೆ ಭರವಸೆಯನ್ನಿಡದೆ, ಯೆಹೋವನಲ್ಲೇ ಭರವಸೆಯಿಟ್ಟು, ಆತನ ನೀತಿಯ ತತ್ವಗಳಿಗೆ ವಿಧೇಯರಾಗುವ ಬಯಕೆಯೇ, ಯೆಹೋವನು ಸಮರ್ಥಿಸುವಂತಹ ‘ಸ್ಥಿರಚಿತ್ತ’ ಆಗಿದೆ. ‘ಯಾಹುಯೆಹೋವನೇ’ ಭದ್ರತೆಯ ಶಾಶ್ವತ ಆಶ್ರಯಗಿರಿಯಾಗಿದ್ದಾನೆ. ಯೆಹೋವನಲ್ಲಿ ಪೂರ್ಣ ಭರವಸೆಯಿರುವವರು, ಆತನ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ ಮತ್ತು ‘ನೆಲೆಗೊಂಡ ಶಾಂತಿ’ಯನ್ನು ಅನುಭವಿಸುತ್ತಾರೆ.—ಜ್ಞಾನೋಕ್ತಿ 3:5, 6; ಫಿಲಿಪ್ಪಿ 4:6, 7.
15. ‘ಉನ್ನತವಾದ ಪಟ್ಟಣವು’ ಇಂದು ನೆಲಸಮವಾಗಿರುವುದು ಹೇಗೆ, ಮತ್ತು ಯಾವ ರೀತಿಯಲ್ಲಿ ‘ಬಡವರು ಅದನ್ನು ಕಾಲಿನಿಂದ’ ತುಳಿದಾಡುವರು?
15 ಇದು ದೇವರ ವೈರಿಗಳು ಅನುಭವಿಸುವ ಸ್ಥಿತಿಗಿಂತ ಎಷ್ಟು ಭಿನ್ನವಾಗಿದೆ! “ಆತನು ಎತ್ತರದಲ್ಲಿ ವಾಸಿಸುವವರನ್ನೂ [ಅವರ] ಉನ್ನತ ಪಟ್ಟಣವನ್ನೂ ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ. ಅದು ಕಾಲತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದುಬಿಡುತ್ತಾರೆ.” (ಯೆಶಾಯ 26:5, 6) ಇಲ್ಲಿ ಸಹ, ಯೆಶಾಯನು ಮೋವಾಬಿನ ಒಂದು “ಉನ್ನತ ಪಟ್ಟಣವನ್ನು” ಇಲ್ಲವೆ ಅಹಂಕಾರವನ್ನು ತೋರಿಸುವುದರಲ್ಲಿ ತೀರ ಉನ್ನತವಾಗಿರುವ ಬಾಬೆಲಿನಂತಹ ಬೇರೊಂದು ಪಟ್ಟಣವನ್ನು ಸೂಚಿಸಿ ಮಾತಾಡುತ್ತಿರಬಹುದು. ವಿಷಯವು ಏನೇ ಆಗಿರಲಿ, ಈ ‘ಉನ್ನತ ಪಟ್ಟಣದ’ ಸ್ಥಿತಿಯು ತಲೆಕೆಳಗಾಗುವಂತೆ ಯೆಹೋವನು ಮಾಡಿದ್ದಾನೆ ಮತ್ತು ಆತನ “ದಿಕ್ಕಿಲ್ಲದ ಬಡವರು ಅದನ್ನು ಕಾಲಿನಿಂದ ತುಳಿದು”ಹಾಕುತ್ತಾರೆ. ಇಂದು ಈ ಪ್ರವಾದನೆಯು ಮಹಾ ಬಾಬೆಲನ್ನು, ಅದರಲ್ಲೂ ವಿಶೇಷವಾಗಿ ಕ್ರೈಸ್ತಪ್ರಪಂಚವನ್ನು ಸೂಕ್ತವಾಗಿ ಹೋಲುತ್ತದೆ. ಈ ‘ಉನ್ನತವಾದ ಪಟ್ಟಣವು’ 1919ರಲ್ಲಿ ಯೆಹೋವನ ಜನರನ್ನು ಬಿಡುಗಡೆಮಾಡಲೇಬೇಕಾದ ಪರಿಸ್ಥಿತಿಯು ಬಂದಾಗ, ಭಾರಿ ಅಪಮಾನವನ್ನು ಅನುಭವಿಸಿತು. ಮತ್ತು ಯೆಹೋವನ ಜನರು ತಮ್ಮನ್ನು ಈ ಮೊದಲು ಸೆರೆಯಾಳುಗಳಾಗಿ ಮಾಡಿಟ್ಟಿದ್ದ ಕ್ರೈಸ್ತಪ್ರಪಂಚವನ್ನು ತುಳಿದಾಡತೊಡಗಿದರು. (ಪ್ರಕಟನೆ 14:8) ಹೇಗೆ? ಅದರ ಮೇಲೆ ಬರಲಿರುವ ಯೆಹೋವನ ಪ್ರತೀಕಾರದ ಬಗ್ಗೆ ಬಹಿರಂಗವಾಗಿ ಘೋಷಿಸುವ ಮೂಲಕವೇ.—ಪ್ರಕಟನೆ 8:7-12; 9:14-19.
ಧಾರ್ಮಿಕತೆಯನ್ನು ಮತ್ತು ಯೆಹೋವನ ‘ಸ್ಮರಣೆಯನ್ನು’ ಬಯಸುವುದು
16. ಭಕ್ತಿಯ ವಿಷಯದಲ್ಲಿ ಯಾವ ಒಳ್ಳೆಯ ಮಾದರಿಯನ್ನು ಯೆಶಾಯನು ಇಡುತ್ತಾನೆ?
