ಜನಾಂಗಗಳೊಂದಿಗೆ ಯೆಹೋವನ ವ್ಯಾಜ್ಯ
“ಶಬ್ದವು ಭೂಮಿಯ ಕಟ್ಟಕಡೆಯ ವರೆಗೆ ವ್ಯಾಪಿಸುವದು; ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ.”—ಯೆರೆಮೀಯ 25:31.
1, 2. (ಎ) ಅರಸ ಯೋಷೀಯನ ಮರಣಾನಂತರ ಯೆಹೂದದಲ್ಲಿ ಏನು ಸಂಭವಿಸಿತು? (ಬಿ) ಯೆಹೂದದ ಕೊನೆಯ ಅರಸನು ಯಾರು, ಮತ್ತು ಅವನು ತನ್ನ ಅಪನಂಬಿಗಸ್ತಿಕೆಗಾಗಿ ಹೇಗೆ ಬಾಧೆಪಟ್ಟನು?
ಯೆಹೂದ ದೇಶವು ವ್ಯವಹರಿಸಲು ಕಠಿನವಾದ ಸಮಯಗಳಿಂದ ಎದುರಿಸಲ್ಪಟ್ಟಿತ್ತು. ಒಬ್ಬ ಒಳ್ಳೇ ಅರಸನಾಗಿದ್ದ ಯೋಷೀಯನು ಯೆಹೋವನ ಉರಿಯುತ್ತಿರುವ ರೋಷವನ್ನು ತಾತ್ಕಾಲಿಕವಾಗಿ ತಡೆಹಿಡಿದನು. ಆದರೆ ಯೋಷೀಯನು ಸಾ.ಶ.ಪೂ. 629 ರಲ್ಲಿ ಕೊಲ್ಲಲ್ಪಟ್ಟಾಗ, ಏನು ಅನುಸರಿಸಿ ಬಂತು? ಅವನ ಉತ್ತರಾಧಿಕಾರಿಗಳಾಗಿ ಬಂದ ಅರಸರು ಯೆಹೋವನನ್ನು ಅಗೌರವಿಸಿದರು.
2 ಯೋಷೀಯನ ನಾಲ್ಕನೆಯ ಮಗನಾದ, ಯೆಹೂದದ ಕೊನೆಯ ಅರಸ ಚಿದ್ಕೀಯನು, 2 ಅರಸುಗಳು 24:19 ರಲ್ಲಿ ಹೇಳಿದಂತೆ, “ಯೆಹೋಯಾಕೀಮನಂತೆ [ಅವನ ಅಣ್ಣನು] ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿ” ಮುಂದುವರಿದನು. ಫಲಿತಾಂಶ? ಯೆರೂಸಲೇಮಿನ ವಿರುದ್ಧವಾಗಿ ನೆಬೂಕದ್ನೆಚ್ಚರನು ಬಂದನು, ಚಿದ್ಕೀಯನನ್ನು ಸೆರೆಹಿಡಿದನು, ಅವನ ಕಣ್ಣುಗಳ ಮುಂದೆಯೇ ಅವನ ಪುತ್ರರನ್ನು ಹತಿಸಿದನು, ಅವನನ್ನು ಕುರುಡನನ್ನಾಗಿ ಮಾಡಿದನು, ಮತ್ತು ಅವನನ್ನು ಬಾಬೆಲಿಗೆ ಕೊಂಡೊಯ್ದನು. ಇನ್ನೂ ಹೆಚ್ಚಾಗಿ, ಯೆಹೋವನ ಆರಾಧನೆಯಲ್ಲಿ ಬಳಸಲಾದ ಪಾತ್ರೆಗಳನ್ನು ಕೊಳ್ಳೆಯೋಪಾದಿ ಬೆಬಿಲೋನ್ಯರು ಸ್ವಾಧೀನಪಡಿಸಿಕೊಂಡರು, ದೇವಾಲಯವನ್ನು ಮತ್ತು ನಗರವನ್ನು ಬೆಂಕಿಗಾಹುತಿಮಾಡಿದರು. ಪಾರಾದವರು ಬಾಬೆಲಿಗೆ ಸೆರೆಯವರಾಗಿ ಹೋದರು.
3. ಸಾ.ಶ.ಪೂ. 607 ರಲ್ಲಿ ಯೆರೂಸಲೇಮಿನ ನಾಶನದೊಂದಿಗೆ ಯಾವ ಸಮಯಾವಧಿಯು ಆರಂಭಗೊಂಡಿತು, ಮತ್ತು ಆ ಸಮಯಾವಧಿಯ ಅಂತ್ಯದಲ್ಲಿ ಏನು ಸಂಭವಿಸಲಿಕ್ಕಿತ್ತು?
3 ಆ ವರ್ಷವು, ಸಾ.ಶ.ಪೂ. 607, ಯೆರೂಸಲೇಮಿನ ಕೊನೆಯ ಧ್ವಂಸವನ್ನು ಗುರುತಿಸಿತು ಮಾತ್ರವಲ್ಲ, ಲೂಕ 21:24 ರಲ್ಲಿ [NW] ಸೂಚಿಸಲ್ಪಟ್ಟ “ಅನ್ಯ ಜನಾಂಗಗಳ ನೇಮಿತ ಸಮಯಗಳ” ಪ್ರಾರಂಭವನ್ನು ಕೂಡ ಗುರುತಿಸಿತು. ಈ 2,520 ವರ್ಷ ಅವಧಿಯು ನಮ್ಮ ಶತಮಾನದ 1914 ನೆಯ ವರ್ಷದಲ್ಲಿ ಅಂತ್ಯಗೊಂಡಿತು. ಅಷ್ಟರೊಳಗೆ ಯೆಹೋವನು ಅವನ ಸಿಂಹಾಸನಾಸೀನನಾಗಿರುವ ಪುತ್ರನೂ, ನೆಬೂಕದ್ನೆಚ್ಚರನಿಗಿಂತಲೂ ಮಹಾನ್ ಆಗಿರುವ ಯೇಸು ಕ್ರಿಸ್ತನ ಮೂಲಕ ಭ್ರಷ್ಟ ಲೋಕದ ಮೇಲೆ ನ್ಯಾಯತೀರ್ಪನ್ನು ಉಚ್ಚರಿಸಲು ಮತ್ತು ಜ್ಯಾರಿಗೊಳಿಸಲು ಸಮಯವು ಬಂದಿತ್ತು. ಈ ನ್ಯಾಯತೀರ್ಪು ಮಾಡುವಿಕೆಯು ಆಧುನಿಕ ದಿನದ ಯೆಹೂದಕ್ಕೆ ಸಮಾನಾರ್ಥಕವಾಗಿರುವದರೊಂದಿಗೆ, ಭೂಮಿಯ ಮೇಲೆ ದೇವರನ್ನು ಮತ್ತು ಕ್ರಿಸ್ತನನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವ ಸಮಾನಾರ್ಥಕದೊಂದಿಗೆ ಆರಂಭಗೊಳ್ಳುತ್ತದೆ.
4. ಯೆರೆಮೀಯನ ಪ್ರವಾದನೆಯ ಸಂಬಂಧದಲ್ಲಿ ಯಾವ ಪ್ರಶ್ನೆಗಳು ಈಗ ಎಬ್ಬಿಸಲ್ಪಟ್ಟಿವೆ?
4 ಅವಳ ಅರಸುಗಳ ಕೆಳಗೆ ಯೆಹೂದವೆಂಬಾಕೆಯ ಕೊನೆಯ ವರುಷಗಳ ಸಮಯಾವಧಿಯ ಸಂಕ್ಷೋಭೆಯ—ನೆರೆರಾಜ್ಯಗಳೊಳಗೆ ಸಹ ವಿನಾಶಕಾರೀ ಘಟನೆಗಳು ಬಾಧಿಸುವುದರೊಂದಿಗೆ—ಮತ್ತು ಇಂದಿನ ಕ್ರೈಸ್ತಪ್ರಪಂಚದ ಸಂಕ್ಷೋಭೆಯ ನಡುವೆ ಒಂದು ಸಮಾನಾಂತರವನ್ನು ನಾವು ಕಾಣುತ್ತೇವೋ? ನಾವು ನೋಡೋಣ.
