ಯೆಹೋವನ ವಾಕ್ಯವು ಸಜೀವವಾದದ್ದು
ಯೆರೆಮೀಯ ಪುಸ್ತಕದ ಮುಖ್ಯಾಂಶಗಳು
ಯೆರೆಮೀಯನು ತನ್ನ ಸ್ವಂತ ಜನರಿಗೆ ಪ್ರಕಟಿಸಿದ ದುರಂತಗಳು ಎಷ್ಟು ಅಘಾತಕಾರಿ ಆಗಿದ್ದಿರಬೇಕು! ಏಕೆಂದರೆ ಮೂರು ಶತಮಾನಗಳಿಗಿಂತ ಹೆಚ್ಚು ಕಾಲ ಆರಾಧನೆಯ ಕೇಂದ್ರವಾಗಿದ್ದ ಯೆರೂಸಲೇಮಿನ ಶೋಭಾಯಮಾನ ಆಲಯವು ಸುಟ್ಟು ನೆಲಸಮವಾಗಲಿಕ್ಕಿತ್ತು ಎಂದು ಅವನು ಹೇಳಿದನು. ಯೆಹೂದ ಸೀಮೆ ಮತ್ತು ಯೆರೂಸಲೇಮ್ ಪಟ್ಟಣವು ನಾಶವಾಗಿ, ನಿರ್ಜನವಾಗಲಿತ್ತು ಮತ್ತು ಅದರ ನಿವಾಸಿಗಳು ಸೆರೆಯಾಳುಗಳಾಗಿ ಕೊಂಡೊಯ್ಯಲ್ಪಡಲಿದ್ದರು. ಈ ರೀತಿಯ ಮತ್ತು ಇನ್ನಿತರ ನ್ಯಾಯತೀರ್ಪಿನ ಘೋಷಣೆಗಳು ಬೈಬಲಿನಲ್ಲಿ ಎರಡನೇ ದೊಡ್ಡ ಪುಸ್ತಕವಾದ ಯೆರೆಮೀಯ ಎಂಬ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿವೆ. ಯೆರೆಮೀಯನು ಪ್ರವಾದಿಯಾಗಿ 67 ವರ್ಷಗಳಷ್ಟು ದೀರ್ಘಾವಧಿಯ ತನ್ನ ಶುಶ್ರೂಷೆಯಲ್ಲಿ ವೈಯಕ್ತಿಕವಾಗಿ ಅನುಭವಿಸಿದ ವಿಷಯಗಳು ಕೂಡ ಈ ಪುಸ್ತಕದಲ್ಲಿ ಒಳಗೂಡಿವೆ. ಈ ಪುಸ್ತಕದಲ್ಲಿರುವ ಮಾಹಿತಿಯು ಕಾಲಾನುಕ್ರಮದಲ್ಲಿರುವ ಬದಲಿಗೆ ವಿಷಯಗಳ ಕ್ರಮದಲ್ಲಿ ಬರೆಯಲ್ಪಟ್ಟಿದೆ.
ಯೆರೆಮೀಯ ಪುಸ್ತಕದಲ್ಲಿ ನಾವೇಕೆ ಆಸಕ್ತಿತೋರಿಸಬೇಕು? ಏಕೆಂದರೆ ಅದರಲ್ಲಿರುವ ಪ್ರವಾದನೆಗಳ ನೆರವೇರಿಕೆಯು ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುವವನಾಗಿದ್ದಾನೆ ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. (ಯೆಶಾಯ 55:10, 11) ಪ್ರವಾದಿಯಾಗಿ ಯೆರೆಮೀಯನು ಮಾಡಿದ ಕೆಲಸ ಮತ್ತು ಅವನ ಸಂದೇಶಕ್ಕೆ ಜನರು ತೋರಿಸಿದ ಪ್ರತಿಕ್ರಿಯೆ ನಮ್ಮ ದಿವಸಗಳಿಗೆ ಹೋಲುತ್ತದೆ. (1 ಕೊರಿಂಥ 10:11) ಅಷ್ಟುಮಾತ್ರವಲ್ಲ, ಯೆಹೋವನು ತನ್ನ ಜನರೊಂದಿಗೆ ಹೇಗೆ ವ್ಯವಹರಿಸಿದನು ಎಂಬುದರ ಕುರಿತಾದ ಈ ದಾಖಲೆಯು ಆತನ ಗುಣಗಳನ್ನು ಎತ್ತಿತೋರಿಸುತ್ತದೆ ಮತ್ತು ಅದು ನಮ್ಮ ಮೇಲೆ ಗಾಢ ಪರಿಣಾಮವನ್ನು ಬೀರುವುದು.—ಇಬ್ರಿಯ 4:12.
“ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ”
ಯೆರೆಮೀಯನು ಒಬ್ಬ ಪ್ರವಾದಿಯಾಗಿ ನೇಮಿಸಲ್ಪಟ್ಟದ್ದು ಯೆಹೂದದ ಅರಸ ಯೋಷೀಯನ ಆಳ್ವಿಕೆಯ 13ನೆಯ ವರ್ಷದಲ್ಲಿ, ಅಂದರೆ ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಗುವುದಕ್ಕೆ 40 ವರ್ಷಗಳಿಗೆ ಮುಂಚೆ. (ಯೆರೆಮೀಯ 1:1, 2) ಯೋಷೀಯನ ಆಳ್ವಿಕೆಯ ಉಳಿದ 18 ವರ್ಷಗಳ ಸಮಯದಲ್ಲಿ ಮಾಡಲ್ಪಟ್ಟ ಹೆಚ್ಚಿನ ಘೋಷಣೆಗಳು ಯೆಹೂದದ ದುಷ್ಟತನವನ್ನು ಬಯಲುಪಡಿಸಿದವು ಮತ್ತು ಯೆಹೋವನಿಂದ ಅವಳಿಗಾಗುವ ನ್ಯಾಯತೀರ್ಪುಗಳ ಕುರಿತಾಗಿದ್ದವು. “ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿ . . . ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ಯೆಹೋವನು ಘೋಷಿಸಿದನು. (ಯೆರೆಮೀಯ 9:11) ಏಕೆ? “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ” ಎಂದು ಆತನು ಹೇಳುತ್ತಾನೆ.—ಯೆರೆಮೀಯ 2:13.
