ಮಹಾ ಪ್ರಭು ಮೀಕಾಯೇಲನ ಅಂತಿಮ ವಿಜಯ
“ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕನಾದ [ಮಹಾ ಪ್ರಭು, NW] ಮೀಕಾಯೇಲನು ಆ ಕಾಲದಲ್ಲಿ ಏಳುವನು.”—ದಾನಿಯೇಲ 12:1.
1. ಯೆಹೋವನ ಪರಮಾಧಿಕಾರದ ಕಡೆಗೆ ಹೆಚ್ಚಿನ ಲೋಕಾಧಿಪತಿಗಳು ಯಾವ ಮನೋಭಾವವನ್ನು ಪ್ರದರ್ಶಿಸಿದ್ದಾರೆ, ಮತ್ತು ಉತ್ತರದ ರಾಜನು ಹೇಗೆ ಭಿನ್ನವಾಗಿಲ್ಲ?
“ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ?” (ವಿಮೋಚನಕಾಂಡ 5:2) ಇವು ಮೋಶೆಗೆ ಫರೋಹನ ಮೂದಲಿಸುವ ಮಾತುಗಳಾಗಿದ್ದವು. ಯೆಹೋವನ ಅತ್ಯುಚ್ಚ ದೈವತ್ವವನ್ನು ಅಂಗೀಕರಿಸಲು ನಿರಾಕರಿಸುತ್ತಾ, ಇಸ್ರಾಯೇಲ್ಯರನ್ನು ದಾಸತ್ವದಲಿಡ್ಲಲು ಫರೋಹನು ದೃಢ ನಿಶ್ಚಯ ಮಾಡಿದ್ದನು. ಬೇರೆ ಅಧಿಪತಿಗಳು ಸಹ ಯೆಹೋವನಿಗೆ ಅದೇ ರೀತಿಯ ಧಿಕ್ಕಾರವನ್ನು ತೋರಿಸಿದ್ದರು, ಮತ್ತು ದಾನಿಯೇಲನ ಪ್ರವಾದನೆಯ ರಾಜರು ಇದಕ್ಕೆ ಹೊರತಾಗಿರಲಿಲ್ಲ. (ಯೆಶಾಯ 36:13-20) ಉತ್ತರದ ರಾಜನು ಅಧಿಕ ದೂರ ಹೋಗಿದ್ದಾನೆ ನಿಶ್ಚಯ. ದೇವದೂತನು ಅನ್ನುವುದು: “ರಾಜನು ಮನಸ್ಸುಬಂದ ಹಾಗೆ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಉಬ್ಬಿ ದೇವಾಧಿದೇವನನ್ನು ದೂಷಿಸುವನು. . . . ಅವನು ಪಿತೃಗಳ ದೇವರುಗಳನ್ನಾಗಲಿ ಸ್ತ್ರೀಯರು ಮೋಹಿಸುವ ದೇವರನ್ನಾಗಲಿ ಯಾವ ದೇವರನ್ನಾಗಲಿ ಲಕ್ಷಿಸನು. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.”—ದಾನಿಯೇಲ 11:36, 37.
2, 3. ಇನ್ನೊಂದು “ದೇವರನ್ನು” ಆರಾಧಿಸುವ ಒಲವಿನಲ್ಲಿ, ಉತ್ತರದ ರಾಜನು “ತನ್ನ ಪಿತೃಗಳ ದೇವರನ್ನು” ತಿರಸ್ಕರಿಸಿದ್ದು ಯಾವ ರೀತಿಯಲ್ಲಿ?
2 ಈ ಪ್ರವಾದನಾ ಮಾತುಗಳನ್ನು ನೆರವೇರಿಸುತ್ತಾ, ಉತ್ತರದ ರಾಜನು “ತನ್ನ ಪಿತೃಗಳ ದೇವರನ್ನು” (ಅಥವಾ, “ತನ್ನ ಪೂರ್ವಜರ ದೇವರನ್ನು,” ದ ನ್ಯೂ ಇಂಗ್ಲಿಷ್ ಬೈಬಲ್),—ಅವು ರೋಮಿನ ವಿಧರ್ಮಿ ದೇವರುಗಳಾಗಿರಲಿ ಯಾ ಕ್ರೈಸ್ತಪ್ರಪಂಚದ ತ್ರಯೈಕ್ಯವಾದದ ದೈವತ್ವವಾಗಿರಲಿ—ತಿರಸ್ಕರಿಸಿದನು. ಹಿಟ್ಲರನು ಕ್ರೈಸ್ತ ಪ್ರಪಂಚವೆಂಬಾಕೆಯನ್ನು ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಸಿದನು, ಆದರೆ ಆಕೆಯನ್ನು ಒಂದು ಹೊಸ ಜರ್ಮನರ ಚರ್ಚಿನೊಂದಿಗೆ ಸ್ಥಾನಪಲ್ಲಟಮಾಡಲು ಯೋಜಿಸಿದ್ದನೆಂಬುದು ವ್ಯಕ್ತ. ಉತ್ತರದ ರಾಜನ ಉತ್ತರಾಧಿಕಾರಿಯು ಸಂಪೂರ್ಣ ನಾಸ್ತಿಕವಾದವನ್ನು ಪ್ರವರ್ಧಿಸಿದನು. ಹೀಗೆ ಉತ್ತರದ ಅರಸನು ‘ಎಲ್ಲರಿಗಿಂತಲೂ ತನ್ನನ್ನು ಹೆಚ್ಚಿಸಿಕೊಂಡು,’ ತನ್ನನ್ನು ಒಬ್ಬ ದೇವರನ್ನಾಗಿ ಮಾಡಿಕೊಂಡನು.
3 ಪ್ರವಾದನೆಯು ಮುಂದುವರಿಸಿದ್ದು: “ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿದೇವರನ್ನು ಘನಪಡಿಸುವನು; ಪಿತೃಗಳಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯವಸ್ತುಗಳಿಂದಲೂ ಸೇವಿಸುವನು.” (ದಾನಿಯೇಲ 11:38) ವಾಸ್ತವದಲ್ಲಿ, ಉತ್ತರದ ರಾಜನು ತನ್ನ ಭರವಸೆಯನ್ನು ಆಧುನಿಕ ವೈಜ್ಞಾನಿಕ ಸೇನಾಬಲದಲ್ಲಿ, “ದುರ್ಗಾಭಿಮಾನಿ ದೇವರಲ್ಲಿ” ಇಟ್ಟಿದ್ದಾನೆ. ಅಂತ್ಯಕಾಲದಲ್ಲಿಲ್ಲಾ, ಅವನು ಈ “ದೇವರ” ಮೂಲಕ ರಕ್ಷಣೆಯನ್ನು ಕೋರುತ್ತಾ, ಅದರ ಬಲಿಪೀಠದ ಮೇಲೆ ಅಪಾರವಾದ ಐಶ್ವರ್ಯವನ್ನು ಅರ್ಪಿಸಿರುತ್ತಾನೆ.
4. ಉತ್ತರದ ರಾಜನಿಗೆ ಯಾವ ಸಾಫಲ್ಯವು ದೊರೆಯಿತು?
