ಯೆಹೋವನ ವಾಕ್ಯವು ಸಜೀವವಾದದ್ದು
ಯೆಹೆಜ್ಕೇಲ ಪುಸ್ತಕದ ಮುಖ್ಯಾಂಶಗಳು—I
ಇಸವಿ ಸಾ.ಶ.ಪೂ. 615ರ ಸಮಯ. ಪ್ರವಾದಿ ಯೆರೆಮೀಯನು ಯೆಹೂದದಲ್ಲಿದ್ದು ಯೆರೂಸಲೇಮಿನ ಸಮೀಪಿಸುತ್ತಿರುವ ನಾಶನ ಮತ್ತು ಯೆಹೂದ ದೇಶದ ನಿರ್ಜನಾವಸ್ಥೆಯ ಕುರಿತು ನಿರ್ಭೀತಿಯಿಂದ ಸಾರುತ್ತಿದ್ದಾನೆ. ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಈಗಾಗಲೇ ಅನೇಕ ಯೆಹೂದ್ಯರನ್ನು ಸೆರೆ ಒಯ್ದಿದ್ದಾನೆ. ಅಂಥವರಲ್ಲಿ ಯುವಕರಾದ ದಾನಿಯೇಲ ಮತ್ತವನ ಮೂವರು ಸಂಗಡಿಗರು ಕಸ್ದೀಯ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಯೆಹೂದಿ ಬಂಧಿವಾಸಿಗಳು ‘ಕಸ್ದೀಯ ದೇಶದ’ ಕೆಬಾರ್ ನದಿಯ ಹತ್ತಿರ ಜೀವಿಸುತ್ತಿದ್ದಾರೆ. (ಯೆಹೆಜ್ಕೇಲ 1:1-3) ಯೆಹೋವನು ಸೆರೆಯಲ್ಲಿದ್ದವರನ್ನು ತನ್ನ ಸಂದೇಶವಾಹಕರಿಲ್ಲದವರಾಗಿ ಬಿಟ್ಟುಬಿಡುವುದಿಲ್ಲ. ಆತನು 30 ವರ್ಷ ಪ್ರಾಯದ ಯೆಹೆಜ್ಕೇಲನನ್ನು ತನ್ನ ಪ್ರವಾದಿಯಾಗಿ ನೇಮಿಸುತ್ತಾನೆ.
ಇಸವಿ ಸಾ.ಶ.ಪೂ. 591ರಲ್ಲಿ ಬರೆದು ಮುಗಿಸಲ್ಪಟ್ಟ ಯೆಹೆಜ್ಕೇಲನ ಪುಸ್ತಕವು 22 ವರ್ಷಗಳ ಅವಧಿಯನ್ನು ಆವರಿಸುತ್ತದೆ. ಯೆಹೆಜ್ಕೇಲನು ತನ್ನ ಬರವಣಿಗೆಯಲ್ಲಿ ಅತಿಸೂಕ್ಷ್ಮ ವಿವರಗಳಿಗೂ ಗಮನ ಕೊಡುತ್ತಾನೆ. ಅವನು ತನ್ನ ಪ್ರವಾದನೆಗಳ ತಾರೀಖುಗಳನ್ನು ದಾಖಲಿಸುತ್ತಾನೆ. ಅವನು ವರ್ಷವನ್ನು ಮಾತ್ರವಲ್ಲ, ತಿಂಗಳು ಹಾಗೂ ದಿನವನ್ನು ಸಹ ನಿಖರವಾಗಿ ದಾಖಲಿಸುತ್ತಾನೆ. ಯೆಹೆಜ್ಕೇಲನ ಸಂದೇಶದ ಮೊದಲ ಭಾಗವು ಯೆರೂಸಲೇಮಿನ ಪತನ ಮತ್ತು ನಾಶನದ ಕುರಿತಾಗಿದೆ. ಎರಡನೆಯ ಭಾಗವು ಸುತ್ತಲಿನ ಜನಾಂಗಗಳಿಗೆ ದೈವೋಕ್ತಿಗಳನ್ನು ಹೊಂದಿದೆ ಮತ್ತು ಕೊನೆಯ ಭಾಗವು ಯೆಹೋವನ ಆರಾಧನೆಯ ಪುನಃಸ್ಥಾಪನೆಯ ಕುರಿತಾಗಿದೆ. ಈ ಲೇಖನವು ಯೆಹೆಜ್ಕೇಲ 1:1-24:27ರಲ್ಲಿ ಸೇರಿರುವ ದರ್ಶನಗಳು, ಪ್ರವಾದನೆಗಳು ಮತ್ತು ಯೆರೂಸಲೇಮಿಗೆ ಏನಾಗಲಿಕ್ಕಿದೆ ಎಂಬುದರ ಕುರಿತ ಅಭಿನಯಗಳ ಮುಖ್ಯಾಂಶಗಳನ್ನು ಚರ್ಚಿಸುತ್ತದೆ.
