ಅಧ್ಯಾಯ 11
“ನಾನು ನಿನ್ನನ್ನ . . . ಕಾವಲುಗಾರನಾಗಿ ಇಟ್ಟಿದ್ದೀನಿ”
ಮುಖ್ಯ ವಿಷಯ: ಯೆಹೋವನು ಕಾವಲುಗಾರನನ್ನ ನೇಮಿಸಿ ಅವನ ಜವಾಬ್ದಾರಿಗಳನ್ನ ತಿಳಿಸಿದನು
1. ಯೆಹೋವನು ಕೊಟ್ಟ ಭವಿಷ್ಯವಾಣಿಯಲ್ಲಿರೋ ಕಾವಲುಗಾರ ಏನು ಮಾಡ್ತಾ ಇದ್ದನು? ನಂತರ ಏನಾಯ್ತು?
ಸಂಜೆ ಹೊತ್ತು, ಸೂರ್ಯ ಮುಳುಗ್ತಿದ್ದಾನೆ. ಯೆರೂಸಲೇಮಿನ ಗೋಡೆ ಮೇಲೆ ಕಾವಲುಗಾರ ನಿಂತಿದ್ದಾನೆ, ಅವನು ತನ್ನ ಸುತ್ತಲೂ ಕಣ್ಣರಳಿಸಿ ದೂರ ದೂರದ ತನಕ ನೋಡ್ತಿದ್ದಾನೆ. ಇದ್ದಕ್ಕಿದ್ದ ಹಾಗೆ ಆ ಕಾವಲುಗಾರ ಬಾಬೆಲಿನ ಸೈನ್ಯ ಬರೋದನ್ನ ನೋಡ್ತಾನೆ. ಪಟ್ಟಣದಲ್ಲಿರೋರನ್ನ ಎಚ್ಚರಿಸೋಕೆ ತನ್ನ ಕೊಂಬನ್ನ ಜೋರಾಗಿ ಊದುತ್ತಾನೆ. ಆದ್ರೆ ಪಟ್ಟಣದಲ್ಲಿರೋ ಜನರಿಗೆ ತಪ್ಪಿಸಿಕೊಳ್ಳೋಕೆ ಯಾವುದೇ ದಾರಿ ಇಲ್ಲ. ಯಾಕಂದ್ರೆ ಕಾಲ ಮಿಂಚೋಗಿದೆ. ಸುಮಾರು ವರ್ಷಗಳಿಂದ ಯೆಹೋವ ದೇವರು ತನ್ನ ಪ್ರವಾದಿಗಳನ್ನ ಅಥ್ವಾ ಕಾವಲುಗಾರರನ್ನ ನೇಮಿಸಿ ತನ್ನ ಜನರಿಗೆ ಈ ದಿನ ಬರುತ್ತೆ ಅಂತ ಎಚ್ಚರಿಸಿದ್ದನು. ಆದರೆ ಜನರು ಆತನ ಮಾತನ್ನ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಗ ಬಾಬೆಲಿನ ಸೈನ್ಯ ಪಟ್ಟಣವನ್ನ ಸುತ್ತುವರಿದಿದೆ. ತುಂಬ ತಿಂಗಳುಗಳು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದ ಮೇಲೆ ಯೆರೂಸಲೇಮಿನ ಗೋಡೆಗಳನ್ನ ಒಡೆದು ಹಾಕಿ ಅಲ್ಲಿನ ದೇವಾಲಯವನ್ನ ನೆಲಸಮ ಮಾಡಿದ್ರು. ಧರ್ಮಭ್ರಷ್ಟ, ವಿಗ್ರಹಾರಾಧಕರಾಗಿದ್ದ ಅಲ್ಲಿನ ಜನರಲ್ಲಿ ಕೆಲವ್ರನ್ನ ಕೊಂದು ಹಾಕಿದ್ರು, ಇನ್ನು ಕೆಲವ್ರನ್ನ ಕೈದಿಗಳಾಗಿ ಕರಕೊಂಡು ಹೋದ್ರು.
2, 3. (ಎ) ಜನ ಮುಂದೆ ಏನನ್ನ ಎದುರಿಸಲಿದ್ದಾರೆ? ಮತ್ತು ಅವರು ಈಗಲೇ ಯಾವ ನಿರ್ಣಯವನ್ನ ಮಾಡಬೇಕಿದೆ? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
2 ಈ ಭೂಮಿಯಲ್ಲಿರುವ ಅಪನಂಬಿಗಸ್ತ ಜನ್ರನ್ನ ನಾಶಮಾಡೋಕೆ ಯೆಹೋವನ ಸ್ವರ್ಗೀಯ ಸೈನ್ಯ ಬರುತ್ತಾ ಇದೆ. (ಪ್ರಕ. 17:12-14) ಮನುಷ್ಯರು ಇದುವರೆಗೂ ನೋಡದ ಮಹಾ ಸಂಕಟದ ಕೊನೆಯಲ್ಲಿ ಆ ನಾಶನ ಬರುತ್ತೆ. (ಮತ್ತಾ. 24:21) ಯೆಹೋವ ದೇವರು ನೇಮಿಸಿರುವ ಕಾವಲುಗಾರರ ಎಚ್ಚರಿಕೆಯ ಮಾತನ್ನ ಕೇಳೋದಾದ್ರೆ ಈಗಲೂ ನಾವು ರಕ್ಷಣೆ ಪಡೀಬಹುದು, ಸಮಯ ಮಿಂಚೋಗಿಲ್ಲ.
3 ಯೆಹೋವನು ಕಾವಲುಗಾರರನ್ನ ಯಾಕೆ ನೇಮಿಸಿದನು? ಕಾವಲುಗಾರನು ಯಾವ ಸಂದೇಶವನ್ನ ಸಾರಿದನು? ಯಾರು ಕಾವಲುಗಾರರಾಗಿ ಕೆಲಸ ಮಾಡಿದ್ದಾರೆ ಮತ್ತು ಈ ಕೆಲಸದಲ್ಲಿ ನಮ್ಮ ಪಾತ್ರ ಏನು? ಈ ಪ್ರಶ್ನೆಗಳಿಗೆ ನಾವೀಗ ಉತ್ರ ತಿಳಿಯೋಣ.
“ನೀನು ನನ್ನ ಪರವಾಗಿ . . . ಅವ್ರನ್ನ ಎಚ್ಚರಿಸಬೇಕು”
4. ಯೆಹೋವನು ಯಾಕೆ ಕಾವಲುಗಾರರನ್ನ ನೇಮಿಸಿದನು? (ಆರಂಭದ ಚಿತ್ರ ನೋಡಿ.)
4 ಯೆಹೆಜ್ಕೇಲ 33:7 ಓದಿ. ಬೈಬಲ್ ಕಾಲದಲ್ಲಿ ಕಾವಲುಗಾರರು ಜನರನ್ನ ರಕ್ಷಿಸೋಕೆ ಗೋಡೆ ಮೇಲೆ ನಿಂತುಕೊಂಡು ಕಾವಲು ಕಾಯ್ತಿದ್ರು. ಇದ್ರಿಂದ ಆ ಪಟ್ಟಣದ ರಾಜನಿಗೆ ಜನ್ರ ಮೇಲೆ ತುಂಬ ಕಾಳಜಿಯಿದೆ ಅಂತ ಗೊತ್ತಾಗ್ತಿತ್ತು. ಕಾವಲುಗಾರನ ಕೊಂಬಿನ ಶಬ್ದ ಕೆಲವು ಸಲ ನಿದ್ದೆ ಮಾಡ್ತಿದ್ದವ್ರನ್ನ ಬೆಚ್ಚಿಬೀಳಿಸ್ತಿದ್ರೂ ಅವನ ಕೊಂಬಿನ ಕೂಗಿಗೆ ಕಿವಿಗೊಟ್ಟವರ ಜೀವ ಉಳೀತಿತ್ತು. ಅದೇ ರೀತಿ ಯೆಹೋವ ದೇವರು ಕೂಡ ಕಾವಲುಗಾರರನ್ನ ಅಂದ್ರೆ ಪ್ರವಾದಿಗಳನ್ನ ನೇಮಿಸಿದ್ರು. ನಾಶನದ ಸಂದೇಶನ ಕೇಳಿ ಜನ ಭಯಪಡಬೇಕಂತಲ್ಲ, ಬದ್ಲಿಗೆ ಅವರ ಮೇಲಿರೋ ಕಾಳಜಿಯಿಂದ ಮತ್ತು ಅವರನ್ನ ಕಾಪಾಡಬೇಕನ್ನೋ ಉದ್ದೇಶದಿಂದ ಹೀಗೆ ಮಾಡಿದನು.
