ಅಧ್ಯಾಯ ಐದು
ಯೆಹೋವನು ಅಹಂಕಾರಿಗಳ ಸೊಕ್ಕಡಗಿಸುತ್ತಾನೆ
1, 2. ಯೆಶಾಯನು ತನ್ನ ದಿನಗಳ ಯೆಹೂದ್ಯರಿಗೆ ಕೊಟ್ಟ ಪ್ರವಾದನಾ ಸಂದೇಶವು ನಮಗೆ ಏಕೆ ಆಸಕ್ತಿಕರವಾಗಿದೆ?
ಯೆರೂಸಲೇಮ್ ಮತ್ತು ಯೆಹೂದದ ದುರವಸ್ಥೆಯಿಂದ ಜುಗುಪ್ಸೆಗೊಂಡ ಪ್ರವಾದಿ ಯೆಶಾಯನು ಈಗ ಯೆಹೋವನ ಕಡೆಗೆ ತಿರುಗಿ ಯಾಕೋಬನ ಮನೆತನದವರ ಕುರಿತು ಪ್ರಕಟಿಸುವುದು: “ಈ ನಿನ್ನ ಜನರನ್ನು ಕೈಬಿಟ್ಟಿದ್ದೀಯಷ್ಟೆ.” (ಯೆಶಾಯ 2:6ಬಿ) ದೇವರು ತಾನೇ ಆಯ್ದುಕೊಂಡಿದ್ದ ಈ “ಸ್ವಕೀಯಜನ”ವನ್ನು ತಳ್ಳಿಬಿಡಲು ದೇವರನ್ನು ಯಾವ ಸಂಗತಿಯು ಪ್ರೇರೇಪಿಸಿತು?—ಧರ್ಮೋಪದೇಶಕಾಂಡ 14:2.
2 ತನ್ನ ದಿನಗಳ ಯೆಹೂದ್ಯರ ಕುರಿತ ಯೆಶಾಯನ ಖಂಡನೆಯು ನಮಗೆ ಅತ್ಯಾಸಕ್ತಿಯ ವಿಷಯವಾಗಿದೆ. ಅದೇಕೆ? ಏಕೆಂದರೆ ಇಂದಿನ ಕ್ರೈಸ್ತಪ್ರಪಂಚದ ಪರಿಸ್ಥಿತಿಯು ಯೆಶಾಯನ ಜನರ ಪರಿಸ್ಥಿತಿಗೆ ತೀರ ಹೋಲಿಕೆಯದ್ದಾಗಿರುವುದು ಮಾತ್ರವಲ್ಲ ಯೆಹೋವನ ನ್ಯಾಯತೀರ್ಪೂ ಸಹ ಅದಕ್ಕೆ ಹೋಲುತ್ತದೆ. ಯೆಶಾಯನ ಘೋಷಣೆಗೆ ನಾವು ಕೊಡುವ ಗಮನವು, ದೇವರು ಖಂಡಿಸುವ ವಿಷಯಗಳ ಸ್ಪಷ್ಟವಾದ ತಿಳಿವಳಿಕೆಯನ್ನು ನಮಗೆ ಕೊಡುವುದು ಮಾತ್ರವಲ್ಲ, ಆತನು ಮೆಚ್ಚದಿರುವ ಆಚಾರಗಳಿಂದ ನಾವು ದೂರವಾಗಿರುವಂತೆಯೂ ನಮಗೆ ಸಹಾಯಮಾಡುವುದು. ಆದುದರಿಂದ, ನಾವು ತೀವ್ರ ನಿರೀಕ್ಷಣೆಯಿಂದ ಯೆಶಾಯ 2:6–4:1ರಲ್ಲಿ ಬರೆದಿರುವ ಯೆಹೋವನ ಪ್ರವಾದನಾ ವಾಕ್ಯವನ್ನು ಪರಿಗಣಿಸೋಣ.
ಅವರು ಅಹಂಕಾರದಿಂದ ಅಡ್ಡಬೀಳುತ್ತಾರೆ
3. ತನ್ನ ಜನರ ಯಾವ ದೋಷವನ್ನು ಯೆಶಾಯನು ಅರಿಕೆ ಮಾಡುತ್ತಾನೆ?
3 ತನ್ನ ಜನರ ದೋಷಗಳನ್ನು ಅರಿಕೆಮಾಡುತ್ತಾ ಯೆಶಾಯನು ಹೇಳುವುದು: ಅವರು “ಮೂಡಣ ದೇಶಗಳ [ಮಂತ್ರತಂತ್ರಗಳಲ್ಲಿ] ಮಗ್ನರೂ ಫಿಲಿಷ್ಟಿಯರ ಹಾಗೆ ಕಣಿಹೇಳುವವರೂ ಅನ್ಯದೇಶಗಳವರ ಸಂಗಡ ಒಪ್ಪಂದಮಾಡುವವರೂ” ಆಗಿದ್ದಾರೆ. (ಯೆಶಾಯ 2:6ಎ) ಸುಮಾರು 800 ವರ್ಷಗಳ ಹಿಂದೆ, ಯೆಹೋವನು ತಾನಾದುಕೊಂಡ ಜನರಿಗೆ ಹೀಗೆ ಹೇಳಿದ್ದನು: “ಈ ದುರಾಚಾರಗಳಲ್ಲಿ ಯಾವದರಿಂದಲೂ ನೀವು ಅಶುದ್ಧರಾಗಬಾರದು. ನಾನು ನಿಮ್ಮ ಎದುರಿನಿಂದ ಹೊರಡಿಸುವ ಜನಾಂಗಗಳವರು ಇಂಥ ದುರಾಚಾರಗಳಿಂದ ಅಶುದ್ಧರಾದರು.” (ಯಾಜಕಕಾಂಡ 18:24) ತನ್ನ ಸ್ವಕೀಯ ಸ್ವತ್ತಾಗಿ ತಾನು ಆಯ್ಕೆಮಾಡಿದ್ದವರ ಕುರಿತು ಬಿಳಾಮನು ಹೀಗೆನ್ನುವಂತೆ ಯೆಹೋವನು ನಿರ್ಬಂಧಿಸಿದ್ದನು: “ಬೆಟ್ಟದ ಶಿಖರದಿಂದ ನಾನು ಅವರನ್ನು ಕಂಡೆನು; ಗುಡ್ಡದಿಂದ ಅವರನ್ನು ನೋಡಿದೆನು. ಆ ಜನಾಂಗವು ತಾನು ಇತರ ಜನಾಂಗಗಳಂತಲ್ಲವೆಂದು ಭಾವಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತದೆ.” (ಅರಣ್ಯಕಾಂಡ 23:9, 12) ಆದರೂ, ಯೆಶಾಯನ ದಿನಗಳಷ್ಟರಲ್ಲಿ, ಯೆಹೋವನು ಆಯ್ದುಕೊಂಡವರು ತಮ್ಮ ಸುತ್ತಮುತ್ತಲಿನ ಜನರ ಅಸಹ್ಯಾಚಾರಗಳಿಗೆ ಹೊಂದಿಕೊಂಡು “ಮೂಡಣದೇಶಗಳವರ [ಮಂತ್ರತಂತ್ರಗಳಲ್ಲಿ] ಮಗ್ನ”ರಾಗಿದ್ದಾರೆ. ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯಿಡುವ ಬದಲಾಗಿ ಅವರು ‘ಫಿಲಿಷ್ಟಿಯರ ಹಾಗೆ ಕಣಿಹೇಳುವಿಕೆಯನ್ನು’ ಆಚರಿಸುತ್ತಿದ್ದಾರೆ. ಅನ್ಯಜನಾಂಗಗಳಿಂದ ಪ್ರತ್ಯೇಕರಾಗಿರುವ ಬದಲು ಆ ದೇಶದಲ್ಲಿ “ಅನ್ಯದೇಶಗಳ” ಜನರು ತುಂಬಿರುತ್ತಾರೆ. ಈ ವಿದೇಶಿಗಳು ದೇವಜನರಿಗೆ ಕೆಟ್ಟ ಆಚಾರಗಳನ್ನು ಕಲಿಸಿದರೆಂಬುದು ಸ್ಪಷ್ಟ.