5, 6. (ಎ) ಇಸವಿ 1914 ರಿಂದ, ಕ್ರೈಸ್ತಪ್ರಪಂಚದಲ್ಲಿನ ಸನ್ನಿವೇಶವು ಯೆಹೂದದ ನಾಶನದ ಸ್ವಲ್ಪ ಮುಂಚಿನದಕ್ಕೆ ಹೇಗೆ ತುಲನೆಯಾಗುತ್ತದೆ? (ಬಿ) ಕ್ರೈಸ್ತಪ್ರಪಂಚಕ್ಕೆ ಆಧುನಿಕ ಯೆರೆಮೀಯನು ಯಾವ ಸಂದೇಶವನ್ನು ಕೊಂಡೊಯ್ದಿದ್ದಾನೆ?
5 ಬ್ರಿಟಿಷ್ ಗಣಿತಜ್ಞ ಮತ್ತು ತ್ತತ್ವ ಜ್ಞಾನಿ ಬರ್ಟ್ರಂಡ್ ರಸ್ಸೆಲ್ ಸುಮಾರು 40 ವರ್ಷಗಳ ಹಿಂದೆ ಹೇಳಿಕೆಯನ್ನಿತ್ತದ್ದು: “ಇಸವಿ 1914 ರಿಂದೀಚೆಗೆ, ಲೋಕದಲ್ಲಿನ ಪ್ರವೃತ್ತಿಗಳ ಪ್ರಜ್ಞೆಯುಳ್ಳ ಪ್ರತಿಯೊಬ್ಬರೂ, ಇನ್ನಷ್ಟು ಹೆಚ್ಚಿನ ವಿಪತ್ತಿನ ಕಡೆಗಿನ ವಿಧಿಲಿಖಿತವಾದ ಯಾ ಪೂರ್ವನಿಶ್ಚಿತವಾದ ನಡಗೆಯೋ ಎಂಬಂತೆ ತೋರುತ್ತಿರುವಂಥದರಿಂದ ಆಳವಾಗಿ ತೊಂದರೆಗೊಳಗಾಗಿದ್ದಾರೆ.” ಮತ್ತು ಜರ್ಮನಿಯ ರಾಜ್ಯನೀತಿಜ್ಞರಾದ ಕೋನ್ರಡ್ ಎಡೆನರ್ರು ಹೇಳಿದ್ದು: “ಭದ್ರತೆ ಮತ್ತು ನೆಮ್ಮದಿಯು 1914 ರಿಂದ ಮಾನವರ ಜೀವಿತಗಳಿಂದ ಮಾಯವಾಗಿ ಹೋಗಿದೆ.”
6 ಇಂದು, ಯೆರೆಮೀಯನ ದಿನಗಳಂತೆ, ಗಮನಾರ್ಹವಾಗಿ ಈ ಶತಕದ ಎರಡು ಲೋಕ ಯುದ್ಧಗಳ ಮೂಲಕ ನಿರಪರಾಧಿ ರಕ್ತದ ಸಾಗರಗಳ ಸುರಿಯುವಿಕೆಯಿಂದ, ವಿಷಯಗಳ ವ್ಯವಸ್ಥೆಯ ಅಂತ್ಯದ ಸಮೀಪಿಸುವಿಕೆಯು ಗುರುತಿಸಲ್ಪಟ್ಟಿದೆ. ಈ ಯುದ್ಧಗಳು ಅಧಿಕಾಂಶವಾಗಿ, ಬೈಬಲಿನ ದೇವರನ್ನು ಆರಾಧಿಸುತ್ತೇವೆ ಎಂದು ಹೇಳಿಕೊಳ್ಳುವ ಕ್ರೈಸ್ತಪ್ರಪಂಚದ ರಾಷ್ಟ್ರಗಳಿಂದ ಹೋರಾಡಲ್ಪಟ್ಟವು. ಎಂತಹ ಕಪಟತನ! ಅವರಿಗೆ ಯೆರೆಮೀಯ 25:5, 6ರ ಮಾತುಗಳಂತೆ, ಹೀಗನ್ನುತ್ತಾ ತನ್ನ ಸಾಕ್ಷಿಗಳನ್ನು ಅವರ ಬಳಿಗೆ ಯೆಹೋವನು ಕಳುಹಿಸಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ: “ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ, ನಿಮಗೆ ಶಾಶ್ವತ ಸ್ವಾಸ್ತ್ಯವಾಗಿರಲಿ . . . ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸದಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡೆನು.”
7. ಯೆಹೋವನ ಎಚ್ಚರಿಕೆಗಳನ್ನು ಕ್ರೈಸ್ತಪ್ರಪಂಚವು ಅಲಕ್ಷಿಸಿದೆ ಎನ್ನುವದಕ್ಕೆ ಯಾವ ಪುರಾವೆ ಇದೆ?
7 ಆದಾಗ್ಯೂ, ಕ್ರೈಸ್ತಪ್ರಪಂಚದ ಜನಾಂಗಗಳು ಹಿಂದಿರುಗಿ ಬರಲು ತಪ್ಪಿರುತ್ತಾರೆ. ಕೊರಿಯ ಮತ್ತು ವಿಯೆಟ್ನಾಮ್ನಲ್ಲಿ ಯುದ್ಧ ದೇವತೆಗೆ ಇನ್ನಷ್ಟು ಯಜ್ಞಗಳನ್ನು ಅವರು ಅರ್ಪಿಸುವುದರಲ್ಲಿ ಇದು ಪ್ರದರ್ಶಿಸಲ್ಪಟ್ಟಿದೆ. ಮತ್ತು ಅವರು ಮೃತ್ಯುವಿನ ವರ್ತಕರಿಗೆ, ಶಸ್ತ್ರಾಸ್ತ್ರ ಉತ್ಪಾದಕರಿಗೆ, ಆರ್ಥಿಕ ಸಹಾಯ ಕೊಡುವುದನ್ನು ಮುಂದರಿಸುತ್ತಾ ಇದ್ದಾರೆ. ಕ್ರೈಸ್ತಪ್ರಪಂಚದ ದೇಶಗಳು 1980ರ ದಶಕದಲ್ಲಿ ಪ್ರತಿವರ್ಷ ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚುಕಡಿಮೆ ಒಂದು ಲಕ್ಷ ಕೋಟಿ ಡಾಲರುಗಳಲ್ಲಿ ಅಧಿಕಾಂಶ ಭಾಗವನ್ನು ಕೊಟ್ಟಿವೆ. ಇಸವಿ 1951 ರಿಂದ 1991ರ ತನಕ, ಅಮೆರಿಕ ಒಂದರ ಮಿಲಿಟರಿ ವೆಚ್ಚವು ಎಲ್ಲಾ ಅಮೆರಿಕನ್ ಕಾರ್ಪರೇಷನ್ಗಳ ಒಟ್ಟು ನಿವಳ್ವ ಆದಾಯವನ್ನು ಮೀರಿತ್ತು. ಉದ್ಘೋಷಿಸಲ್ಪಟ್ಟ ಶೀತಲ ಯುದ್ಧದ ಅಂತ್ಯದಂದಿನಿಂದ, ಚಾಲ್ತಿಯಲ್ಲಿಲ್ಲದ ನ್ಯೂಕ್ಲಿಯರ್ ಶಸ್ತ್ರಗಳಲ್ಲಿ ಕಡಿತ ಮಾಡಲಾಗಿದೆ, ಆದರೆ ಹೆಚ್ಚು ಮಾರಕವಾದ ಶಸ್ತ್ರಗಳ ಭಾರೀ ಸಂಗ್ರಹಾಲಯಗಳು ಇನ್ನೂ ಇವೆ ಮತ್ತು ಪ್ರಗತಿಮಾಡಲ್ಪಡುತ್ತಾ ಇವೆ. ಒಂದಾನೊಂದು ದಿನ ಇವುಗಳು ಬಳಸಲ್ಪಡಬಹುದು.
ಕ್ರೈಸ್ತಪ್ರಪಂಚದ ವಿಷಯಲೋಲುಪತೆಯ ಕ್ಷೇತ್ರದ ವಿರುದ್ಧ ನ್ಯಾಯತೀರ್ಪು
8. ಯೆರೆಮೀಯ 25:8, 9ರ ಮಾತುಗಳು ಕ್ರೈಸ್ತಪ್ರಪಂಚದಲ್ಲಿ ಹೇಗೆ ನೆರವೇರಲಿರುವುವು?