‘ನಾನು ನಿನ್ನನ್ನು ಕಾವಲುಗಾರನನ್ನಾಗಿ ನೇಮಿಸಿದ್ದೇನೆ’
ಯೆಹೆಜ್ಕೇಲನು ಯೆಹೋವನ ಸಿಂಹಾಸನದ ಭಯವಿಸ್ಮಯಗೊಳಿಸುವ ದರ್ಶನವನ್ನು ನೋಡಿದ ಬಳಿಕ ತನ್ನ ನೇಮಕವನ್ನು ಪಡೆಯುತ್ತಾನೆ. ಯೆಹೋವನು ಅವನಿಗೆ ಹೇಳುವುದು: “ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು.” (ಯೆಹೆಜ್ಕೇಲ 3:17) ಯೆರೂಸಲೇಮಿನ ಮುತ್ತಿಗೆ ಮತ್ತು ಅದರ ಪರಿಣಾಮಗಳ ಕುರಿತು ಪ್ರವಾದಿಸಲಿಕ್ಕಾಗಿ ಯೆಹೆಜ್ಕೇಲನು ಎರಡು ಮೂಕಾಭಿನಯಗಳನ್ನು ಮಾಡಿ ತೋರಿಸಬೇಕೆಂಬ ಆದೇಶ ಅವನಿಗೆ ಸಿಗುತ್ತದೆ. ಯೆಹೂದ ದೇಶವನ್ನು ಸೂಚಿಸಿ ಯೆಹೋವನು ಯೆಹೆಜ್ಕೇಲನ ಮೂಲಕ ಹೇಳುವುದು: “ಇಗೋ, ನಾನೇ ನಿಮ್ಮ ಮೇಲೆ ಖಡ್ಗವನ್ನು ಬರಮಾಡಿ ನಿಮ್ಮ ಪೂಜಾಸ್ಥಳಗಳನ್ನು ನಾಶಪಡಿಸುವೆನು.” (ಯೆಹೆಜ್ಕೇಲ 6:3) ದೇಶದ ನಿವಾಸಿಗಳನ್ನು ಸೂಚಿಸಿ ಅವನು ಹೇಳುವುದು: “ನಿನ್ನ ಗತಿ ಆಯಿತು.”—ಯೆಹೆಜ್ಕೇಲ 7:7.
ಇಸವಿ ಸಾ.ಶ.ಪೂ. 612ರಲ್ಲಿ, ಒಂದು ದರ್ಶನವು ಯೆಹೆಜ್ಕೇಲನನ್ನು ಯೆರೂಸಲೇಮಿಗೆ ಕೊಂಡೊಯ್ಯುತ್ತದೆ. ದೇವರ ಆಲಯದಲ್ಲಿ ಎಂಥ ಅಸಹ್ಯ ವಿಷಯಗಳು ನಡೆಯುತ್ತಿರುವುದನ್ನು ಅವನು ನೋಡುತ್ತಾನೆ! ಯೆಹೋವನು, ಆ ಧರ್ಮಭ್ರಷ್ಟರ ಮೇಲಿನ ತನ್ನ ಕೋಪವನ್ನು ವ್ಯಕ್ತಪಡಿಸಲು ತನ್ನ ಸ್ವರ್ಗೀಯ ಸಂಹಾರ ಪಡೆಗಳನ್ನು (‘ಆರುಮಂದಿ ಪುರುಷರಿಂದ’ ಪ್ರತಿನಿಧಿಸಲಾಗಿದೆ) ಕಳುಹಿಸುವಾಗ, “ಹಣೆಯ ಮೇಲೆ ಗುರುತು” ಪಡೆದುಕೊಂಡವರು ಮಾತ್ರ ಬದುಕಿ ಉಳಿಯುವರು. (ಯೆಹೆಜ್ಕೇಲ 9:2-6) ಹಾಗಿದ್ದರೂ, “ಕೆಂಡಗಳನ್ನು” ಅಂದರೆ, ದೇವರ ಉರಿಯುತ್ತಿರುವ ನಾಶನದ ಸಂದೇಶಗಳನ್ನು ಮೊದಲು ಪಟ್ಟಣದ ಮೇಲೆ ಎರಚಬೇಕು. (ಯೆಹೆಜ್ಕೇಲ 10:2) ಯೆಹೋವನು ದುಷ್ಟರ ‘ದುರ್ನಡತೆಯನ್ನು ಅವರ ತಲೆಗೆ ಕಟ್ಟು’ವನಾದರೂ ಚದರಿರುವ ಇಸ್ರಾಯೇಲ್ಯರನ್ನು ತಾನು ಕೂಡಿಸುವೆನೆಂದು ಮಾತುಕೊಡುತ್ತಾನೆ.—ಯೆಹೆಜ್ಕೇಲ 11:17-21.
ದೇವರ ಆತ್ಮವು ಯೆಹೆಜ್ಕೇಲನನ್ನು ಕಸ್ದೀಯಕ್ಕೆ ಹಿಂದೆ ತರುತ್ತದೆ. ಒಂದು ಅಭಿನಯವು, ರಾಜ ಚಿದ್ಕೀಯನು ಮತ್ತು ಜನರು ಯೆರೂಸಲೇಮಿನಿಂದ ಪಲಾಯನಗೈಯುವುದನ್ನು ಚಿತ್ರಿಸುತ್ತದೆ. ಸುಳ್ಳು ಪ್ರವಾದಿಗಳು ಹಾಗೂ ಪ್ರವಾದಿನಿಯರನ್ನು ಖಂಡಿಸಲಾಗಿದೆ. ವಿಗ್ರಹಾರಾಧಕರನ್ನು ತ್ಯಜಿಸಿಬಿಡಲಾಗಿದೆ. ಯೆಹೂದವನ್ನು ಉಪಯೋಗವಿಲ್ಲದ ದ್ರಾಕ್ಷಾಲತೆಗೆ ಹೋಲಿಸಲಾಗಿದೆ. ಹದ್ದು ಮತ್ತು ದ್ರಾಕ್ಷಾಲತೆಯ ಸಾಮ್ಯವು ಯೆರೂಸಲೇಮು ಸಹಾಯಕ್ಕಾಗಿ ಐಗುಪ್ತದ ಕಡೆಗೆ ತಿರುಗುವುದರಿಂದ ಬರುವ ಕಹಿ ಪರಿಣಾಮಗಳನ್ನು ತೋರಿಸುತ್ತದೆ. ಈ ಸಾಮ್ಯದ ಸಮಾಪ್ತಿಯಲ್ಲಿ, ‘ಯೆಹೋವನು ತುಟ್ಟತುದಿಯ ಚಿಗುರುಗಳಲ್ಲಿ ಅತಿಕೋಮಲವಾದದ್ದನ್ನು ಚಿವುಟಿ ಉನ್ನತೋನ್ನತವಾದ ಪರ್ವತದ ಮೇಲೆ ನಾಟುವನು’ ಎಂಬ ವಾಗ್ದಾನವಿದೆ. (ಯೆಹೆಜ್ಕೇಲ 17:22) ಆದರೆ ಯೆಹೂದದಲ್ಲಿ ಯಾವುದೇ “ರಾಜದಂಡ” ಇರುವುದಿಲ್ಲ.—ಯೆಹೆಜ್ಕೇಲ 19:14.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:4-28—ಸ್ವರ್ಗೀಯ ರಥವು ಏನನ್ನು ಚಿತ್ರಿಸುತ್ತದೆ? ಆ ರಥವು, ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗವನ್ನು ಸೂಚಿಸುತ್ತದೆ. ಇದರಲ್ಲಿ ನಂಬಿಗಸ್ತ ಆತ್ಮಜೀವಿಗಳಿದ್ದಾರೆ. ಯೆಹೋವನ ಪವಿತ್ರಾತ್ಮದಿಂದ ಅದು ಶಕ್ತಿಯನ್ನು ಪಡೆಯುತ್ತದೆ. ರಥದ ಚಾಲಕನು ಯೆಹೋವನಾಗಿದ್ದಾನೆ ಮತ್ತು ಆತನ ಮಹಿಮೆಯು ವರ್ಣಿಸಲಸಾಧ್ಯವಾಗಿದೆ. ಆತನ ಪ್ರಶಾಂತತೆಯನ್ನು ಸುಂದರ ಮುಗಿಲುಬಿಲ್ಲಿನಿಂದ ದೃಷ್ಟಾಂತಿಸಲಾಗಿದೆ.