16 ಈ ಜಯಗೀತೆಯ ಬಳಿಕ, ಯೆಶಾಯನು ತನಗಿರುವ ಆಳವಾದ ಭಕ್ತಿಯನ್ನು ಮತ್ತು ನೀತಿಯ ದೇವರನ್ನು ಸೇವಿಸುವುದರಿಂದ ಸಿಗುವ ಪ್ರತಿಫಲಗಳನ್ನು ತಿಳಿಯಪಡಿಸುತ್ತಾನೆ. (ಓದಿ ಯೆಶಾಯ 26:7-9.) ‘ಯೆಹೋವನಲ್ಲಿ ಕಾದುಕೊಂಡಿರುವ’ ಮತ್ತು ಯೆಹೋವನ “ನಾಮ” ಹಾಗೂ “ಸ್ಮರಣೆ”ಗಾಗಿ ಆಳವಾದ ಬಯಕೆಯನ್ನು ಪಡೆದಿರುವ ವಿಷಯದಲ್ಲಿ, ಪ್ರವಾದಿಯು ಒಳ್ಳೆಯ ಮಾದರಿಯಾಗಿದ್ದಾನೆ. ಯೆಹೋವನ ಸ್ಮರಣೆ ಏನಾಗಿದೆ? ವಿಮೋಚನಕಾಂಡ 3:15 ಹೇಳುವುದು: “ಯೆಹೋವನು . . . ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” ಯೆಹೋವನ ನಾಮವನ್ನು ಮತ್ತು ಅದರಲ್ಲಿ ಒಳಗೂಡಿರುವ ಎಲ್ಲವನ್ನೂ, ಅಂದರೆ ಆತನ ನೀತಿಯ ಮಟ್ಟಗಳು ಮತ್ತು ಮಾರ್ಗಗಳನ್ನು ಯೆಶಾಯನು ಆದರಿಸುತ್ತಾನೆ. ಯೆಹೋವನಿಗಾಗಿ ಯಾರು ಇಂತಹದ್ದೇ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾರೊ, ಅವರೆಲ್ಲರಿಗೂ ಆತನ ಆಶೀರ್ವಾದವು ಖಂಡಿತವಾಗಿಯೂ ಸಿಗುವುದು.—ಕೀರ್ತನೆ 5:8; 25:4, 5; 135:13; ಹೋಶೇಯ 12:5.
17. ಯಾವ ಸುಯೋಗಗಳನ್ನು ದುಷ್ಟರು ಅನುಭವಿಸಲಾರರು?
17 ಆದರೆ ಎಲ್ಲರೂ ಯೆಹೋವನನ್ನು ಮತ್ತು ಆತನ ಉನ್ನತವಾದ ಮಟ್ಟಗಳನ್ನು ಪ್ರೀತಿಸುವುದಿಲ್ಲ. (ಓದಿ ಯೆಶಾಯ 26:10.) ಧಾರ್ಮಿಕತೆಯನ್ನು ಅಭ್ಯಾಸಿಸುವಂತೆ ದುಷ್ಟರು ಆಮಂತ್ರಿಸಲ್ಪಟ್ಟರೂ ಅವರು ಮೊಂಡತನದಿಂದ ನಿರಾಕರಿಸುತ್ತಾರೆ. ಈ ಕಾರಣ ಅವರು “ಯಥಾರ್ಥವಂತರ ದೇಶದಲ್ಲಿ” ಅಂದರೆ, ನೈತಿಕ ಹಾಗೂ ಆತ್ಮಿಕ ವಿಷಯಗಳಲ್ಲಿ ಪ್ರಾಮಾಣಿಕರಾಗಿರುವ ಯೆಹೋವನ ಸೇವಕರ ದೇಶದೊಳಗೆ ಪ್ರವೇಶಿಸಲಾರರು. ಈ ದುಷ್ಟರು “ಯೆಹೋವನ ಮಹಿಮೆಯನ್ನು ಲಕ್ಷಿಸದೆ” ಹೋಗುವರು. ಯೆಹೋವನ ನಾಮವು ಪವಿತ್ರೀಕರಿಸಲ್ಪಟ್ಟ ತರುವಾಯ, ಮಾನವಕುಲವು ಅನುಭವಿಸಲಿರುವ ಆಶೀರ್ವಾದಗಳಲ್ಲಿ ಇವರು ಪಾಲಿಗರಾಗಲಾರರು. ಇಡೀ ಭೂಮಿಯು “ಯಥಾರ್ಥವಂತರ ದೇಶ”ವಾಗಲಿರುವ ಹೊಸ ಲೋಕದಲ್ಲೂ, ಕೆಲವರು ಯೆಹೋವನ ಪ್ರೀತಿದಯೆಗೆ ಪ್ರತಿಕ್ರಿಯಿಸಲು ತಪ್ಪಿಹೋಗಬಹುದು. ಅಂತಹವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆಯಲ್ಪಡಲಾರವು.—ಯೆಶಾಯ 65:20; ಪ್ರಕಟನೆ 20:12, 15.
18. ಯೆಶಾಯನ ದಿನದಲ್ಲಿ ಕೆಲವರು ಅಂಧರಾಗಿರಲು ಬಯಸುವುದು ಹೇಗೆ, ಮತ್ತು ಯೆಹೋವನನ್ನು ‘ನೋಡುವಂತೆ’ ಅವರು ಯಾವಾಗ ಒತ್ತಾಯಿಸಲ್ಪಡುವರು?
18 “ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನಾಭಿಮಾನವನ್ನು ನೋಡಿ ನಾಚಿಕೆಪಡುವರು; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.” (ಯೆಶಾಯ 26:11) ಯೆಶಾಯನ ದಿನದಲ್ಲಿ ಯೆಹೋವನು ತನ್ನ ಜನರನ್ನು ರಕ್ಷಿಸಲಿಕ್ಕಾಗಿ ತನ್ನ ಕೈಯನ್ನು ಮೇಲೆತ್ತಿ, ಅವರ ವೈರಿಗಳನ್ನು ಸದೆಬಡಿದಿದ್ದಾನೆ. ಆದರೂ ಹೆಚ್ಚಿನವರು ಅದಕ್ಕೆ ಲಕ್ಷ್ಯನೀಡಿರುವುದಿಲ್ಲ. ಆತ್ಮಿಕ ಅಂಧರಾಗಿ ಉಳಿಯಲು ಬಯಸಿದ ಇವರು ಕಟ್ಟಕಡೆಗೆ ಯೆಹೋವನ ಅಗ್ನಿಯಿಂದ ದಹಿಸಲ್ಪಡುವಾಗ, ದೇವರನ್ನು ‘ನೋಡುವಂತೆ’ ಇಲ್ಲವೆ ಅಂಗೀಕರಿಸುವಂತೆ ಒತ್ತಾಯಿಸಲ್ಪಡುವರು. (ಚೆಫನ್ಯ 1:18) ದೇವರು ತದನಂತರ ಯೆಹೆಜ್ಕೇಲನಿಗೆ ಹೇಳುವುದು: “ನಾನು ಯೆಹೋವನೆಂದು ಆಗ ಅವರು ತಿಳಿಯುವರು.”—ಯೆಹೆಜ್ಕೇಲ 38:23, ಪರಿಶುದ್ಧ ಬೈಬಲ್c.
