ನೀವು ದೇವರೊಂದಿಗೆ ನಡೆಯುವಿರೊ?
“ನಿನ್ನ ದೇವರೊಂದಿಗೆ ನಡೆಯುವುದರಲ್ಲಿ ನಮ್ರನಾಗಿರು.”—ಮೀಕ 6:8, Nw.
ಒಬ್ಬ ಪುಟಾಣಿಯು ನಡುಗುತ್ತಾ ಎದ್ದು ನಿಂತು, ಹೆತ್ತವರಲ್ಲೊಬ್ಬರ ಚಾಚಿರುವ ತೋಳುಗಳ ಕಡೆಗೆ ತನ್ನ ಕೈಗಳನ್ನು ಎಟುಕಿಸಲು ಪ್ರಯತ್ನಿಸುತ್ತಾ ಅದರ ಮೊದಲ ಹೆಜ್ಜೆಗಳನ್ನು ಇಡುತ್ತದೆ. ಇದು ತುಂಬ ಚಿಕ್ಕದಾದ ವಿಷಯವಾಗಿ ತೋರಬಹುದು, ಆದರೆ ಅದರ ತಂದೆತಾಯಿಗೆ ಇದು ಒಂದು ದೊಡ್ಡ ಮೈಲಿಗಲ್ಲಾಗಿದೆ. ಭವಿಷ್ಯತ್ತಿಗಾಗಿ ಸಂಪೂರ್ಣ ಭರವಸೆಯಿಂದ ಕೂಡಿರುವ ಒಂದು ಕ್ಷಣವಾಗಿದೆ. ಬರಲಿರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ತಮ್ಮ ಮಗುವಿನೊಂದಿಗೆ ಕೈಕೈಹಿಡಿದು ನಡೆಯುವ ಸಮಯಕ್ಕಾಗಿ ಆ ಹೆತ್ತವರು ಕಾತರಭಾವದಿಂದ ಮುನ್ನೋಡುತ್ತಾರೆ. ಅನೇಕ ವಿಧಗಳಲ್ಲಿ ಅವರು ಮಗುವಿಗೆ ಭವಿಷ್ಯತ್ತಿನಲ್ಲಿ ತುಂಬ ದೀರ್ಘ ಸಮಯದ ವರೆಗೆ ಮಾರ್ಗದರ್ಶನ ಹಾಗೂ ಬೆಂಬಲವನ್ನು ಒದಗಿಸುವ ನಿರೀಕ್ಷೆಯುಳ್ಳವರಾಗಿರುತ್ತಾರೆ.
2 ಯೆಹೋವ ದೇವರಿಗೆ ತನ್ನ ಭೂಮಕ್ಕಳ ಕಡೆಗೆ ತದ್ರೀತಿಯ ಭಾವನೆಯಿದೆ. ತನ್ನ ಜನರಾದ ಇಸ್ರಾಯೇಲ್ಯರ, ಅಥವಾ ಎಫ್ರಾಯೀಮ್ಯರ ಕುರಿತು ಆತನು ಒಮ್ಮೆ ಹೇಳಿದ್ದು: “ನಾನೇ ಎಫ್ರಾಯೀಮಿಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; . . . ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು.” (ಹೋಶೇಯ 11:3, 4) ಇಲ್ಲಿ ಯೆಹೋವನು ತನ್ನನ್ನು ಒಂದು ಮಗುವಿಗೆ ತಾಳ್ಮೆಯಿಂದ ನಡೆಯಲು ಕಲಿಸುತ್ತಿರುವ, ಅದು ಕೆಳಗೆ ಬೀಳುವಾಗ ಅದನ್ನು ಎತ್ತಿಕೊಳ್ಳುವ ವಾತ್ಸಲ್ಯಭರಿತ ತಂದೆಯಾಗಿ ವರ್ಣಿಸಿಕೊಳ್ಳುತ್ತಾನೆ. ಯೆಹೋವನು, ನಾವು ಹೇಗೆ ನಡೆಯಬೇಕು ಎಂಬುದನ್ನು ನಮಗೆ ಕಲಿಸಲು ಕಾತರನಾಗಿರುವ ಒಬ್ಬ ಅತ್ಯುತ್ತಮ ತಂದೆಯಾಗಿದ್ದಾನೆ. ನಾವು ಪ್ರಗತಿಯನ್ನು ಮಾಡುತ್ತಾ ಹೋಗುವಾಗ ನಮ್ಮೊಂದಿಗೆ ಇರುವುದರಲ್ಲಿಯೂ ಆತನು ಸಂತೋಷಿಸುತ್ತಾನೆ. ನಮ್ಮ ಮುಖ್ಯ ವಚನವು ತೋರಿಸುವಂತೆ, ನಾವು ದೇವರೊಂದಿಗೆ ನಡೆಯಸಾಧ್ಯವಿದೆ! (ಮೀಕ 6:8, NW) ಆದರೆ ದೇವರೊಂದಿಗೆ ನಡೆಯುವುದರ ಅರ್ಥವೇನಾಗಿದೆ? ನಾವು ಏಕೆ ಆತನೊಂದಿಗೆ ನಡೆಯಬೇಕು? ಅದು ಹೇಗೆ ಸಾಧ್ಯ? ಮತ್ತು ದೇವರೊಂದಿಗೆ ನಡೆಯುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ? ನಾವೀಗ ಈ ನಾಲ್ಕು ಪ್ರಶ್ನೆಗಳನ್ನು ಒಂದೊಂದಾಗಿ ಪರಿಗಣಿಸೋಣ.
ದೇವರೊಂದಿಗೆ ನಡೆಯುವುದರ ಅರ್ಥವೇನು?
3 ಒಬ್ಬ ಮಾನವ ಜೀವಿಯು ಆತ್ಮಜೀವಿಯಾಗಿರುವ ಯೆಹೋವನೊಂದಿಗೆ ಅಕ್ಷರಾರ್ಥವಾಗಿ ನಡೆಯಲು ಸಾಧ್ಯವಿಲ್ಲ ಎಂಬುದಂತೂ ಖಚಿತ. (ವಿಮೋಚನಕಾಂಡ 33:20; ಯೋಹಾನ 4:24) ಆದುದರಿಂದ, ಮಾನವರು ದೇವರೊಂದಿಗೆ ನಡೆಯುವುದರ ಕುರಿತು ಬೈಬಲ್ ಮಾತಾಡುವಾಗ, ಅದು ಸಾಂಕೇತಿಕ ಭಾಷೆಯನ್ನು ಉಪಯೋಗಿಸುತ್ತದೆ. ಇದು ಗಮನಾರ್ಹವಾದ ವರ್ಣನೆಯಾಗಿದೆ. ಇದು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳ ನಿರ್ಬಂಧಕ್ಕೆ ಒಳಪಡುವುದಿಲ್ಲ ಮತ್ತು ಇದು ಯಾವುದೇ ಕಾಲಾವಧಿಗೆ ಅನ್ವಯವಾಗುವಂಥದ್ದಾಗಿದೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನಡೆಯುವ ವಿಚಾರವನ್ನು ಯಾವ ಸ್ಥಳದಲ್ಲಿ ಅಥವಾ ಯುಗದಲ್ಲಿ ಇರುವ ಜನರು ತಾನೇ ಗ್ರಹಿಸಸಾಧ್ಯವಿಲ್ಲ? ಈ ವರ್ಣನೆಯು ಸೌಹಾರ್ದತೆ ಮತ್ತು ಆಪ್ತತೆಯನ್ನು ತಿಳಿಯಪಡಿಸುವುದಿಲ್ಲವೊ? ಇಂಥ ಭಾವನೆಗಳು ದೇವರೊಂದಿಗೆ ನಡೆಯುವುದರ ಅರ್ಥವೇನು ಎಂಬ ವಿಷಯದಲ್ಲಿ ಸ್ವಲ್ಪ ಒಳನೋಟವನ್ನು ನೀಡುತ್ತವೆ. ನಾವೀಗ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಯೋಣ.