4 “ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು; ಯಾರನ್ನು ಕಟಾಕ್ಷಿಸುವನೋ ಅವರಿಗೆ ಮಹಿಮೆ ಹೆಚ್ಚುವದು; ಬಹುಜನರ ಮೇಲೆ ಆಳಿಕೆಯನ್ನು ಕೊಡುವನು; ದೇಶವನ್ನು ಕ್ರಯಕ್ಕೆ ಹಂಚುವನು.” (ದಾನಿಯೇಲ 11:39) ತನ್ನ ಸೈನ್ಯಬಲದ “ಅನ್ಯದೇವರಲ್ಲಿ” ಭರವಸೆಯಿಡುತ್ತಾ, ಉತ್ತರದ ರಾಜನು “ಕಡೇ ದಿವಸ” ಗಳಲ್ಲಿ ಒಂದು ಪ್ರಬಲ ಮಿಲಿಟರಿ ಶಕ್ತಿಯಾಗಿ ರುಜುಪಡಿಸುತ್ತಾ, ಅತ್ಯಂತ “ಪರಿಣಾಮಕಾರಿಯಾಗಿ” ಕ್ರಿಯೆಗೈದಿದ್ದಾನೆ. (2 ತಿಮೊಥೆಯ 3:1) ಅವನ ಭಾವನಾಶಾಸ್ತ್ರವನ್ನು ಯಾರು ಬೆಂಬಲಿಸಿದರೋ ಅವರಿಗೆ ಪ್ರತಿಫಲವಾಗಿ ರಾಜಕೀಯ, ಆರ್ಥಿಕ, ಮತ್ತು ಕೆಲವು ಸಲ ಮಿಲಿಟರಿ ಬೆಂಬಲವು ದೊರೆತಿರುತ್ತದೆ.
“ಅಂತ್ಯಕಾಲದಲ್ಲಿ”
5, 6. ದಕ್ಷಿಣದ ರಾಜನು ‘ತಳ್ಳಾಟ ನಡಿಸಿದ್ದು’ ಹೇಗೆ, ಮತ್ತು ಉತ್ತರದ ರಾಜನು ಹೇಗೆ ಪ್ರತಿಕ್ರಿಯಿಸಿದನು?
5 ದಾನಿಯೇಲ 11:40ಎ ಓದುವುದು: “ಅಂತ್ಯಕಾಲದಲ್ಲಿ ದಕ್ಷಿಣರಾಜನು ಉತ್ತರರಾಜನ ಮೇಲೆ ಬೀಳುವನು [ತಳ್ಳಾಟ ನಡಿಸುವನು, NW].” ಇದು ಮತ್ತು ಇದನ್ನು ಹಿಂಬಾಲಿಸುವ ವಚನಗಳು ನಮ್ಮ ಭವಿಷ್ಯತ್ತಿನಲ್ಲಿ ಒಂದು ನೆರವೇರಿಕೆಯನ್ನು ಪಡೆಯುವುದಾಗಿ ವೀಕ್ಷಿಸಲ್ಪಟ್ಟಿರುತ್ತವೆ. ಆದರೂ, ಇಲ್ಲಿ “ಅಂತ್ಯಕಾಲ”ವು, ದಾನಿಯೇಲ 12:4, 9 ರಲ್ಲಿ ಅದು ಕೊಡುವ ಅದೇ ಅರ್ಥದಲ್ಲಿದ್ದರೆ, ನಾವೀ ವಚನಗಳ ನೆರವೇರಿಕೆಗಾಗಿ ಕಡೇ ದಿವಸಗಳಲ್ಲೆಲ್ಲಾ ನೋಡಲಿಕ್ಕದೆ. ಈ ಸಮಯದಲ್ಲಿ ದಕ್ಷಿಣದ ರಾಜನು ಉತ್ತರದ ರಾಜನ ಮೇಲೆ ‘ತಳ್ಳಾಟ ನಡಿಸಿದನೋ?’ ಖಂಡಿತವಾಗಿಯೂ ಹೌದು. ಮೊದಲನೆಯ ಲೋಕ ಯುದ್ಧದ ಅನಂತರ ಶಿಕ್ಷಾರೂಪದ ಶಾಂತಿ ಸಂಧಾನವು ನಿಶ್ಚಯವಾಗಿ ಒಂದು ‘ತಳ್ಳಾಟ ನಡಿಸುವಿಕೆ’ ಯಾಗಿತ್ತು, ಪ್ರತೀಕಾರಕ್ಕಾಗಿ ಒಂದು ಕೆರಳಿಸುವಿಕೆಯಾಗಿತ್ತು. ಎರಡನೆಯ ಲೋಕ ಯುದ್ಧದಲ್ಲಿ ಅವನ ವಿಜಯದ ಅನಂತರ, ದಕ್ಷಿಣದ ರಾಜನು ಭಯಂಕರ ನ್ಯೂಕ್ಲಿಯರ್ ಶಸ್ತ್ರಗಳನ್ನು ತನ್ನ ಪ್ರತಿಸ್ಪರ್ಧಿಯ ಮೇಲೆ ಗುರಿಯಾಗಿಟ್ಟನು ಮತ್ತು ಪ್ರಬಲವಾದ ಮಿಲಿಟರಿ ಮೈತ್ರಿಯಾದ ನ್ಯಾಟೋ [NATO] ವನ್ನು ಅವನ ವಿರುದ್ಧವಾಗಿ ಸಂಘಟಿಸಿದನು. ವರುಷಗಳು ದಾಟಿಹೋದಂತೆ, ಅವನ “ತಳ್ಳಾಟ” ದಲ್ಲಿ ಉಚ್ಚ-ತಂತ್ರದ ಬೇಹು ಹಾಗೂ ರಾಯಭಾರ ಕೌಶಲ್ಯ ಮತ್ತು ಮಿಲಿಟರಿ ಆಕ್ರಮಣಗಳು ಸೇರಿದ್ದವು.
6 ಉತ್ತರದ ರಾಜನು ಹೇಗೆ ಪ್ರತಿಕ್ರಿಯಿಸಿದನು? “ಅವನು ರಧಾಶ್ವಬಲಗಳಿಂದಲೂ ಬಹು ನಾವೆಗಳಿಂದಲೂ ಕೂಡಿ ದಕ್ಷಿಣರಾಜನ ಮೇಲೆ ರಭಸವಾಗಿ ಬಿದ್ದು ನಾಡುನಾಡುಗಳಲ್ಲಿ ನುಗ್ಗಿ ತುಂಬಿತುಳುಕಿ ಹರಡಿಕೊಳ್ಳುವನು.” (ದಾನಿಯೇಲ 11:40ಬಿ) ಅಂತ್ಯಕಾಲದ ಇತಿಹಾಸವು ಉತ್ತರದ ರಾಜನ ರಾಜ್ಯವಿಸ್ತಾರ್ಯ ವೈಶಿಷ್ಟ್ಯವನ್ನು ಗುರುತಿಸಿಯದೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ನಾಜೀ “ರಾಜನು” ತನ್ನ ಸೀಮೆಗಳನ್ನು ಮೀರಿ ಸುತ್ತಲಿನ ದೇಶಗಳೊಳಗೆ ಹರಡಿಕೊಂಡನು. ಆ ಯುದ್ಧದ ಕೊನೆಯಲ್ಲಿ, ಉತ್ತರಾಧಿಕಾರಿ “ರಾಜನು” ತನ್ನ ಸ್ವಂತ ಎಲ್ಲೆಗಳ ಹೊರಗೆ ಒಂದು ಪ್ರಬಲವಾದ ಸಾಮ್ರಾಜ್ಯವನ್ನು ಕಟ್ಟಿದನು. ಶೀತಲ ಯುದ್ಧದ ಸಮಯದಲ್ಲಿ, ಉತ್ತರದ ರಾಜನು ಆಫ್ರಿಕ, ಏಷ್ಯಾ, ಮತ್ತು ಲ್ಯಾಟಿನ್ ಅಮೆರಿಕಗಳ ಪ್ರಾತಿನಿಧ್ಯ ಯುದ್ಧಗಳಲ್ಲಿ ಮತ್ತು ಬಂಡಾಯಗಳಲ್ಲಿ ತನ್ನ ಪ್ರತಿದ್ವಂದಿಯೊಂದಿಗೆ ಹೋರಾಡಿದನು. ಅವನು ನಿಜ ಕ್ರೈಸ್ತರನ್ನು ಹಿಂಸಿಸಿದನು, ಅವರ ಚಟುವಟಿಕೆಯನ್ನು ಸೀಮಿತಗೊಳಿಸಿದನು (ಆದರೆ ನಿಲ್ಲಿಸಶಕ್ತನಾಗಲಿಲ್ಲ ಖಂಡಿತ). ಮತ್ತು ಅವನ ಮಿಲಿಟರಿ ಮತ್ತು ರಾಜಕೀಯ ಆಕ್ರಮಣಗಳು ಹಲವಾರು ದೇಶಗಳನ್ನು ಅವನ ಹತೋಟಿಯ ಕೆಳಗೆ ತಂದವು. ಇದು ದೇವದೂತನು ಪ್ರವಾದಿಸಿದ ಹಾಗೆಯೇ ಇತ್ತು: “(ಅವನು) ಅಂದಚಂದದ ದೇಶ [ದೇವರ ಜನರ ಆತ್ಮಿಕ ಆಸ್ತಿ]ಕ್ಕೂ ನುಗ್ಗುವನು; ಅನೇಕ ಸೀಮೆಗಳು ಅವನಿಂದ ಹಾಳಾಗುವವು.”—ದಾನಿಯೇಲ 11:41ಎ.
