ಸುಳ್ಳು ಬೋಧಕರ ವಿರುದ್ಧವಾಗಿ ಯೆಹೋವನ ತೀರ್ಪು
“ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಮೋಸದಲ್ಲಿ ನಡೆದು . . . ಅವರೆಲ್ಲರೂ ಸೊದೋಮಿನಂತೆ ಆ ಪುರನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.”—ಯೆರೆಮೀಯ 23:14.
1. ದೈವಿಕ ಬೋಧನೆಯಲ್ಲಿ ತೊಡಗಿಸಿಕೊಳ್ಳುವ ಒಬ್ಬನು ಅತಿ ಭಾರವಾದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ ಯಾಕೆ?
ದೈವಿಕ ಬೋಧನೆಯಲ್ಲಿ ತೊಡಗಿಸಿಕೊಳ್ಳುವ ಯಾವನೇ ಒಬ್ಬನು ಒಂದು ಅತಿ ಗಂಭೀರವಾದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಯಾಕೋಬ 3:1 ಎಚ್ಚರಿಸುವುದು: “ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿನವಾದ ತೀರ್ಪು ಆಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ.” ಹೌದು, ಸಾಮಾನ್ಯವಾಗಿರುವ ಕ್ರೈಸ್ತರಿಗಿಂತಲೂ ಹೆಚ್ಚಾಗಿ, ದೇವರ ವಾಕ್ಯದ ಬೋಧಕರು ಸ್ವೀಕಾರಾರ್ಹವಾದ ಲೆಕ್ಕವನ್ನು ಒಪ್ಪಿಸುವ ಹೆಚ್ಚು ಗಂಭೀರವಾದ ಜವಾಬ್ದಾರಿಯ ಕೆಳಗೆ ಇರುತ್ತಾರೆ. ಸುಳ್ಳು ಬೋಧಕರಾಗಿ ಪರಿಣಮಿಸುವವರಿಗೆ ಇದು ಯಾವ ಅರ್ಥದಲ್ಲಿರುವುದು? ಯೆರೆಮೀಯನ ದಿನಗಳ ಸನ್ನಿವೇಶವನ್ನು ನಾವೀಗ ನೋಡೋಣ. ಇಂದು ಏನು ಸಂಭವಿಸುತ್ತಿದೆಯೋ ಅದನ್ನು ಹೇಗೆ ಮುನ್ಚಿತ್ರಿಸಿತ್ತು ಎಂಬುದನ್ನು ನಾವು ನೋಡುವೆವು.
2, 3. ಯೆರೆಮೀಯನ ಮೂಲಕ ಯೆಹೋವನು ಯೆರೂಸಲೇಮಿನ ಸುಳ್ಳು ಬೋಧಕರ ಕುರಿತು ಯಾವ ನ್ಯಾಯತೀರ್ಪನ್ನು ನೀಡಿದನು?
2 ಸಾ.ಶ.ಪೂ. 647 ರಲ್ಲಿ, ಅರಸ ಯೋಷೀಯನ ಆಳಿಕೆಯ 13 ನೆಯ ವರ್ಷದಲ್ಲಿ ಯೆಹೋವನ ಪ್ರವಾದಿಯಾಗಿ ಯೆರೆಮೀಯನು ನೇಮಕಹೊಂದಿದನು. ಯೂದಾಯದ ವಿರುದ್ಧವಾಗಿ ಯೆಹೋವನಿಗೆ ಒಂದು ದೂರು ಇತ್ತು, ಆದುದರಿಂದ ಅದನ್ನು ಘೋಷಿಸುವಂತೆ ಅವನು ಯೆರೆಮೀಯನನ್ನು ಕಳುಹಿಸಿದನು. ಯೆರೂಸಲೇಮಿನ ಸುಳ್ಳು ಪ್ರವಾದಿಗಳು, ಯಾ ಬೋಧಕರು ದೇವರ ದೃಷ್ಟಿಯಲ್ಲಿ “ಅಸಹ್ಯವನ್ನು” ನಡಿಸುತ್ತಿದ್ದರು. ಅವರ ದುಷ್ಟತನವು ಎಷ್ಟೊಂದು ಘೋರವಾಗಿತ್ತೆಂದರೆ ಯೆರೂಸಲೇಮ್ ಮತ್ತು ಯೂದಾಯವನ್ನು ದೇವರು ಸೊದೋಮ್ ಮತ್ತು ಗೊಮೋರಗಳಿಗೆ ಹೋಲಿಸಿದನು. ಯೆರೆಮೀಯ ಅಧ್ಯಾಯ 23 ಇದರ ಕುರಿತು ನಮಗೆ ತಿಳಿಸುತ್ತದೆ. ವಚನ 14 ಹೇಳುವುದು:
3 “ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಮೋಸದಲ್ಲಿ ನಡೆದು ದುಷ್ಟರಲ್ಲಿ ಯಾವನೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ; ಅವರೆಲ್ಲರು ಸೊದೋಮಿನಂತೆ ಆ ಪುರನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.”
4. ಯೆರೂಸಲೇಮಿನ ಬೋಧಕರ ಕೆಟ್ಟ ನೈತಿಕ ಉದಾಹರಣೆಯು ಇಂದಿನ ಕ್ರೈಸ್ತಪ್ರಪಂಚದಲ್ಲಿ ಹೇಗೆ ಸಮಾನಾಂತರವಾಗಿದೆ?
4 ಹೌದು, ಈ ಪ್ರವಾದಿಗಳು, ಯಾ ಬೋಧಕರು ಸ್ವತಃ ಅತಿ ಕೆಟ್ಟದಾದ ನೈತಿಕ ಮಾದರಿಗಳನ್ನು ಇಟ್ಟರು ಮತ್ತು ಕಾರ್ಯತಃ ಅದನ್ನೇ ಜನರು ಮಾಡುವಂತೆ ಪ್ರೋತ್ಸಾಹಿಸಿದರು. ಇಂದು ಕ್ರೈಸ್ತಪ್ರಪಂಚದಲ್ಲಿನ ಪರಿಸ್ಥಿತಿಗಳನ್ನು ನೋಡಿರಿ! ಅವುಗಳು ಯೆರೆಮೀಯನ ದಿನಗಳಲ್ಲಿ ಇದ್ದ ಹಾಗೆ ಇಲ್ಲವೇ? ಇಂದು ವೈದಿಕರು ಅವರ ಶ್ರೇಣಿಗಳಲ್ಲಿ ವ್ಯಭಿಚಾರಿಗಳನ್ನು ಮತ್ತು ಸಲಿಂಗಕಾಮಿಗಳನ್ನು ಇರುವಂತೆ ಬಿಡುತ್ತಾರೆ ಮತ್ತು ಚರ್ಚ್ ಪೂಜೆಗಳಲ್ಲಿ ಅಧಿಕೃತವಾಗಿ ಸೇವೆ ಸಲ್ಲಿಸಲು ಸಹ ಅನುಮತಿಸುತ್ತಾರೆ. ಪಟ್ಟಿಯಲ್ಲಿರುವ ಅಧಿಕಾಂಶ ಚರ್ಚ್ ಸದಸ್ಯರುಗಳು ಕೂಡ ಅನೈತಿಕರಾಗಿರುವುದರಲ್ಲಿ ಏನಾದರೂ ಆಶ್ಚರ್ಯವಿದೆಯೇ?
5. ಕ್ರೈಸ್ತಪ್ರಪಂಚದ ಅನೈತಿಕ ಸ್ಥಿತಿಯು ಸೊದೋಮ್, ಗೊಮೋರಗಳದ್ದನ್ನು ಯಾಕೆ ಮೀರಿಹೋಗುತ್ತದೆ?
