ಅಧ್ಯಯನ ಲೇಖನ 42
‘ಯೆಹೋವನಿಗೆ ನಿಯತ್ತಿಂದ ಇರೋರು ಸಂತೋಷವಾಗಿ ಇರ್ತಾರೆ’
“ನಿಯತ್ತಿಂದ ನಡೆಯೋರು, ಯೆಹೋವನ ನಿಯಮ ಪುಸ್ತಕದ ಪ್ರಕಾರ ನಡೆಯೋರು ಭಾಗ್ಯವಂತರು.”—ಕೀರ್ತ. 119:1, ಪಾದಟಿಪ್ಪಣಿ
ಗೀತೆ 63 ಸದಾ ನಿಷ್ಠರು
ಕಿರುನೋಟa
1-2. (ಎ) ಕೆಲವು ಸರ್ಕಾರದವರು ಯೆಹೋವನ ಸಾಕ್ಷಿಗಳಿಗೆ ಏನು ಮಾಡ್ತಿದ್ದಾರೆ? ಆದ್ರೆ ಯೆಹೋವನ ಸಾಕ್ಷಿಗಳು ಹೇಗೆ ನಡಕೊಳ್ತಿದ್ದಾರೆ? (ಬಿ) ಹಿಂಸೆ ಅನುಭವಿಸ್ತಾ ಇದ್ರೂ ಸಂತೋಷವಾಗಿ ಇರೋಕೆ ಹೇಗೆ ಸಾಧ್ಯ? (ಮುಖಪುಟ ಚಿತ್ರವನ್ನ ವಿವರಿಸಿ.)
ಇವತ್ತು 30ಕ್ಕಿಂತ ಹೆಚ್ಚು ದೇಶಗಳಲ್ಲಿ ನಮ್ಮ ಕೆಲಸನ ಸರ್ಕಾರ ನಿಷೇಧಿಸಿದೆ. ಕೆಲವು ದೇಶಗಳಲ್ಲಂತೂ ಅಧಿಕಾರಿಗಳು ನಮ್ಮ ಸಹೋದರ ಸಹೋದರಿಯರನ್ನ ಜೈಲಿಗೆ ಹಾಕಿದ್ದಾರೆ. ಅವರು ಮಾಡಿದ ತಪ್ಪಾದ್ರೂ ಏನು? ನಿಜ ಹೇಳಬೇಕಂದ್ರೆ ಯೆಹೋವನ ದೃಷ್ಟಿಯಲ್ಲಿ ಅವರೇನೂ ತಪ್ಪು ಮಾಡಿಲ್ಲ. ಬೈಬಲ್ ಓದಿ ಅಧ್ಯಯನ ಮಾಡಿದಕ್ಕೆ, ಅದರ ಬಗ್ಗೆ ಬೇರೆಯವರಿಗೆ ಹೇಳಿದ್ದಕ್ಕೆ, ಕೂಟಗಳಿಗೆ ಹೋಗಿದ್ದಕ್ಕೆ ಮತ್ತು ಯಾರ ಪಕ್ಷವನ್ನೂ ವಹಿಸದೆ ಇದ್ದಿದ್ದಕ್ಕೆ ಅವರನ್ನ ಜೈಲಿಗೆ ಹಾಕಿದ್ದಾರೆ. ಇಷ್ಟೆಲ್ಲ ಹಿಂಸೆ ವಿರೋಧ ಬಂದರೂ ನಮ್ಮ ಸಹೋದರ ಸಹೋದರಿಯರು ಅದನ್ನ ಸಹಿಸಿಕೊಳ್ಳುತ್ತಿದ್ದಾರೆ. ಖುಷಿಯಿಂದ ಯೆಹೋವನನ್ನು ಆರಾಧಿಸುತ್ತಿದ್ದಾರೆ. ಆತನಿಗೆ ನಿಯತ್ತಿಂದb ಇದ್ದಾರೆ ಮತ್ತು ಆತನಿಗೆ ಕೊಡಬೇಕಾದ ಗೌರವ, ಭಕ್ತಿಯನ್ನ ಬೇರೆ ಯಾರಿಗೂ ಕೊಟ್ಟಿಲ್ಲ.
2 ಇಂಥ ಹಿಂಸೆ ವಿರೋಧ ಅನುಭವಿಸ್ತಾ ಇರೊ ಸಹೋದರ ಸಹೋದರಿಯರ ಫೋಟೋನ ನೀವು ನೋಡಿರುತ್ತೀರ. ಅವರು ಯಾವಾಗಲೂ ನಗುನಗುತ್ತಾ ಇರ್ತಾರೆ. ಯಾಕಂದ್ರೆ ಯೆಹೋವನಿಗೆ ನಿಯತ್ತಾಗಿ ನಡಕೊಂಡಿದ್ರಿಂದ ಆತನು ಅವರನ್ನ ಮೆಚ್ಚಿಕೊಂಡಿರ್ತಾನೆ ಅನ್ನೋ ಸಂತೋಷ, ಸಮಾಧಾನ ಅವರಿಗಿದೆ. (1 ಪೂರ್ವ. 29:17ಎ) “ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ . . . ನಿಮಗಾಗಿ ದೊಡ್ಡ ಬಹುಮಾನ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ” ಅಂತ ಯೇಸು ಹೇಳಿದನು.—ಮತ್ತಾ. 5:10-12.
ನಮಗೊಂದು ಮಾದರಿ
3. ಅಪೊಸ್ತಲರ ಕಾರ್ಯ 4:19, 20ರಲ್ಲಿ ಹೇಳಿರೋ ಹಾಗೆ ಒಂದನೇ ಶತಮಾನದಲ್ಲಿದ್ದ ಅಪೊಸ್ತಲರಿಗೆ ವಿರೋಧಗಳು ಬಂದಾಗ ಏನು ಮಾಡಿದ್ರು ಮತ್ತು ಯಾಕೆ?