5, 6. ಯೆಹೋವನು ನ್ಯಾಯವಾಗಿ ನಡ್ಕೊಳ್ತಾನೆ ಅಂತ ಹೇಗೆ ಹೇಳಬಹುದು?
5 ಯೆಹೋವ ದೇವರು ಯೆಹೆಜ್ಕೇಲನನ್ನ ಸಹ ಈ ರೀತಿಯ ಕಾವಲುಗಾರನನ್ನಾಗಿ ನೇಮಿಸಿದನು. ಆಗ ಯೆಹೋವನು ಹೇಳಿದ ಮಾತುಗಳಿಂದ ಆತನ ಕೆಲವು ಗುಣಗಳನ್ನ ನಾವು ಕಲಿತೀವಿ. ಇದನ್ನ ಕಲಿಯುವಾಗ ನಮಗೆ ಆತನ ಮೇಲೆ ತುಂಬ ಭರವಸೆ ಮೂಡುತ್ತೆ. ಈಗ ಅಂಥ ಎರಡು ಗುಣಗಳ ಬಗ್ಗೆ ನೋಡೋಣ.
6 ನ್ಯಾಯ: ಯೆಹೋವನು ಯಾರಿಗೂ ಪಕ್ಷಪಾತ ಮಾಡಲ್ಲ. ನ್ಯಾಯವಾಗಿ ನಡ್ಕೊಳ್ತಾನೆ. ಉದಾಹರಣೆಗೆ, ಯೆಹೆಜ್ಕೇಲನು ಹೇಳಿದ ಸಂದೇಶ ಹೆಚ್ಚಿನ ಜನ್ರಿಗೆ ಕೇಳಿಸ್ತು, ಆದರೆ ಅವರು ಗಮನ ಕೊಡಲಿಲ್ಲ. ಹಾಗಂತ ಯೆಹೋವ ದೇವರು ಎಲ್ಲಾ ಇಸ್ರಾಯೇಲ್ಯರು ದಂಗೆಕೋರ ಜನರು ಅಂತ ನಿರ್ಧಾರ ಮಾಡಲಿಲ್ಲ. ಬದ್ಲಿಗೆ ಪ್ರತಿಯೊಬ್ಬ ವ್ಯಕ್ತಿ ಹೇಗೆ ಪ್ರತಿಕ್ರಿಯಿಸಿದ ಅಂತ ಗಮನಿಸಿದನು. ಯೆಹೋವನು “ಕೆಟ್ಟವನ” ಮತ್ತು “ನೀತಿವಂತನ” ಬಗ್ಗೆ ಹೇಳಿದಾಗೆಲ್ಲಾ “ಒಬ್ಬ” ಅನ್ನೋ ಪದ ಉಪಯೋಗಿಸಿದ್ದಾನೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಎಚ್ಚರಿಕೆಯನ್ನ ಕೇಳ್ತಾನಾ ಇಲ್ವಾ ಅನ್ನೋದನ್ನ ಆಧರಿಸಿ ಯೆಹೋವನು ನ್ಯಾಯತೀರ್ಪು ಮಾಡ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ.—ಯೆಹೆ. 33:8, 18-20.
7. ಯಾವುದ್ರ ಮೇಲೆ ಆಧರಿಸಿ ಯೆಹೋವನು ಜನರಿಗೆ ನ್ಯಾಯತೀರಿಸ್ತಾನೆ?
7 ಯೆಹೋವನು ಜನರಿಗೆ ನ್ಯಾಯ ತೀರಿಸುವ ವಿಧದಿಂದ ಆತನು ನ್ಯಾಯವಂತನು ಅಂತ ಗೊತ್ತಾಗುತ್ತೆ. ಜನರು ಹಿಂದೆ ಏನು ತಪ್ಪು ಮಾಡಿದ್ದಾರೆ ಅನ್ನೋದ್ರ ಮೇಲಲ್ಲ ಬದಲಿಗೆ ತನ್ನ ಎಚ್ಚರಿಕೆಗೆ ಈಗ ಹೇಗೆ ಪ್ರತಿಕ್ರಿಯಿಸ್ತಿದ್ದಾರೆ ಅನ್ನೋದ್ರ ಮೇಲಾಧರಿಸಿ ಅವರಿಗೆ ನ್ಯಾಯ ತೀರಿಸ್ತಾನೆ. ಯೆಹೋವನು ಯೆಹೆಜ್ಕೇಲನಿಗೆ ಹೀಗೆ ಹೇಳಿದನು: “ನಾನು ಕೆಟ್ಟವನಿಗೆ ‘ನೀನು ಸತ್ತೇ ಸಾಯ್ತೀಯ’ ಅಂತ ಹೇಳಿದಾಗ ಅವನು ಪಾಪ ಮಾಡೋದನ್ನ ಬಿಟ್ಟು ನ್ಯಾಯನೀತಿ ಪ್ರಕಾರ ನಡಿದ್ರೆ . . . ಅವನು ನಿಜವಾಗ್ಲೂ ಬಾಳ್ತಾನೆ, ಸಾಯಲ್ಲ. ಅವನು ಮಾಡಿದ ಯಾವ ಪಾಪಕ್ಕೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.” (ಯೆಹೆ. 33:14-16) ಆದರೆ ಹಿಂದೆ ಒಳ್ಳೇದನ್ನ ಮಾಡಿದ ವ್ಯಕ್ತಿ ಈಗ ತಪ್ಪು ಮಾಡಿ ‘ನಾನು ಇಲ್ಲಿವರೆಗೂ ಯೆಹೋವನ ಮಾತು ಕೇಳಿದ್ದೀನಲ್ಲಾ? ಹಾಗಾಗಿ ಯೆಹೋವನು ನನ್ನನ್ನ ಕ್ಷಮಿಸಿಬಿಡ್ತಾನೆ’ ಅಂತ ನೆನಸಬಾರದು. ಯಾಕಂದ್ರೆ ಯೆಹೋವನು ಹೀಗೆ ಹೇಳಿದ್ದಾನೆ: ಒಬ್ಬ ವ್ಯಕ್ತಿ “ಅವನು ಮಾಡಿದ ಒಳ್ಳೇ ಕೆಲಸಗಳ ಮೇಲೆ ಭರವಸೆ ಇಟ್ಟು ಕೆಟ್ಟದ್ದನ್ನ ಮಾಡಿದ್ರೆ ಅವನು ಮಾಡಿದ ಒಳ್ಳೇ ಕೆಲಸಗಳಲ್ಲಿ ಯಾವದನ್ನೂ ನಾನು ನೆನಪಿಸ್ಕೊಳ್ಳಲ್ಲ. ತಪ್ಪು ಮಾಡಿದ್ದಕ್ಕಾಗಿ ಅವನು ಸಾಯ್ತಾನೆ.”—ಯೆಹೆ. 33:13.
8. ಎಚ್ಚರಿಕೆಯ ಭವಿಷ್ಯವಾಣಿಗಳಿಂದ ನಾವು ಯೆಹೋವನ ನ್ಯಾಯದ ಬಗ್ಗೆ ಏನನ್ನ ಕಲಿಬಹುದು?