7. ಉತ್ತರದ ರಾಜನ ರಾಜ್ಯವಿಸ್ತಾರ್ಯಕ್ಕೆ ಯಾವ ಸೀಮಿತಗಳಿದ್ದವು?
7 ಆದರೂ, ಉತ್ತರದ ರಾಜನು—ಅವನ ಪ್ರತಿಸ್ಪರ್ಧಿಯ ವೀಕ್ಷಣದಲ್ಲಿ ಭಯಸೂಚಕ ದೃಶ್ಯವಾಗಿ ಕಾಣಿಸಿಕೊಂಡರೂ, ಅವನು ಜಾಗತಿಕ ವಿಜಯವನ್ನು ಗಳಿಸಿರುವುದಿಲ್ಲ. “ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು ಇವರುಗಳು ಅವನ ಕೈಯಿಂದ ತಪ್ಪಿಸಿಕೊಳ್ಳುವರು.” (ದಾನಿಯೇಲ 11:41ಬಿ) ಪುರಾತನ ಕಾಲಗಳಲ್ಲಿ ಎದೋಮ್, ಮೋವಾಬ್, ಮತ್ತು ಅಮ್ಮೋನ್ಗಳು ಸರಿಸುಮಾರಾಗಿ ಈಜಿಪ್ಟ್ ಮತ್ತು ಸಿರಿಯದ ನಡುವೆ ನೆಲೆಸಿದ್ದವು. ಅವನ್ನು ಉತ್ತರದ ರಾಜನು ಗುರಿಯಾಗಿಟ್ಟಿದ್ದ ಆದರೆ ತನ್ನ ಪ್ರಭಾವದ ಕೆಳಗೆ ತರಲು ಅಶಕ್ತನಾದ, ಇಂದಿನ ರಾಷ್ಟ್ರಗಳನ್ನು ಮತ್ತು ಸಂಘಟನೆಗಳನ್ನು ಪ್ರತಿನಿಧಿಸಲು ತೆಗೆದುಕೊಳ್ಳಬಹುದಾಗಿದೆ.
‘ಐಗುಪ್ತದೇಶವೂ ರಕ್ಷಿಸಿಕೊಳ್ಳದು’
8, 9. ಉತ್ತರದ ರಾಜನ ಪ್ರಭಾವವು, ಅವನ ಮುಖ್ಯ ಪ್ರತಿಸ್ಪರ್ಧಿಯಿಂದಲೂ ಹೇಗೆ ಅನುಭವಿಸಲ್ಪಟ್ಟಿತು?
8 ದೇವದೂತನು ಮುಂದುವರಿಸುತ್ತಾ ಅನ್ನುವುದು: “ಅವನು ದೇಶಗಳ ಮೇಲೆ ಕೈಮಾಡಲು ಐಗುಪ್ತದೇಶವೂ ತನ್ನನ್ನು ರಕ್ಷಿಸಿಕೊಳ್ಳದು. ಅವನು ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನೂ ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು; ಲೂಬ್ಯರೂ ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.” (ದಾನಿಯೇಲ 11:42, 43) ದಕ್ಷಿಣದ ರಾಜನಾದ “ಐಗುಪ್ತ” ಸಹ, ಉತ್ತರದ ರಾಜನ ರಾಜ್ಯವಿಸ್ತಾರ್ಯ ಕೌಶಲದ ಪ್ರಭಾವದಿಂದ ಪಾರಾಗಲಿಲ್ಲ. ಅವನು, ಉದಾಹರಣೆಗೆ, ವಿಯೆಟ್ನಾಮ್ನಲ್ಲಿ ಒಂದು ಗಮನಾರ್ಹ ಸೋಲನ್ನು ಅನುಭವಿಸಿದನು. ಮತ್ತು “ಲೂಬ್ಯರ ಮತ್ತು ಕೂಷ್ಯರ” ಕುರಿತೇನು? ಪುರಾತನ ಐಗುಪ್ತದ ಈ ನೆರೆಕರೆಯವರು, ಭೌಗೋಳಿಕವಾಗಿ ಹೇಳುವುದಾದರೆ, ಆಧುನಿಕ “ಐಗುಪ್ತ”ದ ನೆರೆಕರೆಯ ರಾಷ್ಟ್ರಗಳನ್ನು ಮತ್ತು ಉತ್ತರದ ರಾಜನ ಅನುಯಾಯಿಗಳಾಗಿ, ಅವನನ್ನು ಕೆಲವೊಮ್ಮೆ ‘ಹಿಂಬಾಲಿಸಿ ಹೋದವ’ ರಾಗಿ ಚೆನ್ನಾಗಿ ಮುನ್ಸೂಚಿಸಬಹುದು.
9 ಉತ್ತರದ ರಾಜನು ‘ಐಗುಪ್ತದ ನಿಧಿನಿಕ್ಷೇಪಗಳನ್ನು’ ವಶಮಾಡಿಕೊಂಡನೋ? ಒಳ್ಳೇದು, ಅವನು ದಕ್ಷಿಣದ ರಾಜನನ್ನು ಜಯಿಸಿರುವುದಿಲ್ಲ ನಿಶ್ಚಯ, ಮತ್ತು 1993ರ ವರೆಗಿನ ಲೋಕ ಸನ್ನಿವೇಶವು ಅವನು ಹಾಗೆ ಮಾಡುವುದು ಅಸಂಭವನೀಯ ಎಂದು ತೋರುವಂತೆ ಮಾಡಿದೆ. ಆದರೆ ದಕ್ಷಿಣದ ರಾಜನು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಬಳಸುವ ರೀತಿಯ ಮೇಲೆ ಅವನು ಬಲವಾದ ಪ್ರಭಾವವನ್ನು ಹಾಕಿದ್ದಾನೆಂಬದು ನಿಜ. ತನ್ನ ಪ್ರತಿದ್ವಂದಿಯ ಭಯದಿಂದಾಗಿ, ದಕ್ಷಿಣದ ರಾಜನು ಒಂದು ದುರ್ದಮವಾದ ನೆಲಸೇನೆ, ಜಲಸೇನೆ ಮತ್ತು ವಾಯುಸೇನೆ ದುರುಸ್ತಾಗಿಡಲು ಪ್ರತಿ ವರ್ಷ ಭಾರಿ ಮೊತ್ತದ ಹಣವನ್ನು ಬದಿಗಿರಿಸಿದ್ದಾನೆ. ಈ ಮಟ್ಟಿಗೆ ಉತ್ತರದ ರಾಜನು ದಕ್ಷಿಣದ ರಾಜನ ಐಶ್ವರ್ಯದ ವಿನಿಯೋಗವನ್ನು ‘ವಶಪಡಿಸಿ’ ಕೊಂಡಿದ್ದಾನೆ, ಅಂಕೆಯಲ್ಲಿಟ್ಟಿದ್ದಾನೆ ಎಂದು ಹೇಳಸಾಧ್ಯವಿದೆ.