‘ಯೆಹೋವನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ’
19, 20. ಯೆಹೋವನು ತನ್ನ ಜನರನ್ನು ಯಾವ ಕಾರಣಕ್ಕಾಗಿ ಮತ್ತು ಯಾವ ರೀತಿಯಲ್ಲಿ ಶಿಕ್ಷಿಸಿದ್ದಾನೆ, ಮತ್ತು ಇಂತಹ ಶಿಕ್ಷೆಯಿಂದ ಯಾರು ಪ್ರಯೋಜನ ಪಡೆದಿದ್ದಾರೆ?
19 ತನ್ನ ಸ್ವದೇಶಿಯರು ಅನುಭವಿಸುವ ಶಾಂತಿಸಮೃದ್ಧಿಯು ಯೆಹೋವನ ಆಶೀರ್ವಾದದ ಫಲವೇ ಎಂಬುದು ಯೆಶಾಯನಿಗೆ ತಿಳಿದಿದೆ. “ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ನಾವು ನಡಿಸಿದ್ದೆಲ್ಲವೂ ನೀನು ನಮಗೋಸ್ಕರ ನಡಿಸಿದ್ದೇ ಸರಿ.” (ಯೆಶಾಯ 26:12) ಇದೆಲ್ಲದರೊಂದಿಗೆ ಯೆಹೋವನು ತನ್ನ ಜನರಿಗೆ “ಯಾಜಕರಾಜ್ಯವೂ ಪರಿಶುದ್ಧಜನವೂ” ಆಗುವ ಅವಕಾಶವನ್ನು ನೀಡಿದ್ದರೂ, ಯೆಹೂದದ ಇತಿಹಾಸವು ಸುಗಮವಾಗಿರಲಿಲ್ಲ. (ವಿಮೋಚನಕಾಂಡ 19:6) ಸತತವಾಗಿ ಅವಳ ಜನರು ಸುಳ್ಳು ದೇವರುಗಳ ಆರಾಧನೆಗೆ ತಿರುಗಿದರು. ಈ ಕಾರಣ ಅವರು ಆಗಿಂದಾಗ್ಗೆ ಶಿಕ್ಷಿಸಲ್ಪಟ್ಟರು. ಇಂತಹ ಶಿಕ್ಷೆಯು, ಯೆಹೋವನ ಪ್ರೀತಿಯ ಪ್ರಮಾಣವಾಗಿದೆ ಏಕೆಂದರೆ “ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ.”—ಇಬ್ರಿಯ 12:6.
20 ಅನೇಕ ವೇಳೆ ಇಸ್ರಾಯೇಲಿನ ಮೇಲೆ ಬೇರೆ ರಾಷ್ಟ್ರಗಳು ಅಂದರೆ, “ಬೇರೆ ಒಡೆಯರು” ಅಧಿಕಾರ ಚಲಾಯಿಸುವಂತೆ ಅನುಮತಿಸುವ ಮೂಲಕ, ಯೆಹೋವನು ತನ್ನ ಜನರನ್ನು ಶಿಕ್ಷಿಸುತ್ತಾನೆ. (ಓದಿ ಯೆಶಾಯ 26:13.) ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಇವರನ್ನು ಪರದೇಶವಾಸಿಗಳನ್ನಾಗಿ ಮಾಡುವಂತೆ ಆತನು ಅನುಮತಿಸಿದನು. ಇದರಿಂದ ಇಸ್ರಾಯೇಲ್ಯರಿಗಾದ ಪ್ರಯೋಜನವೇನು? ಕಷ್ಟಾನುಭವಿಸುವುದರಿಂದಲೇ ಒಬ್ಬನು ಪ್ರಯೋಜನ ಪಡೆದುಕೊಳ್ಳುವುದಿಲ್ಲ. ಆದರೆ, ತಾನು ಅನುಭವಿಸುವ ಕಷ್ಟದಿಂದ ಪಾಠವನ್ನು ಕಲಿತು, ಪಶ್ಚಾತ್ತಾಪಪಟ್ಟು, ಯೆಹೋವನಿಗೆ ಅನನ್ಯ ಭಕ್ತಿಯನ್ನು ನೀಡಿದರೆ, ಆಗ ಅವನು ಪ್ರಯೋಜನ ಪಡೆಯುತ್ತಾನೆ. (ಧರ್ಮೋಪದೇಶಕಾಂಡ 4:25-31) ಈ ರೀತಿಯ ದೈವಿಕ ಪಶ್ಚಾತ್ತಾಪವನ್ನು ಯೆಹೂದ್ಯರಲ್ಲಿ ಕೆಲವರಾದರೂ ತೋರಿಸುತ್ತಾರೊ? ಹೌದು! ಯೆಶಾಯನು ಪ್ರವಾದನಾತ್ಮಕವಾಗಿ ಹೇಳುವುದು: “ಈಗ ನಿನ್ನ ನಾಮವನ್ನು ಹೊಗಳುವದಕ್ಕೆ ನಿನ್ನಿಂದಲೇ ನಮಗೆ ಅವಕಾಶವಾಯಿತು.” ಇಸ್ರಾಯೇಲ್ಯರು ಸಾ.ಶ.ಪೂ. 537ರಲ್ಲಿ ಪರದೇಶವಾಸದಿಂದ ಹಿಂದಿರುಗಿದ ಬಳಿಕ, ಇತರ ಪಾಪಗಳಿಗಾಗಿ ಅವರು ಆಗಿಂದಾಗ್ಗೆ ಶಿಕ್ಷಿಸಲ್ಪಟ್ಟರಾದರೂ, ಅವರೆಂದಿಗೂ ಕಲ್ಲಿನ ದೇವರುಗಳ ಆರಾಧನೆಗೆ ಬಲಿಬೀಳಲಿಲ್ಲ.
21. ದೇವಜನರನ್ನು ಪೀಡಿಸಿರುವವರಿಗೆ ಏನು ಸಂಭವಿಸುವುದು?