8 ಯೆಹೋವನು ನ್ಯಾಯವಂತ ಅಂತ ಇನ್ನೊಂದು ರೀತಿಯಲ್ಲೂ ನಮ್ಗೆ ಗೊತ್ತಾಗುತ್ತೆ. ನ್ಯಾಯತೀರ್ಪು ತರೋದಕ್ಕೆ ತುಂಬ ಮುಂಚೆನೇ ದೇವರು ಎಚ್ಚರಿಕೆ ಕೊಟ್ಟಿರ್ತಾನೆ. ಉದಾಹರಣೆಗೆ, ಬಾಬೆಲಿನವರು ಯೆರೂಸಲೇಮನ್ನ ನಾಶಮಾಡೋಕೆ ಸುಮಾರು 6 ವರ್ಷಗಳ ಮುಂಚೆನೇ ಯೆಹೆಜ್ಕೇಲ ಅದರ ಬಗ್ಗೆ ಪ್ರವಾದಿಸೋಕೆ ಶುರುಮಾಡಿದನು. ಆದರೆ ಯೆರೂಸಲೇಮಿನ ನಾಶನದ ಬಗ್ಗೆ ಎಚ್ಚರಿಕೆ ಕೊಟ್ಟಿರೋದು ಯೆಹೆಜ್ಕೇಲ ಮಾತ್ರ ಅಲ್ಲ. ಯೆರೂಸಲೇಮ್ ನಾಶ ಆಗೋಕೆ 100ಕ್ಕಿಂತ ಹೆಚ್ಚು ವರ್ಷಗಳ ಮುಂಚೆನೇ ಹೋಶೇಯ, ಯೆಶಾಯ, ಮೀಕ, ಓದೇದ, ಯೆರೆಮೀಯ ಇಂತಹ ಪ್ರವಾದಿಗಳನ್ನ ಯೆಹೋವ ದೇವರು ಕಳಿಸಿದ್ರು. ಯೆರೆಮೀಯನ ಮೂಲಕ ಯೆಹೋವನು ಹೀಗೆ ಹೇಳಿದನು: “ನಾನು ಕಾವಲುಗಾರನನ್ನ ಇಟ್ಟೆ. ಅವನು ‘ಕೊಂಬಿನ ಶಬ್ದ ಕೇಳಿಸ್ಕೊಳ್ಳಿ’ ಅಂದ.” (ಯೆರೆ. 6:17) ಹಾಗಾಗಿ ಬಾಬೆಲಿನವರು ಯೆರೂಸಲೇಮನ್ನ ನಾಶಮಾಡಿದಾಗ ಆ ಜನರ ಸಾವಿಗೆ ಯೆಹೋವ ದೇವರಾಗಲಿ, ಪ್ರವಾದಿಗಳಾಗಲಿ ಹೊಣೆಗಾರರಾಗಿ ಇರಲಿಲ್ಲ.
9. ಯೆಹೋವನು ಹೇಗೆ ಶಾಶ್ವತ ಪ್ರೀತಿ ತೋರಿಸಿದನು?
9 ಪ್ರೀತಿ. ಯೆಹೋವನು ಪ್ರವಾದಿಗಳನ್ನ ಅಥ್ವಾ ಕಾವಲುಗಾರರನ್ನ ಕಳಿಸೋ ಮೂಲಕ ಶಾಶ್ವತ ಪ್ರೀತಿಯನ್ನ ತೋರಿಸಿದನು. ಆತನು ನೀತಿವಂತರಿಗೆ ಮಾತ್ರ ಅಲ್ಲ, ತನ್ನ ಮನಸ್ಸನ್ನ ನೋಯಿಸಿದ ಮತ್ತು ತನ್ನ ಹೆಸರನ್ನ ಹಾಳುಮಾಡಿದ ದುಷ್ಟರಿಗೂ ಎಚ್ಚರಿಕೆಯನ್ನ ಕೊಡಲು ಈ ಪ್ರವಾದಿಗಳನ್ನ ಕಳುಹಿಸಿದನು. ಇಸ್ರಾಯೇಲ್ಯರು ಯೆಹೋವನ ಜನರಾಗಿದ್ರೂ ಪುನಃ ಪುನಃ ಆತನಿಗೆ ಬೆನ್ನು ಹಾಕಿ ಸುಳ್ಳು ದೇವರುಗಳ ಹಿಂದೆ ಹೋದ್ರು. ಈ ರೀತಿ ಮಾಡಿದಾಗ ತನಗೆ ಎಷ್ಟು ನೋವಾಯ್ತು ಅನ್ನೋದನ್ನ ತಿಳಿಸೋಕೆ ಯೆಹೋವನು ಇಸ್ರಾಯೇಲ್ಯರನ್ನ ವ್ಯಭಿಚಾರ ಮಾಡಿದ ಹೆಂಡತಿಗೆ ಹೋಲಿಸಿದನು. (ಯೆಹೆ. 16:32) ಯೆಹೋವನಿಗೆ ಇಷ್ಟೆಲ್ಲಾ ನೋವಾಗಿದ್ರೂ ಅವರನ್ನ ಬಿಟ್ಟುಬಿಡಲಿಲ್ಲ. ಅವರ ಮೇಲೆ ಸೇಡು ತೀರಿಸೋಕೆ ಹೋಗಲಿಲ್ಲ. ಬದ್ಲಿಗೆ ಅವರ ಜೊತೆ ತನ್ನ ಸಂಬಂಧವನ್ನ ಸರಿಮಾಡೋಕೆ ಪ್ರಯತ್ನಿಸಿದನು. ಆ ಜನರಿಗೆ ಬದಲಾಗೋಕೆ ಎಷ್ಟೇ ಅವಕಾಶ ಕೊಟ್ರೂ ಅವರು ಬದಲಾಗದೇ ಇದ್ದಿದ್ರಿಂದ ಕೊನೇದಾಗಿ ಯೆಹೋವನು ಅವರನ್ನ ನಾಶ ಆಗೋಕೆ ಬಿಟ್ಟುಬಿಟ್ಟನು. ಯೆಹೋವ ಇಷ್ಟೆಲ್ಲಾ ಯಾಕೆ ಮಾಡಿದನು? ಆತನು ಯೆಹೆಜ್ಕೇಲನಿಗೆ ಹೀಗೆ ಹೇಳಿದನು: “ಕೆಟ್ಟವನೊಬ್ಬ ಸತ್ರೆ ನನಗೆ ಸ್ವಲ್ಪನೂ ಖುಷಿ ಆಗಲ್ಲ. ಅವನು ಕೆಟ್ಟ ದಾರಿ ಬಿಟ್ಟುಬಿಡಬೇಕು, ಜಾಸ್ತಿ ದಿನ ಬದುಕಬೇಕು ಅನ್ನೋದೇ ನನ್ನಾಸೆ.” (ಯೆಹೆ. 33:11) ಹಿಂದಿನ ಕಾಲದಲ್ಲಿ ಮಾತ್ರ ಅಲ್ಲ ಈಗಲೂ ಯೆಹೋವನಿಗೆ ತನ್ನ ಜನ್ರ ಮೇಲೆ ಅಷ್ಟೇ ಪ್ರೀತಿಯಿದೆ.—ಮಲಾ. 3:6.
10, 11. ಯೆಹೋವನು ತನ್ನ ಜನರ ಜೊತೆ ನಡಕೊಂಡ ರೀತಿಯಿಂದ ನಾವು ಯಾವ ಪಾಠಗಳನ್ನ ಕಲಿಬಹುದು?