1:5-11—ಆ ನಾಲ್ಕು ಜೀವಿಗಳು ಯಾರಾಗಿದ್ದಾರೆ? ಯೆಹೆಜ್ಕೇಲನು ಕಂಡ ರಥದ ಎರಡನೆಯ ದರ್ಶನದಲ್ಲಿ ಆ ನಾಲ್ಕು ಜೀವಿಗಳನ್ನು ಕೆರೂಬಿಯರೆಂದು ಗುರುತಿಸುತ್ತಾನೆ. (ಯೆಹೆಜ್ಕೇಲ 10:1-11; 11:22) ಈ ಎರಡನೆಯ ವರ್ಣನೆಯಲ್ಲಿ ಅವನು ಹೋರಿಯ ಮುಖವನ್ನು “ಕೆರೂಬಿಯ” ಮುಖವೆಂದು ಕರೆಯುತ್ತಾನೆ. (ಯೆಹೆಜ್ಕೇಲ 10:14) ಇಂಥ ಸಂಬೋಧನೆಯು ಸೂಕ್ತವಾಗಿದೆ ಏಕೆಂದರೆ, ಹೋರಿಯು ಬಲ ಹಾಗೂ ಶಕ್ತಿಯ ಪ್ರತೀಕವಾಗಿದೆ. ಕೆರೂಬಿಯರು ಸಹ ಬಲಾಢ್ಯ ಆತ್ಮ ಜೀವಿಗಳಾಗಿದ್ದಾರೆ.
2:6—ಯೆಹೆಜ್ಕೇಲನನ್ನು ಪದೇ ಪದೇ “ನರಪುತ್ರ”ನೆಂದು ಏಕೆ ಸೂಚಿಸಲಾಗಿದೆ? ಯೆಹೆಜ್ಕೇಲನನ್ನು ಹೀಗೆ ಸಂಬೋಧಿಸುವ ಮೂಲಕ ಅವನು ಕೇವಲ ರಕ್ತಮಾಂಸವುಳ್ಳ ಮಾನವನೆಂದು ಯೆಹೋವನು ಅವನಿಗೆ ನೆನಪುಹುಟ್ಟಿಸುತ್ತಾನೆ. ಈ ಮೂಲಕ ಮಾನವ ಸಂದೇಶವಾಹಕನ ಮತ್ತು ಸಂದೇಶದ ಮೂಲನಾಗಿದ್ದ ದೇವರ ಮಧ್ಯೆ ಇರುವ ಭಾರಿ ವ್ಯತ್ಯಾಸವನ್ನು ಆತನು ಎತ್ತಿತೋರಿಸುತ್ತಿದ್ದಾನೆ. ಇದೇ ಅರ್ಥವಿರುವ “ಮನುಷ್ಯಕುಮಾರ” ಎಂಬ ಬಿರುದನ್ನು ಸುಮಾರು 80 ಬಾರಿ ಸುವಾರ್ತಾ ಪುಸ್ತಕಗಳಲ್ಲಿ ಯೇಸುವಿಗೆ ಕೊಡಲಾಗಿದೆ. ಇದು, ದೇವಕುಮಾರನು ಒಬ್ಬ ಮಾನವನಾಗಿ ಇದ್ದನು, ಕೇವಲ ಅವತಾರತಾಳಿ ಬಂದಿರಲಿಲ್ಲವೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
2:9–3:3—ಯೆಹೆಜ್ಕೇಲನಿಗೆ ಗೋಳು ಮತ್ತು ಮೂಲುಗುಗಳಿದ್ದ ಸುರುಳಿಯು ಏಕೆ ಸಿಹಿಯಾಗಿ ರುಚಿಸಿತು? ಯೆಹೆಜ್ಕೇಲನಿಗೆ ತನ್ನ ನೇಮಕದ ಕಡೆಗಿದ್ದ ಮನೋಭಾವವು ಆ ಸುರುಳಿಯನ್ನು ಸಿಹಿಯನ್ನಾಗಿ ಮಾಡಿತು. ಒಬ್ಬ ಪ್ರವಾದಿಯಾಗಿ ಯೆಹೋವನನ್ನು ಸೇವಿಸುವ ಅವಕಾಶಕ್ಕಾಗಿ ಯೆಹೆಜ್ಕೇಲನು ಕೃತಜ್ಞನಾಗಿದ್ದನು.
