ಅಧ್ಯಾಯ ಹತ್ತು
ಪ್ರಭುಗಳ ಪ್ರಭುವನ್ನು ಯಾರು ಎದುರಿಸಿ ನಿಲ್ಲಬಲ್ಲರು?
1, 2. ಅರಸನಾದ ಬೇಲ್ಶಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿ ದಾನಿಯೇಲನು ಕಂಡ ದರ್ಶನವು, ನಮಗೆ ಏಕೆ ಮಹತ್ವದ್ದಾಗಿದೆ?
ಯೆರೂಸಲೇಮಿನಲ್ಲಿದ್ದ ಯೆಹೋವನ ದೇವಾಲಯವು ನಾಶವಾಗಿ 57 ವರ್ಷಗಳು ಗತಿಸಿವೆ. ಬೇಲ್ಶಚ್ಚರನೂ ಅವನ ತಂದೆಯಾದ ನೆಬೊನೈಡಸನೂ ಒಟ್ಟಿಗೆ ಸೇರಿ, ಬೈಬಲ್ ಪ್ರವಾದನೆಯ ಮೂರನೆಯ ಲೋಕ ಶಕ್ತಿಯಾದ ಬಾಬೆಲ್ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ.a ದೇವರ ಪ್ರವಾದಿಯಾದ ದಾನಿಯೇಲನು ಬಾಬೆಲಿನಲ್ಲಿ ದೇಶಭ್ರಷ್ಟನಾಗಿದ್ದಾನೆ. ಮತ್ತು “ಅರಸನಾದ ಬೇಲ್ಶಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿ,” ಯೆಹೋವನು ದಾನಿಯೇಲನಿಗೆ ಒಂದು ದರ್ಶನವನ್ನು ಕೊಡುತ್ತಾನೆ. ಸತ್ಯಾರಾಧನೆಯ ಕುರಿತಾದ ಕೆಲವೊಂದು ವಿವರಗಳನ್ನು ಅದರಲ್ಲಿ ಪ್ರಕಟಪಡಿಸುತ್ತಾನೆ.—ದಾನಿಯೇಲ 8:1.
2 ದಾನಿಯೇಲನು ಕಂಡ ಪ್ರವಾದನಾತ್ಮಕ ದರ್ಶನವು, ಅವನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು, ಮತ್ತು “ಅಂತ್ಯಕಾಲದಲ್ಲಿ” ಜೀವಿಸುತ್ತಿರುವ ನಮಗೆ ಅದು ಅತ್ಯಧಿಕ ಆಸಕ್ತಿಯ ಸಂಗತಿಯಾಗಿದೆ. ಗಬ್ರಿಯೇಲ ದೇವದೂತನು ದಾನಿಯೇಲನಿಗೆ ಹೀಗೆ ಹೇಳುತ್ತಾನೆ: “ಇಗೋ, ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುವೆನು; ಅದು ಕ್ಲುಪ್ತವಾದ ಅಂತ್ಯಕಾಲದ್ದೇ.” (ದಾನಿಯೇಲ 8:16, 17, 19, 27) ಹೀಗಿರುವುದರಿಂದ, ದಾನಿಯೇಲನು ಕಂಡ ದರ್ಶನವನ್ನು ಹಾಗೂ ಇಂದು ನಮಗೆ ಅದು ಯಾವ ಅರ್ಥದಲ್ಲಿದೆ ಎಂಬ ವಿಚಾರವನ್ನು ನಾವು ಅತ್ಯಾಸಕ್ತಿಯಿಂದ ಪರಿಗಣಿಸೋಣ.
ಎರಡು ಕೊಂಬಿನ ಒಂದು ಟಗರು
3, 4. ಕಾಲುವೆಯ ಹತ್ತಿರ ಯಾವ ಪ್ರಾಣಿಯು ನಿಂತಿರುವುದನ್ನು ದಾನಿಯೇಲನು ನೋಡಿದನು, ಮತ್ತು ಇದು ಏನನ್ನು ಸಂಕೇತಿಸುತ್ತದೆ?
3 “ನಾನು ಕಂಡ ಕನಸಿನಲ್ಲಿ [“ದರ್ಶನದಲ್ಲಿ,” NW] ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿದ್ದೆನು; ಕನಸಿನಲ್ಲಿ [“ದರ್ಶನದಲ್ಲಿ,” NW] ಊಲಾ ಕಾಲುವೆಯ ದಡದ ಮೇಲೆ ನಿಂತುಕೊಂಡಿದ್ದ ಹಾಗೆ ತೋರಿತು” ಎಂದು ದಾನಿಯೇಲನು ಬರೆಯುತ್ತಾನೆ. (ದಾನಿಯೇಲ 8:2) ಏಲಾಮ್ನ ರಾಜಧಾನಿಯಾಗಿದ್ದ ಶೂಷನ್ (ಸೂಸ), ಬಾಬೆಲಿನಿಂದ ಪೂರ್ವಕ್ಕೆ ಸುಮಾರು 350 ಕಿಲೊಮೀಟರುಗಳಷ್ಟು ದೂರದಲ್ಲಿ ನೆಲೆಸಿತ್ತು. ದಾನಿಯೇಲನು ನಿಜವಾಗಿಯೂ ಶೂಷನ್ ಕೋಟೆಯಲ್ಲಿದ್ದನೋ ಅಥವಾ ದಾರ್ಶನಿಕ ರೀತಿಯಲ್ಲಿ ಅವನು ಅಲ್ಲಿದ್ದನೋ ಎಂಬುದು ಸ್ಪಷ್ಟವಾಗಿ ತಿಳಿಸಲ್ಪಟ್ಟಿಲ್ಲ.
4 ದಾನಿಯೇಲನು ಮುಂದುವರಿಸಿದ್ದು: “ನಾನು ಕಣ್ಣೆತ್ತಿನೋಡಲು ಇಗೋ, ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿತ್ತು.” (ದಾನಿಯೇಲ 8:3ಎ) ಟಗರಿನ ಗುರುತು ದಾನಿಯೇಲನಿಗೆ ಒಂದು ರಹಸ್ಯವಾಗಿ ಉಳಿಯಲಿಲ್ಲ. ಆ ಬಳಿಕ ಗಬ್ರಿಯೇಲ ದೇವದೂತನು ಹೇಳಿದ್ದು: “ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ.” (ದಾನಿಯೇಲ 8:20) ಮೇದ್ಯರು, ಅಶ್ಶೂರ್ಯದ ಪೂರ್ವ ದಿಕ್ಕಿನಲ್ಲಿರುವ ಪರ್ವತಮಯ ಪ್ರಸ್ಥಭೂಮಿಯಿಂದ ಬಂದವರಾಗಿದ್ದರು, ಮತ್ತು ಪಾರಸಿಯರು, ಮೂಲತಃ ಪರ್ಷಿಯನ್ ಕೊಲ್ಲಿಯ ಉತ್ತರ ದಿಕ್ಕಿನಲ್ಲಿರುವ ಪ್ರಾಂತದಲ್ಲಿ ಹೆಚ್ಚಾಗಿ ಅಲೆಮಾರಿಗಳಾಗಿ ಜೀವಿಸುತ್ತಿದ್ದರು. ಮೇದ್ಯಯಪಾರಸಿಯ ಸಾಮ್ರಾಜ್ಯವು ಬೆಳೆದಂತೆ, ಅದರ ನಿವಾಸಿಗಳು ಸಹ ಸುಖಭೋಗಕ್ಕಾಗಿ ವಿಶೇಷ ಅಭಿರುಚಿಯನ್ನು ಬೆಳೆಸಿಕೊಂಡರು.
5. ತದನಂತರ “ಮೊಳೆತ” ಒಂದು ಕೊಂಬು, ಹೇಗೆ ಹೆಚ್ಚು ಉದ್ದವಾಗಿ ಬೆಳೆಯಿತು?
5 “ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದು, ಆ ದೊಡ್ಡದು ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು” ಎಂದು ದಾನಿಯೇಲನು ವರದಿಸುತ್ತಾನೆ. (ದಾನಿಯೇಲ 8:3ಬಿ) ತದನಂತರ ಮೊಳೆತ ದೊಡ್ಡ ಕೊಂಬು ಪಾರಸಿಯರನ್ನು ಚಿತ್ರಿಸುತ್ತದೆ, ಮತ್ತು ಇನ್ನೊಂದು ಕೊಂಬು ಮೇದ್ಯರನ್ನು ಪ್ರತಿನಿಧಿಸುತ್ತದೆ. ಆರಂಭದಲ್ಲಿ, ಮೇದ್ಯರ ಆಳ್ವಿಕೆಯೇ ಪ್ರಬಲವಾಗಿತ್ತು. ಆದರೆ, ಸಾ.ಶ.ಪೂ. 550ರಲ್ಲಿ, ಮೇದ್ಯ ಅರಸನಾಗಿದ್ದ ಅಸ್ಟೈಅಜಿಸ್ನ ವಿರುದ್ಧ ದಂಡೆತ್ತಿಹೋದ ಪಾರಸಿಯ ಅರಸನಾದ ಕೋರೆಷನು ಸುಲಭವಾಗಿ ಜಯಗಳಿಸಿದನು. ಕೋರೆಷನು ಈ ಎರಡು ಜನಾಂಗಗಳ ಪದ್ಧತಿಗಳು ಹಾಗೂ ನಿಯಮಗಳನ್ನು ಒಂದುಗೂಡಿಸಿ, ಅವರ ರಾಜ್ಯಗಳನ್ನು ಐಕ್ಯಗೊಳಿಸಿ, ಬೇರೆ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅಂದಿನಿಂದ, ಈ ಸಾಮ್ರಾಜ್ಯವು ಉಭಯ ಲೋಕ ಶಕ್ತಿಯಾಗಿ ಪರಿಣಮಿಸಿತು.
ಟಗರು ತನ್ನನ್ನು ಹೆಚ್ಚಿಸಿಕೊಳ್ಳುತ್ತದೆ
6, 7. “ಯಾವ ಕಾಡುಮೃಗಗಳೂ” ಆ ಟಗರನ್ನು ಎದುರಿಸಿ ನಿಲ್ಲಲಾರದೆ ಹೋದದ್ದು ಹೇಗೆ?
6 ಟಗರಿನ ಕುರಿತಾದ ತನ್ನ ವರ್ಣನೆಯನ್ನು ಮುಂದುವರಿಸುತ್ತಾ ದಾನಿಯೇಲನು ಹೇಳುವುದು: “ನಾನು ನೋಡುತ್ತಿದ್ದ ಹಾಗೆ ಆ ಟಗರು ಪಡುವಲಿಗೂ ಬಡಗಲಿಗೂ ತೆಂಕಲಿಗೂ ಹಾದಾಡುತ್ತಿತ್ತು [“ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಮುನ್ನುಗ್ಗುತ್ತಿತ್ತು,” NW]; ಯಾವ ಜಂತುವೂ [“ಕಾಡುಮೃಗಗಳೂ,” NW] ಅದರೆದುರಿಗೆ ನಿಲ್ಲಲಾರದೆ ಹೋಯಿತು; ಅದರ ಕೈಯಿಂದ ಬಿಡಿಸಲು ಯಾವ ಪ್ರಾಣಿಗೂ ಶಕ್ತಿಯಿರಲಿಲ್ಲ; ಅದು ಮನಸ್ಸು ಬಂದಂತೆ ನಡೆದು ತನ್ನನ್ನು ಹೆಚ್ಚಿಸಿಕೊಂಡಿತು.”—ದಾನಿಯೇಲ 8:4.