5 ಯೆರೂಸಲೇಮಿನ ನಿವಾಸಿಗಳನ್ನು ಸೊದೋಮ್ ಮತ್ತು ಗೊಮೋರದವರೊಂದಿಗೆ ಯೆಹೋವನು ತುಲನೆಮಾಡಿದನು. ಆದರೆ ಕ್ರೈಸ್ತಪ್ರಪಂಚದ ಅನೈತಿಕ ಪರಿಸ್ಥಿತಿಯಾದರೋ ಸೊದೋಮ್, ಗೊಮೋರಗಳಿಗಿಂತಲೂ ತುಚ್ಛವಾದದ್ದಾಗಿದೆ. ಹೌದು, ಅದು ಯೆಹೋವನ ದೃಷ್ಟಿಯಲ್ಲಿ ಇನ್ನೂ ಹೆಚ್ಚು ದೂಷಣಾರ್ಹವಾಗಿದೆ. ಅವಳ ಬೋಧಕರು ಕ್ರೈಸ್ತ ನೈತಿಕ ವಿಧಿಕಟ್ಟಲೆಗಳನ್ನು ಕಡೆಗಣಿಸುತ್ತಾರೆ. ಮತ್ತು ಇದು ಎಲ್ಲಿ ಕೆಟ್ಟದ್ದನ್ನು ಮಾಡಲು ಎಲ್ಲಾ ವಿಧದ ದುಷ್ಟತನದ ಕುಯುಕ್ತಿಯ ಆಕರ್ಷಣೆಗಳು ಇರುತ್ತವೋ, ಆ ನೈತಿಕ ಅವನತಿಯ ವಾತಾವರಣವೊಂದನ್ನು ಉಂಟುಮಾಡುತ್ತದೆ. ಇಂತಹ ನೈತಿಕ ಸನ್ನಿವೇಶವು ಎಷ್ಟೊಂದು ಪ್ರಚಲಿತದಲ್ಲಿದೆಯೆಂದರೆ ಇಂದು ಕೆಟ್ಟತನವು ಸಹಜಸ್ಥಿತಿಯಾಗಿ ವೀಕ್ಷಿಸಲ್ಪಡುತ್ತದೆ.
“ಮೋಸದಲ್ಲಿ ನಡೆಯುವುದು”
6. ಯೆರೂಸಲೇಮಿನ ಪ್ರವಾದಿಗಳ ಕೆಟ್ಟತನದ ಕುರಿತು ಯೆರೆಮೀಯನು ಏನಂದನು?
6 ಯೆರೂಸಲೇಮಿನ ಪ್ರವಾದಿಗಳ ಕುರಿತು ವಚನ 14 ಏನನ್ನುತ್ತದೋ ಅದನ್ನು ಈಗ ಗಮನಿಸಿರಿ. ಅವರು “ಮೋಸದಲ್ಲಿ ನಡೆಯು” ತ್ತಿದ್ದರು. ಮತ್ತು ವಚನ 15ರ ಕೊನೆಯ ಭಾಗ ಹೇಳುವದು: “ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲಿಲ್ಲಾ ಹರಡಿದೆಯಷ್ಟೆ.” ಅನಂತರ, ವಚನ 16 ಕೂಡಿಸುವುದು: “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ; ನಿಮ್ಮಲ್ಲಿ ವ್ಯರ್ಥನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಹೃದಯಕ್ಕೆ ಹೊಳೆದದ್ದನ್ನೇ ಹೇಳುತ್ತಾರೆ.”
7, 8. ಯೆರೂಸಲೇಮಿನ ಸುಳ್ಳು ಪ್ರವಾದಿಗಳಂತೆ ಕ್ರೈಸ್ತಪ್ರಪಂಚದ ವೈದಿಕರು ಇರುವುದು ಯಾಕೆ, ಮತ್ತು ಇದು ಚರ್ಚ್ಹೋಕರನ್ನು ಹೇಗೆ ಬಾಧಿಸಿದೆ?
7 ಯೆರೂಸಲೇಮಿನ ಸುಳ್ಳು ಪ್ರವಾದಿಗಳಂತೆ, ಕ್ರೈಸ್ತಪ್ರಪಂಚದ ವೈದಿಕರು ಕೂಡ ಮೋಸದಲ್ಲಿ ನಡೆಯುತ್ತಾರೆ, ಭ್ರಷ್ಟವಾದ ತ್ತತ್ವಗಳನ್ನು, ದೇವರ ವಾಕ್ಯದಲ್ಲಿ ಕಂಡುಬಾರದ ಬೋಧನೆಗಳನ್ನು ಹರಡಿಸುತ್ತಾರೆ. ಇಂತಹ ಕೆಲವು ಸುಳ್ಳು ಬೋಧನೆಗಳು ಯಾವುವು? ಆತ್ಮದ ಅಮರತ್ವ, ತ್ರಯೈಕ್ಯ, ಪರ್ಗೆಟರಿ, ಮತ್ತು ಜನರನ್ನು ನಿತ್ಯಕ್ಕೂ ಯಾತನೆಗೊಳಪಡಿಸಲು ಒಂದು ನರಕಾಗ್ನಿ. ಜನರು ಏನನ್ನು ಕೇಳಲು ಬಯಸುತ್ತಾರೋ ಅದನ್ನು ಅವರಿಗೆ ಸಾರುವುದರ ಮೂಲಕ ಕೂಡ ಅವರು ತಮ್ಮ ಕೇಳುಗರ ಕಿವಿಗಳನ್ನು ಖುಷಿಮಾಡುತ್ತಾರೆ. ಕ್ರೈಸ್ತಪ್ರಪಂಚವೆಂಬಾಕೆಗೆ ದೇವರ ಶಾಂತಿ ಇರುವ ಕಾರಣ, ಅವಳಿಗೆ ಯಾವುದೇ ವಿಪತ್ತು ತಟ್ಟುವುದಿಲ್ಲವೆಂದು ಅವರು ಪಠಿಸುತ್ತಾರೆ. ಆದರೆ ವೈದಿಕರು “ಸ್ವಂತ ಹೃದಯಕ್ಕೆ ಹೊಳೆದದ್ದನ್ನೇ” ನುಡಿಯುತ್ತಾರೆ. ಅದು ಸುಳ್ಳಾಗಿದೆ. ಅಂತಹ ಸುಳ್ಳುಗಳನ್ನು ನಂಬುವವರು ಆತ್ಮಿಕವಾಗಿ ವಿಷಮಯಗೊಂಡಿದ್ದಾರೆ. ಅವರ ನಾಶನಕ್ಕೆ ಅವರನ್ನು ತಪ್ಪಾಗಿ ನಡಿಸಲಾಗುತ್ತಿದೆ!
