ಈಗ ಮತ್ತು ಎಂದೆಂದಿಗೂ ಹರ್ಷಭರಿತರು
“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು.”—ಯೆಶಾಯ 65:18.
1. ಶತಮಾನಗಳ ಉದ್ದಕ್ಕೂ ಸತ್ಯಾರಾಧನೆಯು ವ್ಯಕ್ತಿಗಳನ್ನು ಹೇಗೆ ಪ್ರಭಾವಿಸಿದೆ?
ಶತಮಾನಗಳ ಉದ್ದಕ್ಕೂ, ಅಗಣಿತ ಸಂಖ್ಯೆಯ ಜನರು ಸತ್ಯ ದೇವರಾದ ಯೆಹೋವನನ್ನು ಸೇವಿಸುವುದರಲ್ಲಿ ಮಹತ್ತರವಾದ ಹರ್ಷವನ್ನು ಕಂಡುಕೊಂಡಿದ್ದಾರೆ. ಸತ್ಯಾರಾಧನೆಯಲ್ಲಿ ಹರ್ಷಭರಿತರಾಗಿದ್ದ ಅನೇಕರಲ್ಲಿ ದಾವೀದನು ಒಬ್ಬನಾಗಿದ್ದನು. ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತಂದಾಗ, ಬೈಬಲು ವರದಿಸುವುದು, “ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಆರ್ಬಟಿಸುತ್ತಾ [“ಹರ್ಷಭರಿತ ಆರ್ಭಟದೊಂದಿಗೆ,” NW] . . . ಯೆಹೋವನ ಮಂಜೂಷವನ್ನು ತಂದರು.” (2 ಸಮುವೇಲ 6:15) ಯೆಹೋವನನ್ನು ಸೇವಿಸುವುದರಲ್ಲಿನ ಇಂತಹ ಹರ್ಷವು ಕೇವಲ ಗತಕಾಲದ ವಿಷಯವಾಗಿರುವುದಿಲ್ಲ. ನೀವು ಅದರಲ್ಲಿ ಪಾಲಿಗರಾಗಸಾಧ್ಯವಿದೆ. ಮತ್ತು ಹರ್ಷದ ಹೊಸ ಭಾಗಗಳೂ ನಿಮ್ಮದಾಗಿರಬಲ್ಲವು!
2. ಹಿಂದಿರುಗಿದ ಯೆಹೂದ್ಯರ ಮೇಲೆ ಯೆಶಾಯ 35ನೆಯ ಅಧ್ಯಾಯದ ಮೂಲಭೂತ ನೆರವೇರಿಕೆಯ ಆಚೆ, ಇಂದು ಮತ್ತೊಂದು ನೆರವೇರಿಕೆಯಲ್ಲಿ ಯಾರು ಒಳಗೊಂಡಿದ್ದಾರೆ?
2 ಹಿಂದಿನ ಲೇಖನದಲ್ಲಿ, ಯೆಶಾಯ 35ನೆಯ ಅಧ್ಯಾಯದಲ್ಲಿ ದಾಖಲಿಸಲಾದ ಉತ್ತೇಜನಕರ ಪ್ರವಾದನೆಯ ಆರಂಭಿಕ ನೆರವೇರಿಕೆಯನ್ನು ನಾವು ಪರೀಕ್ಷಿಸಿದೆವು. ನಾವು ಅದನ್ನು ಸರಿಯಾಗಿಯೇ ಒಂದು ಪುನಸ್ಸ್ಥಾಪನಾ ಪ್ರವಾದನೆಯೆಂದು ಕರೆಯಸಾಧ್ಯವಿದೆ ಏಕೆಂದರೆ ಹಳೆಯ ಕಾಲದ ಯೆಹೂದ್ಯರಿಗೆ ಅದು ಹಾಗೆಯೇ ಆಗಿ ಪರಿಣಮಿಸಿತು. ನಮ್ಮ ಸಮಯದಲ್ಲಿ ಅದಕ್ಕೆ ತದ್ರೀತಿಯ ನೆರವೇರಿಕೆಯಿದೆ. ಅದು ಹೇಗೆ? ಒಳ್ಳೆಯದು, ಸಾ.ಶ. 33ರ ಪಂಚಾಶತ್ತಮದಲ್ಲಿ ಯೇಸುವಿನ ಅಪೊಸ್ತಲರು ಮತ್ತು ಇತರರೊಂದಿಗೆ ಆರಂಭಿಸುತ್ತಾ, ಯೆಹೋವನು ಆತ್ಮಿಕ ಇಸ್ರಾಯೇಲ್ಯರೊಂದಿಗೆ ವ್ಯವಹರಿಸುತ್ತಿದ್ದಾನೆ. ಇವರು ದೇವರ ಪವಿತ್ರಾತ್ಮದಿಂದ ಅಭಿಷಿಕ್ತರಾದ ಮಾನವರಾಗಿದ್ದು, ‘ದೇವರ ಇಸ್ರಾಯೇಲ್’ ಎಂದು ಯಾವುದನ್ನು ಅಪೊಸ್ತಲ ಪೌಲನು ಕರೆಯುತ್ತಾನೊ, ಅದರ ಭಾಗವಾಗುತ್ತಾರೆ. (ಗಲಾತ್ಯ 6:16; ರೋಮಾಪುರ 8:15-17) 1 ಪೇತ್ರ 2:9ರಲ್ಲಿ ಈ ಕ್ರೈಸ್ತರು, “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ” ಎಂಬುದಾಗಿ ಕರೆಯಲ್ಪಟ್ಟಿದ್ದಾರೆಂದು ಸಹ ಜ್ಞಾಪಿಸಿಕೊಳ್ಳಿರಿ. ಆತ್ಮಿಕ ಇಸ್ರಾಯೇಲಿಗೆ ಕೊಡಲ್ಪಟ್ಟಿರುವ ನೇಮಕವನ್ನು ಪೇತ್ರನು ಗುರುತಿಸುತ್ತಾನೆ: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗ”ಬೇಕು.
ನಮ್ಮ ಸಮಯದಲ್ಲಿ ಒಂದು ನೆರವೇರಿಕೆ
3, 4. ಯೆಶಾಯ 34ನೆಯ ಅಧ್ಯಾಯವು ಆಧುನಿಕ ಸಮಯಗಳಲ್ಲಿ ನೆರವೇರಿಕೆಯನ್ನು ಕಂಡುಕೊಂಡಾಗ, ಸನ್ನಿವೇಶವು ಏನಾಗಿತ್ತು?
3 ಭೂಮಿಯ ಮೇಲಿನ ಆತ್ಮಿಕ ಇಸ್ರಾಯೇಲಿನ ಉಳಿಕೆಯವರು, ಇಂತಹ ಒಂದು ಸಂದೇಶವನ್ನು ಘೋಷಿಸುವುದರಲ್ಲಿ ಸಮಂಜಸವಾಗಿ ಸಕ್ರಿಯವಾಗಿರದಿದ್ದ ಒಂದು ಸಮಯವು ಈ ಶತಮಾನದ ಆದಿ ಭಾಗದಲ್ಲಿತ್ತು. ಅವರು ದೇವರ ಅದ್ಭುತಕರವಾದ ಬೆಳಕಿನಲ್ಲಿ ಸಂಪೂರ್ಣವಾಗಿ ಹರ್ಷಿಸುತ್ತಿರಲಿಲ್ಲ. ವಾಸ್ತವದಲ್ಲಿ, ಅವರು ಗಣನೀಯವಾದ ಅಂಧಕಾರದಲ್ಲಿದ್ದರು. ಅದು ನಡೆದದ್ದು ಯಾವಾಗ? ಮತ್ತು ಅದರ ಕುರಿತು ಯೆಹೋವ ದೇವರು ಏನು ಮಾಡಿದನು?