ಪಶ್ಚಾತ್ತಾಪಪಟ್ಟಿದ್ದ ಜನಶೇಷವೊಂದು ಪುನಸ್ಸ್ಥಾಪಿಸಲ್ಪಡುವುದೆಂಬ ವಿಷಯವೂ ಯೆರೆಮೀಯನ ಸಂದೇಶದಲ್ಲಿ ಒಳಗೂಡಿತ್ತು. (ಯೆರೆಮೀಯ 3:14-18; 12:14, 15; 16:14-21) ಆದರೆ ಇದರ ಸಂದೇಶವಾಹಕನಾದ ಯೆರೆಮೀಯನನ್ನು ಜನರು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಳ್ಳಲಿಲ್ಲ. ‘ಯೆಹೋವನ ಆಲಯದ ಮುಖ್ಯಾಧಿಕಾರಿಯು’ ಅವನನ್ನು ಹೊಡೆಯಿಸಿ ಒಂದು ಇಡೀ ರಾತ್ರಿ ಕೋಳಕ್ಕೆ ಹಾಕಿಸಿದನು.—ಯೆರೆಮೀಯ 20:1-3.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:11, 12—ಯೆಹೋವನು ತನ್ನ ಮಾತಿನ ಕುರಿತಾಗಿ ಎಚ್ಚರದಿಂದಿರುವುದನ್ನು ‘ಚಚ್ಚರ ಮರದ ರೆಂಬೆಗೆ’ ಹೋಲಿಸಿರುವುದೇಕೆ? ವಸಂತಕಾಲದ ಆರಂಭದಲ್ಲೇ ಚಿಗುರುವ ಮರಗಳಲ್ಲಿ ಚಚ್ಚರ ಮರವು ಅಂದರೆ ‘ಬಾದಾಮಿ ಮರವು’ (BSI ರೆಫರೆನ್ಸ್ ಬೈಬಲ್ ಪಾದಟಿಪ್ಪಣಿ) ಒಂದಾಗಿದೆ. ಅದೇ ರೀತಿಯಲ್ಲಿ ಯೆಹೋವನು ತನ್ನ ನ್ಯಾಯತೀರ್ಪುಗಳ ಕುರಿತಾಗಿ “ಸಾವಕಾಶ ಮಾಡದೆ” ತನ್ನ ಜನರಿಗೆ ಎಚ್ಚರಿಕೆ ನೀಡಲು ತನ್ನ ‘ಪ್ರವಾದಿಗಳನ್ನೆಲ್ಲಾ ಕಳುಹಿಸುತ್ತಾ’ ಇದ್ದನು ಮತ್ತು ಅದು ನೆರವೇರುವ ತನಕ ‘ಎಚ್ಚರವಾಗಿಯೇ ಇದ್ದನು.’—ಯೆರೆಮೀಯ 7:25.
2:10, 11—ಅಪನಂಬಿಗಸ್ತ ಇಸ್ರಾಯೇಲ್ಯರ ಯಾವ ಕೃತ್ಯಗಳು ಸಾಮಾನ್ಯವಾದ ಸಂಗತಿಯಾಗಿರಲಿಲ್ಲ? ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿದ್ದ ಕೇದಾರ್ ಹಾಗೂ ಕಿತ್ತೀಮ್ ಎಂಬ ವಿಧರ್ಮಿ ಜನಾಂಗಗಳು ತಾವು ಆರಾಧಿಸುತ್ತಿದ್ದ ದೇವರುಗಳೊಂದಿಗೆ ಬೇರೆ ಜನಾಂಗಗಳ ಇನ್ನಷ್ಟು ದೇವರುಗಳನ್ನು ಸೇರಿಸಿಕೊಳ್ಳುತ್ತಿದ್ದರು. ಅವರು ತಮ್ಮ ಸ್ವಂತ ದೇವರುಗಳ ಸ್ಥಾನದಲ್ಲಿ ಅನ್ಯದೇವರುಗಳನ್ನಿಟ್ಟು ಆರಾಧಿಸುವುದು ಯಾರೂ ಕೇಳಿರದಂಥ ಸಂಗತಿಯಾಗಿತ್ತು. ಆದರೆ ಇಸ್ರಾಯೇಲ್ಯರು ತಮ್ಮ ಸ್ವಂತ ದೇವರಾದ ಯೆಹೋವನನ್ನು ತೊರೆದು ಆತನಿಗೆ ಸಲ್ಲತಕ್ಕ ಮಹಿಮೆಯನ್ನು ನಿರ್ಜೀವ ವಿಗ್ರಹಗಳಿಗೆ ಕೊಡುತ್ತಿದ್ದರು.