21 ಯೆಹೂದವನ್ನು ಸೆರೆಹಿಡಿದವರ ಕುರಿತೇನು? “ನೀನು ಆ ಒಡೆಯರ ಮೇಲೆ ಕೈಮಾಡಿ ನಿರ್ಮೂಲಪಡಿಸಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದೀ; ಸತ್ತವರು ಪುನಃ ಬದುಕುವದಿಲ್ಲ, ಪ್ರೇತಗಳು ಎದ್ದು ಬರುವದಿಲ್ಲವಲ್ಲಾ.” (ಯೆಶಾಯ 26:14) ಯೆಹೋವನಾದುಕೊಂಡ ಜನಾಂಗವನ್ನು ಕ್ರೂರವಾಗಿ ನಡೆಸಿಕೊಂಡದ್ದಕ್ಕೆ ಬಾಬೆಲು ಲೆಕ್ಕವೊಪ್ಪಿಸಲೇಬೇಕು. ಮೇದ್ಯಯಪಾರಸಿಯರ ಮೂಲಕ, ಯೆಹೋವನು ಈ ಗರ್ವಿಷ್ಠ ಬಾಬೆಲನ್ನು ಕೆಳಗುರುಳಿಸಿ, ತನ್ನ ಜನರನ್ನು ಪರದೇಶವಾಸದಿಂದ ಬಿಡಿಸುವನು. ಆಗ, ಆ ಮಹಾ ಪಟ್ಟಣವಾದ ಬಾಬೆಲು, ಸತ್ತವರಂತೆ ಸತ್ವಹೀನವಾಗುವುದು. ಹೀಗೆ, ಕ್ರಮೇಣವಾಗಿ ಅದು ಲೋಕರಂಗದಿಂದ ಕಣ್ಮರೆಯಾಗುವುದು.
22. ಆಧುನಿಕ ಕಾಲದಲ್ಲಿ ದೇವಜನರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆ?
22 ಆಧುನಿಕ ನೆರವೇರಿಕೆಯಲ್ಲಿ, ಪರಿಷ್ಕರಿಸಲ್ಪಟ್ಟ ಆತ್ಮಿಕ ಇಸ್ರಾಯೇಲಿನ ಶೇಷವರ್ಗವು ಮಹಾ ಬಾಬೆಲಿನ ಸೆರೆಯಿಂದ ಬಿಡಿಸಲ್ಪಟ್ಟು, 1919ರಲ್ಲಿ ಯೆಹೋವನ ಸೇವೆಯನ್ನು ಮತ್ತೆ ಆರಂಭಿಸಿತು. ನವಚೈತನ್ಯವನ್ನು ಪಡೆದುಕೊಂಡ ಅಭಿಷಿಕ್ತ ಕ್ರೈಸ್ತರು, ಸಾರುವ ಕೆಲಸದಲ್ಲಿ ಪೂರ್ತಿಯಾಗಿ ತಲ್ಲೀನರಾದರು. (ಮತ್ತಾಯ 24:14) ಈ ಕಾರಣ ಯೆಹೋವನು ಅವರಿಗೆ ತಮ್ಮ ಕೆಲಸದಲ್ಲಿ ಅಭಿವೃದ್ಧಿಯನ್ನು ನೀಡಿ ಆಶೀರ್ವದಿಸಿದ್ದಾನೆ. ಅವರೊಂದಿಗೆ ಸೇರಿ ಸೇವೆಮಾಡುವ ‘ಬೇರೆ ಕುರಿಗಳ’ ಒಂದು ಮಹಾ ಸಮೂಹವನ್ನೂ ಆತನು ಒಟ್ಟುಗೂಡಿಸಿದ್ದಾನೆ. (ಯೋಹಾನ 10:16) “ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಪ್ರಜೆಯನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ. ಯೆಹೋವನೇ, [ನಿನ್ನ ಜನರು] ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಆಶ್ರಯಿಸಿದರು, ನಿನ್ನ ಶಿಕ್ಷೆಗೆ ಗುರಿಯಾಗಿ ಜಪಮಾಡಿದರು.”—ಯೆಶಾಯ 26:15, 16.
‘ಅವರು ಜೀವದಿಂದೇಳುವರು’
23. (ಎ) ಸಾ.ಶ.ಪೂ. 537ರಲ್ಲಿ ಯೆಹೋವನು ತನ್ನ ಶಕ್ತಿಯನ್ನು ಅದ್ಭುತಕರವಾದ ರೀತಿಯಲ್ಲಿ ಪ್ರದರ್ಶಿಸಿದ್ದು ಹೇಗೆ? (ಬಿ) ಸಾ.ಶ. 1919ರಲ್ಲಿ ಅದು ಯಾವ ರೀತಿಯಲ್ಲಿ ಪುನಃ ಪ್ರದರ್ಶಿಸಲ್ಪಟ್ಟಿತು?
23 ಯೆಹೂದವು ಬಾಬೆಲಿನ ಸೆರೆಯಾಳಾಗಿದ್ದ ಸಮಯಕ್ಕೆ ಯೆಶಾಯನು ಹಿಂದಿರುಗುತ್ತಾನೆ. ಅವನು ಆ ಜನಾಂಗವನ್ನು, ಪ್ರಸವವೇದನೆಯನ್ನು ಅನುಭವಿಸುತ್ತಿದ್ದರೂ ಸಹಾಯವಿಲ್ಲದ ಕಾರಣ ಜನ್ಮನೀಡಲು ಅಶಕ್ತವಾಗಿರುವ ಸ್ತ್ರೀಗೆ ಹೋಲಿಸುತ್ತಾನೆ. (ಓದಿ ಯೆಶಾಯ 26:17, 18.) ಆ ಸಹಾಯವು ಸಾ.ಶ.ಪೂ. 537ರಲ್ಲಿ ಬರುತ್ತದೆ. ಆಗ ಯೆಹೋವನ ಜನರು ಸ್ವದೇಶಕ್ಕೆ ಹಿಂದಿರುಗಿ, ದೇವಾಲಯವನ್ನು ಪುನಃ ಕಟ್ಟಲು ಮತ್ತು ಸತ್ಯಾರಾಧನೆಯನ್ನು ಪುನಃ ಸ್ಥಾಪಿಸಲು ತವಕಪಡುತ್ತಾರೆ. ಹೀಗೆ, ಆ ಜನಾಂಗವು ಸತ್ತ ಸ್ಥಿತಿಯಿಂದ ಎಬ್ಬಿಸಲ್ಪಡುತ್ತದೆ. “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.” (ಯೆಶಾಯ 26:19) ಯೆಹೋವನ ಶಕ್ತಿಯ ಎಂತಹ ಪ್ರದರ್ಶನ! ಈ ಮಾತುಗಳು 1919ರಲ್ಲಿ ಆತ್ಮಿಕಾರ್ಥದಲ್ಲಿ ನೆರವೇರಿದಾಗ, ಅದೆಂತಹ ಮಹಾನ್ ಪ್ರದರ್ಶನವಾಗಿತ್ತು! (ಪ್ರಕಟನೆ 11:7-11) ಮತ್ತು ಹೊಸ ಲೋಕದಲ್ಲಿ, ಸತ್ತವರು ‘ಯೇಸುವಿನ ಧ್ವನಿ ಕೇಳಿ’ ಸಮಾಧಿಗಳಿಂದ ‘ಎದ್ದು ಹೊರಗೆ ಬರುವಾಗ’ ಈ ಮಾತುಗಳು ಅಕ್ಷರಾರ್ಥವಾಗಿ ನೆರವೇರುವ ಸಮಯಕ್ಕಾಗಿ ನಾವೆಷ್ಟು ಹಾತೊರೆಯುತ್ತೇವೆ!—ಯೋಹಾನ 5:28, 29.