3 ಇವತ್ತಿರೋ ನಮ್ಮ ಸಹೋದರ ಸಹೋದರಿಯರ ತರನೇ ಒಂದನೇ ಶತಮಾನದಲ್ಲಿದ್ದ ಅಪೊಸ್ತಲರಿಗೂ ತುಂಬ ವಿರೋಧ ಬಂದಿತ್ತು. ಯೆಹೂದಿ ಉಚ್ಚ ನ್ಯಾಯಾಲಯದಲ್ಲಿದ್ದ ನ್ಯಾಯಾಧೀಶರು ಅವರಿಗೆ “ಯೇಸುವಿನ ಹೆಸ್ರೆತ್ತಿ ಮಾತಾಡಲೇಬಾರದು, ಕಲಿಸಲೇಬಾರದು” ಅಂತ ಪದೇಪದೇ ಹೇಳಿದ್ರು. (ಅ. ಕಾ. 4:18; 5:27, 28, 40) ಆಗ ಅಪೊಸ್ತಲರು ಸಾರೋದನ್ನ ನಿಲ್ಲಿಸಿಬಿಟ್ರಾ? ಇಲ್ಲ. (ಅಪೊಸ್ತಲರ ಕಾರ್ಯ 4:19, 20 ಓದಿ.) ಯಾಕಂದ್ರೆ ಯೇಸು ಬಗ್ಗೆ “ಎಲ್ಲ ಜನ್ರಿಗೆ ಹೇಳಿ ಮತ್ತು ಚೆನ್ನಾಗಿ ವಿವರಿಸಿ” ಅಂತ ಆ ನ್ಯಾಯಾಧೀಶರಿಗಿಂತ ಮೇಲಿರೋ ಒಬ್ಬರು ಅವರಿಗೆ ಆಜ್ಞೆ ಕೊಟ್ಟಿದ್ರು. (ಅ. ಕಾ. 10:42) ಇದು ಅಪೊಸ್ತಲರಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅಪೊಸ್ತಲರ ಪರವಾಗಿ ಪೇತ್ರ, ಯೋಹಾನ ಆ ನ್ಯಾಯಾಧೀಶರಿಗೆ ‘ನಾವು ಮನುಷ್ಯರಿಗಿಂತ ದೇವರ ಮಾತನ್ನೇ ಕೇಳ್ತೀವಿ. ಯೇಸು ಬಗ್ಗೆ ಮಾತಾಡೋದನ್ನ ನಿಲ್ಲಿಸಲ್ಲ’ ಅಂತ ಧೈರ್ಯವಾಗಿ ಹೇಳಿದ್ರು. ಇದು ಒಂದರ್ಥದಲ್ಲಿ ಅವರು ಆ ನ್ಯಾಯಾಧೀಶರಿಗೆ “ದೇವರ ಮಾತನ್ನ ಬಿಟ್ಟು ನಿಮ್ಮ ಮಾತನ್ನ ಕೇಳಬೇಕು ಅಂತ ಹೇಳೋಕೆ ನಿಮಗೆಷ್ಟು ಧೈರ್ಯ?” ಅಂತ ಕೇಳಿದ ಹಾಗಿತ್ತು.
4. (ಎ) ಅಪೊಸ್ತಲರ ಕಾರ್ಯ 5:27-29ರಲ್ಲಿ ಹೇಳೋ ತರ ಅಪೊಸ್ತಲರು ಕ್ರೈಸ್ತರಿಗೆ ಯಾವ ಮಾದರಿ ಇಟ್ಟಿದ್ದಾರೆ? (ಬಿ) ನಾವು ಅವರ ತರ ಇರೋಕೆ ಏನು ಮಾಡಬೇಕು?
4 ಇಲ್ಲಿ ತನಕ ಎಲ್ಲ ನಿಜ ಕ್ರೈಸ್ತರು ಆ ಅಪೊಸ್ತಲರ ಮಾದರಿಯನ್ನ ಪಾಲಿಸ್ತಿದ್ದಾರೆ. ಅಪೊಸ್ತಲರು ‘ಮನುಷ್ಯರಿಗಿಂತ ದೇವರ ಮಾತನ್ನೇ ಕೇಳಿದ್ರು.’ (ಅಪೊಸ್ತಲರ ಕಾರ್ಯ 5:27-29 ಓದಿ.) ಹೀಗೆ ಅವರು ದೇವರಿಗೆ ನಿಯತ್ತಾಗಿ ಇದ್ದಿದ್ದಕ್ಕೆ ತುಂಬ ಹೊಡೆತ ತಿಂದ್ರು. ಅವರು ಯೆಹೂದಿ ಉಚ್ಚನ್ಯಾಯಾಲಯದಿಂದ ಹೊರಗೆ ಬರುವಾಗ “ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು.” ಅಲ್ಲಿಂದ ನೇರವಾಗಿ ಅವರು ಸಾರೋಕೆ ಹೋದ್ರು!—ಅ. ಕಾ. 5:40-42.
5. ನಮ್ಮ ಮನಸ್ಸಲ್ಲಿ ಯಾವ ಪ್ರಶ್ನೆ ಬರಬಹುದು?
5 ಹಿಂಸೆ ವಿರೋಧಗಳು ಬಂದಾಗ ಅಪೊಸ್ತಲರು ನಡಕೊಂಡ ರೀತಿ ನೋಡಿ ನಮ್ಮ ಮನಸ್ಸಲ್ಲಿ ಕೆಲವು ಪ್ರಶ್ನೆಗಳು ಬರಬಹುದು. “ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು” ಅಂತ ನಮಗೆ ಚೆನ್ನಾಗಿ ಗೊತ್ತು. ಆದ್ರೆ ಈ ಅಪೊಸ್ತಲರು ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳ ಮಾತನ್ನ ಮೀರಿ ದೇವರ ಮಾತನ್ನ ಕೇಳಿದ್ರು. ಅವರು ಮಾಡಿದ್ದು ಸರಿನಾ? (ರೋಮ. 13:1) ಇವತ್ತು ನಾವು ‘ಸರ್ಕಾರಗಳ, ಅಧಿಕಾರಿಗಳ ಮಾತು ಕೇಳ್ತಾ’ ಯೆಹೋವನಿಗೂ ನಿಯತ್ತಿಂದ ಇರೋಕೆ ಆಗುತ್ತಾ?—ತೀತ 3:1.
“ಅಧಿಕಾರಿಗಳು”
6. (ಎ) ರೋಮನ್ನರಿಗೆ 13:1ರಲ್ಲಿ ಹೇಳಿರೋ “ಅಧಿಕಾರಿಗಳು” ಯಾರು ಮತ್ತು ನಮ್ಮೆಲ್ಲರ ಕರ್ತವ್ಯ ಏನು? (ಬಿ) ಅವರಿಗಿರೋ ಅಧಿಕಾರದ ಬಗ್ಗೆ ಏನು ಹೇಳಬಹುದು?
