ಒಂದು ಸಮಯದಲ್ಲಿ, ಚಿನ್ನಕ್ಕಿಂತಲೂ ಅಧಿಕ ಮೌಲ್ಯತೆಯದ್ದು
ಒಂದು ಸುಗಂಧದೋಪಾದಿ ಅದನ್ನು ಗ್ರೀಸಿನ ನಾಟಕಮಂದಿರಗಳಲ್ಲಿ ಹರಡಿಸಲಾಗುತ್ತಿತ್ತು. ನೀರೋ ರೋಮಿನೊಳಗೆ ತನ್ನ ವಿಜಯೋತ್ಸಾಹದ ಪ್ರವೇಶ ಮಾಡಿದಾಗ, ಅದನ್ನು ರಸ್ತೆಗಳಲ್ಲೆಲ್ಲಾ ಸಿಂಪಡಿಸಲಾಗಿತ್ತು. ಸೊಲೊಮೋನನು ಅದನ್ನು ಪಾರಿತೋಷಕದೋಪಾದಿ ನೋಡಿದನು. (ಪರಮಗೀತ 4:14) ಒಂದು ಸಮಯದಲ್ಲಿ ಅದು ಚಿನ್ನಕ್ಕಿಂತಲೂ ಅಧಿಕ ಅಮೂಲ್ಯವಾಗಿತ್ತು. ಇಂದೂ, ಅದು ಲೋಕದಲ್ಲಿ ತುಂಬಾ ದುಬಾರಿಯಾಗಿರುವ ಸಂಬಾರಜಿನಸಿಯಾಗಿದೆ. ಕೇಸರಿ ಅಂಥದ್ದಾಗಿರುತ್ತದೆ.
ಈ ಅಸಾಧಾರಣ ಕೆಂಪು-ಚಿನ್ನ ಸಂಬಾರ ಜಿನಸಿಯನ್ನು ಕೇಸರಿ ಗಿಡದ ಕೆಂಗಲೆಯಿಂದ ತಯಾರಿಸಲಾಗುತ್ತಿದೆ, ಅದು ವಸಂತ ಕಾಲದಲ್ಲಿ ಹಲವಾರು ತೋಟಗಳನ್ನು ಅಲಂಕರಿಸುವ ಗಿಡಕ್ಕೆ ಸಂಬಂಧಿಸಿದೆ. ಅದು ಒಣ ಸುಣಕಲ್ಲು ನೆಲದಲ್ಲಿ ಹಸನಾಗಿ ಬೆಳೆಯುತ್ತದೆ, ಹೀಗೆ ಸ್ಪೆಯ್ನ್ನ ಲಾ ಮಾಂಚಾವು ಅದರ ಬೆಳೆಸುವಿಕೆಗೆ ಒಂದು ಆದರ್ಶಪ್ರಾಯ ಪ್ರದೇಶವನ್ನಾಗಿ ಮಾಡುತ್ತದೆ.
ಮೆಡಿಟರೇನಿಯನ್ ಪ್ರದೇಶದಲ್ಲಿ ಸಹಜವಾಗಿ ನೆಲಸಿದ್ದು, ಆದಿಕಾಲದಿಂದಲೂ ಕೇಸರಿಯು ಏಸ್ಯಾ ಮೈನರಿನಲ್ಲಿ ಬೆಳೆಸಲ್ಪಟ್ಟಿತ್ತು. ಶತಮಾನಗಳ ನಂತರ, ಮೂರ್ ಜಾತಿಯವರು ಅದನ್ನು ಸ್ಪೆಯ್ನ್ಗೆ ತಂದರು ಮತ್ತು ಸಾಗುವಳಿಯನ್ನು ಮುಂದುವರಿಸಲು ಸಹಾಯ ಮಾಡಿದರು. ಪದಾರ್ಥಗಳನ್ನು ರುಚಿಗೊಳಿಸಲು ಅವರು ಅದಕ್ಕೆ ಮೂಲ್ಯತೆಯನ್ನು ಕೊಡುತ್ತಿದ್ದರು ಮತ್ತು ಹಲ್ಲು ನೋವು, ಋತುವೇದನೆ ಮತ್ತು ಪೇಗ್ಲು ರೋಗದಷ್ಟು ವಿವಿಧ ವ್ಯಾಧಿಗಳಿಗೆ ಚಿಕಿತ್ಸೆ ಮಾಡಲೂ ಉಪಯೋಗಿಸುತ್ತಿದ್ದರು. ಇಂದು, ಅಡಿಗೆ ಮನೆಯಲ್ಲಿ ಕೇಸರಿ ಇನ್ನೂ ಗೌರವದಿಂದ ಪರಿಗಣಿಸಲ್ಪಡುತ್ತಿದೆ. ಸ್ಪಾನಿಷ್ ಪಾಇಲಾ ಮತ್ತು ಫ್ರೆಂಚ್ ಬೂಯಿಲಾಬೈಸ್ದಂತಹ ಪ್ರಖ್ಯಾತ ಪಾಕವಿಧಾನಗಳಿಗೆ ರುಚಿ ಮತ್ತು ಬಣ್ಣವನ್ನು ಕೂಡಿಸುತ್ತದೆ.