10 ಇಸ್ರಾಯೇಲ್ಯರ ಜೊತೆ ಯೆಹೋವನು ನ್ಯಾಯ ಮತ್ತು ಪ್ರೀತಿಯಿಂದ ನಡಕೊಂಡ ವಿಧದಿಂದ ನಾವು ಯಾವ ಪಾಠ ಕಲಿಬಹುದು? ನಾವು ಸಿಹಿಸುದ್ದಿಯನ್ನ ಸಾರುವ ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿ, ಸನ್ನಿವೇಶವನ್ನ ಚೆನ್ನಾಗಿ ಅರ್ಥಮಾಡ್ಕೊಳ್ಬೇಕು. ಜನರ ನಡತೆ ಹೇಗಿದೆ? ಅಥ್ವಾ ಅವರು ನೋಡೋಕೆ ಹೇಗಿದ್ದಾರೆ? ಅವ್ರತ್ರ ಎಷ್ಟು ಆಸ್ತಿ ಅಂತಸ್ತಿದೆ? ಅವರು ಹೇಗೆ ಮಾತಾಡ್ತಾರೆ? ಅವರು ಯಾವ ದೇಶದವರು? ಯಾವ ಭಾಷೆ ಮಾತಾಡ್ತಾರೆ? ಅನ್ನೋದನ್ನ ಆಧರಿಸಿ ನಾವು ಹೇಳೋ ಸಿಹಿಸುದ್ದಿಯನ್ನ ಕೇಳೋಕೆ ಅವರು ಅರ್ಹರಲ್ಲ ಅಂತ ಯಾವತ್ತೂ ತೀರ್ಪು ಮಾಡಬಾರದು. ಈ ವಿಷ್ಯದಲ್ಲಿ ಯೆಹೋವ ದೇವರು ಪೇತ್ರನಿಗೆ ಒಂದು ಪಾಠವನ್ನ ಕಲಿಸಿದನು. ಅದು ನಮಗೂ ಅನ್ವಯವಾಗುತ್ತೆ. “ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ” ಅಂತ ಬೈಬಲ್ ಹೇಳುತ್ತೆ.—ಅ. ಕಾ. 10:34, 35.
11 ಇದರಿಂದ ನಾವು ನಮ್ಮ ಬಗ್ಗೆನೇ ಜಾಗ್ರತೆವಹಿಸಬೇಕು ಅನ್ನೋ ಪಾಠ ಕಲಿತೀವಿ. ಹಿಂದೆ ನಾವು ತುಂಬ ಒಳ್ಳೇ ವಿಷ್ಯಗಳನ್ನ ಮಾಡಿರಬಹುದು. ಅದರರ್ಥ ಈಗ ನಾವು ತಪ್ಪುಗಳನ್ನ ಮಾಡಿದ್ರೂ ಪರವಾಗಿಲ್ಲ ಅಂತಲ್ಲ. ನಾವು ಯಾರಿಗೆ ಸಾರುತ್ತೇವೋ ಅವರ ತರಾನೇ ತಪ್ಪು ಮಾಡುವ ಸ್ವಭಾವ ನಮಗೂ ಇದೆ ಅನ್ನೋದನ್ನ ಮರೆಯಬಾರದು. ಅಪೊಸ್ತಲ ಪೌಲ ಕೊರಿಂಥ ಸಭೆಗೆ ಹೇಳಿದ ಸಲಹೆ ನಮಗೂ ಅನ್ವಯವಾಗುತ್ತೆ. ಅವನು, “ನಿಂತಿದ್ದೀನಿ ಅಂತ ನೆನಸುವವನು ಬೀಳದ ಹಾಗೆ ಹುಷಾರಾಗಿ ಇರಲಿ. ಎಲ್ಲ ಜನ್ರಿಗೆ ಕಷ್ಟಗಳು ಬರೋ ಹಾಗೇ ನಿಮಗೂ ಕಷ್ಟ ಬಂದಿದೆ” ಅಂದನು. (1 ಕೊರಿಂ. 10:12, 13) ನಾವು ಮಾಡಿದ “ಒಳ್ಳೇ ಕೆಲಸಗಳ ಮೇಲೆ ಭರವಸೆ ಇಟ್ಟು” ‘ನಾನು ತಪ್ಪು ಮಾಡಿದ್ರೂ ಶಿಕ್ಷೆ ಸಿಗಲ್ಲ’ ಅಂತ ಯಾವತ್ತೂ ಅಂದುಕೊಳ್ಳಬಾರದು. (ಯೆಹೆ. 33:13) ನಾವು ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರಬಹುದು. ಆದ್ರೂ ದೀನತೆ, ವಿಧೇಯತೆ ತೋರಿಸ್ತಾ ಇರೋದು ತುಂಬ ಪ್ರಾಮುಖ್ಯ.
12. ನಾವು ಹಿಂದೆ ಗಂಭೀರ ತಪ್ಪನ್ನ ಮಾಡಿರೋದಾದ್ರೆ ಯಾವ ವಿಷಯವನ್ನ ಮರೆಯಬಾರದು?
12 ನಾವು ಇನ್ನೊಂದು ಪಾಠನೂ ಕಲಿಬಹುದು. ನಾವು ಹಿಂದೆ ಒಂದು ತಪ್ಪು ಮಾಡಿದ್ದು ಅದ್ರ ಬಗ್ಗೆ ಈಗ ತುಂಬ ಕೊರಗ್ತಾ ಇದ್ರೆ ಒಂದು ವಿಷಯ ನೆನಪಲ್ಲಿಟ್ಟುಕೊಳ್ಳಬೇಕು. ತಪ್ಪುಮಾಡಿದವರು ಪಶ್ಚಾತ್ತಾಪಪಡದೆ ಇದ್ರೆ ಮಾತ್ರ ಯೆಹೋವನು ಶಿಕ್ಷೆ ಕೊಡ್ತಾನೆ. ಅಷ್ಟೇ ಅಲ್ಲ, ಯೆಹೋವನು ಪ್ರೀತಿಯ ದೇವರಾಗಿದ್ದಾನೆ ಅಂತ ಯೆಹೆಜ್ಕೇಲ ಹೇಳಿದ ಸಂದೇಶದಿಂದ ಗೊತ್ತಾಗುತ್ತೆ. (1 ಯೋಹಾ. 4:8) ನಾವು ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದೀವಿ ಅಂತ ನಡತೆಯಲ್ಲಿ ತೋರಿಸಿಕೊಟ್ಟ ಮೇಲೂ ಯೆಹೋವನ ಕ್ಷಮೆ ಪಡೆಯೋಕೆ ನಮಗೆ ಅರ್ಹತೆ ಇಲ್ಲ ಅಂತ ಯಾವತ್ತೂ ನೆನಸಬಾರದು. (ಯಾಕೋ. 5:14, 15) ಇಸ್ರಾಯೇಲ್ಯರು ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸಿದ್ರೂ ಯೆಹೋವನು ಅವರನ್ನ ಕ್ಷಮಿಸೋಕೆ ಸಿದ್ಧನಿದ್ದನು. ಅದೇ ರೀತಿ ನಮ್ಮನ್ನೂ ಕ್ಷಮಿಸೋಕೆ ಸಿದ್ಧನಿದ್ದಾನೆ.—ಕೀರ್ತ. 86:5.
“ನಿನ್ನ ಜನ್ರಿಗೆ ಏನು ಹೇಳಬೇಕಂದ್ರೆ . . . ”
13, 14. (ಎ) ಪ್ರವಾದಿಗಳು ಯಾವ ರೀತಿಯ ಸಂದೇಶವನ್ನ ಸಾರಬೇಕಿತ್ತು? (ಬಿ) ಯೆಶಾಯನು ಯಾವ ಸಂದೇಶವನ್ನ ಸಾರಿದನು?