4 ಅದು 1914ರಲ್ಲಿ, ದೇವರ ಮೆಸ್ಸೀಯ ಸಂಬಂಧಿತ ರಾಜ್ಯವು ಸ್ವರ್ಗದಲ್ಲಿ ಸ್ಥಾಪನೆಗೊಂಡ ನಂತರವೇ, Iನೆಯ ಜಾಗತಿಕ ಯುದ್ಧದ ಅವಧಿಯಲ್ಲಾಗಿತ್ತು. ಹಲವಾರು ದೇಶಗಳಲ್ಲಿನ ಚರ್ಚುಗಳ ಪಾದ್ರಿಗಳ ಬೆಂಬಲದಿಂದ, ರಾಷ್ಟ್ರಗಳು ಒಬ್ಬರ ವಿರುದ್ಧವಾಗಿ ಮತ್ತೊಬ್ಬರು ಕ್ರೋಧಿತರಾಗಿದ್ದರು. (ಪ್ರಕಟನೆ 11:17, 18) ನಿಶ್ಚಯವಾಗಿ ದೇವರು, ಎದೋಮ್ನ ಗರ್ವಿಷ್ಟ ರಾಷ್ಟ್ರವನ್ನು ಯಾವ ರೀತಿಯಾಗಿ ವಿರೋಧಿಸಿದನೊ ಹಾಗೆಯೇ ಉನ್ನತಗೊಳಿಸಲ್ಪಟ್ಟ ಅದರ ಪಾದ್ರಿವರ್ಗದೊಂದಿಗೆ ಧರ್ಮಭ್ರಷ್ಟ ಕ್ರೈಸ್ತಪ್ರಪಂಚವನ್ನು ವಿರೋಧಿಸುವವನಾಗಿದ್ದನು. ಆದಕಾರಣ, ಪ್ರತಿನಿಧಿರೂಪದ ಎದೋಮ್ ಆಗಿರುವ ಕ್ರೈಸ್ತಪ್ರಪಂಚವು, ಯೆಶಾಯ 34ನೆಯ ಅಧ್ಯಾಯದ ಆಧುನಿಕ ದಿನದ ನೆರವೇರಿಕೆಯನ್ನು ಅನುಭವಿಸುವ ಮಾರ್ಗದಲ್ಲಿದೆ. ಶಾಶ್ವತವಾದ ನಿರ್ಮೂಲನದ ಮೂಲಕ ಆಗುವ ಈ ನೆರವೇರಿಕೆಯು ಪ್ರಾಚೀನ ಎದೋಮಿನ ವಿರುದ್ಧ ಸಂಭವಿಸಿದ ಆ ಪ್ರಥಮ ನೆರವೇರಿಕೆಯಂತೆಯೇ ಖಂಡಿತವಾಗಿದೆ.—ಪ್ರಕಟನೆ 18:4-8, 19-21.
5. ನಮ್ಮ ಸಮಯದಲ್ಲಿ ಯೆಶಾಯ 35ನೆಯ ಅಧ್ಯಾಯವು ಯಾವ ಬಗೆಯ ನೆರವೇರಿಕೆಯನ್ನು ಕಂಡಿದೆ?
5 ಹರ್ಷದ ಕುರಿತಾಗಿ ಅದರ ಒತ್ತಿಹೇಳುವಿಕೆಯೊಂದಿಗೆ ಯೆಶಾಯ 35ನೆಯ ಅಧ್ಯಾಯದ ಪ್ರವಾದನೆಯ ಕುರಿತೇನು? ಅದು ಕೂಡ ನಮ್ಮ ಸಮಯದಲ್ಲಿ ನೆರವೇರಿಕೆಯನ್ನು ಅನುಭವಿಸಿದೆ. ಅದು ಹೇಗೆ? ಒಂದು ಬಗೆಯ ಬಂದಿವಾಸದಿಂದ ಆತ್ಮಿಕ ಇಸ್ರಾಯೇಲಿನ ಒಂದು ಪುನಸ್ಸ್ಥಾಪನೆಯಲ್ಲಿ ಅದು ನೆರವೇರಿದೆ. ಇನ್ನೂ ಜೀವಂತರಾಗಿರುವ ಅನೇಕರ ಜೀವಮಾನದೊಳಗೆ ಸಂಭವಿಸುತ್ತಾ, ಯಾವುದು ನಿಜವಾಗಿಯೂ ಇತ್ತೀಚಿನ ದೇವಪ್ರಭುತ್ವ ಇತಿಹಾಸವಾಗಿದೆಯೊ, ಅದರಲ್ಲಿನ ನಿಜ ಸಂಗತಿಗಳನ್ನು ನಾವು ಪರೀಕ್ಷಿಸೋಣ.
6. ಆತ್ಮಿಕ ಇಸ್ರಾಯೇಲ್ನ ಉಳಿಕೆಯವರು ಬಂದಿವಾಸದ ಪರಿಸ್ಥಿತಿಯೊಳಗೆ ಬಂದರೆಂದು ಏಕೆ ಹೇಳಸಾಧ್ಯವಿದೆ?
6 Iನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಸಂಬಂಧಸೂಚಕವಾಗಿ ಒಂದು ಸಂಕ್ಷಿಪ್ತ ಸಮಯಾವಧಿಗಾಗಿ, ಆತ್ಮಿಕ ಇಸ್ರಾಯೇಲ್ನ ಉಳಿಕೆಯವರು ಸಂಪೂರ್ಣವಾಗಿ ಶುದ್ಧರೂ ದೇವರ ಚಿತ್ತದೊಂದಿಗೆ ಸರಿಹೊಂದಿಸುವವರೂ ಆಗಿರಲಿಲ್ಲ. ಅವರಲ್ಲಿ ಕೆಲವರು ಸೈದ್ಧಾಂತಿಕ ತಪ್ಪುಗಳಿಂದ ಕಳಂಕಿತರಾಗಿದ್ದರು ಮತ್ತು ಯುದ್ಧ ಮಾಡುತ್ತಿದ್ದ ರಾಷ್ಟ್ರಗಳನ್ನು ಬೆಂಬಲಿಸುವ ಒತ್ತಡದ ಕೆಳಗೆ ಹಾಕಲ್ಪಟ್ಟಾಗ, ಯೆಹೋವನಿಗಾಗಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳದೆ ಇರುವ ಮೂಲಕ ಒಪ್ಪಂದ ಮಾಡಿಕೊಂಡರು. ಯುದ್ಧದ ಆ ವರ್ಷಗಳಲ್ಲಿ,—ಅನೇಕ ಸ್ಥಳಗಳಲ್ಲಿ ಅವರ ಬೈಬಲ್ ಸಾಹಿತ್ಯವು ನಿಷೇಧಿಸಲ್ಪಟ್ಟಿತ್ತು ಸಹ—ಅವರು ಎಲ್ಲ ರೀತಿಯ ಹಿಂಸೆಯನ್ನು ಅನುಭವಿಸಿದರು. ಕೊನೆಯದಾಗಿ, ಹೆಚ್ಚು ಪ್ರಖ್ಯಾತ ಸಹೋದರರಲ್ಲಿ ಕೆಲವರು ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟರು ಮತ್ತು ಸುಳ್ಳು ಆರೋಪಗಳ ಕಾರಣ ಸೆರೆಯಲ್ಲಿಡಲ್ಪಟ್ಟರು. ಹಿನ್ನೋಟ ಬೀರುವಾಗ, ಒಂದು ಅರ್ಥದಲ್ಲಿ, ದೇವರ ಜನರು ಮುಕ್ತರಾಗಿರುವ ಬದಲು ಬಂದಿವಾಸದ ಸ್ಥಿತಿಯಲ್ಲಿದ್ದರೆಂಬುದನ್ನು ಮನಗಾಣುವುದು ಕಷ್ಟಕರವಲ್ಲ. (ಹೋಲಿಸಿ ಯೋಹಾನ 8:31, 32.) ಆತ್ಮಿಕ ದೃಷ್ಟಿಯಲ್ಲಿ ಅವರು ಗಂಭೀರವಾಗಿ ಕೊರತೆಯುಳ್ಳವರಾಗಿದ್ದರು. (ಎಫೆಸ 1:16-18) ದೇವರನ್ನು ಸ್ತುತಿಸುವ ವಿಷಯದಲ್ಲಿ ಅವರು ಸಂಬಂಧಸೂಚಕ ಮೌನವನ್ನು ತೋರಿಸಿದರು, ಇದರ ಫಲಿತಾಂಶವಾಗಿ ಅವರು ಆತ್ಮಿಕವಾಗಿ ನಿಷ್ಫಲರಾಗಿದ್ದರು. (ಯೆಶಾಯ 32:3, 4; ರೋಮಾಪುರ 14:11; ಫಿಲಿಪ್ಪಿ 2:11) ಇದು ಬಾಬೆಲಿನಲ್ಲಿ ಸೆರೆಯಲ್ಲಿದ್ದ ಪ್ರಾಚೀನ ಯೆಹೂದ್ಯರ ಸನ್ನಿವೇಶದೊಂದಿಗೆ ಹೇಗೆ ಸಮಾಂತರದಲ್ಲಿದೆ ಎಂಬುದನ್ನು ನೀವು ನೋಡುತ್ತೀರೊ?