ತ್ವರಿತ ದುಡಿತ ಮತ್ತು ಕೊಯ್ಲು
ಲಾ ಮಾಂಚಾದ ಬೆಂಗಾಡು ಬಯಲುಗಳು, ಶತಮಾನಗಳಿಂದ ಸ್ವಲ್ಪವೇ ಬದಲಾಗಿವೆ, ಬೇಸಗೆಯ ಮೊದಲ ಭಾಗದಲ್ಲಿ ಲಾ ಮಾಂಚಾದ ಕೆಂಪು ಮಣ್ಣಿನಲ್ಲಿ ಗಿಡದ ಗೆಡ್ಡೆಗಳು ನೆಡಲ್ಪಟ್ಟಾಗ, ಕೇಸರಿ ಬೆಳೆಯಲು ಪ್ರಾರಂಭವಾಗುತ್ತದೆ. ಮೂರು ವಾರಗಳಿನ ಕೊಯ್ಲಿನ ಸಮಯ ಶರತ್ಕಾಲದಲ್ಲಿ ಬರುತ್ತದೆ. ಆಧುನಿಕ ಯಾಂತ್ರಿಕ ವಿಧಾನಗಳು ಇನ್ನೂ ಬಳಸಲ್ಪಡದೆ ಇದ್ದುದರಿಂದ, ಎಲ್ಲಾ ಕೆಲಸವನ್ನು ಕೈಯಿಂದ ಮಾಡಲಾಗುತ್ತದೆ.
ಸಾವಿರಾರು ಹೂವುಗಳನ್ನು ಒಂದೊಂದಾಗಿ ಹೆಕ್ಕುವ ಬೆನ್ನುಮುರಿಯುವ ಕೆಲಸ ಮೊದಲು ಬರುತ್ತದೆ. ಶರತ್ಕಾಲದ ಮೊದಲ ಚಳಿಯು ಆಗಮಿಸುವಾಗ, ಅಂದರೆ ಅಕ್ಟೋಬರ ತಿಂಗಳ ಅಂತ್ಯಕ್ಕೆ ಇದನ್ನು ಮಾಡಲಾಗುತ್ತದೆ. ಆಗ ನೂರಾರು ಹಳ್ಳಿಗರು, ಗಿಡಗಳಿಂದ ನೆಡಲ್ಪಟ್ಟ ತಮ್ಮ ತೋಟಗಳತ್ತ ಹೆಜ್ಜೆಗಳನ್ನಿಡುತ್ತಾರೆ. ಹೊಸತಾಗಿ ಅರಳುತ್ತಿರುವ ಹೂವುಗಳ ಮೇಲೆ ಅವರು ಬಗ್ಗುತ್ತಾರೆ ಮತ್ತು ಅಚ್ಚರಿಗೊಳಿಸುವ ವೇಗದಲ್ಲಿ ಅವರ ಕುಶಲ ಕೈಗಳು ಗಿಡದ ಕೋಮಲ ಹೂವನ್ನು ಹೆಕ್ಕುತ್ತವೆ.