4:1-17—ಯೆರೂಸಲೇಮಿಗೆ ಹಾಕಲ್ಪಡುವ ಮುತ್ತಿಗೆಯ ಕುರಿತ ದೃಶ್ಯವನ್ನು ಯೆಹೆಜ್ಕೇಲನು ನಿಜವಾಗಿ ಅಭಿನಯಿಸಿ ತೋರಿಸಿದನೋ? ಅಡುಗೆಮಾಡಲು ಉಪಯೋಗಿಸುವ ಇಂಧನವನ್ನು ಬದಲಾಯಿಸಲು ಯೆಹೆಜ್ಕೇಲನು ಮಾಡಿದ ಮನವಿ ಮತ್ತು ಯೆಹೋವನು ಅವನ ವಿನಂತಿಯನ್ನು ಪೂರೈಸಿದ್ದು, ಈ ಪ್ರವಾದಿಯು ನಿಜವಾಗಿಯೂ ದೃಶ್ಯವನ್ನು ಅಭಿನಯಿಸಿದನೆಂದು ತೋರಿಸುತ್ತದೆ. ಯೆಹೆಜ್ಕೇಲನು ಎಡಮಗ್ಗುಲಲ್ಲಿ ಮಲಗಿಕೊಳ್ಳುವುದು, ಹತ್ತು ಕುಲದವರು 390 ವರ್ಷಗಳವರೆಗೆ ನಡೆಸಿದ ಅಧರ್ಮಕ್ಕಾಗಿತ್ತು. ಈ ಸಮಯಾವಧಿ, ಸಾ.ಶ.ಪೂ. 997ರಿಂದ ಪ್ರಾರಂಭಿಸಿ ಸಾ.ಶ.ಪೂ. 607ರಲ್ಲಿ ನಡೆದ ಯೆರೂಸಲೇಮಿನ ನಾಶನದ ವರೆಗಿನ ಕಾಲವಾಗಿತ್ತು. ಬಲಮಗ್ಗುಲಲ್ಲಿ ಮಲಗಿಕೊಳ್ಳುವುದು, ಯೆಹೂದವು 40 ವರ್ಷ ಕಾಲ ನಡೆಸಿದ ಪಾಪಕ್ಕಾಗಿತ್ತು. ಇದು, ಯೆರೆಮೀಯನು ಪ್ರವಾದಿಯಾಗಿ ನೇಮಕವನ್ನು ಸಾ.ಶ.ಪೂ. 647ರಲ್ಲಿ ಹೊಂದಿದಂದಿನಿಂದ ಸಾ.ಶ.ಪೂ. 607ರ ವರೆಗಿನ ಸಮಯಾವಧಿಯಾಗಿತ್ತು. ಒಟ್ಟು 430 ದಿನಗಳ ಸಮಯಾದ್ಯಂತ ಯೆಹೆಜ್ಕೇಲನು ಕೇವಲ ಸ್ವಲ್ಪ ನೀರು ಮತ್ತು ಸ್ವಲ್ಪ ಆಹಾರವನ್ನು ಸೇವಿಸಿ ಬದುಕಿದನು ಮತ್ತು ಇದು ಯೆರೂಸಲೇಮಿನ ಮುತ್ತಿಗೆ ವೇಳೆಯಲ್ಲಿ ಬರಗಾಲವಿರುವುದೆಂಬುದನ್ನು ಪ್ರವಾದನಾತ್ಮಕವಾಗಿ ಸೂಚಿಸಿತು.
5:1-3—ಯೆಹೆಜ್ಕೇಲನು ಗಾಳಿಗೆ ತೂರಬೇಕಾದ ಕೂದಲಿನ ಭಾಗದಲ್ಲಿ ಕೆಲವು ಕೂದಲನ್ನು ತನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟಿಕೊಳ್ಳುವುದರ ಮಹತ್ವವೇನಾಗಿತ್ತು? ಇದು, 70 ವರ್ಷಗಳ ನಿರ್ಜನಾವಸ್ಥೆಯ ಬಳಿಕ ಜನರ ಒಂದು ಶೇಷವು ಯೆಹೂದಕ್ಕೆ ಹಿಂತಿರುಗಿ ಸತ್ಯಾರಾಧನೆಯನ್ನು ಪುನಃ ಆರಂಭಿಸುವುದನ್ನು ತೋರಿಸಲಿಕ್ಕಾಗಿತ್ತು.—ಯೆಹೆಜ್ಕೇಲ 11:17-20.
17:1-24—ಎರಡು ದೊಡ್ಡ ಹದ್ದುಗಳು ಯಾರಾಗಿದ್ದಾರೆ, ದೇವದಾರು ಮರದ ತುದಿಯ ಚಿಗುರುಗಳು ಕಿತ್ತಲ್ಪಟ್ಟದ್ದು ಹೇಗೆ, ಮತ್ತು ಯೆಹೋವನು ನೆಟ್ಟಿದ “ಅತಿಕೋಮಲವಾದ” ಕೊಂಬೆ ಯಾರು? ಎರಡು ಹದ್ದುಗಳು ಬಾಬೆಲ್ ಮತ್ತು ಐಗುಪ್ತದ ರಾಜರನ್ನು ಸೂಚಿಸುತ್ತವೆ. ಮೊದಲ ಹದ್ದು ದೇವದಾರು ಮರದ ತುಟ್ಟತುದಿಗೆ ಅಂದರೆ, ದಾವೀದನ ರಾಜವಂಶದಿಂದ ಬಂದಿರುವ ಸರಕಾರದ ರಾಜನಾದವನ ಬಳಿ ಬರುತ್ತದೆ. ಈ ಹದ್ದು, ಯೆಹೂದದ ಅರಸನಾದ ಯೆಹೋಯಾಖೀನನ ಸ್ಧಾನದಲ್ಲಿ ಚಿದ್ಕೀಯನನ್ನು ಇರಿಸುವ ಮೂಲಕ, ತುಟ್ಟತುದಿಯ ಚಿಗುರುಗಳನ್ನು ಚಿವುಟಿಹಾಕುತ್ತದೆ. ಚಿದ್ಕೀಯನು ತಾನು ನಿಷ್ಠನಾಗಿ ಉಳಿಯುವನೆಂಬ ಶಪಥವನ್ನು ಮಾಡಿದ್ದರೂ ಮತ್ತೊಂದು ಹದ್ದಿನ ಅಂದರೆ, ಐಗುಪ್ತದ ರಾಜನ ಸಹಾಯ ಕೋರುತ್ತಾನೆ. ಆದರೆ ಅದು ನಿಷ್ಪ್ರಯೋಜಕವಾಗಲಿತ್ತು. ರಾಜ ಚಿದ್ಕೀಯನನ್ನು ಸೆರೆಯಾಳಾಗಿ ಕೊಂಡೊಯ್ಯಲಾಗುವುದು ಮತ್ತು ಅವನು ಬಾಬೆಲಿನಲ್ಲಿ ಸಾಯುವನು. ಯೆಹೋವನು “ಅತಿಕೋಮಲವಾದ” ಕೊಂಬೆಯನ್ನು ಅಂದರೆ, ಮೆಸ್ಸೀಯ ರಾಜನನ್ನು ಸಹ ಚಿವುಟುತ್ತಾನೆ. ಇವನನ್ನು “ಉನ್ನತೋನ್ನತವಾದ ಪರ್ವತದ” ಮೇಲೆ ಅಂದರೆ, ಸ್ವರ್ಗೀಯ ಚೀಯೋನಿನಲ್ಲಿ ನೆಡಲಾಗುತ್ತದೆ. ಅಲ್ಲಿ ಅವನು “ಸೊಂಪಾದ ದೇವದಾರು ಮರ”ವಾಗುವನು ಅಂದರೆ, ಭೂಮಿಗೆ ನಿಜ ಆಶೀರ್ವಾದಗಳ ಮೂಲನಾಗಿ ಇರುವನು.—ಪ್ರಕಟನೆ 14:1.