8 ಈ ಸುಳ್ಳು ಬೋಧಕರ ಕುರಿತು ಯೆಹೋವನು ವಚನ 21 ರಲ್ಲಿ ಏನನ್ನು ಹೇಳುತ್ತಾನೆಂದು ಗಮನಿಸಿರಿ: “ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ, ತಾವೇ ಆತುರಗೊಂಡರು; ನಾನು ಇವರಿಗೆ ಏನೂ ಹೇಳಲಿಲ್ಲ, ತಾವೇ ಪ್ರವಾದಿಸಿದರು.” ಆದುದರಿಂದ ಇಂದು, ವೈದಿಕರು ದೇವರಿಂದ ಕಳುಹಿಸಲ್ಪಟ್ಟವರಲ್ಲ, ಅಲ್ಲದೇ ಅವರು ಅವನ ಸತ್ಯಗಳನ್ನು ಕಲಿಸುವುದಿಲ್ಲ. ಫಲಿತಾಂಶ? ಚರ್ಚಿಗರಲ್ಲಿ ಗಾಬರಿಪಡಿಸುವಷ್ಟು ಬೈಬಲಿನ ಅಜ್ಞಾನವು ಅಸ್ತಿತ್ವದಲ್ಲಿದೆ ಯಾಕಂದರೆ ಅವರ ಶುಶ್ರೂಷಕರು ಅವರಿಗೆ ಲೌಕಿಕ ತ್ತತ್ವ ಜ್ಞಾನಗಳನ್ನು ಉಣಿಸುತ್ತಾರೆ.
9, 10. (ಎ) ಯೆರೂಸಲೇಮಿನ ಸುಳ್ಳು ಬೋಧಕರಿಗೆ ಯಾವ ವಿಧದ ಕನಸುಗಳು ಬೀಳುತ್ತಿದ್ದವು? (ಬಿ) ಕ್ರೈಸ್ತಪ್ರಪಂಚದ ವೈದಿಕರು ತದ್ರೀತಿಯಲ್ಲಿ “ಸುಳ್ಳು ಕನಸುಗಳನ್ನು” ಹೇಗೆ ಕಲಿಸಿದ್ದಾರೆ?
9 ಇನ್ನೂ ಹೆಚ್ಚಾಗಿ, ವೈದಿಕರು ಇಂದು ಸುಳ್ಳಾದ ನಿರೀಕ್ಷೆಗಳನ್ನು ಪ್ರಸಾರ ಮಾಡುತ್ತಾರೆ. ವಚನ 25 ನ್ನು ಗಮನಿಸಿರಿ: “ನನಗೆ ಕನಸು ಬಿತ್ತು, ಕನಸು ಬಿತ್ತು ಎಂದು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.” ಅವು ಯಾವ ತೆರನಾದ ಕನಸುಗಳು? ವಚನ 32 ನಮಗನ್ನುವುದು: “ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ ವಿವರಿಸಿ ತಮ್ಮ ಸುಳ್ಳುಮಾತುಗಳಿಂದಲೂ ಕೊಚ್ಚಾಟದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ; ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವದಿಲ್ಲ. ಇದು ಯೆಹೋವನ ನುಡಿ.”
10 ವೈದಿಕರು ಯಾವ ಸುಳ್ಳು ಕನಸುಗಳನ್ನು, ಯಾ ನಿರೀಕ್ಷೆಗಳನ್ನು ಕಲಿಸಿದ್ದಾರೆ? ಏನಂದರೆ ಶಾಂತಿ ಮತ್ತು ಭದ್ರತೆಯ ಮಾನವನ ಏಕಮಾತ್ರ ನಿರೀಕ್ಷೆ ಇಂದು ಸಂಯುಕ್ತ ರಾಷ್ಟ್ರ ಸಂಘವಾಗಿದೆ. ಇತ್ತೀಚೆಗಿನ ವರುಷಗಳಲ್ಲಿ ಅವರು ಸಂಯುಕ್ತ ರಾಷ್ಟ್ರ ಸಂಘವನ್ನು “ಒಪ್ಪಂದ ಮತ್ತು ಶಾಂತಿಯ ಕೊನೆಯ ನಿರೀಕ್ಷೆ,” “ಶಾಂತಿ ಮತ್ತು ನ್ಯಾಯದ ವರಿಷ್ಠ ಸಂಘಟನೆ,” “ಲೋಕಶಾಂತಿಗಾಗಿ ಪ್ರಧಾನ ಐಹಿಕ ನಿರೀಕ್ಷೆ,” ಎಂದು ಕರೆದರು. ಎಂತಹ ಒಂದು ಮೋಸ! ಮಾನವಕುಲದ ಏಕಮಾತ್ರ ನಿರೀಕ್ಷೆ ದೇವರ ರಾಜ್ಯವಾಗಿದೆ. ಆದರೆ ಯಾವುದು ಯೇಸುವಿನ ಸಾರೋಣದ ಕೇಂದ್ರ ವಿಷಯವಾಗಿತ್ತೋ ಆ ಸ್ವರ್ಗೀಯ ಸರಕಾರದ ಕುರಿತಾದ ಸತ್ಯವನ್ನು ವೈದಿಕರು ಸಾರುವುದಿಲ್ಲ ಮತ್ತು ಕಲಿಸುವುದಿಲ್ಲ.
11. (ಎ) ಯೆರೂಸಲೇಮಿನ ಸುಳ್ಳು ಬೋಧಕರು ದೇವರ ಸ್ವಂತ ಹೆಸರಿನ ಮೇಲೆ ಯಾವ ಕೆಟ್ಟ ಪರಿಣಾಮವನ್ನು ಉಂಟುಮಾಡಿದರು? (ಬಿ) ಯೆರೆಮೀಯ ವರ್ಗದವರಿಗೆ ವಿಪರ್ಯಸತ್ತೆಯಲ್ಲಿ, ಇಂದಿನ ಸುಳ್ಳು ಧಾರ್ಮಿಕ ಬೋಧಕರು ದೈವಿಕ ಹೆಸರಿನ ಕುರಿತು ಏನನ್ನು ಮಾಡಿದ್ದಾರೆ?
11 ವಚನ 27 (26, KA ಬೈಬಲ್) ನಮಗೆ ಹೆಚ್ಚನ್ನು ಹೇಳುತ್ತದೆ. “ಇವರ ಪಿತೃಗಳು ಬಾಳನನ್ನು ಸೇರಿ ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು . . . ತಾವು ತಮ್ಮ ನೆರೆಹೊರೆಯವರಿಗೆ ತಿಳಿಸುವ ತಮ್ಮ ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ.” ಯೆರೂಸಲೇಮಿನ ಸುಳ್ಳು ಪ್ರವಾದಿಗಳು ದೇವರ ಹೆಸರನ್ನು ಜನರು ಮರೆಯುವಂತೆ ಕಾರಣರಾಗಿದ್ದರು. ಇಂದಿನ ಸುಳ್ಳು ಧಾರ್ಮಿಕ ಬೋಧಕರು ಅದನ್ನೇ ಮಾಡಿಲ್ಲವೇ? ಇನ್ನೂ ಕೆಟ್ಟದ್ದೇನಂದರೆ, ಅವರು ಯೆಹೋವ ಎಂಬ ದೇವರ ಹೆಸರನ್ನು ಅಡಗಿಸುತ್ತಾರೆ. ಅದನ್ನು ಬಳಸುವ ಅಗತ್ಯವಿಲ್ಲವೆಂದು ಅವರು ಕಲಿಸುತ್ತಾರೆ, ಮತ್ತು ಅವರ ಬೈಬಲ್ ತರ್ಜುಮೆಗಳಿಂದ ಅದನ್ನು ತೆಗೆದುಹಾಕುತ್ತಾರೆ. ದೇವರ ಹೆಸರು ಯೆಹೋವ ಎಂದು ಜನರಿಗೆ ಕಲಿಸುವ ಯಾವನೇ ವ್ಯಕ್ತಿಯನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಆದರೆ ಯೆರೆಮೀಯ ವರ್ಗದವರು, ಆತ್ಮಾಭಿಷಿಕ್ತ ಕ್ರೈಸ್ತರ ಉಳಿಕೆಯವರು, ಅವರ ಸಂಗಾತಿಗಳೊಂದಿಗೆ, ಯೇಸುವು ಮಾಡಿದಂತೆಯೇ ಮಾಡಿರುತ್ತಾರೆ. ಅವರು ದೇವರ ಹೆಸರನ್ನು ಲಕ್ಷಾಂತರ ಮಂದಿಗೆ ಕಲಿಸಿದ್ದಾರೆ.—ಯೋಹಾನ 17:6.