4 ನಂಬಿಗಸ್ತ ಪುರುಷರಾಗಿದ್ದ ಹನೋಕ ಮತ್ತು ನೋಹನನ್ನು ಜ್ಞಾಪಿಸಿಕೊಳ್ಳಿರಿ. ಅವರ ಬಗ್ಗೆ ತಿಳಿಸುವಾಗ, ಅವರು ದೇವರೊಂದಿಗೆ ನಡೆದರೆಂದು ಏಕೆ ವರ್ಣಿಸಲಾಗಿದೆ? (ಆದಿಕಾಂಡ 5:24; 6:9) ಬೈಬಲಿನಲ್ಲಿ, “ನಡೆಯುವುದು” ಎಂಬ ಪದದ ಅರ್ಥವು ಅನೇಕವೇಳೆ ಒಂದು ನಿರ್ದಿಷ್ಟ ಮಾರ್ಗಕ್ರಮವನ್ನು ಅನುಸರಿಸುವುದಾಗಿದೆ. ಹನೋಕನೂ ನೋಹನೂ ಯೆಹೋವ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿದ್ದ ಒಂದು ಜೀವನಕ್ರಮವನ್ನು ಆಯ್ಕೆಮಾಡಿಕೊಂಡರು. ತಮ್ಮ ಸುತ್ತಲೂ ಇದ್ದ ಲೋಕಕ್ಕೆ ಅಸದೃಶವಾಗಿ ಅವರು ಮಾರ್ಗದರ್ಶನೆಗಾಗಿ ಯೆಹೋವನ ಕಡೆಗೆ ನೋಡಿದರು ಮತ್ತು ಆತನು ಕೊಟ್ಟ ನಿರ್ದೇಶನಕ್ಕೆ ವಿಧೇಯರಾದರು. ಅವರು ಆತನಲ್ಲಿ ಭರವಸೆಯಿಟ್ಟರು. ಯೆಹೋವನು ಅವರಿಗಾಗಿ ನಿರ್ಣಯಗಳನ್ನು ಮಾಡಿದನು ಎಂಬುದು ಇದರ ಅರ್ಥವೊ? ಇಲ್ಲ. ಯೆಹೋವನು ಮಾನವರಿಗೆ ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ ಮತ್ತು ನಮ್ಮ ಸ್ವಂತ “ತರ್ಕಶಕ್ತಿ”ಯೊಂದಿಗೆ ಈ ಕೊಡುಗೆಯನ್ನು ಉಪಯೋಗಿಸುವಂತೆ ಆತನು ಬಯಸುತ್ತಾನೆ. (ರೋಮಾಪುರ 12:1, NW) ಆದರೆ, ನಾವು ನಿರ್ಣಯಗಳನ್ನು ಮಾಡುವಾಗ, ನಮ್ಮ ತರ್ಕಶಕ್ತಿಯು ಯೆಹೋವನ ಅತಿ ಶ್ರೇಷ್ಠವಾದ ಬುದ್ಧಿಯಿಂದ ಮಾರ್ಗದರ್ಶಿಸಲ್ಪಡುವಂತೆ ದೀನಭಾವದಿಂದ ಅನುಮತಿಸುತ್ತೇವೆ. (ಜ್ಞಾನೋಕ್ತಿ 3:5, 6; ಯೆಶಾಯ 55:8, 9) ಕಾರ್ಯತಃ ನಾವು ಜೀವನದ ಹಾದಿಯಲ್ಲಿ ನಡೆಯುವಾಗ, ಆ ಪ್ರಯಾಣವನ್ನು ಯೆಹೋವನೊಂದಿಗೆ ನಿಕಟ ಸಹವಾಸದಲ್ಲಿದ್ದು ಮಾಡುವವರಾಗಿದ್ದೇವೆ.
5 ಬೈಬಲ್ ಅನೇಕವೇಳೆ ಜೀವನವನ್ನು ಒಂದು ಪ್ರಯಾಣಕ್ಕೆ ಅಥವಾ ಕಾಲ್ನಡಿಗೆಗೆ ಹೋಲಿಸುತ್ತದೆ. ಕೆಲವು ಕಡೆಗಳಲ್ಲಿ ಈ ಹೋಲಿಕೆಯು ನೇರವಾಗಿ ಕೊಡಲ್ಪಟ್ಟಿದೆ ಆದರೆ ಬೇರೆ ಕಡೆಗಳಲ್ಲಿ ಅದು ಪರೋಕ್ಷವಾಗಿ ತಿಳಿಸಲ್ಪಟ್ಟಿದೆ. ಉದಾಹರಣೆಗೆ, ಯೇಸು ಹೇಳಿದ್ದು: “ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? [“ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ,” ಪರಿಶುದ್ಧ ಬೈಬಲ್].” (ಮತ್ತಾಯ 6:27) ಈ ಮಾತುಗಳಲ್ಲಿ ಕೆಲವು ನಿಮಗೆ ಗೊಂದಲಮಯವಾಗಿ ಕಂಡುಬರಬಹುದು. ಏಕೆಂದರೆ ಒಬ್ಬ ವ್ಯಕ್ತಿಯ ‘ಆಯುಷ್ಯವನ್ನು’ ಸಾಮಾನ್ಯವಾಗಿ ಕಾಲದ ರೂಪದಲ್ಲಿ ಅಳೆಯಲಾಗುತ್ತದೆ, ಆದರೆ ಇಲ್ಲಿ ಯೇಸು ‘ಒಂದು ಮೊಳ’ ಎಂಬ ಏಕಮಾನವನ್ನು ಉಪಯೋಗಿಸಿ ಅದರ ಬಗ್ಗೆ ಮಾತಾಡಿದ್ದೇಕೆ?a ಯೇಸು ಜೀವನವನ್ನು ಒಂದು ಪ್ರಯಾಣದಂತೆ ಚಿತ್ರಿಸಿದನು ಎಂಬುದು ಸುವ್ಯಕ್ತ. ಕಾರ್ಯತಃ, ಚಿಂತೆಮಾಡುವುದು ನಿಮ್ಮ ಜೀವನ ಎಂಬ ಪ್ರಯಾಣಕ್ಕೆ ಒಂದು ಚಿಕ್ಕ ಹೆಜ್ಜೆಯನ್ನು ಸಹ ಕೂಡಿಸಲು ನಿಮಗೆ ಸಹಾಯಮಾಡುವುದಿಲ್ಲ ಎಂದು ಅವನು ಕಲಿಸಿದನು. ಹಾಗಾದರೆ, ನಾವು ದೇವರೊಂದಿಗೆ ಎಷ್ಟು ಕಾಲ ನಡೆಯುವೆವು ಎಂಬ ವಿಷಯದಲ್ಲಿ ನಾವು ಮಾಡಸಾಧ್ಯವಿರುವಂಥದ್ದು ಏನೂ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕೊ? ಖಂಡಿತವಾಗಿಯೂ ಇಲ್ಲ! ಇದು ನಮ್ಮನ್ನು ಎರಡನೆಯ ಪ್ರಶ್ನೆಗೆ ನಡಿಸುತ್ತದೆ: ನಾವು ಏಕೆ ದೇವರೊಂದಿಗೆ ನಡೆಯಬೇಕು?
ನಾವು ಏಕೆ ದೇವರೊಂದಿಗೆ ನಡೆಯಬೇಕು?
6 ನಾವು ಯೆಹೋವ ದೇವರೊಂದಿಗೆ ನಡೆಯಬೇಕಾಗಿರುವ ಒಂದು ಕಾರಣವು ಯೆರೆಮೀಯ 10:23ರಲ್ಲಿ ವಿವರಿಸಲ್ಪಟ್ಟಿದೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ಹಾಗಾದರೆ ಮಾನವರಾದ ನಮಗೆ ನಮ್ಮ ಸ್ವಂತ ಜೀವನಮಾರ್ಗವನ್ನು ನಿರ್ದೇಶಿಸುವ ಸಾಮರ್ಥ್ಯ ಅಥವಾ ಹಕ್ಕು ಇಲ್ಲ. ನಮಗೆ ಮಾರ್ಗದರ್ಶನವು ತುಂಬ ಅಗತ್ಯವಾಗಿದೆ. ದೇವರಿಂದ ಸ್ವತಂತ್ರರಾಗಿ ತಮ್ಮ ಸ್ವಂತ ಮಾರ್ಗದಲ್ಲಿ ಹೋಗಲು ಪಟ್ಟುಹಿಡಿಯುವವರು, ಆದಾಮಹವ್ವರು ಮಾಡಿದಂಥ ತಪ್ಪನ್ನೇ ಮಾಡುವವರಾಗಿದ್ದಾರೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ತಮ್ಮಷ್ಟಕ್ಕೇ ನಿರ್ಧರಿಸುವ ಹಕ್ಕು ತಮಗಿದೆ ಎಂದು ಆ ಮೊದಲ ಜೊತೆಯು ಊಹಿಸಿಕೊಂಡಿತು. (ಆದಿಕಾಂಡ 3:1-6) ಆದರೆ ಆ ಹಕ್ಕು ನಮ್ಮ “ಸ್ವಾಧೀನದಲ್ಲಿಲ್ಲ.”