4. ಯೆಹೋವನಿಗೆ ಕೃತಜ್ಞತೆ ತೋರಿಸುವಂತೆ ಮಾಡುವ ಬದಲು, ಐಶ್ವರ್ಯ ಮತ್ತು ಸೇನಾಶಕ್ತಿಗಳು ಯೆಹೂದ್ಯರನ್ನು ಹೇಗೆ ಪ್ರಭಾವಿಸುತ್ತವೆ?
4 ಉಜ್ಜೀಯ ರಾಜನ ಕೈಕೆಳಗಿನ ಸದ್ಯದ ಆರ್ಥಿಕ ಸಮೃದ್ಧಿ ಮತ್ತು ಸೇನಾಶಕ್ತಿಯನ್ನು ಗಮನಿಸುತ್ತಾ ಯೆಶಾಯನು ಹೇಳುವುದು: “ಇವರ ದೇಶವು ಬೆಳ್ಳಿಬಂಗಾರಗಳಿಂದ ತುಂಬಿದೆ, ಇವರ ನಿಧಿನಿಕ್ಷೇಪಗಳಿಗೆ ಮಿತಿಯಿಲ್ಲ; ಇವರ ದೇಶವು ಅಶ್ವಬಲಭರಿತವಾಗಿದೆ, ಇವರ ರಥಗಳಿಗೆ ಪಾರವಿಲ್ಲ.” (ಯೆಶಾಯ 2:7) ಇಂತಹ ಐಶ್ವರ್ಯ ಮತ್ತು ಸೇನಾಶಕ್ತಿಗಾಗಿ ಆ ಜನರು ಯೆಹೋವನಿಗೆ ಕೃತಜ್ಞರಾಗಿದ್ದಾರೊ? (2 ಪೂರ್ವಕಾಲವೃತ್ತಾಂತ 26:1, 6-15) ಎಂದಿಗೂ ಇಲ್ಲ! ಬದಲಿಗೆ, ಅವರು ಐಶ್ವರ್ಯದ ಮೇಲೆಯೇ ಭರವಸೆಯಿಟ್ಟು, ಅದರ ಮೂಲನಾದ ಯೆಹೋವನಿಗೆ ಬೆನ್ನುಹಾಕುತ್ತಾರೆ. ಇದರ ಪರಿಣಾಮವೇನು? “ಇವರ ದೇಶವು ವಿಗ್ರಹಗಳಿಂದಲೂ ತುಂಬಿದೆ, ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸು [“ಅಡ್ಡಬೀಳು,” NW]ತ್ತಾರೆ. ಹೀಗಿರಲು ಅಧಮರಾಗಲಿ ಉತ್ತಮರಾಗಲಿ ತಗ್ಗಿಸಲ್ಪಡುವರು [“ಅವರನ್ನು ಕ್ಷಮಿಸಬೇಡ,” NW].” (ಯೆಶಾಯ 2:8, 9) ಅವರು ಜೀವಸ್ವರೂಪನಾದ ದೇವರಿಂದ ತಮ್ಮ ಮುಖಗಳನ್ನು ತಿರುಗಿಸಿ ಜೀವರಹಿತ ವಿಗ್ರಹಗಳಿಗೆ ಅಡ್ಡಬೀಳುತ್ತಾರೆ.
5. ವಿಗ್ರಹಕ್ಕೆ ಅಡ್ಡಬೀಳುವುದು ನಮ್ರತೆಯ ಒಂದು ಕ್ರಿಯೆಯಲ್ಲವೇಕೆ?
5 ಅಡ್ಡಬೀಳುವುದು ನಮ್ರತೆಯ ಸೂಚನೆಯಾಗಿರಸಾಧ್ಯವಿದೆ. ಆದರೆ ಜೀವರಹಿತ ವಸ್ತುಗಳಿಗೆ ಅಡ್ಡಬೀಳುವುದು ವ್ಯರ್ಥವೇ ಸರಿ. ಅದು ವಿಗ್ರಹಾರಾಧಕನನ್ನು ‘ತಗ್ಗಿಸುತ್ತದೆ,’ ಕೀಳಾಗಿಸುತ್ತದೆ. ಇಂತಹ ಪಾಪವನ್ನು ಯೆಹೋವನು ಹೇಗೆ ತಾನೇ ಕ್ಷಮಿಸುವನು? ಈ ವಿಗ್ರಹಾರಾಧಕರು ಲೆಕ್ಕವೊಪ್ಪಿಸುವಂತೆ ಯೆಹೋವನು ಕೇಳಿಕೊಳ್ಳುವಾಗ, ಇವರು ಏನು ಮಾಡುವರು?
“ಗರ್ವದೃಷ್ಟಿಯು ತಗ್ಗಿಹೋಗುವುದು”
6, 7. (ಎ) ಯೆಹೋವನ ತೀರ್ಪಿನ ದಿನದಲ್ಲಿ ಅಹಂಕಾರಿಗಳಿಗೆ ಏನು ಸಂಭವಿಸುತ್ತದೆ? (ಬಿ) ಯೆಹೋವನು ಯಾವುದರ ಮೇಲೆ ಮತ್ತು ಯಾರ ಮೇಲೆ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ, ಮತ್ತು ಏಕೆ?
6 ಯೆಶಾಯನು ಮುಂದುವರಿಸುವುದು: “ಗವಿಯೊಳಗೆ [“ಬಂಡೆಯೊಳಗೆ,” NW] ನುಗ್ಗು, ಯೆಹೋವನ ಭಯಂಕರತನಕ್ಕೂ ಅತ್ಯುನ್ನತಮಹಿಮೆಗೂ ಹೆದರಿ ದೂಳಿನಲ್ಲಿ ಅವುತುಕೋ!” (ಯೆಶಾಯ 2:10) ಆದರೆ ಸರ್ವಶಕ್ತನಾದ ಯೆಹೋವನಿಂದ ಅವರನ್ನು ರಕ್ಷಿಸಲು ಸಾಕಷ್ಟು ದೊಡ್ಡದಾದ ಬಂಡೆಯಾಗಲಿ, ಮರೆಮಾಡುವಷ್ಟು ದಟ್ಟವಾದ ರಕ್ಷಾವರಣವಾಗಲಿ ಇರದು. ಆತನು ತನ್ನ ನ್ಯಾಯತೀರ್ಪನ್ನು ವಿಧಿಸಲು ಬರುವಾಗ, “ಸಾಮಾನ್ಯರ ಗರ್ವದೃಷ್ಟಿಯು ತಗ್ಗಿಹೋಗುವದು, ಮುಖಂಡರ ಅಹಂಕಾರವು ಕುಗ್ಗಿಹೋಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.”—ಯೆಶಾಯ 2:11.
7 “ಸೇನಾಧೀಶ್ವರನಾದ ಯೆಹೋವನ [ನ್ಯಾಯ ನಿರ್ಣಯ] ದಿವಸವು” ಬರುತ್ತಿದೆ. ದೇವರು ತನ್ನ ಕೋಪವನ್ನು, “ಎತ್ತರವಾಗಿ ಬೆಳೆದಿರುವ ಲೆಬನೋನಿನ ಸರ್ವ ದೇವದಾರು ವೃಕ್ಷಗಳು, ಬಾಷಾನಿನ ಎಲ್ಲಾ ಅಲ್ಲೋನ್ ಮರಗಳು, ಶಿಖರಗಳನ್ನು ಉನ್ನತವಾಗಿ ಎತ್ತಿಕೊಂಡಿರುವ ಸಮಸ್ತ ಬೆಟ್ಟಗುಡ್ಡಗಳು, ಉದ್ದುದ್ದವಾದ ಸಕಲ ಗೋಪುರಗಳು, ದುರ್ಗಮವಾದ ಸಮಸ್ತ ಕೋಟೆಗಳು, ಎಲ್ಲಾ ದೊಡ್ಡ ದೊಡ್ಡ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಪ್ರತಿಯೊಂದು ವಸ್ತು”ವಿನ ಮೇಲೆ ಸುರಿಯುವ ಸಮಯವು ಅದಾಗಿರುವುದು. (ಯೆಶಾಯ 2:12-16) ಹೌದು, ಮನುಷ್ಯನು ತನ್ನ ಹೆಮ್ಮೆಯ ಸೂಚನೆಯಾಗಿ ಬೆಳೆಸಿರುವ ಪ್ರತಿಯೊಂದು ಸಂಸ್ಥೆಯ ಮೇಲೆ ಮತ್ತು ಪ್ರತಿಯೊಬ್ಬ ಭಕ್ತಿಹೀನನ ಮೇಲೆ ಯೆಹೋವನ ಕೋಪದ ದಿನವು ಬರಲಿರುವುದು. ಹೀಗೆ, “ಸಾಮಾನ್ಯರ ಗರ್ವವು ಕುಗ್ಗುವದು, ಮುಖಂಡರ ಅಹಂಕಾರವೂ ತಗ್ಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.”—ಯೆಶಾಯ 2:17.