8 ನೀತಿಯ ಕ್ರೈಸ್ತ ಮಟ್ಟಗಳಿಗೆ ಜೀವಿಸುವುದರಲ್ಲಿ ತಪ್ಪಿಹೋಗಿರುವ ಕ್ರೈಸ್ತಪ್ರಪಂಚಕ್ಕೆ ಯೆರೆಮೀಯ 25:8, 9 ರಲ್ಲಿರುವ ಯೆಹೋವನ ಹೆಚ್ಚಿನ ಮಾತುಗಳು ಈಗ ನಿರ್ದಿಷ್ಟವಾಗಿ ಅನ್ವಯಿಸುತ್ತವೆ: “ಹೀಗಿರಲು ಸೇನಾಧೀಶ್ವರನಾದ ಯೆಹೋವನ ಈ ನುಡಿಯನ್ನು ಕೇಳಿರಿ—ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ನಾನು ಬಡಗಣ ಜನಾಂಗಗಳನ್ನೆಲ್ಲಾ ಕರೆಯಿಸಿ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡಿ ಇವರೆಲ್ಲರನ್ನು ಈ ದೇಶದ ಮೇಲೂ ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ ಅವುಗಳನ್ನು ತುಂಬಾ ಹಾಳುಗೈದು ಬೆರಗಿನ ಸಿಳ್ಳಿಗೆ ಗುರಿಪಡಿಸಿ ನಿತ್ಯನಾಶನಕ್ಕೆ ಈಡುಮಾಡುವೆನು.” ಹೀಗೆ, ಮಹಾ ಸಂಕಟವು ದೇವರ ಜನರೆಂದು ಹೇಳಿಕೊಳ್ಳುವ ಕ್ರೈಸ್ತಪ್ರಪಂಚದೊಂದಿಗೆ ಆರಂಭಿಸಿ, ಕೊನೆಗೆ ಭೂವ್ಯಾಪಕವಾಗಿ, ‘ಸುತ್ತಲಿನ ಸಕಲ ಜನಾಂಗಗಳ ಮೇಲೂ’ ವಿಸ್ತರಿಸಲ್ಪಡುವುದು.
9. ನಮ್ಮ ದಿನಗಳಲ್ಲಿ ಕ್ರೈಸ್ತಪ್ರಪಂಚದ ಆತ್ಮಿಕ ಸ್ಥಿತಿಯು ಯಾವ ರೀತಿಗಳಲ್ಲಿ ಹೆಚ್ಚು ಕೆಟ್ಟದ್ದಾಗಿದೆ?
9 ಕ್ರೈಸ್ತಪ್ರಪಂಚದಲ್ಲಿ ಬೈಬಲಿಗೆ ಮನ್ನಣೆಯನ್ನೀಯುತ್ತಿದ್ದ, ವಿವಾಹ ಮತ್ತು ಕುಟುಂಬ ಜೀವನವು ಬಹುತೇಕ ಸಂತೋಷದ ಒಂದು ಮೂಲವೆಂದು ಸಾರ್ವತ್ರಿಕವಾಗಿ ದೃಷ್ಟಿಸಲ್ಪಡುತ್ತಿದ್ದ, ಜನರು ಬೇಗನೆ ಎದ್ದು ತಮ್ಮ ದೈನಿಕ ಕೆಲಸಗಳಲ್ಲಿ ಪೂರೈಕೆಯನ್ನು ಕಂಡುಕೊಳ್ಳುತ್ತಿದ್ದ ಒಂದು ಸಮಯವು ಇತ್ತು. ಸಾಯಂಕಾಲದ ದೀಪದ ಬೆಳಕಿನಲ್ಲಿ ದೇವರ ವಾಕ್ಯವನ್ನು ಓದುವದರಲ್ಲಿ ಮತ್ತು ಅಧ್ಯಯನಿಸುವುದರಲ್ಲಿ ಅನೇಕರು ಸ್ವತಃ ಉಲ್ಲಾಸಿತರಾಗುತ್ತಿದ್ದರು. ಆದರೆ ಇಂದು, ಲೈಂಗಿಕ ಸ್ವೇಚ್ಛಾಚಾರ, ವಿವಾಹವಿಚ್ಛೇದನ, ಮಾದಕೌಷಧಗಳ ದುರುಪಯೋಗ ಮತ್ತು ಕುಡಿಕತನ, ಬಾಲಕರ ತಕ್ಷೀರು, ದುರಾಶೆ, ಆಲಸ್ಯ ಕೆಲಸ ಹವ್ಯಾಸಗಳು, ಟೀವೀ ಚಟ—ಇಂತಹ ಮತ್ತು ಇತರ ದುಶ್ಚಟಗಳು ಭೀತಿಗೊಳಿಸುವ ಮಟ್ಟದಲ್ಲಿ ಜೀವನವನ್ನು ಭ್ರಷ್ಟಗೊಳಿಸಿವೆ. ಕ್ರೈಸ್ತಪ್ರಪಂಚದ ಸ್ವೇಚ್ಛಾ ಪ್ರವೃತ್ತಿಯ ಕ್ಷೇತ್ರದ ಮೇಲೆ ಯೆಹೋವ ದೇವರು ಬೇಗನೆ ಜಾರಿಗೊಳಿಸಲಿರುವ ವಿಧ್ವಂಸಕತೆಗೆ ಇದು ಪೂರ್ವಭಾವಿಯಾಗಿ ಇದೆ.
10. ಯೆಹೋವನ ನ್ಯಾಯತೀರ್ಪುಗಳ ಜಾರಿಗೊಳಿಸುವಿಕೆಯ ನಂತರ ಕ್ರೈಸ್ತಪ್ರಪಂಚದ ಸ್ಥಿತಿಯನ್ನು ವರ್ಣಿಸಿರಿ.
10 ನಾವು ಯೆರೆಮೀಯ ಅಧ್ಯಾಯ 25, ವಚನಗಳು 10 ಮತ್ತು 11 ರಲ್ಲಿ ಓದುವಂತೆ, ಯೆಹೋವನು ಘೋಷಿಸುವುದು: “ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ ವಧೂವರರ ಸರ್ವವನ್ನೂ ಬೀಸುವ ಕಲ್ಲಿನ ಸದ್ದನ್ನೂ ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು. ಈ ದೇಶವೆಲ್ಲಾ ಹಾಳಾಗಿ ಬೆರಗಿಗೆ ಈಡಾಗುವದು.” ಕ್ರೈಸ್ತಪ್ರಪಂಚದ ಬಲಾಢ್ಯವಾದ ದೇವಾಲಯಗಳು ಮತ್ತು ಸುಖಭೋಗದ ಅರಮನೆಗಳು ಅವುಗಳ ವಿನಾಶದಲ್ಲಿ ಕುಸಿದುಬೀಳುತ್ತಿರುವಾಗ, ಅದು ಖಂಡಿತವಾಗಿಯೂ ಒಂದು ಬೆರಗುಗೊಳ್ಳುವ ಸಂಗತಿಯಾಗಲಿರುವುದು. ಈ ನಾಶನವು ಎಷ್ಟು ವ್ಯಾಪಕವಾಗಲಿರುವುದು? ಯೆರೆಮೀಯನ ದಿನಗಳಲ್ಲಿ ಯೆಹೂದದ ಮತ್ತು ಅದರ ಸುತ್ತಲಿನ ಜನಾಂಗಗಳ ವಿಧ್ವಂಸತೆಯು 70 ವರುಷಗಳ ತನಕ ಬಾಳಿತು, ಇದನ್ನು ಕೀರ್ತನೆ 90:10 ಒಬ್ಬನ ಪ್ರತಿನಿಧಿರೂಪದ ಜೀವಮಾನಕಾಲವೆಂದು ವರ್ಣಿಸುತ್ತದೆ. ಇಂದು ಯೆಹೋವನ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯು ಸಂಪೂರ್ಣವೂ, ಶಾಶ್ವತವೂ ಆಗಿರುವುದು.
ಮಹಾ ಬಾಬೆಲಿನ ವಿರುದ್ಧ ನ್ಯಾಯತೀರ್ಪು
11. ಕ್ರೈಸ್ತಪ್ರಪಂಚವನ್ನು ನಾಶಗೊಳಿಸುವುದರಲ್ಲಿ ಯಾರು ಸಾಧನವಾಗಿರುವರು? ಯಾಕೆ?