13 ಯೆಹೆಜ್ಕೇಲ 33:2, 3 ಓದಿ. ಯೆಹೋವನ ಪ್ರವಾದಿಗಳು ಯಾವ ರೀತಿಯ ಸಂದೇಶವನ್ನ ಸಾರಬೇಕಿತ್ತು? ಅವರು ಮುಖ್ಯವಾಗಿ ಎಚ್ಚರಿಕೆಯ ಸಂದೇಶವನ್ನ ಸಾರಬೇಕಿತ್ತು. ಜೊತೆಗೆ ಸಿಹಿಸುದ್ದಿಯನ್ನೂ ಸಾರಬೇಕಿತ್ತು. ಕೆಲವು ಉದಾಹರಣೆಗಳನ್ನ ನಾವೀಗ ನೊಡೋಣ.
14 ಕ್ರಿ.ಪೂ. 778 ರಿಂದ 732 ರ ತನಕ ಪ್ರವಾದಿಯಾಗಿದ್ದ ಯೆಶಾಯನು, ಯೆರೂಸಲೇಮನ್ನ ಬಾಬೆಲಿನವರು ವಶಪಡಿಸಿಕೊಳ್ತಾರೆ ಅಂತ ಎಚ್ಚರಿಸಿದ್ದನು. ಅಲ್ಲಿನ ಜನ್ರನ್ನ ಕೈದಿಗಳಾಗಿ ಕರಕೊಂಡು ಹೋಗ್ತಾರೆ ಅಂತ ಹೇಳಿದ್ದನು. (ಯೆಶಾ. 39:5-7) ಅವನು ಈ ಸಂದೇಶವನ್ನ ಕೂಡ ತಿಳಿಸಿದ್ದನು: “ಕೇಳು! ನಿನ್ನ ಕಾವಲುಗಾರರು ಸಂತೋಷದಿಂದ ಕೂಗ್ತಿದ್ದಾರೆ. ಅವರು ಒಟ್ಟಾಗಿ ಹರ್ಷಧ್ವನಿಗೈತಿದ್ದಾರೆ, ಯಾಕಂದ್ರೆ ಚೀಯೋನಲ್ಲಿ ಇರುವವ್ರನ್ನ ಯೆಹೋವ ಮತ್ತೆ ಒಟ್ಟುಸೇರಿಸ್ತಿರೋದು ಅವ್ರಿಗೆ ಸ್ಪಷ್ಟವಾಗಿ ಕಾಣಿಸ್ತಿದೆ.” (ಯೆಶಾ. 52:8) ಇಲ್ಲಿ ಹೇಳಿರೋ ಹಾಗೆ ಶುದ್ಧ ಆರಾಧನೆಯ ಪುನಃಸ್ಥಾಪನೆ ಆಗುತ್ತೆ ಅನ್ನೋ ಸಂತೋಷದ ಸುದ್ದಿಯನ್ನ ಕೂಡ ಯೆಶಾಯನು ಮುಂಚೆನೇ ಹೇಳಿದ್ದನು.
15. ಯೆರೆಮೀಯ ಯಾವ ಸಂದೇಶವನ್ನ ಸಾರಿದನು?
15 ಕ್ರಿ.ಪೂ. 647 ರಿಂದ 580 ರ ತನಕ ಪ್ರವಾದಿಯಾಗಿದ್ದ ಯೆರೆಮೀಯ, ಬರೀ ಕೆಟ್ಟ ವಿಷ್ಯಗಳನ್ನೇ ತಿಳಿಸ್ತಾನೆ ಅಂತ ಜನ ಅವನ ಬಗ್ಗೆ ತಪ್ಪಾಗಿ ಹೇಳ್ತಾ ಇದ್ರು. ಹೆಚ್ಚಾಗಿ ಅವನು ಇಸ್ರಾಯೇಲಿನ ಕೆಟ್ಟ ಜನರಿಗೆ ಯೆಹೋವನು ಏನು ಮಾಡಲಿಕ್ಕಿದ್ದಾನೆ ಅನ್ನೋದ್ರ ಬಗ್ಗೆ ಎಚ್ಚರಿಕೆಯ ಸಂದೇಶ ಸಾರಿದನು ಅನ್ನೋದು ಅವರಿಗೆ ಬೇಜಾರಿನ ವಿಷಯವಾಗಿತ್ತು.a ಆದ್ರೆ ಅವನು ಸಿಹಿಸುದ್ದಿಯನ್ನ ಕೂಡ ಸಾರಿದನು. ದೇವಜನರು ಯೆರೂಸಲೇಮಿಗೆ ವಾಪಸ್ ಬರ್ತಾರೆ ಮತ್ತು ಅವರು ಅಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸ್ತಾರೆ ಅಂತ ಅವನು ಹೇಳಿದನು.—ಯೆರೆ. 29:10-14; 33:10, 11.
16. ಬಾಬೆಲಿನಲ್ಲಿದ್ದ ಕೈದಿಗಳಿಗೆ ಯೆಹೆಜ್ಕೇಲ ತಿಳಿಸಿದ ಸಂದೇಶದಿಂದ ಯಾವ ಆಶ್ವಾಸನೆ ಸಿಕ್ತು?
16 ಯೆಹೆಜ್ಕೇಲನು ಕ್ರಿ.ಪೂ. 613 ರಿಂದ ಸುಮಾರು 591 ರ ವರೆಗೆ ಪ್ರವಾದಿಯಾಗಿ ಕೆಲಸ ಮಾಡಿದನು. ಅಧ್ಯಾಯ 5 ಮತ್ತು 6 ರಲ್ಲಿ ನಾವು ಕಲಿತ ಹಾಗೆ ಅವನು ಇಸ್ರಾಯೇಲಿನ ಜನರಿಗೆ ಬರಲಿರುವ ನಾಶನದ ಬಗ್ಗೆ ಹುರುಪಿನಿಂದ ಎಚ್ಚರಿಸಿದನು. ಹೀಗೆ ಸಾರಿದ್ರಿಂದ ಜನರ ರಕ್ತಾಪರಾಧ ಅವನ ಮೇಲೆ ಬರಲಿಲ್ಲ. ಆದ್ರೆ ಯೆಹೆಜ್ಕೇಲ ಯೆರೂಸಲೇಮಿನ ಧರ್ಮಭ್ರಷ್ಟರಿಗೆ ಯೆಹೋವನು ಶಿಕ್ಷೆ ಕೊಡಲಿದ್ದಾನೆ ಅಂತ ಎಚ್ಚರಿಸಿದ್ದಷ್ಟೇ ಅಲ್ಲ ಬಾಬೆಲಿನಲ್ಲಿದ್ದ ಕೈದಿಗಳಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೂ ಸಹಾಯ ಮಾಡಿದ. ಹೀಗೆ, ಅವರನ್ನ ಮುಂದೆ ಮಾಡಲಿದ್ದ ಕೆಲಸಕ್ಕಾಗಿ ಸಿದ್ಧ ಮಾಡಿದ. 70 ವರ್ಷದ ಬಂಧಿವಾಸದ ಕೊನೆಯಲ್ಲಿ ಯೆಹೋವ ದೇವರು ಕೈದಿಗಳಾಗಿದ್ದ ಇಸ್ರಾಯೇಲ್ಯರನ್ನ ವಾಪಸ್ ಕರ್ಕೊಂಡು ಹೋಗಲಿದ್ದನು. (ಯೆಹೆ. 36:7-11) ಈ ಉಳಿಕೆಯಲ್ಲಿ ಹೆಚ್ಚಿನವ್ರು ಯೆಹೆಜ್ಕೇಲನ ಸಂದೇಶಕ್ಕೆ ಕಿವಿಗೊಟ್ಟವರ ಮಕ್ಕಳು ಮತ್ತು ಮೊಮ್ಮಕ್ಕಳಾಗಿದ್ರು. ಆದರೆ ಯೆಹೆಜ್ಕೇಲನಿಗೆ ಇದಕ್ಕಿಂತ ಒಂದು ಒಳ್ಳೇ ಸುದ್ದಿ ಅಂದ್ರೆ ಶುದ್ಧ ಆರಾಧನೆ ಪುನಃಸ್ಥಾಪನೆ ಆಗುತ್ತೆ ಅಂತ ಹೇಳಲಿಕ್ಕಿತ್ತು. ಇದ್ರ ಬಗ್ಗೆ ಮೂರನೇ ಭಾಗದ ಉಳಿದ ಅಧ್ಯಾಯಗಳಲ್ಲಿ ನೋಡಬಹುದು.