8. ಮುಂತಿಸಲ್ಪಟ್ಟಿದ್ದ ನ್ಯಾಯತೀರ್ಪಿನ ದಿನವು ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ಮೇಲೆ ಹೇಗೆ ಬಂತು?
8 ಸಾ.ಶ.ಪೂ. 607ರಲ್ಲಿ, ಬಾಬೆಲಿನ ಅರಸ ನೆಬೂಕದ್ನೆಚ್ಚರನು ಯೆರೂಸಲೇಮನ್ನು ನಾಶಪಡಿಸಿದಾಗ ಯೆಹೂದ್ಯರ ಮೇಲೆ ಮುಂತಿಳಿಸಲ್ಪಟ್ಟ ಆ ನ್ಯಾಯತೀರ್ಪಿನ ದಿನವು ಬರುತ್ತದೆ. ಆಗ ನಿವಾಸಿಗಳು ತಮ್ಮ ಪ್ರಿಯ ನಗರಕ್ಕೆ ಬೆಂಕಿಹತ್ತುವುದನ್ನು, ಅದರ ಭವ್ಯ ಕಟ್ಟಡಗಳು ನುಚ್ಚುನೂರಾಗುವುದನ್ನು ಮತ್ತು ಅದರ ಬಲಾಢ್ಯವಾದ ಗೋಡೆಗಳು ಕುಸಿದುಬೀಳುವುದನ್ನು ನೋಡುತ್ತಾರೆ. ಯೆಹೋವನ ದೇವಾಲಯವು ಧ್ವಂಸವಾಗುತ್ತದೆ. “ಸೇನಾಧೀಶ್ವರನಾದ ಯೆಹೋವನ ದಿನದಲ್ಲಿ” ಅವರ ನಿಧಿಗಳಾಗಲಿ, ರಥಗಳಾಗಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಅವರ ವಿಗ್ರಹಗಳು? ಅವುಗಳಿಗೂ ಯೆಶಾಯನು ಹೇಳಿದಂತೆಯೇ ಸಂಭವಿಸುತ್ತದೆ: “ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡುವವು.” (ಯೆಶಾಯ 2:18) ಪ್ರಭುಗಳೂ ವೀರರೂ ಸೇರಿ, ಯೆಹೂದ್ಯರೆಲ್ಲರೂ ಬಾಬೆಲಿಗೆ ಒಯ್ಯಲ್ಪಡುತ್ತಾರೆ. ಯೆರೂಸಲೇಮು 70 ವರ್ಷಕಾಲ ಹಾಳು ಬೀಳಲಿಕ್ಕಿದೆ.
9. ಕ್ರೈಸ್ತಪ್ರಪಂಚದ ಪರಿಸ್ಥಿತಿಯು ಯೆಶಾಯನ ದಿನಗಳ ಯೆರೂಸಲೇಮ್ ಮತ್ತು ಯೆಹೂದದ ಪರಿಸ್ಥಿತಿಗೆ ಯಾವ ವಿಧದಲ್ಲಿ ಹೋಲುತ್ತದೆ?
9 ಯೆಶಾಯನ ದಿನಗಳ ಯೆರೂಸಲೇಮ್ ಮತ್ತು ಯೆಹೂದದ ಪರಿಸ್ಥಿತಿಗೆ ಕ್ರೈಸ್ತಪ್ರಪಂಚದ ಪರಿಸ್ಥಿತಿಯು ಎಷ್ಟು ಹತ್ತಿರವಾಗಿ ಹೋಲುತ್ತಿದೆ! ಕ್ರೈಸ್ತಪ್ರಪಂಚವು ಲೋಕದ ರಾಷ್ಟ್ರಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದೆಯೆಂಬುದು ಖಂಡಿತ. ಅದು ವಿಶ್ವ ಸಂಸ್ಥೆಗೆ ಉತ್ಸಾಹಪೂರ್ಣ ಬೆಂಬಲವನ್ನು ಕೊಡುತ್ತದೆ. ಅದರ ಆಲಯದಲ್ಲಿ ವಿಗ್ರಹಗಳೂ ಅಶಾಸ್ತ್ರೀಯ ಆಚಾರಗಳೂ ತುಂಬಿಕೊಂಡಿವೆ. ಅದರ ಹಿಂಬಾಲಕರು ಪ್ರಾಪಂಚಿಕ ಮನಸ್ಸಿನವರೂ ಸೇನಾಶಕ್ತಿಯಲ್ಲಿ ಭರವಸೆಯಿಡುವವರೂ ಆಗಿದ್ದಾರೆ. ಅವರು ತಮ್ಮ ಪಾದ್ರಿಗಳನ್ನು ಮಹಾ ಘನತೆಗೆ ಯೋಗ್ಯರೆಂದೆಣಿಸಿ, ಅವರಿಗೆ ಬಿರುದುಗಳನ್ನೂ ಸನ್ಮಾನಗಳನ್ನೂ ಕೊಡುವುದಿಲ್ಲವೊ? ಕ್ರೈಸ್ತಪ್ರಪಂಚದ ಸ್ವಯಂ ಶ್ಲಾಘನೆಯು ನಿಶ್ಚಯವಾಗಿ ಇಲ್ಲದೆಹೋಗುವುದು. ಆದರೆ ಯಾವಾಗ?
ಸನ್ನಿಹಿತವಾಗಿರುವ “ಯೆಹೋವನ ದಿನ”
10. ಯಾವ “ಯೆಹೋವನ ದಿನ”ಕ್ಕೆ ಅಪೊಸ್ತಲರಾದ ಪೌಲ ಮತ್ತು ಪೇತ್ರರು ಕೈತೋರಿಸಿದರು?
10 ಶಾಸ್ತ್ರಗಳು ಹಳೆಯ ಯೆರೂಸಲೇಮ್ ಮತ್ತು ಯೆಹೂದದ ಮೇಲೆ ಬಂದ ನ್ಯಾಯತೀರ್ಪಿನ ದಿನಕ್ಕಿಂತ, ಹೆಚ್ಚು ಮಹತ್ತಾದ ವಿಶೇಷತೆಯುಳ್ಳ “ಯೆಹೋವನ ದಿನ”ವೊಂದಕ್ಕೆ ಕೈತೋರಿಸುತ್ತವೆ. ಅಪೊಸ್ತಲ ಪೌಲನು ಪ್ರೇರಣೆಗೊಳಗಾಗಿ, ಬರಲಿರುವ “ಯೆಹೋವನ ದಿನ”ವನ್ನು (NW) ಸಿಂಹಾಸನಕ್ಕೇರಿಸಲ್ಪಟ್ಟ ಅರಸನಾದ ಯೇಸು ಕ್ರಿಸ್ತನ ಸಾನ್ನಿಧ್ಯದೊಂದಿಗೆ ಜೊತೆಗೂಡಿಸಿದನು. (2 ಥೆಸಲೊನೀಕ 2:1, 2) ಪೇತ್ರನು ಆ ದಿನವನ್ನು, ‘ನೀತಿಯು ವಾಸಿಸುವ ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲದ’ ಸ್ಥಾಪನೆಯ ಸಂಬಂಧದಲ್ಲಿ ಮಾತಾಡಿದನು. (2 ಪೇತ್ರ 3:10-13) ಯೆಹೋವನು ಕ್ರೈಸ್ತಪ್ರಪಂಚವನ್ನು ಸೇರಿಸಿ, ಇಡೀ ದುಷ್ಟ ವ್ಯವಸ್ಥೆಯ ಮೇಲೆ ನ್ಯಾಯತೀರ್ಪು ಮಾಡುವ ದಿನವೇ ಅದಾಗಿದೆ.
11. (ಎ) ಬರುತ್ತಿರುವ “ಯೆಹೋವನ ದಿನ”ವನ್ನು ಯಾರು “ತಾಳಿಕೊಳ್ಳುವರು”? (ಬಿ) ನಾವು ಯೆಹೋವನನ್ನು ನಮ್ಮ ಆಶ್ರಯವಾಗಿ ಹೇಗೆ ಮಾಡಿಕೊಳ್ಳಬಲ್ಲೆವು?