7 ಜೀವನ ಎಂಬ ಪ್ರಯಾಣದಲ್ಲಿ ಮಾರ್ಗದರ್ಶನದ ಆವಶ್ಯಕತೆ ಇದೆ ಎಂದು ನಿಮಗನಿಸುವುದಿಲ್ಲವೊ? ಪ್ರತಿ ದಿನ ನಾವು ಚಿಕ್ಕ ಮತ್ತು ದೊಡ್ಡ ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಇವುಗಳಲ್ಲಿ ಕೆಲವು ತುಂಬ ಕಷ್ಟಕರವಾಗಿರುತ್ತವೆ ಮತ್ತು ನಮ್ಮ ಹಾಗೂ ನಮ್ಮ ಪ್ರಿಯ ಜನರ ಭವಿಷ್ಯತ್ತಿನ ಮೇಲೆ ಪ್ರಭಾವ ಬೀರಬಲ್ಲವು. ಆದರೂ, ನಮಗಿಂತಲೂ ಅಪಾರ ರೀತಿಯಲ್ಲಿ ದೊಡ್ಡವರಾಗಿರುವ ಮತ್ತು ಬುದ್ಧಿವಂತರಾಗಿರುವ ಯಾರೋ ಒಬ್ಬರು ಇಂಥ ನಿರ್ಣಯಗಳನ್ನು ಮಾಡುವುದರಲ್ಲಿ ನಮಗೆ ಪ್ರೀತಿಭರಿತ ಮಾರ್ಗದರ್ಶನವನ್ನು ನೀಡಲು ಸಂತೋಷಿಸುತ್ತಾರೆ ಎಂಬುದರ ಕುರಿತು ಸ್ವಲ್ಪ ಆಲೋಚಿಸಿರಿ! ದುಃಖಕರವಾಗಿಯೇ, ಇಂದು ಅಧಿಕಾಂಶ ಜನರು ತಮ್ಮ ಸ್ವಂತ ಅಭಿಪ್ರಾಯದ ಮೇಲೆ ಭರವಸೆಯಿಡಲು ಮತ್ತು ತಮ್ಮ ಸ್ವಂತ ಹೆಜ್ಜೆಗಳನ್ನು ಮಾರ್ಗದರ್ಶಿಸಲು ಇಷ್ಟಪಡುತ್ತಾರೆ. ಅವರು ಜ್ಞಾನೋಕ್ತಿ 28:26ರಲ್ಲಿ ತಿಳಿಸಲ್ಪಟ್ಟಿರುವ ಮಾತುಗಳ ಸತ್ಯತೆಯನ್ನು ಅಲಕ್ಷಿಸುತ್ತಾರೆ: “ತನ್ನಲ್ಲೇ ಭರವಸವಿಡುವವನು ಮೂಢನು; ಜ್ಞಾನದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.” ವಂಚನಾತ್ಮಕವಾದ ಮಾನವ ಹೃದಯದ ಮೇಲೆ ಭರವಸೆಯಿಡುವುದರಿಂದ ಉಂಟಾಗುವ ವಿಪತ್ತುಗಳಿಂದ ದೂರವಿರುವಂತೆ ಯೆಹೋವನು ಬಯಸುತ್ತಾನೆ. (ಯೆರೆಮೀಯ 17:9) ನಾವು ವಿವೇಕದಿಂದ ನಡೆಯಬೇಕು, ನಮ್ಮ ವಿವೇಕಭರಿತ ಮಾರ್ಗದರ್ಶಿ ಹಾಗೂ ಉಪದೇಶಕನಾಗಿರುವ ಆತನಲ್ಲಿ ಭರವಸೆಯಿಡಬೇಕು ಎಂಬುದು ಆತನ ಇಚ್ಛೆಯಾಗಿದೆ. ನಾವು ಹೀಗೆ ಮಾಡುವಾಗ, ಜೀವನದಲ್ಲಿ ಸುರಕ್ಷಿತವಾಗಿ, ಸಂತೃಪ್ತಿಕರವಾಗಿ ಮತ್ತು ಸಫಲದಾಯಕವಾಗಿ ನಡೆಯಸಾಧ್ಯವಿದೆ.
8 ನಾವು ದೇವರೊಂದಿಗೆ ಏಕೆ ನಡೆಯಬೇಕು ಎಂಬುದಕ್ಕಾಗಿರುವ ಇನ್ನೊಂದು ಕಾರಣವು, ನಾವು ಎಷ್ಟು ದೀರ್ಘಕಾಲ ನಡೆಯಲು ಬಯಸುತ್ತೇವೆ ಎಂಬುದನ್ನು ಒಳಗೂಡಿದೆ. ಬೈಬಲು ಒಂದು ಕಠೋರ ಸತ್ಯವನ್ನು ತಿಳಿಯಪಡಿಸುತ್ತದೆ. ಒಂದರ್ಥದಲ್ಲಿ ಎಲ್ಲ ಅಪರಿಪೂರ್ಣ ಮಾನವರು ಒಂದೇ ಗಮ್ಯಸ್ಥಾನದ ಕಡೆಗೆ ನಡೆಯುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಬರುವ ಸಂಕಷ್ಟಗಳನ್ನು ವರ್ಣಿಸುತ್ತಾ ಪ್ರಸಂಗಿ 12:5 ಹೇಳುವುದು: “ಮನುಷ್ಯನು ತನ್ನ ನಿತ್ಯಗೃಹಕ್ಕೆ ಹೊರಡುವದಕ್ಕಿದ್ದಾನಲ್ಲಾ; ಗೋಳಾಟದವರು ಬೀದಿಯಲ್ಲಿ ತಿರುಗುವರು.” ಈ ‘ನಿತ್ಯಗೃಹವು’ ಏನಾಗಿದೆ? ಪಾಪ ಮತ್ತು ಅಪರಿಪೂರ್ಣತೆಯು ಸಹಜವಾಗಿಯೇ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೋ ಆ ಸಮಾಧಿಯೇ ಆಗಿದೆ. (ರೋಮಾಪುರ 6:23) ಆದರೆ, ಜನನದಿಂದ ಹಿಡಿದು ಮರಣದ ತನಕ ಅಲ್ಪಾವಧಿಯ ಹಾಗೂ ತೊಂದರೆಭರಿತ ನಡೆಯುವಿಕೆಗಿಂತಲೂ ಹೆಚ್ಚಾದುದನ್ನು ಯೆಹೋವನು ನಮಗೋಸ್ಕರ ಬಯಸುತ್ತಾನೆ. (ಯೋಬ 14:1) ನಾವು ದೇವರೊಂದಿಗೆ ನಡೆಯುವುದಾದರೆ ಮಾತ್ರ, ಆತನು ನಾವು ಎಷ್ಟು ದೀರ್ಘ ಕಾಲ ನಡೆಯಬೇಕೆಂದು ಉದ್ದೇಶಿಸಿದ್ದಾನೋ ಅಷ್ಟು ಕಾಲ ಅಂದರೆ ಸದಾಕಾಲಕ್ಕೂ ನಡೆಯುವ ಸದವಕಾಶ ನಮಗಿರುವುದು. ನೀವು ಸಹ ಇದನ್ನೇ ಬಯಸುತ್ತೀರಲ್ಲವೇ? ಹಾಗಾದರೆ, ನೀವು ನಿಮ್ಮ ತಂದೆಯೊಂದಿಗೆ ನಡೆಯುವ ಅಗತ್ಯವಿದೆ ಎಂಬುದು ಸುಸ್ಪಷ್ಟ.