7 ದಾನಿಯೇಲನಿಗೆ ಕೊಡಲ್ಪಟ್ಟಿದ್ದ ಮುಂಚಿನ ದರ್ಶನದಲ್ಲಿ, ಸಮುದ್ರದಿಂದ ಮೇಲೆ ಬಂದ ದೊಡ್ಡ ಮೃಗವು ಬಾಬೆಲನ್ನು ಚಿತ್ರಿಸಿತು. ಹದ್ದಿನಂತೆ ರೆಕ್ಕೆಗಳಿದ್ದ ಸಿಂಹವೇ ಆ ಮೃಗವಾಗಿತ್ತು. (ದಾನಿಯೇಲ 7:4, 17) ಆ ಸಾಂಕೇತಿಕ ಮೃಗವು, ಈ ಹೊಸ ದರ್ಶನದ “ಟಗರ”ನ್ನು ಎದುರಿಸಿ ನಿಲ್ಲಲು ಅಸಮರ್ಥವಾದದ್ದಾಗಿ ಪರಿಣಮಿಸಿತು. ಸಾ.ಶ.ಪೂ. 539ರಲ್ಲಿ, ಬಾಬೆಲು ಮಹಾ ಕೋರೆಷನ ಕೈವಶವಾಯಿತು. ತದನಂತರ, ಸುಮಾರು 50 ವರ್ಷಗಳ ವರೆಗೆ, ಯಾವ “ಕಾಡುಮೃಗಗಳೂ” ಅಥವಾ ರಾಜಕೀಯ ಸರಕಾರಗಳೂ ಬೈಬಲ್ ಇತಿಹಾಸದ ನಾಲ್ಕನೆಯ ಲೋಕ ಶಕ್ತಿಯಾಗಿದ್ದ ಮೇದ್ಯಯಪಾರಸಿಯ ಸಾಮ್ರಾಜ್ಯವನ್ನು ಎದುರಿಸಿ ನಿಲ್ಲಲು ಸಮರ್ಥವಾಗಿರಲಿಲ್ಲ.
8, 9. (ಎ) ಆ ಟಗರು “ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ” ಹೇಗೆ ಮುನ್ನುಗ್ಗುತ್ತಾ ಇತ್ತು? (ಬಿ) ಪಾರಸಿಯ ಅರಸನಾದ ಒಂದನೆಯ ದಾರ್ಯಾವೆಷನಿಗೆ ಬದಲಾಗಿ ಅರಸನಾಗಿ ಪಟ್ಟಕ್ಕೆ ಬಂದವನ ಕುರಿತು ಎಸ್ತೇರಳ ಪುಸ್ತಕವು ಏನು ಹೇಳುತ್ತದೆ?
8 ‘ಮೂಡಲಿಂದ’ ಅಂದರೆ ಪೂರ್ವದಿಂದ ಬಂದ ಮೇದ್ಯಯಪಾರಸಿಯ ಲೋಕ ಶಕ್ತಿಯು, “ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಮುನ್ನುಗ್ಗುತ್ತಾ” ತನಗೆ ಇಷ್ಟಬಂದಂತೆ ಕಾರ್ಯನಡಿಸಿತು. (ಯೆಶಾಯ 46:11) ಮಹಾ ಕೋರೆಷನಿಗೆ ಬದಲಾಗಿ ಅರಸನಾದ IIನೆಯ ಕ್ಯಾಂಬಿಸಿಸ್, ಐಗುಪ್ತವನ್ನು ಸ್ವಾಧೀನಪಡಿಸಿಕೊಂಡನು. ಅವನ ತರುವಾಯ ಪಾರಸಿಯನಾದ Iನೆಯ ದಾರ್ಯಾವೆಷನು ಪಟ್ಟಕ್ಕೆ ಬಂದನು. ಸಾ.ಶ.ಪೂ. 513ರಲ್ಲಿ, ಅವನು ಬಾಸ್ಪರಸ್ ಜಲಸಂಧಿಯ ಆಚೆಕಡೆಯಿಂದ ಪಶ್ಚಿಮಾಭಿಮುಖವಾಗಿ ಹೋಗಿ, ಯಾವುದರ ರಾಜಧಾನಿಯು ಬಸ್ಯಾಂಟಿಯಮ್ (ಈಗ ಇಸ್ಟನ್ಬೂಲ್) ಆಗಿತ್ತೋ ಆ ಯೂರೋಪಿಯನ್ ಕ್ಷೇತ್ರವಾಗಿದ್ದ ಥ್ರೇಸಿಗೆ ಮುತ್ತಿಗೆ ಹಾಕಿದನು. ಸಾ.ಶ.ಪೂ. 508ರಲ್ಲಿ ಅವನು ಥ್ರೇಸನ್ನು ಸೋಲಿಸಿದನು, ಮತ್ತು ಸಾ.ಶ.ಪೂ. 496ರಲ್ಲಿ ಮ್ಯಾಸಿಡೋನಿಯವನ್ನು ಗೆದ್ದುಕೊಂಡನು. ಹೀಗೆ, ದಾರ್ಯಾವೆಷನ ಕಾಲದಷ್ಟಕ್ಕೆ, ಮೂರು ಪ್ರಮುಖ ದಿಕ್ಕುಗಳಲ್ಲಿದ್ದ ಕ್ಷೇತ್ರಗಳನ್ನು ಮೇದ್ಯಯಪಾರಸಿಯ “ಟಗರು” ಸ್ವಾಧೀನಪಡಿಸಿಕೊಂಡಿತ್ತು: ಉತ್ತರದಲ್ಲಿ ಬಾಬೆಲ್ ಮತ್ತು ಅಶ್ಶೂರ್ಯ, ಪಶ್ಚಿಮದಲ್ಲಿ ಏಷ್ಯಾ ಮೈನರ್, ಮತ್ತು ದಕ್ಷಿಣದಲ್ಲಿ ಐಗುಪ್ತ.
9 ಮೇದ್ಯಯಪಾರಸಿಯ ಸಾಮ್ರಾಜ್ಯದ ಹಿರಿಮೆಗೆ ಪ್ರಮಾಣ ನೀಡುತ್ತಾ, ದಾರ್ಯಾವೆಷನಿಗೆ ಬದಲಾಗಿ ಅರಸನಾದ Iನೆಯ ಸರ್ಕ್ಸೀಸ್ನ ಕುರಿತು ಬೈಬಲು ಹೇಳುವುದೇನೆಂದರೆ, ಅಹಷ್ವೇರೋಷನು “ಹಿಂದುಸ್ಥಾನ ಮೊದಲುಗೊಂಡು ಕೂಷಿನ ವರೆಗೂ ಇರುವ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಆಳುತ್ತಿದ್ದ”ನು. (ಎಸ್ತೇರಳು 1:1) ಆದರೆ ಈ ಮಹಾನ್ ಸಾಮ್ರಾಜ್ಯವು ಇನ್ನೊಂದು ಸಾಮ್ರಾಜ್ಯದ ವಶವಾಗಲಿತ್ತು. ಮತ್ತು ಈ ವಿಷಯದಲ್ಲಿ, ದೇವರ ಪ್ರವಾದನಾತ್ಮಕ ವಾಕ್ಯದಲ್ಲಿನ ನಮ್ಮ ನಂಬಿಕೆಯನ್ನು ಬಲಗೊಳಿಸತಕ್ಕ ಕೆಲವು ಆಸಕ್ತಿದಾಯಕ ವಿವರಗಳನ್ನು ದಾನಿಯೇಲನ ದರ್ಶನವು ಪ್ರಕಟಪಡಿಸುತ್ತದೆ.
ಹೋತವು ಟಗರನ್ನು ಹೊಡೆದು ಕೆಡವುತ್ತದೆ
10. ದಾನಿಯೇಲನ ದರ್ಶನದಲ್ಲಿ, ಯಾವ ಪ್ರಾಣಿಯು “ಟಗರ”ನ್ನು ಉರುಳಿಸಿಬಿಟ್ಟಿತು?
10 ಈಗ ದಾನಿಯೇಲನು ಏನನ್ನು ನೋಡುತ್ತಾನೋ ಅದರಿಂದ ಅವನಿಗಾದ ಅಚ್ಚರಿಯನ್ನು ಊಹಿಸಿಕೊಳ್ಳಿರಿ. ವೃತ್ತಾಂತವು ಹೀಗೆ ಹೇಳುತ್ತದೆ: “ನಾನು ಗಮನಿಸುತ್ತಿರುವಾಗ ಇಗೋ, ಒಂದು ಹೋತವು ಪಡುವಲಿಂದ [“ಸೂರ್ಯಾಸ್ತಮಾನವಾಗುವ ದಿಕ್ಕಿನಿಂದ,” NW] ಭೂಮಂಡಲವನ್ನೆಲ್ಲಾ ದಾಟಿಕೊಂಡು ನೆಲವನ್ನು ಸೋಕದೆ ಓಡಿಬಂತು; ಅದರ ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿತ್ತು. ನಾನು ಕಾಲುವೆಯ ಹತ್ತಿರ ಕಂಡ ಎರಡು ಕೊಂಬಿನ ಟಗರಿನ ಬಳಿಗೆ ಆ ಹೋತವು ಬಂದು ಪರಾಕ್ರಮದಿಂದ ಉಬ್ಬಿ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು. ಅದು ನನ್ನ ಕನಸಿನಲ್ಲಿ ಟಗರನ್ನು ಸಮೀಪಿಸಿ ಅದರ ಮೇಲಣ ಕ್ರೋಧದಿಂದುರಿಯುತ್ತಾ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು; ಅದಕ್ಕೆ ಎದುರುಬೀಳಲು ಟಗರಿಗೆ ಏನೂ ಶಕ್ತಿಯಿರಲಿಲ್ಲ; ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿದು ಹಾಕಿತು; ಟಗರನ್ನು ಅದರ ಕೈಯಿಂದ ಬಿಡಿಸುವ ಪ್ರಾಣಿ ಯಾವದೂ ಇರಲಿಲ್ಲ.” (ದಾನಿಯೇಲ 8:5-7) ಈ ಎಲ್ಲ ವಿವರಣೆಯ ಅರ್ಥವೇನು?
11. (ಎ) “ಹೋತ” ಹಾಗೂ ಅದರ “ದೊಡ್ಡ ಕೊಂಬಿನ” ವಿಷಯದಲ್ಲಿ ಗಬ್ರಿಯೇಲ ದೇವದೂತನು ಯಾವ ವಿವರವನ್ನು ನೀಡಿದನು? (ಬಿ) ಗಮನ ಸೆಳೆಯುವಂತಿರುವ ಈ ಕೊಂಬು ಯಾರನ್ನು ಚಿತ್ರಿಸುತ್ತದೆ?