11 “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು,” ಎನ್ನುತ್ತಾನೆ ಪ್ರವಾದಿ ಯೋವೇಲನು. ಆ ‘ದಿನದ’ ಸಾಮೀಪ್ಯದ ದೃಷ್ಟಿಯಲ್ಲಿ, ಆ ಭಯೋತ್ಪಾದಕ ಸಮಯದಲ್ಲಿ ಭದ್ರತೆಯು ಸಕಲರ ಚಿಂತೆಯಾಗಿರಬಾರದೊ? “ಅದನ್ನು ತಾಳಿಕೊಳ್ಳುವವರು ಯಾರು?” ಎಂದು ಯೋವೇಲನು ಕೇಳುತ್ತಾನೆ. ಅವನು ಉತ್ತರಿಸುವುದು: “ಯೆಹೋವನು ತನ್ನ ಜನರಿಗೆ ಆಶ್ರಯ”ವಾಗಿದ್ದಾನೆ. (ಯೋವೇಲ 1:15; 2:11; 3:16) ಅಹಂಕಾರಿಗಳಿಗೆ, ಹಾಗೂ ಐಶ್ವರ್ಯಗಳಲ್ಲಿ, ಸೇನಾಬಲದಲ್ಲಿ ಮತ್ತು ಮನುಷ್ಯನಿರ್ಮಿತ ದೇವತೆಗಳಲ್ಲಿ ಭರವಸೆಯಿಡುವವರಿಗೆ ಯೆಹೋವ ದೇವರು ಆಶ್ರಯವಾಗಿರುವನೊ? ಹಾಗಿರುವುದು ಅಸಾಧ್ಯ! ತಾನು ಆಯ್ದುಕೊಂಡಿದ್ದ ಜನರು ಕೂಡ ಹೀಗೆ ವರ್ತಿಸಿದಾಗ ದೇವರು ಅವರನ್ನೂ ತ್ಯಜಿಸಿಬಿಟ್ಟನು. ಆದುದರಿಂದ, ದೇವರ ಸೇವಕರೆಲ್ಲರೂ ‘ಸದ್ಧರ್ಮವನ್ನು ಅಭ್ಯಾಸಿಸಿ, ದೈನ್ಯವನ್ನು ಹೊಂದಿಕೊಳ್ಳುವುದು’ ಮತ್ತು ತಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಗೆ ಕೊಡಲ್ಪಟ್ಟಿರುವ ಸ್ಥಾನವನ್ನು ಗಂಭೀರವಾಗಿ ಪರೀಕ್ಷಿಸುವುದು ಅದೆಷ್ಟು ಮಹತ್ವದ್ದಾಗಿದೆ!—ಚೆಫನ್ಯ 2:2, 3.
“ಇಲಿಕಣ್ಣುಕಪಟಗಳಿಗಾಗಿ”
12, 13. ಯೆಹೋವನ ದಿನದಲ್ಲಿ ವಿಗ್ರಹಾರಾಧಕರು ತಮ್ಮ ದೇವತೆಗಳನ್ನು “ಇಲಿಕಣ್ಣುಕಪಟಗಳಿಗಾಗಿ” ಎಸೆಯುವುದು ಏಕೆ ತಕ್ಕದ್ದಾಗಿದೆ?
12 ವಿಗ್ರಹಾರಾಧಕರು ಯೆಹೋವನ ಮಹಾದಿನದಲ್ಲಿ ತಮ್ಮ ವಿಗ್ರಹಗಳನ್ನು ಹೇಗೆ ವೀಕ್ಷಿಸುವರು? ಯೆಶಾಯನು ಉತ್ತರಕೊಡುವುದು: “ಯೆಹೋವನು ಭೂಮಂಡಲವನ್ನು ಕಂಪನಮಾಡುವದಕ್ಕೆ ಏಳುವಾಗ ಮನುಷ್ಯರು ಆತನ ಭಯಂಕರತನಕ್ಕೂ ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ ನೆಲದ ಹಳ್ಳಕೊಳ್ಳಗಳಲ್ಲಿಯೂ ಸೇರಿಕೊಳ್ಳುವರು. ಆ ದಿನದಲ್ಲಿ ಮನುಷ್ಯರು ತಮ್ಮ . . . ಬೆಳ್ಳಿಯ ಬೊಂಬೆಗಳನ್ನೂ ಬಂಗಾರದ ವಿಗ್ರಹಗಳನ್ನೂ ಇಲಿಕಣ್ಣುಕಪಟಗಳಿಗಾಗಿ ಬಿಸಾಟು ಬಿಟ್ಟು ಯೆಹೋವನು ಭೂಮಂಡಲವನ್ನು ಕಂಪನಮಾಡುವದಕ್ಕೆ ಏಳುವಾಗ ಆತನ ಭಯಂಕರತನಕ್ಕೂ ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಸಂದುಗೊಂದುಗಳಲ್ಲಿಯೂ ಚೂಪಾದ ಶಿಲೆಗಳ ಸೀಳುಗಳಲ್ಲಿಯೂ ನುಗ್ಗುವರು. ಉಸಿರು ಮೂಗಿನಲ್ಲಿರುವ ತನಕ ಬದುಕುವ ನರಮನುಷ್ಯನನ್ನು ಬಿಟ್ಟು ಬಿಡಿರಿ; ಅವನು ಯಾವ ಗಣನೆಗೆ ಬಂದಾನು?”—ಯೆಶಾಯ 2:19-22.
13 ಇಲಿಗಳು ನೆಲದ ಬಿಲಗಳಲ್ಲಿಯೂ ಕಣ್ಕಪಟಗಳು (ಬಾವಲಿಗಳು) ಹಾಳುಬಿದ್ದ ಕತ್ತಲಿನ ಗವಿಗಳಲ್ಲಿಯೂ ಜೀವಿಸುತ್ತವೆ. ಅಲ್ಲದೆ, ಒಂದೇ ಸ್ಥಳದಲ್ಲಿ ಈ ಬಾವಲಿಗಳು ದೊಡ್ಡ ಸಂಖ್ಯೆಯಲ್ಲಿ ಜೀವಿಸುವಾಗ ಅಲ್ಲಿ ಅಸಹ್ಯವಾದ ವಾಸನೆಯೂ ಮಲದ ದಪ್ಪ ಪದರಗಳೂ ಇರುತ್ತವೆ. ವಿಗ್ರಹಗಳನ್ನು ಇಂತಹ ಸ್ಥಳಗಳಿಗೆ ಎಸೆಯುವುದು ತಕ್ಕದಾಗಿದೆ. ಏಕೆಂದರೆ ಅವು ಕತ್ತಲೆಯ ಅಶುದ್ಧ ಸ್ಥಳಕ್ಕಾಗಿ ಅರ್ಹವಾಗಿವೆ. ಜನರಾದರೊ, ಯೆಹೋವನ ಆ ನ್ಯಾಯತೀರ್ಪಿನ ದಿನದಲ್ಲಿ ಗವಿಗಳಲ್ಲಿಯೂ ಶಿಲಾ ಸೀಳುಗಳಲ್ಲಿಯೂ ಆಶ್ರಯವನ್ನು ಹುಡುಕುವರು. ಹೀಗೆ ವಿಗ್ರಹಗಳ ಮತ್ತು ಅವುಗಳ ಆರಾಧಕರ ಅಂತ್ಯವು ಸಮಾನ ರೀತಿಯದ್ದಾಗಿರುವುದು. ಯೆಶಾಯನ ಪ್ರವಾದನೆಗನುಸಾರ, ಈ ಜೀವವಿಲ್ಲದ ವಿಗ್ರಹಗಳು ಅವುಗಳ ಆರಾಧಕರನ್ನಾಗಲಿ, ಯೆರೂಸಲೇಮನ್ನಾಗಲಿ, ಸಾ.ಶ.ಪೂ. 607ರಲ್ಲಿ ನೆಬೂಕದ್ನೆಚ್ಚರನ ಕೈಯಿಂದ ರಕ್ಷಿಸಲಿಲ್ಲ.