ಅವರ ದೂಷಣಾರ್ಹತೆಯನ್ನು ಬಯಲುಗೊಳಿಸುವುದು
12. (ಎ) ಸುಳ್ಳು ಧಾರ್ಮಿಕ ಬೋಧಕರ ಮೇಲೆ ಮಹಾ ರಕ್ತಾಪರಾಧವು ಇರುವುದು ಯಾಕೆ? (ಬಿ) ಎರಡು ಲೋಕ ಯುದ್ಧಗಳಲ್ಲಿ ವೈದಿಕರ ಪಾತ್ರವೇನಾಗಿತ್ತು?
12 ತಮ್ಮ ಮಂದೆಗಳನ್ನು ವಿನಾಶದ ಅಗಲವಾದ ದಾರಿಯಲ್ಲಿ ನಡಿಸುತ್ತಿರುವ ಸುಳ್ಳು ಬೋಧಕರು ಎಂದು ವೈದಿಕರನ್ನು ಪದೇ ಪದೇ ಯೆರೆಮೀಯನ ವರ್ಗವು ಬಯಲುಗೊಳಿಸಿದೆ. ಹೌದು, ಯೆಹೋವನ ಪ್ರತಿಕೂಲ ನ್ಯಾಯತೀರ್ಪನ್ನು ಹೊಂದಲು ಈ ಸುಳ್ಳು ಕನಸುಗಾರರು ಯಾಕೆ ಅರ್ಹರಾಗಿದ್ದಾರೆ ಎಂದು ಉಳಿಕೆಯವರು ಸ್ಪಷ್ಟಪಡಿಸಿರುತ್ತಾರೆ. ಉದಾಹರಣೆಗೆ, ಮಹಾ ಬಾಬೆಲಿನಲ್ಲಿ “ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ” ರಕ್ತವು ಕಂಡುಬಂದಿದೆ ಎಂದು ಅದು ಹೇಳುವ ಪ್ರಕಟನೆ 18:24ಕ್ಕೆ ಯೆಹೋವನ ಸೇವಕರು ಆಗಾಗ್ಗೆ ಸೂಚಿಸಿದ್ದಾರೆ. ಧಾರ್ಮಿಕ ಭಿನ್ನತೆಗಳ ಕಾರಣ ಹೋರಾಡಲ್ಪಟ್ಟ ಎಲ್ಲಾ ಯುದ್ಧಗಳ ಕುರಿತು ಯೋಚಿಸಿರಿ. ಸುಳ್ಳು ಧಾರ್ಮಿಕ ಬೋಧಕರ ಮೇಲೆ ಇರುವ ರಕ್ತಾಪರಾಧ ದೋಷವು ಎಷ್ಟೊಂದು ಘೋರವಾಗಿದೆ! ಅವರ ಬೋಧನೆಗಳು ಪಕ್ಷಭೇದವನ್ನುಂಟುಮಾಡಿವೆ ಮತ್ತು ಭಿನ್ನವಾದ ನಂಬಿಕೆ ಮತ್ತು ರಾಷ್ಟ್ರೀಯ ಗುಂಪುಗಳ ನಡುವೆ ದ್ವೇಷವನ್ನು ಅಧಿಕಗೊಳಿಸಿವೆ. ಲೋಕ ಯುದ್ಧ Iರ ಕುರಿತು, ಪ್ರಚಾರಕರು ಶಸ್ತ್ರಗಳನ್ನು ನೀಡುತ್ತಾರೆ [ಪ್ರೀಚರ್ಸ್ ಪ್ರಿಸೆಂಟ್ ಆರ್ಮ್ಸ್] ಪುಸ್ತಕ ಹೇಳುವುದು: “ವೈದಿಕರು [ಕರ್ಕ್ಲ್] ಯುದ್ಧಕ್ಕೆ ಅದರ ಭಾವೋದ್ರಿಕ್ತ ಆತ್ಮಿಕ ವೈಶಿಷ್ಟ್ಯವನ್ನು ಮತ್ತು ರಭಸವನ್ನು ಕೊಟ್ಟರು. . . . ಚರ್ಚ್ ಆ ಮೂಲಕ ಯುದ್ಧವ್ಯವಸ್ಥೆಯಲ್ಲಿ ಒಂದು ಭಾಗವಾಗಿ ಸೇರ್ಪಡೆಯಾಯಿತು.” ಲೋಕ ಯುದ್ಧ IIರ ಕುರಿತು ಕೂಡ ಇದು ಸತ್ಯವಾಗಿದೆ. ವೈದಿಕರು ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳಿಗೆ ಪೂರ್ಣವಾಗಿ ಬೆಂಬಲವನ್ನಿತ್ತರು ಮತ್ತು ಅವರ ಸೇನೆಗಳನ್ನು ಆಶೀರ್ವದಿಸಿದರು. ಎರಡು ಲೋಕ ಯುದ್ಧಗಳು ಕ್ರೈಸ್ತಪ್ರಪಂಚದಲ್ಲಿ ಆರಂಭಗೊಂಡವು, ಅದರಲ್ಲಿ ಜೊತೆ ಧರ್ಮಾವಲಂಬಿಗಳು ಒಬ್ಬರು ಇನ್ನೊಬ್ಬರನ್ನು ಹತಿಸಿದರು. ಕ್ರೈಸ್ತಪ್ರಪಂಚದೊಳಗಿನ ಐಹಿಕ ಮತ್ತು ಧಾರ್ಮಿಕ ವಿಭಾಗಗಳು ಸದ್ಯದ ಸಮಯದ ತನಕ ರಕ್ತಸುರಿಸುವಿಕೆಗೆ ಕಾರಣವಾಗುವದನ್ನು ಮುಂದರಿಸಿವೆ. ಅವರ ಸುಳ್ಳು ಬೋಧನೆಗಳಿಂದ ಎಂತಹ ಭೀಕರ ಫಲಿತಾಂಶಗಳು!
13. ಕ್ರೈಸ್ತಪ್ರಪಂಚದ ವೈದಿಕರಿಗೆ ಯೆಹೋವನೊಂದಿಗೆ ಸಂಬಂಧವಿರುವದಿಲ್ಲವೆಂದು ಯೆರೆಮೀಯ 23:22 ಹೇಗೆ ರುಜುಪಡಿಸುತ್ತದೆ?