24, 25. (ಎ) ಸಾ.ಶ.ಪೂ. 539ರಲ್ಲಿ ಯೆಹೋವನು ಯೆಹೂದ್ಯರಿಗೆ ಅವಿತುಕೊಳ್ಳುವಂತೆ ಕೊಟ್ಟ ಆಜ್ಞೆಗೆ ಅವರು ಹೇಗೆ ವಿಧೇಯರಾಗಬಹುದಿತ್ತು? (ಬಿ) ಆಧುನಿಕ ಸಮಯಗಳಲ್ಲಿ ‘ಕೋಣೆಗಳು’ ಏನನ್ನು ಸೂಚಿಸಬಲ್ಲವು, ಮತ್ತು ಇವುಗಳ ಕಡೆಗೆ ನಾವು ಯಾವ ಮನೋಭಾವವನ್ನು ಬೆಳೆಸಿಕೊಳ್ಳಬೇಕು?
24 ಆದರೆ, ಯೆಶಾಯನ ಮೂಲಕ ವಾಗ್ದಾನಿಸಲ್ಪಟ್ಟ ಆತ್ಮಿಕ ಆಶೀರ್ವಾದಗಳನ್ನು ನಂಬಿಗಸ್ತರು ಅನುಭವಿಸಬೇಕಾದರೆ, ಅವರು ಯೆಹೋವನ ಆಜ್ಞೆಗಳಿಗೆ ವಿಧೇಯರಾಗಬೇಕು: “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ. ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು.” (ಯೆಶಾಯ 26:20, 21; ಹೋಲಿಸಿ ಚೆಫನ್ಯ 1:14.) ಸಾ.ಶ.ಪೂ. 539ರಲ್ಲಿ ರಾಜ ಕೋರೆಷನ ನೇತೃತ್ವದಲ್ಲಿ ಮೇದ್ಯಯಪಾರಸಿಯರು ಬಾಬೆಲನ್ನು ಜಯಿಸಿದಾಗ, ಈ ವಚನಗಳು ಆರಂಭಿಕ ನೆರವೇರಿಕೆಯನ್ನು ಪಡೆದಿದ್ದಿರಬಹುದು. ಗ್ರೀಕ್ ಇತಿಹಾಸಕಾರರಾದ ಸೆನೊಫೋನ್ ಅವರಿಗನುಸಾರ, ಕೋರೆಷನು ಬಾಬೆಲನ್ನು ಪ್ರವೇಶಿಸಿದ ನಂತರ ಎಲ್ಲರು ತಮ್ಮ ತಮ್ಮ ಮನೆಗಳಲ್ಲೇ ಉಳಿಯುವಂತೆ ಆದೇಶ ನೀಡುತ್ತಾನೆ. ಏಕೆಂದರೆ, “ಮನೆಯ ಹೊರಗೆ ಇದ್ದವರೆಲ್ಲರನ್ನು ಕೊಂದುಹಾಕುವ ಆಜ್ಞೆಯನ್ನು” ಅವನು ತನ್ನ ಅಶ್ವಸೈನ್ಯಕ್ಕೆ ನೀಡಿದ್ದನು. ಈ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ ‘ಕೋಣೆಗಳು,’ ಲೋಕವ್ಯಾಪಕವಾಗಿರುವ ಯೆಹೋವನ ಜನರ ಹತ್ತಾರು ಸಾವಿರ ಸಭೆಗಳಿಗೆ ಬಹಳ ನಿಕಟವಾಗಿ ಹೋಲುತ್ತವೆ. ಇಂತಹ ಸಭೆಗಳು, ‘ಮಹಾ ಸಂಕಟದ’ ಸಮಯದಲ್ಲೂ ನಮ್ಮ ಜೀವಿತಗಳಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸುವವು. (ಪ್ರಕಟನೆ 7:14) ಆದುದರಿಂದ, ಸಭೆಯ ಕಡೆಗೆ ಹಿತಕರವಾದ ಮನೋಭಾವವುಳ್ಳವರಾಗಿದ್ದು, ಅದರೊಂದಿಗೆ ಕ್ರಮವಾಗಿ ಸಹವಾಸಿಸುವುದು ಎಷ್ಟೊಂದು ಅತ್ಯಾವಶ್ಯಕವಾಗಿದೆ!—ಇಬ್ರಿಯ 10:24, 25.
25 ಬೇಗನೆ, ಸೈತಾನನ ಲೋಕವು ಅಂತ್ಯವನ್ನು ಕಾಣುವುದು. ಆ ಭಯಪ್ರೇರಕ ಸಮಯದಲ್ಲಿ ಯೆಹೋವನು ತನ್ನ ಜನರನ್ನು ಹೇಗೆ ರಕ್ಷಿಸುವನೆಂಬುದು ನಮಗೆ ಇನ್ನೂ ಗೊತ್ತಿಲ್ಲ. (ಚೆಫನ್ಯ 2:3) ಹಾಗಿದ್ದರೂ, ಯೆಹೋವನಲ್ಲಿ ನಮಗಿರುವ ನಂಬಿಕೆ ಹಾಗೂ ಆತನ ಕಡೆಗೆ ನಮಗಿರುವ ನಿಷ್ಠೆ ಮತ್ತು ವಿಧೇಯತೆಯ ಮೇಲೆ ನಮ್ಮ ಪಾರಾಗುವಿಕೆಯು ಅವಲಂಬಿಸಿದೆ ಎಂಬುದಂತೂ ನಮಗೆ ಖಂಡಿತವಾಗಿಯೂ ಗೊತ್ತಿದೆ.