ನಮಗಾಗಿರುವ ಪಾಠಗಳು:
2:6-8; 3:8, 9, 18-21. ನಾವು ದುಷ್ಟರಿಗೆ ಹೆದರಲೂ ಬಾರದು ದೇವರ ಸಂದೇಶದಲ್ಲಿ ಅವರಿಗಾಗಿರುವ ಎಚ್ಚರಿಕೆಯನ್ನು ಅವರಿಗೆ ಪ್ರಚಾರ ಮಾಡಲು ಹಿಂಜರಿಯಲೂ ಬಾರದು. ಜನರು ನಿರಾಸಕ್ತಿ ತೋರಿಸುವಾಗ ಅಥವಾ ನಮ್ಮನ್ನು ವಿರೋಧಿಸುವಾಗ ನಾವು ವಜ್ರದಷ್ಟು ಕಠಿನರಾಗಿರಬೇಕು. ಹಾಗಿದ್ದರೂ ನಾವು ಕಲ್ಲು ಹೃದಯದವರು, ಸಂವೇದನರಹಿತರು ಅಥವಾ ನಿರ್ದಯಿಗಳಾಗದಂತೆ ಎಚ್ಚರ ವಹಿಸಬೇಕು. ಯೇಸುವಿಗೆ ತಾನು ಸಾರಿದ ಜನರ ಮೇಲೆ ಕನಿಕರ ಹುಟ್ಟಿತು ಮತ್ತು ತದ್ರೀತಿಯಲ್ಲಿ ನಮಗೆ ಸಹ ಇತರರ ಮೇಲಿರುವ ಕನಿಕರವು ಅವರಿಗೆ ಸುವಾರ್ತೆಯನ್ನು ಸಾರುವಂತೆ ಮಾಡಬೇಕು.—ಮತ್ತಾಯ 9:36.
3:15. ಯೆಹೆಜ್ಕೇಲನು ತನ್ನ ನೇಮಕವನ್ನು ಪಡೆದ ನಂತರ ತಾನು ಸಾರಬೇಕಾದ ಸಂದೇಶವನ್ನು ಅರಗಿಸಿಕೊಳ್ಳುತ್ತಾ ‘ಏಳು ದಿವಸ ಸ್ತಬ್ಧನಾಗಿ’ ತೇಲ್ಆಬೀಬಿನಲ್ಲಿ ಇದ್ದುಬಿಟ್ಟನು. ಗಾಢವಾದ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿಕೋಸ್ಕರ ನಾವು ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಧ್ಯಾನಕ್ಕೆ ಸಮಯ ಮಾಡಬೇಕಲ್ಲವೇ?
4:1–5:4. ಎರಡು ಪ್ರವಾದನಾತ್ಮಕ ಮೂಕಾಭಿನಯಗಳನ್ನು ಮಾಡಿತೋರಿಸಲು ಯೆಹೆಜ್ಕೇಲನಿಗೆ ದೀನತೆ ಹಾಗೂ ಧೈರ್ಯವು ಬೇಕಾಗಿತ್ತು. ದೇವರು ಕೊಟ್ಟಂಥ ಯಾವುದೇ ನೇಮಕವನ್ನು ಮಾಡಲಿಕ್ಕಾಗಿ ನಾವು ಸಹ ದೀನರೂ ಧೈರ್ಯವಂತರೂ ಆಗಿರಬೇಕು.
7:4, 9; 8:18; 9:5, 10. ದೇವರ ತೀರ್ಪನ್ನು ಪಡೆಯುವವರನ್ನು ನಾವು ಕಟಾಕ್ಷಿಸುವ ಅಗತ್ಯವಿಲ್ಲ ಅಥವಾ ಅವರಿಗಾಗಿ ಕನಿಕರಪಡಬೇಕಾಗಿಲ್ಲ.
7:19. ಯೆಹೋವನು ಈ ವಿಷಯ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ಹಣಕ್ಕೆ ಯಾವ ಬೆಲೆಯೂ ಇರುವುದಿಲ್ಲ.
8:5-18. ಧರ್ಮಭ್ರಷ್ಟತೆಯು ಆಧ್ಯಾತ್ಮಿಕವಾಗಿ ಮಾರಕವಾಗಿದೆ. “ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು.” (ಜ್ಞಾನೋಕ್ತಿ 11:9) ಇಂಥವರ ಮಾತನ್ನು ಕೇಳಿಸಿಕೊಳ್ಳಬೇಕೆಂಬ ಯೋಚನೆಯನ್ನು ಕೂಡ ದೂರವಿಡುವ ಮೂಲಕ ನಾವು ವಿವೇಕಿಗಳಾಗುತ್ತೇವೆ.