11 ಪ್ರಕಟನೆ 17:12-17 (NW) ರಲ್ಲಿ ಮುಂತಿಳಿಸಿದಂತೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಧ್ವಂಸಗೊಳಿಸುವ “ತನ್ನ ವಿಚಾರವನ್ನು” “ಹತ್ತು ಕೊಂಬು” ಗಳಾದ ಸಂಯುಕ್ತ ರಾಷ್ಟ್ರ ಸಂಘದ ಮಿಲಿಟರಿಸಜ್ಜಿತ ಸದಸ್ಯರುಗಳ ಹೃದಯಗಳಲ್ಲಿ ಹಾಕುವ ಮೂಲಕ ಯೆಹೋವನು ತನ್ನ ಅಪೂರ್ವ ಕೃತ್ಯವನ್ನಾರಂಭಿಸುವಾಗ, ಆ ಸಮಯವು ಬರುವುದು. ಆದರೆ ಇದು ಹೇಗೆ ಸಂಭವಿಸಲಿರುವುದು? ಪ್ರಕಟನೆ 17 ನೆಯ ಅಧ್ಯಾಯದ 16 ನೆಯ ವಚನದ ಮಾತುಗಳಿಗನುಸಾರ, “ಹತ್ತು ಕೊಂಬುಗಳು” “ಜಾರಸ್ತ್ರೀಯನ್ನು ದ್ವೇಷಿಸಿ . . . ಅವಳನ್ನು ಬೆಂಕಿಯಿಂದ ಸುಟ್ಟುಬಿಡುವ” ಅನೇಕ ಮಾರ್ಗಗಳಿರಬಹುದು. ಭೂಮಿಯ ಮೇಲೆ ನ್ಯೂಕ್ಲಿಯರ್ ಶಸ್ತ್ರಗಳು ಸಂಖ್ಯೆಯಲ್ಲಿ ಬಹಳವಾಗಿ ಬೆಳೆದಿವೆ ಮತ್ತು ಭೂಮಿಯ ಇನ್ನೂ ಅನೇಕ ಯುದ್ಧಸನ್ನಿಹಿತ ಸ್ಥಳಗಳಲ್ಲಿ ಬೆಳೆಯುತ್ತಾ ಇವೆ, ನಿಜ. ಆದರೆ ತನ್ನ ಪ್ರತೀಕಾರವನ್ನು ಜಾರಿಗೊಳಿಸಲು ರಾಜಕೀಯ ಅಧಿಪತಿಗಳ ಹೃದಯಗಳಲ್ಲಿ ಅದನ್ನು ಯೆಹೋವನು ಹೇಗೆ ಹಾಕಲಿದ್ದಾನೆ ಎಂದು ನಾವು ಕಾದುಕೊಂಡು ನೋಡಬೇಕಾಗಿದೆ.
12. (ಎ) ಯೆರೂಸಲೇಮನ್ನು ಅವಳು ನಾಶಗೊಳಿಸಿದ ನಂತರ ಬಾಬೆಲೆಂಬಾಕೆಗೆ ಏನು ಸಂಭವಿಸಿತು? (ಬಿ) ಕ್ರೈಸ್ತಪ್ರಪಂಚದ ನಾಶನದ ನಂತರ ಜನಾಂಗಗಳಿಗೆ ಏನು ಸಂಭವಿಸಲಿದೆ?
12 ಪ್ರಾಚೀನ ಸಮಯಗಳಲ್ಲಿ, ಯೆಹೋವನ ಉರಿಯುತ್ತಿರುವ ರೋಷದ ಅನುಭವ ಪಡೆಯುವುದು ಬಾಬೆಲಿನ ಸರದಿಯಾಗಿತ್ತು. ತದ್ರೀತಿಯಲ್ಲಿ, ಯೆರೆಮೀಯ ಅಧ್ಯಾಯ 25, ವಚನ 12ರ ಆರಂಭದೊಂದಿಗೆ, ವಿಷಯಗಳನ್ನು ನಂತರದ, ಬದಲಾವಣೆಗೊಂಡ ದೃಷ್ಟಿಕೋನದಿಂದ ಪ್ರವಾದನೆಯು ವೀಕ್ಷಿಸುತ್ತದೆ. ಇನ್ನು ಮುಂದೆ ಯೆಹೋವನ ಹಂತಕನ ಪಾತ್ರದಲ್ಲಿ ಇರದೆ, ನೆಬೂಕದ್ನೆಚ್ಚರನು ಮತ್ತು ಬಾಬೆಲ್ ಈಗ ಲೋಕದ ಎಲ್ಲಾ ಜನಾಂಗಗಳೊಂದಿಗೆ ಸೇರಿಕೊಂಡು ಇದೆ. ಇದು ಇಂದಿನ ಸನ್ನಿವೇಶಕ್ಕೆ ಸಮಾನವಾಗಿರುತ್ತದೆ. ಪ್ರಕಟನೆ 17 ನೆಯ ಅಧ್ಯಾಯದ “ಹತ್ತು ಕೊಂಬುಗಳು” ಸುಳ್ಳು ಧರ್ಮವನ್ನು ನಾಶಗೊಳಿಸುವುವು, ಆದರೆ ಪ್ರಕಟನೆ 19 ನೆಯ ಅಧ್ಯಾಯದಲ್ಲಿ ವಿವರಿಸಿದಂತೆ, ಅನಂತರ ಅವು ಸ್ವತಃ ಭೂಮಿಯ ಇತರ “ರಾಜರು” ಗಳೊಂದಿಗೆ ನಾಶನವನ್ನು ಅನುಭವಿಸುವುವು. ಯೆಹೋವನ ಜನರನ್ನು ಸ್ವಪ್ರಯೇಜನಕ್ಕಾಗಿ ಬಳಸಿಕೊಂಡ ಬಾಬೆಲ್ ಸಹಿತ “ಎಲ್ಲಾ ಜನಾಂಗ” ಗಳು ಹೇಗೆ ನ್ಯಾಯದಂಡನೆಗೊಳಪಡುವುವು ಎಂದು ಯೆರೆಮೀಯ 25:13, 14 ವರ್ಣಿಸುತ್ತದೆ. ಯೆಹೂದವನ್ನು ದಂಡಿಸಲು ಯೆಹೋವನು ನೆಬೂಕದ್ನೆಚ್ಚರನನ್ನು ಹಂತಕನೋಪಾದಿ ಬಳಸಿದ್ದನು. ಆದರೆ ಅವನು ಮತ್ತು ಬಾಬೆಲಿನ ಅನಂತರದ ಅರಸರು ಕೂಡ, ಸ್ವತಃ ಯೆಹೋವನ ವಿರುದ್ಧ ಅಹಂಕಾರದಿಂದ ತಮ್ಮನ್ನು ಘನತೆಗೇರಿಸಿಕೊಂಡರು, ಉದಾಹರಣೆಗೆ, ಇದು ಯೆಹೋವನ ಆಲಯದ ಪಾತ್ರೆಗಳನ್ನು ಹೊಲೆಗೆಡಿಸುವುದರ ಮೂಲಕ ಪ್ರದರ್ಶಿಸಲ್ಪಟ್ಟಿತು. (ದಾನಿಯೇಲ 5:22, 23) ಮತ್ತು ಬಬಿಲೋನ್ಯರು ಯೆರೂಸಲೇಮನ್ನು ನಾಶಮಾಡಿದಾಗ, ಯೆಹೂದದ ನೆರೆಹೊರೆಯ ಜನಾಂಗಗಳು—ಮೋವಾಬ್, ಅಮ್ಮೋನ್, ತೂರ್, ಎದೋಮ್, ಮತ್ತು ಇತರರು—ಸಂತೋಷಪಟ್ಟರು ಮತ್ತು ದೇವರ ಜನರನ್ನು ಗೇಲಿಮಾಡಿದರು. ಅವರು ಕೂಡ ಯೆಹೋವನಿಂದ ತಕ್ಕ ಪ್ರತಿಫಲವನ್ನು ಕೊಯ್ಯತಕ್ಕದ್ದು.
“ಎಲ್ಲಾ ಜನಾಂಗಗಳ” ವಿರುದ್ಧ ನ್ಯಾಯತೀರ್ಪು
13. “ರೋಷರೂಪಮದ್ಯದ ಈ ಪಾತ್ರೆ” ಎಂಬುದರ ಅರ್ಥವೇನು, ಮತ್ತು ಆ ಪಾತ್ರೆಯಿಂದ ಕುಡಿದವರಿಗೆ ಏನು ಸಂಭವಿಸುತ್ತದೆ?