6 ರೋಮನ್ನರಿಗೆ 13:1 ಓದಿ. ಈ ವಚನದಲ್ಲಿ “ಅಧಿಕಾರಿಗಳು” ಅನ್ನೋ ಪದ ಜನರ ಮೇಲೆ ಸ್ವಲ್ಪ ಮಟ್ಟಿಗೆ ಅಧಿಕಾರ ಇರುವವರನ್ನ ಸೂಚಿಸುತ್ತೆ. ಈ ಅಧಿಕಾರಿಗಳು ಸಮಾಜದಲ್ಲಿ ಎಲ್ಲ ವ್ಯವಸ್ಥಿತವಾಗಿ ನಡಿಯೋಕೆ ಮತ್ತು ಜನರು ಕಾನೂನು, ನಿಯಮಗಳನ್ನ ಪಾಲಿಸೋಕೆ ಸಹಾಯ ಮಾಡ್ತಾರೆ. ಅಷ್ಟೇ ಅಲ್ಲ ಕೆಲವು ಸಲ ಯೆಹೋವನ ಸಾಕ್ಷಿಗಳಿಗೆ ತೊಂದ್ರೆ ಆದಾಗ ಸಹಾಯನೂ ಮಾಡಿದ್ದಾರೆ. (ಪ್ರಕ. 12:16) ಅದಕ್ಕೆ ನಾವು ಅವರ ಮಾತನ್ನ ಕೇಳಬೇಕು. ನಾವು ಅವರಿಗೆ ತೆರಿಗೆಯನ್ನ, ಸುಂಕವನ್ನ, ಗೌರವ, ಮರ್ಯಾದೆಯನ್ನ ಕೊಡಬೇಕು. (ರೋಮ. 13:7) ಯೆಹೋವ ಅನುಮತಿಸಿರೋದಕ್ಕೇ ಅವರಿಗೆ ಈ ಅಧಿಕಾರ ಇರೋದು. ಇದು ರೋಮನ್ ರಾಜ್ಯಪಾಲನಾದ ಪೊಂತ್ಯ ಪಿಲಾತನ ಹತ್ರ ಯೇಸು ಮಾತಾಡಿದ ವಿಷಯದಿಂದ ಗೊತ್ತಾಗುತ್ತೆ. ಯೇಸುವಿನ ಜೀವ ಕಾಪಾಡೋದು ಅಥವಾ ಅದನ್ನ ತೆಗೆಯೋದು ತನ್ನ ಕೈಯಲ್ಲಿದೆ ಅನ್ನೋ ತರ ಪೊಂತ್ಯ ಪಿಲಾತ ಮಾತಾಡ್ತಾ ಇದ್ದಾಗ ಯೇಸು, “ದೇವ್ರಿಂದ ನಿನಗೆ ಅಧಿಕಾರ ಸಿಗದೇ ಇದ್ದಿದ್ರೆ ನನ್ನ ಮೇಲೆ ಯಾವ ಅಧಿಕಾರನೂ ಇರ್ತಾ ಇರಲಿಲ್ಲ” ಅಂತ ಹೇಳಿದನು. (ಯೋಹಾ. 19:11) ಪಿಲಾತನ ತರ ಇವತ್ತಿರೋ ಅಧಿಕಾರಿಗಳಿಗೂ, ರಾಜಕಾರಣಿಗಳಿಗೂ ಸ್ವಲ್ಪ ಮಟ್ಟಿಗೆ ಅಧಿಕಾರ ಇದೆ ಅಷ್ಟೇ.
7. (ಎ) ನಾವು ಯಾವಾಗ ಅಧಿಕಾರಿಗಳ ಮಾತು ಕೇಳಲ್ಲ? (ಬಿ) ಅಧಿಕಾರಿಗಳು ಯೇಸುವಿನ ಶಿಷ್ಯರನ್ನ ಹಿಂಸಿಸಿದ್ರೆ ಏನಾಗುತ್ತೆ?
7 ಯೆಹೋವ ದೇವರ ನಿಯಮಗಳಿಗೆ ವಿರುದ್ಧವಾಗಿ ಇಲ್ಲದ ಕಾನೂನುಗಳನ್ನ ಕ್ರೈಸ್ತರಾದ ನಾವು ಪಾಲಿಸ್ತೀವಿ. ಅದಕ್ಕೆ ಸರ್ಕಾರ ಹೇಳಿದ ಹಾಗೆ ನಾವು ಕೇಳ್ತೀವಿ. ಆದ್ರೆ ದೇವರು ಮಾಡಿ ಅಂದಿದ್ದನ್ನ ಮಾಡದೆ ಇರೋಕೆ ಅಥವಾ ಮಾಡಬೇಡಿ ಅಂದಿದ್ದನ್ನ ಮಾಡೋಕೆ ಸರ್ಕಾರ ಹೇಳಿದ್ರೆ ನಾವದನ್ನ ಮಾಡಲ್ಲ. ಉದಾಹರಣೆಗೆ, ಯುವಕರು ಮಿಲಿಟರಿಗೆ ಸೇರಬೇಕು, ಅವರ ದೇಶಕ್ಕಾಗಿ ಹೋರಾಡಬೇಕು ಅಂತ ಅಧಿಕಾರಿಗಳು ನಮ್ಮನ್ನ ಒತ್ತಾಯ ಮಾಡ್ತಾರೆ.c ಬೈಬಲನ್ನ, ಬೈಬಲ್ ಆಧಾರಿತ ಪ್ರಕಾಶನಗಳನ್ನ ಬ್ಯಾನ್ ಮಾಡ್ತಾರೆ ಮತ್ತು ನಾವು ಸಿಹಿಸುದ್ದಿ ಸಾರಬಾರದು, ಕೂಟಗಳಿಗೆ ಹೋಗಬಾರದು ಅಂತ ನಿಷೇಧ ಹಾಕ್ತಾರೆ. ಆದ್ರೆ ಅವರು ಈ ತರ ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿ ಯೇಸುವಿನ ಶಿಷ್ಯರನ್ನ ಹಿಂಸಿಸಿದ್ರೆ ಯೆಹೋವ ದೇವರಿಗೆ ಲೆಕ್ಕ ಕೊಡಬೇಕಾಗುತ್ತೆ. ಯಾಕಂದ್ರೆ ಯೆಹೋವ ಎಲ್ಲವನ್ನೂ ನೋಡ್ತಿದ್ದಾನೆ!—ಪ್ರಸಂ. 5:8.