3:11-22; 11:10-12, 17—ಸಮಾರ್ಯವು ಸಾ.ಶ.ಪೂ. 740ರಲ್ಲಿ ಪತನಗೊಂಡಿತ್ತಾದರೂ ಉತ್ತರದ ಈ ಹತ್ತು ಕುಲಗಳ ರಾಜ್ಯವನ್ನು ಯೆರೆಮೀಯನು ತನ್ನ ಘೋಷಣೆಗಳಲ್ಲಿ ಒಳಗೂಡಿಸಿದ್ದೇಕೆ? ಇದಕ್ಕೆ ಕಾರಣವೇನೆಂದರೆ ಸಾ.ಶ.ಪೂ. 607ರಲ್ಲಿ ಸಂಭವಿಸಲಿದ್ದ ಯೆರೂಸಲೇಮಿನ ನಾಶನವು ಕೇವಲ ಯೆಹೂದದ ಮೇಲೆ ಅಲ್ಲ ಬದಲಿಗೆ ಪೂರ್ತಿ ಇಸ್ರಾಯೇಲ್ ಜನಾಂಗದ ವಿರುದ್ಧ ಯೆಹೋವನ ನ್ಯಾಯತೀರ್ಪಿನ ಅಭಿವ್ಯಕ್ತಿಯಾಗಿರಲಿತ್ತು. (ಯೆಹೆಜ್ಕೇಲ 9:9, 10) ಹತ್ತು ಕುಲಗಳ ರಾಜ್ಯವು ಪತನಗೊಂಡ ಬಳಿಕವೂ, ಪುನಸ್ಸ್ಥಾಪನೆಯ ಕುರಿತಾಗಿ ದೇವರ ಪ್ರವಾದಿಗಳು ಕೊಟ್ಟ ಸಂದೇಶಗಳಲ್ಲಿ ಇಸ್ರಾಯೇಲ್ಯರನ್ನು ಸೇರಿಸಲಾಗುತ್ತಿತ್ತು ಎಂಬ ವಾಸ್ತವಾಂಶವು, ಯೆರೂಸಲೇಮು ಕೇವಲ ಯೆಹೂದ ರಾಜ್ಯವನ್ನು ಮಾತ್ರವಲ್ಲ ಬದಲಾಗಿ ಹತ್ತು ಕುಲಗಳ ರಾಜ್ಯವಾದ ಇಸ್ರಾಯೇಲನ್ನು ಸಹ ಒಳಗೂಡಿತ್ತು ಎಂಬುದನ್ನು ತೋರಿಸುತ್ತದೆ.
4:3, 4—ಈ ಆಜ್ಞೆಯ ಅರ್ಥವೇನು? ಅಪನಂಬಿಗಸ್ತರಾದ ಯೆಹೂದ್ಯರು ತಮ್ಮ ಹೃದಯವೆಂಬ ನೆಲವನ್ನು ಸಿದ್ಧಪಡಿಸಿ, ಮೃದುಗೊಳಿಸಿ, ಶುದ್ಧಗೊಳಿಸುವ ಅಗತ್ಯವಿತ್ತು. ಅವರು ತಮ್ಮ “ಹೃದಯದ ಮುಂದೊಗಲನ್ನು” ಅಂದರೆ ತಮ್ಮ ಕೆಟ್ಟ ಆಲೋಚನೆಗಳು, ಭಾವನೆಗಳು ಮತ್ತು ಹೇತುಗಳನ್ನು ತೆಗೆದುಹಾಕಬೇಕಾಗಿತ್ತು. (ಯೆರೆಮೀಯ 9:25, 26; ಅ. ಕೃತ್ಯಗಳು 7:51) ಇದು ಅವರ ಜೀವನಶೈಲಿಯಲ್ಲಿ ಬದಲಾವಣೆಯನ್ನು—ದುಷ್ಕೃತ್ಯಗಳನ್ನು ಬಿಟ್ಟುಬಿಟ್ಟು ದೇವರ ಆಶೀರ್ವಾದವನ್ನು ತರುವ ಕೃತ್ಯಗಳನ್ನು ಮಾಡುವುದನ್ನು—ಅವಶ್ಯಪಡಿಸಿತು.
4:10—ಯೆಹೋವನು ದಂಗೆಕೋರರಾದ ತನ್ನ ಜನರನ್ನು ಮೋಸಗೊಳಿಸಿದ್ದು ಯಾವ ಅರ್ಥದಲ್ಲಿ? ಯೆರೆಮೀಯನ ದಿನಗಳಲ್ಲಿ ‘ಸುಳ್ಳಾಗಿ ಪ್ರವಾದಿಸುತ್ತಿದ್ದ’ ಪ್ರವಾದಿಗಳಿದ್ದರು. (ಯೆರೆಮೀಯ 5:31; 20:6; 23:16, 17, 25-28, 32) ಅಂಥವರು ದಾರಿತಪ್ಪಿಸುವಂಥ ಸಂದೇಶಗಳನ್ನು ಸಾರದಂತೆ ಯೆಹೋವನು ಅವರನ್ನು ತಡೆಯಲಿಲ್ಲ.
16:16—ಯೆಹೋವನು “ಬಹು ಮಂದಿ ಬೆಸ್ತರನ್ನು” ಮತ್ತು “ಬಹುಜನ ಬೇಡರನ್ನು” ಕಳುಹಿಸುವನೆಂಬ ಮಾತಿನಿಂದ ಏನು ಸೂಚಿಸಲ್ಪಟ್ಟಿದೆ? ಯೆಹೋವನಿಗೆ ಅಪನಂಬಿಗಸ್ತರಾಗಿದ್ದ ಯೆಹೂದ್ಯರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ಹುಡುಕಲಿಕ್ಕಾಗಿ ಶತ್ರುಪಡೆಗಳನ್ನು ಕಳುಹಿಸುವನೆಂದು ಇದು ಸೂಚಿಸುತ್ತಿರಬಹುದು. ಆದರೆ, ಯೆರೆಮೀಯ 16:15 ಏನು ತಿಳಿಸುತ್ತದೋ ಅದಕ್ಕನುಸಾರ, ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರನ್ನು ಹುಡುಕುವುದರ ಕುರಿತಾಗಿಯೂ ಈ ವಚನ ಸೂಚಿಸುತ್ತಿರಬಹುದು.