13 ಆದಕಾರಣ, ಅಧ್ಯಾಯ 25, ವಚನ 15 ಮತ್ತು 16 ರಲ್ಲಿ ದಾಖಲಿಸಲ್ಪಟ್ಟಂತೆ, ಯೆರೆಮೀಯನು ಘೋಷಿಸುವುದು: “ಇಸ್ರಾಯೇಲ್ಯರ ದೇವರಾದ ಯೆಹೋವನು ನನಗೆ—ರೋಷರೂಪಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು. ನಾನು ಅವರಲ್ಲಿಗೆ ಖಡ್ಗವನ್ನು ಕಳುಹಿಸುವೆನು; [ಆ ನನ್ನ ರೋಷವನ್ನು] ಅವರು ಕುಡಿದು ಓಲಾಡುವರು, ಹುಚ್ಚುಚ್ಚಾಗುವರು, ಎಂದು ಅಪ್ಪಣೆಕೊಟ್ಟನು.” ಇದು ಯಾಕೆ ‘ಯೆಹೋವನ ರೋಷರೂಪಮದ್ಯದ ಪಾತ್ರೆ’ ಆಗಿರುತ್ತದೆ? ಮತ್ತಾಯ 26:39, 42 ಮತ್ತು ಯೋಹಾನ 18:11 ರಲ್ಲಿ ಯೇಸುವು ಅವನ ಕಡೆಗಿನ ದೇವರ ಚಿತ್ತವನ್ನು ಸಾಂಕೇತಿಸುವ ಒಂದು “ಪಾತ್ರೆ”ಯ ಕುರಿತು ಮಾತಾಡಿದ್ದಾನೆ. ತದ್ರೀತಿಯಲ್ಲಿ, ಅವನ ದೈವಿಕ ಪ್ರತೀಕಾರವನ್ನು ಜನಾಂಗಗಳು ಕುಡಿಯುವ ಯೆಹೋವನ ಚಿತ್ತವನ್ನು ಸಾಂಕೇತಿಸಲು ಒಂದು ಪಾತ್ರೆಯು ಬಳಸಲ್ಪಟ್ಟಿದೆ. ಯೆರೆಮೀಯ 25:17-26 ಜನಾಂಗಗಳನ್ನು ಮುನ್ಸೂಚಿಸುವ ಈ ಜನಾಂಗ ಗುಂಪುಗಳ ಒಂದು ಪಟ್ಟಿಯನ್ನು ಮಾಡುತ್ತದೆ.
14. ಯೆರೆಮೀಯನ ಪ್ರವಾದನೆಗನುಸಾರ, ಯೆಹೋವನ ರೋಷರೂಪಮದ್ಯದ ಪಾತ್ರೆಯಿಂದ ಯಾರು ಕುಡಿಯಲಿರುವರು, ಮತ್ತು ನಮ್ಮ ದಿನಗಳಿಗಾಗಿ ಇದು ಏನನ್ನು ಸಾಂಕೇತಿಸುತ್ತದೆ?
14 ಯೆಹೂದದಂತೆ, ಕ್ರೈಸ್ತಪ್ರಪಂಚವು “ಹಾಳಾಗಿ ಬೆರಗಿನ ಸಿಳ್ಳಿಗೂ ಶಾಪಕ್ಕೂ ಗುರಿಯಾಗುವಂತೆ” ಮಾಡಲ್ಪಟ್ಟಾದ ನಂತರ, ಸುಳ್ಳು ಧರ್ಮದ ಉಳಿದ ಲೋಕ ಸಾಮ್ರಾಜ್ಯಕ್ಕೆ ನಾಶನವು ಕಾದಿರುವುದು. ಅನಂತರ, ಐಗುಪ್ತದಿಂದ ಸೂಚಿಸಲ್ಪಟ್ಟ ಇಡೀ ಲೋಕವು ಯೆಹೋವನ ರೋಷಮದ್ಯರೂಪದ ಪಾತ್ರೆಯಿಂದ ಕುಡಿಯಬೇಕು! ಹೌದು, “ದೂರವೇನು ಹತ್ತಿರವೇನು ಅಂತು ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು, ಇವರೆಲ್ಲ”ರೂ ಕುಡಿಯಲೇಬೇಕು. ಕಟ್ಟಕಡೆಗೆ, “ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿ” ಯುವನು. ಮತ್ತು ಈ “ಶೇಷಕಿನ ಅರಸನು” ಯಾರು? ಶೇಷಕ್ ಬಾಬೆಲಿಗಾಗಿರುವ ಒಂದು ಸಾಂಕೇತಿಕ ಹೆಸರು, ಒಂದು ಗೂಢಲಿಪಿ ಯಾ ಗುಪ್ತಸಂಕೇತವಾಗಿದೆ. ಬಾಬೆಲಿನ ಮೇಲೆ ಸೈತಾನನು ಅದೃಶ್ಯ ಅರಸನಾಗಿದ್ದಂತೆ, ಯೇಸುವಿನಿಂದ ತೋರಿಸಲ್ಪಟ್ಟಿರುವಂತೆ, ಈ ದಿನಗಳಲ್ಲಿ ಅವನು “ಇಹಲೋಕಾಧಿಪತಿ” ಯಾಗಿರುತ್ತಾನೆ. (ಯೋಹಾನ 14:30) ಹೀಗೆ, ಯೆರೆಮೀಯ 25:17-26, ಯೆಹೋವನ ರೋಷದ ಪಾತ್ರೆಯು ದಾಟಿಸಲ್ಪಟ್ಟಂತೆ ಘಟನೆಗಳ ಸರಣಿಯನ್ನು ಸೃಷ್ಟಗೊಳಿಸುವುದರಲ್ಲಿ ಪ್ರಕಟನೆ ಅಧ್ಯಾಯಗಳು 18 ರಿಂದ 20ಕ್ಕೆ ಸಮಾನಾಂತರವಾಗಿದೆ. ಮೊದಲು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು ನಾಶವಾಗಬೇಕು ಮತ್ತು ನಂತರ ರಾಜಕೀಯ ಶಕ್ತಿಗಳು, ಮತ್ತು ತದನಂತರ ಸ್ವತಃ ಸೈತಾನನು ತಾನೇ ಅಧೋಲೋಕಕ್ಕೆ ದೊಬ್ಬಲ್ಪಡುವನು.—ಪ್ರಕಟನೆ 18:8; 19:19-21; 20:1-3.
15. “ಶಾಂತಿ ಮತ್ತು ಭದ್ರತೆ”ಯ ಕೂಗು ಕೇಳಲ್ಪಟ್ಟಾಗ, ಏನು ಸಂಭವಿಸಲಿರುವುದು?
15 ಶೀತಲ ಯುದ್ಧ ಕೊನೆಗೊಂಡಿದೆಯೆಂದು ಎಣಿಸಲ್ಪಟ್ಟಂದಿನಿಂದ, ಏಕಮಾತ್ರ ಪ್ರಬಲ ಶಕ್ತಿ ಉಳಿಯುವುದರೊಂದಿಗೆ, ಶಾಂತಿ ಮತ್ತು ಭದ್ರತೆಯ ಮಾತುಗಳು ಬಹಳಷ್ಟು ನಡೆಯುತ್ತಿವೆ. ಪ್ರಕಟನೆ 17:10 ರಲ್ಲಿ ಹೇಳಲ್ಪಟ್ಟಂತೆ, ಕಾಡುಮೃಗದ ಏಳನೆಯ ತಲೆಯಾದ ಆ ಪ್ರಬಲ ಶಕ್ತಿಯು “ಸ್ವಲ್ಪ ಕಾಲ ಇರಬೇಕು.” ಆದರೆ ಆ “ಸ್ವಲ್ಪ ಕಾಲ” ಅದರ ಅಂತ್ಯವನ್ನು ಸಮೀಪಿಸುತ್ತಿದೆ. ಬಲುಬೇಗನೆ, ರಾಜಕೀಯ “ಶಾಂತಿ ಮತ್ತು ಭದ್ರತೆ”ಯ ಎಲ್ಲಾ ಘೋಷಣೆಗಳು “ಫಕ್ಕನೆ ನಾಶನವು [ಅದು] ಅವರ ಮೇಲೆ ಕ್ಷಣಮಾತ್ರದಲ್ಲಿ ಬರು” ವದಕ್ಕೆ ಎಡೆಗೊಡುವುದು. ಹಾಗೆಂದು ಅಪೊಸ್ತಲ ಪೌಲನು ಹೇಳುತ್ತಾನೆ.—1 ಥೆಸಲೊನೀಕ 5:2, 3, [NW].