8. (ಎ) “ಅಧಿಕಾರಿ” ಮತ್ತು “ಮಹೋನ್ನತ,” ಅನ್ನೋ ಪದಕ್ಕಿರೋ ವ್ಯತ್ಯಾಸ ಏನು? (ಬಿ) ಇದರಿಂದ ನಮಗೆ ಏನು ಅರ್ಥ ಆಗುತ್ತೆ?
8 “ಅಧಿಕಾರಿ” ಅನ್ನೋ ಪದ ಸ್ಥಾನಮಾನ, ದೊಡ್ಡ ಹುದ್ದೆ ಅಥವಾ ಪದವಿಯಲ್ಲಿರೋ ವ್ಯಕ್ತಿಯನ್ನ ಸೂಚಿಸುತ್ತೆ. ಇವರಿಗೆ ಬೇರೆಯವರ ಮೇಲೆ ಅಧಿಕಾರ ಇರುತ್ತೆ. ಹಾಗಂತ ಅವರಿಗೇ ಹೆಚ್ಚು ಶಕ್ತಿ ಇರೋದು, ಎಲ್ಲದರ ಮೇಲೆ, ಎಲ್ಲರ ಮೇಲೆ ಅವರಿಗೇ ಜಾಸ್ತಿ ಅಧಿಕಾರ ಇರೋದು ಅಂತ ಹೇಳಕ್ಕಾಗಲ್ಲ. ಆದ್ರೆ ಅವರಿಗಿಂತ ದೊಡ್ಡವನು ಒಬ್ಬ ಇದ್ದಾನೆ. ಆತನಿಗೆ ಎಲ್ಲದರ ಮೇಲೆ ಅಧಿಕಾರ ಇದೆ. ಆತನೇ ನಮ್ಮನ್ನ ಸೃಷ್ಟಿ ಮಾಡಿರೋ ಯೆಹೋವ ದೇವರು. ಆತನನ್ನು ಬೈಬಲ್ ನಾಲ್ಕು ಸಲ “ಮಹೋನ್ನತ ದೇವರು” ಅಂತ ಕರೆದಿದೆ.—ದಾನಿ. 7:18, 22, 25, 27.
“ಮಹೋನ್ನತ ದೇವರು”
9. ಪ್ರವಾದಿ ದಾನಿಯೇಲ ದರ್ಶನಗಳಲ್ಲಿ ಏನು ನೋಡಿದ?
9 ಪ್ರವಾದಿ ದಾನಿಯೇಲ ನೋಡಿದ ದರ್ಶನ, ಯೆಹೋವ ದೇವರಿಗೆ ಬೇರೆಲ್ಲ ಅಧಿಕಾರಿಗಳಿಗಿಂತ ಜಾಸ್ತಿ ಅಧಿಕಾರ ಇದೆ ಅನ್ನೋದನ್ನ ತೋರಿಸ್ತು. ಅವನು ದರ್ಶನದಲ್ಲಿ ನಾಲ್ಕು ದೊಡ್ಡ ಪ್ರಾಣಿಗಳನ್ನ ನೋಡಿದ. ಅವು ಹಿಂದಿನ ಕಾಲದ ಮತ್ತು ಈಗಿನ ಲೋಕಶಕ್ತಿಗಳನ್ನ ಸೂಚಿಸುತ್ತೆ. ಅವು ಯಾವುದಂದ್ರೆ ಬಾಬೆಲ್, ಮೇದ್ಯ-ಪರ್ಷಿಯ, ಗ್ರೀಸ್, ರೋಮ್ ಮತ್ತು ಅದರಿಂದ ಹುಟ್ಟಿಕೊಂಡಿರೋ ಆ್ಯಂಗ್ಲೋ-ಅಮೆರಿಕ. ಇದು ಈಗ ಲೋಕವನ್ನ ಆಳ್ತಿದೆ. (ದಾನಿ. 7:1-3, 17) ಆಮೇಲೆ ದಾನಿಯೇಲ ಸ್ವರ್ಗದ ನ್ಯಾಯಸಭೆಯಲ್ಲಿ ಸಿಂಹಾಸನದ ಮೇಲೆ ಯೆಹೋವ ಕೂತಿರೋದನ್ನ ನೋಡಿದ. (ದಾನಿ. 7:9, 10) ಇದಾದಮೇಲೆ ಈಗಿರೋ ಎಲ್ಲಾ ಅಧಿಕಾರಿಗಳನ್ನ ನಡುಗಿಸುವಂಥದ್ದನ್ನ ಅವನು ದರ್ಶನದಲ್ಲಿ ನೋಡಿದ. ಅದೇನು?
10. (ಎ) ದಾನಿಯೇಲ 7:13, 14, 27ರಲ್ಲಿ ಹೇಳೋ ಹಾಗೆ ಯೆಹೋವ, ಭೂಮಿಯನ್ನ ಆಳೋ ಅಧಿಕಾರನ ಯಾರಿಗೆ ಕೊಡ್ತಾನೆ? (ಬಿ) ಇದ್ರಿಂದ ನಮಗೇನು ಗೊತ್ತಾಗುತ್ತೆ?
10 ದಾನಿಯೇಲ 7:13, 14, 27 ಓದಿ. ಯೆಹೋವ ದೇವರು ಮಾನವ ಸರ್ಕಾರಗಳಿಗಿರೋ ಶಕ್ತಿ, ಅಧಿಕಾರನ ತೆಗೆದು ಹೆಚ್ಚು ಅರ್ಹತೆ ಮತ್ತು ಶಕ್ತಿ ಇರೋ ಬೇರೆಯವರಿಗೆ ಕೊಡ್ತಾನೆ. ಅವರು ಯಾರು? “ಮನುಷ್ಯಕುಮಾರನ ತರ” ಇರೋ ಯೇಸು ಕ್ರಿಸ್ತ ಮತ್ತು ‘ಮಹೋನ್ನತ ದೇವರ ಪವಿತ್ರ ಜನರಾಗಿರೋ’ 1,44,000 ಅಭಿಷಿಕ್ತರು. ಇವರು “ಸದಾಕಾಲಕ್ಕೂ” ಆಳ್ತಾರೆ. (ದಾನಿ. 7:18) ಇದರಿಂದ ‘ಮಹೋನ್ನತ ದೇವರಾಗಿರೋ’ ಯೆಹೋವನಿಗೆ ಮಾತ್ರ ಎಲ್ಲಾ ಅಧಿಕಾರಿಗಳ ಮೇಲೆ ಅಧಿಕಾರ ಇದೆ ಅಂತ ಗೊತ್ತಾಗುತ್ತೆ.