14. ಸುಳ್ಳುಧರ್ಮದ ಲೋಕಸಾಮ್ರಾಜ್ಯದ ಮೇಲೆ ಬರಲಿರುವ ಯೆಹೋವನ ನ್ಯಾಯತೀರ್ಪಿನ ಸಮಯದಲ್ಲಿ ಲೋಕದ ಜನರು ಏನು ಮಾಡುವರು?
14 ಕ್ರೈಸ್ತಪ್ರಪಂಚದ ಮೇಲೆ ಮತ್ತು ಸುಳ್ಳುಧರ್ಮದ ಲೋಕಸಾಮ್ರಾಜ್ಯದ ಇತರ ವಿಭಾಗಗಳ ಮೇಲೆ ಯೆಹೋವನ ನ್ಯಾಯತೀರ್ಪಿನ ದಿನವು ಬರುವಾಗ, ಜನರೇನು ಮಾಡುವರು? ಭೂವ್ಯಾಪಕವಾಗಿ ದುಃಸ್ಥಿತಿಯನ್ನು ಎದುರಿಸುವ ಹೆಚ್ಚಿನವರು, ತಮ್ಮ ವಿಗ್ರಹಗಳು ನಿಷ್ಪ್ರಯೋಜಕವೆಂದು ಗ್ರಹಿಸುವುದು ಹೆಚ್ಚು ಸಂಭವನೀಯ. ಇವುಗಳಿಗೆ ಬದಲು, ಅವರು ಅನಾತ್ಮಿಕ ಭೂಸಂಸ್ಥೆಗಳಲ್ಲಿ, ಪ್ರಾಯಶಃ ಪ್ರಕಟನೆ 17ನೆಯ ಅಧ್ಯಾಯದ “ರಕ್ತವರ್ಣದ ಮೃಗ”ವಾದ ವಿಶ್ವ ಸಂಸ್ಥೆಯಂತಹ ಸಂಘಟನೆಗಳಲ್ಲಿ ಆಶ್ರಯವನ್ನೂ ಸಂರಕ್ಷಣೆಯನ್ನೂ ಪಡೆಯಲು ಪ್ರಯತ್ನಿಸಬಹುದು. ಆ ಸಾಂಕೇತಿಕ ಕಾಡುಮೃಗದ “ಹತ್ತು ಕೊಂಬು”ಗಳೇ, ಕ್ರೈಸ್ತಪ್ರಪಂಚವು ಯಾವುದರ ಗಮನಾರ್ಹವಾದ ಭಾಗವಾಗಿದೆಯೊ ಆ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲನ್ನು ನಾಶಗೊಳಿಸುವವು.—ಪ್ರಕಟನೆ 17:3, 8-12, 16, 17.
15. ತನ್ನ ನ್ಯಾಯತೀರ್ಪಿನ ದಿನದಲ್ಲಿ ಯೆಹೋವನೊಬ್ಬನೇ ‘ಉನ್ನತೋನ್ನತನು’ ಆಗುವುದು ಹೇಗೆ?
15 ಮಹಾ ಬಾಬೆಲಿನ ಧ್ವಂಸವೂ ದಹನವೂ ನೇರವಾಗಿ ಈ ಸಾಂಕೇತಿಕವಾದ ಹತ್ತು ಕೊಂಬುಗಳ ಕೆಲಸವಾಗಿರಬಹುದಾದರೂ, ಅದು ವಾಸ್ತವವಾಗಿ ಯೆಹೋವನ ನ್ಯಾಯತೀರ್ಪಿನ ನಿರ್ವಹಣೆಯಾಗಿದೆ. ಮಹಾ ಬಾಬೆಲಿನ ಕುರಿತು ಪ್ರಕಟನೆ 18:8 ಹೇಳುವುದು: “ಅವಳಿಗೆ ಕೊಲೆ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು. ಅವಳು ಬೆಂಕಿಯಿಂದ ಸುಟ್ಟುಹೋಗುವಳು; ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.” ಹೀಗೆ, ಸುಳ್ಳುಧರ್ಮದ ಶೋಷಣೆಯಿಂದ ಮಾನವರ ಬಿಡುಗಡೆಗೆ ಕೀರ್ತಿಯು ಸರ್ವಶಕ್ತನಾದ ಯೆಹೋವ ದೇವರಿಗೆ ಸಲ್ಲುತ್ತದೆ. ಯೆಶಾಯನು ಹೇಳುವಂತೆ, “ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು. ಸೇನಾಧೀಶ್ವರನಾದ ಯೆಹೋವನ [ನ್ಯಾಯನಿರ್ಣಯ] ದಿವಸವು” ಅದಾಗಿರುವುದು.—ಯೆಶಾಯ 2:11ಬಿ, 12ಎ.
‘ನಿಮ್ಮ ನಾಯಕರು ದಾರಿತಪ್ಪಿಸುತ್ತಾರೆ’
16. (ಎ) ಮಾನವ ಸಮಾಜದ “ಆಧಾರಕೋದ್ಧಾರಕ”ಗಳಲ್ಲಿ ಏನು ಒಳಗೂಂಡಿವೆ? (ಬಿ) ತಮ್ಮ ಸಮಾಜದ “ಆಧಾರಕೋದ್ಧಾರಕ”ಗಳ ತೆಗೆದುಹಾಕುವಿಕೆಯಿಂದಾಗಿ ಯೆಶಾಯನ ಜನರು ಹೇಗೆ ಬಾಧೆಪಡುವರು?
16 ಮಾನವ ಸಮಾಜವು ಸ್ಥಿರವಾಗಿರಬೇಕಾದರೆ ಅದಕ್ಕೆ “ಆಧಾರಕೋದ್ಧಾರಕ”ಗಳು ಅಂದರೆ ನೀರು, ಆಹಾರದಂತಹ ಆವಶ್ಯಕತೆಗಳು ಮಾತ್ರವಲ್ಲ, ಹೆಚ್ಚು ಮುಖ್ಯವಾಗಿ, ಜನರನ್ನು ನಡೆಸಬಲ್ಲ ಮತ್ತು ಸಮಾಜ ನಿಯಮಕ್ರಮಗಳನ್ನು ಕಾಪಾಡಬಲ್ಲ ಭರವಸಾರ್ಹ ನಾಯಕರು ಆವಶ್ಯಕ. ಆದರೆ ಪ್ರಾಚೀನ ಇಸ್ರಾಯೇಲಿನ ವಿಷಯದಲ್ಲಿ ಯೆಶಾಯನು ಮುಂತಿಳಿಸುವುದು: “ಇಗೋ, ಕರ್ತನೂ ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಜೀವನಕ್ಕೆ ಆಧಾರಕೋದ್ಧಾರಕವಾದ ಅನ್ನಪಾನಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದದಿಂದಲೂ ತೆಗೆದುಬಿಡುವೆನು. ಇದಲ್ಲದೆ ಶೂರ, ಭಟ, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ, ಪಂಚಾಶದಧಿಪತಿ, ಘನವಂತ, ಮಂತ್ರಾಲೋಚಕ, ತಾಂತ್ರಿಕ, ಮಾಂತ್ರಿಕ, ಇವರೆಲ್ಲರನ್ನೂ ತೊಲಗಿಸಿಬಿಡುವೆನು.” (ಯೆಶಾಯ 3:1-3) ಬರಿಯ ಹುಡುಗ ಪ್ರಾಯದವರು ಪ್ರಭುಗಳಾಗಿ ಮನಬಂದಂತೆ ಆಳುವರು. ಆಳಿಕೆ ನಡೆಸುವವರು ಮಾತ್ರ ಜನರನ್ನು ಶೋಷಿಸುವುದಿಲ್ಲ. “ಪ್ರಜೆಗಳು ಪರಸ್ಪರ ವಿರೋಧಿಗಳಾಗಿ ಒಬ್ಬರನ್ನೊಬ್ಬರು ಹಿಂಸಿಸುವರು; ಹುಡುಗನು ಮುದುಕನ ಮೇಲೆಯೂ ನೀಚನು ಘನವಂತನ ಮೇಲೆಯೂ ಸೊಕ್ಕೇರಿ ನಡೆಯುವರು.” (ಯೆಶಾಯ 3:4, 5) ಮಕ್ಕಳು ತಮ್ಮ ಹಿರೀಪ್ರಾಯದವರ ಮೇಲೆ ಗೌರವದ ಕೊರತೆಯನ್ನು ತೋರಿಸಿ “ಸೊಕ್ಕೇರಿ ನಡೆಯುವರು.” ಜೀವನ ಸ್ಥಿತಿಯು ಎಷ್ಟೊಂದು ಕೀಳಾಗಿರುತ್ತದೆಂದರೆ, ಒಬ್ಬನು ಆಳಲು ಅರ್ಹತೆಯಿಲ್ಲದ ಇನ್ನೊಬ್ಬನಿಗೆ ಹೀಗೆ ಹೇಳುವನು: “ಎಲಾ, ಅಣ್ಣ, ನಿನಗೆ ನಿಲುವಂಗಿ ಇದೆ, ನೀನು ನಮಗೆ ಒಡೆಯನಾಗಬೇಕು, ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ.” (ಯೆಶಾಯ 3:6) ಆದರೆ ಹೀಗೆ ಆಮಂತ್ರಿಸಲ್ಪಟ್ಟವರು, ತಮಗೆ ಗಾಯಗೊಳಿಸಲ್ಪಟ್ಟಿರುವ ದೇಶವನ್ನು ಗುಣಪಡಿಸುವ ಸಾಮರ್ಥ್ಯವಾಗಲಿ ಜವಾಬ್ದಾರಿಯನ್ನು ನಿರ್ವಹಿಸಲು ಸಂಪತ್ತಾಗಲಿ ಇರುವುದಿಲ್ಲವೆಂದು ಹೇಳಿ ಪಟ್ಟುಹಿಡಿದು ನಿರಾಕರಿಸುವರು: “ದೇಶದ ವ್ರಣವೈದ್ಯನಾಗಿರುವದಕ್ಕೆ ನನಗಿಷ್ಟವಿಲ್ಲ, ನನ್ನ ಮನೆಯಲ್ಲಿ ಅನ್ನವೆಲ್ಲಿ, ಅಂಗಿಯೆಲ್ಲಿ? ನನ್ನನ್ನು ಜನದೊಡೆಯನನ್ನಾಗಿ ಮಾಡಬೇಡಿರಿ.”—ಯೆಶಾಯ 3:7.