ಮುಂಜಾನೆಯ ಕೊಯ್ಲಿನೊಂದಿಗೆ ಬಲುಬೇಗನೇ ಅವರ ಬುಟ್ಟಿಗಳು ತುಂಬಿತುಳುಕುತ್ತವೆ, ಮತ್ತು ಮನೆಗೆ ಕೊಂಡೊಯ್ಯಲು ತಯಾರಾಗಿರುತ್ತವೆ. ಅಲ್ಲಿ ಹೊಸತಾಗಿ ಹೆಕ್ಕಲ್ಪಟ್ಟ ಎಳೆಯ ಹೂವುಗಳು ತಟ್ಟೆಗಳ ಮೇಲೆ ಹರಡುವ ಮೂಲಕ ಅವುಗಳನ್ನು ಗಾಳಿಗೆ ಒಡ್ಡಲ್ಪಡುತ್ತವೆ. ಈಗ ಇನ್ನೂ ಹೆಚ್ಚು ಪ್ರಯಾಸದ ಕೆಲಸವು ಆರಂಭಿಸುತ್ತದೆ, ಕೇಸರಿ ಕೆಂಗೆಲೆಗಳ ಶಲಾಕಾಗ್ರವಾಗಿರುವ—ಎಳೆಯ ಹೂವುಗಳ ಹೆಣ್ಣು ಭಾಗವನ್ನು—ಹೂವಿನ ಉಳಿದ ಭಾಗದಿಂದ ಪ್ರತ್ಯೇಕಿಸುವದು ಆಗಿದೆ.
ಶಲಾಕಾಗ್ರವನ್ನು ಪ್ರತ್ಯೇಕಿಸುವದು
ಲಾ ಮಾಂಚಾದ ಸಂಪ್ರದಾಯವನ್ನು ಅನುಸರಿಸುತ್ತಾ, ಇಡೀ ಕುಟುಂಬಗಳು ಒಟ್ಟಿಗೆ ಕೊಯ್ಲಿನ ಕಾರ್ಯದಲ್ಲಿ ಕೆಲಸಮಾಡುತ್ತವೆ. ಮೂರು ವಾರಗಳಿಗೆ ಅವರು ಆಗಾಗ್ಯೆ ದಿನವೊಂದಕ್ಕೆ 19 ತಾಸುಗಳಿಗಿಂತಲೂ ಹೆಚ್ಚು ಕಾಲ ದುಡಿಯುತ್ತವೆ.
ಹೂವುಗಳನ್ನು ಸೀಳಿ ತೆರೆಯಲಾಗುತ್ತವೆ ಮತ್ತು ಶಲಾಕಾಗ್ರವನ್ನು ಜಾಗ್ರತೆಯಿಂದ ಕೀಳಲಾಗುತ್ತದೆ. ಒದ್ದೆ, ಕಡು ಕೆಂಪು ಶಲಾಕಾಗ್ರವನ್ನು—ಪ್ರತಿ ಹೂವಿನಲ್ಲಿ ಮೂರು ಶಲಾಕಾಗ್ರಗಳಿರುತ್ತವೆ—ತಟ್ಟೆಗಳಲ್ಲಿ ಶೇಖರಿಸಲಾಗುತ್ತದೆ. ಮತ್ತು ಇಲ್ಲಿ ಕೇಸರಿಯ ಮೌಲ್ಯದ ರಹಸ್ಯ ಕೂಡ ನಮಗೆ ಸಿಗುತ್ತದೆ. ದಿ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕದ ಪ್ರಕಾರ ಕೇವಲ ಒಂದು ಪೌಂಡು ಕೇಸರಿಯನ್ನು (ಸುಮಾರು ಅರ್ಧ ಕಿಲೊಗ್ರಾಮ್) ಪಡೆಯಲು 75,000 ಎಳೆಯ ಹೂವುಗಳು ಬೇಕಾಗಬಹುದು.
ಈ ಹಂತದಲ್ಲಿ ವೇಗ ಮತ್ತು ಪ್ರವೀಣತೆಯು ಅತ್ಯಗತ್ಯವಾಗಿದೆ, ಏಕಂದರೆ ಕೇಸರಿಯನ್ನು ಕೊಯ್ದು, ಅದೇ ದಿನದಲ್ಲಿ ಅದರ ಶಲಾಕಾಗ್ರವನ್ನು ಕೀಳಬೇಕಾಗಿದೆ. ಎಳೆಯ ಹೂವುಗಳು ಬಲು ಬೇಗನೆ ಕಳೆಗುಂದುತ್ತವೆ ಮತ್ತು ಕೂಡಲೇ ಅಂಟಂಟಾಗುತ್ತವೆ, ಇದರಿಂದ ಶಲಾಕಾಗ್ರವನ್ನು ತೆಗೆಯುವದು ಅಸಾಧ್ಯವಾಗುತ್ತದೆ. ಮತ್ತು ಶಲಾಕಾಗ್ರವನ್ನು ನಿಖರವಾಗಿ ಸರಿಯಾದ ಮಟ್ಟದಿಂದ ಕೀಳಲ್ಪಡಬೇಕು. ಇಲ್ಲದಿದ್ದರೆ, ಕೇಸರಿಯಲ್ಲಿ ಉತ್ಕೃಷ್ಟವಾದ, ಮಾಂಚಾ ಸೆಲೆಕ್ಟಾವಾಗಿ ಯೋಗ್ಯತೆ ಪಡೆಯುವದಿಲ್ಲ.