11. ಮನುಷ್ಯರ ಸಾಮ್ರಾಜ್ಯದ ಮೇಲೆ ಯೆಹೋವನಿಗಿರೋ ಅಧಿಕಾರದ ಬಗ್ಗೆ ದಾನಿಯೇಲ ಏನು ಹೇಳಿದ?
11 ಯೆಹೋವ ದೇವರಿಗೆ ಎಲ್ಲದರ ಮೇಲೆ ಅಧಿಕಾರ ಇದೆ ಅನ್ನೋ ವಿಷಯನ ದಾನಿಯೇಲ ದರ್ಶನ ನೋಡೋಕೂ ಮುಂಚೆನೇ ಹೇಳಿದ್ದ. ‘ಸ್ವರ್ಗದ ದೇವರು’ “ರಾಜರನ್ನ ಅಧಿಕಾರದಿಂದ ಬೀಳಿಸಿ ಬೇರೆ ರಾಜರನ್ನ ಅಧಿಕಾರಕ್ಕೆ ತರ್ತಾನೆ” “ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ, ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ” ಅಂತ ಬರೆದಿದ್ದ. (ದಾನಿ. 2:19-21; 4:17) ಹಾಗಾದ್ರೆ ಯೆಹೋವ ದೇವರು ಇದಕ್ಕಿಂತ ಮುಂಚೆ ಹಾಗೆ ಮಾಡಿದ್ರಾ? ಹೌದು!
12. ಈ ಮುಂಚೆ ಯೆಹೋವ ರಾಜರನ್ನ ಅಧಿಕಾರದಿಂದ ಬೀಳಿಸಿದ್ದಾನೆ ಅನ್ನೋಕೆ ಉದಾಹರಣೆಗಳನ್ನ ಕೊಡಿ. (ಚಿತ್ರ ನೋಡಿ.)
12 ಎಲ್ಲ “ಅಧಿಕಾರಿಗಳ” ಮೇಲೆ ತನಗೆ ಅಧಿಕಾರ ಇದೆ ಅಂತ ಯೆಹೋವ ಈಗಾಗಲೇ ಸಾಬೀತು ಮಾಡಿದ್ದಾನೆ. ಅದಕ್ಕೆ ಮೂರು ಘಟನೆಗಳನ್ನ ನೋಡೋಣ. ಫರೋಹ ದೇವಜನರನ್ನ ಈಜಿಪ್ಟ್ನಲ್ಲಿ ಇಟ್ಕೊಂಡು ಅವರನ್ನ ದಾಸರ ತರ ದುಡಿಸಿಕೊಳ್ತಿದ್ದ. ಅವರನ್ನ ಬಿಡೋಕೆ ಪದೇಪದೇ ಹೇಳಿದ್ರೂ ಅವನು ಅದಕ್ಕೆ ಒಪ್ಪಲೇ ಇಲ್ಲ. ಆದ್ರೆ ಯೆಹೋವ ದೇವರು ಅವರನ್ನ ಬಿಡಿಸಿದನು. ಅಷ್ಟೇ ಅಲ್ಲ, ಫರೋಹನನ್ನ ಕೆಂಪು ಸಮುದ್ರದಲ್ಲಿ ಮುಳುಗಿಸಿ ಸಾಯಿಸಿಬಿಟ್ಟನು. (ವಿಮೋ. 14:26-28; ಕೀರ್ತ. 136:15) ರಾಜ ಬೇಲ್ಶಚ್ಚರ ಒಂದು ದೊಡ್ಡ ಔತಣ ಮಾಡಿದಾಗ ಯೆಹೋವನಿಗೆ ಗೌರವ ಕೊಡೋ ಬದಲು ‘ಬೆಳ್ಳಿ, ಚಿನ್ನದ ದೇವರುಗಳನ್ನ ಹೊಗಳಿದ.’ ಹೀಗೆ ‘ದೇವರ ಮುಂದೆ ಸೊಕ್ಕಿಂದ ನಡಕೊಂಡ.’ (ದಾನಿ. 5:22, 23) ಯೆಹೋವ ದೇವರು ಅವನ ಸೊಕ್ಕನ್ನ ಮುರಿದನು. “ಆ ರಾತ್ರಿನೇ” ಮೇದ್ಯ-ಪರ್ಷಿಯನ್ನರು ಬೇಲ್ಶಚ್ಚರನನ್ನ ಕೊಲ್ಲೋ ತರ ಯೆಹೋವ ಮಾಡಿದನು ಮತ್ತು ಅವನ ರಾಜ್ಯವನ್ನ ಅವರ ಕೈಗೆ ಸಿಗೋ ತರ ಮಾಡಿದನು. (ದಾನಿ. 5:28, 30, 31) ಪ್ಯಾಲಸ್ತೀನ್ನ ರಾಜ ಒಂದನೇ ಹೆರೋದ ಅಗ್ರಿಪ್ಪ, ಅಪೊಸ್ತಲ ಯಾಕೋಬನನ್ನ ಸಾಯಿಸಿಬಿಟ್ಟ ಮತ್ತು ಅಪೊಸ್ತಲ ಪೇತ್ರನನ್ನ ಜೈಲಿಗೆ ಹಾಕಿಬಿಟ್ಟ. ಅವನನ್ನೂ ಸಾಯಿಸಬೇಕು ಅಂತ ಅಂದುಕೊಂಡಿದ್ದ. ಆದ್ರೆ ಯೆಹೋವ ಹಾಗೆ ಆಗೋಕೆ ಬಿಡಲಿಲ್ಲ. ‘ಯೆಹೋವನ ದೂತ ಆ ರಾಜನಿಗೆ ಕಾಯಿಲೆ ಬಂದು ಹುಳು ಬಿದ್ದು ಸಾಯೋ ಹಾಗೆ ಮಾಡಿದ.’—ಅ. ಕಾ. 12:1-5, 21-23.