7, 8. ಯಾವ ರೀತಿಯ ಪುನಸ್ಸ್ಥಾಪನೆಯನ್ನು ಆಧುನಿಕ ದಿನದ ಉಳಿಕೆಯವರು ಅನುಭವಿಸಿದ್ದಾರೆ?
7 ಆದರೆ ದೇವರು ತನ್ನ ಆಧುನಿಕ ದಿನದ ಸೇವಕರನ್ನು ಆ ಸ್ಥಿತಿಯಲ್ಲಿ ಬಿಡಲಿದ್ದನೊ? ಇಲ್ಲ, ಯೆಶಾಯನ ಮುಖಾಂತರ ಮುಂತಿಳಿಸಲಾದ ವಿಷಯದೊಂದಿಗೆ ಹೊಂದಿಕೆಯಲ್ಲಿ ಅವರನ್ನು ಪುನಸ್ಸ್ಥಾಪಿಸಲು ಆತನು ದೃಢಸಂಕಲ್ಪ ಮಾಡಿದ್ದನು. ಹೀಗೆ 35ನೆಯ ಅಧ್ಯಾಯದಲ್ಲಿರುವ ಇದೇ ಪ್ರವಾದನೆಯು—ಒಂದು ಆತ್ಮಿಕ ಪ್ರಮೋದವನದಲ್ಲಿ ಆತ್ಮಿಕ ಇಸ್ರಾಯೇಲಿನ ಉಳಿಕೆಯವರ ಏಳಿಗೆ ಮತ್ತು ಸುಕ್ಷೇಮದ ಪುನಸ್ಸ್ಥಾಪನೆಯೊಂದಿಗೆ—ನಮ್ಮ ಸಮಯದಲ್ಲಿ ಭಿನ್ನವಾದೊಂದು ನೆರವೇರಿಕೆಯನ್ನು ಕಂಡುಕೊಳ್ಳುತ್ತದೆ. ಯೆಶಾಯನ ಪ್ರವಾದನೆಯ ಈ ಭಾಗದ ಒಂದು ಆತ್ಮಿಕ ಅನ್ವಯವನ್ನು ನಾವು ಮಾಡುವುದರ ಕುರಿತು ಸ್ಥಿರೀಕರಿಸುತ್ತಾ, ಇಬ್ರಿಯ 12:12ರಲ್ಲಿ ಪೌಲನು ಯೆಶಾಯ 35:3ನ್ನು ಒಂದು ಸಾಂಕೇತಿಕ ಅರ್ಥದಲ್ಲಿ ಅನ್ವಯಿಸಿದನು.
8 ಯುದ್ಧಾನಂತರದ ಅವಧಿಯಲ್ಲಿ, ಅಲಂಕಾರಿಕವಾಗಿ ಹೇಳುವುದಾದರೆ, ಆತ್ಮಿಕ ಇಸ್ರಾಯೇಲಿನ ಉಳಿದ ಅಭಿಷಿಕ್ತರು ಸೆರೆಯಿಂದ ಹೊರಬಂದರು. ಯೆಹೋವ ದೇವರು ಅವರನ್ನು ಬಿಡುಗಡೆಗೊಳಿಸಲು, ಮಹಾನ್ ಕೋರೆಷನಾದ ಯೇಸು ಕ್ರಿಸ್ತನನ್ನು ಉಪಯೋಗಿಸಿದನು. ಹೀಗೆ, ಈ ಉಳಿಕೆಯವರು—ಯೆರೂಸಲೇಮಿನಲ್ಲಿ ಅಕ್ಷರಾರ್ಥಕ ದೇವಾಲಯವನ್ನು ಪುನಃ ನಿರ್ಮಿಸಲು ತಮ್ಮ ದೇಶಕ್ಕೆ ಹಿಂದಿರುಗಿದ ಪ್ರಾಚೀನ ಯೆಹೂದ್ಯರ ಉಳಿಕೆಯವರ ಕೆಲಸಕ್ಕೆ ತುಲನಾತ್ಮಕವಾದ—ಪುನರ್ನಿರ್ಮಾಣದ ಕೆಲಸವನ್ನು ಮಾಡಸಾಧ್ಯವಿತ್ತು. ಇನ್ನೂ ಹೆಚ್ಚಾಗಿ, ಆಧುನಿಕ ಸಮಯಗಳಲ್ಲಿರುವ ಈ ಆತ್ಮಿಕ ಇಸ್ರಾಯೇಲ್ಯರು, ಒಂದು ಸಾಂಕೇತಿಕ ಏದೆನ್ ತೋಟವನ್ನು, ಹಸುರಾದ ಆತ್ಮಿಕ ಪ್ರಮೋದವನವನ್ನು ಕೃಷಿಮಾಡುವುದನ್ನು ಮತ್ತು ಉತ್ಪಾದಿಸುವುದನ್ನು ಆರಂಭಿಸಸಾಧ್ಯವಿತ್ತು.
9. ಯೆಶಾಯ 35:1, 2, 5-7ರಲ್ಲಿ ವರ್ಣಿಸಿದಂತಹ ಯಾವುದೊ ವಿಷಯವು ನಮ್ಮ ಸಮಯದಲ್ಲಿ ಹೇಗೆ ವಿಕಸಿಸಿತು?
9 ಮೇಲಿನದನ್ನು ಮನಸ್ಸಿನಲ್ಲಿಡುತ್ತಾ, ನಾವು ಮತ್ತೊಮ್ಮೆ ಯೆಶಾಯ 35ನೆಯ ಅಧ್ಯಾಯವನ್ನು ಪರಿಗಣಿಸೋಣ ಮತ್ತು ಮೊದಲು ವಚನಗಳು 1 ಮತ್ತು 2ನ್ನು ನೋಡೋಣ. ನೀರಿಲ್ಲದ ಪ್ರಾಂತವಾಗಿ ತೋರಿದ್ದ ಸ್ಥಳವು ನಿಜವಾಗಿಯೂ ಹೂಬಿಟ್ಟು, ಪ್ರಾಚೀನ ಶಾರೋನಿನ ಬಯಲುಗಳಂತೆ ಉತ್ಪಾದಿಸತೊಡಗಿದವು. ಅನಂತರ, ವಚನಗಳು 5ರಿಂದ 7ರ ತನಕ ನೋಡಿರಿ. ಉಳಿಕೆಯವರ—ಇನ್ನೂ ಜೀವಂತವಾಗಿಯೂ ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿಯೂ ಇರುವ ಅನೇಕರ—ತಿಳಿವಳಿಕೆಯ ಕಣ್ಣುಗಳು ತೆರೆಯಲ್ಪಟ್ಟವು. 1914 ಮತ್ತು ತದನಂತರ ಸಂಭವಿಸಿದ ವಿಷಯಗಳ ಅರ್ಥವನ್ನು ಅವರು ಉತ್ತಮವಾಗಿ ಗ್ರಹಿಸಸಾಧ್ಯವಿತ್ತು. ಅದು, ಈಗ ಉಳಿಕೆಯವರ ಜೊತೆಗೆ ಸೇವೆಸಲ್ಲಿಸುತ್ತಿರುವ “ಮಹಾ ಸಮೂಹ”ವನ್ನು ರಚಿಸುವ ನಮ್ಮಲ್ಲಿ ಅನೇಕರ ಮೇಲೆಯೂ ಪ್ರಭಾವವನ್ನು ಬೀರಿದೆ.—ಪ್ರಕಟನೆ 7:9.
ನೀವು ನೆರವೇರಿಕೆಯ ಭಾಗವಾಗಿದ್ದೀರೊ?
10, 11. (ಎ) ಯೆಶಾಯ 35:5-7ರ ನೆರವೇರಿಕೆಯಲ್ಲಿ ನೀವು ಹೇಗೆ ಒಳಗೊಂಡಿದ್ದೀರಿ? (ಬಿ) ಈ ಬದಲಾವಣೆಗಳ ಕುರಿತು ನಿಮಗೆ ವೈಯಕ್ತಿಕವಾಗಿ ಹೇಗನಿಸುತ್ತದೆ?