17. ಯೆಹೋವನು ಯಾವಾಗೆಲ್ಲಾ ಕಾವಲುಗಾರರನ್ನ ನೇಮಿಸಿದನು?
17 ಕ್ರಿ.ಪೂ. 607 ರಲ್ಲಿ ಯೆರೂಸಲೇಮಿನ ನಾಶನದ ಬಗ್ಗೆ ತಿಳಿಸಲಿಕ್ಕಾಗಿ ಯೆಹೋವ ದೇವರು ಪ್ರವಾದಿಗಳನ್ನ ಅಥ್ವಾ ಕಾವಲುಗಾರರನ್ನ ಉಪಯೋಗಿಸಿದನು. ಈ ರೀತಿ ಎಚ್ಚರಿಕೆ ಕೊಡಲಿಕ್ಕಾಗಿ ಯೆಹೋವ ದೇವರು ಕಾವಲುಗಾರರನ್ನ ನೇಮಿಸಿರೋದು ಬರೀ ಆ ಸಮಯದಲ್ಲಿ ಮಾತ್ರನಾ? ಯೆಹೋವನ ಉದ್ದೇಶದ ಪ್ರಕಾರ ಪ್ರತಿಯೊಂದು ಪ್ರಾಮುಖ್ಯ ಘಟನೆಗಳು ನಡೆಯೋಕೆ ಮುಂಚೆ ಆತನು ದುಷ್ಟ ಜನ್ರನ್ನ ಎಚ್ಚರಿಸೋಕೆ ಮತ್ತು ಸಿಹಿಸುದ್ದಿಯನ್ನ ಸಾರೋಕೆ ಕಾವಲುಗಾರರನ್ನ ನೇಮಿಸಿದನು.
ಒಂದನೇ ಶತಮಾನದ ಕಾವಲುಗಾರರು
18. ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಯಾವೆಲ್ಲಾ ಕೆಲಸ ಮಾಡಿದನು?
18 ಕ್ರಿ.ಶ. ಒಂದನೇ ಶತಮಾನದಲ್ಲಿ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನು ಕಾವಲುಗಾರನಂತೆ ಕೆಲಸ ಮಾಡಿದನು. ಅವನು ಇಸ್ರಾಯೇಲ್ಯರಿಗೆ, ಬಲುಬೇಗನೆ ದೇವರು ನಿಮ್ಮನ್ನ ತಿರಸ್ಕರಿಸ್ತಾನೆ ಅಂತ ಎಚ್ಚರಿಸಿದನು. (ಮತ್ತಾ. 3:1, 2, 9-11) ಆದರೆ ಅವನು ಮಾಡಿದ್ದು ಇದೊಂದೇ ಕೆಲಸ ಅಲ್ಲ. ಪ್ರವಾದಿಗಳು ತಿಳಿಸಿದ ‘ಸಂದೇಶವಾಹಕನಾಗಿ’ ಕೆಲ್ಸ ಮಾಡಿದನು ಮತ್ತು ಮೆಸ್ಸೀಯನಿಗೆ ದಾರಿ ಸಿದ್ಧಮಾಡಿದನು. ಯೇಸು ಕೂಡ ಇದ್ರ ಬಗ್ಗೆ ಹೇಳಿದ್ದನು. (ಮಲಾ. 3:1; ಮತ್ತಾ. 11:7-10) ಈ ಸಂದೇಶವಾಹಕನಾಗಿರೋ ಯೋಹಾನನು ‘ದೇವರ ಕುರಿಮರಿಯಾದ’ ಯೇಸು ಬಂದಿದ್ದಾನೆ ಮತ್ತು ಅವನು ‘ಲೋಕದ ಪಾಪವನ್ನ’ ತೆಗೆದುಹಾಕ್ತಾನೆ ಅನ್ನೋ ಸಿಹಿಸುದ್ದಿಯನ್ನ ಸಾರಿದನು.—ಯೋಹಾ. 1: 29, 30.
19, 20. ಯೇಸು ಮತ್ತು ಅವನ ಶಿಷ್ಯರು ಹೇಗೆ ಕಾವಲುಗಾರರಾಗಿ ಕೆಲಸ ಮಾಡಿದ್ರು?
19 ಯೇಸು ಕ್ರಿಸ್ತನೇ ಎಲ್ಲರಿಗಿಂತ ಶ್ರೇಷ್ಠ ಕಾವಲುಗಾರ. ಯೆಹೆಜ್ಕೇಲನ ತರ ಆತನನ್ನ ಯೆಹೋವ ದೇವರು ಇಸ್ರಾಯೇಲ್ಯರಿಗೆ ಕಾವಲುಗಾರನಾಗಿ ನೇಮಿಸಿದನು. (ಯೆಹೆ. 3:17; ಮತ್ತಾ. 15:24) ದೇವರು, ಸ್ವಲ್ಪದರಲ್ಲೇ ಇಸ್ರಾಯೇಲ್ಯರನ್ನ ತಿರಸ್ಕರಿಸ್ತಾನೆ ಮತ್ತು ಯೆರೂಸಲೇಮ್ ನಾಶ ಆಗುತ್ತೆ ಅಂತ ಯೇಸು ಕ್ರಿಸ್ತನು ಎಚ್ಚರಿಸಿದನು. (ಮತ್ತಾ. 23:37, 38; 24:1, 2; ಲೂಕ 21:20-24) ಆದ್ರೆ ಯೇಸು ಕ್ರಿಸ್ತನ ಮುಖ್ಯ ಕೆಲಸ ಸಿಹಿಸುದ್ದಿಯನ್ನ ಸಾರೋದೇ ಆಗಿತ್ತು.—ಲೂಕ 4:17-21.
20 ಭೂಮಿಯಲ್ಲಿದ್ದಾಗ ಯೇಸು “ಎಚ್ಚರವಾಗೇ ಇರಿ” ಅಂತ ತನ್ನ ಶಿಷ್ಯರ ಹತ್ರ ಹೇಳಿದನು. (ಮತ್ತಾ. 24:42) ಈ ಶಿಷ್ಯರು ಯೇಸುವಿನ ಮಾತನ್ನ ಕೇಳಿ ಕಾವಲುಗಾರನ ತರ ಕೆಲಸ ಮಾಡಿದರು. ಯೆಹೋವ ದೇವರು ಇಸ್ರಾಯೇಲ್ ಜನರನ್ನ ಮತ್ತು ಯೆರೂಸಲೇಮ್ ಪಟ್ಟಣವನ್ನ ತಿರಸ್ಕರಿಸಿದ್ದಾನೆ ಅಂತ ಅವ್ರು ಎಚ್ಚರಿಸ್ತಾ ಇದ್ರು. (ರೋಮ. 9:6-8; ಗಲಾ. 4:25, 26) ಆದರೆ ಮುಂಚೆ ಇದ್ದ ಕಾವಲುಗಾರರ ಹಾಗೆ ಇವರೂ ಸಿಹಿಸುದ್ದಿಯನ್ನ ಸಾರಿದರು. ಯಾವುದು ಆ ಸಿಹಿಸುದ್ದಿ? ಅನ್ಯಜನಾಂಗದವ್ರು ದೇವರ ಇಸ್ರಾಯೇಲಿನ ಭಾಗವಾಗ್ತಾರೆ, ಇವರೆಲ್ಲ ಒಟ್ಟುಸೇರಿ ಶುದ್ಧ ಆರಾಧನೆಯನ್ನ ಭೂಮಿಯಲ್ಲಿ ಪುನಃಸ್ಥಾಪಿಸಲು ಯೇಸುವಿನ ಜೊತೆ ಕೆಲಸ ಮಾಡ್ತಾರೆ ಅನ್ನೋದೇ ಆಗಿತ್ತು.—ಅ. ಕಾ. 15:14; ಗಲಾ. 6:15, 16; ಪ್ರಕ. 5:9, 10.