13. ಎಷ್ಟೋ ರಾಜರು ಇಸ್ರಾಯೇಲ್ಯರ ವಿರುದ್ಧ ಒಟ್ಟಿಗೆ ಬಂದಾಗ ಯೆಹೋವ ಏನು ಮಾಡಿದನು? ಉದಾಹರಣೆ ಕೊಡಿ.
13 ಎಷ್ಟೋ ರಾಜರು ತನ್ನ ಜನರ ವಿರುದ್ಧ ಒಟ್ಟಿಗೆ ಬಂದಾಗ ಯೆಹೋವ, ಆ ರಾಜರಿಗಿಂತ ತನಗೆ ಜಾಸ್ತಿ ಶಕ್ತಿ ಇದೆ ಅಂತ ತೋರಿಸಿಕೊಟ್ಟನು. ಇಸ್ರಾಯೇಲ್ಯರ ವಿರುದ್ಧ 31 ಕಾನಾನ್ಯ ರಾಜರು ಬಂದಾಗ ಯೆಹೋವ ದೇವರು ತನ್ನ ಜನರ ಪರವಾಗಿ ಹೋರಾಡಿ ಆ ರಾಜರನ್ನ ಸೋಲಿಸಿಬಿಟ್ಟನು. ಇದ್ರಿಂದ ಇಸ್ರಾಯೇಲ್ಯರು ಕಾನಾನ್ ದೇಶದ ಹೆಚ್ಚಿನ ಭಾಗಗಳನ್ನ ವಶಮಾಡಿಕೊಳ್ಳೋಕೆ ಆಯ್ತು. (ಯೆಹೋ. 11: 4-6, 20; 12:1, 7, 24) ಅಷ್ಟೇ ಅಲ್ಲ, ರಾಜ ಬೆನ್ಹದದ್ ಮತ್ತು 32 ಅರಾಮ್ಯದ ರಾಜರು ಇಸ್ರಾಯೇಲ್ಯರ ವಿರುದ್ಧ ಬಂದಾಗ ಯೆಹೋವ ಅವರನ್ನೂ ಸೋಲಿಸಿಬಿಟ್ಟನು.—1 ಅರ. 20:1, 26-29.
14-15. (ಎ) ಯೆಹೋವನ ಪರಮಾಧಿಕಾರದ ಬಗ್ಗೆ ರಾಜ ನೆಬೂಕದ್ನೆಚ್ಚರ ಏನು ಹೇಳಿದ? (ಬಿ) ರಾಜ ದಾರ್ಯಾವೆಷ ಏನು ಹೇಳಿದ? (ಸಿ) ಯೆಹೋವ ಮತ್ತು ಆತನ ಜನರ ಬಗ್ಗೆ ಕೀರ್ತನೆಗಾರ ಏನು ಹೇಳಿದ?
14 ಯೆಹೋವ ದೇವರು ತನಗೆ ಎಲ್ಲದರ ಮೇಲೆ ಅಧಿಕಾರ ಇದೆ ಅಂತ ಇನ್ನೂ ಎಷ್ಟೋ ಸಲ ಸಾಬೀತು ಮಾಡಿದ್ದಾನೆ. ಉದಾಹರಣೆಗೆ, ಬಾಬೆಲಿನ ರಾಜ ನೆಬೂಕದ್ನೆಚ್ಚರ ಆ ಪಟ್ಟಣನ ತಾನೇ ಕಟ್ಟಿದ್ದು ಅಂತ ಹೇಳಿ ತನ್ನ ‘ವೈಭವ ಘನತೆಯನ್ನ’ ಎಲ್ಲರ ಮುಂದೆ ಕೊಚ್ಚಿಕೊಳ್ತಿದ್ದ. ಎಲ್ಲರಿಗಿಂತ ಯೆಹೋವನಿಗೇ ಜಾಸ್ತಿ ಶಕ್ತಿ ಇರೋದು ಅನ್ನೋದನ್ನ ಅವನು ಒಪ್ಪಿಕೊಳ್ತಿರಲಿಲ್ಲ. ಅದಕ್ಕೆ ಯೆಹೋವ ಅವನನ್ನ ಹುಚ್ಚ ಆಗೋ ತರ ಮಾಡಿಬಿಟ್ಟನು. ಆದ್ರೆ ಅವನಿಗೆ ಮತ್ತೆ ಬುದ್ಧಿ ಬಂದಮೇಲೆ ಅವನು “ಸರ್ವೋನ್ನತನನ್ನ” ಹೊಗಳಿದ. ಅಷ್ಟೇ ಅಲ್ಲ “[ಯೆಹೋವನ] ಆಡಳಿತ ಶಾಶ್ವತ” ಅಂತ ಒಪ್ಕೊಂಡ ಮತ್ತು “ಆತನನ್ನ ತಡಿಯುವವನು . . . ಯಾರೂ ಇಲ್ಲ” ಅಂತ ಹೇಳಿದ. (ದಾನಿ. 4:30, 33-35) ಇನ್ನೊಂದು ಉದಾಹರಣೆ ನೋಡಿ. ದಾನಿಯೇಲ ಯೆಹೋವ ದೇವರಿಗೆ ನಿಯತ್ತಾಗಿ ಇದ್ದಿದ್ರಿಂದ ಅವನನ್ನ ಯೆಹೋವ, ಸಿಂಹಗಳ ಬಾಯಿಂದ ಬಿಡಿಸಿದನು. ಇದನ್ನ ನೋಡಿದ ರಾಜ ದಾರ್ಯಾವೆಷ “ನನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಜನ್ರು ದಾನಿಯೇಲನ ದೇವರ ಮುಂದೆ ಭಯದಿಂದ ನಡುಗಬೇಕಂತ ನಾನು ಅಪ್ಪಣೆ ಕೊಡ್ತಾ ಇದ್ದೀನಿ. ಯಾಕಂದ್ರೆ ಆತನು ಜೀವ ಇರೋ ದೇವರು, ಸದಾಕಾಲ ಇರೋ ದೇವರು. ಆತನ ಸಾಮ್ರಾಜ್ಯ ಯಾವತ್ತೂ ನಾಶ ಆಗಲ್ಲ. ಆತನ ಪರಮಾಧಿಕಾರ ಶಾಶ್ವತವಾಗಿ ಇರುತ್ತೆ” ಅಂತ ಹೇಳಿದ.—ದಾನಿ. 6:7-10, 19-22, 26, 27, ಪಾದಟಿಪ್ಪಣಿ.