ನಾವು ದೇವರೊಂದಿಗೆ ಹೇಗೆ ನಡೆಯಸಾಧ್ಯವಿದೆ?
9 ನಾವು ಪರಿಗಣಿಸುತ್ತಿರುವ ಮೂರನೆಯ ಪ್ರಶ್ನೆಯು ನಮ್ಮ ಅತಿ ಜಾಗರೂಕ ಗಮನಕ್ಕೆ ಅರ್ಹವಾದದ್ದಾಗಿದೆ. ಅದು, ನಾವು ದೇವರೊಂದಿಗೆ ಹೇಗೆ ನಡೆಯಸಾಧ್ಯವಿದೆ? ಎಂಬುದಾಗಿದೆ. ಇದಕ್ಕೆ ಉತ್ತರವನ್ನು ನಾವು ಯೆಶಾಯ 30:20, 21ರಲ್ಲಿ ಕಂಡುಕೊಳ್ಳುತ್ತೇವೆ: “ನಿಮ್ಮ ಬೋಧಕನು ಇನ್ನು ಮರೆಯಾಗಿರನು, ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” ಈ ಉತ್ತೇಜನದಾಯಕ ಭಾಗದಲ್ಲಿ, 20ನೆಯ ವಚನದಲ್ಲಿ ದಾಖಲಿಸಲ್ಪಟ್ಟಿರುವ ಯೆಹೋವನ ಮಾತುಗಳು, ಆತನ ಜನರು ಆತನ ವಿರುದ್ಧ ದಂಗೆಯೆದ್ದಾಗ ಕಾರ್ಯತಃ ಆತನು ಅವರಿಂದ ಮರೆಯಾಗಿದ್ದನು ಎಂಬುದನ್ನು ಅವರಿಗೆ ನೆನಪುಹುಟ್ಟಿಸಿದ್ದಿರಬಹುದು. (ಯೆಶಾಯ 1:15; 59:2) ಆದರೂ, ಇಲ್ಲಿ ಯೆಹೋವನು ಮರೆಯಾಗಿರುವಂತೆ ಅಲ್ಲ ಬದಲಾಗಿ ಬಹಿರಂಗವಾಗಿ ತನ್ನ ನಂಬಿಗಸ್ತ ಜನರ ಮುಂದೆಯೇ ನಿಂತಿರುವಂತೆ ಚಿತ್ರಿಸಲ್ಪಟ್ಟಿದ್ದಾನೆ. ಉಪದೇಶಕನೊಬ್ಬನು ತನ್ನ ವಿದ್ಯಾರ್ಥಿಗಳ ಮುಂದೆ ನಿಂತುಕೊಂಡು, ಅವರು ಏನನ್ನು ಕಲಿಯುವಂತೆ ಅವನು ಬಯಸುತ್ತಾನೆ ಎಂಬುದನ್ನು ತೋರಿಸಿಕೊಡುತ್ತಿರುವುದನ್ನು ನಾವು ಚಿತ್ರಿಸಿಕೊಳ್ಳಬಹುದು.
10 ವಚನ ಇಪ್ಪತ್ತೊಂದರಲ್ಲಿ, ಭಿನ್ನವಾದ ರೀತಿಯ ವರ್ಣನೆಯು ಕೊಡಲ್ಪಟ್ಟಿದೆ. ಅಲ್ಲಿ, ಸರಿಯಾದ ಮಾರ್ಗದಲ್ಲೇ ನಡೆಯುವುದರ ವಿಷಯದಲ್ಲಿ ನಿರ್ದೇಶನಗಳನ್ನು ಕೊಡುತ್ತಾ ಯೆಹೋವನು ತನ್ನ ಜನರ ಹಿಂದೆ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. ತನ್ನ ಕುರಿಗಳನ್ನು ಮಾರ್ಗದರ್ಶಿಸಲಿಕ್ಕಾಗಿ ಮತ್ತು ತಪ್ಪು ದಾರಿಯಲ್ಲಿ ಹೋಗದಿರುವಂತೆ ತಡೆಯಲಿಕ್ಕಾಗಿ ಗಟ್ಟಿಯಾಗಿ ಕೂಗಿಹೇಳುತ್ತಾ ಒಬ್ಬ ಕುರುಬನು ಕೆಲವೊಮ್ಮೆ ತನ್ನ ಕುರಿಗಳನ್ನು ಹಿಂಬಾಲಿಸುವಂಥ ರೀತಿಯ ಮೇಲೆ ಈ ಅಭಿವ್ಯಕ್ತಿಯು ಆಧಾರಿತವಾಗಿರಬಹುದು ಎಂದು ಬೈಬಲ್ ವಿದ್ವಾಂಸರು ಹೇಳಿಕೆ ನೀಡಿದ್ದಾರೆ. ಈ ವರ್ಣನೆಯು ನಮಗೆ ಹೇಗೆ ಅನ್ವಯವಾಗುತ್ತದೆ? ನಾವು ಮಾರ್ಗದರ್ಶನಕ್ಕಾಗಿ ದೇವರ ವಾಕ್ಯದ ಕಡೆಗೆ ತಿರುಗುವಾಗ, ಸಾವಿರಾರು ವರ್ಷಗಳ ಹಿಂದೆ ದಾಖಲಿಸಲ್ಪಟ್ಟಿರುವಂಥ ಮಾತುಗಳನ್ನು ಓದುತ್ತೇವೆ. ಅವು ದೀರ್ಘ ಸಮಯದ ಹಿಂದೆಯೇ ದಾಖಲಿಸಲ್ಪಟ್ಟಿರುವುದರಿಂದ, ಅವು ನಮ್ಮ ಹಿಂದಿನಿಂದ ಆಡಲ್ಪಡುತ್ತಿವೆಯೋ ಎಂಬಂತೆ ಭಾಸವಾಗುತ್ತದೆ. ಆದರೂ, ಅವು ಅಂದು ಬರೆಯಲ್ಪಟ್ಟಾಗ ಎಷ್ಟು ಅರ್ಥಗರ್ಭಿತವಾಗಿದ್ದವೋ ಇಂದು ಕೂಡ ಅಷ್ಟೇ ಅರ್ಥಗರ್ಭಿತವಾಗಿವೆ. ಬೈಬಲ್ ಸಲಹೆಯು ನಮ್ಮ ದೈನಂದಿನ ನಿರ್ಣಯಗಳಲ್ಲಿ ನಮ್ಮನ್ನು ಮಾರ್ಗದರ್ಶಿಸಬಲ್ಲದು ಮತ್ತು ಬರಲಿರುವ ವರ್ಷಗಳಲ್ಲಿಯೂ ನಮ್ಮ ಜೀವನಮಾರ್ಗವನ್ನು ಯೋಜಿಸಲು ನಮಗೆ ಸಹಾಯಮಾಡಬಲ್ಲದು. (ಕೀರ್ತನೆ 119:105) ಇಂಥ ಸಲಹೆಯನ್ನು ಶ್ರದ್ಧಾಪೂರ್ವಕವಾಗಿ ಹುಡುಕಿ ಅದನ್ನು ಅನ್ವಯಿಸಿಕೊಳ್ಳುವಾಗ, ಯೆಹೋವನು ನಮ್ಮ ಮಾರ್ಗದರ್ಶಿಯಾಗುತ್ತಾನೆ. ಮತ್ತು ನಾವು ದೇವರೊಂದಿಗೆ ನಡೆಯುತ್ತಿರುತ್ತೇವೆ.