21. ಪೌಲನು ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾನೆ?
21 ಒಂದನೇ ಶತಮಾನದಲ್ಲಿದ್ದ ಕಾವಲುಗಾರರಲ್ಲಿ ಅಪೊಸ್ತಲ ಪೌಲನು ತುಂಬ ಒಳ್ಳೇ ಮಾದರಿಯನ್ನ ಇಟ್ಟಿದ್ದನು. ಅವನು ತನಗಿದ್ದ ಜವಾಬ್ದಾರಿಯನ್ನ ಚೆನ್ನಾಗಿ ಮಾಡಿದನು. ಯೆಹೆಜ್ಕೇಲನ ತರ ಅವನಿಗೂ ತನ್ನ ನೇಮಕವನ್ನ ಚೆನ್ನಾಗಿ ಮಾಡಿಲ್ಲಾಂದ್ರೆ ಜನರ ರಕ್ತಾಪರಾಧ ತನ್ನ ಮೇಲೆ ಬರುತ್ತೆ ಅನ್ನೋದು ಗೊತ್ತಿತ್ತು. (ಅ. ಕಾ. 20:26, 27) ಬೇರೆಲ್ಲ ಕಾವಲುಗಾರರ ಹಾಗೆ ಅಪೊಸ್ತಲ ಪೌಲನು ಸಹ ಜನರನ್ನ ಎಚ್ಚರಿಸಿದನು, ಸಿಹಿಸುದ್ದಿಯನ್ನೂ ಸಾರಿದನು. (ಅ. ಕಾ. 15:35; ರೋಮ. 1:1-4) ಅವನು ಪವಿತ್ರಶಕ್ತಿಯ ಸಹಾಯದಿಂದ ಯೆಶಾಯನು ಬರೆದ ಈ ಭವಿಷ್ಯವಾಣಿಯ ಬಗ್ಗೆ ಮಾತನಾಡಿದನು: “ಸಿಹಿಸುದ್ದಿ ತರುವವನ ಕಾಲುಗಳು ಬೆಟ್ಟಗಳ ಮೇಲೆ ಎಷ್ಟೋ ಸುಂದರವಾಗಿವೆ.” ಅವನು ಈ ಭವಿಷ್ಯವಾಣಿಯನ್ನ ದೇವರ ಆಳ್ವಿಕೆಯ ಬಗ್ಗೆ ಸಿಹಿಸುದ್ದಿ ಸಾರುವ ಯೇಸು ಕ್ರಿಸ್ತನ ಹಿಂಬಾಲಕರಿಗೆ ಅನ್ವಯಿಸಿದನು.—ಯೆಶಾ. 52:7, 8; ರೋಮ. 10:13-15.
22. ಅಪೊಸ್ತಲರು ಸತ್ತ ನಂತರ ಏನಾಯ್ತು?
22 ಮುಂಚೆ ಹೇಳಿದ ಹಾಗೆ ಅಪೊಸ್ತಲರೆಲ್ಲರ ಮರಣದ ನಂತರ ಕ್ರೈಸ್ತ ಸಭೆಯಲ್ಲಿ ಧರ್ಮಭ್ರಷ್ಟತೆ ರಾರಾಜಿಸಿತು. (ಅ. ಕಾ. 20:29, 30; 2 ಥೆಸ. 2:3-8) ಆ ಸಮಯದ ನಂತರ ಗೋದಿಯಂಥ ಸತ್ಯ ಕ್ರೈಸ್ತರ ಸಂಖ್ಯೆಗಿಂತ ಕಳೆಯಂಥ ಸುಳ್ಳು ಕ್ರೈಸ್ತರ ಸಂಖ್ಯೆ ಹೆಚ್ಚಾಯ್ತು. ದೇವರ ಆಳ್ವಿಕೆಯ ಸಂದೇಶ ಮರೆಯಾಗಿ ಹೋಗುವಷ್ಟರ ಮಟ್ಟಿಗೆ ಸುಳ್ಳು ಬೋಧನೆಗಳು ಹೆಚ್ಚಾದವು. (ಮತ್ತಾ. 13:36-43) ಯೆಹೋವ ದೇವರು ಪುನಃ ಶುದ್ಧ ಆರಾಧನೆಯನ್ನ ಸ್ಥಾಪಿಸುವ ಸಮಯ ಬಂದಾಗ, ಸಿಹಿಸುದ್ದಿಯನ್ನ ಸಾರೋಕೆ ಮತ್ತು ಎಚ್ಚರಿಕೆಯ ಸಂದೇಶವನ್ನ ತಿಳಿಸೋಕೆ ಕಾವಲುಗಾರರನ್ನ ನೇಮಿಸುವ ಮೂಲಕ ಪ್ರೀತಿ ಮತ್ತು ನ್ಯಾಯವನ್ನ ತೋರಿಸಿದನು. ಆ ಕಾವಲುಗಾರರು ಯಾರಾಗಿದ್ರು?
ದುಷ್ಟರನ್ನ ಎಚ್ಚರಿಸಲು ಯೆಹೋವನು ಪುನಃ ಕಾವಲುಗಾರರನ್ನ ನೇಮಿಸಿದನು
23. ಸಹೋದರ ಸಿ.ಟಿ. ರಸಲ್ ಮತ್ತು ಅವರ ಸಂಗಡಿಗರು ಯಾವ ಪಾತ್ರ ವಹಿಸಿದ್ರು?
23 ಮೆಸ್ಸೀಯನ ಆಳ್ವಿಕೆ 1914 ರಲ್ಲಿ ಸ್ಥಾಪನೆಯಾಗೋಕೂ ಮುಂಚಿನ ವರ್ಷಗಳಲ್ಲಿ ಸಹೋದರ ಸಿ.ಟಿ. ರಸಲ್ ಮತ್ತು ಅವರ ಸಂಗಡಿಗರು ‘ದಾರಿಯನ್ನ ಸಿದ್ಧ ಮಾಡುವ ಸಂದೇಶವಾಹಕರಾಗಿ’ ಕೆಲಸ ಮಾಡಿದರು.b (ಮಲಾ. 3:1) ಈ ಗುಂಪು ಝಯನ್ಸ್ ವಾಚ್ ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಅನ್ನೋ ಪತ್ರಿಕೆಯನ್ನ ಉಪಯೋಗಿಸುತ್ತಾ ಕಾವಲುಗಾರರ ಕೆಲಸವನ್ನ ಮಾಡಿದರು. ಇದರ ಮೂಲಕ ಯೆಹೋವ ದೇವರ ನ್ಯಾಯತೀರ್ಪಿನ ಬಗ್ಗೆ ಜನರನ್ನ ಎಚ್ಚರಿಸ್ತಾ ಇದ್ರು ಮತ್ತು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಎಲ್ಲರಿಗೂ ತಿಳಿಸ್ತಾ ಬಂದ್ರು.
24. (ಎ) ಆಡಳಿತ ಮಂಡಲಿ ಹೇಗೆ ಕಾವಲುಗಾರನ ತರ ಕೆಲಸ ಮಾಡ್ತಿದೆ? (ಬಿ) ಹಿಂದೆ ಇದ್ದ ಕಾವಲುಗಾರರಿಂದ ನೀವು ಯಾವ ಪಾಠ ಕಲಿತ್ರಿ? (“ಕೆಲವು ಒಳ್ಳೇ ಕಾವಲುಗಾರರು” ಅನ್ನೋ ಚಾರ್ಟ್ ನೋಡಿ.)