ಶಲಾಕಾಗ್ರವನ್ನು ಕಂದಿಸುವದು
ಈ ಪ್ರಯಾಸಕರ ಕೆಲಸವನ್ನು ಕೊನೆಯಲ್ಲಿ ಮುಗಿಸಿದ ನಂತರ, ಒಣಗಲಿಕ್ಕಾಗಿ ಶಲಾಕಾಗ್ರವನ್ನು ಮಸ್ಲಿನ್ ಜಾಲರಿಯ ತಟ್ಟೆಗಳ ಅಥವಾ ಸಾರಣಿಗೆಗಳ ಮೇಲೆ ಜಾಗ್ರತೆಯಿಂದ ಹರಡಿಸಲಾಗುತ್ತದೆ. ಈ ಹಂತದಲ್ಲಿ ಇದ್ದಲಿನ ಬೆಂಕಿಯನ್ನು ತಯಾರಿಸುತ್ತಾರೆ ಮತ್ತು ಅಮೂಲ್ಯವಾದ ವಸ್ತುಗಳನ್ನು ಹೊಂದಿರುವ ತಟ್ಟೆಗಳು ಅಥವಾ ಸಾರಣಿಗೆಗಳನ್ನು ಬೆಂಕಿಯ ಮೇಲೆ ಇಡಲಾಗುತ್ತದೆ ಕೋಮಲವಾದ ಶಲಾಕಾಗ್ರವು ಹೊಗೆ ಆಡದಂತೆ ದೂರವಿರಿಸಲು ಸಾಧ್ಯವಾದ ಎಲ್ಲಾ ಮುನ್-ಜಾಗ್ರತೆಯನ್ನು ತಕ್ಕೊಳ್ಳಲಾಗುತ್ತದೆ. ಅವುಗಳನ್ನು ಕಂದಿಸಬೇಕು, ಆದರೆ ಹೊಗೆಯಾಡಿಸಬಾರದು.
ಸಣ್ಣ ಬೆಂಕಿಯ ಮೇಲೆ ಕೇವಲ 15 ನಿಮಿಷಗಳ ನಂತರ, ಕೇಸರಿ 80 ಶೇಕಡಾದಷ್ಟು ತೂಕವನ್ನು ಕಳಕೊಳ್ಳುತ್ತದೆ. ಕೆಲವು ಎರಡೂವರೆ ಎಕ್ರೆಯಷ್ಟು ಕೊಯ್ಲು—ನೂರು ಪೌಂಡುಗಳಷ್ಟು (ಸುಮಾರು 46 ಕಿಲೊಗ್ರಾಮ್) ತೂಕವಿರುವ ಶಲಾಕಾಗ್ರವನ್ನು—ಒಂದು ಅತ್ಯಲ್ಪವಾದ 20 ಪೌಂಡುಗಳಷ್ಟು (ಸುಮಾರು 9 ಕಿಲೊಗ್ರಾಮಗಳು) ಒಣಗಿದ ಕೇಸರಿಯಾಗುತ್ತದೆ.
ಒಣಗುವ ಕಾರ್ಯವಿಧಾನವು ಮುಗಿದಾಕ್ಷಣವೇ, ಈಗ ಒಂದು ಕಡು-ಕೆಂಪು ನಾರುಗಳ ಎಳೆಗಳಾಗಿರುವ ಕೇಸರಿಯು, ಸಂಗ್ರಹಿಸಿ ಇಡಲು ತಯಾರಾಗಿದೆ. ಕರಿಯ ಪ್ಲಾಸ್ಟಿಕ್ ಚೀಲಗಳಲ್ಲಿ ಬಿಗಿಯಾಗಿ ಮುದ್ರೆ ಒತ್ತಿ ಮತ್ತು ಬೆಳಕಿನಿಂದ ಸಂರಕ್ಷಿಸಲ್ಪಟ್ಟು, ಲಾ ಮಾಂಚಾದ “ಕೆಂಪು ಚಿನ್ನ” ಒಬ್ಬ ಕೇಸರಿ ವ್ಯಾಪಾರಿಗೆ ಮಾರಲ್ಪಡಲು ಕಾದಿರುತ್ತದೆ.