11 ದಾನಿಯೇಲನಾಗಲಿ ಅಥವಾ ವಾಚಕರಾದ ನಾವಾಗಲಿ, ಈ ದರ್ಶನದ ಅರ್ಥದ ಬಗ್ಗೆ ಊಹಿಸುವ ಅಗತ್ಯವಿಲ್ಲ. “ಆ ಹೋತವು ಗ್ರೀಸ್ ದೇಶದ ಅರಸನನ್ನು ಸೂಚಿಸುತ್ತದೆ; ಮತ್ತು ಅದರ ಕಣ್ಣುಗಳ ನಡುವೆಯಿದ್ದ ದೊಡ್ಡ ಕೊಂಬಿನ ವಿಷಯದಲ್ಲಿ ಹೇಳುವುದಾದರೆ, ಅದು ಆ ರಾಜ್ಯದ ಮೊದಲನೆಯ ಅರಸನನ್ನು ಸೂಚಿಸುತ್ತದೆ” ಎಂದು ಗಬ್ರಿಯೇಲ ದೂತನು ದಾನಿಯೇಲನಿಗೆ ವಿವರಿಸುತ್ತಾನೆ. (ದಾನಿಯೇಲ 8:21, NW) ಸಾ.ಶ.ಪೂ. 336ರಲ್ಲಿ, ಪಾರಸಿಯ ಸಾಮ್ರಾಜ್ಯದ ಕೊನೆಯ ಅರಸನಾಗಿದ್ದ IIIನೆಯ ದಾರ್ಯಾವೆಷ (ಕಾಡೋಮ್ಯಾನಸ್)ನಿಗೆ ಅರಸನಾಗಿ ಪಟ್ಟಾಭಿಷೇಕವಾಯಿತು. ಅದೇ ವರ್ಷದಲ್ಲಿ, ಅಲೆಕ್ಸಾಂಡರನೂ ಮ್ಯಾಸಿಡೋನಿಯದ ಅರಸನಾದನು. ಮಹಾ ಅಲೆಕ್ಸಾಂಡರನೇ, ಮುಂತಿಳಿಸಲ್ಪಟ್ಟಿದ್ದ ಮೊದಲನೆಯ “ಗ್ರೀಸ್ ದೇಶದ ಅರಸ”ನಾಗಿದ್ದನು ಎಂಬುದನ್ನು ಇತಿಹಾಸವು ರುಜುಪಡಿಸುತ್ತದೆ. ಸಾ.ಶ.ಪೂ. 334ನೆಯ ವರ್ಷದಲ್ಲಿ, “ಸೂರ್ಯಾಸ್ತಮಾನವಾಗುವ ದಿಕ್ಕಿನಿಂದ” ಅಥವಾ ಪಶ್ಚಿಮ ದಿಕ್ಕಿನಿಂದ ಆರಂಭಿಸಿ, ಅಲೆಕ್ಸಾಂಡರನು ತ್ವರಿತಗತಿಯಿಂದ ಕಾರ್ಯನಡಿಸಿದನು. “ನೆಲವನ್ನು ಸೋಕದೆ”ಯೋ ಎಂಬಂತೆ, ಅವನು ಬಹು ಬೇಗನೆ ಅನೇಕ ಕ್ಷೇತ್ರಗಳನ್ನು ಗೆದ್ದುಕೊಂಡನು, ಹಾಗೂ “ಟಗರ”ನ್ನು ಹೊಡೆದು ಉರುಳಿಸಿದನು. ಸುಮಾರು ಎರಡು ಶತಮಾನಗಳ ವರೆಗೆ ಅಸ್ತಿತ್ವದಲ್ಲಿದ್ದ ಮೇದ್ಯಯಪಾರಸಿಯ ಆಧಿಪತ್ಯವನ್ನು ಕೊನೆಗೊಳಿಸಿದ ಗ್ರೀಸ್, ಬೈಬಲ್ ಸಂಬಂಧಿತ ಮಹತ್ವದ ಐದನೆಯ ಲೋಕ ಶಕ್ತಿಯಾಗಿ ಪರಿಣಮಿಸಿತು. ದೈವಿಕ ಪ್ರವಾದನೆಯ ಎಂತಹ ಗಮನಾರ್ಹ ನೆರವೇರಿಕೆ!
12. ಸಾಂಕೇತಿಕ ಹೋತದ ಆ “ದೊಡ್ಡ ಕೊಂಬು” ಹೇಗೆ “ಮುರಿಯ”ಲ್ಪಟ್ಟಿತು, ಮತ್ತು ಅದರ ಸ್ಥಾನದಲ್ಲಿ ಬಂದ ನಾಲ್ಕು ಕೊಂಬುಗಳು ಯಾವುವಾಗಿದ್ದವು?
12 ಆದರೆ ಅಲೆಕ್ಸಾಂಡರನ ಅಧಿಕಾರವು ಸ್ವಲ್ಪ ಕಾಲದ ವರೆಗೆ ಮಾತ್ರ ಇರುವಂತಹದ್ದಾಗಿತ್ತು. ದರ್ಶನವು ಇನ್ನೂ ಪ್ರಕಟಗೊಳಿಸಿದ್ದು: “ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು; ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.” (ದಾನಿಯೇಲ 8:8) ಈ ಪ್ರವಾದನೆಯನ್ನು ವಿವರಿಸುತ್ತಾ ಗಬ್ರಿಯೇಲನು ಹೇಳಿದ್ದು: “ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ.” (ದಾನಿಯೇಲ 8:22) ಮುಂತಿಳಿಸಲ್ಪಟ್ಟಂತೆ, ಅಲೆಕ್ಸಾಂಡರನು ತನ್ನ ವಿಜಯೋತ್ಸವದ ತುತ್ತತುದಿಯಲ್ಲಿರುವಾಗಲೇ ಅವನು “ಮುರಿ”ಯಲ್ಪಟ್ಟನು, ಅಥವಾ ಕೇವಲ 32 ವರ್ಷ ಪ್ರಾಯದವನಿರುವಾಗಲೇ ಮರಣಪಟ್ಟನು. ಕಾಲಕ್ರಮೇಣ ಅವನ ದೊಡ್ಡ ಸಾಮ್ರಾಜ್ಯವು, ಅವನ ನಾಲ್ಕು ಮಂದಿ ಸೇನಾಧಿಕಾರಿಗಳ ನಡುವೆ ವಿಭಾಗವಾಯಿತು.
ರಹಸ್ಯಗರ್ಭಿತವಾದ ಒಂದು ಚಿಕ್ಕ ಕೊಂಬು
13. ಆ ನಾಲ್ಕು ಕೊಂಬುಗಳಲ್ಲಿ ಒಂದರಿಂದ ಏನು ಬೆಳೆಯಿತು, ಮತ್ತು ಇದು ಹೇಗೆ ಕಾರ್ಯನಡಿಸಿತು?
13 ದರ್ಶನದ ಮುಂದಿನ ಭಾಗವು, 2,200ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಿಂದಿನದ್ದಾಗಿದೆ, ಆದರೆ ಅದರ ನೆರವೇರಿಕೆಯು ಆಧುನಿಕ ಸಮಯಗಳ ವರೆಗೂ ವ್ಯಾಪಿಸುತ್ತದೆ. ದಾನಿಯೇಲನು ಬರೆಯುವುದು: “ಅವುಗಳೊಳಗೆ [ನಾಲ್ಕು ಕೊಂಬುಗಳೊಳಗೆ] ಒಂದರಲ್ಲಿ ಒಂದು ಚಿಕ್ಕ ಕೊಂಬು ಮೊಳೆತು ಬಹು ದೊಡ್ಡದಾಗಿ ಬೆಳೆದು ತೆಂಕಲಲ್ಲಿಯೂ ಮೂಡಲಲ್ಲಿಯೂ [“ದಕ್ಷಿಣದಲ್ಲಿಯೂ ಸೂರ್ಯೋದಯವಾಗುವ ದಿಕ್ಕಿನಲ್ಲಿಯೂ,” NW] ಅಂದಚೆಂದದ ದೇಶದಲ್ಲಿಯೂ ಪ್ರಬಲವಾಯಿತು. ಅದು ನಕ್ಷತ್ರಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು. ಇದಲ್ಲದೆ ಆ ಗಣದ ಅಧಿಪತಿಯನ್ನೂ ಎದುರಿಸುವಷ್ಟು ಉಬ್ಬಿಕೊಂಡು ನಿತ್ಯಹೋಮವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರಸ್ಥಾನವನ್ನು ಕೆಡವಿ ನಿತ್ಯಹೋಮವನ್ನು ಅಡಗಿಸುವದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು.”—ದಾನಿಯೇಲ 8:9-12.
14. ಸಾಂಕೇತಿಕವಾದ ಚಿಕ್ಕ ಕೊಂಬಿನ ಚಟುವಟಿಕೆಗಳ ಕುರಿತು ಮತ್ತು ಆ ಕೊಂಬಿಗೆ ಏನು ಸಂಭವಿಸುತ್ತದೆ ಎಂಬುದರ ಕುರಿತು, ಗಬ್ರಿಯೇಲ ದೇವದೂತನು ಏನು ಹೇಳಿದನು?
14 ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ಮಾತುಗಳ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕೆ ಮೊದಲು, ನಾವು ದೇವದೂತನ ಮಾತುಗಳಿಗೆ ಗಮನಕೊಡಬೇಕು. ಅಲೆಕ್ಸಾಂಡರನ ಸಾಮ್ರಾಜ್ಯದಿಂದ ಉಂಟಾಗುವ ನಾಲ್ಕು ರಾಜ್ಯಗಳು ಅಧಿಕಾರಕ್ಕೆ ಬರುವುದನ್ನು ಸೂಚಿಸಿದ ಬಳಿಕ, ಗಬ್ರಿಯೇಲ ದೇವದೂತನು ಹೇಳುವುದು: “ಆ ರಾಜ್ಯಗಳ ಕಡೆಯ ಕಾಲದಲ್ಲಿ, ಅಧರ್ಮಿಗಳ ಅಧರ್ಮವು ಪೂರ್ತಿಯಾದಾಗ ಕಠಿಣಮುಖನೂ ದ್ವಂದ್ವಾರ್ಥವಚನನಿಪುಣನೂ ಆದ ಒಬ್ಬ ರಾಜನು ತಲೆದೋರುವನು. ಅವನು ಪ್ರಬಲನಾಗುವನು, ಆದರೆ ಬಲದಿಂದಲ್ಲ; ಅತ್ಯಧಿಕವಾಗಿ ಹಾಳುಮಾಡಿ ವೃದ್ಧಿಗೆ ಬಂದು ಇಷ್ಟಾರ್ಥವನ್ನು ತೀರಿಸಿಕೊಳ್ಳುವನು; ಬಲಿಷ್ಠರನ್ನೂ ದೇವರ ಜನರನ್ನೂ [“ಪವಿತ್ರ ಜನರನ್ನೂ,” NW] ಧ್ವಂಸಮಾಡುವನು. ಯುಕ್ತಿಯಿಂದಲೇ ತನ್ನ ಮೋಸವನ್ನು ಸಿದ್ಧಿಗೆ ತಂದು ಮನದಲ್ಲಿ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹು ಜನರನ್ನು ನಾಶಪಡಿಸಿ ಪ್ರಭುಗಳ ಪ್ರಭುವಿಗೂ ವಿರುದ್ಧವಾಗಿ ಏಳುವನು. ಆಹಾ, ಯಾರ ಕೈಯೂ ಸೋಕದೆ ಹಾಳಾಗುವನು.”—ದಾನಿಯೇಲ 8:23-25.