16, 17. (ಎ) ಯೆಹೋವನ ನ್ಯಾಯತೀರ್ಪಿನಿಂದ ಯಾವನೇ ಒಬ್ಬನು ಪಾರಾಗಲು ಪ್ರಯತ್ನಿಸುವುದಾದರೆ, ಫಲಿತಾಂಶವೇನಾಗಲಿರುವುದು? (ಬಿ) ಯಾವ ವಿನಾಶಕಾರಿ ರೀತಿಯಲ್ಲಿ ಯೆಹೋವನ ಚಿತ್ತವು ಭೂಮಿಯ ಮೇಲೆ ಶೀಘ್ರದಲ್ಲಿ ಜಾರಿಗೊಳ್ಳಲ್ಪಡಲಿರುವುದು?
16 ಕ್ರೈಸ್ತಪ್ರಪಂಚದಿಂದ ಆರಂಭಿಸಿ, ಸೈತಾನನ ಸಂಪೂರ್ಣ ಲೋಕವ್ಯವಸ್ಥೆಯ ಯೆಹೋವನ ಪ್ರತೀಕಾರದ ಪಾತ್ರೆಯಿಂದ ಕುಡಿಯಲೇ ಬೇಕು. ಅಧ್ಯಾಯ 25, ವಚನಗಳು 27 ರಿಂದ 29 ರಲ್ಲಿ ದಾಖಲಿಸಲ್ಪಟ್ಟಂತೆ, ಯೆರೆಮೀಯನಿಗೆ ಅವನ ಮುಂದಿನ ಅಪ್ಪಣೆಯು ಇದನ್ನು ದೃಢೀಕರಿಸುತ್ತದೆ: “ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ—ನಾನು ನಿಮ್ಮಲ್ಲಿಗೆ ಖಡ್ಗವನ್ನು ಕಳುಹಿಸುವೆನು; [ಆ ನನ್ನ ರೋಷವನ್ನು] ಕುಡಿದು ಅಮಲೇರಿದವರಾಗಿ ಕಕ್ಕಿ ಬಿದ್ದು ಏಳದಿರಿ. ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ ಕುಡಿಯಲಿಕ್ಕೂ ಒಲ್ಲದಿದ್ದರೆ ನೀನು ಅವರಿಗೆ ಹೀಗೆ ಹೇಳು—ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ನೀವು ಕುಡಿಯಲೇ ಬೇಕು. ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವದೇ ಇಲ್ಲ. ಖಡ್ಗವೇ ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ.”
17 ಇವುಗಳು ಕಠಿನವಾದ ಮಾತುಗಳೇ—ಖಂಡಿತವಾಗಿ ಭೀತಿಯನ್ನುಂಟುಮಾಡುವಂತಹ ಮಾತುಗಳು, ಯಾಕಂದರೆ ಇವು ವಿಶ್ವದ ಸಾರ್ವಭೌಮ ಪ್ರಭುವಾದ ಯೆಹೋವ ದೇವರಿಂದ ನುಡಿಯಲ್ಪಟ್ಟಿವೆ. ಸಹಸ್ರಾರು ವರುಷಗಳ ಅವಧಿಯಲ್ಲಿ, ಅವನು ತಾಳ್ಮೆಯಿಂದ ತನ್ನ ಪವಿತ್ರ ನಾಮದ ಮೇಲೆ ಹೇರಲ್ಪಟ್ಟ ನಿಂದೆಗಳನ್ನು, ತೆಗಳಿಕೆಗಳನ್ನು, ಮತ್ತು ದ್ವೇಷವನ್ನು ಸಹಿಸಿಕೊಂಡಿದ್ದಾನೆ. ಆದರೆ ಭೂಮಿಯ ಮೇಲಿರುವಾಗ ತನ್ನ ಶಿಷ್ಯರಿಗೆ ಅವನ ಪ್ರಿಯ ಮಗನಾದ ಯೇಸು ಕ್ರಿಸ್ತನು ಕಲಿಸಿದ ಪ್ರಾರ್ಥನೆಗೆ ಉತ್ತರವನ್ನೀಯಲು ಕಟ್ಟಕಡೆಗೂ ಅವನಿಗೆ ಸಮಯವು ಆಗಮಿಸಿದೆ: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ಪ್ರತೀಕಾರವನ್ನು ಜಾರಿಗೊಳಿಸುವುದರಲ್ಲಿ ಯೇಸುವು ಅವನ ಖಡ್ಗವಾಗಿ ಕ್ರಿಯೆಗೈಯುವುದು ಯೆಹೋವನ ಚಿತ್ತವಾಗಿದೆ.
18, 19. (ಎ) ಯೆಹೋವನ ಹೆಸರಿನಲ್ಲಿ ವಿಜಯಿಯಾಗಲು ಯಾರು ಹೊರಡುತ್ತಾನೆ, ಮತ್ತು ಅವನ ವಿಜಯವನ್ನು ಪೂರ್ಣಗೊಳಿಸುವ ಮೊದಲು ಅವನು ಯಾವುದಕ್ಕಾಗಿ ಕಾಯುತ್ತಾನೆ? (ಬಿ) ಯೆಹೋವನ ರೋಷದ ಬಿರುಗಾಳಿಯ ತುಫಾನನ್ನು ದೇವದೂತರು ಬಿಡುಗಡೆಗೊಳಿಸಿದಾಗ, ಭೂಮಿಯ ಮೇಲೆ ಯಾವ ಭಯಂಕರ ಘಟನೆಗಳು ಸಂಭವಿಸಲಿರುವುವು?
18 ಪ್ರಕಟನೆ ಅಧ್ಯಾಯ 6 ರಲ್ಲಿ, ಬಿಳಿ ಕುದುರೆಯ ಮೇಲೆ ‘ಜಯಿಸುತ್ತಿರುವವನಾಗಿ ಜಯಿಸುವುದಕ್ಕೋಸ್ಕರ’ ಯೇಸು ಸವಾರಿಮಾಡುವುದರ ಕುರಿತು ಮೊದಲಾಗಿ ನಾವು ಓದುತ್ತೇವೆ. (ವಚನ 2) ಇದು 1914 ರಲ್ಲಿ ಅವನು ಸ್ವರ್ಗೀಯ ಅರಸನಾಗಿ ಸಿಂಹಾಸನಾಸೀನನಾದಾಗ ಆರಂಭಗೊಂಡಿತು. ಇತರ ಕುದುರೆಗಳು ಮತ್ತು ಸವಾರರು ಅವನನ್ನು ಹಿಂಬಾಲಿಸುತ್ತಾರೆ, ಇದು ನಮ್ಮ ಭೂಮಿಯನ್ನು ಅಂದಿನಿಂದ ಬಾಧಿಸುತ್ತಿರುವ ಸಮಗ್ರ ಯುದ್ಧೋದ್ಯಮ, ಬರಗಾಲ, ಮತ್ತು ಅಂಟುರೋಗಗಳನ್ನು ಚಿತ್ರಿಸುತ್ತದೆ. ಆದರೆ ಈ ಎಲ್ಲಾ ಸಂಕ್ಷೋಭೆಯು ಯಾವಾಗ ಅಂತ್ಯಗೊಳ್ಳುವದು? ಪ್ರಕಟನೆ ಅಧ್ಯಾಯ 7, ಎಲ್ಲಾ ಜನಾಂಗಗಳಿಂದ ಆತ್ಮಿಕ ಇಸ್ರಾಯೇಲ್ ಮತ್ತು ಒಂದು ಮಹಾ ಸಮೂಹ ರಕ್ಷಣೆಗಾಗಿ ಒಟ್ಟುಗೂಡಿಸಲ್ಪಡುವ ತನಕ, “ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು” ತಡೆಹಿಡಿದಿರುವ ನಾಲ್ಕು ದೇವದೂತರುಗಳ ಕುರಿತು ನಮಗೆ ತಿಳಿಸುತ್ತದೆ. (ವಚನ 1) ತದನಂತರ ಏನು?