ಸುಂದರ ಹೂವು ಒಂದರಿಂದ ಆಹ್ಲಾದಕರ ಸಂಬಾರ ಜಿನಸಿ
ಫ್ರಾನ್ಸ್, ಇಟೆಲಿ, ಗ್ರೀಸ್, ಇರಾನ್ ಮತ್ತು ಭಾರತದಲ್ಲಿ ಕೇಸರಿಯು ಬೆಳೆಸಲ್ಪಡುವದಾದರೂ, ಲೋಕದಲ್ಲಿನ ಕೇಸರಿ ವ್ಯಾಪಾರಕ್ಕೆ ಶೇಕಡಾ 70 ಸ್ಪೆಯ್ನ್ನಿಂದ ಒದಗಿಸಲ್ಪಡುತ್ತದೆ. ಅದರ ಸಾಧಾರಣ ಕಹಿ ರುಚಿಯು ಲೋಕದಲ್ಲೆಲ್ಲಾ ಪಕ್ಷಿ ಮಾಂಸ, ಅನ್ನ ಮತ್ತು ಮತ್ಸ್ಯಾಹಾರದ ರುಚಿಯನ್ನು ಉತ್ತಮಗೊಳಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ, ಮತ್ತು ಸ್ಕಾಂಡಿನೆವಿಯದವರು ಕೇಸರಿ-ಸುವಾಸನೆಯ ರೊಟ್ಟಿಯ ರುಚಿಯಲ್ಲಿ ಆನಂದಿಸುತ್ತಾರೆ. ಮತ್ತು ಜಪಾನಿನಲ್ಲಿ ಇಂದು ಅದನ್ನು ದುಬಾರಿ ವಸ್ತುಗಳಿಗೆ ಬಣ್ಣ ಕೊಡಲು ಒಂದು ರಂಗಾಗಿ ಬಳಸಲಾಗುತ್ತದೆ.
ಕೇಸರಿಯನ್ನು ಬೆಳಸುವದರಿಂದ ಬರುವ ಬಹುಮಾನ ಆರ್ಥಿಕತೆಯ ದೃಷ್ಠಿಯಲ್ಲಿ ಏನೊಂದು ಆಗಿರುವದಿಲ್ಲ. ಎಲ್ಲಾ ಕೇಸರಿ ಗಿಡಗಳು ಏಕಪ್ರಕಾರವಾಗಿ ಒಮ್ಮೆಯೇ 5,000 ಚದರ ಅಡಿಗಳ ಕ್ಷೇತ್ರದಲ್ಲಿ ಹೂವುಗಳನ್ನು ಬಿಡುವ ದಿನಗಳೂ ಅಲ್ಲಿರುತ್ತವೆ. ಅಂತಹ ದಿನವು ಡಿಯಾ ಡೆಲ್ ಮಾಂಟೊ—ಮೇಲಂಗಿ ಹೊದಿಕೆಯ ದಿನ ಎಂದು ಕರೆಯಲ್ಪಡುತ್ತದೆ. ಇಡೀ ಕ್ಷೇತ್ರವು ಕಡು-ಕೆಂಪು ಬಣ್ಣದ ಮೇಲಂಗಿ ಹೊದಿಕೆ ಹಾಕಿದೆಯೋ ತೋರುತ್ತದೆ. ಅಂತಹ ಒಂದು ದಿನ, ಲಾ ಮಾಂಚಾದ ಧೂಳಿನ ಗದ್ದೆಗಳ ಸೌಂದರ್ಯವು ಪ್ರವಾದಿಯ ಮಾತುಗಳನ್ನು ನೆನಪಿಗೆ ತರುತ್ತವೆ: “ಒಣನೆಲವು ಹರ್ಷಿಸಿ ತಾವರೆಯಂತೆ [ಕೇಸರಿಯಂತೆ, NW] ಕಳಕಳಿಸುವದು.”—ಯೆಶಾಯ 35:1. (g89 10/8)