ಉತ್ತರದ ರಾಜನ ಅಂತಿಮ ಚಟುವಟಿಕೆ
10. ಇಬ್ಬರು ರಾಜರ ನಡುವಣ ಪ್ರತಿಸ್ಪರ್ಧೆಯ ಅಂತ್ಯವನ್ನು ದೇವದೂತನು ಯಾವ ರೀತಿಯಲ್ಲಿ ವರ್ಣಿಸುತ್ತಾನೆ?
10 ಈ ಇಬ್ಬರು ರಾಜರುಗಳ ನಡುವಣ ಪ್ರತಿಸ್ಪರ್ಧೆಯು ಅನಿರ್ದಿಷ್ಟ ಕಾಲದ ತನಕ ಮುಂದುವರಿಯುತ್ತದೋ? ಇಲ್ಲ. ದೇವದೂತನು ದಾನಿಯೇಲನಿಗೆ ಹೇಳಿದ್ದು: “ಹೀಗಿರಲು ಮೂಡಲಿಂದಲೂ ಬಡಗಲಿಂದಲೂ ಬರುವ ಸುದ್ದಿಯು ಅವನನ್ನು [ಉತ್ತರದ ರಾಜನನ್ನು] ಬಾಧಿಸುವದು. ಅವನು ಅತಿರೋಷಗೊಂಡು ಬಹು ಜನರನ್ನು ಧ್ವಂಸಿಸಿ ನಿರ್ನಾಮಮಾಡುವದಕ್ಕೆ ಹೊರಡುವನು. ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರವನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.”—ದಾನಿಯೇಲ 11:44, 45.
11, 12. ಯಾವ ಇತ್ತೀಚಿಗಿನ ರಾಜಕೀಯ ಘಟನೆಗಳು ಉತ್ತರದ ರಾಜ ಮತ್ತು ದಕ್ಷಿಣದ ರಾಜನ ನಡುವಣ ಪ್ರತಿಸ್ಪರ್ಧೆಗೆ ಸಂಬಂಧಿಸಿವೆ, ಮತ್ತು ನಮಗಿನ್ನೂ ಏನನ್ನು ಕಲಿಯಲಿಕ್ಕಿದೆ?
11 ಈ ಘಟನೆಗಳು ಇನ್ನೂ ಭವಿಷ್ಯತ್ತಿನವುಗಳಾಗಿರುವುದರಿಂದ, ಆ ಪ್ರವಾದನೆಯು ಹೇಗೆ ನೆರವೇರಲಿದೆಯೆಂದು ನಾವು ಸವಿಸ್ತಾರವಾಗಿ ಹೇಳಲಾರೆವು. ಇತ್ತೀಚೆಗೆ ಈ ಎರಡೂ ರಾಜರ ಸಂಬಂಧದ ರಾಜಕೀಯ ಸನ್ನಿವೇಶವು ಬದಲಾಗಿರುತ್ತದೆ. ಅಮೆರಿಕ ಮತ್ತು ಪೂರ್ವ ಯೂರೋಪಿನ ದೇಶಗಳ ನಡುವಣ ಕಟು ಪ್ರತಿಸ್ಪರ್ಧೆಯು ತಣ್ಣಗಾಗಿಯದೆ. ಅದಲ್ಲದೆ, ಸೋವಿಯೆಟ್ ಒಕ್ಕೂಟವು 1991 ರಲ್ಲಿ ಕಳಚಲ್ಪಟ್ಟಿದೆ ಮತ್ತು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ.—ನೋಡಿರಿ ಕಾವಲಿನಬುರುಜು, ಜೂನ್ 1, 1992ರ ಸಂಚಿಕೆ, ಪುಟ 4, 5.
12 ಹೀಗಿರಲಾಗಿ ಇಂದು ಉತ್ತರದ ರಾಜನು ಯಾರು? ಹಳೇ ಸೋವಿಯೆಟ್ ಒಕ್ಕೂಟದ ಭಾಗವಾಗಿದ್ದ ದೇಶಗಳಲ್ಲೊಂದರೊಂದಿಗೆ ಅವನನ್ನು ಗುರುತಿಸಬೇಕೋ? ಅಥವಾ ಅವನು ಹಿಂದೆ ಹಲವಾರು ಬಾರಿ ಮಾಡಿದಂತೆ, ತನ್ನ ಗುರುತನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದಾನೋ? ನಾವು ಅದನ್ನು ಹೇಳಲಾರೆವು. ದಾನಿಯೇಲ 11:44, 45 ನೆರವೇರಿಕೆಯನ್ನು ಪಡೆಯುವಾಗ ಉತ್ತರದ ರಾಜನು ಯಾರಾಗಿರುವನು? ಎರಡೂ ರಾಜರುಗಳ ನಡುವಣ ಪ್ರತಿಸ್ಪರ್ಧೆಯು ಪುನಃ ಭಗ್ಗನೆ ಹೊತ್ತಿಕೊಳ್ಳುವದೋ? ಮತ್ತು ಹಲವಾರು ದೇಶಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಭಾರೀ ಅಣ್ವಸ್ತ್ರ ಸಂಚಯದ ವಿಷಯದಲ್ಲೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಲವು ಮಾತ್ರವೇ ಒದಗಿಸುವುದು.
13, 14. ಆ ಇಬ್ಬರು ರಾಜರ ಭವಿಷ್ಯತ್ತಿನ ಕುರಿತು ನಮಗೇನು ತಿಳಿದಿದೆ?
13 ಒಂದು ವಿಷಯ ಮಾತ್ರ ನಮಗೆ ತಿಳಿದಿದೆ. ಶೀಘ್ರದಲ್ಲೇ, ಉತ್ತರದ ರಾಜನು, “ಮೂಡಲಿಂದಲೂ ಬಡಗಲಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವ” ದರಿಂದ ಸಚೇತನಗೊಳ್ಳಲಿರುವ, ಒಂದು ಆಕ್ರಮಣಕಾರಿ ಚಳವಳಿಯನ್ನು ಕೈಕೊಳ್ಳುವನು. ಈ ಚಳವಳಿಯು ಅವನ “ಅಂತ್ಯ”ಕ್ಕೆ ತುಸು ಮುಂಚೆ ಬರುವುದು. ಬೈಬಲಿನ ಇತರ ಪ್ರವಾದನೆಗಳನ್ನು ನಾವು ಪರಿಗಣಿಸುವಲ್ಲಿ, ಈ “ಸುದ್ದಿ”ಯ ಕುರಿತಾಗಿ ಹೆಚ್ಚನ್ನು ನಾವು ತಿಳಿಯಬಲ್ಲೆವು.