17. (ಎ) ಯೆರೂಸಲೇಮ್ ಮತ್ತು ಯೆಹೂದದ ಪಾಪವು “ಸೊದೋಮಿನವರ” ಪಾಪದಂತೆ ಇದ್ದದ್ದು ಯಾವ ಅರ್ಥದಲ್ಲಿ? (ಬಿ) ತನ್ನ ಜನರ ಪರಿಸ್ಥಿತಿಗೆ ಯೆಶಾಯನು ಯಾರ ಮೇಲೆ ದೂರು ಹೊರಿಸುತ್ತಾನೆ?
17 ಯೆಶಾಯನು ಮುಂದುವರಿಸುವುದು: “ಯೆರೂಸಲೇಮು ಹಾಳಾಯಿತು, ಯೆಹೂದದವರು ಬಿದ್ದುಹೋದರು! ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಪ್ರತಿಭಟಿಸುತ್ತವಲ್ಲವೆ. ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ; ತಮ್ಮ ಪಾಪವನ್ನು ಮರೆಮಾಜದೆ ಸೊದೋಮಿನವರಂತೆ ಮೆರೆಯಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.” (ಯೆಶಾಯ 3:8, 9) ದೇವಜನರು ಸತ್ಯ ದೇವರ ವಿರುದ್ಧವಾಗಿ ನಡೆನುಡಿಗಳಲ್ಲಿ ದಂಗೆಯೆದ್ದಿದ್ದಾರೆ. ಅವರ ಮುಖಗಳಲ್ಲಿ ತೋರಿಬರುವ ನಿರ್ಲಜ್ಜೆ ಮತ್ತು ಪಶ್ಚಾತ್ತಾಪರಹಿತ ಅಭಿವ್ಯಕ್ತಿಗಳೂ ಸೊದೋಮಿನ ಜನರ ಪಾಪದಷ್ಟೇ ಅಸಹ್ಯವಾದ ಅವರ ಪಾಪಗಳನ್ನು ಬಯಲುಪಡಿಸುತ್ತವೆ. ಅವರು ಯೆಹೋವ ದೇವರೊಂದಿಗೆ ಒಂದು ಒಡಂಬಡಿಕೆಯೊಳಗಿದ್ದರೂ ಆತನು ಅವರಿಗಾಗಿ ತನ್ನ ಮಟ್ಟಗಳನ್ನು ಬದಲಾಯಿಸನು. “ಶಿಷ್ಟರಿಗೆ ಶುಭವೇ ಎಂದು ಹೇಳಿರಿ, ಅವರು ತಮ್ಮ ಸುಕೃತಫಲವನ್ನು ಅನುಭವಿಸುವರಷ್ಟೆ. ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ಲಭಿಸುವದಲ್ಲವೆ. ನನ್ನ ಜನರನ್ನೋ ಬಾಧಿಸುವವರು ಹುಡುಗರು, ಆಳುವವರು ಹೆಂಗಸರು. ನನ್ನ ಜನರೇ! ನಿಮ್ಮನ್ನು ನಡಿಸುವವರು ದಾರಿತಪ್ಪಿಸುವವರಾಗಿದ್ದಾರೆ, ನೀವು ನಡೆಯತಕ್ಕ ದಾರಿಯನ್ನು ಅಳಿಸಿಬಿಟ್ಟಿದ್ದಾರೆ.”—ಯೆಶಾಯ 3:10-12.
18. (ಎ) ಯೆಶಾಯನ ದಿನಗಳ ಹಿರೀಜನರ ಮತ್ತು ಪ್ರಭುಗಳ ಮೇಲೆ ಯೆಹೋವನು ಯಾವ ನ್ಯಾಯತೀರ್ಪನ್ನು ಕೊಡುತ್ತಾನೆ? (ಬಿ) ಹಿರೀಜನರ ಮತ್ತು ಪ್ರಭುಗಳ ಮೇಲೆ ಬಂದ ಯೆಹೋವನ ನ್ಯಾಯತೀರ್ಪಿನಿಂದ ನಾವೇನು ಕಲಿತುಕೊಳ್ಳುತ್ತೇವೆ?
18 ಯೆಹೂದದ ಹಿರೀಜನರಿಗೆ ಮತ್ತು ಪ್ರಭುಗಳಿಗೆ ಯೆಹೋವನು ‘ನ್ಯಾಯಾನ್ಯಾಯಗಳನ್ನು ನಿರ್ಣಯಿಸಿ’ ಅವರನ್ನು ‘ನ್ಯಾಯವಿಚಾರಣೆಗೆ ತರುತ್ತಾನೆ’: “ನೀವು ದ್ರಾಕ್ಷೆಯ ತೋಟವನ್ನು ನುಂಗಿಬಿಟ್ಟಿದ್ದೀರಿ; ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿಯೇ ಇದೆ; ನೀವು ನನ್ನ ಜನರನ್ನು ಜಜ್ಜಿ ಬಡವರ ಮುಖವನ್ನು ಹಿಂಡುವದೇಕೆ”? (ಯೆಶಾಯ 3:13-15) ಜನಕಲ್ಯಾಣಕ್ಕಾಗಿ ಶ್ರಮಿಸುವ ಬದಲಿಗೆ, ನಾಯಕರು ವಂಚನೆಯ ಆಚಾರಗಳಲ್ಲಿ ತೊಡಗುತ್ತಾರೆ. ದರಿದ್ರರಿಂದ ಮತ್ತು ದಿಕ್ಕಿಲ್ಲದವರಿಂದ ಅವರು ತಮ್ಮನ್ನೇ ತಾವು ಪುಷ್ಟಿಗೊಳಿಸುತ್ತಾ ತಮಗಿರುವ ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಾರೆ. ಆದರೆ ಸಂಕಟಕ್ಕೀಡಾಗಿರುವವರ ಮೇಲೆ ಮಾಡಿರುವ ದಬ್ಬಾಳಿಕೆಗಾಗಿ ಈ ನಾಯಕರು ಸೇನಾಧೀಶ್ವರನಾದ ಯೆಹೋವನಿಗೆ ಉತ್ತರ ಕೊಡಲೇಬೇಕು. ಇಂದು ಜವಾಬ್ದಾರಿಯ ಸ್ಥಾನದಲ್ಲಿರುವವರಿಗೆ ಇದು ಎಂತಹ ಎಚ್ಚರಿಕೆಯಾಗಿದೆ! ಅವರು ತಮ್ಮ ಅಧಿಕಾರವನ್ನು ದುರುಪಯೋಗಿಸುವುದರ ಕುರಿತು ಸದಾ ಎಚ್ಚರಿಕೆಯಿಂದಿರುವಂತಾಗಲಿ.