20:7—ಯೆಹೋವನು ಯೆರೆಮೀಯನಿಗಿಂತ ‘ಬಲಿಷ್ಠನಾಗಿ ಗೆದ್ದದ್ದು’ ಮತ್ತು ಅವನನ್ನು ಮರುಳುಗೊಳಿಸಿದ್ದು ಯಾವ ವಿಧದಲ್ಲಿ? ಯೆಹೋವನ ನ್ಯಾಯತೀರ್ಪುಗಳನ್ನು ಘೋಷಿಸುವಾಗ ಯೆರೆಮೀಯನು ಅನುಭವಿಸಿದ ತಾತ್ಸಾರ, ತಿರಸ್ಕಾರ ಮತ್ತು ಹಿಂಸೆಯ ಕಾರಣ ಇನ್ನುಮುಂದೆ ಆ ಕೆಲಸವನ್ನು ಮುಂದುವರಿಸಲು ತನಗೆ ಬಲವಿಲ್ಲವೆಂದು ಅವನು ಎಣಿಸಿದ್ದಿರಬಹುದು. ಆದರೆ ಯೆರೆಮೀಯನಿಗೆ ಆ ಕೆಲಸವನ್ನು ಮುಂದುವರಿಸಲು ಶಕ್ತಿಯನ್ನು ಕೊಡುತ್ತಾ ಯೆಹೋವನು ಅವನ ಆ ಪ್ರವೃತ್ತಿಗಳಿಗಿಂತ ಬಲಿಷ್ಠನಾಗಿ ಪರಿಣಮಿಸಿದನು. ಹೀಗೆ ಯೆರೆಮೀಯನು ತಾನು ಏನನ್ನು ಮಾಡಲು ಅಶಕ್ತನೆಂದು ಎಣಿಸಿದನೋ ಅದನ್ನೇ ಸಾಧಿಸುವಂತೆ ಮಾಡುವ ಮೂಲಕ ಯೆಹೋವನು ಅವನನ್ನು ಮರುಳುಗೊಳಿಸಿದನು.
ನಮಗಾಗಿರುವ ಪಾಠಗಳು:
1:8. ಯೆಹೋವನು ಕೆಲವೊಮ್ಮೆ ತನ್ನ ಜನರನ್ನು ಉದ್ಧರಿಸಲು ಅಂದರೆ ಹಿಂಸೆಯಿಂದ ತಪ್ಪಿಸಲು ಬಹುಶಃ ಪಕ್ಷಪಾತವಿಲ್ಲದ ನ್ಯಾಯಾಧೀಶರು ಮುಂದೆ ಬರುವಂತೆ ಮಾಡುವನು, ಹಗೆಭರಿತ ಅಧಿಕಾರಿಗಳ ಸ್ಥಾನದಲ್ಲಿ ನ್ಯಾಯಸಮ್ಮತ ಅಧಿಕಾರಿಗಳು ಬರುವಂತೆ ಮಾಡುವನು ಅಥವಾ ತನ್ನ ಆರಾಧಕರಿಗೆ ತಾಳಿಕೊಳ್ಳಲು ಬಲವನ್ನು ಒದಗಿಸುವನು.—1 ಕೊರಿಂಥ 10:13.
2:13, 18. ಅಪನಂಬಿಗಸ್ತರಾದ ಇಸ್ರಾಯೇಲ್ಯರು ಎರಡು ಅಪರಾಧಗಳನ್ನು ಮಾಡಿದರು. ಆಶೀರ್ವಾದ, ಮಾರ್ಗದರ್ಶನ ಮತ್ತು ಸಂರಕ್ಷಣೆಯ ನಿಶ್ಚಿತ ಮೂಲನಾಗಿರುವ ಯೆಹೋವನನ್ನು ಅವರು ತೊರೆದರು. ಅದಲ್ಲದೆ ಐಗುಪ್ತ ಮತ್ತು ಅಶ್ಶೂರ್ಯರೊಂದಿಗೆ ಸೇನಾ ಮೈತ್ರಿ ಸಂಬಂಧಗಳನ್ನು ರಚಿಸುವ ಮೂಲಕ ಸಾಂಕೇತಿಕವಾಗಿ ತಮಗೋಸ್ಕರ ತೊಟ್ಟಿಗಳನ್ನು ಕೊರೆದುಕೊಂಡಿದ್ದರು. ನಮ್ಮ ದಿನಗಳಲ್ಲಿ, ಸತ್ಯ ದೇವರನ್ನು ಬಿಟ್ಟು ಮಾನವ ತತ್ತ್ವಜ್ಞಾನಗಳು, ಸಿದ್ಧಾಂತಗಳು ಮತ್ತು ಲೋಕದ ರಾಜಕೀಯದ ಮರೆಹೋಗುವುದು “ಜೀವಜಲದ ಬುಗ್ಗೆ”ಯನ್ನು ಬಿಟ್ಟು “ನೀರು ನಿಲ್ಲದ ಬಿರಿದ ತೊಟ್ಟಿ”ಗಳಿಗೆ ಹೋದಂತಿರುವುದು.
6:16. ದಂಗೆಕೋರರಾಗಿದ್ದ ತನ್ನ ಜನರು ಸ್ವಲ್ಪ ನಿಂತು, ತಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಮತ್ತು ನಂಬಿಗಸ್ತರಾಗಿದ್ದ ಮೂಲಪಿತೃಗಳ ‘ಪುರಾತನ ಮಾರ್ಗಗಳಿಗೆ’ ಹಿಂದಿರುಗುವಂತೆ ಯೆಹೋವನು ಪ್ರೋತ್ಸಾಹಿಸಿದನು. ನಾವು ಯಾವ ಮಾರ್ಗದಲ್ಲಿ ನಡೆಯಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೋ ನಾವು ನಿಜವಾಗಿ ಅದೇ ಮಾರ್ಗದಲ್ಲಿ ನಡೆಯುತ್ತಿದ್ದೇವೋ ಎಂದು ಆಗಾಗ್ಗೆ ನಮ್ಮನ್ನೇ ಪರೀಕ್ಷಿಸಿಕೊಳ್ಳಬೇಕಲ್ಲವೇ?
7:1-15. ದೇವಾಲಯವು ತಮ್ಮನ್ನು ಕಾಪಾಡುವ ಒಂದು ತಾಯಿತಿ ಆಗಿದೆಯೋ ಎಂಬಂತೆ ಅದರ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದ ಯೆಹೂದ್ಯರಿಗೆ ಅದರಿಂದ ರಕ್ಷಣೆ ಸಿಗಲಿಲ್ಲ. ನಾವು ನೋಡುವವರಾಗಿ ನಡೆಯದೆ, ನಂಬಿಕೆಯಿಂದ ನಡೆಯಬೇಕು.—2 ಕೊರಿಂಥ 5:7.