14 ಆದರೂ ಮೊದಲನೆಯದಾಗಿ, ಉತ್ತರದ ರಾಜನ ಈ ಕೃತ್ಯಗಳು ದಕ್ಷಿಣದ ರಾಜನ ವಿರುದ್ಧವಾಗಿರುತ್ತವೆಂದು ಹೇಳಲ್ಪಟ್ಟಿಲ್ಲ ಎಂಬದನ್ನು ಗಮನಿಸಿರಿ. ಅವನ ಮಹಾ ಪ್ರತಿಸ್ಪರ್ಧಿಯ ಕೈಯಲ್ಲಿ ಅವನು ತನ್ನ ಅಂತ್ಯವನ್ನು ತಲಪುವುದಿಲ್ಲ. ಅಂತೆಯೇ, ದಕ್ಷಿಣದ ರಾಜನು ಉತ್ತರದ ರಾಜನಿಂದ ನಾಶವಾಗುವುದಿಲ್ಲ. ದಕ್ಷಿಣದ ರಾಜನು (ಬೇರೆ ಪ್ರವಾದನೆಗಳಲ್ಲಿ ಮೃಗಕ್ಕೆ ಬಂದ ಕೊನೆಯ ಕೊಂಬಾಗಿ ಪ್ರತಿನಿಧಿಸಲ್ಪಟ್ಟವನು) “ಯಾರ [ಮಾನವ] ಕೈಯೂ ಸೋಕದೆ,” ದೇವರ ರಾಜ್ಯದಿಂದ ನಾಶವಾಗುವನು. (ದಾನಿಯೇಲ 7:26; 8:25) ವಾಸ್ತವದಲ್ಲಿ, ಭೂರಾಜರೆಲ್ಲರೂ ಕೊನೆಗೆ ಅರ್ಮಗೆದೋನ್ ಯುದ್ಧದಲ್ಲಿ ದೇವರ ರಾಜ್ಯದಿಂದ ನಾಶವಾಗುತ್ತಾರೆ, ಮತ್ತು ಉತ್ತರದ ರಾಜನಿಗೆ ಪ್ರತ್ಯಕ್ಷವಾಗಿ ಸಂಭವಿಸುವುದೂ ಇದೇ ಆಗಿದೆ. (ದಾನಿಯೇಲ 2:44; 12:1; ಪ್ರಕಟನೆ 16:14, 16) ಆ ಕೊನೆಯ ಯುದ್ಧಕ್ಕೆ ನಡಿಸುವ ಘಟನೆಗಳನ್ನು ದಾನಿಯೇಲ 11:44, 45 ವರ್ಣಿಸುತ್ತದೆ. ಉತ್ತರದ ರಾಜನು ತನ್ನ ಅಂತ್ಯವನ್ನು ತಲಪುವಾಗ, “ಯಾರೂ ಅವನಿಗೆ ಸಹಾಯಮಾಡರು” ಎಂಬದರಲ್ಲೇನೂ ಆಶ್ಚರ್ಯವಿಲ್ಲ!
15. ಯಾವ ಮಹತ್ವದ ಪ್ರಶ್ನೆಗಳು ಚರ್ಚಿಸಲಿಕ್ಕಾಗಿ ಉಳಿದಿವೆ?
15 ಹಾಗಾದರೆ, “ಬಹು ಜನರನ್ನು ಧ್ವಂಸಿಸಿ ನಿರ್ನಾಮಮಾಡಲು” ಉತ್ತರದ ರಾಜನನ್ನು ಪ್ರಚೋದಿಸುವ “ಸುದ್ದಿ”ಯ ಮೇಲೆ ಬೆಳಕನ್ನು ಬೀರುವ ಆ ಬೇರೆ ಪ್ರವಾದನೆಗಳ ಕುರಿತೇನು? ಮತ್ತು ಅವನು ನಿರ್ನಾಮ ಮಾಡಬಯಸುವ ಆ “ಬಹು ಜನರು” ಯಾರಾಗಿದ್ದಾರೆ?
ಮೂಡಲಿಂದಲೂ ಬರುವ ಸುದ್ದಿ
16. (ಎ) ಅರ್ಮಗೆದೋನ್ಗೆ ಮುಂಚೆ ಯಾವ ಮಹತ್ವದ ಘಟನೆಯು ಸಂಭವಿಸಲೇ ಬೇಕು? (ಬಿ) “ಮೂಡಲಿನ” ಅರಸರು ಯಾರು?
16 ಕೊನೆಯ ಯುದ್ಧವಾದ ಅರ್ಮಗೆದೋನ್ಗೆ ಮುಂಚಿತವಾಗಿ, ಸತ್ಯಾರಾಧನೆಯ ಮಹಾ ಶತ್ರು—ಸುಳ್ಳು ಧರ್ಮದ ಜಗದ್ವ್ಯಾಪಕ ಸಾಮ್ರಾಜ್ಯವಾದ, ಜಾರಸ್ತ್ರೀಯಂಥ ಮಹಾ ಬಾಬೆಲು—ನಾಶವಾಗಲೇ ಬೇಕು. (ಪ್ರಕಟನೆ 18:3-8) ದೇವರ ರೌದ್ರದ ಆರನೆಯ ಪಾತ್ರೆಯನ್ನು ಸಾಂಕೇತಿಕ ಯೂಫ್ರೇಟೀಸ್ ನದಿಯ ಮೇಲೆ ಹೊಯ್ಯುವುದರ ಮೂಲಕ ಅವಳ ನಾಶನವು ಮುನ್ಸೂಚಿಸಲ್ಪಟ್ಟಿದೆ. “ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗು” ವುದಕ್ಕಾಗಿ ನದಿಯು ಇಂಗಿಹೋಗುತ್ತದೆ. (ಪ್ರಕಟನೆ 16:12) ಈ ರಾಜರು ಯಾರು? ಯೆಹೋವ ದೇವರು ಮತ್ತು ಯೇಸು ಕ್ರಿಸ್ತರಲ್ಲದೆ ಬೇರೆ ಯಾರೂ ಅಲ್ಲ!a
17. (ಎ) ಮಹಾ ಬಾಬೆಲಿನ ನಾಶನದ ಕುರಿತು ಬೈಬಲ್ ನಮಗೇನನ್ನು ತಿಳಿಸುತ್ತದೆ? (ಬಿ) “ಮೂಡಲಿಂದ ಬರುವ” ಸುದ್ದಿಯು ಏನಾಗಿ ಪರಿಣಮಿಸಬಹುದು?