13 ಯೆರೆಮೀಯ ಅಧ್ಯಾಯ 23, ವಚನ 22ನ್ನು ದಯಮಾಡಿ ಗಮನಿಸಿರಿ: “ಇವರು ನನ್ನ ಆಲೋಚನಾಸಭೆಯಲ್ಲಿ ನಿಂತಿದ್ದರೆ ನನ್ನ ಮಾತುಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸಿ ಅವರನ್ನು ಅವರ ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು.” ಯೆಹೋವನ ಆಲೋಚನಾಸಭೆಯಲ್ಲಿ ಕ್ರೈಸ್ತಪ್ರಪಂಚದ ಧಾರ್ಮಿಕ ಪ್ರವಾದಿಗಳು, ಒಂದು ನಂಬಿಗಸ್ತ ಮತ್ತು ವಿವೇಕಿ ಆಳಿನೋಪಾದಿಯೋ ಎಂಬಂತೆ ನಿಕಟ ಸಂಬಂಧದಲ್ಲಿ ಅವನೊಂದಿಗೆ ನಿಲ್ಲುತ್ತಿದ್ದರೆ, ಆಗ ಅವರು ಕೂಡ ದೇವರ ಮಟ್ಟಗಳಿಗನುಸಾರ ಜೀವಿಸುತ್ತಾ ಇರುತ್ತಿದ್ದರು. ಅವರು ಕೂಡ ಕ್ರೈಸ್ತಪ್ರಪಂಚದ ಜನಾಂಗಗಳಿಗೆ ದೇವರ ಸ್ವಂತ ಮಾತುಗಳನ್ನು ಆಲಿಸುವಂತೆ ಮಾಡಬಹುದಿತ್ತು. ಬದಲಾಗಿ, ಆಧುನಿಕ ದಿನದ ಸುಳ್ಳು ಬೋಧಕರು ತಮ್ಮ ಅನುಯಾಯಿಗಳನ್ನು ದೇವರ ವಿರೋಧಿಯಾದ, ಪಿಶಾಚ ಸೈತಾನನ ಕುರುಡುಗೊಳಿಸಿದ ಸೇವಕರನ್ನಾಗಿ ಮಾಡಿರುತ್ತಾರೆ.
14. ಕ್ರೈಸ್ತಪ್ರಪಂಚದ ವೈದಿಕರ ಯಾವ ಶಕ್ತಿಯುತ ಬಯಲುಗೊಳಿಸುವಿಕೆಯು 1958 ರಲ್ಲಿ ಮಾಡಲ್ಪಟ್ಟಿತು?
14 ಯೆರೆಮೀಯ ವರ್ಗದಿಂದ ವೈದಿಕರ ಬಯಲಿಗೆಳೆಯುವಿಕೆ ಬಹಳಷ್ಟು ಶಕ್ತಿಯುತವಾಗಿದೆ. ಉದಾಹರಣೆಗೆ, ನ್ಯೂ ಯಾರ್ಕ್ ಶಹರದಲ್ಲಿ 1958ರಲ್ಲಿ ನಡೆದ ಯೆಹೋವನ ಸಾಕ್ಷಿಗಳ ದೈವಿಕ ಚಿತ್ತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ವಾಚ್ ಟವರ್ ಸೊಸೈಟಿಯ ಉಪಾಧ್ಯಕ್ಷರು ಒಂದು ವಾಕ್ಸರಣಿಯನ್ನು ಸಾದರ ಪಡಿಸಿದರು, ಅದು ಆಂಶಿಕವಾಗಿ ಹೇಳಿದ್ದು: “ಇಬ್ಬಗೆಯ ಮಾತಿಲ್ಲದೆ ಯಾ ಅಂಜಿಕೆಯಿಲ್ಲದೆ ನಾವು ಘೋಷಿಸುವುದೇನಂದರೆ, ಎಲ್ಲಾ ಪಾತಕದ, ಬಾಲಕರ ತಕ್ಷೀರಿನ, ದ್ವೇಷದ, ಸಂಘರ್ಷಣೆ, ಪೂರ್ವಕಲ್ಪಿತ ಅಭಿಪ್ರಾಯದ, . . . ಮತ್ತು ಬುದ್ಧಿಗೇಡಿತನದ ಗಲಿಬಿಲಿಗೆ ಮೂಲ ಕಾರಣ ತಪ್ಪು ಧರ್ಮ, ಸುಳ್ಳು ಧರ್ಮವೇ ಆಗಿದೆ; ಇದರ ಹಿಂದುಗಡೆ ಮಾನವನ ಅಗೋಚರ ಶತ್ರು, ಪಿಶಾಚನಾದ ಸೈತಾನನು ಇದ್ದಾನೆ. ಲೋಕದ ಪರಿಸ್ಥಿತಿಗೆ ಅತಿ ಹೆಚ್ಚು ಜವಾಬ್ದಾರರಾದ ಪುರುಷರು ಧಾರ್ಮಿಕ ಬೋಧಕರು ಮತ್ತು ಮುಂದಾಳುಗಳು ಆಗಿರುತ್ತಾರೆ; ಮತ್ತು ಇವರಲ್ಲಿ ಕ್ರೈಸ್ತಪ್ರಪಂಚದ ಧಾರ್ಮಿಕ ವೈದಿಕರು ಅತಿ ಹೆಚ್ಚು ದೂಷಣಾರ್ಹರು. . . . ಲೋಕ ಯುದ್ಧ Iರಿಂದ ಇವೆಲ್ಲಾ ವರುಷಗಳಲ್ಲಿ ಕ್ರೈಸ್ತಪ್ರಪಂಚದ ದೇವರ ಕಡೆಗಿನ ಸಂಬಂಧವು ಯೆರೆಮೀಯನ ದಿನಗಳ ಇಸ್ರಾಯೇಲಿಗೆ ಸಮಾನವಾಗಿದೆ. ಹೌದು, ಕ್ರೈಸ್ತಪ್ರಪಂಚವು, ಯೆರೂಸಲೇಮಿಗೆ ಸಂಭವಿಸಿದ್ದನ್ನು ಯೆರೆಮೀಯನು ನೋಡಿರುವುದಕ್ಕಿಂತಲೂ ಹೆಚ್ಚು ಭಯಂಕರವಾದ ಮತ್ತು ಧ್ವಂಸಕಾರಕ ವಿನಾಶವನ್ನು ಎದುರಿಸುತ್ತಿದೆ.”
ಸುಳ್ಳು ಬೋಧಕರ ನ್ಯಾಯತೀರ್ಪು
15. ಶಾಂತಿಯ ಯಾವ ಪ್ರವಾದನೆಗಳನ್ನು ವೈದಿಕರು ಮಾಡಿದ್ದಾರೆ? ಅವು ನೆರವೇರುವುವೋ?
15 ಈ ಎಚ್ಚರಿಕೆಯ ಹೊರತಾಗಿ, ವೈದಿಕರು ಅಂದಿನಿಂದ ಹೇಗೆ ವರ್ತಿಸಿರುತ್ತಾರೆ? ವಚನ 17 ವರದಿಮಾಡುವಂತೆಯೇ: “ನನ್ನನ್ನು ಅಸಡ್ಡೆಮಾಡುವವರಿಗೆ—ನಿಮಗೆ ಶುಭವಾಗುವದು ಎಂಬದಾಗಿ ಯೆಹೋವನು ಅಂದಿದ್ದಾನೆ ಎಂದು ಹೇಳುತ್ತಲೇ ಇದ್ದಾರೆ; ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ—ನಿಮಗೆ ಯಾವ ಕೇಡೂ ಸಂಭವಿಸದು ಎಂದು ನುಡಿಯುತ್ತಾರೆ.” ಇದು ಸತ್ಯವೋ? ಅಲ್ಲ! ವೈದಿಕರ ಈ ಪ್ರವಾದನೆಗಳ ಸುಳ್ಳನ್ನು ಯೆಹೋವನು ಬಯಲುಗೊಳಿಸುವನು. ಅವನ ಹೆಸರಿನಲ್ಲಿ ಅವರೇನು ಹೇಳುತ್ತಾರೋ ಅದನ್ನು ಅವನು ನೆರವೇರಿಸನು. ಆದಾಗ್ಯೂ, ದೇವರೊಂದಿಗಿನ ಶಾಂತಿಯ ವೈದಿಕರ ಸುಳ್ಳು ಆಶ್ವಾಸನೆಯು ಅತಿ ಮೋಸಕರವಾಗಿದೆ!