10 ಉದಾಹರಣೆಗೆ ನಿಮ್ಮನ್ನೇ ತೆಗೆದುಕೊಳ್ಳಿರಿ. ನೀವು ಯೆಹೋವನ ಸಾಕ್ಷಿಗಳ ಸಂಪರ್ಕದೊಳಗೆ ಬರುವ ಮೊದಲು, ಬೈಬಲನ್ನು ಕ್ರಮವಾಗಿ ಓದಿದಿರೊ? ನೀವು ಓದಿದ್ದಲ್ಲಿ, ಎಷ್ಟೊಂದು ತಿಳಿವಳಿಕೆ ನಿಮಗಿತ್ತು? ದೃಷ್ಟಾಂತಕ್ಕಾಗಿ, ಈಗ ನಿಮಗೆ, ಸತ್ತವರ ಪರಿಸ್ಥಿತಿಯ ಕುರಿತಾದ ಸತ್ಯವು ಗೊತ್ತಿದೆ. ಆ ವಿಷಯದಲ್ಲಿ ಆಸಕ್ತರಾಗಿರುವ ಯಾರಾದರೊಬ್ಬರಿಗೆ ನೀವು ಬಹುಶಃ, ಆದಿಕಾಂಡ ಅಧ್ಯಾಯ 2, ಪ್ರಸಂಗಿ ಅಧ್ಯಾಯ 9, ಮತ್ತು ಯೆಹೆಜ್ಕೇಲ ಅಧ್ಯಾಯ 18ರಲ್ಲಿರುವ ಸಂಬಂಧಪಟ್ಟ ವಚನಗಳಿಗೆ, ಅಷ್ಟೇ ಅಲ್ಲದೆ ಇತರ ಅನೇಕ ವಚನಗಳಿಗೆ ನಿರ್ದೇಶಿಸಸಾಧ್ಯವಿದೆ. ಹೌದು, ಅನೇಕ ವಿಷಯಗಳು ಅಥವಾ ವಿವಾದಾಂಶಗಳ ಕುರಿತು ಬೈಬಲ್ ಕಲಿಸುವುದನ್ನು ನೀವು ಬಹುಶಃ ಅರ್ಥಮಾಡಿಕೊಳ್ಳುತ್ತೀರಿ. ಸರಳವಾಗಿ ಹೇಳುವುದಾದರೆ, ಬೈಬಲ್ ನಿಮಗೆ ಅರ್ಥವುಳ್ಳದ್ದಾಗಿದೆ ಮತ್ತು ನೀವು ನಿಸ್ಸಂದೇಹವಾಗಿ ಮಾಡಿರುವಂತೆ ಅದರಲ್ಲಿ ಹೆಚ್ಚಿನದ್ದನ್ನು ಇತರರಿಗೆ ವಿವರಿಸಬಲ್ಲಿರಿ.
11 ಹಾಗಿದ್ದರೂ, ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳುವುದು ಒಳ್ಳೆಯದು, ‘ಬೈಬಲ್ ಸತ್ಯದ ಕುರಿತು ನಾನು ತಿಳಿದಿರುವುದೆಲ್ಲವನ್ನು ನಾನು ಹೇಗೆ ಕಲಿತೆನು? ಯೆಹೋವನ ಜನರೊಂದಿಗೆ ಅಭ್ಯಸಿಸುವ ಮೊದಲು, ಈಗ ಉಲ್ಲೇಖಿಸಲಾದ ಎಲ್ಲ ವಚನಗಳನ್ನು ನಾನು ಗೊತ್ತು ಮಾಡಿದ್ದೆನೊ? ಅವುಗಳ ಅರ್ಥವನ್ನು ತಿಳಿದು, ಅವುಗಳ ಭಾವದ ಕುರಿತು ಸರಿಯಾದ ತೀರ್ಮಾನಗಳಿಗೆ ತಲಪಿದ್ದೆನೊ?’ ಈ ಪ್ರಶ್ನೆಗಳಿಗೆ ಮುಚ್ಚುಮರೆಯಿಲ್ಲದ ಉತ್ತರವು ಬಹುಶಃ ಇಲ್ಲ ಎಂದಾಗಿದೆ. ಇಂತಹ ಒಂದು ಹೇಳಿಕೆಯಿಂದ ಯಾರೂ ಸಿಟ್ಟಿಗೇಳಬಾರದು, ಆದರೆ ಮೂಲಭೂತವಾಗಿ ನೀವು ಈ ವಚನಗಳು ಮತ್ತು ಅವುಗಳ ಅರ್ಥಕ್ಕೆ ಕುರುಡರಾಗಿದ್ದಿರೆಂದು ಹೇಳಸಾಧ್ಯವಿದೆ. ವಿಷಯವು ಹಾಗಿರುವುದಿಲ್ಲವೊ? ಅವು ಬೈಬಲಿನಲ್ಲಿದ್ದವು, ಆದರೆ ಅವುಗಳನ್ನು ಮನಗಾಣಲು ಅಥವಾ ಅವುಗಳ ಮಹತ್ವವನ್ನು ಗ್ರಹಿಸಲು ನಿಮಗೆ ಸಾಧ್ಯವಾಗಲಿಲ್ಲ. ಹಾಗಾದರೆ, ಆತ್ಮಿಕವಾಗಿ ನಿಮ್ಮ ಕಣ್ಣುಗಳು ಹೇಗೆ ತೆರೆಯಲ್ಪಟ್ಟವು? ಅದು ಅಭಿಷಿಕ್ತ ಉಳಿಕೆಯವರ ಮೇಲೆ ಯೆಶಾಯ 35:5ನ್ನು ನೆರವೇರಿಸುವುದರಲ್ಲಿ ಯೆಹೋವನು ಮಾಡಿರುವ ವಿಷಯದ ಮೂಲಕವೇ. ಫಲಸ್ವರೂಪವಾಗಿ, ನಿಮ್ಮ ಕಣ್ಣುಗಳು ತೆರೆಯಲ್ಪಡುವಂತಾದವು. ಇನ್ನು ಮುಂದೆ ನೀವು ಆತ್ಮಿಕ ಅಂಧಕಾರದಲ್ಲಿ ಇರುವುದಿಲ್ಲ. ನೀವು ನೋಡಬಲ್ಲಿರಿ.—ಹೋಲಿಸಿ ಪ್ರಕಟನೆ 3:17, 18.
12. (ಎ) ಇದು ಅದ್ಭುತಕರವಾದ ಶಾರೀರಿಕ ವಾಸಿಮಾಡುವಿಕೆಗಾಗಿರುವ ಸಮಯವಲ್ಲವೆಂದು ನಾವು ಏಕೆ ಹೇಳಸಾಧ್ಯವಿದೆ? (ಬಿ) ನಮ್ಮ ಸಮಯದಲ್ಲಿ ಯೆಶಾಯ 35:5 ನೆರವೇರುತ್ತಿರುವ ವಿಧವನ್ನು ಸಹೋದರ ಎಫ್. ಡಬ್ಲ್ಯೂ. ಫ್ರಾನ್ಸ್ರ ವಿಷಯವು ಹೇಗೆ ದೃಷ್ಟಾಂತಿಸಿತು?
12 ಬೈಬಲಿನ ಮತ್ತು ಶತಮಾನಗಳ ಉದ್ದಕ್ಕೂ ದೇವರ ವ್ಯವಹಾರಗಳ ಉತ್ಸುಕ ವಿದ್ಯಾರ್ಥಿಗಳಿಗೆ, ಇದು ಇತಿಹಾಸದಲ್ಲಿ ವಾಸಿಮಾಡುವಿಕೆಯ ಶಾರೀರಿಕ ಅದ್ಭುತಕಾರ್ಯಗಳಿಗಾಗಿರುವ ಅವಧಿಯಲ್ಲವೆಂದು ಗೊತ್ತಿದೆ. (1 ಕೊರಿಂಥ 13:8-10) ಆದುದರಿಂದ ಯೇಸು ಕ್ರಿಸ್ತನು ತಾನು ಮೆಸ್ಸೀಯನೆಂದು, ದೇವರ ಪ್ರವಾದಿಯೆಂದು ರುಜುಪಡಿಸುವುದರಲ್ಲಿ ಕುರುಡು ಕಣ್ಣುಗಳನ್ನು ತೆರೆಯುವನೆಂದು ನಾವು ನಿರೀಕ್ಷಿಸುವುದಿಲ್ಲ. (ಯೋಹಾನ 9:1-7, 30-33) ಕಿವುಡರೆಲ್ಲರು ಮತ್ತೆ ಕೇಳುವಂತೆಯೂ ಅವನು ಶಕ್ತಗೊಳಿಸುತ್ತಿಲ್ಲ. ಅಭಿಷಿಕ್ತರಲ್ಲಿ ಒಬ್ಬರೂ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರೂ ಆಗಿದ್ದ ಫ್ರೆಡ್ರಿಕ್ ಡಬ್ಲ್ಯೂ. ಫ್ರಾನ್ಸ್, 100ನೆಯ ಪ್ರಾಯವನ್ನು ಸಮೀಪಿಸಿದಂತೆ, ಬಹುಮಟ್ಟಿಗೆ ಕುರುಡರಾಗಿದ್ದರು ಮತ್ತು ಶ್ರವಣ ಸಾಧನವನ್ನು ಉಪಯೋಗಿಸಬೇಕಾಗಿತ್ತು. ಕೆಲವು ವರ್ಷಗಳ ಕಾಲ, ಅವರಿಗೆ ಇನ್ನು ಮುಂದೆ ಓದಲು ಕಾಣುತ್ತಿರಲಿಲ್ಲ; ಆದರೂ, ಯೆಶಾಯ 35:5ರ ಅರ್ಥದಲ್ಲಿ ಅವರು ಕುರುಡರೂ ಕಿವುಡರೂ ಆಗಿರುವುದಾಗಿ ಯಾರು ಯೋಚಿಸಸಾಧ್ಯವಿತ್ತು? ಅವರ ತೀಕ್ಷ್ಣವಾದ ಆತ್ಮಿಕ ದೃಷ್ಟಿಯು ಭೂವ್ಯಾಪಕವಾಗಿ ದೇವರ ಜನರಿಗೆ ಒಂದು ಆಶೀರ್ವಾದವಾಗಿತ್ತು.