17 ಮಹಾ ಬಾಬೆಲಿನ ನಾಶನವು ಪ್ರಕಟನೆ ಪುಸ್ತಕದಲ್ಲಿ ಸುಸ್ಪಷ್ಟವಾಗಿಗಿ ವರ್ಣಿಸಲ್ಪಟ್ಟಿದೆ: “ಹತ್ತು ಕೊಂಬುಗಳನ್ನೂ [ಅಂತ್ಯ ಕಾಲದಲ್ಲಿ ಆಳುತ್ತಿರುವ ‘ರಾಜರು’] ಮೃಗವನ್ನೂ [ಸಂಯುಕ್ತ ರಾಷ್ಟ್ರ ಸಂಘವನ್ನು ಪ್ರತಿನಿಧಿಸುವ ರಕ್ತವರ್ಣದ ಕಾಡುಮೃಗ] ಕಂಡಿಯಲ್ಲ? ಇವುಗಳಿಂದ ಸೂಚಿತವಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16) ನಿಜವಾಗಿಯೂ ರಾಷ್ಟ್ರಗಳು ‘ಬಹು ಮಾಂಸವನ್ನು ನಾಶಗೊಳಿಸುವರು’! (ದಾನಿಯೇಲ 7:5) ಆದರೆ ಅಧಿಪತಿಗಳು ಮಹಾ ಬಾಬೆಲನ್ನು ನಾಶಮಾಡಲಿರುವುದೇಕೆ? ಯಾಕಂದರೆ ‘ದೇವರು ತನ್ನ ವಚನವು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರಿಸುತ್ತಾನೆ.’ (ಪ್ರಕಟನೆ 17:17) “ಮೂಡಲಿಂದ ಬರುವ ಸುದ್ದಿಯು” ಅವನು ಆರಿಸುವ ವಿಧವೊಂದರಲ್ಲಿ ಯೆಹೋವನ ಈ ಕೃತ್ಯಕ್ಕೆ, ಅಂದರೆ ಮಾನವ ಮುಖಂಡರ ಹೃದಯದಲ್ಲಿ ಮಹಾ ಧಾರ್ಮಿಕ ಜಾರಸ್ತ್ರೀಯನ್ನು ನಿರ್ಮೂಲಗೊಳಿಸಲು ಪ್ರೇರಿಸುವ ಕೃತ್ಯಕ್ಕೆ ಚೆನ್ನಾಗಿ ಸೂಚಿಸಬಹುದು.—ದಾನಿಯೇಲ 11:44.
ಬಡಗಲಿಂದಲೂ ಬರುವ ಸುದ್ದಿ
18. ಉತ್ತರದ ರಾಜನಿಗೆ ಬೇರೆ ಯಾವ ಗುರಿಹಲಗೆಯಿದೆ, ಮತ್ತು ಅವನು ತನ್ನ ಅಂತ್ಯಕ್ಕೆ ಬರುವಾಗ ಇದು ಅವನನ್ನು ಎಲ್ಲಿ ಕಾಣುವುದು?
18 ಆದರೆ ಉತ್ತರದ ಅರಸನ ಅತಿರೋಷಕ್ಕೆ ಇನ್ನೊಂದು ಗುರಿಹಲಗೆ ಇದೆ. ಅವನು “(ಮಹಾ) ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು,” ಎಂದು ದೇವದೂತನು ಹೇಳುತ್ತಾನೆ. (ದಾನಿಯೇಲ 11:45) ದಾನಿಯೇಲನ ಕಾಲದಲ್ಲಿ, ಭೂಮಧ್ಯ ಸಮುದ್ರವು ಮಹಾ ಸಾಗರವಾಗಿತ್ತು ಮತ್ತು ಪರಿಶುದ್ಧ ಪರ್ವತವು ಒಮ್ಮೆ ದೇವರ ಆಲಯದ ಸ್ಥಳವಾಗಿದ್ದ ಚೀಯೋನ್ ಆಗಿತ್ತು. ಆದಕಾರಣ, ಪ್ರವಾದನೆಯ ನೆರವೇರಿಕೆಯಲ್ಲಿ, ರೋಷಗೊಂಡ ಉತ್ತರದ ರಾಜನು ದೇವರ ಜನರ ವಿರುದ್ಧವಾಗಿ ಒಂದು ಮಿಲಿಟರಿ ಚಳವಳಿಯನ್ನು ನಡಿಸುತ್ತಾನೆ! ಒಂದು ಆತ್ಮಿಕ ಅರ್ಥದಲ್ಲಿ, ಇಂದು ಯಾರು ವಿಮುಖರಾದ ಮಾನವ ಕುಲದ “ಸಮುದ್ರ” ದಿಂದ ಹೊರಬಂದಿರುತ್ತಾರೋ ಮತ್ತು ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ಚೀಯೋನ್ ಬೆಟ್ಟದಲ್ಲಿ ಆತನೊಂದಿಗೆ ಆಳುವ ನಿರೀಕ್ಷೆಯುಳ್ಳವರಾಗಿದ್ದಾರೋ ಆ ದೇವರ ಅಭಿಷಿಕ್ತ ಸೇವಕರ ಆತ್ಮಿಕ ಆಸ್ತಿಯಲ್ಲಿ “ಸಮುದ್ರಕ್ಕೂ ಪರಿಶುದ್ಧಪರ್ವತಕ್ಕೂ ನಡುವೆ” ಅವನನ್ನು ಕಾಣಲಾಗುತ್ತದೆ.—ಯೆಶಾಯ 57:20; ಇಬ್ರಿಯರಿಗೆ 12:22; ಪ್ರಕಟನೆ 14:1.
19. ಯೆಹೆಜ್ಕೇಲನ ಪ್ರವಾದನೆಯಿಂದ ಸೂಚಿಸಲ್ಪಟ್ಟಂತೆ, ಗೋಗನ ಆಕ್ರಮಣವನ್ನು ಪ್ರೇರಿಸುವ ಸುದ್ದಿಯನ್ನು ನಾವು ಹೇಗೆ ಗುರುತಿಸಬಹುದು? (ಪಾದಟಿಪ್ಪಣಿ ನೋಡಿ.)
19 ದಾನಿಯೇಲನ ಸಮಕಾಲೀನನಾದ ಯೆಹೆಜ್ಕೇಲನು ಸಹ, ದೇವರ ಜನರ ಮೇಲೆ “ಅಂತ್ಯ ಕಾಲದಲ್ಲಿ” ಆಗುವ ಒಂದು ಆಕ್ರಮಣವನ್ನು ಮುಂತಿಳಿಸಿದ್ದನು. ಈ ಆಕ್ರಮಣಗಳು ಮಾಗೋಗದ ಗೋಗನನ್ನು ಪ್ರತಿನಿಧಿಸುವ ಪಿಶಾಚನಾದ ಸೈತಾನನಿಂದ ಪ್ರಾರಂಭಿಸಲ್ಪಡುವುದೆಂದು ಅವನು ಹೇಳಿದ್ದಾನೆ. (ಯೆಹೆಜ್ಕೇಲ 38:16) ಸಾಂಕೇತಿಕವಾಗಿ, ಗೋಗನು ಯಾವ ದಿಕ್ಕಿನಿಂದ ಬರುತ್ತಾನೆ? “ನೀನು ನಿನ್ನ ಸ್ಥಳದಿಂದ . . . ಉತ್ತರದಿಕ್ಕಿನ ಕಟ್ಟಕಡೆಯಿಂದ” ಬರುವಿ ಎಂದು ಯೆಹೆಜ್ಕೇಲನ ಮೂಲಕ ಯೆಹೋವನು ಅನ್ನುತ್ತಾನೆ. (ಯೆಹೆಜ್ಕೇಲ 38:15) ಆದಕಾರಣ, “ಬಡಗಲಿಂದಲೂ ಬರುವ” ಸುದ್ದಿಯು ಯೆಹೋವನ ಜನರನ್ನು ಆಕ್ರಮಿಸುವಂತೆ ಉತ್ತರದ ರಾಜನನ್ನು ಮತ್ತು ಬೇರೆಲ್ಲಾ ಅರಸರನ್ನು ಪ್ರೇರಿಸುವ ಸೈತಾನನ ಪ್ರಚಾರ ಕಾರ್ಯವಾಗಿರಬಹುದು.b—ಹೋಲಿಸಿರಿ ಪ್ರಕಟನೆ 16:13, 14; 17:14.