15:16, 17. ಯೆರೆಮೀಯನಂತೆ ನಾವು ಕೂಡ ನಿರುತ್ಸಾಹವನ್ನು ಹೊಡೆದೋಡಿಸಬಲ್ಲೆವು. ಇದನ್ನು ಅರ್ಥಭರಿತ ವೈಯಕ್ತಿಕ ಅಧ್ಯಯನದಲ್ಲಿ ಆನಂದಿಸುವ, ಶುಶ್ರೂಷೆಯಲ್ಲಿ ಯೆಹೋವನ ನಾಮವನ್ನು ಘನಪಡಿಸುವ ಮತ್ತು ದುಸ್ಸಹವಾಸದಿಂದ ದೂರವಿರುವುದರ ಮೂಲಕ ಮಾಡಬಲ್ಲೆವು.
17:1, 2. ಯೆಹೂದ್ಯರ ಪಾಪಗಳ ನಿಮಿತ್ತವಾಗಿ ಅವರು ಅರ್ಪಿಸುತ್ತಿದ್ದ ಯಜ್ಞಗಳನ್ನು ಯೆಹೋವನು ಮೆಚ್ಚುತ್ತಿರಲಿಲ್ಲ. ನೈತಿಕ ಅಶುದ್ಧತೆಯು ನಮ್ಮ ಸ್ತೋತ್ರಯಜ್ಞಗಳನ್ನು ಅನಂಗೀಕೃತವನ್ನಾಗಿ ಮಾಡುತ್ತದೆ.
17:5-8. ಮಾನವರು ಮತ್ತು ಸಂಘಸಂಸ್ಥೆಗಳು ಎಲ್ಲಿಯವರೆಗೆ ದೇವರ ಚಿತ್ತ ಮತ್ತು ದೈವಿಕ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಡೆಯುತ್ತವೋ ಅಷ್ಟರವರೆಗೆ ಮಾತ್ರ ಅವು ನಮ್ಮ ಭರವಸೆಗೆ ಅರ್ಹವಾಗಿವೆ. ಆದರೆ ರಕ್ಷಣೆ ಹಾಗೂ ನಿಜವಾದ ಶಾಂತಿ ಮತ್ತು ಭದ್ರತೆಯಂಥ ವಿಷಯಗಳಿಗಾಗಿ ನಾವು ಯೆಹೋವನೊಬ್ಬನಲ್ಲೇ ಭರವಸೆಯಿಡುವ ಮೂಲಕ ವಿವೇಕಿಗಳಾಗಿ ನಡೆದುಕೊಳ್ಳುತ್ತೇವೆ.—ಕೀರ್ತನೆ 146:3.
20:8-11. ನಿರಾಸಕ್ತಿ, ಹಿಂಸೆ ಅಥವಾ ವಿರೋಧವು, ರಾಜ್ಯದ ಸಾರುವ ಕೆಲಸದಲ್ಲಿ ನಮಗಿರುವ ಹುರುಪನ್ನು ಕುಂದಿಸುವಂತೆ ನಾವು ಬಿಡಬಾರದು.—ಯಾಕೋಬ 5:10, 11.
‘ಬಾಬೆಲಿನ ಅರಸನ ನೊಗಕ್ಕೆ ಹೆಗಲುಕೊಟ್ಟು ಅವನಿಗೆ ಅಡಿಯಾಳಾಗಿರಿ’
ಯೆಹೂದವನ್ನಾಳಿದ ಕೊನೆಯ ನಾಲ್ಕು ಅರಸರ ವಿರುದ್ಧ ಮತ್ತು ಸುಳ್ಳು ಪ್ರವಾದಿಗಳ, ಬೇಜವಾಬ್ದಾರಿ ಕುರುಬರ ಹಾಗೂ ಭ್ರಷ್ಟ ಯಾಜಕರ ವಿರುದ್ಧ ಯೆರೆಮೀಯನು ನ್ಯಾಯತೀರ್ಪುಗಳನ್ನು ಘೋಷಿಸಿದನು. ಉಳಿದ ನಂಬಿಗಸ್ತ ಜನರನ್ನು ಉತ್ತಮವಾದ ಅಂಜೂರಕ್ಕೆ ಹೋಲಿಸುತ್ತಾ ಯೆಹೋವನು ಹೇಳುವುದು: “[ನಾನು] ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು.” (ಯೆರೆಮೀಯ 24:5, 6) 25ನೇ ಅಧ್ಯಾಯದಲ್ಲಿರುವ ಮೂರು ಪ್ರವಾದನೆಗಳಲ್ಲಿ ಕೆಲವು ನ್ಯಾಯತೀರ್ಪುಗಳನ್ನು ಚುಟುಕಾಗಿ ತಿಳಿಸಲಾಗಿದ್ದು, ಇವುಗಳನ್ನು ನಂತರದ ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.