9:3-6. ಗುರುತನ್ನು ಪಡೆದುಕೊಳ್ಳುವುದು, ಅಂದರೆ ನಾವು ದೇವರ ಸಮರ್ಪಿತ, ದೀಕ್ಷಾಸ್ನಾನ ಹೊಂದಿರುವ ಸೇವಕರು ಮತ್ತು ಕ್ರೈಸ್ತ ವ್ಯಕ್ತಿತ್ವವನ್ನು ಹೊಂದಿದ್ದೇವೆ ಎಂಬುದಕ್ಕೆ ಪುರಾವೆ ಕೊಡುವುದು, ‘ಮಹಾಸಂಕಟದಿಂದ’ ಪಾರಾಗಲು ಅತ್ಯಗತ್ಯ. (ಮತ್ತಾಯ 24:20, 21) ಲೇಖಕನ ದೌತಿಯಿದ್ದ ಪುರುಷನು ಪ್ರತಿನಿಧಿಸುವ ಅಭಿಷಿಕ್ತ ಕ್ರೈಸ್ತರು ಗುರುತು ಮಾಡುವ ಕೆಲಸದಲ್ಲಿ ಅಂದರೆ, ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿದ್ದಾರೆ. ನಮ್ಮ ಗುರುತನ್ನು ಉಳಿಸಿಕೊಳ್ಳಲು ಬಯಸುವುದಾದರೆ, ನಾವು ಈ ಕೆಲಸದಲ್ಲಿ ಅವರಿಗೆ ಹುರುಪಿನಿಂದ ಸಹಾಯ ಮಾಡಬೇಕು.
12:26-28. ತನ್ನ ಸಂದೇಶದ ಕುರಿತು ಅಣಕಿಸಿ ಮಾತಾಡುವವರಿಗೆ ಯೆಹೆಜ್ಕೇಲನು ಹೀಗೆ ಹೇಳಬೇಕಾಗಿತ್ತು: “ಇನ್ನು ಮೇಲೆ [ಯೆಹೋವನ] ಮಾತುಗಳಲ್ಲಿ ಯಾವದೂ ಸಾವಕಾಶವಾಗದು.” ಈ ವಿಷಯಗಳ ವ್ಯವಸ್ಥೆಗೆ ಯೆಹೋವನು ಅಂತ್ಯ ತರುವ ಮುಂಚೆ ಇತರರು ತಮ್ಮ ಭರವಸೆಯನ್ನು ಆತನ ಮೇಲೆ ಇರಿಸುವಂತೆ ಸಹಾಯ ಮಾಡಲು ನಮ್ಮಿಂದಾಗುವುದೆಲ್ಲವನ್ನೂ ನಾವು ಮಾಡಬೇಕು.
14:12-23. ರಕ್ಷಣೆ ಪಡೆಯುವುದು ನಮ್ಮ ಸ್ವಂತ ಜವಾಬ್ದಾರಿಯಾಗಿದೆ. ಅದನ್ನು ಯಾರೂ ನಮಗೋಸ್ಕರ ಪಡೆಯಲಾರರು.—ರೋಮಾಪುರ 14:12.
18:1-29. ನಮ್ಮ ಕ್ರಿಯೆಗಳ ಫಲಿತಾಂಶಗಳಿಗೆ ಸ್ವತಃ ನಾವೇ ಜವಾಬ್ದಾರರು.
“ನಾನು ದೊಬ್ಬಿಬಿಡುವೆನು, ದೊಬ್ಬಿಬಿಡುವೆನು, ದೊಬ್ಬಿಬಿಡುವೆನು”
ಸೆರೆಯಲ್ಲಿದ್ದ ಏಳನೆಯ ವರುಷದಲ್ಲಿ ಅಂದರೆ, ಸಾ.ಶ.ಪೂ. 611ರಲ್ಲಿ ಇಸ್ರಾಯೇಲಿನ ಹಿರಿಯರು “ಯೆಹೋವನನ್ನು ಪ್ರಶ್ನೆಕೇಳುವದಕ್ಕೆ” ಯೆಹೆಜ್ಕೇಲನ ಬಳಿ ಬರುತ್ತಾರೆ. ಅವರು ಇಸ್ರಾಯೇಲ್ಯರ ದಂಗೆಯ ಉದ್ದ ಇತಿಹಾಸವನ್ನೂ ‘ಯೆಹೋವನು ಅವರ ವಿರುದ್ಧ ತನ್ನ ಖಡ್ಗವನ್ನು ಒರೆಯಿಂದ ಹಿರಿದು ಬಿಡುವನು’ ಎಂಬ ಎಚ್ಚರಿಕೆಯನ್ನೂ ಅವನಿಂದ ಪಡೆಯುತ್ತಾರೆ. (ಯೆಹೆಜ್ಕೇಲ 20:1; 21:3) ಇಸ್ರಾಯೇಲಿನ ದೊರೆಯನ್ನು (ಚಿದ್ಕೀಯನನ್ನು) ಉದ್ದೇಶಿಸಿ ಯೆಹೋವನು ಹೇಳುವುದು: “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ಎತ್ತಿಹಾಕು! ಎಲ್ಲವೂ ವ್ಯತ್ಯಸ್ತವಾಗಲಿ; ಕೆಳಗಿನದನ್ನು ಮೇಲೆ ಮಾಡು, ಮೇಲಿನದನ್ನು ಕೆಳಗೆ ಮಾಡು; ನಾನು ದೊಬ್ಬಿಬಿಡುವೆನು, ದೊಬ್ಬಿಬಿಡುವೆನು, ದೊಬ್ಬಿಬಿಡುವೆನು; [ರಾಜ್ಯಕ್ಕೆ] ಬಾಧ್ಯನು [ಯೇಸು ಕ್ರಿಸ್ತನು] ಬರುವದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.”—ಯೆಹೆಜ್ಕೇಲ 21:26, 27.