13. ದೇವರ ಆಧುನಿಕ ದಿನದ ಜನರು ಯಾವ ವಿಪರ್ಯಸ್ತವನ್ನು ಅಥವಾ ಪುನಸ್ಸ್ಥಾಪನೆಯನ್ನು ಅನುಭವಿಸಿದರು?
13 ಅಥವಾ ನಿಮ್ಮ ನಾಲಿಗೆಯ ಕುರಿತೇನು? ತಮ್ಮ ಆತ್ಮಿಕ ಬಂದಿವಾಸದ ಸಮಯದಲ್ಲಿ ದೇವರ ಅಭಿಷಿಕ್ತರು ಮೌನಗೊಳಿಸಲ್ಪಟ್ಟಿದ್ದಿರಬಹುದು. ಆದರೆ ಒಮ್ಮೆ ದೇವರು ಆ ಪರಿಸ್ಥಿತಿಯನ್ನು ವಿಪರ್ಯಸ್ತಗೊಳಿಸಿದ ತರುವಾಯ, ದೇವರ ಸ್ಥಾಪಿತ ರಾಜ್ಯ ಮತ್ತು ಭವಿಷ್ಯತ್ತಿಗಾಗಿರುವ ಆತನ ವಾಗ್ದಾನಗಳ ಕುರಿತು ತಾವು ತಿಳಿದಿದ್ದ ವಿಷಯದಿಂದ ಅವರ ನಾಲಿಗೆಗಳು ಹರ್ಷಧ್ವನಿಗೈಯಲು ಆರಂಭಿಸಿದವು. ನಿಮ್ಮ ನಾಲಿಗೆಯನ್ನೂ ಬಿಚ್ಚಲು ಅವರು ಸಹಾಯ ಮಾಡಿದ್ದಿರಬಹುದು. ಪೂರ್ವದಲ್ಲಿ ಬೈಬಲ್ ಸತ್ಯದ ಕುರಿತು ಇತರರೊಂದಿಗೆ ನೀವು ಎಷ್ಟು ಪ್ರಮಾಣದಲ್ಲಿ ಮಾತಾಡಿದಿರಿ? ಬಹುಶಃ ಒಂದು ಹಂತದಲ್ಲಿ ನೀವು ಯೋಚಿಸಿರಬಹುದು, ‘ಅಭ್ಯಸಿಸುವುದನ್ನು ನಾನು ಆನಂದಿಸುತ್ತೇನೆ, ಆದರೆ ಹೊರಗೆಹೋಗಿ ಅಪರಿಚಿತರೊಂದಿಗೆ ನಾನೆಂದಿಗೂ ಮಾತಾಡೆನು.’ ಹಾಗಿದ್ದರೂ, “ಮೂಕನ ನಾಲಿಗೆಯು” ಈಗ ‘ಹರ್ಷಧ್ವನಿಗೈಯುತ್ತಿರುವುದು’ ನಿಜವಾಗಿರುವುದಿಲ್ಲವೊ?—ಯೆಶಾಯ 35:6.
14, 15. ನಮ್ಮ ಸಮಯದಲ್ಲಿ ಅನೇಕರು “ಪರಿಶುದ್ಧ ಮಾರ್ಗ”ದಲ್ಲಿ ಹೇಗೆ ನಡೆದಿದ್ದಾರೆ?
14 ಬಾಬೆಲಿನಿಂದ ಬಿಡುಗಡೆ ಹೊಂದಿದ ಪ್ರಾಚೀನ ಯೆಹೂದ್ಯರು, ತಮ್ಮ ಸ್ವದೇಶಕ್ಕೆ ಹಿಂದೆ ಒಂದು ದೀರ್ಘವಾದ ಸಂಚಾರವನ್ನು ಕೈಗೊಂಡಿದ್ದರು. ನಮ್ಮ ಸಮಯದಲ್ಲಿ ಅದು ಯಾವುದಕ್ಕೆ ಅನುರೂಪವಾಗಿದೆ? ಒಳ್ಳೆಯದು, ಯೆಶಾಯ 35:8ನ್ನು ನೋಡಿರಿ: “ಅಲ್ಲಿ ರಾಜಮಾರ್ಗವಿರುವದು, ಹೌದು [ಹೋಗಿಬರುವ] ದಾರಿ; ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವದು; ಯಾವ ಅಶುದ್ಧನೂ ಅಲ್ಲಿ ನಡೆಯನು.”
15 ಆತ್ಮಿಕ ಬಂದಿವಾಸದಿಂದ ಅವರ ಬಿಡುಗಡೆಯ ಸಮಯದಂದಿನಿಂದ, ಬೇರೆ ಕುರಿಗಳ ಲಕ್ಷಾಂತರ ಜನರಿಂದ ಈಗ ಜೊತೆಸೇರಲ್ಪಟ್ಟ ಅಭಿಷಿಕ್ತ ಉಳಿಕೆಯವರು, ಮಹಾ ಬಾಬೆಲಿನಿಂದ ಹೊರಬಂದು, ಒಂದು ಸಾಂಕೇತಿಕ ರಾಜಮಾರ್ಗ—ಒಬ್ಬನನ್ನು ಆತ್ಮಿಕ ಪ್ರಮೋದವನದೊಳಗೆ ನಡೆಸುವ ಪಾವಿತ್ರ್ಯದ ಒಂದು ಶುದ್ಧ ಮಾರ್ಗದ—ಮೇಲಿದ್ದಾರೆ. ಪಾವಿತ್ರ್ಯದ ಈ ರಾಜಮಾರ್ಗಕ್ಕಾಗಿ ಅರ್ಹರಾಗಲು ಮತ್ತು ಅದರ ಮೇಲೆ ಉಳಿಯಲು ನಾವು ಸಕಲ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಮ್ಮ ಕುರಿತೇ ಯೋಚಿಸಿರಿ. ನಿಮ್ಮ ನೈತಿಕ ಮಟ್ಟಗಳು ಮತ್ತು ನೀವು ಅಂಟಿಕೊಂಡಿರುವ ತತ್ವಗಳು ನೀವು ಲೋಕದಲ್ಲಿದ್ದಾಗಿನವುಗಳಿಗಿಂತ ಈಗ ಹೆಚ್ಚು ಉನ್ನತವಾಗಿಲ್ಲವೊ? ನಿಮ್ಮ ಯೋಚನೆ ಮತ್ತು ನಡತೆಯನ್ನು ದೇವರಿನದ್ದಕ್ಕೆ ಹೊಂದಿಸಲು ನೀವು ಹೆಚ್ಚಿನ ಪ್ರಯತ್ನವನ್ನು ಮಾಡುವುದಿಲ್ಲವೊ?—ರೋಮಾಪುರ 8:12, 13; ಎಫೆಸ 4:22-24.
16. ಪರಿಶುದ್ಧ ಮಾರ್ಗದಲ್ಲಿ ನಾವು ನಡೆದಂತೆ ಯಾವ ಪರಿಸ್ಥಿತಿಗಳನ್ನು ನಾವು ಅನುಭವಿಸಬಲ್ಲೆವು?