26. ಯೆಶಾಯನ ದಿನದ ಮತ್ತು ನಮ್ಮ ದಿನದ ‘ಲಿವ್ಯಾತಾನ್’ ಯಾರು, ಮತ್ತು ಈ “ಸಮುದ್ರದ ಮಹಾಜೀವಿ”ಗೆ ಏನಾಗುತ್ತದೆ?
26 ಆ ಸಮಯದ ಬಗ್ಗೆ ಯೆಶಾಯನು ಪ್ರವಾದಿಸುವುದು: “ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು. ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು. ಯೆಹೋವನು ಸಮುದ್ರದಲ್ಲಿರುವ ಮಹಾಜೀವಿಯನ್ನು ಕೊಲ್ಲುವನು.” (ಯೆಶಾಯ 27:1, ಪರಿಶುದ್ಧ ಬೈಬಲ್d) ಆರಂಭಿಕ ನೆರವೇರಿಕೆಯಲ್ಲಿ ‘ಲಿವ್ಯಾತಾನ್’ ಎಂಬುದು, ಇಸ್ರಾಯೇಲ್ಯರು ಚೆದರಿಹೋಗಿದ್ದ ಬಾಬೆಲ್, ಐಗುಪ್ತ ಮತ್ತು ಅಶ್ಶೂರದಂತಹ ದೇಶಗಳನ್ನು ಸೂಚಿಸಿತು. ಯೆಹೋವನ ಜನರು ಸರಿಯಾದ ಸಮಯಕ್ಕೆ ತಮ್ಮ ದೇಶಕ್ಕೆ ಹಿಂದಿರುಗುವುದನ್ನು ಈ ದೇಶಗಳು ತಡೆಯಸಾಧ್ಯವಿರಲಿಲ್ಲ. ಹಾಗಾದರೆ, ಆಧುನಿಕ ದಿನದ ಲಿವ್ಯಾತಾನನು ಯಾರು? ಅದು “ಪುರಾತನ ಸರ್ಪ”ವಾದ ಸೈತಾನನು ಮತ್ತು ಭೂಮಿಯ ಮೇಲಿದ್ದುಕೊಂಡು ಆತ್ಮಿಕ ಇಸ್ರಾಯೇಲಿನ ವಿರುದ್ಧ ಯುದ್ಧಮಾಡಲು ಅವನು ಬಳಸುವ ದುಷ್ಟ ವಿಷಯಗಳ ವ್ಯವಸ್ಥೆಯೇ ಆಗಿರುವಂತೆ ತೋರುತ್ತದೆ. (ಪ್ರಕಟನೆ 12:9, 10; 13:14, 16, 17; 18:24) ದೇವಜನರ ಮೇಲೆ ತನಗಿದ್ದ ಹಿಡಿತವನ್ನು ‘ಲಿವ್ಯಾತಾನನು’ 1919ರಲ್ಲಿ ಕಳೆದುಕೊಂಡನು, ಮತ್ತು ಯೆಹೋವನು “ಸಮುದ್ರದಲ್ಲಿರುವ ಮಹಾಜೀವಿಯನ್ನು ಕೊಲ್ಲು”ವಾಗ ಅವನು ಸಂಪೂರ್ಣವಾಗಿ ಇಲ್ಲದೆಹೋಗುವನು. ಈ ಮಧ್ಯೆ, ಯೆಹೋವನ ಜನರ ವಿರುದ್ಧ ಏನನ್ನಾದರೂ ಸಾಧಿಸಲು ಪ್ರಯತ್ನಿಸುವ “ಲಿವ್ಯಾತಾನನಿಗೆ” ಯಾವ ಸಾಫಲ್ಯವೂ ದೊರಕದು.—ಯೆಶಾಯ 54:17.
“ನೊರೆಸೂಸುವ ಮದ್ಯದ ದ್ರಾಕ್ಷಾತೋಟ”
27, 28. (ಎ) ಯೆಹೋವನ ದ್ರಾಕ್ಷಾತೋಟವು ಇಡೀ ಭೂಮಿಯಲ್ಲಿ ಏನನ್ನು ತುಂಬಿಸಿದೆ? (ಬಿ) ಯೆಹೋವನು ತನ್ನ ದ್ರಾಕ್ಷಾತೋಟವನ್ನು ರಕ್ಷಿಸುವುದು ಹೇಗೆ?
27 ಯೆಹೋವನ ಸ್ವತಂತ್ರ ಜನರ ಫಲೋತ್ಪಾದಕ ಸ್ಥಿತಿಯನ್ನು ಸುಂದರವಾಗಿ ದೃಷ್ಟಾಂತಿಸಲು, ಯೆಶಾಯನು ಮತ್ತೊಂದು ಗೀತೆಯನ್ನು ಉಪಯೋಗಿಸುತ್ತಾನೆ: “ಜನರೇ, ಆ ದಿನದಲ್ಲಿ ಹೀಗೆ ಹಾಡಿರಿ: ‘ನೊರೆಸೂಸುವ ಮದ್ಯದ ದ್ರಾಕ್ಷಾತೋಟವು! ಯೆಹೋವನಾದ ನಾನು, ಅದನ್ನು ರಕ್ಷಿಸುತ್ತಿರುವೆ. ಪ್ರತಿ ಗಳಿಗೆ ಅದಕ್ಕೆ ನೀರು ಹಾಯಿಸುವೆ. ಅದರ ಕಡೆಗೆ ಯಾರೊಬ್ಬರೂ ತಮ್ಮ ಗಮನವನ್ನು ಹರಿಸದಂತೆ, ನಾನು ಹಗಲೂರಾತ್ರಿ ಅದನ್ನು ಕಾಪಾಡುವೆ.’” (ಯೆಶಾಯ 27:2, 3, NW) ಆತ್ಮಿಕ ಇಸ್ರಾಯೇಲಿನ ಶೇಷವರ್ಗವು ಮತ್ತು ಅವರೊಂದಿಗೆ ಸೇರಿ ಕಷ್ಟಪಟ್ಟು ಕೆಲಸಮಾಡುವ ಅವರ ಸಂಗಾತಿಗಳು, ಇಡೀ ಭೂಮಿಯನ್ನು ತಮ್ಮ ಆತ್ಮಿಕ ಉತ್ಪನ್ನದಿಂದ ತುಂಬಿಸಿದ್ದಾರೆ. ಸಂಭ್ರಮಪಡಲು, ಗೀತೆ ಹಾಡಲು ಎಂತಹ ಸಕಾರಣ! ತನ್ನ ದ್ರಾಕ್ಷಾತೋಟವನ್ನು ಅಕ್ಕರೆಯಿಂದ ನೋಡಿಕೊಳ್ಳುವ ಯೆಹೋವನಿಗೆಯೇ ಎಲ್ಲ ಕೀರ್ತಿಯೂ ಸಲ್ಲಬೇಕು.—ಹೋಲಿಸಿ ಯೋಹಾನ 15:1-8.