19. ಕ್ರೈಸ್ತಪ್ರಪಂಚವು ಯಾವ ರೀತಿಯ ಶೋಷಣೆ ಮತ್ತು ಹಿಂಸೆಯ ವಿಷಯದಲ್ಲಿ ದೋಷಿಯಾಗಿದೆ?
19 ಕ್ರೈಸ್ತಪ್ರಪಂಚ, ವಿಶೇಷವಾಗಿ ಅದರ ಪಾದ್ರಿವರ್ಗ ಮತ್ತು ಪ್ರಮುಖರು, ತಾನು ಶೋಷಣೆ ಮಾಡಿರುವ ಮತ್ತು ಮಾಡುತ್ತಿರುವ ಜನಸಾಮಾನ್ಯರಿಂದ, ಅವರಿಗೆ ಸೇರತಕ್ಕ ಹೆಚ್ಚಿನ ವಸ್ತುಗಳನ್ನು ವಂಚನೆಯಿಂದ ಸಂಪಾದಿಸಿದೆ. ಅದು ದೇವಜನರನ್ನು ಹೊಡೆದು, ಹಿಂಸಿಸಿ, ಅವರೊಂದಿಗೆ ಕ್ರೂರವಾಗಿ ವರ್ತಿಸಿರುವುದೂ ನಿಜ. ಹೀಗೆ ಅದು ಯೆಹೋವನ ಹೆಸರಿಗೆ ಮಹಾ ಕಳಂಕವನ್ನು ತಂದಿದೆ. ಯೆಹೋವನು ತನ್ನ ಕ್ಲುಪ್ತ ಸಮಯದಲ್ಲಿ ಅದಕ್ಕೆ ನ್ಯಾಯತೀರಿಸುವುದು ಖಂಡಿತ.
“ಬೆಡಗಿಗೆ ಬದಲಾಗಿ ಬರೆ”
20. ಯೆಹೋವನು “ಚೀಯೋನಿನ ಹೆಂಗಸರ” ಮೇಲೆ ಅಪವಾದ ಹೊರಿಸುವುದೇಕೆ?
20 ನಾಯಕರುಗಳ ತಪ್ಪನ್ನು ಖಂಡಿಸಿದ ಬಳಿಕ, ಯೆಹೋವನು ಚೀಯೋನಿನ ಅಥವಾ ಯೆರೂಸಲೇಮಿನ ಸ್ತ್ರೀಯರ ವಿಷಯದಲ್ಲಿ ಮಾತಾಡುತ್ತಾನೆ. “ಚೀಯೋನಿನ ಹೆಂಗಸರು,” ಫ್ಯಾಶನಿನ ಕಾರಣದಿಂದಾಗಿ “ಕಾಲುಗೆಜ್ಜೆ” ಧರಿಸುತ್ತಿದ್ದರೆಂಬದು ವ್ಯಕ್ತ. ಈ ಕಾಲುಗೆಜ್ಜೆಗಳು ಇಂಪಾದ ಜಣಜಣಿಸುವ ಸದ್ದನ್ನು ಮಾಡುತ್ತವೆ. ಈ ಸ್ತ್ರೀಯರು ಮಿತವಾದ “ಕುಲುಕಿ ಹೆಜ್ಜೆಯಿಡುತ್ತಾ” ವಯ್ಯಾರದ ಸ್ತ್ರೀಶೈಲಿಯ ನಡಿಗೆಯಿಂದ ಸರಸರ ನಡೆಯುತ್ತಾರೆ. ಇದರಲ್ಲಿ ತಪ್ಪೇನಾದರೂ ಇರುವಲ್ಲಿ, ಅದೇನು? ಈ ಸ್ತ್ರೀಯರ ಮನೋಭಾವವೇ. ಯೆಹೋವನು ಹೇಳುವುದು: “ಚೀಯೋನಿನ ಹೆಂಗಸರು ವಯ್ಯಾರವುಳ್ಳವರಾಗಿ ಕತ್ತುತೂಗುತ್ತಾ ಕಡೆಗಣ್ಣು ಹಾಕುತ್ತಾ” ನಡೆಯುತ್ತಾರೆ. (ಯೆಶಾಯ 3:16) ಇಂತಹ ಅಹಂಕಾರಕ್ಕೆ ದಂಡನೆ ಬರದೇ ಇರುವುದಿಲ್ಲ.
21. ಯೆರೂಸಲೇಮಿನ ಮೇಲೆ ಯೆಹೋವನು ಬರಮಾಡುವ ನ್ಯಾಯತೀರ್ಪು ಯೆಹೂದಿ ಹೆಂಗಸರನ್ನು ಹೇಗೆ ಬಾಧಿಸುತ್ತದೆ?
21 ಹೀಗಿರುವುದರಿಂದ, ದೇಶದ ಮೇಲೆ ಯೆಹೋವನ ನ್ಯಾಯತೀರ್ಪು ಬರುವಾಗ, ಈ ಜಂಬದ “ಚೀಯೋನಿನ ಹೆಂಗಸರು” ಸಮಸ್ತವನ್ನೂ, ತಮಗೆ ಯಾವುದರ ಬಗ್ಗೆ ಹೆಮ್ಮೆಯಿದೆಯೊ ಆ ಸೌಂದರ್ಯವನ್ನೂ ಕಳೆದುಕೊಳ್ಳುವರು. ಯೆಹೋವನು ಪ್ರವಾದಿಸುವುದು: “ಕರ್ತನಾದ ಯೆಹೋವನು ಅವರ ನಡುನೆತ್ತಿಯನ್ನು ಹುಣ್ಣಿನಿಂದ ಬಾಧಿಸಿ ಅವರ ಮಾನವನ್ನು ಬೈಲುಮಾಡುವನು. ಆ ದಿನದಲ್ಲಿ ಯೆಹೋವನು ಅವರ ಅಂದುಗೆ, ತುರುಬು ಬಲೆ, ಅರ್ಧಚಂದ್ರ, ಜುಮಕಿ, ಬಳೆ, ಮುಸುಕು, ಮುಂಡಾಸ, ಕಾಲಸರಪಣಿ, ನಡುಕಟ್ಟು, ಗಂಧದ ಡಬ್ಬಿ, ತಾಯಿತಿ, ಮುದ್ರಿಕೆ, ಮೂಗುತಿ, ಹಬ್ಬದ ಬಟ್ಟೆ, ಮೇಲಂಗಿ, ಶಾಲು, ಚೀಲ, ಕೈಗನ್ನಡಿ, ನಾರುಮಡಿ, ಶಿರೋವೇಷ್ಟನ, ಮೇಲ್ಹೊದಿಕೆ, ಈ ಭೂಷಣಗಳನ್ನೆಲ್ಲಾ ತೆಗೆದುಹಾಕುವನು.” (ಯೆಶಾಯ 3:17-23) ಎಂತಹ ದುರಂತಕರವಾದ ತಿರುಗುಮುರುಗು!
22. ಆಭರಣಗಳ ನಷ್ಟವಲ್ಲದೆ, ಇನ್ನಾವ ನಷ್ಟವನ್ನು ಯೆರೂಸಲೇಮಿನ ಸ್ತ್ರೀಯರು ಅನುಭವಿಸುತ್ತಾರೆ?
22 ಆದರೂ ಪ್ರವಾದನಾ ಸಂದೇಶವು ಮುಂದುವರಿಯುತ್ತದೆ: “ಮತ್ತು ಸುಗಂಧಕ್ಕೆ ಬದಲಾಗಿ ಕೊಳೆ, ನಡುಪಟ್ಟಿಯಿದ್ದಲ್ಲಿ ಹಗ್ಗ, ಅಂದವಾಗಿ ಸೆಕ್ಕಿದ ಜಡೆಯ ಸ್ಥಾನದಲ್ಲಿ ಬೋಡು, ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀಪಟ್ಟೆ, ಬೆಡಗಿಗೆ ಬದಲಾಗಿ ಬರೆ, ಇವು ಆಗುವವು.” (ಯೆಶಾಯ 3:24) ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ಅಹಂಕಾರಿ ಸ್ತ್ರೀಯರು ಐಶ್ವರ್ಯದಿಂದ ದಾರಿದ್ರ್ಯಕ್ಕಿಳಿಯುತ್ತಾರೆ. ಅವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ದಾಸತ್ವದ “ಬರೆ”ಯನ್ನು ಪಡೆಯುತ್ತಾರೆ.