ಯಾಜಕರು ಮತ್ತು ಪ್ರವಾದಿಗಳು ಯೆರೆಮೀಯನನ್ನು ಕೊಲ್ಲಲು ಹೊಂಚುಹಾಕುತ್ತಿದ್ದರು. ಏಕೆಂದರೆ ಅವರು ಬಾಬೆಲಿನ ಅರಸನಿಗೆ ಅಡಿಯಾಳಾಗುವರು ಎಂಬುದೇ ಅವನ ಸಂದೇಶವಾಗಿತ್ತು. ಅರಸನಾದ ಚಿದ್ಕೀಯನಿಗೆ ಯೆರೆಮೀಯನು ಹೇಳಿದ್ದು: ‘ಬಾಬೆಲಿನ ಅರಸನ ನೊಗಕ್ಕೆ ಹೆಗಲುಕೊಟ್ಟು ಅವನಿಗೆ ಅಡಿಯಾಳಾಗಿರಿ.’ (ಯೆರೆಮೀಯ 27:12) ಆದರೆ ‘ಇಸ್ರಾಯೇಲ್ಯರನ್ನು ಚದರಿಸಿದಾತನೇ [ಇಸ್ರಾಯೇಲನ್ನು] ಕೂಡಿಸುವನು.’ (ಯೆರೆಮೀಯ 31:10) ರೆಕಾಬ್ಯರು ತೋರಿಸಿದ ನಂಬಿಗಸ್ತಿಕೆಗಾಗಿ ಸಕಾರಣದಿಂದಲೇ ಅವರಿಗೆ ಒಂದು ವಾಗ್ದಾನವನ್ನು ಮಾಡಲಾಯಿತು. ಯೆರೆಮೀಯನನ್ನು ‘ಕಾರಾಗೃಹದ ಅಂಗಳದಲ್ಲಿ’ ಇಡಲಾಯಿತು. (ಯೆರೆಮೀಯ 37:21) ಯೆರೂಸಲೇಮನ್ನು ನಾಶಗೊಳಿಸಲಾಯಿತು ಮತ್ತು ಅದರ ಹೆಚ್ಚಿನ ನಿವಾಸಿಗಳನ್ನು ಸೆರೆಗೊಯ್ಯಲಾಯಿತು. ಆದರೆ ಪಾರಾಗಿ ಉಳಿದವರಲ್ಲಿ ಯೆರೆಮೀಯ ಮತ್ತು ಅವನ ಕಾರ್ಯದರ್ಶಿಯಾದ ಬಾರೂಕರಿದ್ದರು. ಭಯಭೀತರಾದ ಜನರು ಐಗುಪ್ತಕ್ಕೆ ಹೋಗಬಾರದೆಂದು ಯೆರೆಮೀಯನು ಎಚ್ಚರಿಕೆ ನೀಡಿದರೂ ಅವರು ಅದಕ್ಕೆ ಕಿವಿಗೊಡಲಿಲ್ಲ. 46ರಿಂದ 51ನೆಯ ಅಧ್ಯಾಯಗಳಲ್ಲಿ ಯೆರೆಮೀಯನು ಜನಾಂಗಗಳ ಕುರಿತಾಗಿ ಹೇಳಿದ ಸಂದೇಶಗಳಿವೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
22:30—ಈ ಆಜ್ಞೆಯು ದಾವೀದನ ಸಿಂಹಾಸನವನ್ನೇರಲು ಯೇಸು ಕ್ರಿಸ್ತನಿಗಿದ್ದ ಹಕ್ಕನ್ನು ರದ್ದುಗೊಳಿಸಿತೋ? (ಮತ್ತಾಯ 1:1, 11) ಇಲ್ಲ. ಯೆಹೋಯಾಖೀನನ ವಂಶಸ್ಥರಲ್ಲಿ “ಯಾವನೂ ದಾವೀದನ ಸಿಂಹಾಸನದಲ್ಲಿ ಕೂತು ಯೆಹೂದವನ್ನು ಆಳುವುದನ್ನು” ಈ ಆಜ್ಞೆಯು ನಿಷೇಧಿಸಿತು. ಯೇಸುವಾದರೋ ಪರಲೋಕದಿಂದ ಆಳುವನೇ ಹೊರತು ಯೆಹೂದದಲ್ಲಿರುವ ಸಿಂಹಾಸನದಿಂದಲ್ಲ.
23:33—“ಯೆಹೋವನು ದಯಪಾಲಿಸಿರುವ ವಾಕ್ಯಭಾರವೇನು?” ಯೆರೆಮೀಯನ ದಿನಗಳಲ್ಲಿ, ಯೆರೂಸಲೇಮಿನ ನಾಶನದ ಕುರಿತು ಪ್ರವಾದಿಯು ಮಾಡಿದ ಗಂಭೀರವಾದ ಘೋಷಣೆಗಳು ಅವನ ದೇಶದ ಜನರಿಗೆ ಒಂದು ಭಾರದಂತಿದ್ದವು. ಹಾಗೆಯೇ ಈ ಘೋಷಣೆಗಳಿಗೆ ಪ್ರತಿಕ್ರಿಯೆ ತೋರಿಸದಿದ್ದ ಜನರು ಯೆಹೋವನಿಗೆ ಎಷ್ಟು ಭಾರವಾಗಿದ್ದರೆಂದರೆ ಆತನು ಅವರನ್ನು ತಿರಸ್ಕರಿಸಲಿದ್ದನು. ತದ್ರೀತಿಯಲ್ಲಿ, ಮುಂದೆ ಸಂಭವಿಸಲಿರುವ ಕ್ರೈಸ್ತಪ್ರಪಂಚದ ನಾಶನದ ಕುರಿತಾದ ಶಾಸ್ತ್ರಾಧಾರಿತ ಸಂದೇಶವು ಕ್ರೈಸ್ತಪ್ರಪಂಚಕ್ಕೆ ಒಂದು ಭಾರದಂತಿದೆ ಮತ್ತು ಈ ಸಂದೇಶಕ್ಕೆ ಕಿವಿಗೊಡದವರು ದೇವರಿಗೆ ಭಾರವಾಗಿದ್ದಾರೆ.
31:33—ದೇವರ ಧರ್ಮಶಾಸ್ತ್ರವು ಹೃದಯದೊಳಗೆ ಬರೆಯಲ್ಪಟ್ಟಿದೆ ಎಂದು ಹೇಗೆ ಹೇಳಸಾಧ್ಯವಿದೆ? ಒಬ್ಬ ವ್ಯಕ್ತಿಯು ದೇವರ ಧರ್ಮಶಾಸ್ತ್ರವನ್ನು ಗಾಢವಾಗಿ ಪ್ರೀತಿಸುವಾಗ ಯೆಹೋವನ ಚಿತ್ತವನ್ನು ಮಾಡಲು ಅವನಿಗೆ ಕಡುಬಯಕೆ ಇರುವುದು. ಅಂಥವನ ಹೃದಯದಲ್ಲಿ ದೇವರ ಧರ್ಮಶಾಸ್ತ್ರವು ಬರೆಯಲ್ಪಟ್ಟಿದೆ ಎಂದು ಹೇಳಸಾಧ್ಯವಿದೆ.