19 ಯೆರೆಮೀಯ ಅಧ್ಯಾಯ 25, ವಚನಗಳು 30 ಮತ್ತು 31 ಮುಂದುವರಿಸುವುದು: “ಯೆಹೋವನು ಉನ್ನತಲೋಕದಿಂದ ಗರ್ಜಿಸುವನು, ತನ್ನ ಘನನಿವಾಸದಿಂದ ದನಿಗೈಯುವನು; ಆತನು ಗಟ್ಟಿಯಾಗಿ ಗರ್ಜಿಸಿ ತನ್ನ ಹುಲ್ಗಾವಲಿನ ಮಂದೆಯನ್ನು ಬೆದರಿಸುವನು; ದ್ರಾಕ್ಷೆಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭೂನಿವಾಸಿಗಳೆಲ್ಲರಿಗೂ ಭಯಂಕರನಾಗಿ ಕೂಗುವನು. ಶಬ್ದವು ಭೂಮಿಯ ಕಟ್ಟಕಡೆಯ ವರೆಗೆ ವ್ಯಾಪಿಸುವದು; ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ; ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು; ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು. ಇದು ಯೆಹೋವನ ನುಡಿ.” ಯೆಹೋವನ ರೋಷದ ಪಾತ್ರೆಯಿಂದ ಈ ರೀತಿಯಲ್ಲಿ ಕುಡಿಯುವುದರಿಂದ ಯಾವುದೇ ಒಂದು ಜನಾಂಗವು ಪಾರಾಗುವುದಿಲ್ಲ. ಆದಕಾರಣ, ಯೆಹೋವನ ರೋಷದ ತುಫಾನಿನಂತಹ ಬಿರುಗಾಳಿಯನ್ನು ನಾಲ್ಕು ದೇವದೂತರುಗಳು ಬಿಡುಗಡೆಗೊಳಿಸುವ ಮೊದಲು, ಸುಹೃದಯದ ಎಲ್ಲಾ ಜನರು ತಾವಾಗಿಯೇ ಜನಾಂಗಗಳ ದುಷ್ಟತನದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ಬಹಳ ತುರ್ತಿನದ್ದಾಗಿದೆ. ಖಂಡಿತವಾಗಿಯೂ ತುಫಾನಿನಂತೆ, ಯಾಕಂದರೆ ವಚನ 32 ಮತ್ತು 33 ರಲ್ಲಿ ಯೆರೆಮೀಯನ ಪ್ರವಾದನೆಯು ಮುಂದುವರಿಯುವುದು:
20. ಯೆಹೋವನ ನ್ಯಾಯತೀರ್ಪಿನ ತೀವ್ರತೆಯನ್ನು ಯಾವ ದೃಶ್ಯಾವಳಿಗಳು ಒತ್ತಿಹೇಳುತ್ತವೆ, ಆದರೆ ಈ ಕೃತ್ಯವು ಯಾಕೆ ಆವಶ್ಯಕವಾಗಿದೆ?
20 “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದುಬರುವದು. ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣಿಡರು, ಭೂಮಿಯ ಮೇಲೆ ಗೊಬ್ಬರವಾಗುವರು.” ನಿಜವಾಗಿಯೂ ಒಂದು ದಾರುಣವಾದ ದೃಶ್ಯ, ಆದರೆ ದೇವರ ವಾಗ್ದಾನಿತ ಪರದೈಸವನ್ನು ತರುವ ಮೊದಲು ಎಲ್ಲಾ ದುಷ್ಟತನದಿಂದ ಭೂಮಿಯನ್ನು ಶುಭ್ರಗೊಳಿಸಲು ಈ ಕ್ರಿಯೆಯು ಆವಶ್ಯಕವಾಗಿದೆ.
ಕುರುಬರು ಅರಚಿ, ಗೋಳಾಡಲಿದ್ದಾರೆ
21, 22. (ಎ) ಯೆರೆಮೀಯ 25:34-36 ರಲ್ಲಿ ಇಸ್ರಾಯೇಲಿನ “ಕುರುಬರು” ಯಾರಾಗಿದ್ದರು, ಮತ್ತು ಅವರು ಅರಚುವಂತೆ ಯಾಕೆ ಬಲಾತ್ಕರಿಸಲ್ಪಟ್ಟರು? (ಬಿ) ಯೆಹೋವನ ಕೋಪಕ್ಕೆ ಯಾವ ಆಧುನಿಕ ದಿನದ ಕುರುಬರು ಅರ್ಹರಾಗಿದ್ದಾರೆ, ಮತ್ತು ಯಾಕೆ ಅವರು ಪೂರ್ಣವಾಗಿ ಅದಕ್ಕೆ ಅರ್ಹರು?
21 ವಚನಗಳು 34 ರಿಂದ 36 ಯೆಹೋವನ ನ್ಯಾಯತೀರ್ಪಿನ ಕುರಿತು ಇನ್ನು ಹೆಚ್ಚನ್ನು ತಿಳಿಸುತ್ತವೆ: “ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ಮಣಿಗಳೇ, [ಬೂದಿಯಲ್ಲಿ] ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ತುಂಬಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ. ಕುರುಬರು ಓಡಿಹೋಗುವದಕ್ಕೆ ಮಾರ್ಗವು ಸಿಕ್ಕದು, ಮಂದೆಯ ಹಿರಿಯ ಮಣಿಗಳು ತಪ್ಪಿಸಿಕೊಳ್ಳುವದಕ್ಕೆ ಆಸ್ಪದ ದೊರೆಯದು. ಆಹಾ, ಕುರುಬರ ಕೂಗಾಟ! ಮಂದೆಯ ಹಿರಿಯ ಮಣಿಗಳ ಅರಚಾಟ! ಯೆಹೋವನು ಆ ಹುಲ್ಗಾವಲನ್ನು ಹಾಳುಮಾಡುತ್ತಿದ್ದಾನಲ್ಲಾ.”
22 ಈ ಕುರುಬರು ಯಾರು? ಯೆಹೋವನ ಕೋಪದಿಂದ ಈಗಾಗಲೇ ಕುಡಿದು ಮತ್ತರಾದ ಧಾರ್ಮಿಕ ಮುಂದಾಳುಗಳು ಇವರಲ್ಲ. ಇವರು ಯುದ್ಧಶಾಸ್ತ್ರಜ್ಞ ಕುರುಬರು, ಇವರ ಕುರಿತು ಯೆರೆಮೀಯ 6:3 ರಲ್ಲೂ, ಯೆಹೋವನಿಗೆ ಪ್ರತಿಭಟನೆಯಲ್ಲಿ ಹಿಂಡುಹಿಂಡಾಗಿ ತಮ್ಮ ಸೇನೆಗಳನ್ನು ಒಟ್ಟುಗೂಡಿಸುವವರೆಂದು ವರ್ಣಿಸಲಾಗಿದೆ. ಆಳಲ್ಪಟ್ಟವರ ವೆಚ್ಚದಲ್ಲಿ ಶ್ರೀಮಂತರಾಗಿ ಬೆಳೆದಿರುವ ರಾಜಕೀಯ ಅಧಿಪತಿಗಳು ಅವರಾಗಿದ್ದಾರೆ. ಇವರಲ್ಲಿ ಅನೇಕರು ಕುಶಲಿ ವ್ಯಾಪಾರಸ್ಥರು, ಭ್ರಷ್ಟತೆಯ ನಿಪುಣರು ಆಗಿದ್ದಾರೆ. ಅನಾನುಕೂಲ ದೇಶಗಳಲ್ಲಿ ಇಡೀ ಜನಾಂಗಗಳ ಅಧಿಕ ಸಂಖ್ಯೆಯವರು ಸಾಯುವಂತೆ ಮಾಡಿದ ಬರಗಾಲವನ್ನು ಹೋಗಲಾಡಿಸುವುದರಲ್ಲಿ ಅವರು ಬಹಳ ನಿಧಾನವಾಗಿದ್ದರು. ಸಾಯುತ್ತಿರುವ ದಶಲಕ್ಷಾಂತರ ಮಕ್ಕಳಿಗೆ ಜೀವ ಉಳಿಸಬಹುದಾದಂತಹ ಅಲ್ಪ ವೆಚ್ಚದ ವೈದ್ಯಕೀಯ ಸಹಾಯ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಲು ನಿರಾಕರಿಸುವಾಗ, ಶಸ್ತ್ರಾಸ್ತ್ರಗಳ ವರ್ತಕರು ಮತ್ತು ದುರಾಶೆಯ ಪರಿಸರ ವಿನಾಶಕರಂತಹ “ಮಂದೆಯ ಹಿರಿಯ ಮಣಿಗಳ”ನ್ನು ಅವರು ಶ್ರೀಮಂತರನ್ನಾಗಿ ಮಾಡುತ್ತಾರೆ.