11 ದೇವರ ವಾಕ್ಯವು ಅಷ್ಟು ನಿಕಟವಾಗಿ ನಮ್ಮನ್ನು ಮಾರ್ಗದರ್ಶಿಸುವಂತೆ ನಾವು ನಿಜವಾಗಿಯೂ ಅನುಮತಿಸುತ್ತಿದ್ದೇವೋ? ಕೆಲವೊಮ್ಮೆ ಸ್ವಲ್ಪ ಸಮಯ ತೆಗೆದುಕೊಂಡು ನಮ್ಮನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳುವುದು ಪ್ರಯೋಜನಾರ್ಹವಾದದ್ದಾಗಿದೆ. ಹೀಗೆ ಮಾಡಲು ನಮಗೆ ಸಹಾಯಮಾಡುವ ಒಂದು ವಚನವನ್ನು ಪರಿಗಣಿಸಿರಿ: “ಯೆಹೋವನು ಹೀಗೆ ನುಡಿಯುತ್ತಾನೆ—ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವವು, ಆ ಸನ್ಮಾರ್ಗವು ಎಲ್ಲಿ ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” (ಯೆರೆಮೀಯ 6:16) ಈ ಮಾತುಗಳು, ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ಕೇಳಲಿಕ್ಕಾಗಿ ದಾರಿಗಳು ಕೂಡುವ ಸ್ಥಳದಲ್ಲಿ ಸ್ವಲ್ಪ ನಿಂತುಕೊಳ್ಳುವ ಒಬ್ಬ ಪ್ರಯಾಣಿಕನನ್ನು ನಮ್ಮ ನೆನಪಿಗೆ ತರಬಹುದು. ಆಧ್ಯಾತ್ಮಿಕ ಅರ್ಥದಲ್ಲಿ, ಇಸ್ರಾಯೇಲ್ನಲ್ಲಿದ್ದ ಯೆಹೋವನ ದಂಗೆಕೋರ ಜನರು ಇದನ್ನೇ ಮಾಡಬೇಕಾಗಿತ್ತು. ಅವರು ‘ಪುರಾತನ ಮಾರ್ಗಗಳನ್ನು’ ಕಂಡುಕೊಂಡು ಅದರಲ್ಲೇ ಮುಂದೆಸಾಗುವ ಅಗತ್ಯವಿತ್ತು. ಆ “ಸನ್ಮಾರ್ಗವು,” ಇಸ್ರಾಯೇಲ್ ಜನಾಂಗದ ನಂಬಿಗಸ್ತ ಮೂಲಪಿತೃಗಳು ನಡೆದುಬಂದಿದ್ದ ಮಾರ್ಗವಾಗಿತ್ತು ಮತ್ತು ಈಗ ಈ ಜನಾಂಗವು ಮೂರ್ಖತನದಿಂದ ಯಾವುದರಿಂದ ಹಾದಿತಪ್ಪಿತ್ತೊ ಆ ಮಾರ್ಗವಾಗಿತ್ತು. ದುಃಖಕರವಾಗಿಯೇ ಇಸ್ರಾಯೇಲ್ಯರು ಯೆಹೋವನ ಈ ಪ್ರೀತಿಭರಿತ ಜ್ಞಾಪನಕ್ಕೆ ಮೊಂಡುತನದಿಂದ ಪ್ರತಿಕ್ರಿಯಿಸಿದರು. ಅದೇ ವಚನವು ಮುಂದುವರಿಸುತ್ತಾ ಹೇಳುವುದು: “[ಅವರು] ಅದರಲ್ಲಿ ನಾವು ನಡೆಯುವದೇ ಇಲ್ಲವೆಂದರು.” ಆದರೆ, ಆಧುನಿಕ ಸಮಯಗಳಲ್ಲಿ ಯೆಹೋವನ ಜನರು ಇಂಥ ಸಲಹೆಗೆ ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದ್ದಾರೆ.
12 ಹತ್ತೊಂಬತ್ತನೆಯ ಶತಮಾನದ ಕೊನೇ ಭಾಗದಂದಿನಿಂದ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ಯೆರೆಮೀಯ 6:16ರ ಸಲಹೆಯನ್ನು ಸ್ವತಃ ತಮಗೆ ಅನ್ವಯಿಸಿಕೊಂಡಿದ್ದಾರೆ. ಒಂದು ವರ್ಗವಾಗಿ ಅವರು ‘ಪುರಾತನ ಮಾರ್ಗಗಳಿಗೆ’ ಮನಃಪೂರ್ವಕವಾಗಿ ಹಿಂದಿರುಗುವುದರಲ್ಲಿ ನಾಯಕತ್ವವನ್ನು ವಹಿಸಿದ್ದಾರೆ. ಧರ್ಮಭ್ರಷ್ಟ ಕ್ರೈಸ್ತಪ್ರಪಂಚಕ್ಕೆ ವ್ಯತಿರಿಕ್ತವಾಗಿ, ಇವರು ಯೇಸು ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟಿದ್ದು ಸಾ.ಶ. ಪ್ರಥಮ ಶತಮಾನದಷ್ಟು ಹಿಂದೆ ಅವನ ನಂಬಿಗಸ್ತ ಹಿಂಬಾಲಕರಿಂದ ಎತ್ತಿಹಿಡಿಯಲ್ಪಟ್ಟ ‘ಸ್ವಸ್ಥಬೋಧನಾವಾಕ್ಯಗಳಿಗೆ’ ನಂಬಿಗಸ್ತಿಕೆಯಿಂದ ಬಲವಾಗಿ ಅಂಟಿಕೊಂಡಿದ್ದಾರೆ. (2 ತಿಮೊಥೆಯ 1:13) ಇಂದಿನ ವರೆಗೆ, ಕ್ರೈಸ್ತಪ್ರಪಂಚವು ತೊರೆದುಬಿಟ್ಟಿರುವಂಥ ಸ್ವಸ್ಥಕರವಾದ, ಸಂತೋಷಭರಿತ ಜೀವನಮಾರ್ಗವನ್ನು ಬೆನ್ನಟ್ಟುವಂತೆ ಅಭಿಷಿಕ್ತರು ಪರಸ್ಪರ ಸಹಾಯ ನೀಡುತ್ತಿದ್ದಾರೆ ಹಾಗೂ “ಬೇರೆ ಕುರಿಗಳು” ಆಗಿರುವ ಅವರ ಸಂಗಡಿಗರಿಗೆ ಸಹಾಯಮಾಡುತ್ತಿದ್ದಾರೆ.—ಯೋಹಾನ 10:16.
13 ನಂಬಿಗಸ್ತ ಆಳು ವರ್ಗವು ಹೊತ್ತು ಹೊತ್ತಿಗೆ ಆಧ್ಯಾತ್ಮಿಕ ‘ಆಹಾರವನ್ನು’ ಒದಗಿಸುವ ಮೂಲಕ, ‘ಪುರಾತನ ಮಾರ್ಗಗಳನ್ನು’ ಕಂಡುಕೊಳ್ಳುವಂತೆ ಮತ್ತು ದೇವರೊಂದಿಗೆ ನಡೆಯುವಂತೆ ಲಕ್ಷಾಂತರ ಮಂದಿಗೆ ಸಹಾಯಮಾಡಿದೆ. (ಮತ್ತಾಯ 24:45-47) ಆ ಲಕ್ಷಾಂತರ ಮಂದಿಯಲ್ಲಿ ನೀವು ಸಹ ಇದ್ದೀರೋ? ಹಾಗಿರುವಲ್ಲಿ, ಆ ಮಾರ್ಗದಿಂದ ದೂರಸರಿಯುವುದರಿಂದ ಅಂದರೆ ನಿಮ್ಮ ಸ್ವಂತ ಮಾರ್ಗಕ್ರಮವನ್ನು ಅನುಸರಿಸಲು ಹಿಂದಿರುಗುವುದರಿಂದ ದೂರವಿರಲು ನೀವೇನು ಮಾಡಸಾಧ್ಯವಿದೆ? ಆಗಿಂದಾಗ್ಗೆ ಸ್ವಲ್ಪ ಸಮಯವನ್ನು ತೆಗೆದುಕೊಂಡು, ಜೀವನದಲ್ಲಿ ನೀವು ನಡೆಯುತ್ತಿರುವ ಮಾರ್ಗವನ್ನು ಪರೀಕ್ಷಿಸುವುದು ವಿವೇಕಯುತವಾದದ್ದಾಗಿದೆ. ನೀವು ಕ್ರಮವಾಗಿ ಬೈಬಲನ್ನು ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನು ಓದುತ್ತಿರುವಲ್ಲಿ ಹಾಗೂ ಇಂದು ಅಭಿಷಿಕ್ತರಿಂದ ಪ್ರಾಯೋಜಿಸಲ್ಪಡುವ ಬೋಧನಾ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರುವಲ್ಲಿ, ನೀವು ದೇವರೊಂದಿಗೆ ನಡೆಯಲು ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೀರಿ. ಮತ್ತು ನಿಮಗೆ ಕೊಡಲ್ಪಡುವ ಸಲಹೆಯನ್ನು ದೀನಭಾವದಿಂದ ಅನ್ವಯಿಸಿಕೊಳ್ಳುವಾಗ, ಖಂಡಿತವಾಗಿಯೂ ನೀವು ‘ಪುರಾತನ ಮಾರ್ಗಗಳನ್ನು’ ಅನುಸರಿಸುತ್ತಾ ದೇವರೊಂದಿಗೆ ನಡೆಯುತ್ತಿದ್ದೀರಿ.
‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋ’ ಎಂಬಂತೆ ನಡೆಯಿರಿ
14 ನಾವು ಯೆಹೋವನೊಂದಿಗೆ ನಡೆಯಬೇಕಾದರೆ, ಆತನು ನಮಗೆ ನೈಜನಾಗಿರಬೇಕು. ಪುರಾತನ ಇಸ್ರಾಯೇಲ್ನಲ್ಲಿದ್ದ ನಂಬಿಗಸ್ತರಿಗೆ ಯೆಹೋವನು, ತಾನು ಅವರಿಗೆ ಮರೆಯಾಗಿರುವುದಿಲ್ಲ ಎಂಬ ಆಶ್ವಾಸನೆ ನೀಡಿದನು ಎಂಬುದನ್ನು ನೆನಪಿನಲ್ಲಿಡಿರಿ. ಇಂದು, ಅದೇ ರೀತಿಯಲ್ಲಿ ಆತನು ತನ್ನ ಜನರಿಗೆ ಮಹಾ ಶಿಕ್ಷಕನಾಗಿ ಪ್ರಕಟಪಡಿಸಿಕೊಳ್ಳುತ್ತಾನೆ. ನಿಮ್ಮ ಮುಂದೆ ನಿಂತುಕೊಂಡು ನಿಮಗೆ ಉಪದೇಶ ನೀಡುತ್ತಿದ್ದಾನೋ ಎಂಬಂತೆ ಯೆಹೋವನು ನಿಮಗೆ ನೈಜನಾಗಿದ್ದಾನೋ? ನಾವು ದೇವರೊಂದಿಗೆ ನಡೆಯಬೇಕಾದರೆ, ನಮಗೆ ಬೇಕಾಗಿರುವುದು ಇಂಥ ರೀತಿಯ ನಂಬಿಕೆಯೇ. ಮೋಶೆಗೆ ಇಂಥ ನಂಬಿಕೆಯಿತ್ತು, “ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಯೆಹೋವನು ನಮಗೆ ನೈಜನಾಗಿರುವುದಾದರೆ, ಆಗ ನಾವು ನಿರ್ಣಯಗಳನ್ನು ಮಾಡುವಾಗ ಆತನ ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಾವು ಕೆಟ್ಟದ್ದನ್ನು ಮಾಡುವುದರಲ್ಲಿ ಒಳಗೂಡುವುದರ ಕುರಿತು ಮತ್ತು ತದನಂತರ ಕ್ರೈಸ್ತ ಹಿರಿಯರಿಂದ ಅಥವಾ ಕುಟುಂಬದ ಸದಸ್ಯರಿಂದ ನಮ್ಮ ಪಾಪಗಳನ್ನು ಬಚ್ಚಿಡಲು ಪ್ರಯತ್ನಿಸುವುದರ ಕುರಿತು ಯೋಚಿಸುವುದೂ ಇಲ್ಲ. ಬದಲಾಗಿ, ಜೊತೆ ಮಾನವರು ನಮ್ಮನ್ನು ನೋಡಲು ಸಾಧ್ಯವಿಲ್ಲದಿರುವಾಗ ಸಹ ನಾವು ದೇವರೊಂದಿಗೆ ನಡೆಯಲು ಪ್ರಯತ್ನಿಸುವೆವು. ಪುರಾತನ ರಾಜ ದಾವೀದನಂತೆ ನಾವು ಈ ನಿರ್ಧಾರವನ್ನು ಮಾಡುವೆವು: “ಮನೆಯೊಳಗೂ ಯಥಾರ್ಥಹೃದಯದಿಂದಲೇ ಪ್ರವರ್ತಿಸುವೆನು.”—ಕೀರ್ತನೆ 101:2.
15 ನಾವು ಅಪರಿಪೂರ್ಣ ಮಾಂಸಿಕ ಜೀವಿಗಳಾಗಿದ್ದೇವೆ ಮತ್ತು ಕೆಲವೊಮ್ಮೆ ನಾವು ಏನನ್ನು ನೋಡಸಾಧ್ಯವಿಲ್ಲವೋ ಅದನ್ನು ನಂಬುವುದನ್ನು ಒಂದು ಪಂಥಾಹ್ವಾನವಾಗಿ ಕಂಡುಕೊಳ್ಳಬಹುದು ಎಂಬುದನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. (ಕೀರ್ತನೆ 103:14) ಅಂಥ ಬಲಹೀನತೆಗಳನ್ನು ಜಯಿಸುವಂತೆ ನಮಗೆ ಸಹಾಯಮಾಡಲು ಆತನು ಬಹಳಷ್ಟನ್ನು ಮಾಡುತ್ತಾನೆ. ಉದಾಹರಣೆಗೆ, ಭೂಮಿಯ ಸರ್ವ ಜನಾಂಗಗಳಿಂದ ಆತನು “ತನ್ನ ಹೆಸರಿಗಾಗಿ . . . ಒಂದು ಪ್ರಜೆಯನ್ನು” ಒಟ್ಟುಗೂಡಿಸಿದ್ದಾನೆ. (ಅ. ಕೃತ್ಯಗಳು 15:14) ನಾವು ಐಕ್ಯಭಾವದಿಂದ ಒಟ್ಟಿಗೆ ಸೇವೆಮಾಡುವಾಗ ಪರಸ್ಪರರಿಂದ ಬಲವನ್ನು ಪಡೆದುಕೊಳ್ಳುತ್ತೇವೆ. ಯಾವುದೋ ದೌರ್ಬಲ್ಯವನ್ನು ಜಯಿಸಲು ಅಥವಾ ಕಷ್ಟಕರವಾದ ಯಾವುದೋ ಪರೀಕ್ಷೆಯಿಂದ ಹೊರಬರಲು ಒಬ್ಬ ಆಧ್ಯಾತ್ಮಿಕ ಸಹೋದರನಿಗೆ ಅಥವಾ ಸಹೋದರಿಗೆ ಯೆಹೋವನು ಹೇಗೆ ಸಹಾಯಮಾಡಿದ್ದಾನೆ ಎಂಬುದರ ಕುರಿತು ಕೇಳಿಸಿಕೊಳ್ಳುವುದು, ನಮ್ಮ ದೇವರು ನಮಗೆ ಇನ್ನಷ್ಟು ನೈಜನಾಗಿ ಕಂಡುಬರುವಂತೆ ಮಾಡುತ್ತದೆ.—1 ಪೇತ್ರ 5:9.