24 ದೇವರ ಆಳ್ವಿಕೆ ಶುರುವಾದ ಮೇಲೆ ಯೇಸು ಕೆಲವು ಪುರುಷರನ್ನ ನಂಬಿಗಸ್ತ ಆಳಾಗಿ ನೇಮಿಸಿದನು. (ಮತ್ತಾ. 24:45-47) ಆಡಳಿತ ಮಂಡಲಿಯೇ ಈ ನಂಬಿಗಸ್ತ ಆಳು. ಅಂದಿನಿಂದ ಇಂದಿನವರೆಗೂ ಇವರು ಕಾವಲುಗಾರನ ಕೆಲಸವನ್ನ ಮಾಡ್ತಾ ಇದ್ದಾರೆ. ಇವರು, ಯೆಹೋವನ “ಸೇಡುತೀರಿಸುವ ದಿನದ ಬಗ್ಗೆ” ಎಚ್ಚರಿಸುತ್ತಿದ್ದಾರೆ. ಜೊತೆಗೆ, “ಯೆಹೋವ ತನ್ನ ಪ್ರಸನ್ನತೆಯನ್ನ ತೋರಿಸೋ ವರ್ಷದ ಬಗ್ಗೆ” ಸಿಹಿಸುದ್ದಿಯನ್ನ ಸಾರುತ್ತಿದ್ದಾರೆ.—ಯೆಶಾ 61:2; 2 ಕೊರಿಂಥ 6:1, 2 ಸಹ ನೋಡಿ.
25, 26. (ಎ) ಕ್ರಿಸ್ತನ ಹಿಂಬಾಲಕರೆಲ್ಲರೂ ಯಾವ ಕೆಲಸ ಮಾಡ್ಬೇಕು? ಮತ್ತು ಇದನ್ನ ಹೇಗೆ ಮಾಡಲಾಗ್ತಿದೆ? (ಬಿ) ಮುಂದಿನ ಅಧ್ಯಾಯದಲ್ಲಿ ನಾವೇನನ್ನ ನೋಡ್ತೇವೆ?
25 ಕಾವಲಿನ ಕೆಲಸ ಮುಖ್ಯವಾಗಿ ನಂಬಿಗಸ್ತ ಆಳಿಗೆ ಇರೋದಾದ್ರೂ, ಯೇಸು “ಯಾವಾಗ್ಲೂ ಎಚ್ಚರವಾಗಿರಿ” ಅಂತ ತನ್ನ ಹಿಂಬಾಲಕರಲ್ಲಿ “ಎಲ್ರಿಗೂ” ಹೇಳಿದನು. (ಮಾರ್ಕ 13:33-37) ಯೇಸು ಹೇಳಿದ ಹಾಗೆ ನಾವು ಯಾವಾಗ್ಲೂ ಎಚ್ಚರವಾಗಿರ್ತೀವಿ, ಕಾವಲುಗಾರರಿಗೆ ನಮ್ಮಿಂದಾದ ಬೆಂಬಲವನ್ನ ಕೊಡ್ತೀವಿ. ಸಿಹಿಸುದ್ದಿಯನ್ನ ಸಾರೋ ಮೂಲಕ ನಾವು ಎಚ್ಚರವಾಗಿದ್ದೇವೆ ಅಂತ ತೋರಿಸಿಕೊಡ್ತೀವಿ. (2 ತಿಮೊ. 4:2) ಸಾರೋಕೆ ನಮ್ಮನ್ನ ಯಾವುದು ಪ್ರೇರಿಸುತ್ತೆ? ಜನರನ್ನ ರಕ್ಷಿಸಬೇಕನ್ನೋ ಆಸೆನೇ ನಮ್ಮನ್ನ ಪ್ರೇರಿಸುತ್ತೆ. (1 ತಿಮೊ. 4:16) ಇವತ್ತು ಕಾವಲುಗಾರರು ಕೊಡೋ ಎಚ್ಚರಿಕೆಯನ್ನ ತಿರಸ್ಕರಿಸೋದ್ರಿಂದ ತುಂಬ ಜನ ಬಲುಬೇಗ ತಮ್ಮ ಪ್ರಾಣವನ್ನ ಕಳಕೊಳ್ಳಲಿದ್ದಾರೆ. (ಯೆಹೆ. 3:19) ಆದ್ರೆ ನಮ್ಮ ಮುಖ್ಯ ಉದ್ದೇಶ ಶುದ್ಧ ಆರಾಧನೆ ಪುನಃಸ್ಥಾಪನೆ ಆಗಿದೆ ಅಂತ ಸಾರೋದೇ ಆಗಿದೆ. ಇದು “ಯೆಹೋವ ತನ್ನ ಪ್ರಸನ್ನತೆಯನ್ನ ತೋರಿಸೋ ವರ್ಷ” ಆಗಿದೆ. ಹಾಗಾಗಿ ತುಂಬ ಜನರಿಗೆ ನಮ್ಮ ಪ್ರೀತಿಯ, ನ್ಯಾಯವಂತ ಯೆಹೋವ ದೇವರನ್ನ ಆರಾಧಿಸುವ ಅವಕಾಶ ಇದೆ. ಆದಷ್ಟು ಬೇಗನೇ ಈ ದುಷ್ಟ ಲೋಕದ ನಾಶನವನ್ನ ಪಾರಾಗೋವ್ರು ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ಆಶೀರ್ವಾದಗಳನ್ನ ಪಡ್ಕೊಳ್ತಾರೆ. ನಮ್ಮನ್ನ ನಡೆಸ್ತಿರೋ ಕಾವಲುಗಾರರಿಗೆ ಬೆಂಬಲ ಕೊಡ್ತಾ ಇಂಥ ಸಿಹಿಸುದ್ದಿಯನ್ನ ಸಾರದೆ ಇರೋಕೆ ಹೇಗೆ ತಾನೇ ಸಾಧ್ಯ?—ಮತ್ತಾ. 24:14.
26 ಈ ದುಷ್ಟಲೋಕ ಅಂತ್ಯ ಆಗೋಕೂ ಮುಂಚೆನೇ ಯೆಹೋವ ದೇವರು ತನ್ನ ಸೇವಕರನ್ನ ಅದ್ಭುತಕರವಾದ ರೀತಿಯಲ್ಲಿ ಐಕ್ಯಗೊಳಿಸ್ತಾನೆ. ಅದನ್ನ ಆತನು ಹೇಗೆ ಮಾಡ್ತಾನೆ ಅಂತ ಎರಡು ಕೋಲುಗಳು ಒಂದಾಗೋದ್ರ ಬಗ್ಗೆ ಇರೋ ಭವಿಷ್ಯವಾಣಿಯಿಂದ ತಿಳಿಯಲಿದ್ದೇವೆ. ಇದನ್ನ ಮುಂದಿನ ಅಧ್ಯಾಯದಲ್ಲಿ ನೋಡೋಣ.
a “ಕೆಟ್ಟದು,” “ಕಷ್ಟ,” “ಶಿಕ್ಷೆ” ಮುಂತಾದ ಪದಗಳು ಯೆರೆಮೀಯ ಪುಸ್ತಕದಲ್ಲಿ ತುಂಬ ಸಲ ಕಂಡುಬರುತ್ತೆ.
b ಈ ಭವಿಷ್ಯವಾಣಿ ಮತ್ತು ಅದರ ನೆರವೇರಿಕೆಯ ಬಗ್ಗೆ ಮಾಹಿತಿಗಾಗಿ ಗಾಡ್ಸ್ ಕಿಂಗ್ಡಮ್ ರೂಲ್ಸ್! ಪುಸ್ತಕದ 2 ನೇ ಅಧ್ಯಾಯ “ದ ಕಿಂಗ್ಡಮ್ ಈಸ್ ಬಾರ್ನ್ ಇನ್ ಹೆವೆನ್” ನೋಡಿ.