‘ಅವಳು ಹಾಳಾಗುವಳು’
23. ಯೆಹೋವನು ಯೆರೂಸಲೇಮಿನ ಕುರಿತು ಏನನ್ನು ಘೋಷಿಸುತ್ತಾನೆ?
23 ಈಗ ಯೆರೂಸಲೇಮ್ ನಗರಕ್ಕೆ ಮಾತಾಡುತ್ತ ಯೆಹೋವನು ಹೇಳುವುದು: “[ಚೀಯೋನ್ ನಗರಿಯೇ,] ನಿನ್ನ ವೀರರು ಖಡ್ಗದಿಂದ ಬಿದ್ದುಹೋಗುವರು, ನಿನ್ನ ಶೌರ್ಯವು ಯುದ್ಧದಲ್ಲಿ ಅಡಗುವದು. ಅವಳ ಪುರದ್ವಾರಗಳಲ್ಲಿ ಪ್ರಲಾಪವೂ ದುಃಖವೂ ತುಂಬಿರುವವು; ಅವಳು ಹಾಳಾಗಿ ನೆಲದ ಮೇಲೆ ಕೂತುಬಿಡುವಳು.” (ಯೆಶಾಯ 3:25, 26) ಯೆರೂಸಲೇಮಿನ ಪುರುಷರು, ವೀರರು ಸಹ, ಯುದ್ಧದಲ್ಲಿ ಹತರಾಗುವರು. ನಗರವು ನೆಲಸಮವಾಗುವುದು. ಅದರ “ಪುರದ್ವಾರ”ಗಳಿಗೆ ಅದು ‘ಪ್ರಲಾಪ ಮತ್ತು ದುಃಖದ’ ಸಮಯವಾಗಿರುವುದು. ಯೆರೂಸಲೇಮು “ಹಾಳಾಗಿ” ಬಂಜರು ಬೀಳುವುದು.
24. ಕತ್ತಿಯಿಂದಾದ ಪುರುಷನಷ್ಟವು ಯೆರೂಸಲೇಮಿನ ಹೆಂಗಸರಿಗೆ ಯಾವ ತೀಕ್ಷ್ಣ ಪರಿಣಾಮಗಳನ್ನು ಬರಮಾಡುತ್ತದೆ?
24 ಕತ್ತಿಯಿಂದ ಹತರಾದ ಪುರುಷರ ನಷ್ಟವು ಯೆರೂಸಲೇಮಿನ ಸ್ತ್ರೀಯರಿಗೆ ಕಠಿನ ಫಲಿತಾಂಶವನ್ನು ತರುವುದು. ತನ್ನ ಪ್ರವಾದನಾ ಪುಸ್ತಕದ ಈ ಭಾಗವನ್ನು ಮುಗಿಸುತ್ತಾ ಯೆಶಾಯನು ಮುಂತಿಳಿಸುವುದು: “ಆ ದಿನದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಗಂಡಸನ್ನು ಹಿಡಿದು ಸ್ವಂತವಾಗಿ ದುಡಿದ ಅನ್ನವನ್ನು ಉಣ್ಣುವೆವು, ನಾವೇ ಸಂಪಾದಿಸಿದ ಬಟ್ಟೆಯನ್ನು ಉಟ್ಟುಕೊಳ್ಳುವೆವು; ನಿನ್ನ ಹೆಸರು ಮಾತ್ರ ನಮಗಿದ್ದರೆ ಸಾಕು; ನಮ್ಮ ಅವಮಾನವನ್ನು ನೀಗಿಸಿಬಿಡು ಎಂದು ಕೇಳಿಕೊಳ್ಳುವರು.” (ಯೆಶಾಯ 4:1) ವಿವಾಹಯೋಗ್ಯರಾದ ಪುರುಷರ ಕೊರತೆಯು ತುಂಬ ತೀವ್ರವಾಗಿರುವುದು. ಆದುದರಿಂದ, ಒಬ್ಬ ಪುರುಷನ ಹೆಸರಿನಿಂದ ಕರೆಯಲ್ಪಡಲಿಕ್ಕಾಗಿ ಅಂದರೆ ಅವನ ಪತ್ನಿಯರೆಂದು ಎಲ್ಲರಿಗೂ ತಿಳಿದಿರುವಂತೆ ಮತ್ತು ಹೀಗೆ ಗಂಡನಿಲ್ಲದವಳೆಂಬ ಅವಮಾನದಿಂದ ದೂರವಿರಲು ಅನೇಕ ಸ್ತ್ರೀಯರು ಕೇವಲ ಒಬ್ಬ ಪುರುಷನ ಜೊತೆಗಾರ್ತಿಯಾಗಿರುವರು. ಗಂಡನು ತನ್ನ ಹೆಂಡತಿಗೆ ಪೋಷಣೆ ಮತ್ತು ಬಟ್ಟೆಯನ್ನು ಒದಗಿಸಬೇಕೆಂದು ಮೋಶೆಯ ಧರ್ಮಶಾಸ್ತ್ರ ಕೇಳಿಕೊಂಡಿತು. (ವಿಮೋಚನಕಾಂಡ 21:10) ಆದರೆ, ‘ತಮ್ಮದೇ ಅನ್ನವನ್ನು ಉಂಡು, ತಾವು ಸಂಪಾದಿಸಿದ ಬಟ್ಟೆಯನ್ನು ಉಡುವದಕ್ಕೆ’ ಒಪ್ಪಿಕೊಳ್ಳುವ ಮೂಲಕ, ಈ ಸ್ತ್ರೀಯರು ಪುರುಷನ ನ್ಯಾಯವಾದ ಹಂಗುಗಳಿಂದ ಅವನನ್ನು ಬಿಡುಗಡೆ ಮಾಡಲೂ ಸಿದ್ಧರಿದ್ದಾರೆ. ಒಂದು ಕಾಲದಲ್ಲಿ ಅಹಂಕಾರದಿಂದಿದ್ದ ‘ಚೀಯೋನಿನ ಹೆಂಗಸರಿಗೆ’ ಇದು ಎಷ್ಟೊಂದು ಹತಾಶೆಯ ಪರಿಸ್ಥಿತಿಯಾಗಿದೆ!
25. ಅಹಂಕಾರಿಗಳಿಗೆ ಯಾವ ಭವಿಷ್ಯವಿದೆ?
25 ಹೌದು, ಯೆಹೋವನು ಅಹಂಕಾರಿಗಳನ್ನು ತಗ್ಗಿಸುತ್ತಾನೆ. ಆತನು ತಾನಾಯ್ದುಕೊಂಡ ಜನರ ಅಹಂಕಾರವನ್ನು ಸಾ.ಶ.ಪೂ. 607ರಲ್ಲಿ “ತಗ್ಗಿ”ಸುತ್ತಾನೆ. ಮತ್ತು ಅವರ “ಅಹಂಕಾರವನ್ನು” ‘ಕುಗ್ಗಿಸುತ್ತಾನೆ.’ ಆದುದರಿಂದ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂಬುದನ್ನು ಸತ್ಯ ಕ್ರೈಸ್ತರು ಎಂದಿಗೂ ಮರೆಯದಿರಲಿ.—ಯಾಕೋಬ 4:6.
[ಪುಟ 50ರಲ್ಲಿರುವ ಚಿತ್ರ]
ವಿಗ್ರಹಗಳಾಗಲಿ, ಐಶ್ವರ್ಯಗಳಾಗಲಿ, ಸೇನಾ ಪರಾಕ್ರಮಗಳಾಗಲಿ ಯೆರೂಸಲೇಮನ್ನು ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಕಾಪಾಡುವುದಿಲ್ಲ
[ಪುಟ 55ರಲ್ಲಿರುವ ಚಿತ್ರ]
“ಯೆಹೋವನ ದಿನದಲ್ಲಿ” ಸುಳ್ಳುಧರ್ಮದ ಲೋಕಸಾಮ್ರಾಜ್ಯವು ಧ್ವಂಸಗೊಳ್ಳುವುದು