16 ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನು ನಮಗೆ ತನ್ನ ಪುತ್ರನ ಮಾದರಿಯನ್ನು ಒದಗಿಸಿದ್ದಾನೆ. ಯೇಸು ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” (ಯೋಹಾನ 14:6) ಯೇಸುವಿನ ಭೂಜೀವಿತದ ಕುರಿತು ಅಧ್ಯಯನಮಾಡುವುದು, ಯೆಹೋವನನ್ನು ಹೆಚ್ಚು ನೈಜವಾಗಿ ಮಾಡಿಕೊಳ್ಳುವ ಅತ್ಯುತ್ತಮ ವಿಧಗಳಲ್ಲಿ ಒಂದಾಗಿದೆ. ಯೇಸು ಹೇಳಿದ ಮತ್ತು ಮಾಡಿದ ಪ್ರತಿಯೊಂದು ವಿಷಯವು ಅವನ ಸ್ವರ್ಗೀಯ ತಂದೆಯ ವ್ಯಕ್ತಿತ್ವ ಹಾಗೂ ಮಾರ್ಗಗಳ ಪರಿಪೂರ್ಣ ಪ್ರತಿಬಿಂಬವಾಗಿತ್ತು. (ಯೋಹಾನ 14:9) ನಾವು ನಿರ್ಣಯಗಳನ್ನು ಮಾಡುವಾಗ, ಯೇಸು ಹೇಗೆ ವಿಷಯಗಳನ್ನು ನಿರ್ವಹಿಸಿರುತ್ತಿದ್ದನು ಎಂಬುದರ ಕುರಿತು ಜಾಗರೂಕವಾಗಿ ಆಲೋಚಿಸುವ ಅಗತ್ಯವಿದೆ. ನಮ್ಮ ನಿರ್ಣಯಗಳು ಅಂಥ ಜಾಗರೂಕ ಹಾಗೂ ಪ್ರಾರ್ಥನಾಪೂರ್ವಕ ಆಲೋಚನೆಯನ್ನು ಪ್ರತಿಬಿಂಬಿಸುವಲ್ಲಿ, ಆಗ ನಾವು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸುವವರಾಗಿದ್ದೇವೆ. (1 ಪೇತ್ರ 2:21) ಇದರ ಫಲಿತಾಂಶವಾಗಿ ನಾವು ದೇವರೊಂದಿಗೆ ನಡೆಯುವವರಾಗಿರುತ್ತೇವೆ.
ಯಾವ ಆಶೀರ್ವಾದಗಳು ಸಿಗುತ್ತವೆ?
17 ಯೆಹೋವ ದೇವರೊಂದಿಗೆ ನಡೆಯುವುದೆಂದರೆ ಒಂದು ಆಶೀರ್ವದಿತ ಜೀವನವನ್ನು ನಡಿಸುವುದಾಗಿದೆ. “ಸನ್ಮಾರ್ಗ”ವನ್ನು ಹುಡುಕುವುದರ ವಿಷಯದಲ್ಲಿ ಯೆಹೋವನು ತನ್ನ ಜನರಿಗೆ ಏನನ್ನು ವಾಗ್ದಾನಿಸಿದನು ಎಂಬುದನ್ನು ನೆನಪಿಸಿಕೊಳ್ಳಿ. ಆತನಂದದ್ದು: “ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” (ಯೆರೆಮೀಯ 6:16) ಇದರ ಅರ್ಥವೇನು? ಸುಖಭೋಗಗಳು ಮತ್ತು ವೈಭವದಿಂದ ತುಂಬಿರುವ ಆರಾಮವಾದ ಜೀವನವೋ? ಇಲ್ಲ. ಯೆಹೋವನು ಇನ್ನೂ ಹೆಚ್ಚು ಉತ್ತಮವಾದುದನ್ನು, ಮಾನವಕುಲದಲ್ಲಿ ಅತ್ಯಂತ ಶ್ರೀಮಂತರಾಗಿರುವವರು ಅಪರೂಪವಾಗಿ ಕಂಡುಕೊಳ್ಳುವಂಥ ಏನನ್ನೋ ಒದಗಿಸುತ್ತಾನೆ. ನಿಮ್ಮ ಆತ್ಮಕ್ಕೆ ವಿಶ್ರಾಂತಿಯನ್ನು ಕಂಡುಕೊಳ್ಳುವುದರ ಅರ್ಥ, ಆಂತರಿಕ ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಆಧ್ಯಾತ್ಮಿಕ ಸಾಫಲ್ಯವನ್ನು ಪಡೆಯುವುದಾಗಿದೆ. ಅಂಥ ವಿಶ್ರಾಂತಿಯ ಅರ್ಥ, ಜೀವನದಲ್ಲಿ ನೀವು ಅತ್ಯುತ್ತಮ ಹಾದಿಯನ್ನು ಆಯ್ಕೆಮಾಡಿದ್ದೀರಿ ಎಂಬ ದೃಢವಿಶ್ವಾಸ ನಿಮಗಿರಸಾಧ್ಯವಿದೆ ಎಂದಾಗಿದೆ. ಈ ಸಮಸ್ಯಾತ್ಮಕ ಲೋಕದಲ್ಲಿ ಅಂಥ ಮನಶ್ಯಾಂತಿಯು ಅಪರೂಪದ ಆಶೀರ್ವಾದವಾಗಿದೆ!
18 ಎಲ್ಲಕ್ಕಿಂತಲೂ ಮಿಗಿಲಾಗಿ, ಜೀವವು ತಾನೇ ಅತ್ಯುತ್ತಮ ಆಶೀರ್ವಾದವಾಗಿದೆ. ಯಾವುದೇ ನಡೆಯುವಿಕೆ ಇಲ್ಲದಿರುವುದಕ್ಕಿಂತಲೂ ಅಲ್ಪಾವಧಿಯ ನಡೆಯುವಿಕೆಯು ಮೇಲಾಗಿದೆ. ಆದರೂ, ನಿಮ್ಮ ನಡೆಯುವಿಕೆಯು ಹರೆಯದ ಹುರುಪಿನಿಂದ ವೃದ್ಧಾಪ್ಯದ ವೇದನೆಯ ವರೆಗೆ ಅಲ್ಪಾವಧಿಯ ಒಂದು ಪ್ರಯಾಣವನ್ನು ಮಾತ್ರವೇ ಒಳಗೂಡಿರಬೇಕೆಂಬುದು ಯೆಹೋವನ ಚಿತ್ತವಾಗಿರುವುದಿಲ್ಲ. ಬದಲಾಗಿ, ಎಲ್ಲಕ್ಕಿಂತಲೂ ಅತ್ಯುತ್ತಮವಾದ ಆಶೀರ್ವಾದವನ್ನು ನೀವು ಪಡೆದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ನೀವು ಸದಾಕಾಲ ಆತನೊಂದಿಗೆ ನಡೆಯಬೇಕೆಂಬುದು ಆತನ ಬಯಕೆಯಾಗಿದೆ! ಇದು ಮೀಕ 4:5ರಲ್ಲಿ ಚೆನ್ನಾಗಿ ವ್ಯಕ್ತಪಡಿಸಲ್ಪಟ್ಟಿದೆ: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” ಈ ಆಶೀರ್ವಾದವನ್ನು ನೀವು ಅಮೂಲ್ಯವಾಗಿ ಕಾಪಾಡಿಕೊಳ್ಳಲು ಬಯಸುವಿರೋ? ಯೆಹೋವನು ಯಾವುದನ್ನು ಚಿತ್ತಾಕರ್ಷಕ ರೀತಿಯಲ್ಲಿ ‘ವಾಸ್ತವವಾದ ಜೀವನ’ ಎಂದು ಕರೆಯುತ್ತಾನೋ ಅಂಥ ಜೀವನವನ್ನು ನಡೆಸಲು ನೀವು ಬಯಸುತ್ತೀರೋ? (1 ತಿಮೊಥೆಯ 6:18) ಹಾಗಾದರೆ, ಇಂದು, ನಾಳೆ ಮತ್ತು ತದನಂತರದಿಂದ ನಿತ್ಯತೆಯ ವರೆಗೂ ಯೆಹೋವನೊಂದಿಗೆ ನಡೆಯುವುದನ್ನು ನಿಮ್ಮ ದೃಢನಿರ್ಧಾರವಾಗಿ ಮಾಡಿರಿ!