20, 21. (ಎ) ದೇವರ ಜನರನ್ನು ಆಕ್ರಮಿಸುವಂತೆ ಉತ್ತರದ ರಾಜನೂ ಸೇರಿ ರಾಷ್ಟ್ರಗಳನ್ನು ಗೋಗನು ಪ್ರೇರಿಸುವುದೇಕೆ? (ಬಿ) ಅವನ ಆಕ್ರಮಣವು ಸಫಲಗೊಳ್ಳಲಿದೆಯೋ?
20 ಯಾರು ಬೇರೆ ಕುರಿಗಳ ಮಹಾ ಸಮೂಹದೊಂದಿಗೆ ಇನ್ನು ಈ ಲೋಕದ ಭಾಗವಾಗಿರುವುದಿಲ್ಲವೋ ಆ “ದೇವರ ಇಸ್ರಾಯೇಲಿನ” ಸಮೃದ್ಧಿಯ ಕಾರಣ ಗೋಗನು ಈ ಪೂರಾ ರೀತಿಯ ಆಕ್ರಮಣವನ್ನು ಸಂಘಟಿಸುತ್ತಾನೆ. (ಗಲಾತ್ಯ 6:16; ಯೋಹಾನ 10:16; 17:15, 16; 1 ಯೋಹಾನ 5:19) “ಜನಾಂಗಗಳೊಳಗಿಂದ ಒಟ್ಟುಗೂಡಿ . . . [ಆತ್ಮಿಕ] ಸೊತ್ತನ್ನು ಸಂಗ್ರಹಿಸಿಕೊಂಡಿರು” ವವರನ್ನು ಗೋಗನು ಮತ್ಸರದಿಂದ ನೋಡುತ್ತಾನೆ. (ಯೆಹೆಜ್ಕೇಲ 38:12; ಪ್ರಕಟನೆ 5:9; 7:9) ಈ ಮಾತುಗಳ ನೆರವೇರಿಕೆಯಲ್ಲಿ, ಯೆಹೋವನ ಜನರು ಇಂದು ಹಿಂದೆಂದಿಗೂ ಆಗದ ರೀತಿಯಲ್ಲಿ ಸಮೃದ್ಧಿಯನ್ನು ಪಡೆಯುತ್ತಿದ್ದಾರೆ. ಒಮ್ಮೆ ಎಲ್ಲಿ ಅವರು ನಿಷೇಧಕ್ಕೆ ಗುರಿಯಾಗಿದ್ದರೋ ಆ ಯೂರೋಪ್, ಆಫ್ರಿಕ, ಮತ್ತು ಏಷ್ಯಾದ ಅನೇಕ ದೇಶಗಳಲ್ಲಿ ಈಗ ಅವರು ಸ್ವತಂತ್ರವಾಗಿ ಆರಾಧಿಸುತ್ತಾರೆ. ಇಸವಿ 1987 ಮತ್ತು 1992ರ ನಡುವೆ ಹತ್ತು ಲಕ್ಷಕ್ಕಿಂತಲೂ ಹೆಚ್ಚು “ಇಷ್ಟವಸ್ತುಗಳು” ಯೆಹೋವನ ಸತ್ಯಾರಾಧನೆಯ ಆಲಯಕ್ಕೆ ಜನಾಂಗಗಳಿಂದ ಹೊರಟುಬಂದಿದ್ದಾರೆ. ಆತ್ಮಿಕವಾಗಿ ಅವರು ಸಮೃದ್ಧರೂ ಶಾಂತಿಭರಿತರೂ ಆಗಿದ್ದಾರೆ.—ಹಗ್ಗಾಯ 2:7; ಯೆಶಾಯ 2:2-4; 2 ಕೊರಿಂಥ 8:9.
21 ಕ್ರಿಸ್ತೀಯ ಆತ್ಮಿಕ ಆಸ್ತಿಯನ್ನು ಸುಲಭವಾಗಿ ಸೋಲಿಸಬಲ್ಲ “ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳು ತುಂಬಿದ ದೇಶ” ವಾಗಿ ವೀಕ್ಷಿಸುತ್ತಾ, ಮಾನವ ಕುಲದ ತನ್ನ ಸಂಪೂರ್ಣ ಹತೋಟಿಗಾಗಿರುವ ಈ ತಡೆಗಟ್ಟನ್ನು ನಿರ್ಮೂಲಮಾಡಲು ಗೋಗನು ಅತ್ಯುಚ್ಚ ಪ್ರಯತ್ನವನ್ನು ಮಾಡುತ್ತಾನೆ. (ಯೆಹೆಜ್ಕೇಲ 38:11) ಆದರೆ ಅವನು ಸೋತುಹೋಗುತ್ತಾನೆ. ಭೂರಾಜರು ಯೆಹೋವನ ಜನರನ್ನು ಆಕ್ರಮಿಸುವಾಗ, ಅವರು ‘ಪೂರಾ ರೀತಿಯಲ್ಲಿ ತಮ್ಮ ಅಂತ್ಯಕ್ಕೆ’ ಬರುವರು. ಅದು ಹೇಗೆ?
ಮೂರನೆಯ ಅರಸನು
22, 23. ಗೋಗನು ಆಕ್ರಮಿಸುವಾಗ ದೇವರ ಜನರ ಪಕ್ಷದಲ್ಲಿ ಯಾರು ಏಳುತ್ತಾನೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
22 ಗೋಗನ ಆಕ್ರಮಣವು, ಯೆಹೋವ ದೇವರು ತನ್ನ ಜನರ ಪರವಾಗಿ ಏಳುವುದಕ್ಕೆ ಮತ್ತು “ಇಸ್ರಾಯೇಲಿನ ಪರ್ವತಗಳಲ್ಲಿ” ಗೋಗನ ಸೇನೆಗಳನ್ನು ನಾಶಪಡಿಸುವುದಕ್ಕೆ ಸಂಕೇತವಾಗಿರುತ್ತದೆ ಎಂದು ಯೆಹೆಜ್ಕೇಲನು ಹೇಳುತ್ತಾನೆ. (ಯೆಹೆಜ್ಕೇಲ 38:18; 39:4) ಇದು ನಮಗೆ ದೇವದೂತನು ದಾನಿಯೇಲನಿಗೆ ಏನಂದನೋ ಅದರ ಜ್ಞಾಪಕವನ್ನು ಕೊಡುತ್ತದೆ: “ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕನಾದ ಮೀಕಾಯೇಲನು ಆ ಕಾಲದಲ್ಲಿ ಏಳುವನು; ಮೊಟಮ್ಟೊದಲು ಜನಾಂಗವು ಉಂಟಾದಂದಿನಿಂದ ಅಂದಿನ ವರೆಗೆ ಸಂಭವಿಸದಂಥ ಸಂಕಟವು ಸಂಭವಿಸುವದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು [ಜೀವಬಾಧ್ಯರ] ಪಟ್ಟಿಯಲ್ಲಿ ಸಿಕ್ಕುವವೂ ಅವರೆಲ್ಲರೂ ರಕ್ಷಿಸಲ್ಪಡುವರು.”—ದಾನಿಯೇಲ 12:1.