16 ಈ ಪರಿಶುದ್ಧ ಮಾರ್ಗದಲ್ಲಿ ನೀವು ಮುಂದುವರಿದಂತೆ, ಮೂಲಭೂತವಾಗಿ ಪಶುಪ್ರಾಯವಾದ ಮಾನವರ ಕುರಿತು ನೀವು ನಿಶ್ಚಿಂತರಾಗಿದ್ದೀರಿ. ಲೋಕದಲ್ಲಿ ಲೋಭಿಗಳು ಅಥವಾ ದ್ವೇಷವುಳ್ಳ ಜನರು ನಿಮ್ಮನ್ನು ಸಾಂಕೇತಿಕವಾಗಿ ನುಂಗದಂತೆ ಎಚ್ಚರವಾಗಿರಬೇಕು, ನಿಜ. ಅನೇಕ ಜನರು ಇತರರೊಂದಿಗೆ ವ್ಯವಹರಿಸುವುದರಲ್ಲಿ ಹಿಂಸಕರಾಗಿದ್ದಾರೆ. ದೇವರ ಜನರೊಳಗೆ ಎಂತಹ ಒಂದು ವ್ಯತ್ಯಾಸ! ಅಲ್ಲಿ ನೀವು ಸಂರಕ್ಷಿತ ಪರಿಸರದಲ್ಲಿದ್ದೀರಿ. ನಿಶ್ಚಯವಾಗಿ ನಿಮ್ಮ ಜೊತೆ ಕ್ರೈಸ್ತರು ಪರಿಪೂರ್ಣರಲ್ಲ; ಕೆಲವೊಮ್ಮೆ ಒಬ್ಬರು ಒಂದು ತಪ್ಪನ್ನು ಮಾಡುತ್ತಾರೆ ಇಲ್ಲವೆ ಸಿಟ್ಟನ್ನೆಬ್ಬಿಸುತ್ತಾರೆ. ಆದರೆ ನಿಮ್ಮ ಸಹೋದರರು ಉದ್ದೇಶಪೂರ್ವಕವಾಗಿ ನಿಮ್ಮ ಮನನೋಯಿಸಲು ಅಥವಾ ನಿಮ್ಮನ್ನು ನುಂಗಲು ಪ್ರಯತ್ನಸುತ್ತಿಲ್ಲವೆಂದು ನಿಮಗೆ ಗೊತ್ತಿದೆ. (ಕೀರ್ತನೆ 57:4; ಯೆಹೆಜ್ಕೇಲ 22:25; ಲೂಕ 20:45-47; ಅ. ಕೃತ್ಯಗಳು 20:29; 2 ಕೊರಿಂಥ 11:19, 20; ಗಲಾತ್ಯ 5:15) ಬದಲಿಗೆ, ಅವರು ನಿಮ್ಮಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ; ಅವರು ನಿಮಗೆ ಸಹಾಯವನ್ನು ಮಾಡಿದ್ದಾರೆ; ನಿಮ್ಮೊಂದಿಗೆ ಸೇವೆಮಾಡಲು ಅವರು ಬಯಸುತ್ತಾರೆ.
17, 18. ಯಾವ ಅರ್ಥದಲ್ಲಿ ಒಂದು ಪ್ರಮೋದವನವು ಈಗ ಅಸ್ತಿತ್ವದಲ್ಲಿದೆ, ಮತ್ತು ನಮ್ಮ ಮೇಲೆ ಇದರ ಪರಿಣಾಮವು ಏನಾಗಿದೆ?
17 ಹೀಗೆ 1ರಿಂದ 8 ವಚನಗಳ ಪ್ರಚಲಿತ ನೆರವೇರಿಕೆಯನ್ನು ಮನಸ್ಸಿನಲ್ಲಿಡುತ್ತಾ, ನಾವು ಯೆಶಾಯ 35ನೆಯ ಅಧ್ಯಾಯವನ್ನು ನೋಡಸಾಧ್ಯವಿದೆ. ಒಂದು ಆತ್ಮಿಕ ಪ್ರಮೋದವನವೆಂದು ಸರಿಯಾಗಿಯೇ ಕರೆಯಲ್ಪಟ್ಟಿರುವುದನ್ನು ನಾವು ಕಂಡುಕೊಂಡಿರುವುದು ಸ್ಪಷ್ಟವಾಗಿರುವುದಿಲ್ಲವೊ? ಇಲ್ಲ, ಅದು ಇನ್ನೂ ಪರಿಪೂರ್ಣವಾಗಿರುವುದಿಲ್ಲ. ಆದರೆ ಅದು ನಿಜವಾಗಿಯೂ ಒಂದು ಪ್ರಮೋದವನವಾಗಿದೆ ಏಕೆಂದರೆ ಇಲ್ಲಿ, ವಚನ 2ರಲ್ಲಿ ಹೇಳಲಾದಂತೆ, ನಾವು ಈಗಾಗಲೇ “ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣು”ತ್ತೇವೆ. ಮತ್ತು ಪರಿಣಾಮವು ಏನಾಗಿದೆ? ವಚನ 10 ಹೇಳುವುದು: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.” ನಿಜವಾಗಿಯೂ, ಸುಳ್ಳು ಧರ್ಮದಿಂದ ನಮ್ಮ ಹೊರಬರುವಿಕೆಯು ಮತ್ತು ದೇವರ ಅನುಗ್ರಹದ ಕೆಳಗೆ ಸತ್ಯಾರಾಧನೆಯ ನಮ್ಮ ಬೆನ್ನಟ್ಟುವಿಕೆಯು ಹರ್ಷವನ್ನು ಪ್ರೇರಿಸುವಂತಹದ್ದು.
18 ಸತ್ಯಾರಾಧನೆಯೊಂದಿಗೆ ಸಂಬಂಧಿಸಿರುವ ಹರ್ಷವು ಹೆಚ್ಚಾಗುತ್ತಾ ಇರುತ್ತದೆ, ಅಲ್ಲವೆ? ಹೊಸದಾಗಿ ಆಸಕ್ತರಾದವರು ಬದಲಾವಣೆಗಳನ್ನು ಮಾಡಿ, ಬೈಬಲ್ ಸತ್ಯದಲ್ಲಿ ಬೇರೂರುವುದನ್ನು ನೀವು ನೋಡುತ್ತೀರಿ. ಯುವ ಜನರು ಬೆಳೆದು ಸಭೆಯಲ್ಲಿ ಆತ್ಮಿಕ ಅಭಿವೃದ್ಧಿ ಮಾಡುವುದನ್ನು ನೀವು ಗಮನಿಸುತ್ತೀರಿ. ನಿಮಗೆ ಗೊತ್ತಿರುವವರು ದೀಕ್ಷಾಸ್ನಾನ ಪಡೆಯುವುದನ್ನು ನೀವು ವೀಕ್ಷಿಸುವ ದೀಕ್ಷಾಸ್ನಾನಗಳಿವೆ. ಅವು ಇಂದು ಹರ್ಷಕ್ಕಾಗಿ, ಸಮೃದ್ಧವಾದ ಹರ್ಷಕ್ಕಾಗಿ ಕಾರಣಗಳಲ್ಲವೊ? ಹೌದು, ನಮ್ಮ ಆತ್ಮಿಕ ಸ್ವಾತಂತ್ರ್ಯ ಮತ್ತು ಪ್ರಮೋದವನ ಪರಿಸ್ಥಿತಿಗಳಲ್ಲಿ ಇತರರು ನಮ್ಮನ್ನು ಸೇರುವಂತಹದ್ದು ಎಂತಹ ಹರ್ಷವಾಗಿದೆ!
ಇನ್ನೂ ಮುಂದಿರುವ ಒಂದು ನೆರವೇರಿಕೆ!
19. ಯಾವ ಆಶಾಜನಕ ನಿರೀಕ್ಷಣೆಯೊಂದಿಗೆ ಯೆಶಾಯ 35ನೆಯ ಅಧ್ಯಾಯವು ನಮ್ಮನ್ನು ತುಂಬುತ್ತದೆ?
19 ಯೆಹೂದ್ಯರ ಹಿಂದಿರುಗುವಿಕೆಯೊಂದಿಗೆ ಅದರ ಪ್ರಥಮ ನೆರವೇರಿಕೆಯ ವಿಷಯವಾಗಿ ಮತ್ತು ಇಂದು ಸಂಭವಿಸುತ್ತಿರುವ ಆತ್ಮಿಕ ನೆರವೇರಿಕೆಯ ವಿಷಯವಾಗಿ, ಇಷ್ಟರ ವರೆಗೆ ಯೆಶಾಯ 35ನೆಯ ಅಧ್ಯಾಯವನ್ನು ನಾವು ಪರಿಗಣಿಸಿದ್ದೇವೆ. ಆದರೆ ಅದು ಅಂತ್ಯವಾಗಿರುವುದಿಲ್ಲ. ಇನ್ನೂ ಹೆಚ್ಚಿನ ವಿಷಯವಿದೆ. ಅದು ಭೂಮಿಯ ಮೇಲೆ ಅಕ್ಷರಾರ್ಥಕ ಪ್ರಮೋದವನ ಪರಿಸ್ಥಿತಿಗಳ ಬರಲಿರುವ ಪುನಸ್ಸ್ಥಾಪನೆಯ ಬೈಬಲ್ ಸಂಬಂಧಿತ ಆಶ್ವಾಸನೆಯೊಂದಿಗೆ ಸಂಬಂಧಿಸಿದೆ.—ಕೀರ್ತನೆ 37:10, 11; ಪ್ರಕಟನೆ 21:4, 5.