[ಪಾದಟಿಪ್ಪಣಿ]
a ಕೆಲವು ಬೈಬಲ್ ಭಾಷಾಂತರಗಳು ಈ ವಚನದಲ್ಲಿರುವ “ಮೊಳ” ಎಂಬ ಪದವನ್ನು ಕಾಲಮಾಪನವಾಗಿ—“ಒಂದು ಕ್ಷಣ” (ದಿ ಎಂಫ್ಯಾಟಿಕ್ ಡೈಗ್ಲಾಟ್) ಅಥವಾ “ಒಂದೇ ಒಂದು ನಿಮಿಷ” (ಎ ಟ್ರಾನ್ಸ್ಲೇಶನ್ ಇನ್ ದ ಲ್ಯಾಂಗ್ವೆಜ್ ಆಫ್ ದ ಪೀಪಲ್, ಚಾರ್ಲ್ಸ್ ಬಿ. ವಿಲ್ಯಮ್ಸ್ರಿಂದ)—ಬದಲಾಯಿಸುತ್ತವೆ. ಆದರೆ ಮೂಲ ಗ್ರಂಥಪಾಠದಲ್ಲಿ ಉಪಯೋಗಿಸಲ್ಪಟ್ಟಿರುವ ಪದವು ನಿಶ್ಚಿತವಾಗಿಯೂ ಒಂದು ಮೊಳ ಅಂದರೆ 45 ಸೆಂಟಿಮೀಟರುಗಳಷ್ಟು ಉದ್ದ ಎಂಬರ್ಥವನ್ನು ಕೊಡುತ್ತದೆ.
ನೀವು ಹೇಗೆ ಉತ್ತರಿಸುವಿರಿ?
• ದೇವರೊಂದಿಗೆ ನಡೆಯುವುದರ ಅರ್ಥವೇನು?
• ದೇವರೊಂದಿಗೆ ನಡೆಯುವುದು ಅಗತ್ಯವೆಂದು ನಿಮಗೇಕೆ ಅನಿಸುತ್ತದೆ?
• ದೇವರೊಂದಿಗೆ ನಡೆಯಲು ಯಾವುದು ನಿಮಗೆ ಸಹಾಯಮಾಡುವುದು?
• ದೇವರೊಂದಿಗೆ ನಡೆಯುವವರಿಗೆ ಯಾವ ಆಶೀರ್ವಾದಗಳು ಸಿಗುವವು?
[ಅಧ್ಯಯನ ಪ್ರಶ್ನೆಗಳು]
1, 2. ನಮ್ಮ ಕಡೆಗಿನ ಯೆಹೋವನ ಭಾವನೆಗಳನ್ನು, ಒಂದು ಮಗುವಿಗೆ ನಡೆಯಲು ಕಲಿಸುತ್ತಿರುವ ಒಬ್ಬ ಹೆತ್ತವರಿಗೆ ಹೇಗೆ ಹೋಲಿಸಬಹುದು?
3, 4. (ಎ) ದೇವರೊಂದಿಗೆ ನಡೆಯುವುದರ ಕುರಿತಾದ ವರ್ಣನೆಯ ವಿಶೇಷತೆ ಏನು? (ಬಿ) ದೇವರೊಂದಿಗೆ ನಡೆಯುವುದರ ಅರ್ಥವೇನು?
5. ಒಬ್ಬನ ಆಯುಷ್ಯವನ್ನು ಒಂದು ಮೊಳ ಹೆಚ್ಚಿಸುವುದರ ಕುರಿತು ಯೇಸು ಮಾತಾಡಿದ್ದೇಕೆ?
6, 7. ಅಪರಿಪೂರ್ಣ ಮಾನವರಿಗೆ ಯಾವುದು ತುಂಬ ಅಗತ್ಯವಾಗಿದೆ, ಮತ್ತು ಈ ಅಗತ್ಯವನ್ನು ಪೂರೈಸಲಿಕ್ಕಾಗಿ ನಾವು ಯೆಹೋವನ ಕಡೆಗೆ ತಿರುಗಬೇಕು ಏಕೆ?
8. ಪಾಪ ಮತ್ತು ಅಪರಿಪೂರ್ಣತೆಯು ಮಾನವರನ್ನು ಸಹಜವಾಗಿಯೇ ಯಾವ ಗಮ್ಯಸ್ಥಾನಕ್ಕೆ ನಡಿಸುತ್ತದೆ, ಆದರೆ ಯೆಹೋವನು ನಮಗೋಸ್ಕರ ಏನನ್ನು ಬಯಸುತ್ತಾನೆ?
9. ಕೆಲವೊಮ್ಮೆ ಯೆಹೋವನು ಏಕೆ ತನ್ನ ಜನರಿಂದ ಮರೆಯಾಗಿದ್ದನು, ಆದರೂ ಯೆಶಾಯ 30:20ಕ್ಕನುಸಾರ ಆತನು ಯಾವ ಆಶ್ವಾಸನೆಯನ್ನು ಒದಗಿಸಿದನು?
10. ಯಾವ ಅರ್ಥದಲ್ಲಿ ನಿಮ್ಮ ಬೋಧಕನು ನಿಮ್ಮ ‘ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳಬಹುದು?’
11. ಯೆರೆಮೀಯ 6:16ಕ್ಕನುಸಾರ, ತನ್ನ ಜನರಿಗೋಸ್ಕರ ಯೆಹೋವನು ಯಾವ ಆಕರ್ಷಕ ವರ್ಣನೆಯನ್ನು ಕೊಟ್ಟನು, ಆದರೆ ಅವರು ಹೇಗೆ ಪ್ರತಿಕ್ರಿಯಿಸಿದರು?
12, 13. (ಎ) ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ಯೆರೆಮೀಯ 6:16ರ ಸಲಹೆಗೆ ಹೇಗೆ ಪ್ರತಿಕ್ರಿಯೆ ತೋರಿಸಿದ್ದಾರೆ? (ಬಿ) ಇಂದು ನಾವು ನಡೆಯುತ್ತಿರುವ ಮಾರ್ಗದ ಕುರಿತು ಸ್ವತಃ ನಮ್ಮನ್ನು ಹೇಗೆ ಪರೀಕ್ಷಿಸಿಕೊಳ್ಳಬಹುದು?
14. ದೇವರು ನಮಗೆ ನೈಜನಾಗಿರುವುದಾದರೆ, ನಾವು ಮಾಡುವಂಥ ವೈಯಕ್ತಿಕ ನಿರ್ಣಯಗಳಲ್ಲಿ ಅದು ಹೇಗೆ ಪ್ರತಿಬಿಂಬಿಸಲ್ಪಡುವುದು?
15. ನಮ್ಮ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ಸಹವಾಸಮಾಡುವುದು, ಯೆಹೋವನು ನೈಜನಾಗಿದ್ದಾನೆ ಎಂಬುದನ್ನು ಮನಗಾಣಲು ನಮಗೆ ಹೇಗೆ ಸಹಾಯಮಾಡುತ್ತದೆ?
16. ಯೇಸುವಿನ ಕುರಿತು ಕಲಿಯುವುದು ದೇವರೊಂದಿಗೆ ನಡೆಯಲು ನಮಗೆ ಹೇಗೆ ಸಹಾಯಮಾಡುವುದು?
17. ನಾವು ಯೆಹೋವನ ಮಾರ್ಗದಲ್ಲಿ ನಡೆಯುವುದಾದರೆ, ನಮ್ಮ ಆತ್ಮಗಳಿಗೆ ಯಾವ ವಿಶ್ರಾಂತಿಯು ಸಿಕ್ಕುವದು?
18. ಯೆಹೋವನು ಯಾವ ಆಶೀರ್ವಾದವನ್ನು ನಮ್ಮ ಮೇಲೆ ಸುರಿಸಲು ಬಯಸುತ್ತಾನೆ, ಮತ್ತು ನಿಮ್ಮ ದೃಢನಿರ್ಧಾರವೇನು?
[ಪುಟ 23ರಲ್ಲಿರುವ ಚಿತ್ರಗಳು]
ಬೈಬಲಿನ ಪುಟಗಳ ಮೂಲಕ, ಯೆಹೋವನ ಸ್ವರವು ನಮ್ಮ ಹಿಂದಿನಿಂದ “ಇದೇ ಮಾರ್ಗ” ಎಂದು ಹೇಳುವುದು ನಮ್ಮ ಕಿವಿಗೆ ಬೀಳುತ್ತದೆ
[ಪುಟ 25ರಲ್ಲಿರುವ ಚಿತ್ರ]
ಕೂಟಗಳಲ್ಲಿ ನಾವು ಹೊತ್ತು ಹೊತ್ತಿಗೆ ಬೇಕಾದ ಆಧ್ಯಾತ್ಮಿಕ ಆಹಾರವನ್ನು ಪಡೆದುಕೊಳ್ಳುತ್ತೇವೆ