15 ಕೀರ್ತನೆಗಾರ ಯೆಹೋವನ ಶತ್ರುಗಳ ಬಗ್ಗೆ ಹೇಳ್ತಾ “ಯೆಹೋವ ಜನ್ರ ಯೋಜನೆಗಳನ್ನ ಮಣ್ಣುಪಾಲು ಮಾಡಿದ, ಆತನು ಅವ್ರ ಉಪಾಯಗಳನ್ನ ಕೆಡಿಸಿದ” ಅಂದ. ಆದ್ರೆ “ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ, ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು” ಅಂತನೂ ಹೇಳಿದ. (ಕೀರ್ತ. 33:10, 12) ಯೆಹೋವ ದೇವರ ಜನರಾಗಿ ಇರೋಕೆ ಇದಕ್ಕಿಂತ ದೊಡ್ಡ ಕಾರಣ ಬೇಕಾ ಹೇಳಿ!
ಕೊನೆಯ ಕದನ
16. ‘ಮಹಾ ಸಂಕಟದ’ ಸಮಯದಲ್ಲಿ ಯೆಹೋವ ಏನು ಮಾಡ್ತಾನೆ ಮತ್ತು ಯಾಕೆ? (ಚಿತ್ರ ನೋಡಿ.)
16 ಇಷ್ಟರ ತನಕ ಯೆಹೋವ ತನ್ನ ಜನರಿಗಾಗಿ ಏನೆಲ್ಲ ಮಾಡಿದನು ಅಂತ ನೋಡಿದ್ವಿ. ಮುಂದೆ ಏನು ಮಾಡ್ತಾನೆ? ‘ಮಹಾ ಸಂಕಟದ’ ಸಮಯದಲ್ಲಿ ಯೆಹೋವ ದೇವರು ತನ್ನ ಜನರನ್ನ ಖಂಡಿತ ಕಾಪಾಡ್ತಾನೆ. (ಮತ್ತಾ. 24:21; ದಾನಿ. 12:1) ಮಾಗೋಗಿನ ಗೋಗ ಅಂದ್ರೆ ಜನಾಂಗಗಳ ಗುಂಪು ಯೆಹೋವನ ಜನರ ಮೇಲೆ ಆಕ್ರಮಣ ಮಾಡುವಾಗ ಆತನು ತನ್ನ ಜನರನ್ನ ರಕ್ಷಿಸ್ತಾನೆ. ಆ ಗುಂಪಲ್ಲಿ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಒಟ್ಟಾಗಿ ಸೇರಿದ್ರೂ ಅವರು ಯೆಹೋವ ಮತ್ತು ಆತನ ಸ್ವರ್ಗೀಯ ಸೈನ್ಯವನ್ನ ಸೋಲಿಸೋಕೆ ಆಗಲ್ಲ! ಮಹೋನ್ನತ ದೇವರಾಗಿರೋ ಯೆಹೋವನ ಮುಂದೆ ಯಾರು ನಿಲ್ಲೋಕೆ ಆಗುತ್ತೆ ಹೇಳಿ. ಅಷ್ಟೇ ಅಲ್ಲ “ನಾನು ನಿಜವಾಗ್ಲೂ ತುಂಬ ಜನಾಂಗಗಳ ಕಣ್ಮುಂದೆ ನನ್ನನ್ನೇ ಮಹಿಮೆ ಪಡಿಸ್ಕೊಳ್ತೀನಿ, ನಾನು ಪವಿತ್ರ ಅಂತ ತೋರಿಸ್ತೀನಿ, ನಾನು ಯಾರಂತ ಅರ್ಥ ಮಾಡಿಸ್ತೀನಿ. ಆಗ, ನಾನೇ ಯೆಹೋವ ಅಂತ ಅವುಗಳಿಗೆ ಗೊತ್ತಾಗುತ್ತೆ” ಅಂತ ಯೆಹೋವ ಹೇಳಿದ್ದಾನೆ.—ಯೆಹೆ. 38:14-16, 23; ಕೀರ್ತ. 46:10.
17. (ಎ) ಭೂಮೀಲಿರೋ ರಾಜರಿಗೆ ಏನಾಗುತ್ತೆ ಅಂತ ಬೈಬಲ್ ಹೇಳುತ್ತೆ? (ಬಿ) ಯೆಹೋವನಿಗೆ ನಿಯತ್ತಾಗಿ ಇರೋರಿಗೆ ಏನಾಗುತ್ತೆ ಅಂತ ಹೇಳುತ್ತೆ?
17 ದೇವಜನರ ಮೇಲೆ ಗೋಗ ಆಕ್ರಮಣ ಮಾಡಿದಾಗ ಹರ್ಮಗೆದೋನ್ ಅನ್ನೋ ಕೊನೇ ಕದನವನ್ನ ಯೆಹೋವ ಶುರು ಮಾಡ್ತಾನೆ. ಆಗ ‘ಭೂಮೀಲಿರೋ ಎಲ್ಲ ರಾಜರು’ ನಾಶ ಆಗ್ತಾರೆ. (ಪ್ರಕ. 16:14, 16; 19:19-21) ‘ಒಳ್ಳೆಯವರು ಮಾತ್ರ ಭೂಮಿಯಲ್ಲಿ ಇರ್ತಾರೆ, ತಪ್ಪು ಮಾಡದವರು ಅಥವಾ ನಿಯತ್ತಿಂದ ಇರೋರು ಉಳಿತಾರೆ.’—ಜ್ಞಾನೋ. 2:21.