15. ದರ್ಶನದ ವಿಷಯದಲ್ಲಿ ಏನು ಮಾಡುವಂತೆ ದೇವದೂತನು ದಾನಿಯೇಲನಿಗೆ ಹೇಳಿದನು?
15 “ಕನಸಿನಲ್ಲಿ [“ದರ್ಶನದಲ್ಲಿ,” NW] ತಿಳಿಸಲ್ಪಟ್ಟ ವಿಷಯವು . . . ಗುಟ್ಟಾಗಿರಲಿ; ಅದು ಬಹು ದೂರದ ಕಾಲದ್ದು” ಎಂದು ದೇವದೂತನು ದಾನಿಯೇಲನಿಗೆ ಹೇಳುತ್ತಾನೆ. (ದಾನಿಯೇಲ 8:26) ದರ್ಶನದ ಈ ಭಾಗದ ನೆರವೇರಿಕೆಯು, “ಬಹು ದೂರದ ಕಾಲ”ದ ವರೆಗೆ ಸಂಭವಿಸಲಿಕ್ಕಿರಲಿಲ್ಲ, ಹಾಗೂ ದಾನಿಯೇಲನು “ಈ ದರ್ಶನವನ್ನು ಗುಟ್ಟಾಗಿ”ಡಬೇಕಿತ್ತು. ಈ ದರ್ಶನದ ಅರ್ಥವು ದಾನಿಯೇಲನಿಗೆ ರಹಸ್ಯವಾಗಿಯೇ ಉಳಿಯಿತು ಎಂಬುದು ಸುವ್ಯಕ್ತ. ಆದರೆ, ಇಷ್ಟರೊಳಗೆ ಆ “ಬಹು ದೂರದ ಕಾಲ”ವು ಖಂಡಿತವಾಗಿಯೂ ಕೊನೆಗೊಂಡಿದ್ದಿರಲೇಬೇಕು. ಆದುದರಿಂದ, ನಾವು ಹೀಗೆ ಕೇಳುತ್ತೇವೆ: ‘ಈ ಪ್ರವಾದನಾತ್ಮಕ ದರ್ಶನದ ನೆರವೇರಿಕೆಯ ಕುರಿತು ಲೋಕ ಇತಿಹಾಸವು ಏನನ್ನು ಪ್ರಕಟಪಡಿಸುತ್ತದೆ?’
ಚಿಕ್ಕ ಕೊಂಬು ಬೆಳೆದು ಪ್ರಬಲವಾಗುತ್ತದೆ
16. (ಎ) ಯಾವ ಸಾಂಕೇತಿಕ ಕೊಂಬಿನಿಂದ ಈ ಚಿಕ್ಕ ಕೊಂಬು ಮೊಳಕೆಯೊಡೆಯಿತು? (ಬಿ) ರೋಮ್ ಬೈಬಲ್ ಪ್ರವಾದನೆಯ ಆರನೆಯ ಲೋಕ ಶಕ್ತಿಯಾಗಿ ಪರಿಣಮಿಸಿದ್ದು ಹೇಗೆ, ಮತ್ತು ಇದು ಸಾಂಕೇತಿಕ ಚಿಕ್ಕ ಕೊಂಬಾಗಿರಲಿಲ್ಲವೇಕೆ?
16 ಇತಿಹಾಸಕ್ಕನುಸಾರ, ಈ ಚಿಕ್ಕ ಕೊಂಬು, ನಾಲ್ಕು ಸಾಂಕೇತಿಕ ಕೊಂಬುಗಳಲ್ಲಿ ಒಂದರ—ತೀರ ಪಶ್ಚಿಮಕ್ಕಿರುವ—ಮೊಳಕೆಯಾಗಿತ್ತು. ಮ್ಯಾಸಿಡೋನಿಯ ಹಾಗೂ ಗ್ರೀಸ್ಗಳ ಮೇಲೆ ಅಧಿಕಾರ ನಡಿಸುತ್ತಿದ್ದ ಜನರಲ್ ಕಸಾಂಡರ್ನ ಗ್ರೀಕ್ ರಾಜ್ಯವೇ ಇದಾಗಿತ್ತು. ತದನಂತರ, ಈ ರಾಜ್ಯವು, ಥ್ರೇಸ್ ಹಾಗೂ ಏಷ್ಯಾ ಮೈನರ್ನ ಅರಸನಾಗಿದ್ದ ಜನರಲ್ ಲೈಸಿಮೆಕಸನ ವಶಕ್ಕೆ ಹೋಯಿತು. ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ಗ್ರೀಕ್ ಆಧಿಪತ್ಯದ ಈ ಪಶ್ಚಿಮ ವಿಭಾಗಗಳನ್ನು ರೋಮ್ ವಶಪಡಿಸಿಕೊಂಡಿತು. ಮತ್ತು ಸಾ.ಶ.ಪೂ. 30ನೆಯ ವರ್ಷದ ಸುಮಾರಿಗೆ, ಎಲ್ಲ ಗ್ರೀಕ್ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡ ರೋಮ್, ತನ್ನನ್ನು ಬೈಬಲ್ ಪ್ರವಾದನೆಯ ಆರನೆಯ ಲೋಕ ಶಕ್ತಿಯಾಗಿ ಮಾಡಿಕೊಂಡಿತು. ಆದರೆ ದಾನಿಯೇಲನ ದರ್ಶನದಲ್ಲಿ ಕಂಡುಬಂದಿದ್ದ ಚಿಕ್ಕ ಕೊಂಬು, ರೋಮನ್ ಸಾಮ್ರಾಜ್ಯವಾಗಿರಲಿಲ್ಲ. ಏಕೆಂದರೆ ರೋಮನ್ ಸಾಮ್ರಾಜ್ಯವು “ಅಂತ್ಯಕಾಲ”ದ ತನಕ ಮುಂದುವರಿಯಲಿಲ್ಲ.—ದಾನಿಯೇಲ 8:19.
17. (ಎ) ಬ್ರಿಟನ್ಗೂ ರೋಮನ್ ಸಾಮ್ರಾಜ್ಯಕ್ಕೂ ಯಾವ ಸಂಬಂಧವಿತ್ತು? (ಬಿ) ಬ್ರಿಟಿಷ್ ಸಾಮ್ರಾಜ್ಯವು, ಮ್ಯಾಸಿಡೋನಿಯ ಹಾಗೂ ಗ್ರೀಸ್ನ ಹೆಲೀನಿಕ್ ರಾಜ್ಯದೊಂದಿಗೆ ಹೇಗೆ ಸಂಬಂಧವನ್ನು ಪಡೆದಿತ್ತು?
17 ಹಾಗಾದರೆ, ಆಕ್ರಮಣಶೀಲನಾದ ಆ “ಕಠಿಣಮುಖ”ದ ಅರಸನು ಯಾರಾಗಿದ್ದನೆಂದು ಇತಿಹಾಸವು ಗುರುತಿಸುತ್ತದೆ? ವಾಸ್ತವದಲ್ಲಿ, ರೋಮನ್ ಸಾಮ್ರಾಜ್ಯದ ವಾಯವ್ಯ ಮೊಳಕೆಯು ಬ್ರಿಟನ್ ಆಗಿತ್ತು. ಸಾ.ಶ. ಐದನೆಯ ಶತಮಾನದ ಆರಂಭದ ತನಕ, ಈಗ ಬ್ರಿಟನ್ ಇರುವಂತಹ ಸ್ಥಳದಲ್ಲಿ ರೋಮನ್ ಪ್ರಾಂತಗಳಿದ್ದವು. ಸಮಯ ಕಳೆದಂತೆ, ರೋಮನ್ ಸಾಮ್ರಾಜ್ಯವು ಕ್ಷೀಣಿಸಿತು, ಆದರೆ ಬ್ರಿಟನ್ನಲ್ಲಿ ಮತ್ತು ರೋಮನ್ ಆಧಿಪತ್ಯದ ಕೆಳಗಿದ್ದ ಯೂರೋಪಿನ ಇತರ ಭಾಗಗಳಲ್ಲಿ, ಗ್ರೀಕ್ ಹಾಗೂ ರೋಮನ್ ನಾಗರಿಕತೆಯ ಪ್ರಭಾವವು ಮುಂದುವರಿಯಿತು. ನೊಬೆಲ್ ಪಾರಿತೋಷಕ ವಿಜೇತರೂ, ಒಬ್ಬ ಕವಿಗಳೂ ಲೇಖಕರೂ ಆಗಿದ್ದ ಮೆಕ್ಸಿಕೊದ ಆಕ್ಟಾಬ್ಯೋ ಪಾಸ್ ಬರೆದದ್ದೇನೆಂದರೆ, “ರೋಮನ್ ಸಾಮ್ರಾಜ್ಯವು ಪತನಗೊಂಡಾಗ, ಚರ್ಚು ಅದರ ಸ್ಥಾನವನ್ನು ಆಕ್ರಮಿಸಿತು.” ಅವರು ಕೂಡಿಸಿದ್ದು: “ಚರ್ಚಿನ ಪಾದ್ರಿಗಳು ಹಾಗೂ ತದನಂತರದ ವಿದ್ವಾಂಸರು, ಕ್ರೈಸ್ತ ಸಿದ್ಧಾಂತಕ್ಕೆ ಗ್ರೀಕ್ ತತ್ವಜ್ಞಾನವನ್ನು ಕಸಿಕಟ್ಟಿದರು.” ಇದಲ್ಲದೆ 20ನೆಯ ಶತಮಾನದ ತತ್ವಜ್ಞಾನಿಗಳೂ ಗಣಿತಶಾಸ್ತ್ರಜ್ಞರೂ ಆಗಿದ್ದ ಬರ್ಟ್ರಂಡ್ ರಸಲ್ ದಾಖಲಿಸಿದ್ದು: “ಗ್ರೀಕ್ ಮೂಲಗಳಿಂದ ಉದಯಿಸಿರುವ ಪಾಶ್ಚಿಮಾತ್ಯ ನಾಗರಿಕತೆಯು, ಎರಡೂವರೆ ಸಾವಿರ ವರ್ಷಗಳ ಹಿಂದೆ, ಮೈಲೀಟಸ್ [ಏಷ್ಯಾ ಮೈನರ್ನಲ್ಲಿರುವ ಒಂದು ಗ್ರೀಕ್ ಪಟ್ಟಣ]ನಲ್ಲಿ ಆರಂಭವಾದ ತತ್ವಜ್ಞಾನ ಹಾಗೂ ವೈಜ್ಞಾನಿಕ ಸಂಪ್ರದಾಯಗಳ ಮೇಲಾಧಾರಿತವಾಗಿದೆ.” ಹೀಗೆ, ಬ್ರಿಟಿಷ್ ಸಾಮ್ರಾಜ್ಯದ ಸಾಂಸ್ಕೃತಿಕ ಬೇರುಗಳು, ಮ್ಯಾಸಿಡೋನಿಯ ಹಾಗೂ ಗ್ರೀಸ್ನ ಹೆಲೀನಿಕ್ ರಾಜ್ಯದಿಂದ ಬಂದವುಗಳಾಗಿದ್ದವು ಎಂದು ಹೇಳಸಾಧ್ಯವಿದೆ.