16. (ಎ) ಈ ಲೋಕದ ನೈತಿಕ ವಾತಾವರಣವು ಹೇಗಿದೆ, ಮತ್ತು ಅದರ ಜವಾಬ್ದಾರಿಯಲ್ಲಿ ಯಾರು ಪಾಲಿಗರಾಗುತ್ತಾರೆ? (ಬಿ) ಈ ಲೋಕದ ಅವನತಿಗೊಂಡಿರುವ ನೈತಿಕ ದೃಷ್ಟಿಗಳ ಕುರಿತು ಯೆರೆಮೀಯ ವರ್ಗವು ಏನು ಮಾಡುತ್ತದೆ?
16 ನೀವೆಣಿಸುತ್ತೀರೋ, ‘ವೈದಿಕರ ಸುಳ್ಳು ಬೋಧನೆಗಳಿಂದ ನಾನು ಮೋಸಗೊಳಿಸಲ್ಪಡುವುದೋ? ಎಂದಿಗೂ ಇಲ್ಲ!’ ಒಳ್ಳೇದು, ಅಷ್ಟೊಂದು ಖಚಿತವಾಗಿರಬೇಡಿರಿ! ವೈದಿಕರ ಸುಳ್ಳಾದ ಬೋಧನೆಗಳು ನಿಗೂಢವಾದ, ಭೀಕರ ನೈತಿಕ ವಾತಾವರಣವನ್ನು ಪ್ರವರ್ಧಿಸಿವೆ ಎಂದು ನೆನಪಿಡಿರಿ. ಅವರ ಸ್ವೇಚ್ಛಾಪರ ಬೋಧನೆಗಳು, ಅದು ಎಷ್ಟೇ ಅನೈತಿಕವಾಗಿರಲಿ, ಹೆಚ್ಚುಕಡಿಮೆ ಎಲ್ಲವನ್ನೂ ಸಮರ್ಥಿಸುತ್ತವೆ. ಮತ್ತು ಈ ಅವನತಿಗೊಂಡ ನೈತಿಕ ವಾತಾವರಣವು ಮನೋರಂಜನೆಯ ಎಲ್ಲಾ ಕ್ಷೇತ್ರಗಳಲ್ಲಿ, ಚಲನ ಚಿತ್ರಗಳು, ಟೀವೀ, ಪತ್ರಿಕೆಗಳು, ಮತ್ತು ಸಂಗೀತಗಳಲ್ಲೂ ಹಬ್ಬಿರುತ್ತದೆ. ಹಾಗಾದರೆ ನಾವು ಅತ್ಯಂತ ಕಟ್ಟುನಿಟ್ಟಿನ ಜಾಗ್ರತೆಯನ್ನು ವಹಿಸತಕ್ಕದ್ದು, ಇಲ್ಲದಿದ್ದರೆ ಈ ಅವನತಿಗೊಂಡಿರುವ ಆದರೆ ಕುಟಿಲವಾಗಿ ಆಕರ್ಷಿಸುವ ನೈತಿಕ ವಾತಾವರಣದ ಪ್ರಭಾವದ ಕೆಳಗೆ ನಾವು ಬಲಿಬೀಳಬಹುದು. ಯುವಜನರು ಅವನತಿಗೊಂಡ ವಿಡಿಯೋಗಳು ಮತ್ತು ಸಂಗೀತದ ಅಭ್ಯಾಸದಲ್ಲಿ ಒಳಗೂಡಸಾಧ್ಯವಿದೆ. ಏನು ಮಾಡಿದರೂ ನಡಿಯುತ್ತದೆ ಎಂಬ ಇಂದಿನ ಜನರ ಮನೋಭಾವವು ವೈದಿಕರ ಸುಳ್ಳು ಬೋಧನೆಗಳ ಮತ್ತು ದೇವರ ನೀತಿಯ ಮಟ್ಟಗಳನ್ನು ಎತ್ತಿಹಿಡಿಯಲು ಅವರ ಪರಾಜಯದ ನೇರವಾದ ಫಲವಾಗಿದೆ ಎಂಬುದನ್ನು ನೆನಪಿಡಿರಿ. ಯೆರೆಮೀಯ ವರ್ಗ ಈ ಅನೈತಿಕ ದೃಷ್ಟಿಗಳ ವಿರುದ್ಧ ಹೋರಾಡುತ್ತಿದೆ ಮತ್ತು ಕ್ರೈಸ್ತಪ್ರಪಂಚವನ್ನು ಮುತ್ತಿರುವ ಕೆಟ್ಟತನವನ್ನು ನಿರಾಕರಿಸಲು ಯೆಹೋವನ ಸೇವಕರಿಗೆ ಸಹಾಯಮಾಡುತ್ತಿದೆ.
17. (ಎ) ಯೆರೆಮೀಯನಿಗನುಸಾರ, ದುಷ್ಟ ಯೆರೂಸಲೇಮಿನ ಮೇಲೆ ಯಾವ ನ್ಯಾಯದಂಡನೆ ಬರಲಿಕ್ಕಿತ್ತು? (ಬಿ) ಕ್ರೈಸ್ತಪ್ರಪಂಚಕ್ಕೆ ಬೇಗನೆ ಏನು ಸಂಭವಿಸಲಿದೆ?
17 ಕ್ರೈಸ್ತಪ್ರಪಂಚದ ಸುಳ್ಳು ಬೋಧಕರು ಮಹಾ ನ್ಯಾಯಾಧೀಶನಾದ ಯೆಹೋವನಿಂದ ಯಾವ ನ್ಯಾಯತೀರ್ಪನ್ನು ಪಡೆಯಲಿದ್ದಾರೆ? ವಚನಗಳು 19, 20, 39, ಮತ್ತು 40 ಉತ್ತರಿಸುವುದು: “ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಸುಂಟರಗಾಳಿಯು, ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವದು. ಯೆಹೋವನು ತನ್ನ ಹೃದಯಾಲೋಚನೆಗಳನ್ನು ನಡಿಸಿ ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು; . . . ಇಗೋ, ಖಂಡಿತವಾಗಿ ನಿಮ್ಮನ್ನೂ ನಾನು ನಿಮಗೆ ಮತ್ತು ನಿಮ್ಮ ಪಿತೃಗಳಿಗೆ ದಯಪಾಲಿಸಿದ ಪಟ್ಟಣವನ್ನೂ ಭಾರವೆಂದು ಎತ್ತಿ ನನ್ನೆದುರಿನಿಂದ ಎಸೆದುಬಿಟ್ಟು ನಿತ್ಯನಿಂದೆಯನ್ನೂ ಎಂದಿಗೂ ಮರೆಯದ ಶಾಶ್ವತಾವಮಾನವನ್ನೂ ನಿಮಗೆ ಬರಮಾಡುವೆನು.” ಅದೆಲ್ಲವೂ ದುಷ್ಟ ಯೆರೂಸಲೇಮಿಗೆ ಮತ್ತು ಅದರ ದೇವಾಲಯಕ್ಕೆ ಸಂಭವಿಸಿತು, ಮತ್ತು ತದ್ರೀತಿಯ ಒಂದು ವಿಪತ್ತು ದುಷ್ಟ ಕ್ರೈಸ್ತಪ್ರಪಂಚಕ್ಕೆ ಬೇಗನೆ ಸಂಭವಿಸಲಿರುವುದು!