ಯೆರೂಸಲೇಮಿನ ಮೇಲೆ ದೋಷಾರೋಪ ಹೊರಿಸಲ್ಪಟ್ಟಿದೆ. ಒಹೊಲ (ಇಸ್ರಾಯೇಲ್) ಮತ್ತು ಒಹೊಲೀಬಳ (ಯೆಹೂದ) ಅಪರಾಧವನ್ನು ಬಯಲಿಗೆಳೆಯಲಾಗಿದೆ. ಒಹೊಲಳನ್ನು ಈಗಾಗಲೇ “ಅವಳ ಮಿಂಡರ ಕೈಗೆ ಅಂದರೆ ಅವಳು ಮೋಹಿಸಿದ ಅಶ್ಶೂರ್ಯರ ಕೈಗೆ” ಒಪ್ಪಿಸಲಾಗಿದೆ. (ಯೆಹೆಜ್ಕೇಲ 23:9) ಒಹೊಲೀಬಳ ನಾಶನವು ಇನ್ನೇನು ಆಗಲಿದೆ. ಸಾ.ಶ.ಪೂ. 609ರಲ್ಲಿ ಯೆರೂಸಲೇಮಿನ ಮುತ್ತಿಗೆಯ ಆರಂಭವಾಯಿತು. ಇದು 18 ತಿಂಗಳುಗಳ ವರೆಗೆ ಇತ್ತು. ಕೊನೆಗೆ ಪಟ್ಟಣವು ಶತ್ರುಗಳ ವಶವಾಗುವಾಗ ಯೆಹೂದ್ಯರಿಗೆ ತಮ್ಮ ಶೋಕವನ್ನು ವ್ಯಕ್ತಪಡಿಸಲಾಗದಷ್ಟು ದಿಗ್ಭ್ರಾಂತಿಯಾಗುತ್ತದೆ. ಪಟ್ಟಣದ ನಾಶನವಾಗಿದೆ ಎಂದು ‘ತಪ್ಪಿಸಿಕೊಂಡವನಿಂದ’ ವರದಿ ಕೇಳಿಸಿಕೊಳ್ಳುವ ತನಕ ಯೆಹೆಜ್ಕೇಲನು ದೇವರ ಸಂದೇಶಗಳನ್ನು ಬಾಬೆಲಿನಲ್ಲಿದ್ದ ಸೆರೆಯವರಿಗೆ ಹೇಳಕೂಡದು.—ಯೆಹೆಜ್ಕೇಲ 24:26, 27.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
21:3—ಯೆಹೋವನು ತನ್ನ ಒರೆಯಿಂದ ತೆಗೆಯುವ “ಖಡ್ಗ” ಏನು? ಯೆಹೋವನು ತನ್ನ ನ್ಯಾಯತೀರ್ಪನ್ನು ಯೆರೂಸಲೇಮ್ ಮತ್ತು ಯೆಹೂದದ ಮೇಲೆ ಜಾರಿಗೆ ತರಲು ಬಾಬೆಲಿನ ರಾಜ ನೆಬೂಕದ್ನೆಚ್ಚರನನ್ನು ಮತ್ತು ಅವನ ಸೈನ್ಯವನ್ನು “ಖಡ್ಗ”ದೋಪಾದಿ ಬಳಸುತ್ತಾನೆ. ಇದರಲ್ಲಿ ದೇವರ ಸಂಘಟನೆಯ ಸ್ವರ್ಗೀಯ ಭಾಗವಾಗಿರುವ ಬಲಾಢ್ಯ ಆತ್ಮಜೀವಿಗಳು ಸಹ ಒಳಗೂಡಿದ್ದಿರಬಹುದು.
24:6-14—ಹಂಡೆಯ ಕಿಲುಬು ಯಾವುದನ್ನು ಸೂಚಿಸುತ್ತದೆ? ಮುತ್ತಿಗೆ ಹಾಕಲ್ಪಟ್ಟ ಯೆರೂಸಲೇಮನ್ನು ಹಂಡೆಗೆ ಹೋಲಿಸಲಾಗಿದೆ. ಅದಕ್ಕೆ ಹತ್ತಿರುವ ಕಿಲುಬು ಪಟ್ಟಣದ ನೈತಿಕ ಕೊಳಕನ್ನು ಅಂದರೆ ಕಲ್ಮಷ, ಪುಂಡಾಟ ಮತ್ತು ರಕ್ತಪಾತವನ್ನು ಸೂಚಿಸುತ್ತದೆ. ಇದಕ್ಕೆ ಯೆರೂಸಲೇಮೇ ಹೊಣೆಯಾಗಿತ್ತು. ಅವಳ ಕಲ್ಮಷವು ಎಷ್ಟಿದೆಯೆಂದರೆ, ಆ ಹಂಡೆಯನ್ನು ಬರಿದುಮಾಡಿ ಕೆಂಡಗಳ ಮೇಲಿಟ್ಟರೂ ಅದಕ್ಕೆ ಹತ್ತಿದ ಕಿಲುಬು ಹೋಗಲಾರದು.
ನಮಗಾಗಿರುವ ಪಾಠಗಳು:
20:1, 49. ಇಸ್ರಾಯೇಲ್ನ ಹಿರಿಯರು ತೋರಿಸಿದ ಪ್ರತಿಕ್ರಿಯೆಯು ಅವರು ಯೆಹೆಜ್ಕೇಲನ ಮಾತುಗಳನ್ನು ಶಂಖಿಸಿದರೆಂಬುದನ್ನು ತೋರಿಸುತ್ತದೆ. ದೈವಿಕ ಎಚ್ಚರಿಕೆಗಳ ಕುರಿತು ನಾವು ಎಂದಿಗೂ ಶಂಖೆಯ ಮನೋಭಾವವನ್ನು ಬೆಳೆಸದೆ ಇರೋಣ.