20, 21. ಯೆಶಾಯ 35ನೆಯ ಅಧ್ಯಾಯದ ಇನ್ನೂ ಮತ್ತೊಂದು ನೆರವೇರಿಕೆ ಇರುವುದೆಂದು ನಂಬುವುದು ತರ್ಕಬದ್ಧವೂ ಶಾಸ್ತ್ರೀಯವೂ ಆಗಿದೆ ಏಕೆ?
20 ಒಂದು ಪ್ರಮೋದವನದ ಸುಸ್ಪಷ್ಟ ವರ್ಣನೆಗಳನ್ನು ಒದಗಿಸಿ, ನಂತರ ನೆರವೇರಿಕೆಗಳನ್ನು ಆತ್ಮಿಕ ವಿಷಯಗಳಿಗೆ ಪ್ರತಿಬಂಧಿಸುವುದು ಯೆಹೋವನ ವಿಷಯದಲ್ಲಿ ಸುಸಂಗತವಾಗಿರಲಾರದು. ನಿಶ್ಚಯವಾಗಿಯೂ ಇದು, ಆತ್ಮಿಕ ನೆರವೇರಿಕೆಗಳು ನಿಕೃಷ್ಟವಾದವುಗಳೆಂದು ಹೇಳಲು ಅಲ್ಲ. ಒಂದು ವೇಳೆ ಅಕ್ಷರಾರ್ಥಕ ಪ್ರಮೋದವನವು ಸ್ಥಾಪಿಸಲ್ಪಟ್ಟಿದ್ದರೂ, ಸುಂದರವಾದ ದೃಶ್ಯ ಹಾಗೂ ಶಾಂತಿಪೂರ್ಣ ಪ್ರಾಣಿಗಳ ನಡುವೆ ಆತ್ಮಿಕವಾಗಿ ಭ್ರಷ್ಟರಾಗಿರುವ ಮನುಷ್ಯರು, ಕಾಡು ಮೃಗಗಳಂತೆ ವರ್ತಿಸುವ ಮಾನವರಿಂದ ನಾವು ಸುತ್ತುವರಿಯಲ್ಪಟ್ಟರೆ ಅದು ನಮ್ಮನ್ನು ತೃಪ್ತಿಪಡಿಸಲಾರದು. (ಹೋಲಿಸಿ ತೀತ 1:12.) ಹೌದು, ಆತ್ಮಿಕ ವಿಷಯವು ಮೊದಲು ಬರಬೇಕು ಏಕೆಂದರೆ ಅದು ಅತಿ ಪ್ರಾಮುಖ್ಯವಾದದ್ದು.
21 ಆದರೂ, ಬರಲಿರುವ ಪ್ರಮೋದವನವು ಈಗ ನಾವು ಅನುಭವಿಸುತ್ತಿರುವ ಮತ್ತು ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಾಗಿ ಅನುಭವಿಸಲಿರುವ ಆತ್ಮಿಕ ಅಂಶಗಳೊಂದಿಗೆ ಕೊನೆಗೊಳ್ಳುವುದಿಲ್ಲ. ಯೆಶಾಯ 35ನೆಯ ಅಧ್ಯಾಯದಂತಹ ಪ್ರವಾದನೆಗಳ ಅಕ್ಷರಾರ್ಥಕ ನೆರವೇರಿಕೆಯನ್ನು ನಿರೀಕ್ಷಿಸಲು ನಮಗೆ ಸಕಾರಣವಿದೆ. ಏಕೆ? ಒಳ್ಳೆಯದು, 65ನೆಯ ಅಧ್ಯಾಯದಲ್ಲಿ ಯೆಶಾಯನು “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಮುಂತಿಳಿಸಿದನು. ಯೆಹೋವನ ದಿನವನ್ನು ಯಾವುದು ಹಿಂಬಾಲಿಸುತ್ತದೆ ಎಂಬುದನ್ನು ವರ್ಣಿಸುವಾಗ, ಅಪೊಸ್ತಲ ಪೇತ್ರನು ಆ ವಚನವನ್ನು ಅನ್ವಯಿಸಿದನು. (ಯೆಶಾಯ 65:17, 18; 2 ಪೇತ್ರ 3:10-13) “ನೂತನಭೂಮಂಡಲ”ವು ಒಂದು ವಾಸ್ತವಿಕತೆಯಾಗುವಾಗ, ಯೆಶಾಯನು ವರ್ಣಿಸಿದ ವೈಶಿಷ್ಟ್ಯಗಳು ನಿಜವಾಗಿಯೂ ಅಸ್ತಿತ್ವದಲ್ಲಿರುವುವೆಂದು ಪೇತ್ರನು ಸೂಚಿಸುತ್ತಿದ್ದನು. ನೀವು ಪರಿಚಿತರಾಗಿರಬಹುದಾದ ವರ್ಣನೆಗಳನ್ನು ಅದು ಒಳಗೊಳ್ಳುತ್ತದೆ—ಮನೆಗಳನ್ನು ಕಟ್ಟುವುದು ಮತ್ತು ಅವುಗಳಲ್ಲಿ ವಾಸಿಸುವುದು; ದ್ರಾಕ್ಷಾ ತೋಟಗಳನ್ನು ನೆಡುವುದು ಮತ್ತು ಅದರ ಫಲವನ್ನು ತಿನ್ನುವುದು; ಒಬ್ಬನ ಕೈಕೆಲಸವನ್ನು ದೀರ್ಘ ಸಮಯದ ವರೆಗೆ ಅನುಭವಿಸುವುದು; ತೋಳವೂ ಕುರಿಮರಿಯೂ ಒಟ್ಟಿಗೆ ವಾಸಿಸುವುದು; ಮತ್ತು ಭೂವ್ಯಾಪಕವಾಗಿ ಯಾವ ಹಾನಿಯೂ ಸಂಭವಿಸದೆ ಇರುವುದು. ಬೇರೆ ಮಾತುಗಳಲ್ಲಿ, ದೀರ್ಘಾಯುಷ್ಯ, ಭದ್ರವಾದ ಮನೆಗಳು, ಸಮೃದ್ಧವಾದ ಆಹಾರ, ತೃಪ್ತಿದಾಯಕ ಕೆಲಸ, ಮತ್ತು ಪ್ರಾಣಿಗಳ ನಡುವೆ ಹಾಗೂ ಪ್ರಾಣಿಗಳ ಮತ್ತು ಮಾನವರ ನಡುವೆ ಶಾಂತಿ.
22, 23. ಯೆಶಾಯ 35ನೆಯ ಅಧ್ಯಾಯದ ಭವಿಷ್ಯತ್ತಿನ ನೆರವೇರಿಕೆಯಲ್ಲಿ ಹರ್ಷಕ್ಕಾಗಿ ಯಾವ ಆಧಾರವು ಇರುವುದು?