18. “ಕಡೆಯ ಕಾಲದಲ್ಲಿ,” “ಕಠಿಣಮುಖದ” ಅರಸನಾಗಿ ಪರಿಣಮಿಸಿದ್ದ ಚಿಕ್ಕ ಕೊಂಬು ಯಾವುದಾಗಿದೆ? ವಿವರಿಸಿರಿ.
18 ಇಸವಿ 1763ರಷ್ಟಕ್ಕೆ, ಬ್ರಿಟಿಷ್ ಸಾಮ್ರಾಜ್ಯವು ತನ್ನ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದ ಸ್ಪೆಯ್ನ್ ಹಾಗೂ ಫ್ರಾನ್ಸ್ಗಳನ್ನು ಸೋಲಿಸಿಬಿಟ್ಟಿತ್ತು. ಅಂದಿನಿಂದ ಬ್ರಿಟಿಷ್ ಸಾಮ್ರಾಜ್ಯವು, ತನ್ನನ್ನು ಸಮುದ್ರಗಳ ಒಡತಿಯಾಗಿಯೂ ಬೈಬಲ್ ಪ್ರವಾದನೆಯ ಏಳನೆಯ ಲೋಕ ಶಕ್ತಿಯಾಗಿಯೂ ತೋರ್ಪಡಿಸಿಕೊಂಡಿತು. ಅಮೆರಿಕವನ್ನು ಸ್ಥಾಪಿಸಲಿಕ್ಕಾಗಿ, 1776ರಲ್ಲಿ 13 ಅಮೆರಿಕನ್ ವಸಾಹತುಗಳು ಬ್ರಿಟನ್ನಿಂದ ಪ್ರತ್ಯೇಕವಾದರೂ, ಬ್ರಿಟಿಷ್ ಸಾಮ್ರಾಜ್ಯವು ಭೂಮಿಯ ನಾಲ್ಕನೇ ಒಂದು ಭಾಗವನ್ನೂ ಅದರ ಜನಸಂಖ್ಯೆಯ ನಾಲ್ಕನೇ ಒಂದು ಭಾಗವನ್ನೂ ಆವರಿಸುವಷ್ಟು ದೊಡ್ಡದಾಗಿ ಬೆಳೆಯಿತು. ಅಮೆರಿಕವು ಬ್ರಿಟನ್ನೊಂದಿಗೆ ಜೊತೆಗೂಡಿ, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯನ್ನು ರೂಪಿಸಿದಾಗ, ಏಳನೆಯ ಲೋಕ ಶಕ್ತಿಯು ಇನ್ನೂ ಹೆಚ್ಚು ಪ್ರಬಲಗೊಂಡಿತು. ಆರ್ಥಿಕ ರೀತಿಯಲ್ಲಿ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ, ಈ ಲೋಕ ಶಕ್ತಿಯು ಖಂಡಿತವಾಗಿಯೂ “ಕಠಿಣಮುಖ”ದ ಅರಸನಾಗಿತ್ತೆಂಬುದು ನಿಶ್ಚಯ. ಆದುದರಿಂದ, “ಕಡೆಯ ಕಾಲದಲ್ಲಿ” ಒಂದು ಉಗ್ರವಾದ ರಾಜಕೀಯ ಶಕ್ತಿಯಾಗಿ ಪರಿಣಮಿಸಿರುವ ಆ ಚಿಕ್ಕ ಕೊಂಬು, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯಾಗಿದೆ.
19. ದರ್ಶನದಲ್ಲಿ ಸೂಚಿಸಲಾಗಿರುವ “ಅಂದಚಂದದ ದೇಶ”ವು ಏನಾಗಿದೆ?
19 ಆ ಚಿಕ್ಕ ಕೊಂಬು, “ಅಂದಚಂದದ ದೇಶದಲ್ಲಿಯೂ ಪ್ರಬಲವಾಗುತ್ತಿರು”ವುದನ್ನು ದಾನಿಯೇಲನು ಕಂಡನು. (ದಾನಿಯೇಲ 8:9) ತಾನಾದುಕೊಂಡಿದ್ದ ಜನರಿಗೆ ಯೆಹೋವನು ಕೊಟ್ಟಂತಹ ವಾಗ್ದತ್ತ ದೇಶವು ಎಷ್ಟು ಸುಂದರವಾಗಿತ್ತೆಂದರೆ, ಇಡೀ ಭೂಮಿಯಲ್ಲೇ ಅಂದಚಂದವಾದದ್ದು, ಅಂದರೆ “ಸಕಲದೇಶ ಶಿರೋಮಣಿ” ಎಂದು ಅದನ್ನು ಕರೆಯಲಾಗುತ್ತಿತ್ತು. (ಯೆಹೆಜ್ಕೇಲ 20:6, 15) 1917ರ ಡಿಸೆಂಬರ್ 9ರಂದು ಬ್ರಿಟನ್ ಯೆರೂಸಲೇಮನ್ನು ಸ್ವಾಧೀನಪಡಿಸಿಕೊಂಡಿತು, ಮತ್ತು 1920ನೆಯ ವರ್ಷದಲ್ಲಿ ಜನಾಂಗ ಸಂಘವು, 1948ರ ಮೇ 14ರ ವರೆಗೆ ಪ್ಯಾಲೆಸ್ಟೈನ್ನ ಮೇಲೆ ಆಳ್ವಿಕೆ ನಡಿಸುವುದನ್ನು ಮುಂದುವರಿಸುವಂತೆ ಗ್ರೇಟ್ ಬ್ರಿಟನ್ಗೆ ಅಪ್ಪಣೆ ನೀಡಿತು ಎಂಬುದು ನಿಜ. ಆದರೂ, ಈ ದರ್ಶನವು ಪ್ರವಾದನಾತ್ಮಕವಾಗಿದೆ, ಮತ್ತು ಇದರಲ್ಲಿ ಅನೇಕ ಸಂಕೇತಗಳು ಒಳಗೂಡಿವೆ. ಆದುದರಿಂದ, ದರ್ಶನದಲ್ಲಿ ಸೂಚಿಸಲಾಗಿರುವ “ಅಂದಚಂದದ ದೇಶ”ವು ಯೆರೂಸಲೇಮನ್ನಲ್ಲ, ಬದಲಾಗಿ ಏಳನೆಯ ಲೋಕ ಶಕ್ತಿಯು ಆಳುತ್ತಿರುವಂತಹ ಸಮಯದಲ್ಲಿ ದೇವರು ಯಾರನ್ನು ಪವಿತ್ರರೆಂದು ಪರಿಗಣಿಸುತ್ತಾನೋ ಆ ಜನರ ಐಹಿಕ ಸನ್ನಿವೇಶವನ್ನು ಸಂಕೇತಿಸುತ್ತದೆ. ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯು, ಹೇಗೆ ಪವಿತ್ರ ಜನರ ಮೇಲೆ ಬೆದರಿಕೆಯನ್ನು ಒಡ್ಡಲು ಪ್ರಯತ್ನಿಸುತ್ತದೆ ಎಂಬುದನ್ನು ನಾವೀಗ ನೋಡೋಣ.
“ಆತನ ಪವಿತ್ರಸ್ಥಾನವು” ಕೆಡವಲ್ಪಟ್ಟಿತು
20. ಆ ಚಿಕ್ಕ ಕೊಂಬು ಕೆಡವಲು ಪ್ರಯತ್ನಿಸಿದ “ನಕ್ಷತ್ರಗಣ” ಹಾಗೂ “ನಕ್ಷತ್ರಗಳು” ಯಾರಾಗಿದ್ದಾರೆ?
20 ಆ ಚಿಕ್ಕ ಕೊಂಬು “ನಕ್ಷತ್ರಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು.” ದೇವದೂತನ ವಿವರಣೆಗನುಸಾರ, ಆ ಚಿಕ್ಕ ಕೊಂಬು ಕೆಡವಲು ಪ್ರಯತ್ನಿಸಿದ “ನಕ್ಷತ್ರಗಣ” ಹಾಗೂ “ನಕ್ಷತ್ರಗಳು,” “ಪವಿತ್ರ ಜನರೇ” ಆಗಿದ್ದರು. (ದಾನಿಯೇಲ 8:10, 24, NW) ಈ “ಪವಿತ್ರ ಜನರು” ಆತ್ಮಾಭಿಷಿಕ್ತ ಕ್ರೈಸ್ತರಾಗಿದ್ದಾರೆ. ಯೇಸು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಿಂದ ಜಾರಿಗೊಳಿಸಲ್ಪಟ್ಟ ಹೊಸ ಒಡಂಬಡಿಕೆಯ ಮೂಲಕ, ಅವರು ದೇವರೊಂದಿಗೆ ಒಂದು ವಿಶೇಷ ಸಂಬಂಧದೊಳಕ್ಕೆ ತರಲ್ಪಟ್ಟಿರುವ ಕಾರಣದಿಂದ, ಅವರು ಪವಿತ್ರರಾಗಿದ್ದಾರೆ, ಶುದ್ಧರಾಗಿದ್ದಾರೆ, ಮತ್ತು ದೇವರ ಅನನ್ಯ ಸೇವೆಗಾಗಿ ಪ್ರತ್ಯೇಕಿಸಲ್ಪಟ್ಟಿದ್ದಾರೆ. (ಇಬ್ರಿಯ 10:10; 13:20) ಯೆಹೋವನು ಅವರನ್ನು ಸ್ವರ್ಗೀಯ ಸ್ವಾಸ್ಥ್ಯಕ್ಕಾಗಿ ತನ್ನ ಪುತ್ರನೊಂದಿಗೆ ಬಾಧ್ಯಸ್ಥರೋಪಾದಿ ನೇಮಿಸಿರುವುದರಿಂದ, ಅವರನ್ನು ಪವಿತ್ರರಾಗಿ ಪರಿಗಣಿಸುತ್ತಾನೆ. (ಎಫೆಸ 1:3, 11, 18-20) ಹೀಗಿರುವುದರಿಂದ, ದಾನಿಯೇಲನ ದರ್ಶನದಲ್ಲಿರುವ “ನಕ್ಷತ್ರಗಣ”ವು, ಸ್ವರ್ಗದಲ್ಲಿ ಯಜ್ಞದ ಕುರಿಯಾದಾತನೊಂದಿಗೆ ಆಳಲಿರುವ 1,44,000 ಮಂದಿ “ಪವಿತ್ರ ಜನರ”ಲ್ಲಿ, ಭೂಮಿಯ ಮೇಲೆ ಉಳಿದಿರುವವರನ್ನು ಸೂಚಿಸುತ್ತದೆ.—ಪ್ರಕಟನೆ 14:1-5.
21. ಏಳನೆಯ ಲೋಕ ಶಕ್ತಿಯು ನಿರ್ಜನಗೊಳಿಸಲು ಪ್ರಯತ್ನಿಸುವ “ಪವಿತ್ರ ಸ್ಥಳ”ದಲ್ಲಿ ಯಾರು ನೆಲೆಸಿದ್ದಾರೆ?