21:18-22. ನೆಬೂಕದ್ನೆಚ್ಚರನು ಶಕುನವನ್ನು ನೋಡಿದ್ದರೂ, ಆ ವಿಧರ್ಮಿ ರಾಜನು ಯೆರೂಸಲೇಮಿನ ವಿರುದ್ಧವಾಗಿ ಬರುವಂತೆ ಖಚಿತಪಡಿಸಿಕೊಂಡವನು ಯೆಹೋವನಾಗಿದ್ದನು. ಯೆಹೋವನ ನ್ಯಾಯವಿಧಿಸುವ ಪ್ರತಿನಿಧಿಗಳು ಆತನ ಉದ್ದೇಶವನ್ನು ನೆರವೇರಿಸುವುದರಿಂದ ತಡೆಯಲು ದೆವ್ವಗಳಿಗೂ ಸಾಧ್ಯವಾಗುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ.
22:6-16. ಚಾಡಿ, ದುರಾಚಾರ, ಅಧಿಕಾರದ ದುರುಪಯೋಗ ಮತ್ತು ಲಂಚ ತೆಗೆದುಕೊಳ್ಳುವುದನ್ನು ಯೆಹೋವನು ದ್ವೇಷಿಸುತ್ತಾನೆ. ಇಂಥ ದುಷ್ಕೃತ್ಯಗಳನ್ನು ನಡೆಸಬಾರದೆಂಬ ನಮ್ಮ ದೃಢನಿಶ್ಚಯವನ್ನು ನಾವು ಅಚಲವಾಗಿಡಬೇಕು.
23:5-49. ಇಸ್ರಾಯೇಲ್ ಮತ್ತು ಯೆಹೂದವು ರಾಜಕೀಯ ಮೈತ್ರಿಸಂಬಂಧಗಳನ್ನು ಮಾಡಿಕೊಂಡಿದ್ದು ಅವರ ಮೈತ್ರಿಪಡೆಗಳ ಸುಳ್ಳಾರಾಧನೆಯನ್ನು ಅವರು ಅಂಗೀಕರಿಸುವುದಕ್ಕೆ ನಡೆಸಿತು. ನಮ್ಮ ನಂಬಿಕೆಯನ್ನು ನಾಶಪಡಿಸಬಹುದಾದ ಲೌಕಿಕ ಬಂಧಗಳನ್ನು ರಚಿಸುವುದರ ಕುರಿತು ನಾವು ಎಚ್ಚರದಿಂದಿರೋಣ.—ಯಾಕೋಬ 4:4.
ಸಜೀವವಾದ ಹಾಗೂ ಕಾರ್ಯಸಾಧಕವಾದ ಒಂದು ಸಂದೇಶ
ಬೈಬಲಿನ ಯೆಹೆಜ್ಕೇಲ ಎಂಬ ಪುಸ್ತಕದ ಮೊದಲ 24 ಅಧ್ಯಾಯಗಳಿಂದ ಎಷ್ಟು ಒಳ್ಳೇ ಪಾಠಗಳನ್ನು ನಾವು ಕಲಿಯುತ್ತೇವೆ! ದೇವರ ಕೋಪಕ್ಕೆ ಯಾವುದು ನಡೆಸುತ್ತದೆ, ಆತನ ಕರುಣೆಯನ್ನು ಹೇಗೆ ಪಡೆಯಸಾಧ್ಯವಿದೆ ಮತ್ತು ದುಷ್ಟರನ್ನು ನಾವು ಏಕೆ ಎಚ್ಚರಿಸಬೇಕು ಎಂಬ ವಿಚಾರಗಳನ್ನು ಅಲ್ಲಿ ತಿಳಿಸಲ್ಪಟ್ಟಿರುವ ತತ್ತ್ವಗಳು ತೋರಿಸುತ್ತವೆ. ಯೆರೂಸಲೇಮಿನ ನಾಶನದ ಕುರಿತಾದ ಪ್ರವಾದನೆಯು ಯೆಹೋವನು, ‘ಹೊಸ ಸಂಗತಿಗಳು ತಲೆದೋರುವದಕ್ಕೆ ಮುಂಚೆ’ ಅವುಗಳನ್ನು ತನ್ನ ಜನರಿಗೆ ತಿಳಿಸುವ ದೇವರಾಗಿದ್ದಾನೆಂದು ಸ್ಪಷ್ಟವಾಗಿ ಚಿತ್ರಿಸುತ್ತದೆ.—ಯೆಶಾಯ 42:9.
ಯೆಹೆಜ್ಕೇಲ 17:22-24 ಮತ್ತು 21:26, 27ರಲ್ಲಿ ದಾಖಲಾಗಿರುವಂಥ ರೀತಿಯ ಪ್ರವಾದನೆಗಳು ಸ್ವರ್ಗದಲ್ಲಿ ಮೆಸ್ಸೀಯನ ರಾಜ್ಯದ ಸ್ಥಾಪನೆಗೆ ಕೈತೋರಿಸಿದವು. ಅತಿ ಬೇಗನೆ ಆ ರಾಜತ್ವದಿಂದಾಗಿ ದೇವರ ಚಿತ್ತವು ಭೂಲೋಕದಲ್ಲಿ ನೆರವೇರುವುದು. (ಮತ್ತಾಯ 6:9, 10) ಬಲವಾದ ನಂಬಿಕೆ ಹಾಗೂ ದೃಢವಿಶ್ವಾಸದಿಂದ ನಾವು ರಾಜ್ಯದ ಆಶೀರ್ವಾದಗಳಿಗೆ ಎದುರುನೋಡಬಲ್ಲೆವು. ಹೌದು, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ.—ಇಬ್ರಿಯ 4:12. (w07 7/1)
[ಪುಟ 12ರಲ್ಲಿರುವ ಚಿತ್ರ]
ಸ್ವರ್ಗೀಯ ರಥ ಏನನ್ನು ಚಿತ್ರಿಸುತ್ತದೆ?
[ಪುಟ 14ರಲ್ಲಿರುವ ಚಿತ್ರ]
ಸಾರುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವುದು ನಮ್ಮ “ಗುರುತನ್ನು” ಉಳಿಸಿಕೊಳ್ಳಲು ಸಹಾಯಮಾಡುತ್ತದೆ