23 ಇಸವಿ 1914 ರಲ್ಲಿ, ಯೇಸು—ಸ್ವರ್ಗೀಯ ಯೋಧನಾದ ಮೀಕಾಯೇಲನು—ದೇವರ ಸ್ವರ್ಗೀಯ ರಾಜ್ಯದ ರಾಜನಾದನು. (ಪ್ರಕಟನೆ 11:15; 12:7-9) ಅಂದಿನಿಂದ ಅವನು ‘ದಾನಿಯೇಲನ ಜನರ ಪಕ್ಷವನ್ನು ಹಿಡಿದಿರು’ ವವನಾಗಿ ನಿಂತಿರುತ್ತಾನೆ. ಆದರೆ ಶೀಘ್ರದಲ್ಲೇ ಅವನು, ದುರ್ಬೇಧ್ಯ ಯೋಧ-ಅರಸನಾಗಿ ಯೆಹೋವನ ಹೆಸರಿನಲ್ಲಿ “ಎದ್ದು ನಿಂತು,” “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು” ಸಲ್ಲಿಸುವನು. (2 ಥೆಸಲೊನೀಕ 1:8) ಭೂಮಿಯ ಜನಾಂಗಗಳೆಲ್ಲವೂ, ದಾನಿಯೇಲನ ಪ್ರವಾದನೆಯ ರಾಜರುಗಳೂ ಸೇರಿ, “ಎದೆಬಡಕೊಳ್ಳುವರು.” (ಮತ್ತಾಯ 24:30) ‘ದಾನಿಯೇಲನ ಜನರ’ ಕಡೆಗೆ ತಮ್ಮ ಹೃದಯದಲ್ಲಿ ಇನ್ನೂ ಕೆಟ್ಟ ವಿಚಾರವನ್ನು ಇಟ್ಟವರಾಗಿ, ‘ಮಹಾ ಪ್ರಭು ಮೀಕಾಯೇಲನ’ ಕೈಯಿಂದ ಅವರು ಸದಾಕಾಲಕ್ಕಾಗಿ ನಾಶವಾಗಿ ಹೋಗುವರು.—ಪ್ರಕಟನೆ 19:11-21.
24. ದಾನಿಯೇಲನ ಪ್ರವಾದನೆಯ ಈ ಅಧ್ಯಯನವು ನಮ್ಮ ಮೇಲೆ ಯಾವ ಪ್ರಭಾವವನ್ನು ಹಾಕಬೇಕು?
24 ಮೀಕಾಯೇಲ ಮತ್ತು ಅವನ ದೇವರ ಆ ಮಹಾ ವಿಜಯವನ್ನು ಕಾಣಲು ನಾವು ಹಾರೈಸುವುದಿಲ್ಲವೇ? ಆ ವಿಜಯವು ನಿಜ ಕ್ರೈಸ್ತರಿಗೆ “ರಕ್ಷಣೆ,” ಪಾರಾಗುವಿಕೆಯ ಅರ್ಥದಲ್ಲಿರುವುದು. (ಹೋಲಿಸಿರಿ ಮಲಾಕಿಯ 4:1-3.) ಆದಕಾರಣ, ಉತ್ಕಟ ನಿರೀಕ್ಷಣೆಯಿಂದ ಭವಿಷ್ಯದ ಕಡೆಗೆ ನೋಡುತ್ತಾ, ನಾವು ಅಪೊಸ್ತಲ ಪೌಲನ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ: “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ಈ ಅನುಕೂಲವಾದ ಕಾಲವು ಮುಂದರಿಯುವಾಗ, ನಾವು ಜೀವದ ವಾಕ್ಯದಲ್ಲಿ ದೃಢವಾಗಿ ನಿಂತು, ಯೆಹೋವನ ಕುರಿಗಳಿಗಾಗಿ ಶ್ರದ್ಧೆಯಿಂದ ಹುಡುಕೋಣ. ನಾವು ಜೀವದೋಟದಲ್ಲಿ ಉದ್ದೇಶಿತ ಸ್ಥಳಕ್ಕೆ ಸಮೀಪಿಸಿದ್ದೇವೆ. ಬಹುಮಾನವು ಹತ್ತಿರದಲ್ಲೇ ಇದೆ. ಕೊನೆಯ ತನಕ ತಾಳಿಕೊಳ್ಳುವಂತೆ ಮತ್ತು ಹೀಗೆ ರಕ್ಷಣೆ ಹೊಂದುವವರೊಂದಿಗೆ ಕೂಡಿರುವಂತೆ ನಾವೆಲ್ಲರೂ ದೃಢ ನಿಶ್ಚಯವನ್ನು ಮಾಡುವಂತಾಗಲಿ.—ಮತ್ತಾಯ 24:13; ಇಬ್ರಿಯ 12:1.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ರೆವೆಲೇಷನ್—ಇಟ್ಸ್ ಗ್ರ್ಯಾಂಡ್ ಕ್ಲೈಮ್ಯಾಕ್ಸ್ ಆ್ಯಟ್ ಹ್ಯಾಂಡ್! ಪುಟಗಳು 229-30 ನೋಡಿ.
b ಪರ್ಯಾಯವಾಗಿ, “ಬಡಗಲಿಂದಲೂ ಬರುವ” ಸುದ್ದಿಯು ಗೋಗನಿಗೆ ಆತನಂದ ಮಾತುಗಳ ನೋಟದಲ್ಲಿ, ಯೆಹೋವನಿಂದ ಬಂದದ್ದಾಗಿಯೂ ಪರಿಣಮಿಸ ಸಾಧ್ಯವಿದೆ: “ನಾನು ನಿನಗೆ ವಿರುದ್ಧನಾಗಿ . . . ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಸೆಳೆ” ಯುವೆನು. “ನಾನು . . . ನಿನ್ನನ್ನು ಉತ್ತರ ದಿಕ್ಕಿನ ಕಟ್ಟಕಡೆಯಿಂದ ಬರಮಾಡಿ ಇಸ್ರಾಯೇಲ್ಯ ಪರ್ವತಗಳ ಮೇಲೆ ನುಗ್ಗಿ” ಸುವೆನು.—ಯೆಹೆಜ್ಕೇಲ 38:4; 39:2; ಹೋಲಿಸಿರಿ ಕೀರ್ತನೆ 48:2.
ನಿಮಗೆ ತಿಳಿದಿದೆಯೋ?
▫ ಅಂತ್ಯಕಾಲದಲ್ಲೆಲ್ಲಾ ದಕ್ಷಿಣದ ರಾಜನು ಉತ್ತರದ ರಾಜನನ್ನು ತಳ್ಳಿರುವುದು ಹೇಗೆ?
▫ ಎರಡೂ ರಾಜರ ನಡುವಣ ಪ್ರತಿಸ್ಪರ್ಧೆಯ ಫಲಿತಾಂಶದ ಕುರಿತು ನಮಗಿನ್ನೂ ಏನು ತಿಳಿಯಲಿಕ್ಕಿದೆ?
▫ ಅರ್ಮಗೆದೋನ್ಗೆ ಮುಂಚಿನ ಯಾವ ಎರಡು ಘಟನೆಗಳು ಉತ್ತರದ ರಾಜನನ್ನು ಖಂಡಿತವಾಗಿಯೂ ಒಳಗೂಡಿಸುವುದು?
▫ ‘ಮಹಾ ಪ್ರಭು ಮೀಕಾಯೇಲನು’ ದೇವರ ಜನರನ್ನು ಹೇಗೆ ರಕ್ಷಿಸುವನು?
▫ ದಾನಿಯೇಲನ ಪ್ರವಾದನೆಯ ನಮ್ಮ ಅಧ್ಯಯನಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
[ಪುಟ 19 ರಲ್ಲಿರುವ ಚಿತ್ರಗಳು]
ಉತ್ತರದ ರಾಜನು ತನ್ನ ಪೂರ್ವಜರ ದೇವರಿಗಿಂತ ಬೇರೆಯಾದ ಒಂದು ದೇವರನ್ನು ಆರಾಧಿಸುತ್ತಾನೆ
[ಕೃಪೆ]
Top left and middle: UPI/Bettmann; bottom left: Reuters/Bettmann; bottom right: Jasmin/Gamma Liaison