21 ಇಂದು 1,44,000 ಮಂದಿಯಲ್ಲಿ ಉಳಿಕೆಯವರು, ದೇವರ ಪಟ್ಟಣದಂತಿರುವ “ಪರಲೋಕದ ಯೆರೂಸಲೇಮ್” ಹಾಗೂ ಅದರ ದೇವಾಲಯ ಏರ್ಪಾಡಿನ ಭೂಪ್ರತಿನಿಧಿಗಳಾಗಿದ್ದಾರೆ. (ಇಬ್ರಿಯ 12:22, 28; 13:14) ಈ ಅರ್ಥದಲ್ಲಿ ಅವರು, ಏಳನೆಯ ಲೋಕ ಶಕ್ತಿಯು ತುಳಿಯಲು ಹಾಗೂ ನಿರ್ಜನವಾಗಿ ಮಾಡಲು ಪ್ರಯತ್ನಿಸುತ್ತಿರುವಂತಹ ಒಂದು “ಪವಿತ್ರ ಸ್ಥಳ”ದಲ್ಲಿ ನೆಲೆಸಿರುತ್ತಾರೆ. (ದಾನಿಯೇಲ 8:13, NW) ಪವಿತ್ರ ಸ್ಥಳದ ಕುರಿತು ಹಾಗೂ “[ಯೆಹೋವನ] ಪವಿತ್ರಸ್ಥಾನದ” ಕುರಿತು ಮಾತಾಡುತ್ತಾ, ದಾನಿಯೇಲನು ಏಳನೆಯ ಲೋಕ ಶಕ್ತಿಯ ಕುರಿತು ಹೇಳುವುದು: “ಇದಲ್ಲದೆ ಆ ಗಣದ ಅಧಿಪತಿಯನ್ನೂ ಎದುರಿಸುವಷ್ಟು ಉಬ್ಬಿಕೊಂಡು ನಿತ್ಯಹೋಮವನ್ನು ಆತನಿಗೆ [ಯೆಹೋವನಿಗೆ] ಸಲ್ಲದಂತೆ ಮಾಡಿ ಆತನ ಪವಿತ್ರಸ್ಥಾನವನ್ನು ಕೆಡವಿ ನಿತ್ಯಹೋಮವನ್ನು ಅಡಗಿಸುವದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು.” (ದಾನಿಯೇಲ 8:11, 12) ಇದು ಹೇಗೆ ನೆರವೇರಿತು?
22. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಏಳನೆಯ ಲೋಕ ಶಕ್ತಿಯು ಹೇಗೆ ಗಮನಾರ್ಹವಾದ ರೀತಿಯಲ್ಲಿ “ನೀಚತನ”ವನ್ನು ತೋರಿಸಿತು?
22 ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನಾಯಿತು? ಅವರು ತೀವ್ರವಾದ ಹಿಂಸೆಯನ್ನು ಅನುಭವಿಸಿದರು! ಇದು ಮೊದಲಾಗಿ ನಾಸಿ ಹಾಗೂ ಫ್ಯಾಸಿಸ್ಟ್ ದೇಶಗಳಲ್ಲಿ ಆರಂಭವಾಯಿತು. ಆದರೆ ಸ್ವಲ್ಪದರಲ್ಲೇ, ‘ಯಾವುದರ ಅಧಿಕಾರವು ಪ್ರಬಲವಾಗಿತ್ತೋ ಆ ಚಿಕ್ಕ ಕೊಂಬಿನ’ ವಿಸ್ತಾರವಾದ ಆಧಿಪತ್ಯದಲ್ಲೆಲ್ಲಾ, ‘ಸತ್ಯಧರ್ಮವು ನೆಲಕ್ಕೆ ದೊಬ್ಬಲ್ಪಡಲಿಕ್ಕಿತ್ತು.’ ಹೆಚ್ಚುಕಡಿಮೆ ಇಡೀ ಬ್ರಿಟಿಷ್ ಪ್ರಜಾಪ್ರಭುತ್ವದಲ್ಲಿ, ರಾಜ್ಯ ಘೋಷಕರ “ಗಣ” ಹಾಗೂ ಅವರ “ಸುವಾರ್ತೆ”ಯ ಕಾರ್ಯವು ನಿಷೇಧಿಸಲ್ಪಟ್ಟಿತು. (ಮಾರ್ಕ 13:10) ಈ ಜನಾಂಗಗಳು ತಮ್ಮ ಜನರನ್ನು ಯುದ್ಧಕ್ಕೆ ಸೇರಿಸಿದಾಗ, ಯೆಹೋವನ ಸಾಕ್ಷಿಗಳಿಗೆ ವಿನಾಯಿತಿ ನೀಡಲು ನಿರಾಕರಿಸಿದವು, ಮತ್ತು ದೇವರ ಶುಶ್ರೂಷಕರೋಪಾದಿ ಅವರ ದೇವಪ್ರಭುತ್ವ ನೇಮಕಕ್ಕೆ ಅವು ಯಾವುದೇ ರೀತಿಯ ಗೌರವವನ್ನು ತೋರಿಸಲಿಲ್ಲ. ಅಮೆರಿಕದಲ್ಲಿನ ಯೆಹೋವನ ನಂಬಿಗಸ್ತ ಸೇವಕರು, ಗುಂಪು ಗಲಭೆ ಹಾಗೂ ವಿವಿಧ ರೀತಿಯ ಅವಮಾನಗಳನ್ನು ಅನುಭವಿಸಿದರು. ಕಾರ್ಯತಃ, ಯೆಹೋವನ ಜನರು ತಮ್ಮ ಆರಾಧನೆಯ “ನಿತ್ಯಹೋಮ”ದೋಪಾದಿ ಆತನಿಗೆ ಕ್ರಮವಾಗಿ ಸಲ್ಲಿಸುವ ಸ್ತುತಿ ಯಜ್ಞವನ್ನು, ಅಂದರೆ “ಬಾಯಿಂದ ಅರಿಕೆಮಾಡುವ” ಕಾರ್ಯವನ್ನು ಏಳನೆಯ ಲೋಕ ಶಕ್ತಿಯು ನಿಲ್ಲಿಸಲು ಪ್ರಯತ್ನಿಸಿತು. (ಇಬ್ರಿಯ 13:15) ಹೀಗೆ, ಆ ಲೋಕ ಶಕ್ತಿಯು, ಪರಾತ್ಪರ ದೇವರಿಗೆ ಸೇರಿದ ಕ್ಷೇತ್ರದ ಮೇಲೆ, ಅಂದರೆ ಆತನ “ಪವಿತ್ರಸ್ಥಾನ”ದ ಮೇಲೆ ಆಕ್ರಮಣ ಮಾಡುವಷ್ಟು “ನೀಚತನ”ವನ್ನು ತೋರಿಸಿತು.
23. (ಎ) ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯು ಹೇಗೆ “ಪ್ರಭುಗಳ ಪ್ರಭು”ವಿನ ವಿರುದ್ಧ ಎದ್ದಿತ್ತು? (ಬಿ) “ಪ್ರಭುಗಳ ಪ್ರಭು” ಯಾರಾಗಿದ್ದಾನೆ?
23 ಎರಡನೆಯ ಲೋಕ ಯುದ್ಧದ ಸಮಯದಲ್ಲಿ “ಪವಿತ್ರ ಜನರ”ನ್ನು ಹಿಂಸಿಸುವ ಮೂಲಕ, ಆ ಚಿಕ್ಕ ಕೊಂಬು “ಗಣದ ಅಧಿಪತಿಯನ್ನೂ ಎದುರಿಸುವಷ್ಟ”ರ ಮಟ್ಟಿಗೆ “ಉಬ್ಬಿ”ಹೋಯಿತು. ಅಥವಾ, ಗಬ್ರಿಯೇಲ ದೇವದೂತನು ಹೇಳುವಂತೆ, ಅದು “ಪ್ರಭುಗಳ ಪ್ರಭು”ವಿನ ವಿರುದ್ಧ ಎದ್ದಿತ್ತು. (ದಾನಿಯೇಲ 8:11, 25) “ಪ್ರಭುಗಳ ಪ್ರಭು” ಎಂಬ ಬಿರುದು, ಸಂಪೂರ್ಣವಾಗಿ ಯೆಹೋವ ದೇವರಿಗೆ ಅನ್ವಯಿಸುತ್ತದೆ. “ಪ್ರಭು” ಎಂದು ಭಾಷಾಂತರಿಸಲ್ಪಟ್ಟಿರುವ ಸಾರ್ ಎಂಬ ಹೀಬ್ರು ಶಬ್ದವು, “ಆಧಿಪತ್ಯ ನಡಿಸು” ಎಂಬರ್ಥ ಕೊಡುವ ಕ್ರಿಯಾಪದಕ್ಕೆ ಸಂಬಂಧಿಸುತ್ತದೆ. ಇದು ಒಬ್ಬ ರಾಜಪುತ್ರನಿಗೆ ಅಥವಾ ರಾಜಮನೆತನದ ಒಬ್ಬ ವ್ಯಕ್ತಿಗೆ ಅನ್ವಯವಾಗುತ್ತದೆ. ದಾನಿಯೇಲ ಪುಸ್ತಕವು ಇತರ ದೇವದೂತ ಪ್ರಭುಗಳ ಬಗ್ಗೆ ಪ್ರಸ್ತಾಪಿಸುತ್ತದೆ—ಉದಾಹರಣೆಗಾಗಿ, ಮೀಕಾಯೇಲ. ಅಂತಹ ಎಲ್ಲ ಪ್ರಭುಗಳ ಪ್ರಭುವು ದೇವರೇ ಆಗಿದ್ದಾನೆ. (ದಾನಿಯೇಲ 10:13, 21; ಹೋಲಿಸಿರಿ ಕೀರ್ತನೆ 83:18.) ಪ್ರಭುಗಳ ಪ್ರಭುವಾಗಿರುವ ಯೆಹೋವನ ವಿರುದ್ಧ ಯಾರಾದರೂ ಏಳಸಾಧ್ಯವಿದೆ ಎಂಬುದನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿದೆಯೊ?
“ಪವಿತ್ರ ಸ್ಥಳ”ವು ಸುಸ್ಥಿತಿಗೆ ತರಲ್ಪಟ್ಟದ್ದು
24. ದಾನಿಯೇಲ 8:14 ನಮಗೆ ಯಾವ ಆಶ್ವಾಸನೆಯನ್ನು ಕೊಡುತ್ತದೆ?
24 ಯಾರೊಬ್ಬರೂ, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯಂತಹ “ಕಠಿಣಮುಖದ” ಅರಸನು ಸಹ, ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಏಳಲು ಸಾಧ್ಯವಿಲ್ಲ! ದೇವರ ಪವಿತ್ರಸ್ಥಾನವನ್ನು ನಿರ್ಜನಗೊಳಿಸಲು ಮಾಡಲ್ಪಟ್ಟ ಈ ಅರಸನ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರರ” ಕಾಲಾವಧಿಯು ಮುಗಿದ ಬಳಿಕ, “ಪವಿತ್ರ ಸ್ಥಳವು ಖಂಡಿತವಾಗಿಯೂ ಸುಸ್ಥಿತಿಗೆ ತರಲ್ಪಡುವುದು” ಅಥವಾ “ಜಯಶಾಲಿಯಾಗಿ ಹೊರಬರುವುದು.”—ದಾನಿಯೇಲ 8:13, 14; ದ ನ್ಯೂ ಇಂಗ್ಲಿಷ್ ಬೈಬಲ್.