32:10-15—ಒಂದೇ ಒಪ್ಪಂದವಿರುವ ಎರಡು ಕ್ರಯಪತ್ರಗಳನ್ನು ಮಾಡುವ ಉದ್ದೇಶವೇನಾಗಿತ್ತು? ಒಪ್ಪಂದದಲ್ಲಿ ಒಳಗೂಡಿದ್ದ ಜನರು ನೋಡುವ ಸಲುವಾಗಿ ಒಂದು ಕ್ರಯಪತ್ರವನ್ನು ತೆರೆದಿಡಲಾಗುತ್ತಿತ್ತು. ಇದನ್ನು ಮುಚ್ಚಳದ ಪತ್ರವೆಂದು ಕರೆಯಲಾಗಿದೆ. ಈ ಕ್ರಯಪತ್ರದ ನಿಷ್ಕೃಷ್ಟತೆಯನ್ನು ಮುಂದೆಂದಾದರೂ ಪರಿಶೀಲಿಸಬೇಕಾಗಿ ಬರುವಲ್ಲಿ ಸಹಾಯಮಾಡಲು ಒಂದು ಕ್ರಯಪತ್ರವನ್ನು ಮುಚ್ಚಿಡಲಾಗುತ್ತಿತ್ತು. ಒಬ್ಬ ಸಂಬಂಧಿಕನು ಹಾಗೂ ಜೊತೆ ಆರಾಧಕನಾಗಿದ್ದ ವ್ಯಕ್ತಿಯೊಂದಿಗೆ ವ್ಯವಹರಿಸುವಾಗಲೂ ನ್ಯಾಯಸಮ್ಮತವಾದ ಕಾನೂನಿನ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಯೆರೆಮೀಯನು ನಮಗೊಂದು ಒಳ್ಳೇ ಮಾದರಿಯನ್ನಿಟ್ಟನು.
33:23, 24—ಇಲ್ಲಿ ಯಾವ “ಎರಡು ವಂಶಗಳ” ಕುರಿತು ಮಾತಾಡಲಾಗಿದೆ? ಒಂದು ವಂಶವು, ಅರಸನಾದ ದಾವೀದನ ರಾಜ ವಂಶವಾಗಿದೆ, ಮತ್ತೊಂದು ಆರೋನನ ಸಂತತಿಯ ಯಾಜಕವಂಶವಾಗಿದೆ. ಯೆರೂಸಲೇಮಿನ ಮತ್ತು ಆಲಯದ ನಾಶನವಾದಾಗ, ಯೆಹೋವನು ಈ ಎರಡೂ ವಂಶಗಳನ್ನು ತ್ಯಜಿಸಿದ್ದಾನೆ ಮತ್ತು ಇನ್ನುಮುಂದೆ ಈ ಭೂಮಿಯ ಮೇಲೆ ಆತನ ಒಂದು ರಾಜ್ಯ ಇರುವುದಿಲ್ಲ ಇಲ್ಲವೆ ಆತನು ತನ್ನ ಆರಾಧನೆಯನ್ನು ಪುನರುಜ್ಜೀವಿಸುವುದಿಲ್ಲ ಎಂಬಂತೆ ತೋರಿಬಂತು.
46:22—ಐಗುಪ್ತದ ಶಬ್ದವನ್ನು ಸರ್ಪದ ಸಪ್ಪಳಕ್ಕೆ ಏಕೆ ಹೋಲಿಸಲಾಗಿದೆ? ಈ ಶಬ್ದವು ಹಿಮ್ಮೆಟ್ಟುತ್ತಿರುವ ಸರ್ಪದ ಸಪ್ಪಳವನ್ನು ಅಥವಾ ಒಂದು ಜನಾಂಗವಾಗಿ ಐಗುಪ್ತವು ದುರಂತಕರ ರೀತಿಯಲ್ಲಿ ಸೋಲನ್ನನುಭವಿಸಿದ ಅವಮಾನವನ್ನು ಸೂಚಿಸುತ್ತಿರಬಹುದು. ಈ ಉಪಮಾನವು, ಐಗುಪ್ತದ ಫರೋಹರು ಸರ್ಪದೇವತೆಯಾದ ಯುಆಟ್ಚಿಟ್ ತಮಗೆ ರಕ್ಷಣೆಯನ್ನೊದಗಿಸುತ್ತದೆಂದು ನಂಬಿಕೊಂಡು, ತಮ್ಮ ತಲೆಯುಡಿಗೆಯಲ್ಲಿ ಆ ಪವಿತ್ರ ಸರ್ಪದ ಪ್ರತಿರೂಪವನ್ನು ಧರಿಸುತ್ತಿದ್ದದ್ದು ಎಷ್ಟು ವ್ಯರ್ಥ ಎಂಬುದನ್ನೂ ತೋರಿಸಿತು.
ನಮಗಾಗಿರುವ ಪಾಠಗಳು:
21:8, 9; 38:19. ನಾಶನಕ್ಕೆ ಅರ್ಹರಾಗಿದ್ದ, ಪಶ್ಚಾತ್ತಾಪವೇ ಪಡದಿದ್ದ ಯೆರೂಸಲೇಮಿನ ನಿವಾಸಿಗಳಿಗೆ ಯೆರೂಸಲೇಮ್ ನಾಶವಾಗುವುದಕ್ಕೆ ಮುಂಚೆ ಕೊನೇ ಗಳಿಗೆಯಲ್ಲಿಯೂ ತಮ್ಮನ್ನು ತಿದ್ದಿಕೊಳ್ಳುವಂತೆ ಯೆಹೋವನು ಅವರಿಗೆ ಆಯ್ಕೆಯನ್ನು ಕೊಟ್ಟನು. ಹೌದು, ಯೆಹೋವನ “ಕೃಪಾಕಾರ್ಯಗಳು ಬಹಳವಾಗಿವೆ.”—2 ಸಮುವೇಲ 24:14; ಕೀರ್ತನೆ 119:156.