“ಯೆಹೋವನ ವಾಕ್ಯಭಾರವನ್ನು” ಪ್ರಕಟಿಸುವುದು
18, 19. ಯೂದಾಯಕ್ಕೆ “ಯೆಹೋವನ” ಯಾವ “ವಾಕ್ಯಭಾರವನ್ನು” ಯೆರೆಮೀಯನು ಪ್ರಕಟಿಸಿದನು, ಯಾವ ತೊಡರಿಸುವಿಕೆಗಳೊಂದಿಗೆ?
18 ಆದುದರಿಂದ, ಯೆರೆಮೀಯ ವರ್ಗದ ಮತ್ತು ಅವರ ಸಂಗಾತಿಗಳ ಜವಾಬ್ದಾರಿಯೇನು? ವಚನ 33 ನಮಗೆ ಹೇಳುವುದು: “ಪ್ರವಾದಿಯಾಗಲಿ ಯಾಜಕನಾಗಲಿ ಈ ಜನರಲ್ಲಿ ಯಾರಾಗಲಿ ಯೆಹೋವನು ದಯಪಾಲಿಸಿರುವ ವಾಕ್ಯಭಾರವೇನು ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು—ಯೆಹೋವನು ಇಂತೆನ್ನುತ್ತಾನೆ—ನೀವೇ ನನ್ನ ಭಾರ, ನಾನು ನಿಮ್ಮನ್ನು ಎಸೆದುಬಿಡುವೆನು.”
19 “ಭಾರ”ಕ್ಕಾಗಿ ಇರುವ ಹೀಬ್ರು ಶಬ್ದಕ್ಕೆ ಇಬ್ಬಗೆಯ ಅರ್ಥಗಳಿವೆ. ಇದು ತೂಕವಿರುವ ದೈವಿಕ ಉಚ್ಚರಿಸುವಿಕೆ ಯಾ ಒಬ್ಬನನ್ನು ಹೊರೆಯಾಗಿ ಮಾಡಿ, ಬಳಲಿಸುವ ಯಾವುದಾದರೂ ಒಂದು ವಿಷಯಕ್ಕೆ ಅದು ಸೂಚಿಸಬಲ್ಲದು. ಇಲ್ಲಿ “ಯೆಹೋವನ ವಾಕ್ಯಭಾರ” ಎಂಬ ವಾಕ್ಸರಣಿಯು ಒಂದು ಭಾರವಾದ ಪ್ರವಾದನೆಗೆ—ಯೆರೂಸಲೇಮ್ ನಾಶವಾಗಲಿದೆ ಎಂಬ ಘೋಷಣೆಗೆ—ಸೂಚಿಸುತ್ತದೆ. ಆದರೆ ಅಂತಹ ಭಾರವಾದ ಪ್ರವಾದನಾ ಉಚ್ಚರಿಸುವಿಕೆಗಳನ್ನು ಯೆರೆಮೀಯನು ಪದೇ ಪದೇ ಯೆಹೋವನಿಂದ ಅವರಿಗೆ ಕೊಡುವುದನ್ನು ಆಲಿಸಲು ಜನರು ಇಷ್ಟಪಟ್ಟರೋ? ಇಲ್ಲ, ಜನರು ಯೆರೆಮೀಯನಿಗೆ ಅಪಹಾಸ್ಯಮಾಡಿದರು, ‘ನಮಗೋಸ್ಕರ ಯಾವ ಪ್ರವಾದನೆ (ಭಾರ) ಈಗ ನಿನ್ನ ಹತ್ತಿರ ಇದೆ? ನಿನ್ನ ಪ್ರವಾದನೆಯು ಇನ್ನೊಂದು ಆಯಾಸಗೊಳಿಸುವ ಭಾರವಾಗಿದೆ ಎಂಬುದು ನಮಗೆ ಖಚಿತವಿದೆ!’ ಆದರೆ ಯೆಹೋವನು ಅವರಿಗೆ ಏನನ್ನು ಹೇಳಿದನು? ಇದನ್ನು: “ನೀವೇ ನನ್ನ ಭಾರ, ನಾನು ನಿಮ್ಮನ್ನು ಎಸೆದುಬಿಡುವೆನು.” ಹೌದು, ಈ ಜನರು ಯೆಹೋವನಿಗೆ ಒಂದು ಭಾರವಾಗಿದ್ದರು, ಮತ್ತು ಇನ್ನು ಹೆಚ್ಚು ಕಾಲ ಅವನಿಗೆ ಅವರು ಭಾರವಾಗಿರುವುದರಿಂದ ಅವರನ್ನು ಅವನು ತೊಲಗಿಸಲಿದ್ದನು.
20. ಇಂದು “ಯೆಹೋವನ ವಾಕ್ಯಭಾರ” ಏನಾಗಿದೆ?
20 ಇಂದು “ಯೆಹೋವನ ವಾಕ್ಯಭಾರ” ಏನಾಗಿದೆ? ಅದು ದೇವರ ವಾಕ್ಯದಿಂದ ಭಾರವಾದ ಪ್ರವಾದನಾ ಸಂದೇಶವಾಗಿದೆ. ಕ್ರೈಸ್ತಪ್ರಪಂಚದ ಸನ್ನಿಹಿತವಾಗಿರುವ ನಾಶನದ ಪ್ರಕಟಿಸುವಿಕೆಯ ದಂಡಾಜ್ಞೆಯೊಂದಿಗೆ ಅದು ಭಾರವಾಗಿದೆ. ಯೆಹೋವನ ಜನರೋಪಾದಿ, ನಮಗಾದರೋ ಈ “ಯೆಹೋವನ ವಾಕ್ಯಭಾರವನ್ನು” ಘೋಷಿಸುವ ಗಂಭೀರವಾದ ಜವಾಬ್ದಾರಿಯು ಇದೆ. ಅಂತ್ಯವು ಹತ್ತರಿಸುತ್ತಿರುವಂತೆಯೇ, ಕ್ರೈಸ್ತಪ್ರಪಂಚದ ಹಟಮಾರಿತನದ ಜನರು ಯೆಹೋವ ದೇವರಿಗೆ ಒಂದು “ಭಾರ” ಹೌದು “ಎಂತಹ ಒಂದು ಭಾರ!” ವಾಗಿದ್ದಾರೆ. (NW), ಮತ್ತು ಕ್ರೈಸ್ತಪ್ರಪಂಚವನ್ನು ವಿನಾಶಕ್ಕೆ ತಳ್ಳುವುದರ ಮೂಲಕ ಈ “ಭಾರವನ್ನು” ತನ್ನಿಂದ ಬಲುಬೇಗನೆ ಅವನು ತೊಲಗಿಸಲಿರುವನು ಎಂದು ನಾವು ಎಲ್ಲರಿಗೆ ಹೇಳಬೇಕಾಗಿದೆ.
21. (ಎ) ಸಾ.ಶ.ಪೂ. 607 ರಲ್ಲಿ ಯೆರೂಸಲೇಮ್ ಯಾಕೆ ನಾಶಗೊಳಿಸಲ್ಪಟ್ಟಿತ್ತು? (ಬಿ) ಯೆರೂಸಲೇಮಿನ ನಾಶನದ ಅನಂತರ, ಸುಳ್ಳು ಪ್ರವಾದಿಗಳಿಗೆ ಮತ್ತು ಯೆಹೋವನ ನಿಜ ಪ್ರವಾದಿಗೆ ಏನು ಸಂಭವಿಸಿತು, ಇದು ಇಂದು ನಮಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ?