25. ಪ್ರವಾದನಾತ್ಮಕವಾದ 2,300 ದಿನಗಳ ಕಾಲಾವಧಿಯು ಎಷ್ಟು ದೀರ್ಘವಾದದ್ದಾಗಿದೆ, ಮತ್ತು ಯಾವ ಘಟನೆಯೊಂದಿಗೆ ಇದನ್ನು ಸಂಬಂಧಿಸತಕ್ಕದ್ದು?
25 ಎರಡು ಸಾವಿರದ ಮುನ್ನೂರು ದಿನಗಳು, ಒಂದು ಪ್ರವಾದನಾತ್ಮಕ ಕಾಲಾವಧಿಯಾಗಿದೆ. ಆದುದರಿಂದ, 360 ದಿನಗಳ ಒಂದು ಪ್ರವಾದನಾತ್ಮಕ ವರ್ಷವು ಇದರಲ್ಲಿ ಒಳಗೂಡಿದೆ. (ಪ್ರಕಟನೆ 11:2, 3; 12:6, 14) ಹಾಗಾದರೆ, ಈ 2,300 ದಿನಗಳು, 6 ಚಾಂದ್ರಮಾನ ವರ್ಷಗಳು, 4 ಚಾಂದ್ರಮಾನ ತಿಂಗಳುಗಳು, ಮತ್ತು 20 ದಿನಗಳಿಗೆ ಸಮಾನವಾಗಿವೆ. ಇದು ಯಾವ ಕಾಲಾವಧಿಯಾಗಿತ್ತು? 1930ಗಳಲ್ಲಿ, ದೇವಜನರು ಅನೇಕ ದೇಶಗಳಲ್ಲಿ ಅತ್ಯಧಿಕ ಹಿಂಸೆಯನ್ನು ಅನುಭವಿಸತೊಡಗಿದರು. ಮತ್ತು IIನೆಯ ಲೋಕ ಯುದ್ಧದ ಸಮಯದಲ್ಲಿ, ಆ್ಯಂಗ್ಲೊ-ಅಮೆರಿಕನ್ ಉಭಯ ಲೋಕ ಶಕ್ತಿಯು ಆಳ್ವಿಕೆ ನಡಿಸುತ್ತಿದ್ದ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಘೋರವಾಗಿ ಹಿಂಸಿಸಲ್ಪಟ್ಟರು. ಏಕೆ? ‘ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಲು’ ಅವರು ಪಟ್ಟುಹಿಡಿದಿದ್ದರಿಂದಲೇ. (ಅ. ಕೃತ್ಯಗಳು 5:29) ಆದುದರಿಂದ, 2,300 ದಿನಗಳು ಆ ಯುದ್ಧದ ಕಾಲಾವಧಿಗೇ ಸಂಬಂಧಿಸಿದ್ದಾಗಿರಬೇಕು.b ಆದರೆ ಈ ಪ್ರವಾದನಾತ್ಮಕ ಕಾಲಾವಧಿಯ ಆರಂಭ ಹಾಗೂ ಅಂತ್ಯದ ಕುರಿತು ಏನು ಹೇಳಸಾಧ್ಯವಿದೆ?
26. (ಎ) ಬಹಳ ಮುಂಚೆಯೆಂದರೆ, 2,300 ದಿನಗಳ ಎಣಿಕೆಯು ಯಾವಾಗಿನಿಂದ ಆರಂಭಿಸಲ್ಪಡತಕ್ಕದ್ದು? (ಬಿ) 2,300 ದಿನಗಳ ಕಾಲಾವಧಿಯು ಯಾವಾಗ ಅಂತ್ಯಗೊಂಡಿತು?
26 “ಪವಿತ್ರ ಸ್ಥಳ”ವು ಯಾವ ಸ್ಥಿತಿಯಲ್ಲಿರಬೇಕಿತ್ತೋ ಆ ಸ್ಥಿತಿಗೆ ಪುನಃ ತರಲ್ಪಡಲಿಕ್ಕಾಗಿ, ಈ ಮುಂಚೆ ಅದು ದೇವರ ದೃಷ್ಟಿಕೋನದಲ್ಲಿ “ಸುಸ್ಥಿತಿ”ಯಲ್ಲಿದ್ದ ಸಮಯದಿಂದ, 2,300 ದಿನಗಳು ಆರಂಭಗೊಂಡಿದ್ದಿರಬೇಕು. ಬಹಳ ಮುಂಚೆಯೆಂದರೆ, ಇದು 1938, ಜೂನ್ 1ರಿಂದ ಆರಂಭವಾಗಲಿತ್ತು; ಆಗ ದ ವಾಚ್ಟವರ್ ಪತ್ರಿಕೆಯು, “ಸಂಸ್ಥೆ” ಎಂಬ ಶಿರೋನಾಮವಿದ್ದ ಲೇಖನದ ಭಾಗ 1ನ್ನು ಪ್ರಕಟಿಸಿತು. 1938, ಜೂನ್ 15ರ ಸಂಚಿಕೆಯಲ್ಲಿ ಭಾಗ 2 ಪ್ರಕಟವಾಯಿತು. 1938ರ ಜೂನ್ 1 ಅಥವಾ 15ರಿಂದ 2,300 ದಿನಗಳನ್ನು (ಹೀಬ್ರು ಕ್ಯಾಲೆಂಡರ್ನಲ್ಲಿ 6 ವರ್ಷಗಳು, 4 ತಿಂಗಳುಗಳು, ಹಾಗೂ 20 ದಿನಗಳನ್ನು) ಲೆಕ್ಕಿಸುವಲ್ಲಿ, ಅದು ನಮ್ಮನ್ನು 1944ರ ಅಕ್ಟೋಬರ್ 8 ಅಥವಾ 22ಕ್ಕೆ ತಂದು ಮುಟ್ಟಿಸುತ್ತದೆ. ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಪಿಟ್ಸ್ಬರ್ಗ್ನಲ್ಲಿ, 1944ರ ಸೆಪ್ಟಂಬರ್ 30 ಹಾಗೂ ಅಕ್ಟೋಬರ್ 1ರಂದು ನಡೆದ ಒಂದು ವಿಶೇಷ ಸಮ್ಮೇಳನದ ಮೊದಲನೆಯ ದಿನದಂದು, ವಾಚ್ ಟವರ್ ಸೊಸೈಟಿಯ ಅಧ್ಯಕ್ಷರು “ಇಂದು ದೇವಪ್ರಭುತ್ವ ಜೋಡಣೆ” ಎಂಬ ವಿಷಯದ ಕುರಿತು ಮಾತಾಡಿದರು. ಅಕ್ಟೋಬರ್ 2ರಂದು ನಡೆದ ಸಂಸ್ಥೆಯ ವಾರ್ಷಿಕ ಕೂಟದಲ್ಲಿ, ಸೊಸೈಟಿಯ ಶಾಸನವನ್ನು ದೇವಪ್ರಭುತ್ವ ಏರ್ಪಾಡಿಗೆ ಕಾನೂನು ಅನುಮತಿಸುವಷ್ಟು ಹತ್ತಿರ ತರಲು ತಿದ್ದುಪಾಟು ಮಾಡಲಾಯಿತು. ಮತ್ತು ಬೈಬಲ್ ಸಂಬಂಧಿತ ಆವಶ್ಯಕತೆಗಳು ಹೆಚ್ಚು ಸ್ಪಷ್ಟಗೊಳಿಸಲ್ಪಟ್ಟು ಪ್ರಕಾಶಿಸಲ್ಪಟ್ಟಾಗ, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಬೇಗನೆ ದೇವಪ್ರಭುತ್ವ ವ್ಯವಸ್ಥಾಪನೆಯು ಸಂಪೂರ್ಣವಾಗಿ ಅಳವಡಿಸಲ್ಪಟ್ಟಿತು.
27. ಹಿಂಸೆಯಿಂದ ಕೂಡಿದ IIನೆಯ ಲೋಕ ಯುದ್ಧದ ವರ್ಷಗಳಲ್ಲಿ, “ನಿತ್ಯಹೋಮ”ವು ಕಟ್ಟುನಿಟ್ಟಾಗಿ ನಿರ್ಬಂಧಿಸಲ್ಪಟ್ಟಿತು ಎಂಬುದಕ್ಕೆ ಯಾವ ಪುರಾವೆಯಿತ್ತು?
27 ಇಸವಿ 1939ರಲ್ಲಿ ಆರಂಭವಾದ IIನೆಯ ಲೋಕ ಯುದ್ಧದ ಸಮಯದಲ್ಲಿ 2,300 ದಿನಗಳು ಜಾರಿಯಲ್ಲಿದ್ದಾಗ, ಹಿಂಸೆಯ ಕಾರಣದಿಂದ ದೇವರ ಪವಿತ್ರಸ್ಥಾನದ “ನಿತ್ಯಹೋಮ”ದ ಅರ್ಪಣೆಯು ಕಟ್ಟುನಿಟ್ಟಾಗಿ ನಿರ್ಬಂಧಕ್ಕೊಳಗಾಯಿತು. 1938ರಲ್ಲಿ, ಲೋಕವ್ಯಾಪಕವಾಗಿರುವ ಸಾಕ್ಷಿಗಳ ಕೆಲಸದ ಮೇಲ್ವಿಚಾರಣೆಗಾಗಿ, ವಾಚ್ ಟವರ್ ಸೊಸೈಟಿಯ 39 ಬ್ರಾಂಚ್ಗಳು ಇದ್ದವು, ಆದರೆ 1943ರಷ್ಟಕ್ಕೆ, ಕೇವಲ 21 ಬ್ರಾಂಚ್ಗಳು ಇದ್ದವು. ಆ ಸಮಯಾವಧಿಯಲ್ಲಿ ರಾಜ್ಯ ಘೋಷಕರ ಅಭಿವೃದ್ಧಿಯು ಸಹ ತುಂಬ ಕಡಿಮೆಯಾಗಿತ್ತು.
28, 29. (ಎ) ಎರಡನೆಯ ಲೋಕ ಯುದ್ಧವು ಕೊನೆಗೊಳ್ಳುತ್ತಿದ್ದಂತೆ, ಯೆಹೋವನ ಸಂಸ್ಥೆಯಲ್ಲಿ ಏನು ಸಂಭವಿಸಿತು? (ಬಿ) “ಪವಿತ್ರ ಸ್ಥಳ”ವನ್ನು ನಿರ್ಜನಗೊಳಿಸಿ, ಅದನ್ನು ನಾಶಪಡಿಸಲಿಕ್ಕಾಗಿ ವೈರಿಯು ಮಾಡಿದ ಪ್ರಯತ್ನಗಳ ಕುರಿತು ಏನು ಹೇಳಸಾಧ್ಯವಿದೆ?