ನಾವು ಯೆಹೋವನಿಗೆ ಯಾವಾಗಲೂ ನಿಯತ್ತಾಗಿ ಇರಬೇಕು
18. ನಿಜ ಕ್ರೈಸ್ತರು ಏನು ಮಾಡೋಕೂ ರೆಡಿ ಇರ್ತಾರೆ ಮತ್ತು ಯಾಕೆ? (ದಾನಿಯೇಲ 3:28)
18 ಇತಿಹಾಸ ಪೂರ್ತಿ ನೋಡಿದ್ರೆ ಎಷ್ಟೋ ನಿಜ ಕ್ರೈಸ್ತರು ವಿಶ್ವದ ರಾಜ ಯೆಹೋವನಿಗೆ ನಿಯತ್ತಾಗಿರೋಕೆ ಜೈಲಿಗೆ ಹೋಗಿದ್ದಾರೆ, ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಇವರು, ಏನೇ ಆದ್ರೂ ಯೆಹೋವನಿಗೆ ನಿಯತ್ತಾಗಿ ಇರಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದ ಇಬ್ರಿಯ ಯುವಕರ ತರ ಇದ್ದಾರೆ. ಈ ಯುವಕರು ನಂಬಿಗಸ್ತರಾಗಿ ಇದ್ದಿದ್ದರಿಂದ ಸರ್ವೋನ್ನತ ದೇವರಾದ ಯೆಹೋವ ಅವರನ್ನ ಬೆಂಕಿಯ ಕುಲುಮೆಯಿಂದ ಕಾಪಾಡಿದನು.—ದಾನಿಯೇಲ 3:28 ಓದಿ.
19. (ಎ) ಯಾವ ಆಧಾರದ ಮೇಲೆ ಯೆಹೋವ ತನ್ನ ಜನರಿಗೆ ತೀರ್ಪು ಕೊಡ್ತಾನೆ? (ಬಿ) ಹಾಗಾಗಿ ನಾವು ಏನು ಮಾಡಬೇಕು?
19 ದೇವರಿಗೆ ಯಾವಾಗಲೂ ನಿಯತ್ತಿಂದ ಇರೋದು ಎಷ್ಟು ಮುಖ್ಯ ಅಂತ ತಿಳುಕೊಂಡಿದ್ದ ದಾವೀದ “ಯೆಹೋವ ಜನಾಂಗಗಳಿಗೆ ತೀರ್ಪು ಕೊಡ್ತಾನೆ. ಯೆಹೋವನೇ, ನನ್ನ ನೀತಿಗೆ ತಕ್ಕ ಹಾಗೆ, ನನ್ನ ನಿಯತ್ತಿಗೆ ತಕ್ಕ ಹಾಗೆ ನನಗೆ ನ್ಯಾಯ ತೀರಿಸು” ಅಂತ ಹೇಳಿದ. (ಕೀರ್ತ. 7:8) ಅಷ್ಟೇ ಅಲ್ಲ, “ನನ್ನ ನಿಯತ್ತು, ನನ್ನ ಪ್ರಾಮಾಣಿಕತೆ ನನ್ನನ್ನ ಕಾಪಾಡಲಿ” ಅಂತನೂ ಹೇಳಿದ. (ಕೀರ್ತ. 25:21) ನಾವು ಯೆಹೋವನಿಗೆ ನಿಯತ್ತಾಗಿದ್ರೆ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತೆ. ಹಾಗಾಗಿ ನಮ್ಮ ಜೀವನದಲ್ಲಿ ಏನೇ ಆಗಲಿ, ಏನೇ ಬರಲಿ ನಿಷ್ಠೆನ ಯಾವತ್ತೂ ಬಿಟ್ಟುಕೊಡೋದು ಬೇಡ. ಆ ರೀತಿ ನಡಕೊಂಡಾಗ, “ತಮ್ಮ ಜೀವನದಲ್ಲಿ ನಿಯತ್ತಿಂದ ನಡೆಯೋರು, ಯೆಹೋವನ ನಿಯಮ ಪುಸ್ತಕದ ಪ್ರಕಾರ ನಡೆಯೋರು ಭಾಗ್ಯವಂತರು” ಅಥವಾ ಸಂತೋಷವಾಗಿ ಇರ್ತಾರೆ ಅಂತ ಕೀರ್ತನೆಗಾರ ಹೇಳಿದ ತರನೇ ನಾವೂ ಹೇಳ್ತೀವಿ.—ಕೀರ್ತ. 119:1, ಪಾದಟಿಪ್ಪಣಿ.
ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
a ಅಧಿಕಾರಿಗಳ ಮಾತು ಕೇಳಬೇಕಂತ ಬೈಬಲ್ ನಮಗೆ ಹೇಳುತ್ತೆ. ಅಂದ್ರೆ ನಾವು ಸರ್ಕಾರಿ ಅಧಿಕಾರಿಗಳಿಗೆ ವಿಧೇಯತೆ ತೋರಿಸಬೇಕು. ಆದ್ರೆ ಕೆಲವು ದೇಶಗಳಲ್ಲಿ ಸರ್ಕಾರ, ಯೆಹೋವನನ್ನು ಮತ್ತು ಆತನನ್ನ ಆರಾಧಿಸುವವರನ್ನು ದ್ವೇಷಿಸುತ್ತೆ. ಹೀಗಾದಾಗ ಸರ್ಕಾರಿ ಅಧಿಕಾರಿಗಳ ಮಾತುಗಳನ್ನ ಕೇಳ್ತಾ ಯೆಹೋವನಿಗೂ ನಿಯತ್ತಾಗಿ ಇರೋದು ಹೇಗೆ?
b ಪದವಿವರಣೆ: ಯೆಹೋವನಿಗೆ ನಿಯತ್ತಾಗಿ ಇರೋದು ಅಂದ್ರೆ ಅದರ ಅರ್ಥ ಎಷ್ಟೇ ಕಷ್ಟ ಬಂದ್ರೂ ಯೆಹೋವನನ್ನು ಬಿಟ್ಟುಕೊಡದೇ ಇರೋದು ಮತ್ತು ಇಡೀ ವಿಶ್ವವನ್ನ ಆಳುವ ಹಕ್ಕು ಆತನೊಬ್ಬನಿಗೇ ಇದೆ ಅಂತ ತೋರಿಸಿಕೊಡೋದು.
c ಈ ಸಂಚಿಕೆಯಲ್ಲಿರೋ “ಆಗಿನ ಕಾಲದ ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು ಅಂದಮೇಲೆ ನಾವು ಯಾಕೆ ಮಾಡಬಾರದು?” ಅನ್ನೋ ಲೇಖನ ನೋಡಿ.