28 ಯೆಹೋವನ ಕೋಪವು ಈಗ ಆನಂದಕ್ಕೆ ದಾರಿಮಾಡಿಕೊಟ್ಟಿದೆ! “ರೌದ್ರವು ನನ್ನಲ್ಲಿಲ್ಲ; ಮುಳ್ಳುಗಿಳ್ಳು ನನಗೆ ಎದುರುಬಿದ್ದರೆ ಎಷ್ಟೋ ಒಳ್ಳೇದು! ಅವುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ನಡೆದು ಹೋಗಿ ಒಟ್ಟಿಗೆ ಸುಟ್ಟುಬಿಡುವೆನು. ಬೇಡವಾದರೆ ಆ ಶತ್ರುಗಳು ನನ್ನ ಬಲವನ್ನು ಶರಣುಹೊಂದಲಿ, ನನ್ನ ಸಂಗಡ ಸಮಾಧಾನಕ್ಕೆ ಬರಲಿ, ನನ್ನೊಡನೆ ಸಂಧಿಮಾಡಿಕೊಳ್ಳಲಿ.” (ಯೆಶಾಯ 27:4, 5) ತನ್ನ ದ್ರಾಕ್ಷಾಲತೆಗಳು ಯಥೇಷ್ಟವಾದ “ನೊರೆಸೂಸುವ ಮದ್ಯ”ವನ್ನು ಉತ್ಪಾದಿಸುತ್ತಾ ಇರಲಿಕ್ಕಾಗಿ, ಅವುಗಳನ್ನು ಕೆಡಿಸಬಹುದಾದ ಯಾವುದೇ ಮುಳ್ಳಿನಂತಹ ಪ್ರಭಾವವನ್ನು ಯೆಹೋವನು ಜಜ್ಜಿಹಾಕಿ, ಬೆಂಕಿಯಲ್ಲಿ ಸುಟ್ಟುಬಿಡುವನು. ಆದಕಾರಣ, ಯಾರೂ ಕ್ರೈಸ್ತ ಸಭೆಯ ಕ್ಷೇಮವನ್ನು ಅಪಾಯಕ್ಕೆ ಒಡ್ಡದಿರಲಿ! ಬದಲಿಗೆ ಸಕಲರೂ ಯೆಹೋವನ ಅನುಗ್ರಹ ಹಾಗೂ ರಕ್ಷಣೆಯನ್ನು ಕೋರುತ್ತಾ, ಆತನಲ್ಲಿ ‘ಶರಣುಹೊಂದಲಿ.’ ಹೀಗೆ ಮಾಡುವುದರಿಂದ, ಅವರು ದೇವರೊಂದಿಗೆ ಸಮಾಧಾನಮಾಡಿಕೊಳ್ಳುವರು. ಇದು ಎಷ್ಟು ಪ್ರಾಮುಖ್ಯವೆಂದರೆ, ಯೆಶಾಯನು ಇದನ್ನು ಎರಡು ಬಾರಿ ಉಲ್ಲೇಖಿಸುತ್ತಾನೆ. ಇದರ ಪರಿಣಾಮ ಏನಾಗಿರುವುದು? “ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವದು, ಇಸ್ರಾಯೇಲು ಹೂಬಿಟ್ಟು ಚಿಗುರುವದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವದು.” (ಯೆಶಾಯ 27:6)e ಈ ವಚನದ ನೆರವೇರಿಕೆಯಲ್ಲಿ, ಯೆಹೋವನ ಶಕ್ತಿಯ ಎಂತಹ ಅದ್ಭುತಕರ ಪುರಾವೆಯಿದೆ! 1919ರಿಂದ ಅಭಿಷಿಕ್ತ ಕ್ರೈಸ್ತರು, ಈ ಭೂಮಿಯನ್ನು “ಫಲ”ದಿಂದ, ಅಂದರೆ ಪುಷ್ಟಿದಾಯಕ ಆತ್ಮಿಕ ಆಹಾರದಿಂದ ತುಂಬಿಸಿದ್ದಾರೆ. ಈ ಕಾರಣ, ನಿಷ್ಠಾವಂತರಾಗಿರುವ ಲಕ್ಷಾಂತರ ಬೇರೆ ಕುರಿಗಳಂತಹವರು ಅವರೊಂದಿಗೆ ಜೊತೆಗೂಡಿ, “ಹಗಲಿರುಳು [ದೇವರ] ಸೇವೆಮಾಡುತ್ತಾ ಇದ್ದಾರೆ.” (ಪ್ರಕಟನೆ 7:15) ಒಂದು ಭ್ರಷ್ಟ ಲೋಕದ ಮಧ್ಯೆ, ಇವರು ಆನಂದದಿಂದ ಆತನ ಉನ್ನತವಾದ ಮಟ್ಟಗಳನ್ನು ಕಾಪಾಡಿಕೊಳ್ಳುತ್ತಾರೆ. ಅಭಿವೃದ್ಧಿಯನ್ನು ನೀಡುವ ಮೂಲಕ ಯೆಹೋವನು ಅವರನ್ನು ನಿರಂತರವಾಗಿ ಆಶೀರ್ವದಿಸುತ್ತಾನೆ. ಈ “ಫಲ”ದಲ್ಲಿ ಭಾಗವಹಿಸುವ ಮತ್ತು ಸ್ತುತಿಗಾನದ ಮೂಲಕ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಸುವರ್ಣಾವಕಾಶವನ್ನು ನಾವೆಂದಿಗೂ ತಳ್ಳಿಹಾಕದಿರೋಣ!