23. ಯೆಹೋವನ ವಿನಾಶಕಾರಿ ಕೃತ್ಯಗಳ ನಂತರ ಸೈತಾನನ ಕ್ಷೇತ್ರದ ಪರಿಸ್ಥಿತಿಯನ್ನು ವರ್ಣಿಸಿರಿ.
23 ಸ್ವಾರ್ಥದಿಂದ ಸ್ವತಃ ತಮಗಾಗಿ ಶಾಂತಿಯನ್ನು ಹುಡುಕಿದ ಇವರ ಕುರಿತಾಗಿ, ಯೆರೆಮೀಯ ಅಧ್ಯಾಯ 25, ವಚನಗಳು 37 ಮತ್ತು 38 ಈ ರೀತಿಯಲ್ಲಿ ಹೇಳುತ್ತಾ ಕೊನೆಗೊಳಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ: “ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಶಬ್ದವಾಗಿವೆ. ಆತನು ಸಿಂಹದಂತೆ ತನ್ನ ಹಕ್ಕೆಯನ್ನು ಬಿಟ್ಟುಬಂದಿದ್ದಾನೆ; ಹಿಂಸಿಸುವ ಖಡ್ಗದಿಂದಲೂ ಆತನ ರೋಷಾಗ್ನಿಯಿಂದಲೂ ಅವರ ದೇಶವು ಬೆರಗಿಗೆ ಈಡಾಗಿದೆ.” ಅಚ್ಚರಿಯೇ ಸೈ! ಆದರೂ, ಯೆಹೋವನ ಉರಿಯುತ್ತಿರುವ ಕೋಪವು ಆಶ್ವಾಸನೀಯವಾಗಿ ಅವನ “ಖಡ್ಗ”—ಪ್ರಕಟನೆ 19:15, 16 ರಲ್ಲಿ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ “ರಾಜಾಧಿರಾಜನೂ ಕರ್ತರ ಕರ್ತನೂ” ಎಂದು ವರ್ಣಿಸಲ್ಪಟ್ಟಿರುವವನ ಮೂಲಕ ವ್ಯಕ್ತಗೊಳ್ಳಲ್ಪಡಲಿದೆ. ಮತ್ತು ಏನು ಹಿಂಬಾಲಿಸುತ್ತದೆ?
24. ಸುಳ್ಳು ಧರ್ಮದ ಮತ್ತು ಸೈತಾನನ ಲೋಕದ ಉಳಿದ ಭಾಗದ ನಾಶನವು ನೀತಿವಂತ ಮಾನವಕುಲಕ್ಕೆ ಯಾವ ಆಶೀರ್ವಾದಗಳನ್ನು ತರುವುದು?
24 ನೀವೆಂದಾದರೂ ಒಂದು ಚಂಡಮಾರುತ ಯಾ ಒಂದು ತುಫಾನನ್ನು ಪಾರಾಗಿದ್ದೀರೋ? ಅದೊಂದು ದಿಗಿಲುಗೊಳಿಸುವ ಅನುಭವವಾಗಿರಬಲ್ಲದು.ಆದರೆ ಮರುದಿನ ಬೆಳಗ್ಗೆ, ಎಲ್ಲಾ ಕಡೆ ನೀವು ಭಗ್ನಾವಶೇಷಗಳನ್ನು ನೋಡಬಹುದಾದರೂ, ವಾಯುವು ಸಾಮಾನ್ಯವಾಗಿ ಬಹಳ ಶುಭ್ರವೂ, ತಂಪಾಗಿಯೂ ಇರುವುದರಿಂದ, ಅಂತಹ ಅಸಾಮಾನ್ಯ ಉಲ್ಲಾಸಕರ ದಿನಕ್ಕಾಗಿ ನೀವು ಯೆಹೋವನಿಗೆ ಉಪಕಾರ ಹೇಳಬಲ್ಲಿರಿ. ತದ್ರೀತಿಯಲ್ಲಿ, ಮಹಾ ಸಂಕಟದ ತುಫಾನಿನ ಬಿರುಗಾಳಿಯು ಕುಗ್ಗುತ್ತಿರುವಂತೆ, ನೀವು ಸಜೀವವಾಗಿ ಉಳಿದಿರುವ ಮತ್ತು ಶುದ್ಧೀಕರಿಸಲ್ಪಟ್ಟ ಭೂಮಿಯನ್ನು ಮಹಿಮಾಭರಿತ ಪರದೈಸವನ್ನಾಗಿ ಮಾಡುವ ಯೆಹೋವನ ಮುಂದುವರಿಯುವ ಕಾರ್ಯದಲ್ಲಿ ಪಾಲಿಗರಾಗಲು ಸಿದ್ಧರಾಗಿರುವ ಕಾರಣ, ಭೂಮಿಯನ್ನು ಕೃತಜ್ಞತಾಭರಿತರಾಗಿ ಮುನ್ನೋಡಬಹುದು. ಜನಾಂಗಗಳೊಂದಿಗಿನ ಯೆಹೋವನ ವ್ಯಾಜ್ಯವು ಅದರ ಭವ್ಯ ಮುಕ್ತಾಯಕ್ಕೆ ತರಲ್ಪಟ್ಟು, ಅವನ ಹೆಸರು ಪವಿತ್ರೀಕರಿಸಲ್ಪಟ್ಟು ಮತ್ತು ಮೆಸ್ಸೀಯನಿಕ ರಾಜ್ಯದ ಸಹಸ್ರ ವರುಷಗಳ ಆಳಿಕೆಯ ಕೆಳಗೆ ಭೂಮಿಯ ಮೇಲೆ ಆತನ ಚಿತ್ತವು ನೆರವೇರಲು ದಾರಿಯು ಸುಗಮಗೊಳಿಸಲ್ಪಟ್ಟಿರುವದು. ಆ ರಾಜ್ಯವು ಬೇಗನೆ ಬರುವಂತಾಗಲಿ!
ಪರಾಮರ್ಶಿಸುವುದು ಈ ಲೇಖನದ 5-24 ಪ್ಯಾರಗ್ರಾಫ್ಗಳು
▫ ಕ್ರೈಸ್ತಪ್ರಪಂಚದ ಯಾವ ಮೋಸಕರ ಮಾರ್ಗಗಳು ಈಗ ನ್ಯಾಯತೀರ್ಪಿಗೆ ಒಳಗಾಗಿವೆ?
▫ ಯೆರೆಮೀಯ 25:12-38 ರಲ್ಲಿ ನ್ಯಾಯತೀರ್ಪಿನ ಯಾವ ವಿಸ್ತರಿತ ದೃಷ್ಟಿಕೋನವು ತೆಗೆದುಕೊಳ್ಳಲ್ಪಟ್ಟಿದೆ?
▫ ಎಲ್ಲಾ ಜನಾಂಗಗಳಿಗೆ ಪ್ರತೀಕಾರದ ಯಾವ ಪಾತ್ರೆಯನ್ನು ದಾಟಿಸಲಾಗಿದೆ?
▫ ಅರಚಿ, ಗೋಳಾಡುವ ಕುರುಬರು ಯಾರು, ಮತ್ತು ಅವರು ಯಾಕೆ ಚಿಂತೆಗೀಡಾಗಿದ್ದಾರೆ?
[ಪುಟ 18 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚದ ನಾಶನದ ಸಾಧನವನ್ನು ಯೆಹೋವನು ಆರಿಸಿದ್ದಾನೆ
[ಪುಟ 23 ರಲ್ಲಿರುವ ಚಿತ್ರ]
ಮಹಾ ಸಂಕಟದ ಬಿರುಗಾಳಿಗಳ ನಂತರ, ಶುಭ್ರಗೊಳಿಸಲ್ಪಟ್ಟ ಭೂಮಿಯೊಂದು ತೋರಿಬರುವುದು