31:34. ಯೆಹೋವನು ಯಾರನ್ನು ಕ್ಷಮಿಸುತ್ತಾನೊ ಅವರ ಪಾಪಗಳನ್ನು ಮರುಜ್ಞಾಪಿಸಿಕೊಂಡು ಅವರನ್ನು ಭವಿಷ್ಯತ್ತಿನಲ್ಲಿ ದಂಡಿಸುವುದಿಲ್ಲ ಎಂದು ತಿಳಿದಿರುವುದು ಎಷ್ಟು ಸಾಂತ್ವನದಾಯಕವಾಗಿದೆ!
38:7-13; 39:15-18. ನಮ್ಮ ನಂಬಿಗಸ್ತ ಸೇವೆಯನ್ನು, ಅದರಲ್ಲೂ ‘ದೇವಜನರಿಗೆ ಮಾಡಿದ ಉಪಚಾರವನ್ನು’ ಯೆಹೋವನು ಎಂದಿಗೂ ಮರೆಯುವುದಿಲ್ಲ.—ಇಬ್ರಿಯ 6:10.
45:4, 5. ಯೆಹೂದಿ ವಿಷಯಗಳ ಅಂತ್ಯದಿನಗಳಲ್ಲಿ ಇದ್ದಂತೆಯೇ, ಸದ್ಯದ ವ್ಯವಸ್ಥೆಯ “ಕಡೇ ದಿವಸ”ಗಳು ಸಂಪತ್ತು, ಸ್ಥಾನಮಾನ ಅಥವಾ ಭೌತಿಕ ಭದ್ರತೆಗಳಂಥ “ದೊಡ್ಡ” (NIBV) ವಿಷಯಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವ ಸಮಯವಾಗಿರುವುದಿಲ್ಲ.—2 ತಿಮೊಥೆಯ 3:1; 1 ಯೋಹಾನ 2:17.
ಸುಟ್ಟು ಹೋಗುತ್ತಿರುವ ಯೆರೂಸಲೇಮ್ ಪಟ್ಟಣ
ಅರಸ ಚಿದ್ಕೀಯನ ಆಳ್ವಿಕೆಯ 11ನೆಯ ವರ್ಷ ಅಂದರೆ ಸಾ.ಶ.ಪೂ. 607ಕ್ಕೆ ಮುಂಚೆ 18 ತಿಂಗಳುಗಳ ಕಾಲ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಮುತ್ತಿಗೆಹಾಕಿದನು. ನೆಬೂಕದ್ನೆಚ್ಚರನ ಆಳ್ವಿಕೆಯ 19ನೇ ವರ್ಷದ ಐದನೇ ತಿಂಗಳಿನ ಏಳನೆಯ ದಿನದಲ್ಲಿ, ಅರಸನ ಅಧಿಪತಿಯಾದ ನೆಬೂಜರದಾನನೆಂಬವನು ಯೆರೂಸಲೇಮಿಗೆ ‘ಬಂದನು.’ (2 ಅರಸುಗಳು 25:8) ಅವನು ನಗರದ ಗೋಡೆಯ ಹೊರಗೆ ಪಾಳೆಯಹೂಡಿ ಬಹುಶಃ ಸನ್ನಿವೇಶದ ಸಮೀಕ್ಷೆ ನಡೆಸುತ್ತಾ ತನ್ನ ಕಾರ್ಯಾಚರಣೆಯ ಬಗ್ಗೆ ಯೋಜನೆಗಳನ್ನು ಮಾಡಿದನು. ಇದಾದ ಮೂರು ದಿನಗಳ ಬಳಿಕ ಅಂದರೆ ಐದನೇ ತಿಂಗಳಿನ ಹತ್ತನೆಯ ದಿನ ಅವನು ಯೆರೂಸಲೇಮ್ ನಗರದೊಳಗೆ ‘ಬಂದನು’ ಅಥವಾ ಪ್ರವೇಶಿಸಿದನು. ಅವನು ಮುಂದುವರಿದು ಪಟ್ಟಣಕ್ಕೆ ಬೆಂಕಿ ಹಚ್ಚಿ ಸುಟ್ಟುಬಿಟ್ಟನು.—ಯೆರೆಮೀಯ 52:12, 13.
ಯೆರೆಮೀಯನು ಯೆರೂಸಲೇಮ್ ಪಟ್ಟಣದ ನಾಶನದ ಕುರಿತು ವಿವರವಾದ ವೃತ್ತಾಂತವನ್ನು ಕೊಟ್ಟಿದ್ದಾನೆ. ಅವನ ಈ ವರ್ಣನೆಯು ಪ್ರಲಾಪಗಳು ಎಂಬ ಹೆಸರಿನ ಬೈಬಲ್ ಪುಸ್ತಕದಲ್ಲಿರುವ ಶೋಕಗೀತೆಗಳಿಗೆ ಕಾರಣ ಏನೆಂಬುದನ್ನು ತೋರಿಸುತ್ತದೆ. (w07 3/15)
[ಪುಟ 8ರಲ್ಲಿರುವ ಚಿತ್ರ]
ಯೆರೆಮೀಯನ ಘೋಷಣೆಗಳಲ್ಲಿ ಯೆರೂಸಲೇಮಿನ ವಿರುದ್ಧ ಯೆಹೋವನ ನ್ಯಾಯತೀರ್ಪು ಸಹ ಒಳಗೂಡಿದೆ
[ಪುಟ 9ರಲ್ಲಿರುವ ಚಿತ್ರ]
ಯೆಹೋವನು ಯೆರೆಮೀಯನಿಗಿಂತ ‘ಬಲಿಷ್ಠನಾಗಿ ಗೆದ್ದದ್ದು’ ಹೇಗೆ?
[ಪುಟ 10ರಲ್ಲಿರುವ ಚಿತ್ರ]
“ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು.”—ಯೆರೆಮೀಯ 24:5