22 ಆ ಪ್ರತೀಕ್ಷೆಯು ನಿಮ್ಮನ್ನು ಹರ್ಷದಿಂದ ತುಂಬುವುದಿಲ್ಲವೊ? ಅದು ತುಂಬಬೇಕು, ಏಕೆಂದರೆ ಹಾಗೆಯೇ ಜೀವಿಸುವಂತೆ ದೇವರು ನಮ್ಮನ್ನು ಸೃಷ್ಟಿಸಿದನು. (ಆದಿಕಾಂಡ 2:7-9) ಆದುದರಿಂದ, ನಾವು ಪರಿಗಣಿಸುತ್ತಿರುವ ಯೆಶಾಯ 35ನೆಯ ಅಧ್ಯಾಯದಲ್ಲಿನ ಪ್ರವಾದನೆಯ ವಿಷಯವಾಗಿ ಅದು ಏನನ್ನು ಅರ್ಥೈಸುತ್ತದೆ? ಹರ್ಷಧ್ವನಿಗೈಯಲು ನಮಗೆ ಹೆಚ್ಚಿನ ಕಾರಣವಿದೆ ಎಂಬುದನ್ನು ಅದು ಅರ್ಥೈಸುತ್ತದೆ. ನಾವು ಆನಂದಪಡುವಂತೆ ಮಾಡುತ್ತಾ, ಅಕ್ಷರಾರ್ಥಕ ಮರಳುಗಾಡುಗಳು ಮತ್ತು ನೀರಿಲ್ಲದ ಪ್ರಾಂತಗಳು ಹೂಬಿಡುವುವು. ಆಗ ನೀಲಿ ಕಣ್ಣುಗಳು, ಅಥವಾ ಕಂದುಬಣ್ಣದ ಕಣ್ಣುಗಳು ಅಥವಾ ಇನ್ನಾವುದಾದರೂ ಸಂತೋಷಕರವಾದ ಛಾಯೆಯಿರುವ, ಆದರೆ ಈಗ ಕುರುಡರಾಗಿರುವ ಜನರು ನೋಡಶಕ್ತರಾಗಿರುವರು. ಕಿವುಡರಾಗಿರುವ ನಮ್ಮ ಜೊತೆ ಕ್ರೈಸ್ತರು ಅಥವಾ ನಮ್ಮಲ್ಲಿ ಕೇಳಿಸಿಕೊಳ್ಳುವ ತೊಂದರೆಯಿರುವವರು ಸಹ ಸ್ಪಷ್ಟವಾಗಿ ಕೇಳಲು ಶಕ್ತರಾಗಿರುವರು. ದೇವರ ವಾಕ್ಯವು ಓದಿ ವಿವರಿಸಲ್ಪಡುವುದನ್ನು ಕೇಳಲು, ಅಷ್ಟೇ ಅಲ್ಲದೆ ಮರಗಳಲ್ಲಿನ ನಸುಗಾಳಿಯ ಶಬ್ದಗಳನ್ನು, ಒಂದು ಮಗುವಿನ ನಗುವನ್ನು, ಒಂದು ಪಕ್ಷಿಯ ಗಾನವನ್ನು ಆಲಿಸಲು, ಆ ಸಾಮರ್ಥ್ಯವನ್ನು ಉಪಯೋಗಿಸುವುದು ಎಂತಹ ಒಂದು ಹರ್ಷವು!
23 ಕುಂಟರು—ಸಂಧಿವಾತದಿಂದ ಈಗ ಸಂಕಟ ಪಡುವವರನ್ನು ಸೇರಿಸಿ—ನೋವಿಲ್ಲದೆ ಅಡ್ಡಾಡುವರೆಂಬುದನ್ನೂ ಅದು ಅರ್ಥೈಸುವುದು. ಎಂತಹ ಒಂದು ಉಪಶಮನ! ಆಗ ಅಕ್ಷರಾರ್ಥಕ ಒರತೆಗಳು ಮರಳುಗಾಡಿನಲ್ಲಿ ಪ್ರವಾಹವಾಗಿ ಹರಿಯುವವು. ನಾವು, ಎರಡನ್ನೂ—ಉಕ್ಕೇರುತ್ತಿರುವ ನೀರನ್ನು ನೋಡುವೆವು ಹಾಗೂ ಗುಳುಗುಳು ಶಬ್ದವನ್ನು ಕೇಳುವೆವು. ನಾವು ಅಲ್ಲಿಯ ವರೆಗೆ ನಡೆದು ಹಸಿರು ಹುಲ್ಲನ್ನು ಮತ್ತು ಜಂಬು ಕಾಗದದ ಗಿಡಗಳನ್ನು ಸ್ಪರ್ಶಿಸಶಕ್ತರಾಗಿರುವೆವು. ಅದು ನಿಜವಾಗಿಯೂ ಪುನಸ್ಸ್ಥಾಪಿಸಲ್ಪಟ್ಟ ಪ್ರಮೋದವನವಾಗಿರುವುದು. ಒಂದು ಸಿಂಹ ಅಥವಾ ಅಂತಹ ಇತರ ಪ್ರಾಣಿಯ ಸುತ್ತಲೂ ಭಯವಿಲ್ಲದೆ ಇರುವುದರ ಹರ್ಷದ ಕುರಿತೇನು? ನಾವು ಅದನ್ನು ವರ್ಣಿಸತೊಡಗುವ ಅಗತ್ಯವಿಲ್ಲ ಏಕೆಂದರೆ ನಾವೆಲ್ಲರೂ ಆ ದೃಶ್ಯವನ್ನು ಈಗಾಗಲೇ ಸವಿದಿದ್ದೇವೆ.
24. ಯೆಶಾಯ 35:10ರಲ್ಲಿರುವ ಅಭಿವ್ಯಕ್ತಿಯೊಂದಿಗೆ ನೀವು ಏಕೆ ಸಮ್ಮತಿಸಸಾಧ್ಯವಿದೆ?
24 ಯೆಶಾಯನು ನಮಗೆ ಆಶ್ವಾಸನೆ ನೀಡುವುದು: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು” ಇರುವರು. ಆದುದರಿಂದ ಹರ್ಷಧ್ವನಿಗೈಯಲು ನಮಗೆ ಕಾರಣವಿದೆಯೆಂಬುದನ್ನು ನಾವು ಒಪ್ಪಿಕೊಳ್ಳಬಲ್ಲೆವು. ನಮ್ಮ ಆತ್ಮಿಕ ಪ್ರಮೋದವನದಲ್ಲಿ ತನ್ನ ಜನರಿಗಾಗಿ ಯೆಹೋವನು ಈಗಾಗಲೇ ಮಾಡುತ್ತಿರುವ ವಿಷಯಕ್ಕಾಗಿ ಹರ್ಷ, ಮತ್ತು ಹತ್ತಿರವಿರುವ ಅಕ್ಷರಾರ್ಥಕ ಪ್ರಮೋದವನದಲ್ಲಿ ನಾವು ನಿರೀಕ್ಷಿಸಬಲ್ಲ ವಿಷಯಕ್ಕಾಗಿ ಹರ್ಷ. ಹರ್ಷಭರಿತರ ಕುರಿತು—ನಮ್ಮ ಕುರಿತು—ಯೆಶಾಯನು ಬರೆಯುವುದು: “ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”—ಯೆಶಾಯ 35:10.
ನೀವು ಗಮನಿಸಿದಿರೊ?
◻ ಯಾವ ಎರಡನೆಯ ನೆರವೇರಿಕೆಯನ್ನು ಯೆಶಾಯ 35ನೆಯ ಅಧ್ಯಾಯವು ಕಂಡಿದೆ?
◻ ಯೆಶಾಯನು ಮುಂತಿಳಿಸಿದ ಅದ್ಭುತಕರ ಬದಲಾವಣೆಗಳಿಗೆ ಯಾವುದು ಆತ್ಮಿಕವಾಗಿ ಅನುರೂಪವಾಗಿದೆ?
◻ ಈ ಪ್ರವಾದನೆಯ ನೆರವೇರಿಕೆಯಲ್ಲಿ ನೀವು ಹೇಗೆ ಪಾಲಿಗರಾಗಿದ್ದೀರಿ?
◻ ಯೆಶಾಯ 35ನೆಯ ಅಧ್ಯಾಯವು ಭವಿಷ್ಯತ್ತಿಗಾಗಿ ನಮ್ಮಲ್ಲಿ ನಿರೀಕ್ಷೆಯನ್ನು ತುಂಬುತ್ತದೆ ಎಂದು ನಾವು ಏಕೆ ಹೇಳಬಲ್ಲೆವು?
[ಪುಟ 15 ರಲ್ಲಿರುವ ಚಿತ್ರ]
ಜೂನ್ 1918ರಲ್ಲಿ ಏಳು ಪ್ರಖ್ಯಾತ ಸಹೋದರರು ಬಂಧಿಸಲ್ಪಟ್ಟಿದ್ದ ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ರೇಮಂಡ್ ಸ್ಟ್ರೀಟ್ ಸೆರೆಮನೆ
[ಪುಟ 16 ರಲ್ಲಿರುವ ಚಿತ್ರ]
ತಮ್ಮ ತದನಂತರದ ವರ್ಷಗಳಲ್ಲಿ ಬಹುಮಟ್ಟಿಗೆ ಕುರುಡರಾಗಿದ್ದ ಸಹೋದರ ಫ್ರಾನ್ಸ್ರ ಆತ್ಮಿಕ ದೃಷ್ಟಿಯು ತೀಕ್ಷ್ಣವಾಗಿ ಉಳಿಯಿತು
[ಪುಟ 17 ರಲ್ಲಿರುವ ಚಿತ್ರಗಳು]
ಆತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಯು ಹರ್ಷಕ್ಕಾಗಿರುವ ಕಾರಣಗಳು