[ಪಾದಟಿಪ್ಪಣಿಗಳು]
a ಆರ್ ಎಂಬ ಹೆಸರಿನ ಅರ್ಥ, ಬಹುಶಃ “ಪಟ್ಟಣ” ಎಂದಾಗಿದೆ.
b ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ 170ನೆಯ ಪುಟವನ್ನು ನೋಡಿರಿ.
c Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
d Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
e ಯೆಶಾಯ 27:7-13ನೆಯ ವಚನಗಳನ್ನು, 285ನೆಯ ಪುಟದಲ್ಲಿರುವ ರೇಖಾಚೌಕದಲ್ಲಿ ಚರ್ಚಿಸಲಾಗಿದೆ.
[ಪುಟ 285ರಲ್ಲಿರುವ ಚೌಕ]
ಒಂದು “ದೊಡ್ಡ ಕೊಂಬು” ಬಿಡುಗಡೆಯ ಕಹಳೆಯೂದುತ್ತದೆ
ಸಾ.ಶ.ಪೂ. 607ರಲ್ಲಿ ಯೆಹೋವನು ತನ್ನ ಮೊಂಡ ಜನಾಂಗವಾದ ಯೆಹೂದಕ್ಕೆ ಪರದೇಶವಾಸದ ಶಿಕ್ಷೆಯನ್ನು ವಿಧಿಸಿದಾಗ, ಅದರ ವೇದನೆಯು ಉಲ್ಬಣಿಸುತ್ತದೆ. (ಓದಿ ಯೆಶಾಯ 27:7-11.) ಆ ಜನಾಂಗದ ಪಾಪವು ಎಷ್ಟು ಮಿತಿಮೀರಿತ್ತೆಂದರೆ, ಪ್ರಾಣಿ ಬಲಿಗಳಿಂದ ಪಾಪಪರಿಹಾರವು ಅಸಾಧ್ಯವಾದ ಸಂಗತಿಯಾಗಿತ್ತು. ಆದುದರಿಂದ, ಕುರಿ ಇಲ್ಲವೆ ಆಡುಗಳನ್ನು ಹೆದರಿಸಿ ಓಡಿಸುವ ಕೂಗಿನಂತೆ ಅಥವಾ ಬಿರುಸಾದ ಗಾಳಿಯು ತರಗೆಲೆಗಳನ್ನು ‘ಬೀಸಿ’ಕೊಂಡು ಹೋಗುವಂತೆ, ಯೆಹೋವನು ಇಸ್ರಾಯೇಲನ್ನು ಅದರ ಸ್ವದೇಶದಿಂದ ಹೊರಡಿಸಿಬಿಡುತ್ತಾನೆ. ತರುವಾಯ, ಹೆಂಗಸರಿಂದ ಸೂಚಿಸಲ್ಪಟ್ಟ ದುರ್ಬಲ ಜನರು ಕೂಡ, ದೇಶದಲ್ಲಿ ಏನು ಉಳಿದಿದೆಯೊ ಅದನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುವರು.
ಆದರೆ, ಯೆಹೋವನು ತನ್ನ ಜನರನ್ನು ಸೆರೆವಾಸದಿಂದ ಬಿಡಿಸುವ ಸಮಯವು ಬರುತ್ತದೆ. ಅದು ಮರಗಳ ಮೇಲೆ ಇನ್ನೂ ಸೆರೆವಾಸಿಗಳೊ ಎಂಬಂತೆ ಉಳಿದಿರುವ ಆಲಿವ್ಗಳನ್ನು ಒಬ್ಬ ರೈತನು ಹೇಗೆ ಬಿಡಿಸುತ್ತಾನೊ ಅದಕ್ಕೆ ಸಮಾನವಾಗಿದೆ. “ಇಸ್ರಾಯೇಲ್ಯರೇ, ತುಂಬಿತುಳುಕುವ [ಯೂಫ್ರೇಟೀಸ್] ನದಿಯಿಂದ ಐಗುಪ್ತ ದೇಶದ ನದಿಯ ವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಆರಿಸುವನು. ಆ ದಿನದಲ್ಲಿ ದೊಡ್ಡ ಕೊಂಬನ್ನೂದಲು ಅಶ್ಶೂರ ದೇಶದಲ್ಲಿ ಹಾಳಾದವರೂ ಐಗುಪ್ತ ಸೀಮೆಯಲ್ಲಿನ ದೇಶಭ್ರಷ್ಟರಾದವರೂ ಬಂದು ಪರಿಶುದ್ಧಪರ್ವತದ ಯೆರೂಸಲೇಮಿನಲ್ಲಿ ಯೆಹೋವನ ಮುಂದೆ ಅಡ್ಡ ಬೀಳುವರು.” (ಯೆಶಾಯ 27:12, 13) ಸಾ.ಶ.ಪೂ. 539ರಲ್ಲಿ ಕೋರೆಷನು ಜಯಸಾಧಿಸಿದ ಬಳಿಕ, ಅಶ್ಶೂರ ಹಾಗೂ ಐಗುಪ್ತವನ್ನೂ ಸೇರಿಸಿ, ತನ್ನ ಸಾಮ್ರಾಜ್ಯದಲ್ಲಿರುವ ಎಲ್ಲ ಯೆಹೂದ್ಯರನ್ನು ಸ್ವತಂತ್ರಗೊಳಿಸುವ ಆಜ್ಞೆಯನ್ನು ವಿಧಿಸುತ್ತಾನೆ. (ಎಜ್ರ 1:1-4) ಅದು ದೇವಜನರ ಸ್ವಾತಂತ್ರ್ಯವನ್ನು ಮೊಳಗುವ, ಒಂದು ‘ದೊಡ್ಡ ಕೊಂಬಿನ’ ಕಹಳೆಯಂತಿದೆ.
[ಪುಟ 275ರಲ್ಲಿರುವ ಚಿತ್ರಗಳು]
‘ಸಾರವತ್ತಾದ ಮೃಷ್ಟಾನ್ನದ ಔತಣ’
[ಪುಟ 277ರಲ್ಲಿರುವ ಚಿತ್ರ]
ಕೈದಿಗಳು ತಮ್ಮ ಕಾಲುಗಳಿಂದ ಬಾಬೆಲನ್ನು ತುಳಿದಾಡುತ್ತಾರೆ
[ಪುಟ 278ರಲ್ಲಿರುವ ಚಿತ್ರ]
‘ನಿಮ್ಮ ಕೋಣೆಗಳಲ್ಲಿ ಸೇರಿಕೊಳ್ಳಿರಿ’