28 ನಾವು ಗಮನಿಸಿರುವಂತೆ, ಎರಡನೆಯ ಲೋಕ ಯುದ್ಧದ ಕೊನೆಯ ತಿಂಗಳುಗಳಲ್ಲಿ, ಯೆಹೋವನ ಸಾಕ್ಷಿಗಳು ಒಂದು ದೇವಪ್ರಭುತ್ವ ಸಂಸ್ಥೆಯೋಪಾದಿ ದೇವರ ಸೇವೆಮಾಡುತ್ತಾ, ಆತನ ಆಳ್ವಿಕೆಯನ್ನು ಘನತೆಗೇರಿಸುವ ತಮ್ಮ ನಿರ್ಧಾರವನ್ನು ದೃಢಪಡಿಸಿದರು. ಈ ಉದ್ದೇಶದಿಂದಲೇ 1944ರಲ್ಲಿ ಅವರ ಕೆಲಸ ಹಾಗೂ ಆಡಳಿತ ರಚನೆಯನ್ನು ಪುನಃ ವ್ಯವಸ್ಥಾಪಿಸಲಾಯಿತು. ವಾಸ್ತವದಲ್ಲಿ, 1944, ಅಕ್ಟೋಬರ್ 15ರ ದ ವಾಚ್ಟವರ್ ಪತ್ರಿಕೆಯಲ್ಲಿ, “ಅಂತಿಮ ಕಾರ್ಯಕ್ಕಾಗಿ ಸಂಘಟಿಸಲ್ಪಟ್ಟವರು” ಎಂಬ ಶೀರ್ಷಿಕೆಯಿದ್ದ ಲೇಖನವು ಕೊಡಲ್ಪಟ್ಟಿತ್ತು. ಅದೇ ಸಮಯದಲ್ಲಿ ಪ್ರಕಾಶಿಸಲ್ಪಟ್ಟ ಈ ಲೇಖನ ಹಾಗೂ ಸೇವೆಗೆ ಸಂಬಂಧಿಸಿದ ಇನ್ನಿತರ ಲೇಖನಗಳು, 2,300 ದಿನಗಳು ಕೊನೆಗೊಂಡಿದ್ದವು ಹಾಗೂ “ಪವಿತ್ರ ಸ್ಥಳ”ವು “ಸುಸ್ಥಿತಿಗೆ ತರಲ್ಪಟ್ಟಿದೆ” ಎಂಬುದನ್ನು ಸೂಚಿಸಿದವು.
29 “ಪವಿತ್ರ ಸ್ಥಳ”ವನ್ನು ನಿರ್ಜನವಾಗಿ ಮಾಡಿ, ಅದನ್ನು ನಾಶಪಡಿಸಲಿಕ್ಕಾಗಿ ವೈರಿಯು ಮಾಡಿದ ಪ್ರಯತ್ನವು, ಸಂಪೂರ್ಣವಾಗಿ ಅಸಫಲವಾಗಿತ್ತು. ಅಷ್ಟುಮಾತ್ರವಲ್ಲ, ಭೂಮಿಯ ಮೇಲಿದ್ದ “ಪವಿತ್ರ ಜನರ”ಲ್ಲಿ ಉಳಿಕೆಯವರು, ಹಾಗೂ ಅವರ ಸಂಗಡಿಗರಾದ “ಮಹಾ ಸಮೂಹ”ದವರು ಜಯಶೀಲರಾಗಿ ಹೊರಬಂದಿದ್ದರು. (ಪ್ರಕಟನೆ 7:9) ಮತ್ತು ದೇವಪ್ರಭುತ್ವಕ್ಕೆ ಯೋಗ್ಯವಾದ ಸ್ಥಿತಿಯಲ್ಲಿರುವ ಪವಿತ್ರಸ್ಥಾನವು, ಈಗ ಯೆಹೋವನಿಗೆ ಪವಿತ್ರ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಿದೆ.
30. ಅತಿ ಬೇಗನೆ “ಕಠಿಣಮುಖದ” ಅರಸನಿಗೆ ಏನು ಸಂಭವಿಸಲಿದೆ?
30 ಇನ್ನೂ ಕೂಡ ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯು ಅಧಿಕಾರದಲ್ಲಿದೆ. ಆದರೆ ಅದು “ಯಾರ ಕೈಯೂ ಸೋಕದೆ ಹಾಳಾಗು”ವುದು ಎಂದು ಗಬ್ರಿಯೇಲ ದೇವದೂತನು ಹೇಳಿದನು. (ದಾನಿಯೇಲ 8:25) ಅತಿ ಬೇಗನೆ, ಬೈಬಲ್ ಪ್ರವಾದನೆಯ ಈ ಏಳನೆಯ ಲೋಕ ಶಕ್ತಿಯು—“ಕಠಿಣಮುಖದ” ಅರಸನು—ಮುರಿದುಹಾಕಲ್ಪಡುವನು, ಆದರೆ ಮಾನವ ಕೈಗಳಿಂದಲ್ಲ, ಬದಲಾಗಿ ಅರ್ಮಗೆದೋನ್ ಯುದ್ಧದಲ್ಲಿ ಅಮಾನುಷ ಶಕ್ತಿಯಿಂದ ಹತನಾಗುವನು. (ದಾನಿಯೇಲ 2:44; ಪ್ರಕಟನೆ 16:14, 16) ಆಗ, ಪ್ರಭುಗಳ ಪ್ರಭುವಾಗಿರುವ ಯೆಹೋವ ದೇವರ ಪರಮಾಧಿಕಾರವು ಸಮರ್ಥಿಸಲ್ಪಡುವುದು ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ರೋಮಾಂಚಕ ಸಂಗತಿ!
[ಅಧ್ಯಯನ ಪ್ರಶ್ನೆಗಳು]
a ಬೈಬಲು ವಿಶೇಷವಾದ ಮಹತ್ವವನ್ನು ಕೊಡುವ ಏಳು ಲೋಕ ಶಕ್ತಿಗಳು ಯಾವುವೆಂದರೆ, ಐಗುಪ್ತ, ಅಶ್ಶೂರ್ಯ, ಬಾಬೆಲ್, ಮೇದ್ಯಯ-ಪಾರಸಿಯ, ಗ್ರೀಕ್, ರೋಮ್, ಹಾಗೂ ಆ್ಯಂಗ್ಲೊ-ಅಮೆರಿಕನ್ ಉಭಯ ಶಕ್ತಿ. ಈ ಎಲ್ಲ ಲೋಕ ಶಕ್ತಿಗಳು ತುಂಬ ಗಮನಾರ್ಹವಾಗಿವೆ, ಏಕೆಂದರೆ ಇವೆಲ್ಲವೂ ಯೆಹೋವನ ಜನರೊಂದಿಗೆ ವ್ಯವಹರಿಸಿದ್ದವು.
b ದಾನಿಯೇಲ 7:25ನೆಯ ವಚನವು ಸಹ, ‘ಪರಾತ್ಪರನ ಪವಿತ್ರ ಜನರು ಸತತವಾಗಿ ಪೀಡಿಸಲ್ಪಡುವ’ ಕಾಲಾವಧಿಯ ಕುರಿತು ಮಾತಾಡುತ್ತದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಲ್ಪಟ್ಟಂತೆ, ಈ ಅವಧಿಯು ಮೊದಲನೆಯ ಲೋಕ ಯುದ್ಧದೊಂದಿಗೆ ಸಂಬಂಧಿಸಿತ್ತು.
ನೀವೇನನ್ನು ಗ್ರಹಿಸಿದಿರಿ?
• ಇವು ಏನನ್ನು ಚಿತ್ರಿಸುತ್ತವೆ—
“ಎರಡು ಕೊಂಬಿ”ನ “ಟಗರು”?
“ಹೋತ” ಹಾಗೂ ಅದರ “ದೊಡ್ಡ ಕೊಂಬು”?
“ದೊಡ್ಡ ಕೊಂಬಿನ” ಸ್ಥಾನದಲ್ಲಿ ಮೊಳೆತ ನಾಲ್ಕು ಕೊಂಬುಗಳು?
ನಾಲ್ಕು ಕೊಂಬುಗಳಲ್ಲಿ ಒಂದರಿಂದ ಮೊಳೆತ ಚಿಕ್ಕ ಕೊಂಬು?
• ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯು ಹೇಗೆ “ಪವಿತ್ರ ಸ್ಥಳ”ವನ್ನು ನಿರ್ಜನ ಮಾಡಲು ಪ್ರಯತ್ನಿಸಿತು, ಮತ್ತು ಅದು ಯಶಸ್ವಿಯಾಯಿತೊ?
[Map/Picture on page 166]
(For fully formatted text, see publication)
ಮೇದ್ಯಯಪಾರಸಿಯ ಸಾಮ್ರಾಜ್ಯ
ಮ್ಯಾಸಿಡೋನಿಯ
ಈಜಿಪ್ಟ್
ಮೆಂಫಿಸ್
ಇಥಿಯೋಪಿಯ
ಯೆರೂಸಲೇಮ್
ಬಾಬೆಲ್
ಎಕ್ಬ್ಯಾಟನ
ಸೂಸ
ಪರ್ಸಿಪೊಲಿಸ್
ಭಾರತ
[Map/Picture on page 169]
(For fully formatted text, see publication)
ಗ್ರೀಕ್ ಸಾಮ್ರಾಜ್ಯ
ಮ್ಯಾಸಿಡೋನಿಯ
ಬಾಬೆಲ್
ಈಜಿಪ್ಟ್
ಸಿಂಧೂ ನದಿ
[Map on page 172]
(For fully formatted text, see publication)
ರೋಮನ್ ಸಾಮ್ರಾಜ್ಯ
ಬ್ರಿಟ್ಯಾನಿಯ
ಇಟಲಿ
ರೋಮ್
ಯೆರೂಸಲೇಮ್
ಈಜಿಪ್ಟ್
[ಪುಟ 275 ರಲ್ಲಿ ಇಡೀ ಪುಟದ ಚಿತ್ರ]
[ಪುಟ 285 ರಲ್ಲಿರುವ ಚಿತ್ರಗಳು]
ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯ ಪ್ರಮುಖ ವ್ಯಕ್ತಿಗಳಲ್ಲಿ ಕೆಲವರು:
1. ಜಾರ್ಜ್ ವಾಷಿಂಗ್ಟನ್, ಅಮೆರಿಕದ ಪ್ರಥಮ ಅಧ್ಯಕ್ಷರು (1789-97)
2. ಬ್ರಿಟನ್ನ ವಿಕ್ಟೋರಿಯ ರಾಣಿ (1837-1901)
3. ವುಡ್ರೋ ವಿಲ್ಸನ್, ಅಮೆರಿಕದ ಅಧ್ಯಕ್ಷರು (1913-21)
4. ಡೇವಿಡ್ ಲಾಯ್ಡ್ ಜಾರ್ಜ್, ಬ್ರಿಟನಿನ ಪ್ರಧಾನ ಮಂತ್ರಿ (1916-22)
5. ವಿನ್ಸ್ಟನ್ ಚರ್ಚಿಲ್, ಬ್ರಿಟನಿನ ಪ್ರಧಾನ ಮಂತ್ರಿ (1940-45, 1951-55)
6. ಫ್ರ್ಯಾಂಕ್ಲಿನ್ ಡಿ. ರೂಸ್ವೆಲ್ಟ್, ಅಮೆರಿಕದ ಅಧ್ಯಕ್ಷರು (1933-45)