21 ಬೆಬಿಲೋನ್ಯರು ಸಾ.ಶ.ಪೂ. 607 ರಲ್ಲಿ ಯೆರೂಸಲೇಮನ್ನು ನಾಶಮಾಡಿದಾಗ, ಯೆರೆಮೀಯನ ದಿನಗಳಲ್ಲಿ ಯೆಹೋವನ ನ್ಯಾಯತೀರ್ಪು ಜಾರಿಗೊಳಿಸಲ್ಪಟ್ಟಿತು. ಪ್ರವಾದಿಸಲ್ಪಟ್ಟಂತೆ, ಆ ಮೊಂಡುತನದ, ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಅದೊಂದು ‘ನಿಂದೆ ಮತ್ತು ಅವಮಾನ’ ವಾಗಿತ್ತು. (ಯೆರೆಮೀಯ 23:39, 40) ಯಾರನ್ನು ಅವರು ಪದೇ ಪದೇ ಅಗೌರವಿಸಿದ್ದರೋ ಆ ಯೆಹೋವನು ಅವರ ದುಷ್ಟತನದ ಫಲಿತಾಂಶಗಳಿಗೆ ಅವರನ್ನು ಕಟ್ಟಕಡೆಗೆ ತೊರೆದಿದ್ದಾನೆ ಎಂದು ಅದು ಅವರಿಗೆ ತೋರಿಸಿತು. ಅವರ ಅಹಂಭಾವದ ಸುಳ್ಳು ಪ್ರವಾದಿಗಳ ಬಾಯಿಗಳು ಕಟ್ಟಕಡೆಗೂ ಸ್ತಬ್ಧಗೊಳಿಸಲ್ಪಟ್ಟವು. ಆದರೆ ಯೆರೆಮೀಯನ ಬಾಯಿ ಪ್ರವಾದಿಸುವುದನ್ನು ಮುಂದರಿಸಿತು. ಯೆಹೋವನು ಅವನನ್ನು ತೊರೆಯಲಿಲ್ಲ. ಈ ನಮೂನೆಗೆ ನೈಜತೆಯಲ್ಲಿ, ಅವನ ಭಾರವಾದ ನ್ಯಾಯತೀರ್ಮಾನವು ಕ್ರೈಸ್ತಪ್ರಪಂಚದ ವೈದಿಕರ ಮತ್ತು ಅವರ ಸುಳ್ಳುಗಳನ್ನು ನಂಬಿದವರ ಜೀವವನ್ನು ಜಜ್ಜಿಬಿಡುವಾಗ, ಯೆಹೋವನು ಯೆರೆಮೀಯ ವರ್ಗವನ್ನು ತೊರೆಯುವದಿಲ್ಲ.
22. ಯೆಹೋವನ ನ್ಯಾಯತೀರ್ಪುಗಳಿಂದ ಕ್ರೈಸ್ತಪ್ರಪಂಚವು ಯಾವ ಸ್ಥಿತಿಗೆ ತರಲ್ಪಡುವುದು?
22 ಹೌದು, ತನ್ನ ಐಶ್ವರ್ಯವನ್ನು ಕಳೆದುಕೊಂಡು, ಅವಮಾನಕರವಾಗಿ ರೀತಿಯಲ್ಲಿ ಬಯಲುಗೊಳಿಸಲ್ಪಟ್ಟ ಅನಂತರ, ಧಾರ್ಮಿಕ ಕ್ರೈಸ್ತಪ್ರಪಂಚವೆಂಬಾಕೆ, ಸಾ.ಶ.ಪೂ. 607ರ ಅನಂತರ ಯೆರೂಸಲೇಮಿನ ನಿರ್ಜನಗೊಂಡ, ಅನಿವಾಸಿತವಾದ ಪರಿಸ್ಥಿತಿಯಷ್ಟೇ ನಿಷ್ಕೃಷ್ಟವಾಗಿ ತೋರಿಬರುವಳು. ಸುಳ್ಳು ಬೋಧಕರ ವಿರುದ್ಧ ಯೆಹೋವನು ವಿಧಿಸಿದ ಅರ್ಹವಾದ ನ್ಯಾಯತೀರ್ಪು ಇದಾಗಿದೆ. ಆ ನ್ಯಾಯತೀರ್ಪು ಪರಾಜಯಗೊಳ್ಳುವದಿಲ್ಲ. ಗತಕಾಲದಲ್ಲಿ ಯೆರೆಮೀಯನ ದೇವಪ್ರೇರಿತ, ಎಚ್ಚರಿಕೆಗಳೆಲ್ಲವೂ ಸತ್ಯವಾದಂತೆ, ಅವುಗಳ ಆಧುನಿಕ ದಿನದ ನೆರವೇರಿಕೆಯಲ್ಲಿ ಅವು ಸತ್ಯವಾಗಲಿರುವುವು. ಆದುದರಿಂದ, ನಾವು ಯೆರೆಮೀಯನಂತೆ ಇರೋಣ. ಎಲ್ಲಾ ಜನಾಂಗಗಳಿಗೆ ಯೆಹೋವನ ಪ್ರವಾದನಾ ಭಾರವನ್ನು ನಾವು ನಿರ್ಭೀತಿಯಿಂದ ಪ್ರಚುರಪಡಿಸೋಣ, ಆ ಮೂಲಕ ಅವನ ನೀತಿಯ ನ್ಯಾಯತೀರ್ಪಿನ ಪೂರ್ಣ ಭಾರವು ಸುಳ್ಳು ಧಾರ್ಮಿಕ ಬೋಧಕರೆಲ್ಲರ ಮೇಲೆ ಯಾಕೆ ಬರುತ್ತದೆ ಎಂದು ಅವರು ತಿಳಿದುಕೊಳ್ಳುವರು!
ಪರಾಮರ್ಶೆಯ ಪ್ರಶ್ನೆಗಳು
▫ ಯೆಹೋವನ ದೃಷ್ಟಿಕೋನದಿಂದ ಪುರಾತನ ಯೆರೂಸಲೇಮ್ ಎಷ್ಟು ಕೆಟ್ಟದ್ದಾಗಿತ್ತು?
▫ ಯಾವ ರೀತಿಗಳಲ್ಲಿ ಕ್ರೈಸ್ತಪ್ರಪಂಚವು ‘ಮೋಸತನದಲ್ಲಿ ನಡೆದಿದೆ’?
▫ ಆಧುನಿಕ ದಿನದ ವೈದಿಕರ ದೂಷಣಾರ್ಹತೆಯು ಹೇಗೆ ಬಯಲುಗೊಳಿಸಲ್ಪಟ್ಟಿದೆ?
▫ ಈಗ ಸಾರಲ್ಪಡುತ್ತಿರುವ “ಯೆಹೋವನ ವಾಕ್ಯಭಾರ” ಏನಾಗಿದೆ?
[ಪುಟ 8 ರಲ್ಲಿರುವ ಚಿತ್ರ]
ಯೆರೆಮೀಯನು “ಘೋರ ಸಂಗತಿಗಳನ್ನು” ಬಯಲುಗೊಳಿಸಿದನು
[ಪುಟ 9 ರಲ್ಲಿರುವ ಚಿತ್ರ]
“ಸ್ವಂತ ಹೃದಯಕ್ಕೆ ಹೊಳೆದದ್ದನ್ನೇ ಹೇಳುತ್ತಾರೆ”
[ಪುಟ 10 ರಲ್ಲಿರುವ ಚಿತ್ರ]
ಅದರ ನಾಶನದ ನಂತರದ ಯೆರೂಸಲೇಮ್ ಕ್ರೈಸ್ತಪ್ರಪಂಚದ ಕೊನೆಯ ಗತಿಯನ್ನು ಉದಾಹರಿಸುತ್ತದೆ